ವಾಚಕರಿಂದ ಪ್ರಶ್ನೆಗಳು
ಕೀರ್ತನೆ 12:7ರಲ್ಲಿ “ಕಾವಲಾಗಿ ಇರ್ತಿಯ” ಅನ್ನೋ ಮಾತುಗಳು ‘ಜನರನ್ನ’ (ವಚನ 5) ಸೂಚಿಸ್ತಾ ಇದ್ಯಾ ಅಥವಾ ‘ಯೆಹೋವನ ಮಾತುಗಳನ್ನ’ (ವಚನ 6) ಸೂಚಿಸ್ತಾ ಇದ್ಯಾ?
ಅದರ ಹಿಂದಿನ ವಚನಗಳನ್ನ ನೋಡೋದಾದ್ರೆ ಅದು ಜನರನ್ನ ಸೂಚಿಸ್ತಾ ಇದೆ ಅಂತ ಗೊತ್ತಾಗುತ್ತೆ.
ಕೀರ್ತನೆ 12:1-4ರಲ್ಲಿ ದಾವೀದ ಮೊದಲು “ನಂಬಿಗಸ್ತರು ಒಬ್ರೂ ಕಾಣಿಸ್ತಿಲ್ಲ” ಅಂತ ಹೇಳಿದ. ವಚನ 5-7ರಲ್ಲಿ ಅವನು ಹೀಗೆ ಹೇಳ್ತಾನೆ:
“ಯೆಹೋವ ಹೀಗಂತಾನೆ: ‘ಜನರ ಮೇಲೆ ದಬ್ಬಾಳಿಕೆ ಆಗ್ತಿದೆ,
ಬಡವರು ನರಳ್ತಿದ್ದಾರೆ,
ನಾನು ಈಗ ಎದ್ದೇಳ್ತೀನಿ,
ಅವರನ್ನ ಕೀಳಾಗಿ ನೋಡೋರ ಕೈಯಿಂದ ಅವರನ್ನ ಕಾಪಾಡ್ತೀನಿ.’
ಯೆಹೋವನ ಮಾತುಗಳು ಶುದ್ಧ.
ಅವು ಮಣ್ಣಿನ ಕುಲುಮೆಯಲ್ಲಿ ಬೆಂಕಿಗೆ ಹಾಕಿ ಏಳು ಸಲ ಶುದ್ಧಮಾಡಿದ ಬೆಳ್ಳಿ ತರ ಇವೆ.
ಯೆಹೋವನೇ, ದಬ್ಬಾಳಿಕೆ ಆದವರಿಗೆ, ಬಡವರಿಗೆ ನೀನು
ಕಾವಲಾಗಿ ಇರ್ತಿಯ. ಅವರೆಲ್ಲರನ್ನೂ ಈ ಪೀಳಿಗೆಯಿಂದ ಶಾಶ್ವತವಾಗಿ ಕಾಪಾಡ್ತೀಯ.”
ವಚನ 5ರಲ್ಲಿ ದೇವರು “ದಬ್ಬಾಳಿಕೆ” ಆದವ್ರನ್ನ “ಕಾಪಾಡ್ತಾನೆ” ಅಂತ ಇದೆ.
ವಚನ 6ರಲ್ಲಿ ಹೀಗಿದೆ: “ಯೆಹೋವನ ಮಾತುಗಳು ಶುದ್ಧ” ಮತ್ತು “ಅವು . . . ಶುದ್ಧಮಾಡಿದ ಬೆಳ್ಳಿ ತರ ಇವೆ.” ಈ ಮಾತುಗಳನ್ನ ದೇವರ ಮೇಲೆ ನಂಬಿಕೆ ಇಡುವವರು ಖಂಡಿತ ಒಪ್ಕೊಳ್ತಾರೆ.—ಕೀರ್ತ 18:30; 119:140.
ವಚನ 7ರಲ್ಲಿ ಏನು ಹೇಳುತ್ತೆ ನೋಡಿ: “ಯೆಹೋವನೇ ದಬ್ಬಾಳಿಕೆ ಆದವರಿಗೆ, ಬಡವರಿಗೆ ನೀನು ಕಾವಲಾಗಿ ಇರ್ತಿಯ. ಅವರೆಲ್ಲರನ್ನೂ ಈ ಪೀಳಿಗೆಯಿಂದ ಶಾಶ್ವತವಾಗಿ ಕಾಪಾಡ್ತೀಯ.” ಈ ವಚನ ಏನನ್ನ ಸೂಚಿಸ್ತಾ ಇದೆ?
ವಚನ 6ರಲ್ಲಿ “ಯೆಹೋವನ ಮಾತುಗಳು” ಅಂತ ಹೇಳಿದ ಮೇಲೆ ‘ಕಾವಲಾಗಿ ಇರ್ತಾನೆ’ ಅಂತ ಹೇಳಿರೋದ್ರಿಂದ ಯೆಹೋವ ತನ್ನ ಮಾತುಗಳಿಗೆ ಕಾವಲಾಗಿ ಇರ್ತಾನೆ ಅಂತ ಕೆಲವ್ರು ಅಂದ್ಕೊಬಹುದು. ಆದ್ರೆ ಯೆಹೋವ ತನ್ನ ವಾಕ್ಯಕ್ಕೆ ಕಾವಲಾಗಿ ಇದ್ದನು ಅಂತ ನಮಗೆ ಗೊತ್ತು. ಯಾಕಂದ್ರೆ ಕೆಲವು ವಿರೋಧಿಗಳು ಬೈಬಲ್ ಜನ್ರ ಕೈಗೆ ಸಿಗದೆ ಇರೋ ತರ ಮಾಡಿದ್ರು ಮತ್ತು ಅದನ್ನ ನಾಶನ ಮಾಡೋಕೆ ತುಂಬ ಪ್ರಯತ್ನ ಮಾಡಿದ್ರು. ಆದ್ರೆ ಯೆಹೋವ ಅದನ್ನ ಕಾಪಾಡಿದನು.—ಯೆಶಾ 40:8; 1ಪೇತ್ರ 1:25.
ಆದ್ರೆ ವಚನ 5ರಲ್ಲಿ ಹೇಳಿರೋ ಹಾಗೆ, ಯೆಹೋವ ಜನ್ರನ್ನ ಕಾಪಾಡೋದು ನಿಜಾನೇ. ಆತನು ದಬ್ಬಾಳಿಕೆ ಆದವರನ್ನ ಹಿಂದಿನ ಕಾಲದಿಂದ ಇಲ್ಲಿವರೆಗೂ ಕಾಪಾಡ್ತಾ ಬಂದಿದ್ದಾನೆ ಮತ್ತು ಮುಂದೆನೂ ಕಾಪಾಡ್ತಾನೆ.—ಯೋಬ 36:15; ಕೀರ್ತ 6:4; 31:1, 2; 54:7; 145:20.
ಹಾಗಾದ್ರೆ ವಚನ 7ರಲ್ಲಿ ಯಾವುದ್ರ ಬಗ್ಗೆ ಮಾತಾಡ್ತಾ ಇದೆ?
ಈ ಕೀರ್ತನೆಯನ್ನ ನಾವು ಚೆನ್ನಾಗಿ ಗಮನಿಸಿದ್ರೆ ಇದು ಜನ್ರ ಬಗ್ಗೆನೇ ಮಾತಾಡ್ತಾ ಇದೆ ಅಂತ ನಮಗೆ ಗೊತ್ತಾಗುತ್ತೆ.
ಕೀರ್ತನೆ 12:1ರಲ್ಲಿ ನಮಗೆ ಏನು ಗೊತ್ತಾಗುತ್ತೆ ಅಂದ್ರೆ “ನಂಬಿಗಸ್ತರು” ಕೆಲವು ಕೆಟ್ಟ ಜನ್ರಿಂದಾಗಿ ಸುಳ್ಳು ಹೇಳಿದ್ರು. ಮುಂದಿನ ವಚನದಲ್ಲಿ, ಕೆಟ್ಟದಾಗಿ ಮಾತಾಡೋ ನಾಲಿಗೆಯನ್ನ ಯೆಹೋವ ಕತ್ತರಿಸಿ ಹಾಕ್ತಾನೆ ಅಂತ ಇದೆ. ಯೆಹೋವನ ಮಾತುಗಳು ಶುದ್ಧ ಆಗಿರೋದ್ರಿಂದ ಆತನು ತನ್ನ ಜನರನ್ನ ಕಾಪಾಡ್ತಾನೆ ಅನ್ನೋದನ್ನ ನಂಬಬಹುದು ಅಂತ ಕೀರ್ತನೆಗಾರ ಹೇಳ್ತಿದ್ದಾನೆ.
ಹಾಗಾಗಿ ವಚನ 7ರಲ್ಲಿ ಯೆಹೋವ ದೇವರು “ದಬ್ಬಾಳಿಕೆ” ಆದವರಿಗೆ ಕಾವಲಾಗಿ ಇರ್ತಾನೆ ಮತ್ತು ಅವರನ್ನ ಕಾಪಾಡ್ತಾನೆ ಅಂತ ತಿಳಿಸ್ತಿದೆ.
ಹೀಬ್ರು ನಕಲು ಪ್ರತಿಗಳಲ್ಲಿ ಈ ಕೀರ್ತನೆಯನ್ನ ಜನರಿಗೆ ಸೂಚಿಸಿನೇ ಮಾತಾಡ್ತಾ ಇದೆ. ಅಷ್ಟೇ ಅಲ್ಲ ಹೀಬ್ರು ಶಾಸ್ತ್ರವಚನಗಳನ್ನ ಗ್ರೀಕಿಗೆ ಮೊದಲನೇ ಸಲ ಭಾಷಾಂತರ ಮಾಡಿದ್ದ ಸೆಪ್ಟೂಅಜಂಟ್‌ನಲ್ಲಿ “ನಾವು” ಅಂತ 7ನೇ ವಚನದಲ್ಲಿ ಎರಡು ಸಲ ಬಳಸಲಾಗಿದೆ. ಹಾಗಾಗಿ ಇದು ದಬ್ಬಾಳಿಕೆಯಾದ ದೇವರ ನಂಬಿಗಸ್ತ ಸೇವಕರನ್ನೇ ಸೂಚಿಸುತ್ತಾ ಇದೆ ಅಂತ ಗೊತ್ತಾಗುತ್ತೆ. 7ನೇ ವಚನದ ಕೊನೆಯಲ್ಲಿ “ಅವರೆಲ್ಲರನ್ನೂ” ಅಂದ್ರೆ ದೇವರ ನಂಬಿಗಸ್ತರನ್ನ ಕೆಟ್ಟತನ ಮಾಡ್ತಾ ಇದ್ದ ಈ ಪೀಳಿಗೆಯಿಂದ ಕಾಪಾಡ್ತೀಯ ಅಂತ ಹೇಳ್ತಾ ಇದೆ. ಹೀಬ್ರು ಶಾಸ್ತ್ರವಚನಗಳು ಅರಾಮಿಕ್ ಭಾಷೆಯಲ್ಲಿ ಭಾಷಾಂತರವಾದ 7ನೇ ವಚನ ಹೀಗಿದೆ “ಓ ಕರ್ತನೇ, ನೀನು ನೀತಿವಂತರನ್ನ ರಕ್ಷಿಸ್ತೀಯ, ದುಷ್ಟ ತಲೆಮಾರಿನಿಂದ ಅವರನ್ನ ಶಾಶ್ವತವಾಗಿ ಕಾಪಾಡ್ತೀಯ.” ಇದ್ರಿಂದ ಏನು ಗೊತ್ತಾಗುತ್ತೆ? ಕೀರ್ತನೆ 12:7ರಲ್ಲಿ, ಯೆಹೋವನ ಮಾತುಗಳನ್ನ ಅಲ್ಲ, ಬದಲಿಗೆ ಜನರನ್ನ ಸೂಚಿಸಿ ಮಾತಾಡ್ತಾ ಇದೆ ಅಂತ ಗೊತ್ತಾಗುತ್ತೆ.
ಇದ್ರಿಂದ ದೇವರು “ನಂಬಿಗಸ್ತರ” ಪರ ನಿಲ್ತಾನೆ ಅಂತ ಭರವಸೆ ಸಿಗುತ್ತೆ.