ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕುಡಿಯೋದ್ರ ಬಗ್ಗೆ ಯೆಹೋವನ ಯೋಚ್ನೆ ಏನು ಅಂತ ಅರ್ಥ ಮಾಡ್ಕೊಳ್ಳಿ

ಕುಡಿಯೋದ್ರ ಬಗ್ಗೆ ಯೆಹೋವನ ಯೋಚ್ನೆ ಏನು ಅಂತ ಅರ್ಥ ಮಾಡ್ಕೊಳ್ಳಿ

ಯೆಹೋವ ನಮ್ಮೆಲ್ರಿಗೂ ಉಡುಗೊರೆಗಳನ್ನ ಕೊಟ್ಟಿದ್ದಾನೆ. ಆ ಉಡುಗೊರೆಗಳನ್ನ ಹೇಗೆ ಬಳಸಬೇಕು ಅಂತ ನಾವೇ ಆಯ್ಕೆ ಮಾಡಬಹುದು. ಯೆಹೋವ ದ್ರಾಕ್ಷಾಮದ್ಯವನ್ನ ನಮಗೆ ಉಡುಗೊರೆಯಾಗಿ ಕೊಟ್ಟಿದ್ದಾನೆ. ಅದಕ್ಕೆ “ಆಹಾರ ಖುಷಿ ಕೊಡುತ್ತೆ, ದ್ರಾಕ್ಷಾಮದ್ಯ ಜೀವನದಲ್ಲಿ ಆನಂದ ತುಂಬುತ್ತೆ” ಅಂತ ಬೈಬಲ್‌ ಹೇಳುತ್ತೆ. (ಪ್ರಸಂ. 10:19; ಕೀರ್ತ. 104:15) ಆದ್ರೆ ನಿಮ್ಮ ಸುತ್ತಮುತ್ತ ಇರೋ ಜನ್ರು ಕುಡಿದು ತುಂಬ ಸಮಸ್ಯೆ ಮಾಡ್ಕೊಂಡಿರೋದನ್ನ ನೀವು ಕಣ್ಣಾರೆ ನೋಡಿರಬಹುದು. ನಾವಿರೋ ದೇಶ, ಸಂಸ್ಕೃತಿ ಬೇರೆಬೇರೆ ಆಗಿರೋದ್ರಿಂದ ಕುಡಿಯೋದ್ರ ಬಗ್ಗೆ ಒಬ್ಬೊಬ್ರಿಗೆ ಒಂದೊಂದು ಅಭಿಪ್ರಾಯ ಇದೆ. ಆದ್ರೆ ಕ್ರೈಸ್ತರಾಗಿರೋ ನಮಗೆ ಯಾವ ಅಭಿಪ್ರಾಯ ಇರಬೇಕು? ಈ ವಿಷ್ಯದಲ್ಲಿ ನಾವು ಯಾವ ತೀರ್ಮಾನ ಮಾಡಬೇಕು?

ನಾವು ಎಲ್ಲೇ ಇರಲಿ, ನಮ್ಮ ಸಂಸ್ಕೃತಿ ಯಾವುದೇ ಆಗಿರಲಿ ಜನ್ರ ಯೋಚ್ನೆ ಅಲ್ಲ, ಯೆಹೋವ ಇದ್ರ ಬಗ್ಗೆ ಏನು ಯೋಚಿಸ್ತಾನೆ ಅಂತ ಅರ್ಥ ಮಾಡ್ಕೊಬೇಕು. ಆತನಿಗೆ ಇಷ್ಟ ಆಗೋ ತರನೇ ತೀರ್ಮಾನ ಮಾಡಬೇಕು. ಆಗ ನಾವು ಖುಷಿಯಾಗಿ ಇರ್ತೀವಿ ಮತ್ತು ನಮ್ಮ ಜೀವನನೂ ಚೆನ್ನಾಗಿ ಇರುತ್ತೆ.

ನಿಮ್ಮ ಸುತ್ತಮುತ್ತ ಇರೋ ಜನ್ರು ಯಾವಾಗ್ಲೂ ಕುಡಿಯೋದನ್ನ ಅಥವಾ ಕಂಠಪೂರ್ತಿ ಕುಡಿಯೋದನ್ನ ನೀವು ಗಮನಿಸಿರಬಹುದು. ಕೆಲವರು ಆರಾಮಾಗಿ ಇರೋಕೆ ಕುಡಿತಾರೆ. ಇನ್ನು ಕೆಲವರು ಸಮಸ್ಯೆಗಳಿಂದ ಹೊರಗೆ ಬರೋಕೆ ಕುಡಿತಾರೆ. ಇನ್ನು ಕೆಲವು ದೇಶಗಳಲ್ಲಿ ಕುಡಿಯೋದು ಪುರುಷರ ಲಕ್ಷಣ ಅಂತ ನೆನಸ್ತಾರೆ.

ನಮ್ಮನ್ನ ಸೃಷ್ಟಿ ಮಾಡಿರೋ ಯೆಹೋವ ನಮಗೆ ಈ ವಿಷ್ಯದಲ್ಲಿ ಒಳ್ಳೇ ಸಲಹೆ ಕೊಟ್ಟಿದ್ದಾನೆ. ಅತಿಯಾಗಿ ಕುಡಿಯೋದ್ರಿಂದ ನಮಗೆ ಏನೆಲ್ಲಾ ತೊಂದ್ರೆ ಆಗುತ್ತೆ a ಅಂತ ಆತನು ಈಗಾಗ್ಲೇ ಹೇಳಿದ್ದಾನೆ. ಅದು ಜ್ಞಾನೋಕ್ತಿ 23:29-35ರಲ್ಲಿದೆ. ಯೂರೋಪ್‌ನಲ್ಲಿ ಹಿರಿಯನಾಗಿ ಸೇವೆ ಮಾಡ್ತಿರೋ ಡ್ಯಾನಿಯೆಲ್‌ ಅನ್ನೋ ಸಹೋದರನ ಉದಾಹರಣೆ ನೋಡಿ, ಅವರು ಸತ್ಯ ಕಲಿಯೋಕೆ ಮುಂಚೆ ತುಂಬ ಕುಡಿತಿದ್ರು. ಅದ್ರ ಬಗ್ಗೆ ಅವರು ಹೀಗೆ ಹೇಳ್ತಾರೆ: “ಮುಂಚೆ ನಾನು ಅತಿಯಾಗಿ ಕುಡಿತಾ ಇದ್ದಿದ್ರಿಂದ ಸರಿಯಾಗಿ ತೀರ್ಮಾನ ತಗೊಳ್ಳೋಕೆ ಆಗ್ತಾ ಇರ್ಲಿಲ್ಲ. ಇದ್ರಿಂದ ನಾನು ತುಂಬ ಅನುಭವಿಸಿಬಿಟ್ಟೆ. ಅದನ್ನ ನೆನಸ್ಕೊಂಡ್ರೆ ನಂಗೆ ಈಗ್ಲೂ ಬೇಜಾರಾಗುತ್ತೆ.”

ಕುಡಿಯೋ ವಿಷ್ಯದಲ್ಲಿ ಒಳ್ಳೇ ತೀರ್ಮಾನ ತಗೊಳ್ಳೋದು ಹೇಗೆ? ಅತಿಯಾಗಿ ಕುಡಿದು ಸಮಸ್ಯೆಗಳನ್ನ ಮೈಮೇಲೆ ಎಳ್ಕೊಳ್ಳದೇ ಇರೋಕೆ ನಾವೇನು ಮಾಡಬೇಕು? ಕುಡಿಯೋದ್ರ ಬಗ್ಗೆ ಯೆಹೋವ ಹೇಗೆ ಯೋಚಿಸ್ತಾನೆ ಅಂತ ಅರ್ಥ ಮಾಡ್ಕೊಂಡು ಅದ್ರ ತರಾನೇ ನಡ್ಕೊಬೇಕು. ಆಗ ನಮಗೆ ಒಳ್ಳೇ ತೀರ್ಮಾನ ತಗೊಳ್ಳೋಕೆ ಆಗುತ್ತೆ.

ಕುಡಿಯೋದ್ರ ಬಗ್ಗೆ ಬೈಬಲ್‌ ಏನು ಹೇಳುತ್ತೆ ಮತ್ತು ಜನ್ರು ಯಾಕೆ ಕುಡಿತಾರೆ ಅಂತ ನಾವೀಗ ನೋಡೋಣ.

ಕುಡಿಯೋದ್ರ ಬಗ್ಗೆ ಬೈಬಲ್‌ ಏನು ಹೇಳುತ್ತೆ?

ಕುಡಿಬಾರದು ಅಂತ ದೇವರ ವಾಕ್ಯದಲ್ಲಿ ಎಲ್ಲೂ ಹೇಳಿಲ್ಲ. ದ್ರಾಕ್ಷಾಮದ್ಯ ನಮಗೆ ಖುಷಿ ಕೊಡುತ್ತೆ. ಅದಕ್ಕೇ “ನಿನ್ನ ಊಟವನ್ನ ಸಂತೋಷದಿಂದ ತಿನ್ನು, ದ್ರಾಕ್ಷಾಮದ್ಯವನ್ನ ಉಲ್ಲಾಸದಿಂದ ಕುಡಿ” ಅಂತ ಬೈಬಲ್‌ ಹೇಳುತ್ತೆ. (ಪ್ರಸಂ. 9:7) ಕೆಲವು ಕಾರ್ಯಕ್ರಮಗಳಲ್ಲಿ ಯೇಸುನೂ ದ್ರಾಕ್ಷಾಮದ್ಯ ಕುಡಿದನು. ಅಷ್ಟೇ ಅಲ್ಲ ಯೆಹೋವನ ನಂಬಿಗಸ್ತ ಸೇವಕರೂ ಕುಡಿದ್ರು.—ಮತ್ತಾ. 26:27-29; ಲೂಕ 7:34; 1 ತಿಮೊ. 5:23.

ಕುಡಿಯೋದು ತಪ್ಪು ಅಂತ ಬೈಬಲ್‌ ಹೇಳಲ್ಲ, ಆದ್ರೆ ಅತಿಯಾಗಿ ಕುಡಿಯೋದು ತಪ್ಪು ಅಂತ ಹೇಳುತ್ತೆ. ಅದಕ್ಕೇ “ಅಮಲೇರೋ ತನಕ ಮದ್ಯ ಕುಡಿಬೇಡಿ” ಅಂತ ಬೈಬಲ್‌ ಹೇಳುತ್ತೆ. (ಎಫೆ. 5:18) ಅಷ್ಟೇ ಅಲ್ಲ “ಕುಡುಕರು . . . ದೇವರ ಆಳ್ವಿಕೆಯಲ್ಲಿ ಇರಲ್ಲ” ಅಂತನೂ ಹೇಳುತ್ತೆ. (1 ಕೊರಿಂ. 6:10) ಹಾಗಾಗಿ ಅತಿಯಾಗಿ ಕುಡಿಯೋದನ್ನ ಯೆಹೋವ ಇಷ್ಟ ಪಡಲ್ಲ ಅಂತ ಗೊತ್ತಾಗುತ್ತೆ. ನಮ್ಮ ಸಂಸ್ಕೃತಿ ಮತ್ತು ಸುತ್ತಮುತ್ತ ಇರೋ ಜನ್ರು ಹೇಗೇ ಇರಲಿ, ಈ ವಿಷ್ಯದಲ್ಲಿ ಯೆಹೋವ ಹೇಗೆ ಯೋಚಿಸ್ತಾನೋ ಹಾಗೇ ನಾವೂ ಯೋಚಿಸಬೇಕು.

‘ನಾನು ಎಷ್ಟು ಕುಡಿದ್ರೂ ನಂಗೇನೂ ಆಗಲ್ಲ, ನಾನು ನೆಟ್ಟಗೆ ಇರ್ತೀನಿ’ ಅಂತ ಕೆಲವರು ಅಂದ್ಕೊಳ್ತಾರೆ. ಆದ್ರೆ ಈ ತರ ಯೋಚಿಸೋದ್ರಿಂದ ತುಂಬ ಅಪಾಯ ಇದೆ. ಯಾಕಂದ್ರೆ “ದ್ರಾಕ್ಷಾಮದ್ಯದ ಚಟ ಇರಬಾರದು” ಅಂತ ಬೈಬಲ್‌ ಹೇಳುತ್ತೆ. (ತೀತ 2:3; ಜ್ಞಾನೋ. 20:1) ಹಾಗಾಗಿ ಸ್ತ್ರಿಯರಿಗಾಗಲಿ, ಪುರುಷರಿಗಾಗಲಿ ಈ ಚಟ ಇದ್ರೆ ಅವರು ದೊಡ್ಡ ದೊಡ್ಡ ತಪ್ಪುಗಳನ್ನ ಮಾಡ್ತಾರೆ ಮತ್ತು ಯೆಹೋವನಿಂದಾನೂ ದೂರ ಹೋಗಿ ಬಿಡ್ತಾರೆ. ‘ವಿಪರೀತ ಕುಡಿಯೋರು’ ದೇವರ ಆಳ್ವಿಕೆಯಲ್ಲಿ ಇರಲ್ಲ ಅಂತ ಯೇಸುನೂ ಹೇಳಿದನು. (ಲೂಕ 21:34-36) ಹಾಗಾದ್ರೆ ಕ್ರೈಸ್ತರಾಗಿರೋ ನಾವು ಅತಿಯಾಗಿ ಕುಡಿಯೋ ಬಲೆಗೆ ಸಿಕ್ಕಿಹಾಕೊಳ್ಳದೇ ಇರೋಕೆ ಏನು ಮಾಡಬೇಕು?

ನೀವು ಯಾಕೆ ಕುಡಿತಿರಾ ಮತ್ತು ಎಷ್ಟು ಕುಡಿತಿರಾ ಅಂತ ಯೋಚಿಸಿ

ನಿಮ್ಮ ಸುತ್ತಮುತ್ತ ಇರೋ ಜನ ಯಾವ ತರ ಯೋಚಿಸ್ತಾರೋ ಅದೇ ತರ ನೀವೂ ಯೋಚಿಸಿ ತೀರ್ಮಾನ ಮಾಡಿದ್ರೆ ಅದ್ರಿಂದ ನಿಮಗೆ ಖಂಡಿತ ಅಪಾಯ ಆಗುತ್ತೆ. ಕ್ರೈಸ್ತರಾಗಿರೋ ನೀವು ಯೆಹೋವ ಹೇಗೆ ಯೋಚಿಸ್ತಾನೋ ಅದನ್ನ ತಿಳ್ಕೊಂಡು ತೀರ್ಮಾನ ಮಾಡಬೇಕು. “ನೀವು ತಿಂದ್ರೂ ಕುಡಿದ್ರೂ ಬೇರೇನೇ ಮಾಡಿದ್ರೂ ಅದನ್ನೆಲ್ಲ ದೇವರಿಗೆ ಗೌರವ ತರೋ ಹಾಗೆ ಮಾಡಿ” ಅಂತ ಬೈಬಲ್‌ ಹೇಳುತ್ತೆ. (1 ಕೊರಿಂ. 10:31) ಹಾಗಾಗಿ ಒಳ್ಳೇ ತೀರ್ಮಾನ ತಗೊಳ್ಳೋಕೆ ಸಹಾಯ ಮಾಡೋ ಕೆಲವು ಬೈಬಲ್‌ ತತ್ವಗಳನ್ನ ಮತ್ತು ಪ್ರಶ್ನೆಗಳನ್ನ ನಾವೀಗ ನೋಡೋಣ.

ಬೇರೆಯವರು ನನ್ನನ್ನ ಇಷ್ಟ ಪಡಬೇಕು ಅಂತ ನಾನು ಕುಡಿತಿನಾ? ವಿಮೋಚನಕಾಂಡ 23:2ರಲ್ಲಿ “ತುಂಬ ಜನ ಕೆಟ್ಟದು ಮಾಡ್ತಿದ್ದಾರೆ ಅಂತ ನೀವೂ ಅವರ ಜೊತೆ ಸೇರ್ಕೊಂಡು ಕೆಟ್ಟದು ಮಾಡಬಾರದು” ಅಂತ ಹೇಳುತ್ತೆ. ಇಲ್ಲಿ ಯೆಹೋವ ದೇವರು ಇಸ್ರಾಯೇಲ್ಯರಿಗೆ ಬೇರೆಯವ್ರ ಜೊತೆ ಸೇರಿ ನೀವೂ ಅವರು ಮಾಡೋದನ್ನೇ ಮಾಡಬೇಡಿ ಅಂತ ಎಚ್ಚರಿಕೆ ಕೊಟ್ಟನು. ಈ ತತ್ವ ನಮಗೂ ಅನ್ವಯಿಸುತ್ತೆ. ಹಾಗಾಗಿ ನಮ್ಮ ಸ್ನೇಹಿತರು ಅಥವಾ ನಮ್ಮ ಜೊತೆ ಇರೋರು ಕುಡಿಯೋ ವಿಷ್ಯದಲ್ಲಿ ಯೋಚಿಸೋ ತರ ನಾವು ಯೋಚಿಸಬಾರದು. ಒಂದುವೇಳೆ ಆ ತರ ಯೋಚಿಸಿ ತೀರ್ಮಾನ ತಗೊಂಡ್ರೆ ಹೋಗ್ತಾಹೋಗ್ತಾ ನಾವು ಯೆಹೋವನಿಗೆ ಇಷ್ಟ ಇಲ್ಲದೆ ಇರೋದನ್ನೇ ಮಾಡ್ತೀವಿ ಮತ್ತು ಆತನಿಂದ ದೂರ ಹೋಗಿಬಿಡ್ತೀವಿ.—ರೋಮ. 12:2.

ಎಷ್ಟು ಕುಡಿದ್ರೂ ನನಗೇನೂ ಆಗಲ್ಲ ಅಂತ ತೋರಿಸ್ಕೊಳ್ಳೋಕೆ ನಾನು ಕುಡಿತಿನಾ? ಕೆಲವು ಸಂಸ್ಕೃತಿಗಳಲ್ಲಿ ಕಂಠಪೂರ್ತಿ ಕುಡಿಯೋದು ಸರ್ವೇಸಾಮಾನ್ಯ ಆಗಿಬಿಟ್ಟಿದೆ. (1 ಪೇತ್ರ 4:3) ಆದ್ರೆ 1 ಕೊರಿಂಥ 16:13ರಲ್ಲಿ “ಎಚ್ಚರವಾಗಿರಿ, ನಂಬಿಕೆಯಲ್ಲಿ ದೃಢವಾಗಿರಿ, ಧೈರ್ಯದಿಂದ ಮುಂದೆ ಸಾಗಿ, ಬಲಿಷ್ಠರಾಗಿರಿ” ಅಂತ ಹೇಳುತ್ತೆ. ಇಲ್ಲಿ ಬಲಿಷ್ಠರಾಗಿರಿ ಅಂತ ಹೇಳ್ತಿದೆ. ಆದ್ರೆ ನಾವು ಕುಡಿದ್ರೆ ಬಲಿಷ್ಠರಾಗೋಕೆ ಆಗುತ್ತಾ? ಖಂಡಿತ ಇಲ್ಲ. ಒಂದುವೇಳೆ ಗಂಟಲ ತನಕ ಕುಡಿದ್ರೆ ನಮಗೆ ಸರಿಯಾಗಿ ಯೋಚ್ನೆ ಮಾಡೋಕೂ ಆಗಲ್ಲ, ತೀರ್ಮಾನ ತಗೊಳ್ಳೋಕೂ ಆಗಲ್ಲ. ಅದು ಬಲಿಷ್ಠರ ಲಕ್ಷಣ ಅಲ್ಲ, ಬಲಹೀನರ ಲಕ್ಷಣ. ಅದಕ್ಕೇ ಯೆಶಾಯ 28:7ರಲ್ಲಿ ದ್ರಾಕ್ಷಾಮದ್ಯ ಕುಡಿಯುವವರು ದಾರಿ ತಪ್ಪಿದ್ದಾರೆ, ಅದು ಅವರನ್ನ ಅಡ್ಡದಾರಿ ಹಿಡಿಯೋ ತರ ಮಾಡಿದೆ, ಇದ್ರಿಂದ ಸರಿಯಾದ ನಿರ್ಧಾರ ತಗೊಳ್ಳೋಕೆ ಅವ್ರಿಗೆ ಆಗ್ತಿಲ್ಲ ಅಂತ ಹೇಳುತ್ತೆ.

ನಾವು ಬಲಿಷ್ಠರಾಗೋದು ಯೆಹೋವನಿಂದಾನೇ. ಆತನ ಸಹಾಯ ಪಡ್ಕೊಂಡ್ರೆ ನಾವು ಎಚ್ಚರವಾಗಿದ್ದು, ನಂಬಿಕೆಯಲ್ಲಿ ಬಲವಾಗಿ ಇರೋಕಾಗುತ್ತೆ. (ಕೀರ್ತ. 18:32) ನಾವು ಒಳ್ಳೇ ತೀರ್ಮಾನ ಮಾಡಿದ್ರೆ, ಅಪಾಯ ಬಂದಾಗ ಬಿದ್ದುಹೋಗದೆ ಇದ್ರೆ ಯೆಹೋವನ ಜೊತೆಗಿರೋ ನಮ್ಮ ಸ್ನೇಹನೂ ಶಾಶ್ವತವಾಗಿ ಉಳಿಯುತ್ತೆ. ಯೇಸು ಭೂಮಿಲಿದ್ದಾಗ ಯೆಹೋವನ ಜೊತೆ ಒಳ್ಳೇ ಸ್ನೇಹ ಬೆಳೆಸ್ಕೊಂಡನು, ಧೈರ್ಯ ತೋರಿಸಿದನು, ಸರಿಯಾಗಿ ಇರೋದನ್ನೇ ಮಾಡಿದನು. ಅದಕ್ಕೇ ಜನ ಆತನನ್ನ ಗೌರವಿಸ್ತಿದ್ರು.

ಚಿಂತೆಯಾದಾಗ ಅದ್ರಿಂದ ಹೊರಗೆ ಬರೋಕೆ ನಾನು ಕುಡಿತಿದ್ದೀನಾ? ಒಬ್ಬ ಕೀರ್ತನೆಗಾರ “ಚಿಂತೆಗಳು ನನ್ನನ್ನ ಮುತ್ಕೊಂಡಿದ್ದಾಗ, ನೀನು [ಯೆಹೋವನೇ] ನನಗೆ ಸಾಂತ್ವನ, ಸಮಾಧಾನ ಕೊಟ್ಟೆ” ಅಂತ ಹೇಳಿದ. (ಕೀರ್ತ. 94:19) ಹಾಗಾಗಿ ಸಮಸ್ಯೆಗಳು ಬಂದಾಗ, ಚಿಂತೆ ಆದಾಗ ಮದ್ಯಕ್ಕೆ ದಾಸರಾಗಬೇಡಿ, ಯೆಹೋವನ ಹತ್ರ ಹೋಗಿ . ನಿಮ್ಮ ಕಷ್ಟನೆಲ್ಲಾ ಆತನ ಹತ್ರ ಹೇಳ್ಕೊಳಿ. ಯೆಹೋವನಿಗೆ ಇನ್ನೂ ಜಾಸ್ತಿ ಪ್ರಾರ್ಥಿಸಿ. ಸಭೆಲಿ ಪ್ರೌಢ ಕ್ರೈಸ್ತರಿದ್ದಾರೆ, ಅವ್ರಿಂದ ಸಹಾಯ ಪಡ್ಕೊಳಿ. ಸಮಸ್ಯೆ ಪರಿಹಾರ ಆಗಬೇಕು ಅಂತ ಕುಡಿತಾನೇ ಇದ್ರೆ ಸರಿಯಾಗಿ ಇರೋದನ್ನ ಮಾಡೋಕಾಗಲ್ಲ. (ಹೋಶೇ. 4:11) ಸಹೋದರ ಡ್ಯಾನಿಯೆಲ್‌ ಏನು ಹೇಳ್ತಾರೆ ನೋಡಿ: “ನನಗೆ ತುಂಬ ಚಿಂತೆ ಆದಾಗ, ತಪ್ಪು ಮಾಡಿದ್ದೀನಿ ಅನಿಸಿದಾಗ ನಾನು ತುಂಬ ಕುಡಿತಿದ್ದೆ. ಆದ್ರೆ ಇದ್ರಿಂದ ನನ್ನ ಸಮಸ್ಯೆ ಸರಿ ಹೋಗ್ಲಿಲ್ಲ, ಇನ್ನೂ ಜಾಸ್ತಿ ಆಯ್ತು. ಬೇರೆಯವ್ರ ಜೊತೆ ನನಗಿದ್ದ ಸ್ನೇಹ ಸಂಬಂಧನೂ ಹಾಳಾಯ್ತು. ನನ್ನನ್ನ ನೆನಸ್ಕೊಂಡ್ರೆ ನನಗೇ ನಾಚಿಕೆ ಆಗ್ತಿತ್ತು. ಆದ್ರೆ ನನ್ನ ಸಮಸ್ಯೆಯಿಂದ ಹೊರಗೆ ಬರೋಕೆ ಯೆಹೋವನ ಸಹಾಯ ಬೇಕು, ಕುಡಿಯೋದ್ರಿಂದ ಏನೂ ಪ್ರಯೋಜನ ಇಲ್ಲ ಅಂತ ನನಗೆ ಆಮೇಲೆ ಗೊತ್ತಾಯ್ತು” ಅಂತ ಅವರು ಹೇಳ್ತಾರೆ. ಇದ್ರಿಂದ ನಮಗೇನು ಗೊತ್ತಾಗುತ್ತೆ? ಪರಿಸ್ಥಿತಿ ನಮ್ಮ ಕೈಮೀರಿ ಹೋದ್ರೂ ಯೆಹೋವ ಯಾವತ್ತೂ ನಮ್ಮ ಕೈಬಿಡಲ್ಲ ಅನ್ನೋದನ್ನ ಯಾವಾಗ್ಲೂ ನೆನಪಲ್ಲಿಡಿ.—ಫಿಲಿ. 4:6, 7; 1 ಪೇತ್ರ 5:7.

ನೀವು ಎಷ್ಟು ಸಲ ಕುಡಿತಿರಾ, ಎಷ್ಟು ಕುಡಿತಿರಾ ಅಂತ ಅರ್ಥ ಮಾಡ್ಕೊಳ್ಳೋಕೆ ಈ ಪ್ರಶ್ನೆಗಳನ್ನ ಕೇಳ್ಕೊಳಿ: ಒಂದು, “ಇತ್ತೀಚೆಗೆ ನಿಮ್ಮ ಸ್ನೇಹಿತರು, ಕುಟುಂಬದವರು ಯಾರಾದ್ರು ಬಂದು ‘ನೀನು ತುಂಬ ಕುಡಿತಾ ಇದ್ದೀಯ ಅನಿಸ್ತಿದೆ’ ಅಂತ ಹೇಳಿದ್ದಾರಾ?” ಹಾಗಿದ್ರೆ ನೀವು ನಿಮಗೇ ಗೊತ್ತಿಲ್ಲದೆ ಕುಡಿಯೋ ಚಟನ ಬೆಳೆಸ್ಕೊತಿರಬಹುದು. ಅಥವಾ ಆ ಸಮಸ್ಯೆಯಲ್ಲಿ ಸಿಕ್ಕಿಹಾಕೊಳ್ತಿರಬಹುದು. ಎರಡು, ‘ಈ ಮುಂಚೆಗಿಂತ ಈಗ ನಾನು ಜಾಸ್ತಿ ಕುಡಿತಿದ್ದೀನಾ?’ ಹಾಗಿದ್ರೆ ನೀವು ಕುಡಿತದ ಚಟಕ್ಕೆ ಬೀಳ್ತಾ ಇದ್ದೀರ ಅಂತ ಅರ್ಥ. ಮೂರನೇದು, ‘ಕೆಲವು ದಿನಗಳು ಕುಡಿದೇ ಇರೋಕೆ ನನ್ನಿಂದ ಆಗ್ತಾ ಇಲ್ವಾ?’ ಹಾಗಿದ್ರೆ ನೀವು ಕುಡಿತದ ಚಟಕ್ಕೆ ಬಿದ್ದಿದ್ದೀರ ಅಂತ ಅರ್ಥ. ಆ ಸಮಸ್ಯೆಯಿಂದ ಹೊರಗೆ ಬರೋಕೆ ನೀವು ಚಿಕಿತ್ಸೆ ಪಡ್ಕೊಬೇಕಾಗಬಹುದು.

ಕುಡಿಯೋದ್ರಿಂದ ಕೆಲವು ಸಮಸ್ಯೆಗಳಾಗ್ತಿರೋದಕ್ಕೆ ಕುಡಿಯೋದೇ ಬೇಡ ಅಂತ ಕೆಲವು ಕ್ರೈಸ್ತರು ತೀರ್ಮಾನ ಮಾಡಿದ್ದಾರೆ. ಇನ್ನು ಕೆಲವ್ರಿಗೆ ಅದ್ರ ವಾಸನೆ ಮತ್ತು ಟೇಸ್ಟ್‌ ಇಷ್ಟ ಆಗದೇ ಇರೋದ್ರಿಂದ ಕುಡಿಯೋದು ಬೇಡ ಅಂತ ಅಂದ್ಕೊಂಡಿದ್ದಾರೆ. ಒಂದುವೇಳೆ ನಿಮ್ಮ ಸ್ನೇಹಿತರಲ್ಲಿ ಯಾರಾದ್ರೂ ಈ ತರ ತೀರ್ಮಾನ ಮಾಡಿದ್ರೆ ಅವರನ್ನ ಅರ್ಥ ಮಾಡ್ಕೊಳಿ, ಆಡ್ಕೊಬೇಡಿ.

ಕುಡಿಯೋ ವಿಷ್ಯದಲ್ಲಿ ನೀವು ಕೆಲವು ರೂಲ್ಸ್‌ ಇಟ್ಕೊಂಡ್ರೆ ತುಂಬ ಒಳ್ಳೇದು. ಉದಾಹರಣೆಗೆ ಎಷ್ಟು ಕುಡಿಬೇಕು, ಎಷ್ಟು ಸಲ ಕುಡಿಬೇಕು ಅಂತ ಒಂದು ಮಿತಿ ಇಟ್ಕೊಬಹುದು. ವಾರಕ್ಕೆ ಒಂದು ಸಲ ಕುಡಿಯೋಕೆ ಅಥವಾ ಊಟ ಮಾಡುವಾಗ ಯಾವಾಗ್ಲಾದ್ರೂ ಸ್ವಲ್ಪ ಕುಡಿಯೋಕೆ ನೀವು ತೀರ್ಮಾನ ಮಾಡಬಹುದು. ಕೆಲವರು ಆಲ್ಕೊಹಾಲ್‌ ಜಾಸ್ತಿ ಇರೋ ಮದ್ಯ (ಜ್ಯೂಸ್‌ಗಳಲ್ಲಿ ಬೆರೆಸಿರೋ ಮದ್ಯನೂ ಇದ್ರಲ್ಲಿ ಸೇರಿದೆ) ಕುಡಿಯೋ ಬದ್ಲು ಬರೀ ವೈನ್‌ ಅಥವಾ ಬಿಯರ್‌ ಕುಡಿಬೇಕು ಅಂತ ತೀರ್ಮಾನ ಮಾಡಿದ್ದಾರೆ. ನೀವು ಈ ತರ ಕಟ್ಟುನಿಟ್ಟಾದ ರೂಲ್ಸ್‌ಗಳನ್ನ ಮಾಡ್ಕೊಂಡ್ರೆ ಅದನ್ನ ಪಾಲಿಸೋಕೆ ಸುಲಭ ಆಗುತ್ತೆ. ಬೇರೆಯವರು ನಿಮ್ಮ ಬಗ್ಗೆ ಏನು ಅಂದ್ಕೊಳ್ತಾರೋ ಅಂತ ತಲೆ ಕೆಡಿಸ್ಕೊಬೇಡಿ.

ನೀವು ಕುಡಿಯೋ ವಿಷ್ಯದಲ್ಲಿ ತೀರ್ಮಾನ ತೊಗೊಳ್ಳುವಾಗ ಬೇರೆಯವ್ರಿಗೂ ಹೇಗೆ ಅನ್ಸುತ್ತೆ ಅಂತ ಯೋಚಿಸಬೇಕು. ರೋಮನ್ನರಿಗೆ 14:21ರಲ್ಲಿ “ಮಾಂಸ ತಿನ್ನೋದು, ದ್ರಾಕ್ಷಾಮದ್ಯ ಕುಡಿಯೋದು ಅಥವಾ ಬೇರೆ ಯಾವ ವಿಷ್ಯನೂ ನಿನ್ನ ಸಹೋದರನ ನಂಬಿಕೆಯನ್ನ ಹಾಳುಮಾಡಿದ್ರೆ ಅದನ್ನ ಮಾಡದೇ ಇರೋದೇ ಒಳ್ಳೇದು” ಅಂತ ಹೇಳುತ್ತೆ. ನಾವು ಈ ವಚನವನ್ನ ಹೇಗೆ ಅನ್ವಯಿಸ್ಕೊಬಹುದು? ನಮಗೆ ಕುಡಿಯೋ ಸ್ವಾತಂತ್ರ್ಯ ಇದೆ ನಿಜ, ಆದ್ರೂ ಬೇರೆಯವ್ರಿಗೆ ಅದ್ರಿಂದ ನೋವಾಗ್ತಿದ್ರೆ ಅದನ್ನ ಬಿಟ್ಟುಬಿಡಬಹುದಲ್ವಾ? ಹೀಗೆ ಮಾಡಿದ್ರೆ ನಾವು ಅವರನ್ನ ಪ್ರೀತಿಸ್ತೀವಿ, ಗೌರವಿಸ್ತೀವಿ ಅಂತ ತೋರಿಸ್ತೀವಿ. ನಮಗೆ ಪ್ರಯೋಜನ ಆಗುತ್ತಾ ಅಂತಷ್ಟೇ ಅಲ್ಲ ಬೇರೆಯವ್ರಿಗೂ ಪ್ರಯೋಜನ ಆಗುತ್ತಾ ಅಂತ ನೋಡ್ತೀವಿ.—1 ಕೊರಿಂ. 10:24.

ಕುಡಿಯೋ ವಿಷ್ಯದಲ್ಲಿ ಸರ್ಕಾರ ನಿಯಮಗಳನ್ನು ಇಟ್ಟಿದ್ರೆ, ಕ್ರೈಸ್ತರು ಅದನ್ನ ಪಾಲಿಸಬೇಕು. ಉದಾಹರಣೆಗೆ ಕುಡಿಯೋಕೆ ಇಷ್ಟು ವಯಸ್ಸಾಗಿರಲೇಬೇಕು, ಕುಡಿದು ಗಾಡಿ ಓಡಿಸಬಾರದು ಅಥವಾ ಮಷೀನ್‌ಗಳಲ್ಲಿ ಕೆಲಸ ಮಾಡಬಾರದು ಅಂತ ಸರ್ಕಾರ ನಿಯಮ ಇಟ್ಟಿರಬಹುದು. ಅದನ್ನ ನಾವು ಪಾಲಿಸಬೇಕು.—ರೋಮ. 13:1-5.

ಯೆಹೋವ ದೇವರು ನಮಗೆ ತುಂಬಾ ಉಡುಗೊರೆಗಳನ್ನ ಕೊಟ್ಟಿದ್ದಾನೆ ಮತ್ತು ಆ ಉಡುಗೊರೆಗಳನ್ನ ಹೇಗೆ ಬಳಸಬೇಕು ಅನ್ನೋ ಆಯ್ಕೆನೂ ನಮಗೆ ಕೊಟ್ಟಿದ್ದಾನೆ. ಹಾಗಾಗಿ ಏನು ತಿನ್ನಬೇಕು ಏನು ಕುಡಿಬೇಕು ಅಂತ ನಾವೇ ಆಯ್ಕೆ ಮಾಡ್ಕೊಬಹುದು. ಆದ್ರೆ ನಾವು ಮಾಡೋ ಆಯ್ಕೆ ಯೆಹೋವನಿಗೆ ಮಹಿಮೆ, ಗೌರವ ಸಿಗೋ ತರ ಇರಬೇಕು.

a ಅತಿಯಾಗಿ ಕುಡಿಯೋದ್ರಿಂದ ಕೊಲೆ, ಆತ್ಮಹತ್ಯೆ, ಲೈಂಗಿಕ ದೌರ್ಜನ್ಯ, ಸಂಗಾತಿ ಮೇಲೆ ಹಿಂಸೆ, ಜೀವಕ್ಕೆ ಅಪಾಯ ತರೋ ಲೈಂಗಿಕತೆ ಮತ್ತು ಹೊಟ್ಟೆ ಒಳಗಿರೋ ಮಗುವಿನ ಸಾವು ಇಂಥೆಲ್ಲಾ ಅಪಾಯಗಳು ಆಗುತ್ತೆ ಅಂತ ಅಮೆರಿಕದ ಆರೋಗ್ಯ ಸಂಸ್ಥೆ ವರದಿ ಮಾಡ್ತು.