ಅಧ್ಯಯನ ಲೇಖನ 50
ನಂಬಿಕೆ ಮತ್ತು ಒಳ್ಳೇ ಕೆಲಸ ನೀತಿವಂತರಾಗೋಕೆ ಸಹಾಯ ಮಾಡುತ್ತೆ
“ನಮ್ಮ ತಂದೆಯಾದ ಅಬ್ರಹಾಮ . . . ತೋರಿಸಿದಂಥ ಅದೇ ನಂಬಿಕೆ ತೋರಿಸಿ.”—ರೋಮ. 4:12.
ಗೀತೆ 54 ನಮಗೆ ನಂಬಿಕೆ ಇರತಕ್ಕದ್ದು
ಈ ಲೇಖನದಲ್ಲಿ ಏನಿದೆ? a
1. ಅಬ್ರಹಾಮನ ಬಗ್ಗೆ ಯೋಚಿಸುವಾಗ ನಮ್ಮ ಮನಸ್ಸಿಗೆ ಯಾವ ಪ್ರಶ್ನೆ ಬರಬಹುದು?
ತುಂಬ ಜನ್ರು ಅಬ್ರಹಾಮ ಅನ್ನೋ ಹೆಸ್ರನ್ನ ಕೇಳಿರಬಹುದು. ಆದ್ರೆ ಅವ್ರಿಗೆ ಅವನ ಬಗ್ಗೆ ಅಷ್ಟೇನೂ ಗೊತ್ತಿರಲ್ಲ. ಆದ್ರೆ ನಮಗೆ ಅವನ ಬಗ್ಗೆ ಚೆನ್ನಾಗಿ ಗೊತ್ತು. ಉದಾಹರಣೆಗೆ, “ನಂಬಿಕೆ ಇರುವವ್ರಿಗೆಲ್ಲ ಅವನು ತಂದೆ” ಅಂತ ಬೈಬಲ್ ಹೇಳುತ್ತೆ. (ರೋಮ. 4:11) ಕೆಲವೊಂದು ಸಲ ನಮಗೆ ‘ನನಗೆ ಅಬ್ರಹಾಮನಷ್ಟು ನಂಬಿಕೆ ತೋರಿಸೋಕೆ ಆಗುತ್ತಾ?’ ಅಂತ ಅನಿಸಬಹುದು. ಆದ್ರೆ ಖಂಡಿತ ತೋರಿಸೋಕಾಗುತ್ತೆ.
2. ಅಬ್ರಹಾಮನ ಬಗ್ಗೆ ನಾವ್ಯಾಕೆ ತಿಳ್ಕೊಬೇಕು? (ಯಾಕೋಬ 2:22, 23)
2 ನಾವು ಅಬ್ರಹಾಮನ ತರ ನಂಬಿಕೆ ತೋರಿಸಬೇಕಂದ್ರೆ, ಅವನ ಬಗ್ಗೆ ಚೆನ್ನಾಗಿ ಓದಿ ತಿಳ್ಕೊಬೇಕು. ಅಬ್ರಹಾಮ ಯೆಹೋವ ಹೇಳಿದ ಹಾಗೆ ಎಲ್ಲ ಮಾಡಿದ. ತನ್ನ ಮನೆ ಬಿಟ್ಟು ಬೇರೆ ಊರಿಗೆ ಹೋದ, ಗುಡಾರ ಹಾಕೊಂಡು ಎಷ್ಟೋ ವರ್ಷ ಇದ್ದ. ಅಷ್ಟೇ ಅಲ್ಲ ತನ್ನ ಸ್ವಂತ ಮಗನನ್ನೇ ಬಲಿ ಕೊಡೋಕೆ ರೆಡಿ ಇದ್ದ. ಯೆಹೋವನ ಮೇಲೆ ನಂಬಿಕೆ ಇದ್ದಿದ್ರಿಂದನೇ ಅವನು ಇದನ್ನೆಲ್ಲ ಮಾಡಿದ. ಹೀಗೆ ಆ ನಂಬಿಕೆನ ಅವನು ಕೆಲಸದಲ್ಲಿ ತೋರಿಸಿದ. ಅದಕ್ಕೇ ಯೆಹೋವ ಅವನನ್ನ ಮೆಚ್ಚಿಕೊಂಡನು, ತನ್ನ ಫ್ರೆಂಡಾಗಿ ಮಾಡ್ಕೊಂಡನು. (ಯಾಕೋಬ 2:22, 23 ಓದಿ.) ಅವನ ತರನೇ ನೀವೂ ಆಶೀರ್ವಾದ ಪಡ್ಕೊಬೇಕು ಅಂತ ಯೆಹೋವ ಇಷ್ಟ ಪಡ್ತಾನೆ. ಅದಕ್ಕೇ ಪೌಲ ಮತ್ತು ಯಾಕೋಬ ಅಬ್ರಹಾಮನ ಬಗ್ಗೆ ಬರಿಯೋ ತರ ಯೆಹೋವ ಮಾಡಿದನು. ಹಾಗಾಗಿ ನಾವೀಗ ರೋಮನ್ನರಿಗೆ 4ನೇ ಅಧ್ಯಾಯದಲ್ಲಿ ಮತ್ತು ಯಾಕೋಬ 2ನೇ ಅಧ್ಯಾಯದಲ್ಲಿ ಅಬ್ರಹಾಮನ ಬಗ್ಗೆ ಅವರೇನು ಹೇಳಿದ್ದಾರೆ ಅಂತ ವಿವರವಾಗಿ ನೋಡೋಣ.
3. ಪೌಲ ಮತ್ತು ಯಾಕೋಬ ಯಾವ ವಚನದ ಬಗ್ಗೆ ತಮ್ಮ ಪತ್ರದಲ್ಲಿ ಬರೆದ್ರು?
3 ಆದಿಕಾಂಡ 15:6ರಲ್ಲಿ ಇರೋದನ್ನ ಪೌಲ ಮತ್ತು ಯಾಕೋಬ ತಮ್ಮ ಪತ್ರದಲ್ಲಿ ಬರೆದ್ರು. ಆ ವಚನದಲ್ಲಿ “ಅಬ್ರಾಮ ಯೆಹೋವನ ಮೇಲೆ ನಂಬಿಕೆಯಿಟ್ಟ. ಹಾಗಾಗಿ ಅಬ್ರಾಮ ದೇವರ ದೃಷ್ಟಿಯಲ್ಲಿ ನೀತಿವಂತನಾಗಿದ್ದ” ಅಂತ ಹೇಳುತ್ತೆ. ನೀತಿವಂತರು ಅಂದ್ರೆ ಯೆಹೋವನ ಮೆಚ್ಚಿಗೆ ಪಡ್ಕೊಂಡವರು, ಆತನ ದೃಷ್ಟಿಯಲ್ಲಿ ಯಾವ ತಪ್ಪನ್ನೂ ಮಾಡದವರು ಅಂತ ಅರ್ಥ. ಅಪರಿಪೂರ್ಣರಾಗಿರೋ ನಮ್ಮನ್ನ ಯೆಹೋವ ನೀತಿವಂತರು ಅಂತ ಕರಿತಾನೆ ಅಂದ್ರೆ ಅದೊಂದು ದೊಡ್ಡ ವಿಷ್ಯ ಅಲ್ವಾ? ಹಾಗಾದ್ರೆ ಯೆಹೋವ ನಮ್ಮನ್ನ ನೀತಿವಂತರು ಅಂತ ಕರಿಬೇಕಾದ್ರೆ ಏನು ಮಾಡಬೇಕು? ಮೊದ್ಲು ಯೆಹೋವ ದೇವರು ಅಬ್ರಹಾಮನನ್ನ ಯಾಕೆ ನೀತಿವಂತ ಅಂತ ಕರೆದನು ಅಂತ ತಿಳ್ಕೊಬೇಕು. ಆಗ ನಮಗೆ ಅದಕ್ಕೆ ಉತ್ರ ಸಿಗುತ್ತೆ.
ನೀತಿವಂತರಾಗೋಕೆ ನಂಬಿಕೆ ಬೇಕು
4. ನಾವು ನೀತಿವಂತರಾಗೋಕೆ ಆಗಲ್ಲ ಅಂತ ಯಾಕೆ ಅನಿಸಬಹುದು?
4 ರೋಮನ್ನರಿಗೆ ಬರೆದ ಪತ್ರದಲ್ಲಿ ಪೌಲ ಎಲ್ರೂ ಪಾಪ ಮಾಡಿದ್ದಾರೆ ಅಂತ ಹೇಳಿದ. (ರೋಮ. 3:23) ಅಂದ್ಮೇಲೆ ನಾವು ಹೇಗೆ ನೀತಿವಂತರಾಗೋಕೆ ಆಗುತ್ತೆ? ಯೆಹೋವ ನಮ್ಮನ್ನ ಹೇಗೆ ಮೆಚ್ಕೊಳ್ತಾನೆ? ಇದಕ್ಕೆ ಉತ್ರ ತಿಳ್ಕೊಳ್ಳೋಕೆ ಪೌಲ ಅಬ್ರಹಾಮನ ಬಗ್ಗೆ ಏನು ಹೇಳಿದ ಅಂತ ನೋಡಿ.
5. ಯೆಹೋವ ಅಬ್ರಹಾಮನನ್ನ ನೀತಿವಂತ ಅಂತ ಯಾಕೆ ಕರೆದನು? (ರೋಮನ್ನರಿಗೆ 4:2-4)
5 ಅಬ್ರಹಾಮ ಕಾನಾನಿನಲ್ಲಿ ಇದ್ದಾಗ ಯೆಹೋವ ದೇವರು ಅವನನ್ನ ನೀತಿವಂತ ಅಂತ ಕರೆದನು. ಯೆಹೋವ ಯಾಕೆ ಅವನನ್ನ ಹಾಗೆ ಕರೆದನು? ಅವನು ಮೋಶೆ ನಿಯಮನ ಚಾಚೂತಪ್ಪದೆ ಪಾಲಿಸಿದ್ದಕ್ಕಾ? ಇಲ್ಲ. (ರೋಮ. 4:13) ಯಾಕಂದ್ರೆ ಆಗ ಮೋಶೆ ನಿಯಮ ಪುಸ್ತಕನೇ ಇರಲಿಲ್ಲ. ಯೆಹೋವ ಅಬ್ರಹಾಮನನ್ನ ನೀತಿವಂತ ಅಂತ ಕರೆದು 400ಕ್ಕಿಂತ ಜಾಸ್ತಿ ವರ್ಷಗಳು ಆದ್ಮೇಲೆ ಆ ನಿಯಮ ಪುಸ್ತಕ ಬಂತು. ಹಾಗಾದ್ರೆ ಯೆಹೋವ ಯಾಕೆ ಅಬ್ರಹಾಮನನ್ನ ನೀತಿವಂತ ಅಂತ ಕರೆದನು? ಅವನಲ್ಲಿದ್ದ ನಂಬಿಕೆಯಿಂದಾನೇ.—ರೋಮನ್ನರಿಗೆ 4:2-4 ಓದಿ.
6. ನಾವು ಪಾಪಿಗಳಾಗಿದ್ರೂ ಯೆಹೋವ ಯಾಕೆ ನಮ್ಮನ್ನ ನೀತಿವಂತರಾಗಿ ನೋಡ್ತಾನೆ?
6 ಒಬ್ಬ ವ್ಯಕ್ತಿ ದೇವರ ಮೇಲೆ ನಂಬಿಕೆ ಇಟ್ರೆ “ಆ ನಂಬಿಕೆಯಿಂದಾಗಿ ದೇವರು ಅವನನ್ನ ನೀತಿವಂತ ಅಂತ ನೋಡ್ತಾನೆ” ಅಂತ ಪೌಲ ಹೇಳಿದ. (ರೋಮ. 4:5) ಅಷ್ಟೇ ಅಲ್ಲ, “ಒಬ್ಬ ನಿಯಮ ಪುಸ್ತಕವನ್ನ ಪೂರ್ತಿ ಪಾಲಿಸದಿದ್ರೂ ದೇವರು ಅವನನ್ನ ನೀತಿವಂತ ಅಂತ ನೋಡಿದಾಗ ಅವನಿಗೆಷ್ಟು ಖುಷಿ ಆಗುತ್ತೆ ಅಂತ ದಾವೀದನೂ ಹೇಳಿದ. ‘ಯಾರ ಕೆಟ್ಟ ಕೆಲಸಗಳನ್ನ, ಪಾಪಗಳನ್ನ ದೇವರು ಕ್ಷಮಿಸಿದ್ದಾನೋ ಅವರು ಖುಷಿಯಾಗಿ ಇರ್ತಾರೆ. ಯಾರ ಪಾಪವನ್ನ ಯೆಹೋವ ಲೆಕ್ಕ ಇಡಲ್ವೋ ಅವನು ಸಂತೋಷವಾಗಿ ಇರ್ತಾನೆ’” ಅಂತನೂ ಪೌಲ ಹೇಳಿದ. (ರೋಮ. 4:6-8; ಕೀರ್ತ. 32:1, 2) ಇದ್ರಿಂದ ನಮಗೇನು ಗೊತ್ತಾಗುತ್ತೆ? ಯಾರು ದೇವರ ಮೇಲೆ ನಂಬಿಕೆ ಇಡ್ತಾರೋ ಅಂಥವರ ಪಾಪವನ್ನ ದೇವರು ಕ್ಷಮಿಸಿಬಿಡ್ತಾನೆ, ಲೆಕ್ಕ ಇಟ್ಕೊಳ್ಳಲ್ಲ. ಅಷ್ಟೇ ಅಲ್ಲ, ಅವ್ರನ್ನ ನೀತಿವಂತರಾಗಿ ನೋಡ್ತಾನೆ, ಯಾವ ತಪ್ಪನ್ನೂ ಮಾಡದವರು ಅಂತ ಹೇಳ್ತಾನೆ.
7. ಪಾಪಿಗಳಾಗಿದ್ರೂ ಯೆಹೋವ ಯಾಕೆ ತನ್ನ ಸೇವಕರನ್ನ ನೀತಿವಂತ್ರು ಅಂತ ಕರೆದನು?
7 ಅಬ್ರಹಾಮ, ದಾವೀದ ಮತ್ತು ಇನ್ನೂ ಬೇರೆ ದೇವ ಸೇವಕರು ಆಗಿನ ಕಾಲದಲ್ಲಿದ್ದ ಬೇರೆ ಜನ್ರ ತರ ಪಾಪಿಗಳಾಗಿದ್ರೂ ಇವ್ರನ್ನ ಮಾತ್ರ ಯೆಹೋವ ಯಾಕೆ ನೀತಿವಂತರು ಅಂತ ಕರೆದನು? ಯಾಕಂದ್ರೆ ಇವರು ಯೆಹೋವನ ಮೇಲೆ ನಂಬಿಕೆ ಇಟ್ಟಿದ್ರು. (ಎಫೆ. 2:12) ನಾವು ಯೆಹೋವನ ಜೊತೆ ಫ್ರೆಂಡ್‌ಶಿಪ್ ಬೆಳೆಸ್ಕೊಬೇಕಾದ್ರೆ ನಂಬಿಕೆ ಬೇಕೇ ಬೇಕು ಅಂತ ಪೌಲ ಹೇಳಿದ. ಅಬ್ರಹಾಮ ಮತ್ತು ದಾವೀದ ನಂಬಿಕೆ ತೋರಿಸಿದ್ರಿಂದಾನೇ ಅವರು ಯೆಹೋವನ ಸ್ನೇಹಿತರಾದ್ರು. ಅವ್ರ ತರ ನಾವೂ ಯೆಹೋವನ ಸ್ನೇಹಿತರಾಗೋಕೆ ಆಗುತ್ತೆ.
ನಂಬಿಕೆಗೂ ಒಳ್ಳೇ ಕೆಲಸಕ್ಕೂ ಏನು ಸಂಬಂಧ?
8-9. ಪೌಲ ಮತ್ತು ಯಾಕೋಬ ಹೇಳಿದ ಮಾತುಗಳನ್ನ ಕೆಲವರು ಯಾಕೆ ತಪ್ಪರ್ಥ ಮಾಡ್ಕೊಂಡಿದ್ದಾರೆ? ಮತ್ತು ಅವರು ಏನಂತ ಅನ್ಕೊಂಡಿದ್ದಾರೆ?
8 ನಂಬಿಕೆ ತೋರಿಸೋದಕ್ಕೂ ಒಳ್ಳೇ ಕೆಲಸಕ್ಕೂ ಏನು ಸಂಬಂಧ ಅನ್ನೋ ವಿಷ್ಯದಲ್ಲಿ ನೂರಾರು ವರ್ಷಗಳಿಂದ ಧರ್ಮಗುರುಗಳು ವಾದ ವಿವಾದ ಮಾಡ್ತಿದ್ದಾರೆ. ಕೆಲವು ಧರ್ಮಗುರುಗಳು “ಯೇಸು ಮೇಲೆ ನಂಬಿಕೆ ಇಟ್ರೆ ಸಾಕು ನಿಮಗೆ ರಕ್ಷಣೆ ಸಿಗುತ್ತೆ” ಅಂತ ಕಲಿಸ್ತಾರೆ. ಅದಕ್ಕೆ ಅವರು, ‘ಒಬ್ಬ ನಿಯಮ ಪುಸ್ತಕವನ್ನ ಪೂರ್ತಿ ಪಾಲಿಸದಿದ್ರೂ ದೇವರು ಅವನನ್ನ ನೀತಿವಂತ ಅಂತ ನೋಡ್ತಾನೆ’ ಅಂತ ಪೌಲ ಹೇಳಿದ ಮಾತನ್ನ ಬಳಸಿ ಮಾತಾಡ್ತಾ ಇರ್ತಾರೆ. (ರೋಮ. 4:6) ಆದ್ರೆ ಇನ್ನೂ ಕೆಲವು ಧರ್ಮಗುರುಗಳು ನಿಮಗೆ ರಕ್ಷಣೆ ಸಿಗಬೇಕಂದ್ರೆ ಚರ್ಚಿಗೆ ಬನ್ನಿ, ಅಲ್ಲಿ ಕೆಲಸಗಳನ್ನ ಮಾಡಿ ಅಂತ ಹೇಳ್ತಾರೆ. ಹೀಗೆ ಅವರು “ನಂಬಿಕೆ ಮಾತ್ರ ಇದ್ರೆ ಸಾಕಾಗಲ್ಲ, ಅದನ್ನ ಕೆಲಸದಲ್ಲಿ ತೋರಿಸಬೇಕು” ಅಂತ ಯಾಕೋಬ 2:24ರಲ್ಲಿ ಹೇಳಿರೋ ಮಾತನ್ನ ತಿರುಚಿ ಹೇಳ್ತಾರೆ.
9 ಧರ್ಮಗುರುಗಳು ಈ ತರ ಜನ್ರಿಗೆ ಕಲಿಸ್ತಾ ಇರೋದ್ರಿಂದ ಏನಾಗ್ತಿದೆ? ನಂಬಿಕೆ ಮತ್ತು ಒಳ್ಳೇ ಕೆಲಸ ಮಾಡೋದ್ರ ಬಗ್ಗೆ ಯಾಕೋಬನಿಗೂ ಪೌಲನಿಗೂ ಬೇರೆ ಬೇರೆ ಅಭಿಪ್ರಾಯ ಇದೆ ಅಂತ ಕೆಲವು ಬೈಬಲ್ ವಿದ್ವಾಂಸರು ಅಂದ್ಕೊಂಡಿದ್ದಾರೆ. ಕೆಲವು ಧರ್ಮಗುರುಗಳು, ‘ದೇವರ ಮೆಚ್ಚಿಗೆ ಪಡಿಬೇಕಂದ್ರೆ ನಂಬಿಕೆ ತೋರಿಸಿದ್ರೆ ಮಾತ್ರ ಸಾಕು ಅಂತ ಪೌಲ ಹೇಳ್ತಿದ್ದಾನೆ, ಆದ್ರೆ ಒಳ್ಳೇ ಕೆಲಸಗಳನ್ನ ಮಾಡಿದ್ರೆ ಸಾಕು ಅಂತ ಯಾಕೋಬ ಹೇಳ್ತಿದ್ದಾನೆ’ ಅಂತ ಜನ್ರಿಗೆ ಕಲಿಸ್ತಿದ್ದಾರೆ. ಧರ್ಮಗಳ ಬಗ್ಗೆ ಅಧ್ಯಯನ ಮಾಡೋ ಒಬ್ಬ ಪ್ರೊಫೆಸರ್ ಏನು ಹೇಳ್ತಾರೆ ನೋಡಿ: “ದೇವರು ನೀತಿವಂತ ಅಂತ ಕರಿಬೇಕಾದ್ರೆ ನಂಬಿಕೆ ಇದ್ರೆ ಸಾಕು ಅಂತ ಪೌಲ ಹೇಳಿದ ಮಾತನ್ನ ಯಾಕೋಬ ಸರಿಯಾಗಿ ಅರ್ಥ ಮಾಡ್ಕೊಂಡಿಲ್ಲ, ಅದನ್ನ ಒಪ್ಕೊಳ್ತಾನೂ ಇಲ್ಲ” ಅಂತ ಅವರು ಹೇಳ್ತಾರೆ. ಆದ್ರೆ ಯೆಹೋವ ದೇವರು ಪೌಲ ಮತ್ತು ಯಾಕೋಬ ಇಬ್ರಿಗೂ ತನ್ನ ಪವಿತ್ರಶಕ್ತಿ ಕೊಟ್ಟು ಆ ಪತ್ರಗಳನ್ನ ಬರೆಸಿದನು. (2 ತಿಮೊ. 3:16) ಅವ್ರಿಬ್ರೂ ಹಾಗೆ ಹೇಳಬೇಕಾದ್ರೆ ಅದಕ್ಕೆ ಏನೋ ಒಂದು ಕಾರಣ ಇರುತ್ತೆ. ಅದೇನು ಅಂತ ಅರ್ಥ ಮಾಡ್ಕೊಬೇಕಂದ್ರೆ ಆ ವಚನಗಳ ಹಿನ್ನೆಲೆಯನ್ನ ತಿಳ್ಕೊಬೇಕು.
10. ರೋಮನ್ನರಿಗೆ 3:21, 28ರಲ್ಲಿ ಪೌಲ ಏನನ್ನ ಅರ್ಥ ಮಾಡಿಸ್ತಿದ್ದಾನೆ? (ಚಿತ್ರನೂ ನೋಡಿ.)
10 ಪೌಲ ರೋಮನ್ನರಿಗೆ 3 ಮತ್ತು 4ನೇ ಅಧ್ಯಾಯದಲ್ಲಿ ಏನು ಹೇಳ್ತಿದ್ದಾನೆ? ಅಲ್ಲಿ “ನಿಯಮ ಪುಸ್ತಕ ಹೇಳೋದನ್ನ” ಪಾಲಿಸದೇ ಇದ್ರೂ ನೀತಿವಂತರಾಗಬಹುದು ಅಂತ ಪೌಲ ಹೇಳ್ತಿದ್ದಾನೆ. ಅಂದ್ರೆ ಮೋಶೆ ‘ನಿಯಮ ಪುಸ್ತಕದ’ ಬಗ್ಗೆ ಮಾತಾಡ್ತಿದ್ದಾನೆ. (ರೋಮನ್ನರಿಗೆ 3:21, 28 ಓದಿ.) ಪೌಲ ಯಾಕೆ ಹಾಗೆ ಹೇಳಿದ? ಅವನ ಕಾಲದಲ್ಲಿದ್ದ ಕೆಲವು ಯೆಹೂದಿ ಕ್ರೈಸ್ತರು ನಾವು ಈಗ್ಲೂ ಮೋಶೆ ನಿಯಮ ಪುಸ್ತಕನ ಪಾಲಿಸಬೇಕು, ಆಗ ಮಾತ್ರ ನೀತಿವಂತರಾಗ್ತೀವಿ ಅಂತ ಅಂದ್ಕೊಂಡಿದ್ರು. ಅದಕ್ಕೇ ಪೌಲ ಅವ್ರಿಗೆ ಅಬ್ರಹಾಮನ ಬಗ್ಗೆ ಹೇಳ್ತಾ ಒಬ್ಬ ವ್ಯಕ್ತಿ ನೀತಿವಂತ ಆಗೋದು “ನಿಯಮ ಪುಸ್ತಕ ಹೇಳೋದನ್ನ” ಪಾಲಿಸೋದ್ರಿಂದ ಅಲ್ಲ, ಅವನು ತೋರಿಸೋ ನಂಬಿಕೆಯಿಂದ ಅಂತ ಅರ್ಥ ಮಾಡಿಸಿದ. ಇದ್ರಿಂದ ನಮಗೆ ಏನು ಗೊತ್ತಾಗುತ್ತೆ? ಯೆಹೋವನ ಮೇಲೆ, ಆತನ ಮಗನ ಮೇಲೆ ನಂಬಿಕೆ ಇಟ್ರೆ ನಾವೂ ನೀತಿವಂತರಾಗಬಹುದು. ಇದನ್ನ ಕೇಳಿದಾಗ ಎಷ್ಟು ಖುಷಿಯಾಗುತ್ತಲ್ವಾ?
11. ಯಾಕೋಬ ಯಾವ ‘ಕೆಲಸದ’ ಬಗ್ಗೆ ಮಾತಾಡ್ತಿದ್ದಾನೆ?
11 ಯಾಕೋಬ ನಿಮ್ಮ ನಂಬಿಕೆನ ‘ಕೆಲಸದಲ್ಲಿ’ ತೋರಿಸಿ ಅಂತ 2ನೇ ಅಧ್ಯಾಯದಲ್ಲಿ ಹೇಳ್ತಿದ್ದಾನೆ. ಆದ್ರೆ ಅವನು ಇಲ್ಲಿ ‘ನಿಯಮ ಪುಸ್ತಕನ’ ಪಾಲಿಸೋದ್ರ ಬಗ್ಗೆ ಮಾತಾಡ್ತಿಲ್ಲ. ಬದ್ಲಿಗೆ ಒಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಮಾಡೋ ಕೆಲಸಗಳ ಬಗ್ಗೆ ಮಾತಾಡ್ತಿದ್ದಾನೆ. ಅವನು ಮಾಡೋ ಕೆಲಸಗಳಿಂದ ಅವನಿಗೆ ದೇವರ ಮೇಲೆ ನಂಬಿಕೆ ಇದ್ಯಾ ಇಲ್ವಾ ಅಂತ ಗೊತ್ತಾಗುತ್ತೆ. ಇದನ್ನ ಅರ್ಥ ಮಾಡ್ಕೊಳ್ಳೋಕೆ ಯಾಕೋಬ ಕೊಟ್ಟ 2 ಉದಾಹರಣೆಗಳನ್ನ ಈಗ ನೋಡೋಣ.
12. ನಂಬಿಕೆಗೂ ನಾವು ಮಾಡೋ ಕೆಲಸಕ್ಕೂ ಏನು ಸಂಬಂಧ ಇದೆ? (ಚಿತ್ರನೂ ನೋಡಿ.)
12 ಯಾಕೋಬ ಕೊಟ್ಟ ಮೊದಲನೇ ಉದಾಹರಣೆಯಲ್ಲಿ ಒಬ್ಬ ವ್ಯಕ್ತಿ ಶ್ರೀಮಂತರನ್ನ ತುಂಬ ಚೆನ್ನಾಗಿ ನೋಡ್ಕೊಳ್ತಾನೆ. ಅವ್ರಿಗೆ ಗೌರವ ಕೊಟ್ಟು ಮಾತಾಡ್ತಾನೆ. ಆದ್ರೆ ಬಡವರನ್ನ ತುಂಬ ಕೀಳಾಗಿ ನೋಡ್ತಾನೆ. ಈಗ ಆ ವ್ಯಕ್ತಿಗೆ ನಂಬಿಕೆ ಇದೆ ಅಂತ ಹೇಳೋಕೆ ಆಗುತ್ತಾ? ಇಲ್ಲ, ಯಾಕಂದ್ರೆ ಅವನು ಭೇದಭಾವ ಮಾಡ್ತಿದ್ದಾನೆ. ಅವನಲ್ಲಿ ನಂಬಿಕೆ ಇಲ್ಲ ಅನ್ನೋದು ಅವನು ಮಾಡ್ತಿರೋ ಕೆಲಸಗಳಿಂದ ಗೊತ್ತಾಗ್ತಾ ಇದೆ. (ಯಾಕೋ. 2:1-5, 9) ಎರಡನೇ ಉದಾಹರಣೆಯಲ್ಲಿ ಒಬ್ಬ ವ್ಯಕ್ತಿಗೆ ಅವನ ಸಹೋದರ ಅಥವಾ ಸಹೋದರಿ ಹತ್ರ ಬಟ್ಟೆ ಇಲ್ಲ, ತಿನ್ನೋಕೆ ಊಟ ಇಲ್ಲ ಅಂತ ಗೊತ್ತಾಗುತ್ತೆ. ಆಗ ಅವನು ಅವ್ರಿಗೆ ಸಹಾಯ ಮಾಡದೇ ಇದ್ರೆ ಅವನಿಗೆ ನಂಬಿಕೆ ಇದೆ ಅಂತ ಹೇಳಕ್ಕಾಗುತ್ತಾ? ಇಲ್ಲ. ಅವನಿಗೆ ನಂಬಿಕೆ ಇದ್ರೂ ಅದು ವ್ಯರ್ಥ ಆಗುತ್ತೆ. ಯಾಕಂದ್ರೆ ಅವನ ಕೆಲಸಗಳಲ್ಲಿ ಅದನ್ನ ತೋರಿಸ್ತಾ ಇಲ್ಲ. ಅದಕ್ಕೇ ಯಾಕೋಬ “ಒಳ್ಳೇ ಕೆಲಸ ಮಾಡಿ ತೋರಿಸ್ದೆ ಇದ್ರೆ ನಂಬಿಕೆ ಇದ್ರೂ ಪ್ರಯೋಜನ ಇಲ್ಲ” ಅಂತ ಹೇಳಿದ.—ಯಾಕೋ. 2:14-17.
13. ನಮ್ಮ ನಂಬಿಕೆನ ಕೆಲಸದಲ್ಲಿ ತೋರಿಸೋದು ಮುಖ್ಯ ಅಂತ ಯಾಕೋಬ ಹೇಗೆ ಅರ್ಥ ಮಾಡಿಸಿದ? (ಯಾಕೋಬ 2:25, 26)
13 ನಂಬಿಕೆ ಇದೆ ಅಂತ ತಮ್ಮ ಕೆಲಸದಲ್ಲಿ ತೋರಿಸಿದವ್ರಲ್ಲಿ ರಾಹಾಬ್ ಕೂಡ ಒಬ್ಬಳು ಅಂತ ಯಾಕೋಬ ಹೇಳಿದ. (ಯಾಕೋಬ 2:25, 26 ಓದಿ.) ಯೆಹೋವನ ಬಗ್ಗೆ, ಆತನು ಇಸ್ರಾಯೇಲ್ಯರನ್ನ ಹೇಗೆಲ್ಲಾ ಕಾಪಾಡಿದನು ಅನ್ನೋದ್ರ ಬಗ್ಗೆ ರಾಹಾಬ್ ಕೇಳಿಸ್ಕೊಂಡಿದ್ದಳು. (ಯೆಹೋ. 2:9-11) ಆಗ ಅವಳು ಯೆಹೋವನ ಮೇಲೆ ನಂಬಿಕೆ ಇಟ್ಟಿದ್ದಷ್ಟೇ ಅಲ್ಲ, ಇಬ್ರು ಇಸ್ರಾಯೇಲ್ಯ ಗೂಢಾಚಾರರು ಬಂದಾಗ ಅವ್ರನ್ನ ಬಚ್ಚಿಟ್ಟು ಕಾಪಾಡಿದಳು. ಹೀಗೆ ನಂಬಿಕೆ ಇದೆ ಅಂತ ತನ್ನ ಕೆಲಸದಲ್ಲಿ ತೋರಿಸಿದಳು. ಇವಳು ಅಬ್ರಹಾಮನ ತರ ಅಪರಿಪೂರ್ಣಳಾಗಿದ್ದಳು ಮತ್ತು ಮೋಶೆ ನಿಯಮ ಪುಸ್ತಕನ ಪಾಲಿಸ್ತಿರಲಿಲ್ಲ. ಹಾಗಿದ್ರೂ ಯೆಹೋವ ಅವ್ರಿಬ್ರನ್ನ ನೀತಿವಂತರು ಅಂತ ಕರೆದನು. ಹಾಗಾಗಿ ನಂಬಿಕೆ ಇದ್ರೆ ಮಾತ್ರ ಸಾಕಾಗಲ್ಲ ಅದನ್ನ ನಮ್ಮ ಕೆಲಸದಲ್ಲಿ ತೋರಿಸೋದು ತುಂಬ ಮುಖ್ಯ ಅಂತ ರಾಹಾಬಳಿಂದ ಗೊತ್ತಾಗುತ್ತೆ.
14. ಪೌಲ ಮತ್ತು ಯಾಕೋಬ ಒಬ್ರಿಗೊಬ್ರು ವಿರುದ್ಧವಾಗಿ ಹೇಳ್ತಿಲ್ಲ ಅಂತ ಯಾಕೆ ಹೇಳಬಹುದು?
14 ಪೌಲ ಮತ್ತು ಯಾಕೋಬ ನಂಬಿಕೆ ಮತ್ತು ಅದನ್ನ ಕೆಲಸದಲ್ಲಿ ತೋರಿಸೋದ್ರ ಬಗ್ಗೆ ಬೇರೆಬೇರೆ ರೀತಿಯಲ್ಲಿ ಅರ್ಥ ಮಾಡಿಸ್ತಿದ್ದಾರೆ ಅಷ್ಟೇ, ಆದ್ರೆ ಒಬ್ರಿಗೊಬ್ರು ವಿರುದ್ಧವಾಗಿ ಹೇಳ್ತಿಲ್ಲ. ಪೌಲ ಯೆಹೂದಿ ಕ್ರೈಸ್ತರಿಗೆ ನೀತಿವಂತರಾಗಬೇಕಾದ್ರೆ ಮೋಶೆ ನಿಯಮ ಪುಸ್ತಕದಲ್ಲಿ ಇರೋದನ್ನ ಪಾಲಿಸಿದ್ರೆ ಅಲ್ಲ, ದೇವರ ಮೇಲೆ ನಂಬಿಕೆ ಇಡಬೇಕು ಅಂತ ಹೇಳ್ತಿದ್ದಾನೆ. ಯಾಕೋಬ ಆ ನಂಬಿಕೆನ ಕೆಲಸದಲ್ಲಿ ತೋರಿಸಿ ಅಂದ್ರೆ ಬೇರೆಯವ್ರಿಗೆ ಒಳ್ಳೇದು ಮಾಡಿ ಅಂತ ಎಲ್ಲಾ ಕ್ರೈಸ್ತರಿಗೆ ಹೇಳ್ತಿದ್ದಾನೆ.
15. ನಮಗೆ ನಂಬಿಕೆ ಇದೆ ಅಂತ ಹೇಗೆಲ್ಲಾ ತೋರಿಸಬಹುದು? (ಚಿತ್ರಗಳನ್ನೂ ನೋಡಿ.)
15 ನಾವು ನೀತಿವಂತರಾಗಬೇಕಾದ್ರೆ ಅಬ್ರಹಾಮ ಮಾಡಿದ ತರಾನೇ ಮಾಡಬೇಕು ಅಂತ ಯೆಹೋವ ಹೇಳ್ತಿಲ್ಲ. ನಮ್ಮ ನಂಬಿಕೆನ ತೋರಿಸೋಕೆ ಬೇರೆಬೇರೆ ದಾರಿಗಳಿದೆ. ಉದಾಹರಣೆಗೆ, ನಾವು ಸಭೆಗೆ ಬಂದ ಹೊಸಬ್ರನ್ನ ಮಾತಾಡಿಸಬಹುದು. ಸಹೋದರ ಸಹೋದರಿಯರಿಗೆ ಸಹಾಯ ಮಾಡಬಹುದು. ನಮ್ಮ ಕುಟುಂಬದವ್ರನ್ನ ಚೆನ್ನಾಗಿ ನೋಡ್ಕೊಬಹುದು. ಇದನ್ನೆಲ್ಲ ಮಾಡಿದಾಗ ಯೆಹೋವ ನಮ್ಮನ್ನ ಇಷ್ಟಪಡ್ತಾನೆ ಮತ್ತು ಆಶೀರ್ವದಿಸ್ತಾನೆ. (ರೋಮ. 15:7; 1 ತಿಮೊ. 5:4, 8; 1 ಯೋಹಾ. 3:18) ನಮಗೆ ನಂಬಿಕೆ ಇದೆ ಅಂತ ಇನ್ನೂ ಹೇಗೆ ತೋರಿಸಬಹುದು? ಜನ್ರಿಗೆ ಸಿಹಿಸುದ್ದಿ ಸಾರಬಹುದು. (1 ತಿಮೊ. 4:16) ಹೀಗೆ ಯೆಹೋವ ತಾನು ಕೊಟ್ಟ ಮಾತನ್ನ ಉಳಿಸ್ಕೊಳ್ತಾನೆ, ಸರಿಯಾಗಿ ಇರೋದನ್ನೇ ಮಾಡ್ತಾನೆ ಅಂತ ನಾವು ನಂಬ್ತೀವಿ ಅನ್ನೋದನ್ನ ನಮ್ಮ ಕೆಲಸಗಳಲ್ಲಿ ತೋರಿಸೋಣ. ಆಗ ಯೆಹೋವ ನಮ್ಮನ್ನ ನೀತಿವಂತರು ಅಂತ ಕರೀತಾನೆ ಮತ್ತು ನಮ್ಮನ್ನ ಫ್ರೆಂಡಾಗಿ ಮಾಡ್ಕೋತಾನೆ.
ನಂಬಿಕೆ ಗಟ್ಟಿ ಮಾಡ್ಕೊಳ್ಳೋಕೆ ನಿರೀಕ್ಷೆ ಬೇಕು
16. ಅಬ್ರಹಾಮನಿಗೆ ಯಾವ ನಿರೀಕ್ಷೆ ಇತ್ತು?
16 ರೋಮನ್ನರಿಗೆ 4ನೇ ಅಧ್ಯಾಯದಲ್ಲಿ ಅಬ್ರಹಾಮನಿಂದ ಇನ್ನೂ ಒಂದು ಪಾಠ ಕಲಿಬಹುದು. ಅದೇನಂದ್ರೆ ನಾವು ನಂಬಿರೋದು ಮುಂದೆ ನಡೆದೇ ನಡಿಯುತ್ತೆ ಅಂತ ನಿರೀಕ್ಷೆ ಇಟ್ಕೊಬೇಕು. ಯೆಹೋವ ಅಬ್ರಹಾಮನಿಗೆ, ನೀನು “ಅನೇಕ ಜನಾಂಗಗಳಿಗೆ” ತಂದೆ ಆಗ್ತೀಯ ಅಂತ ಮಾತುಕೊಟ್ಟಿದ್ದನು. (ಆದಿ. 12:3; 15:5; 17:4; ರೋಮ. 4:17) ಆದ್ರೆ ಅಬ್ರಹಾಮನಿಗೆ 100 ವರ್ಷ ಮತ್ತು ಸಾರಗೆ 90 ವರ್ಷ ಆದ್ರೂ ಅವ್ರಿಗಿನ್ನೂ ಮಕ್ಕಳೇ ಆಗಿರ್ಲಿಲ್ಲ. ಆ ವಯಸ್ಸಲ್ಲಿ ಮಕ್ಕಳಾಗಲ್ಲ ಅಂತ ಮನುಷ್ಯರಿಗೆ ಅನಿಸಬಹುದು. ಹಾಗಂತ ಅಬ್ರಹಾಮನೂ ಹಾಗೇ ಅಂದ್ಕೊಂಡ್ನಾ? ಇಲ್ಲ. “ಅವನು ತುಂಬ ಜನಾಂಗಗಳಿಗೆ ತಂದೆ ಆಗೋಕೆ ಆಗಲ್ಲ ಅಂತ ಅನಿಸಿದ್ರೂ ಆ ಮಾತು ನಿಜ ಆಗುತ್ತೆ ಅಂತ ಅವನು ಬಲವಾಗಿ ನಂಬಿದ” ಅಂದ್ರೆ ನಿರೀಕ್ಷೆ ಇಟ್ಕೊಂಡಿದ್ದ. (ರೋಮ. 4:18, 19) ಅವನು ಇಟ್ಕೊಂಡಿದ್ದ ನಿರೀಕ್ಷೆ ನಿಜ ಆಯ್ತು. ಅವನಿಗೊಬ್ಬ ಮಗ ಹುಟ್ಟಿದ, ಅವನಿಗೆ ಇಸಾಕ ಅಂತ ಹೆಸರಿಟ್ಟ.—ರೋಮ. 4:20-22.
17. ನಾವೂ ನೀತಿವಂತರಾಗೋಕೆ ಆಗುತ್ತೆ ಅಂತ ಹೇಗೆ ಹೇಳಬಹುದು?
17 ಅಬ್ರಹಾಮನ ತರ ನಾವೂ ಯೆಹೋವನ ಫ್ರೆಂಡ್ ಆಗಬಹುದು, ನೀತಿವಂತರಾಗಬಹುದು ಮತ್ತು ಆತನ ಮೆಚ್ಚಿಗೆ ಪಡ್ಕೊಬಹುದು. ಯಾಕಂದ್ರೆ ಪೌಲ ಹೀಗೆ ಹೇಳ್ತಾನೆ: “‘ದೇವರು ಅವನನ್ನ ನೀತಿವಂತನಾಗಿ ನೋಡಿದನು’ ಅನ್ನೋ ಮಾತುಗಳನ್ನ ಅವನಿಗೋಸ್ಕರ [ಅಬ್ರಹಾಮನಿಗೋಸ್ಕರ] ಮಾತ್ರ ಅಲ್ಲ, ನಮಗೋಸ್ಕರನೂ ಬರೆದಿದೆ. ನಮ್ಮನ್ನೂ ದೇವರು ನೀತಿವಂತರಾಗಿ ನೋಡ್ತಾನೆ. ಯಾಕಂದ್ರೆ ನಮ್ಮ ಪ್ರಭು ಯೇಸುವನ್ನ ಜೀವಂತವಾಗಿ ಎಬ್ಬಿಸಿದ ದೇವರಲ್ಲಿ ನಾವು ನಂಬಿಕೆ ಇಟ್ಟಿದ್ದೀವಿ.” (ರೋಮ. 4:23, 24) ಅಬ್ರಹಾಮನ ತರ ನಾವೂ ನಂಬಿಕೆ ಇಡಬೇಕು. ಆ ನಂಬಿಕೆನ ಕೆಲಸದಲ್ಲಿ ತೋರಿಸಬೇಕು. ಅಷ್ಟೇ ಅಲ್ಲ, ನಿರೀಕ್ಷೆನೂ ಇಟ್ಕೊಬೇಕು. ಈ ನಿರೀಕ್ಷೆ ಬಗ್ಗೆ ಪೌಲ ರೋಮನ್ನರಿಗೆ 5ನೇ ಅಧ್ಯಾಯದಲ್ಲಿ ಬರೆದಿದ್ದಾನೆ. ಅದ್ರ ಬಗ್ಗೆ ನಾವು ಮುಂದಿನ ಲೇಖನದಲ್ಲಿ ನೋಡೋಣ.
ಗೀತೆ 106 ಯೆಹೋವನ ಸ್ನೇಹವನ್ನು ಗಳಿಸುವುದು
a ನಾವೆಲ್ರೂ ಯೆಹೋವನ ಮೆಚ್ಚಿಗೆ ಪಡ್ಕೊಬೇಕು ಮತ್ತು ಆತನು ನಮ್ಮನ್ನ ನೀತಿವಂತ್ರಾಗಿ ನೋಡಬೇಕು ಅಂತ ಆಸೆ ಪಡ್ತೀವಿ. ಇದಕ್ಕೆ ನಮ್ಮಲ್ಲಿ ನಂಬಿಕೆ ಇರಬೇಕು ಮತ್ತು ನಾವು ಒಳ್ಳೇ ಕೆಲಸಗಳನ್ನ ಮಾಡಬೇಕು. ಅದು ಯಾಕೆ ಅಷ್ಟು ಮುಖ್ಯ ಅಂತ ಯಾಕೋಬ ಮತ್ತು ಪೌಲ ಬರೆದ ಪತ್ರದಲ್ಲಿದೆ.
b ಚಿತ್ರ ವಿವರಣೆ: ಬಟ್ಟೆಗೆ ನೀಲಿ ದಾರ ಹಾಕೋದು, ಪಸ್ಕ ಹಬ್ಬ ಮಾಡೋದು, ಪದ್ಧತಿ ಪ್ರಕಾರ ಕೈ ತೊಳಿಯೋದು ಮೋಶೆ ನಿಯಮ ಪುಸ್ತಕದಲ್ಲಿ ಇತ್ತು. ಆದ್ರೆ ಆ ನಿಯಮಗಳನ್ನ ಪಾಲಿಸೋದಕ್ಕಿಂತ ನಂಬಿಕೆ ತೋರಿಸೋದ್ರ ಕಡೆಗೆ ಗಮನ ಕೊಡಬೇಕು ಅಂತ ಪೌಲ ಯೆಹೂದಿ ಕ್ರೈಸ್ತರಿಗೆ ಹೇಳಿದ.
c ಚಿತ್ರ ವಿವರಣೆ: ಬಡವ್ರಿಗೆ ಸಹಾಯ ಮಾಡ್ತಾ, ಎಲ್ರಿಗೂ ಒಳ್ಳೇದನ್ನೇ ಮಾಡ್ತಾ ನಿಮಗೆ ನಂಬಿಕೆ ಇದೆ ಅನ್ನೋದನ್ನ ನಿಮ್ಮ ಕೆಲಸಗಳಲ್ಲಿ ತೋರಿಸಿ ಅಂತ ಯಾಕೋಬ ಹೇಳಿದ.