ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 51

ನಿಮ್ಮ ನಿರೀಕ್ಷೆ ಸುಳ್ಳಾಗಲ್ಲ

ನಿಮ್ಮ ನಿರೀಕ್ಷೆ ಸುಳ್ಳಾಗಲ್ಲ

“ನಿರೀಕ್ಷೆ ನಮ್ಮನ್ನ ನಿರಾಶೆ ಮಾಡಲ್ಲ.”—ರೋಮ. 5:5.

ಗೀತೆ 129 ನಮ್ಮ ನಿರೀಕ್ಷೆಯನ್ನು ದೃಢವಾಗಿ ಹಿಡಿದುಕೊಳ್ಳುವುದು

ಈ ಲೇಖನದಲ್ಲಿ ಏನಿದೆ? a

1. ಅಬ್ರಹಾಮ ಯಾವ ನಿರೀಕ್ಷೆ ಇಟ್ಕೊಂಡಿದ್ದ ಮತ್ತು ಯಾಕೆ?

 ಯೆಹೋವ ತನ್ನ ಸ್ನೇಹಿತನಾದ ಅಬ್ರಹಾಮನಿಗೆ, ಅವನಿಂದ ಒಂದು ದೊಡ್ಡ ಜನಾಂಗ ಆಗುತ್ತೆ ಅಂತ ಮಾತುಕೊಟ್ಟನು. (ಆದಿ. 15:5; 22:18) ಅವನಿಗೆ ಯೆಹೋವನ ಮೇಲೆ ತುಂಬ ನಂಬಿಕೆ ಇದ್ದಿದ್ರಿಂದ ಆತನು ಕೊಟ್ಟ ಮಾತು ನಡಿಯುತ್ತೆ ಅಂತ ಗ್ಯಾರಂಟಿ ಇತ್ತು. ಆದ್ರೆ ಅಬ್ರಹಾಮನಿಗೆ 100 ವರ್ಷ ಮತ್ತು ಸಾರಗೆ 90 ವರ್ಷ ಆದ್ರೂ ಅವ್ರಿಗೆ ಮಕ್ಕಳೇ ಇರ್ಲಿಲ್ಲ. (ಆದಿ. 21:1-7) ಆದ್ರೂ ಅಬ್ರಹಾಮ ಏನು ಮಾಡಿದ? “ಅವನು ತುಂಬ ಜನಾಂಗಗಳಿಗೆ ತಂದೆ ಆಗೋಕೆ ಆಗಲ್ಲ ಅಂತ ಅನಿಸಿದ್ರೂ ಆ ಮಾತು ನಿಜ ಆಗುತ್ತೆ ಅಂತ ಅವನು ಬಲವಾಗಿ ನಂಬಿದ” ಅಂದ್ರೆ ನಿರೀಕ್ಷೆ ಇಟ್ಟ. (ರೋಮ. 4:18) ಅಬ್ರಹಾಮ ಇಟ್ಟ ನಿರೀಕ್ಷೆ ಸುಳ್ಳಾಗಲಿಲ್ಲ. ಅವನಿಗೆ ಇಸಾಕ ಹುಟ್ಟಿದ. ಯೆಹೋವ ತಾನು ಕೊಟ್ಟ ಮಾತನ್ನ ಉಳಿಸ್ಕೊಳ್ತಾನೆ ಅಂತ ಅಬ್ರಹಾಮನಿಗೆ ಯಾಕೆ ಅಷ್ಟು ಗ್ಯಾರಂಟಿ ಇತ್ತು?

2. ದೇವರು ಕೊಟ್ಟ ಮಾತು ನಿಜ ಆಗುತ್ತೆ ಅಂತ ಅಬ್ರಹಾಮ ಯಾಕೆ ನಂಬಿದ್ದ?

2 ಅಬ್ರಹಾಮ ಯೆಹೋವ ದೇವರಿಗೆ ಒಳ್ಳೇ ಸ್ನೇಹಿತನಾಗಿದ್ರಿಂದ ದೇವರು ತಾನು ಕೊಟ್ಟ ಮಾತನ್ನ ನಿಜ ಮಾಡ್ತಾನೆ ಅಂತ “ಪೂರ್ತಿ ನಂಬಿದ.” (ರೋಮ. 4:21) ಆ ನಂಬಿಕೆ ಇದ್ದಿದ್ರಿಂದ ಯೆಹೋವ ಅಬ್ರಹಾಮನನ್ನ ಮೆಚ್ಚಿಕೊಂಡನು ಮತ್ತು ಅವನನ್ನ ನೀತಿವಂತ ಅಂತ ಕರೆದನು. (ಯಾಕೋ. 2:23) ಅಬ್ರಹಾಮನ ನಂಬಿಕೆಗೂ ನಿರೀಕ್ಷೆಗೂ ಸಂಬಂಧ ಇತ್ತು ಅಂತ ರೋಮನ್ನರಿಗೆ 4:18ರಿಂದ ಗೊತ್ತಾಗುತ್ತೆ. ಈಗ ನಾವು ರೋಮನ್ನರಿಗೆ 5ನೇ ಅಧ್ಯಾಯದಲ್ಲಿ ಅಪೊಸ್ತಲ ಪೌಲ ನಿರೀಕ್ಷೆ ಬಗ್ಗೆ ಏನು ಹೇಳಿದ್ದಾನೆ ಅಂತ ನೋಡೋಣ.

3. ಪೌಲ ನಿರೀಕ್ಷೆ ಬಗ್ಗೆ ಏನು ಹೇಳಿದ್ದಾನೆ?

3 “ನಿರೀಕ್ಷೆ ನಮ್ಮನ್ನ ನಿರಾಶೆ ಮಾಡಲ್ಲ” ಅಂತ ಪೌಲ ನಮಗೆ ಅರ್ಥ ಮಾಡಿಸ್ತಾನೆ. (ರೋಮ. 5:5) ಅಷ್ಟೇ ಅಲ್ಲ, ನಮಗಿರೋ ನಿರೀಕ್ಷೆ ಗಟ್ಟಿ ಆಗ್ತಾ ಹೋಗುತ್ತೆ ಅಂತನೂ ಹೇಳಿದ್ದಾನೆ. ಹಾಗಾಗಿ ಅವನು ರೋಮನ್ನರಿಗೆ 5:1-5ರಲ್ಲಿ ಹೇಳಿರೋ ವಿಷ್ಯನ ಓದುವಾಗ, ನಿಮ್ಮ ಜೀವನದಲ್ಲಿ ನಡೆದ ವಿಷ್ಯಗಳ ಬಗ್ಗೆ ಯೋಚ್ನೆ ಮಾಡಿ. ಆಗ ದಿನದಿಂದ ದಿನಕ್ಕೆ ನಿಮ್ಮ ನಿರೀಕ್ಷೆ ಹೇಗೆ ಜಾಸ್ತಿ ಆಯ್ತು ಅನ್ನೋದನ್ನ ಅರ್ಥ ಮಾಡ್ಕೊಳ್ಳೋಕಾಗುತ್ತೆ. ಅಷ್ಟೇ ಅಲ್ಲ, ನಿಮ್ಮ ನಿರೀಕ್ಷೆನ ಇನ್ನೂ ಗಟ್ಟಿ ಮಾಡ್ಕೊಳ್ಳೋಕೆ ನೀವು ಏನು ಮಾಡಬಹುದು ಅನ್ನೋದೂ ಗೊತ್ತಾಗುತ್ತೆ. ನಾವೀಗ ನಿರೀಕ್ಷೆ ನಮ್ಮನ್ನ ನಿರಾಶೆ ಮಾಡಲ್ಲ ಅಂತ ಪೌಲ ಯಾಕೆ ಹೇಳಿದ ಅಂತ ನೋಡೋಣ.

ನಮಗಿರೋ ಅದ್ಭುತ ನಿರೀಕ್ಷೆ

4. ರೋಮನ್ನರಿಗೆ 5:1, 2ರಲ್ಲಿ ಯಾವುದ್ರ ಬಗ್ಗೆ ಹೇಳಿದೆ?

4 ರೋಮನ್ನರಿಗೆ 5:1, 2 ಓದಿ. ಪೌಲ ಈ ಮಾತುಗಳನ್ನ ರೋಮ್‌ ಸಭೆಯವ್ರಿಗೆ ಹೇಳಿದನು. ಅಲ್ಲಿದ್ದ ಸಹೋದರ ಸಹೋದರಿಯರು ಯೆಹೋವ ದೇವರ ಬಗ್ಗೆ ಮತ್ತು ಯೇಸು ಬಗ್ಗೆ ಕಲಿತು ಅವ್ರ ಮೇಲೆ ನಂಬಿಕೆ ಇಟ್ಟು ಕ್ರೈಸ್ತರಾದ್ರು. ಅವ್ರಲ್ಲಿದ್ದ “ನಂಬಿಕೆಯಿಂದಾಗಿ ದೇವರು [ಅವ್ರನ್ನ] ನೀತಿವಂತರು” ಅಂತ ಕರೆದನು. ಪವಿತ್ರಶಕ್ತಿಯಿಂದ ಅವ್ರನ್ನ ಅಭಿಷೇಕ ಮಾಡಿದನು. ಇದ್ರಿಂದ ಅವ್ರಿಗೆ ಯಾವ ನಿರೀಕ್ಷೆ ಸಿಕ್ತು?

5. ಅಭಿಷಿಕ್ತ ಕ್ರೈಸ್ತರಿಗೆ ಯಾವ ನಿರೀಕ್ಷೆ ಇದೆ?

5 ಪೌಲ ಎಫೆಸದಲ್ಲಿದ್ದ ಅಭಿಷಿಕ್ತ ಕ್ರೈಸ್ತರಿಗೂ ಈ ನಿರೀಕ್ಷೆ ಬಗ್ಗೆ ಹೇಳಿದ. “ಪವಿತ್ರ ಜನ್ರಿಗೆ ಆಸ್ತಿಯಾಗಿ ಕೊಡೋ ಮಹಿಮಾಭರಿತ ಆಶೀರ್ವಾದಗಳನ್ನ” ಅವರು ಪಡ್ಕೊಳ್ತಾರೆ ಅಂತ ಬರೆದ. (ಎಫೆ. 1:18) ಆ ನಿರೀಕ್ಷೆ ಎಲ್ಲಿ ಸಿಗುತ್ತೆ? ಅವನು ಕೊಲೊಸ್ಸೆಯಲ್ಲಿದ್ದ ಅಭಿಷಿಕ್ತರಿಗೆ “ಸ್ವರ್ಗದಲ್ಲಿ ಸಿಗೋ ಆಶೀರ್ವಾದಕ್ಕಾಗಿ” ನೀವು ಕಾಯ್ತಾ ಇದ್ದೀರ ಅಂತ ಬರೆದ. (ಕೊಲೊ. 1:4, 5) ಇದ್ರಿಂದ ನಮಗೇನು ಗೊತ್ತಾಗುತ್ತೆ? ಅಭಿಷಿಕ್ತರಿಗೆ ಸ್ವರ್ಗದಲ್ಲಿ ಶಾಶ್ವತವಾಗಿ ಜೀವಿಸೋ ಮತ್ತು ಕ್ರಿಸ್ತನ ಜೊತೆ ಆಳೋ ನಿರೀಕ್ಷೆ ಇದೆ ಅಂತ ಗೊತ್ತಾಗುತ್ತೆ.—1 ಥೆಸ. 4:13-17; ಪ್ರಕ. 20:6.

ಅಭಿಷಿಕ್ತ ಕ್ರೈಸ್ತರಿಗೆ ತಮಗಿರೋ ನಿರೀಕ್ಷೆ ಯಾವತ್ತೂ ಸುಳ್ಳಾಗಲ್ಲ ಅನ್ನೋ ನಂಬಿಕೆಯಿದೆ ಅಂತ ಸಹೋದರ ಎಫ್‌. ಡಬ್ಲೂ. ಫ್ರಾನ್ಸ್‌ ಹೇಳಿದ್ರು (ಪ್ಯಾರ 6 ನೋಡಿ)

6. ಒಬ್ಬ ಅಭಿಷಿಕ್ತ ಸಹೋದರ ತಮ್ಮ ನಿರೀಕ್ಷೆ ಬಗ್ಗೆ ಏನು ಹೇಳಿದ್ರು?

6 ಅಭಿಷಿಕ್ತ ಕ್ರೈಸ್ತರು ಈ ನಿರೀಕ್ಷೆನ ಅಮೂಲ್ಯವಾಗಿ ನೋಡ್ತಾರೆ. ಇದ್ರ ಬಗ್ಗೆ ಸಹೋದರ ಫ್ರೆಡ್ರಿಕ್‌ ಫ್ರಾನ್ಸ್‌ ಏನು ಹೇಳಿದ್ದಾರೆ ಅಂತ ನೋಡಿ: ‘ನಮಗೆ ಒಂದು ದೃಢ ನಿರೀಕ್ಷೆ ಇದೆ. ಅದೇನಂದರೆ 1,44,000 ಚಿಕ್ಕ ಮಂದೆಯಲ್ಲಿ ಪ್ರತಿಯೊಬ್ಬ ಸದಸ್ಯನು ಇಟ್ಟಿರೋ ನಿರೀಕ್ಷೆ ನೆರವೇರೇ ನರವೇರುತ್ತೆ. ಆ ನಿರೀಕ್ಷೆ ನಾವು ಕಲ್ಪಿಸಿಕೊಂಡಿದ್ದಕ್ಕಿಂತ ಇನ್ನೂ ಉತ್ತಮವಾಗಿ ಮತ್ತು ಸಂಪೂರ್ಣವಾಗಿ ನೆರವೇರುತ್ತೆ.’ ಸುಮಾರು ವರ್ಷಗಳು ಯೆಹೋವನಿಗೆ ನಂಬಿಕೆಯಿಂದ ಸೇವೆ ಮಾಡಿದ ಮೇಲೆ ಆ ಸಹೋದರ 1991ರಲ್ಲಿ ಏನು ಹೇಳ್ತಾರೆ ನೋಡಿ: ‘ನಮ್ಮ ನಿರೀಕ್ಷೆಯ, ಅದರ ಮೌಲ್ಯತೆಯ ಅರ್ಥವನ್ನು ಕಳಕೊಂಡಿಲ್ಲ. . . . ಮತ್ತು ಇನ್ನೂ ಹೆಚ್ಚು ಕಾಯಲಿರುವ ಆ ಸಂಗತಿಯನ್ನು ನಾವು ಇನ್ನಷ್ಟು ಹೆಚ್ಚು ಗಣ್ಯಮಾಡುತ್ತಿದ್ದೇವೆ. ಅದಕ್ಕೋಸ್ಕರ ಎಷ್ಟು ಕಾದರೂ ಅದು ಸಾರ್ಥಕವೇ, ಇನ್ನೊಂದು ದಶಲಕ್ಷ ವರ್ಷ ಕಾಯಬೇಕಾದರೂ ಸರಿಯೆ. ನಾನು ನಮ್ಮ ನಿರೀಕ್ಷೆಯನ್ನು ಎಂದಿಗಿಂತಲೂ ಅಧಿಕ ಬೆಲೆಯುಳ್ಳದ್ದಾಗಿ ಪರಿಗಣಿಸುತ್ತೇನೆ ಮತ್ತು ಅದಕ್ಕಾಗಿ ಗಣ್ಯತೆ ಕಳಕೊಳ್ಳಲು ನಾನು ಎಂದೂ ಬಯಸಲಾರೆ.’

7-8. ತುಂಬ ಜನ್ರಿಗೆ ಯಾವ ನಿರೀಕ್ಷೆ ಇದೆ? (ರೋಮನ್ನರಿಗೆ 8:20, 21)

7 ಇವತ್ತು ತುಂಬ ಕ್ರೈಸ್ತರಿಗೆ ಅಬ್ರಹಾಮನಿಗಿದ್ದ ನಿರೀಕ್ಷೆನೇ ಇದೆ. ಈ ಭೂಮಿ ಮೇಲೆ ದೇವರ ಸರ್ಕಾರದಲ್ಲಿ ನಾವೆಲ್ರೂ ಶಾಶ್ವತವಾಗಿ ಜೀವಿಸ್ತೀವಿ. (ಇಬ್ರಿ. 11:8-10, 13) ಈ ನಿರೀಕ್ಷೆ ಇರುವವ್ರಿಗೆ ಯಾವೆಲ್ಲ ಆಶೀರ್ವಾದಗಳು ಸಿಗುತ್ತೆ ಅಂತ ಪೌಲ ಬರೆದಿದ್ದಾನೆ. (ರೋಮನ್ನರಿಗೆ 8:20, 21 ಓದಿ.) ಈ ಆಶೀರ್ವಾದಗಳ ಬಗ್ಗೆ ಮೊದಮೊದ್ಲು ಕೇಳಿಸ್ಕೊಂಡಾಗ ನಿಮಗೆ ಯಾವುದು ಇಷ್ಟ ಆಯ್ತು? ನಮ್ಮಲ್ಲಿ ಪಾಪನೇ ಇರಲ್ಲ, ಪರಿಪೂರ್ಣರಾಗ್ತೀವಿ ಅಂತ ಕೇಳಿ ಖುಷಿ ಆಯ್ತಾ? ಅಥವಾ ಸತ್ತೋಗಿರೋ ನಮ್ಮ ಪ್ರಿಯರನ್ನ ಮತ್ತೆ ನೋಡಬಹುದು ಅಂತ ಕೇಳಿ ಖುಷಿ ಆಯ್ತಾ? ನಮಗೆ “ನಿರೀಕ್ಷೆ” ಇರೋದ್ರಿಂದಾನೇ ಈ ಆಶೀರ್ವಾದಗಳಿಗಾಗಿ ಕಾಯ್ತಾ ಇದ್ದೀವಿ.

8 ನಮಗೆ ಸ್ವರ್ಗದಲ್ಲಿ ಜೀವಿಸೋ ನಿರೀಕ್ಷೆ ಇರಲಿ ಅಥವಾ ಭೂಮಿಲಿ ಜೀವಿಸೋ ನಿರೀಕ್ಷೆ ಇರಲಿ ಯಾವುದು ಸಿಕ್ಕಿದ್ರೂ ಖುಷಿನೇ. ಹಾಗಾಗಿ ನಾವು ನಮ್ಮ ನಿರೀಕ್ಷೆನ ಯಾವಾಗ್ಲೂ ಗಟ್ಟಿ ಮಾಡ್ಕೊಳ್ತಾ ಇರೋಣ. ಅದಕ್ಕೆ ಯಾವುದು ಸಹಾಯ ಮಾಡುತ್ತೆ ಅಂತ ಪೌಲ ಹೇಳಿದ್ದಾನೆ. ಅದನ್ನೀಗ ನೋಡೋಣ. ಇದ್ರ ಬಗ್ಗೆ ತಿಳ್ಕೊಂಡಾಗ ನಮ್ಮ ನಿರೀಕ್ಷೆ ಸುಳ್ಳಾಗಲ್ಲ, ನಾವು ಅಂದ್ಕೊಂಡಿರೋದು ನಡೆದೇ ನಡಿಯುತ್ತೆ ಅನ್ನೋ ನಂಬಿಕೆ ಜಾಸ್ತಿಯಾಗುತ್ತೆ.

ನಮ್ಮ ನಿರೀಕ್ಷೆ ಹೇಗೆ ಗಟ್ಟಿಯಾಗ್ತಾ ಹೋಗುತ್ತೆ?

ಕ್ರೈಸ್ತರಾದ ನಮಗೆ ಒಂದಲ್ಲಾ ಒಂದು ತರದ ಕಷ್ಟ ಬರುತ್ತೆ ಅಂತ ಗೊತ್ತು (ಪ್ಯಾರ 9-10 ನೋಡಿ)

9-10. ಪೌಲ ಹೇಳಿದ ತರ ನಾವು ಏನನ್ನ ಎದುರುನೋಡಬೇಕು? (ರೋಮನ್ನರಿಗೆ 5:3) (ಚಿತ್ರಗಳನ್ನೂ ನೋಡಿ.)

9 ರೋಮನ್ನರಿಗೆ 5:3 ಓದಿ. ನಮಗೆ ಕಷ್ಟಗಳು ಬಂದಾಗ ನಮ್ಮ ನಿರೀಕ್ಷೆ ಇನ್ನೂ ಗಟ್ಟಿಯಾಗುತ್ತೆ ಅಂತ ಪೌಲ ಹೇಳಿದ. ಕ್ರೈಸ್ತರಾದ ನಾವು ಕಷ್ಟಗಳನ್ನ ಅನುಭವಿಸಲೇಬೇಕು. ಅದಕ್ಕೆ ಪೌಲನ ಉದಾಹರಣೆನೇ ತಗೊಳಿ. ಅವನು ಥೆಸಲೊನೀಕದವ್ರಿಗೆ “ಮುಂದೆ ನಮಗೆ ಕಷ್ಟಗಳು ಬಂದೇ ಬರುತ್ತೆ ಅಂತ ನಾವು ನಿಮ್ಮ ಜೊತೆ ಇದ್ದಾಗ್ಲೇ ಹೇಳ್ತಿದ್ವಲ್ವಾ. ಈಗ ಅದೇ ತರ ಆಯ್ತು” ಅಂದ. (1 ಥೆಸ. 3:4) ಕೊರಿಂಥದವ್ರಿಗೂ ಕೂಡ “ಸಹೋದರರೇ, ನಾವು ತುಂಬ ಕಷ್ಟಗಳನ್ನ ಅನುಭವಿಸಿದ್ವಿ. ಅದನ್ನ ನಿಮಗೆ ಹೇಳೋಕೆ ಇಷ್ಟಪಡ್ತೀವಿ . . . ನಾವು ಬದುಕೋದೇ ಇಲ್ಲ ಅಂತ ಅಂದ್ಕೊಂಡಿದ್ವಿ” ಅಂತ ಬರೆದ.—2 ಕೊರಿಂ. 1:8; 11:23-27.

10 ಪೌಲನ ತರ ನಾವೂ ಕಷ್ಟ ಅನುಭವಿಸಬೇಕಾಗುತ್ತೆ ಅಂತ ನಮಗೆ ಗೊತ್ತು. (2 ತಿಮೊ. 3:12) ನೀವು ಯೇಸು ಮೇಲೆ ನಂಬಿಕೆ ಇಟ್ಟು ಆತನ ತರ ನಡ್ಕೊಳ್ಳೋದ್ರಿಂದ ತೊಂದ್ರೆ ಅನುಭವಿಸ್ತಿದ್ದೀರಾ? ನಿಮ್ಮ ಕುಟುಂಬದವರು, ಸ್ನೇಹಿತರು ನಿಮ್ಮನ್ನ ಹೀಯಾಳಿಸ್ತಿದ್ದಾರಾ? ಅಥವಾ ನಿಮಗೆ ಹಿಂಸೆ ಕೊಡ್ತಿದ್ದಾರಾ? ಕೆಲಸದ ಜಾಗದಲ್ಲಿ ನೀವು ಪ್ರಾಮಾಣಿಕರಾಗಿ ಇರೋದ್ರಿಂದ ನಿಮಗೆ ತೊಂದ್ರೆ ಆಗ್ತಿದ್ಯಾ? (ಇಬ್ರಿ. 13:18) ನಿರೀಕ್ಷೆ ಬಗ್ಗೆ ಜನ್ರಿಗೆ ಹೇಳೋದ್ರಿಂದ ಅಧಿಕಾರಿಗಳು ನಿಮ್ಮನ್ನ ವಿರೋಧಿಸ್ತಿದ್ದಾರಾ? ಹೀಗೆ ನಿಮಗೆ ಎಷ್ಟೇ ಹಿಂಸೆ ಬಂದ್ರೂ, ಯಾವ ತರ ಹಿಂಸೆ ಬಂದ್ರೂ ಖುಷಿ ಪಡೋಕೆ ಆಗುತ್ತೆ ಅಂತ ಪೌಲ ಹೇಳಿದ. ಅದು ಹೇಗೆ?

11. ಎಷ್ಟೇ ಕಷ್ಟ ಬಂದ್ರೂ ನಾವು ಯಾಕೆ ಸಹಿಸ್ಕೊಬೇಕು?

11 ಕಷ್ಟಗಳು ಬಂದಾಗ ನಾವು ಖುಷಿಯಾಗಿ ಇರಬಹುದು. ಯಾಕಂದ್ರೆ “ಕಷ್ಟದಲ್ಲಿ ಇರುವಾಗ ನಾವು ಸಹಿಸ್ಕೊಳ್ಳೋದನ್ನ ಕಲಿತೀವಿ” ಅಂತ ರೋಮನ್ನರಿಗೆ 5:3 ಹೇಳುತ್ತೆ. ಕ್ರೈಸ್ತರಾದ ನಮ್ಮೆಲ್ರಿಗೂ ಕಷ್ಟಗಳು ಬರೋದ್ರಿಂದ ನಾವು ಸಹಿಸ್ಕೊಳ್ಳೋ ಗುಣ ಬೆಳೆಸ್ಕೊಬೇಕು. ನಾವು ಸೋತುಹೋಗದೆ ಸಹಿಸ್ಕೊಂಡ್ರೆ ಮಾತ್ರ ನಮ್ಮ ನಿರೀಕ್ಷೆ ನಿಜ ಆಗೋದನ್ನ ಕಣ್ಣಾರೆ ನೋಡೋಕೆ ಆಗುತ್ತೆ. ಕಲ್ಲಿನ ನೆಲದ ಮೇಲೆ ಬಿದ್ದ ಬೀಜದ ತರ ನಾವು ಇರಬಾರದು. ಆ ಬೀಜಗಳು ಮೊದಮೊದ್ಲು ಮೊಳಕೆ ಹೊಡೆಯುತ್ತೆ, ಆದ್ರೆ ಆಮೇಲೆ ಬಾಡಿ ಹೋಗುತ್ತೆ. ಅದೇ ತರ ಸತ್ಯನ ಮೊದ್ಲು ಕೇಳಿಸ್ಕೊಂಡಾಗ ಖುಷಿ ಪಟ್ಟು “ಕಷ್ಟ ಹಿಂಸೆ ಬಂದಾಗ” ನಾವು ಯೆಹೋವನನ್ನ ಬಿಟ್ಟುಹೋಗಬಾರದು. (ಮತ್ತಾ. 13:5, 6, 20, 21) ಕಷ್ಟಗಳು ಬಂದಾಗ ಅದನ್ನ ಸಹಿಸ್ಕೊಳ್ಳೋದು ಅಷ್ಟು ಸುಲಭ ಅಲ್ಲ. ಆದ್ರೆ ಸಹಿಸ್ಕೊಂಡ್ರೆ ನಮಗೆ ತುಂಬ ಪ್ರಯೋಜನ ಸಿಗುತ್ತೆ ಮತ್ತು ಯೆಹೋವನನ್ನ ಖುಷಿಯಾಗಿ ಆರಾಧಿಸೋಕೆ ಆಗುತ್ತೆ. ಹಾಗಾದ್ರೆ ಆ ಪ್ರಯೋಜನಗಳು ಯಾವುದು ಅಂತ ಈಗ ನೋಡೋಣ.

12. ಕಷ್ಟಗಳನ್ನ ಸಹಿಸ್ಕೊಳ್ಳೋದ್ರಿಂದ ಏನು ಪ್ರಯೋಜನ?

12 ಸಹಿಸ್ಕೊಳ್ಳೋದ್ರಿಂದ ಏನೆಲ್ಲಾ ಪ್ರಯೋಜನ ಸಿಗುತ್ತೆ ಅಂತ ಯಾಕೋಬ ಹೇಳಿದ್ದಾನೆ. “ಸಹಿಸ್ಕೊಳ್ತಾ ಇದ್ರೆ ನಿಮ್ಮನ್ನ ನೀವೇ ತರಬೇತಿ ಮಾಡ್ಕೊಳ್ತೀರ. ಆಗ ನೀವು ಎಲ್ಲಾ ವಿಷ್ಯಗಳನ್ನ ಚೆನ್ನಾಗಿ ಮಾಡಕ್ಕಾಗುತ್ತೆ. ನಿಮಗೆ ಯಾವ ಕೊರತೆನೂ ಇರಲ್ಲ” ಅಂತ ಅವನು ಹೇಳಿದ. (ಯಾಕೋ. 1:2-4) ಸಹಿಸ್ಕೊಳ್ಳೋಕೆ ಒಂದು ಉದ್ದೇಶ ಇದೆ ಅಂತ ಇಲ್ಲಿ ಯಾಕೋಬ ಹೇಳ್ತಿದ್ದಾನೆ. ಅದು ಯಾವುದು? ಸಹಿಸ್ಕೊಳ್ಳೋದ್ರಿಂದ ತಾಳ್ಮೆ ಮತ್ತು ನಂಬಿಕೆ ಜಾಸ್ತಿ ಆಗುತ್ತೆ. ಯಾವಾಗ್ಲೂ ಯೆಹೋವನ ಮೇಲೆ ಭರವಸೆ ಇಡೋಕೆ ಕಲಿತೀವಿ. ಇದಷ್ಟೇ ಅಲ್ಲ, ನಮಗೆ ಇನ್ನೂ ಒಂದು ಪ್ರಯೋಜನ ಸಿಗುತ್ತೆ. ಅದೇನು ಅಂತ ಮುಂದೆ ನೋಡೋಣ.

13-14. ಸಹಿಸ್ಕೊಳ್ಳೋದ್ರಿಂದ ಇನ್ನೂ ಯಾವ ಪ್ರಯೋಜನ ಇದೆ? ಇದ್ರಿಂದ ನಮ್ಮ ನಿರೀಕ್ಷೆ ಹೇಗೆ ಗಟ್ಟಿಯಾಗುತ್ತೆ? (ರೋಮನ್ನರಿಗೆ 5:4)

13 ರೋಮನ್ನರಿಗೆ 5:4 ಓದಿ. ಸಹಿಸ್ಕೊಂಡ್ರೆ “ನಮ್ಮನ್ನ ದೇವರು ಮೆಚ್ತಾನೆ” ಅಂತ ಪೌಲ ಹೇಳ್ತಿದ್ದಾನೆ. ಇಲ್ಲಿ ನೀವು ಪಡೋ ಕಷ್ಟಗಳನ್ನ ನೋಡಿ ಯೆಹೋವ ಖುಷಿಪಡ್ತಾನೆ ಅಂತ ಹೇಳ್ತಿಲ್ಲ, ಬದ್ಲಿಗೆ ನೀವು ನಂಬಿಕೆಯಿಂದ ಸಹಿಸ್ಕೊಳ್ಳೋದನ್ನ ನೋಡಿ ಆತನು ನಿಮ್ಮನ್ನ ಮೆಚ್ಕೊಳ್ತಾನೆ ಅಂತ ಹೇಳ್ತಾ ಇದೆ. ಇದು ಎಂಥ ದೊಡ್ಡ ಆಶೀರ್ವಾದ ಅಲ್ವಾ?—ಕೀರ್ತ. 5:12.

14 ಅಬ್ರಹಾಮ ಸಹಿಸ್ಕೊಂಡಿದ್ದಕ್ಕೆ ಯೆಹೋವ ಅವನನ್ನ ಮೆಚ್ಕೊಂಡನು. ಆತನು ಅವನನ್ನ ತನ್ನ ಸ್ನೇಹಿತ ಅಂತ ಕರೆದನು, ನೀತಿವಂತ ಅಂತನೂ ಹೇಳಿದನು. (ಆದಿ. 15:6; ರೋಮ. 4:13, 22) ಯೆಹೋವ ನಮ್ಮನ್ನೂ ಮೆಚ್ಕೊಳ್ತಾನೆ. ಹಾಗಂತ ನಾವೆಷ್ಟು ಕೆಲಸ ಮಾಡ್ತೀವಿ, ನಮಗೆ ಯಾವ ಸುಯೋಗ ಇದೆ ಅಂತ ನೋಡಿ ಆತನು ನಮ್ಮನ್ನ ಮೆಚ್ಕೊಳ್ಳಲ್ಲ. ಬದ್ಲಿಗೆ ನಾವು ನಂಬಿಕೆಯಿಂದ ಸಹಿಸ್ಕೊಳ್ಳೋದನ್ನ ನೋಡಿ ಆತನು ಮೆಚ್ಕೊಳ್ತಾನೆ. ನಮ್ಮ ವಯಸ್ಸು, ಸಾಮರ್ಥ್ಯ, ಸನ್ನಿವೇಶ ಏನೇ ಆಗಿದ್ರೂ ನಮ್ಮೆಲ್ರಿಗೂ ಕಷ್ಟಗಳನ್ನ ಸಹಿಸ್ಕೊಳ್ಳೋಕೆ ಆಗೇ ಆಗುತ್ತೆ. ಈಗ ನೀವು ಯಾವುದಾದ್ರೂ ಕಷ್ಟಗಳನ್ನ ಅನುಭವಿಸ್ತಿದ್ದೀರಾ? ಅದನ್ನ ಸಹಿಸ್ಕೊಂಡ್ರೆ ಯೆಹೋವ ನಿಮ್ಮನ್ನ ಮೆಚ್ಕೊಳ್ತಾನೆ. ಇದ್ರಿಂದ ನಿಮಗೆ ಮುಂದೆ ಆಶೀರ್ವಾದಗಳು ಸಿಕ್ಕೇ ಸಿಗುತ್ತೆ ಅನ್ನೋ ನಿಮ್ಮ ನಿರೀಕ್ಷೆ ಗಟ್ಟಿಯಾಗುತ್ತೆ.

ನಮ್ಮ ನಿರೀಕ್ಷೆನ ಗಟ್ಟಿ ಮಾಡ್ಕೊಳ್ತಾ ಇರಬೇಕು

15. (ಎ) ಪೌಲ ಮತ್ತೆ ಯಾವುದ್ರ ಬಗ್ಗೆ ಮಾತಾಡಿದ? (ಬಿ) ಅದ್ಯಾಕೆ ನಮಗೆ ವಿಚಿತ್ರ ಅಂತ ಅನಿಸಬಹುದು?

15 ನಾವು ದೇವರಲ್ಲಿ ನಂಬಿಕೆ ಕಳ್ಕೊಳ್ಳದೆ ಕಷ್ಟಗಳನ್ನ ಸಹಿಸ್ಕೊಂಡ್ರೆ ಆತನು ನಮ್ಮನ್ನ ಮೆಚ್ಕೊಳ್ತಾನೆ ಅಂತ ಪೌಲ ಹೇಳಿದ. ಆಮೇಲೆ ಪೌಲ “ಆ ಮೆಚ್ಚುಗೆ ನಮಗೆ ನಿರೀಕ್ಷೆ ಕೊಡುತ್ತೆ. ನಿರೀಕ್ಷೆ ನಮ್ಮನ್ನ ನಿರಾಶೆ ಮಾಡಲ್ಲ” ಅಂತನೂ ಹೇಳಿದ. (ರೋಮ. 5:4, 5) ಇದನ್ನ ಕೇಳಿದಾಗ ನಮಗೆ ವಿಚಿತ್ರ ಅನಿಸಬಹುದು. ಯಾಕಂದ್ರೆ ರೋಮನ್ನರಿಗೆ 5:2ರಲ್ಲಿ ಪೌಲ ಈಗಾಗ್ಲೇ ರೋಮ್‌ನಲ್ಲಿದ್ದ ಕ್ರೈಸ್ತರಿಗೆ “ದೇವರಿಂದ ಮಹಿಮೆಯನ್ನ ಪಡಿಯೋ ನಿರೀಕ್ಷೆ” ನಿಮಗಿದೆ ಅಂತ ಹೇಳಿದ್ದ. (ರೋಮ. 5:2) ಅವ್ರಿಗೆ ಈಗಾಗ್ಲೇ ನಿರೀಕ್ಷೆ ಇದೆ ಅಂದ್ಮೇಲೆ ಮತ್ತೆ ಯಾಕೆ ಪೌಲ ಕೊನೇಲಿ ನಿರೀಕ್ಷೆ ಬಗ್ಗೆ ಹೇಳ್ತಿದ್ದಾನೆ ಅಂತ ನಮಗೆ ಅನಿಸಬಹುದು.

ಮುಂಚೆಗಿಂತ ಈಗ ನಿಮ್ಮ ನಿರೀಕ್ಷೆ ಗಟ್ಟಿಯಾಗಿದೆ. ಆ ನಿರೀಕ್ಷೆ ಮುಂದೆ ನಿಜ ಆಗುತ್ತೆ ಅನ್ನೋ ನಂಬಿಕೆಯಿಂದ ಕಾಯ್ತಾ ಇದ್ದೀರ (ಪ್ಯಾರ 16-17 ನೋಡಿ)

16. ನಿರೀಕ್ಷೆ ಹೇಗೆ ಗಟ್ಟಿ ಆಗ್ತಾ ಹೋಗುತ್ತೆ? (ಚಿತ್ರಗಳನ್ನೂ ನೋಡಿ.)

16 ನಿರೀಕ್ಷೆ ಯಾವಾಗ್ಲೂ ಗಟ್ಟಿ ಆಗ್ತಾ ಹೋಗುತ್ತೆ ಅನ್ನೋದನ್ನ ಮನಸ್ಸಲ್ಲಿ ಇಡಬೇಕು. ಆಗ ಪೌಲ ಮತ್ತೆ ಯಾಕೆ ನಿರೀಕ್ಷೆ ಬಗ್ಗೆ ಹೇಳಿದ ಅನ್ನೋದನ್ನ ಅರ್ಥ ಮಾಡ್ಕೊಳ್ಳೋಕೆ ಆಗುತ್ತೆ. ಉದಾಹರಣೆಗೆ ನೀವು ಮೊದಮೊದ್ಲು ಪರದೈಸಲ್ಲಿ ಶಾಶ್ವತವಾಗಿ ಜೀವಿಸ್ತೀರ ಅನ್ನೋ ನಿರೀಕ್ಷೆ ಬಗ್ಗೆ ಕೇಳಿಸ್ಕೊಂಡಾಗ ಹೇಗನಿಸ್ತು? ಅದೆಲ್ಲ ಕೇಳೋಕಷ್ಟೇ ಚೆನ್ನಾಗಿದೆ ನಿಜ ಆಗಲ್ಲ ಅಂತ ಅನಿಸಿರಬಹುದು. ಆದ್ರೆ ಯೆಹೋವ ದೇವರ ಬಗ್ಗೆ, ಆತನು ಕೊಟ್ಟಿರೋ ಮಾತುಗಳ ಬಗ್ಗೆ ಕಲಿತಾ ಹೋದ ಹಾಗೆ ನಮ್ಮ ನಿರೀಕ್ಷೆ ಬರೀ ಕನಸಲ್ಲ ಅದು ನಿಜ ಆಗುತ್ತೆ ಅನ್ನೋ ನಂಬಿಕೆ ಜಾಸ್ತಿ ಆಯ್ತು.

17. ನೀವು ದೀಕ್ಷಾಸ್ನಾನ ಪಡ್ಕೊಂಡ ಮೇಲೆ ನಿಮ್ಮ ನಿರೀಕ್ಷೆ ಹೇಗೆ ಗಟ್ಟಿ ಆಗ್ತಾ ಹೋಯ್ತು?

17 ನೀವು ಸಮರ್ಪಣೆ ಮಾಡ್ಕೊಂಡು ದೀಕ್ಷಾಸ್ನಾನ ಪಡ್ಕೊಂಡ ಮೇಲೂ ಯೆಹೋವನ ಬಗ್ಗೆ ತಿಳ್ಕೊಳ್ತಾ ಹೋದ್ರಿ. ಆಗ ಆತನ ಮೇಲಿರೋ ಪ್ರೀತಿನೂ ಜಾಸ್ತಿ ಆಯ್ತು. ಹೀಗೆ ನಿಮ್ಮ ನಿರೀಕ್ಷೆ ಗಟ್ಟಿ ಆಗ್ತಾ ಹೋಯ್ತು. (ಇಬ್ರಿ. 5:13–6:1) ರೋಮನ್ನರಿಗೆ 5:2-4ರಲ್ಲಿರೋ ಮಾತು ನಿಮ್ಮ ಜೀವನದಲ್ಲಿ ನಿಜ ಆಗಿರಬಹುದು. ನಿಮಗೆ ಎಷ್ಟೇ ಕಷ್ಟ ಬಂದ್ರೂ ಅದನ್ನೆಲ್ಲ ಸಹಿಸ್ಕೊಂಡು ಯೆಹೋವನ ಮೆಚ್ಚುಗೆ ಪಡ್ಕೊಂಡಿದ್ದೀರ. ಯೆಹೋವ ನಿಮ್ಮನ್ನ ಪ್ರೀತಿಸೋದ್ರಿಂದ ಮತ್ತು ಮೆಚ್ಕೊಂಡಿರೋದ್ರಿಂದ ತಾನು ಕೊಟ್ಟಿರೋ ಮಾತನ್ನ ನೆರವೇರಿಸ್ತಾನೆ ಅನ್ನೋ ಗ್ಯಾರಂಟಿ ನಿಮಗಿದೆ. ಈಗ ನಿಮ್ಮ ನಿರೀಕ್ಷೆ ಮುಂಚೆಗಿಂತ ಗಟ್ಟಿಯಾಗಿದೆ. ಇದ್ರಿಂದ ನಿಮ್ಮ ಜೀವನದಲ್ಲಿ ಬದಲಾವಣೆಗಳನ್ನ ಮಾಡ್ಕೊಳ್ಳೋಕೆ ಆಗಿದೆ. ನಿಮ್ಮ ಕುಟುಂಬದವ್ರ ಜೊತೆ ಚೆನ್ನಾಗಿ ನಡ್ಕೊಳ್ಳೋಕೆ ಆಗ್ತಿದೆ, ಒಳ್ಳೇ ತೀರ್ಮಾನಗಳನ್ನ ಮಾಡೋಕೆ ಆಗ್ತಿದೆ, ಅಷ್ಟೇ ಅಲ್ಲಾ ನಿಮ್ಮ ಸಮಯನ ಚೆನ್ನಾಗಿ ಬಳಸ್ಕೊಳ್ಳೋಕೂ ಆಗ್ತಿದೆ.

18. ಯೆಹೋವ ನಮಗೆ ಯಾವ ಗ್ಯಾರಂಟಿ ಕೊಟ್ಟಿದ್ದಾನೆ?

18 ನಾವು ದೇವರಿಂದ ಮೆಚ್ಚುಗೆ ಪಡ್ಕೊಂಡ ಮೇಲೆ ನಾವು ಇಟ್ಕೊಂಡಿರೋ ನಿರೀಕ್ಷೆ ನಡೆದೇ ನಡಿಯುತ್ತೆ ಅಂತ ಅಪೊಸ್ತಲ ಪೌಲ ಹೇಳಿದ. ನಾವು ಹೇಗೆ ಅಷ್ಟು ಗ್ಯಾರಂಟಿಯಾಗಿ ಹೇಳಬಹುದು? “ನಿರೀಕ್ಷೆ ನಮ್ಮನ್ನ ನಿರಾಶೆ ಮಾಡಲ್ಲ. ಯಾಕಂದ್ರೆ ನಮಗೆ ಕೊಟ್ಟಿರೋ ಪವಿತ್ರಶಕ್ತಿಯಿಂದ ದೇವರು ತನ್ನ ಪ್ರೀತಿಯನ್ನ ನಮ್ಮ ಹೃದಯಗಳಲ್ಲಿ ಸುರಿದಿದ್ದಾನೆ” ಅಂತ ಅವನು ಹೇಳಿದ. (ರೋಮ. 5:5) ಹಾಗಾಗಿ ನಿಮಗಿರೋ ನಿರೀಕ್ಷೆ ನಡೆದೇ ನಡಿಯುತ್ತೆ ಅಂತ ಯಾವ ಸಂಶಯನೂ ಇಲ್ಲದೆ ನಂಬಬಹುದು.

19. ನಿಮಗಿರೋ ನಿರೀಕ್ಷೆ ನಿಜ ಆಗುತ್ತೆ ಅಂತ ಯಾಕೆ ನಂಬಬಹುದು?

19 ಅಬ್ರಹಾಮನ ಬಗ್ಗೆ ಸ್ವಲ್ಪ ಯೋಚಿಸಿ. ಅವನು ದೇವರ ಮೆಚ್ಚಿಗೆ ಪಡ್ಕೊಂಡ, ದೇವರು ಅವನನ್ನ ಸ್ನೇಹಿತನಾಗಿ ನೋಡಿದನು ಮತ್ತು ಅವನಿಗೆ ಒಂದು ಮಾತುಕೊಟ್ಟನು. “ದೇವರು ಆ ಮಾತು ಕೊಟ್ಟಿದ್ದು ಅಬ್ರಹಾಮ ತಾಳ್ಮೆ ತೋರಿಸಿದ ಮೇಲೆ” ಅಂತ ಬೈಬಲ್‌ ಹೇಳುತ್ತೆ. (ಇಬ್ರಿ. 6:15; 11:9, 18; ರೋಮ. 4:20-22) ಆ ಮಾತು ಮುಂದೆ ನಿಜ ಆಯ್ತು. ಹಾಗಾಗಿ ಅವನು ಇಟ್ಕೊಂಡಿದ್ದ ನಿರೀಕ್ಷೆ ಸುಳ್ಳಾಗಲಿಲ್ಲ. ಅಬ್ರಹಾಮನ ತರ ನೀವೂ ಯೆಹೋವನ ಮೇಲೆ ಯಾವಾಗ್ಲೂ ನಂಬಿಕೆ ಇಟ್ರೆ ನಿಮ್ಮ ನಿರೀಕ್ಷೆನೂ ನಿಜ ಆಗುತ್ತೆ. ನೀವೂ ನಿರಾಶೆ ಪಡಲ್ಲ, ಬದ್ಲಿಗೆ ಖುಷಿಯಾಗಿ ಇರ್ತೀರ. (ರೋಮ. 12:12) ಅದಕ್ಕೇ ಪೌಲ “ನಿರೀಕ್ಷೆ ಕೊಡೋ ದೇವರಲ್ಲಿ ನೀವು ಭರವಸೆ ಇಟ್ಟಿರೋದ್ರಿಂದ ಆತನು ನಿಮ್ಮಲ್ಲಿ ಆನಂದ ಮತ್ತು ಶಾಂತಿ ತುಂಬಿತುಳುಕೋ ಹಾಗೆ ಮಾಡ್ಲಿ. ಇದ್ರಿಂದ ಪವಿತ್ರಶಕ್ತಿಯ ಬಲದಿಂದ ನಿಮ್ಮ ನಿರೀಕ್ಷೆ ಇನ್ನೂ ದೃಢ ಆಗ್ಲಿ” ಅಂತ ಹೇಳಿದ.—ರೋಮ. 15:13.

ಗೀತೆ 134 ಸರ್ವವೂ ನೂತನವಾಗುವಾಗ ನಿನ್ನನ್ನು ನೋಡು

a ಕ್ರೈಸ್ತರಾದ ನಮಗೆ ಯಾವ ನಿರೀಕ್ಷೆ ಇದೆ? ಅದು ನಿಜ ಆಗುತ್ತೆ ಅಂತ ನಾವ್ಯಾಕೆ ನಂಬಬಹುದು? ಅದನ್ನ ಇವತ್ತು ಕಲಿಯೋಣ. ಅಷ್ಟೇ ಅಲ್ಲ, ನಾವು ಸತ್ಯ ಕಲಿತಾಗ ಇದ್ದ ನಿರೀಕ್ಷೆಗೂ ಈಗ ನಮಗೆ ಇರೋ ನಿರೀಕ್ಷೆಗೂ ಏನು ವ್ಯತ್ಯಾಸ ಅಂತ ರೋಮನ್ನರಿಗೆ 5ನೇ ಅಧ್ಯಾಯದಿಂದ ತಿಳ್ಕೊಳ್ಳೋಣ.