ಅಧ್ಯಯನ ಲೇಖನ 53
ಯುವ ಸಹೋದರರೇ, ಪ್ರೌಢ ಕ್ರೈಸ್ತರಾಗಿ
“ಸಹೋದರರೇ . . . ಬುದ್ಧಿವಂತಿಕೆಯಲ್ಲಿ ಮಗು ತರ ಇರದೆ, ದೊಡ್ಡವ್ರ ತರ ಇರಿ.”—1 ಕೊರಿಂ. 14:20.
ಗೀತೆ 89 ಯೆಹೋವನ ಸೌಹಾರ್ದಯುತ ಮನವಿ: “ನನ್ನ ಮಗನೇ, ವಿವೇಕಿಯಾಗಿರು”
ಈ ಲೇಖನದಲ್ಲಿ ಏನಿದೆ? a
1. ಕ್ರಿಸ್ತನ ತರ ಇರೋಕೆ ಇಷ್ಟ ಪಡೋ ಸಹೋದರರು ಏನು ಮಾಡಬೇಕು?
ಅಪೊಸ್ತಲ ಪೌಲ ಕೊರಿಂಥದವರಿಗೆ “ಸಹೋದರರೇ . . . ಬುದ್ಧಿವಂತಿಕೆಯಲ್ಲಿ ಮಗು ತರ ಇರದೆ, ದೊಡ್ಡವ್ರ ತರ ಇರಿ” ಅಂತ ಹೇಳಿದ. (1 ಕೊರಿಂ. 14:20) ಯೇಸು ತರ ಇರೋಕೆ ಇಷ್ಟಪಡೋ ಎಲ್ಲಾ ಸಹೋದರರು ಈ ಬುದ್ಧಿ ಮಾತನ್ನ ಪಾಲಿಸಬೇಕು. ಅದಕ್ಕೆ ಅವರು ಯೆಹೋವನ ನಿಯಮಗಳನ್ನ, ಬೈಬಲ್ ತತ್ವಗಳನ್ನ ತಮ್ಮ ಜೀವನದಲ್ಲಿ ಯಾವಾಗ್ಲೂ ಪಾಲಿಸೋಕೆ ಕಲಿಬೇಕು. (ಲೂಕ 2:52) ಯುವ ಸಹೋದರರು ಯಾಕೆ ಪ್ರೌಢರಾಗೋಕೆ ಗುರಿ ಇಡಬೇಕು?
2-3. ಯುವ ಸಹೋದರರು ಯಾಕೆ ಪ್ರೌಢ ಕ್ರೈಸ್ತರಾಗಬೇಕು?
2 ಸಹೋದರರಿಗೆ ಕುಟುಂಬದಲ್ಲಿ ಮತ್ತು ಸಭೆಯಲ್ಲಿ ತುಂಬ ಜವಾಬ್ದಾರಿಗಳಿರುತ್ತೆ. ಯುವ ಸಹೋದರರೇ, ಅದ್ರ ಬಗ್ಗೆ ನೀವು ಈಗಿಂದಾನೇ ಯೋಚನೆ ಮಾಡ್ತಾ ಇರಬಹುದು. ಪೂರ್ಣ ಸಮಯದ ಸೇವೆ ಮಾಡೋಕೆ, ಸಹಾಯಕ ಸೇವಕರಾಗೋಕೆ, ಹಿರಿಯರಾಗೋಕೆ ಗುರಿ ಇಟ್ಟಿರಬಹುದು ಅಥವಾ ಮದುವೆಯಾಗಿ ಮಕ್ಕಳನ್ನ ಬೆಳೆಸೋಕೂ ನೀವು ಇಷ್ಟ ಪಡಬಹುದು. (ಎಫೆ. 6:4; 1 ತಿಮೊ. 3:1) ಈ ಎಲ್ಲ ಗುರಿಗಳನ್ನ ಮುಟ್ಟೋಕೆ ಮತ್ತು ನಿಮ್ಮ ಜವಾಬ್ದಾರಿಗಳನ್ನ ನಿರ್ವಹಿಸೋಕೆ ನೀವು ಪ್ರೌಢರಾಗಿರಬೇಕು. b
3 ಹಾಗಾದ್ರೆ ನೀವು ಒಬ್ಬ ಪ್ರೌಢ ಕ್ರೈಸ್ತನಾಗೋಕೆ ಏನು ಮಾಡಬೇಕು? ಅದಕ್ಕೆ ಕೆಲವು ಕೌಶಲಗಳನ್ನ ಕಲೀಬೇಕು. ಮುಂದೆ ಸಿಗೋ ಜವಾಬ್ದಾರಿಗಳನ್ನ ಚೆನ್ನಾಗಿ ಮಾಡೋಕೆ ಈಗ್ಲಿಂದಾನೆ ಕಲಿಬೇಕು. ಅದು ಹೇಗೆ ಅಂತ ಈಗ ನೋಡೋಣ.
ಪ್ರೌಢ ಕ್ರೈಸ್ತರಾಗೋಕೆ ಏನು ಮಾಡಬೇಕು?
4. ಒಳ್ಳೇ ಮಾದರಿ ಇಟ್ಟಿರುವವ್ರ ಬಗ್ಗೆ ನೀವು ಎಲ್ಲಿಂದ ತಿಳ್ಕೊಬಹುದು? (ಚಿತ್ರನೂ ನೋಡಿ.)
4 ಒಳ್ಳೇ ಮಾದರಿ ಇಟ್ಟವ್ರ ಬಗ್ಗೆ ತಿಳ್ಕೊಳ್ಳಿ. ಎಷ್ಟೋ ಒಳ್ಳೇ ವ್ಯಕ್ತಿಗಳ ಉದಾಹರಣೆ ಬೈಬಲಲ್ಲಿದೆ. ಅವರು ಯೆಹೋವನನ್ನ ತುಂಬ ಪ್ರೀತಿಸ್ತಿದ್ರು ಮತ್ತು ಮುಂದೆ ನಿಂತು ಆತನ ಜನ್ರನ್ನ ಚೆನ್ನಾಗಿ ನೋಡ್ಕೊಳ್ತಿದ್ರು. ಯುವ ಸಹೋದರರೇ, ನೀವೂ ಇವ್ರ ತರ ಇರಬಹುದು. ಇವ್ರಷ್ಟೇ ಅಲ್ಲ, ಒಳ್ಳೆ ಮಾದರಿ ಇಟ್ಟಿರೋ ಕ್ರೈಸ್ತರು ನಿಮ್ಮ ಕುಟುಂಬದಲ್ಲಿ ಮತ್ತು ಸಭೆಲಿ ಇರಬಹುದು. ಅವ್ರನ್ನ ನೋಡಿ ಕಲಿರಿ. (ಇಬ್ರಿ. 13:7) ಅಷ್ಟೇ ಅಲ್ಲ ಮುಖ್ಯವಾಗಿ ಯೇಸು ಕ್ರಿಸ್ತ ನಮ್ಮೆಲ್ರಿಗೂ ಒಂದು ಒಳ್ಳೇ ಮಾದರಿ. (1 ಪೇತ್ರ 2:21) ಇವ್ರೆಲ್ರ ಬಗ್ಗೆ ಯೋಚಿಸುವಾಗ ಇವ್ರಲ್ಲಿದ್ದ ಒಳ್ಳೇ ಗುಣಗಳ ಬಗ್ಗೆ ಚೆನ್ನಾಗಿ ತಿಳ್ಕೊಳ್ಳಿ. (ಇಬ್ರಿ. 12:1, 2) ಆಮೇಲೆ ನೀವೂ ಅವ್ರ ತರ ಇರೋಕೆ ಏನು ಮಾಡಬೇಕು ಅಂತ ಯೋಚ್ನೆ ಮಾಡಿ.
5. ಯೋಚಿಸೋ ಸಾಮರ್ಥ್ಯವನ್ನ ನೀವು ಯಾಕೆ ಬೆಳೆಸ್ಕೊಬೇಕು ಮತ್ತು ಅದನ್ನ ಹೇಗೆ ಬೆಳೆಸ್ಕೊಬಹುದು? (ಕೀರ್ತನೆ 119:9)
5 ‘ಯೋಚ್ನೆ ಮಾಡೋ ಶಕ್ತಿಯನ್ನ ಬೆಳೆಸ್ಕೊಬೇಕು ಮತ್ತು ಕಾಪಾಡ್ಕೋಬೇಕು.’ (ಜ್ಞಾನೋ. 3:21) ಚೆನ್ನಾಗಿ ಯೋಚ್ನೆ ಮಾಡೋ ವ್ಯಕ್ತಿ ದುಡುಕಿ ತೀರ್ಮಾನ ತಗೊಳ್ಳಲ್ಲ. ಚೆನ್ನಾಗಿ ಯೋಚ್ನೆ ಮಾಡೋ ಸಾಮರ್ಥ್ಯನ ಬೆಳೆಸ್ಕೊಳ್ಳೋದು ಯಾಕಷ್ಟು ಪ್ರಾಮುಖ್ಯ? ಯಾಕಂದ್ರೆ ಈ ಲೋಕದಲ್ಲಿರೋ ಯುವ ಜನ್ರು ತಮಗೇನು ಇಷ್ಟಾನೋ ಅದನ್ನೇ ಮಾಡ್ತಾರೆ. ಹುಷಾರಾಗಿಲ್ಲ ಅಂದ್ರೆ ನಾವೂ ಅವ್ರ ತರನೇ ಆಗಿಬಿಡಬಹುದು. (ಜ್ಞಾನೋ. 7:7; 29:11) ಸಿನಿಮಾಗಳಲ್ಲಿ, ಟಿವಿ ಕಾರ್ಯಕ್ರಮಗಳಲ್ಲಿ, ಸೋಶಿಯಲ್ ಮೀಡಿಯಾದಲ್ಲಿ ಜನ್ರನ್ನ ನೋಡಿ ಕೆಲವೊಮ್ಮೆ ನಾವೂ ಅವ್ರ ತರನೇ ಯೋಚ್ನೆ ಮಾಡೋಕೆ, ನಡ್ಕೊಳ್ಳೋಕೆ ಶುರು ಮಾಡಿಬಿಡಬಹುದು. ಹಾಗಾದ್ರೆ ಚೆನ್ನಾಗಿ ಯೋಚ್ನೆ ಮಾಡೋ ಸಾಮರ್ಥ್ಯನ ಬೆಳೆಸ್ಕೊಳ್ಳೋಕೆ ನಾವೇನು ಮಾಡಬೇಕು? ಬೈಬಲಿಂದ ಯೆಹೋವನ ಯೋಚ್ನೆಗಳೇನು ಅಂತ ತಿಳ್ಕೊಳ್ಳಿ ಮತ್ತು ಆ ತತ್ವಗಳನ್ನ ಅನ್ವಯಿಸೋದ್ರಿಂದ ನಿಮಗೇನು ಪ್ರಯೋಜನ ಅಂತ ಯೋಚಿಸಿ. ಆಗ ಯೆಹೋವನಿಗೆ ಇಷ್ಟ ಆಗೋ ತರ ನಿಮಗೆ ತೀರ್ಮಾನಗಳನ್ನ ಮಾಡೋಕಾಗುತ್ತೆ. (ಕೀರ್ತನೆ 119:9 ಓದಿ.) ಹೀಗೆ ನೀವು ಯೋಚಿಸೋ ಸಾಮರ್ಥ್ಯ ಬೆಳೆಸ್ಕೊಂಡ್ರೆ ಪ್ರೌಢ ಕ್ರೈಸ್ತರಾಗ್ತೀರ. (ಜ್ಞಾನೋ. 2:11, 12; ಇಬ್ರಿ. 5:14) ಈಗ ನಾವು ಸಹೋದರಿಯರ ಜೊತೆ ನಡ್ಕೊಳ್ಳುವಾಗ ಮತ್ತು ಉಡುಗೆ-ತೊಡುಗೆ ವಿಷ್ಯದಲ್ಲಿ ತೀರ್ಮಾನ ತಗೊಳ್ಳುವಾಗ ಈ ಸಾಮರ್ಥ್ಯ ಹೇಗೆ ಸಹಾಯ ಮಾಡುತ್ತೆ ಅಂತ ನೋಡೋಣ.
6. ಯೋಚಿಸೋ ಸಾಮರ್ಥ್ಯ ಇರೋ ಒಬ್ಬ ಯುವ ಸಹೋದರ ಸಹೋದರಿಯರಿಗೆ ಹೇಗೆ ಗೌರವ ತೋರಿಸ್ತಾನೆ?
6 ಯೋಚಿಸೋ ಸಾಮರ್ಥ್ಯ ಇರೋ ಸಹೋದರ ಸ್ತ್ರೀಯರನ್ನ ಗೌರವಿಸುತ್ತಾನೆ. ಉದಾಹರಣೆಗೆ, ಒಬ್ಬ ಸಹೋದರ ಒಬ್ಬ ಸಹೋದರಿಯನ್ನ ಇಷ್ಟ ಪಡಬಹುದು. ಅವಳನ್ನ ಪರಿಚಯ ಮಾಡ್ಕೊಳ್ಳೋದ್ರಲ್ಲಿ ಅಥವಾ ಅವಳ ಜೊತೆ ಸ್ನೇಹ ಬೆಳೆಸ್ಕೊಳ್ಳೋದ್ರಲ್ಲಿ ಯಾವುದೇ ತಪ್ಪಿಲ್ಲ. ಆದ್ರೆ ಆ ಸಹೋದರ ಅವಳನ್ನ ಮದುವೆ ಆಗೋಕೆ ಬಯಸ್ತಾ ಇಲ್ಲಾಂದ್ರೆ ಅವಳ ಜೊತೆ ತನ್ನ ಮೇಲೆ ಆಸೆ ಬರಿಸೋ ತರ ನಡ್ಕೋಬಾರದು. ಅಷ್ಟೇ ಅಲ್ಲ ಸುಮ್ಮಸುಮ್ಮನೆ ಆಸೆ ಹುಟ್ಟಿಸೋ ತರ ಮೆಸೇಜ್ ಮಾಡೋದಾಗ್ಲಿ ಅಥವಾ ಮಾತಾಡೋದಾಗ್ಲಿ ಮಾಡಬಾರದು. (1 ತಿಮೊ. 5:1, 2) ಒಂದುವೇಳೆ ಒಬ್ಬ ಸಹೋದರ ಡೇಟಿಂಗ್ ಮಾಡ್ತಿದ್ರೆ ಆ ಸಹೋದರಿಯ ಹೆಸರು ಹಾಳಾಗದೇ ಇರೋ ತರ ನೋಡ್ಕೊಬೇಕು. ಹಾಗಾಗಿ ಎಲ್ಲಾದ್ರೂ ಹೋಗುವಾಗ ಅವಳೊಬ್ಬಳನ್ನೇ ಕರ್ಕೊಂಡು ಹೋಗದೇ ಬೇರೆ ಯಾರನ್ನಾದ್ರೂ ಜೊತೆಗೆ ಕರ್ಕೊಂಡು ಹೋಗಬೇಕು.—1 ಕೊರಿಂ. 6:18.
7. ಚೆನ್ನಾಗಿ ಯೋಚ್ನೆ ಮಾಡೋ ಸಾಮರ್ಥ್ಯ ಇರೋ ಸಹೋದರ ಉಡುಗೆ-ತೊಡುಗೆ ವಿಷ್ಯದಲ್ಲಿ ಯಾವ ತೀರ್ಮಾನ ಮಾಡ್ತಾನೆ?
7 ಒಬ್ಬ ಯುವ ಸಹೋದರನಿಗೆ ಚೆನ್ನಾಗಿ ಯೋಚ್ನೆ ಮಾಡೋ ಸಾಮರ್ಥ್ಯ ಇದ್ರೆ ತಾನು ಯಾವ ತರ ಬಟ್ಟೆ ಹಾಕೊಬೇಕು, ಯಾವ ತರ ಹೇರ್‌ಸ್ಟೈಲ್ ಮಾಡಬೇಕು ಅನ್ನೋ ವಿಷ್ಯದಲ್ಲಿ ಸರಿಯಾಗಿ ತೀರ್ಮಾನ ಮಾಡ್ತಾನೆ. ಈ ಲೋಕದಲ್ಲಿ ಜನ್ರು ಹಾಕೋ ಬಟ್ಟೆ ತುಂಬಾ ಕೀಳ್ಮಟ್ಟಕ್ಕೆ ಇಳಿದಿದೆ. ಯಾಕಂದ್ರೆ ಈ ಬಟ್ಟೆಗಳನ್ನ ರೆಡಿ ಮಾಡೋರು ಅನೈತಿಕ ಜೀವನ ನಡೆಸ್ತಾರೆ, ಅವ್ರಿಗೆ ಯೆಹೋವನ ಮೇಲೆ ಒಂಚೂರು ಭಯ ಭಕ್ತಿ ಇಲ್ಲ. ಅವರು ಮಾಡೋ ಬಟ್ಟೆಗಳು ಮೈಗೆ ಅಂಟ್ಕೊಂಡು ತುಂಬಾ ಅಸಹ್ಯವಾಗಿ ಕಾಣುತ್ತೆ, ಅದನ್ನ ಹಾಕಿರೋದು ಹುಡುಗಾನಾ ಹುಡುಗೀನಾ ಅಂತ ಒಂದೂ ಗೊತ್ತಾಗಲ್ಲ. ಆದ್ರೆ ಪ್ರೌಢ ಕ್ರೈಸ್ತನಾಗೋಕೆ ಬಯಸೋ ಒಬ್ಬ ಯುವ ಸಹೋದರ ಬಟ್ಟೆ ವಿಷ್ಯದಲ್ಲಿ ಒಳ್ಳೆ ತೀರ್ಮಾನಗಳನ್ನ ಮಾಡಬೇಕು. ಅವನು ಬೈಬಲ್ ತತ್ವಗಳನ್ನ ಪಾಲಿಸಬೇಕು ಮತ್ತು ಸಭೆಯಲ್ಲಿ ಒಳ್ಳೆ ಮಾದರಿ ಇಟ್ಟಿರೋ ಸಹೋದರರ ತರ ಇರೋಕೆ ಪ್ರಯತ್ನ ಮಾಡಬೇಕು. ಇದನ್ನ ಮಾಡೋಕೆ ಅವನು ಕೆಲವು ಪ್ರಶ್ನೆಗಳನ್ನ ಕೇಳ್ಕೊಬೇಕು. ‘ನಾನು ಮಾಡೋ ಆಯ್ಕೆ ನನಗೆ ಚೆನ್ನಾಗಿ ಯೋಚ್ನೆ ಮಾಡೋ ಸಾಮರ್ಥ್ಯ ಇದೆ ಅಂತ ತೋರಿಸುತ್ತಾ? ನಾನು ಬೇರೆಯವ್ರನ್ನ ಗೌರವಿಸ್ತೀನಿ ಅಂತ ತೋರಿಸುತ್ತಾ? ನನ್ನ ಉಡುಗೆ-ತೊಡುಗೆ ನಾನೊಬ್ಬ ಯೆಹೋವನ ಆರಾಧಕ ಅಂತ ತೋರಿಸುತ್ತಾ?’ (1 ಕೊರಿಂ. 10:31-33; ತೀತ 2:6) ಚೆನ್ನಾಗಿ ಯೋಚ್ನೆ ಮಾಡೋ ಸಾಮರ್ಥ್ಯ ಇರೋ ಯುವ ಸಹೋದರ ತನ್ನ ಸಹೋದರ ಸಹೋದರಿಯರ ಮತ್ತು ಯೆಹೋವ ದೇವರ ಗೌರವವನ್ನ ಸಂಪಾದಿಸ್ತಾನೆ.
8. ಬೇರೆಯವ್ರ ನಂಬಿಕೆ ಗಳಿಸೋಕೆ ಒಬ್ಬ ಸಹೋದರ ಏನು ಮಾಡಬಹುದು?
8 ಬೇರೆಯವ್ರ ನಂಬಿಕೆ ಗಳಿಸಿ. ಒಬ್ಬ ಯುವ ಸಹೋದರ ತನಗೆ ಕೊಟ್ಟ ಕೆಲಸವನ್ನ ಜವಾಬ್ದಾರಿಯಿಂದ ಮಾಡಬೇಕು. (ಲೂಕ 16:10) ಯೇಸು ಬಗ್ಗೆ ಯೋಚಿಸಿ ನೋಡಿ. ಆತನು ಯೆಹೋವ ದೇವರು ಕೊಟ್ಟ ನೇಮಕವನ್ನ ಚೆನ್ನಾಗಿ ಮಾಡಿದ. ಯಾವತ್ತೂ ಬೇಜವಾಬ್ದಾರಿಯಿಂದ ನಡ್ಕೊಳ್ಳಲಿಲ್ಲ. ಕಷ್ಟ ಆದಾಗ್ಲೂ ಕೊಟ್ಟ ಕೆಲಸ ಮಾಡಿ ಮುಗಿಸಿದ. ಆತನಿಗೆ ಜನ್ರ ಮೇಲೆ ಮತ್ತು ತನ್ನ ಶಿಷ್ಯರ ಮೇಲೆ ತುಂಬ ಪ್ರೀತಿ ಇತ್ತು. ಎಷ್ಟರ ಮಟ್ಟಿಗೆ ಅಂದ್ರೆ ತನ್ನ ಜೀವಾನೇ ಅವ್ರಿಗಾಗಿ ಕೊಟ್ಟುಬಿಟ್ಟನು. (ಯೋಹಾ. 13:1) ಯುವ ಸಹೋದರರೇ, ನೀವೂ ಯೇಸು ತರ ಇರಿ ಕೊಟ್ಟ ಕೆಲಸನ ಮಾಡಿ ಮುಗಿಸಿ. ಒಂದುವೇಳೆ ನಿಮಗೆ ಅದನ್ನ ಹೇಗೆ ಮಾಡಬೇಕು ಅಂತ ಗೊತ್ತಿಲ್ಲಾಂದ್ರೆ ದೀನತೆಯಿಂದ ಅನುಭವ ಇರೋ ಸಹೋದರರ ಹತ್ರ ಸಹಾಯ ಕೇಳಿ. ಏನೋ ಮಾಡಬೇಕಲ್ಲಾ ಅಂತ ಮಾಡಬೇಡಿ ಅಥವಾ ಅರ್ಧಂಬರ್ಧ ಮಾಡಬೇಡಿ. (ರೋಮ. 12:11) ಬದ್ಲಿಗೆ “ನೀವು ಏನೇ ಮಾಡಿದ್ರೂ ಅದನ್ನ ಮನುಷ್ಯರಿಗಾಗಿ ಅಲ್ಲ, ಯೆಹೋವನಿಗಾಗಿ ಅಂತ ಪೂರ್ಣ ಮನಸ್ಸಿಂದ ಮಾಡಿ.” (ಕೊಲೊ. 3:23) ನೀವು ಪರಿಪೂರ್ಣರಲ್ಲ ಹಾಗಾಗಿ ಏನಾದ್ರೂ ತಪ್ಪು ಮಾಡಿದಾಗ ಅದನ್ನ ಒಪ್ಕೊಳ್ಳಿ, ದೀನತೆ ತೋರಿಸಿ.—ಜ್ಞಾನೋ. 11:2.
ಒಳ್ಳೇ ಕೌಶಲಗಳನ್ನ ಬೆಳೆಸ್ಕೊಳ್ಳಿ
9. ಯುವ ಸಹೋದರರು ಯಾಕೆ ಕೌಶಲಗಳನ್ನ ಬೆಳೆಸ್ಕೊಬೇಕು?
9 ಒಬ್ಬ ಯುವ ಸಹೋದರ ಪ್ರೌಢ ಕ್ರೈಸ್ತನಾಗಬೇಕಂದ್ರೆ ಕೆಲವು ಕೌಶಲಗಳನ್ನ ಕಲಿಬೇಕು. ಆಗ ಅವನಿಗೆ ಸಭೆಯಲ್ಲಿ ಕೊಟ್ಟಿರೋ ಕೆಲಸನ ಚೆನ್ನಾಗಿ ಮಾಡೋಕಾಗುತ್ತೆ. ಒಂದು ಕೆಲಸ ಹುಡುಕೊಂಡು ಕುಟುಂಬನ ಚೆನ್ನಾಗಿ ನೋಡ್ಕೊಳ್ಳೋಕೂ ಆಗುತ್ತೆ. ಇದ್ರಿಂದ ಬೇರೆಯವ್ರ ಜೊತೆ ಒಳ್ಳೆ ಸ್ನೇಹ-ಸಂಬಂಧ ಇರುತ್ತೆ. ಹಾಗಾದ್ರೆ ಯಾವೆಲ್ಲ ಕೌಶಲಗಳನ್ನ ಯುವ ಸಹೋದರರು ಬೆಳೆಸ್ಕೊಬಹುದು?
10-11. ಒಬ್ಬ ಯುವ ಸಹೋದರ ಓದೋಕೆ ಬರೆಯೋಕೆ ಚೆನ್ನಾಗಿ ಕಲಿತ್ರೆ ಏನು ಪ್ರಯೋಜನ? (ಕೀರ್ತನೆ 1:1-3) (ಚಿತ್ರನೂ ನೋಡಿ.)
10 ಚೆನ್ನಾಗಿ ಓದೋಕೆ, ಬರಿಯೋಕೆ ಕಲಿರಿ. ದೇವರ ವಾಕ್ಯ ಓದಿ ಅದ್ರ ಬಗ್ಗೆ ಯೋಚಿಸುವವನು ಖುಷಿಯಾಗಿರ್ತಾನೆ ಮತ್ತು ಯಶಸ್ಸು ಪಡಿತಾನೆ ಅಂತ ಬೈಬಲ್ ಹೇಳುತ್ತೆ. (ಕೀರ್ತನೆ 1:1-3 ಓದಿ.) ಹಾಗಾಗಿ ಒಬ್ಬ ಸಹೋದರ ಪ್ರತಿದಿನ ಬೈಬಲ್ ಓದೋದ್ರಿಂದ ಯೆಹೋವ ಹೇಗೆ ಯೋಚಿಸ್ತಾನೆ ಅಂತ ತಿಳ್ಕೊಳ್ಳೋಕಾಗುತ್ತೆ ಮತ್ತು ತನ್ನ ಯೋಚ್ನೆ ಸರಿ ಮಾಡ್ಕೊಂಡು ಯೆಹೋವನಿಗೆ ಇಷ್ಟ ಆಗೋ ತರ ಜೀವನ ಮಾಡ್ತಾನೆ. (ಜ್ಞಾನೋ. 1:3, 4) ಇಂಥ ಸಹೋದರರು ಸಭೆಯಲ್ಲಿದ್ರೆ ತುಂಬ ಪ್ರಯೋಜನ ಆಗುತ್ತೆ. ಅದು ಹೇಗೆ?
11 ಓದೋಕೆ ಬರಿಯೋಕೆ ಗೊತ್ತಿರೋ ಸಹೋದರರು ಸಭೆಲಿರೋ ಸಹೋದರ ಸಹೋದರಿಯರಿಗೆ ಬೈಬಲಿಂದ ಸಲಹೆ ಮತ್ತು ನಿರ್ದೇಶನ ಕೊಡೋಕೆ ಆಗುತ್ತೆ. (ತೀತ 1:9) ಅಷ್ಟೇ ಅಲ್ಲ ಬೇರೆಯವ್ರ ನಂಬಿಕೆಯನ್ನ ಕಟ್ಟೋ ಹಾಗೆ ಭಾಷಣಗಳನ್ನ ಮತ್ತು ಉತ್ತರವನ್ನ ಕೊಡೋಕೆ ಆಗುತ್ತೆ. ಸಭೆಯಲ್ಲಿ, ಸಮ್ಮೇಳನದಲ್ಲಿ ಮತ್ತು ಅಧಿವೇಶನದಲ್ಲಿ ಸಹೋದರರು ಭಾಷಣಗಳನ್ನ ಕೊಡುವಾಗ ಟಿಪ್ಪಣಿಗಳನ್ನ ಬರೆದುಕೊಳ್ಳೋಕೆ ಆಗುತ್ತೆ. ಇದ್ರಿಂದ ತನ್ನ ನಂಬಿಕೆನೂ ಜಾಸ್ತಿಯಾಗುತ್ತೆ, ಬೇರೆಯವ್ರ ನಂಬಿಕೆಯನ್ನೂ ಜಾಸ್ತಿ ಮಾಡೋಕಾಗುತ್ತೆ.
12. ಚೆನ್ನಾಗಿ ಮಾತಾಡೋಕೆ ಕಲಿಬೇಕಂದ್ರೆ ನೀವೇನು ಮಾಡಬೇಕು?
12 ಚೆನ್ನಾಗಿ ಮಾತಾಡೋಕೆ ಕಲಿರಿ. ಕ್ರೈಸ್ತರಾಗಿರೋ ನಾವು ಚೆನ್ನಾಗಿ ಮಾತಾಡೋಕೆ ಕಲಿಬೇಕು. ಈ ಕೌಶಲ ಇರೋ ವ್ಯಕ್ತಿ ಬೇರೆಯವರು ಮಾತಾಡುವಾಗ ಚೆನ್ನಾಗಿ ಕೇಳಿಸ್ಕೊಳ್ತಾನೆ ಮತ್ತು ಅವ್ರ ಭಾವನೆಗಳನ್ನ, ಯೋಚ್ನೆಗಳನ್ನ ಅರ್ಥ ಮಾಡ್ಕೊಳ್ತಾನೆ. (ಜ್ಞಾನೋ. 20:5) ಅವರ ಸ್ವರದಿಂದ, ಮುಖಭಾವದಿಂದ, ಕೈಸನ್ನೆಯಿಂದ ಅವರ ಭಾವನೆಗಳನ್ನ ಅರ್ಥ ಮಾಡ್ಕೊಳ್ಳೋಕೆ ಪ್ರಯತ್ನಿಸ್ತಾನೆ. ಆದ್ರೆ ಈ ಕೌಶಲ ಬೆಳೆಸ್ಕೊಬೇಕಂದ್ರೆ ಬೇರೆಯವ್ರ ಜೊತೆ ಚೆನ್ನಾಗಿ ಸಮಯ ಕಳಿಬೇಕು. ಹಾಗಂತ ಮೇಲ್‌ನಲ್ಲಿ ಅಥವಾ ಮೆಸೇಜಲ್ಲೇ ಮಾತಾಡ್ತಾ ಇದ್ರೆ ಏನೂ ಪ್ರಯೋಜನ ಆಗಲ್ಲ ಮುಖಾಮುಖಿಯಾಗಿ ಮಾತಾಡಬೇಕು.—2 ಯೋಹಾ. 12.
13. ಯುವ ಸಹೋದರರು ಇನ್ನೂ ಯಾವ ಕೌಶಲ ಬೆಳೆಸ್ಕೊಬೇಕು? (1 ತಿಮೊತಿ 5:8) (ಚಿತ್ರನೂ ನೋಡಿ.)
13 ನಿಮ್ಮ ಕಾಲ ಮೇಲೆ ನೀವು ನಿಂತ್ಕೊಳ್ಳೋಕೆ ಕಲಿರಿ. ಪ್ರೌಢ ಸಹೋದರರು ತಮ್ಮನ್ನ ಮತ್ತು ತಮ್ಮ ಕುಟುಂಬವನ್ನ ಚೆನ್ನಾಗಿ ನೋಡ್ಕೋಬೇಕು. (1 ತಿಮೊತಿ 5:8 ಓದಿ.) ಕೆಲವು ದೇಶಗಳಲ್ಲಿ ಯುವಕರು ಅವ್ರ ಅಪ್ಪ ಅಥವಾ ಸಂಬಂಧಿಕರಿಂದ ಕೌಶಲಗಳನ್ನ ಕಲಿತಾರೆ. ಇನ್ನೂ ಕೆಲವು ಕಡೆ ಯುವಕರಿಗೆ ಅವ್ರ ಶಾಲೆಯಲ್ಲಿ ಕೌಶಲಗಳನ್ನ ಕಲಿಸಿಕೊಡ್ತಾರೆ. ಅದೇನೇ ಇರಲಿ, ಒಳ್ಳೆ ಕೆಲಸ ಸಿಗಬೇಕಂದ್ರೆ ಕೆಲವು ಕೌಶಲಗಳನ್ನ ನಾವು ಕಲಿತಿರಬೇಕು. (ಅ. ಕಾ. 18:2, 3; 20:34; ಎಫೆ. 4:28) ನಿಮಗೆ ಕೊಟ್ಟ ಕೆಲಸನ ಚೆನ್ನಾಗಿ ಮಾಡಿ ಮುಗಿಸಿದ್ರೆ ನೀವು ಬೇರೆಯವ್ರ ನಂಬಿಕೆ ಗಳಿಸ್ತೀರ ಮತ್ತು ಒಳ್ಳೇ ಹೆಸ್ರು ಸಂಪಾದಿಸ್ತೀರ. ಇದ್ರಿಂದ ನಿಮಗೆ ಒಳ್ಳೆ ಕೆಲಸ ಸಿಗುತ್ತೆ ಮತ್ತು ಯಾರೂ ನಿಮ್ಮನ್ನ ಕೆಲಸದಿಂದ ತೆಗೆದುಹಾಕೋಕೆ ಇಷ್ಟಪಡಲ್ಲ. ಯುವ ಸಹೋದರರೇ, ಇಲ್ಲಿ ತನಕ ನೀವು ಕಲಿತ ಗುಣಗಳನ್ನ ಮತ್ತು ಕೌಶಲಗಳನ್ನ ಬೆಳೆಸ್ಕೊಂಡ್ರೆ ನೀವು ಪ್ರೌಢ ಕ್ರೈಸ್ತರಾಗ್ತೀರ ಮತ್ತು ಮುಂದೆ ಸಿಗೋ ಜವಾಬ್ದಾರಿಗಳನ್ನ ಚೆನ್ನಾಗಿ ಮಾಡ್ತೀರ. ಈಗ ನಾವು ಆ ಜವಾಬ್ದಾರಿಗಳು ಯಾವುದು ಅಂತ ನೋಡೋಣ.
ಈಗ್ಲೇ ತಯಾರಾಗಿರಿ!
14. ಪೂರ್ಣ ಸಮಯದ ಸೇವೆ ಶುರು ಮಾಡೋಕೆ ಒಬ್ಬ ಸಹೋದರ ಹೇಗೆ ತಯಾರಿ ಮಾಡಬಹುದು?
14 ಪೂರ್ಣ ಸಮಯದ ಸೇವೆ. ಎಷ್ಟೋ ಪ್ರೌಢ ಸಹೋದರರು ಪೂರ್ಣ ಸಮಯದ ಸೇವೆಯನ್ನ ಚಿಕ್ಕ ವಯಸ್ಸಲ್ಲೇ ಶುರು ಮಾಡಿದ್ದಾರೆ. ಯುವ ಸಹೋದರರಿಗೆ ಬೇರೆಬೇರೆ ರೀತಿಯ ಜನ್ರ ಜೊತೆ ಬೆರೆಯೋಕೆ ಪಯನೀಯರಿಂಗ್ ಸೇವೆ ಸಹಾಯ ಮಾಡುತ್ತೆ. ಅಷ್ಟೇ ಅಲ್ಲ ದುಡಿದಿರೋ ಹಣನ ಹುಷಾರಾಗಿ ಖರ್ಚು ಮಾಡೋದು ಹೇಗೆ ಅಂತ ಕಲಿಯೋಕೂ ಈ ಸೇವೆ ಸಹಾಯ ಮಾಡುತ್ತೆ. (ಫಿಲಿ. 4:11-13) ಪೂರ್ಣ ಸಮಯದ ಸೇವೆ ಶುರು ಮಾಡೋಕೆ ಮುಂಚೆ ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡಿದ್ರೆ ತುಂಬ ಒಳ್ಳೇದು. ಎಷ್ಟೋ ಸಹೋದರ ಸಹೋದರಿಯರು ಹೀಗೇ ಮಾಡಿದ್ದಾರೆ. ಪಯನೀಯರ್ ಸೇವೆ ಮಾಡೋದ್ರಿಂದ ಇನ್ನೂ ಬೇರೆಬೇರೆ ತರದ ಸೇವೆ ಮಾಡೋಕೆ ಅವಕಾಶ ಸಿಗುತ್ತೆ. ಉದಾಹರಣೆಗೆ, ನಿರ್ಮಾಣ ಪ್ರಾಜೆಕ್ಟ್‌ಗಳನ್ನ ಮಾಡೋಕೆ ಮತ್ತು ಬೆತೆಲ್ ಸೇವೆ ಮಾಡೋಕೆ ಅವಕಾಶ ಸಿಗುತ್ತೆ.
15-16. ಸಹಾಯಕ ಸೇವಕನಾಗಿ ಅಥವಾ ಹಿರಿಯನಾಗಿ ಸೇವೆ ಮಾಡಬೇಕಂದ್ರೆ ಒಬ್ಬ ಯುವ ಸಹೋದರ ಏನು ಮಾಡಬೇಕು?
15 ಸಹಾಯಕ ಸೇವಕ ಅಥವಾ ಹಿರಿಯನಾಗೋ ಗುರಿ ಇಡಿ. ಎಲ್ಲಾ ಸಹೋದರರು ಹಿರಿಯನಾಗಿ, ಸಹೋದರ ಸಹೋದರಿಯರ ಸೇವೆ ಮಾಡೋ ಗುರಿ ಇಡಬೇಕು. ಈ ಗುರಿ ಇಟ್ಟಿರೋ ವ್ಯಕ್ತಿ “ಒಳ್ಳೇದು ಮಾಡೋಕೆ ಇಷ್ಟಪಡ್ತಿದ್ದಾನೆ” ಅಂತ ಬೈಬಲ್ ಹೇಳುತ್ತೆ. (1 ತಿಮೊ. 3:1) ಒಬ್ಬ ವ್ಯಕ್ತಿ ಹಿರಿಯನಾಗೋಕೂ ಮುಂಚೆ ಸಹಾಯಕ ಸೇವಕನಾಗಿರಬೇಕು. ಸಹಾಯಕ ಸೇವಕರು ಹಿರಿಯರಿಗೆ ತುಂಬ ಸಹಾಯ ಮಾಡ್ತಾರೆ. ಇವ್ರಿಬ್ರೂ ಸೇರಿ ಸಹೋದರ ಸಹೋದರರಿಗೆ ಸಹಾಯ ಮಾಡ್ತಾರೆ ಮತ್ತು ಸಿಹಿ ಸುದ್ದಿಯನ್ನ ಹುರುಪಿಂದ ಸಾರ್ತಾರೆ. 17ರಿಂದ 19 ವರ್ಷ ಇರೋ ಸಹೋದರ ಕೂಡ ಸಹಾಯಕ ಸೇವಕನಾಗಬಹುದು. ಒಳ್ಳೇ ಮಾದರಿ ಇಟ್ಟಿರೋ ಸಹಾಯಕ ಸೇವಕ 20 ವರ್ಷದವನಾಗಿದ್ರೂ ಅವನನ್ನ ಹಿರಿಯನಾಗಿ ನೇಮಿಸಬಹುದು.
16 ಈ ಗುರಿ ಮುಟ್ಟೋಕೆ ಒಬ್ಬ ಯುವ ಸಹೋದರ ಏನು ಮಾಡಬೇಕು? ಬೈಬಲಲ್ಲಿ ಹೇಳಿರೋ ಕೆಲವು ಅರ್ಹತೆಗಳು ಅವನಿಗೆ ಇರಬೇಕು, ಕೆಲವು ಗುಣಗಳನ್ನ ಬೆಳೆಸ್ಕೊಬೇಕು. ಕುಟುಂಬದ ಮೇಲೆ, ಸಭೆ ಮೇಲೆ ಮತ್ತು ಯೆಹೋವ ದೇವರ ಮೇಲಿರೋ ಪ್ರೀತಿಯಿಂದ ಅವನು ಅದನ್ನ ಮಾಡಬೇಕು. (1 ತಿಮೊ. 3:1-13; ತೀತ 1:6-9; 1 ಪೇತ್ರ 5:2, 3) ಹಾಗಾಗಿ ಆ ಅರ್ಹತೆಗಳ ಬಗ್ಗೆ ಅರ್ಥ ಮಾಡ್ಕೊಳ್ಳೋಕೆ ಪ್ರಯತ್ನಿಸಿ ಮತ್ತು ಅದಕ್ಕೆ ತಕ್ಕ ಹಾಗೆ ನಡ್ಕೊಳ್ಳೋಕೆ ಯೆಹೋವ ದೇವರ ಸಹಾಯ ಕೇಳಿ. c
17. ಒಬ್ಬ ಒಳ್ಳೆ ಗಂಡನಾಗೋಕೆ, ಕುಟುಂಬದ ಯಜಮಾನನಾಗೋಕೆ ಒಬ್ಬ ಸಹೋದರ ಏನು ಮಾಡಬೇಕು? (ಚಿತ್ರನೂ ನೋಡಿ.)
17 ನೀವೊಬ್ಬ ಒಳ್ಳೆ ಗಂಡ ಮತ್ತು ಕುಟುಂಬದ ಯಜಮಾನ ಆಗಬಹುದು. ಕೆಲವು ಪ್ರೌಢ ಸಹೋದರರು ಯೇಸು ಹೇಳಿದ ಹಾಗೆ ಮದುವೆ ಆಗದೆ ಇರೋಕೆ ತೀರ್ಮಾನ ಮಾಡಬಹುದು. (ಮತ್ತಾ. 19:12) ಒಂದುವೇಳೆ ನೀವು ಮದುವೆ ಆಗೋಕೆ ಬಯಸೋದಾದ್ರೆ ನಿಮಗೆ ಕುಟುಂಬದ ಯಜಮಾನ ಆಗೋ ಜವಾಬ್ದಾರಿ ಬರುತ್ತೆ ಅನ್ನೋದನ್ನ ನೆನಪಿಡಿ. (1 ಕೊರಿಂ. 11:3) ಒಬ್ಬ ಒಳ್ಳೆ ಗಂಡ, ತನ್ನ ಹೆಂಡತಿಯನ್ನ ಪ್ರೀತಿಸಬೇಕು. ಅವಳ ಭಾವನೆಗಳನ್ನ ಚೆನ್ನಾಗಿ ಅರ್ಥ ಮಾಡ್ಕೋಬೇಕು ಮತ್ತು ಯಹೋವನಿಗೆ ಹತ್ರ ಆಗೋಕೆ ಅವಳಿಗೆ ಸಹಾಯ ಮಾಡಬೇಕು. ಗಂಡಂದಿರು ತಮ್ಮ ಹೆಂಡತಿಯರ ಜೊತೆ ಹೀಗೇ ಇರಬೇಕು ಅಂತ ಯೆಹೋವ ಬಯಸ್ತಾನೆ. (ಎಫೆ. 5:28, 29) ಈ ಲೇಖನದಲ್ಲಿ ಕಲಿತ ಹಾಗೆ ಚೆನ್ನಾಗಿ ಯೋಚಿಸುವ ಸಾಮರ್ಥ್ಯವನ್ನ, ಸ್ತ್ರೀಯರಿಗೆ ಗೌರವ ಕೊಡೋದನ್ನ ಮತ್ತು ನಂಬಿಕೆ ಉಳಿಸ್ಕೊಳ್ಳೋದನ್ನ ನೀವು ಕಲಿತ್ರೆ ನೀವೊಬ್ಬ ಒಳ್ಳೆ ಗಂಡ ಆಗ್ತೀರ. ಅಷ್ಟೇ ಅಲ್ಲ ಕುಟುಂಬಕ್ಕೆ ಒಳ್ಳೆ ಯಜಮಾನ ಆಗ್ತೀರ.
18. ಒಬ್ಬ ಯುವ ಸಹೋದರ ಮುಂದೆ ಒಳ್ಳೇ ಅಪ್ಪ ಆಗೋಕೆ ಈಗಿಂದನೇ ಏನು ಮಾಡಬೇಕು?
18 ನೀವು ಮುಂದೆ ಅಪ್ಪ ಆಗಬಹುದು. ನೀವು ಒಳ್ಳೆ ಅಪ್ಪ ಆಗೋಕೆ ಇಷ್ಟ ಪಟ್ರೆ ಯೆಹೋವ ದೇವರಿಂದ ತುಂಬ ವಿಷ್ಯಗಳನ್ನ ಕಲಿಬಹುದು. ಯಾಕಂದ್ರೆ ಯೆಹೋವ ಒಳ್ಳೆ ಅಪ್ಪ ಆಗಿದ್ದಾನೆ. (ಎಫೆ. 6:4) ಯೆಹೋವ ತನ್ನ ಮಗ ಯೇಸುಗೆ ‘ನಿನ್ನನ್ನ ಪ್ರೀತಿಸ್ತೀನಿ ನಿನ್ನನ್ನ ಮೆಚ್ಕೊಂಡಿದ್ದೀನಿ’ ಅಂತ ಹೇಳಿದನು. (ಮತ್ತಾ. 3:17) ಯೆಹೋವ ದೇವರ ತರ ನೀವೂ ನಿಮ್ಮ ಮಕ್ಕಳಿಗೆ, ಅವ್ರನ್ನ ತುಂಬ ಪ್ರೀತಿಸ್ತೀರ, ಅವರಂದ್ರೆ ನಿಮಗೆ ಇಷ್ಟ ಅಂತ ಹೇಳಿ. ಅವರೇನಾದ್ರೂ ಒಳ್ಳೇದನ್ನ ಮಾಡಿದಾಗ ಹೊಗಳಿ. ಹೀಗೆ ಮಾಡಿದ್ರೆ ನಿಮ್ಮ ಮಕ್ಕಳು ಮುಂದೆ ಪ್ರೌಢ ಕ್ರೈಸ್ತರಾಗ್ತಾರೆ. ಒಳ್ಳೇ ಅಪ್ಪ ಆಗೋಕೆ ಈಗಿಂದನೇ ತಯಾರಾಗಿ. ಹೇಗೆ? ನಿಮ್ಮ ಕುಟುಂಬದವರನ್ನ, ಸಭೆಯಲ್ಲಿರುವವ್ರನ್ನ ಪ್ರೀತಿಸಿ, ಅವ್ರನ್ನ ಚೆನ್ನಾಗಿ ನೋಡ್ಕೊಳ್ಳಿ. ಅವ್ರನ್ನ ನೀವು ಎಷ್ಟು ಪ್ರೀತಿಸ್ತೀರ ಅಂತ ಹೇಳಿ. (ಯೋಹಾ. 15:9) ನೀವು ಹೀಗೆ ಮಾಡಿದ್ರೆ ಒಳ್ಳೆ ಗಂಡ ಆಗ್ತೀರ ಮತ್ತು ಒಳ್ಳೆ ಅಪ್ಪ ಆಗ್ತೀರ. ಅಷ್ಟೇ ಅಲ್ಲ ಯೆಹೋವನಿಗೆ, ಕುಟುಂಬಕ್ಕೆ, ಸಭೆಗೆ ಒಂದು ಅಮೂಲ್ಯ ಗಿಫ್ಟ್ ಆಗ್ತೀರ.
ಈಗ ನೀವು ಏನು ಮಾಡಬೇಕು
19-20. ಪ್ರೌಢ ಕ್ರೈಸ್ತರಾಗೋಕೆ ಯುವ ಸಹೋದರರಿಗೆ ಯಾವುದು ಸಹಾಯ ಮಾಡುತ್ತೆ? (ಮುಖಪುಟ ಚಿತ್ರ ನೋಡಿ.)
19 ಯುವ ಸಹೋದರರೇ, ನೀವು ಬೆಳಿತಾ ಹೋದ ಹಾಗೆ ಪ್ರೌಢ ಕ್ರೈಸ್ತರಾಗಿಬಿಡಲ್ಲ, ಅದಕ್ಕೆ ಪ್ರಯತ್ನ ಮಾಡಬೇಕು ಹಾಗಾಗಿ ನೀವು ಒಳ್ಳೆ ಮಾದರಿ ಇಟ್ಟಿರೋರನ್ನ ಅನುಕರಿಸಿ. ಚೆನ್ನಾಗಿ ಯೋಚಿಸೋ ಸಾಮರ್ಥ್ಯ ಬೆಳೆಸ್ಕೊಳಿ, ಬೇರೆಯವ್ರ ನಂಬಿಕೆ ಗಳಿಸಿ, ಕೌಶಲಗಳನ್ನ ಕಲೀರಿ ಮತ್ತು ಮುಂದೆ ಬರೋ ಜವಾಬ್ದಾರಿಗಳನ್ನ ಮಾಡೋಕೆ ಈಗ್ಲೇ ತಯಾರಾಗಿ.
20 ಯುವ ಜನ್ರೇ, ‘ಇಷ್ಟೆಲ್ಲ ಮಾಡಬೇಕಾ, ಇದನ್ನೆಲ್ಲಾ ಕಲಿಬೇಕಾ’ ಅಂತ ನೆನಸಿ ಗಾಬರಿ ಆಗಬೇಡಿ. ನಿಮಗೆ ಸಹಾಯ ಮಾಡೋಕೆ ಯೆಹೋವ ತುದಿಗಾಲಲ್ಲಿ ನಿಂತಿದ್ದಾನೆ. (ಯೆಶಾ. 41:10, 13) ಅಷ್ಟೇ ಅಲ್ಲ ಸಭೆಯಲ್ಲಿರೋ ಸಹೋದರ ಸಹೋದರಿಯರು ನಿಮಗೆ ಸಹಾಯ ಮಾಡ್ತಾರೆ. ನೀವು ಪ್ರೌಢ ಕ್ರೈಸ್ತರಾದಾಗ ನಿಮ್ಮ ಜೀವನ ಚೆನ್ನಾಗಿರುತ್ತೆ, ಖುಷಿಯಾಗೂ ಇರ್ತೀರ. ಯುವ ಸಹೋದರರೇ, ನೀವಂದ್ರೆ ನಮಗೆ ತುಂಬ ಇಷ್ಟ. ಪ್ರೌಢ ಕ್ರೈಸ್ತರಾಗೋಕೆ ನೀವು ಹಾಕೋ ಎಲ್ಲ ಪ್ರಯತ್ನನ ಯೆಹೋವ ಆಶೀರ್ವದಿಸಲಿ ಅಂತ ನಾವು ಆತನ ಹತ್ರ ಬೇಡ್ಕೊಳ್ತೀವಿ.—ಜ್ಞಾನೋ. 22:4.
ಗೀತೆ 45 ಮುನ್ನಡೆ!
a ಪ್ರೌಢ ಸಹೋದರರು ಸಭೆಯಲ್ಲಿದ್ರೆ ಆ ಸಭೆ ತುಂಬ ಚೆನ್ನಾಗಿ ಬೆಳೆಯುತ್ತೆ. ಹಾಗಾಗಿ ಯುವ ಸಹೋದರರು ಪ್ರೌಢ ಕ್ರೈಸ್ತರಾಗಬೇಕಂದ್ರೆ ಏನು ಮಾಡಬೇಕು ಅಂತ ನೋಡೋಣ.