ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 52

ಯುವ ಸಹೋದರಿಯರೇ, ಪ್ರೌಢ ಕ್ರೈಸ್ತರಾಗಿ

ಯುವ ಸಹೋದರಿಯರೇ, ಪ್ರೌಢ ಕ್ರೈಸ್ತರಾಗಿ

“ಸ್ತ್ರೀಯರು ಜವಾಬ್ದಾರಿಯಿಂದ ನಡ್ಕೊಬೇಕು . . . ಎಲ್ಲ ವಿಷ್ಯಗಳಲ್ಲಿ ಇತಿಮಿತಿ ಇರಬೇಕು, ನಂಬಿಗಸ್ತರಾಗಿ ಇರಬೇಕು.”—1 ತಿಮೊ. 3:11.

ಗೀತೆ 41 ಯೌವನದಲ್ಲಿ ಯೆಹೋವನನ್ನು ಆರಾಧಿಸು

ಈ ಲೇಖನದಲ್ಲಿ ಏನಿದೆ? a

1. ಪ್ರೌಢ ಕ್ರೈಸ್ತರಾಗಬೇಕಂದ್ರೆ ನಾವೇನು ಮಾಡಬೇಕು?

 ಚಿಕ್ಕ ಮಕ್ಕಳು ಹೇಗೆ ಬೆಳೆದು ದೊಡ್ಡವರಾಗ್ತಾರೆ ಅಂತ ಗೊತ್ತೇ ಆಗಲ್ಲ. ಆದ್ರೆ ಯುವ ಸಹೋದರಿಯರು ಪ್ರೌಢರಾಗಬೇಕಂದ್ರೆ ಅದು ಇದ್ದಕ್ಕಿದ್ದಂಗೆ ಆಗಿಬಿಡಲ್ಲ, ಅದಕ್ಕೆ ಪ್ರಯತ್ನ ಬೇಕು. b (1 ಕೊರಿಂ. 13:11; ಇಬ್ರಿ. 6:1) ಅವರು ಯೆಹೋವನ ಜೊತೆ ಆಪ್ತ ಸಂಬಂಧ ಬೆಳೆಸ್ಕೊಬೇಕು. ಅಷ್ಟೇ ಅಲ್ಲ, ಯೆಹೋವನಿಗೆ ಇಷ್ಟ ಆಗೋ ಗುಣಗಳನ್ನ ಬೆಳೆಸ್ಕೊಬೇಕು, ಒಳ್ಳೇ ಕೌಶಲಗಳನ್ನ ಕಲಿಬೇಕು ಮತ್ತು ಮುಂದಿನ ಜೀವನಕ್ಕೆ ತಯಾರಾಗಬೇಕು. ಇದನ್ನೆಲ್ಲ ಮಾಡೋಕೆ ಪವಿತ್ರ ಶಕ್ತಿಯ ಸಹಾಯ ಬೇಕೇಬೇಕು.—ಜ್ಞಾನೋ. 1:5.

2. (ಎ) ಆದಿಕಾಂಡ 1:27ರಿಂದ ನಾವೇನು ತಿಳ್ಕೊತೀವಿ? (ಬಿ) ಈ ಲೇಖನದಲ್ಲಿ ನಾವೇನು ಕಲಿತೀವಿ?

2 ಯೆಹೋವ ಮನುಷ್ಯರನ್ನ ಮಾಡುವಾಗ, ಗಂಡು ಮತ್ತು ಹೆಣ್ಣನ್ನ ಸೃಷ್ಟಿ ಮಾಡಿದನು. (ಆದಿಕಾಂಡ 1:27 ಓದಿ.) ಅವ್ರಿಬ್ರಿಗಿರೋ ಶಕ್ತಿ ಸಾಮರ್ಥ್ಯ ಒಂದೇ ತರ ಇರಲ್ಲ. ಉದಾಹರಣೆಗೆ, ಅವ್ರಿಗೆ ಅವರದ್ದೇ ಆದ ಬೇರೆಬೇರೆ ಜವಾಬ್ದಾರಿಗಳಿರುತ್ತೆ. ಅದನ್ನ ಮಾಡೋಕೆ ಕೆಲವು ಗುಣಗಳು ಮತ್ತು ಕೌಶಲಗಳು ಬೇಕಾಗುತ್ತೆ. (ಆದಿ. 2:18) ಹಾಗಾಗಿ ನಾವು ಈ ಲೇಖನದಲ್ಲಿ ಯುವ ಸಹೋದರಿಯರು ಪ್ರೌಢರಾಗೋಕೆ ಏನು ಮಾಡಬೇಕು ಅಂತ ಕಲಿಯೋಣ. ಮುಂದಿನ ಲೇಖನದಲ್ಲಿ ಯುವ ಸಹೋದರರು ಪ್ರೌಢರಾಗೋಕೆ ಏನು ಮಾಡಬೇಕು ಅಂತ ಕಲಿಯೋಣ.

ದೇವರಿಗೆ ಇಷ್ಟ ಆಗೋ ಗುಣಗಳನ್ನ ಬೆಳೆಸ್ಕೊಳ್ಳಿ

ರೆಬೆಕ್ಕ, ಎಸ್ತೇರ್‌ ಮತ್ತು ಅಬೀಗೈಲ್‌ನಂಥ ಇನ್ನೂ ನಂಬಿಗಸ್ತ ಸ್ತ್ರೀಯರ ತರ ಒಳ್ಳೇ ಗುಣಗಳನ್ನ ನಾವು ತೋರಿಸಿದ್ರೆ ಪ್ರೌಢರಾಗ್ತೀವಿ (ಪ್ಯಾರ 3-4 ನೋಡಿ)

3-4. ಯುವ ಸಹೋದರಿಯರು ಪ್ರೌಢ ಕ್ರೈಸ್ತರಾಗೋಕೆ ಯಾರಿಂದ ಕಲಿಬಹುದು? (ಚಿತ್ರನೂ ನೋಡಿ.)

3 ಯೆಹೋವನನ್ನ ಪ್ರೀತಿಸಿ, ಆತನನ್ನ ಆರಾಧಿಸಿರೋ ಎಷ್ಟೋ ಸ್ತ್ರೀಯರ ಬಗ್ಗೆ ಬೈಬಲಲ್ಲಿದೆ. (jw.orgನಲ್ಲಿ “ಬೈಬಲ್‌ನಲ್ಲಿರೋ ಸ್ತ್ರೀಯರಿಂದ ನಾವು ಯಾವ ಪಾಠ ಕಲಿಬಹುದು?” ಅನ್ನೋ ಲೇಖನ ನೋಡಿ.) ಮುಖ್ಯವಚನದಲ್ಲಿ ಹೇಳಿರೋ ತರ ಈ ಸ್ತ್ರೀಯರು “ಎಲ್ಲ ವಿಷ್ಯಗಳಲ್ಲಿ ಇತಿಮಿತಿ” ತೋರಿಸಿದ್ರು ಮತ್ತು “ನಂಬಿಗಸ್ತರಾಗಿ” ಇದ್ರು. ನೀವು ಇವ್ರಿಂದಷ್ಟೇ ಅಲ್ಲ ನಿಮ್ಮ ಸಭೆಲಿರೋ ಪ್ರೌಢ ಸ್ತ್ರೀಯರಿಂದನೂ ತುಂಬ ವಿಷ್ಯಗಳನ್ನ ಕಲಿಬಹುದು.

4 ಯುವ ಸಹೋದರಿಯರೇ, ಪ್ರೌಢ ಕ್ರೈಸ್ತರಾಗಿ ಮಾದರಿ ಇಟ್ಟಿರೋ ಸಹೋದರಿಯರು ನಿಮಗೆ ಗೊತ್ತಿದ್ದಾರಾ? ಅವ್ರಲ್ಲಿರೋ ಒಳ್ಳೇ ಗುಣಗಳನ್ನ ನೀವು ಗಮನಿಸಿದ್ದೀರಾ? ಹಾಗಿದ್ರೆ ನೀವೂ ಆ ಗುಣಗಳನ್ನ ಹೇಗೆ ತೋರಿಸಬಹುದು ಅಂತ ಯೋಚ್ನೆ ಮಾಡಿ. ನಾವು ಈ ಮುಂದಿನ ಪ್ಯಾರಗಳಲ್ಲಿ ಪ್ರೌಢರಾಗೋಕೆ ಯಾವ ಮೂರು ಗುಣಗಳು ಸಹಾಯ ಮಾಡುತ್ತೆ ಅಂತ ನೋಡೋಣ.

5. ಸಹೋದರಿಯರು ಯಾಕೆ ದೀನತೆ ತೋರಿಸಬೇಕು?

5 ದೀನತೆ ಅನ್ನೋ ಗುಣ ಇದ್ರೆ ಒಬ್ಬ ಸಹೋದರಿ ಪ್ರೌಢಳಾಗೋಕೆ ಆಗುತ್ತೆ. ಈ ಗುಣ ಇದ್ರೆ ಅವಳಿಗೆ ಯೆಹೋವನ ಜೊತೆ ಒಳ್ಳೇ ಸ್ನೇಹ ಇರುತ್ತೆ ಮತ್ತು ಎಲ್ರ ಜೊತೆನೂ ಚೆನ್ನಾಗಿರ್ತಾಳೆ. (ಯಾಕೋ. 4:6) ಉದಾಹರಣೆಗೆ, ಯೆಹೋವ ಮಾಡಿರೋ ತಲೆತನದ ಏರ್ಪಾಡಿಗೆ ಅಧೀನಳಾಗಿರೋಕೆ ಅವಳಿಗೆ ಆಗುತ್ತೆ. (1 ಕೊರಿಂ. 11:3, ಪಾದಟಿಪ್ಪಣಿ) ಸಭೆಲಿ ಮತ್ತು ಕುಟುಂಬದಲ್ಲಿ ಮುಂದೆ ನಿಂತು ನಡೆಸೋಕೆ ಯೆಹೋವ ಜವಾಬ್ದಾರಿ ಕೊಟ್ಟಿರೋರಿಗೆ ಸಹಕಾರ ಕೊಡೋಕಾಗುತ್ತೆ. c

6. ಯುವ ಸಹೋದರಿಯರು ರೆಬೆಕ್ಕಳಿಂದ ಏನು ಕಲಿಬಹುದು?

6 ರೆಬೆಕ್ಕ ಬಗ್ಗೆ ನೋಡಿ. ಅವಳು ತುಂಬ ಜಾಣೆಯಾಗಿದ್ದಳು, ಧೈರ್ಯದಿಂದ ಕೆಲವು ನಿರ್ಧಾರಗಳನ್ನ ತಗೊಂಡಳು. ಅಷ್ಟೇ ಅಲ್ಲ, ಯಾವಾಗ ಏನು ಮಾಡಬೇಕು ಅನ್ನೋದು ಕೂಡ ಅವಳಿಗೆ ಚೆನ್ನಾಗಿ ಗೊತ್ತಿತ್ತು. (ಆದಿ. 24:58; 27:5-17) ಹಾಗಿದ್ರೂ ಅವಳು ಬೇರೆಯವ್ರಿಗೆ ಗೌರವ ತೋರಿಸ್ತಿದ್ದಳು, ಮಾತು ಕೇಳ್ತಿದ್ದಳು. (ಆದಿ. 24:17, 18, 65) ಯುವ ಸಹೋದರಿಯರೇ ನೀವೂ ರೆಬೆಕ್ಕ ತರ ದೀನತೆ ತೋರಿಸಿದ್ರೆ ಕುಟುಂಬದಲ್ಲಿ ಮತ್ತು ಸಭೆಲಿ ಬೇರೆಯವ್ರಿಗೆ ಒಳ್ಳೇ ಮಾದರಿ ಆಗಿರ್ತೀರ.

7. ಯುವ ಸಹೋದರಿಯರು ಎಸ್ತೇರಳಿಂದ ಏನು ಕಲಿಬಹುದು?

7 ವಿನಮ್ರತೆ ಅನ್ನೋ ಗುಣನೂ ಪ್ರೌಢ ಕ್ರೈಸ್ತರಾಗೋಕೆ ಸಹಾಯ ಮಾಡುತ್ತೆ. “ವಿನಮ್ರರ ಹತ್ರ ವಿವೇಕ ಇರುತ್ತೆ” ಅಂತ ಬೈಬಲ್‌ ಹೇಳುತ್ತೆ. (ಜ್ಞಾನೋ. 11:2) ಎಸ್ತೇರ್‌ಗೆ ವಿನಮ್ರತೆ ಇತ್ತು, ಅಂದ್ರೆ ಅವಳು ತನ್ನ ಇತಿಮಿತಿನ ಅರ್ಥ ಮಾಡ್ಕೊಂಡಿದ್ದಳು. ರಾಣಿಯಾದ ತಕ್ಷಣ ಅವಳು ಅಹಂಕಾರ ತೋರಿಸಲಿಲ್ಲ, ತಾನು ಹೇಳಿದ್ದೇ ನಡಿಬೇಕು ಅಂತ ಹಟ ಹಿಡಿಲಿಲ್ಲ. ಮೊರ್ದೆಕೈ ಹೇಳಿದ ತರಾನೇ ಮಾಡ್ತಿದ್ದಳು. (ಎಸ್ತೇ. 2:10, 20, 22) ಅವಳ ತರ ನೀವೂ ವಿನಮ್ರರಾಗಿದ್ರೆ ಬೇರೆಯವ್ರ ಹತ್ರ ನೀವೇ ಹೋಗಿ ಸಲಹೆ ಕೇಳ್ತೀರ ಮತ್ತು ಅದನ್ನ ಪಾಲಿಸ್ತೀರ.—ತೀತ 2:3-5.

8. 1 ತಿಮೊತಿ 2:9, 10ರಲ್ಲಿ ಹೇಳೋ ತರ ಯುವ ಸಹೋದರಿಯರು ಯಾವ ವಿಷ್ಯದಲ್ಲಿ ವಿನಮ್ರತೆ ತೋರಿಸಬಹುದು?

8 ಎಸ್ತೇರ್‌ “ರೂಪವತಿ ಆಗಿದ್ದಳು, ನೋಡೋಕೆ ತುಂಬ ಚೆನ್ನಾಗಿದ್ದಳು.” ಆದ್ರೂ ಅವಳು ಹೇಗೆ ವಿನಮ್ರತೆ ತೋರಿಸಿದಳು? ಎಲ್ರೂ ತನ್ನನ್ನೇ ನೋಡಬೇಕು ಅನ್ನೋ ತರ ಅವಳು ನಡ್ಕೊಳ್ಳಲಿಲ್ಲ. (ಎಸ್ತೇ. 2:7, 15) ಸಹೋದರಿಯರು ಹೇಗೆ ಎಸ್ತೇರ್‌ ತರ ಇರಬಹುದು? 1 ತಿಮೊತಿ 2:9, 10ರಲ್ಲಿ ನಮ್ಮ ಬಟ್ಟೆ ಬೇರೆಯವ್ರ ಗಮನ ಸೆಳೆಯೋ ತರ ಇರಬಾರದು, ನಾವು ತೋರಿಸ್ಕೊಳ್ಳೋರಲ್ಲ, ಬುದ್ಧಿ ಇರೋರು ಅನ್ನೋ ತರ ನಡ್ಕೊಬೇಕು ಅಂತ ಪೌಲ ಹೇಳಿದ. (ಓದಿ.) ಇದನ್ನ ಹೇಳೋಕೆ ಪೌಲ ಬಳಸಿರೋ ಗ್ರೀಕ್‌ ಪದಗಳು ಏನರ್ಥ ಕೊಡುತ್ತಂದ್ರೆ ನಾವು ಹಾಕೋ ಬಟ್ಟೆ ಯೆಹೋವನಿಗೆ ಗೌರವ ತರೋ ಹಾಗೆ ಇರಬೇಕು, ನಮ್ಮ ಬಟ್ಟೆ ನೋಡಿದಾಗ ಬೇರೆಯವ್ರಿಗೆ ಹೇಗನಿಸುತ್ತೆ ಅಂತನೂ ಯೋಚಿಸಬೇಕು. ಈ ವಚನ ಹೇಳೋ ತರ ನಡ್ಕೊಳ್ತಿರೋ ನಮ್ಮ ಸಹೋದರಿಯರನ್ನ ನಾವು ಮೆಚ್ಕೊಳ್ತೀವಿ.

9. ಅಬೀಗೈಲ್‌ನಿಂದ ನಾವು ಏನು ಕಲಿಬಹುದು?

9 ವಿವೇಚನೆ, ಸಹೋದರಿಯರಿಗೆ ಪ್ರೌಢರಾಗೋಕೆ ಸಹಾಯ ಮಾಡೋ ಇನ್ನೊಂದು ಗುಣ. ವಿವೇಚನೆ ಅಂದ್ರೇನು? ವಿವೇಚನೆ ಅಂದ್ರೆ ಸರಿ ಯಾವುದು, ತಪ್ಪು ಯಾವುದು ಅಂತ ತಿಳ್ಕೊಂಡು ಸರಿಯಾಗಿರೋದನ್ನೇ ಮಾಡೋದು. ಇದಕ್ಕೆ ಅಬೀಗೈಲ್‌ ಒಳ್ಳೇ ಮಾದರಿ ಇಟ್ಟಿದ್ದಾಳೆ. ಅವಳ ಗಂಡ ಮೂರ್ಖತನದಿಂದ ಒಂದು ನಿರ್ಧಾರ ಮಾಡಿದ. ಅದ್ರಿಂದ ಅವನ ಕುಟುಂಬದವ್ರಿಗೆಲ್ಲ ಆಪತ್ತು ಬಂತು. ಆದ್ರೆ ಅಬೀಗೈಲ್‌ ಜಾಣೆಯಾಗಿದ್ದಳು. ಅವಳು ಬುದ್ಧಿವಂತಿಕೆಯಿಂದ ಮಾಡಿದ ತೀರ್ಮಾನದಿಂದ ಅವನ ಕುಟುಂಬದವ್ರ ಪ್ರಾಣ ಉಳೀತು. (1 ಸಮು. 25:14-23, 32-35) ಯುವ ಸಹೋದರಿಯರೂ ಅಬೀಗೈಲ್‌ ತರ ಬುದ್ಧಿವಂತರಾಗಿರಬೇಕು. ಆಗ ಯಾವಾಗ ಮಾತಾಡಬೇಕು ಯಾವಾಗ ಸುಮ್ಮನಿರಬೇಕು ಅಂತ ಗೊತ್ತಾಗುತ್ತೆ. ಅಷ್ಟೇ ಅಲ್ಲ, ಬೇರೆಯವ್ರಿಗೆ ಸಹಾಯ ಮಾಡುವಾಗ ಅವ್ರ ಸ್ವಂತ ವಿಷ್ಯಗಳಲ್ಲಿ ತಲೆಹಾಕಲ್ಲ.—1 ಥೆಸ. 4:11.

ಕೌಶಲಗಳನ್ನ ಬೆಳೆಸ್ಕೊಳ್ಳಿ

ಓದೋಕೆ, ಬರಿಯೋಕೆ ಕಲ್ತಿದ್ರಿಂದ ನಿಮಗೆ ಹೇಗೆ ಪ್ರಯೋಜನ ಆಗಿದೆ? (ಪ್ಯಾರ 11 ನೋಡಿ)

10-11. ಚೆನ್ನಾಗಿ ಓದೋಕೆ, ಬರಿಯೋಕೆ ಕಲಿಯೋದ್ರಿಂದ ಏನು ಪ್ರಯೋಜನ ಇದೆ? (ಚಿತ್ರನೂ ನೋಡಿ.)

10 ಸಹೋದರಿಯರು ಪ್ರೌಢರಾಗಬೇಕಂದ್ರೆ ಕೆಲವು ಕೌಶಲಗಳನ್ನ ಕಲಿತಿರಬೇಕು. ಅವರು ಚಿಕ್ಕ ವಯಸ್ಸಲ್ಲಿ ಕಲಿಯೋ ಕೌಶಲಗಳು ದೊಡ್ಡವರಾದ ಮೇಲೂ ಪ್ರಯೋಜನಕ್ಕೆ ಬರುತ್ತೆ. ಹಾಗಾದ್ರೆ ಅವರು ಯಾವೆಲ್ಲ ಕೌಶಲಗಳನ್ನ ಕಲಿಬಹುದು?

11 ಚೆನ್ನಾಗಿ ಓದೋಕೆ ಬರಿಯೋಕೆ ಕಲಿರಿ. ಕೆಲವು ಕಡೆ ಹೆಣ್ಣುಮಕ್ಕಳಿಗೆ ಓದೋಕೆ, ಬರಿಯೋಕೆ ಬಿಡಲ್ಲ. ಆದ್ರೆ ಕ್ರೈಸ್ತರಾಗಿರೋ ಪ್ರತಿಯೊಬ್ಬರೂ ಓದೋಕೆ, ಬರಿಯೋಕೆ ಕಲಿಬೇಕು. d (1 ತಿಮೊ. 4:13) ಆಗ ಒಳ್ಳೇ ಕೆಲಸ ಸಿಗುತ್ತೆ. ಬೇರೆಯವ್ರಿಗೆ ಯೆಹೋವನ ಬಗ್ಗೆ ಚೆನ್ನಾಗಿ ಕಲಿಸೋಕೂ ಆಗುತ್ತೆ, ನಿಮಗೆ ಆತನ ಬಗ್ಗೆ ಕಲಿಯೋಕೂ ಆಗುತ್ತೆ. ಅಷ್ಟೇ ಅಲ್ಲ, ಬೈಬಲನ್ನ ಓದಿ ಅದ್ರ ಬಗ್ಗೆ ಯೋಚ್ನೆ ಮಾಡೋದ್ರಿಂದ ಯೆಹೋವನ ಜೊತೆಗಿರೋ ಫ್ರೆಂಡ್‌ಶಿಪ್‌ ಇನ್ನೂ ಗಟ್ಟಿಯಾಗುತ್ತೆ. ಹಾಗಾಗಿ ಎಷ್ಟೇ ಕಷ್ಟ ಆದ್ರೂ ಓದೋಕೆ, ಬರಿಯೋಕೆ ಕಲೀರಿ.—ಯೆಹೋ. 1:8; 1 ತಿಮೊ. 4:15.

12. ಚೆನ್ನಾಗಿ ಮಾತಾಡೋದನ್ನ ಕಲಿಯೋಕೆ ಜ್ಞಾನೋಕ್ತಿ 31:26 ಹೇಗೆ ಸಹಾಯ ಮಾಡುತ್ತೆ?

12 ಚೆನ್ನಾಗಿ ಮಾತಾಡೋಕೆ ಕಲಿರಿ. ಕ್ರೈಸ್ತರಾಗಿರೋ ನಮ್ಮೆಲ್ರಿಗೂ ಈ ಕಲೆ ಬೇಕೇ ಬೇಕು. “ಪ್ರತಿಯೊಬ್ರೂ ಕೇಳಿಸ್ಕೊಳ್ಳೋದನ್ನ ಜಾಸ್ತಿ ಮಾಡಿ, ಮಾತಾಡೋದನ್ನ ಕಮ್ಮಿ ಮಾಡಿ” ಅಂತ ಯಾಕೋಬ ಹೇಳಿದ್ದಾನೆ. (ಯಾಕೋ. 1:19) ಅವನು ಯಾಕೆ ಹಾಗೆ ಹೇಳಿದ? ಯಾಕಂದ್ರೆ ಬೇರೆಯವರು ಮಾತಾಡುವಾಗ ನಾವು ಚೆನ್ನಾಗಿ ಕೇಳಿಸ್ಕೊಂಡ್ರೆ ಅವ್ರ “ನೋವನ್ನ” ಅರ್ಥ ಮಾಡ್ಕೊಳ್ಳೋಕಾಗುತ್ತೆ, ಅವ್ರಿಗೆ ಸಹಾಯ ಮಾಡೋಕೂ ಆಗುತ್ತೆ. (1 ಪೇತ್ರ 3:8) ಒಬ್ರು ಮಾತಾಡ್ತಿರೋದು ನಿಮಗೆ ಅರ್ಥ ಆಗ್ತಿಲ್ಲಾಂದ್ರೆ ಅಥವಾ ಅವ್ರಿಗೆ ಹೇಗನಿಸ್ತಿದೆ ಅಂತ ನಿಮಗೆ ಗೊತ್ತಾಗ್ತಿಲ್ಲಾಂದ್ರೆ ಏನು ಮಾಡಬೇಕು? ಪ್ರಶ್ನೆಗಳನ್ನ ಕೇಳಿ, ಆಮೇಲೆ ಯೋಚ್ನೆ ಮಾಡಿ ಮಾತಾಡಿ. (ಜ್ಞಾನೋ. 15:28) ‘ನಾನು ಹೇಳ್ತಿರೋ ವಿಷ್ಯ ನಿಜಾನಾ? ಅದು ಬೇರೆಯವ್ರ ಮನ್ಸಿಗೆ ಖುಷಿ ಕೊಡುತ್ತಾ? ನಾನು ಗೌರವ ಕೊಟ್ಟು ಪ್ರೀತಿಯಿಂದ ಮಾತಾಡ್ತೀನಾ?’ ಅಂತ ನಿಮ್ಮನ್ನೇ ಕೇಳ್ಕೊಳ್ಳಿ. ಎಲ್ರ ಜೊತೆ ಚೆನ್ನಾಗಿ ಮಾತಾಡೋ ಪ್ರೌಢ ಸಹೋದರಿಯರನ್ನ ನೋಡಿ ಕಲಿರಿ. (ಜ್ಞಾನೋಕ್ತಿ 31:26 ಓದಿ.) ಅವರು ಏನು ಮಾತಾಡ್ತಾರೆ, ಹೇಗೆ ಮಾತಾಡ್ತಾರೆ ಅಂತ ಗಮನಿಸಿ. ನೀವು ಚೆನ್ನಾಗಿ ಮಾತಾಡೋಕೆ ಕಲಿತ್ರೆ ಎಲ್ರ ಜೊತೆನೂ ಖುಷಿಖುಷಿಯಾಗಿ ಇರ್ತೀರ.

ಮನೆ ಕೆಲಸ ಮಾಡೋಕೆ ಚೆನ್ನಾಗಿ ಕಲ್ತಿರೋ ಸಹೋದರಿಯರು ತಮ್ಮ ಕುಟುಂಬಕ್ಕೆ ಮತ್ತು ಸಭೆಗೆ ಆಶೀರ್ವಾದ ಆಗಿದ್ದಾರೆ (ಪ್ಯಾರ 13 ನೋಡಿ)

13. ಮನೆನ ಚೆನ್ನಾಗಿ ನೋಡ್ಕೊಳ್ಳೋದನ್ನ ಕಲಿಯೋಕೆ ಏನು ಮಾಡಬೇಕು? (ಚಿತ್ರನೂ ನೋಡಿ.)

13 ಮನೆಕೆಲಸಗಳನ್ನ ಮಾಡೋಕೆ ಕಲಿರಿ. ತುಂಬ ಕಡೆ ಮನೆ ಕೆಲಸಗಳನ್ನ ಸಾಮಾನ್ಯವಾಗಿ ಸ್ತ್ರೀಯರೇ ಮಾಡ್ತಾರೆ. ನಿಮಗೂ ನಿಮ್ಮಮ್ಮ ಅಥವಾ ಬೇರೆ ಸಹೋದರಿ ಮನೆ ಕೆಲಸಗಳನ್ನ ಮಾಡೋದು ಹೇಗೆ ಅಂತ ಹೇಳಿ ಕೊಟ್ಟಿರಬಹುದು. ಸಿಂಡಿ ಅನ್ನೋ ಸಹೋದರಿ ಏನು ಹೇಳ್ತಾರೆ ನೋಡಿ: “ಕಷ್ಟ ಪಟ್ಟು ದುಡಿಯೋದ್ರಿಂದ ನಮಗೆ ಖುಷಿ ಸಿಗುತ್ತೆ ಅಂತ ನಮ್ಮಮ್ಮ ಆಗಾಗ ಹೇಳ್ತಿದ್ರು. ಅದು ನೂರಕ್ಕೆ ನೂರು ಸತ್ಯ. ನಮ್ಮಮ್ಮ ನನಗೆ ಅಡುಗೆ ಮಾಡೋದನ್ನ, ಕ್ಲೀನ್‌ ಮಾಡೋದನ್ನ, ಬಟ್ಟೆ ಒಗೆಯೋದನ್ನ ಮತ್ತು ಜಾಸ್ತಿ ದುಡ್ಡು ಖರ್ಚು ಮಾಡದೆ ಮನೆಗೆ ಸಾಮಾನು ತಗೊಂಡು ಬರೋದನ್ನ ಹೇಳ್ಕೊಟ್ಟಿದ್ರಿಂದ ನನ್ನ ಜೀವನನ ಚೆನ್ನಾಗಿ ನಡೆಸೋಕಾಗ್ತಿದೆ. ಯೆಹೋವನ ಸೇವೆನ ಇನ್ನೂ ಜಾಸ್ತಿ ಮಾಡೋಕೆ ಆಗ್ತಿದೆ. ಅಷ್ಟೇ ಅಲ್ಲ, ನಮ್ಮಮ್ಮ ಮನೆಗೆ ಬಂದವ್ರನ್ನ ಹೇಗೆ ನೋಡ್ಕೊಬೇಕು ಅನ್ನೋದನ್ನೂ ಕಲಿಸಿದ್ರು. ಇದ್ರಿಂದ ನನಗೆ ಬೇರೆಬೇರೆ ಸಹೋದರ ಸಹೋದರಿಯರನ್ನ ಫ್ರೆಂಡ್ಸ್‌ ಮಾಡ್ಕೊಳ್ಳೋಕೆ ಆಗ್ತಿದೆ. ಅವ್ರಿಂದ ತುಂಬ ಕಲಿಯೋಕೆ ಆಗ್ತಿದೆ” ಅಂತ ಹೇಳ್ತಾರೆ. (ಜ್ಞಾನೋ. 31: 15, 21, 22) ಮನೆ ಕೆಲಸ ಮತ್ತು ಅತಿಥಿಸತ್ಕಾರ ಮಾಡೋಕೆ ಚೆನ್ನಾಗಿ ಕಲ್ತಿರೋ ಸಹೋದರಿಯರು ಸಭೆಗೆ ಮತ್ತು ಕುಟುಂಬಕ್ಕೆ ಸಿಕ್ಕಿರೋ ದೊಡ್ಡ ಆಶೀರ್ವಾದ. ಯಾಕಂದ್ರೆ ಅವರು ತಮ್ಮ ಸುತ್ತಮುತ್ತ ಇರೋರನ್ನ ಯಾವಾಗ್ಲೂ ಖುಷಿಯಾಗಿ ಇರೋ ತರ ನೋಡ್ಕೊತಾರೆ.—ಜ್ಞಾನೋ. 31:13, 17, 27; ಅ. ಕಾ. 16:15.

14. (ಎ) ಕ್ರಿಸ್ಟಲ್‌ನಿಂದ ನೀವೇನು ಕಲಿತ್ರಿ? (ಬಿ) ನಿಮ್ಮ ಗಮನ ಯಾವುದ್ರ ಮೇಲೆ ಇರಬೇಕು?

14 ನಿಮ್ಮ ಕಾಲ ಮೇಲೆ ನೀವು ನಿಂತ್ಕೊಳ್ಳೋಕೆ ಕಲಿರಿ. ಪ್ರೌಢರಾಗೋಕೆ ನಾವೆಲ್ರೂ ಈ ಗುರಿ ಇಡಬೇಕು. (2 ಥೆಸ. 3:7, 8) “ನಾನು ಯಾವ ಕೋರ್ಸ್‌ ತಗೊಂಡ್ರೆ ಚೆನ್ನಾಗಿರುತ್ತೆ ಅಂತ ನಾನು ಮತ್ತು ಅಪ್ಪ, ಅಮ್ಮ ಕೂತು ಯೋಚ್ನೆ ಮಾಡ್ತಿದ್ವಿ. ಆಗ ಅಪ್ಪ ಅಕೌಂಟಿಂಗ್‌ ತಗೊಂಡ್ರೆ ಚೆನ್ನಾಗಿರುತ್ತೆ ಅಂತ ಹೇಳಿದ್ರು. ಅದು ನನಗೆ ತುಂಬ ಸಹಾಯ ಆಯ್ತು” ಅಂತ ಸಹೋದರಿ ಕ್ರಿಸ್ಟಲ್‌ ಹೇಳ್ತಾರೆ. ಕೆಲಸ ಹುಡುಕೊಂಡು ಹಣ ಸಂಪಾದನೆ ಮಾಡೋಕೆ ಕಲಿತ್ರೆ ಮಾತ್ರ ಸಾಕಾಗಲ್ಲ, ಆ ಹಣನ ಹೇಗೆ ಹುಷಾರಾಗಿ ಖರ್ಚು ಮಾಡಬೇಕು ಅನ್ನೋದನ್ನೂ ಕಲಿಬೇಕು. (ಜ್ಞಾನೋ. 31:16, 18) ಕಣ್ಣಿಗೆ ಕಂಡಿದ್ದನ್ನೆಲ್ಲ ತಗೊಳ್ಳದೆ, ಸಾಲ ಮಾಡದೆ, ಇರೋದ್ರಲ್ಲಿ ತೃಪ್ತಿಯಾಗಿ ಇರೋಕೆ ಕಲಿತ್ರೆ ನಮ್ಮ ಗಮನ ಯೆಹೋವನ ಸೇವೆ ಜಾಸ್ತಿ ಮಾಡೋದ್ರ ಕಡೆ ಇರುತ್ತೆ.—1 ತಿಮೊ. 6:8.

ಈಗ್ಲೇ ತಯಾರಾಗಿರಿ

15-16. ಮದುವೆ ಆಗದೆ ಇರೋ ಸಹೋದರಿಯರು ಒಂದು ಗಿಫ್ಟ್‌ ಅಂತ ನಾವು ಯಾಕೆ ಹೇಳಬಹುದು? (ಮಾರ್ಕ 10:29, 30)

15 ಯೆಹೋವನಿಗೆ ಇಷ್ಟ ಆಗೋ ಗುಣಗಳನ್ನ ಮತ್ತು ಒಳ್ಳೇ ಕೌಶಲಗಳನ್ನ ನೀವು ಈಗ್ಲೇ ಕಲಿತ್ಕೊಂಡ್ರೆ ಮುಂದೆ ಬರೋ ಜವಾಬ್ದಾರಿಗಳನ್ನ ಚೆನ್ನಾಗಿ ನಿರ್ವಹಿಸೋಕಾಗುತ್ತೆ. ಅದ್ರಲ್ಲಿ ಕೆಲವನ್ನ ಈಗ ನೋಡೋಣ.

16 ಮದುವೆಯಾಗದೇ ಇರೋಕೆ ತೀರ್ಮಾನ ಮಾಡಬಹುದು. ಕೆಲವು ದೇಶಗಳಲ್ಲಿ ಮದುವೆ ಆಗದೇ ಇದ್ರೆ ಜನ ತುಂಬ ಕೀಳಾಗಿ ನೋಡ್ತಾರೆ. ಆದ್ರೂ ಕೆಲವು ಸಹೋದರಿಯರು ಯೇಸು ಹೇಳಿದ ಹಾಗೆ ಮದುವೆ ಆಗದೇ ಇರೋಕೆ ಇಷ್ಟ ಪಡ್ತಾರೆ. (ಮತ್ತಾ. 19:10-12) ಇನ್ನು ಕೆಲವರು ಬೇರೆಬೇರೆ ಕಾರಣಗಳಿಂದ ಮದುವೆ ಆಗದೇ ಇರ್ತಾರೆ. ಆದ್ರೆ ಯೆಹೋವ ಮತ್ತು ಯೇಸು ಮದುವೆ ಆಗದೇ ಇರೋರನ್ನ ಯಾವತ್ತೂ ಕೀಳಾಗಿ ನೋಡಲ್ಲ. ಈ ಸಹೋದರಿಯರು ಸಭೆಗೆ ಸಿಕ್ಕಿರೋ ಗಿಫ್ಟ್‌. ಅವರು ತೋರಿಸ್ತಿರೋ ಪ್ರೀತಿಗೆ, ಕಾಳಜಿಗೆ ಯಾವತ್ತೂ ಬೆಲೆಕಟ್ಟೋಕಾಗಲ್ಲ. ಇವರು ನಮ್ಮಲ್ಲಿ ಎಷ್ಟೋ ಜನಕ್ಕೆ ಅಕ್ಕ-ತಂಗಿಯರಾಗಿದ್ದಾರೆ, ಅಮ್ಮಂದಿರಾಗಿದ್ದಾರೆ. ಇವ್ರಂದ್ರೆ ನಮ್ಮೆಲ್ರಿಗೂ ತುಂಬ ಇಷ್ಟ.—ಮಾರ್ಕ 10:29, 30 ಓದಿ; 1 ತಿಮೊ. 5:2.

17. ಯುವ ಸಹೋದರಿಯರು ಪೂರ್ಣ ಸಮಯದ ಸೇವೆ ಮಾಡೋಕೆ ಈಗ್ಲೇ ಹೇಗೆ ತಯಾರಾಗಬಹುದು?

17 ನೀವು ಪೂರ್ಣ ಸಮಯದ ಸೇವಕರಾಗಬಹುದು. ಯೆಹೋವನ ಸಂಘಟನೆಯಲ್ಲಿ ಸಹೋದರಿಯರೇ ಜಾಸ್ತಿ ಸಿಹಿಸುದ್ದಿ ಸಾರ್ತಿದ್ದಾರೆ. (ಕೀರ್ತ. 68:11) ಹಾಗಾಗಿ ನೀವೂ ಪೂರ್ಣ ಸಮಯದ ಸೇವೆ ಮಾಡೋ ಗುರಿ ಇಡಬಹುದು. ನೀವು ಪಯನೀಯರ್‌ ಆಗಬಹುದು, ಕಟ್ಟಡ ನಿರ್ಮಾಣ ಕೆಲಸ ಮಾಡಬಹುದು, ಬೆತೆಲ್‌ ಸೇವೆ ಮಾಡಬಹುದು. ಹಾಗಾಗಿ ನೀವು ಒಂದು ಗುರಿ ಇಟ್ಟು ಅದ್ರ ಬಗ್ಗೆ ಯೆಹೋವನ ಹತ್ರ ಪ್ರಾರ್ಥಿಸಿ. ಆ ಗುರಿನ ಈಗಾಗ್ಲೇ ಮುಟ್ಟಿರೋರ ಹತ್ರ ಮಾತಾಡಿ. ಆ ಗುರಿ ಮುಟ್ಟೋಕೆ ನೀವೇನು ಮಾಡಬೇಕು ಅಂತ ತಿಳ್ಕೊಳಿ. ಆಮೇಲೆ ಅದಕ್ಕೆ ತಕ್ಕ ಹಾಗೆ ಪ್ಲ್ಯಾನ್‌ ಮಾಡಿ. ನೀವು ಪೂರ್ಣ ಸಮಯದ ಸೇವಕರಾದ್ರೆ, ಯೆಹೋವನ ಸೇವೆನ ಇನ್ನೂ ಬೇರೆಬೇರೆ ರೀತಿಯಲ್ಲಿ ಮಾಡೋಕೆ ತುಂಬ ಅವಕಾಶಗಳು ಸಿಗುತ್ತೆ.

ನೀವು ಮದುವೆ ಆಗಬೇಕು ಅಂದ್ಕೊಂಡಿದ್ರೆ ಒಳ್ಳೇ ಹುಡುಗನನ್ನ ಹುಡುಕಿ (ಪ್ಯಾರ 18 ನೋಡಿ)

18. ಮದುವೆ ಆಗಬೇಕು ಅಂದ್ಕೊಂಡಿರೋ ಸಹೋದರಿಯರು ಏನು ಮಾಡಬೇಕು ಮತ್ತು ಯಾಕೆ? (ಚಿತ್ರನೂ ನೋಡಿ.)

18 ನೀವು ಮುಂದೆ ಮದುವೆಯಾಗೋಕೆ ತೀರ್ಮಾನ ಮಾಡಬಹುದು. ನೀವು ಈ ಲೇಖನದಲ್ಲಿ ಕಲಿತ ಗುಣಗಳನ್ನ, ಕೌಶಲಗಳನ್ನ ಬೆಳೆಸ್ಕೊಂಡ್ರೆ ಒಬ್ಬ ಒಳ್ಳೇ ಹೆಂಡತಿ ಆಗ್ತೀರ. ನೀವು ಒಂದುವೇಳೆ ಮದುವೆ ಆಗಬೇಕು ಅಂದ್ಕೊಂಡಿದ್ರೆ ಒಳ್ಳೇ ಹುಡುಗನನ್ನ ಹುಡುಕಿ. ಯಾಕಂದ್ರೆ ಇದು ನಿಮ್ಮ ಜೀವನದಲ್ಲಿ ಮಾಡಬೇಕಾದ ಒಂದು ದೊಡ್ಡ ನಿರ್ಧಾರ. ನೀವು ಮದುವೆ ಆದ್ಮೇಲೆ ಆ ಹುಡುಗ ನಿಮ್ಮ ಕುಟುಂಬದ ಯಜಮಾನ ಆಗ್ತಾನೆ ಅನ್ನೋದನ್ನ ನೆನಪಿಡಿ. (ರೋಮ. 7:2; ಎಫೆ. 5:23, 33) ಹಾಗಾಗಿ ನೀವು ಮದುವೆ ಮಾಡ್ಕೊಳ್ಳೋ ಮುಂಚೆ ಈ ಪ್ರಶ್ನೆಗಳನ್ನ ಕೇಳ್ಕೊಳ್ಳಿ: ‘ಅವನು ಯೇಸು ತರ ಯೋಚ್ನೆ ಮಾಡೋಕೆ, ನಡ್ಕೊಳ್ಳೋಕೆ ಪ್ರಯತ್ನ ಮಾಡ್ತಾನಾ? ಅವನು ಜೀವನದಲ್ಲಿ ಯೆಹೋವನಿಗೆ ಮೊದಲ ಸ್ಥಾನ ಕೊಡ್ತಾನಾ? ಅವನು ಒಳ್ಳೇ ತೀರ್ಮಾನಗಳನ್ನ ತಗೊಳ್ತಾನಾ? ತಪ್ಪುಗಳನ್ನ ಒಪ್ಕೊಳ್ತಾನಾ? ಸ್ತ್ರೀಯರನ್ನ ಗೌರವಿಸ್ತಾನಾ? ಯೆಹೋವನ ಜೊತೆಗಿರೋ ನನ್ನ ಸ್ನೇಹನಾ ಇನ್ನೂ ಜಾಸ್ತಿ ಮಾಡ್ಕೊಳ್ಳೋಕೆ ಸಹಾಯ ಮಾಡ್ತಾನಾ? ನನ್ನನ್ನ ಚೆನ್ನಾಗಿ ನೋಡ್ಕೊಳ್ತಾನಾ? ನನಗೆ ಒಳ್ಳೇ ಫ್ರೆಂಡಾಗಿ ಇರ್ತಾನಾ? ಅವನು ತನ್ನ ಜವಾಬ್ದಾರಿನ ಚೆನ್ನಾಗಿ ಮಾಡ್ತಾನಾ? ಉದಾಹರಣೆಗೆ ಅವನಿಗೆ ಸಭೆಲಿ ಯಾವುದಾದ್ರು ನೇಮಕಗಳಿದ್ಯಾ? ಅದನ್ನೆಲ್ಲ ಅವನು ಹೇಗೆ ಮಾಡ್ತಾನೆ?’ ಅಂತ ಯೋಚ್ನೆ ಮಾಡಿ. (ಲೂಕ 16:10; 1 ತಿಮೊ. 5:8) ನಿಮಗೆ ಒಬ್ಬ ಒಳ್ಳೇ ಗಂಡ ಸಿಗಬೇಕಂದ್ರೆ ನೀವು ಮೊದ್ಲು ಒಬ್ಬ ಒಳ್ಳೇ ಹೆಂಡತಿಯಾಗಿ ಇರೋಕೆ ಕಲಿಬೇಕು ಅನ್ನೋದನ್ನ ಮನಸ್ಸಲ್ಲಿಡಿ.

19. ಹೆಂಡತಿಯರು “ಸಹಾಯಕಿ” ಅಂತ ಕರೆಸ್ಕೊಳ್ಳೋಕೆ ಯಾಕೆ ಖುಷಿ ಪಡಬೇಕು?

19 ಒಬ್ಬ ಒಳ್ಳೇ ಹೆಂಡತಿ ತನ್ನ ಗಂಡನಿಗೆ “ಸರಿಯಾದ ಜೋಡಿ” ಆಗಿರ್ತಾಳೆ, “ಸಹಾಯಕಿ” ಆಗಿರ್ತಾಳೆ ಅಂತ ಬೈಬಲ್‌ ಹೇಳುತ್ತೆ. (ಆದಿ. 2:18) ಸಹಾಯಕಿ ಅಂದ ತಕ್ಷಣ ಅವಳಿಗೆ ಯಾವ ಬೆಲೆನೂ ಇಲ್ಲ, ಅವಳು ತುಂಬ ಕೀಳು ಅಂತನಾ? ಅಲ್ಲ. ಸಹಾಯಕಿಯಾಗಿ ಅವಳು ಮಾಡೋ ಕೆಲಸ ತುಂಬ ದೊಡ್ಡದು. ಅವಳಿಗೆ ತುಂಬ ಬೆಲೆಯಿದೆ. ಅಷ್ಟೇ ಯಾಕೆ ಯೆಹೋವನನ್ನೇ ಬೈಬಲ್‌ “ಸಹಾಯಕ” ಅಂತ ಎಷ್ಟೋ ಸಲ ಹೇಳಿದೆ. (ಕೀರ್ತ. 54:4; ಇಬ್ರಿ. 13:6) ಒಬ್ಬ ಹೆಂಡತಿ ತನ್ನ ಗಂಡನಿಗೆ ಸಹಕಾರ ಕೊಟ್ಟಾಗ ಅವಳು ನಿಜವಾದ ಸಹಾಯಕಿ ಆಗ್ತಾಳೆ. ಉದಾಹರಣೆಗೆ, ಗಂಡ ತನ್ನ ಕುಟುಂಬಕ್ಕೋಸ್ಕರ ತೀರ್ಮಾನ ಮಾಡಿದಾಗ ಅವಳು ಅವನಿಗೆ ಬೆಂಬಲ ಕೊಡ್ತಾಳೆ. ಅವಳಿಗೆ ಯೆಹೋವನ ಮೇಲೆ ಪ್ರೀತಿ ಇರೋದ್ರಿಂದ ತನ್ನ ಗಂಡ ಎಷ್ಟು ಒಳ್ಳೆಯವನು ಅಂತ ಬೇರೆಯವ್ರಿಗೂ ಗೊತ್ತಾಗೋ ತರ ನಡ್ಕೊತಾಳೆ. (ಜ್ಞಾನೋ. 31:11, 12; 1 ತಿಮೊ. 3:11) ಹಾಗಾಗಿ ಸಹೋದರಿಯರೇ, ನೀವು ಒಳ್ಳೇ ಹೆಂಡತಿಯಾಗೋಕೆ ಈಗ್ಲಿಂದಾನೇ ತಯಾರಾಗಿ. ಯೆಹೋವನ ಮೇಲೆ ಇನ್ನೂ ಜಾಸ್ತಿ ಪ್ರೀತಿ ಬೆಳೆಸ್ಕೊಳ್ಳಿ. ಸಭೆಲಿ ಮತ್ತು ಮನೆಲಿ ಬೇರೆಯವ್ರಿಗೆ ಸಹಾಯ ಮಾಡಿ.

20. ಮನೆಯವ್ರೆಲ್ಲ ಖುಷಿಯಾಗಿರೋ ತರ ನೋಡ್ಕೊಳ್ಳೋಕೆ ಅಮ್ಮಂದ್ರು ಏನು ಮಾಡಬಹುದು?

20 ನೀವು ಮುಂದೆ ತಾಯಿ ಆಗಬಹುದು. ನಿಮಗೆ ಮದುವೆ ಆದ್ಮೇಲೆ ಮಕ್ಕಳಾಗಬಹುದು. (ಕೀರ್ತ. 127:3) ಹಾಗಾಗಿ ಈಗಿಂದಾನೇ ತಯಾರಾಗಿ. ಈ ಲೇಖನದಲ್ಲಿ ಕಲಿತ ಗುಣಗಳನ್ನ, ಕೌಶಲಗಳನ್ನ ಬೆಳೆಸ್ಕೊಂಡ್ರೆ ನೀವು ಒಳ್ಳೇ ಹೆಂಡತಿಯಾಗಬಹುದು, ಒಳ್ಳೇ ತಾಯಿ ಆಗಬಹುದು. ನೀವು ಪ್ರೀತಿ, ದಯೆ ಮತ್ತು ತಾಳ್ಮೆ ಅನ್ನೋ ಗುಣಗಳನ್ನ ಬೆಳೆಸ್ಕೊಂಡ್ರೆ ನಿಮ್ಮ ಕುಟುಂಬದಲ್ಲಿ ಎಲ್ರೂ ಖುಷಿಖುಷಿಯಾಗಿ ಇರ್ತಾರೆ. ನಿಮ್ಮ ಮಕ್ಕಳೂ ಕೂಡ ಯಾವಾಗ್ಲೂ ಮನೆಲಿ ಇರೋಕೆ ಇಷ್ಟಪಡ್ತಾರೆ ಮತ್ತು ಸಂತೋಷವಾಗಿ ಇರ್ತಾರೆ.—ಜ್ಞಾನೋ. 24:3.

ಬೈಬಲಲ್ಲಿ ಇರೋದನ್ನ ಕಲಿತು ಅದ್ರಲ್ಲಿ ಹೇಳಿರೋ ತರ ನಡ್ಕೊಂಡಿದ್ರಿಂದ ಎಷ್ಟೋ ಯುವ ಸಹೋದರಿಯರು ಪ್ರೌಢ ಕ್ರೈಸ್ತರಾಗಿದ್ದಾರೆ (ಪ್ಯಾರ 21 ನೋಡಿ)

21. ಸಹೋದರಿಯರ ಬಗ್ಗೆ ನಿಮಗೇನು ಅನಿಸುತ್ತೆ ಮತ್ತು ಯಾಕೆ? (ಮುಖಪುಟ ಚಿತ್ರ ನೋಡಿ.)

21 ಸಹೋದರಿಯರೇ, ನಾವು ನಿಮ್ಮನ್ನ ತುಂಬ ಪ್ರೀತಿಸ್ತೀವಿ. ಯೆಹೋವನಿಗೋಸ್ಕರ ಬೇರೆಯವ್ರಿಗೋಸ್ಕರ ನೀವು ತೋರಿಸ್ತಿರೋ ಪ್ರೀತಿಯನ್ನ ನಾವು ಮರಿಯಲ್ಲ. (ಇಬ್ರಿ. 6:10) ಒಳ್ಳೇ ಗುಣಗಳನ್ನ ಮತ್ತು ಕೌಶಲಗಳನ್ನ ಬೆಳೆಸ್ಕೊಳ್ಳೋಕೆ ನೀವು ತುಂಬ ಪ್ರಯತ್ನ ಮಾಡ್ತಿದ್ದೀರ. ನಿಮ್ಮ ಮುಂದಿನ ಜೀವನಕ್ಕೆ ನೀವು ಈಗ್ಲೇ ತಯಾರಾಗ್ತಿದ್ದೀರ. ಇದ್ರಿಂದ ನಿಮಗೂ ನಿಮ್ಮ ಸುತ್ತಮುತ್ತ ಇರೋರಿಗೂ ಖುಷಿಯಾಗಿ ಇರೋಕೆ ಆಗ್ತಿದೆ. ನೀವು ಯೆಹೋವನ ಸಂಘಟನೆಗೆ ಬೆಲೆಕಟ್ಟಲಾಗದ ಮುತ್ತುಗಳು!

ಗೀತೆ 86 ನಂಬಿಗಸ್ತೆಯರು, ಕ್ರೈಸ್ತ ಸೋದರಿಯರು

a ನಮ್ಮ ಪ್ರೀತಿಯ ಯುವ ಸಹೋದರಿಯರೇ, ನೀವು ಸಭೆಗೆ ಸಿಕ್ಕ ಆಸ್ತಿಯಾಗಿದ್ದೀರ. ನೀವು ಪ್ರೌಢ ಸ್ತ್ರೀಯರಾಗಬೇಕಂದ್ರೆ ದೇವರಿಗೆ ಇಷ್ಟ ಆಗೋ ಗುಣಗಳನ್ನ ಬೆಳೆಸ್ಕೊಬೇಕು, ಕೆಲವು ಕೌಶಲಗಳನ್ನ ಕಲಿಬೇಕು ಮತ್ತು ನಿಮ್ಮ ಮುಂದಿನ ಜೀವನಕ್ಕೆ ತಯಾರಿ ಮಾಡ್ಕೊಬೇಕು. ನೀವು ಹೀಗೆ ಮಾಡಿದ್ರೆ ಯೆಹೋವನ ಸೇವೆನ ಖುಷಿಖುಷಿಯಾಗಿ ಮಾಡೋಕೆ ಆಗುತ್ತೆ ಮತ್ತು ಆತನ ಆಶೀರ್ವಾದನೂ ಸಿಗುತ್ತೆ.

b ಪದ ವಿವರಣೆ: ಒಬ್ಬ ವ್ಯಕ್ತಿ ಪ್ರೌಢ ಕ್ರೈಸ್ತನಾಗಬೇಕಂದ್ರೆ ಈ ಲೋಕ ಹೇಳಿದ ಹಾಗಲ್ಲ ಯೆಹೋವ ಹೇಳಿದ ಹಾಗೆ ನಡ್ಕೊಬೇಕು. ಅವನು ಅಥವಾ ಅವಳು ಯೇಸು ತರ ನಡ್ಕೊಳ್ಳೋಕೆ ಪ್ರಯತ್ನ ಮಾಡಬೇಕು. ಯೆಹೋವನ ಜೊತೆಗಿರೋ ಸ್ನೇಹ ಗಟ್ಟಿ ಮಾಡ್ಕೊಬೇಕು ಮತ್ತು ಎಲ್ರಿಗೂ ನಿಜ ಪ್ರೀತಿ ತೋರಿಸಬೇಕು.

d ಓದೋಕೆ, ಬರಿಯೋಕೆ ಕಲಿಯೋದು ಯಾಕೆ ಮುಖ್ಯ ಅಂತ ತಿಳ್ಕೊಳ್ಳೋಕೆ ಜುಲೈ 15, 2010ರ ಕಾವಲಿನಬುರುಜುವಿನಲ್ಲಿ “ವಾಚನ ಮತ್ತು ಅಧ್ಯಯನ ಪ್ರೇಮಿಗಳಾಗಲು ಮಕ್ಕಳಿಗೆ ಕಲಿಸಿ” ಅನ್ನೋ ಲೇಖನ ನೋಡಿ.