ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ಜನನ ನಿಯಂತ್ರಣಕ್ಕಾಗಿ ಕ್ರೈಸ್ತರು ಐಯುಡಿ ಅಂದರೆ ಗರ್ಭಾಶಯದೊಳಗೆ ಅಳವಡಿಸುವ ಸಾಧನಗಳನ್ನು ಬಳಸಬಹುದಾ?

ಈ ವಿಷಯದಲ್ಲಿ ಕ್ರೈಸ್ತ ದಂಪತಿಗಳು ತೆಗೆದುಕೊಳ್ಳುವ ನಿರ್ಧಾರ ಒಳ್ಳೇ ಮನಸ್ಸಾಕ್ಷಿ ಕಾಪಾಡಿಕೊಳ್ಳಲು ಸಹಾಯಮಾಡಬೇಕು. ಈ ನಿರ್ಣಯ ಮಾಡಲು ಅವರು ಮೊದಲಾಗಿ ಐಯುಡಿ ಹೇಗೆ ಕೆಲಸಮಾಡುತ್ತದೆ ಮತ್ತು ಯಾವ ಬೈಬಲ್‌ ತತ್ವಗಳು ಇದಕ್ಕೆ ಅನ್ವಯವಾಗುತ್ತವೆ ಎಂದು ಚೆನ್ನಾಗಿ ಯೋಚಿಸಬೇಕು.

ಯೆಹೋವನು ಆದಾಮಹವ್ವರಿಗೆ ಮತ್ತು ಮುಂದೆ ನೋಹ ಹಾಗೂ ಅವನ ಕುಟುಂಬಕ್ಕೆ “ನೀವು ಬಹುಸಂತಾನವುಳ್ಳವರಾಗಿ ಹೆಚ್ಚಿರಿ” ಎಂದು ಆಜ್ಞೆಕೊಟ್ಟನು. (ಆದಿ. 1:28; 9:1) ಆದರೆ ಈ ಆಜ್ಞೆಯನ್ನು ಕ್ರೈಸ್ತರು ಪಾಲಿಸಲೇಬೇಕೆಂದು ಬೈಬಲಿನಲ್ಲಿ ಎಲ್ಲೂ ತಿಳಿಸಲಾಗಿಲ್ಲ. ಆದ್ದರಿಂದ ತಮಗೆ ಎಷ್ಟು ಮಕ್ಕಳಿರಬೇಕೆಂದು ಅಥವಾ ಮಕ್ಕಳನ್ನು ಯಾವಾಗ ಪಡೆಯಬೇಕೆಂದು ಯೋಜಿಸಲು ಯಾವುದಾದರೂ ಸಂತಾನ ನಿಯಂತ್ರಣ ವಿಧಾನ ಬಳಸಬೇಕಾ ಬೇಡವಾ ಎಂಬ ವಿಷಯದಲ್ಲಿ ಪ್ರತಿ ದಂಪತಿ ಸ್ವಂತ ನಿರ್ಣಯ ಮಾಡಬೇಕು. ಈ ನಿರ್ಣಯ ಮಾಡುವಾಗ ಅವರು ಯಾವೆಲ್ಲ ಅಂಶಗಳ ಬಗ್ಗೆ ಯೋಚಿಸಬೇಕು?

ಜನನ ನಿಯಂತ್ರಣದ ಬಗ್ಗೆ ಕ್ರೈಸ್ತರು ತೆಗೆದುಕೊಳ್ಳುವ ಯಾವುದೇ ನಿರ್ಧಾರ ಬೈಬಲ್‌ ತತ್ವಗಳ ಮೇಲೆ ಆಧರಿತವಾಗಿರಬೇಕು. ಆದ್ದರಿಂದ ಅವರು ಸಂತಾನ ನಿಯಂತ್ರಣ ಮಾಡಲು ಗರ್ಭಪಾತವನ್ನು ಯಾವತ್ತೂ ಒಂದು ವಿಧಾನವಾಗಿ ಬಳಸುವುದಿಲ್ಲ. ಅವರು ಬೇಕುಬೇಕೆಂದು ಗರ್ಭಪಾತ ಮಾಡಿಸಿಕೊಂಡರೆ, ಬೈಬಲ್‌ ಹೇಳುವಂತೆ ಜೀವಕ್ಕೆ ಗೌರವ ಕೊಡುತ್ತಿಲ್ಲ. ಏಕೆಂದರೆ ಮುಂದೆ ಒಂದು ಮಗುವಾಗಿ ಹುಟ್ಟುವ ಸಾಧ್ಯತೆಯಿದ್ದ ಜೀವವನ್ನು ಹೊಸಕಿ ಹಾಕುತ್ತಿದ್ದಾರೆ. (ವಿಮೋ. 20:13; 21:22, 23; ಕೀರ್ತ. 139:16; ಯೆರೆ. 1:5) ಆದರೆ ಐಯುಡಿ (ಇಂಟ್ರಾ-ಯೂಟರೈನ್‌ ಡಿವೈಸ್‌) ಬಳಸುವುದರ ಬಗ್ಗೆ ಏನು?

ಈ ವಿಷಯವನ್ನು 1979, ಮೇ 15​ರ ಕಾವಲಿನಬುರುಜು (ಇಂಗ್ಲಿಷ್‌) ಪುಟ 30-31​ರಲ್ಲಿ ಚರ್ಚಿಸಲಾಗಿತ್ತು. ಆ ಕಾಲದಲ್ಲಿ ಲಭ್ಯವಿದ್ದ ಹೆಚ್ಚಿನ ಐಯುಡಿಗಳನ್ನು ಪ್ಲಾಸ್ಟಿಕ್‌ನಿಂದ ತಯಾರಿಸಲಾಗುತ್ತಿತ್ತು ಮತ್ತು ಗರ್ಭಧಾರಣೆ ತಡೆಯಲಿಕ್ಕಾಗಿ ಅವನ್ನು ಗರ್ಭಾಶಯದೊಳಗೆ ಅಳವಡಿಸಲಾಗುತ್ತಿತ್ತು. ಇವು ಕೆಲಸಮಾಡುವ ವಿಧ ಇನ್ನೂ ಸ್ಪಷ್ಟವಾಗಿ ತಿಳಿದಿಲ್ಲವೆಂದು ಆ ಲೇಖನ ವಿವರಿಸಿತು. ಈ ಐಯುಡಿಗಳು, ಸ್ತ್ರೀಯ ಅಂಡಾಣುವನ್ನು ವೀರ್ಯಾಣು ತಲಪಿ ಅವನ್ನು ಫಲವಂತ ಆಗುವುದರಿಂದ ತಡೆಯುತ್ತವೆಂದು ಅನೇಕ ವಿಜ್ಞಾನಿಗಳು ಹೇಳುತ್ತಿದ್ದರು. ಅಂಡಾಣು ಫಲವಂತ ಆಗದೇ ಇರುವಾಗ ಒಂದು ಹೊಸ ಜೀವ ಉತ್ಪತ್ತಿಯೇ ಆಗುವುದಿಲ್ಲ.

ಆದರೆ ಐಯುಡಿ ಬಳಸಿದ ನಂತರವೂ ಒಂದೊಂದು ಸಂದರ್ಭದಲ್ಲಿ ಅಂಡಾಣು ಫಲವಂತ ಆದದ್ದು ಇದೆ ಎನ್ನುವುದಕ್ಕೆ ಪುರಾವೆ ಇತ್ತು. ಫಲವಂತ ಆಗಿರುವ ಅಂಡಾಣು ಫೆಲೋಪಿಯನ್‌ ನಾಳದಲ್ಲೇ ಅಂದರೆ ಗರ್ಭಾಶಯದ ಹೊರಗೆ ಬೆಳೆಯಬಹುದು ಅಥವಾ ಅಲ್ಲಿಂದ ಅದು ಗರ್ಭಾಶಯಕ್ಕೆ ಹೋಗಿ ಬೆಳೆಯಬಹುದು. ಫಲಿತ ಅಂಡಾಣು ಒಂದುವೇಳೆ ಗರ್ಭಾಶಯವನ್ನು ತಲಪಿದರೆ ಅದು ಗರ್ಭಗೋಡೆಗೆ ಅಂಟಿಕೊಳ್ಳದಂತೆ ಐಯುಡಿ ತಡೆಯುತ್ತದೆ. ಹೀಗೆ ಆ ಗರ್ಭಾವಸ್ಥೆ ಅಂತ್ಯವಾಗುತ್ತದೆ. ಇದು ಒಂದು ರೀತಿಯ ಗರ್ಭಪಾತವೇ. ಆ ಲೇಖನದ ಕೊನೆಯಲ್ಲಿ ಹೀಗೆ ಹೇಳಲಾಯಿತು: “ಐಯುಡಿ ಬಳಸುವುದು ಸರಿನಾ ತಪ್ಪಾ ಎಂದು ಯೋಚಿಸುತ್ತಿರುವ ಯಥಾರ್ಥ ಕ್ರೈಸ್ತನು/ಳು ಈ ಮಾಹಿತಿಯನ್ನು ಮತ್ತು ಜೀವದ ಪಾವಿತ್ರ್ಯತೆಗೆ ಗೌರವ ತೋರಿಸಬೇಕೆಂಬ ಬೈಬಲಿನ ಮಾತನ್ನು ಗಂಭೀರವಾಗಿ ತೂಗಿನೋಡಬೇಕು.”—ಕೀರ್ತ. 36:9.

1979​ರಲ್ಲಿ ಈ ಲೇಖನ ಪ್ರಕಟವಾದ ನಂತರ ವೈದ್ಯಕೀಯ ಹಾಗೂ ವಿಜ್ಞಾನ ಕ್ಷೇತ್ರದಲ್ಲಿ ತುಂಬ ಅಭಿವೃದ್ಧಿಯಾಗಿದೆ.

ಈಗ ಇನ್ನೆರಡು ವಿಧದ ಐಯುಡಿ ಲಭ್ಯವಿದೆ. ಒಂದು ತಾಮ್ರದ ಐಯುಡಿ. ಇದು ದಶಕಗಳ ಹಿಂದೆ ಲಭ್ಯವಾಗಿತ್ತು. ಇನ್ನೊಂದು, ಹಾರ್ಮೋನನ್ನು ಬಿಡುಗಡೆ ಮಾಡುವಂಥದ್ದು. ಇದು ಕೆಲವು ವರ್ಷಗಳ ನಂತರ ಮಾರುಕಟ್ಟೆಗೆ ಬಂತು. ಈ ಎರಡು ವಿಧದ ಐಯುಡಿಗಳು ಹೇಗೆ ಕೆಲಸಮಾಡುತ್ತವೆ?

ತಾಮ್ರ (ಕಾಪರ್‌ ಟಿ): ಈಗಾಗಲೇ ತಿಳಿಸಲಾಗಿರುವಂತೆ ಐಯುಡಿಗಳು, ವೀರ್ಯಾಣು ಗರ್ಭಾಶಯವನ್ನು ದಾಟಿ ಅಂಡಾಣುವಿಗೆ ತಲಪುವುದನ್ನು ಕಷ್ಟಕರವಾಗಿ ಮಾಡುತ್ತವೆ. ಅಲ್ಲದೆ, ತಾಮ್ರದ ಐಯುಡಿಗಳಲ್ಲಿರುವ ತಾಮ್ರವು ವೀರ್ಯಾಣುವಿಗೆ ವಿಷದ ಹಾಗಿರುತ್ತದೆಂದು ತೋರುತ್ತದೆ, ಒಂದು ರೀತಿಯಲ್ಲಿ ವೀರ್ಯಾಣುನಾಶಕದಂತೆ ಇದೆ. * ಅಷ್ಟುಮಾತ್ರವಲ್ಲ, ಇಂಥ ಐಯುಡಿಗಳು ಗರ್ಭಗೋಡೆಯಲ್ಲೇ ಬದಲಾವಣೆಗಳನ್ನು ಮಾಡುತ್ತವೆ.

ಹಾರ್ಮೋನ್‌: ಇದು ಇನ್ನೊಂದು ವಿಧದ ಐಯುಡಿ. ಇದರಲ್ಲಿ ಗರ್ಭನಿರೋಧಕ ಮಾತ್ರೆಗಳಲ್ಲಿರುವಂಥ ರೀತಿಯ ಒಂದು ಹಾರ್ಮೋನ್‌ ಇದೆ. ಈ ಐಯುಡಿಗಳು ಹಳೇಕಾಲದ ಐಯುಡಿಗಳಂತೆಯೇ ಕೆಲಸಮಾಡುತ್ತವೆ ಆದರೆ ಅದರ ಜೊತೆಗೆ ಅವು ಗರ್ಭಾಶಯದಲ್ಲಿ ಒಂದು ಹಾರ್ಮೋನನ್ನು ಬಿಡುಗಡೆಮಾಡುತ್ತವೆ. ಇದರಿಂದಾಗಿ ಕೆಲವು ಮಹಿಳೆಯರಲ್ಲಿ ಅಂಡಾಣು ಬಿಡುಗಡೆ ಆಗುವುದಿಲ್ಲ. ಅಂಡಾಣುವೇ ಬಿಡುಗಡೆ ಆಗದಿದ್ದರೆ ಅದನ್ನು ಫಲವಂತ ಮಾಡುವ ಸನ್ನಿವೇಶವೇ ಬರುವುದಿಲ್ಲ. ಈ ಐಯುಡಿಗಳು ಸಹ ಗರ್ಭಗೋಡೆಯನ್ನು ತೆಳುವಾಗಿಸುತ್ತವೆ. * ಅಲ್ಲದೆ, ಗರ್ಭಕಂಠದಲ್ಲಿರುವ ಲೋಳೆಯನ್ನು ದಟ್ಟಗೊಳಿಸುತ್ತವೆ. ಇದು ಯೋನಿಯಿಂದ ಗರ್ಭಾಶಯಕ್ಕೆ ವೀರ್ಯಾಣು ದಾಟಿಹೋಗುವುದನ್ನು ತಡೆಯುತ್ತದೆ.

ಈಗಾಗಲೇ ತಿಳಿಸಲಾಗಿರುವಂತೆ ಈ ಎರಡೂ ವಿಧದ ಐಯುಡಿಗಳು ಗರ್ಭಗೋಡೆಯಲ್ಲಿ ಬದಲಾವಣೆಗಳನ್ನು ಮಾಡುತ್ತವೆಂದು ತೋರುತ್ತದೆ. ಇದರರ್ಥ, ಒಬ್ಬ ಮಹಿಳೆಯಲ್ಲಿ ಅಂಡಾಣು ಉತ್ಪತ್ತಿಯಾಗಿ ಫಲವಂತವಾಗಿ ಅದು ಗರ್ಭಾಶಯದೊಳಗೆ ಹೋಗಬಹುದಾದರೂ ಗರ್ಭಗೋಡೆ ತೆಳುವಾಗಿ ಬಿಟ್ಟಿರುವುದರಿಂದ ಅಲ್ಲಿ ಅಂಟಿಕೊಳ್ಳಲು ಆಗುವುದಿಲ್ಲ. ಹೀಗೆ ಗರ್ಭಧಾರಣೆಯು ಆರಂಭದ ಹಂತದಲ್ಲೇ ಕೊನೆಗೊಳ್ಳುತ್ತದೆ. ಆದರೆ ಇದಾಗುವುದು ಅಪರೂಪ ಮತ್ತು ಗರ್ಭನಿರೋಧಕ ಮಾತ್ರೆಗಳನ್ನು ತೆಗೆದುಕೊಂಡಾಗಲೂ ಕೆಲವೊಮ್ಮೆ ಹೀಗಾಗುತ್ತದೆ ಎನ್ನುವುದು ವಿಜ್ಞಾನಿಗಳ ಅಭಿಪ್ರಾಯ.

ಆದ್ದರಿಂದ ತಾಮ್ರದ ಅಥವಾ ಹಾರ್ಮೋನ್‌ ಐಯುಡಿಗಳಿಂದಾಗಿ ಅಂಡಾಣು ಫಲವಂತ ಆಗುವುದೇ ಇಲ್ಲವೆಂದು ಖಡಾಖಂಡಿತವಾಗಿ ಹೇಳಲು ಆಗುವುದಿಲ್ಲ. ಆದರೆ ಅಂಥ ಐಯುಡಿಗಳು ಮೇಲೆ ತಿಳಿಸಲಾದ ವಿಧಗಳಲ್ಲಿ ಕೆಲಸಮಾಡಿ ಅಂಡಾಣು ಫಲವಂತ ಆಗುವುದನ್ನು ತಡೆಯುವುದರಿಂದ ಒಬ್ಬ ಸ್ತ್ರೀ ಗರ್ಭವತಿ ಆಗುವುದು ಅಪರೂಪವೆಂದು ವೈಜ್ಞಾನಿಕ ಸಂಶೋಧನೆ ತೋರಿಸಿಕೊಟ್ಟಿದೆ.

ಐಯುಡಿ ಬಳಸಬೇಕೆಂದಿರುವ ಕ್ರೈಸ್ತ ದಂಪತಿ ಇದರ ಬಗ್ಗೆ ತಮ್ಮ ಡಾಕ್ಟರರೊಟ್ಟಿಗೆ ಮಾತಾಡಬಹುದು. ಅವರಿರುವ ಸ್ಥಳದಲ್ಲಿ ಯಾವ ಐಯುಡಿಗಳು ಲಭ್ಯ ಇವೆ ಮತ್ತು ಅವುಗಳಿಂದ ಹೆಂಡತಿಗೆ ಯಾವ ಪ್ರಯೋಜನಗಳಿವೆ, ಯಾವ ಅಪಾಯಗಳಿವೆ ಎಂದೂ ಡಾಕ್ಟರ್‌ ವಿವರಿಸಬಹುದು. ಆದರೆ ತಾವೇನು ಮಾಡಬೇಕೆಂಬ ನಿರ್ಣಯವನ್ನು ಅವರಿಗಾಗಿ ಡಾಕ್ಟರಾಗಲಿ ಬೇರೆಯವರಾಗಲಿ ಮಾಡುವಂತೆ ನಿರೀಕ್ಷಿಸಬಾರದು, ಬಿಡಲೂ ಬಾರದು. (ರೋಮ. 14:12; ಗಲಾ. 6:4, 5) ಈ ನಿರ್ಣಯವನ್ನು ಗಂಡಹೆಂಡತಿಯೇ ಮಾಡಬೇಕು. ಇಬ್ಬರೂ ಸೇರಿ ಈ ನಿರ್ಣಯ ಮಾಡಬೇಕು. ದೇವರನ್ನು ಸಂತೋಷಪಡಿಸುವುದು ಮತ್ತು ಶುದ್ಧ ಮನಸ್ಸಾಕ್ಷಿ ಕಾಪಾಡಿಕೊಳ್ಳುವುದೇ ಅವರ ಉದ್ದೇಶ ಆಗಿರಬೇಕು.—1 ತಿಮೊಥೆಯ 1:18, 19; 2 ತಿಮೊಥೆಯ 1:3​ನ್ನು ಹೋಲಿಸಿ.

^ ಪ್ಯಾರ. 4 ಇಂಗ್ಲೆಂಡಿನ ನ್ಯಾಷನಲ್‌ ಹೆಲ್ತ್‌ ಸರ್ವಿಸ್‌ ಹೀಗೆ ವರದಿಸುತ್ತದೆ: “ಹೆಚ್ಚು ತಾಮ್ರವಿರುವ ಐಯುಡಿಗಳು 99%ಕ್ಕಿಂತಲೂ ಹೆಚ್ಚು ಪರಿಣಾಮಕಾರಿ. ಇದರರ್ಥ ಒಂದು ವರ್ಷದಲ್ಲಿ ಈ ಐಯುಡಿ ಬಳಸುವ 100 ಮಹಿಳೆಯರಲ್ಲಿ ಒಬ್ಬರು ಸಹ ಗರ್ಭವತಿ ಆಗುವ ಸಾಧ್ಯತೆ ತೀರ ಕಡಿಮೆ. ಆದರೆ ಕಡಿಮೆ ತಾಮ್ರವಿರುವ ಐಯುಡಿಗಳು ಅಷ್ಟು ಪರಿಣಾಮಕಾರಿ ಅಲ್ಲ.”

^ ಪ್ಯಾರ. 5 ಹಾರ್ಮೋನ್‌ ಇರುವ ಐಯುಡಿಗಳು ಗರ್ಭಗೋಡೆಯನ್ನು ತೆಳುಗೊಳಿಸುವುದರಿಂದ ಡಾಕ್ಟರರು ಕೆಲವೊಮ್ಮೆ ಇದನ್ನು ವಿವಾಹಿತ ಹಾಗೂ ಅವಿವಾಹಿತ ಸ್ತ್ರೀಯರಿಗೆ ಮುಟ್ಟಿನ ಸಮಯದಲ್ಲಿನ ವಿಪರೀತ ರಕ್ತಸ್ರಾವ ನಿಯಂತ್ರಿಸಲಿಕ್ಕಾಗಿ ಶಿಫಾರಸ್ಸು ಮಾಡುತ್ತಾರೆ.