ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮಕ್ಕಳೇ, “ನಿಮ್ಮ ಸ್ವಂತ ರಕ್ಷಣೆಯನ್ನು . . . ಸಾಧಿಸಿಕೊಳ್ಳುತ್ತಾ ಇರಿ”

ಮಕ್ಕಳೇ, “ನಿಮ್ಮ ಸ್ವಂತ ರಕ್ಷಣೆಯನ್ನು . . . ಸಾಧಿಸಿಕೊಳ್ಳುತ್ತಾ ಇರಿ”

“ನೀವು ಯಾವಾಗಲೂ ವಿಧೇಯರಾಗಿದ್ದಂತೆಯೇ . . . ನಿಮ್ಮ ಸ್ವಂತ ರಕ್ಷಣೆಯನ್ನು ಭಯದಿಂದಲೂ ನಡುಕದಿಂದಲೂ ಸಾಧಿಸಿಕೊಳ್ಳುತ್ತಾ ಇರಿ.” —ಫಿಲಿ. 2:12.

ಗೀತೆಗಳು: 41, 89

1. ದೀಕ್ಷಾಸ್ನಾನ ಪಡೆದುಕೊಳ್ಳುವುದು ಯಾಕಷ್ಟು ಪ್ರಾಮುಖ್ಯ? (ಲೇಖನದ ಆರಂಭದ ಚಿತ್ರ ನೋಡಿ.)

ಪ್ರತಿ ವರ್ಷ ಸಾವಿರಾರು ಬೈಬಲ್‌ ವಿದ್ಯಾರ್ಥಿಗಳು ದೀಕ್ಷಾಸ್ನಾನ ಪಡೆದುಕೊಳ್ಳುತ್ತಿದ್ದಾರೆ. ಇವರಲ್ಲಿ ಹೆಚ್ಚಿನವರು ಯುವಜನರು, ಹದಿವಯಸ್ಕರು ಅಥವಾ ಇನ್ನೂ ಚಿಕ್ಕವರು. ಇವರು ಯೆಹೋವನ ಸಾಕ್ಷಿಗಳ ಕುಟುಂಬದಲ್ಲಿ ಬೆಳೆದವರಾಗಿರಬಹುದು. ಇದು ನಿಮ್ಮ ವಿಷಯದಲ್ಲೂ ಸತ್ಯನಾ? ಹೌದಾದರೆ, ನಿಮ್ಮನ್ನು ಖಂಡಿತ ಮೆಚ್ಚಿಕೊಳ್ಳಬೇಕು. ಪ್ರತಿಯೊಬ್ಬ ಕ್ರೈಸ್ತನು ದೀಕ್ಷಾಸ್ನಾನ ತೆಗೆದುಕೊಳ್ಳಬೇಕು. ಇದು ರಕ್ಷಣೆ ಹೊಂದಲು ಪ್ರಾಮುಖ್ಯ ಹೆಜ್ಜೆಯಾಗಿದೆ.—ಮತ್ತಾ. 28:19, 20; 1 ಪೇತ್ರ 3:21.

2. ಯೆಹೋವನಿಗೆ ನಿಮ್ಮನ್ನು ಸಮರ್ಪಿಸಿಕೊಳ್ಳಲು ನೀವು ಯಾಕೆ ಹೆದರಬಾರದು?

2 ನೀವು ದೀಕ್ಷಾಸ್ನಾನ ಪಡೆದುಕೊಂಡಾಗ ಯೆಹೋವನಿಂದ ನಿಮಗೆ ಅನೇಕ ಆಶೀರ್ವಾದಗಳು ಸಿಕ್ಕಿದವು. ಅದರ ಜೊತೆಗೆ ಕೆಲವು ಜವಾಬ್ದಾರಿಗಳೂ ಬಂದವು. ಯಾವ ಜವಾಬ್ದಾರಿಗಳು? ನಿಮ್ಮ ದೀಕ್ಷಾಸ್ನಾನದ ಭಾಷಣವನ್ನು ಕೊಟ್ಟ ಸಹೋದರನು, “ಯೇಸು ಕ್ರಿಸ್ತನ ಯಜ್ಞದಲ್ಲಿ ನಂಬಿಕೆಯಿಟ್ಟು ನೀವು ನಿಮ್ಮ ಪಾಪಗಳಿಗೆ ಪಶ್ಚಾತ್ತಾಪಪಟ್ಟು ಯೆಹೋವನ ಚಿತ್ತವನ್ನು ಮಾಡಲು ನಿಮ್ಮನ್ನೇ ಆತನಿಗೆ ಸಮರ್ಪಿಸಿಕೊಂಡಿದ್ದೀರಾ?” ಎಂದು ಕೇಳಿದರು. ಅದಕ್ಕೆ ನೀವು “ಹೌದು” ಎಂದು ಉತ್ತರ ಕೊಟ್ಟಿರಿ. ಯೆಹೋವನನ್ನು ಪ್ರೀತಿಸುತ್ತೇನೆ, ಆತನ ಸೇವೆಗೆ ಜೀವನದಲ್ಲಿ ಅತಿ ಪ್ರಾಮುಖ್ಯ ಸ್ಥಾನ ಕೊಡುತ್ತೇನೆ ಎಂದು ಮಾತು ಕೊಟ್ಟಿರಿ. ಆದರೆ ‘ಯಾಕಪ್ಪಾ ಇಂಥ ಮಾತು ಕೊಟ್ಟೆ’ ಎಂದು ಈಗ ಯೋಚಿಸಬೇಕಾ? ಖಂಡಿತ ಇಲ್ಲ! ಯೆಹೋವನು ನಿಮ್ಮ ಕೈಹಿಡಿದು ನಡೆಸುವಂತೆ ಬಿಡುವುದರಿಂದ ನಿಮಗೆ ಸಂತೋಷ ಸಿಕ್ಕೇ ಸಿಗುತ್ತೆ. ಯೆಹೋವನನ್ನು ತಿಳಿಯದ ಜನರ ಬಗ್ಗೆ ಒಂದು ಕ್ಷಣ ಯೋಚಿಸಿ ನೋಡಿ. ಅವರು ಸೈತಾನನ ಲೋಕದ ಭಾಗವಾಗಿದ್ದಾರೆ. ಸೈತಾನನಿಗೆ ಅವರ ಬಗ್ಗೆ ಅಥವಾ ನಿಮ್ಮ ಬಗ್ಗೆ ಎಳ್ಳಷ್ಟು ಚಿಂತೆಯಿಲ್ಲ. ನೀವು ಯೆಹೋವನ ಕೈಯನ್ನು ತಳ್ಳಿಬಿಟ್ಟು ಸೈತಾನನ ಕೈ ಹಿಡಿದರೆ ನಿತ್ಯಜೀವದ ನಿರೀಕ್ಷೆಯನ್ನು ಕಳೆದುಕೊಳ್ಳುತ್ತೀರಿ. ಇದರಿಂದ ಅವನಿಗೆ ಖುಷಿಯೋ ಖುಷಿ.

3. ನಿಮ್ಮನ್ನು ಯೆಹೋವನಿಗೆ ಸಮರ್ಪಿಸಿಕೊಂಡದ್ದರಿಂದ ಆತನು ನಿಮ್ಮನ್ನು ಹೇಗೆಲ್ಲಾ ಆಶೀರ್ವದಿಸಿದ್ದಾನೆ?

3 ನಿಮ್ಮನ್ನು ಯೆಹೋವನಿಗೆ ಸಮರ್ಪಿಸಿಕೊಂಡು ದೀಕ್ಷಾಸ್ನಾನ ಪಡೆದುಕೊಂಡಿರುವುದರಿಂದ ಆತನು ನಿಮ್ಮನ್ನು ಹೇಗೆಲ್ಲಾ ಆಶೀರ್ವದಿಸಿದ್ದಾನೆ ಎಂದು ಯೋಚಿಸಿ ನೋಡಿ. ನೀವು ನಿಮ್ಮನ್ನೇ ಯೆಹೋವನಿಗೆ ಕೊಟ್ಟಿರುವುದರಿಂದ, “ಯೆಹೋವನು ನನಗಿದ್ದಾನೆ; ಭಯಪಡೆನು. ಮನುಷ್ಯನು ನನಗೆ ಏನು ಮಾಡಾನು?” ಎಂದು ಧೈರ್ಯದಿಂದ ಹೇಳಬಲ್ಲಿರಿ. (ಕೀರ್ತ. 118:6) ಯೆಹೋವನ ಪಕ್ಷದಲ್ಲಿರುವುದಕ್ಕಿಂತ ದೊಡ್ಡ ಗೌರವ ಬೇರೊಂದಿಲ್ಲ. ಯೆಹೋವನಿಗೂ ನಿಮ್ಮ ಬಗ್ಗೆ ತುಂಬ ಹೆಮ್ಮೆ ಅನಿಸುತ್ತದೆ.

ವೈಯಕ್ತಿಕ ಜವಾಬ್ದಾರಿ

4, 5. (ಎ) ಸಮರ್ಪಣೆ ಒಬ್ಬರ ವೈಯಕ್ತಿಕ ಜವಾಬ್ದಾರಿಯಾಗಿದೆ ಯಾಕೆ? (ಬಿ) ಎಲ್ಲಾ ವಯಸ್ಸಿನ ಕ್ರೈಸ್ತರು ಯಾವ ಸವಾಲುಗಳನ್ನು ಎದುರಿಸುತ್ತಾರೆ?

4 ಯೆಹೋವನೊಟ್ಟಿಗೆ ನಿಮಗಿರುವ ಸಂಬಂಧವು ತಂದೆಯಿಂದ ಮಕ್ಕಳಿಗೆ ಸಿಗುವ ಪಿತ್ರಾರ್ಜಿತ ಆಸ್ತಿಯಂತೆ ಇಲ್ಲ. ನೀವು ಅಪ್ಪಅಮ್ಮನ ಜೊತೆಯಲ್ಲೇ ಇದ್ದರೂ ಯೆಹೋವನೊಂದಿಗೆ ಒಳ್ಳೇ ಸಂಬಂಧವನ್ನು ನೀವೇ ಬೆಳೆಸಿಕೊಳ್ಳಬೇಕು, ಅದು ನಿಮ್ಮ ವೈಯಕ್ತಿಕ ಜವಾಬ್ದಾರಿ ಆಗಿದೆ. ಇದನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ಯಾಕೆ ಪ್ರಾಮುಖ್ಯ? ಭವಿಷ್ಯದಲ್ಲಿ ನಮ್ಮ ನಂಬಿಕೆಗೆ ಯಾವ ರೀತಿಯ ಪರೀಕ್ಷೆ ಎದುರಾಗುತ್ತದೆ ಎಂದು ನಮ್ಮಲ್ಲಿ ಯಾರೂ ಹೇಳಲಿಕ್ಕಾಗಲ್ಲ. ಉದಾಹರಣೆಗೆ, ನೀವು ಹದಿಪ್ರಾಯಕ್ಕೆ ಬರುವ ಮುಂಚೆಯೇ ದೀಕ್ಷಾಸ್ನಾನ ಪಡೆದುಕೊಂಡಿರಬಹುದು. ಆದರೆ ಈಗ ಹದಿಪ್ರಾಯಕ್ಕೆ ಬಂದಿರುವ ನಿಮ್ಮಲ್ಲಿ ಹೊಸ ಭಾವನೆಗಳು ಹುಟ್ಟಿಕೊಂಡಿರಬಹುದು, ಹೊಸ ಸಮಸ್ಯೆಗಳು ಎದುರಾಗುತ್ತಿರಬಹುದು. ಹದಿಪ್ರಾಯದ ಒಬ್ಬ ಹುಡುಗಿ ಹೇಳಿದ್ದು: “ಒಂದು ಚಿಕ್ಕ ಹುಡುಗ ಅಥವಾ ಹುಡುಗಿ ಯೆಹೋವನ ಸಾಕ್ಷಿಯಾಗಿರುವುದರಿಂದ ಶಾಲೆಯಲ್ಲಿ ಸಿಕ್ಕಿದ ಹುಟ್ಟುಹಬ್ಬದ ಕೇಕ್‌ ತಿನ್ನುವ ಹಾಗಿಲ್ಲ ಎಂದು ಬೇಸರಪಡದಿರಬಹುದು. ಆದರೆ ಸ್ವಲ್ಪ ವರ್ಷಗಳಾದ ಮೇಲೆ ಅವನಿಗೆ ಅಥವಾ ಅವಳಿಗೆ ಸೆಕ್ಸ್‌ ನಡೆಸಬೇಕೆಂಬ ಆಸೆ ಬಲವಾದಾಗ ಯೆಹೋವನ ನಿಯಮಗಳಿಗೆ ವಿಧೇಯರಾಗುವುದರಿಂದ ತನಗೇ ಒಳ್ಳೇದಾಗುತ್ತದೆ ಎಂದು ಮನವರಿಕೆ ಮಾಡಿಕೊಂಡಿರುವುದು ತುಂಬ ಮುಖ್ಯ.”

5 ಯುವ ಜನರಿಗೆ ಮಾತ್ರ ಹೊಸ ಸವಾಲುಗಳು ಎದುರಾಗುತ್ತವೆ ಎಂದೇನಿಲ್ಲ. ದೊಡ್ಡವರಾದ ಮೇಲೆ ದೀಕ್ಷಾಸ್ನಾನ ಪಡೆದುಕೊಳ್ಳುವವರಿಗೆ ಸಹ ಅವರು ನೆನಸಿರದ ರೀತಿಗಳಲ್ಲಿ ಪರೀಕ್ಷೆಗಳು ಎದುರಾಗುತ್ತವೆ. ಅವರ ವಿವಾಹ ಜೀವನದಲ್ಲಿ, ಕೆಲಸದ ಸ್ಥಳದಲ್ಲಿ ಸಮಸ್ಯೆಗಳು ಎದುರಾಗಬಹುದು ಅಥವಾ ಆರೋಗ್ಯ ಹಾಳಾಗಬಹುದು. ನಮ್ಮ ವಯಸ್ಸು ಅದೆಷ್ಟೇ ಇರಲಿ, ನಮಗೆ ಎದುರಾಗುವ ಯಾವುದೇ ಸನ್ನಿವೇಶದಲ್ಲಿ ನಾವು ಯೆಹೋವನಿಗೆ ನಂಬಿಗಸ್ತರಾಗಿರಬೇಕು.—ಯಾಕೋ. 1:12-14.

6. (ಎ) ಯೆಹೋವನಿಗೆ ನೀವು ಯಾವುದೇ ಷರತ್ತಿಲ್ಲದೆ ಮಾತು ಕೊಟ್ಟಿದ್ದೀರಿ ಎನ್ನುವುದರ ಅರ್ಥವೇನು? (ಬಿ) ಫಿಲಿಪ್ಪಿ 4:11-13​ರ ವರೆಗಿನ ವಚನಗಳಿಂದ ನೀವೇನು ಕಲಿಯಬಹುದು?

6 ಯಾವುದೇ ಸನ್ನಿವೇಶ ಎದುರಾದರೂ ನೀವು ನಂಬಿಗಸ್ತರಾಗಿರಲು ಸಹಾಯಮಾಡುವ ಒಂದು ಅಂಶ ಯಾವುದೆಂದರೆ, ನೀವು ಯೆಹೋವನಿಗೆ ಯಾವುದೇ ಷರತ್ತಿಲ್ಲದೆ ಮಾತು ಕೊಟ್ಟಿದ್ದೀರಿ ಎಂದು ನೆನಪಿನಲ್ಲಿಡುವುದು. ಅಂದರೆ ಅದೇನೇ ಆದರೂ, ನಿಮ್ಮ ಸ್ನೇಹಿತರು ಅಥವಾ ಹೆತ್ತವರು ಯೆಹೋವನನ್ನು ಆರಾಧಿಸುವುದನ್ನು ಬಿಟ್ಟರೂ ನೀವು ಯೆಹೋವನನ್ನು ಬಿಡುವುದಿಲ್ಲ ಎಂದು ಮಾತು ಕೊಟ್ಟಿದ್ದೀರಿ. (ಕೀರ್ತ. 27:10) ಆ ಮಾತನ್ನು ಎಲ್ಲಾ ಸನ್ನಿವೇಶಗಳಲ್ಲೂ ಕಾಪಾಡಿಕೊಳ್ಳಲು ಯೆಹೋವನ ಸಹಾಯಕ್ಕಾಗಿ ಬೇಡಿಕೊಳ್ಳಿ.—ಫಿಲಿಪ್ಪಿ 4:11-13 ಓದಿ.

7. ನಿಮ್ಮ ಸ್ವಂತ ರಕ್ಷಣೆಯನ್ನು “ಭಯದಿಂದಲೂ ನಡುಕದಿಂದಲೂ” ಸಾಧಿಸಿಕೊಳ್ಳುವುದು ಅನ್ನುವುದರ ಅರ್ಥವೇನು?

7 ಯೆಹೋವನು ನಿಮ್ಮನ್ನು ತನ್ನ ಸ್ನೇಹಿತರನ್ನಾಗಿ ಮಾಡಿಕೊಳ್ಳಲು ಬಯಸುತ್ತಾನೆ. ಆದರೆ ಆ ಸ್ನೇಹವನ್ನು ಬಲವಾಗಿ ಇಟ್ಟುಕೊಳ್ಳಲು ಮತ್ತು ನಿಮ್ಮ ಸ್ವಂತ ರಕ್ಷಣೆಯನ್ನು ಸಾಧಿಸಿಕೊಳ್ಳಲು ಪ್ರಯತ್ನ ಹಾಕಬೇಕು. ಫಿಲಿಪ್ಪಿ 2:12 ಹೇಳುವುದನ್ನು ಗಮನಿಸಿ: “ನಿಮ್ಮ ಸ್ವಂತ ರಕ್ಷಣೆಯನ್ನು ಭಯದಿಂದಲೂ ನಡುಕದಿಂದಲೂ ಸಾಧಿಸಿಕೊಳ್ಳುತ್ತಾ ಇರಿ.” ಇದರರ್ಥ ಏನೆಂದರೆ, ಅದ್ಯಾವುದೇ ಸವಾಲು ಎದುರಾದರೂ ಯೆಹೋವನಿಗೆ ಹತ್ತಿರವಾಗಿ ಉಳಿಯುವುದು ಹೇಗೆ, ನಂಬಿಗಸ್ತರಾಗಿ ಇರುವುದು ಹೇಗೆ ಎಂದು ನಾವು ಆಲೋಚಿಸಿ ತಿಳಿದುಕೊಳ್ಳಬೇಕು. ‘ಅದೇನು ದೊಡ್ಡ ಸಮಸ್ಯೆ ಆಗಲ್ಲ’ ಎಂದು ಸಲೀಸಾಗಿ ತೆಗೆದುಕೊಳ್ಳಲು ಆಗುವುದಿಲ್ಲ. ಅನೇಕ ವರ್ಷ ದೇವರ ಸೇವೆ ಮಾಡಿದವರು ಸಹ ಯೆಹೋವನಿಗೆ ನಂಬಿಗಸ್ತರಾಗಿ ಉಳಿಯಲಿಲ್ಲ ಅನ್ನುವುದನ್ನು ಮರೆಯಬೇಡಿ. ಹಾಗಾದರೆ ನಿಮ್ಮ ಸ್ವಂತ ರಕ್ಷಣೆಯನ್ನು ಸಾಧಿಸಿಕೊಳ್ಳಲು ಯಾವ ವಿಷಯಗಳು ಸಹಾಯ ಮಾಡುತ್ತವೆ?

ಬೈಬಲ್‌ ಅಧ್ಯಯನ ಪ್ರಾಮುಖ್ಯ

8. (ಎ) ನಾವು ಬೈಬಲ್‌ ಅಧ್ಯಯನವನ್ನು ಹೇಗೆ ಮಾಡಬೇಕು? (ಬಿ) ಇದು ಯಾಕೆ ಪ್ರಾಮುಖ್ಯ?

8 ನಾವು ಯೆಹೋವನ ಸ್ನೇಹಿತರಾಗಿರಬೇಕಾದರೆ ಆತನು ಹೇಳುವ ವಿಷಯಕ್ಕೆ ಕಿವಿಗೊಡಬೇಕು, ನಾವೂ ಆತನ ಜೊತೆ ಮಾತಾಡಬೇಕು. ನಾವು ಯೆಹೋವನು ಹೇಳುವುದನ್ನು ಕೇಳಿಸಿಕೊಳ್ಳುವ ಪ್ರಮುಖ ವಿಧ ಬೈಬಲ್‌ ಅಧ್ಯಯನ ಮಾಡುವ ಮೂಲಕ. ಅಂದರೆ ದೇವರ ವಾಕ್ಯವನ್ನು ಮತ್ತು ಬೈಬಲ್‌ ಆಧಾರಿತ ಪ್ರಕಾಶನಗಳನ್ನು ನಾವು ಓದಿ ಧ್ಯಾನಿಸಬೇಕು. ಆದರೆ ಶಾಲಾ ಪರೀಕ್ಷೆಗೆ ಬಾಯಿಪಾಠ ಮಾಡುವ ಹಾಗೆ ಬೈಬಲ್‌ ಅಧ್ಯಯನ ಮಾಡಬಾರದು. ಅದು ಒಂದು ಪ್ರವಾಸಕ್ಕೆ ಹೋದಂತೆ ಇರಬೇಕು. ಆಗ ನೀವು ಯೆಹೋವನ ಬಗ್ಗೆ ಹೊಸ ಹೊಸ ವಿಷಯಗಳನ್ನು ಕಂಡುಹಿಡಿಯಲು ಸಾಧ್ಯವಾಗುತ್ತದೆ. ಹೀಗೆ ಮಾಡುವಲ್ಲಿ ದೇವರು ನಿಮಗೆ ಹತ್ತಿರವಾಗುತ್ತಾನೆ ಮತ್ತು ನೀವೂ ಆತನಿಗೆ ಹತ್ತಿರವಾಗುತ್ತೀರಿ.—ಯಾಕೋ. 4:8.

ಯೆಹೋವನ ಜೊತೆ ನಿಮ್ಮ ಮಾತುಕತೆ ಹೇಗಿದೆ? (ಪ್ಯಾರ 8-11 ನೋಡಿ)

9. ಬೈಬಲ್‌ ಅಧ್ಯಯನವನ್ನು ಚೆನ್ನಾಗಿ ಮಾಡಲು ಯಾವ ಸಾಧನಗಳು ನಿಮಗೆ ಸಹಾಯ ಮಾಡಿವೆ?

9 ನೀವು ಬೈಬಲ್‌ ಅಧ್ಯಯನವನ್ನು ಚೆನ್ನಾಗಿ ಮಾಡಲಿಕ್ಕಾಗಿ ಯೆಹೋವನ ಸಂಘಟನೆ ಅನೇಕ ಸಾಧನಗಳನ್ನು ಕೊಟ್ಟಿದೆ. ಉದಾಹರಣೆಗೆ, ನಮ್ಮ ವೆಬ್‌ಸೈಟಲ್ಲಿ “ಟೀನೇಜರ್ಸ್‌” ಎಂಬ ವಿಭಾಗದಲ್ಲಿ “ಬೈಬಲ್‌ ಸ್ಟಡಿ ಆ್ಯಕ್ಟಿವಿಟೀಸ್‌” ಎಂಬ ಸರಣಿ ಇದೆ. ಬೈಬಲಿನಲ್ಲಿರುವ ವೃತ್ತಾಂತಗಳಿಂದ ನೀವು ಕಲಿಯುವ ಅಂಶಗಳನ್ನು ಅನ್ವಯಿಸಿಕೊಳ್ಳಲು ಇದು ಸಹಾಯ ಮಾಡುತ್ತದೆ. ವೆಬ್‌ಸೈಟಲ್ಲಿ “ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ?” ಪುಸ್ತಕದ ಸ್ಟಡಿ ಗೈಡ್ಸ್‌ ಸಹ ಸಿಗುತ್ತದೆ. ಇವು ನಿಮ್ಮ ನಂಬಿಕೆಯನ್ನು ಬೆಳೆಸಿಕೊಳ್ಳಲು ಮತ್ತು ನಿಮ್ಮ ಧಾರ್ಮಿಕ ನಂಬಿಕೆಗಳ ಬಗ್ಗೆ ಬೇರೆಯವರೊಂದಿಗೆ ಮಾತಾಡಲು ಸಹಾಯ ಮಾಡುತ್ತವೆ. ಇನ್ನೂ ಹೆಚ್ಚಿನ ಸಲಹೆಗಳಿಗಾಗಿ ಜುಲೈ 2009​ರ ಎಚ್ಚರ! ಪತ್ರಿಕೆಯಲ್ಲಿ ಬಂದ “ಯುವ ಜನರು ಪ್ರಶ್ನಿಸುವುದು . . . ಬೈಬಲ್‌ ಓದುವುದರಲ್ಲಿ ಹೇಗೆ ಆನಂದಿಸಲಿ?” ಎಂಬ ಲೇಖನ ನೋಡಿ. ನಿಮ್ಮ ಸ್ವಂತ ರಕ್ಷಣೆಯನ್ನು ಸಾಧಿಸಿಕೊಳ್ಳಲು ಅಧ್ಯಯನ ಮತ್ತು ಧ್ಯಾನ ತುಂಬ ಮುಖ್ಯ.—ಕೀರ್ತನೆ 119:105 ಓದಿ.

ಪ್ರಾರ್ಥನೆ ಅವಶ್ಯ

10. ಒಬ್ಬ ಕ್ರೈಸ್ತನು ಯಾಕೆ ಪ್ರಾರ್ಥನೆ ಮಾಡಬೇಕು?

10 ನಾವು ಬೈಬಲನ್ನು ಅಧ್ಯಯನ ಮಾಡುವಾಗ ಯೆಹೋವನು ನಮ್ಮ ಜೊತೆ ಮಾತಾಡಿದಂತೆ ಇರುತ್ತದೆ. ಪ್ರಾರ್ಥನೆ ಮಾಡುವಾಗ ನಾವು ಯೆಹೋವನ ಜೊತೆ ಮಾತಾಡಿದಂತೆ ಇರುತ್ತದೆ. ಪ್ರಾರ್ಥನೆಯನ್ನು ನಾವು ರೂಢಿಯಾಗಿ ಮಾಡುವ ವಿಷಯ ಎಂದು ನೆನಸಿ ಮಾಡಬಾರದು. ಅದರಿಂದ ಏನೋ ಅದ್ಭುತ ವರ ಸಿಕ್ಕಿಬಿಡುತ್ತೆ ಅಂತ ನೆನಸಿ ಕೂಡ ಮಾಡಬಾರದು. ಪ್ರಾರ್ಥನೆ ಅನ್ನುವುದು ನಮ್ಮ ಸೃಷ್ಟಿಕರ್ತನೊಂದಿಗೆ ಮಾಡುವ ಮಾತುಕತೆ ಆಗಿದೆ. ಯೆಹೋವನು ನೀವು ಹೇಳುವ ವಿಷಯಕ್ಕೆ ಕಿವಿಗೊಡಲು ಬಯಸುತ್ತಾನೆ. (ಫಿಲಿಪ್ಪಿ 4:6 ಓದಿ.) ಆದ್ದರಿಂದ ಯಾವುದೇ ಕಾರಣಕ್ಕೆ ಚಿಂತೆ ಆಗುತ್ತಿರುವುದಾದರೆ “ನಿನ್ನ ಚಿಂತಾಭಾರವನ್ನು ಯೆಹೋವನ ಮೇಲೆ ಹಾಕು” ಎಂದು ಬೈಬಲ್‌ ಹೇಳುತ್ತದೆ. (ಕೀರ್ತ. 55:22) ಈ ಸಲಹೆ ತಮಗೆ ಸಹಾಯ ಮಾಡಿದೆ ಎಂದು ಲಕ್ಷಾಂತರ ಸಹೋದರ ಸಹೋದರಿಯರು ಹೇಳುತ್ತಾರೆ. ಈ ಸಲಹೆಯನ್ನು ಪಾಲಿಸುವುದರಿಂದ ನಿಮಗೂ ಸಹಾಯ ಸಿಗುತ್ತದೆ.

11. ನೀವು ಯಾಕೆ ಯಾವಾಗಲೂ ಯೆಹೋವನಿಗೆ ಕೃತಜ್ಞತೆ ಹೇಳಬೇಕು?

11 ಆದರೆ ನಮಗೆ ಯಾವುದಾದರೂ ಸಹಾಯ ಬೇಕಿದ್ದಾಗ ಮಾತ್ರ ಪ್ರಾರ್ಥನೆ ಮಾಡಬಾರದು. “ನೀವು ಕೃತಜ್ಞತಾಭಾವದವರೆಂದು ತೋರಿಸಿರಿ” ಎಂದು ಬೈಬಲ್‌ ಜ್ಞಾಪಿಸುತ್ತದೆ. (ಕೊಲೊ. 3:15) ಕೆಲವೊಮ್ಮೆ ನಾವು ನಮ್ಮ ಸಮಸ್ಯೆಗಳ ಬಗ್ಗೆ ಎಷ್ಟು ಚಿಂತೆ ಮಾಡುತ್ತೇವೆಂದರೆ ನಮಗಿರುವ ಎಲ್ಲಾ ಒಳ್ಳೇ ವಿಷಯಗಳನ್ನು ಮರೆತುಬಿಡುತ್ತೇವೆ. ಆದ್ದರಿಂದ ಹೀಗೆ ಮಾಡಲು ಪ್ರಯತ್ನಿಸಿ: ಪ್ರತಿ ದಿನ, ನೀವು ಕೃತಜ್ಞತೆ ಹೇಳಲು ಬಯಸುವ ಕಡಿಮೆಪಕ್ಷ ಮೂರು ವಿಷಯಗಳನ್ನು ಜ್ಞಾಪಿಸಿಕೊಂಡು ಯೆಹೋವನಿಗೆ ಧನ್ಯವಾದ ಹೇಳಿ. 12 ವರ್ಷಕ್ಕೆ ದೀಕ್ಷಾಸ್ನಾನ ಪಡೆದುಕೊಂಡ ಅಬೀಗೈಲ್‌ ಎಂಬ ಹದಿವಯಸ್ಸಿನ ಹುಡುಗಿ ಹೇಳುವುದು: “ನಾವು ಈ ಇಡೀ ಪ್ರಪಂಚದಲ್ಲಿ ಯೆಹೋವನಿಗಿಂತ ಹೆಚ್ಚು ಬೇರೆ ಯಾರಿಗೂ ಧನ್ಯವಾದ ಹೇಳಲು ಆಗುವುದಿಲ್ಲ. ಯೆಹೋವನು ನಮಗೆ ಕೊಟ್ಟಿರುವ ಉಡುಗೊರೆಗಳಿಗಾಗಿ ಅವಕಾಶ ಸಿಕ್ಕಿದಾಗೆಲ್ಲಾ ಧನ್ಯವಾದ ಹೇಳಬೇಕು.” ಅಬೀಗೈಲ್‌ ಒಮ್ಮೆ ಕೇಳಿಸಿಕೊಂಡ ಈ ಪ್ರಶ್ನೆಯನ್ನು ಆಗಾಗ ತನ್ನನ್ನೇ ಕೇಳಿಕೊಳ್ಳುತ್ತಾಳಂತೆ: ‘ಯೆಹೋವನು ನನಗೆ ಕೊಟ್ಟಿರುವ ಎಲ್ಲ ವಿಷಯಗಳಿಗಾಗಿ ನಾನು ಕೃತಜ್ಞತೆ ಹೇಳುತ್ತೇನಾ? ನಾನು ಕೃತಜ್ಞತೆ ಹೇಳಿದ ವಿಷಯಗಳು ಮಾತ್ರ ನನ್ನ ಹತ್ತಿರ ಉಳಿಯುತ್ತವೆ ಎಂದಾದರೆ ನನ್ನ ಹತ್ತಿರ ಏನಿರುತ್ತದೆ?’ *

ವೈಯಕ್ತಿಕ ಅನುಭವಕ್ಕೆ ಮೌಲ್ಯ ಹೆಚ್ಚು

12, 13. (ಎ) ಯೆಹೋವನು ಸರ್ವೋತ್ತಮನೆಂದು ನೀವು ಹೇಗೆ ಸ್ವಂತ ಅನುಭವದಿಂದ ತಿಳಿದುಕೊಂಡಿದ್ದೀರಿ? (ಬಿ) ಯೆಹೋವನು ನಿಮಗೆ ಹೇಗೆ ಸಹಾಯ ಮಾಡಿದ್ದಾನೆ ಎಂದು ಯೋಚಿಸುವುದು ಯಾಕೆ ಪ್ರಾಮುಖ್ಯ?

12 ಅನೇಕ ಕಷ್ಟಗಳನ್ನು ತಾಳಿಕೊಳ್ಳಲು ಯೆಹೋವನು ರಾಜ ದಾವೀದನಿಗೆ ಸಹಾಯ ಮಾಡಿದನು. ಆದ್ದರಿಂದ ದಾವೀದನು ವೈಯಕ್ತಿಕ ಅನುಭವದಿಂದ “ಯೆಹೋವನು ಸರ್ವೋತ್ತಮನೆಂದು ಅನುಭವ ಸವಿದು ನೋಡಿರಿ; ಆತನನ್ನು ಆಶ್ರಯಿಸಿಕೊಂಡವರು ಎಷ್ಟೋ ಧನ್ಯರು” ಎಂದು ಹೇಳಿದನು. (ಕೀರ್ತ. 34:8) ನಾವು ಯೆಹೋವನ ಒಳ್ಳೇತನವನ್ನು ಸ್ವಂತ ಅನುಭವದಿಂದ ತಿಳಿದುಕೊಳ್ಳಬೇಕೆಂದು ಈ ವಚನ ಹೇಳುತ್ತದೆ. ನೀವು ಬೈಬಲನ್ನು ಮತ್ತು ಬೈಬಲಾಧಾರಿತ ಪ್ರಕಾಶನಗಳನ್ನು ಓದುವಾಗ ಹಾಗೂ ಕೂಟಗಳಿಗೆ ಹಾಜರಾಗುವಾಗ, ನಂಬಿಗಸ್ತರಾಗಿರಲು ಯೆಹೋವನು ಬೇರೆಯವರಿಗೆ ಹೇಗೆ ಸಹಾಯ ಮಾಡಿದನೆಂದು ತಿಳಿದುಕೊಳ್ಳುತ್ತೀರಿ. ಆದರೆ ಯೆಹೋವನೊಂದಿಗೆ ನಿಮ್ಮ ಸಂಬಂಧ ಬಲವಾಗುತ್ತಾ ಹೋದ ಹಾಗೆ, ಯೆಹೋವನು ನಿಮಗೆ ಹೇಗೆ ಸಹಾಯ ಮಾಡುತ್ತಿದ್ದಾನೆ ಎಂದು ನೋಡಬೇಕು. ಯೆಹೋವನು ಸರ್ವೋತ್ತಮನೆಂದು ನೀವು ಹೇಗೆ ಸ್ವಂತ ಅನುಭವದಿಂದ ತಿಳಿದುಕೊಂಡಿದ್ದೀರಿ?

13 ಪ್ರತಿಯೊಬ್ಬ ಕ್ರೈಸ್ತನು ಯೆಹೋವನ ಒಳ್ಳೇತನವನ್ನು ಒಂದು ವಿಶೇಷವಾದ ವಿಧದಲ್ಲಿ ಅನುಭವಿಸಿದ್ದಾನೆ. ಅದೇನೆಂದರೆ, ಯೆಹೋವನು ನಮ್ಮನ್ನು ಆತನ ಹತ್ತಿರ ಮತ್ತು ಆತನ ಮಗನ ಹತ್ತಿರ ಸೆಳೆದಿದ್ದಾನೆ. ಯೇಸು ಅದರ ಬಗ್ಗೆ ಹೇಳಿದ್ದು: “ನನ್ನನ್ನು ಕಳುಹಿಸಿದ ತಂದೆಯು ಸೆಳೆದ ಹೊರತು ಯಾರೊಬ್ಬನೂ ನನ್ನ ಬಳಿಗೆ ಬರಲಾರನು.” (ಯೋಹಾ. 6:44) ‘ಯೆಹೋವನು ನನ್ನನ್ನು ತನ್ನ ಹತ್ತಿರಕ್ಕೆ ಸೆಳೆದನು’ ಎಂದು ನೆನಸುತ್ತೀರಾ ಅಥವಾ ‘ಯೆಹೋವನು ನನ್ನ ತಂದೆತಾಯಿಯನ್ನು ತನ್ನ ಹತ್ತಿರಕ್ಕೆ ಸೆಳೆದನು, ನಾನು ಅವರ ಹಿಂದೆ ಹಿಂದೆ ಬಂದೆ’ ಎಂದು ನೆನಸುತ್ತೀರಾ? ನೀವು ಯೆಹೋವನಿಗೆ ನಿಮ್ಮನ್ನು ಸಮರ್ಪಿಸಿಕೊಂಡು ದೀಕ್ಷಾಸ್ನಾನ ಪಡೆದಾಗ ಆತನೊಂದಿಗೆ ನಿಮ್ಮದೇ ಅಂತ ಒಂದು ವಿಶೇಷ ಸಂಬಂಧ ಉಂಟಾಯಿತು. “ಯಾವನಾದರೂ ದೇವರನ್ನು ಪ್ರೀತಿಸುವುದಾದರೆ ದೇವರು ಅವನನ್ನು ತಿಳಿದುಕೊಂಡಿರುತ್ತಾನೆ” ಎಂದು ಬೈಬಲ್‌ ಹೇಳುತ್ತದೆ. (1 ಕೊರಿಂ. 8:3) ಯೆಹೋವನು ತನ್ನ ಸಂಘಟನೆಯಲ್ಲಿ ನಿಮಗೇ ಅಂತ ಕೊಟ್ಟಿರುವ ಸ್ಥಾನವನ್ನು ಯಾವಾಗಲೂ ಮಾನ್ಯಮಾಡಿ.

14, 15. ಸತ್ಯದ ಬಗ್ಗೆ ಬೇರೆಯವರೊಂದಿಗೆ ಮಾತಾಡುವುದರಿಂದ ನಿಮ್ಮ ನಂಬಿಕೆ ಹೇಗೆ ಬಲವಾಗುತ್ತದೆ?

14 ನಿಮ್ಮ ಧಾರ್ಮಿಕ ನಂಬಿಕೆಗಳ ಬಗ್ಗೆ ನೀವು ಬೇರೆಯವರೊಂದಿಗೆ ಸೇವೆಯಲ್ಲಾಗಲಿ ಶಾಲೆಯಲ್ಲಾಗಲಿ ಮಾತಾಡಲು ಯೆಹೋವನು ನಿಮಗೆ ಧೈರ್ಯ ಕೊಡುವಾಗ ಸಹ ಆತನ ಒಳ್ಳೇತನವನ್ನು ನೀವು ಅನುಭವಿಸುತ್ತೀರಿ. ನಿಮ್ಮ ಜೊತೆ ಓದುತ್ತಿರುವ ಮಕ್ಕಳೊಂದಿಗೆ ಸತ್ಯದ ಬಗ್ಗೆ ಮಾತಾಡಲು ನಿಮಗೆ ಕಷ್ಟ ಆಗಬಹುದು. ಅವರು ಹೇಗೆ ಪ್ರತಿಕ್ರಿಯಿಸುತ್ತಾರೋ ಏನೋ ಎಂದು ನೆನಸಿ ನೀವು ಚಿಂತೆ ಮಾಡಬಹುದು. ಒಂದು ದೊಡ್ಡ ಗುಂಪಿನ ಮುಂದೆ ನಿಂತು ನಿಮ್ಮ ನಂಬಿಕೆಗಳ ಬಗ್ಗೆ ಮಾತಾಡುವುದನ್ನು ನೆನಸಿಕೊಂಡರೆ ನಿಮಗೆ ತುಂಬ ಭಯ ಆಗಬಹುದು. ಇಂಥ ಸನ್ನಿವೇಶದಲ್ಲಿ ನಿಮಗೆ ಯಾವುದು ಸಹಾಯ ಮಾಡುತ್ತದೆ?

15 ಮೊದಲು ನಿಮ್ಮ ಧಾರ್ಮಿಕ ನಂಬಿಕೆಗಳನ್ನು ನಂಬಲು ನಿಮಗೆ ಯಾವ ಕಾರಣಗಳಿವೆ ಎಂದು ಯೋಚಿಸಿ. ನಮ್ಮ ವೆಬ್‌ಸೈಟಲ್ಲಿರುವ ಸ್ಟಡಿ ಗೈಡ್ಸ್‌ ನಿಮ್ಮ ಭಾಷೆಯಲ್ಲಿರುವುದಾದರೆ ಖಂಡಿತ ಉಪಯೋಗಿಸಿ. ನಿಮ್ಮ ನಂಬಿಕೆಗಳು ಏನು, ನೀವು ಅವನ್ನು ಯಾಕೆ ನಂಬುತ್ತೀರಿ, ಅವುಗಳ ಬಗ್ಗೆ ಬೇರೆಯವರೊಂದಿಗೆ ಹೇಗೆ ಮಾತಾಡಬಹುದೆಂದು ತಿಳಿದುಕೊಳ್ಳಲು ಆ ಗೈಡ್ಸ್‌ ಸಹಾಯ ಮಾಡುತ್ತವೆ. ನಿಮಗೆ ಕ್ರೈಸ್ತ ಬೋಧನೆಗಳಲ್ಲಿ ದೃಢನಂಬಿಕೆ ಇರುವಾಗ ಮತ್ತು ಒಳ್ಳೇ ತಯಾರಿ ಮಾಡಿರುವಾಗ, ಯೆಹೋವನ ಬಗ್ಗೆ ಸಾಕ್ಷಿಕೊಡಲು ಖಂಡಿತ ಮನಸ್ಸಾಗುತ್ತದೆ.—ಯೆರೆ. 20:8, 9.

16. ನಿಮ್ಮ ಧಾರ್ಮಿಕ ನಂಬಿಕೆಗಳ ಬಗ್ಗೆ ಬೇರೆಯವರೊಂದಿಗೆ ಧೈರ್ಯದಿಂದ ಮಾತಾಡಲು ಯಾವುದು ಸಹಾಯ ಮಾಡುತ್ತದೆ?

16 ನೀವು ಒಳ್ಳೇ ತಯಾರಿ ಮಾಡಿದ ಮೇಲೂ ಕೆಲವೊಮ್ಮೆ ನಿಮ್ಮ ನಂಬಿಕೆಗಳ ಬಗ್ಗೆ ಮಾತಾಡಲು ಭಯ ಆಗಬಹುದು. 13 ವರ್ಷವಿದ್ದಾಗ ದೀಕ್ಷಾಸ್ನಾನ ಪಡೆದುಕೊಂಡ 18 ವರ್ಷದ ಸಹೋದರಿ ಹೇಳುವುದು: “ನನಗೆ ನನ್ನ ನಂಬಿಕೆಗಳ ಬಗ್ಗೆ ಗೊತ್ತಿದೆ, ಆದರೆ ಅದರ ಬಗ್ಗೆ ಬೇರೆಯವರೊಂದಿಗೆ ಮಾತಾಡಲು ಹೋದರೆ ತಡವರಿಸುತ್ತೇನೆ.” ಈ ಸಮಸ್ಯೆಯನ್ನು ಜಯಿಸಲು ಅವಳು ಏನು ಮಾಡುತ್ತಾಳೆ? ಅವಳು ಹೇಳುವುದು: “ನನ್ನ ಕ್ಲಾಸಲ್ಲಿರೋ ಮಕ್ಕಳು ಅವರು ಏನೇನು ಮಾಡುತ್ತಾರೆ ಅಂತ ಫ್ರೀಯಾಗಿ ಹೇಳುತ್ತಿರುತ್ತಾರೆ. ನಾನು ಸಹ ಅದನ್ನೇ ಮಾಡಬೇಕು ಅನಿಸ್ತು. ಆದ್ದರಿಂದ ನಾನು ಮಕ್ಕಳೊಟ್ಟಿಗೆ ಸುಮ್ಮನೆ ಕೂತು ಮಾತಾಡುತ್ತಿರುವಾಗ ‘ಏ, ಅವತ್ತೊಂದು ದಿನ ನಾನು ಬೈಬಲ್‌ ಬಗ್ಗೆ ಮಾತಾಡಲು ಹೋಗಿದ್ದಾಗ ಏನಾಯಿತು ಗೊತ್ತಾ . . .’ ಎಂದು ಶುರುಮಾಡುತ್ತೇನೆ. ಆಮೇಲೆ ನಾನು ಹೇಳಬೇಕಾದ ವಿಷಯವನ್ನು ಹೇಳುತ್ತೇನೆ. ನಾನು ಆರಂಭದಲ್ಲೇ ಬೈಬಲ್‌ ಬಗ್ಗೆ ಮಾತಾಡಲಿಕ್ಕಿಲ್ಲವಾದರೂ, ನಾನು ಬೈಬಲ್‌ ಬಗ್ಗೆ ಮಾತಾಡಲು ಹೋದಾಗ ಏನಾಯಿತೆಂದು ತಿಳುಕೊಳ್ಳುವ ಕುತೂಹಲ ಕೆಲವರಲ್ಲಿ ಮೂಡುತ್ತೆ. ಕೆಲವೊಮ್ಮೆ ಅವರು ಅದರ ಬಗ್ಗೆ ಪ್ರಶ್ನೆಗಳನ್ನೂ ಕೇಳುತ್ತಾರೆ. ನಾನು ಈ ರೀತಿ ಮಾತಾಡುವುದನ್ನು ರೂಢಿಮಾಡಿಕೊಂಡಿರುವುದರಿಂದ ಈಗ ತುಂಬ ಸುಲಭವಾಗಿದೆ. ಮಾತಾಡಿದ ಮೇಲಂತೂ ತುಂಬ ಖುಷಿಯಾಗುತ್ತೆ!”

17. ಬೇರೆಯವರ ಜೊತೆ ಸತ್ಯದ ಬಗ್ಗೆ ಮಾತಾಡಲು ನಿಮಗೆ ಬೇರೆ ಯಾವುದು ಸಹಾಯ ಮಾಡುತ್ತದೆ?

17 ನೀವು ಬೇರೆಯವರ ಬಗ್ಗೆ ಚಿಂತೆ ಮಾಡುತ್ತೀರಿ, ಅವರನ್ನು ಗೌರವಿಸುತ್ತೀರಿ ಎಂದು ಅವರಿಗೆ ಗೊತ್ತಾದರೆ ಅವರು ಸಹ ನಿಮ್ಮನ್ನು ಮತ್ತು ನಿಮ್ಮ ಧಾರ್ಮಿಕ ನಂಬಿಕೆಗಳನ್ನು ಗೌರವಿಸುತ್ತಾರೆ. ಹದಿಪ್ರಾಯಕ್ಕೆ ಬರುವ ಮುಂಚೆ ದೀಕ್ಷಾಸ್ನಾನ ಪಡೆದುಕೊಂಡ 17 ವರ್ಷದ ಒಲಿವಿಯಾ ಹೇಳುವುದು: “ನಾನು ಹೀಗೆ ಮಾತಾಡ್ತಿರುವಾಗ ಬೈಬಲ್‌ ಬಗ್ಗೆ ಮಾತೆತ್ತಿದರೆ ಜನರು ನನಗೆ ಧರ್ಮದ ಹುಚ್ಚು ಹಿಡಿದಿದೆ ಅಂದುಕೊಳ್ಳಬಹುದು ಅನ್ನುವ ಭಯ ನನಗೆ ಯಾವಾಗಲೂ ಇತ್ತು.” ಆಮೇಲೆ ಅವಳು ತನ್ನ ದೃಷ್ಟಿಕೋನ ಬದಲಾಯಿಸಿಕೊಂಡಳು. ತನ್ನ ಚಿಂತೆಗಳಿಗೆ ಹೆಚ್ಚು ಗಮನ ಕೊಡುವುದನ್ನು ನಿಲ್ಲಿಸಿಬಿಟ್ಟು, “ಎಷ್ಟೋ ಯುವ ಜನರಿಗೆ ಯೆಹೋವನ ಸಾಕ್ಷಿಗಳ ಬಗ್ಗೆ ಗೊತ್ತಿಲ್ಲ. ಅವರಿಗೆ ಗೊತ್ತಿರುವ ಸಾಕ್ಷಿಗಳೆಂದರೆ ಅದು ನಾವೇ. ಆದ್ದರಿಂದ ನಾವು ಹೇಗೆ ನಡಕೊಳ್ಳುತ್ತೇವೆ ಅನ್ನುವುದು ಮುಖ್ಯ. ಯಾಕೆಂದರೆ ಅವರ ಪ್ರತಿಕ್ರಿಯೆ ಇದರ ಮೇಲೆ ಹೊಂದಿಕೊಂಡಿದೆ. ಒಂದುವೇಳೆ ನಮಗೆ ನಾಚಿಕೆ ಸ್ವಭಾವ ಇದ್ದರೆ ಅಥವಾ ನಾವು ಮುಜುಗರಪಡುವುದಾದರೆ ಅಥವಾ ನಮ್ಮ ನಂಬಿಕೆಯ ಬಗ್ಗೆ ಮಾತಾಡಲು ಕಷ್ಟಪಟ್ಟರೆ ಏನಾಗುತ್ತದೆ? ಹೇಳಲೋ ಬೇಡವೋ ಅನ್ನುವ ರೀತಿಯಲ್ಲಿ ಮಾತಾಡಿದರೆ ಏನಾಗುತ್ತದೆ? ಆಗ ನಾವು ಏನಾಗಿದ್ದೇವೋ ಅದರ ಬಗ್ಗೆ ನಮಗೇ ಹೆಮ್ಮೆ ಅನಿಸುವುದಿಲ್ಲ ಎಂಬ ಭಾವನೆ ಬೇರೆಯವರಿಗೆ ಬಂದುಬಿಡುತ್ತದೆ. ನಾವು ಆತ್ಮವಿಶ್ವಾಸ ಇಲ್ಲದೆ ಮಾತಾಡುವುದನ್ನು ನೋಡಿ ಬೇರೆಯವರಿಗೆ ಸಿಟ್ಟು ಕೂಡ ಬರಬಹುದು. ಅದರ ಬದಲು, ನಾವು ನಮ್ಮ ನಂಬಿಕೆಗಳ ಬಗ್ಗೆ ಸಾಮಾನ್ಯವಾಗಿ ಮಾತಾಡುವ ವಿಷಯದ ತರ ಆರಾಮವಾಗಿ ಧೈರ್ಯದಿಂದ ಮಾತಾಡುವಾಗ ಬೇರೆಯವರು ನಮ್ಮನ್ನು ಹೆಚ್ಚಾಗಿ ಗೌರವಿಸುತ್ತಾರೆ” ಎಂದು ಯೋಚಿಸಲು ಆರಂಭಿಸಿದಳು.

ನಿಮ್ಮ ಸ್ವಂತ ರಕ್ಷಣೆಯನ್ನು ಸಾಧಿಸಿಕೊಳ್ಳುತ್ತಾ ಇರಿ

18. ನಿಮ್ಮ ರಕ್ಷಣೆಯನ್ನು ಸಾಧಿಸಿಕೊಳ್ಳಲು ನೀವೇನು ಮಾಡಬೇಕು?

18 ನಿಮ್ಮ ಸ್ವಂತ ರಕ್ಷಣೆಯನ್ನು ಸಾಧಿಸಿಕೊಳ್ಳುತ್ತಾ ಇರುವುದು ದೊಡ್ಡ ಜವಾಬ್ದಾರಿ ಎಂದು ಕಲಿತೆವು. ನಿಮ್ಮ ರಕ್ಷಣೆಯನ್ನು ಸಾಧಿಸಿಕೊಳ್ಳಲು ದೇವರ ವಾಕ್ಯವನ್ನು ಓದಿ ಧ್ಯಾನಿಸಬೇಕು, ಯೆಹೋವನಿಗೆ ಪ್ರಾರ್ಥಿಸಬೇಕು, ಆತನು ನಿಮಗೆ ವೈಯಕ್ತಿಕವಾಗಿ ಹೇಗೆಲ್ಲಾ ಸಹಾಯ ಮಾಡಿದ್ದಾನೆ ಎಂದು ಯೋಚಿಸಬೇಕು. ಇದನ್ನೆಲ್ಲಾ ಮಾಡಿದರೆ ಯೆಹೋವನು ನಿಮ್ಮ ಸ್ನೇಹಿತ ಎಂಬ ವಿಷಯದಲ್ಲಿ ನಿಮಗೆ ಯಾವುದೇ ಸಂಶಯ ಇರುವುದಿಲ್ಲ. ನಿಮ್ಮ ನಂಬಿಕೆಗಳ ಬಗ್ಗೆ ಮಾತಾಡಲು ನಿಮಗೆ ತುಂಬ ಮನಸ್ಸಾಗುತ್ತದೆ.—ಕೀರ್ತನೆ 73:28 ಓದಿ.

19. ನಿಮ್ಮ ಸ್ವಂತ ರಕ್ಷಣೆಯನ್ನು ಸಾಧಿಸಿಕೊಳ್ಳಲು ನೀವು ಹಾಕುವ ಪ್ರಯತ್ನ ಸಾರ್ಥಕ ಯಾಕೆ?

19 “ಯಾವನಿಗಾದರೂ ನನ್ನ ಹಿಂದೆ ಬರುವುದಕ್ಕೆ ಮನಸ್ಸಿದ್ದರೆ, ಅವನು ತನ್ನನ್ನು ನಿರಾಕರಿಸಿ ತನ್ನ ಯಾತನಾ ಕಂಬವನ್ನು ಹೊತ್ತುಕೊಂಡು ಎಡೆಬಿಡದೆ ನನ್ನನ್ನು ಹಿಂಬಾಲಿಸಲಿ” ಎಂದು ಯೇಸು ಹೇಳಿದನು. (ಮತ್ತಾ. 16:24) ಹೌದು, ಯೇಸುವನ್ನು ಹಿಂಬಾಲಿಸಲು ಪ್ರತಿಯೊಬ್ಬ ಕ್ರೈಸ್ತನು ಯೆಹೋವನಿಗೆ ತನ್ನನ್ನು ಸಮರ್ಪಿಸಿಕೊಂಡು ದೀಕ್ಷಾಸ್ನಾನ ಪಡೆಯಲೇಬೇಕು. ಇದು ಈಗ ಒಂದು ಅದ್ಭುತವಾದ ಜೀವನದ ಆರಂಭ ಅಷ್ಟೆ. ಇದರಿಂದ ಮುಂದಕ್ಕೆ ಹೊಸ ಲೋಕದಲ್ಲಿ ನಿತ್ಯಜೀವ ಸಹ ಸಿಗುತ್ತದೆ. ಹಾಗಾಗಿ ನಿಮ್ಮ ಸ್ವಂತ ರಕ್ಷಣೆಯನ್ನು ಸಾಧಿಸಿಕೊಳ್ಳಲು ನಿಮ್ಮಿಂದಾದ ಎಲ್ಲ ಪ್ರಯತ್ನ ಮಾಡಿ.

^ ಪ್ಯಾರ. 11 ಹೆಚ್ಚಿನ ಸಲಹೆಗಳಿಗಾಗಿ “Young People Ask—Why Should I Pray?” ಎಂಬ ಐಟಮ್‌ ಮತ್ತು ಅದರ ವರ್ಕ್‌ಶೀಟನ್ನು ನಮ್ಮ ವೆಬ್‌ಸೈಟಲ್ಲಿ ನೋಡಿ.