ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ದೇವರಲ್ಲಿ ನಾನೂ ನಿರೀಕ್ಷೆ ಇಟ್ಟಿದ್ದೇನೆ”

“ದೇವರಲ್ಲಿ ನಾನೂ ನಿರೀಕ್ಷೆ ಇಟ್ಟಿದ್ದೇನೆ”

“ಕೊನೆಯ ಆದಾಮನಾದರೋ ಜೀವ ಕೊಡುವ ಆತ್ಮಜೀವಿಯಾದನು.” —1 ಕೊರಿಂ. 15:45.

ಗೀತೆಗಳು: 111, 12

1-3. (ಎ) ನಮ್ಮ ಮುಖ್ಯ ಬೋಧನೆಗಳಲ್ಲಿ ನಾವು ಯಾವುದನ್ನು ಸಹ ಸೇರಿಸಿಕೊಳ್ಳಬೇಕು? (ಬಿ) ಪುನರುತ್ಥಾನ ಯಾಕೆ ಅಷ್ಟು ಪ್ರಾಮುಖ್ಯ? (ಲೇಖನದ ಆರಂಭದ ಚಿತ್ರ ನೋಡಿ.)

ಯಾರಾದರು ನಿಮಗೆ ‘ನಿಮ್ಮ ಧರ್ಮದಲ್ಲಿ ನೀವೇನು ನಂಬುತ್ತೀರಾ’ ಎಂದು ಕೇಳಿದರೆ ನೀವೇನು ಹೇಳುತ್ತೀರಿ? ಯೆಹೋವನೇ ಸೃಷ್ಟಿಕರ್ತನು, ನಮಗೆ ಜೀವ ಕೊಟ್ಟಿರುವ ದೇವರು ಎಂದು ನೀವು ಹೇಳಬಹುದು. ಯೇಸು ಕ್ರಿಸ್ತನಲ್ಲಿ ನಂಬಿಕೆ ಇಟ್ಟಿದ್ದೇವೆ, ಆತನು ನಮಗೋಸ್ಕರ ತನ್ನ ಜೀವ ಕೊಟ್ಟಿದ್ದಾನೆ ಎಂದು ನೀವು ಹೇಳಬಹುದು. ಮುಂದೆ ಬರಲಿರುವ ಪರದೈಸಿನ ಬಗ್ಗೆ ಮಾತಾಡುತ್ತಾ ಅಲ್ಲಿ ದೇವಜನರು ಅನಂತಕಾಲಕ್ಕೂ ಜೀವಿಸುವರು ಎಂದು ನೀವು ಹೇಳಬಹುದು. ಆದರೆ ಪುನರುತ್ಥಾನದ ಬಗ್ಗೆ ಏನು? ಅದು ನಿಮಗೆ ತುಂಬ ಇಷ್ಟವಾದ ನಂಬಿಕೆ ಎಂದು ಹೇಳುವಿರಾ?

2 ಪುನರುತ್ಥಾನವನ್ನು ನಮ್ಮ ಮುಖ್ಯ ಬೋಧನೆಗಳಲ್ಲಿ ಒಂದಾಗಿ ಸೇರಿಸಿಕೊಳ್ಳಲು ಅನೇಕ ಕಾರಣಗಳಿವೆ. ನಾವು ಸಾಯದೆ ಮಹಾ ಸಂಕಟವನ್ನು ಪಾರಾಗಿ ಹೊಸ ಲೋಕಕ್ಕೆ ಹೋಗುತ್ತೇವೆ ಎಂದು ನೆನಸುತ್ತಿರಬಹುದಾದರೂ ಪುನರುತ್ಥಾನದಲ್ಲಿ ನಂಬಿಕೆ ಇಡುವುದು ಮುಖ್ಯ. ಪುನರುತ್ಥಾನಕ್ಕೆ ಯಾಕೆ ಇಷ್ಟು ಪ್ರಾಮುಖ್ಯತೆ ಕೊಡಬೇಕೆಂದು ಅಪೊಸ್ತಲ ಪೌಲನು ವಿವರಿಸುತ್ತಾನೆ. ಆತನು ಹೇಳಿದ್ದು: “ಸತ್ತವರಿಗೆ ಪುನರುತ್ಥಾನವೇ ಇಲ್ಲವಾದರೆ ಕ್ರಿಸ್ತನು ಸಹ ಎಬ್ಬಿಸಲ್ಪಡಲಿಲ್ಲ.” ಯೇಸುವಿಗೆ ಪುನರುತ್ಥಾನ ಆಗಿಲ್ಲವಾದರೆ ಆತನು ಸ್ವರ್ಗದಲ್ಲಿ ರಾಜನಾಗಿ ಆಳುತ್ತಿಲ್ಲ ಎಂದಾಯಿತು. ಹಾಗಿದ್ದರೆ ನಮ್ಮ ಸಾರುವ ಕೆಲಸಕ್ಕೆ ಯಾವುದೇ ಅರ್ಥವಿರುವುದಿಲ್ಲ. (1 ಕೊರಿಂಥ 15:12-19 ಓದಿ.) ಆದರೆ ಯೇಸುವಿಗೆ ಪುನರುತ್ಥಾನವಾಯಿತು ಎಂದು ನಮಗೆ ಗೊತ್ತು. ಆ ಕಾಲದಲ್ಲಿದ್ದ ಯೆಹೂದಿ ಸದ್ದುಕಾಯರು, ಸತ್ತವರು ಪುನಃ ಬದುಕಿ ಬರಲು ಸಾಧ್ಯವೇ ಇಲ್ಲ ಎಂದು ವಾದಿಸುತ್ತಿದ್ದರು. ಆದರೆ ನಾವು ಅವರಂತಿಲ್ಲ. ನಮ್ಮನ್ನು ಬೇರೆಯವರು ಗೇಲಿಮಾಡಿದರೂ ಸರಿ, ದೇವರು ಸತ್ತವರನ್ನು ಎಬ್ಬಿಸುತ್ತಾನೆ ಎಂಬ ನಮ್ಮ ನಂಬಿಕೆ ಬಲವಾಗಿ ಇರುತ್ತದೆ.—ಮಾರ್ಕ 12:18; ಅ. ಕಾ. 4:2, 3; 17:32; 23:6-8.

3 ‘ಸತ್ತವರ ಪುನರುತ್ಥಾನದ’ ಬಗ್ಗೆ ಇರುವ ಬೋಧನೆ ‘ಕ್ರಿಸ್ತನ ಕುರಿತಾದ ಪ್ರಾಥಮಿಕ ಸಿದ್ಧಾಂತದ’ ಭಾಗವಾಗಿದೆ ಎಂದು ಅಪೊಸ್ತಲ ಪೌಲನು ಹೇಳಿದನು. (ಇಬ್ರಿ. 6:1, 2) ತನಗೆ ಪುನರುತ್ಥಾನದಲ್ಲಿ ತುಂಬ ನಂಬಿಕೆ ಇದೆ ಎಂದು ಆತನು ಹೇಳಿದನು. (ಅ. ಕಾ. 24:10, 15, 24, 25) ಇದು ಪ್ರಾಥಮಿಕ ಸಿದ್ಧಾಂತವಾಗಿದ್ದರೂ ಅಂದರೆ ದೇವರ ವಾಕ್ಯದಲ್ಲಿ ನಾವು ಕಲಿಯಬಹುದಾದ ಮೂಲಭೂತ ವಿಷಯವಾಗಿದ್ದರೂ ನಾವು ಅದನ್ನು ಲಘುವಾಗಿ ತೆಗೆದುಕೊಳ್ಳಬಾರದು. (ಇಬ್ರಿ. 5:12) ಯಾಕೆ?

4. ಪುನರುತ್ಥಾನದ ಬಗ್ಗೆ ಯಾವ ಪ್ರಶ್ನೆಗಳು ಏಳಬಹುದು?

4 ಜನರು ಬೈಬಲನ್ನು ಅಧ್ಯಯನ ಮಾಡಲು ಆರಂಭಿಸುವಾಗ ಹಿಂದೆ ನಡೆದ ಪುನರುತ್ಥಾನಗಳ ಬಗ್ಗೆ ಸಾಮಾನ್ಯವಾಗಿ ಓದುತ್ತಾರೆ. ಉದಾಹರಣೆಗೆ ಅವರು ಲಾಜರನ ಪುನರುತ್ಥಾನದ ಬಗ್ಗೆ ಓದಬಹುದು. ಭವಿಷ್ಯದಲ್ಲಿ ಸತ್ತವರ ಪುನರುತ್ಥಾನ ಆಗುತ್ತದೆ ಎಂದು ಅಬ್ರಹಾಮ, ಯೋಬ ಮತ್ತು ದಾನಿಯೇಲ ಸಹ ನಂಬಿದ್ದರು ಎಂದು ತಿಳಿದುಕೊಳ್ಳಬಹುದು. ಆದರೆ ಯಾರಾದರೂ ನಿಮಗೆ ಈ ಪ್ರಶ್ನೆಗಳನ್ನು ಕೇಳಿದರೆ ಏನು ಮಾಡುವಿರಿ: ಪುನರುತ್ಥಾನದ ಬಗ್ಗೆ ನೂರಾರು ವರ್ಷಗಳ ಹಿಂದೆ ಮಾಡಲಾದ ವಾಗ್ದಾನಗಳನ್ನು ನಂಬಲು ಬೈಬಲ್‌ನಲ್ಲಿ ಯಾವ ಆಧಾರ ಇದೆ? ಭವಿಷ್ಯತ್ತಿನಲ್ಲಿ ಯಾವಾಗ ಪುನರುತ್ಥಾನ ಆಗುತ್ತದೆ ಎಂದು ಬೈಬಲ್‌ ಏನಾದರೂ ಹೇಳುತ್ತದಾ? ಈ ಪ್ರಶ್ನೆಗಳಿಗೆ ಬೈಬಲ್‌ ಕೊಡುವ ಉತ್ತರದಿಂದ ನಮ್ಮ ನಂಬಿಕೆ ಬಲವಾಗುತ್ತದೆ.

ನೂರಾರು ವರ್ಷಗಳ ಹಿಂದೆ ಮುಂತಿಳಿಸಲಾದ ಪುನರುತ್ಥಾನ

5. ನಾವು ಮೊದಲು ಯಾವ ವಿಷಯದ ಬಗ್ಗೆ ಚರ್ಚಿಸಲಿದ್ದೇವೆ?

5 ಒಬ್ಬ ವ್ಯಕ್ತಿ ತೀರಿಕೊಂಡ ಸ್ವಲ್ಪದರಲ್ಲೇ ಅವನಿಗೆ ಪುನಃ ಜೀವ ಬಂದದ್ದರ ಬಗ್ಗೆ ಊಹಿಸಿಕೊಳ್ಳುವುದು ನಮಗೆ ಸುಲಭ ಆಗಿರಬಹುದು. (ಯೋಹಾ. 11:11; ಅ. ಕಾ. 20:9, 10) ಆದರೆ ಒಬ್ಬ ವ್ಯಕ್ತಿಯ ಪುನರುತ್ಥಾನ ಹಲವಾರು ಅಥವಾ ನೂರಾರು ವರ್ಷಗಳ ನಂತರ ಆಗುತ್ತದೆ ಎನ್ನುವ ವಾಗ್ದಾನವನ್ನು ನಾವು ನಂಬಬಹುದಾ? ಈ ವಾಗ್ದಾನ ಯಾರ ಬಗ್ಗೆ ಮಾಡಲಾಗಿತ್ತೋ ಆ ವ್ಯಕ್ತಿ ಸತ್ತು ತುಂಬ ಸಮಯ ಆಗಿದ್ದರೂ ಅಥವಾ ಇತ್ತೀಚೆಗಷ್ಟೇ ಸತ್ತಿದ್ದರೂ ಅದನ್ನು ನಂಬಬಹುದಾ? ನಿಜವೇನೆಂದರೆ, ನೂರಾರು ವರ್ಷಗಳ ಹಿಂದೆ ಮುಂತಿಳಿಸಲಾಗಿದ್ದ ಒಂದು ಪುನರುತ್ಥಾನ ಈಗಾಗಲೇ ನಡೆದಿದೆ ಮತ್ತು ನೀವು ಅದನ್ನು ನಂಬುತ್ತೀರಿ. ಇದು ಯಾರ ಪುನರುತ್ಥಾನ? ಭವಿಷ್ಯದಲ್ಲಿ ಆಗುತ್ತದೆ ಎಂದು ನೀವು ನಂಬಿರುವ ಪುನರುತ್ಥಾನಕ್ಕೂ ಇದಕ್ಕೂ ಏನು ಸಂಬಂಧ?

6. ಕೀರ್ತನೆ 118​ರ ನೆರವೇರಿಕೆಯಲ್ಲಿ ಯೇಸು ಹೇಗೆ ಒಳಗೂಡಿದ್ದಾನೆ?

6 ಅನೇಕ ವರ್ಷಗಳ ಹಿಂದೆ ಮುಂತಿಳಿಸಲಾದ ಪುನರುತ್ಥಾನದ ಬಗ್ಗೆ ಈಗ ಚರ್ಚಿಸೋಣ. ಬಹುಶಃ ದಾವೀದನು ಬರೆದಿರಬಹುದಾದ 118​ನೇ ಕೀರ್ತನೆಯಲ್ಲಿ ಈ ಮಾತುಗಳಿವೆ: “ಯೆಹೋವನೇ, ದಯವಿಟ್ಟು ರಕ್ಷಿಸು; ಯೆಹೋವನೇ, ದಯವಿಟ್ಟು ಸಾಫಲ್ಯಕೊಡು” ಮತ್ತು “ಯೆಹೋವನ ಹೆಸರಿನಲ್ಲಿ ಒಳಗೆ ಬರುವವನಿಗೆ ಆಶೀರ್ವಾದ.” ಇದು ಮೆಸ್ಸೀಯನ ಕುರಿತಾದ ಪ್ರವಾದನೆ. ಜನರು ಈ ಮಾತುಗಳನ್ನು ಯೇಸು ಸಾಯುವುದಕ್ಕೆ ಕೆಲವು ದಿನಗಳ ಹಿಂದೆ ಅಂದರೆ ನೈಸಾನ್‌ 9​ರಂದು ಅವನು ಕತ್ತೆಯ ಮೇಲೆ ಕೂತು ಯೆರೂಸಲೇಮನ್ನು ಪ್ರವೇಶಿಸಿದಾಗ ಹೇಳಿದರು. (ಕೀರ್ತ. 118:25, 26; ಮತ್ತಾ. 21:7-9) ಆದರೆ 118​ನೇ ಕೀರ್ತನೆ ಮುಂದೆ ಹಲವಾರು ವರ್ಷಗಳ ನಂತರ ನಡೆಯಲಿದ್ದ ಪುನರುತ್ಥಾನಕ್ಕೆ ಹೇಗೆ ಸೂಚಿಸಿತು? ಈ ಪ್ರವಾದನೆಯಲ್ಲಿರುವ ಇನ್ನೊಂದು ವಿಷಯವನ್ನು ನೋಡಿ: “ಮನೆಕಟ್ಟುವವರು ಬೇಡವೆಂದು ಬಿಟ್ಟ ಕಲ್ಲೇ ಮುಖ್ಯವಾದ ಮೂಲೆಗಲ್ಲಾಯಿತು.”—ಕೀರ್ತ. 118:22.

ಮೆಸ್ಸೀಯನನ್ನು “ಮನೆಕಟ್ಟುವವರು ಬೇಡವೆಂದು” ತಳ್ಳಿಬಿಟ್ಟರು (ಪ್ಯಾರ 7 ನೋಡಿ)

7. ಯೆಹೂದ್ಯರು ತಮಗೆ ಯೇಸು ಬೇಡ ಎಂದು ಹೇಗೆ ತೋರಿಸಿಕೊಟ್ಟರು?

7 “ಮನೆಕಟ್ಟುವವರು” ಯೆಹೂದಿ ಮುಖಂಡರಾಗಿದ್ದರು. ಮೆಸ್ಸೀಯನನ್ನು ಬೇಡವೆಂದು ಬಿಟ್ಟುಬಿಟ್ಟವರು ಇವರೇ. ಇವರು ಯೇಸುವನ್ನು ಬೇಡವೆಂದಷ್ಟೇ ಹೇಳಲಿಲ್ಲ ಅಥವಾ ಆತನನ್ನು ಕ್ರಿಸ್ತನೆಂದು ಒಪ್ಪಿಕೊಳ್ಳದೇ ಹೋದದ್ದು ಮಾತ್ರ ಅಲ್ಲ. ಯೇಸುವನ್ನು ಕೊಲ್ಲುವಂತೆ ಪಿಲಾತನನ್ನು ಕೇಳಿಕೊಳ್ಳುವ ಮೂಲಕ ಅವರು ತಮಗೆ ಯೇಸು ಬೇಡವೇ ಬೇಡ ಎಂದು ತೋರಿಸಿಕೊಟ್ಟರು. (ಲೂಕ 23:18-23) ಹೀಗೆ ಯೇಸುವಿನ ಸಾವಿಗೂ ಈ ಯೆಹೂದಿ ಮುಖಂಡರು ಕಾರಣರಾಗಿದ್ದರು.

ಯೇಸುವನ್ನು ‘ಮುಖ್ಯವಾದ ಮೂಲೆಗಲ್ಲಾಗಿ’ ಮಾಡಲು ಪುನರುತ್ಥಾನ ಮಾಡಲಾಯಿತು (ಪ್ಯಾರ 8, 9 ನೋಡಿ)

8. ಯೇಸು ಹೇಗೆ ‘ಮುಖ್ಯವಾದ ಮೂಲೆಗಲ್ಲಾಗಲು’ ಸಾಧ್ಯವಿತ್ತು?

8 ಯೆಹೂದ್ಯರು ಬೇಡವೆಂದು ಹೇಳಿ ಕೊಂದುಹಾಕಿದ ಯೇಸು ‘ಮುಖ್ಯವಾದ ಮೂಲೆಗಲ್ಲಾಗುವುದು’ ಹೇಗೆ? ಆತನ ಪುನರುತ್ಥಾನವಾದರೆ ಮಾತ್ರ ಇದು ಸಾಧ್ಯ. ಯೇಸು ಇದನ್ನು ಒಂದು ಹೊಲದ ಯಜಮಾನನ ಕುರಿತಾಗಿ ಹೇಳಿರುವ ಕಥೆಯಲ್ಲಿ ಸ್ಪಷ್ಟಪಡಿಸುತ್ತಾನೆ. ತನ್ನ ಹೊಲದಲ್ಲಿ ಕೆಲಸಮಾಡುತ್ತಿರುವ ವ್ಯವಸಾಯಗಾರರ ಬಳಿ ಈ ಯಜಮಾನ ಕೆಲವು ಆಳುಗಳನ್ನು ಕಳುಹಿಸಿದನು. ವ್ಯವಸಾಯಗಾರರು ಈ ಆಳುಗಳನ್ನು ಹೊಡೆದುಬಡೆದು ಕಳುಹಿಸಿದರು. ಕೊನೆಗೆ ಯಜಮಾನ ತನ್ನ ಸ್ವಂತ ಮಗನನ್ನು ಕಳುಹಿಸಿದನು. ವ್ಯವಸಾಯಗಾರರು ಇವನ ಮಾತನ್ನು ಕೇಳಬಹುದು ಎಂದು ಯಜಮಾನ ನಂಬಿದನು. ಆದರೆ ಅವರು ಆ ಮಗನನ್ನು ಕೊಂದುಹಾಕಿದರು. ಈ ಕಥೆಯನ್ನು ಹೇಳಿದ ಬಳಿಕ ಯೇಸು ಕೀರ್ತನೆ 118:22​ನ್ನು ಉಲ್ಲೇಖಿಸಿದನು. (ಲೂಕ 20:9-17) ಅಪೊಸ್ತಲ ಪೇತ್ರನು ಯೆರೂಸಲೇಮಿನಲ್ಲಿ ಕೂಡಿಬಂದಿದ್ದ ಯೆಹೂದಿ ‘ಅಧಿಪತಿಗಳು, ಹಿರೀಪುರುಷರು ಮತ್ತು ಶಾಸ್ತ್ರಿಗಳೊಂದಿಗೆ’ ಮಾತಾಡಿದಾಗ ಇದೇ ವಚನವನ್ನು ಉಪಯೋಗಿಸಿದನು. ಅವರು “ಶೂಲಕ್ಕೇರಿಸಿದ, ಆದರೆ ದೇವರು ಸತ್ತವರೊಳಗಿಂದ ಎಬ್ಬಿಸಿದ ನಜರೇತಿನ ಯೇಸು ಕ್ರಿಸ್ತನ” ಬಗ್ಗೆ ಅವನು ಮಾತಾಡಿದನು. ನಂತರ ಅವನು, “ಮನೆಕಟ್ಟುವವರಾದ ನೀವು ತಿರಸ್ಕರಿಸಿದ [ಈ] ಕಲ್ಲು ಮುಖ್ಯವಾದ ಮೂಲೆಗಲ್ಲಾಯಿತು” ಎಂದನು.—ಅ. ಕಾ. 3:15; 4:5-11; 1 ಪೇತ್ರ 2:5-7.

9. ಅಸಾಧಾರಣವಾದ ಯಾವ ಘಟನೆಯನ್ನು ಕೀರ್ತನೆ 118:22 ಮುಂತಿಳಿಸಿತು?

9 ಕೀರ್ತನೆ 118:22​ರಲ್ಲಿರುವ ಪ್ರವಾದನೆಯು ನೂರಾರು ವರ್ಷಗಳ ನಂತರ ನಡೆಯಲಿರುವ ಪುನರುತ್ಥಾನದ ಬಗ್ಗೆ ತಿಳಿಸಿತು ಎನ್ನುವುದು ಸ್ಪಷ್ಟ. ಮೆಸ್ಸೀಯನನ್ನು ಯೆಹೂದ್ಯರು ಬೇಡವೆಂದು ಹೇಳಿ ಕೊಂದುಹಾಕುವರು. ಆದರೆ ಅವನು ಪುನಃ ಜೀವಂತನಾಗಿ ಮುಖ್ಯವಾದ ಮೂಲೆಗಲ್ಲಾಗುವನು. ಪುನರುತ್ಥಾನಗೊಂಡ ಬಳಿಕ, “ಮನುಷ್ಯರಲ್ಲಿ ಕೊಡಲ್ಪಟ್ಟಿರುವ ಬೇರೆ ಯಾವ ಹೆಸರಿನಿಂದಲೂ” ಅಲ್ಲ ಯೇಸುವಿನ ಹೆಸರಿನಿಂದ ಮಾತ್ರ ‘ನಾವು ರಕ್ಷಣೆಯನ್ನು ಹೊಂದಲು’ ಸಾಧ್ಯವಾಯಿತು.—ಅ. ಕಾ. 4:12; ಎಫೆ. 1:20.

10. (ಎ) ಕೀರ್ತನೆ 16:10 ಏನನ್ನು ಮುಂತಿಳಿಸಿತು? (ಬಿ) ಕೀರ್ತನೆ 16:10 ದಾವೀದನ ಬಗ್ಗೆ ಮಾತಾಡಲಿಲ್ಲ ಎಂದು ನಾವು ಹೇಗೆ ಖಂಡಿತವಾಗಿ ಹೇಳಬಹುದು?

10 ಒಂದು ಪುನರುತ್ಥಾನ ಆಗುತ್ತದೆ ಎಂದು ತಿಳಿಸಿದ ಇನ್ನೊಂದು ವಚನವನ್ನು ಈಗ ಪರಿಗಣಿಸೋಣ. ಈ ಮಾತನ್ನು ಹೇಳಿ ಒಂದು ಸಾವಿರಕ್ಕಿಂತ ಹೆಚ್ಚು ವರ್ಷಗಳಾದ ಮೇಲೆ ಇದು ನೆರವೇರಿತು. ಒಂದು ಪುನರುತ್ಥಾನದ ಬಗ್ಗೆ ಮುಂತಿಳಿಸಿ ಅಥವಾ ವಾಗ್ದಾನ ಮಾಡಿ ತುಂಬ ಸಮಯ ಆಗಿದ್ದರೂ ಅದು ನೆರವೇರುತ್ತದೆ ಎಂಬ ದೃಢಭರವಸೆಯನ್ನು ಇದು ನಮ್ಮಲ್ಲಿ ಮೂಡಿಸಬೇಕು. ಕೀರ್ತನೆ 16​ರಲ್ಲಿ ದಾವೀದನು ಬರೆದದ್ದು: “ನೀನು ನನ್ನ ಜೀವಾತ್ಮವನ್ನು ಪಾತಾಳದಲ್ಲಿ ಬಿಡುವದಿಲ್ಲ; ನಿನ್ನ ಪ್ರಿಯನಿಗೆ ಅಧೋಲೋಕವನ್ನು ನೋಡಗೊಡಿಸುವದಿಲ್ಲ.” (ಕೀರ್ತ. 16:10) ಈ ವಚನದಲ್ಲಿ ದಾವೀದನು ತನ್ನ ಬಗ್ಗೆ ಮಾತಾಡುತ್ತಿಲ್ಲ. ತಾನು ಸಾಯುವುದೇ ಇಲ್ಲ, ಸಮಾಧಿಯಲ್ಲಿ ಇಡಲ್ಪಡುವುದಿಲ್ಲ ಎಂದಾತನು ಹೇಳುತ್ತಿಲ್ಲ. ದೇವರ ವಾಕ್ಯ ಸ್ಪಷ್ಟವಾಗಿ ಹೇಳುವುದೇನೆಂದರೆ, ದಾವೀದನಿಗೆ ವಯಸ್ಸಾಗಿ “ಪಿತೃಗಳ ಬಳಿಗೆ ಸೇರಿದನು” ಅಂದರೆ ಸತ್ತುಹೋದನು. ನಂತರ “ಅವನ ಶವವನ್ನು ದಾವೀದನಗರದಲ್ಲಿ ಸಮಾಧಿ ಮಾಡಿದರು.” (1 ಅರ. 2:1, 10) ಹಾಗಾದರೆ ಕೀರ್ತನೆ 16:10 ಯಾರ ಬಗ್ಗೆ ಮಾತಾಡುತ್ತಿರಬಹುದು?

11. ಕೀರ್ತನೆ 16:10​ನ್ನು ಪೇತ್ರನು ಯಾವಾಗ ವಿವರಿಸಿದನು?

11 ದಾವೀದನು ಆ ಮಾತುಗಳನ್ನು ಬರೆದು ಒಂದು ಸಾವಿರಕ್ಕಿಂತ ಹೆಚ್ಚು ವರ್ಷಗಳಾದ ಮೇಲೆ ಪೇತ್ರನು ಕೀರ್ತನೆ 16:10 ಯಾರ ಬಗ್ಗೆ ಮಾತಾಡುತ್ತದೆ ಎಂದು ವಿವರಿಸಿದನು. ಪೇತ್ರನು ಸಾವಿರಾರು ಯೆಹೂದ್ಯರನ್ನು ಮತ್ತು ಯೆಹೂದಿ ಮತಾವಲಂಬಿಗಳನ್ನು ಉದ್ದೇಶಿಸಿ ಮಾತಾಡಿದನು. ಆಗ ಯೇಸು ಪುನರುತ್ಥಾನಗೊಂಡು ಕೆಲವು ವಾರಗಳಾಗಿತ್ತು. (ಅ. ಕಾರ್ಯಗಳು 2:29-32 ಓದಿ.) ದಾವೀದನು ಸತ್ತನು ಮತ್ತು ಅವನನ್ನು ಸಮಾಧಿ ಮಾಡಲಾಯಿತು ಎಂದು ಹೇಳಿದನು. ದಾವೀದನು ಮೆಸ್ಸೀಯನ “ಪುನರುತ್ಥಾನದ ಕುರಿತು ಮುಂಚಿತವಾಗಿಯೇ ನೋಡಿ ಅದರ ಕುರಿತು ಮಾತಾಡಿದನು” ಎಂದು ಪೇತ್ರನು ವಿವರಿಸಿದಾಗ ಅಲ್ಲಿದ್ದವರು ಯಾರೂ ಅದನ್ನು ನಿರಾಕರಿಸಿದರು ಎಂದು ಬೈಬಲ್‌ ಹೇಳುವುದಿಲ್ಲ.

12. (ಎ) ಕೀರ್ತನೆ 16:10 ಹೇಗೆ ನೆರವೇರಿತು? (ಬಿ) ಪುನರುತ್ಥಾನದ ವಾಗ್ದಾನದ ಬಗ್ಗೆ ಇದು ನಮಗೆ ಏನನ್ನು ಕಲಿಸುತ್ತದೆ?

12 ಪೇತ್ರನು ತಾನು ಹೇಳುತ್ತಿರುವ ವಿಷಯವನ್ನು ಸಮರ್ಥಿಸುತ್ತಾ ಕೀರ್ತನೆ 110:1​ರಲ್ಲಿರುವ ದಾವೀದನ ಮಾತುಗಳನ್ನು ಉಲ್ಲೇಖಿಸಿದನು. (ಅ. ಕಾರ್ಯಗಳು 2:33-36 ಓದಿ.) ಪೇತ್ರನು ದೇವರ ವಾಕ್ಯದ ಆಧಾರದಿಂದ ತರ್ಕಿಸಿದ್ದನ್ನು ಕೇಳಿ ಜನರು ಯೇಸುವನ್ನು “ಕರ್ತನನ್ನಾಗಿಯೂ ಕ್ರಿಸ್ತನನ್ನಾಗಿಯೂ” ಸ್ವೀಕರಿಸಿದರು. ಯೇಸುವಿನ ಪುನರುತ್ಥಾನವಾದಾಗ ಕೀರ್ತನೆ 16:10 ನೆರವೇರಿತು ಎಂದು ಜನರು ಅರ್ಥಮಾಡಿಕೊಂಡರು. ಕಾಲಾನಂತರ ಅಪೊಸ್ತಲ ಪೌಲನು ಪಿಸಿದ್ಯದ ಅಂತಿಯೋಕ್ಯದಲ್ಲಿದ್ದ ಯೆಹೂದ್ಯರೊಂದಿಗೆ ಮಾತಾಡಿದಾಗ ಇದೇ ವಚನವನ್ನು ಆಧಾರವಾಗಿ ಉಪಯೋಗಿಸಿದನು. ಈ ಆಧಾರ ಅವರ ಮೇಲೆ ನಿಜಕ್ಕೂ ಪ್ರಭಾವ ಬೀರಿತು ಮತ್ತು ಅವರು ಹೆಚ್ಚನ್ನು ಕೇಳಿಸಿಕೊಳ್ಳಲು ಬಯಸಿದರು. (ಅ. ಕಾರ್ಯಗಳು 13:32-37, 42 ಓದಿ.) ಮುಂದೆ ನಡೆಯಲಿದ್ದ ಪುನರುತ್ಥಾನದ ಬಗ್ಗೆ ನೂರಾರು ವರ್ಷಗಳ ಹಿಂದೆಯೇ ಹೇಳಿದ ಈ ಬೈಬಲ್‌ ಪ್ರವಾದನೆಗಳಲ್ಲಿ ನಾವು ನಂಬಿಕೆ ಇಡಬಹುದು ಎಂದು ಇದರಿಂದ ಗೊತ್ತಾಗುತ್ತದೆ.

ಪುನರುತ್ಥಾನ ಯಾವಾಗ ಆಗುತ್ತದೆ?

13. ಪುನರುತ್ಥಾನದ ಬಗ್ಗೆ ಯಾವ ಪ್ರಶ್ನೆಗಳು ಏಳಬಹುದು?

13 ಒಂದು ಪುನರುತ್ಥಾನದ ಬಗ್ಗೆ ನೂರಾರು ವರ್ಷಗಳ ಹಿಂದೆಯೇ ಹೇಳಿದ್ದರೂ ಅದು ನೆರವೇರುತ್ತದೆ ಎಂದು ತಿಳಿದು ನಮಗೆ ಸಂತೋಷವಾಯಿತು. ‘ಹಾಗಾದರೆ ತೀರಿಹೋಗಿರುವ ನನ್ನ ಪ್ರಿಯ ವ್ಯಕ್ತಿಯನ್ನು ನೋಡಲು ನಾನು ತುಂಬ ಸಮಯ ಕಾಯಬೇಕಾ? ಪುನರುತ್ಥಾನ ಯಾವಾಗ ಆಗುತ್ತದೆ?’ ಎಂದು ಕೆಲವರು ಕೇಳಬಹುದು. ತನ್ನ ಶಿಷ್ಯರಿಗೆ ತಿಳಿದಿಲ್ಲದ ಅಥವಾ ತಿಳಿದುಕೊಳ್ಳಲು ಸಾಧ್ಯವಿಲ್ಲದ ವಿಷಯಗಳಿದ್ದವು ಎಂದು ಯೇಸು ಅವರಿಗೆ ಹೇಳಿದನು. “ತಂದೆಯು ತನ್ನ ಸ್ವಂತ ಅಧಿಕಾರದಲ್ಲಿ ಇಟ್ಟುಕೊಂಡಿರುವ ಸಮಯಗಳ ಅಥವಾ ಕಾಲಗಳ ಕುರಿತು ತಿಳಿದುಕೊಳ್ಳುವುದು ನಿಮಗೆ ಸೇರಿದ್ದಲ್ಲ” ಎಂದು ಯೇಸು ಹೇಳಿದನು. (ಅ. ಕಾ. 1:6, 7; ಯೋಹಾ. 16:12) ವಿಷಯ ಹೀಗಿದ್ದರೂ ಪುನರುತ್ಥಾನ ಯಾವಾಗ ಆಗುತ್ತದೆ ಎಂದು ನಾವು ತಿಳಿದುಕೊಳ್ಳಲು ಸಾಧ್ಯವಿದೆ.

14. ಯೇಸುವಿನ ಪುನರುತ್ಥಾನಕ್ಕೂ ಆತನ ಮುಂಚೆ ನಡೆದ ಪುನರುತ್ಥಾನಗಳಿಗೂ ಏನು ವ್ಯತ್ಯಾಸ?

14 ಬೈಬಲಿನಲ್ಲಿ ದಾಖಲಾಗಿರುವ ಅತಿ ಮುಖ್ಯವಾದ ಪುನರುತ್ಥಾನ ಯೇಸುವಿನ ಪುನರುತ್ಥಾನ. ಯೇಸುವಿನ ಪುನರುತ್ಥಾನ ಆಗಿಲ್ಲವಾದರೆ ಸತ್ತುಹೋಗಿರುವ ನಮ್ಮ ಪ್ರಿಯ ಜನರನ್ನು ನಾವು ಪುನಃ ನೋಡುವ ನಿರೀಕ್ಷೆಯೇ ಇರುತ್ತಿರಲಿಲ್ಲ. ಯೇಸುವಿಗಿಂತ ಮುಂಚೆ ಪುನರುತ್ಥಾನ ಆದವರು ಅಂದರೆ ಎಲೀಯ ಎಲೀಷರಿಂದ ಪುನರುತ್ಥಾನ ಮಾಡಲ್ಪಟ್ಟವರು ಸದಾಕಾಲ ಜೀವಿಸಲಿಲ್ಲ. ಅವರು ಪುನಃ ಸತ್ತು ಸಮಾಧಿ ಸೇರಿದರು. ಆದರೆ ಯೇಸು “ಸತ್ತವರೊಳಗಿಂದ . . . ಎಬ್ಬಿಸಲ್ಪಟ್ಟಿರುವುದರಿಂದ ಅವನು ಇನ್ನು ಮುಂದೆ ಸಾಯುವುದಿಲ್ಲ, ಇನ್ನು ಮುಂದೆ ಮರಣವು ಅವನ ಮೇಲೆ ಒಡೆಯನಾಗಿರುವುದಿಲ್ಲ.” ಆತನು ಸ್ವರ್ಗದಲ್ಲಿ “ಸದಾಕಾಲಕ್ಕೂ” ಜೀವಿಸುವವನಾಗಿದ್ದಾನೆ.—ರೋಮ. 6:9; ಪ್ರಕ. 1:5, 18; ಕೊಲೊ. 1:18; 1 ಪೇತ್ರ 3:18.

15. ಯೇಸುವನ್ನು “ಪ್ರಥಮಫಲ” ಎಂದು ಯಾಕೆ ಕರೆಯಲಾಗಿದೆ?

15 ಸ್ವರ್ಗದಲ್ಲಿ ಒಬ್ಬ ಆತ್ಮಜೀವಿಯಾಗಿರಲು ಎಬ್ಬಿಸಲ್ಪಟ್ಟ ಮೊದಲನೇ ವ್ಯಕ್ತಿ ಯೇಸು. ಅಷ್ಟೇ ಅಲ್ಲ ಆತನ ಪುನರುತ್ಥಾನವೇ ಅತಿ ಪ್ರಾಮುಖ್ಯ ಪುನರುತ್ಥಾನ. (ಅ. ಕಾ. 26:23) ಆದರೆ ಪುನರುತ್ಥಾನಗೊಂಡು ಸ್ವರ್ಗಕ್ಕೆ ಹೋಗುವ ವ್ಯಕ್ತಿ ಯೇಸು ಒಬ್ಬನೇ ಅಲ್ಲ. ತನ್ನ ನಂಬಿಗಸ್ತ ಅಪೊಸ್ತಲರು ಸಹ ತನ್ನೊಂದಿಗೆ ಸ್ವರ್ಗದಿಂದ ಆಳುವರು ಎಂದು ಯೇಸು ಮಾತು ಕೊಟ್ಟಿದ್ದನು. (ಲೂಕ 22:28-30) ಅವರು ತೀರಿಹೋದ ನಂತರವೇ ಅವರಿಗೆ ಈ ಬಹುಮಾನ ಸಿಗುತ್ತದೆ. ಅವರನ್ನು ಆತ್ಮಜೀವಿಯಾಗಿ ಪುನರುತ್ಥಾನ ಮಾಡಲಾಗುತ್ತದೆ. ಪೌಲನು ಹೀಗೆ ಬರೆದನು: “ಕ್ರಿಸ್ತನು ಸತ್ತವರೊಳಗಿಂದ ಎಬ್ಬಿಸಲ್ಪಟ್ಟಿದ್ದಾನೆ; ಮರಣದಲ್ಲಿ ನಿದ್ರೆಹೋದವರಲ್ಲಿ ಪ್ರಥಮಫಲವಾಗಿದ್ದಾನೆ.” ಸ್ವರ್ಗದಲ್ಲಿ ಜೀವಿಸಲಿಕ್ಕಾಗಿ ಪುನರುತ್ಥಾನ ಮಾಡಲ್ಪಡುವ ವ್ಯಕ್ತಿಗಳೂ ಇರುತ್ತಾರೆ ಎಂದು ಪೌಲನು ಹೇಳಿದನು. “ಪ್ರತಿಯೊಬ್ಬನು ತನ್ನ ಸ್ವಂತ ದರ್ಜೆಯಲ್ಲಿ ಎಬ್ಬಿಸಲ್ಪಡುವನು: ಕ್ರಿಸ್ತನು ಪ್ರಥಮಫಲ, ಅನಂತರ ಕ್ರಿಸ್ತನ ಸಾನ್ನಿಧ್ಯದ ಸಮಯದಲ್ಲಿ ಅವನಿಗೆ ಸೇರಿದವರು ಎಬ್ಬಿಸಲ್ಪಡುವರು” ಎಂದನು.—1 ಕೊರಿಂ. 15:20, 23.

16. ಸ್ವರ್ಗೀಯ ಪುನರುತ್ಥಾನ ಯಾವಾಗ ಆಗುತ್ತದೆ ಎಂಬುದಕ್ಕೆ ಯಾವ ಸುಳಿವಿದೆ?

16 ಸ್ವರ್ಗೀಯ ಪುನರುತ್ಥಾನ ಯಾವಾಗ ಆಗುತ್ತದೆ ಎಂಬುದಕ್ಕೆ ಪೌಲನ ಮಾತುಗಳಲ್ಲಿ ಒಂದು ಸುಳಿವಿದೆ. ಇದು “ಕ್ರಿಸ್ತನ ಸಾನ್ನಿಧ್ಯದ ಸಮಯದಲ್ಲಿ” ಆಗುತ್ತದೆ. ಕ್ರಿಸ್ತನ “ಸಾನ್ನಿಧ್ಯ” 1914​ರಲ್ಲಿ ಆರಂಭವಾಯಿತೆಂದು ಬೈಬಲಿನ ಆಧಾರದಿಂದ ಯೆಹೋವನ ಸಾಕ್ಷಿಗಳು ಅನೇಕ ವರ್ಷಗಳಿಂದ ಸಾಬೀತುಪಡಿಸುತ್ತಾ ಬಂದಿದ್ದಾರೆ. ನಾವಿನ್ನೂ ಆತನ “ಸಾನ್ನಿಧ್ಯದ” ಸಮಯದಲ್ಲೇ ಜೀವಿಸುತ್ತಿದ್ದೇವೆ ಮತ್ತು ಈ ದುಷ್ಟ ವ್ಯವಸ್ಥೆಯ ಅಂತ್ಯ ತುಂಬ ಹತ್ತಿರವಿದೆ.

17, 18. ಕ್ರಿಸ್ತನ ಸಾನ್ನಿಧ್ಯದ ಸಮಯದಲ್ಲಿ ಕೆಲವು ಅಭಿಷಿಕ್ತರಿಗೆ ಏನಾಗುವುದು?

17 ಸ್ವರ್ಗೀಯ ಪುನರುತ್ಥಾನದ ಬಗ್ಗೆ ಬೈಬಲು ಇನ್ನೂ ಕೆಲವು ವಿಷಯಗಳನ್ನು ಹೇಳುತ್ತದೆ: “ಮರಣದಲ್ಲಿ ನಿದ್ರೆಹೋಗುತ್ತಿರುವವರ ವಿಷಯದಲ್ಲಿ ನೀವು ಅಜ್ಞಾನಿಗಳಾಗಿರಬಾರದೆಂಬುದು ನಮ್ಮ ಅಪೇಕ್ಷೆ; . . . ಯೇಸು ಸತ್ತು ಜೀವಿತನಾಗಿ ಎದ್ದುಬಂದನು ಎಂಬುದು ನಮ್ಮ ನಂಬಿಕೆಯಾಗಿದ್ದರೆ, . . . ಮರಣದಲ್ಲಿ ನಿದ್ರೆಹೋದವರನ್ನು ಸಹ ದೇವರು ಅವನೊಂದಿಗೆ ಎಬ್ಬಿಸುವನು ಎಂಬುದನ್ನು ನಂಬುತ್ತೇವೆ. . . . ಕರ್ತನ ಸಾನ್ನಿಧ್ಯದ ವರೆಗೆ ಜೀವದಿಂದುಳಿಯುವ ನಾವು ಯಾವುದೇ ರೀತಿಯಲ್ಲಿ ಮರಣದಲ್ಲಿ ನಿದ್ರೆಹೋದವರಿಗಿಂತ ಮುಂದಾಗುವುದೇ ಇಲ್ಲ; ಏಕೆಂದರೆ ಕರ್ತನು ತಾನೇ ಆಜ್ಞಾಘೋಷದೊಡನೆ . . . ಸ್ವರ್ಗದಿಂದ ಇಳಿದುಬರುವನು ಮತ್ತು ಕ್ರಿಸ್ತನೊಂದಿಗೆ ಐಕ್ಯದಲ್ಲಿ ಸತ್ತವರು ಮೊದಲು ಎದ್ದುಬರುವರು. ಅನಂತರ ಜೀವದಿಂದುಳಿದಿರುವ ನಾವು ಆಕಾಶದಲ್ಲಿ ಕರ್ತನನ್ನು ಎದುರುಗೊಳ್ಳಲು ಅವರೊಂದಿಗೆ ಮೇಘಗಳಲ್ಲಿ ಕೊಂಡೊಯ್ಯಲ್ಪಡುವೆವು; ಹೀಗೆ ನಾವು ಯಾವಾಗಲೂ ಕರ್ತನೊಂದಿಗೆ ಇರುವಂತಾಗುವುದು.”—1 ಥೆಸ. 4:13-17.

18 ಮೊದಲನೆಯ ಪುನರುತ್ಥಾನ ಕ್ರಿಸ್ತನ ಸಾನ್ನಿಧ್ಯ ಆರಂಭವಾಗಿ ಸ್ವಲ್ಪ ಸಮಯದ ನಂತರ ಶುರುವಾಯಿತು. ಮಹಾ ಸಂಕಟದ ಸಮಯದಲ್ಲಿ ಭೂಮಿಯಲ್ಲಿರುವ ಅಭಿಷಿಕ್ತರು ‘ಮೇಘಗಳಲ್ಲಿ ಕೊಂಡೊಯ್ಯಲ್ಪಡುವರು.’ (ಮತ್ತಾ. 24:31) ಇದರ ಅರ್ಥ ಏನು? ‘ಮೇಘಗಳಲ್ಲಿ ಕೊಂಡೊಯ್ಯಲ್ಪಡುವವರು’ “ಮರಣದಲ್ಲಿ ನಿದ್ರೆಹೋಗುವುದಿಲ್ಲ.” ಅಂದರೆ ಅವರು ತುಂಬ ಸಮಯದ ವರೆಗೆ ಮೃತ ಸ್ಥಿತಿಯಲ್ಲಿರುವುದಿಲ್ಲ. ಅವರು ಸಾಯುವಾಗ ‘ಒಂದೇ ಕ್ಷಣದಲ್ಲಿ, ಕಣ್ಣುರೆಪ್ಪೆ ಬಡಿಯುವಷ್ಟರೊಳಗೆ ಮಾರ್ಪಡುವರು. ಕೊನೆಯ ತುತೂರಿಯು ಊದಲ್ಪಡುವಾಗ’ ಇದು ನಡೆಯುವುದು.—1 ಕೊರಿಂ. 15:51, 52.

19. “ಉತ್ತಮವಾದ ಪುನರುತ್ಥಾನ” ಅಂದರೆ ಏನು?

19 ಇಂದಿರುವ ಹೆಚ್ಚಿನ ನಂಬಿಗಸ್ತ ಕ್ರೈಸ್ತರು ಅಭಿಷಿಕ್ತರಲ್ಲ. ಅವರು ಸ್ವರ್ಗದಲ್ಲಿ ಕ್ರಿಸ್ತನೊಂದಿಗೆ ಆಳಲು ಆಯ್ಕೆಯಾಗಿಲ್ಲ. ‘ಯೆಹೋವನ ದಿನಕ್ಕಾಗಿ’ ಅವರು ಕಾಯುತ್ತಿದ್ದಾರೆ. ಆ ದಿನದಲ್ಲಿ ಯೆಹೋವನು ಈ ದುಷ್ಟ ಲೋಕಕ್ಕೆ ಅಂತ್ಯ ತರುವನು. ಈ ಅಂತ್ಯ ಯಾವಾಗ ಬರುತ್ತದೆ ಎಂದು ಯಾರಿಗೂ ನಿರ್ದಿಷ್ಟವಾಗಿ ಗೊತ್ತಿಲ್ಲ. ಆದರೆ ಅದು ತುಂಬ ಬೇಗ ಆಗುತ್ತದೆ ಎಂದು ಪುರಾವೆ ತೋರಿಸುತ್ತದೆ. (1 ಥೆಸ. 5:1-3) ದೇವರ ಹೊಸ ಲೋಕ ಬಂದಾಗ ಇನ್ನೊಂದು ರೀತಿಯ ಪುನರುತ್ಥಾನ ಆಗುತ್ತದೆ. ಆಗ ಜನರನ್ನು ಭೂಮಿಯ ಮೇಲೆ ಜೀವಿಸಲು ಪುನರುತ್ಥಾನ ಮಾಡಲಾಗುತ್ತದೆ ಮತ್ತು ಅವರು ಪರಿಪೂರ್ಣರಾಗಿ ಸಾವಿಲ್ಲದ ಜೀವನವನ್ನು ಪಡೆದುಕೊಳ್ಳುವರು. ಇದನ್ನು “ಉತ್ತಮವಾದ ಪುನರುತ್ಥಾನ” ಎಂದು ಕರೆಯಲಾಗುತ್ತದೆ. ಏಕೆಂದರೆ ಹಿಂದಿನ ಕಾಲದಲ್ಲಿ ಪುನರುತ್ಥಾನವಾದವರು ಸಮಯಾನಂತರ ಪುನಃ ಸತ್ತುಹೋದರು. ಆದರೆ ಇವರ ವಿಷಯದಲ್ಲಿ ಹಾಗೆ ಆಗುವುದಿಲ್ಲ.—ಇಬ್ರಿ. 11:35.

20. ಪುನರುತ್ಥಾನ ಒಂದು ಕ್ರಮದಲ್ಲಿ ನಡೆಯುತ್ತದೆ ಎಂದು ಏಕೆ ನಂಬಬಹುದು?

20 ಸ್ವರ್ಗಕ್ಕೆ ಹೋಗುವವರಲ್ಲಿ “ಪ್ರತಿಯೊಬ್ಬನು ತನ್ನ ಸ್ವಂತ ದರ್ಜೆಯಲ್ಲಿ ಎಬ್ಬಿಸಲ್ಪಡುವನು” ಎಂದು ಬೈಬಲ್‌ ಹೇಳುತ್ತದೆ. (1 ಕೊರಿಂ. 15:23) ಆದ್ದರಿಂದ ಭೂಮಿಯ ಮೇಲೆ ಆಗುವ ಪುನರುತ್ಥಾನ ಸಹ ಒಂದು ಕ್ರಮದಲ್ಲಿ ನಡೆಯುವುದು ಎಂದು ನಂಬಬಹುದು. ಇದರಿಂದಾಗಿ ಇಂಥ ಕೆಲವು ಪ್ರಶ್ನೆಗಳು ಏಳಬಹುದು: ಇತ್ತೀಚೆಗೆ ತೀರಿಕೊಂಡವರನ್ನು ಅವರಿಗೆ ತಿಳಿದಿರುವ ಪ್ರೀತಿಯ ಜನರು ಪುನಃ ಬರಮಾಡಿಕೊಳ್ಳಲು ಸಾಧ್ಯವಾಗುವಂತೆ ಅವರನ್ನು ಕ್ರಿಸ್ತನ ಸಾವಿರ ವರ್ಷದ ಆಳ್ವಿಕೆಯ ಆರಂಭದಲ್ಲಿ ಪುನರುತ್ಥಾನ ಮಾಡಲಾಗುವುದಾ? ಹೊಸ ಲೋಕದಲ್ಲಿ ದೇವಜನರನ್ನು ಸಂಘಟಿಸುವುದರಲ್ಲಿ ಸಹಾಯ ನೀಡಲಿಕ್ಕಾಗಿ ಒಳ್ಳೇ ನಾಯಕರಾಗಿದ್ದ ಹಿಂದಿನ ಕಾಲದ ನಂಬಿಗಸ್ತ ಪುರುಷರನ್ನು ಬೇಗನೆ ಪುನರುತ್ಥಾನ ಮಾಡಲಾಗುವುದಾ? ಯೆಹೋವನ ಸೇವೆಯನ್ನು ಯಾವತ್ತೂ ಮಾಡಿಲ್ಲದ ಜನರ ವಿಷಯದಲ್ಲಿ ಏನಾಗುವುದು? ಅವರನ್ನು ಯಾವಾಗ ಮತ್ತು ಎಲ್ಲಿ ಪುನರುತ್ಥಾನ ಮಾಡಲಾಗುವುದು? ನಮ್ಮಲ್ಲಿ ಇಂಥ ಎಷ್ಟೋ ಪ್ರಶ್ನೆಗಳು ಇರಬಹುದು. ಆದರೆ ನಾವು ಈ ವಿಷಯಗಳ ಕುರಿತು ಈಗ ಚಿಂತಿಸಬೇಕಾಗಿಲ್ಲ. ಮುಂದೆ ಏನಾಗುತ್ತದೆ ಎಂದು ನೋಡಲು ಕಾಯುವುದು ಒಳ್ಳೇದು. ಆದರೆ ಯೆಹೋವನು ಈ ವಿಷಯಗಳನ್ನೆಲ್ಲಾ ಮಾಡುವಾಗ ನಾವು ವಿಸ್ಮಯಗೊಳ್ಳುವುದಂತೂ ಖಂಡಿತ.

21. ನಿಮ್ಮ ನಿರೀಕ್ಷೆ ಏನು?

21 ಆ ಸಮಯದ ವರೆಗೆ ನಾವು ಯೆಹೋವನ ಮೇಲಿರುವ ನಮ್ಮ ನಂಬಿಕೆಯನ್ನು ಬಲಪಡಿಸಬೇಕು. ಮೃತಪಟ್ಟವರನ್ನು ತಾನು ಮರೆತಿಲ್ಲ ಮತ್ತು ಅವರಿಗೆ ಪುನಃ ಜೀವ ಕೊಡುತ್ತೇನೆ ಎಂದು ಯೆಹೋವನು ಯೇಸುವಿನ ಮೂಲಕ ಮಾತು ಕೊಟ್ಟಿದ್ದಾನೆ. (ಯೋಹಾ. 5:28, 29; 11:23) ಯೆಹೋವನಿಗೆ ಸತ್ತವರನ್ನು ಪುನರುತ್ಥಾನಗೊಳಿಸುವ ಶಕ್ತಿ ಇದೆ ಎಂದು ತೋರಿಸಲು ಯೇಸು ಏನು ಹೇಳಿದನೆಂದರೆ, ಅಬ್ರಹಾಮ, ಇಸಾಕ, ಯಾಕೋಬ “ಅವರೆಲ್ಲರೂ ಆತನಿಗೆ ಜೀವಿಸುವವರೇ.” (ಲೂಕ 20:37, 38) ಆದ್ದರಿಂದ “ಪುನರುತ್ಥಾನವಾಗುವುದೆಂದು . . . ದೇವರಲ್ಲಿ ನಾನೂ ನಿರೀಕ್ಷೆ ಇಟ್ಟಿದ್ದೇನೆ” ಎಂದು ಹೇಳಿದ ಪೌಲನಂತೆ ನಾವೂ ಹೇಳಲು ಅನೇಕ ಬಲವಾದ ಕಾರಣಗಳಿವೆ.—ಅ. ಕಾ. 24:15.