ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜೀವನ ಕಥೆ

ಯೇಸುವನ್ನು ಹಿಂಬಾಲಿಸಲು ನಾನು ಕೆಲವು ವಿಷಯಗಳನ್ನು ಬಿಡಬೇಕಾಯಿತು

ಯೇಸುವನ್ನು ಹಿಂಬಾಲಿಸಲು ನಾನು ಕೆಲವು ವಿಷಯಗಳನ್ನು ಬಿಡಬೇಕಾಯಿತು

ನನಗೆ 16 ವರ್ಷ ಇದ್ದಾಗ ನನ್ನ ತಂದೆ, “ನೀನು ಸಾರಲಿಕ್ಕೆ ಹೋದರೆ ಮತ್ತೆ ಈ ಮನೆ ಮೆಟ್ಟಿಲು ತುಳಿಬೇಡ. ತುಳಿದರೆ ನಿನ್ನ ಕಾಲು ಮುರಿದುಹಾಕುತ್ತೇನೆ” ಎಂದಿದ್ದರು. ಇದರಿಂದ ನಾನು ಮನೆ ಬಿಟ್ಟು ಹೋಗಬೇಕಾಯಿತು. ನಾನು ಯೇಸುವನ್ನು ಹಿಂಬಾಲಿಸಲಿಕ್ಕಾಗಿ ಬಿಟ್ಟ ಮೊದಲನೇ ವಿಷಯ ಇದೇ ಆಗಿತ್ತು.

ನನ್ನ ತಂದೆಗೆ ಯಾಕೆ ಇಷ್ಟು ಸಿಟ್ಟು ಬಂದಿತ್ತು? ವಿವರಿಸುತ್ತೇನೆ ಕೇಳಿ. ನಾನು ಹುಟ್ಟಿದ್ದು 1929​ರ ಜುಲೈ 29​ರಂದು. ಫಿಲಿಪ್ಪೀನ್ಸ್‌ ದೇಶದಲ್ಲಿರುವ ಬೂಲಾಕಾನ್‌ ಪ್ರಾಂತದ ಒಂದು ಹಳ್ಳಿಯಲ್ಲಿ ನಾನು ಬೆಳೆದೆ. ನಮ್ಮ ಹತ್ತಿರ ಹೆಚ್ಚು ಹಣ ಇರಲಿಲ್ಲ. ಸರಳವಾದ ಜೀವನ ನಡೆಸಿದೆವು. ನಾನು ಚಿಕ್ಕವನಿದ್ದಾಗ ಜಪಾನಿನ ಸೈನ್ಯ ಫಿಲಿಪ್ಪೀನ್ಸ್‌ ಮೇಲೆ ದಾಳಿಮಾಡಿತು. ಇದರಿಂದ ಯುದ್ಧ ಆರಂಭವಾಯಿತು. ಆದರೆ ನಮ್ಮ ಹಳ್ಳಿ ತುಂಬ ದೂರದಲ್ಲಿ ಪ್ರತ್ಯೇಕವಾದ ಪ್ರದೇಶದಲ್ಲಿ ಇದ್ದದರಿಂದ ಯುದ್ಧದ ಪ್ರಭಾವ ನಮ್ಮ ಮೇಲೆ ಆಗಲಿಲ್ಲ. ನಮ್ಮ ಹತ್ತಿರ ರೇಡಿಯೋ, ಟೀವಿ, ವಾರ್ತಾಪತ್ರಿಕೆ ಯಾವುದೂ ಇರಲಿಲ್ಲ. ಯುದ್ಧದ ಬಗ್ಗೆ ನಾವು ಬೇರೆ ಜನರಿಂದ ತಿಳಿದುಕೊಳ್ಳುತ್ತಿದ್ದೆವು.

ನಾವು ಎಂಟು ಜನ ಮಕ್ಕಳು. ನನಗೆ ಎಂಟು ವರ್ಷ ಇದ್ದಾಗ ನನ್ನ ಅಜ್ಜ-ಅಜ್ಜಿ ನನ್ನನ್ನು ಅವರ ಜೊತೆ ಇರಲು ಕರೆದುಕೊಂಡು ಹೋದರು. ನಾವು ಕ್ಯಾಥೊಲಿಕ್‌ ಧರ್ಮಕ್ಕೆ ಸೇರಿದವರಾಗಿದ್ದರೂ ನನ್ನ ಅಜ್ಜ ಧರ್ಮಗಳ ಬಗ್ಗೆ ಮಾತಾಡಲು ಇಷ್ಟಪಡುತ್ತಿದ್ದರು, ಅವರ ಸ್ನೇಹಿತರು ಕೊಟ್ಟ ಧಾರ್ಮಿಕ ಸಾಹಿತ್ಯವನ್ನು ಓದುತ್ತಿದ್ದರು. ಹೀಗೆ ಅವರಿಗೆ ಸಿಕ್ಕಿದ್ದ ಕೆಲವು ಕಿರುಪುಸ್ತಿಕೆಗಳನ್ನು ನನಗೆ ತೋರಿಸಿದರು. ಇವು ಟಗಾಲಗ್‌ ಭಾಷೆಯಲ್ಲಿದ್ದು ಸುಳ್ಳು ಧರ್ಮದ ಬೋಧನೆಗಳನ್ನು ಬಯಲುಪಡಿಸಿದವು. ಈ ಭಾಷೆಯಲ್ಲಿ ಒಂದು ಬೈಬಲ್‌ ಸಹ ಅವರ ಬಳಿ ಇತ್ತು. ನನಗೆ ಬೈಬಲ್‌ ಓದುವುದೆಂದರೆ ಇಷ್ಟ. ಮುಖ್ಯವಾಗಿ ನಾಲ್ಕು ಸುವಾರ್ತಾ ಪುಸ್ತಕಗಳು ತುಂಬ ಇಷ್ಟ. ಇದನ್ನು ಓದಿದ್ದರಿಂದ ಯೇಸುವನ್ನು ಹಿಂಬಾಲಿಸಬೇಕು ಎಂದನಿಸಿತು.—ಯೋಹಾ. 10:27.

ಯೇಸುವನ್ನು ಹಿಂಬಾಲಿಸಲು ಕಲಿತೆ

ಜಪಾನಿನ ಸೈನ್ಯ 1945​ರಲ್ಲಿ ಫಿಲಿಪ್ಪೀನ್ಸನ್ನು ಬಿಟ್ಟು ಹೋಯಿತು. ಹೆಚ್ಚುಕಡಿಮೆ ಆ ಸಮಯಕ್ಕೆ ನನ್ನ ಹೆತ್ತವರು ನನ್ನನ್ನು ವಾಪಸ್ಸು ಮನೆಗೆ ಬರುವಂತೆ ಹೇಳಿದರು. ಅಜ್ಜ ಕೂಡ ಹೋಗಲು ಹೇಳಿದ್ದರಿಂದ ನಾನು ಮನೆ ದಾರಿ ಹಿಡಿದೆ.

1945​ರ ಡಿಸೆಂಬರ್‌ ತಿಂಗಳಲ್ಲಿ ಆಂಗಾಟ್‌ ಪಟ್ಟಣದಿಂದ ಬಂದ ಯೆಹೋವನ ಸಾಕ್ಷಿಗಳು ನಮ್ಮ ಹಳ್ಳಿಯಲ್ಲಿ ಸುವಾರ್ತೆ ಸಾರಿದರು. ಒಬ್ಬ ವೃದ್ಧ ಸಾಕ್ಷಿ ನಮ್ಮ ಮನೆಗೆ ಬಂದು “ಕಡೇ ದಿವಸಗಳ” ಬಗ್ಗೆ ಬೈಬಲ್‌ ಹೇಳುವ ವಿಷಯವನ್ನು ವಿವರಿಸಿದರು. (2 ತಿಮೊ. 3:1-5) ಹತ್ತಿರದ ಒಂದು ಹಳ್ಳಿಯಲ್ಲಿ ಬೈಬಲ್‌ ಅಧ್ಯಯನಕ್ಕೆ ಹಾಜರಾಗುವಂತೆ ಆಮಂತ್ರಿಸಿದರು. ನನ್ನ ಹೆತ್ತವರು ಬರದಿದ್ದರೂ ನಾನು ಹೋದೆ. ಸುಮಾರು 20 ಜನ ಅಲ್ಲಿದ್ದರು. ಅವರಲ್ಲಿ ಕೆಲವರು ಬೈಬಲ್‌ ಬಗ್ಗೆ ಪ್ರಶ್ನೆಗಳನ್ನು ಕೇಳಿದರು.

ಅವರು ಏನು ಮಾತಾಡುತ್ತಿದ್ದಾರೆ ಎಂದು ನನಗೆ ಅಷ್ಟು ಅರ್ಥ ಆಗಲಿಲ್ಲ. ಆದ್ದರಿಂದ ಅಲ್ಲಿಂದ ಹೊರಟುಬಿಡೋಣ ಅನ್ನುವಷ್ಟರಲ್ಲಿ ಅವರು ಒಂದು ರಾಜ್ಯ ಗೀತೆಯನ್ನು ಹಾಡಿದರು. ನನಗೆ ಆ ಹಾಡು ತುಂಬ ಇಷ್ಟವಾಯಿತು. ನಾನು ಪುನಃ ಅಲ್ಲೇ ಕುಳಿತುಕೊಂಡೆ. ಗೀತೆ ಮತ್ತು ಪ್ರಾರ್ಥನೆಯಾದ ಬಳಿಕ ಮುಂದಿನ ಭಾನುವಾರ ಆಂಗಾಟ್‌ನಲ್ಲಿ ನಡೆಯುವ ಕೂಟಕ್ಕೆ ಹಾಜರಾಗುವಂತೆ ನಮ್ಮೆಲ್ಲರಿಗೆ ಆಮಂತ್ರಣ ಕೊಡಲಾಯಿತು.

ಆ ಕೂಟ ಕ್ರೂಸ್‌ ಎಂಬವರ ಮನೆಯಲ್ಲಿ ನಡೆಯಿತು. ನಮ್ಮಲ್ಲಿ ಕೆಲವರು ಅಲ್ಲಿಗೆ ತಲಪಲು ಎಂಟು ಕಿ.ಮೀ. ದೂರ ನಡೆಯಬೇಕಾಯಿತು. ಸುಮಾರು 50 ಜನ ಅಲ್ಲಿದ್ದರು. ಅಲ್ಲಿದ್ದ ಚಿಕ್ಕಚಿಕ್ಕ ಮಕ್ಕಳು ಸಹ ಕಷ್ಟವಾದ ಬೈಬಲ್‌ ವಿಷಯಗಳ ಬಗ್ಗೆ ಕೈ ಎತ್ತಿ ಉತ್ತರ ಹೇಳುತ್ತಿರುವುದನ್ನು ನೋಡಿ ನನಗೆ ಆಶ್ಚರ್ಯವಾಯಿತು. ನಾನು ಹಲವಾರು ಕೂಟಗಳಿಗೆ ಹಾಜರಾದ ಮೇಲೆ ಒಂದು ದಿನ ಡಾಮೀಯಾನ್‌ ಸಾಂಟೋಸ್‌ ಎಂಬ ಒಬ್ಬ ವೃದ್ಧ ಪಯನೀಯರ್‌ ಸಹೋದರನು ರಾತ್ರಿ ತನ್ನ ಮನೆಯಲ್ಲಿ ಉಳಿಯಲು ಆಮಂತ್ರಿಸಿದರು. ಇವರು ಮೊದಲು ಪುರಸಭಾ ಅಧ್ಯಕ್ಷರಾಗಿದ್ದರು. ರಾತ್ರಿಯಿಡೀ ನಾವು ಬೈಬಲ್‌ ಬಗ್ಗೆ ಚರ್ಚೆ ಮಾಡಿದೆವು.

ಆಗೆಲ್ಲಾ ಬೈಬಲಿನ ಮೂಲಭೂತ ಬೋಧನೆಗಳನ್ನು ಕಲಿತ ಕೂಡಲೆ ದೀಕ್ಷಾಸ್ನಾನ ಕೊಡಲಾಗುತ್ತಿತ್ತು. ನಾನು ಕೆಲವೇ ಕೂಟಗಳಿಗೆ ಹೋದ ನಂತರ ಸಹೋದರರು ನನಗೆ ಮತ್ತು ಬೇರೆಯವರಿಗೆ, “ದೀಕ್ಷಾಸ್ನಾನ ತೆಗೆದುಕೊಳ್ಳಲು ಬಯಸುತ್ತೀರಾ?” ಎಂದು ಕೇಳಿದರು. ಅದಕ್ಕೆ ನಾನು “ಹೌದು” ಅಂದೆ. ಯಾಕೆಂದರೆ ನನಗೆ ‘ಯಜಮಾನನಾದ ಕ್ರಿಸ್ತನ ಸೇವೆಮಾಡುವ’ ಆಸೆ ಇತ್ತು. (ಕೊಲೊ. 3:24) 1946​ರ ಫೆಬ್ರವರಿ 15​ರಂದು ಹತ್ತಿರವಿದ್ದ ನದಿಯಲ್ಲಿ ನನಗೆ ಮತ್ತು ಇನ್ನೊಬ್ಬರಿಗೆ ದೀಕ್ಷಾಸ್ನಾನವಾಯಿತು.

ದೀಕ್ಷಾಸ್ನಾನ ಪಡೆದ ಕ್ರೈಸ್ತರು ಯೇಸುವಿನ ಹಾಗೆ ಸಾರುವ ಕೆಲಸ ಮಾಡಬೇಕೆಂದು ನನಗೆ ಅರ್ಥವಾಯಿತು. ನನಗೆ ಸುವಾರ್ತೆ ಸಾರುವಷ್ಟು ವಯಸ್ಸಾಗಿಲ್ಲ, ದೀಕ್ಷಾಸ್ನಾನ ಪಡೆದುಕೊಂಡಷ್ಟಕ್ಕೆ ಒಬ್ಬನು ಸೌವಾರ್ತಿಕನಾಗುವುದಿಲ್ಲ ಎಂದು ನನ್ನ ತಂದೆಗೆ ಅನಿಸಿತು. ನಾವು ಸುವಾರ್ತೆ ಸಾರಬೇಕೆಂಬುದು ದೇವರ ಚಿತ್ತವಾಗಿದೆ ಎಂದು ತಂದೆಗೆ ವಿವರಿಸಲು ಪ್ರಯತ್ನಿಸಿದೆ. (ಮತ್ತಾ. 24:14) ನಾನು ದೇವರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು ಎಂದು ಸಹ ಹೇಳಿದೆ. ನನ್ನ ತಂದೆ ನಾನು ಆರಂಭದಲ್ಲಿ ಹೇಳಿದ ಬೆದರಿಕೆ ಹಾಕಿದ್ದು ಆಗಲೇ. ಅದೇನೇ ಆದರೂ ಸೇವೆಗೆ ಹೋಗಲು ನನ್ನನ್ನು ಬಿಡಬಾರದೆಂದು ಅವರು ತೀರ್ಮಾನ ಮಾಡಿಕೊಂಡಿದ್ದರು. ನಾನು ಯೆಹೋವನ ಸೇವೆಗೋಸ್ಕರ ಕೆಲವು ವಿಷಯಗಳನ್ನು ಬಿಡಬೇಕಾಗಿ ಬಂದದ್ದು ಅಥವಾ ತ್ಯಾಗ ಮಾಡಬೇಕಾಗಿ ಬಂದದ್ದು ಇದೇ ಮೊದಲನೇ ಸಲ.

ಕ್ರೂಸ್‌ ಕುಟುಂಬದವರು ಆಂಗಾಟ್‌ನಲ್ಲಿ ತಮ್ಮ ಮನೆಯಲ್ಲಿ ಬಂದು ಉಳಿಯಲು ನನಗೆ ಅನುಮತಿ ಕೊಟ್ಟರು. ಪಯನೀಯರ್‌ ಸೇವೆ ಮಾಡುವಂತೆ ಅವರು ನನಗೆ ಮತ್ತು ಅವರ ಕೊನೆಯ ಮಗಳಾದ ನೋರಾಗೆ ಪ್ರೋತ್ಸಾಹಿಸಿದರು. ನಾವಿಬ್ಬರೂ 1947​ರ ನವೆಂಬರ್‌ 1​ರಂದು ಪಯನೀಯರ್‌ ಸೇವೆ ಆರಂಭಿಸಿದೆವು. ನಾನು ಆಂಗಾಟ್‌ನಲ್ಲೇ ಸೇವೆ ಮಾಡಿದೆ, ನೋರಾ ಬೇರೊಂದು ಪಟ್ಟಣದಲ್ಲಿ ಮಾಡಿದಳು.

ಕೆಲವು ವಿಷಯಗಳನ್ನು ಬಿಟ್ಟುಬಿಡಲು ಇನ್ನೊಂದು ಅವಕಾಶ

ನಾನು ಪಯನೀಯರ್‌ ಸೇವೆ ಮಾಡಿ ಎರಡು ವರ್ಷ ಆಗಿದ್ದಾಗ ಬೆತೆಲಿನಿಂದ ಅರ್ಲ್‌ ಸ್ಟೂವರ್ಟ್‌ ಎಂಬ ಒಬ್ಬ ಸಹೋದರ ಆಂಗಾಟ್‌ಗೆ ಬಂದು ಭಾಷಣ ಕೊಟ್ಟರು. ಈ ಭಾಷಣವನ್ನು ಕೇಳಿಸಿಕೊಳ್ಳಲು 500ಕ್ಕಿಂತ ಹೆಚ್ಚು ಮಂದಿ ಕೂಡಿಬಂದಿದ್ದರು. ಸಹೋದರ ಸ್ಟೂವರ್ಟ್‌ ಇಂಗ್ಲಿಷ್‌ನಲ್ಲಿ ಭಾಷಣ ಕೊಟ್ಟರು. ಆಮೇಲೆ ನಾನು ಅವರ ಭಾಷಣದ ಸಾರಾಂಶವನ್ನು ಟಗಾಲಗ್‌ನಲ್ಲಿ ತಿಳಿಸಿದೆ. ನಾನು ಅಂದಿನಿಂದ ಎಷ್ಟೋ ಭಾಷಣಗಳನ್ನು ಭಾಷಾಂತರಿಸಿದ್ದೇನೆ. ಬರೀ ಏಳು ವರ್ಷ ಮಾತ್ರ ಶಾಲೆಗೆ ಹೋಗಿದ್ದ ನನ್ನಿಂದ ಇದು ಹೇಗೆ ಸಾಧ್ಯವಾಯಿತು? ನನ್ನ ಶಿಕ್ಷಕರು ಯಾವಾಗಲೂ ಇಂಗ್ಲಿಷ್‌ನಲ್ಲಿ ಮಾತಾಡುತ್ತಿದ್ದರು. ಮತ್ತು ನಾನು ನಮ್ಮ ಅನೇಕ ಪ್ರಕಾಶನಗಳನ್ನು ಇಂಗ್ಲಿಷ್‌ನಲ್ಲಿ ಓದುತ್ತಿದ್ದೆ. ಏಕೆಂದರೆ ಟಗಾಲಗ್‌ನಲ್ಲಿ ಕೆಲವೇ ಕೆಲವು ಬೈಬಲ್‌ ಪ್ರಕಾಶನಗಳಿದ್ದವು. ಈ ಎಲ್ಲ ವಿಷಯಗಳಿಂದಾಗಿ ನನಗೆ ಭಾಷಣಗಳನ್ನು ಅನುವಾದ ಮಾಡುವಷ್ಟು ಇಂಗ್ಲಿಷ್‌ ಅರ್ಥವಾಯಿತು.

ಸಹೋದರ ಸ್ಟೂವರ್ಟ್‌ ಸ್ಥಳೀಯ ಸಭೆಯವರಿಗೆ, ಮಿಷನರಿಗಳು 1950​ರ ದೇವಪ್ರಭುತ್ವದ ಅಭಿವೃದ್ಧಿ ಎಂಬ ಸಮ್ಮೇಳನಕ್ಕೆ ಹಾಜರಾಗಲು ನ್ಯೂಯಾರ್ಕ್‌ಗೆ ಹೋಗಲಿದ್ದಾರೆ ಎಂದು ಹೇಳಿದರು. ಆದ್ದರಿಂದ ಒಂದಿಬ್ಬರು ಪಯನೀಯರರು ಬಂದು ಬೆತೆಲಿನಲ್ಲಿ ಸಹಾಯ ಮಾಡಬಹುದಾ ಎಂದು ಶಾಖಾ ಕಚೇರಿ ಕೇಳುತ್ತಿದೆ ಅಂದರು. ನನ್ನನ್ನು ಮತ್ತು ಇನ್ನೊಬ್ಬ ಸಹೋದರನನ್ನು ಈ ಕೆಲಸಕ್ಕೆ ಆಮಂತ್ರಿಸಲಾಯಿತು. ಪುನಃ ನಾನು ನನಗೆ ರೂಢಿಯಾಗಿಬಿಟ್ಟಿದ್ದ ವಿಷಯಗಳನ್ನು ಬಿಟ್ಟು ಬೆತೆಲಿನಲ್ಲಿ ಸೇವೆ ಮಾಡಲು ಹೊರಟೆ.

1950​ರ ಜೂನ್‌ 19​ರಂದು ನಾನು ಬೆತೆಲಿಗೆ ಬಂದೆ. ಹಳೇದಾದ ಒಂದು ದೊಡ್ಡ ಮನೆನೇ ಬೆತೆಲ್‌ ಆಗಿತ್ತು. ಅದರ ಸುತ್ತಲೂ ದೊಡ್ಡದೊಡ್ಡ ಮರಗಳಿದ್ದವು. ಇದೆಲ್ಲ ಎರಡೂವರೆ ಎಕರೆ ಜಮೀನಿನಲ್ಲಿತ್ತು. ಹತ್ತು-ಹದಿನೈದು ಅವಿವಾಹಿತ ಸಹೋದರರು ಅಲ್ಲಿ ಕೆಲಸ ಮಾಡುತ್ತಿದ್ದರು. ಮುಂಜಾನೆ ಎದ್ದು ನಾನು ಅಡುಗೆಮನೆಯಲ್ಲಿ ಸಹಾಯ ಮಾಡುತ್ತಿದ್ದೆ. ಆಮೇಲೆ ಸುಮಾರು ಒಂಭತ್ತು ಗಂಟೆಯ ವರೆಗೆ ಲಾಂಡ್ರಿಯಲ್ಲಿ ಬಟ್ಟೆಗಳನ್ನು ಇಸ್ತ್ರಿ ಮಾಡುತ್ತಿದ್ದೆ. ಮಧ್ಯಾಹ್ನನೂ ಇದೇ ಕೆಲಸಗಳನ್ನು ಮಾಡುತ್ತಿದ್ದೆ. ಮಿಷನರಿಗಳು ಅಂತಾರಾಷ್ಟ್ರೀಯ ಸಮ್ಮೇಳನದಿಂದ ಹಿಂದೆ ಬಂದ ಮೇಲೂ ನಾನು ಬೆತೆಲಿನಲ್ಲೇ ಸೇವೆ ಮಾಡುವುದನ್ನು ಮುಂದುವರಿಸಿದೆ. ಸಹೋದರರು ನನಗೆ ಯಾವ ಕೆಲಸ ಕೊಟ್ಟರೂ ಅದನ್ನು ಮಾಡುತ್ತಿದ್ದೆ. ಅಂಚೆ ಮೂಲಕ ಪತ್ರಿಕೆಗಳನ್ನು ಕಳುಹಿಸಲು ತಯಾರಿ ಮಾಡುತ್ತಿದ್ದೆ, ಚಂದಾದಾರರಿಗೆ ಪತ್ರಿಕೆಗಳನ್ನು ಕಳುಹಿಸಲು ಏರ್ಪಾಡು ಮಾಡುತ್ತಿದ್ದೆ, ರಿಸೆಪ್ಷನ್‌ನಲ್ಲೂ ಕೆಲಸ ಮಾಡಿದ್ದೇನೆ.

ಫಿಲಿಪ್ಪೀನ್ಸನ್ನು ಬಿಟ್ಟು ಗಿಲ್ಯಡ್‌ ಶಾಲೆಗೆ ಹೋದೆ

1952​ರಲ್ಲಿ ಫಿಲಿಪ್ಪೀನ್ಸ್‌ನಲ್ಲಿದ್ದ ಆರು ಮಂದಿ ಸಹೋದರರನ್ನು ಮತ್ತು ನನ್ನನ್ನು 20​ನೇ ಗಿಲ್ಯಡ್‌ ಶಾಲೆಗೆ ಆಮಂತ್ರಿಸಲಾಯಿತು. ನನಗೆ ತುಂಬ ಖುಷಿಯಾಯಿತು! ನಾವು ಅಮೆರಿಕದಲ್ಲಿ ನೋಡಿದ ಮತ್ತು ಅನುಭವಿಸಿದ ಎಷ್ಟೋ ವಿಷಯಗಳು ಹೊಸದಾಗಿತ್ತು, ವಿಚಿತ್ರವಾಗಿತ್ತು. ನಾನು ಹುಟ್ಟಿ ಬೆಳೆದ ಚಿಕ್ಕ ಹಳ್ಳಿಗೂ ಇಲ್ಲಿನ ಜೀವನಕ್ಕೂ ತುಂಬ ವ್ಯತ್ಯಾಸ ಇತ್ತು.

ಗಿಲ್ಯಡ್‌ನಲ್ಲಿ ನನ್ನ ಕೆಲವು ಸಹಪಾಠಿಗಳೊಂದಿಗೆ

ಉದಾಹರಣೆಗೆ, ನಾವು ಇದುವರೆಗೂ ನೋಡಿಲ್ಲದ ಉಪಕರಣಗಳನ್ನು ಮತ್ತು ಸಲಕರಣೆಗಳನ್ನು ಹೇಗೆ ಬಳಸುವುದು ಎಂದು ಕಲಿಯಬೇಕಿತ್ತು. ಹವಾಮಾನ ಕೂಡ ಬೇರೆ ಇತ್ತು. ಒಂದು ದಿನ ನಾನು ಎದ್ದು ಹೊರಗೆ ನೋಡಿದರೆ ಎಲ್ಲವೂ ಬೆಳ್ಳಬೆಳ್ಳಗಿತ್ತು. ನಾನು ಹಿಮವನ್ನು ನೋಡಿದ್ದು ಇದೇ ಮೊದಲನೇ ಸಾರಿ. ತುಂಬ ಸುಂದರವಾಗಿತ್ತು, ಆದರೆ ಅದು ತುಂಬ ತುಂಬ ತಣ್ಣಗಿರುತ್ತದೆ ಎಂದು ಆಮೇಲೆ ಗೊತ್ತಾಯಿತು.

ನಾನು ಗಿಲ್ಯಡ್‌ ಶಾಲೆಯಲ್ಲಿ ಕಲಿಯುತ್ತಿರುವ ವಿಷಯಗಳನ್ನು ತುಂಬ ಆನಂದಿಸುತ್ತಾ ಇದ್ದದರಿಂದ ಹೊಸ ಜಾಗ, ಸನ್ನಿವೇಶಗಳಿಗೆ ಹೊಂದಿಕೊಳ್ಳಲು ಸುಲಭ ಆಯ್ತು. ಶಿಕ್ಷಕರು ತುಂಬ ಚೆನ್ನಾಗಿ ಬೋಧಿಸುತ್ತಿದ್ದರು. ಅಧ್ಯಯನ, ಸಂಶೋಧನೆ ಮಾಡುವುದು ಹೇಗೆಂದು ತೋರಿಸಿಕೊಟ್ಟರು. ಗಿಲ್ಯಡ್‌ನಲ್ಲಿ ನಾನು ಪಡೆದುಕೊಂಡ ತರಬೇತಿ ಯೆಹೋವನ ಜೊತೆ ಇರುವ ನನ್ನ ಸಂಬಂಧವನ್ನು ಬಲಪಡಿಸಲು ಖಂಡಿತ ಸಹಾಯ ಮಾಡಿತು.

ಗಿಲ್ಯಡ್‌ ಪದವಿ ಪಡೆದ ಮೇಲೆ ನನ್ನನ್ನು ತಾತ್ಕಾಲಿಕವಾಗಿ ನ್ಯೂಯಾರ್ಕ್‌ನ ಬ್ರಾಂಕ್ಸ್‌ನಲ್ಲಿ ವಿಶೇಷ ಪಯನೀಯರನಾಗಿ ನೇಮಿಸಲಾಯಿತು. ಆದ್ದರಿಂದ 1953​ರ ಜುಲೈ ತಿಂಗಳಿನಲ್ಲಿ ನಾನು ಬ್ರಾಂಕ್ಸ್‌ನಲ್ಲಿ ನಡೆದ ಹೊಸ ಲೋಕ ಸಮಾಜ ಎಂಬ ಸಮ್ಮೇಳನಕ್ಕೆ ಹಾಜರಾಗಲು ಸಾಧ್ಯವಾಯಿತು. ಸಮ್ಮೇಳನವಾದ ಮೇಲೆ ನನ್ನನ್ನು ಪುನಃ ಫಿಲಿಪ್ಪೀನ್ಸ್‌ಗೆ ನೇಮಿಸಲಾಯಿತು.

ಪಟ್ಟಣದಲ್ಲಿರುವ ಸುಖಸೌಕರ್ಯ ಬಿಟ್ಟು ಹೋದೆ

ಬೆತೆಲಿನಲ್ಲಿರುವ ಸಹೋದರರು ನನ್ನನ್ನು ಸರ್ಕಿಟ್‌ ಕೆಲಸಕ್ಕೆ ನೇಮಿಸಿದರು. ಇದು ಯೇಸುವನ್ನು ಅನುಕರಿಸಲು ನನಗೆ ಇನ್ನಷ್ಟು ಅವಕಾಶಗಳನ್ನು ಕೊಟ್ಟಿತು. ಯೇಸುವಿನಂತೆ ನಾನು ಸಹ ದೂರದೂರದ ಪಟ್ಟಣಗಳಿಗೆ, ನಗರಗಳಿಗೆ ಹೋಗಿ ಯೆಹೋವನ ಜನರಿಗೆ ಸಹಾಯಮಾಡಲು ಸಾಧ್ಯವಾಯಿತು. (1 ಪೇತ್ರ 2:21) ಮಧ್ಯ ಲೂಸಾನಿನ ಹೆಚ್ಚಿನ ಭಾಗ ನಾನು ಆವರಿಸಬೇಕಾಗಿದ್ದ ಸರ್ಕಿಟ್‌ ಆಗಿತ್ತು. ಈ ಲೂಸಾನ್‌ ಫಿಲಿಪ್ಪೀನ್ಸಿಗೆ ಸೇರಿದ ಅತಿ ದೊಡ್ಡ ದ್ವೀಪವಾಗಿದೆ. ಇದರಲ್ಲಿ ಬೂಲಾಕಾನ್‌, ನ್ವೇವಾ ಏಸೀಹಾ, ಟಾರ್ಲಾಕ್‌, ಝಾಂಬಾಲೇಸ್‌ ಪ್ರಾಂತಗಳು ಸೇರಿದ್ದವು. ಇಲ್ಲಿರುವ ಕೆಲವು ಪಟ್ಟಣಗಳಿಗೆ ಹೋಗಲು ನಾನು ಕಲ್ಲು ಬಂಡೆಗಳಿಂದ ತುಂಬಿದ್ದ ಸಯೆರ್ರಾ ಮಾದ್ರೇ ಪರ್ವತ ಪ್ರದೇಶವನ್ನು ದಾಟಿಹೋಗಬೇಕಿತ್ತು. ಈ ಸ್ಥಳಗಳಿಗೆ ಯಾವ ಬಸ್ಸಾಗಲಿ ರೈಲಾಗಲಿ ಹೋಗುತ್ತಿರಲಿಲ್ಲ. ಆದ್ದರಿಂದ ಲಾರಿಗಳಲ್ಲಿ ಸಾಗಿಸಲಾಗುತ್ತಿದ್ದ ಮರದ ದಿಮ್ಮಿಗಳ ಮೇಲೆ ನಾನು ಕುಳಿತು ಬರಬಹುದಾ ಎಂದು ಲಾರಿ ಚಾಲಕರಿಗೆ ಕೇಳುತ್ತಿದ್ದೆ. ಅನೇಕ ಸಲ ಅವರು ನನ್ನನ್ನು ಕರೆದುಕೊಂಡು ಹೋಗಿದ್ದಾರೆ. ಆದರೆ ಇಂಥ ಪ್ರದೇಶದಲ್ಲಿ ಮರದ ದಿಮ್ಮಿಗಳ ಮೇಲೆ ಕುಳಿತು ಮಾಡುವ ಪ್ರಯಾಣ ತುಂಬ ಕಷ್ಟಕರವಾಗಿತ್ತು.

ನನ್ನ ಸರ್ಕಿಟ್‌ನಲ್ಲಿ ಹೆಚ್ಚಾಗಿ ಚಿಕ್ಕದಾದ ಹೊಸ ಸಭೆಗಳು ಇದ್ದವು. ಹಾಗಾಗಿ ಕೂಟಗಳನ್ನು ಮತ್ತು ಕ್ಷೇತ್ರ ಸೇವೆಯನ್ನು ಉತ್ತಮವಾಗಿ ಏರ್ಪಾಡು ಮಾಡಲು ನಾನು ಮಾಡಿದ ಸಹಾಯವನ್ನು ಈ ಸಭೆಗಳಲ್ಲಿದ್ದ ಸಹೋದರರು ತುಂಬ ಮೆಚ್ಚುತ್ತಿದ್ದರು.

ನಂತರ ನನ್ನನ್ನು ಬೀಕೋಲ್‌ ಪ್ರಾಂತಕ್ಕೆ ನೇಮಿಸಲಾಯಿತು. ಈ ಇಡೀ ಪ್ರಾಂತವನ್ನು ನಾನು ಆವರಿಸಬೇಕಿತ್ತು. ಈ ಕ್ಷೇತ್ರದ ದೂರದೂರದ ಪ್ರದೇಶಗಳಲ್ಲಿ ಅನೇಕ ಗುಂಪುಗಳಿದ್ದವು. ಸಾಕ್ಷಿಗಳು ಅದುವರೆಗೂ ಹೋಗಿಲ್ಲದ ಈ ಸ್ಥಳಗಳಲ್ಲಿ ವಿಶೇಷ ಪಯನೀಯರರು ಸಾರುವ ಕೆಲಸ ಮಾಡುತ್ತಿದ್ದರು. ಒಂದು ಮನೆಯಲ್ಲಿ ಉಳಿದಿದ್ದಾಗ, ನೆಲದಲ್ಲಿ ತೋಡಲಾಗಿದ್ದ ಗುಂಡಿಯನ್ನು ಶೌಚಕ್ಕಾಗಿ ಉಪಯೋಗಿಸಬೇಕಿತ್ತು. ಆ ಗುಂಡಿಯ ಮೇಲೆ ಉದ್ದವಾದ ಮರದ ಎರಡು ತುಂಡುಗಳನ್ನು ಇಡಲಾಗಿತ್ತು. ನಾನು ಅದರ ಮೇಲೆ ನಿಂತಾಗ ಅವು ಗುಂಡಿಯೊಳಗೆ ಬಿದ್ದುಬಿಟ್ಟವು. ನಾನೂ ಅದರೊಟ್ಟಿಗೆ ಬಿದ್ದೆ. ಆಮೇಲೆ ನನ್ನ ಮೈಕೈ ತೊಳೆದುಕೊಂಡು ಹೋಗಲು ತುಂಬ ಸಮಯ ಹಿಡಿಯಿತು.

ನಾನು ಆ ಸರ್ಕಿಟ್‌ನಲ್ಲಿದ್ದಾಗ ನನಗೆ ನೋರಾಳ ನೆನಪಾಯಿತು. ಅವಳೂ ನಾನೂ ಒಂದೇ ಸಮಯದಲ್ಲಿ ಪಯನೀಯರ್‌ ಸೇವೆ ಆರಂಭಿಸಿದ್ದೆವು. ಆಗ ಅವಳು ಡೂಮಾಗೇಟೇ ನಗರದಲ್ಲಿ ವಿಶೇಷ ಪಯನೀಯರಳಾಗಿ ಸೇವೆ ಮಾಡುತ್ತಿದ್ದಳು. ನಾನು ಅವಳನ್ನು ಭೇಟಿಮಾಡಲು ಹೋದೆ. ಆಮೇಲೆ ನಾವಿಬ್ಬರೂ ಸ್ವಲ್ಪ ಸಮಯ ಒಬ್ಬರಿಗೊಬ್ಬರು ಪತ್ರ ಬರೆಯುತ್ತಿದ್ದೆವು. ನಂತರ 1956​ರಲ್ಲಿ ನಮ್ಮ ಮದುವೆಯಾಯಿತು. ನಮ್ಮ ಮದುವೆಯಾದ ಮೊದಲನೇ ವಾರದಲ್ಲಿ ನಾವು ರಾಪೂ ರಾಪೂ ದ್ವೀಪದಲ್ಲಿದ್ದ ಒಂದು ಸಭೆಯನ್ನು ಭೇಟಿ ಮಾಡಿದೆವು. ಈ ದ್ವೀಪದಲ್ಲಿ ನಾವು ಬೆಟ್ಟಗಳನ್ನು ಹತ್ತಬೇಕಿತ್ತು, ದೂರದೂರದ ವರೆಗೆ ನಡೆಯಬೇಕಿತ್ತು. ಆದರೆ ಇಬ್ಬರೂ ಒಟ್ಟಿಗಿದ್ದೇವೆ ಮತ್ತು ದೂರದೂರದ ಪ್ರದೇಶಗಳಲ್ಲಿರುವ ಸಹೋದರರಿಗೆ ಸಹಾಯ ಮಾಡುತ್ತಿದ್ದೇವೆ ಎಂಬ ಸಂತೋಷ ಇತ್ತು.

ಪುನಃ ಬೆತೆಲಲ್ಲಿ ಸೇವೆ ಮಾಡಲು ಹೋದೆ

ಸುಮಾರು ನಾಲ್ಕು ವರ್ಷ ಸರ್ಕಿಟ್‌ ಕೆಲಸ ಮಾಡಿದ ಮೇಲೆ ಶಾಖಾ ಕಛೇರಿಗೆ ಬಂದು ಸೇವೆ ಮಾಡುವಂತೆ ಸಹೋದರರು ಹೇಳಿದರು. ನಾವು 1960​ರ ಜನವರಿ ತಿಂಗಳಿನಿಂದ ಬೆತೆಲ್‌ ಸೇವೆ ಆರಂಭಿಸಿದೆವು. ನಾನು ಬೆತೆಲಿನಲ್ಲಿದ್ದ ಇಷ್ಟೆಲ್ಲಾ ವರ್ಷಗಳಲ್ಲಿ, ಯೆಹೋವನ ಸಂಘಟನೆಯಲ್ಲಿ ಭಾರೀ ಜವಾಬ್ದಾರಿಗಳನ್ನು ಹೊಂದಿರುವ ಸಹೋದರರೊಂದಿಗೆ ಕೆಲಸ ಮಾಡುವುದರಿಂದ ತುಂಬ ವಿಷಯಗಳನ್ನು ಕಲಿತೆ. ನೋರಾ ಬೆತೆಲಿನಲ್ಲಿ ಬೇರೆಬೇರೆ ನೇಮಕಗಳನ್ನು ಮಾಡುತ್ತಾ ಆನಂದಿಸಿದ್ದಾಳೆ.

ಒಂದು ಅಧಿವೇಶನದಲ್ಲಿ ಭಾಷಣ ಕೊಡುತ್ತಿರುವುದು ಮತ್ತು ಅದನ್ನು ಒಬ್ಬ ಸಹೋದರನು ಸೆಬುವಾನೊ ಭಾಷೆಗೆ ಅನುವಾದಿಸುತ್ತಿರುವುದು

ಫಿಲಿಪ್ಪೀನ್ಸ್‌ನಲ್ಲಿ ಹೆಚ್ಚೆಚ್ಚು ಜನರು ಯೆಹೋವನ ಸೇವೆ ಮಾಡುತ್ತಿರುವುದನ್ನು ನೋಡುವುದು ಒಂದು ಆಶೀರ್ವಾದವಾಗಿದೆ. ನಾನು ಒಬ್ಬ ಯುವ, ಅವಿವಾಹಿತ ಸಹೋದರನಾಗಿ ಬೆತೆಲಿಗೆ ಬಂದಾಗ ಇಡೀ ದೇಶದಲ್ಲಿ ಸುಮಾರು 10,000 ಪ್ರಚಾರಕರಿದ್ದರು. ಈಗ ಫಿಲಿಪ್ಪೀನ್ಸ್‌ನಲ್ಲಿ 2,00,000ಕ್ಕಿಂತ ಹೆಚ್ಚು ಪ್ರಚಾರಕರಿದ್ದಾರೆ ಮತ್ತು ಸಾರುವ ಕೆಲಸವನ್ನು ಬೆಂಬಲಿಸಲಿಕ್ಕಾಗಿ ಬೆತೆಲಿನಲ್ಲಿ ನೂರಾರು ಸಹೋದರ ಸಹೋದರಿಯರು ಕೆಲಸ ಮಾಡುತ್ತಿದ್ದಾರೆ.

ಸಮಯ ಹೋದಂತೆ ಬೆತೆಲಿನಲ್ಲಿ ಕೆಲಸ ಮಾಡಲು ಜಾಗ ಸಾಕಾಗಲಿಲ್ಲ. ಆಗ ಆಡಳಿತ ಮಂಡಲಿ ದೊಡ್ಡದಾದ ಶಾಖಾ ಕಚೇರಿಯನ್ನು ಕಟ್ಟಲು ಜಾಗ ಹುಡುಕುವಂತೆ ಹೇಳಿತು. ಮುದ್ರಣಾಲಯದ ಮೇಲ್ವಿಚಾರಕ ಮತ್ತು ನಾನು ಶಾಖಾ ಕಚೇರಿಯ ಅಕ್ಕಪಕ್ಕದಲ್ಲಿದ್ದವರ ಮನೆಗಳಿಗೆ ಹೋಗಿ ಅವರು ತಮ್ಮ ಜಾಗವನ್ನು ಮಾರಲು ಇಷ್ಟಪಡುತ್ತಾರಾ ಎಂದು ಕೇಳಿದೆವು. ಆದರೆ ಒಬ್ಬರಿಗೂ ತಮ್ಮ ಜಾಗವನ್ನು ಮಾರಲು ಮನಸ್ಸಿರಲಿಲ್ಲ. ಅಲ್ಲಿ ವಾಸವಾಗಿದ್ದ ಒಬ್ಬ ಚೈನೀಸ್‌ ವ್ಯಕ್ತಿ, “ಚೈನೀಸ್‌ ಜನರು ಮಾರುವುದಿಲ್ಲ, ಕೊಂಡುಕೊಳ್ಳುತ್ತಾರೆ” ಅಂದ.

ಸಹೋದರ ಆಲ್ಬರ್ಟ್‌ ಶ್ರೋಡರ್‌ ಅವರ ಭಾಷಣವನ್ನು ಭಾಷಾಂತರಿಸುತ್ತಿರುವುದು

ಆದರೆ ಒಂದು ದಿನ ನಾವು ನೆನಸದೇ ಇದ್ದಂಥ ಕೆಲವು ವಿಷಯಗಳು ನಡೆದವು. ಶಾಖಾ ಕಚೇರಿಯ ಪಕ್ಕದಲ್ಲಿದ್ದ ಒಬ್ಬ ವ್ಯಕ್ತಿ ಅಮೆರಿಕಕ್ಕೆ ಸ್ಥಳಾಂತರಿಸಲು ಏರ್ಪಾಡು ಮಾಡುತ್ತಿದ್ದ. ಅವನ ಜಾಗವನ್ನು ಕೊಂಡುಕೊಳ್ಳಲು ಬಯಸುತ್ತೇವಾ ಎಂದು ನಮ್ಮನ್ನು ಕೇಳಿದ. ಹತ್ತಿರದಲ್ಲಿದ್ದ ಇನ್ನೊಬ್ಬ ವ್ಯಕ್ತಿ ಸಹ ತನ್ನ ಜಾಗ ಮಾರಲು ಬಯಸಿದ. ತಮ್ಮ ಜಾಗವನ್ನು ಮಾರುವಂತೆ ಅಕ್ಕಪಕ್ಕದವರನ್ನೂ ಅವನು ಪ್ರೋತ್ಸಾಹಿಸಿದ. “ಚೈನೀಸ್‌ ಜನರು ಮಾರುವುದಿಲ್ಲ” ಎಂದು ಹೇಳಿದ್ದ ವ್ಯಕ್ತಿಯ ಜಾಗವನ್ನೂ ನಾವು ಕೊಂಡುಕೊಳ್ಳಲು ಸಾಧ್ಯವಾಯಿತು. ಸ್ವಲ್ಪ ಸಮಯದಲ್ಲೇ ಶಾಖಾ ಕಚೇರಿಯ ಜಾಗ ಮೂರುಪಟ್ಟು ಹೆಚ್ಚಾಯಿತು. ಇದು ಯೆಹೋವನ ಚಿತ್ತದಿಂದಲೇ ಆಯಿತೆಂದು ನನಗೆ ಖಂಡಿತ ಅನಿಸುತ್ತದೆ.

1950​ರಲ್ಲಿ ಬೆತೆಲಿನಲ್ಲಿ ಸೇವೆಮಾಡುತ್ತಿದ್ದವರಲ್ಲಿ ನಾನೇ ಚಿಕ್ಕವನು. ಈಗ ನಾನು ಮತ್ತು ನನ್ನ ಪತ್ನಿ ಬೆತೆಲಿನಲ್ಲಿ ಸೇವೆಮಾಡುತ್ತಿರುವವರಲ್ಲಿ ಅತಿ ವೃದ್ಧ ವ್ಯಕ್ತಿಗಳಾಗಿದ್ದೇವೆ. ಯೇಸು ನನ್ನನ್ನು ಎಲ್ಲೇ ನಡೆಸಿದರೂ ಅಲ್ಲಿಗೆ ಆತನನ್ನು ಹಿಂಬಾಲಿಸಿ ಹೋದದ್ದರಲ್ಲಿ ನನಗೆ ಸ್ವಲ್ಪವೂ ವಿಷಾದವಿಲ್ಲ. ನನ್ನ ಹೆತ್ತವರು ನನ್ನನ್ನು ಮನೆಯಿಂದ ಹೊರಗೆ ಹಾಕಿದರಾದರೂ ಯೆಹೋವನು ನನಗೆ ನನ್ನನ್ನು ಪ್ರೀತಿಸುವ ಜನರಿರುವ ದೊಡ್ಡ ಕುಟುಂಬವನ್ನು ಕೊಟ್ಟಿದ್ದಾನೆ. ನಮ್ಮ ನೇಮಕ ಏನೇ ಆಗಿದ್ದರೂ ಯೆಹೋವನು ನಮಗೆ ಅಗತ್ಯವಿರುವುದನ್ನೆಲ್ಲಾ ಕೊಡುತ್ತಾನೆ ಎಂಬ ನಂಬಿಕೆ ನನಗಿದೆ. ಯೆಹೋವನು ದಯೆಯಿಂದ ನಮಗೆ ಮಾಡಿದ ಎಲ್ಲಾ ವಿಷಯಗಳಿಗಾಗಿ ನೋರಾ ಮತ್ತು ನಾನು ತುಂಬ ಆಭಾರಿ. ಬೇರೆಯವರು ಸಹ ಯೆಹೋವನನ್ನು ಪರೀಕ್ಷಿಸಿ ನೋಡುವಂತೆ ಉತ್ತೇಜಿಸುತ್ತೇವೆ.—ಮಲಾ. 3:10.

ಯೇಸು ಒಮ್ಮೆ ಲೇವಿಯನಾದ ಮತ್ತಾಯನೆಂಬ ತೆರಿಗೆ ವಸೂಲಿಗಾರನನ್ನು ತನ್ನ ಹಿಂಬಾಲಕನಾಗಲು ಆಮಂತ್ರಿಸಿದನು. ಆಗ ಮತ್ತಾಯನು ಏನು ಮಾಡಿದನು? “ಅವನು ಎಲ್ಲವನ್ನೂ ಬಿಟ್ಟು ಎದ್ದು ಅವನನ್ನು ಹಿಂಬಾಲಿಸಿದನು.” (ಲೂಕ 5:27, 28) ನನಗೂ ಸಹ ಯೇಸುವಿನ ಹಿಂಬಾಲಕನಾಗಲು ಅನೇಕ ವಿಷಯಗಳನ್ನು ಬಿಟ್ಟುಬಿಡುವ ಅವಕಾಶ ಸಿಕ್ಕಿತು. ಬೇರೆಯವರು ಸಹ ಇದನ್ನು ಮಾಡಿ ಅನೇಕ ಆಶೀರ್ವಾದಗಳನ್ನು ಪಡೆಯುವಂತೆ ಪ್ರೋತ್ಸಾಹಿಸುತ್ತೇನೆ.

ಫಿಲಿಪ್ಪೀನ್ಸ್‌ನಲ್ಲಿ ನನ್ನ ಸೇವೆಯನ್ನು ಮುಂದುವರಿಸುತ್ತಾ ಇರುವುದಕ್ಕೆ ಸಂತೋಷಪಡುತ್ತೇನೆ