ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಪರದೈಸಲ್ಲಿ ಸಿಗೋಣ!”

“ಪರದೈಸಲ್ಲಿ ಸಿಗೋಣ!”

“ನೀನು ನನ್ನೊಂದಿಗೆ ಪರದೈಸಿನಲ್ಲಿರುವಿ.”—ಲೂಕ 23:43.

ಗೀತೆಗಳು: 19, 134

1, 2. ಪರದೈಸ್‌ ಅಂದರೆ ಏನೆಂದು ಜನರು ಹೇಳುತ್ತಾರೆ?

ಕೊರಿಯ ದೇಶದ ಸಿಯೋಲ್‌ ನಗರಕ್ಕೆ ಅಧಿವೇಶನಕ್ಕೆಂದು ಅನೇಕ ದೇಶಗಳಿಂದ ಸಹೋದರ-ಸಹೋದರಿಯರು ಬಂದಿದ್ದರು. ಅಧಿವೇಶನ ಮುಗಿಸಿ ಅವರು ಕ್ರೀಡಾಂಗಣದಿಂದ ಹೊರಗೆ ಹೋಗುತ್ತಿರುವಾಗ ಸ್ಥಳೀಯ ಸಹೋದರ-ಸಹೋದರಿಯರು ಸುತ್ತ ಬಂದು ನಿಂತರು. ಅವರಲ್ಲಿ ಅನೇಕರು ಕೈಬೀಸುತ್ತಾ “ಪರದೈಸಲ್ಲಿ ಸಿಗೋಣ!” ಎಂದು ಭಾವುಕರಾಗಿ ಒಬ್ಬರಿಗೊಬ್ಬರು ಹೇಳಿದರು. ಅವರು ಯಾವ ಪರದೈಸಿನ ಬಗ್ಗೆ ಹೇಳಿದರು?

2 ಪರದೈಸ್‌ ಅಂದ ಕೂಡಲೆ ಜನರ ಮನಸ್ಸಿಗೆ ಬೇರೆ ಬೇರೆ ವಿಚಾರ ಬರುತ್ತದೆ. ಪರದೈಸ್‌ ಅನ್ನುವುದು ಮನಸ್ಸಲ್ಲಿರುವ ಭಾವನೆ ಅಷ್ಟೆ ಅಂತಾರೆ ಕೆಲವರು. ಎಲ್ಲಿ ಸಂತೋಷ ಇರುತ್ತೋ ಅದೇ ಪರದೈಸ್‌ ಅಂತಾರೆ ಇನ್ನು ಕೆಲವರು. ಊಟ ಮಾಡಿ ಎಷ್ಟೋ ದಿನ ಆಗಿರುವ ಒಬ್ಬ ವ್ಯಕ್ತಿಯ ಮುಂದೆ ಬಗೆಬಗೆಯ ಆಹಾರವನ್ನು ಇಟ್ಟರೆ ಅದನ್ನೇ ಅವನು ಪರದೈಸ್‌ ಅನ್ನಬಹುದು. ತುಂಬ ವರ್ಷಗಳ ಹಿಂದೆ ಒಬ್ಬ ಮಹಿಳೆ ಒಂದು ಕಣಿವೆಯಲ್ಲಿ ಕಾಡುಹೂಗಳು ಕಂಗೊಳಿಸುತ್ತಾ ಇದ್ದದ್ದನ್ನು ನೋಡಿ ‘ಅಬ್ಬಾ! ಇದೇ ಪರದೈಸ್‌’ ಎಂದಳು. ಆ ಜಾಗವನ್ನು ಇವತ್ತಿಗೂ “ಪರದೈಸ್‌” ಎಂದೇ ಕರೆಯುತ್ತಾರೆ. ಇಷ್ಟಕ್ಕೂ ಅಲ್ಲಿ ಪ್ರತಿ ವರ್ಷ 50 ಅಡಿಗಳಷ್ಟು ಹಿಮ ಬೀಳುತ್ತದೆ. ಪರದೈಸ್‌ ಅಂದರೆ ಏನೆಂದು ನೀವು ನೆನಸುತ್ತೀರಿ? ಪರದೈಸ್‌ ಬರುತ್ತೆ ಎಂದು ನಿಮಗನಿಸುತ್ತದಾ?

3. ಪರದೈಸಿನ ಬಗ್ಗೆ ಬೈಬಲಲ್ಲಿ ಮೊದಲನೇ ಸಾರಿ ಎಲ್ಲಿ ಓದುತ್ತೇವೆ?

3 ಹಿಂದೆ ಭೂಮಿ ಮೇಲೆ ಪರದೈಸ್‌ ಇತ್ತು ಮತ್ತು ಮುಂದೆ ಭೂಮಿ ಪರದೈಸ್‌ ಆಗುತ್ತದೆ ಎಂದು ಬೈಬಲ್‌ ಹೇಳುತ್ತದೆ. ಬೈಬಲಿನ ಮೊದಲನೇ ಪುಸ್ತಕದಲ್ಲೇ ನಾವು ಪರದೈಸಿನ ಬಗ್ಗೆ ಓದುತ್ತೇವೆ. ಲ್ಯಾಟಿನ್‌ ಭಾಷೆಯಿಂದ ಭಾಷಾಂತರ ಆಗಿರುವ ಕ್ಯಾಥೊಲಿಕ್‌ ಡೂಯೆ ವರ್ಷನ್‌ನಲ್ಲಿ ಆದಿಕಾಂಡ 2:8 ಹೀಗಿದೆ: “ಕರ್ತನಾದ ದೇವರು ಆರಂಭದಲ್ಲಿ ಪರಮಾನಂದದ ಪರದೈಸ್‌ ಮಾಡಿದನು. ತಾನು ರೂಪಿಸಿದ ಮನುಷ್ಯನನ್ನು ಅದರಲ್ಲಿ ಇರಿಸಿದನು.” ಆ ಪರದೈಸನ್ನು ಹೀಬ್ರುವಿನಲ್ಲಿ ‘ಏದೆನ್‌ ತೋಟ’ ಎಂದು ಕರೆಯಲಾಗಿದೆ. ಹೀಬ್ರುವಿನಲ್ಲಿ “ಏದೆನ್‌” ಅಂದರೆ “ಪರಮಾನಂದ” ಎಂದರ್ಥ. ಆ ತೋಟದ ವಾತಾವರಣ ತುಂಬ ಚೆನ್ನಾಗಿತ್ತು. ಅದರ ಪ್ರಕೃತಿ ಸೌಂದರ್ಯವನ್ನು ನೋಡಲು ಎರಡು ಕಣ್ಣು ಸಾಕಾಗುತ್ತಿರಲಿಲ್ಲ, ಆಹಾರಕ್ಕೆ ಕೊರತೆ ಇರಲಿಲ್ಲ, ಪ್ರಾಣಿಗಳು ಮತ್ತು ಮನುಷ್ಯರ ಮಧ್ಯೆ ಅನ್ಯೋನ್ಯತೆ ಇತ್ತು.—ಆದಿ. 1:29-31.

4. ಏದೆನ್‌ ತೋಟ ಪರದೈಸ್‌ ಆಗಿತ್ತು ಎಂದು ಯಾಕೆ ಹೇಳಬಹುದು?

4 “ತೋಟ” ಎನ್ನುವುದಕ್ಕಿರುವ ಹೀಬ್ರು ಪದವನ್ನು ಗ್ರೀಕ್‌ನಲ್ಲಿ ಪಾರಾದಿಸಾಸ್‌ ಎಂದು ಭಾಷಾಂತರಿಸಲಾಗಿದೆ. ಪಾರಾದಿಸಾಸ್‌ ಅಂದರೆ ಪರದೈಸ್‌ ಎಂದರ್ಥ. ಮೆಕ್ಲಿಂಟಕ್‌ ಮತ್ತು ಸ್ಟ್ರಾಂಗ್‌ ಬರೆದ ಸೈಕ್ಲೊಪೀಡಿಯ ಪ್ರಕಾರ, ಒಬ್ಬ ಗ್ರೀಕ್‌ ವ್ಯಕ್ತಿಗೆ ಪಾರಾದಿಸಾಸ್‌ ಅಂತ ಕೇಳಿದ ಕೂಡಲೆ ಅವನ ಮನಸ್ಸಿಗೆ ಬರುವುದು ಸುಂದರವಾದ ಒಂದು ದೊಡ್ಡ ಉದ್ಯಾನವನ. ಅದನ್ನು ಭದ್ರಪಡಿಸಲಾಗಿರುತ್ತದೆ, ವಿಧವಿಧವಾದ ಹಣ್ಣಿನ ಮರಗಳು ಇರುತ್ತವೆ, ಶುದ್ಧ ನೀರಿನ ನದಿಗಳು ಹರಿಯುತ್ತಿರುತ್ತವೆ, ಅದರ ದಡದಲ್ಲಿ ಹಸುರು ಹುಲ್ಲು ಬೆಳೆದಿರುತ್ತದೆ. ಜಿಂಕೆಗಳು, ಕುರಿಗಳು ಮೇಯುತ್ತಾ ಇರುತ್ತವೆ ಎಂದು ಆ ಸೈಕ್ಲೊಪೀಡಿಯ ಹೇಳುತ್ತದೆ.—ಆದಿಕಾಂಡ 2:15, 16 ಹೋಲಿಸಿ.

5, 6. (ಎ) ಪರದೈಸಲ್ಲಿ ಬದುಕುವ ಅವಕಾಶವನ್ನು ಆದಾಮ-ಹವ್ವ ಯಾಕೆ ಕಳಕೊಂಡರು? (ಬಿ) ಕೆಲವರಿಗೆ ಯಾವ ಪ್ರಶ್ನೆ ಬರಬಹುದು?

5 ಇಂಥ ಸುಂದರವಾದ ಪರದೈಸಲ್ಲಿ ಯೆಹೋವನು ಆದಾಮ-ಹವ್ವರನ್ನು ಇರಿಸಿದನು. ಆದರೆ ಅವರು ಆತನ ಮಾತನ್ನು ಮೀರಿದ್ದರಿಂದ ಆ ಪರದೈಸಲ್ಲಿ ಜೀವಿಸುವ ಅವಕಾಶ ಕೈತಪ್ಪಿ ಹೋಯಿತು. ಮುಂದೆ ಅವರ ಮಕ್ಕಳಿಗೂ ಆ ಅವಕಾಶ ಸಿಗಲಿಲ್ಲ. (ಆದಿ. 3:23, 24) ಅಲ್ಲಿ ಯಾವ ಮನುಷ್ಯನೂ ಇರಲಿಲ್ಲ. ಆದರೂ ಜಲಪ್ರಳಯ ಆಗುವ ತನಕ ಆ ತೋಟ ಇತ್ತು.

6 ಕೆಲವರಿಗೆ ‘ಭೂಮಿ ಪುನಃ ಪರದೈಸ್‌ ಆಗುತ್ತಾ?’ ಎಂಬ ಪ್ರಶ್ನೆ ಬರಬಹುದು. ಇದರ ಬಗ್ಗೆ ಸಾಕ್ಷ್ಯಾಧಾರಗಳಿಂದ ಏನು ಗೊತ್ತಾಗುತ್ತದೆ? ನಿಮಗೆ ನಿಮ್ಮ ಆಪ್ತರ ಜೊತೆ ಪರದೈಸಲ್ಲಿ ಜೀವಿಸುವ ನಿರೀಕ್ಷೆ ಇರುವುದಾದರೆ ಅದಕ್ಕೆ ಯಾವ ಆಧಾರ ಇದೆ? ಭೂಮಿ ಪರದೈಸ್‌ ಆಗೇ ಆಗುತ್ತೆ ಎಂದು ಒಬ್ಬರಿಗೆ ಹೇಗೆ ವಿವರಿಸುತ್ತೀರಾ?

ಪರದೈಸ್‌ ಬರುತ್ತದೆ ಎನ್ನುವುದಕ್ಕೆ ಆಧಾರ

7, 8. (ಎ) ದೇವರು ಅಬ್ರಹಾಮನಿಗೆ ಏನೆಂದು ಮಾತು ಕೊಟ್ಟನು? (ಬಿ) ಅಬ್ರಹಾಮ ಅದನ್ನು ಏನೆಂದು ಅರ್ಥಮಾಡಿಕೊಂಡಿರಬೇಕು?

7 ಪರದೈಸಿನ ಬಗ್ಗೆ ಇರುವ ಪ್ರಶ್ನೆಗಳಿಗೆ ಉತ್ತರ ಸಿಗುವುದು ಬೈಬಲಲ್ಲಿ ಮಾತ್ರ. ಯಾಕೆಂದರೆ ಆದಾಮನಿಗೆ ಪರದೈಸನ್ನು ಕೊಟ್ಟ ಯೆಹೋವನೇ ಬೈಬಲನ್ನು ಸಹ ಕೊಟ್ಟಿರುವುದು. ಆತನು ತನ್ನ ಸ್ನೇಹಿತನಾದ ಅಬ್ರಹಾಮನಿಗೆ ಏನು ಹೇಳಿದನೆಂದು ನೋಡಿ. ಅಬ್ರಹಾಮನ ಸಂತತಿಯನ್ನು “ಸಮುದ್ರತೀರದಲ್ಲಿರುವ ಉಸುಬಿನಂತೆ” ಹೆಚ್ಚಿಸುತ್ತೇನೆ ಎಂದು ದೇವರು ಹೇಳಿದನು. “ನೀನು ನನ್ನ ಮಾತನ್ನು ಕೇಳಿದ್ದರಿಂದ ಭೂಮಿಯ ಎಲ್ಲಾ ಜನಾಂಗಗಳಿಗೂ ನಿನ್ನ ಸಂತತಿಯ ಮೂಲಕ ಆಶೀರ್ವಾದವುಂಟಾಗುವದು” ಎಂದನು. ಇದು ತುಂಬ ಪ್ರಾಮುಖ್ಯವಾದ ವಾಗ್ದಾನವಾಗಿತ್ತು. (ಆದಿ. 22:17, 18) ದೇವರು ಇದೇ ವಾಗ್ದಾನವನ್ನು ಅಬ್ರಹಾಮನ ಮಗನಿಗೂ ಮೊಮ್ಮಗನಿಗೂ ಮಾಡಿದನು.—ಆದಿಕಾಂಡ 26:5; 28:14 ಓದಿ.

8 ದೇವರು ಮನುಷ್ಯರಿಗೆ ಸ್ವರ್ಗದಲ್ಲಿರುವ ಪರದೈಸಲ್ಲಿ ಪ್ರತಿಫಲ ಕೊಡುತ್ತಾನೆ ಎಂಬ ಯೋಚನೆ ಅಬ್ರಹಾಮನಿಗೆ ಇತ್ತೆಂದು ಬೈಬಲ್‌ ಹೇಳುವುದಿಲ್ಲ. ಆದ್ದರಿಂದ “ಭೂಮಿಯ ಎಲ್ಲಾ ಜನಾಂಗಗಳಿಗೂ” ಆಶೀರ್ವಾದ ಸಿಗುತ್ತದೆ ಎಂದು ದೇವರು ಹೇಳಿದಾಗ ಈ ಆಶೀರ್ವಾದ ಭೂಮಿಯ ಮೇಲೆ ಸಿಗುತ್ತದೆ ಎಂದು ಅಬ್ರಹಾಮ ಅರ್ಥಮಾಡಿಕೊಂಡಿರಬೇಕು. ಪರದೈಸ್‌ ಈ ಭೂಮಿಯ ಮೇಲೆ ಬರುತ್ತದೆ ಅನ್ನುವುದಕ್ಕೆ ಬೇರೆ ಆಧಾರ ಇದೆಯಾ?

9, 10. ಭೂಮಿ ಪರದೈಸಾಗುತ್ತದೆ ಎಂದು ನಂಬಲು ಯಾವ ಆಧಾರ ಇದೆ?

9 ಅಬ್ರಹಾಮನ ವಂಶದವನಾದ ದಾವೀದನು ದೇವರಿಂದ ಪ್ರೇರಿತನಾಗಿ ಬರೆದ ಪ್ರವಾದನೆಗಳ ಬಗ್ಗೆ ನೋಡಿ. “ದುಷ್ಟನು ಕಾಣಿಸದೆ ಹೋಗುವನು.” “ಆದರೆ ದೀನರು ದೇಶವನ್ನು [“ಭೂಮಿಯನ್ನು,” NW] ಅನುಭವಿಸುವರು; ಅವರು ಮಹಾಸೌಖ್ಯದಿಂದ ಆನಂದಿಸುವರು.” “ನೀತಿವಂತರೋ ದೇಶವನ್ನು ಅನುಭವಿಸುವವರಾಗಿ ಅದರಲ್ಲಿ ಶಾಶ್ವತವಾಗಿ ವಾಸಿಸುವರು.” (ಕೀರ್ತ. 37:1, 2, 10, 11, 29; 2 ಸಮು. 23:2) ಈ ಮಾತುಗಳಿಂದ ದೇವರಿಗೆ ಇಷ್ಟವಾದ ವಿಷಯಗಳನ್ನು ಮಾಡುತ್ತಿದ್ದ ಜನರ ಮೇಲೆ ಯಾವ ಪ್ರಭಾವ ಆಯಿತು? ಮುಂದೊಂದು ದಿನ ಭೂಮಿಯಲ್ಲಿ ನೀತಿವಂತರು ಮಾತ್ರ ಇರುತ್ತಾರೆ ಮತ್ತು ಭೂಮಿ ಏದೆನ್‌ ತೋಟದಂತೆ ಪುನಃ ಪರದೈಸ್‌ ಆಗುತ್ತದೆ ಎಂದು ನಂಬಲು ಅವರಿಗೆ ಮತ್ತೊಂದು ಆಧಾರ ಸಿಕ್ಕಿತು.

10 ಸಮಯ ಕಳೆದಂತೆ, ಹೆಚ್ಚಿನ ಇಸ್ರಾಯೇಲ್ಯರು ಯೆಹೋವನನ್ನು ಆರಾಧಿಸುತ್ತೇವೆ ಎಂದು ಹೇಳಿಕೊಂಡರೂ ದೇವರನ್ನು ಮತ್ತು ಶುದ್ಧಾರಾಧನೆಯನ್ನು ತಿರಸ್ಕರಿಸಿಬಿಟ್ಟರು. ಆಗ ಬಾಬೆಲಿನವರು ಬಂದು ತನ್ನ ಜನರನ್ನು ವಶಕ್ಕೆ ತೆಗೆದುಕೊಳ್ಳುವಂತೆ, ದೇಶವನ್ನು ನಾಶಮಾಡುವಂತೆ ಮತ್ತು ಅವರಲ್ಲಿ ಅನೇಕರನ್ನು ಕೈದಿಗಳಾಗಿ ತೆಗೆದುಕೊಂಡು ಹೋಗುವಂತೆ ದೇವರು ಬಿಟ್ಟುಬಿಟ್ಟನು. (2 ಪೂರ್ವ. 36:15-21; ಯೆರೆ. 4:22-27) ಆದರೆ ತನ್ನ ಜನರು 70 ವರ್ಷಗಳ ನಂತರ ಸ್ವದೇಶಕ್ಕೆ ಬರುತ್ತಾರೆ ಎಂದು ಪ್ರವಾದಿಗಳ ಮೂಲಕ ಹೇಳಿದನು. ಪ್ರವಾದಿಗಳು ಹೇಳಿದ್ದು ನಿಜವಾಯಿತು. ಅವರ ಪ್ರವಾದನೆಗಳಿಂದ ನಾವೇನು ಕಲಿಯಕ್ಕಾಗುತ್ತೆ? ಕೆಲವು ಪ್ರವಾದನೆಗಳನ್ನು ಈಗ ಚರ್ಚೆ ಮಾಡೋಣ. ಅವು ಭೂಮಿ ಪರದೈಸಾಗುತ್ತದೆ ಎಂದು ನಂಬಲು ಯಾವ ಆಧಾರ ಕೊಡುತ್ತವೆ ಎಂದು ನೋಡೋಣ.

11. (ಎ) ಯೆಶಾಯ 11:6-9 ಮೊದಲು ಹೇಗೆ ನೆರವೇರಿತು? (ಬಿ) ಆದರೂ ಯಾವ ಪ್ರಶ್ನೆ ಬರುತ್ತದೆ?

11 ಯೆಶಾಯ 11:6-9 ಓದಿ. ಇಸ್ರಾಯೇಲ್ಯರು ಸ್ವದೇಶಕ್ಕೆ ಬಂದ ಮೇಲೆ ನೆಮ್ಮದಿಯಿಂದ ಬದುಕಬಹುದು ಎಂದು ದೇವರು ಯೆಶಾಯನ ಮೂಲಕ ಹೇಳಿದನು. ಅವರ ಮೇಲೆ ಪ್ರಾಣಿಯಾಗಲಿ ಬೇರೆ ಮನುಷ್ಯರಾಗಲಿ ದಾಳಿ ಮಾಡುವುದಿಲ್ಲ, ಚಿಕ್ಕವರು ದೊಡ್ಡವರು ಎಲ್ಲರೂ ಸುರಕ್ಷಿತವಾಗಿ ಇರುತ್ತಾರೆ ಎಂದು ಹೇಳಿದನು. ಇದು ನಿಮಗೆ ಏದೆನ್‌ ತೋಟದಲ್ಲಿದ್ದ ಪರಿಸ್ಥಿತಿಯನ್ನು ನೆನಪಿಸುತ್ತದೆ ಅಲ್ವಾ? (ಯೆಶಾ. 51:3) ಬರೀ ಇಸ್ರಾಯೇಲ್‌ ರಾಜ್ಯದಲ್ಲಿ ಮಾತ್ರ ಅಲ್ಲ “ಸಮುದ್ರದಲ್ಲಿ ನೀರು ಹೇಗೋ ಹಾಗೆಯೇ” ಇಡೀ ಭೂಮಿಯಲ್ಲಿ “ಯೆಹೋವನ ಜ್ಞಾನವು ತುಂಬಿಕೊಂಡಿರುವದು” ಎಂದು ಯೆಶಾಯನು ಪ್ರವಾದಿಸಿದನು. ಇದು ಯಾವಾಗ ನಡೆಯುತ್ತದೆ?

12. (ಎ) ಬಾಬೆಲಿಂದ ಹಿಂದೆ ಬಂದ ಇಸ್ರಾಯೇಲ್ಯರಿಗೆ ಯಾವ ಆಶೀರ್ವಾದಗಳು ಸಿಕ್ಕಿದವು? (ಬಿ) ಯೆಶಾಯ 35:5-10 ಭವಿಷ್ಯದಲ್ಲೂ ನೆರವೇರುತ್ತದೆ ಎಂದು ಹೇಗೆ ಹೇಳಬಹುದು?

12 ಯೆಶಾಯ 35:5-10 ಓದಿ. ಬಾಬೆಲಿಂದ ಹಿಂದೆ ಬಂದವರ ಮೇಲೆ ಪ್ರಾಣಿಗಳು, ಜನರು ದಾಳಿ ಮಾಡಲ್ಲ ಎಂದು ಯೆಶಾಯನು ಇನ್ನೊಮ್ಮೆ ಪ್ರವಾದಿಸಿದನು. ಏದೆನ್‌ ತೋಟದಲ್ಲಿ ಇದ್ದ ಹಾಗೆ ಇಸ್ರಾಯೇಲಿನಲ್ಲೂ ನೀರು ಹೇರಳವಾಗಿ ಇರುವುದರಿಂದ ಭೂಮಿ ತುಂಬ ಫಲ ಕೊಡುತ್ತದೆ ಎಂದು ಹೇಳಿದನು. (ಆದಿ. 2:10-14; ಯೆರೆ. 31:12) ಈ ಪ್ರವಾದನೆ ಇಸ್ರಾಯೇಲ್ಯರಿಗೆ ಮಾತ್ರ ಅನ್ವಯಿಸುತ್ತದಾ? ಇಲ್ಲ. ಯಾಕೆಂದರೆ ಕುರುಡರ ಕಣ್ಣು ಕಾಣುವುದು, ಕಿವುಡರ ಕಿವಿ ಕೇಳುವುದು, ಕುಂಟನು ಎದ್ದು ನಡೆಯುವನು ಎಂದು ಸಹ ಯೆಶಾಯನು ಪ್ರವಾದನೆ ನುಡಿದನು. ಇದು ಬಾಬೆಲಿಂದ ಹಿಂದೆ ಬಂದ ಇಸ್ರಾಯೇಲ್ಯರಲ್ಲಿ ನೆರವೇರಲಿಲ್ಲ. ಆದರೆ ಭವಿಷ್ಯದಲ್ಲಿ ಎಲ್ಲ ಕಾಯಿಲೆಗಳು ವಾಸಿಯಾಗುತ್ತವೆ ಎಂದು ದೇವರು ಹೇಳುತ್ತಿದ್ದನು.

13, 14. (ಎ) ಇಸ್ರಾಯೇಲ್ಯರು ಬಾಬೆಲಿಂದ ಹಿಂದೆ ಬಂದಾಗ ಯೆಶಾಯ 65:21-23 ಹೇಗೆ ನೆರವೇರಿತು? (ಬಿ) ಆ ಪ್ರವಾದನೆಯಲ್ಲಿ ಯಾವುದೆಲ್ಲ ಮುಂದೆ ನೆರವೇರಲಿದೆ? (ಲೇಖನದ ಆರಂಭದ ಚಿತ್ರ ನೋಡಿ.)

13 ಯೆಶಾಯ 65:21-23 ಓದಿ. ಇಸ್ರಾಯೇಲ್ಯರು ತಮ್ಮ ಸ್ವದೇಶಕ್ಕೆ ಬಂದಾಗ ಮನೆಗಳು ಪಾಳುಬಿದ್ದಿದ್ದವು, ಹೊಲ-ತೋಟ ಇರಲಿಲ್ಲ. ಆದರೆ ಸಮಯ ಕಳೆದ ಹಾಗೆ ಯೆಹೋವ ದೇವರ ಆಶೀರ್ವಾದದಿಂದ ಎಲ್ಲ ಸರಿಹೋಯಿತು. ಜನರು ಮನೆಗಳನ್ನು ಕಟ್ಟಿ ವಾಸಿಸಲು ಆರಂಭಿಸಿದಾಗ ಮತ್ತು ತಾವು ಬೆಳೆದ ರುಚಿಕರವಾದ ಆಹಾರವನ್ನು ಸವಿಯುವಾಗ ಅವರಿಗೆ ಎಷ್ಟು ಸಂತೋಷ ಆಗಿರಬೇಕು!

14 ಈ ಪ್ರವಾದನೆಯ ಪ್ರಕಾರ ನಮ್ಮ ಆಯಸ್ಸು “ವೃಕ್ಷದ ಆಯುಸ್ಸಿನಂತಿರುವದು.” ಕೆಲವು ಮರಗಳು ಸಾವಿರಾರು ವರ್ಷ ಜೀವಿಸುತ್ತವೆ. ಆ ರೀತಿ ಮನುಷ್ಯರು ಜೀವಿಸಬೇಕಾದರೆ ಆರೋಗ್ಯ ತುಂಬ ಚೆನ್ನಾಗಿರಬೇಕು. ಅಷ್ಟೇ ಅಲ್ಲ, ಯೆಶಾಯನು ಶಾಂತಿ ತುಂಬಿದ ಮತ್ತು ಸುಂದರವಾದ ವಾತಾವರಣದ ಬಗ್ಗೆ ಹೇಳಿದ್ದಾನೆ. ಪರದೈಸಲ್ಲಿ ಮಾತ್ರ ಇದೆಲ್ಲ ಇರಲು ಸಾಧ್ಯ. ಈ ಪ್ರವಾದನೆಗಳು ಖಂಡಿತ ನೆರವೇರುತ್ತವೆ!

ಪರದೈಸಿನ ಬಗ್ಗೆ ಯೇಸು ಕೊಟ್ಟ ಮಾತು ಹೇಗೆ ನೆರವೇರಲಿದೆ? (ಪ್ಯಾರ 15, 16 ನೋಡಿ)

15. ಯೆಶಾಯನು ಯಾವ ಆಶೀರ್ವಾದಗಳ ಬಗ್ಗೆ ಹೇಳಿದ್ದಾನೆ?

15 ಹಿಂದಿನ ಪ್ಯಾರಗಳಲ್ಲಿ ನಾವು ಓದಿದ ಪ್ರವಾದನೆಗಳು ಮುಂದೆ ಪರದೈಸಲ್ಲಿ ಹೇಗೆ ನೆರವೇರುತ್ತವೆ ಎಂದು ಯೋಚಿಸಿ ನೋಡಿ. ಇಡೀ ಭೂಮಿಯಲ್ಲಿ ಯೆಹೋವ ದೇವರಿಂದ ಆಶೀರ್ವಾದ ಪಡೆದ ಜನರು ಮಾತ್ರ ಇರುತ್ತಾರೆ. ಪ್ರಾಣಿಗಳು ಮತ್ತು ಜನರು ಯಾರಿಗೂ ಹಾನಿ ಮಾಡಲ್ಲ. ಕುರುಡರು, ಕಿವುಡರು, ಕುಂಟರು ವಾಸಿಯಾಗುತ್ತಾರೆ. ಜನರು ಸ್ವಂತ ಮನೆಗಳನ್ನು ಕಟ್ಟಿಕೊಳ್ಳುತ್ತಾರೆ. ತಮಗೆ ಬೇಕಾದ ಆಹಾರವನ್ನು ತಾವೇ ಖುಷಿಯಿಂದ ಬೆಳೆಸುತ್ತಾರೆ. ಜನರು ಮರಗಳಿಗಿಂತ ಹೆಚ್ಚು ವರ್ಷ ಬದುಕುತ್ತಾರೆ. ಇಂಥ ಪರದೈಸ್‌ ಬರುತ್ತಾ ಇದೆ ಅನ್ನುವುದಕ್ಕೆ ಬೈಬಲಲ್ಲಿ ಆಧಾರವಿದೆ. ಆದರೂ ‘ಈ ಪ್ರವಾದನೆಗಳು ಭೂಮಿ ಪರದೈಸ್‌ ಆಗುವುದರ ಬಗ್ಗೆ ಮಾತಾಡುತ್ತಿಲ್ಲ’ ಎಂದು ಕೆಲವು ಜನರು ಹೇಳಬಹುದು. ಅವರಿಗೆ ನೀವೇನು ಹೇಳುತ್ತೀರಿ? ಭೂಮಿ ನಿಜವಾಗಲೂ ಪರದೈಸ್‌ ಆಗುತ್ತದೆ ಎಂದು ಹೇಳಲು ಬಲವಾದ ಕಾರಣ ಇದೆಯಾ? ಭೂಮಿಯಲ್ಲಿ ಜೀವಿಸಿದವರಲ್ಲೇ ಅತ್ಯಂತ ಮಹಾನ್‌ ಪುರುಷನಾದ ಯೇಸು ಕ್ರಿಸ್ತನು ಒಂದು ಬಲವಾದ ಕಾರಣ ಕೊಟ್ಟಿದ್ದಾನೆ.

ನೀನು ಪರದೈಸಿನಲ್ಲಿರುವಿ!

16, 17. ಯೇಸು ಪರದೈಸಿನ ಬಗ್ಗೆ ಯಾವಾಗ ಮಾತಾಡಿದನು?

16 ಯೇಸು ತಪ್ಪು ಮಾಡದಿದ್ದರೂ ಆತನನ್ನು ಅಪರಾಧಿ ಎಂದು ತೀರ್ಮಾನಿಸಿ ಕಂಬಕ್ಕೆ ಜಡಿಯಲಾಯಿತು. ಆತನ ಅಕ್ಕಪಕ್ಕದಲ್ಲಿ ಇನ್ನಿಬ್ಬರು ಯೆಹೂದಿ ಅಪರಾಧಿಗಳನ್ನು ಜಡಿಯಲಾಯಿತು. ಅವರಲ್ಲಿ ಒಬ್ಬನಿಗೆ ಯೇಸು ರಾಜ ಎಂದು ಅರ್ಥವಾಯಿತು. ಆಗ ಅವನು “ಯೇಸುವೇ, ನೀನು ನಿನ್ನ ರಾಜ್ಯದಲ್ಲಿ ಬರುವಾಗ ನನ್ನನ್ನು ಜ್ಞಾಪಿಸಿಕೋ” ಎಂದನು. (ಲೂಕ 23:39-42) ಆಗ ಯೇಸು ಅವನಿಗೆ ಕೊಟ್ಟ ಮಾತು ನಮ್ಮ ಭವಿಷ್ಯಕ್ಕೂ ಅನ್ವಯವಾಗುತ್ತದೆ. ಆ ಮಾತು ಲೂಕ 23:43​ರಲ್ಲಿದೆ. ಈ ವಚನವನ್ನು ಕೆಲವು ಪಂಡಿತರು “ನಾನು ನಿನಗೆ ಸತ್ಯವಾಗಿ ಹೇಳುತ್ತೇನೆ, ಇವತ್ತು ನೀನು ನನ್ನೊಂದಿಗೆ ಪರದೈಸಿನಲ್ಲಿರುವಿ” ಎಂದು ಭಾಷಾಂತರಿಸಿದ್ದಾರೆ. ಅವರು ಆ ವಾಕ್ಯದಲ್ಲಿ ಅರ್ಧವಿರಾಮವನ್ನು (,) “ಇವತ್ತು” ಎಂಬ ಪದಕ್ಕೆ ಮುಂಚೆ ಹಾಕಿದ್ದಾರೆ. ಈ ಅರ್ಧವಿರಾಮವನ್ನು ಎಲ್ಲಿ ಹಾಕಬೇಕು ಅನ್ನುವುದರ ಬಗ್ಗೆ ಬೇರೆ ಬೇರೆ ಅಭಿಪ್ರಾಯಗಳಿವೆ. ಆದರೆ “ಇವತ್ತು” ಎಂದು ಹೇಳಿದಾಗ ಯೇಸುವಿನ ಮನಸ್ಸಲ್ಲಿ ಏನಿತ್ತು?

17 ಈಗ ಬಳಕೆಯಲ್ಲಿರುವ ಅನೇಕ ಭಾಷೆಗಳಲ್ಲಿ, ಸರಿಯಾದ ಅರ್ಥ ಬರಲಿಕ್ಕಾಗಿ ಅರ್ಧವಿರಾಮವನ್ನು ಬಳಸಲಾಗುತ್ತದೆ. ಆದರೆ ಅತಿ ಹಳೆಯ ಗ್ರೀಕ್‌ ಹಸ್ತಪ್ರತಿಗಳಲ್ಲಿ ಅರ್ಧವಿರಾಮದಂಥ ಚಿಹ್ನೆಗಳನ್ನು ಯಾವಾಗಲೂ ಬಳಸುತ್ತಿರಲಿಲ್ಲ. ಆದ್ದರಿಂದ ಯೇಸು “ನಾನು ನಿನಗೆ ಹೇಳುತ್ತೇನೆ, ಇವತ್ತು ನೀನು ನನ್ನೊಂದಿಗೆ ಪರದೈಸಿನಲ್ಲಿರುವಿ” ಎಂದು ಹೇಳಿದನಾ ಅಥವಾ “ನಾನು ನಿನಗೆ ಹೇಳುತ್ತೇನೆ ಇವತ್ತು, ನೀನು ನನ್ನೊಂದಿಗೆ ಪರದೈಸಿನಲ್ಲಿರುವಿ” ಎಂದು ಹೇಳಿದನಾ ಎಂಬ ಪ್ರಶ್ನೆ ಬರುತ್ತದೆ. ಬೈಬಲನ್ನು ಭಾಷಾಂತರ ಮಾಡಿದವರು ಯೇಸುವಿನ ಮಾತನ್ನು ಹೇಗೆ ಅರ್ಥಮಾಡಿಕೊಂಡರೋ ಅದಕ್ಕೆ ತಕ್ಕ ಹಾಗೆ ಅರ್ಧವಿರಾಮವನ್ನು “ಇವತ್ತು” ಎಂಬ ಪದದ ಹಿಂದೆ ಅಥವಾ ಮುಂದೆ ಹಾಕಿದ್ದಾರೆ. ಹಾಗಾಗಿ ಈಗಿರುವ ಬೈಬಲ್‌ಗಳಲ್ಲಿ ಈ ಎರಡೂ ರೀತಿಯಲ್ಲಿ ಲೂಕ 23:43​ನ್ನು ಭಾಷಾಂತರಿಸಿರುವುದನ್ನು ನೀವು ನೋಡಬಹುದು.

18, 19. ಯೇಸುವಿನ ಮಾತಿನ ಅರ್ಥವನ್ನು ತಿಳಿದುಕೊಳ್ಳಲು ಯಾವುದು ಸಹಾಯ ಮಾಡುತ್ತದೆ?

18 ಯೇಸು ತನ್ನ ಹಿಂಬಾಲಕರಿಗೆ ತನ್ನ ಮರಣದ ಬಗ್ಗೆ ಏನು ಹೇಳಿದನು ಎಂದು ಗಮನಿಸಿ. ಆತನು ಹೇಳಿದ್ದು: “ಮನುಷ್ಯಕುಮಾರನು ಮೂರು ಹಗಲು ಮೂರು ರಾತ್ರಿ ಭೂಗರ್ಭದೊಳಗೆ ಇರುವನು.” ಅಷ್ಟೇ ಅಲ್ಲ, “ಮನುಷ್ಯಕುಮಾರನನ್ನು ಜನರ ಕೈಗೆ ದ್ರೋಹದಿಂದ ಒಪ್ಪಿಸಿಕೊಡಲಾಗುತ್ತದೆ ಮತ್ತು ಅವರು ಅವನನ್ನು ಕೊಲ್ಲುವರು; ಅವನನ್ನು ಮೂರನೆಯ ದಿನ ಎಬ್ಬಿಸಲಾಗುವುದು” ಎಂದೂ ಹೇಳಿದನು. (ಮತ್ತಾ. 12:40; 16:21; 17:22, 23; ಮಾರ್ಕ 10:34) ಆತನು ಹೇಳಿದ ಹಾಗೇ ನಡೆಯಿತು ಎಂದು ಅಪೊಸ್ತಲ ಪೇತ್ರ ವರದಿ ಮಾಡಿದ್ದಾನೆ. (ಅ. ಕಾ. 10:39, 40) ಆದ್ದರಿಂದ ಯೇಸು ಮತ್ತು ಆ ಕಳ್ಳ ತೀರಿಹೋದ ದಿನ ಪರದೈಸಿಗೆ ಹೋಗಲಿಲ್ಲ ಎಂದು ಇದರಿಂದ ಗೊತ್ತಾಗುತ್ತದೆ. ಬೈಬಲ್‌ ಹೇಳುವಂತೆ ಯೇಸು ಮೂರು ದಿನ “ಹೇಡೀಸ್‌ನಲ್ಲಿ” ಅಥವಾ ಸಮಾಧಿಯಲ್ಲಿ ಇದ್ದನು. ನಂತರ ದೇವರು ಆತನನ್ನು ಪುನರುತ್ಥಾನ ಮಾಡಿದನು.—ಅ. ಕಾ. 2:31, 32. *

19 ಆದ್ದರಿಂದ ಯೇಸು ತನ್ನ ಪಕ್ಕದಲ್ಲಿದ್ದ ಅಪರಾಧಿಗೆ ಮಾತು ಕೊಡುವಾಗ “ನಾನು ಇವತ್ತು ನಿನಗೆ ಸತ್ಯವಾಗಿ ಹೇಳುತ್ತೇನೆ” ಎಂದು ಆರಂಭಿಸಿದನು ಎಂಬುದರಲ್ಲಿ ಸಂಶಯವಿಲ್ಲ. ಮೋಶೆಯ ಕಾಲದಲ್ಲೂ ಈ ರೀತಿ ಮಾತಾಡುತ್ತಿದ್ದರು. ಮೋಶೆ ಒಮ್ಮೆ “ನಾನು ಈಗ [ಇವತ್ತು] ನಿಮಗೆ ಬೋಧಿಸುವ ಧರ್ಮೋಪದೇಶವನ್ನೂ ಆಜ್ಞಾವಿಧಿಗಳನ್ನೂ ನೀವು ಅನುಸರಿಸುವವರಾಗಿರಬೇಕು” ಎಂದು ಹೇಳಿದ್ದನು.—ಧರ್ಮೋ. 6:6; 7:11; 8:1, 19; 30:15.

20. ನಾವು ಯೇಸುವಿನ ಮಾತನ್ನು ಅರ್ಥಮಾಡಿಕೊಂಡಿರುವುದು ಸರಿ ಎಂದು ಯಾವುದರಿಂದ ಗೊತ್ತಾಗುತ್ತದೆ?

20 ಯೇಸು ಜೀವಿಸಿದ್ದ ಪ್ರದೇಶಕ್ಕೆ ಸೇರಿದ ಒಬ್ಬ ಬೈಬಲ್‌ ಭಾಷಾಂತರಗಾರ ಏನು ಹೇಳುತ್ತಾರೆಂದರೆ, “ಈ ವಾಕ್ಯದಲ್ಲಿ ‘ಇವತ್ತು’ ಎಂಬ ಪದಕ್ಕೆ ಒತ್ತುಕೊಟ್ಟು ‘ನಾನು ಇವತ್ತು ನಿನಗೆ ಹೇಳುತ್ತೇನೆ, ನೀನು ನನ್ನೊಂದಿಗೆ ಪರದೈಸಿನಲ್ಲಿರುವಿ’ ಎಂದು ಓದಬೇಕು. ಯೇಸು ಅವತ್ತಿನ ದಿನ ಆ ಮಾತನ್ನು ಕೊಟ್ಟನು, ಆದರೆ ಅದರ ನೆರವೇರಿಕೆ ಮುಂದಕ್ಕೆ ಆಗಲಿತ್ತು.” ಆ ಪ್ರದೇಶದಲ್ಲಿರುವ ಜನರು ಹಾಗೇ ಮಾತಾಡುತ್ತಾರೆ ಮತ್ತು ಅದರ ಅರ್ಥ ಏನೆಂದರೆ “ಒಂದು ನಿರ್ದಿಷ್ಟ ದಿನದಲ್ಲಿ ಮಾತು ಕೊಡಲಾಯಿತು, ಖಂಡಿತ ನೆರವೇರುತ್ತದೆ” ಎಂದು ಆ ಭಾಷಾಂತರಗಾರ ವಿವರಿಸುತ್ತಾರೆ. ಆದ್ದರಿಂದಲೇ ಐದನೇ ಶತಮಾನದ ಸಿರಿಯಾಕ್‌ ವರ್ಷನ್‌ ಆ ವಚನವನ್ನು “ಆಮೆನ್‌, ಇಂದು ನಾನು ನಿನಗೆ ಹೇಳುತ್ತೇನೆ, ನೀನು ನನ್ನೊಂದಿಗೆ ಏದೆನ್‌ ತೋಟದಲ್ಲಿರುವಿ” ಎಂದು ಭಾಷಾಂತರಿಸಿದೆ. ಯೇಸು ಕೊಟ್ಟ ಮಾತಿನಿಂದ ನಮ್ಮೆಲ್ಲರಿಗೂ ಪ್ರೋತ್ಸಾಹ ಸಿಗುತ್ತದೆ.

21. (ಎ) ಯೇಸು ಆ ಅಪರಾಧಿಯ ಹತ್ತಿರ ಮಾತಾಡಿದ್ದು ಯಾವುದರ ಬಗ್ಗೆ ಅಲ್ಲ? (ಬಿ) ಹೇಗೆ ಹೇಳಬಹುದು?

21 ಯೇಸು ಆ ಅಪರಾಧಿಯ ಹತ್ತಿರ ಸ್ವರ್ಗದಲ್ಲಿರುವ ಪರದೈಸಿನ ಬಗ್ಗೆ ಮಾತಾಡುತ್ತಿರಲಿಲ್ಲ. ಹೇಗೆ ಹೇಳಬಹುದು? ತನ್ನ ನಂಬಿಗಸ್ತ ಅಪೊಸ್ತಲರು ತನ್ನೊಂದಿಗೆ ಸ್ವರ್ಗದಲ್ಲಿ ಆಳುತ್ತಾರೆ ಎಂದು ಯೇಸು ಒಡಂಬಡಿಕೆ ಮಾಡಿಕೊಂಡದ್ದರ ಬಗ್ಗೆ ಆ ಅಪರಾಧಿಗೆ ಗೊತ್ತೇ ಇರಲಿಲ್ಲ. ಇದು ಒಂದು ಕಾರಣ. (ಲೂಕ 22:29) ಇನ್ನೊಂದು ಕಾರಣ, ಆ ಅಪರಾಧಿ ದೀಕ್ಷಾಸ್ನಾನ ಕೂಡ ಮಾಡಿಸಿಕೊಂಡಿರಲಿಲ್ಲ. (ಯೋಹಾ. 3:3-6, 12) ಆದ್ದರಿಂದ ಯೇಸು ಅಪರಾಧಿಗೆ ಮಾತು ಕೊಟ್ಟಾಗ ಭೂಮಿಯಲ್ಲಿ ಬರಲಿದ್ದ ಪರದೈಸ್‌ ಬಗ್ಗೆ ಮಾತಾಡಿರಬೇಕು. ವರ್ಷಗಳು ಕಳೆದ ನಂತರ ಅಪೊಸ್ತಲ ಪೌಲನು ಕಂಡ ದರ್ಶನದಲ್ಲಿ ಒಬ್ಬ ಮನುಷ್ಯ “ಪರದೈಸಿಗೆ ಒಯ್ಯಲ್ಪಟ್ಟನು” ಎಂದು ಹೇಳುತ್ತಾನೆ. (2 ಕೊರಿಂ. 12:1-4) ಪೌಲ ಮತ್ತು ಇತರ ಅಪೊಸ್ತಲರನ್ನು ಸ್ವರ್ಗದಲ್ಲಿ ಯೇಸುವಿನೊಂದಿಗೆ ಆಳಲು ಆಯ್ಕೆ ಮಾಡಲಾಗಿತ್ತು. ಆದರೂ ಮುಂದೆ ಬರಲಿದ್ದ ಪರದೈಸಿನ ಬಗ್ಗೆ ಪೌಲ ಮಾತಾಡುತ್ತಿದ್ದನು. * ಆ ಪರದೈಸ್‌ ಭೂಮಿಯ ಮೇಲೆ ಬರುತ್ತಾ? ಅಲ್ಲಿ ನೀವು ಇರುತ್ತೀರಾ?

ಪರದೈಸ್‌ ಹೇಗಿರುತ್ತದೆ?

22, 23. ಪರದೈಸ್‌ ಹೇಗಿರುತ್ತದೆ?

22 ‘ನೀತಿವಂತರು ದೇಶದಲ್ಲಿ ವಾಸಿಸುವರು’ ಎಂದು ದಾವೀದ ಹೇಳಿದ್ದನ್ನು ನೆನಪಿಸಿಕೊಳ್ಳಿ. (ಕೀರ್ತ. 37:29; 2 ಪೇತ್ರ 3:13) ಭೂಮಿಯಲ್ಲಿ ದೇವರ ನೀತಿಯ ತತ್ವಗಳನ್ನು ಪಾಲಿಸುವ ಜನರು ಮಾತ್ರ ಇರುವ ಸಮಯದ ಬಗ್ಗೆ ದಾವೀದ ಮಾತಾಡುತ್ತಿದ್ದನು. ಯೆಶಾಯ 65:22​ರಲ್ಲಿ “ನನ್ನ ಜನರ ಆಯುಸ್ಸು ವೃಕ್ಷದ ಆಯುಸ್ಸಿನಂತಿರುವದು” ಎಂಬ ಪ್ರವಾದನೆ ಇದೆ. ಹೊಸ ಲೋಕದಲ್ಲಿ ಯೆಹೋವನನ್ನು ಆರಾಧಿಸುವ ಜನರು ಸಾವಿರಾರು ವರ್ಷ ಜೀವಿಸುತ್ತಾರೆ ಎಂದು ಇದು ತೋರಿಸುತ್ತದೆ. ಹೀಗೆ ಆಗುತ್ತಾ? ಆಗುತ್ತೆ. ಯಾಕೆಂದರೆ ಪ್ರಕಟನೆ 21:1-4 ಹೇಳುವಂತೆ ದೇವರು ಮಾನವಕುಲವನ್ನು ಆಶೀರ್ವದಿಸುತ್ತಾನೆ ಮತ್ತು ಆತನ ಆಶೀರ್ವಾದಗಳಲ್ಲಿ ಒಂದು ಮರಣವನ್ನು ತೆಗೆದುಹಾಕುವುದೇ ಆಗಿದೆ.

23 ಪರದೈಸ್‌ ಬಗ್ಗೆ ಬೈಬಲ್‌ ಏನು ಕಲಿಸುತ್ತದೋ ಅದು ಸ್ಪಷ್ಟವಾಗಿದೆ. ಆದಾಮ-ಹವ್ವ ಪರದೈಸಲ್ಲಿ ಶಾಶ್ವತವಾಗಿ ಜೀವಿಸುವ ಅವಕಾಶ ಕಳಕೊಂಡರು. ಆದರೆ ಮುಂದೆ ಇಡೀ ಭೂಮಿ ಪರದೈಸಾಗುತ್ತದೆ. ದೇವರು ಮಾತು ಕೊಟ್ಟಂತೆ ಭೂಮಿಯಲ್ಲಿ ಮನುಷ್ಯರನ್ನು ಖಂಡಿತ ಆಶೀರ್ವದಿಸುತ್ತಾನೆ. ದಾವೀದನು ಹೇಳಿದಂತೆ ದೀನರು, ನೀತಿವಂತರು ಭೂಮಿಯಲ್ಲಿ ಇರುತ್ತಾರೆ. ಅವರು ಶಾಶ್ವತವಾಗಿ ಜೀವಿಸುತ್ತಾರೆ. ಯೆಶಾಯನ ಪ್ರವಾದನೆಗಳು ಸುಂದರವಾದ ಪರದೈಸನ್ನು ಮನಸ್ಸಲ್ಲಿ ಚಿತ್ರಿಸಿಕೊಂಡು ಅದನ್ನು ಎದುರುನೋಡಲು ಸಹಾಯ ಮಾಡುತ್ತವೆ. ಆ ಪರದೈಸ್‌ ಬರುವಾಗ ಯೇಸು ತನ್ನ ಪಕ್ಕದಲ್ಲಿದ್ದ ಅಪರಾಧಿಗೆ ಕೊಟ್ಟ ಮಾತು ನೆರವೇರುತ್ತದೆ. ನಿಮಗೂ ಆ ಪರದೈಸಿನ ಬಾಗಿಲು ತೆರೆದಿದೆ. ಕೊರಿಯದಲ್ಲಿ ನಡೆದ ಅಧಿವೇಶನದಲ್ಲಿ ಸಹೋದರ-ಸಹೋದರಿಯರು “ಪರದೈಸಲ್ಲಿ ಸಿಗೋಣ!” ಎಂದು ಒಬ್ಬರಿಗೊಬ್ಬರು ಹೇಳಿಕೊಂಡ ಮಾತು ಆಗ ನಿಜವಾಗುತ್ತದೆ.

^ ಪ್ಯಾರ. 18 ಪ್ರಾಧ್ಯಾಪಕರಾದ ಸಿ. ಮಾರ್ವನ್‌ ಪೇಟ್‌ ತಮ್ಮ ಪುಸ್ತಕದಲ್ಲಿ ಏನು ಹೇಳುತ್ತಾರೆಂದರೆ, ಯೇಸು “ಇವತ್ತು” ಎಂದು ಹೇಳಿದ್ದರ ಅರ್ಥ ಆತನು ಸತ್ತ ಅದೇ ದಿನ ಅಂದರೆ 24 ಗಂಟೆಯೊಳಗೆ ಪರದೈಸಲ್ಲಿ ಇರುತ್ತಾನೆ ಎಂದು ಅನೇಕ ಪರಿಣತರು ನಂಬುತ್ತಾರೆ. ಆದರೆ ಈ ಅಭಿಪ್ರಾಯಕ್ಕೂ ಬೈಬಲಲ್ಲಿ ಯೇಸುವಿನ ಬಗ್ಗೆ ಇರುವ ಬೇರೆ ವಿಷಯಗಳಿಗೂ ಹೊಂದಾಣಿಕೆ ಆಗಲ್ಲ ಎಂದು ಪೇಟ್‌ ಹೇಳುತ್ತಾರೆ. ಉದಾಹರಣೆಗೆ, ಯೇಸು ತೀರಿಹೋದ ಮೇಲೆ ಹೇಡೀಸ್‌ನಲ್ಲಿ ಅಥವಾ ಸಮಾಧಿಯಲ್ಲಿ ಇದ್ದನು, ನಂತರ ಸ್ವರ್ಗಕ್ಕೆ ಹೋದನು ಎಂದು ಬೈಬಲ್‌ ಹೇಳುತ್ತದೆ ಅನ್ನುತ್ತಾರೆ ಪೇಟ್‌.—ಮತ್ತಾ. 12:40; ಅ. ಕಾ. 2:31; ರೋಮ. 10:7.

^ ಪ್ಯಾರ. 21 ಈ ಪತ್ರಿಕೆಯಲ್ಲಿರುವ “ವಾಚಕರಿಂದ ಪ್ರಶ್ನೆಗಳು” ನೋಡಿ.