ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ಅಪೊಸ್ತಲ ಪೌಲನು ಯಾವ ಅರ್ಥದಲ್ಲಿ “ಮೂರನೆಯ ಸ್ವರ್ಗಕ್ಕೆ” ಮತ್ತು ‘ಪರದೈಸಿಗೆ’ ಒಯ್ಯಲ್ಪಟ್ಟನು?—2 ಕೊರಿಂ. 12:2-4.

ಪೌಲನು 2 ಕೊರಿಂಥ 12:2, 3​ರಲ್ಲಿ “ಮೂರನೆಯ ಸ್ವರ್ಗಕ್ಕೆ ಒಯ್ಯಲ್ಪಟ್ಟ” ಮನುಷ್ಯನ ಬಗ್ಗೆ ಮಾತಾಡುತ್ತಾನೆ. ಆ ಮನುಷ್ಯ ಯಾರು? ಕೊರಿಂಥ ಸಭೆಗೆ ಬರೆದ ಪತ್ರದಲ್ಲಿ ದೇವರು ತನ್ನನ್ನು ಒಬ್ಬ ಅಪೊಸ್ತಲನಂತೆ ಉಪಯೋಗಿಸುತ್ತಿದ್ದಾನೆ ಎಂದು ಪೌಲನು ಒತ್ತಿಹೇಳಿದನು. (2 ಕೊರಿಂ. 11:5, 23) ನಂತರ “ದರ್ಶನಗಳ ಕುರಿತೂ ಪ್ರಕಟನೆಗಳ ಕುರಿತೂ” ಮಾತಾಡಿದನು. ಆ ಸಂದರ್ಭದಲ್ಲಿ ಪೌಲನು ಬೇರೆ ಸಹೋದರರ ಬಗ್ಗೆ ಮಾತಾಡಲಿಲ್ಲ. ಹಾಗಾಗಿ ದರ್ಶನಗಳು ಮತ್ತು ಪ್ರಕಟನೆಗಳು ಸಿಕ್ಕಿದ ಆ ಮನುಷ್ಯನು ಪೌಲನೇ ಆಗಿರಬೇಕು.—2 ಕೊರಿಂ. 12:1, 5

“ಮೂರನೆಯ ಸ್ವರ್ಗಕ್ಕೆ ಒಯ್ಯಲ್ಪಟ್ಟ” ಮತ್ತು ‘ಪರದೈಸಿಗೆ’ ಹೋದ ಮನುಷ್ಯನು ಪೌಲನೇ ಎಂದು ಗೊತ್ತಾಯಿತು. (2 ಕೊರಿಂ. 12:2-4) ಪೌಲನು ತನ್ನ ಪತ್ರದಲ್ಲಿ “ಪ್ರಕಟನೆಗಳ” ಬಗ್ಗೆ ಮಾತಾಡಿದನು. ಆತನಿಗೆ ಭವಿಷ್ಯದಲ್ಲಿ ಬರಲಿರುವ ವಿಷಯಗಳ ಬಗ್ಗೆ ತಿಳಿಸಲಾಯಿತು ಎಂದು ಇದರಿಂದ ಗೊತ್ತಾಗುತ್ತದೆ.

ಪೌಲನು ನೋಡಿದ “ಮೂರನೆಯ ಸ್ವರ್ಗ” ಏನಾಗಿತ್ತು?

ಕನ್ನಡ ಬೈಬಲಿನಲ್ಲಿ “ಸ್ವರ್ಗ” ಎಂಬ ಪದವನ್ನು “ಆಕಾಶ” ಎಂದು ಭಾಷಾಂತರಿಸಲಾಗಿದೆ. ಇದು ಕೆಲವು ಕಡೆ ನಮ್ಮ ಕಣ್ಣಿಗೆ ಕಾಣುವ ಆಕಾಶಕ್ಕೆ ಸೂಚಿಸುತ್ತದೆ. (ಆದಿ. 11:4; 27:28; ಮತ್ತಾ. 6:26) ಇನ್ನೂ ಕೆಲವು ಕಡೆ ಇದನ್ನು ಬೇರೆ ಅರ್ಥದಲ್ಲೂ ಉಪಯೋಗಿಸಲಾಗಿದೆ. ಕೆಲವೊಮ್ಮೆ ಅದು ಮಾನವ ಆಡಳಿತಕ್ಕೂ ಸೂಚಿಸುತ್ತದೆ. (ದಾನಿ. 4:20-22) ದೇವರಿಂದ ಆಳಲ್ಪಡುವ ರಾಜ್ಯಕ್ಕೂ ಅದು ಸೂಚಿಸಬಹುದು.—ಪ್ರಕ. 21:1.

ಪೌಲನು ‘ಮೂರನೆಯ ಸ್ವರ್ಗವನ್ನು’ ನೋಡಿದನು. ಮೂರನೆಯದ್ದು ಅಂದರೆ ಏನು? ಬೈಬಲಲ್ಲಿ ಒಂದು ವಿಷಯಕ್ಕೆ ಒತ್ತು ನೀಡಲು ಅಥವಾ ತೀವ್ರತೆ ವ್ಯಕ್ತಪಡಿಸಲು ಅದನ್ನು ಮೂರು ಸಾರಿ ಹೇಳಲಾಗುತ್ತದೆ. (ಯೆಶಾ. 6:3; ಯೆಹೆ. 21:27; ಪ್ರಕ. 4:8) ಹಾಗಾದರೆ ಪೌಲನು “ಮೂರನೆಯ ಸ್ವರ್ಗ” ಎಂದು ಹೇಳಿದಾಗ ಒಂದು ಶ್ರೇಷ್ಠವಾದ, ಉನ್ನತವಾದ ಆಳ್ವಿಕೆಯ ಬಗ್ಗೆ ಮಾತಾಡುತ್ತಿದ್ದನು ಎಂದು ಕಾಣುತ್ತದೆ. ಇದು ಯೇಸು ಕ್ರಿಸ್ತನು ಮತ್ತು 1,44,000 ಸಹರಾಜರು ಆಳುವ ಮೆಸ್ಸೀಯ ರಾಜ್ಯವಾಗಿದೆ. (2004, ಅಕ್ಟೋಬರ್‌ 15​ರ ಕಾವಲಿನಬುರುಜುವಿನ ಪುಟ 8, ಪ್ಯಾರ 5 ನೋಡಿ.) ಈ ಮೆಸ್ಸೀಯ ರಾಜ್ಯವನ್ನು ದೇವರು ವಾಗ್ದಾನ ಮಾಡಿದ “ನೂತನ ಆಕಾಶ” ಎಂದು ಅಪೊಸ್ತಲ ಪೇತ್ರ ಬರೆದಿದ್ದಾನೆ. ಅದನ್ನೇ ನಾವು ಎದುರುನೋಡುತ್ತಿದ್ದೇವೆ.—2 ಪೇತ್ರ 3:13.

ಪೌಲನು ಮಾತಾಡಿದ ‘ಪರದೈಸ್‌’ ಏನಾಗಿತ್ತು?

‘ಪರದೈಸ್‌’ ಎಂಬ ಪದಕ್ಕೂ ಬೇರೆ ಬೇರೆ ಅರ್ಥ ಇದೆ. (1) ಮನುಷ್ಯರಿಗೆ ದೇವರು ಆದಿಯಲ್ಲಿ ಕೊಟ್ಟ ‘ಪರದೈಸಿಗೆ’ ಇದು ಸೂಚಿಸಬಹುದು. ಅದನ್ನು ತುಂಬ ಬೇಗ ಈ ಭೂಮಿಯ ಮೇಲೆ ಪುನಃ ಸ್ಥಾಪಿಸಲಾಗುತ್ತದೆ. (2) ಹೊಸ ಲೋಕದಲ್ಲಿ ದೇವರ ಜನರು ಆನಂದಿಸಲಿಕ್ಕಿರುವ ಆಧ್ಯಾತ್ಮಿಕ ವಾತಾವರಣಕ್ಕೆ ಇದು ಸೂಚಿಸಬಹುದು. (3) ಇದು ಸ್ವರ್ಗದಲ್ಲಿರುವ ಪ್ರಶಾಂತ ಪರಿಸ್ಥಿತಿಗೆ ಸೂಚಿಸಬಹುದು. ಪ್ರಕಟನೆ 2:7 ಇದನ್ನು ‘ದೇವರ ಪರದೈಸ್‌’ ಎಂದು ಕರೆಯುತ್ತದೆ.—2015 ಜುಲೈ 15​ರ ಕಾವಲಿನಬುರುಜುವಿನ ಪುಟ 8 ಪ್ಯಾರ 8ನೋಡಿ.

ಪೌಲನು 2 ಕೊರಿಂಥ 12:4​ರಲ್ಲಿ ಈ ಮೂರೂ ವಿಷಯಗಳಿಗೆ ಸೂಚಿಸಿರುವ ಸಾಧ್ಯತೆ ಇದೆ.

ಸಾರಾಂಶ ಏನು?

ಎರಡನೇ ಕೊರಿಂಥ 12:2​ರಲ್ಲಿ ತಿಳಿಸಲಾಗಿರುವ “ಮೂರನೆಯ ಸ್ವರ್ಗ” ಯೇಸು ಮತ್ತು 1,44,000 ಮಂದಿಯ ಕೆಳಗಿರುವ ಮೆಸ್ಸೀಯ ರಾಜ್ಯಕ್ಕೆ ಅಥವಾ ‘ನೂತನ ಆಕಾಶಕ್ಕೆ’ ಸೂಚಿಸುತ್ತದೆ ಎಂದು ತೋರುತ್ತದೆ.—2 ಪೇತ್ರ 3:13.

ದೇವರ ರಾಜ್ಯದ ಆಳ್ವಿಕೆ ಶ್ರೇಷ್ಠ, ಉನ್ನತ ಆಗಿರುವುದರಿಂದ ಅದನ್ನು “ಮೂರನೆಯ ಸ್ವರ್ಗ” ಎಂದು ಕರೆಯಲಾಗಿದೆ.

ಪೌಲನು ದರ್ಶನದಲ್ಲಿ ನೋಡಿದ ‘ಪರದೈಸ್‌’ ಏನಾಗಿರಬಹುದು? (1) ಭೂಮಿಯ ಮೇಲೆ ಬರಲಿರುವ ಪರದೈಸ್‌ ಆಗಿರಬಹುದು. (2) ಆಗ ಅಸ್ತಿತ್ವದಲ್ಲಿರುವ ಆಧ್ಯಾತ್ಮಿಕ ಪರದೈಸ್‌ಗೆ ಸೂಚಿಸಬಹುದು. ಈಗ ಅಸ್ತಿತ್ವದಲ್ಲಿರುವ ಆಧ್ಯಾತ್ಮಿಕ ಪರದೈಸ್‌ಗಿಂತ ಅದು ವ್ಯಾಪಕವಾಗಿರುವುದು. (3) ಸ್ವರ್ಗದಲ್ಲಿರುವ ‘ದೇವರ ಪರದೈಸ್‌ಗೆ’ ಸೂಚಿಸಬಹುದು. ಹೊಸ ಲೋಕದಲ್ಲಿ ‘ದೇವರ ಪರದೈಸ್‌’ ಜೊತೆ ಆಧ್ಯಾತ್ಮಿಕ ಪರದೈಸ್‌ ಮತ್ತು ಭೌತಿಕ ಪರದೈಸ್‌ ಒಂದೇ ಸಮಯದಲ್ಲಿ ಅಸ್ತಿತ್ವದಲ್ಲಿರುತ್ತವೆ.

ಈ ಕಾರಣದಿಂದ, ನೂತನ ಆಕಾಶ ಮತ್ತು ನೂತನ ಭೂಮಿ ಎರಡೂ ಸೇರಿ ಹೊಸ ಲೋಕ ಆಗಲಿದೆ. ಇದೊಂದು ಹೊಸ ಏರ್ಪಾಡಾಗಿರುತ್ತದೆ. ಸ್ವರ್ಗದಿಂದ ಆಳುವ ದೇವರ ಸರ್ಕಾರ ಮತ್ತು ಪರದೈಸ್‌ ಭೂಮಿಯ ಮೇಲೆ ಯೆಹೋವನ ಸೇವೆ ಮಾಡುವ ಮನುಷ್ಯರು ಸೇರಿ ಹೊಸ ಲೋಕದ ಭಾಗವಾಗಲಿದ್ದಾರೆ.