ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯುವಜನರೇ, ನೀವು ಖುಷಿಯಾಗಿ ಇರಬೇಕನ್ನುವುದೇ ನಿಮ್ಮ ಸೃಷ್ಟಿಕರ್ತನ ಆಸೆ

ಯುವಜನರೇ, ನೀವು ಖುಷಿಯಾಗಿ ಇರಬೇಕನ್ನುವುದೇ ನಿಮ್ಮ ಸೃಷ್ಟಿಕರ್ತನ ಆಸೆ

‘ದೇವರು ನಮ್ಮ ಆನಂದಕ್ಕಾಗಿ ನಮಗೆ ಎಲ್ಲವನ್ನೂ ಹೇರಳವಾಗಿ ಒದಗಿಸುತ್ತಾನೆ.’—1 ತಿಮೊ. 6:17.

ಗೀತೆಗಳು: 89, 4

1, 2. ಮುಂದೆ ಏನು ಮಾಡಬೇಕು ಅಂತ ನಿರ್ಧಾರ ಮಾಡುವಾಗ ನಿಮ್ಮ ಸೃಷ್ಟಿಕರ್ತನ ಮಾತನ್ನು ಕೇಳುವುದು ಜಾಣತನ ಯಾಕೆ? (ಲೇಖನದ ಆರಂಭದ ಚಿತ್ರಗಳನ್ನು ನೋಡಿ.)

ನೀವೊಬ್ಬ ಯುವ ವ್ಯಕ್ತಿನಾ? ಹಾಗಾದರೆ ನೀವು ಮುಂದೆ ಏನು ಮಾಡಬೇಕು ಎಂದು ನಿಮಗೆ ತುಂಬ ಜನ ಸಲಹೆ ಕೊಟ್ಟಿರುತ್ತಾರೆ. ನಿಮ್ಮ ಶಿಕ್ಷಕರು, ಸಲಹೆಗಾರರು ಅಥವಾ ಬೇರೆಯವರು ನೀವು ಉನ್ನತ ಶಿಕ್ಷಣ ಪಡೆಯಬೇಕು ಅಥವಾ ಕೈ ತುಂಬ ಸಂಬಳ ಬರೋ ಕೆಲಸ ಮಾಡಬೇಕು ಅಂತ ಹೇಳಿರಬಹುದು. ಆದರೆ ಯೆಹೋವನು ನೀವು ಜೀವನದಲ್ಲಿ ಯಶಸ್ಸು ಪಡಕೊಳ್ಳೋಕೆ ಬೇರೆ ಸಲಹೆ ಕೊಡುತ್ತಾನೆ. ನೀವು ಶಾಲೆಯಲ್ಲಿ ಚೆನ್ನಾಗಿ ಓದಿ ಒಂದು ಕೆಲಸಕ್ಕೆ ಸೇರಿ ನಿಮ್ಮ ಜೀವನಕ್ಕೆ ಒಂದು ದಾರಿ ಮಾಡಿಕೊಳ್ಳಬೇಕು ಅಂತ ಆತನಿಗೂ ಆಸೆ ಇದೆ. (ಕೊಲೊ. 3:23) ಆದರೆ ನಿಮ್ಮ ಜೀವನದಲ್ಲಿ ಯಾವುದು ಮುಖ್ಯ ಎಂದು ನಿರ್ಧಾರ ಮಾಡುವಾಗ ಸರಿಯಾದ ತತ್ವಗಳು, ಸಲಹೆಗಳನ್ನು ಉಪಯೋಗಿಸಿ ನಿರ್ಧಾರ ಮಾಡಬೇಕು ಅಂತ ಪ್ರೋತ್ಸಾಹಿಸುತ್ತಾನೆ. ಆತನು ಕೊಟ್ಟಿರುವ ತತ್ವಗಳು ಕಡೇ ದಿವಸಗಳಲ್ಲಿ ಜೀವಿಸುತ್ತಿರುವ ನಿಮಗೆ ತುಂಬ ಪ್ರಯೋಜನ ತರುತ್ತವೆ.—ಮತ್ತಾ. 24:14.

2 ಯೆಹೋವನಿಗೆ ಎಲ್ಲ ಗೊತ್ತಿದೆ ಅನ್ನೋದನ್ನು ಮರೆಯಬೇಡಿ. ಮುಂದೆ ಏನಾಗುತ್ತೆ ಮತ್ತು ಈ ಲೋಕದ ಅಂತ್ಯ ಎಷ್ಟು ಹತ್ತಿರ ಇದೆ ಅನ್ನೋದು ಆತನಿಗೆ ಚೆನ್ನಾಗಿ ಗೊತ್ತಿದೆ. (ಯೆಶಾ. 46:10; ಮತ್ತಾ. 24:3, 36) ಯೆಹೋವನಿಗೆ ನಿಮ್ಮ ಬಗ್ಗೆನೂ ಚೆನ್ನಾಗಿ ಗೊತ್ತು. ನಿಮಗೆ ಯಾವುದು ಒಳ್ಳೇದು ಮತ್ತು ಯಾವುದು ಕೆಟ್ಟದ್ದು ಅನ್ನೋದು ಆತನಿಗೆ ಗೊತ್ತು. ಮನುಷ್ಯರು ಕೊಡೋ ಸಲಹೆಗಳು ಚೆನ್ನಾಗಿದೆ ಅನಿಸುವುದಾದರೂ ಅವು ದೇವರ ವಾಕ್ಯದ ಮೇಲೆ ಆಧರಿಸಿಲ್ಲವಾದರೆ ಅವುಗಳಿಂದ ಏನೂ ಪ್ರಯೋಜನವಿಲ್ಲ.—ಜ್ಞಾನೋ. 19:21.

ಸರಿಯಾದ ಮಾರ್ಗದರ್ಶನ ಯೆಹೋವನಿಂದ ಮಾತ್ರ ಸಿಗುತ್ತದೆ

3, 4. ಕೆಟ್ಟ ಸಲಹೆ ಕೇಳಿದ್ದರಿಂದ ಆದಾಮ, ಹವ್ವ ಮತ್ತು ಅವರ ಸಂತತಿಗೆ ಏನಾಯಿತು?

3 ಕೆಟ್ಟ ಸಲಹೆ ಮಾನವ ಇತಿಹಾಸದ ಆರಂಭದಿಂದಲೂ ಸಿಗುತ್ತಿದೆ. ಮನುಷ್ಯರಿಗೆ ಮೊದಲನೇ ಸಲ ಕೆಟ್ಟ ಸಲಹೆ ಕೊಟ್ಟಿದ್ದು ಸೈತಾನನು. ಆದಾಮ-ಹವ್ವ ತಮ್ಮ ಇಷ್ಟದಂತೆ ಜೀವನ ಮಾಡಿದರೆ ಸಂತೋಷವಾಗಿರುತ್ತಾರೆ ಎಂದು ಅವನು ಹವ್ವಳಿಗೆ ಹೇಳಿದನು. (ಆದಿ. 3:1-6) ಆದರೆ ಸೈತಾನನು ಸ್ವಾರ್ಥಿಯಾಗಿದ್ದನು! ಆದಾಮ, ಹವ್ವ ಮತ್ತು ಅವರಿಗೆ ಮುಂದೆ ಹುಟ್ಟಲಿದ್ದ ಮಕ್ಕಳೆಲ್ಲರೂ ಯೆಹೋವನನ್ನು ಬಿಟ್ಟು ತನ್ನ ಮಾತನ್ನು ಕೇಳಬೇಕು, ತನ್ನನ್ನು ಆರಾಧಿಸಬೇಕು ಎಂದು ಬಯಸಿದನು. ಆದರೆ ಸೈತಾನನು ಮನುಷ್ಯರಿಗಾಗಿ ಏನೂ ಮಾಡಿರಲಿಲ್ಲ. ಎಲ್ಲ ಮಾಡಿದ್ದು-ಕೊಟ್ಟಿದ್ದು ಯೆಹೋವ ದೇವರು. ಆದಾಮನಿಗೆ ಹವ್ವಳನ್ನು ಮತ್ತು ಹವ್ವಳಿಗೆ ಆದಾಮನನ್ನು ಕೊಟ್ಟನು. ಸುಂದರವಾದ ತೋಟವನ್ನು ಮತ್ತು ಸದಾಕಾಲ ಜೀವಿಸುವಂಥ ಪರಿಪೂರ್ಣ ದೇಹವನ್ನು ಕೊಟ್ಟನು.

4 ಆದರೆ ಆದಾಮ-ಹವ್ವ ಯೆಹೋವನ ಮಾತನ್ನು ಕೇಳಲಿಲ್ಲ. ತಮಗೆ ಜೀವ ಕೊಟ್ಟಿರುವವನ ಜೊತೆನೇ ಸಂಬಂಧ ಕಡಿದುಕೊಂಡು ಬಿಟ್ಟರು. ಇದರಿಂದಾಗಿ ಘೋರವಾದ ಪರಿಣಾಮವನ್ನು ಅನುಭವಿಸಬೇಕಾಯಿತು. ಗಿಡದಿಂದ ಕಿತ್ತ ಹೂವು ಬಾಡಿಹೋಗುವ ಹಾಗೆ ಆದಾಮ-ಹವ್ವಗೆ ವಯಸ್ಸಾಗುತ್ತಾ ಹೋಯಿತು. ಕೊನೆಗೊಂದು ದಿನ ಅವರು ಸತ್ತುಹೋದರು. ಅವರ ಮಕ್ಕಳಾಗಿರುವ ನಾವು ಸಹ ಇದೇ ಪರಿಣಾಮವನ್ನು ಎದುರಿಸಬೇಕಾಗಿದೆ. (ರೋಮ. 5:12) ಇಂದು ಹೆಚ್ಚಿನ ಜನರು ದೇವರು ಮಾತನ್ನು ಕೇಳಲ್ಲ, ತಮಗಿಷ್ಟ ಆಗಿದ್ದನ್ನೇ ಮಾಡುತ್ತಾರೆ. (ಎಫೆ. 2:1-3) ಪರಿಣಾಮ ಏನು? “ಯಾವ ಜ್ಞಾನವೂ . . . ಯೆಹೋವನೆದುರಿಗೆ ನಿಲ್ಲುವದಿಲ್ಲ” ಎಂದು ಬೈಬಲ್‌ ಹೇಳುತ್ತದೆ.—ಜ್ಞಾನೋ. 21:30.

5. (ಎ) ಎಂಥ ಜನರು ಇದ್ದೇ ಇರುತ್ತಾರೆ ಅಂತ ಯೆಹೋವನಿಗೆ ಗೊತ್ತಿತ್ತು? (ಬಿ) ಆತನಿಟ್ಟ ಭರವಸೆ ಸುಳ್ಳಾಯಿತಾ?

5 ಆದಾಮನ ಸಂತತಿಯಲ್ಲಿ ಬರುವ ಕೆಲವರಾದರೂ ತನ್ನ ಬಗ್ಗೆ ತಿಳುಕೊಳ್ಳುವುದಕ್ಕೆ, ತನ್ನನ್ನು ಆರಾಧಿಸುವುದಕ್ಕೆ ಇಷ್ಟಪಡುತ್ತಾರೆ ಮತ್ತು ಇದರಲ್ಲಿ ಯುವಜನರೂ ಇರುತ್ತಾರೆ ಎಂದು ಯೆಹೋವನಿಗೆ ಗೊತ್ತಿತ್ತು. (ಕೀರ್ತ. 103:17, 18; 110:3) ಇಂಥ ಯುವಜನರು ಯೆಹೋವನ ಕಣ್ಮಣಿಗಳು! ಅವರಲ್ಲಿ ನೀವೂ ಒಬ್ಬರಾ? ಹಾಗಾದರೆ ದೇವರು ಕೊಟ್ಟಿರುವ ‘ಎಲ್ಲ ವಿಷಯಗಳಿಂದ’ ನಿಮಗೆ ತುಂಬ ಸಂತೋಷ ಸಿಕ್ಕಿದೆ ಅನ್ನುವುದು ಖಂಡಿತ. (1 ತಿಮೊ. 6:17; ಜ್ಞಾನೋ. 10:22) ಅವುಗಳಲ್ಲಿ ನಾಲ್ಕು ವಿಷಯಗಳನ್ನು ಈಗ ಚರ್ಚಿಸೋಣ. (1) ಆಧ್ಯಾತ್ಮಿಕ ಆಹಾರ (2) ಒಳ್ಳೇ ಸ್ನೇಹಿತರು (3) ಒಳ್ಳೇ ಗುರಿಗಳು (4) ನಿಜ ಸ್ವಾತಂತ್ರ್ಯ.

ಯೆಹೋವನು ನಿಮಗೆ ಆಧ್ಯಾತ್ಮಿಕ ಆಹಾರ ಕೊಡುತ್ತಾನೆ

6. (ಎ) ನಿಮ್ಮ ಆಧ್ಯಾತ್ಮಿಕ ಅಗತ್ಯವನ್ನು ನೀವು ಯಾಕೆ ಪೂರೈಸಿಕೊಳ್ಳಬೇಕು? (ಬಿ) ಈ ಅಗತ್ಯವನ್ನು ಪೂರೈಸಲು ಯೆಹೋವನು ಏನು ಮಾಡಿದ್ದಾನೆ?

6 ಸೃಷ್ಟಿಕರ್ತನ ಬಗ್ಗೆ ತಿಳುಕೊಳ್ಳುವ ಅವಶ್ಯಕತೆ ಪ್ರಾಣಿಗಳಿಗೆ ಇಲ್ಲ. ಆದರೆ ಮನುಷ್ಯರಿಗೆ ಇದೆ. ಆ ಅವಶ್ಯಕತೆಯನ್ನು ದೇವರು ಪೂರೈಸುತ್ತಾನೆ. (ಮತ್ತಾ. 4:4) ನಾವು ದೇವರು ಹೇಳಿದ ಮಾತನ್ನು ಕೇಳಿದರೆ ತಿಳುವಳಿಕೆ, ಜ್ಞಾನ ಮತ್ತು ಸಂತೋಷ ಸಿಗುತ್ತದೆ. “ತಮ್ಮ ಆಧ್ಯಾತ್ಮಿಕ ಅಗತ್ಯದ ಪ್ರಜ್ಞೆಯುಳ್ಳವರು ಸಂತೋಷಿತರು” ಎಂದು ಯೇಸು ಹೇಳಿದ್ದಾನೆ. (ಮತ್ತಾ. 5:3) ನಮ್ಮ ನಂಬಿಕೆ ಬಲಪಡಿಸಲು ದೇವರು ನಮಗೆ ಬೈಬಲನ್ನು ಕೊಟ್ಟಿದ್ದಾನೆ ಮತ್ತು “ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳಿನ” ಮೂಲಕ ಪ್ರಕಾಶನಗಳನ್ನು ಕೊಡುತ್ತಿದ್ದಾನೆ. (ಮತ್ತಾ. 24:45) ಈ ಪ್ರಕಾಶನಗಳು ಆಧ್ಯಾತ್ಮಿಕ ಆಹಾರವಾಗಿದೆ. ಯಾಕೆಂದರೆ ಅವು ನಮ್ಮ ನಂಬಿಕೆಯನ್ನು ಮತ್ತು ಯೆಹೋವನೊಟ್ಟಿಗೆ ನಮಗಿರುವ ಸಂಬಂಧವನ್ನು ಬಲಪಡಿಸುತ್ತವೆ. ನಿಜವಾಗಲೂ ಯೆಹೋವನು ನಮಗೆ ಬಗೆಬಗೆಯ, ರುಚಿಕರವಾದ ಆಧ್ಯಾತ್ಮಿಕ ಆಹಾರವನ್ನು ಬಡಿಸುತ್ತಿದ್ದಾನೆ!—ಯೆಶಾ. 65:13, 14.

7. ದೇವರು ಕೊಡುವ ಆಧ್ಯಾತ್ಮಿಕ ಆಹಾರ ನಿಮಗೆ ಹೇಗೆ ಸಹಾಯ ಮಾಡುತ್ತದೆ?

7 ಆಧ್ಯಾತ್ಮಿಕ ಆಹಾರ ನಿಮಗೆ ಜ್ಞಾನವನ್ನು ಮತ್ತು ಸರಿಯಾಗಿ ಯೋಚನೆ ಮಾಡುವ ಶಕ್ತಿಯನ್ನು ಕೊಡುತ್ತದೆ. ಇವು ನಿಮ್ಮನ್ನು ಅನೇಕ ವಿಧಗಳಲ್ಲಿ ಕಾಪಾಡುತ್ತವೆ. (ಜ್ಞಾನೋಕ್ತಿ 2:10-14 ಓದಿ.) ಉದಾಹರಣೆಗೆ, ಈ ಗುಣಗಳು ಸೃಷ್ಟಿಕರ್ತನು ಇಲ್ಲ ಅಥವಾ ಹಣ, ಆಸ್ತಿ ನಿಜವಾದ ಸಂತೋಷ ಕೊಡುತ್ತದೆ ಎಂಬಂಥ ಸುಳ್ಳುಗಳನ್ನು ಗುರುತಿಸಲಿಕ್ಕೆ ಸಹಾಯ ಮಾಡುತ್ತವೆ. ನಿಮಗೆ ಹಾನಿ ಮಾಡುವಂಥ ಕೆಟ್ಟ ಆಸೆಗಳು ಅಥವಾ ಚಟಗಳಿಂದ ದೂರ ಇರುವುದಕ್ಕೂ ಈ ಗುಣಗಳು ಸಹಾಯ ಮಾಡುತ್ತವೆ. ಹಾಗಾಗಿ ಜ್ಞಾನ ಪಡಕೊಳ್ಳುವುದನ್ನು ಮತ್ತು ಸರಿಯಾಗಿ ಯೋಚನೆ ಮಾಡಕ್ಕೆ ಕಲಿಯುವುದನ್ನು ನಿಲ್ಲಿಸಬೇಡಿ, ಮುಂದುವರಿಸಿ. ಆಗ ಯೆಹೋವನು ನಿಮ್ಮನ್ನು ಪ್ರೀತಿಸುತ್ತಾನೆ ಮತ್ತು ನಿಮಗೆ ಒಳ್ಳೇದಾಗಬೇಕೆಂದು ಬಯಸುತ್ತಾನೆ ಅನ್ನೋದು ನಿಮಗೆ ಅರ್ಥ ಆಗುತ್ತದೆ.—ಕೀರ್ತ. 34:8; ಯೆಶಾ. 48:17, 18.

8. (ಎ) ನೀವು ಈಗಲೇ ಯಾಕೆ ದೇವರಿಗೆ ಹತ್ತಿರವಾಗಬೇಕು? (ಬಿ) ಇದರಿಂದ ಮುಂದೆ ನಿಮಗೆ ಹೇಗೆ ಪ್ರಯೋಜನ ಆಗುತ್ತದೆ?

8 ಆದಷ್ಟು ಬೇಗ ಸೈತಾನನ ಲೋಕ ಸರ್ವನಾಶವಾಗಲಿದೆ. ಯೆಹೋವನು ಮಾತ್ರ ನಮ್ಮ ಆಸರೆಯಾಗಿ ನಮ್ಮನ್ನು ಕಾಪಾಡುತ್ತಾನೆ, ನಮ್ಮ ಅಗತ್ಯಗಳನ್ನು ಪೂರೈಸುತ್ತಾನೆ. ಒಂದು ಊಟಕ್ಕೂ ನಾವು ಯೆಹೋವನ ಕಡೆಗೆ ನೋಡುವ ಸಮಯ ಬರುತ್ತದೆ! (ಹಬ. 3:2, 12-19) ಹಾಗಾಗಿ ಈಗಲೇ ದೇವರಿಗೆ ಹತ್ತಿರವಾಗಿ ಮತ್ತು ಆತನ ಮೇಲಿರುವ ನಿಮ್ಮ ನಂಬಿಕೆಯನ್ನು ಬಲಪಡಿಸಿ. (2 ಪೇತ್ರ 2:9) ಹೀಗೆ ಮಾಡಿದರೆ ನಿಮ್ಮ ಸುತ್ತಮುತ್ತ ಏನೇ ನಡೆದರೂ ದಾವೀದನ ತರಾನೇ ನಿಮಗೂ ಅನಿಸುತ್ತೆ. ಆತನು ಹೇಳಿದ್ದು: “ನಾನು ಯೆಹೋವನನ್ನು ಯಾವಾಗಲೂ ನನ್ನೆದುರಿಗೇ ಇಟ್ಟುಕೊಂಡಿದ್ದೇನೆ; ಆತನು ನನ್ನ ಬಲಗಡೆಯಲ್ಲಿ ಇರುವದರಿಂದ ನಾನು ಎಂದಿಗೂ ಕದಲುವದಿಲ್ಲ.”—ಕೀರ್ತ. 16:8.

ಯೆಹೋವನು ನಿಮಗೆ ಒಳ್ಳೇ ಸ್ನೇಹಿತರನ್ನು ಕೊಡುತ್ತಾನೆ

9. (ಎ) ಯೋಹಾನ 6:44ಕ್ಕನುಸಾರ ಯೆಹೋವನು ಏನು ಮಾಡುತ್ತಾನೆ? (ಬಿ) ಒಬ್ಬ ಸಾಕ್ಷಿಯನ್ನು ಮೊದಲನೇ ಸಲ ಭೇಟಿಮಾಡುವುದರಲ್ಲಿ ಏನು ವಿಶೇಷತೆ ಇದೆ?

9 ಸತ್ಯದಲ್ಲಿ ಇಲ್ಲದ ಒಬ್ಬ ವ್ಯಕ್ತಿಯನ್ನು ನೀವು ಮೊದಲ ಸಲ ಭೇಟಿ ಮಾಡಿದಾಗ ಅವನ ಬಗ್ಗೆ ನಿಮಗೆ ಎಷ್ಟು ಗೊತ್ತಿರುತ್ತದೆ? ಅವನ ಹೆಸರು, ಅವನು ನೋಡಕ್ಕೆ ಹೇಗಿದ್ದಾನೆ ಅನ್ನೋದು ಬಿಟ್ಟು ಹೆಚ್ಚೇನು ಗೊತ್ತಿರಲ್ಲ. ಆದರೆ ಸತ್ಯದಲ್ಲಿ ಇರುವ ವ್ಯಕ್ತಿಯನ್ನು ಭೇಟಿ ಮಾಡಿದಾಗ ಈಗಾಗಲೇ ಅವನ ಬಗ್ಗೆ ನಿಮಗೆ ಸಾಕಷ್ಟು ಗೊತ್ತಿರುತ್ತದೆ. ಅವನು ಯೆಹೋವನನ್ನು ಪ್ರೀತಿಸುತ್ತಾನೆ, ಅವನಲ್ಲಿರುವ ಯಾವುದೋ ಒಳ್ಳೇ ವಿಷಯ ನೋಡಿ ಯೆಹೋವನು ಅವನನ್ನು ತನ್ನ ಕುಟುಂಬಕ್ಕೆ ಸೇರಿಸಿಕೊಂಡಿದ್ದಾನೆ ಎನ್ನುವ ವಿಷಯ ನಿಮಗೆ ಗೊತ್ತಿರುತ್ತದೆ. (ಯೋಹಾನ 6:44 ಓದಿ.) ಆ ವ್ಯಕ್ತಿಯ ಹಿನ್ನೆಲೆ, ದೇಶ, ಜಾತಿ ಅಥವಾ ಸಂಸ್ಕೃತಿ ಯಾವುದೇ ಆಗಿದ್ದರೂ ಆ ವ್ಯಕ್ತಿ ಬಗ್ಗೆ ನಿಮಗೆ ಸಾಕಷ್ಟು ಗೊತ್ತಿರುತ್ತದೆ, ಆ ವ್ಯಕ್ತಿಗೂ ನಿಮ್ಮ ಬಗ್ಗೆ ಗೊತ್ತಿರುತ್ತದೆ!

ನಿಮಗೆ ಒಳ್ಳೇ ಸ್ನೇಹಿತರು ಸಿಗಬೇಕು, ನೀವು ಒಳ್ಳೇ ಗುರಿಗಳನ್ನು ಇಡಬೇಕು ಅನ್ನುವುದೇ ಯೆಹೋವನ ಆಸೆ (ಪ್ಯಾರ 9-12 ನೋಡಿ)

10, 11. (ಎ) ಯೆಹೋವನ ಜನರಲ್ಲಿ ಯಾವ ವಿಷಯಗಳು ಸಾಮಾನ್ಯವಾಗಿವೆ? (ಬಿ) ಇದರಿಂದ ನಿಮಗೆ ಹೇಗೆ ಪ್ರಯೋಜನ ಆಗಿದೆ?

10 ಇನ್ನೊಂದು ವಿಶೇಷತೆಯೂ ಇದೆ. ನಿಮ್ಮಿಬ್ಬರ ಭಾಷೆ ಬೇರೆ-ಬೇರೆಯಾಗಿದ್ದರೂ ಸತ್ಯದ ‘ಶುದ್ಧ’ ಭಾಷೆಯನ್ನು ನೀವಿಬ್ಬರೂ ಮಾತಾಡುತ್ತೀರಿ. (ಚೆಫ. 3:9) ಅದರರ್ಥ ನೀವಿಬ್ಬರೂ ಯೆಹೋವನನ್ನು ನಂಬುತ್ತೀರಿ, ಒಂದೇ ತರದ ನೈತಿಕ ಮಟ್ಟಗಳನ್ನು ಪಾಲಿಸುತ್ತೀರಿ ಮತ್ತು ಭವಿಷ್ಯದ ಬಗ್ಗೆ ನಿಮ್ಮಿಬ್ಬರಿಗೂ ಇರುವ ನಿರೀಕ್ಷೆಯೂ ಒಂದೇ ಆಗಿರುತ್ತದೆ. ಒಬ್ಬರನ್ನೊಬ್ಬರು ನಂಬಲು ಮತ್ತು ಸದಾಕಾಲ ಉಳಿಯುವ ಆಪ್ತ ಸ್ನೇಹವನ್ನು ಬೆಳೆಸಲು ಈ ವಿಷಯಗಳು ಸಹಾಯ ಮಾಡುತ್ತವೆ.

11 ನೀವು ಯೆಹೋವನ ಆರಾಧಕನಾಗಿರುವುದರಿಂದಲೇ ನಿಮಗೆ ಒಳ್ಳೇ ಸ್ನೇಹಿತರು ಸಿಕ್ಕಿದ್ದಾರೆ ಅನ್ನುವುದರಲ್ಲಿ ಯಾವುದೇ ಸಂಶಯ ಇಲ್ಲ. ಇಂಥ ಸ್ನೇಹಿತರು ನಿಮಗೆ ಲೋಕದ ಎಲ್ಲ ಕಡೆನೂ ಇದ್ದಾರೆ. ಆದರೆ ಅವರೆಲ್ಲರನ್ನೂ ನೀವು ಭೇಟಿ ಮಾಡಿಲ್ಲ ಅಷ್ಟೆ. ಇಂಥ ಒಂದು ಅಮೂಲ್ಯ ಉಡುಗೊರೆ ಯೆಹೋವನ ಜನರನ್ನು ಬಿಟ್ಟು ಬೇರೆಯವರ ಹತ್ತಿರ ಇರೋದನ್ನು ನೀವು ನೋಡಿದ್ದೀರಾ?

ಯೆಹೋವನು ನಿಮಗೆ ಒಳ್ಳೇ ಗುರಿಗಳನ್ನು ಇಡಲು ಸಹಾಯ ಮಾಡುತ್ತಾನೆ

12. ಯಾವ ಒಳ್ಳೇ ಗುರಿಗಳನ್ನು ನೀವು ಇಡಬಹುದು?

12 ಪ್ರಸಂಗಿ 11:9–12:1 ಓದಿ. ನೀವು ಯಾವುದಾದರೂ ಗುರಿಯನ್ನು ಇಟ್ಟು ಅದನ್ನು ಮುಟ್ಟಲು ಪ್ರಯತ್ನಿಸುತ್ತಿದ್ದೀರಾ? ಪ್ರತಿದಿನ ಬೈಬಲ್‌ ಓದುವ ಗುರಿ ಇಟ್ಟಿರಬಹುದು ಅಥವಾ ಕೂಟದಲ್ಲಿ ಒಳ್ಳೇ ಉತ್ತರ ಕೊಡಲು, ಭಾಗಗಳನ್ನು ಚೆನ್ನಾಗಿ ಮಾಡಲು ಗುರಿ ಇಟ್ಟಿರಬಹುದು. ಅಥವಾ ಸೇವೆಯಲ್ಲಿ ಬೈಬಲನ್ನು ಇನ್ನೂ ಉತ್ತಮವಾಗಿ ಬಳಸುವ ಗುರಿ ಇಟ್ಟಿರಬಹುದು. ನೀವು ಈ ವಿಷಯಗಳಲ್ಲಿ ಪ್ರಗತಿ ಮಾಡುತ್ತಿದ್ದೀರಿ ಎಂದು ನಿಮ್ಮ ಗಮನಕ್ಕೆ ಬಂದಾಗ ಅಥವಾ ಬೇರೆ ಯಾರಾದರೂ ಹೇಳಿದಾಗ ನಿಮಗೆ ಹೇಗನಿಸುತ್ತದೆ? ನಿಮಗೆ ಖುಷಿಯಾಗುತ್ತೆ ಅಲ್ವಾ? ನೀವು ಖುಷಿಪಡಲೇಬೇಕು. ಯಾಕೆಂದರೆ ಯೇಸುವಿನಂತೆ ನೀವು ಸಹ ಯೆಹೋವನು ನಿಮ್ಮಿಂದ ಏನನ್ನು ಬಯಸುತ್ತಾನೋ ಅದನ್ನೇ ಮಾಡುತ್ತಿದ್ದೀರಿ.—ಕೀರ್ತ. 40:8; ಜ್ಞಾನೋ. 27:11.

13. ಈ ಲೋಕದಲ್ಲಿ ಏನಾದರೂ ಸಾಧಿಸುವುದಕ್ಕಿಂತ ಆಧ್ಯಾತ್ಮಿಕ ಗುರಿಗಳನ್ನು ಇಡುವುದು ಯಾಕೆ ಉತ್ತಮ?

13 ನೀವು ಆಧ್ಯಾತ್ಮಿಕ ಗುರಿಗಳನ್ನು ಇಟ್ಟರೆ ಸಂತೋಷ ಸಿಗುತ್ತದೆ ಮತ್ತು ಜೀವನಕ್ಕೆ ಉದ್ದೇಶ ಇರುತ್ತದೆ. ಆದ್ದರಿಂದ ಪೌಲನು “ಸ್ಥಿರಚಿತ್ತರಾಗಿಯೂ ನಿಶ್ಚಲರಾಗಿಯೂ ಇರಿ. ನೀವು ಕರ್ತನ ಸಂಬಂಧದಲ್ಲಿ ಪಡುವ ಪ್ರಯಾಸವು ವ್ಯರ್ಥವಾಗುವುದಿಲ್ಲ ಎಂದು ತಿಳಿದವರಾಗಿದ್ದು ಕರ್ತನ ಕೆಲಸವನ್ನು ಯಾವಾಗಲೂ ಹೇರಳವಾಗಿ ಮಾಡುವವರಾಗಿರಿ” ಎಂದು ಸಲಹೆ ಕೊಟ್ಟನು. (1 ಕೊರಿಂ. 15:58) ಆದರೆ ಹೆಚ್ಚು ಹಣ ಸಂಪಾದಿಸಬೇಕು, ಹೆಸರು ಮಾಡಬೇಕು ಅಂತ ಯಾರು ಗುರಿ ಇಡುತ್ತಾರೋ ಅವರು ನಿಜವಾಗಲೂ ಸಂತೋಷವಾಗಿರುವುದಿಲ್ಲ. ಅವರು ತಮ್ಮ ಗುರಿ ಮುಟ್ಟಿದರೂ ಏನೋ ಕಳಕೊಂಡಂತೆ ಅವರಿಗೆ ಅನಿಸುತ್ತದೆ. (ಲೂಕ 9:25) ರಾಜ ಸೊಲೊಮೋನನ ಉದಾಹರಣೆಯಿಂದ ನಾವು ಈ ವಿಷಯವನ್ನು ಅರ್ಥಮಾಡಿಕೊಳ್ಳುತ್ತೇವೆ.—ರೋಮ. 15:4.

14. ಸೊಲೊಮೋನನ ಅನುಭವದಿಂದ ನೀವು ಯಾವ ಪಾಠ ಕಲಿಯುತ್ತೀರಿ?

14 ಅತ್ಯಂತ ಶ್ರೀಮಂತನಾಗಿದ್ದ, ತುಂಬ ಅಧಿಕಾರವಿದ್ದ ಸೊಲೊಮೋನನಿಗೆ ಲೋಕಕ್ಕೆ ಸಂಬಂಧಪಟ್ಟ ವಿಷಯಗಳನ್ನು ಮಾಡುವುದರಿಂದ ಖುಷಿ ಸಿಗುತ್ತದಾ ಎಂದು ನೋಡಲು ಮನಸ್ಸಾಯಿತು. ಅವನು ತನಗೆ ತಾನೇ ಹೀಗೆ ಹೇಳಿಕೊಂಡ: “ಬಾ, ನಿನ್ನನ್ನು ಸಂತೋಷದ ಮೂಲಕ ಪರೀಕ್ಷಿಸುವೆನು; ಸುಖದ ರುಚಿ ನೋಡು.” (ಪ್ರಸಂ. 2:1-10) ಬಂಗಲೆಗಳನ್ನು ಕಟ್ಟಿದ, ಸುಂದರ ತೋಟಗಳನ್ನೂ ಉದ್ಯಾನವನಗಳನ್ನೂ ನಿರ್ಮಿಸಿದ ಮತ್ತು ಇಷ್ಟಪಟ್ಟದ್ದನ್ನೆಲ್ಲಾ ಮಾಡಿದ. ಇದರಿಂದ ಅವನಿಗೆ ತೃಪ್ತಿ, ಸಂತೋಷ ಸಿಕ್ಕಿತಾ? ತಾನು ಮಾಡಿದ ಎಲ್ಲ ವಿಷಯಗಳನ್ನು ನೋಡಿ, “ಸಮಸ್ತವೂ ವ್ಯರ್ಥವಾಯಿತು, . . . ಯಾವ ಲಾಭವೂ ಕಾಣಲಿಲ್ಲ” ಎಂದ. (ಪ್ರಸಂ. 2:11) ಸೊಲೊಮೋನನ ಅನುಭವದಿಂದ ನೀವು ಪಾಠ ಕಲೀತೀರಾ?

15. ನಂಬಿಕೆ ಯಾಕೆ ಇರಬೇಕು ಮತ್ತು ಇದು ನಿಮಗೆ ಹೇಗೆ ಸಹಾಯ ಮಾಡುತ್ತದೆ ಎನ್ನುವುದರ ಬಗ್ಗೆ ಕೀರ್ತನೆ 32:8​ರಿಂದ ಏನು ಕಲಿಯುತ್ತೇವೆ?

15 ಕೆಲವು ಜನರಿಗೆ ಕೆಟ್ಟ ಮೇಲೆ ಬುದ್ಧಿ ಬರುತ್ತದೆ. ನಿಮಗೆ ಈ ತರ ಆಗುವುದು ಯೆಹೋವನಿಗೆ ಇಷ್ಟವಿಲ್ಲ. ನೀವು ಆತನ ಮಾತನ್ನು ಕೇಳಿಸಿಕೊಂಡು ಅದರಂತೆ ನಡೆಯಬೇಕು ಅಂತ ಬಯಸುತ್ತಾನೆ. ಇದನ್ನು ಮಾಡಲು ನಂಬಿಕೆ ಬೇಕು. ನೀವು ನಂಬಿಕೆ ಇಟ್ಟು ಮಾಡುವ ಆಯ್ಕೆಗಳಿಂದ ನಿಮಗೆ ಯಾವತ್ತೂ ಬೇಜಾರಾಗಲ್ಲ. ‘ತನ್ನ ಹೆಸರಿಗಾಗಿ ನೀವು ತೋರಿಸಿದ ಪ್ರೀತಿಯನ್ನು’ ಯೆಹೋವನು ಸಹ ಯಾವತ್ತೂ ಮರೆಯಲ್ಲ. (ಇಬ್ರಿ. 6:10) ಹಾಗಾಗಿ ಬಲವಾದ ನಂಬಿಕೆ ಬೆಳೆಸಿಕೊಳ್ಳಲು ಪ್ರಯತ್ನಿಸಿ. ಆಗ ಜೀವನದಲ್ಲಿ ಒಳ್ಳೇ ಆಯ್ಕೆಗಳನ್ನು ಮಾಡುತ್ತೀರಿ ಮತ್ತು ನಿಮ್ಮ ಸ್ವರ್ಗೀಯ ತಂದೆ ನಿಮಗೆ ಒಳ್ಳೇದಾಗಬೇಕೆಂದು ಬಯಸುತ್ತಾನೆ ಅನ್ನುವುದನ್ನೂ ನೀವು ಅರ್ಥಮಾಡಿಕೊಳ್ಳುತ್ತೀರಿ.—ಕೀರ್ತನೆ 32:8 ಓದಿ.

ದೇವರು ನಿಮಗೆ ನಿಜ ಸ್ವಾತಂತ್ರ್ಯ ಕೊಡುತ್ತಾನೆ

16. ನಾವು ಯಾಕೆ ಸ್ವಾತಂತ್ರ್ಯವನ್ನು ಬುದ್ಧಿವಂತಿಕೆಯಿಂದ ಉಪಯೋಗಿಸಬೇಕು?

16 ಪೌಲನು ಬರೆದದ್ದು: “ಎಲ್ಲಿ ಯೆಹೋವನ ಆತ್ಮವಿದೆಯೋ ಅಲ್ಲಿ ಸ್ವಾತಂತ್ರ್ಯವಿದೆ.” (2 ಕೊರಿಂ. 3:17) ಯೆಹೋವನಿಗೆ ಸ್ವಾತಂತ್ರ್ಯ ಅಂದರೆ ತುಂಬ ಇಷ್ಟ. ಆತನು ಇದೇ ಆಸೆಯನ್ನು ನಿಮ್ಮಲ್ಲೂ ಇಟ್ಟಿದ್ದಾನೆ. ಆದರೆ ನಿಮ್ಮ ಸ್ವಾತಂತ್ರ್ಯವನ್ನು ಬುದ್ಧಿವಂತಿಕೆಯಿಂದ ಉಪಯೋಗಿಸಬೇಕೆಂದು ಆತನು ಬಯಸುತ್ತಾನೆ. ಹೀಗೆ ಮಾಡಿದರೆ ನೀವು ಎಷ್ಟೋ ಅಪಾಯಗಳಿಂದ ತಪ್ಪಿಸಿಕೊಳ್ಳಬಹುದು. ನಿಮ್ಮ ಸಮಾನಸ್ಥರಲ್ಲಿ ಕೆಲವರು ಅಶ್ಲೀಲಚಿತ್ರ ನೋಡುತ್ತಿರಬಹುದು, ಲೈಂಗಿಕ ಅನೈತಿಕತೆಯಲ್ಲಿ ಒಳಗೂಡಿರಬಹುದು, ಜೀವಕ್ಕೆ ಅಪಾಯ ತರುವಂಥ ಕ್ರೀಡೆಗಳನ್ನು ಆಡುತ್ತಿರಬಹುದು, ಡ್ರಗ್ಸ್‌ ತಗೊಳ್ಳುತ್ತಿರಬಹುದು ಅಥವಾ ಮದ್ಯಪಾನ ಮಾಡುತ್ತಿರಬಹುದು. ಆರಂಭದಲ್ಲಿ ಈ ವಿಷಯಗಳಿಂದ ಮಜಾ ಸಿಗುತ್ತೆ ಅಂತ ಅನಿಸಬಹುದು, ಆದರೆ ಅವುಗಳಿಂದಾಗಿ ತುಂಬ ಕಷ್ಟ ಅನುಭವಿಸಬೇಕಾಗುತ್ತದೆ. ಯಾಕೆಂದರೆ ಅವುಗಳಿಂದ ಕಾಯಿಲೆ ಬರಬಹುದು, ಅವುಗಳು ಚಟವಾಗಿ ಬಿಡಬಹುದು, ಜೀವಾನೇ ಹೋಗಬಹುದು. (ಗಲಾ. 6:7, 8) ಇಂಥ ವಿಷಯಗಳನ್ನು ಮಾಡುತ್ತಿರುವ ಯುವಜನರಿಗೆ ತಾವು ಸ್ವತಂತ್ರರಾಗಿದ್ದೇವೆ ಅಂತ ಅನಿಸುತ್ತೆ, ಆದರೆ ಅವರು ಸ್ವತಂತ್ರರಾಗಿಲ್ಲ.—ತೀತ 3:3.

17, 18. (ಎ) ದೇವರಿಗೆ ವಿಧೇಯತೆ ತೋರಿಸುವುದರಿಂದ ನಮಗೆ ನಿಜವಾಗಲೂ ಸ್ವಾತಂತ್ರ್ಯ ಸಿಗುತ್ತಾ? (ಬಿ) ಯಾವ ಅರ್ಥದಲ್ಲಿ ಇವತ್ತಿನ ಜನರಿಗಿಂತ ಆದಾಮ-ಹವ್ವಗೆ ತುಂಬ ಸ್ವಾತಂತ್ರ್ಯ ಇತ್ತು?

17 ಆದರೆ ಬೈಬಲ್‌ ಹೇಳೋ ಪ್ರಕಾರ ನಡಕೊಂಡಿದ್ದಕ್ಕೆ ಕಾಯಿಲೆ ಬಂತು ಅಥವಾ ಜೀವ ಹೋಯಿತು ಅಂತ ಯಾರಾದರೂ ಹೇಳಿದ್ದನ್ನು ನೀವು ಕೇಳಿದ್ದೀರಾ? ಯೆಹೋವನ ಮಾತು ಕೇಳಿದರೆ ನಾವು ಆರೋಗ್ಯವಾಗಿರುತ್ತೇವೆ ಮತ್ತು ನಿಜ ಸ್ವಾತಂತ್ರ್ಯ ಸಿಗುತ್ತದೆ ಎಂದು ಸ್ಪಷ್ಟವಾಗಿ ಗೊತ್ತಾಗುತ್ತದೆ. (ಕೀರ್ತ. 19:7-11) ನಿಮ್ಮ ಸ್ವಾತಂತ್ರ್ಯವನ್ನು ಬುದ್ಧಿವಂತಿಕೆಯಿಂದ ಉಪಯೋಗಿಸಲು ಯಾವಾಗ ಕಲಿಯುತ್ತೀರೋ ಅಂದರೆ ದೇವರು ಕೊಟ್ಟಿರುವ ಪರಿಪೂರ್ಣ ನಿಯಮಗಳನ್ನು, ತತ್ವಗಳನ್ನು ಪಾಲಿಸುತ್ತೀರೋ ಆಗ ದೇವರಿಗೆ ಮತ್ತು ನಿಮ್ಮ ಹೆತ್ತವರಿಗೆ ನಿಮ್ಮ ಮೇಲೆ ಭರವಸೆ ಬರುತ್ತದೆ. ಬಹುಶಃ ಆಗ ನಿಮ್ಮ ಹೆತ್ತವರು ನಿಮಗೆ ಹೆಚ್ಚು ಸ್ವಾತಂತ್ರ್ಯ ಕೊಡಬಹುದು. ಯೆಹೋವನು ಇನ್ನು ಸ್ವಲ್ಪ ಸಮಯದಲ್ಲಿ ತನ್ನ ನಂಬಿಗಸ್ತ ಸೇವಕರಿಗೆ ಪರಿಪೂರ್ಣ ಸ್ವಾತಂತ್ರ್ಯವನ್ನು ಕೊಡುತ್ತಾನೆ. ಬೈಬಲ್‌ ಈ ಸ್ವಾತಂತ್ರ್ಯವನ್ನು “ದೇವರ ಮಕ್ಕಳ ಮಹಿಮಾಭರಿತ ಸ್ವಾತಂತ್ರ್ಯ” ಎಂದು ಕರೆಯುತ್ತದೆ.—ರೋಮ. 8:21.

18 ಆದಾಮ-ಹವ್ವಗೆ ಇಂಥ ಸ್ವಾತಂತ್ರ್ಯವನ್ನು ಕೊಡಲಾಗಿತ್ತು. ಏದೆನ್‌ ತೋಟದಲ್ಲಿ ದೇವರು ಒಂದೇ ಒಂದು ವಿಷಯವನ್ನು ಮಾಡಬೇಡಿ ಅಂತ ಅವರಿಗೆ ಹೇಳಿದ್ದನು. ಅವರಿಬ್ಬರು ಒಂದು ನಿರ್ದಿಷ್ಟ ಮರದ ಹಣ್ಣನ್ನು ತಿನ್ನಬಾರದಿತ್ತು. (ಆದಿ. 2:9, 17) ದೇವರು ಅವರಿಗೆ ಆ ನಿಯಮ ಕೊಟ್ಟು ತುಂಬ ಅನ್ಯಾಯ ಮಾಡಿದನು ಅಥವಾ ತುಂಬ ಕಟ್ಟುನಿಟ್ಟು ಮಾಡಿದನು ಎಂದು ನಿಮಗನಿಸುತ್ತಾ? ಮನುಷ್ಯರು ಎಷ್ಟೊಂದು ನಿಯಮಗಳನ್ನು ಮಾಡಿ ಅವನ್ನು ಪಾಲಿಸಬೇಕೆಂದು ಜನರ ಮೇಲೆ ಒತ್ತಡ ಹಾಕಿದ್ದಾರೆ ಅಂತ ಸ್ವಲ್ಪ ಯೋಚನೆ ಮಾಡಿ. ಆದರೆ ಯೆಹೋವನು ಆದಾಮ-ಹವ್ವಗೆ ಕೊಟ್ಟಿದ್ದು ಒಂದೇ ಒಂದು ನಿಯಮ.

19. ನಾವು ನಿಜ ಸ್ವಾತಂತ್ರ್ಯವನ್ನು ಪಡಕೊಳ್ಳಲು ಯೆಹೋವ ಮತ್ತು ಯೇಸು ಹೇಗೆ ಸಹಾಯ ಮಾಡುತ್ತಾರೆ?

19 ಯೆಹೋವನು ನಮ್ಮನ್ನು ತುಂಬ ವಿವೇಕದಿಂದ ಮಾರ್ಗದರ್ಶಿಸುತ್ತಾನೆ. ನಮಗೆ ಆತನು ತುಂಬ ನಿಯಮಗಳನ್ನು ಕೊಡೋ ಬದಲು ಪ್ರೀತಿಯ ಮೇಲೆ ಆಧರಿಸಿದ ಒಂದೇ ನಿಯಮವನ್ನು ಪಾಲಿಸುವಂತೆ ತುಂಬ ತಾಳ್ಮೆಯಿಂದ ಕಲಿಸುತ್ತಾನೆ. ತಾನು ಕೊಟ್ಟಿರುವ ತತ್ವಗಳ ಪ್ರಕಾರ ಜೀವಿಸಲು ಮತ್ತು ಕೆಟ್ಟದ್ದನ್ನು ದ್ವೇಷಿಸಲು ಹೇಳಿಕೊಡುತ್ತಾನೆ. (ರೋಮ. 12:9) ಆತನ ಮಗನಾದ ಯೇಸು ಜನರು ಯಾಕೆ ಕೆಟ್ಟ ಕೆಲಸ ಮಾಡುತ್ತಾರೆ ಅಂತ ಅರ್ಥಮಾಡಿಕೊಳ್ಳಲು ಪರ್ವತ ಪ್ರಸಂಗದಲ್ಲಿ ಸಹಾಯ ಮಾಡಿದನು. (ಮತ್ತಾ. 5:27, 28) ಹೊಸ ಲೋಕದಲ್ಲಿ ದೇವರ ರಾಜ್ಯದ ರಾಜನಾಗಿ ಯೇಸು ನಾವು ಆತನಂತೆ ಹೇಗೆ ಒಳ್ಳೇದನ್ನು ಪ್ರೀತಿಸಿ ಕೆಟ್ಟದ್ದನ್ನು ದ್ವೇಷಿಸಬೇಕು ಅಂತ ಹೇಳಿಕೊಡಲಿದ್ದಾನೆ. (ಇಬ್ರಿ. 1:9) ನಮ್ಮ ಮನಸ್ಸು ಮತ್ತು ದೇಹ ಪರಿಪೂರ್ಣವಾಗಲು ಸಹ ಯೇಸು ನಮಗೆ ಸಹಾಯ ಮಾಡುತ್ತಾನೆ. ಕೆಟ್ಟ ಕೆಲಸ ಮಾಡಕ್ಕೆ ಮನಸ್ಸು ಬರಲ್ಲ ಮತ್ತು ನಮ್ಮ ಅಪರಿಪೂರ್ಣತೆಯಿಂದಾಗಿ ನಾವು ಅನುಭವಿಸುತ್ತಿರುವ ಕಷ್ಟ ಇರಲ್ಲ ಅಂದರೆ ಹೇಗಿರಬಹುದು ಅಂತ ಸ್ವಲ್ಪ ಯೋಚಿಸಿ. ಕೊನೆಯಲ್ಲಿ ಯೆಹೋವನು ಕೊಡಲಿರುವ ‘ಮಹಿಮಾಭರಿತ ಸ್ವಾತಂತ್ರ್ಯವನ್ನು’ ನಾವು ಆನಂದಿಸುತ್ತೇವೆ.

20. (ಎ) ಯೆಹೋವನು ತನಗಿರುವ ಸ್ವಾತಂತ್ರ್ಯವನ್ನು ಹೇಗೆ ಉಪಯೋಗಿಸುತ್ತಾನೆ? (ಬಿ) ನೀವು ಆತನನ್ನು ಹೇಗೆ ಅನುಕರಿಸಬಹುದು?

20 ಹೊಸ ಲೋಕದಲ್ಲೂ ನಮ್ಮ ಸ್ವಾತಂತ್ರ್ಯಕ್ಕೆ ಮಿತಿ ಇರುತ್ತದೆ. ಯಾವ ಅರ್ಥದಲ್ಲಿ? ಅಲ್ಲಿ ನಾವು ಏನೇ ಮಾಡಿದರೂ ಅದನ್ನು ದೇವರ ಮೇಲೆ ಮತ್ತು ಬೇರೆ ಮನುಷ್ಯರ ಮೇಲಿನ ಪ್ರೀತಿಯಿಂದ ಮಾಡಬೇಕು. ನಾವು ಎಲ್ಲವನ್ನೂ ಪ್ರೀತಿಯಿಂದ ಮಾಡಿದರೆ ಯೆಹೋವನನ್ನು ಅನುಕರಿಸಿದಂತಾಗುತ್ತದೆ. ಯೆಹೋವನಿಗೆ ಸಂಪೂರ್ಣ ಸ್ವಾತಂತ್ರ್ಯವಿದ್ದರೂ ತಾನು ಏನೆಲ್ಲ ಮಾಡುತ್ತಾನೋ ಅದನ್ನು ಪ್ರೀತಿ ಮಾರ್ಗದರ್ಶಿಸುವಂತೆ ಬಿಡುತ್ತಾನೆ. ಅದರಲ್ಲಿ ಆತನು ನಮ್ಮ ಜೊತೆ ನಡಕೊಳ್ಳುವ ವಿಧನೂ ಸೇರಿದೆ. (1 ಯೋಹಾ. 4:7, 8) ಹಾಗಾಗಿ ನಾವು ಯಾವಾಗ ದೇವರನ್ನು ಅನುಕರಿಸುತ್ತೇವೋ ಆಗ ನಮಗೆ ನಿಜವಾದ ಸ್ವಾತಂತ್ರ್ಯ ಸಿಕ್ಕಿದಂತೆ ಇರುತ್ತದೆ.

21. (ಎ) ದಾವೀದನಿಗೆ ಯೆಹೋವನ ಬಗ್ಗೆ ಯಾವ ಮನೋಭಾವ ಇತ್ತು? (ಬಿ) ಮುಂದಿನ ಲೇಖನದಲ್ಲಿ ಏನು ಚರ್ಚಿಸಲಿದ್ದೇವೆ?

21 ಯೆಹೋವನು ನಿಮ್ಮ ಸಂತೋಷಕ್ಕಾಗಿ ಏನೆಲ್ಲ ಕೊಟ್ಟಿದ್ದಾನೆ? ಆತನು ನಿಮಗೆ ಆಧ್ಯಾತ್ಮಿಕ ಆಹಾರ, ಒಳ್ಳೇ ಸ್ನೇಹಿತರು, ಒಳ್ಳೇ ಗುರಿಗಳು, ಭವಿಷ್ಯದಲ್ಲಿ ಸಂಪೂರ್ಣ ಸ್ವಾತಂತ್ರ್ಯ ಸಿಗುತ್ತೆ ಅನ್ನುವ ನಿರೀಕ್ಷೆ ಮತ್ತು ಇನ್ನೂ ಅನೇಕ ಅದ್ಭುತ ಉಡುಗೊರೆಗಳನ್ನು ಕೊಟ್ಟಿದ್ದಾನೆ. (1 ತಿಮೊ. 6:17) ಇದನ್ನೆಲ್ಲ ನೀವು ಹೇಗೆ ನೋಡುತ್ತೀರಾ? ನಿಮಗೂ ದಾವೀದನ ತರ ಅನಿಸಬಹುದು. ಆತನು ತನ್ನ ಪ್ರಾರ್ಥನೆಯಲ್ಲಿ “ನೀನು ನನಗೆ ಜೀವಮಾರ್ಗವನ್ನು ತಿಳಿಯಪಡಿಸುವಿ; ನಿನ್ನ ಸಮ್ಮುಖದಲ್ಲಿ ಪರಿಪೂರ್ಣ ಸಂತೋಷವಿದೆ; ನಿನ್ನ ಬಲಗೈಯಲ್ಲಿ ಶಾಶ್ವತಭಾಗ್ಯವಿದೆ” ಎಂದು ಕೀರ್ತನೆ 16:11​ರಲ್ಲಿ ಹೇಳಿದನು. ಮುಂದಿನ ಲೇಖನದಲ್ಲಿ ಕೀರ್ತನೆ 16​ರಲ್ಲಿರುವ ಬೇರೆ ಅಮೂಲ್ಯ ಸತ್ಯಗಳನ್ನು ಚರ್ಚಿಸಲಿದ್ದೇವೆ. ಇದರಿಂದ ಉತ್ತಮ ಜೀವನ ಹೇಗೆ ಮಾಡಬಹುದು ಅನ್ನುವುದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ.