ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಎಲ್ಲ ವಿಷಯಗಳಲ್ಲಿ ಕೃತಜ್ಞತೆಯನ್ನು ಸಲ್ಲಿಸಿರಿ”

“ಎಲ್ಲ ವಿಷಯಗಳಲ್ಲಿ ಕೃತಜ್ಞತೆಯನ್ನು ಸಲ್ಲಿಸಿರಿ”

ನೀವು ಕೃತಜ್ಞರಾ? ಕೃತಘ್ನರಾ? ಪ್ರತಿಯೊಬ್ಬರೂ ಈ ಪ್ರಶ್ನೆಯನ್ನ ಕೇಳಿಕೊಳ್ಳಬೇಕು. ನಮ್ಮ ಸಮಯದಲ್ಲಿ ಹೆಚ್ಚಿನ ಜನರು “ಕೃತಜ್ಞತೆಯಿಲ್ಲದವರು” ಆಗಿರ್ತಾರೆ ಎಂದು ಬೈಬಲ್‌ ಮುಂಚೆನೇ ತಿಳಿಸಿದೆ. (2 ತಿಮೊ. 3:2) ‘ಬೇರೆಯವರು ನನಗೋಸ್ಕರ ಕೆಲಸ ಮಾಡ್ಬೇಕು, ನನಗೇ ಎಲ್ಲಾ ಕೊಡ್ಬೇಕು’ ಅಂತ ಯೋಚಿಸುವ ಜನರನ್ನ ನೀವು ನೋಡಿರ್ತೀರಿ. ಅವರಿಗೆ ಯಾರಾದರೂ ಸಹಾಯ ಮಾಡಿದ್ರೆ ಕೃತಜ್ಞತೆ ತೋರಿಸಬೇಕು ಅಂತ ಅನಿಸಲ್ಲ. ಇಂಥ ಜನರ ಜೊತೆ ಇರಲು ನಮಗೆ ಯಾರಿಗೂ ಇಷ್ಟ ಆಗಲ್ಲ ಅಲ್ವಾ?

ನೀವು “ಕೃತಜ್ಞತಾಭಾವದವರೆಂದು” ತೋರಿಸಿರಿ ಮತ್ತು “ಎಲ್ಲ ವಿಷಯಗಳಲ್ಲಿ ಕೃತಜ್ಞತೆಯನ್ನು ಸಲ್ಲಿಸಿರಿ” ಅಂತ ಯೆಹೋವನು ತನ್ನ ಆರಾಧಕರನ್ನ ಉತ್ತೇಜಿಸಿದ್ದಾನೆ. (ಕೊಲೊ. 3:15; 1 ಥೆಸ. 5:18) ಕೃತಜ್ಞತಾ ಮನೋಭಾವವನ್ನು ಬೆಳೆಸಿದರೆ ನಮಗೇ ಒಳ್ಳೇದು. ಇದರಿಂದ ಏನೆಲ್ಲಾ ಪ್ರಯೋಜನ ಇದೆ? ಈಗ ನೊಡೋಣ.

ನಮ್ಮ ಬಗ್ಗೆ ನಮಗೇ ಖುಷಿಯಾಗುತ್ತೆ

ಕೃತಜ್ಞತಾ ಮನೋಭಾವ ಬೆಳೆಸಿಕೊಳ್ಳಲು ಮುಖ್ಯ ಕಾರಣ ಏನಂದರೆ ಇದರಿಂದ ನಮ್ಮ ಬಗ್ಗೆ ನಮಗೇ ತುಂಬ ಖುಷಿಯಾಗುತ್ತೆ. ಒಬ್ಬ ವ್ಯಕ್ತಿ ಥ್ಯಾಂಕ್ಸ್‌ ಅಂತ ಹೇಳುವಾಗ ಸ್ವತಃ ಅವನಿಗೂ ಖುಷಿಯಾಗುತ್ತೆ ಮತ್ತು ಯಾರಿಗೆ ಹೇಳಿದನೋ ಅವರಿಗೂ ಖುಷಿಯಾಗುತ್ತೆ. ಕೃತಜ್ಞತಾ ಮನೋಭಾವ ತೋರಿಸೋದರಿಂದ ಹೇಗೆ ಖುಷಿ ಸಿಗುತ್ತೆ? ಯಾರಾದರೂ ನಿಮಗೋಸ್ಕರ ಸಹಾಯ ಮಾಡಕ್ಕೆ ಮುಂದೆ ಬಂದಿದ್ದಾರೆ ಅಂತ ಇಟ್ಕೊಳ್ಳಿ, ನೀವು ಆ ಸಹಾಯ ಪಡೆಯೋಕೆ ಅರ್ಹರು ಅಂತ ಅವರಿಗೆ ಅನಿಸೋದರಿಂದಾನೇ ಅದನ್ನ ಮಾಡ್ತಾರೆ ಮಾತ್ರವಲ್ಲ ಅವರಿಗೆ ನಿಮ್ಮ ಬಗ್ಗೆ ಕಾಳಜಿ ಇದೆ ಅನ್ನೋದನ್ನು ಈ ವಿಷಯ ತೋರಿಸಿಕೊಡುತ್ತೆ. ಇದು ನಿಮಗೆ ಗೊತ್ತಾದಾಗ ನಿಮ್ಮ ಬಗ್ಗೆ ನಿಮಗೆ ಖುಷಿಯಾಗುತ್ತೆ ಅಲ್ವಾ? ರೂತಳ ಉದಾಹರಣೆ ನೋಡಿ. ಬೋವಜ ಆಕೆಗೆ ಉದಾರವಾಗಿ ಸಹಾಯ ಮಾಡಿದ. ಬೋವಜನಿಗೆ ತನ್ನ ಬಗ್ಗೆ ಕಾಳಜಿ ಇದೆ ಅಂತ ಗೊತ್ತಾದಾಗ ರೂತಳಿಗೆ ತುಂಬ ಖುಷಿಯಾಗಿರುತ್ತೆ.—ರೂತ. 2:10-13.

ಬೇರೆ ಎಲ್ಲರಿಗಿಂತಲೂ ಯೆಹೋವನಿಗೆ ಕೃತಜ್ಞರಾಗಿರೋದು ತುಂಬ ಮುಖ್ಯ. ಯಾಕೆಂದರೆ ಆತನು ನಮಗಾಗಿ ಅನೇಕ ಒಳ್ಳೇ ವಿಷಯಗಳನ್ನು ಕೊಟ್ಟಿದ್ದಾನೆ, ಕೊಡುತ್ತಿದ್ದಾನೆ ಮತ್ತು ಮುಂದಕ್ಕೂ ಕೊಡುತ್ತಾನೆ. (ಧರ್ಮೋ. 8:17, 18; ಅ. ಕಾ. 14:17) ಇದರ ಬಗ್ಗೆ ಒಂದು ಕ್ಷಣ ಯೋಚಿಸಿ ಮರೆತು ಬಿಡಬಾರದು. ಬದಲಿಗೆ ಆತನು ನಿಮಗೆ ಮತ್ತು ನಿಮ್ಮ ಕುಟುಂಬದವರಿಗೆ ಏನೆಲ್ಲಾ ಒಳ್ಳೇದನ್ನ ಮಾಡಿದ್ದಾನೆ ಅಂತ ಯೋಚಿಸೋಕೆ ಸಮಯ ಮಾಡ್ಕೋಬೇಕು. ಇದರಿಂದ ಆತನ ಮೇಲಿನ ಕೃತಜ್ಞತಾಭಾವ ಹೆಚ್ಚುತ್ತೆ. ಮಾತ್ರವಲ್ಲ, ಆತನು ನಮ್ಮನ್ನ ಪ್ರೀತಿಸುತ್ತಿದ್ದಾನೆ, ಮಾನ್ಯ ಮಾಡುತ್ತಿದ್ದಾನೆ ಅನ್ನೋದು ಖಚಿತವಾಗುತ್ತೆ.—1 ಯೋಹಾ. 4:9.

ಯೆಹೋವನು ನಮಗೆ ಏನೆಲ್ಲಾ ಕೊಟ್ಟಿದ್ದಾನೆ ಅಂತ ಧ್ಯಾನಿಸಬೇಕು ಮತ್ತು ಅವುಗಳನ್ನು ಕೊಟ್ಟಿದ್ದಕ್ಕಾಗಿ ನಾವು ಆತನಿಗೆ ಧನ್ಯವಾದ ತಿಳಿಸಬೇಕು. (ಕೀರ್ತ. 100:4, 5) ಯಾಕೆಂದರೆ ಬೇರೆಯವರಿಗೆ ಕೃತಜ್ಞತೆ ಹೇಳೋದರಿಂದ ನಮಗೆ ಸಂತೋಷ ಸಿಗುತ್ತೆ.

ಬೇರೆಯವರೊಂದಿಗೆ ನಾವು ಆಪ್ತರಾಗ್ತೇವೆ

ಕೃತಜ್ಞತಾ ಭಾವ ತೋರಿಸಲು ಇನ್ನೊಂದು ಕಾರಣ ಏನೆಂದರೆ ಇದರಿಂದ ಬೇರೆಯವರಿಗೆ ನಾವು ಆಪ್ತರಾಗ್ತೇವೆ. ನಮಗೆಲ್ಲರಿಗೂ ಬೇರೆಯವರು ನಮ್ಮನ್ನ ಮೆಚ್ಚಬೇಕು ಅಂತ ಅನಿಸುತ್ತೆ. ಹಾಗಾಗಿ ಯಾರಾದರೂ ನಮಗೆ ಸಹಾಯ ಮಾಡಿದಾಗ ನಾವು ಅವರಿಗೆ ಕೃತಜ್ಞತೆ ಹೇಳಿದ್ರೆ ಒಬ್ಬರಿಗೊಬ್ಬರು ಆಪ್ತರಾಗ್ತೇವೆ. (ರೋಮ. 16:3, 4) ಕೃತಜ್ಞತಾ ಮನೋಭಾವ ಇರುವ ಜನರಿಗೆ ಹೆಚ್ಚಾಗಿ ಬೇರೆಯವರಿಗೆ ಸಹಾಯ ಮಾಡುವ ಗುಣಾನೂ ಇರುತ್ತೆ. ಯಾರಾದರೂ ಅವರಿಗೆ ಸಹಾಯ ಮಾಡಿದಾಗ, ತಾವೂ ಬೇರೆಯವರಿಗೆ ಸಹಾಯ ಮಾಡಬೇಕು ಅಂತ ಅನಿಸುತ್ತೆ ಮತ್ತು ಹೀಗೆ ಬೇರೆಯವರಿಗೆ ಸಹಾಯ ಮಾಡೋದರಿಂದ ಸಂತೋಷ ಸಿಗುತ್ತೆ. ಅದಕ್ಕೇ ಯೇಸು, “ತೆಗೆದುಕೊಳ್ಳುವುದಕ್ಕಿಂತಲೂ ಕೊಡುವುದರಲ್ಲಿ ಹೆಚ್ಚಿನ ಸಂತೋಷವಿದೆ” ಅಂತ ಹೇಳಿದನು.—ಅ. ಕಾ. 20:35.

ಕ್ಯಾಲಿಫೋರ್ನಿಯಾದ ಯೂನಿವರ್ಸಿಟಿಯ ಪ್ರೊಫೆಸರರಾದ ರಾಬರ್ಟ್‌ ಎಮನ್ಸ್‌ ಹೇಳುವ ಪ್ರಕಾರ, “ಕೃತಜ್ಞರಾಗಿರಬೇಕಾದರೆ ನಾವು ಒಬ್ಬರನ್ನೊಬ್ಬರು ಅವಲಂಬಿಸಿದ್ದೇವೆ ಅನ್ನೋದನ್ನ ಮರೀಬಾರದು. ಕೆಲವೊಮ್ಮೆ ನಾವು ಬೇರೆಯವರಿಗೆ ಏನಾದರೂ ಕೊಡ್ತೇವೆ ಮತ್ತು ಕೆಲವೊಮ್ಮ ಪಡಕೊಳ್ತೇವೆ.” ನಾವು ಬದುಕಬೇಕಂದರೆ, ಸಂತೋಷವಾಗಿರಬೇಕಂದರೆ ಒಂದಲ್ಲಾ ಒಂದು ರೀತಿಯಲ್ಲಿ ಬೇರೆಯವರನ್ನ ಅವಲಂಬಿಸಿರ್ತೀವಿ. ಉದಾಹರಣೆಗೆ, ನಮಗೆ ಬೇಕಾಗಿರೋ ಊಟ ಮತ್ತು ಔಷಧಗಳನ್ನ ಬೇರೆಯವರೇ ಕೊಡುತ್ತಿರೋದು. (1 ಕೊರಿಂ. 12:21) ಕೃತಜ್ಞತೆ ಇರುವ ವ್ಯಕ್ತಿ ತನಗೆ ಬೇರೆಯವರು ಸಹಾಯ ಮಾಡಿದರೆ ಅದನ್ನ ಮಾನ್ಯ ಮಾಡ್ತಾನೆ. ಬೇರೆಯವರು ನಿಮಗೆ ಸಹಾಯ ಮಾಡಿದರೆ ಕೃತಜ್ಞತೆ ಹೇಳೋ ರೂಢಿ ನಿಮಗಿದೆಯಾ?

ಒಳ್ಳೇ ರೀತಿ ಯೋಚಿಸೋಕೆ ಸಹಾಯ ಆಗುತ್ತೆ

ನಮ್ಮಲ್ಲಿ ಕೃತಜ್ಞತಾಭಾವ ಇದ್ದರೆ ನಾವು ಒಳ್ಳೇ ವಿಷಯಗಳ ಕಡೆ ಗಮನ ಕೊಡ್ತೇವೆ. ಕೆಟ್ಟದರ ಕಡೆಗೆ, ಸಮಸ್ಯೆಗಳಿಗೆ ನಾವು ಅಷ್ಟು ಗಮನ ಕೊಡಕ್ಕೆ ಹೋಗಲ್ಲ. ಕೃತಜ್ಞತಾಭಾವ ಒಂದು ರೀತಿ ಫಿಲ್ಟರ್‌ ಇದ್ದ ಹಾಗೆ. ಅದು ಒಳ್ಳೇ ವಿಷಯಗಳನ್ನ ನಮ್ಮ ಮನಸ್ಸಿನೊಳಗೆ ಹೋಗಕ್ಕೆ ಬಿಡುತ್ತೆ, ಆದರೆ ಕೆಟ್ಟದನ್ನ ತಡೆಹಿಡಿಯುತ್ತೆ. ನೀವು ಕೃತಜ್ಞತಾಭಾವ ತೋರಿಸ್ತಾ ಹೋದಂತೆ ಒಳ್ಳೇ ವಿಷಯಗಳ ಕಡೆಗೆ ಹೆಚ್ಚು ಗಮನ ಕೊಡೋಕೆ ಶುರುಮಾಡ್ತೀರಿ. ಒಳ್ಳೇ ವಿಷಯಗಳಿಗೆ ಹೆಚ್ಚು ಗಮನಕೊಟ್ಟಂತೆ ನಿಮ್ಮಲ್ಲಿ ಕೃತಜ್ಞತಾಭಾವ ಇನ್ನೂ ಹೆಚ್ಚಾಗುತ್ತೆ. ನಿಮ್ಮ ಜೀವನದಲ್ಲಿ ಸಿಕ್ಕಿರೋ ಒಳ್ಳೇ ವಿಷಯಗಳಿಗೆ ಗಮನ ಕೊಡ್ತಾ ಹೋದರೆ ಅಪೊಸ್ತಲ ಪೌಲ ಉತ್ತೇಜಿಸಿದಂತೆ, ‘ಯಾವಾಗಲೂ ಕರ್ತನಲ್ಲಿ ಹರ್ಷಿಸ್ತೀರಿ.’—ಫಿಲಿ. 4:4.

ನಿಮ್ಮಲ್ಲಿ ಕೃತಜ್ಞತಾಭಾವ ಇದ್ದರೆ ನಕಾರಾತ್ಮಕವಾಗಿ ಯೋಚಿಸೋಕೆ ಹೋಗಲ್ಲ, ಒಬ್ಬರ ಕಡೆಗೆ ಕೃತಜ್ಞತೆ ತೋರಿಸ್ತಾ ಅದೇ ಸಮಯದಲ್ಲಿ ಅವರ ಮೇಲೆ ಕೋಪಮಾಡಿಕೊಳ್ಳೋಕೆ, ಅಸಮಾಧಾನದಿಂದ ಇರೋಕೆ ಆಗುತ್ತಾ? ಇಲ್ಲಾ. ಅಷ್ಟೇ ಅಲ್ಲ, ಕೃತಜ್ಞತಾಭಾವ ಇದ್ದರೆ ಹಣ-ಆಸ್ತಿನೇ ಅವರಿಗೆ ಸರ್ವಸ್ವ ಆಗಿರಲ್ಲ. ಇರೋದರಲ್ಲೇ ತೃಪ್ತಿಯಿಂದ ಇರ್ತಾರೆ.—ಫಿಲಿ. 4:12.

ನಿಮಗೆ ಸಿಕ್ಕಿರುವ ಆಶೀರ್ವಾದಗಳ ಬಗ್ಗೆ ಯೋಚಿಸಿ

ಈ ಕಡೇ ದಿವಸಗಳಲ್ಲಿ ನಮಗೆ ಬರೋ ಕಷ್ಟಗಳಿಂದ ನಾವು ಕೊರಗಿ ಕುಗ್ಗಿಹೋಗ್ಬೇಕು ಅನ್ನೋದೇ ಸೈತಾನನ ಆಸೆ ಅಂತ ನಮಗೆ ಚೆನ್ನಾಗಿ ಗೊತ್ತು. ನಾವು ಯಾವಾಗಲೂ ನಕಾರಾತ್ಮಕವಾಗಿ ಯೋಚಿಸ್ತಾ ಇದ್ದರೆ, ಯಾವಾಗಲೂ ದೂರುತ್ತಾ ಇದ್ದರೆ ಸೈತಾನನಿಗೆ ಹಾಲು ಕುಡಿದಷ್ಟು ಸಂತೋಷ ಆಗುತ್ತೆ. ಇಂಥ ದೂರೋ ಬುದ್ಧಿ ಇದ್ದರೆ ಯಾರು ತಾನೇ ನಾವು ಸುವಾರ್ತೆ ಸಾರೋದನ್ನ ಕೇಳ್ತಾರೆ ಹೇಳಿ. ಆದರೆ ನಮ್ಮಲ್ಲಿ ಕೃತಜ್ಞತಾಭಾವ ಇದ್ದರೆ ಪವಿತ್ರಾತ್ಮದ ಫಲದ ಅಂಶಗಳನ್ನು ನಾವು ತೋರಿಸ್ತೇವೆ. ಉದಾಹರಣೆಗೆ, ದೇವರು ಕೊಟ್ಟಿರೋ ಆಶೀರ್ವಾದಗಳ ಬಗ್ಗೆ ನಾವು ಯೋಚಿಸಿದಾಗ ನಮಗೆ ಆನಂದ ಸಿಗುತ್ತೆ. ಭವಿಷ್ಯದ ಬಗ್ಗೆ ಆತನು ಕೊಟ್ಟಿರೋ ಮಾತುಗಳ ಬಗ್ಗೆ ನಮ್ಮ ನಂಬಿಕೆನೂ ಹೆಚ್ಚಾಗುತ್ತೆ.—ಗಲಾ. 5:22, 23.

ಯೆಹೋವನ ಜನರಾಗಿರುವ ನೀವು ಈ ಲೇಖನದಲ್ಲಿ ಕೃತಜ್ಞತಾಭಾವದ ಬಗ್ಗೆ ಏನು ಹೇಳಲಾಗಿದೆಯೋ ಅದನ್ನ ಖಂಡಿತ ಒಪ್ತೀರ. ಆದರೂ ಯಾವಾಗಲೂ ಕೃತಜ್ಞತಾಭಾವ ತೋರಿಸೋದು, ಒಳ್ಳೇದರ ಬಗ್ಗೆ ಯೋಚಿಸೋದು ಅಷ್ಟು ಸುಲಭ ಅಲ್ಲ. ಹಾಗಂತ ಪ್ರಯತ್ನ ಹಾಕೋದನ್ನ ಬಿಟ್ಟುಬಿಡಬೇಡಿ. ಕೃತಜ್ಞತಾಭಾವವನ್ನ ಬೆಳೆಸಿಕೊಳ್ಳೋಕೆ, ಒಳ್ಳೇದನ್ನೇ ಯೋಚಿಸೋಕೆ ನಿಮ್ಮಿಂದ ಖಂಡಿತ ಆಗುತ್ತೆ. ನೀವು ಯಾವುದಕ್ಕೆಲ್ಲ ಕೃತಜ್ಞತೆಯನ್ನ ತೋರಿಸಬಹುದು ಅನ್ನೋದನ್ನ ಪ್ರತಿದಿನ ಯೋಚಿಸಿ. ನೀವು ಇದರ ಬಗ್ಗೆ ಹೆಚ್ಚು ಯೋಚಿಸ್ತಾ ಹೋದ ಹಾಗೆ ಕೃತಜ್ಞತೆ ತೋರಿಸೋದು ನಿಮ್ಮ ಸ್ವಭಾವ ಆಗಿಬಿಡುತ್ತೆ. ಆಗ ನೀವು ಕಷ್ಟ ಬಂದರೂ ಖುಷಿಯಾಗೇ ಇರ್ತೀರಿ, ಬೇರೆಯವರ ತರ ಕೊರಗೋಕೆ ಹೋಗಲ್ಲ. ದೇವರು ಮತ್ತು ಬೇರೆಯವರು ಮಾಡಿರೋ ಯಾವ ವಿಷಯಗಳಿಂದ ಪ್ರೋತ್ಸಾಹ ಮತ್ತು ಸಂತೋಷ ಸಿಕ್ಕಿವೆಯೋ ಆ ವಿಷಯಗಳ ಬಗ್ಗೆ ಯೋಚಿಸಿ ನೀವು ಅದರ ಬಗ್ಗೆ ಬರೆದಿಡಲೂಬಹುದು. ಒಂದು ದಿನದಲ್ಲಿ ಕೃತಜ್ಞತೆ ಹೇಳಕ್ಕೆ ಎಷ್ಟೋ ಕಾರಣಗಳಿರುತ್ತೆ, ಅವುಗಳಲ್ಲಿ ಎರಡು ಮೂರನ್ನಾದರೂ ಪ್ರತಿದಿನ ಬರೆದಿಡಿ.

“ನಾವು ಯಾವಾಗಲೂ ಬೇರೆಯವರಿಗೆ ಕೃತಜ್ಞತೆ ಹೇಳೋದಾದರೆ ಅದಕ್ಕೆ ತಕ್ಕಂತೆ ನಮ್ಮ ಮೆದುಳು ಕೆಲಸ ಮಾಡೋ ರೀತಿಯನ್ನೇ ಬದಲಾಯಿಸಿಕೊಳ್ಳುತ್ತೆ. ಇದರಿಂದಾಗಿ ನಮ್ಮ ಜೀವನದ ಬಗ್ಗೆ ನಮಗೆ ಒಳ್ಳೇ ಅನಿಸಿಕೆ ಬರುತ್ತೆ” ಅಂತ ಸಂಶೋಧಕರು ಅಧ್ಯಯನ ಮಾಡಿ ತಿಳುಕೊಂಡಿದ್ದಾರೆ. ಕೃತಜ್ಞತಾಭಾವ ಇರುವವನು ಸಂತೋಷವಾಗಿ ಇರ್ತಾನೆ. ಆದ್ರಿಂದ ನಿಮಗೆ ಸಿಕ್ಕಿರೋ ಆಶೀರ್ವಾದಗಳನ್ನ ನೆನಪಿಸಿಕೊಳ್ಳಿ. ನಿಮ್ಮ ಜೀವನದಲ್ಲಾದ ಒಳ್ಳೇ ವಿಷಯಗಳನ್ನ ನೆನಸಿ ಸಂತೋಷಪಡಿ. ಯಾವಾಗಲೂ ಕೃತಜ್ಞತಾಭಾವ ತೋರಿಸಿ. ನಿಮ್ಮ ಜೀವನದಲ್ಲಾಗುವ ಒಳ್ಳೇವಿಷಯಗಳನ್ನ ಒಂದು ಕ್ಷಣದಲ್ಲೇ ಮರೆತುಬಿಡೋ ಬದಲಿಗೆ “ಯೆಹೋವನಿಗೆ ಕೃತಜ್ಞತಾಸ್ತುತಿಮಾಡಿರಿ.” ಹೌದು. “ಎಲ್ಲ ವಿಷಯಗಳಲ್ಲಿ ಕೃತಜ್ಞತೆಯನ್ನು ಸಲ್ಲಿಸಿರಿ.” ಯಾಕೆಂದರೆ “ಆತನು ಒಳ್ಳೆಯವನು.”—1 ಪೂರ್ವ. 16:34; 1 ಥೆಸ. 5:18.