ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 49

ಕೆಲಸಕ್ಕೂ ವಿಶ್ರಾಂತಿಗೂ “ತಕ್ಕ ಸಮಯವುಂಟು”

ಕೆಲಸಕ್ಕೂ ವಿಶ್ರಾಂತಿಗೂ “ತಕ್ಕ ಸಮಯವುಂಟು”

“ಏಕಾಂತವಾದ ಸ್ಥಳಕ್ಕೆ ಬಂದು ತುಸು ದಣಿವಾರಿಸಿಕೊಳ್ಳಿರಿ.”—ಮಾರ್ಕ 6:31.

ಗೀತೆ 128 ಲೋಕದ ದೃಶ್ಯವು ಮಾರ್ಪಡುತ್ತಾ ಇದೆ

ಕಿರುನೋಟ *

1. ತುಂಬ ಜನರಿಗೆ ಕೆಲಸದ ಬಗ್ಗೆ ಯಾವ ಮನೋಭಾವ ಇದೆ?

ನಿಮ್ಮ ಸುತ್ತಮುತ್ತಲಿನ ಜನರಿಗೆ ಕೆಲಸದ ಬಗ್ಗೆ ಯಾವ ಮನೋಭಾವ ಇದೆ? ಅನೇಕ ದೇಶಗಳಲ್ಲಿ ಜನರು ತುಂಬ ತಾಸು ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಈ ರೀತಿ ತುಂಬ ಕೆಲಸ ಮಾಡುವವರಿಗೆ ವಿಶ್ರಾಂತಿ ತಗೊಳ್ಳೋಕೆ, ದೇವರ ಬಗ್ಗೆ ತಿಳುಕೊಳ್ಳೋಕೆ ಸಮಯ ಸಿಗಲ್ಲ, ಕುಟುಂಬದ ಜೊತೆ ಸಮಯ ಕಳೆಯೋಕೂ ಆಗಲ್ಲ. (ಪ್ರಸಂ. 2:23) ಇನ್ನು ಕೆಲವರಿಗೆ ಕೆಲಸ ಅಂದರೆ ಒಂಚೂರೂ ಇಷ್ಟ ಆಗಲ್ಲ, ಕೆಲಸ ಮಾಡದೇ ಇರೋಕೆ ಏನಾದ್ರೂ ಒಂದು ನೆಪ ಕೊಡ್ತಾ ಇರುತ್ತಾರೆ.—ಜ್ಞಾನೋ. 26:13, 14.

2-3. ಕೆಲಸದ ಬಗ್ಗೆ ಯೆಹೋವ ಮತ್ತು ಯೇಸು ಎಂಥ ಮಾದರಿ ಇಟ್ಟಿದ್ದಾರೆ?

2 ಹೀಗೆ ಈ ಲೋಕದ ಜನ ಒಂದೋ ತುಂಬ ಕೆಲಸ ಮಾಡ್ತಾರೆ, ಇಲ್ಲಾ ಸೋಮಾರಿಗಳಾಗಿರುತ್ತಾರೆ. ಆದರೆ ಯೆಹೋವ ಮತ್ತು ಯೇಸುಗೆ ಕೆಲಸದ ಬಗ್ಗೆ ಯಾವ ಮನೋಭಾವ ಇದೆ ಅಂತ ಈಗ ನೋಡೋಣ. ಯೆಹೋವ ದೇವರಿಗೆ ಕೆಲಸ ಮಾಡೋದಂದ್ರೆ ಇಷ್ಟ. ಇದು ನಮಗೆ ಯೇಸುವಿನ ಮಾತಿನಿಂದ ಗೊತ್ತಾಗುತ್ತೆ. ಆತನು, “ನನ್ನ ತಂದೆಯು ಇಂದಿನ ವರೆಗೂ ಕೆಲಸಮಾಡುತ್ತಾ ಇದ್ದಾನೆ ಮತ್ತು ನಾನೂ ಕೆಲಸಮಾಡುತ್ತಿದ್ದೇನೆ” ಅಂತ ಹೇಳಿದನು. (ಯೋಹಾ. 5:17) ಕೋಟಿ ಕೋಟಿಗಟ್ಟಲೆ ದೇವದೂತರನ್ನು ಮತ್ತು ಈ ವಿಶ್ವವನ್ನು ಸೃಷ್ಟಿ ಮಾಡಬೇಕಂದ್ರೆ ದೇವರು ಎಷ್ಟು ಕೆಲಸ ಮಾಡಿರಬೇಕಲ್ವಾ? ಈ ಭೂಮಿಯಲ್ಲಿರೋ ಅದ್ಭುತ ಸೃಷ್ಟಿಗಳೆಲ್ಲಾ ಆತನು ಕೆಲಸ ಮಾಡಿದ್ದಾನೆ ಅನ್ನೋದಕ್ಕೆ ಸಾಕ್ಷಿ ಆಗಿವೆ. ಅದಕ್ಕೇ ಕೀರ್ತನೆಗಾರನು ಹೀಗೆ ಹೇಳಿದನು: “ಯೆಹೋವನೇ, ನಿನ್ನ ಕೈಕೆಲಸಗಳು ಎಷ್ಟೋ ವಿಧವಾಗಿವೆ. ಅವುಗಳನ್ನೆಲ್ಲಾ ಜ್ಞಾನದಿಂದಲೇ ಮಾಡಿದ್ದೀ; ಭೂಲೋಕವು ನಿನ್ನ ಆಸ್ತಿಯಿಂದ ತುಂಬಿರುತ್ತದೆ.”—ಕೀರ್ತ. 104:24.

3 ಯೇಸು ಸಹ ತನ್ನ ತಂದೆ ಥರನೇ ಇದ್ದನು. ದೇವರು “ಆಕಾಶಮಂಡಲವನ್ನು ಸ್ಥಾಪಿಸುವಾಗ” ಯೇಸು ಸಹಾಯ ಮಾಡಿದನು. ಆತನು ಯೆಹೋವನ ಜೊತೆ ‘ಶಿಲ್ಪಿಯಾಗಿ’ ಕೆಲಸ ಮಾಡಿದನು. (ಜ್ಞಾನೋ. 8:27-31) ಯೇಸು ಭೂಮಿಗೆ ಬಂದಾಗ ಸಹ ತುಂಬ ಚೆನ್ನಾಗಿ ಕೆಲಸ ಮಾಡಿದನು. ದೇವರ ಕೊಟ್ಟ ಕೆಲಸ ಆತನಿಗೆ ಊಟಕ್ಕೆ ಸಮಾನ ಆಗಿತ್ತು. ಅದರಿಂದ ದೇವರೇ ಆತನನ್ನು ಕಳುಹಿಸಿದ್ದು ಅಂತ ಗೊತ್ತಾಗುತ್ತಿತ್ತು.—ಯೋಹಾ. 4:34; 5:36; 14:10.

4. ಯೆಹೋವ ಮತ್ತು ಯೇಸುವಿನಿಂದ ವಿಶ್ರಾಂತಿ ಬಗ್ಗೆ ನಾವೇನು ಕಲಿಯಬಹುದು?

4 ಯೆಹೋವ ಮತ್ತು ಯೇಸು ತುಂಬ ಕೆಲಸ ಮಾಡಿದರಲ್ಲಾ? ಇದರರ್ಥ ನಾವ್ಯಾರೂ ವಿಶ್ರಾಂತಿ ತಗೊಳ್ಳಲೇಬಾರದು ಅಂತನಾ? ಹಾಗೇನಿಲ್ಲ. ಯೆಹೋವನಿಗೆ ಯಾವತ್ತೂ ಕೆಲಸ ಮಾಡಿ ಸುಸ್ತಾಗಲ್ಲ, ಹಾಗಾಗಿ ಆತನು ವಿಶ್ರಾಂತಿ ತಗೋಬೇಕಂತೇನಿಲ್ಲ. ಆದರೂ ಆತನು ಇಡೀ ವಿಶ್ವವನ್ನು ಸೃಷ್ಟಿ ಮಾಡಿದ ನಂತರ ‘ಕೆಲಸವನ್ನು ಮಾಡದೆ ವಿಶ್ರಮಿಸಿಕೊಂಡನು’ ಅಂತ ಬೈಬಲ್‌ ಹೇಳುತ್ತೆ. (ವಿಮೋ. 31:17) ಅಂದರೆ ಯೆಹೋವನು ಆಗ ಸೃಷ್ಟಿ ಕೆಲಸವನ್ನು ನಿಲ್ಲಿಸಿ ತಾನು ಮಾಡಿದ್ದನ್ನು ನೋಡಿ ಖುಷಿ ಪಟ್ಟನು ಅಂತ ಅರ್ಥ. ಯೇಸು ಭೂಮಿಯಲ್ಲಿರುವಾಗ ತುಂಬ ಕೆಲಸ ಮಾಡಿದ್ದರೂ ದಿನದ ಇಪ್ಪತ್ತನಾಲ್ಕು ಗಂಟೆನೂ ಅದನ್ನೇ ಮಾಡುತ್ತಿರಲಿಲ್ಲ. ಆತನು ಸಹ ವಿಶ್ರಾಂತಿ ತಗೊಂಡನು. ಸ್ನೇಹಿತರ ಜೊತೆ ಊಟ ಮಾಡೋಕೆ ಸಮಯ ಮಾಡಿಕೊಂಡನು.—ಮತ್ತಾ. 14:13; ಲೂಕ 7:34.

5. ನಮ್ಮಲ್ಲಿ ಅನೇಕರಿಗೆ ಯಾವ ಸಮಸ್ಯೆ ಇದೆ?

5 ದೇವಜನರು ಕೆಲಸ ಮಾಡೋದರಲ್ಲಿ ಖುಷಿ ಪಡಬೇಕು ಅಂತ ಬೈಬಲ್‌ ಹೇಳುತ್ತೆ. ದೇವರ ಸೇವಕರು ಸೋಮಾರಿ ಆಗಿರದೆ ಮೈಮುರಿದು ಕೆಲಸ ಮಾಡಬೇಕು. (ಜ್ಞಾನೋ. 15:19) ಕುಟುಂಬವನ್ನ ಪೋಷಿಸೋಕೆ ನಾವು ಕೆಲಸ ಮಾಡಲೇಬೇಕು. ಅದೇ ಸಮಯದಲ್ಲಿ, ಯೇಸುವಿನ ಶಿಷ್ಯರಾಗಿರೋ ನಾವು ಸುವಾರ್ತೆ ಸಾರೋ ಕೆಲಸನೂ ಮಾಡಬೇಕು. ಜೊತೆಗೆ, ವಿಶ್ರಾಂತಿನೂ ತಗೋಬೇಕು. ಇದೆಲ್ಲದಕ್ಕೂ ಹೇಗಪ್ಪಾ ಸಮಯ ಮಾಡಿಕೊಳ್ಳೋದು ಅಂತ ನಿಮಗೆ ಅನಿಸಿದೆಯಾ? ಕೆಲಸಕ್ಕೆ ಎಷ್ಟು ಸಮಯ ಕೊಡಬೇಕು, ವಿಶ್ರಾಂತಿಗೆ ಎಷ್ಟು ಸಮಯ ಕೊಡಬೇಕು ಅಂತ ತಿಳುಕೊಳ್ಳೋದು ಹೇಗೆ?

ಯಾವುದಕ್ಕೆ ಎಷ್ಟು ಸಮಯ?

6. ಕೆಲಸ ಮತ್ತು ವಿಶ್ರಾಂತಿ ಬಗ್ಗೆ ಯೇಸುಗೆ ಯಾವ ಮನೋಭಾವ ಇತ್ತು ಅಂತ ಮಾರ್ಕ 6:30-34 ರಿಂದ ಗೊತ್ತಾಗುತ್ತೆ?

6 ಕೆಲಸಕ್ಕೆ ಕೊಡೋ ಸಮಯಕ್ಕೂ ಮಿತಿ ಇದೆ. ಯಾವಾಗಲೂ ಕೆಲಸ ಮಾಡ್ತಾ ಇರೋಕಾಗಲ್ಲ. ದೇವರಿಂದ ಪ್ರೇರಿತನಾಗಿ ರಾಜ ಸೊಲೊಮೋನ ಹೀಗೆ ಬರೆದಿದ್ದಾನೆ: “ಒಂದೊಂದು ಕೆಲಸಕ್ಕೂ ತಕ್ಕ ಸಮಯವುಂಟು.” ನೆಡಲು, ಕಟ್ಟಲು, ಅಳಲು, ನಗಲು, ಕುಣಿದಾಡಲು ಹೀಗೆ ಪ್ರತಿಯೊಂದು ಕೆಲಸ ಮಾಡಲು ಸಹ ತಕ್ಕ ಸಮಯ ಇದೆ ಅಂತ ಆತನು ಹೇಳಿದನು. (ಪ್ರಸಂ. 3:1-8) ಕೆಲಸ ಮತ್ತು ವಿಶ್ರಾಂತಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಹಾಗಾಗಿ, ಇವೆರಡರಲ್ಲಿ ಒಂದು ಇಲ್ಲದಿದ್ರೂ ಜೀವನ ಮಾಡಕ್ಕಾಗಲ್ಲ. ಯೇಸು ಕೆಲಸ ಮತ್ತು ವಿಶ್ರಾಂತಿ ಎರಡಕ್ಕೂ ಸಮಯ ಮಾಡಿಕೊಂಡನು. ಯಾವುದೂ ಅತಿಯಾಗೋಕೆ ಬಿಡಲಿಲ್ಲ. ಒಮ್ಮೆ, ಆತನ ಶಿಷ್ಯರು ಸಾರುತ್ತಿದ್ದಾಗ “ಅವರಿಗೆ ಊಟವನ್ನು ಮಾಡಲು ಸಹ ಸಮಯವಿರಲಿಲ್ಲ.” ಹಾಗಾಗಿ, ಅವರು ಸುವಾರ್ತೆ ಸಾರಿ ವಾಪಸ್‌ ಬಂದ ಮೇಲೆ ಯೇಸು, “ನೀವು ಏಕಾಂತವಾದ ಸ್ಥಳಕ್ಕೆ ಬಂದು ತುಸು ದಣಿವಾರಿಸಿಕೊಳ್ಳಿರಿ” ಅಂತ ಹೇಳಿದನು. (ಮಾರ್ಕ 6:30-34 ಓದಿ.) ಯೇಸು ಮತ್ತು ಆತನ ಶಿಷ್ಯರಿಗೆ ಕೆಲವೊಂದು ಸಂದರ್ಭಗಳಲ್ಲಿ ವಿಶ್ರಾಂತಿ ತಗೊಳ್ಳೋಕೆ ಸಮಯ ಸಿಗಲಿಲ್ಲ ಅನ್ನೋದೇನೋ ನಿಜ. ಆದರೂ ಅವರೆಲ್ಲರಿಗೆ ವಿಶ್ರಾಂತಿಯ ಅಗತ್ಯ ಇದೆ ಅಂತ ಯೇಸು ಅರ್ಥಮಾಡಿಕೊಂಡಿದ್ದನು.

7. ಸಬ್ಬತ್‌ ಏರ್ಪಾಡಿನ ಬಗ್ಗೆ ತಿಳುಕೊಳ್ಳೋದರಿಂದ ನಾವೇನು ಕಲೀಬಹುದು?

7 ನಮಗೆ ವಿಶ್ರಾಂತಿಯ ಅಗತ್ಯ ಇದೆ ಮತ್ತು ಅದಕ್ಕಾಗಿ ಕೆಲವೊಮ್ಮೆ ನಮ್ಮ ದಿನಚರಿಯಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಳ್ಳಬೇಕಾಗುತ್ತೆ. ಯೆಹೋವನು ಹಿಂದಿನ ಕಾಲದಲ್ಲಿದ್ದ ತನ್ನ ಜನರಿಗಾಗಿ ಸಬ್ಬತ್‌ ಏರ್ಪಾಡನ್ನು ಮಾಡಿದ್ದನು. ನಾವು ಈಗ ಸಬ್ಬತ್ತನ್ನು ಆಚರಿಸುವುದಿಲ್ಲವಾದರೂ ಅದರ ಬಗ್ಗೆ ಧರ್ಮಶಾಸ್ತ್ರದಲ್ಲಿರುವ ಮಾಹಿತಿನ ತಿಳುಕೊಳ್ಳೋದರಿಂದ ಪ್ರಯೋಜನ ಪಡಕೊಳ್ಳಬಹುದು. ಇದರಿಂದ ನಾವು ಕೆಲಸ ಮತ್ತು ವಿಶ್ರಾಂತಿ ಎರಡಕ್ಕೂ ಎಷ್ಟು ಸಮಯ ಕೊಡಬೇಕೋ ಅಷ್ಟು ಕೊಡೋಕೆ ಕಲಿಯುತ್ತೇವೆ.

ಸಬ್ಬತ್‌—ವಿಶ್ರಾಂತಿ ಮತ್ತು ಆರಾಧನೆಯ ದಿನ

8. ವಿಮೋಚನಕಾಂಡ 31:12-15 ಕ್ಕನುಸಾರ ಸಬ್ಬತ್ತನ್ನು ಯಾಕೆ ಆಚರಿಸಲಾಗುತ್ತಿತ್ತು?

8 ಯೆಹೋವನಿಗೆ ಕೆಲಸ ಅಂದ್ರೆ ಇಷ್ಟ ಮತ್ತು ಆತನು ಈಗಲೂ ಕೆಲಸ ಮಾಡ್ತಾ ಇದ್ದಾನೆ. (ಯೋಹಾ. 5:17) ಆದರೆ, ಆತನು ಆರು ದಿನ ಸೃಷ್ಟಿ ಮಾಡಿ ಏಳನೆಯ ದಿನದಲ್ಲಿ ಭೂಮಿಯ ಮೇಲೆ ಸೃಷ್ಟಿ ಮಾಡೋದನ್ನ ನಿಲ್ಲಿಸಿದನು ಅಂತ ಆದಿಕಾಂಡ ಪುಸ್ತಕ ಹೇಳುತ್ತೆ. (ಆದಿ. 2:2) ಹೀಗೆ ಯೆಹೋವನು ಏಳನೇ ದಿನದಲ್ಲಿ ವಿಶ್ರಾಂತಿ ಪಡೆದಂತೆಯೇ ಇಸ್ರಾಯೇಲ್ಯರು ಸಬ್ಬತ್‌ ದಿನದಂದು ಅಂದರೆ ವಾರದ ಏಳನೇ ದಿನ ವಿಶ್ರಾಂತಿ ಪಡೆಯಬೇಕು ಎಂದು ಯೆಹೋವನು ಹೇಳಿದನು. ಹಾಗಾಗಿ ಆ ದಿನವು, ಇಸ್ರಾಯೇಲ್ಯರು ಯೆಹೋವನ ಜನರಾಗಿದ್ದರು ಎನ್ನುವುದಕ್ಕೆ ಒಂದು ಗುರುತಾಗಿತ್ತು. ಸಬ್ಬತ್‌ ದಿನ ‘ಯೆಹೋವನಿಗೆ ಪರಿಶುದ್ಧವಾಗಿತ್ತು, ಆ ದಿನ ಇಸ್ರಾಯೇಲ್ಯರು ಸಂಪೂರ್ಣವಾಗಿ ಕೆಲಸವನ್ನು ನಿಲ್ಲಿಸಬೇಕಾಗಿತ್ತು.’ (ವಿಮೋಚನಕಾಂಡ 31:12-15 ಓದಿ.) ಪ್ರತಿಯೊಬ್ಬರು ಅಂದರೆ ಮಕ್ಕಳು, ಆಳುಗಳು, ಸಾಕು ಪ್ರಾಣಿಗಳು ಸಹ ವಿಶ್ರಾಂತಿ ಪಡೆಯಬೇಕಿತ್ತು, ಕೆಲಸ ಮಾಡಲೇಬಾರದಾಗಿತ್ತು. (ವಿಮೋ. 20:10) ಯಾಕೆಂದರೆ, ಇದರಿಂದ ಜನರು ದೇವರ ವಿಷಯಗಳಿಗೆ ಪೂರ್ತಿ ಗಮನ ಕೊಡಲು ಸಾಧ್ಯವಾಗುತ್ತಿತ್ತು.

9. ಕೆಲವರಿಗೆ ಸಬ್ಬತ್‌ ಬಗ್ಗೆ ಯಾವ ತಪ್ಪಾದ ಯೋಚನೆ ಇತ್ತು?

9 ಸಬ್ಬತ್‌ ಏರ್ಪಾಡನ್ನು ದೇವಜನರ ಪ್ರಯೋಜನಕ್ಕಾಗಿ ಮಾಡಲಾಗಿತ್ತು. ಆದರೆ ಯೇಸುವಿನ ಕಾಲದಷ್ಟಕ್ಕೆ ಅಲ್ಲಿದ್ದ ಹೆಚ್ಚಿನ ಧಾರ್ಮಿಕ ಮುಖಂಡರು ಆ ದಿನದಂದು ‘ಕೂತರೂ ತಪ್ಪು, ನಿಂತರೂ ತಪ್ಪು’ ಅನ್ನೋ ರೀತಿ ಕಟ್ಟುನಿಟ್ಟು ಮಾಡುತ್ತಿದ್ದರು. ಒಂಚೂರು ತೆನೆ ಕಿತ್ತು ತಿಂದರೂ, ಹುಷಾರಿಲ್ಲದವರನ್ನು ಗುಣ ಮಾಡಿದ್ರೂ ತಪ್ಪು ಅಂತಿದ್ದರು. (ಮಾರ್ಕ 2:23-27; 3:2-5) ಆದರೆ ಇಷ್ಟೊಂದು ಕಟ್ಟುನಿಟ್ಟಾಗಿರಬೇಕು ಅಂತ ಯೆಹೋವನು ಬಯಸಲಿಲ್ಲ. ಇದನ್ನು ಯೇಸು, ಜನರೊಂದಿಗೆ ಮಾತಾಡುವಾಗ ಸ್ಪಷ್ಟವಾಗಿ ಹೇಳಿದನು.

ಯೇಸುವಿನ ಹೆತ್ತವರು ಸಬ್ಬತ್‌ ದಿನದಂದು ಆಧ್ಯಾತ್ಮಿಕ ವಿಷ್ಯಗಳಿಗೆ ಪೂರ್ತಿ ಗಮನ ಕೊಡುತ್ತಿದ್ರು (ಪ್ಯಾರ 10 ನೋಡಿ) *

10. ಮತ್ತಾಯ 12:9-12 ರ ಪ್ರಕಾರ ಸಬ್ಬತ್‌ ಬಗ್ಗೆ ಯೇಸುಗೆ ಯಾವ ಮನೋಭಾವ ಇತ್ತು?

10 ಯೇಸು ಮತ್ತು ಆತನ ಶಿಷ್ಯರು ಸಹ ಸಬ್ಬತ್ತನ್ನು ಆಚರಿಸುತ್ತಿದ್ದರು. ಯಾಕೆಂದರೆ ಅವರಿನ್ನೂ ಧರ್ಮಶಾಸ್ತ್ರವನ್ನು ಪಾಲಿಸುತ್ತಿದ್ದರು. * ಆದರೆ ಯೇಸು ತನ್ನ ಮಾತಿನಿಂದ, ನಡಕೊಂಡ ರೀತಿಯಿಂದ ಸಬ್ಬತ್‌ ದಿನದಲ್ಲಿ ತುಂಬ ಕಟ್ಟುನಿಟ್ಟಾಗಿರಬೇಕು ಅಂತೇನಿಲ್ಲ, ಆ ದಿನಾನೂ ಕಷ್ಟದಲ್ಲಿರುವವರಿಗೆ ಸಹಾಯ ಮಾಡಬಹುದು ಅಂತ ತೋರಿಸಿದನು. ಅಷ್ಟೇ ಅಲ್ಲ, “ಸಬ್ಬತ್‌ ದಿನದಲ್ಲಿ ಒಳ್ಳೆಯ ವಿಷಯವನ್ನು ಮಾಡುವುದು ಧರ್ಮಸಮ್ಮತವಾಗಿದೆ” ಅಂದರೆ ಧರ್ಮಶಾಸ್ತ್ರದ ವಿರುದ್ಧವಾಗಿಲ್ಲ ಅಂತ ಸ್ಪಷ್ಟವಾಗಿ ಹೇಳಿದನು. (ಮತ್ತಾಯ 12:9-12 ಓದಿ.) ಇದರಿಂದ ಒಂದು ವಿಷಯ ಗೊತ್ತಾಗುತ್ತೆ, ಏನಂದರೆ ದಯೆ ತೋರಿಸಿದರೆ, ಸಹಾಯ ಮಾಡಿದ್ರೆ ಸಬ್ಬತ್‌ ನಿಯಮನ ಮುರಿದಂಗಾಗುತ್ತೆ ಅಂತ ಯೇಸು ನೆನಸಲಿಲ್ಲ. ಸಬ್ಬತ್‌ ಆಚರಿಸೋ ನಿಜವಾದ ಉದ್ದೇಶ ಏನಂತ ಆತನು ತಾನು ನಡಕೊಂಡ ರೀತಿಯಿಂದ ತೋರಿಸಿಕೊಟ್ಟನು. ಆ ದಿನ ಯಾರೂ ಕೆಲಸ ಮಾಡದೇ ಇರುತ್ತಿದ್ದರಿಂದ ದೇವರ ಆರಾಧನೆಗೆ ಪೂರ್ತಿ ಗಮನ ಕೊಡೋಕೆ ಆಗುತ್ತಿತ್ತು. ಯೇಸು ಮನೆಯಲ್ಲೂ ಇದೇ ವಾತಾವರಣ ಇತ್ತು. ಅವರು ಪ್ರತಿ ಸಬ್ಬತ್‌ ದಿನ ದೇವರ ಆರಾಧನೆಗೆ ಪೂರ್ತಿ ಗಮನ ಕೊಡುತ್ತಿದ್ದರು. ಅದಕ್ಕೇ, ಯೇಸು ತಾನು ಬೆಳೆದ ಊರಾದ ನಜರೇತಿಗೆ ಹೋದಾಗ “ತನ್ನ ವಾಡಿಕೆಯ ಪ್ರಕಾರ ಸಬ್ಬತ್‌ ದಿನದಂದು ಸಭಾಮಂದಿರಕ್ಕೆ ಹೋಗಿ ಓದುವುದಕ್ಕಾಗಿ ಎದ್ದುನಿಂತನು” ಅಂತ ಬೈಬಲ್‌ ಹೇಳುತ್ತೆ.—ಲೂಕ 4:15-19.

ಕೆಲ್ಸದ ಬಗ್ಗೆ ನಿಮ್ಗೆ ಯಾವ ಮನೋಭಾವ ಇದೆ?

11. ಕೆಲ್ಸದ ಬಗ್ಗೆ ಯೇಸುಗೆ ಯಾರು ಒಳ್ಳೇ ಮಾದರಿ ಆಗಿದ್ರು?

11 ಯೇಸುವಿನ ಸಾಕುತಂದೆ ಯೋಸೇಫ ಯೇಸುಗೆ ಬಡಗಿ ಕೆಲ್ಸ ಹೇಳ್ಕೊಡೋದ್ರ ಜೊತೆಗೆ ಕೆಲ್ಸದ ಬಗ್ಗೆ ಯೆಹೋವನಿಗೆ ಯಾವ ನೋಟ ಇತ್ತು ಅಂಥನೂ ಹೇಳ್ಕೊಟ್ನು. (ಮತ್ತಾ. 13:55, 56) ಯೋಸೇಫ ತನ್ನ ದೊಡ್ಡ ಕುಟುಂಬನಾ ಸಾಕೋಕೆ ಪ್ರತಿದಿನ ಮೈಮುರಿದು ಕೆಲ್ಸ ಮಾಡೋದನ್ನ ಯೇಸು ನೋಡಿದ್ನು. ಹಾಗಾಗಿ ಯೇಸುಗೆ ಮೈಮುರಿದು ಕೆಲ್ಸ ಮಾಡೋದ್ರ ಬೆಲೆ ಗೊತ್ತಿತ್ತು. ಅದಕ್ಕೆ ಯೇಸು ತನ್ನ ಶಿಷ್ಯರಿಗೆ, “ಕೆಲಸಗಾರನು ತನ್ನ ಕೂಲಿಗೆ ಅರ್ಹನಾಗಿದ್ದಾನೆ” ಅಂತ ಹೇಳಿದ್ನು.—ಲೂಕ 10:7.

12. ಪೌಲ ಕಷ್ಟಪಟ್ಟು ಕೆಲ್ಸ ಮಾಡ್ತಿದ್ನು ಅಂತ ಯಾವ ವಚನಗಳಿಂದ ಗೊತ್ತಾಗುತ್ತೆ?

12 ಅಪೊಸ್ತಲ ಪೌಲನಿಗೂ ಕಷ್ಟಪಟ್ಟು ಕೆಲ್ಸ ಮಾಡೋದ್ರ ಬೆಲೆ ಗೊತ್ತಿತ್ತು. ಆತನ ಮುಖ್ಯ ಕೆಲ್ಸ ಯೇಸುವಿನ ಬಗ್ಗೆ, ಯೇಸು ಕಲ್ಸಿದ ವಿಷ್ಯದ ಬಗ್ಗೆ ಜನ್ರಿಗೆ ತಿಳಿಸೋದಾಗಿತ್ತು. ಆದ್ರೂ ಪೌಲ ತನ್ನ ಖರ್ಚನ್ನ ನೋಡಿಕೊಳ್ಳಲಿಕ್ಕಾಗಿ ದುಡೀತಿದ್ದನು. ತಾನು ಯಾರ ಮೇಲೂ “ಅತಿ ಖರ್ಚಿನ ಭಾರವನ್ನು” ಹಾಕಬಾರದು ಅನ್ನೋ ಉದ್ದೇಶದಿಂದ ಪೌಲ “ಹಗಲೂರಾತ್ರಿ ಕಷ್ಟದಿಂದಲೂ ಪರಿಶ್ರಮದಿಂದಲೂ” ದುಡೀತಾ ಇದ್ದಿದ್ದು ಥೆಸಲೊನೀಕದವ್ರಿಗೆ ಚೆನ್ನಾಗಿ ಗೊತ್ತಿತ್ತು. (2 ಥೆಸ. 3:8; ಅ. ಕಾ. 20:34, 35) ಪೌಲ ಕೆಲ್ಸದ ಬಗ್ಗೆ ಹೇಳುವಾಗ ಬಹುಶಃ ಆತನು ಮಾಡುತ್ತಿದ್ದ ಡೇರೆ ಕೆಲ್ಸದ ಬಗ್ಗೆ ಸೂಚಿಸಿರಬಹುದು. ಅಕ್ವಿಲ-ಪ್ರಿಸ್ಕಿಲ್ಲರು ಡೇರೆ ಕೆಲ್ಸ ಮಾಡ್ತಿದ್ರು. ಹಾಗಾಗಿ ಪೌಲ ಕೊರಿಂಥದಲ್ಲಿದ್ದಾಗ ಅವ್ರ ಮನೇಲೇ ಉಳಿದು ಅವ್ರೊಂದಿಗೆ ಡೇರೆ ಕೆಲ್ಸ ಮಾಡಿದ್ನು. ಪೌಲ “ಹಗಲೂರಾತ್ರಿ” ಕೆಲ್ಸ ಮಾಡ್ತಿದ್ನು ಅನ್ನೋದ್ರ ಅರ್ಥ ದಿನದ 24 ಗಂಟೆನೂ ಕೆಲ್ಸ ಮಾಡ್ತಿದ್ನು ಅಂತ ಅಲ್ಲ. ಉದಾಹರಣೆಗೆ, ಸಬ್ಬತ್‌ ದಿನದಂದು ಅವ್ನು ಕೆಲ್ಸ ಮಾಡ್ತಿರ್ಲಿಲ್ಲ. ಯಾಕೆಂದರೆ ಯೆಹೂದಿಗಳು ಸಬ್ಬತ್‌ ದಿನದಂದು ಕೆಲ್ಸ ಮಾಡದೇ ವಿಶ್ರಾಂತಿ ತಗೋತಿದ್ದದರಿಂದ ಅವ್ರಿಗೆ ಸುವಾರ್ತೆ ಸಾರಲು ಪೌಲನು ಆ ದಿನವನ್ನು ಉಪಯೋಗಿಸುತ್ತಿದ್ದನು.—ಅ. ಕಾ. 13:14-16, 42-44; 16:13; 18:1-4.

13. ಕೆಲ್ಸದ ವಿಷ್ಯದಲ್ಲಿ ಪೌಲನಿಂದ ನಾವೇನು ಕಲಿಯಬಹುದು?

13 ಅಪೊಸ್ತಲ ಪೌಲ ಕೆಲ್ಸದ ವಿಷ್ಯದಲ್ಲಿ ಒಳ್ಳೇ ಮಾದರಿ ಆಗಿದ್ದಾನೆ. ಆತನು ಕೆಲ್ಸನೂ ಮಾಡ್ತಿದ್ದ, ಜೊತೆಗೆ ‘ದೇವರ ಸುವಾರ್ತೆಯನ್ನು ಪ್ರಕಟಿಸುವ ಪವಿತ್ರ ಕೆಲಸದಲ್ಲೂ’ ತಪ್ಪದೆ ಭಾಗವಹಿಸುತ್ತಿದ್ದ. (ರೋಮ. 15:16; 2 ಕೊರಿಂ. 11:23) ಆತನು ಸುವಾರ್ತೆ ಸಾರುವಂತೆ ಬೇರೆಯವ್ರನ್ನೂ ಪ್ರೋತ್ಸಾಹಿಸಿದ್ನು. ಅಕ್ವಿಲ್ಲ-ಪ್ರಿಸ್ಕಿಲ್ಲರು “ಕ್ರಿಸ್ತ ಯೇಸುವಿನಲ್ಲಿ” ಪೌಲನ ಜೊತೆ ಕೆಲಸಗಾರರು ಆಗಿದ್ರು. ಅಂದ್ರೆ, ದೇವರ ಸೇವೆಗೆ ತುಂಬ ಪ್ರಾಮುಖ್ಯತೆ ಕೊಡ್ತಿದ್ರು. (ರೋಮ. 12:11; 16:3) “ಕರ್ತನ ಕೆಲಸವನ್ನು ಯಾವಾಗಲೂ ಹೇರಳವಾಗಿ” ಮಾಡಿ ಅಂತ ಪೌಲ ಕೊರಿಂಥದವ್ರಿಗೆ ಉತ್ತೇಜಿಸಿದನು. (1 ಕೊರಿಂ. 15:58; 2 ಕೊರಿಂ. 9:8) ಅಷ್ಟೇ ಅಲ್ಲ, “ಕೆಲಸಮಾಡಲು ಇಷ್ಟವಿಲ್ಲದವನು ಊಟವನ್ನೂ ಮಾಡದಿರಲಿ” ಎಂದು ಯೆಹೋವನ ಪ್ರೇರಣೆಯಿಂದ ಬರೆದನು.—2 ಥೆಸ. 3:10.

14. ಯೋಹಾನ 14:12 ರಲ್ಲಿರುವ ಯೇಸುವಿನ ಮಾತಿನ ಅರ್ಥವೇನಾಗಿದೆ?

14 ಈ ಕಡೇ ದಿವ್ಸಗಳಲ್ಲಿ ನಾವು ಮಾಡ್ಬೇಕಾಗಿರೋ ತುಂಬ ಪ್ರಾಮುಖ್ಯವಾದ ಕೆಲ್ಸ ಯಾವುದೆಂದ್ರೆ, ಜನ್ರಿಗೆ ಸುವಾರ್ತೆ ಸಾರೋದು ಮತ್ತು ಅವರನ್ನು ಶಿಷ್ಯರನ್ನಾಗಿ ಮಾಡುವುದೇ ಆಗಿದೆ. ಯೇಸು ಸಹ ತನ್ನ ಶಿಷ್ಯರು ತನಗಿಂತ ಹೆಚ್ಚಾಗಿ ಕೆಲ್ಸ ಮಾಡ್ತಾರೆ ಅಂತ ಮುಂಚೆನೇ ತಿಳಿಸಿದ್ನು. (ಯೋಹಾನ 14:12 ಓದಿ.) ಅದರರ್ಥ ನಾವು ಆತನ ತರ ಅದ್ಭುತ ಮಾಡ್ತೀವಿ ಅಂತ ಅಲ್ಲ, ಬದಲಿಗೆ ಆತನಿಗಿಂತ ನಾವು ಹೆಚ್ಚಿನ ಕ್ಷೇತ್ರಗಳಲ್ಲಿ, ಹೆಚ್ಚಿನ ಜನ್ರಿಗೆ ಮತ್ತು ಹೆಚ್ಚಿನ ಸಮಯದವರೆಗೂ ಸುವಾರ್ತೆ ಸಾರ್ತೇವೆ, ಜನ್ರನ್ನ ಶಿಷ್ಯರನ್ನಾಗಿ ಮಾಡ್ತೇವೆ ಅನ್ನೋದೇ ಆಗಿತ್ತು.

15. ನಾವು ಯಾವ ಪ್ರಶ್ನೆಗಳ್ನ ಕೇಳ್ಕೊಳ್ಳಬೇಕು ಮತ್ತು ಯಾಕೆ?

15 ನೀವು ಹೊರ್ಗೆ ಕೆಲ್ಸ ಮಾಡೋದಾದ್ರೆ ಈ ಪ್ರಶ್ನೆಗಳನ್ನ ಕೇಳ್ಕೊಳ್ಳಿ: ‘ಕೆಲ್ಸದ ಸ್ಥಳದಲ್ಲಿ ನಂಗೆ ಒಳ್ಳೇ ಕೆಲ್ಸಗಾರ ಅನ್ನೋ ಹೆಸರಿದ್ಯಾ? ಕೊಟ್ಟ ಕೆಲ್ಸನ ಹೇಳಿದ ಸಮ್ಯಕ್ಕೆ ಮಾಡಿ ಮುಗಿಸ್ತೀನಾ? ಕೆಲ್ಸನ ನನ್ನಿಂದಾದಷ್ಟು ಚೆನ್ನಾಗಿ ಮಾಡ್ತೀನಾ?’ ಈ ಪ್ರಶ್ನೆಗಳಿಗೆ ನಿಮ್‌ ಉತ್ರ ಹೌದಾದ್ರೆ, ನೀವು ಖಂಡಿತ ನಿಮ್ಮ ಬಾಸ್‌ನ ವಿಶ್ವಾಸ ಗಳಿಸಿದ್ದೀರಿ ಅಂತ ಅರ್ಥ. ಅಷ್ಟೇ ಅಲ್ಲ, ನಿಮ್ಜೊತೆ ಕೆಲ್ಸ ಮಾಡುವವರು ನೀವು ಸುವಾರ್ತೆ ಸಾರುವಾಗ ಕೇಳ್ಸಿಕೊಳ್ಳೋಕೆ ಮನ್ಸು ಮಾಡ್ತಾರೆ. ಸಾರೋ ಕೆಲ್ಸ ಮತ್ತು ಕಲಿಸೋ ಕೆಲ್ಸದ ಬಗ್ಗೆ ಈ ಪ್ರಶ್ನೆಗಳನ್ನ ಕೇಳ್ಕೊಳ್ಳಿ: ‘ನನಗೆ ಹುರುಪಿಂದ ಸುವಾರ್ತೆ ಸಾರೋ ವ್ಯಕ್ತಿ ಅನ್ನೋ ಹೆಸರಿದ್ಯಾ? ಸೇವೆಗೆ ಚೆನ್ನಾಗಿ ತಯಾರಿ ಮಾಡ್ಕೊಂಡು ಹೋಗ್ತೀನಾ? ಸತ್ಯಕ್ಕೆ ಆಸಕ್ತಿ ತೋರಿಸಿದ ಜನ್ರತ್ರ ಪುನಃ ಮಾತಾಡೋಕೆ ಆದಷ್ಟು ಬೇಗ ಹೋಗ್ತೀನಾ? ಎಲ್ಲಾ ತರದ ಸೇವೆನೂ ಮಾಡ್ತೀನಾ?’ ಈ ಪ್ರಶ್ನೆಗಳಿಗೆ ನಿಮ್‌ ಉತ್ರ ಹೌದಾದ್ರೆ, ಸೇವೆಯಲ್ಲಿ ನಿಮ್ಗೆ ಖಂಡಿತ ಸಂತೋಷ ಸಿಕ್ಕಿರುತ್ತೆ.

ವಿಶ್ರಾಂತಿ ಬಗ್ಗೆ ನಿಮ್ಗೆ ಯಾವ ಮನೋಭಾವ ಇದೆ?

16. ವಿಶ್ರಾಂತಿ ಬಗ್ಗೆ ಯೇಸು ಮತ್ತು ಆತನ ಶಿಷ್ಯರಿಗಿರುವ ಅನಿಸಿಕೆಗೂ ಈಗಿನ ಜನರಿಗಿರುವ ಅನಿಸಿಕೆಗೂ ಏನ್‌ ವ್ಯತ್ಯಾಸ?

16 ವಿಶ್ರಾಂತಿ ಬಗ್ಗೆ ನಿಮಗೇನು ಅನ್ಸುತ್ತೆ? ತನಗೂ ಮತ್ತು ತನ್ನ ಶಿಷ್ಯರಿಗೂ ವಿಶ್ರಾಂತಿಯ ಅಗತ್ಯ ಇದೆ ಅಂತ ಯೇಸುವಿಗೆ ಗೊತ್ತಿತ್ತು. ಆದ್ರೆ ಆಗಿನ ಕಾಲದಿಂದ ಹಿಡಿದು ಈಗಿನ ವರೆಗೂ ಜನರು ಯೇಸು ಹೇಳಿದ ದೃಷ್ಟಾಂತದಲ್ಲಿನ ಐಶ್ವರ್ಯವಂತನ ತರ ಇದ್ದಾರೆ. ಆ ಐಶ್ವರ್ಯವಂತನು, “ಆರಾಮವಾಗಿರು, ತಿಂದು ಕುಡಿದು ಆನಂದಪಡುತ್ತಿರು” ಅಂತ ತನ್ನಲ್ಲೇ ಅಂದ್ಕೊಂಡನು. (ಲೂಕ 12:19; 2 ತಿಮೊ. 3:4) ಆ ವ್ಯಕ್ತಿಗೆ ಜೀವನದಲ್ಲಿ ವಿಶ್ರಾಂತಿ ತಗೊಳ್ಳೋದು, ಮಜಾಮಾಡೋದು ಮತ್ತು ಹಾಯಾಗಿರೋದೇ ಮುಖ್ಯ ಆಗಿತ್ತು. ಆದ್ರೆ ಯೇಸುಗೆ ಮತ್ತು ಆತನ ಶಿಷ್ಯರಿಗೆ ತಮ್ಮ ಸುಖ-ಸಂತೋಷ ಮುಖ್ಯ ಆಗಿರಲಿಲ್ಲ.

ಕೆಲ್ಸ ಮತ್ತು ವಿಶ್ರಾಂತಿಯ ಬಗ್ಗೆ ನಮ್ಗೆ ಸರಿಯಾದ ಮನೋಭಾವ ಇದ್ರೆ, ದೇವರ ಸೇವೆಗೆ ಪೂರ್ತಿ ಗಮನ ಕೊಡೋಕೆ ಆಗುತ್ತೆ. ಇದರಿಂದ ನಮಗೆ ಚೈತನ್ಯ ಸಿಗುತ್ತೆ (ಪ್ಯಾರ 17 ನೋಡಿ) *

17. ನಾವು ನಮ್ಮ ಬಿಡುವಿನ ಸಮಯವನ್ನ ಹೇಗೆ ಉಪಯೋಗಿಸ್ತೇವೆ?

17 ವಿಶ್ರಾಂತಿ ವಿಷ್ಯದಲ್ಲಿ ನಾವು ಯೇಸು ತರ ಇರಲಿಕ್ಕೆ ಪ್ರಯತ್ನಿಸ್ತೇವೆ. ಹೇಗೆಂದ್ರೆ, ನಾವು ಕೆಲಸ ಮುಗಿಸ್ಕೊಂಡು ಬಂದ್ಮೇಲೆ ಮತ್ತು ವಾರಾಂತ್ಯದಲ್ಲಿ ಬರೀ ವಿಶ್ರಾಂತಿನೇ ತಗೊಳ್ತಿರಲ್ಲ. ಬದಲಿಗೆ ನಾವು ಸುವಾರ್ತೆ ಸಾರುತ್ತೇವೆ ಮತ್ತು ಕೂಟಗಳಿಗೆ ಹಾಜರಾಗ್ತೇವೆ. ಯಾಕೆಂದ್ರೆ, ಜನರನ್ನ ಶಿಷ್ಯರನ್ನಾಗಿ ಮಾಡೋದು ಮತ್ತು ಕೂಟಗಳಿಗೆ ಹಾಜರಾಗೋದು ನಮಗೆ ತುಂಬಾನೇ ಮುಖ್ಯ. ಹಾಗಾಗಿ ದೇವರ ಆರಾಧನೆಗೆ ಸಂಬಂಧಪಟ್ಟ ಎಲ್ಲ ಚಟುವಟಿಕೆಗಳನ್ನ ತಪ್ಪದೇ ಮಾಡಲು ನಮ್ಮಿಂದಾದ ಎಲ್ಲ ಪ್ರಯತ್ನ ಮಾಡ್ತೇವೆ. (ಇಬ್ರಿ. 10:24, 25) ರಜೆಯಲ್ಲಿ ಬೇರೆ ಸ್ಥಳಗಳಿಗೆ ಹೋದಾಗ್ಲೂ ಅಲ್ಲಿನೂ ಕೂಟಗಳಿಗೆ ತಪ್ಪದೇ ಹಾಜರಾಗ್ತೇವೆ ಮತ್ತು ಸಿಗೋ ಜನ್ರಿಗೆಲ್ಲ ಸುವಾರ್ತೆ ಸಾರೋಕೆ ಆದಷ್ಟು ಪ್ರಯತ್ನಿಸ್ತೇವೆ.—2 ತಿಮೊ. 4:2.

18. ಕೆಲಸ ಮತ್ತು ವಿಶ್ರಾಂತಿಯ ವಿಷಯದಲ್ಲಿ ನಾವು ಹೇಗಿರಬೇಕು ಅಂತ ನಮ್ಮ ರಾಜನಾದ ಯೇಸು ಬಯಸ್ತಾನೆ?

18 ನಮ್ಮ ರಾಜನಾದ ಕ್ರಿಸ್ತ ಯೇಸು ನಮ್ಮಿಂದ ಆಗ್ದೇ ಇರೋದನ್ನ ಬಯಸದಿರೋದಕ್ಕೆ, ಕೆಲಸ ಮತ್ತು ವಿಶ್ರಾಂತಿಯ ವಿಷ್ಯದಲ್ಲಿ ನಾವು ಹೇಗೆ ಸಮತೋಲನ ಕಾಪಾಡ್ಕೋಬೇಕಂತ ತೋರಿಸಿಕೊಟ್ಟಿರೋದಕ್ಕೆ ನಾವು ಆತನಿಗೆ ಆಭಾರಿಗಳಾಗಿದ್ದೇವೆ. (ಇಬ್ರಿ. 4:15) ನಮಗೆ ಅಗತ್ಯ ಇರೋದನ್ನ ಪೂರೈಸಿಕೊಳ್ಳಲು ನಾವು ಕಷ್ಟಪಟ್ಟು ಕೆಲಸ ಮಾಡಬೇಕು ಅನ್ನೋದು ಯೇಸುವಿನ ಬಯಕೆ ಆಗಿದೆ. ಅದರ ಜೊತೆಗೆ ನಮಗೆ ಚೈತನ್ಯ ಕೊಡೋ ಶಿಷ್ಯರನ್ನಾಗಿ ಮಾಡೋ ಕೆಲಸದಲ್ಲೂ ನಾವು ಭಾಗವಹಿಸಬೇಕು ಅನ್ನೋದು ಆತನ ಆಸೆ. ನಮ್ಗೆ ವಿಶ್ರಾಂತಿಯ ಅಗತ್ಯ ಇದೆ ಅಂತಾನೂ ಆತನಿಗೆ ಚೆನ್ನಾಗಿ ಗೊತ್ತು. ಮುಂದಿನ ಲೇಖನದಲ್ಲಿ ನಮ್ಮನ್ನು ತುಂಬ ಬಾಧಿಸುತ್ತಿರುವ ಗುಲಾಮಗಿರಿಯಿಂದ ಯೇಸು ನಮ್ಮನ್ನು ಹೇಗೆ ಬಿಡುಗಡೆ ಮಾಡುತ್ತಾನೆ ಎಂದು ನೋಡೋಣ.

ಗೀತೆ 60 ಆತನು ನಿನ್ನನ್ನು ಬಲಪಡಿಸುವನು

^ ಪ್ಯಾರ. 5 ಕೆಲಸ ಮತ್ತು ವಿಶ್ರಾಂತಿಯ ಬಗ್ಗೆ ಸಮತೋಲನ ಕಾಪಾಡಿಕೊಳ್ಳೋದು ಅಂದ್ರೆ ಸರಿಯಾದ ಮನೋಭಾವ ಇಟ್ಟುಕೊಳ್ಳೋದು ಹೇಗೆ ಅಂತ ಬೈಬಲ್‌ ಕಲಿಸುತ್ತೆ. ಈ ಲೇಖನದಲ್ಲಿ, ಇಸ್ರಾಯೇಲ್ಯರು ಪ್ರತಿ ವಾರ ಆಚರಿಸಬೇಕಾಗಿದ್ದ ಸಬ್ಬತ್‌ ಏರ್ಪಾಡಿನ ಉದಾಹರಣೆ ಇದೆ. ಆ ಉದಾಹರಣೆಯಿಂದ ಕೆಲಸ ಮತ್ತು ವಿಶ್ರಾಂತಿಯ ಬಗ್ಗೆ ನಮ್ಮ ಮನೋಭಾವ ಹೇಗಿರಬೇಕೆಂದು ಕಲಿಯಲಿದ್ದೇವೆ.

^ ಪ್ಯಾರ. 10 ಯೇಸುವಿನ ಶಿಷ್ಯರಿಗೆ ಸಬ್ಬತ್‌ ದಿನದ ಬಗ್ಗೆ ಎಷ್ಟು ಗೌರವವಿತ್ತೆಂದ್ರೆ, ಯೇಸುವಿನ ಶವನಾ ಹೂಣಿಡ್ವಾಗ ಮಾಡ್‌ಬೇಕಿದ್ದ ಸಿದ್ಧತೆನ ಸಬ್ಬತ್‌ ನಂತರಾನೇ ಮಾಡಿದ್ರು.—ಲೂಕ 23:55, 56.

^ ಪ್ಯಾರ. 55 ಚಿತ್ರ ವಿವರಣೆ: ಯೋಸೇಫನು ಸಬ್ಬತ್‌ ದಿನದಂದು ತನ್ನ ಕುಟುಂಬವನ್ನು ಸಭಾಮಂದಿರಕ್ಕೆ ಕರ್ಕೊಂಡು ಹೋಗ್ತಿದ್ದಾನೆ.

^ ಪ್ಯಾರ. 57 ಚಿತ್ರ ವಿವರಣೆ: ಒಬ್ಬ ಸಹೋದರನು ತನ್ನ ಕುಟುಂಬವನ್ನು ನೋಡ್ಕೊಳ್ಳುವುದಕ್ಕಾಗಿ ಕೆಲ್ಸ ಮಾಡ್ತಿದ್ದಾನೆ. ಕೆಲ್ಸ ಮುಗಿದ ನಂತರ, ವಾರಾಂತ್ಯದಲ್ಲಿ ಮತ್ತು ಕುಟುಂಬದ ಜೊತೆ ರಜೆಗೆಂದು ಬೇರೆ ಕಡೆಗೆ ಹೋದಾಗ್ಲೂ ದೇವರ ಆರಾಧನೆಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಭಾಗವಹಿಸ್ತಿದ್ದಾನೆ.