ನಿಮಗೆ ನೆನಪಿದೆಯಾ?
2019 ರಲ್ಲಿ ಬಂದ ಕಾವಲಿನಬುರುಜು ಪತ್ರಿಕೆಗಳನ್ನು ಆಧರಿಸಿ ಈ ಪ್ರಶ್ನೆಗಳಿಗೆ ಉತ್ತರ ಕೊಡುತ್ತೀರಾ?
“ನಿನ್ನನ್ನು ಎದುರಿಸಲು ಕಲ್ಪಿಸಿದ ಯಾವ ಆಯುಧವೂ ಜಯಿಸದು” ಎಂದು ದೇವರು ಕೊಟ್ಟ ಮಾತಿನ ಅರ್ಥವೇನು? (ಯೆಶಾ. 54:17)
‘ಭೀಕರರ ಶ್ವಾಸದಂತೆ’ ಇರುವ ಯಾವುದೇ ಶಕ್ತಿ ನಮ್ಮನ್ನು ನಾಶ ಮಾಡಲು ಬಂದರೂ ದೇವರು ಕಾಪಾಡುತ್ತಾನೆ ಎಂಬ ಭರವಸೆಯನ್ನು ನಾವು ಇಡಬಹುದು. (ಯೆಶಾ. 25:4, 5) ನಮ್ಮ ವೈರಿಗಳು ನಮ್ಮ ಮೇಲೆ ಶಾಶ್ವತವಾದ ಹಾನಿಯನ್ನು ತರಕ್ಕಾಗಲ್ಲ.—w19.01, ಪುಟ 6-7.
ಕಾನಾನ್ಯರ ಜೊತೆ ಮತ್ತು ಅವಿಧೇಯ ಇಸ್ರಾಯೇಲ್ಯರ ಜೊತೆ ದೇವರು ನಡಕೊಂಡ ರೀತಿಯಲ್ಲಿ ಆತನ ನ್ಯಾಯ ಹೇಗೆ ಎದ್ದುಕಾಣುತ್ತದೆ?
ಯಾರು ಅಸಹ್ಯವಾದ ಲೈಂಗಿಕ ಚಟುವಟಿಕೆಗಳಲ್ಲಿ ಒಳಗೂಡಿದರೋ ಮತ್ತು ಯಾರು ಸ್ತ್ರೀಯರ ಮೇಲೆ, ಮಕ್ಕಳ ಮೇಲೆ ದೌರ್ಜನ್ಯ ನಡೆಸಿದರೋ ಅಂಥವರನ್ನು ದೇವರು ಶಿಕ್ಷಿಸಿದನು. ಯಾರು ಆತನಿಗೆ ವಿಧೇಯರಾಗಿದ್ದರೋ ಮತ್ತು ಬೇರೆಯವರ ಜೊತೆ ನ್ಯಾಯವಾಗಿ ನಡಕೊಂಡರೋ ಅಂಥವರನ್ನು ಆತನು ಆಶೀರ್ವದಿಸಿದನು.—w19.02, ಪುಟ 22-23.
ಯೆಹೋವನ ಸಾಕ್ಷಿ ಅಲ್ಲದ ಒಬ್ಬ ವ್ಯಕ್ತಿ ಪ್ರಾರ್ಥನೆ ಮಾಡುವಾಗ ನಾವಿದ್ದರೆ ಏನು ಮಾಡಬೇಕು?
ನಾವು ಗೌರವಭಾವದಿಂದ ಮೌನವಾಗಿ ಇರಬೇಕು. ಆದರೆ ಪ್ರಾರ್ಥನೆಯ ಕೊನೆಯಲ್ಲಿ “ಆಮೆನ್” ಅಂತ ಹೇಳಬಾರದು ಅಥವಾ ನಾವು ಯಾರ ಕೈಯನ್ನೂ ಹಿಡುಕೊಳ್ಳಬಾರದು. ನಾವು ಮನಸ್ಸಲ್ಲೇ ನಮ್ಮ ಸ್ವಂತ ಪ್ರಾರ್ಥನೆಯನ್ನು ಮಾಡಬಹುದು.—w19.03, ಪುಟ 31.
ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ಎಷ್ಟು ಗಂಭೀರವಾಗಿದೆ?
ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯವು ಬಲಿಪಶುಗಳಾದವರ ವಿರುದ್ಧ, ಸಭೆಯ ವಿರುದ್ಧ, ಸರ್ಕಾರದ ವಿರುದ್ಧ ಮತ್ತು ದೇವರ ವಿರುದ್ಧ ಮಾಡುವ ಪಾಪವಾಗಿದೆ. ಮಕ್ಕಳ ಮೇಲಾಗುವ ದೌರ್ಜನ್ಯದ ಬಗ್ಗೆ ದೂರು ಕೊಡಬೇಕೆಂಬ ಕಾನೂನು ಇರುವಲ್ಲಿ ಹಿರಿಯರು ಅದನ್ನು ಪಾಲಿಸುತ್ತಾರೆ.—w19.05, ಪುಟ 9-10.
ನಿಮ್ಮ ಮನಸ್ಸನ್ನು ಪ್ರಚೋದಿಸುವ ಶಕ್ತಿಯನ್ನು ಹೇಗೆ ಬದಲಾಯಿಸಬಹುದು ಅಥವಾ ಉತ್ತಮಗೊಳಿಸಬಹುದು?
ಅದಕ್ಕಿರುವ ಪ್ರಾಮುಖ್ಯ ಹೆಜ್ಜೆಗಳು: ಯೆಹೋವನಿಗೆ ಪ್ರಾರ್ಥಿಸಿ. ಸ್ವಪರೀಕ್ಷೆ ಮಾಡಿಕೊಳ್ಳುವ ಉದ್ದೇಶದಿಂದ ಧ್ಯಾನಿಸಿ. ಒಳ್ಳೇ ಸ್ನೇಹಿತರನ್ನು ಆರಿಸಿಕೊಳ್ಳಿ.—w19.06, ಪುಟ 11.
ಹಿಂಸೆ ಎದುರಿಸಲು ನಾವು ಈಗಲೇ ಹೇಗೆ ತಯಾರಾಗಬಹುದು?
ಯೆಹೋವನೊಟ್ಟಿಗಿನ ನಮ್ಮ ಸಂಬಂಧವನ್ನು ಬಲಪಡಿಸಿಕೊಳ್ಳಬೇಕು. ಆತನು ನಮ್ಮನ್ನು ಪ್ರೀತಿಸುತ್ತಾನೆ ಮತ್ತು ಯಾವತ್ತೂ ನಮ್ಮ ಕೈಬಿಡಲ್ಲ ಎಂಬ ನಂಬಿಕೆ ಇಟ್ಟುಕೊಳ್ಳಬೇಕು. ಬೈಬಲನ್ನು ಪ್ರತಿದಿನ ಓದಬೇಕು ಮತ್ತು ಯಾವಾಗಲೂ ಪ್ರಾರ್ಥನೆ ಮಾಡಬೇಕು. ದೇವರು ತನ್ನ ರಾಜ್ಯದ ಬಗ್ಗೆ ಕೊಟ್ಟ ಮಾತೆಲ್ಲಾ ಖಂಡಿತ ನೆರವೇರುತ್ತೆ ಎಂದು ನಂಬಬೇಕು. ಇಷ್ಟವಾದ ವಚನಗಳನ್ನು ಮತ್ತು ಸ್ತುತಿಗೀತೆಗಳನ್ನು ಬಾಯಿಪಾಠ ಮಾಡಬೇಕು.—w19.07, ಪುಟ 2-4.
ನಮ್ಮ ಕುಟುಂಬದವರು ಸತ್ಯ ಕಲಿತು ಸದಾಕಾಲ ಬದುಕಬೇಕೆಂದರೆ ನಾವೇನು ಮಾಡಬೇಕು?
ಅವರನ್ನು ಅರ್ಥಮಾಡಿಕೊಳ್ಳಬೇಕು, ಒಳ್ಳೇ ಮಾದರಿ ಇಡಬೇಕು, ತಾಳ್ಮೆಯಿಂದ ಇರಬೇಕು ಮತ್ತು ಅವರಿಗೆ ನೋವಾಗದಂತೆ ನಡಕೊಳ್ಳಬೇಕು.—w19.08, ಪುಟ 15-17.
ಮತ್ತಾಯ 11:28 ರಲ್ಲಿ ಯೇಸು ಕೊಟ್ಟಿರುವ ಮಾತಿನಂತೆ ನಮಗೆ ಹೇಗೆ ಚೈತನ್ಯ ಸಿಕ್ಕಿದೆ?
ನಮಗೆ ಅತ್ಯುತ್ತಮ ಮೇಲ್ವಿಚಾರಕರಿದ್ದಾರೆ, ಅತ್ಯುತ್ತಮ ಸ್ನೇಹಿತರಿದ್ದಾರೆ ಮತ್ತು ಅತ್ಯುತ್ತಮ ಕೆಲಸ ಇದೆ.—w19.09, ಪುಟ 23.
ದೇವರು ನಮಗೆ ಆತನ ಚಿತ್ತ ಮಾಡುವ ಮನಸ್ಸು ಮತ್ತು ಶಕ್ತಿಯನ್ನು ಹೇಗೆ ಕೊಡುತ್ತಾನೆ? (ಫಿಲಿ. 2:13)
ನಾವು ದೇವರ ವಾಕ್ಯವನ್ನು ಓದಿ ಧ್ಯಾನಿಸಿದಾಗ, ಆತನ ಚಿತ್ತವನ್ನು ಮಾಡಲು ನಮಗೆ ಬೇಕಾಗಿರುವ ಬಯಕೆಯನ್ನು ಮತ್ತು ಶಕ್ತಿಯನ್ನು ಸ್ವತಃ ಆತನೇ ಕೊಟ್ಟು ನಮ್ಮನ್ನು ಬಲಪಡಿಸುತ್ತಾನೆ. ದೇವರ ಪವಿತ್ರಾತ್ಮ ನಮ್ಮ ಸಾಮರ್ಥ್ಯಗಳನ್ನು ಹೆಚ್ಚಿಸುತ್ತದೆ.—w19.10, ಪುಟ 21.
ಒಂದು ಗಂಭೀರ ನಿರ್ಣಯ ಮಾಡುವ ಮುಂಚೆ ನಾವು ಯಾವ ಹೆಜ್ಜೆಗಳನ್ನು ತಗೊಳ್ಳಬೇಕು?
ಅವು ಯಾವುವೆಂದರೆ: ವಿವೇಕಕ್ಕಾಗಿ ಪ್ರಾರ್ಥಿಸಬೇಕು. ಚೆನ್ನಾಗಿ ಸಂಶೋಧನೆ ಮಾಡಬೇಕು. ಉದ್ದೇಶಗಳನ್ನು ಪರೀಕ್ಷಿಸಿಕೊಳ್ಳಬೇಕು. ನಿರ್ದಿಷ್ಟ ಗುರಿಗಳನ್ನು ಇಡಬೇಕು. ಅಸಾಧ್ಯವಾದುದನ್ನು ಬಯಸಬಾರದು.—w19.11, ಪುಟ 27-29.
ಆತ್ಮ ಸಾಯುವುದೇ ಇಲ್ಲ ಎಂಬ ಬೋಧನೆಯು ಸೈತಾನ ಹವ್ವಳಿಗೆ ಹೇಳಿದ ಮಾತುಗಳಿಂದ ಹುಟ್ಟಿಕೊಂಡಿತಾ?
ಇಲ್ಲ. ಸೈತಾನ ಹವ್ವಳಿಗೆ, ಆಕೆ ಸಾಯಲ್ಲ ಅಂತ ಹೇಳಿದನೇ ಹೊರತು ಆತ್ಮ ಸಾಯಲ್ಲ ಅಂತ ಹೇಳಲಿಲ್ಲ. ಹಿಂದಿನ ಕಾಲದಲ್ಲಿದ್ದ ಎಲ್ಲಾ ಸುಳ್ಳು ಧರ್ಮದ ಬೋಧನೆಗಳು ಜಲಪ್ರಳಯದ ಸಮಯದಲ್ಲಿ ನಾಶ ಆಗಿರುತ್ತವೆ. ಆತ್ಮಕ್ಕೆ ಸಾವಿಲ್ಲ ಎಂಬ ಬೋಧನೆಯು ಬಾಬೆಲ್ ಕಟ್ಟಡವನ್ನು ಕಟ್ಟುತ್ತಿದ್ದ ಜನರನ್ನು ದೇವರು ಚದುರಿಸುವುದಕ್ಕಿಂತ ಮುಂಚೆ ಹುಟ್ಟಿಕೊಂಡಿರಬೇಕು.—w19.12, ಪುಟ 15.