ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 51

ಯೆಹೋವನನ್ನು ಚೆನ್ನಾಗಿ ತಿಳುಕೊಂಡಿದ್ದೀರಾ?

ಯೆಹೋವನನ್ನು ಚೆನ್ನಾಗಿ ತಿಳುಕೊಂಡಿದ್ದೀರಾ?

“ನಿನ್ನ ಹೆಸರನ್ನು ತಿಳಿದವರು ನಿನ್ನಲ್ಲಿ ಭರವಸೆ ಇಡುವರು; ಏಕೆಂದರೆ ಯೆಹೋವನೇ, ನಿನ್ನನ್ನು ಹುಡುಕುವವರನ್ನು ನೀನು ಎಂದಿಗೂ ತೊರೆದುಬಿಡುವುದಿಲ್ಲ.”—ಕೀರ್ತ. 9:10, ಪವಿತ್ರ ಗ್ರಂಥ ಭಾಷಾಂತರ.

ಗೀತೆ 64 ಸತ್ಯವನ್ನು ನಿನ್ನದ್ದಾಗಿಸಿಕೊ

ಕಿರುನೋಟ *

1-2. ಆನ್‌ಹೆಲೀಟೊ ಅನುಭವದಿಂದ ನಮಗ್ಯಾವ ಪಾಠ ಇದೆ?

ನಿಮ್ಮ ಅಪ್ಪ-ಅಮ್ಮ ಯೆಹೋವನ ಸಾಕ್ಷಿಗಳಾ? ಹೌದಾದರೆ, ಅವರಿಗೆ ಯೆಹೋವನ ಜೊತೆ ಇರುವ ಆಪ್ತ ಸ್ನೇಹ ನಿಮಗೆ ಬಳುವಳಿಯಾಗಿ ಬರೋದಿಲ್ಲ. ನೆನಪಿಡಿ, ನಮ್ಮ ಹೆತ್ತವರು ಯೆಹೋವನನ್ನ ಆರಾಧಿಸಲಿ ಇಲ್ಲದಿರಲಿ, ನಮ್ಮಲ್ಲಿ ಪ್ರತಿಯೊಬ್ಬರು ನಾವಾಗಿಯೇ ಯೆಹೋವನ ಸ್ನೇಹ ಮಾಡ್ಕೋಬೇಕು. ನಮಗೋಸ್ಕರ ಬೇರೆ ಯಾರೂ ಅದನ್ನ ಮಾಡಕ್ಕಾಗಲ್ಲ.

2 ಆನ್‌ಹೆಲೀಟೊ ಎಂಬ ಸಹೋದರನ ಅನುಭವ ನೋಡಿ. ಅವನ ಕುಟುಂಬದವರು ಯೆಹೋವನ ಸಾಕ್ಷಿಗಳಾಗಿದ್ದರು. ಆದರೆ ಅವನು ಹದಿವಯಸ್ಸಿನಲ್ಲಿದ್ದಾಗ, ಯೆಹೋವನಿಗೆ ಅಷ್ಟು ಆಪ್ತನಾಗಿರಲಿಲ್ಲ. ಅವನ ಅಪ್ಪ-ಅಮ್ಮ ಯೆಹೋವನನ್ನ ಆರಾಧಿಸ್ತಿದ್ದರು ಅಂತ ಅವನೂ ಆರಾಧಿಸುತ್ತಿದ್ದನಂತೆ. ಆದರೆ ನಂತರ, ಆನ್‌ಹೆಲೀಟೊ ದೇವರ ವಾಕ್ಯವನ್ನ ಓದೋಕೆ ಮತ್ತು ಓದಿದ್ದನ್ನು ಧ್ಯಾನಿಸೋಕೆ ಸಮಯ ಮಾಡ್ಕೊಂಡ್ನು ಮತ್ತು ಯೆಹೋವನಿಗೆ ಇನ್ನೂ ಹೆಚ್ಚು ಪ್ರಾರ್ಥಿಸೋಕೆ ಶುರುಮಾಡಿದನು. ಇದರಿಂದ ಆನ್‌ಹೆಲೀಟೊಗೆ ಏನು ಅರ್ಥ ಆಯ್ತು? “ನನ್ನ ಪ್ರೀತಿಯ ತಂದೆಯಾದ ಯೆಹೋವನಿಗೆ ನಾನು ಆಪ್ತನಾಗಬೇಕಂದ್ರೆ ಸ್ವತಃ ನಾನಾಗೇ ಆತನನ್ನ ತಿಳುಕೊಳ್ಳಬೇಕು ಅಂತ ಅರ್ಥಮಾಡ್ಕೊಂಡೆ” ಎಂದು ಅವನು ಹೇಳ್ತಾನೆ. ಆನ್‌ಹೆಲೀಟೊ ಅನುಭವದಿಂದ ನಮಗೆ ಕೆಲವು ಪ್ರಶ್ನೆಗಳು ಬರುತ್ತೆ: ಯೆಹೋವನ ಬಗ್ಗೆ ಕೆಲವು ವಿಷಯಗಳನ್ನ ತಿಳುಕೊಳ್ಳುವುದಕ್ಕೂ ಯೆಹೋವನನ್ನ ಚೆನ್ನಾಗಿ ತಿಳುಕೊಳ್ಳುವುದಕ್ಕೂ ಏನು ವ್ಯತ್ಯಾಸ ಇದೆ? ಯೆಹೋವನನ್ನ ಚೆನ್ನಾಗಿ ತಿಳುಕೊಳ್ಳೋಕೆ ನಾವೇನು ಮಾಡ್ಬೇಕು?

3. ಯೆಹೋವನ ಬಗ್ಗೆ ತಿಳುಕೊಳ್ಳುವುದಕ್ಕೂ ಯೆಹೋವನನ್ನ ಚೆನ್ನಾಗಿ ತಿಳುಕೊಳ್ಳುವುದಕ್ಕೂ ಏನು ವ್ಯತ್ಯಾಸ?

3 ಒಬ್ಬ ವ್ಯಕ್ತಿಗೆ ಯೆಹೋವನ ಹೆಸರು ಗೊತ್ತಿದ್ದರೆ, ಆತನು ಹೇಳಿರುವ, ಮಾಡಿರುವ ಕೆಲವು ವಿಷಯಗಳು ಗೊತ್ತಿದ್ದರೆ ಆ ವ್ಯಕ್ತಿಗೆ ಯೆಹೋವನ ಬಗ್ಗೆ ಗೊತ್ತಿದೆ ಅಂತ ಹೇಳಬಹುದು. ಆದರೆ ಅವನು ಯೆಹೋವನನ್ನ ಚೆನ್ನಾಗಿ ತಿಳುಕೊಂಡಿದ್ದಾನೆ ಅಂತ ಹೇಳಕ್ಕಾಗಲ್ಲ. ಯಾಕೆಂದರೆ ಯೆಹೋವನನ್ನ ಚೆನ್ನಾಗಿ ತಿಳುಕೊಳ್ಳುವುದರಲ್ಲಿ ಅದಕ್ಕಿಂತ ಹೆಚ್ಚಿನ ವಿಷಯಗಳು ಸೇರಿವೆ. ನಾವು ಸಮಯ ಮಾಡ್ಕೊಂಡು ಯೆಹೋವನ ಬಗ್ಗೆ ಮತ್ತು ಆತನ ಅದ್ಭುತ ಗುಣಗಳ ಬಗ್ಗೆ ಕಲೀಬೇಕು. ಆಗ ಮಾತ್ರ, ಯೆಹೋವನು ಹೇಳಿದ ಮತ್ತು ಮಾಡಿದ ವಿಷಯಗಳ ಹಿಂದೆ ಯಾವ ಉದ್ದೇಶ ಇತ್ತು ಅನ್ನೋದು ನಮಗೆ ಅರ್ಥವಾಗುತ್ತೆ. ಇದರಿಂದಾಗಿ ನಮ್ಮ ಯೋಚನೆಗಳು, ನಮ್ಮ ನಿರ್ಣಯಗಳು ಮತ್ತು ನಮ್ಮ ಕ್ರಿಯೆಗಳು ಯೆಹೋವನಿಗೆ ಇಷ್ಟ ಆಗೋ ರೀತಿ ಇವೆಯೋ ಇಲ್ಲವೋ ಅನ್ನೋದನ್ನು ತಿಳುಕೊಳ್ಳುವುದಕ್ಕೆ ಸಹಾಯ ಆಗುತ್ತೆ. ನಾವು ಹೇಗಿದ್ರೆ, ಹೇಗೆ ನಡಕೊಂಡರೆ ಯೆಹೋವನಿಗೆ ಇಷ್ಟವಾಗುತ್ತೆ ಅಂತ ಗೊತ್ತಾದ ತಕ್ಷಣ ಅದರ ಪ್ರಕಾರ ನಡಕೊಳ್ಳಬೇಕು.

4. ಬೈಬಲ್‌ ಉದಾಹರಣೆಗಳನ್ನ ನೋಡೋದ್ರಿಂದ ನಮಗೆ ಯಾವ ಪ್ರಯೋಜನ ಇದೆ?

4 ನಾವು ಯೆಹೋವನನ್ನ ಆರಾಧಿಸಬೇಕು ಅಂತ ಅಂದುಕೊಂಡಾಗ ಕೆಲವು ಜನರು ನಮ್ಮನ್ನ ಆಡ್ಕೊಂಡು ನಗಬಹುದು. ನಾವು ಕೂಟಕ್ಕೆ ಹೊಗಲು ಶುರುಮಾಡಿದಾಗಂತೂ ತುಂಬ ವಿರೋಧಿಸಬಹುದು. ಆಗ ನಾವು ಯೆಹೋವನಲ್ಲಿ ಸಂಪೂರ್ಣ ಭರವಸೆಯಿಟ್ಟು ಒಂದು ಹೆಜ್ಜೆ ಮುಂದಿಟ್ಟರೆ ಆತನು ನಮ್ಮ ಕೈ ಹಿಡಿದು ನಡೆಸ್ತಾನೆ, ಯಾವತ್ತಿಗೂ ಬಿಡಲ್ಲ. ಹೀಗೆ ಮಾಡಿದ್ರೆ ಆತನೊಟ್ಟಿಗೆ ಶಾಶ್ವತ ಸ್ನೇಹ ಬೆಳೆಸಿಕೊಳ್ಳೋಕೆ ಸಾಧ್ಯವಾಗುತ್ತೆ. ಯೆಹೋವನ ಸ್ನೇಹ ಮಾಡ್ಕೊಳ್ಳುವಷ್ಟು ಯೆಹೋವನನ್ನ ತಿಳುಕೊಳ್ಳೋಕೆ ಆಗುತ್ತಾ? ಆಗುತ್ತೆ! ಇದು ಸಾಧ್ಯ ಅಂತ ನಮ್ಮಂತೆ ಅಪರಿಪೂರ್ಣರಾಗಿದ್ದ ಮೋಶೆ ಮತ್ತು ರಾಜ ದಾವೀದನ ಉದಾಹರಣೆಗಳು ತೋರಿಸಿಕೊಡುತ್ತೆ. ಅವರು ಮಾಡಿದ ವಿಷಯಗಳ ಬಗ್ಗೆ ನೋಡುವಾಗ ಈ ಎರಡು ಪ್ರಶ್ನೆಗಳಿಗೆ ನಮಗೆ ಉತ್ತರ ಸಿಗುತ್ತೆ. ಅವರು ಯೆಹೋವನನ್ನ ಹೇಗೆ ತಿಳುಕೊಂಡರು? ಅವರ ಉದಾಹರಣೆಯಿಂದ ನಾವು ಯಾವ ಪಾಠ ಕಲೀಬಹುದು?

ಮೋಶೆ “ಅದೃಶ್ಯನಾಗಿರುವಾತನನ್ನು” ನೋಡಿದನು

5. ಮೋಶೆ ಯಾವ ಆಯ್ಕೆ ಮಾಡಿದನು?

5 ಮೋಶೆಯು ಯೆಹೋವನನ್ನ ಆರಾಧಿಸುವ ಆಯ್ಕೆ ಮಾಡಿದ. ಮೋಶೆಗೆ 40 ವರ್ಷವಾದಾಗ “ಫರೋಹನ ಮಗಳ ಮಗನೆಂದು ಕರೆಸಿಕೊಳ್ಳಲು ನಿರಾಕರಿಸಿ” ದೇವಜನರಾಗಿದ್ದ ಇಸ್ರಾಯೇಲ್ಯರ ಸಹವಾಸ ಮಾಡಲು ನಿರ್ಧರಿಸಿದ. (ಇಬ್ರಿ. 11:24) ಅದಕ್ಕಾಗಿ ಮೋಶೆ ತನಗಿದ್ದ ಸ್ಥಾನಮಾನವನ್ನ ಬಿಟ್ಟುಬಿಟ್ಟ. ಈಜಿಪ್ಟಿನವರು ದೇವರಂತೆ ಆರಾಧಿಸ್ತಿದ್ದ, ಶಕ್ತಿಶಾಲಿ ರಾಜನಾಗಿದ್ದ ಫರೋಹನಿಗೆ ಕೋಪ ಬರುತ್ತೆ ಅಂತ ಗೊತ್ತಿದ್ದರೂ ಈಜಿಪ್ಟಿನಲ್ಲಿ ದಾಸರಾಗಿದ್ದ ಇಸ್ರಾಯೇಲ್ಯರ ಪರವಾಗಿ ನಿಂತ. ಮೋಶೆಗೆ ಎಷ್ಟು ನಂಬಿಕೆ ಇತ್ತಲ್ವಾ! ಮೋಶೆ ಯೆಹೋವನಲ್ಲಿ ಪೂರ್ಣ ಭರವಸೆಯಿಟ್ಟ. ಇಂಥ ಭರವಸೆ ಆತನಿಗೆ ಇದ್ದದರಿಂದಲೇ ಯೆಹೋವನೊಂದಿಗೆ ಶಾಶ್ವತ ಸ್ನೇಹ ಮಾಡಿಕೊಳ್ಳಲು ಸಾಧ್ಯವಾಯ್ತು.—ಜ್ಞಾನೋ. 3:5.

6. ಮೋಶೆ ಉದಾಹರಣೆಯಿಂದ ನಾವೇನು ಕಲೀಬಹುದು?

6 ಇದರಿಂದ ನಮಗೇನು ಪಾಠ? ಮೋಶೆಯಂತೆ ನಾವು ಸಹ ‘ಯೆಹೋವನನ್ನ ಆರಾಧಿಸಬೇಕಾ? ಆತನ ಜನರ ಸಹವಾಸ ಮಾಡಬೇಕಾ?’ ಅಂತ ನಿರ್ಧರಿಸಬೇಕು. ನಾವು ಯೆಹೋವನನ್ನ ಆರಾಧಿಸಬೇಕಂದ್ರೆ ತ್ಯಾಗಗಳನ್ನ ಮಾಡಬೇಕಾಗುತ್ತೆ. ಯೆಹೋವನನ್ನ ತಿಳುಕೊಳ್ಳದಿರುವ ಜನರ ವಿರೋಧವನ್ನ ಎದುರಿಸಬೇಕಾಗುತ್ತೆ. ಆದರೆ ನಾವು ಯೆಹೋವನಲ್ಲಿ ಭರವಸೆ ಇಟ್ಟರೆ, ಆತನ ಬೆಂಬಲ ಖಂಡಿತ ನಮಗಿರುತ್ತೆ.

7-8. ಮೋಶೆ ಯಾವುದರ ಬಗ್ಗೆ ಕಲಿಯುವುದನ್ನು ಮುಂದುವರಿಸಿದನು?

7 ಮೋಶೆ ಯೆಹೋವನ ಗುಣಗಳ ಬಗ್ಗೆ ಕಲಿಯುವುದನ್ನು, ಆತನ ಇಷ್ಟದ ಪ್ರಕಾರ ನಡಕೊಳ್ಳುವುದನ್ನು ಮುಂದುವರಿಸಿದನು. ಉದಾಹರಣೆಗೆ, ಯೆಹೋವನು ಮೋಶೆಗೆ ಇಸ್ರಾಯೇಲ್ಯರನ್ನು ದಾಸತ್ವದಿಂದ ಬಿಡಿಸಿಕೊಂಡು ಬರುವಂತೆ ಹೇಳಿದಾಗ, ಆತನು ತನ್ನಿಂದ ಇದು ಆಗಲ್ಲ ಅಂತ ಯೆಹೋವನಿಗೆ ಪದೇ-ಪದೇ ಹೇಳಿದನು. ಯಾಕಂದ್ರೆ ಆತನಲ್ಲಿ ಆತ್ಮವಿಶ್ವಾಸದ ಕೊರತೆ ಇತ್ತು. ಆಗ ಯೆಹೋವನು ಮೋಶೆಗೆ ಅನುಕಂಪ ತೋರಿಸಿದನು. ಅಂದರೆ ಮೋಶೆಯ ಭಾವನೆಗಳನ್ನ ಅರ್ಥಮಾಡಿಕೊಂಡು ಆತನಿಗೆ ಬೇಕಾದ ಸಹಾಯವನ್ನು ಮಾಡಿದನು. (ವಿಮೋ. 4:10-16) ಇದರಿಂದ ಮೋಶೆಗೆ ಎಷ್ಟು ಧೈರ್ಯ ಬಂತೆಂದರೆ ಫರೋಹನ ಹತ್ರ ಪುನಃ-ಪುನಃ ಹೋಗಿ ನ್ಯಾಯತೀರ್ಪಿನ ಸಂದೇಶವನ್ನು ಒಂಚೂರು ಭಯ ಇಲ್ಲದೆ ಹೇಳಿದನು. ನಂತರ, ಯೆಹೋವನು ತನ್ನ ಶಕ್ತಿಯಿಂದ ಇಸ್ರಾಯೇಲ್ಯರನ್ನು ರಕ್ಷಿಸಿ, ಫರೋಹನನ್ನೂ ಅವನ ಸೈನ್ಯವನ್ನು ಕೆಂಪು ಸಮುದ್ರದಲ್ಲಿ ಮುಳುಗಿಸಿಬಿಟ್ಟಾಗ ಮೋಶೆ ಯೆಹೋವನ ಬಲಾಢ್ಯ ಶಕ್ತಿಯನ್ನು ನೋಡಿದನು.—ವಿಮೋ. 14:26-31; ಕೀರ್ತ. 136:15.

8 ಯೆಹೋವನು ಮೋಶೆ ಮೂಲಕ ಇಸ್ರಾಯೇಲ್ಯರನ್ನು ಈಜಿಪ್ಟಿನಿಂದ ಬಿಡಿಸಿಕೊಂಡು ಬಂದ ಮೇಲೆ, ಅವರು ಯಾವಾಗ ನೋಡಿದ್ರೂ ‘ಅದು ಸರಿಯಿಲ್ಲ ಇದು ಸರಿಯಿಲ್ಲ’ ಅಂತ ದೂರುತ್ತಾ ಇದ್ದರು. ಇಂಥದ್ರಲ್ಲೂ ಯೆಹೋವನು ಆ ನಿಯತ್ತಿಲ್ಲದ ಜನರ ಜೊತೆ ತುಂಬಾ ತಾಳ್ಮೆಯಿಂದ ನಡಕೊಂಡಿದ್ದನ್ನು ಮೋಶೆ ನೋಡಿದನು. (ಕೀರ್ತ. 78:40-43) ಒಂದು ಸಲ ಯೆಹೋವನು ಮೋಶೆ ಮಾತು ಕೇಳಿ ತನ್ನ ನಿರ್ಣಯವನ್ನ ಬದಲಾಯಿಸಿದನು, ಆಗ ಮೋಶೆ ಯೆಹೋವನ ದೀನತೆಯನ್ನು ನೋಡಿದನು.—ವಿಮೋ. 32:9-14.

9. ಇಬ್ರಿಯ 11:27 ರಲ್ಲಿರುವಂತೆ ಮೋಶೆಗೆ ಯೆಹೋವನೊಟ್ಟಿಗೆ ಎಷ್ಟರ ಮಟ್ಟಿಗೆ ಆಪ್ತತೆ ಇತ್ತು?

9 ಮೋಶೆ ಇಸ್ರಾಯೇಲ್ಯರನ್ನ ಬಿಡಿಸಿಕೊಂಡು ಬಂದಮೇಲೆ ಯೆಹೋವನ ಜೊತೆಗಿದ್ದ ಆತನ ಸ್ನೇಹ ಇನ್ನೂ ಹೆಚ್ಚು ಆಪ್ತವಾಯ್ತು. ಸ್ವರ್ಗದಲ್ಲಿರುವ ಯೆಹೋವನನ್ನು ಕಣ್ಣಾರೆ ನೋಡಿದ್ನೇನೋ ಅನ್ನುವಷ್ಟರ ಮಟ್ಟಿಗೆ ಆಪ್ತನಾದನು. (ಇಬ್ರಿಯ 11:27 ಓದಿ.) ಅವರಿಬ್ಬರ ಸ್ನೇಹ ಸಂಬಂಧ ಎಷ್ಟು ಆಪ್ತವಾಗಿತ್ತು ಅನ್ನೋದರ ಬಗ್ಗೆ ಬೈಬಲ್‌ ಹೀಗೆ ಹೇಳುತ್ತೆ: “ಮನುಷ್ಯರೊಳಗೆ ಒಬ್ಬನು ತನ್ನ ಸ್ನೇಹಿತನೊಡನೆ ಹೇಗೆ ಮಾತಾಡುವನೋ ಹಾಗೆಯೇ ಯೆಹೋವನು ಮೋಶೆಯ ಸಂಗಡ ಮುಖಾಮುಖಿಯಾಗಿ ಮಾತಾಡುತ್ತಿದ್ದನು.”—ವಿಮೋ. 33:11.

10. ನಾವು ಯೆಹೋವನನ್ನ ಚೆನ್ನಾಗಿ ತಿಳುಕೊಳ್ಳಬೇಕಂದರೆ ಏನು ಮಾಡಬೇಕು?

10 ಇದರಿಂದ ನಾವು ಯಾವ ಪಾಠ ಕಲಿಯಬಹುದು? ಯೆಹೋವನನ್ನ ನಾವು ಚೆನ್ನಾಗಿ ತಿಳುಕೊಳ್ಳಬೇಕಂದರೆ ಬರೀ ಆತನ ಗುಣಗಳ ಬಗ್ಗೆ ಕಲಿತರೆ ಸಾಕಾಗಲ್ಲ, ಆತನ ಇಷ್ಟದ ಪ್ರಕಾರ ನಡಕೊಳ್ಳಲೂಬೇಕು. “ಎಲ್ಲ ರೀತಿಯ ಜನರು ರಕ್ಷಣೆಯನ್ನು ಹೊಂದಬೇಕು ಮತ್ತು ಸತ್ಯದ ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಳ್ಳಬೇಕು” ಅನ್ನೋದೇ ಯೆಹೋವನ ಇಷ್ಟ. (1 ತಿಮೊ. 2:3, 4) ಹಾಗಾಗಿ ನಾವು ಯೆಹೋವನ ಬಗ್ಗೆ ಜನರಿಗೆ ಕಲಿಸಬೇಕು. ಇದು ಯೆಹೋವನ ಇಷ್ಟದ ಪ್ರಕಾರ ನಡಕೊಳ್ಳುವ ಒಂದು ವಿಧ.

11. ಬೇರೆಯವರಿಗೆ ಯೆಹೋವನ ಬಗ್ಗೆ ಕಲಿಸುವಾಗ, ಹೇಗೆ ನಾವು ಆತನನ್ನು ಇನ್ನೂ ಚೆನ್ನಾಗಿ ತಿಳುಕೊಳ್ಳೋಕೆ ಆಗುತ್ತೆ?

11 ಯೆಹೋವನ ಬಗ್ಗೆ ನಾವು ಬೇರೆಯವರಿಗೆ ಕಲಿಸುವಾಗ ನಾವಾತನನ್ನು ಇನ್ನೂ ಚೆನ್ನಾಗಿ ತಿಳುಕೊಳ್ಳೋಕೆ ಸಾಧ್ಯವಾಗುತ್ತೆ. ಉದಾಹರಣೆಗೆ, ತನ್ನ ಬಗ್ಗೆ ತಿಳುಕೊಳ್ಳೋಕೆ ಆಸೆ ಇರೋ ಜನರ ಹತ್ರ ಯೆಹೋವನು ನಮ್ಮನ್ನ ನಡೆಸುವಾಗ ಆತನಿಗೆ ಜನರ ಮೇಲೆ ಎಷ್ಟು ಅನುಕಂಪ ಇದೆ ಅನ್ನೋದನ್ನ ನಾವು ಕಣ್ಣಾರೆ ನೋಡಬಹುದು. (ಯೋಹಾ. 6:44; ಅ. ಕಾ. 13:48) ನಮ್ಮ ಬೈಬಲ್‌ ವಿದ್ಯಾರ್ಥಿಗಳು ಕೆಟ್ಟ ಅಭ್ಯಾಸಗಳನ್ನು ಬಿಟ್ಟುಬಿಟ್ಟು ಬದಲಾವಣೆಗಳನ್ನು ಮಾಡಿಕೊಳ್ಳುವಾಗ ದೇವರ ವಾಕ್ಯಕ್ಕೆ ಎಷ್ಟು ಶಕ್ತಿ ಇದೆ ಅನ್ನೋದನ್ನ ನಾವು ನೋಡ್ತೇವೆ. (ಕೊಲೊ. 3:9, 10) ನಮ್ಮ ಸೇವಾಕ್ಷೇತ್ರದಲ್ಲಿರುವ ಜನರಿಗೆ ಸಾರಲಿಕ್ಕೆ ನಾವು ಅನೇಕ ಬಾರಿ ಹೋಗ್ತೇವೆ. ಹೀಗೆ ಜನರು ಸತ್ಯ ಕಲಿತು ರಕ್ಷಣೆಯನ್ನು ಪಡಕೊಳ್ಳಲು ಯೆಹೋವನು ಸಾಕಷ್ಟು ಅವಕಾಶಗಳನ್ನು ಕೊಡ್ತಾನೆ. ಇದರಿಂದ ಯೆಹೋವನಿಗೆ ಎಷ್ಟು ತಾಳ್ಮೆ ಇದೆ ಅನ್ನೋದನ್ನ ನಾವು ನೋಡಬಹುದು.—ರೋಮ. 10:13-15.

12. ವಿಮೋಚನಕಾಂಡ 33:13 ರಲ್ಲಿ ತಿಳಿಸುವಂತೆ ಮೋಶೆ ಯಾವುದಕ್ಕಾಗಿ ಬೇಡಿಕೊಂಡನು ಮತ್ತು ಯಾಕೆ?

12 ಮೋಶೆ ಯೆಹೋವನ ಜೊತೆ ತನಗಿದ್ದ ಸ್ನೇಹ ಸಂಬಂಧವನ್ನ ತುಂಬ ಅಮೂಲ್ಯವಾಗಿ ನೋಡಿದ. ದೇವರ ಹೆಸರಲ್ಲಿ ಎಷ್ಟೋ ಅದ್ಭುತಗಳನ್ನ ಮಾಡಿದ ನಂತರಾನೂ ಮೋಶೆ ಯೆಹೋವನಿಗೆ, ‘ನಿನ್ನ ಬಗ್ಗೆ ಇನ್ನೂ ಚೆನ್ನಾಗಿ ತಿಳುಕೊಳ್ಳೋಕೆ ಅವಕಾಶ ಕೊಡಪ್ಪಾ’ ಅಂತ ಬೇಡಿಕೊಂಡ. (ವಿಮೋಚನಕಾಂಡ 33:13 ಓದಿ.) ಈ ರೀತಿ ಬೇಡಿಕೊಂಡಾಗ ಮೋಶೆಗೆ 80ಕ್ಕಿಂತ ಹೆಚ್ಚು ವಯಸ್ಸಾಗಿತ್ತು. ಆದರೂ ಯೆಹೋವನ ಬಗ್ಗೆ ಕಲಿಯೋಕೆ ಇನ್ನೂ ಎಷ್ಟೋ ವಿಷಯಗಳಿವೆ ಅಂತ ಆತನು ಅರ್ಥಮಾಡಿಕೊಂಡಿದ್ದನು.

13. ದೇವರೊಂದಿಗೆ ನಮಗಿರೋ ಸ್ನೇಹ ಸಂಬಂಧವನ್ನ ನಾವು ಅಮೂಲ್ಯವಾಗಿ ನೋಡುತ್ತೇವೆ ಅಂತ ತೋರಿಸೋ ಒಂದು ವಿಧ ಯಾವುದು?

13 ಇದರಿಂದ ನಾವೇನು ಕಲೀಬಹುದು? ನಾವು ಎಷ್ಟೇ ವರ್ಷಗಳಿಂದ ಯೆಹೋವನನ್ನ ಆರಾಧನೆ ಮಾಡುತ್ತಿದ್ದರೂ ಆತನ ಜೊತೆ ನಮಗಿರೋ ಸ್ನೇಹ ಸಂಬಂಧದ ಬೆಲೆ ಕಡಿಮೆ ಆಗಬಾರದು, ಅದನ್ನ ಅಮೂಲ್ಯವಾಗಿ ನೋಡ್ಬೇಕು. ನಾವು ಆ ರೀತಿ ನೋಡ್ತೇವೆ ಅಂತ ತೋರಿಸೋ ಒಂದು ವಿಧ ಪ್ರಾರ್ಥನೆ ಮೂಲಕ ಆತನ ಜೊತೆ ಮಾತಾಡೋದೇ ಆಗಿದೆ.

14. ಯೆಹೋವನ ಬಗ್ಗೆ ಇನ್ನೂ ಹೆಚ್ಚು ತಿಳುಕೊಳ್ಳಲು ಪ್ರಾರ್ಥನೆ ಹೇಗೆ ಸಹಾಯ ಮಾಡುತ್ತೆ?

14 ನಾವು ಒಬ್ಬರನ್ನ ಆಪ್ತ ಸ್ನೇಹಿತರನ್ನಾಗಿ ಮಾಡ್ಕೋಬೇಕಂದರೆ ನಾವು ಯಾವಾಗಲೂ ಅವರ ಹತ್ರ ಮಾತಾಡ್ತಿರಬೇಕು. ಅದೇರೀತಿ, ದೇವರನ್ನ ನಮ್ಮ ಆಪ್ತಸ್ನೇಹಿತನಾಗಿ ಮಾಡ್ಕೋಬೇಕಂದರೆ ನಾವು ಯಾವಾಗಲೂ ಆತನಿಗೆ ಪ್ರಾರ್ಥನೆ ಮಾಡ್ಬೇಕು. ನಮ್ಮ ಯೋಚನೆ, ಭಾವನೆ ಯಾವುದನ್ನೂ ಮುಚ್ಚಿಡದೆ ಹೇಳ್ಕೋಬೇಕು. (ಎಫೆ. 6:18) ಟರ್ಕಿಯಲ್ಲಿರುವ ಕ್ರಿಸ್ಟಾ ಹೀಗೆ ಹೇಳ್ತಾಳೆ: “ನಾನು ಪ್ರಾರ್ಥನೆ ಮಾಡುವಾಗೆಲ್ಲ ಮತ್ತು ನಂತ್ರ ಯೆಹೋವನು ಸಹಾಯ ಮಾಡೋದನ್ನು ನೋಡುವಾಗೆಲ್ಲಾ ಆತನ ಮೇಲೆ ನನಗಿರೋ ಪ್ರೀತಿ ಮತ್ತು ನಂಬಿಕೆ ಹೆಚ್ಚಾಗುತ್ತೆ. ಯೆಹೋವನು ನನ್ನ ಪ್ರಾರ್ಥನೆಗಳಿಗೆ ಹೇಗೆಲ್ಲಾ ಉತ್ತರ ಕೊಟ್ಟಿದ್ದಾನೆ ಅಂತ ತಿಳುಕೊಂಡಾಗ ಯೆಹೋವನನ್ನು ತಂದೆ ತರ, ಸ್ನೇಹಿತನ ತರ ನೋಡೋಕೆ ಸಾಧ್ಯ ಆಗಿದೆ.”

ಯೆಹೋವನ ಹೃದಯಕ್ಕೆ ಮೆಚ್ಚಿಕೆಯಾದವನು

15. ಯೆಹೋವನು ರಾಜ ದಾವೀದನ ಬಗ್ಗೆ ಏನು ಹೇಳಿದನು?

15 ದಾವೀದ ಹುಟ್ಟಿದ್ದು ಯೆಹೋವನನ್ನು ಆರಾಧಿಸ್ತಿದ್ದ ಕುಟುಂಬದಲ್ಲಿ. ಅವನ ನೆರೆಹೊರೆಯವರೂ ಯೆಹೋವನನ್ನೇ ಆರಾಧಿಸ್ತಿದ್ದರು. ಹಾಗಂತ ದಾವೀದ, ‘ನನ್ನ ಕುಟುಂಬದವರು ಯೆಹೋವನನ್ನ ಆರಾಧಿಸ್ತಿದ್ದಾರೆ, ಅದಕ್ಕೆ ನಾನೂ ಆರಾಧಿಸ್ತೀನಿ’ ಅಂತ ಅಂದುಕೊಳ್ಳಲಿಲ್ಲ. ಸ್ವತಃ ಅವನೇ ಹೆಜ್ಜೆ ತಗೊಂಡು ಯೆಹೋವನ ಜೊತೆ ಆಪ್ತ ಸ್ನೇಹ ಬೆಳೆಸಿಕೊಂಡ. ಯೆಹೋವನು ಕೂಡ ದಾವೀದನನ್ನು ತುಂಬ ಪ್ರೀತಿಸಿದನು. ಆದ್ದರಿಂದಲೇ ಯೆಹೋವನು ದಾವೀದನನ್ನ “ಹೃದಯಕ್ಕೆ ಮೆಚ್ಚಿಕೆಯಾದವನು” ಅಂತ ಹೇಳಿದನು. (ಅ. ಕಾ. 13:22) ದಾವೀದ ಯೆಹೋವನ ಜೊತೆ ಇಷ್ಟು ಆಪ್ತ ಸ್ನೇಹ ಬೆಳೆಸಿಕೊಂಡಿದ್ದು ಹೇಗೆ?

16. ದಾವೀದ ಸೃಷ್ಟಿಯನ್ನು ನೋಡಿ ಯೆಹೋವನ ಬಗ್ಗೆ ಏನು ಕಲಿತುಕೊಂಡನು?

16 ದಾವೀದ ಸೃಷ್ಟಿಯನ್ನು ನೋಡಿ ಯೆಹೋವನ ಬಗ್ಗೆ ಕಲಿತುಕೊಂಡ. ದಾವೀದ ಚಿಕ್ಕ ವಯಸ್ಸಿನಿಂದಲೂ ಕುರಿ ಕಾಯ್ತಿದ್ದ. ಹಾಗಾಗಿ ಹೆಚ್ಚಿನ ಸಮಯ ಗುಡ್ಡಗಾಡು ಪ್ರದೇಶದಲ್ಲೇ ಕಳೀತಿದ್ದ. ಅಲ್ಲಿದ್ದ ಸೃಷ್ಟಿನೆಲ್ಲಾ ನೋಡಿ ಅವನು ಯೆಹೋವನ ಬಗ್ಗೆ ಧ್ಯಾನಿಸಿರಬೇಕು. ಉದಾಹರಣೆಗೆ, ರಾತ್ರಿಯ ಸಮಯದಲ್ಲಿ ದಾವೀದನು ಆಕಾಶದ ಕಡೆ ನೋಡಿದಾಗ ಅವನ ಕಣ್ಣಿಗೆ ಸಾವಿರಾರು ನಕ್ಷತ್ರಗಳು ಕಾಣಿಸಿರುತ್ತವೆ. ಆದರೆ ಅವನು ಬರೀ ನಕ್ಷತ್ರಗಳನ್ನು ನೋಡಲಿಲ್ಲ. ಅದನ್ನ ಸೃಷ್ಟಿ ಮಾಡಿದ ಸೃಷ್ಟಿಕರ್ತನ ಗುಣಗಳನ್ನೂ ನೋಡಿರ್ತಾನೆ. ಅದಕ್ಕೆ ಅವನು ಹೀಗೆ ಬರೆದನು: “ಆಕಾಶವು ದೇವರ ಪ್ರಭಾವವನ್ನು ಪ್ರಚುರಪಡಿಸುತ್ತದೆ; ಗಗನವು ಆತನ ಕೈಕೆಲಸವನ್ನು ತಿಳಿಸುತ್ತದೆ.” (ಕೀರ್ತ. 19:1, 2) ಮನುಷ್ಯರನ್ನು ಹೇಗೆ ರಚಿಸಲಾಗಿದೆ ಅನ್ನೋದನ್ನ ಯೋಚಿಸುವಾಗ ಯೆಹೋವನಲ್ಲಿ ಎಷ್ಟು ವಿವೇಕ ಇದೆ ಅನ್ನೋದನ್ನ ದಾವೀದ ಅರ್ಥಮಾಡಿಕೊಂಡ. (ಕೀರ್ತ. 139:14) ದಾವೀದನು ಯೆಹೋವನ ಸೃಷ್ಟಿಕಾರ್ಯಗಳ ಬಗ್ಗೆ ತಿಳುಕೊಳ್ಳುತ್ತಾ ಹೋದ ಹಾಗೆ ‘ಯೆಹೋವನ ಮುಂದೆ ತಾನೇನು ಅಲ್ಲ’ ಅಂತ ಅವನಿಗನಿಸಿತು.—ಕೀರ್ತ. 139:6.

17. ಸೃಷ್ಟಿಕಾರ್ಯಗಳ ಬಗ್ಗೆ ಯೋಚಿಸುವುದರಿಂದ ನಾವೇನು ಕಲೀಬಹುದು?

17 ಇದರಿಂದ ನಮಗೇನು ಪಾಠ? ನಮ್ಮ ಸುತ್ತಲಿರುವ ಯೆಹೋವನ ಸೃಷ್ಟಿಕಾರ್ಯಗಳನ್ನು ಗಮನಕೊಟ್ಟು ನೋಡಲಿಕ್ಕೆ ನಾವು ಸಮಯ ಮಾಡಿಕೊಳ್ಳಬೇಕು. ಪ್ರತಿದಿನ ನಮ್ಮ ಕಣ್ಣಿಗೆ ಬೀಳೋ ಮರಗಿಡಗಳು, ಮನುಷ್ಯರು, ಪ್ರಾಣಿಗಳು ಇವೆಲ್ಲದರಿಂದ ಯೆಹೋವನ ಬಗ್ಗೆ ನಾವೇನು ಕಲೀಬಹುದು ಅಂತ ಯೋಚಿಸಬೇಕು. ಹೀಗೆ ಮಾಡಿದರೆ ದಿನದಿನಕ್ಕೂ ಯೆಹೋವನ ಬಗ್ಗೆ ಹೆಚ್ಚೆಚ್ಚು ಕಲೀತಾ ಹೋಗ್ತೇವೆ. (ರೋಮ. 1:20) ಅಷ್ಟೇ ಅಲ್ಲ, ನಮ್ಮ ಪ್ರೀತಿಯ ತಂದೆಯಾದ ಯೆಹೋವನ ಮೇಲಿರೋ ಪ್ರೀತಿನೂ ಹೆಚ್ಚಾಗ್ತಾ ಹೋಗುತ್ತೆ.

18. ಕೀರ್ತನೆ 18 ರಲ್ಲಿರುವಂತೆ ದಾವೀದನು ಏನನ್ನು ಅರ್ಥಮಾಡಿಕೊಂಡನು?

18 ಯೆಹೋವನು ಸಹಾಯ ಮಾಡ್ತಿದ್ದಾನೆ ಅನ್ನೋದನ್ನ ದಾವೀದ ಅರ್ಥ ಮಾಡಿಕೊಂಡ. ಉದಾಹರಣೆಗೆ, ಸಿಂಹ ಮತ್ತು ಕರಡಿಗಳಿಂದ ತನ್ನ ಕುರಿಗಳನ್ನ ಕಾಪಾಡಲಿಕ್ಕಾಗಿ ದಾವೀದ ಆ ಕ್ರೂರ ಪ್ರಾಣಿಗಳನ್ನ ಸಾಯಿಸಿಬಿಟ್ಟ. ಅವುಗಳನ್ನ ಸಾಯಿಸಲಿಕ್ಕೆ ಸಹಾಯ ಮಾಡಿದ್ದು ಯೆಹೋವನೇ ಅನ್ನೋದನ್ನು ಅವನು ಅರ್ಥಮಾಡಿಕೊಂಡ. ದೈತ್ಯ ಗೊಲ್ಯಾತನನ್ನ ಸಾಯಿಸುವುದಕ್ಕೂ ಯೆಹೋವನೇ ಸಹಾಯ ಮಾಡಿದ್ದು ಅಂತಾನೂ ದಾವೀದ ಅರ್ಥಮಾಡಿಕೊಂಡನು. (1 ಸಮು. 17:37) ರಾಜ ಸೌಲನಿಂದ ತಪ್ಪಿಸಿಕೊಂಡು ಓಡಿಹೋಗುವಾಗಲೂ ಅವನ ಕೈಗೆ ಸಿಗದಂತೆ ತನ್ನನ್ನು ಕಾಪಾಡಿದ್ದು ಯೆಹೋವನೇ ಅಂತ ದಾವೀದನು ಗ್ರಹಿಸಿದನು. (ಕೀರ್ತನೆ 18 ಮತ್ತು ಅದರ ಮೇಲ್ಬರಹ) ಒಂದುವೇಳೆ, ದಾವೀದ ಅಹಂಕಾರಿ ಆಗಿರುತ್ತಿದ್ದರೆ ಎಲ್ಲ ವಿಷಯಗಳೂ ತನ್ನಿಂದಾನೇ ಆಗಿದ್ದು ಅಂತ ಯೋಚಿಸಿರುತ್ತಿದ್ದ. ಆದರೆ ದಾವೀದನು ದೀನನಾಗಿದ್ದ ಕಾರಣ ಇದರ ಹಿಂದೆ ಯೆಹೋವನ ಸಹಾಯ ಇತ್ತು ಅನ್ನೋದನ್ನ ಗುರುತಿಸಿದ.—ಕೀರ್ತ. 138:6.

19. ದಾವೀದನ ಉದಾಹರಣೆಯಿಂದ ನಾವೇನು ಕಲಿಯಬಹುದು?

19 ಇದರಿಂದ ನಾವೇನು ಕಲೀಬಹುದು? ನಾವು ಸಹಾಯಕ್ಕಾಗಿ ಯೆಹೋವನನ್ನ ಕೇಳಿದರಷ್ಟೇ ಸಾಕಾಗಲ್ಲ, ಆತನು ಮಾಡೋ ಸಹಾಯವನ್ನ ಗುರುತಿಸಲಿಕ್ಕೆ ನಾವು ಪ್ರಯತ್ನ ಹಾಕಬೇಕು. ನಮ್ಮಲ್ಲಿ ದೀನತೆ ಇದ್ರೆ ಎಲ್ಲಾನೂ ನಾವೇ ಮಾಡಕ್ಕಾಗುತ್ತೆ ಅಂತ ಅಂದುಕೊಳ್ಳಲ್ಲ. ಬದಲಿಗೆ ನಮ್ಮ ಕೈಲಿ ಆಗದಿರೋದನ್ನ ಮಾಡೋದಕ್ಕೆ ಯೆಹೋವನು ಸಹಾಯ ಮಾಡ್ತಿದ್ದಾನೆ ಅಂತ ಅರ್ಥಮಾಡಿಕೊಳ್ಳುತ್ತೇವೆ. ಯೆಹೋವನು ಸಹಾಯ ಮಾಡಿದ್ದನ್ನು ನಾವು ಅರ್ಥಮಾಡಿಕೊಂಡಾಗೆಲ್ಲಾ ಆತನ ಜೊತೆಗಿನ ನಮ್ಮ ಸ್ನೇಹ ಇನ್ನೂ ಆಪ್ತವಾಗುತ್ತಾ ಹೋಗುತ್ತೆ. ಅನೇಕ ವರ್ಷಗಳಿಂದ ಯೆಹೋವನ ಸೇವೆ ಮಾಡುತ್ತಿರುವ ಫಿಜಿ ದೇಶದ ಐಸಾಕ್‌ ಎಂಬ ಸಹೋದರ ಇದನ್ನು ನಿಜ ಅಂತ ಒಪ್ಪಿಕೊಳ್ತಾನೆ. ಅವನು ಹೇಳೋದು: “ನಾನು ಬೈಬಲ್‌ ಕಲಿಯೋಕೆ ಶುರುಮಾಡಿದಾಗಿಂದ ಇಲ್ಲಿವರೆಗೂ ಯೆಹೋವನು ನನಗೆ ಹೇಗೆ ಸಹಾಯ ಮಾಡಿದ್ದಾನೆ ಅನ್ನೋದನ್ನ ನೋಡಿದ್ದೀನಿ. ಇದರಿಂದಾಗಿ ಯೆಹೋವನು ನನಗೆ ತುಂಬಾನೇ ಆಪ್ತನಾಗಿದ್ದಾನೆ.”

20. ದಾವೀದನಿಗೆ ಯೆಹೋವನೊಟ್ಟಿಗಿದ್ದ ಆಪ್ತ ಸ್ನೇಹದಿಂದ ನಾವೇನು ಕಲಿಯಬಹುದು?

20 ದಾವೀದನು ಯೆಹೋವನ ಗುಣಗಳನ್ನು ತೋರಿಸಿದನು. ಯೆಹೋವನು ನಮ್ಮನ್ನು ತನ್ನ ಸ್ವರೂಪದಲ್ಲಿ ಸೃಷ್ಟಿಮಾಡಿರುವುದರಿಂದ ಆತನಲ್ಲಿರುವ ಗುಣಗಳನ್ನ ತೋರಿಸಲು ನಮ್ಮಿಂದಾಗುತ್ತೆ. (ಆದಿ. 1:26) ನಾವು ಯೆಹೋವನ ಗುಣಗಳ ಬಗ್ಗೆ ಎಷ್ಟು ಕಲಿತೀವೋ ಆತನನ್ನ ಅನುಕರಿಸಲಿಕ್ಕೂ ಅಷ್ಟೇ ಸುಲಭವಾಗುತ್ತದೆ. ದಾವೀದನೂ ತನ್ನ ಸ್ವರ್ಗೀಯ ತಂದೆಯನ್ನ ಚೆನ್ನಾಗಿ ತಿಳುಕೊಂಡಿದ್ದರಿಂದಲೇ ಅವನು ಬೇರೆಯವರ ಜೊತೆ ನಡಕೊಳ್ಳೋ ರೀತಿಯಲ್ಲಿ ಯೆಹೋವನ ಗುಣಗಳು ಎದ್ದುಕಾಣುತ್ತಿತ್ತು. ಇದಕ್ಕೊಂದು ಉದಾಹರಣೆ ನೋಡಿ. ದಾವೀದನು ಬತ್ಷೆಬೆ ಜೊತೆ ವ್ಯಭಿಚಾರ ಮಾಡಿ, ಅವಳ ಗಂಡನನ್ನ ಕೊಲ್ಲಿಸಿದರೂ ಯೆಹೋವನು ಅವನಿಗೆ ಕರುಣೆ ತೋರಿಸಿದನು. (2 ಸಮು. 11:1-4, 15) ಯಾಕೆಂದರೆ, ದಾವೀದನು ಯೆಹೋವನಂತೆ ಬೇರೆಯವರಿಗೆ ದಯೆ ತೋರಿಸಿದ್ದನು. ದಾವೀದನಿಗೆ ಯೆಹೋವನೊಟ್ಟಿಗೆ ಆಪ್ತ ಸಂಬಂಧ ಇದ್ದಿದರಿಂದ ಇಸ್ರಾಯೇಲ್ಯರಿಗೆ ಅವನು ಅಚ್ಚುಮೆಚ್ಚಿನ ರಾಜನಾಗಿದ್ದನು. ಅಷ್ಟೇ ಅಲ್ಲ, ಉಳಿದ ರಾಜರೂ ದಾವೀದನ ತರಾನೇ ಇರಬೇಕಂತ ಯೆಹೋವನು ಬಯಸಿದನು.—1 ಅರ. 15:11; 2 ಅರ. 14:1-3.

21. ಎಫೆಸ 4:24 ಮತ್ತು 5:1 ರ ಪ್ರಕಾರ ನಾವು ‘ದೇವರನ್ನು ಅನುಕರಿಸಿದರೆ’ ಏನಾಗುತ್ತದೆ?

21 ಇದರಿಂದ ನಾವೇನು ಕಲೀಬಹುದು? ನಾವು ‘ದೇವರನ್ನು ಅನುಕರಿಸಬೇಕು.’ ಹೀಗೆ ಅನುಕರಿಸೋದರಿಂದ ನಮಗೆ ತುಂಬ ಪ್ರಯೋಜನಗಳು ಸಿಗ್ತವೆ. ಅಷ್ಟೇ ಅಲ್ಲ, ಆತನನ್ನು ಇನ್ನೂ ಚೆನ್ನಾಗಿ ತಿಳುಕೊಳ್ತೇವೆ. ನಾವು ದೇವರ ಗುಣಗಳನ್ನು ತೋರಿಸುವಾಗ ಆತನ ಮಕ್ಕಳೆಂದು ರುಜುಪಡಿಸ್ತೇವೆ.—ಎಫೆಸ 4:24; 5:1 ಓದಿ.

ಯೆಹೋವನನ್ನು ಚೆನ್ನಾಗಿ ತಿಳುಕೊಳ್ಳಲು ಪ್ರಯತ್ನಿಸಿ

22-23. ನಾವು ಯೆಹೋವನ ಬಗ್ಗೆ ಕಲಿತದನ್ನ ಅನ್ವಯಿಸಿದರೆ ಏನಾಗುತ್ತದೆ?

22 ಈಗಾಗಲೇ ನೋಡಿದಂತೆ, ಯೆಹೋವನು ಸೃಷ್ಟಿಯ ಮೂಲಕ ಮತ್ತು ತನ್ನ ವಾಕ್ಯವಾದ ಬೈಬಲ್‌ ಮೂಲಕ ತನ್ನ ಬಗ್ಗೆ ನಮಗೆ ತಿಳಿಸಿಕೊಟ್ಟಿದ್ದಾನೆ. ಬೈಬಲ್‌ನಲ್ಲಿ ಮೋಶೆ, ದಾವೀದರಂಥ ಅನೇಕ ನಂಬಿಗಸ್ತ ಸೇವಕರ ಉದಾಹರಣೆಗಳು ತುಂಬಿದೆ. ಅವರಿಂದಲೂ ನಾವು ಕಲೀಬಹುದು. ಹೀಗೆ ಯೆಹೋವನು ತನ್ನ ಬಗ್ಗೆ ನಾವು ತಿಳುಕೊಳ್ಳುವುದಕ್ಕೆ ಏನೆಲ್ಲಾ ಬೇಕೋ ಅದನ್ನ ಮಾಡಿದ್ದಾನೆ. ಅದನ್ನು ಎಷ್ಟು ಉಪಯೋಗಿಸಿಕೊಳ್ತೀವಿ ಅನ್ನೋದು ನಮ್ಮ ಕೈಯಲ್ಲಿದೆ.

23 ನಾವು ಯೆಹೋವನ ಬಗ್ಗೆ ಕಲಿಯೋದಂತೂ ಯಾವತ್ತಿಗೂ ಕೊನೆಯಾಗಲ್ಲ. (ಪ್ರಸಂ. 3:11) ಆದರೆ ನಾವು ಆತನ ಬಗ್ಗೆ ಎಷ್ಟು ಕಲಿತಿದ್ದೇವೆ ಅನ್ನೋದು ಮುಖ್ಯ ಅಲ್ಲ. ಕಲಿತ ಮೇಲೆ ಏನು ಮಾಡ್ತಿದ್ದೇವೆ ಅನ್ನೋದು ಮುಖ್ಯ. ನಾವು ಕಲಿತದನ್ನ ಅನ್ವಯಿಸಿಕೊಂಡರೆ, ನಮ್ಮ ಪ್ರೀತಿಯ ತಂದೆಯನ್ನ ಅನುಕರಿಸಿದರೆ ಆತನು ನಮಗೆ ಇನ್ನೂ ಹೆಚ್ಚು ಆಪ್ತನಾಗುತ್ತಾ ಹೋಗ್ತಾನೆ. (ಯಾಕೋ. 4:8) ಯಾರು ತನ್ನನ್ನು ಚೆನ್ನಾಗಿ ತಿಳುಕೊಳ್ಳೋಕೆ ಪ್ರಯತ್ನಿಸ್ತಾರೋ ಅವರ ಕೈಯನ್ನ ಬಿಡಲ್ಲ ಅಂತ ಸ್ವತಃ ಆತನೇ ಮಾತು ಕೊಟ್ಟಿದ್ದಾನೆ.

ಗೀತೆ 95 “ಯೆಹೋವನು ಒಳ್ಳೆಯವನೆಂದು ಸವಿದು ನೋಡಿ”

^ ಪ್ಯಾರ. 5 ತುಂಬಾ ಜನರು ದೇವರಿದ್ದಾನೆ ಅಂತ ನಂಬ್ತಾರೆ, ಆದರೆ ಅವರು ದೇವರನ್ನ ಸರಿಯಾಗಿ ತಿಳುಕೊಂಡಿಲ್ಲ. ಹಾಗಾದರೆ ಯೆಹೋವ ದೇವರನ್ನ ತಿಳುಕೊಳ್ಳೋದು ಅಂದರೇನು, ಆತನ ಆಪ್ತಸ್ನೇಹಿತರಾಗೋ ಬಗ್ಗೆ ಮೋಶೆ ಮತ್ತು ರಾಜ ದಾವೀದನಿಂದ ನಾವೇನು ಕಲೀಬಹುದು? ಈ ಪ್ರಶ್ನೆಗಳಿಗೆ ಈ ಲೇಖನದಲ್ಲಿ ಉತ್ತರ ನೋಡಲಿದ್ದೇವೆ.