ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 52

ಯೆಹೋವನನ್ನು ಪ್ರೀತಿಸಲು ನಿಮ್ಮ ಮಕ್ಕಳಿಗೆ ಕಲಿಸಿ

ಯೆಹೋವನನ್ನು ಪ್ರೀತಿಸಲು ನಿಮ್ಮ ಮಕ್ಕಳಿಗೆ ಕಲಿಸಿ

“ಪುತ್ರಸಂತಾನವು ಯೆಹೋವನಿಂದ ಬಂದ ಸ್ವಾಸ್ತ್ಯವು.”—ಕೀರ್ತನೆ 127:3.

ಗೀತೆ 88 ಮಕ್ಕಳು ದೇವರು ಕೊಡುವ ಹೊಣೆಗಾರಿಕೆ

ಕಿರುನೋಟ *

1. ಯೆಹೋವನು ಹೆತ್ತವರಿಗೆ ಯಾವ ಜವಾಬ್ದಾರಿಯನ್ನು ಕೊಟ್ಟಿದ್ದಾನೆ?

ಯೆಹೋವನು ಆದಾಮ ಹವ್ವರನ್ನ ಸೃಷ್ಟಿಮಾಡುವಾಗಲೇ ಅವರಲ್ಲಿ ಮಕ್ಕಳನ್ನ ಪಡೆದುಕೊಳ್ಳಬೇಕು ಅನ್ನುವ ಆಸೆಯನ್ನ ಇಟ್ಟಿದ್ದನು. ಅದಕ್ಕೆ ಬೈಬಲ್‌, “ಪುತ್ರಸಂತಾನವು ಯೆಹೋವನಿಂದ ಬಂದ ಸ್ವಾಸ್ತ್ಯವು” ಅಂತ ಹೇಳುತ್ತದೆ. (ಕೀರ್ತ. 127:3) ಇದಕ್ಕೊಂದು ಉದಾಹರಣೆ ನೋಡೋಣ. ನಿಮ್ಮ ಸ್ನೇಹಿತನೊಬ್ಬ ದೊಡ್ಡ ಮೊತ್ತದ ಹಣ ತೆಗೆದುಕೊಂಡು ಬಂದು ಇದನ್ನ ಸ್ವಲ್ಪ ದಿನ ಜೋಪಾನವಾಗಿ ಇಟ್ಕೊಳ್ಳಿ ಅಂತ ಹೇಳಿದರೆ ನಿಮಗೆ ಹೇಗನಿಸುತ್ತೆ? ನಿಮ್ಮ ಸ್ನೇಹಿತ ನಿಮ್ಮನ್ನ ತುಂಬ ನಂಬ್ತಿದ್ದಾರೆ ಅಂತ ಖುಷಿಯಾಗಬಹುದು. ಆದರೆ ಅದೇ ಸಮಯದಲ್ಲಿ ‘ಏನಾದರೂ ಹೆಚ್ಚುಕಮ್ಮಿಯಾದರೆ? ಯಾರಾದರೂ ಕದ್ದರೆ?’ ಅಂತ ಭಯನೂ ಆಗಬಹುದು. ಅದೇ ರೀತಿ ನಮ್ಮ ಆಪ್ತ ಸ್ನೇಹಿತನಾಗಿರೋ ಯೆಹೋವ ದೇವರು ಹೆತ್ತವರಿಗೆ ಆ ಹಣಕ್ಕಿಂತಲೂ ಅಮೂಲ್ಯವಾಗಿರೋದನ್ನ ನೋಡಿಕೊಳ್ಳೋಕೆ ಕೊಟ್ಟಿದ್ದಾನೆ. ಅದೇ ಮಕ್ಕಳು. ಹಾಗಾಗಿ ಮಕ್ಕಳನ್ನ ಜೋಪಾನವಾಗಿ, ಖುಷಿಯಾಗಿರೋ ತರ ನೋಡಿಕೊಳ್ಳೋದು ಹೆತ್ತವರ ಜವಾಬ್ದಾರಿ.

2. ಯಾವ ಪ್ರಶ್ನೆಗಳ ಬಗ್ಗೆ ನಾವು ಚರ್ಚಿಸಲಿದ್ದೇವೆ?

2 ಗಂಡ-ಹೆಂಡತಿಗೆ ಮಕ್ಕಳಿರಬೇಕಾ ಬೇಡ್ವಾ ಅಂತ ಯಾರು ನಿರ್ಣಯ ಮಾಡಬೇಕು? ಮಕ್ಕಳ ಜೀವನ ಚೆನ್ನಾಗಿರಬೇಕಾದರೆ ಹೆತ್ತವರು ಏನು ಮಾಡಬೇಕು? ಈ ವಿಷಯದಲ್ಲಿ ಒಳ್ಳೇ ನಿರ್ಣಯ ಮಾಡೋಕೆ ಕ್ರೈಸ್ತ ದಂಪತಿಗಳಿಗೆ ಸಹಾಯ ಮಾಡುವ ಬೈಬಲ್‌ ತತ್ವಗಳನ್ನ ಈಗ ನೋಡೋಣ.

ಗಂಡ-ಹೆಂಡತಿಯೇ ನಿರ್ಣಯ ಮಾಡಬೇಕು

3. (ಎ) ಮಕ್ಕಳು ಇರಬೇಕಾ ಬೇಡ್ವಾ ಅಂತ ಯಾರು ನಿರ್ಣಯಿಸಬೇಕು? (ಬಿ) ಕುಟುಂಬದವರು ಮತ್ತು ಸ್ನೇಹಿತರು ಯಾವ ಬೈಬಲ್‌ ತತ್ವವನ್ನ ನೆನಪಿನಲ್ಲಿಡಬೇಕು?

3 ಕೆಲವು ದೇಶಗಳಲ್ಲಿ ಒಬ್ಬರಿಗೆ ಮದುವೆ ಆದಮೇಲೆ ಆದಷ್ಟು ಬೇಗ ಮಕ್ಕಳೂ ಆಗಬೇಕಂತ ಜನ ನಿರೀಕ್ಷಿಸ್ತಾರೆ. ಕುಟುಂಬದವರು, ಸಂಬಂಧಿಕರು, ಅಕ್ಕಪಕ್ಕದವರು ಎಲ್ಲರೂ ‘ಆದಷ್ಟು ಬೇಗ ಮಕ್ಕಳು ಮಾಡ್ಕೊಳ್ಳಿ’ ಅಂತ ಒತ್ತಡ ಹಾಕ್ತಾರೆ. ಏಷ್ಯಾದ ಜೆತ್ರೋ ಎಂಬ ಸಹೋದರ ಹೀಗೆ ಹೇಳ್ತಾರೆ: “ನಮ್ಮ ಸಭೆಯಲ್ಲಿ, ಮಕ್ಕಳಿರೋ ಕೆಲವರು ಮಕ್ಕಳು ಇಲ್ಲದವರಿಗೆ ‘ಮಕ್ಕಳನ್ನ ಮಾಡ್ಕೊಳ್ಳಿ’ ಅಂತ ಹೇಳ್ತಾ ಇರ್ತಾರೆ.” ಏಷ್ಯಾದ ಜೆಫ್ರಿ ಎಂಬ ಸಹೋದರ ಹೀಗೆ ಹೇಳ್ತಾರೆ: “ಕೆಲವರು ಮಕ್ಕಳಿಲ್ಲದವರಿಗೆ, ‘ನಿಮಗೆ ಮಕ್ಕಳಿಲ್ಲ ಅಂದರೆ ವಯಸ್ಸಾದ ಮೇಲೆ ನೋಡಿಕೊಳ್ಳೋಕೆ ಯಾರೂ ಇರಲ್ಲ’ ಅಂತ ಹೇಳ್ತಾರೆ.” ಆದರೆ ಮಕ್ಕಳು ಬೇಕಾ ಬೇಡ್ವಾ ಅಂತ ಗಂಡ ಹೆಂಡತಿನೇ ನಿರ್ಣಯ ಮಾಡಬೇಕು. ಅದು ಅವರಿಗೆ ಬಿಟ್ಟಿದ್ದು. (ಗಲಾ. 6:5) ಹೊಸದಾಗಿ ಮದುವೆ ಆಗಿರುವವರು ಖುಷಿಯಾಗಿರಬೇಕು, ಚೆನ್ನಾಗಿರಬೇಕು ಅನ್ನೋದೇ ಕುಟುಂಬದವರ ಮತ್ತು ಸ್ನೇಹಿತರ ಉದ್ದೇಶ ಆಗಿರಬಹುದು. ಆದರೆ ಮಕ್ಕಳು ಇರಬೇಕಾ ಬೇಡ್ವಾ ಅಂತ ಗಂಡ ಹೆಂಡತಿನೇ ನಿರ್ಣಯ ಮಾಡಬೇಕು ಅನ್ನೋದನ್ನ ಎಲ್ಲರೂ ಅರ್ಥಮಾಡಿಕೊಳ್ಳಬೇಕು.—1 ಥೆಸ. 4:11.

4-5. ಗಂಡ-ಹೆಂಡತಿ ಯಾವ ಎರಡು ವಿಷಯಗಳ ಬಗ್ಗೆ ಚರ್ಚಿಸಬೇಕು ಮತ್ತು ಈ ವಿಷಯಗಳ ಬಗ್ಗೆ ಯಾವಾಗ ಚರ್ಚಿಸಿದರೆ ಒಳ್ಳೇದು? ವಿವರಿಸಿ.

4 ಮಕ್ಕಳು ಬೇಕು ಅಂತ ನಿರ್ಧರಿಸಿದವರು ಈ ಎರಡು ಪ್ರಶ್ನೆಗಳ ಬಗ್ಗೆ ಚರ್ಚಿಸಬೇಕು: ಒಂದು, ಯಾವಾಗ ಮಕ್ಕಳಾಗಬೇಕು? ಎರಡು, ಎಷ್ಟು ಮಕ್ಕಳು ಬೇಕು? ಅವರು ಈ ವಿಷಯಗಳ ಬಗ್ಗೆ ಯಾವಾಗ ಮಾತಾಡಿದ್ರೆ ಒಳ್ಳೇದು? ಈ ಎರಡು ವಿಷಯಗಳ ಬಗ್ಗೆ ಮಾತಾಡೋದು ಯಾಕೆ ಅಷ್ಟು ಪ್ರಾಮುಖ್ಯ?

5 ಹೆಚ್ಚಿನವರು ಮಕ್ಕಳು ಬೇಕಾ ಬೇಡ್ವಾ ಅನ್ನೋದರ ಬಗ್ಗೆ ಮದುವೆಗೂ ಮುಂಚೆನೇ ಮಾತಾಡ್ತಾರೆ. ಯಾಕೆ ಆಗಲೇ ಮಾತಾಡಬೇಕು? ಯಾಕೆಂದರೆ ಈ ವಿಷಯದ ಬಗ್ಗೆ ಇಬ್ಬರಿಗೂ ಒಂದೇ ಅಭಿಪ್ರಾಯ ಇರೋದು ತುಂಬ ಮುಖ್ಯ. ಅವರಿಬ್ಬರೂ ಮಕ್ಕಳನ್ನ ಬೆಳೆಸೋ ಜವಾಬ್ದಾರಿ ಹೊರಲಿಕ್ಕೆ ಸಿದ್ಧರಿದ್ದಾರಾ ಅಂತ ಯೋಚಿಸೋದೂ ಪ್ರಾಮುಖ್ಯ. ಕೆಲವು ದಂಪತಿಗಳು ಮದುವೆಯಾಗಿ ಒಂದೆರಡು ವರ್ಷಗಳವರೆಗೆ ಮಕ್ಕಳು ಬೇಡ ಅಂತ ನಿರ್ಧರಿಸಿದ್ದಾರೆ. ಯಾಕೆಂದ್ರೆ ಮಕ್ಕಳಾದ ಮೇಲೆ ಅವರ ಸಮಯ-ಶಕ್ತಿಯೆಲ್ಲ ಮಕ್ಕಳನ್ನ ಬೆಳೆಸೋದರಲ್ಲೇ ಹೋಗುತ್ತೆ. ಆದರೆ, ಸ್ವಲ್ಪ ಸಮಯದ ವರೆಗೆ ಮಕ್ಕಳು ಮಾಡಿಕೊಳ್ಳದಿದ್ದರೆ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳೋಕೆ, ಆಪ್ತರಾಗೋಕೆ ಸಾಧ್ಯ ಆಗುತ್ತೆ ಅಂತ ಅವರಿಗೆ ಅನಿಸಿದೆ.—ಎಫೆ. 5:33.

6. ಈಗಿನ ಪರಿಸ್ಥಿತಿಯನ್ನು ಮನಸ್ಸಿನಲ್ಲಿಟ್ಟು ಕೆಲವು ದಂಪತಿಗಳು ಯಾವ ನಿರ್ಣಯ ಮಾಡಿದ್ದಾರೆ?

6 ಈ ವಿಷಯದಲ್ಲಿ ಕೆಲವು ಕ್ರೈಸ್ತರು ನೋಹನ ಮೂರು ಮಕ್ಕಳ ಮತ್ತು ಸೊಸೆಯಂದಿರ ಮಾದರಿಯನ್ನು ಅನುಕರಿಸಿದ್ದಾರೆ. ಆ ಮೂರು ದಂಪತಿಗಳು ಮದುವೆಯಾದ ಹೊಸದರಲ್ಲೇ ಮಕ್ಕಳನ್ನು ಮಾಡಿಕೊಳ್ಳಲಿಲ್ಲ. (ಆದಿ. 6:18; 9:18, 19; 10:1; 2 ಪೇತ್ರ 2:5) ನಮ್ಮ ಕಾಲಾನೂ “ನೋಹನ ದಿನಗಳು ಹೇಗಿದ್ದವೋ” ಹಾಗೇ ಇರುತ್ತೆ ಅಂತ ಯೇಸು ಹೇಳಿದನು ಮತ್ತು ನಾವು “ನಿಭಾಯಿಸಲು ಕಷ್ಟಕರವಾದ” ಕಠಿಣ ಕಾಲದಲ್ಲಿ ಜೀವಿಸ್ತಾ ಇದ್ದೇವೆ. (ಮತ್ತಾ. 24:37; 2 ತಿಮೊ. 3:1) ಹಾಗಾಗಿ ದೇವರ ಸೇವೆಗೆ ಹೆಚ್ಚು ಸಮಯ ಕೊಡಬೇಕು ಅನ್ನೋ ಉದ್ದೇಶದಿಂದ ಕೆಲವು ದಂಪತಿಗಳು ಸದ್ಯಕ್ಕೆ ಮಕ್ಕಳು ಬೇಡ ಅಂತ ನಿರ್ಧರಿಸಿದ್ದಾರೆ.

ಯಾವಾಗ ಮಕ್ಕಳಾಗಬೇಕು ಮತ್ತು ಎಷ್ಟು ಮಕ್ಕಳು ಬೇಕು ಎಂದು ದಂಪತಿಗಳು ನಿರ್ಣಯಿಸುವಾಗ ಲೂಕ 14:28, 29 ರಲ್ಲಿರುವ ತತ್ವವನ್ನ ಅನ್ವಯಿಸಿಕೊಳ್ಳುವುದು ಒಳ್ಳೇದು (ಪ್ಯಾರ 7 ನೋಡಿ) *

7. ಲೂಕ 14:28, 29 ಮತ್ತು ಜ್ಞಾನೋಕ್ತಿ 21:5 ರಲ್ಲಿರುವ ತತ್ವ ದಂಪತಿಗಳಿಗೆ ಹೇಗೆ ಸಹಾಯ ಮಾಡುತ್ತದೆ?

7 ಯಾವಾಗ ಮಕ್ಕಳಾಗಬೇಕು ಮತ್ತು ಎಷ್ಟು ಮಕ್ಕಳು ಬೇಕು ಎಂದು ದಂಪತಿಗಳು ನಿರ್ಣಯಿಸುವಾಗ ಲೂಕ 14:28, 29 ರಲ್ಲಿರುವ ತತ್ವವನ್ನು ಅನ್ವಯಿಸಿಕೊಳ್ಳುವುದು ಒಳ್ಳೇದು. (ಓದಿ.) ಮಕ್ಕಳನ್ನು ಬೆಳೆಸಲಿಕ್ಕೆ ತುಂಬ ಹಣ ಖರ್ಚಾಗುತ್ತೆ, ಮಾತ್ರವಲ್ಲ ತುಂಬ ಸಮಯ ಮತ್ತು ಶಕ್ತಿ ಬೇಕಾಗುತ್ತೆ ಅಂತ ಹೆತ್ತವರಿಗೆ ಅನುಭವದಿಂದ ಗೊತ್ತಾಗಿದೆ. ಹಾಗಾಗಿ ದಂಪತಿಗಳು ಈ ಪ್ರಶ್ನೆಗಳ ಬಗ್ಗೆ ಯೋಚಿಸೋದು ತುಂಬ ಮುಖ್ಯ. ‘ಕುಟುಂಬದ ಅಗತ್ಯಗಳನ್ನು ಪೂರೈಸ್ಲಿಕ್ಕಾಗಿ ಇಬ್ರೂ ಕೆಲ್ಸ ಮಾಡ್ಬೇಕಾಗುತ್ತಾ? ಕುಟುಂಬಕ್ಕೆ ಏನೆಲ್ಲಾ ಬೇಕು ಅನ್ನೋದ್ರ ಬಗ್ಗೆ ಇಬ್ರಿಗೂ ಒಂದೇ ಅಭಿಪ್ರಾಯ ಇದ್ಯಾ? ಇಬ್ರೂ ಕೆಲ್ಸ ಮಾಡ್ಬೇಕಾದ್ರೆ ಮಕ್ಕಳನ್ನ ಯಾರು ನೋಡ್ಕೊಳ್ತಾರೆ? ಆಗ ಮಕ್ಕಳ ಮೇಲೆ ಯಾರ ಪ್ರಭಾವ ಹೆಚ್ಚು ಬೀರುತ್ತದೆ?’ ಈ ಪ್ರಶ್ನೆಗಳ ಬಗ್ಗೆ ಸಮಾಧಾನದಿಂದ ಚರ್ಚಿಸುವ ದಂಪತಿಗಳು ಜ್ಞಾನೋಕ್ತಿ 21:5 *ರಲ್ಲಿರುವ ತತ್ವವನ್ನು ಪಾಲಿಸಿರುತ್ತಾರೆ.—ಓದಿ.

ಪ್ರೀತಿಸುವ ಗಂಡ ತನ್ನ ಹೆಂಡತಿಗೆ ಸಹಾಯಮಾಡಲು ತನ್ನಿಂದಾಗುವುದನ್ನೆಲ್ಲ ಮಾಡುತ್ತಾನೆ (ಪ್ಯಾರ 8 ನೋಡಿ)

8. (ಎ) ಕ್ರೈಸ್ತ ದಂಪತಿಗಳಿಗೆ ಮಕ್ಕಳಿದ್ದರೆ ಯಾವ ಸವಾಲುಗಳು ಎದುರಾಗಬಹುದು? (ಬಿ) ಹೆಂಡತಿಯ ಮೇಲೆ ಪ್ರೀತಿ ಇರುವ ಗಂಡ ಏನು ಮಾಡ್ತಾನೆ?

8 ಒಂದು ಮಗುವನ್ನು ನೋಡ್ಕೊಳ್ಳಬೇಕಂದ್ರೆ ಅಪ್ಪ ಅಮ್ಮ ತುಂಬ ಸಮಯ ಮತ್ತು ಶಕ್ತಿಯನ್ನ ವ್ಯಯಿಸಬೇಕಾಗುತ್ತದೆ. ಹಾಗಿರುವಾಗ ಒಂದು ದಂಪತಿಗೆ ವಯಸ್ಸಿನ ಅಂತರ ತುಂಬ ಕಡಿಮೆ ಇರುವ ಅನೇಕ ಮಕ್ಕಳಿದ್ದರೆ, ಪ್ರತಿಯೊಂದು ಮಗುವಿಗೆ ಗಮನ ಕೊಡೋಕೆ ಅವ್ರಿಗೆ ಕಷ್ಟ ಆಗ್ಬಹುದು. ಇಂಥ ಪರಿಸ್ಥಿತಿಯಲ್ಲಿದ್ದ ಕೆಲವು ಹೆತ್ತವರು ತಮ್ಗೆ ಏನ್‌ ಮಡ್ಬೇಕಂತಾನೇ ಗೊತ್ತಾಗ್ತಿರ್ಲಿಲ್ಲ, ತುಂಬ ಸುಸ್ತಾಗ್ತಿತ್ತು ಅಂತ ಹೇಳಿಕೊಂಡಿದ್ದಾರೆ. ಅದ್ರಲ್ಲೂ ತಾಯಿಗಂತೂ ತುಂಬನೇ ಸುಸ್ತಾಗ್ಬಹುದು. ಆಕೆಗೆ ವೈಯಕ್ತಿಕ ಅಧ್ಯಯನ ಮಾಡೋಕೆ, ಪ್ರಾರ್ಥನೆ ಮಾಡೋಕೆ, ಸೇವೆಗೆ ಹೋಗೋಕೆ ತುಂಬ ಕಷ್ಟ ಆಗ್ಬಹುದು. ಕೂಟಗಳಲ್ಲೂ ಆಕೆಗೆ ಪೂರ್ತಿ ಗಮನ ಕೊಡೋಕೆ ಕಷ್ಟ ಆಗ್ಬಹುದು. ಹಾಗಾಗಿ, ಕೂಟಗಳಿಂದ ಆಕೆಗೆ ಏನೂ ಪ್ರಯೋಜನ ಸಿಗ್ದೇ ಹೋಗ್ಬಹುದು. ಆದ್ರೆ ಹೆಂಡತಿಯ ಮೇಲೆ ಪ್ರೀತಿಯಿರುವ ಗಂಡ, ಕೂಟದಲ್ಲೇ ಆಗ್ಲಿ ಮನೆಯಲ್ಲೇ ಆಗ್ಲಿ ಮಕ್ಕಳನ್ನ ನೋಡಿಕೊಳ್ಳಲಿಕ್ಕೆ ತನ್ನಿಂದಾಗುವ ಸಹಾಯ ಮಾಡ್ತಾನೆ. ಉದಾಹರಣೆಗೆ, ಆತನು ಮನೆಕೆಲ್ಸದಲ್ಲಿ ತನ್ನ ಹೆಂಡತಿಗೆ ಸಹಾಯ ಮಾಡ್ತಾನೆ. ತುಂಬ ಶ್ರಮ ಹಾಕಿ ಕುಟುಂಬ ಆರಾಧನೆಯನ್ನು ತಪ್ಪದೇ ಮಾಡ್ತಾನೆ ಮತ್ತು ತನ್ನ ಇಡೀ ಕುಟುಂಬದ ಜೊತೆ ತಪ್ಪದೇ ಸೇವೆಗೆ ಹೋಗಲಿಕ್ಕೆ ಏರ್ಪಾಡು ಮಾಡ್ತಾನೆ.

ಯೆಹೋವನನ್ನು ಪ್ರೀತಿಸಲು ಮಕ್ಕಳಿಗೆ ಕಲಿಸೋದು ಹೇಗೆ?

9-10. ತಮ್ಮ ಮಕ್ಕಳಿಗೆ ಸಹಾಯ ಮಾಡಲು ಹೆತ್ತವರು ಏನು ಮಾಡಬೇಕು?

9 ಯೆಹೋವನನ್ನು ಪ್ರೀತಿಸಲು ಮಕ್ಕಳಿಗೆ ಕಲಿಸ್ಲಿಕ್ಕಾಗಿ ಹೆತ್ತವರು ಏನೆಲ್ಲಾ ಮಾಡಬೇಕು? ಈ ಕೆಟ್ಟ ಲೋಕದಿಂದ ಮಕ್ಕಳನ್ನ ಅವ್ರು ಹೇಗೆ ಸಂರಕ್ಷಿಸಬಹುದು? ಇದಕ್ಕಾಗಿ ಹೆತ್ತವರು ಯಾವ ಹೆಜ್ಜೆಗಳನ್ನು ತೆಗೆದುಕೊಳ್ಳಬಹುದೆಂದು ಈಗ ನೋಡೋಣ.

10 ಸಹಾಯಕ್ಕಾಗಿ ಯೆಹೋವನಿಗೆ ಪ್ರಾರ್ಥಿಸಿ. ಸಂಸೋನನ ಹೆತ್ತವರಾದ ಮಾನೋಹ ಮತ್ತು ಅವನ ಹೆಂಡತಿಯ ಉದಾಹರಣೆ ನೋಡೋಣ. ತಮಗೆ ಒಬ್ಬ ಮಗ ಹುಟ್ಟುತ್ತಾನೆ ಎಂದು ಗೊತ್ತಾದಾಗ ಮಾನೋಹನು ಆ ಮಗುವನ್ನು ಬೆಳೆಸಲಿಕ್ಕೆ ಬೇಕಾದ ಮಾರ್ಗದರ್ಶನ ಕೊಡುವಂತೆ ಯೆಹೋವನ ಹತ್ತಿರ ಕೇಳಿಕೊಂಡನು.

11. ನ್ಯಾಯಸ್ಥಾಪಕರು 13:8 ರಲ್ಲಿ ತಿಳಿಸಲಾಗಿರುವ ಮಾನೋಹನ ಮಾದರಿಯನ್ನು ಹೆತ್ತವರು ಹೇಗೆ ಅನುಕರಿಸಬಹುದು?

11 ಬೊಸ್ನಿಯಾ-ಹರ್ಜೆಗೊವಿನಾ ದೇಶದ ನಿಹಾದ್‌ ಮತ್ತು ಆಲ್ಮಾ ಎಂಬ ದಂಪತಿ ಮಾನೋಹನನ್ನು ಅನುಕರಿಸಿದರು. ಅವರು ಹೇಳಿದ್ದು: “ಮಾನೋಹನಂತೆ ನಾವು ಸಹ, ‘ಹೆತ್ತವರಾಗಿ ನಮ್ಮ ಜವಾಬ್ದಾರಿಯನ್ನು ಒಳ್ಳೇ ರೀತಿ ಮಾಡ್ಲಿಕ್ಕೆ ಕಲಿಸು’ ಅಂತ ಯೆಹೋವನತ್ರ ಬೇಡಿಕೊಂಡ್ವಿ. ಯೆಹೋವನು ಬೈಬಲ್‌, ಬೈಬಲ್‌ ಸಾಹಿತ್ಯ, ಕೂಟಗಳು ಮತ್ತು ಅಧಿವೇಶನಗಳ ಮೂಲಕ ನಮ್ಮ ಪ್ರಾರ್ಥನೆಗಳಿಗೆ ಉತ್ತರ ಕೊಟ್ಟನು.”—ನ್ಯಾಯಸ್ಥಾಪಕರು 13:8 ಓದಿ.

12. ಯೋಸೇಫ ಮತ್ತು ಮರಿಯ ತಮ್ಮ ಮಕ್ಕಳಿಗೆ ಎಂಥ ಮಾದರಿ ಇಟ್ಟಿದ್ದರು?

12 ಮಾದರಿ ಮೂಲಕ ಕಲಿಸಿ. ನೀವೇನು ಹೇಳ್ತೀರಿ ಅನ್ನೋದು ತುಂಬ ಮುಖ್ಯ. ಆದ್ರೆ, ನಿಮ್ಮ ಮಾತಿಗಿಂತ ನೀವು ನಡ್ಕೊಳ್ಳೋ ರೀತಿ ನಿಮ್ಮ ಮಕ್ಕಳ ಮೇಲೆ ಹೆಚ್ಚು ಪ್ರಭಾವ ಬೀರುತ್ತೆ. ಯೋಸೇಫ ಮತ್ತು ಮರಿಯ ಯೇಸುವಿಗೂ ತಮ್ಮ ಉಳಿದ ಮಕ್ಕಳಿಗೂ ಒಳ್ಳೇ ಮಾದರಿ ಇಟ್ಟಿದ್ರು. ಯೋಸೇಫ ತನ್ನ ಕುಟುಂಬದ ಅಗತ್ಯಗಳನ್ನು ಪೂರೈಸ್ಲಿಕ್ಕಾಗಿ ತುಂಬ ಕಷ್ಟಪಟ್ಟು ಕೆಲ್ಸ ಮಾಡುತ್ತಿದ್ನು. ಅಷ್ಟೇ ಅಲ್ಲ, ಯೆಹೋವನ ಆರಾಧನೆಗೆ ಪ್ರಮುಖ ಸ್ಥಾನ ಕೊಡ್ಲಿಕ್ಕೂ ಕುಟುಂಬದವರನ್ನು ಉತ್ತೇಜಿಸುತ್ತಿದ್ನು. (ಧರ್ಮೋ. 4:9, 10) ಪಸ್ಕ ಹಬ್ಬವನ್ನು ಆಚರಿಸಲಿಕ್ಕಾಗಿ “ಪ್ರತಿ ವರ್ಷ” ಇಡೀ ಕುಟುಂಬವನ್ನು ಯೆರೂಸಲೇಮಿಗೆ ಕರಕೊಂಡು ಹೋಗ್ಬೇಕಂತ ನಿಯಮ ಇಲ್ದಿದ್ರೂ ಯೋಸೇಫನು ಹಾಗೆ ಮಾಡ್ತಿದ್ದನು. (ಲೂಕ 2:41, 42) ಆ ಸಮಯದಲ್ಲಿದ್ದ ಕೆಲವರು ಈ ರೀತಿ ಇಡೀ ಕುಟುಂಬವನ್ನು ಕರಕೊಂಡು ಹೋಗುವುದು ತುಂಬ ಕಷ್ಟ, ತುಂಬ ಸಮಯ ಹಿಡಿಯುತ್ತೆ, ಖರ್ಚಾಗುತ್ತೆ ಅಂತ ನೆನಸುತ್ತಿದ್ದಿರಬಹುದು. ಆದ್ರೆ ಯೋಸೇಫನು ದೇವರ ಆರಾಧನೆಗೆ ಪ್ರಮುಖ ಸ್ಥಾನ ಕೊಟ್ಟನು. ಅದನ್ನೇ ತನ್ನ ಮಕ್ಕಳಿಗೆ ಕಲಿಸಿದ್ನು. ಮರಿಯಳಿಗೆ ಕೂಡ ದೇವರ ವಾಕ್ಯ ಚೆನ್ನಾಗಿ ಗೊತ್ತಿತ್ತು. ಅವ್ಳು ತನ್ನ ನಡೆ-ನುಡಿಯ ಮೂಲಕ ಮಕ್ಕಳಿಗೆ ದೇವರ ವಾಕ್ಯವನ್ನು ಪ್ರೀತಿಸಲು ಖಂಡಿತ ಕಲಿಸಿರುತ್ತಾಳೆ.

13. ಒಂದು ದಂಪತಿ ಯೋಸೇಫ ಮರಿಯರ ಮಾದರಿಯನ್ನು ಹೇಗೆ ಅನುಕರಿಸಿದ್ರು?

13 ಈ ಹಿಂದೆ ತಿಳಿಸಲಾದ ನಿಹಾದ್‌ ಮತ್ತು ಆಲ್ಮಾ ಯೋಸೇಫ ಮತ್ತು ಮರಿಯಳ ಮಾದರಿಯನ್ನು ಅನುಕರಿಸಲು ಪ್ರಯತ್ನಿಸಿದರು. ಯೆಹೋವನನ್ನು ಪ್ರೀತಿಸಿ ಆರಾಧಿಸುವ ಹಾಗೆ ತಮ್ಮ ಮಗನನ್ನು ಬೆಳೆಸಲು ಈ ವಿಷಯ ಅವರಿಗೆ ಹೇಗೆ ಸಹಾಯ ಮಾಡಿತು? “ಯೆಹೋವನ ತತ್ವಗಳ ಪ್ರಕಾರ ಜೀವಿಸುವುದು ಎಷ್ಟು ಒಳ್ಳೇದು ಅಂತ ನಮ್ಮ ಮಗನಿಗೆ ನಮ್ಮ ಜೀವನ ರೀತಿಯ ಮೂಲಕ ತೋರಿಸಿಕೊಡಲು ಪ್ರಯತ್ನಿಸಿದೆವು” ಎಂದವರು ಹೇಳ್ತಾರೆ. ನಿಹಾದ್‌ ಹೀಗೆ ಹೇಳ್ತಾರೆ: “ಮುಂದೆ ನಿಮ್ಮ ಮಗು ಎಂಥ ವ್ಯಕ್ತಿ ಆಗ್ಬೇಕೆಂದು ಬಯಸ್ತೀರೋ ನೀವೂ ಅಂಥವರಾಗಿರಬೇಕು.”

14. ತಮ್ಮ ಮಕ್ಕಳು ಯಾರ ಜೊತೆ ಸಹವಾಸ ಮಾಡ್ತಾರಂತ ಹೆತ್ತವರಿಗೆ ಯಾಕೆ ಗೊತ್ತಿರಬೇಕು?

14 ಒಳ್ಳೇ ಸ್ನೇಹಿತರನ್ನು ಮಾಡಿಕೊಳ್ಳಲು ನಿಮ್ಮ ಮಕ್ಕಳಿಗೆ ಸಹಾಯಮಾಡಿ. ಮಕ್ಕಳು ಯಾರ ಸಹವಾಸ ಮಾಡ್ತಿದ್ದಾರೆ, ಏನ್‌ ಮಾಡ್ತಿದ್ದಾರೆ ಅಂತ ಅಪ್ಪ ಅಮ್ಮ ಇಬ್ರಿಗೂ ಗೊತ್ತಿರಬೇಕು. ಅಂದ್ರೆ, ಮಕ್ಕಳು ಮೊಬೈಲ್‌ನಲ್ಲಾಗ್ಲಿ ಕಂಪ್ಯೂಟರ್‌ನಲ್ಲಾಗ್ಲಿ ಇಂಟರ್‌ನೆಟ್‌ ಮೂಲಕ ಯಾರನ್ನ ಫ್ರೆಂಡ್ಸ್‌ ಮಾಡ್ಕೊಂಡಿದ್ದಾರೆ ಅಂತ ಹೆತ್ತವರು ತಿಳ್ಕೊಂಡಿರಬೇಕು. ಯಾಕೆಂದ್ರೆ, ಆ ಫ್ರೆಂಡ್ಸ್‌ ಸಹ ಮಕ್ಕಳ ಯೋಚನೆ ಮತ್ತು ನಡತೆ ಮೇಲೆ ಪ್ರಭಾವ ಬೀರ್ತಾರೆ.—1 ಕೊರಿಂ. 15:33.

15. ಜೆಸ್ಸಿ ಎಂಬವರ ಉದಾಹರಣೆಯಿಂದ ಹೆತ್ತವರೇನು ಕಲಿಯಬಹುದು?

15 ಹೆತ್ತವರಿಗೆ ಕಂಪ್ಯೂಟರ್‌ ಮತ್ತು ಮೊಬೈಲ್‌ ಫೋನ್‌ಗಳ ಬಗ್ಗೆ ಅಷ್ಟೊಂದು ಗೊತ್ತಿಲ್ಲ ಅಂದ್ರೆ ಏನ್‌ ಮಾಡ್ಬಹುದು? ಫಿಲಿಪ್ಪೀನ್ಸ್‌ನ ಜೆಸ್ಸಿ ಅನ್ನೋವ್ರು ಹೀಗೆ ಹೇಳ್ತಾರೆ: “ನಮ್ಗೆ ಎಲೆಕ್ಟ್ರಾನಿಕ್‌ ಸಾಧನಗಳ ಬಗ್ಗೆ ಅಷ್ಟೊಂದು ಗೊತ್ತಿರ್ಲಿಲ್ಲ. ಆದ್ರೂ ನಾವು ನಮ್ಮ ಮಕ್ಕಳಿಗೆ, ಅವುಗಳಿಂದ ಯಾವೆಲ್ಲ ಅಪಾಯಗಳಿವೆ ಅಂತ ಕಲಿಸಿದ್ವಿ.” ಎಲೆಕ್ಟ್ರಾನಿಕ್‌ ಸಾಧನ ಉಪಯೋಗಿಸೋಕೆ ತಮ್ಗೆ ಬರಲ್ಲ ಅಂದ ಮಾತ್ರಕ್ಕೆ ಜೆಸ್ಸಿ, ತಮ್ಮ ಮಕ್ಕಳೂ ಅದನ್ನ ಉಪಯೋಗಿಸರ್ಬಾದು ಅಂತ ಹೇಳ್ಲಿಲ್ಲ. “ನಾನು ಮಕ್ಕಳಿಗೆ ಹೊಸ ಭಾಷೆ ಕಲಿಯಲಿಕ್ಕೆ, ಕೂಟಗಳಿಗೆ ತಯಾರಿಸ್ಲಿಕ್ಕೆ, ಪ್ರತಿದಿನ ಬೈಬಲ್‌ ಓದಲಿಕ್ಕೆ ಎಲೆಕ್ಟ್ರಾನಿಕ್‌ ಸಾಧನ ಉಪಯೋಗಿಸಿ ಅಂತ ಉತ್ತೇಜಿಸಿದೆ” ಎಂದವರು ಹೇಳುತ್ತಾರೆ. jw.org®ನಲ್ಲಿ ಹದಿವಯಸ್ಕರು ಎಂಬಲ್ಲಿ, ಮೆಸೇಜ್‌ ಕಳುಹಿಸುವುದರ ಬಗ್ಗೆ ಮತ್ತು ಇಂಟರ್‌ನೆಟ್‌ನಲ್ಲಿ ಫೋಟೋ ಕಳುಹಿಸುವುದರ ಬಗ್ಗೆ ಸಲಹೆಗಳಿವೆ. ಹೆತ್ತವರೇ ಇದನ್ನ ನೀವು ನೋಡಿದ್ದೀರಾ? ಮತ್ತು ನಿಮ್ಮ ಮಕ್ಕಳ ಜೊತೆ ಚರ್ಚಿಸಿದ್ದೀರಾ? ನಿಮ್ಮ ಎಲೆಕ್ಟ್ರಾನಿಕ್‌ ಸಾಧನಗಳು ಯಾರ ನಿಯಂತ್ರಣದಲ್ಲಿವೆ? ಮತ್ತು ಸೋಷಿಯಲ್‌ ನೆಟ್‌ವರ್ಕನ್ನು ಜಾಣರಾಗಿ ಬಳಸಿ ಎಂಬ ವಿಡಿಯೋಗಳನ್ನು ನಿಮ್ಮ ಮಕ್ಕಳ ಜೊತೆ ನೋಡಿ ಚರ್ಚಿಸಿದ್ದೀರಾ? * ಎಲೆಕ್ಟ್ರಾನಿಕ್‌ ಸಾಧನಗಳನ್ನು ಒಳ್ಳೇ ರೀತಿಯಲ್ಲಿ ಉಪಯೋಗಿಸಲು ನಿಮ್ಮ ಮಕ್ಕಳಿಗೆ ಕಲಿಸಲಿಕ್ಕೆ ಈ ಎಲ್ಲಾ ಮಾಹಿತಿ ನಿಮ್ಗೆ ಸಹಾಯ ಮಾಡುತ್ತದೆ.—ಜ್ಞಾನೋ. 13:20.

16. (ಎ) ಅನೇಕ ಹೆತ್ತವರು ಏನು ಮಾಡಿದ್ದಾರೆ? (ಬಿ) ಇದ್ರಿಂದ ಯಾವ ಪ್ರತಿಫಲ ಸಿಕ್ಕಿದೆ?

16 ಅನೇಕ ಹೆತ್ತವರು ದೇವರ ಸೇವೆ ಮಾಡುವುದರಲ್ಲಿ ಉತ್ತಮ ಮಾದರಿ ಇಟ್ಟಿರುವವರ ಜೊತೆ ತಮ್ಮ ಮಕ್ಕಳು ಸಹವಾಸ ಮಾಡ್ಲಿಕ್ಕಾಗಿ ಏರ್ಪಾಡುಗಳನ್ನು ಮಾಡುತ್ತಾರೆ. ಉದಾಹರಣೆಗೆ, ಕೋಟ್‌ ಡೀವಾರ್‌ನಲ್ಲಿರುವ ಡೆನಿ ಮತ್ತು ಬೊಮಿನ್‌ ಎಂಬ ದಂಪತಿಯು ಸಂಚರಣ ಮೇಲ್ವಿಚಾರಕರು ಬಂದಾಗ ಅವರನ್ನು ತಮ್ಮ ಮನೆಯಲ್ಲೇ ಉಳಿಸಿಕೊಳ್ಳುತ್ತಿದ್ದರು. ಡೆನಿ ಹೀಗೆ ಹೇಳುತ್ತಾರೆ: “ಇದ್ರಿಂದ ನಮ್ಮ ಮಗನ ಮೇಲೆ ಒಳ್ಳೇ ಪರಿಣಾಮ ಬೀರಿತು. ಅವ್ನು ಪಯನಿಯರಿಂಗ್‌ ಆರಂಭಿಸಿದ್ನು ಮತ್ತು ಈಗ ಬದಲಿ ಸಂಚರಣ ಮೇಲ್ವಿಚಾರಕನಾಗಿ ಸೇವೆ ಮಾಡುತ್ತಿದ್ದಾನೆ.” ನಿಮ್ಮ ಮಕ್ಕಳು ಸಹ ಇದೇ ರೀತಿಯ ಸಹವಾಸದಲ್ಲಿ ಆನಂದಿಸಲು ಏರ್ಪಾಡು ಮಾಡ್ತೀರಾ?

17-18. ಹೆತ್ತವರು ಮಕ್ಕಳಿಗೆ ಯಾವಾಗ ತರಬೇತಿ ಕೊಡಲು ಶುರುಮಾಡಬೇಕು?

17 ಮಕ್ಕಳಿಗೆ ಎಷ್ಟು ಬೇಗ ಆಗುತ್ತೋ ಅಷ್ಟು ಬೇಗ ತರಬೇತಿ ಕೊಡಲು ಶುರುಮಾಡಿ. ಹೆತ್ತವರು ಮಕ್ಕಳಿಗೆ ಎಷ್ಟು ಬೇಗ ತರಬೇತಿ ಕೊಡುತ್ತಾರೋ ಅಷ್ಟು ಒಳ್ಳೇದು. (ಜ್ಞಾನೋ. 22:6) ತಿಮೊಥೆಯನ ಉದಾಹರಣೆ ನೋಡಿ. ಅವನ ತಾಯಿ ಯೂನಿಕೆ ಮತ್ತು ಅಜ್ಜಿ ಲೋವಿ ಅವನಿಗೆ “ಶೈಶವದಿಂದಲೇ” ಅಂದ್ರೆ ಎಳೇ ಮಗು ಆಗಿರುವಾಗಲೇ ತರಬೇತಿ ಕೊಡೋಕೆ ಶುರುಮಾಡಿದ್ರು. (2 ತಿಮೊ. 1:5; 3:15) ಮುಂದೆ ಅವ್ನು ದೊಡ್ಡವನಾದಾಗ ಪೌಲನ ಜೊತೆ ಸಂಚರಣ ಕೆಲಸ ಮಾಡಿದ್ನು.

18 ಕೋಟ್‌ ಡೀವಾರ್‌ನಲ್ಲಿರುವ ಜಾನ್‌ ಕ್ಲಾಡ್‌ ಮತ್ತು ಪೀಸ್‌ ಎಂಬ ದಂಪತಿ ತಮ್ಮ ಆರೂ ಮಕ್ಕಳು ಯೆಹೋವನನ್ನು ಪ್ರೀತಿಸಿ ಆರಾಧಿಸುವಂತೆ ಬೆಳೆಸಿದ್ರು. ಇದನ್ನು ಮಾಡಲು ಅವರಿಗೆ ಯಾವ್ದು ಸಹಾಯ ಮಾಡ್ತು? ಅವ್ರು ಯೂನಿಕೆ ಮತ್ತು ಲೋವಿಯ ಮಾದರಿಯನ್ನು ಅನುಕರಿಸಿದ್ರು. ಅವ್ರು ಹೀಗೆ ಹೇಳ್ತಾರೆ: “ನಮ್ಮ ಮಕ್ಕಳು ಹುಟ್ಟಿದ ಸ್ವಲ್ಪ ಸಮಯದಿಂದಲೇ ನಾವು ಅವ್ರಿಗೆ ದೇವರ ವಾಕ್ಯವನ್ನು ಅಭ್ಯಾಸ ಮಾಡಿಸಲು ಆರಂಭಿಸಿದೆವು.”—ಧರ್ಮೋ. 6:6, 7.

19. ದೇವರ ವಾಕ್ಯವನ್ನು ಮಕ್ಕಳಿಗೆ ಅಭ್ಯಾಸ ಮಾಡಿಸುವುದು ಅಂದ್ರೇನು?

19 ಯೆಹೋವನ ವಾಕ್ಯವನ್ನು ಮಕ್ಕಳಿಗೆ ‘ಅಭ್ಯಾಸ ಮಾಡಿಸುವುದು’ ಅಂದ್ರೇನು? ‘ಅಭ್ಯಾಸ ಮಾಡಿಸುವುದು’ ಅಂದ್ರೆ, “ಪುನಃ ಪುನಃ ಹೇಳುವ ಮೂಲಕ ಕಲಿಸುವುದು ಅಥವಾ ಮನ್ಸಲ್ಲಿ ಅಚ್ಚೊತ್ತಿಸುವುದು” ಎಂದರ್ಥ. ಹೆತ್ತವರು ಹೀಗೆ ಮಾಡ್ಬೇಕಂದ್ರೆ, ತಮ್ಮ ಮಕ್ಕಳ ಜೊತೆ ಪ್ರತಿದಿನ ಸಮಯ ಕಳೀಬೇಕು. ಮಕ್ಕಳಿಗೆ ಹೇಳಿದ್ದನ್ನೇ ಪುನಃ ಪುನಃ ಹೇಳ್ಬೇಕಂದ್ರೆ ಹೆತ್ತವರಿಗೆ ಕಿರಿಕಿರಿ ಆಗ್ಬಹುದು. ಆದ್ರೆ ಹೆತ್ತವರು ಹೀಗೆ ಮಾಡೋದ್ರಿಂದ್ಲೇ ಮಕ್ಕಳು ದೇವರ ವಾಕ್ಯವನ್ನು ಅರ್ಥಮಾಡಿಕೊಂಡು ಅನ್ವಯಿಸಲಿಕ್ಕೆ ಸಹಾಯ ಆಗುತ್ತೆ.

ಮಕ್ಕಳಲ್ಲಿ ಒಬ್ಬೊಬ್ಬರಿಗೂ ಯಾವ ರೀತಿಯ ತರಬೇತಿ ಕೊಡಬೇಕಂತ ಹೆತ್ತವರು ನಿರ್ಧರಿಸಬೇಕು (ಪ್ಯಾರ 20 ನೋಡಿ) *

20. ಮಕ್ಕಳನ್ನು ಬೆಳೆಸುವ ವಿಷಯದಲ್ಲಿ ಕೀರ್ತನೆ 127:4 ರಲ್ಲಿರುವ ತತ್ವವನ್ನು ಹೇಗೆ ಅನ್ವಯಿಸಬಹುದು?

20 ನಿಮ್ಮ ಮಕ್ಕಳ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳಿ. 127 ನೇ ಕೀರ್ತನೆಯಲ್ಲಿ ಮಕ್ಕಳನ್ನು ಅಂಬುಗಳಿಗೆ ಅಂದ್ರೆ ಬಾಣಗಳಿಗೆ ಹೋಲಿಸಲಾಗಿದೆ. (ಕೀರ್ತನೆ 127:4 ಓದಿ.) ಎಲ್ಲಾ ಬಾಣಗಳು ಒಂದೇ ರೀತಿಯಲ್ಲಿ ಇರಲ್ಲ. ಬೇರೆ ಬೇರೆ ವಸ್ತುಗಳಿಂದ ಅದನ್ನ ತಯಾರಿಸುತ್ತಾರೆ, ಬೇರೆ ಬೇರೆ ಗಾತ್ರದಲ್ಲಿರುತ್ತೆ. ಅದೇ ರೀತಿ ಎಲ್ಲಾ ಮಕ್ಕಳು ಒಂದೇ ರೀತಿ ಇರಲ್ಲ. ಹಾಗಾಗಿ ಹೆತ್ತವರು ತಮ್ಮ ಮಕ್ಕಳಲ್ಲಿ ಒಬ್ಬೊಬ್ಬರಿಗೂ ಹೇಗೆ ತರಬೇತಿ ಕೊಡ್ಬೇಕಂತ ನಿರ್ಧರಿಸಬೇಕು. ತಮ್ಮ ಇಬ್ಬರು ಮಕ್ಕಳು ಯೆಹೋವನನ್ನು ಆರಾಧಿಸುವಂತೆ ಬೆಳೆಸಲು ಇಸ್ರೇಲ್‌ನ ಒಬ್ಬ ದಂಪತಿಗೆ ಯಾವ್ದು ಸಹಾಯಮಾಡಿತೆಂದು ನೋಡಿ. “ಇಬ್ಬರಿಗೂ ಒಟ್ಟಿಗೆ ಬೈಬಲ್‌ ಕಲಿಸುತ್ತಿರಲಿಲ್ಲ, ಬೇರೆ ಬೇರೆಯಾಗಿ ಕಲಿಸ್ತಿದ್ವಿ” ಅಂತ ಅವ್ರು ಹೇಳ್ತಾರೆ. ಈ ರೀತಿ ಬೇರೆ ಬೇರೆಯಾಗಿ ಕಲಿಸೋ ಅವಶ್ಯಕತೆ ಇದೆಯಾ, ಈ ರೀತಿ ಕಲಿಸೋಕೆ ಆಗುತ್ತಾ ಅಂತ ಕುಟುಂಬದ ತಲೆ ನಿರ್ಧರಿಸಬೇಕು.

ಯೆಹೋವನು ನಿಮಗೆ ಖಂಡಿತ ಸಹಾಯ ಮಾಡುತ್ತಾನೆ

21. ಹೆತ್ತವರಿಗೆ ಯೆಹೋವನು ಹೇಗೆ ಸಹಾಯ ಮಾಡುತ್ತಾನೆ?

21 ಮಕ್ಕಳಿಗೆ ಕಲಿಸುವುದು ತುಂಬ ಕಷ್ಟ ಅಂತ ಕೆಲವೊಮ್ಮೆ ಹೆತ್ತವರಿಗೆ ಅನಿಸಬಹುದು. ಆದ್ರೆ ಮಕ್ಕಳು ಯೆಹೋವನು ಕೊಟ್ಟಿರುವ ಉಡುಗೊರೆಯಾಗಿದ್ದಾರೆ. ಹಾಗಾಗಿ, ಆತನು ಹೆತ್ತವರಿಗೆ ಸಹಾಯ ಮಾಡಲು ಯಾವಾಗಲೂ ಸಿದ್ಧನಾಗಿರುತ್ತಾನೆ. ಆತನು ಅವರ ಪ್ರಾರ್ಥನೆಗಳನ್ನು ಇಷ್ಟಪಟ್ಟು ಕೇಳುತ್ತಾನೆ. ಮಾತ್ರವಲ್ಲ ಬೈಬಲ್‌, ಬೈಬಲಾಧಾರಿತ ಸಾಹಿತ್ಯಗಳು, ಸಭೆಯಲ್ಲಿರುವ ಅನುಭವಸ್ಥ ಹೆತ್ತವರ ಸಲಹೆ ಮತ್ತು ಮಾದರಿಯ ಮೂಲಕ ಆತನು ಅವರ ಪ್ರಾರ್ಥನೆಗಳಿಗೆ ಉತ್ತರ ಕೊಡುತ್ತಾನೆ.

22. ಹೆತ್ತವರು ತಮ್ಮ ಮಕ್ಕಳಿಗೆ ಕೊಡುವ ಅತ್ಯುತ್ತಮ ವಿಷ್ಯ ಯಾವುದಾಗಿದೆ?

22 ಮಕ್ಕಳನ್ನು ಬೆಳೆಸೋದು 20 ವರ್ಷದ ಪ್ರಾಜೆಕ್ಟ್‌ ಅಂತ ಅನೇಕರು ಹೇಳ್ತಾರೆ. ಹಾಗಾಗಿ, ಇರೋ ಸಮ್ಯಾನ ಚೆನ್ನಾಗಿ ಉಪಯೋಗಿಸಿಕೊಳ್ಬೇಕು. ಹೆತ್ತವರು ತಮ್ಮ ಮಕ್ಕಳಿಗೆ ಕೊಡಲಿಕ್ಕಾಗಿರುವ ಅತ್ಯುತ್ತಮ ವಿಷ್ಯ ಪ್ರೀತಿ, ಸಮಯ ಮತ್ತು ಬೈಬಲ್‌ ಆಧರಿತ ತರಬೇತಿಯೇ ಆಗಿದೆ. ಹೆತ್ತವರ ತರಬೇತಿಗೆ ಎಲ್ಲಾ ಮಕ್ಕಳು ಒಂದೇ ರೀತಿಯಲ್ಲಿ ಸ್ಪಂದಿಸುವುದಿಲ್ಲ. ಕ್ರೈಸ್ತ ಹೆತ್ತವರ ತರಬೇತಿಯಲ್ಲಿ ಬೆಳೆದ ಜೊಯೆನ್ನಾ ಮೇ ಎಂಬ ಏಷ್ಯಾದ ಸಹೋದರಿ ಹೀಗೆ ಹೇಳುತ್ತಾಳೆ: “ನನ್ನ ಹೆತ್ತವರಿಂದ ಸಿಕ್ಕಿರುವ ತರಬೇತಿ ಬಗ್ಗೆ ಯೋಚಿಸ್ವಾಗ, ಅವ್ರು ನನ್ನನ್ನ ಶಿಸ್ತಿನಿಂದ ಬೆಳೆಸಿರೋದಕ್ಕೆ, ಯೆಹೋವನನ್ನು ಪ್ರೀತಿಸುವಂತೆ ಕಲಿಸಿರೋದಕ್ಕೆ ನಾನು ಅವ್ರಿಗೆ ತುಂಬ ಕೃತಜ್ಞಳಾಗಿದ್ದೇನೆ. ಅವ್ರು ನಂಗೆ ಬರೀ ಜೀವ ಕೊಟ್ಟಿಲ್ಲ, ನನ್ನ ಜೀವನಕ್ಕೆ ಒಂದು ಅರ್ಥನೂ ಕೊಟ್ಟಿದ್ದಾರೆ.” (ಜ್ಞಾನೋ. 23:24, 25) ಇದು ಅವ್ರೊಬ್ಬರ ಅನಿಸಿಕೆ ಅಲ್ಲ. ನಮ್ಮ ಲಕ್ಷಾಂತರ ಸಹೋದರ-ಸಹೋದರಿಯರಿಗೂ ಹೀಗೇ ಅನ್ಸಿದೆ.

ಗೀತೆ 104 ನನ್ನೊಂದಿಗೆ ಯಾಹುವನ್ನು ಸ್ತುತಿಸು

^ ಪ್ಯಾರ. 5 ‘ನಮಗೆ ಮಕ್ಕಳು ಬೇಕಾ? ಎಷ್ಟು ಮಕ್ಕಳು ಬೇಕು? ಅವರು ಯೆಹೋವನನ್ನ ಪ್ರೀತಿಸಿ ಆತನನ್ನ ಆರಾಧಿಸಲಿಕ್ಕೆ ನಾವು ಹೇಗೆ ಕಲಿಸಬಹುದು?’ ಎಂಬ ಪ್ರಶ್ನೆ ಅನೇಕ ದಂಪತಿಗಳಿಗೆ ಬರುತ್ತೆ. ಈ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಲು ಸಹಾಯ ಮಾಡುವಂಥ ಬೈಬಲ್‌ ತತ್ವಗಳು ಮತ್ತು ಈಗಿನವರ ಕೆಲವು ಉದಾಹರಣೆಗಳು ಈ ಲೇಖನದಲ್ಲಿವೆ.

^ ಪ್ಯಾರ. 7 “ಶ್ರಮಶೀಲರಿಗೆ ತಮ್ಮ ಯೋಜನೆಗಳಿಂದ ಸಮೃದ್ಧಿ.”—ಜ್ಞಾನೋಕ್ತಿ 21:5, NW.

^ ಪ್ಯಾರ. 61 ಚಿತ್ರ ವಿವರಣೆ: ತಮಗೆ ಮಕ್ಕಳು ಬೇಕಾ? ಬೇಡ್ವಾ? ಅನ್ನೋದ್ರ ಬಗ್ಗೆ, ಮಕ್ಕಳಾದ್ರೆ ಅದ್ರಿಂದ ಸಿಗೋ ಸಂತೋಷ ಮತ್ತು ಸವಾಲುಗಳ ಬಗ್ಗೆ ಕ್ರೈಸ್ತ ದಂಪತಿ ಮಾತಾಡುತ್ತಿದ್ದಾರೆ.

^ ಪ್ಯಾರ. 65 ಚಿತ್ರ ವಿವರಣೆ: ಒಬ್ಬ ದಂಪತಿ ತಮ್ಮ ಮಕ್ಕಳ ವಯಸ್ಸು ಮತ್ತು ಸಾಮರ್ಥ್ಯ ಬೇರೆ ಬೇರೆ ಆಗಿರೋದ್ರಿಂದ, ಅವ್ರಿಗೆ ಬೈಬಲ್‌ ಬಗ್ಗೆ ಬೇರೆ ಬೇರೆಯಾಗಿಯೇ ಕಲಿಸುತ್ತಿದ್ದಾರೆ.