ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 50

ಯೆಹೋವನು ಕೊಡುವ ಸ್ವಾತಂತ್ರ್ಯ

ಯೆಹೋವನು ಕೊಡುವ ಸ್ವಾತಂತ್ರ್ಯ

“ನೀವು . . . ದೇಶದ ನಿವಾಸಿಗಳೆಲ್ಲರಿಗೂ ಬಿಡುಗಡೆಯಾಯಿತೆಂಬದಾಗಿ ಸಾರಬೇಕು.”—ಯಾಜ. 25:10.

ಗೀತೆ 136 ನಿನ್ನ ರಾಜ್ಯ ಬರಲಿ!

ಕಿರುನೋಟ *

1-2. (ಎ) ಯಾವ ಸಮಾರಂಭಗಳನ್ನು ಕೆಲವು ಜನರು ಆಚರಿಸುತ್ತಾರೆ? (“ ಜೂಬಿಲಿ ವರ್ಷ ಅಂದ್ರೆ ಏನು?” ಎಂಬ ಚೌಕ ನೋಡಿ.) (ಬಿ) ಲೂಕ 4:16-18 ರಲ್ಲಿ ಯೇಸು ಕ್ರಿಸ್ತನು ಏನು ಹೇಳಿದನು?

ಕೆಲವೊಂದು ದೇಶಗಳಲ್ಲಿ 50 ನೇ ವಾರ್ಷಿಕೋತ್ಸವದ ಸಮಾರಂಭಗಳನ್ನು ಅದ್ಧೂರಿಯಾಗಿ ಆಚರಿಸುತ್ತಾರೆ. ಆ ಸಮಾರಂಭಗಳು ಒಂದು ದಿನಾನೋ ಒಂದು ವಾರಾನೋ ಅಥವಾ ಕೆಲವು ವಾರಗಳ ವರೆಗೋ ನಡೆಯುತ್ತೆ. ಕೊನೆಗೊಂದು ದಿನ ಜನ್ರೂ ಅದನ್ನ ಮರೆತು ಬಿಡ್ತಾರೆ.

2 ಪ್ರಾಚೀನ ಇಸ್ರಾಯೇಲ್‌ನಲ್ಲೂ 50 ವರ್ಷಕ್ಕೊಮ್ಮೆ ಒಂದು ದೊಡ್ಡ ಸಮಾರಂಭ ಮಾಡುತ್ತಿದ್ರು. ಇದನ್ನು ಒಂದು ವರ್ಷ ಪೂರ್ತಿ ಆಚರಿಸುತ್ತಿದ್ರು. ಇದನ್ನೇ ಜೂಬಿಲಿ ಸಂವತ್ಸರ ಅಥವಾ ಜೂಬಿಲಿ ವರ್ಷ ಅಂತ ಕರೀತಿದ್ರು. ಜೂಬಿಲಿ ವರ್ಷ ಆಚರಿಸುತ್ತಿದ್ದದರಿಂದ ದಾಸರಾಗಿದ್ದ ಇಸ್ರಾಯೇಲ್ಯರಿಗೆ ಸ್ವಾತಂತ್ರ್ಯ ಸಿಗ್ತಿತ್ತು. ಇದ್ರ ಬಗ್ಗೆ ನಾವ್ಯಾಕೆ ತಿಳ್ಕೊಬೇಕು? ಯಾಕೆಂದ್ರೆ, ಈ ಆಚರಣೆಯಿಂದ ಯೆಹೋವನು ನಮಗೋಸ್ಕರ ಮಾಡಿರುವ ಒಂದು ಅದ್ಭುತ ಏರ್ಪಾಡಿನ ಬಗ್ಗೆ ಕಲೀಬಹುದು. ಈ ಅದ್ಭುತ ಏರ್ಪಾಡಿನಿಂದ ಈಗ್ಲೂ ನಾವು ಪ್ರಯೋಜನ ಪಡೆಯುತ್ತೇವೆ ಮತ್ತು ಮುಂದಕ್ಕೆ ಶಾಶ್ವತ ಸ್ವಾತಂತ್ರ್ಯ ಪಡೆಯಲಿಕ್ಕಿದ್ದೇವೆ. ಈ ಸ್ವಾತಂತ್ರ್ಯದ ಬಗ್ಗೆ ಯೇಸು ಮಾತಾಡಿದ್ದಾನೆ.ಲೂಕ 4:16-18 ಓದಿ.

ಜೂಬಿಲಿ ವರ್ಷದಂದು ಇಸ್ರಾಯೇಲಿನಲ್ಲಿ ಸಂತೋಷದ ವಾತಾವರಣ ಇರುತ್ತಿತ್ತು. ಯಾಕೆಂದ್ರೆ ದಾಸರಾಗಿದ್ದವರು ಆ ವರ್ಷ ತಮ್ಮ ಕುಟುಂಬಕ್ಕೆ ಹಿಂದಿರುಗುತ್ತಿದ್ದರು ಮತ್ತು ಅವ್ರು ಮಾರಿದ್ದ ಜಮೀನೂ ವಾಪಸ್‌ ಸಿಗ್ತಿತ್ತು (ಪ್ಯಾರ 3 ನೋಡಿ) *

3. ಯಾಜಕಕಾಂಡ 25:8-12 ರ ಪ್ರಕಾರ ಇಸ್ರಾಯೇಲ್ಯರು ಜೂಬಿಲಿ ವರ್ಷದ ಏರ್ಪಾಡಿನಿಂದ ಹೇಗೆ ಪ್ರಯೋಜನ ಪಡ್ಕೊಂಡ್ರು?

3 ಸ್ವಾತಂತ್ರ್ಯದ ಬಗ್ಗೆ ಯೇಸು ಹೇಳಿದ ಮಾತನ್ನು ಚೆನ್ನಾಗಿ ಅರ್ಥಮಾಡ್ಕೋಬೇಕಂದ್ರೆ ಮೊದ್ಲು, ದೇವರು ಹಿಂದಿನ ಕಾಲದಲ್ಲಿ ತನ್ನ ಜನರಿಗಾಗಿ ಮಾಡಿದ ಜೂಬಿಲಿ ಏರ್ಪಾಡಿನ ಬಗ್ಗೆ ತಿಳುಕೊಳ್ಳಬೇಕು. ಯೆಹೋವನು ಇಸ್ರಾಯೇಲ್ಯರಿಗೆ ಹೀಗೆ ಹೇಳಿದನು: “ನೀವು ಐವತ್ತನೆಯ ವರುಷವನ್ನು ದೇವರಿಗೆ ಮೀಸಲಾದ ವರುಷವೆಂದು ಭಾವಿಸಿ ಅದರಲ್ಲಿ ದೇಶದ ನಿವಾಸಿಗಳೆಲ್ಲರಿಗೂ ಬಿಡುಗಡೆಯಾಯಿತೆಂಬದಾಗಿ ಸಾರಬೇಕು. ಅದು ಜೂಬಿಲಿ ಸಂವತ್ಸರವಾದದರಿಂದ ನೀವೆಲ್ಲರು ನಿಮ್ಮ ನಿಮ್ಮ ಸ್ವಂತ ಭೂಮಿಗಳಿಗೂ ಸ್ವಜನರ ಬಳಿಗೂ ಹೋಗಿ ಇರಬಹುದು.” (ಯಾಜಕಕಾಂಡ 25:8-12 ಓದಿ.) ಇಸ್ರಾಯೇಲ್ಯರು ಪ್ರತಿವಾರ ಸಬ್ಬತ್ತನ್ನು ಆಚರಿಸಿದ್ರಿಂದ ಹೇಗೆ ಪ್ರಯೋಜನ ಪಡ್ಕೊಂಡ್ರು ಎಂಬುದನ್ನ ಹಿಂದಿನ ಲೇಖನದಲ್ಲಿ ನೋಡಿದ್ವಿ. ಹಾಗಾದ್ರೆ ಅವ್ರು ಜೂಬಿಲಿ ವರ್ಷವನ್ನು ಆಚರಿಸಿದ್ರಿಂದ ಹೇಗೆ ಪ್ರಯೋಜನ ಪಡ್ಕೊಂಡ್ರು? ಉದಾಹರಣೆಗೆ, 1) ಸಾಲದಲ್ಲಿ ಮುಳುಗಿರುವ ಒಬ್ಬ ಇಸ್ರಾಯೇಲ್ಯನು ಅದನ್ನು ತೀರಿಸ್ಲಿಕ್ಕೆ ಬೇರೆ ದಾರಿ ಇಲ್ದೆ ತನ್ನ ಜಮೀನನ್ನ ಮಾರಿದ್ದಾನೆ ಅಂತಿಟ್ಕೊಳ್ಳಿ. ಜೂಬಿಲಿ ವರ್ಷ ಬಂದಾಗ, ಅವ್ನು ಮಾರಿದ ಜಮೀನು ಅವ್ನಿಗೆ ವಾಪಸ್‌ ಸಿಗ್ತಿತ್ತು. ಹೀಗೆ ಆ ವ್ಯಕ್ತಿ ತನ್ನ ಸ್ವಂತ ಭೂಮಿಗೆ ಹೋಗಿ ಇರಬಹುದಿತ್ತು. ನಂತ್ರ ಆ ಭೂಮಿ ಅವ್ನ ಮಕ್ಕಳಿಗೆ ಸಿಗ್ತಿತ್ತು. 2) ಸಾಲದಲ್ಲಿ ಮುಳುಗಿರೋ ಆ ವ್ಯಕ್ತಿ ಸಾಲ ತೀರಿಸೋಕೋಸ್ಕರ ತನ್ನ ಮಕ್ಕಳಲ್ಲಿ ಒಬ್ಬನನ್ನು ಅಥವಾ ತನ್ನನ್ನು ದಾಸನಾಗಿ ಮಾರ್ಕೊಂಡು ಬಿಟ್ಟಿದ್ದಾನೆ ಅಂತಿಟ್ಕೊಳ್ಳಿ. ಜೂಬಿಲಿ ವರ್ಷ ಬಂದಾಗ ದಾಸನಾಗಿದ್ದವನಿಗೆ ಬಿಡುಗಡೆ ಆಗಿ ಅವನು ತನ್ನ ಸ್ವಜನರ ಬಳಿಗೆ ಅಥವಾ ತನ್ನ ಕುಟುಂಬದವ್ರ ಬಳಿಗೆ ಹೋಗುತ್ತಿದ್ನು. ಇದ್ರಿಂದಾಗಿ ಅವರಲ್ಲಿ ಯಾರೂ ಜೀವ್ನ ಪೂರ್ತಿ ಗುಲಾಮರಾಗಿ ಉಳೀತಿರ್ಲಿಲ್ಲ. ಯೆಹೋವನಿಗೆ ತನ್ನ ಜನ್ರ ಮೇಲೆ ಎಷ್ಟು ಪ್ರೀತಿ ಇತ್ತು ಅಂತ ಇದ್ರಿಂದ ಗೊತ್ತಾಗುತ್ತೆ.

4-5. ಇಸ್ರಾಯೇಲ್ಯರು ಆಚರಿಸುತ್ತಿದ್ದ ಜೂಬಿಲಿ ವರ್ಷದ ಬಗ್ಗೆ ನಾವ್ಯಾಕೆ ತಿಳುಕೊಳ್ಳಬೇಕು?

4 ಜೂಬಿಲಿ ವರ್ಷದಿಂದ ಇನ್ನೂ ಯಾವ ಪ್ರಯೋಜನ ಸಿಗ್ತಿತ್ತು? “ಯೆಹೋವನು ತಾನು ನಿಮಗೆ ಸ್ವದೇಶವಾಗಿ ಕೊಡುವ ದೇಶದಲ್ಲಿ ನಿಮ್ಮನ್ನು ಅಭಿವೃದ್ಧಿಪಡಿಸುವದರಿಂದ ನಿಮ್ಮಲ್ಲಿ ಬಡವರೇ ಇರುವದಿಲ್ಲ” ಎಂದು ಮೋಶೆಯ ಮೂಲಕ ಯೆಹೋವನು ಹೇಳಿದ್ದನು. (ಧರ್ಮೋ. 15:4) ಆದ್ರೆ ಇವತ್ತು ನಡೀತಿರೋದೆ ಬೇರೆ. ಶ್ರೀಮಂತ್ರು ಇನ್ನೂ ಶ್ರೀಮಂತರಾಗ್ತಾನೇ ಇದ್ದಾರೆ, ಬಡವ್ರು ಕಡು ಬಡವರಾಗ್ತಾ ಹೋಗ್ತಿದ್ದಾರೆ!

5 ಕ್ರೈಸ್ತರಾದ ನಾವು ಮೋಶೆಯ ಧರ್ಮಶಾಸ್ತ್ರವನ್ನು ಪಾಲಿಸುವ ಅಗತ್ಯ ಇಲ್ಲ. ಹಾಗಾಗಿ ದಾಸತ್ವದಲ್ಲಿದ್ದ ಜನ್ರನ್ನು ಬಿಡುಗಡೆ ಮಾಡಿದ, ಸಾಲ ಮನ್ನಾ ಮಾಡಿದ ಮತ್ತು ಕುಟುಂಬದ ಆಸ್ತಿಯನ್ನು ವಾಪಸ್‌ ಪಡ್ಕೊಳ್ಳೋಕೆ ಸಹಾಯ ಮಾಡಿದ ಜೂಬಿಲಿ ವರ್ಷದ ನಿಯಮವನ್ನು ನಾವು ಪಾಲಿಸಲ್ಲ. (ರೋಮ. 7:4; 10:4; ಎಫೆ. 2:15) ಆದ್ರೂ ನಾವು ಜೂಬಿಲಿ ವರ್ಷದ ಬಗ್ಗೆ ತಿಳ್ಕೊಳ್ಳೋದು ಪ್ರಾಮುಖ್ಯ. ಯಾಕೆಂದ್ರೆ ಇದು, ಯೆಹೋವನು ನಮ್ಮನ್ನು ಪಾಪದಿಂದ ಬಿಡಿಸಲು ಮಾಡಿರುವ ಏರ್ಪಾಡನ್ನು ನೆನಪಿಸುತ್ತದೆ.

ಯೇಸು ಸ್ವಾತಂತ್ರ್ಯದ ಬಗ್ಗೆ ಮಾತಾಡಿದನು

6. ನಮ್ಮೆಲ್ರಿಗೂ ಯಾವುದ್ರಿಂದ ಬಿಡುಗಡೆ ಬೇಕು?

6 ಒಂದು ರೀತಿಯಲ್ಲಿ ನಾವೆಲ್ರೂ ದಾಸರಾಗಿದ್ದೇವೆ. ಯಾವ್ದಕ್ಕೆ? ಪಾಪಕ್ಕೆ. ಹಾಗಾಗಿ ನಮ್ಮೆಲ್ರಿಗೂ ಅದ್ರಿಂದ ಬಿಡುಗಡೆ ಬೇಕು. ಯಾಕಂದ್ರೆ, ಈ ಪಾಪದಿಂದಾಗಿ ನಮ್ಗೆ ಕಾಯಿಲೆ ಬರ್ತಿದೆ, ವಯಸ್ಸಾಗ್ತಿದೆ, ಸಾವೂ ಬರ್ತಿದೆ. ಇದು ನಿಜ ಅಲ್ವಾ? ಅನೇಕರು ತಮ್ಮನ್ನ ತಾವೇ ಕನ್ನಡಿಯಲ್ಲಿ ನೋಡ್ಕೊಂಡಾಗ, ಕಾಯಿಲೆ ಬಂದು ಡಾಕ್ಟರ್‌ ಹತ್ರ ಹೋಗ್ಬೇಕಾದಾಗ ಈ ಕಹಿ ಸತ್ಯವನ್ನು ಒಪ್ಪಿಕೊಳ್ಳಲೇಬೇಕಾಗುತ್ತೆ. ಪಾಪ ನಮ್ಮಲ್ಲಿರೋದ್ರಿಂದ ನಾವು ಕೆಲವೊಮ್ಮೆ ತಪ್ಪನ್ನೂ ಮಾಡಿಬಿಡ್ತೇವೆ, ಇದ್ರಿಂದ ನಮಗೆ ಬೇಜಾರಾಗುತ್ತೆ. ಇದನ್ನೇ ಅಪೊಸ್ತಲ ಪೌಲನೂ ಒಪ್ಕೊಂಡನು. ಆತನು ಹೇಳಿದ್ದು: ‘ನನ್ನ ಅಂಗಗಳಲ್ಲಿರುವ ಪಾಪದ ನಿಯಮಕ್ಕೆ ನಾನು ಸೆರೆಯಾಳಾಗಿದ್ದೇನೆ ಅಥವಾ ದಾಸನಾಗಿದ್ದೇನೆ. ನಾನು ಎಂಥ ದುರವಸ್ಥೆಯಲ್ಲಿ ಬಿದ್ದಿರುವ ಮನುಷ್ಯನು! ಈ ಮರಣಕ್ಕೆ ಒಳಗಾಗುತ್ತಿರುವ ದೇಹದಿಂದ ನನ್ನನ್ನು ರಕ್ಷಿಸುವವರು ಯಾರು?’—ರೋಮ. 7:23, 24.

7. ಪ್ರವಾದಿ ಯೆಶಾಯನು ಬಿಡುಗಡೆ ಬಗ್ಗೆ ಏನು ಹೇಳಿದನು?

7 ಸಂತೋಷದ ವಿಷ್ಯ ಏನಂದ್ರೆ, ಯೆಹೋವ ದೇವ್ರು ನಮ್ಮನ್ನ ಪಾಪದಿಂದ ಬಿಡುಗಡೆ ಮಾಡಲಿಕ್ಕಾಗಿ ಒಂದು ಏರ್ಪಾಡು ಮಾಡಿದ್ದಾನೆ. ಆ ಬಿಡುಗಡೆ ನಮ್ಗೆ ಯೇಸುವಿನಿಂದ ಸಿಗ್ತದೆ. ಯೇಸು ಭೂಮಿಗೆ ಬರುವ 700 ವರ್ಷಕ್ಕಿಂತ ಮುಂಚೆ, ಪ್ರವಾದಿ ಯೆಶಾಯನು ಮುಂದೆ ಸಿಗಲಿಕ್ಕಿದ್ದ ಒಂದು ಬಿಡುಗಡೆಯ ಬಗ್ಗೆ ತಿಳಿಸಿದನು. ಆ ಬಿಡುಗಡೆಯು ಇಸ್ರಾಯೇಲ್ಯರಿಗೆ ಜೂಬಿಲಿ ವರ್ಷದಲ್ಲಿ ಸಿಗುತ್ತಿದ್ದ ಬಿಡುಗಡೆಗಿಂತ ಅತ್ಯುತ್ತಮವಾಗಿತ್ತು. ಅದ್ರ ಬಗ್ಗೆ ಆತನು ಹೀಗೆ ಬರೆದ್ನು: “ಕರ್ತನಾದ ಯೆಹೋವನ ಆತ್ಮವು ನನ್ನ ಮೇಲೆ ಅದೆ, ಆತನು ನನ್ನನ್ನು ಬಡವರಿಗೆ ಶುಭವರ್ತಮಾನವನ್ನು ಸಾರುವದಕ್ಕೆ ಅಭಿಷೇಕಿಸಿದನು; ಮನಮುರಿದವರನ್ನು ಕಟ್ಟಿ ವಾಸಿಮಾಡುವದಕ್ಕೂ ಸೆರೆಯವರಿಗೆ ಬಿಡುಗಡೆಯಾಗುವದನ್ನು . . . ಪ್ರಸಿದ್ಧಿಪಡಿಸುವದಕ್ಕೂ ಆತನು ನನ್ನನ್ನು ಕಳುಹಿಸಿದ್ದಾನೆ.” (ಯೆಶಾ. 61:1, 3) ಈ ಪ್ರವಾದನೆಯನ್ನು ಯಾರು ನೆರವೇರಿಸಲಿಕ್ಕಿದ್ದರು?

8. ಬಿಡುಗಡೆ ಬಗ್ಗೆ ಯೆಶಾಯನು ತಿಳಿಸಿದ ಪ್ರವಾದನೆಯನ್ನು ಯಾರು ನೆರವೇರಿಸಲಿದ್ದರು?

8 ಯೇಸು ಸಾರುವ ಕೆಲಸ ಆರಂಭಿಸಿದಾಗ ಬಿಡುಗಡೆ ಬಗ್ಗೆ ಇದ್ದ ಈ ಪ್ರವಾದನೆ ನೆರವೇರಲಿಕ್ಕೆ ಶುರುವಾಯ್ತು. ಯೇಸು ತನ್ನ ಊರಾದ ನಜರೇತಿನ ಸಭಾಮಂದಿರಕ್ಕೆ ಹೋದಾಗ, ಅಲ್ಲಿ ಸೇರಿಬಂದಿದ್ದ ಯೆಹೂದ್ಯರ ಮುಂದೆ ಯೆಶಾಯನು ತಿಳಿಸಿದ ಅದೇ ಮಾತುಗಳನ್ನು ಓದಿದನು. “ಯೆಹೋವನ ಆತ್ಮವು ನನ್ನ ಮೇಲೆ ಇದೆ. ಆತನು ನನ್ನನ್ನು ಬಡವರಿಗೆ ಸುವಾರ್ತೆಯನ್ನು ಪ್ರಕಟಿಸುವುದಕ್ಕಾಗಿ ಅಭಿಷೇಕಿಸಿದನು; ಬಂದಿಗಳಿಗೆ ಬಿಡುಗಡೆಯನ್ನು ಸಾರುವುದಕ್ಕೂ ಕುರುಡರಿಗೆ ದೃಷ್ಟಿಯನ್ನು ಕೊಡುವುದಕ್ಕೂ ಜಜ್ಜಲ್ಪಟ್ಟವರನ್ನು ಬಿಡುಗಡೆಮಾಡಿ ಕಳುಹಿಸುವುದಕ್ಕೂ ಯೆಹೋವನ ಸ್ವೀಕೃತ ವರ್ಷವನ್ನು ಸಾರುವುದಕ್ಕೂ ನನ್ನನ್ನು ಕಳುಹಿಸಿದ್ದಾನೆ” ಎಂಬ ಯೆಶಾಯನ ಮಾತುಗಳನ್ನು ತನಗೇ ಅನ್ವಯಿಸಿ ಹೇಳಿದನು. (ಲೂಕ 4:16-19, 21) ಯೇಸು ಹೇಗೆ ಈ ಪ್ರವಾದನೆ ನೆರವೇರಿಸಿದನು?

ಮೊದಲು ಯಾರಿಗೆ ಬಿಡುಗಡೆ ಸಿಗುತ್ತದೆ?

ನಜರೇತಿನ ಸಭಾಮಂದಿರದಲ್ಲಿ ಯೇಸು ಬಿಡುಗಡೆಯ ಬಗ್ಗೆ ಓದಿ ಹೇಳ್ತಿದ್ದಾನೆ (ಪ್ಯಾರ 8-9 ನೋಡಿ)

9. ಯೇಸುವಿನ ಸಮಯದಲ್ಲಿದ್ದ ಅನೇಕ ಜನ್ರು ಯಾವುದರಿಂದ ಬಿಡುಗಡೆ ಸಿಗ್ಬೇಕು ಅಂತ ಕಾಯ್ತಿದ್ರು?

9 ಯೆಶಾಯನು ತಿಳಿಸಿದ ಮತ್ತು ಯೇಸು ಓದಿದ ಪ್ರವಾದನೆಯಲ್ಲಿದ್ದ ಬಿಡುಗಡೆ ಅಥವಾ ಸ್ವಾತಂತ್ರ್ಯವು ಜನರಿಗೆ ಒಂದನೇ ಶತಮಾನದಲ್ಲಿ ಸಿಗಲಿಕ್ಕೆ ಶುರುವಾಯ್ತು. ಇದನ್ನ ಹೇಗ್‌ ನಂಬಬಹುದು? ಆ ಪ್ರವಾದನೆ ಓದಿದ್‌ ಮೇಲೆ ಸ್ವತಃ ಯೇಸುನೇ ಹೀಗೆ ಹೇಳಿದ್ನು: “ಈಗಷ್ಟೇ ನೀವು ಕೇಳಿಸಿಕೊಂಡ ಈ ಶಾಸ್ತ್ರವಚನವು ಇಂದು ನೆರವೇರಿತು.” (ಲೂಕ 4:21) ಯೇಸು ಓದಿದ್ದನ್ನು ಕೇಳಿಸಿಕೊಂಡ ಅನೇಕರು ಬಹುಶಃ ರಾಜಕೀಯದಲ್ಲಿ ಬದಲಾವಣೆ ಆಗಬೇಕೆಂದು, ರೋಮನ್ನರ ಆಳ್ವಿಕೆಯಿಂದ ಮುಕ್ತಿ ಸಿಗ್ಬೇಕೆಂದು ಕಾಯುತ್ತಿದ್ರು. ಅವರಿಗೆ ಯೇಸುವಿನ ಇಬ್ಬರು ಶಿಷ್ಯರ ತರನೇ ಅನಿಸಿದ್ದಿರಬಹುದು. ಒಂದು ಸಂದರ್ಭದಲ್ಲಿ ಆ ಶಿಷ್ಯರು ಯೇಸುವಿನ ಬಗ್ಗೆ ಹೀಗೆ ಹೇಳಿದ್ರು: “ಈ ಮನುಷ್ಯನು ಇಸ್ರಾಯೇಲ್ಯರನ್ನು ವಿಮೋಚಿಸಲಿಕ್ಕಿದ್ದವನು ಎಂದು ನಾವು ನಿರೀಕ್ಷಿಸಿದ್ದೆವು.” (ಲೂಕ 24:13, 21) ಆದ್ರೆ ಯೇಸು ಯಾವತ್ತೂ ತನ್ನ ಶಿಷ್ಯರಿಗೆ, ರೋಮನ್ನರ ದಬ್ಬಾಳಿಕೆ ವಿರುದ್ಧ ದಂಗೆ ಏಳಿ ಅಂತ ಉತ್ತೇಜಿಸ್ಲಿಲ್ಲ. ಬದಲಿಗೆ, “ಕೈಸರನದನ್ನು ಕೈಸರನಿಗೆ ಕೊಡಿರಿ” ಎಂದು ಅವರನ್ನು ಉತ್ತೇಜಿಸಿದನು. (ಮತ್ತಾ. 22:21) ಹಾಗಾದ್ರೆ, ಆಗಿನ ಸಮಯದಲ್ಲಿದ್ದ ಜನ್ರನ್ನು ಯೇಸು ಹೇಗೆ ಬಿಡುಗಡೆ ಮಾಡಿದನು?

10. ಯೇಸು ಜನ್ರಿಗೆ ಯಾವುದರಿಂದ ಬಿಡುಗಡೆ ಪಡೆಯಲು ಸಹಾಯ ಮಾಡಿದ್ನು?

10 ಯೇಸು ಜನ್ರಿಗೆ, ಎರಡು ವಿಷಯಗಳಿಂದ ಬಿಡುಗಡೆ ಪಡೆಯಲಿಕ್ಕೆ ಸಹಾಯ ಮಾಡಿದನು. ಮೊದಲ್ನೇದಾಗಿ ಯೇಸು ಅವರಿಗೆ, ಧಾರ್ಮಿಕ ಮುಖಂಡರು ಬೋಧಿಸುತ್ತಿದ್ದ ಸುಳ್ಳು ಬೋಧನೆಗಳಿಂದ ಬಿಡುಗಡೆ ಪಡೆಯಲು ಸಹಾಯ ಮಾಡಿದನು. ಅನೇಕ ಯೆಹೂದ್ಯರಿಗೆ ಸಂಪ್ರದಾಯಗಳನ್ನು ಮತ್ತು ಮೂಢನಂಬಿಕೆಗಳನ್ನು ಪಾಲಿಸಬೇಕೆಂಬ ಒತ್ತಡ ಇತ್ತು. (ಮತ್ತಾ. 5:31-37; 15:1-11) ಜನ್ರಿಗೆ ದೇವ್ರ ಬಗ್ಗೆ ಕಲಿಸ್ಬೇಕಾಗಿದ್ದವ್ರೇ ಒಂದರ್ಥದಲ್ಲಿ ಕುರುಡರ ತರ ಇದ್ರು. ಯಾಕೆಂದ್ರೆ, ತಮ್‌ ಕಣ್ಣ ಮುಂದೆ ಇದ್ದ ಮೆಸ್ಸೀಯನನ್ನು, ಆತನು ಬೋಧಿಸಿದ ಸತ್ಯವನ್ನು ಸ್ವೀಕರಿಸ್ದೇ ತಿರಸ್ಕರಿಸಿಬಿಟ್ರು. ಇದ್ರಿಂದಾಗಿ ಅವ್ರ ಪಾಪಕ್ಕೆ ಕ್ಷಮಾಪಣೆ ಸಿಗ್ಲಿಲ್ಲ. (ಯೋಹಾ. 9:1, 14-16, 35-41) ಆದ್ರೆ ಯೇಸು ತಾನು ಕಲಿಸಿದ ಸತ್ಯದಿಂದ ಮತ್ತು ತನ್ನ ಒಳ್ಳೇ ಮಾದರಿಯಿಂದ ದೀನ ಜನ್ರು ಹೇಗೆ ಸುಳ್ಳು ಬೋಧನೆಗಳಿಂದ ಬಿಡುಗಡೆ ಪಡೆಯಬಹುದು ಅನ್ನೋದನ್ನ ತೋರಿಸಿಕೊಟ್ಟನು.—ಮಾರ್ಕ 1:22; 2:23–3:5.

11. ಜನ್ರು ಇನ್ನೂ ಯಾವುದ್ರಿಂದ ಬಿಡುಗಡೆ ಪಡೆಯಲು ಯೇಸು ದಾರಿ ತೆರೆದನು?

11 ಎರಡನೇದಾಗಿ, ಎಲ್ಲಾ ಮಾನವರು ಪಾಪದ ದಾಸತ್ವದಿಂದ ಬಿಡುಗಡೆ ಪಡೆಯಲು ಯೇಸು ದಾರಿ ತೆರೆದನು. ಆತನು ತನ್ನ ಜೀವವನ್ನು ಯಜ್ಞವಾಗಿ ಕೊಟ್ಟಿದ್ರಿಂದಲೇ ದೇವರಿಗೆ ಜನ್ರ ಪಾಪಗಳನ್ನ ಕ್ಷಮಿಸೋಕೆ ಆಧಾರ ಸಿಗ್ತು. ಆದ್ರೆ, ಜನ್ರು ತಮ್ಮ ಪಾಪಗಳಿಗೆ ಕ್ಷಮಾಪಣೆ ಪಡ್ಕೊಬೇಕಂದ್ರೆ, ಯೇಸು ಕೊಟ್ಟ ಯಜ್ಞದ ಮೇಲೆ ನಂಬಿಕೆ ಇಟ್ಟು ಅದನ್ನು ತಮ್ಮ ಕ್ರಿಯೆಯಲ್ಲಿ ತೋರಿಸಬೇಕು. (ಇಬ್ರಿ. 10:12-18) ಯೇಸು ಹೀಗೆ ಹೇಳಿದನು: “ಮಗನು ನಿಮ್ಮನ್ನು ಬಿಡುಗಡೆಮಾಡಿದರೆ ನಿಮಗೆ ನಿಜವಾಗಿಯೂ ಬಿಡುಗಡೆಯಾಗುವುದು.” (ಯೋಹಾ. 8:36) ಆ ಬಿಡುಗಡೆ ಇಸ್ರಾಯೇಲ್ಯರಿಗೆ ಜೂಬಿಲಿ ವರ್ಷದಲ್ಲಿ ಸಿಗುತ್ತಿದ್ದ ಬಿಡುಗಡೆಗಿಂತ ಎಷ್ಟೋ ಉತ್ತಮವಾಗಿತ್ತು. ಜೂಬಿಲಿ ವರ್ಷದಲ್ಲಿ ಬಿಡುಗಡೆಯಾದಂಥ ವ್ಯಕ್ತಿ, ಪುನಃ ದಾಸನಾಗುವ ಸಾಧ್ಯತೆಯಿತ್ತು ಮತ್ತು ಕೊನೆಗೆ ಅವ್ನು ಸತ್ತು ಹೋಗುತ್ತಿದ್ನು. ಆದ್ರೆ ಯೇಸು ಕೊಡುವ ಬಿಡುಗಡೆ ಶಾಶ್ವತವಾಗಿ ಇರುತ್ತದೆ.

12. ಯೇಸು ತಿಳಿಸಿದ ಬಿಡುಗಡೆಯಿಂದ ಮೊದಲು ಯಾರು ಪ್ರಯೋಜನ ಪಡೆದಿದ್ದಾರೆ?

12 ಕ್ರಿ. ಶ. 33 ರ ಪಂಚಾಶತ್ತಮ ದಿನದಂದು, ಯೆಹೋವನು ಅಪೊಸ್ತಲರನ್ನು ಮತ್ತು ಇನ್ನಿತರ ನಂಬಿಗಸ್ತ ಸ್ತ್ರೀ-ಪುರುಷರನ್ನು ಪವಿತ್ರಾತ್ಮದಿಂದ ಅಭಿಷೇಕಿಸಿದನು. ಹೀಗೆ ಅವರನ್ನು ಯೆಹೋವನು ತನ್ನ ಪುತ್ರರನ್ನಾಗಿ ದತ್ತು ತಗೊಂಡನು. ಯಾಕೆ? ಮುಂದೆ ಪುನರುತ್ಥಾನವಾಗಿ ಅವರು ಸ್ವರ್ಗದಲ್ಲಿ ಯೇಸುವಿನ ಜೊತೆ ಆಳಲಿಕ್ಕಾಗಿ. (ರೋಮ. 8:2, 15-17) ಯೇಸು ನಜರೇತಿನ ಸಭಾಮಂದಿರದಲ್ಲಿ ಮಾತಾಡಿದ ಬಿಡುಗಡೆಯ ಪ್ರಯೋಜನ ಪಡೆಯುವವರಲ್ಲಿ ಇವರೇ ಮೊದಲಿಗರು. ಈ ಸ್ತ್ರೀ-ಪುರುಷರಿಗೆ ಧಾರ್ಮಿಕ ಮುಖಂಡರು ಬೋಧಿಸುತ್ತಿದ್ದ ತಪ್ಪಾದ ಬೋಧನೆಗಳಿಂದ ಮತ್ತು ದೇವರ ವಾಕ್ಯದಲ್ಲಿಲ್ಲದ ಸಂಪ್ರದಾಯಗಳಿಂದ ಬಿಡುಗಡೆ ಸಿಕ್ಕಿದೆ. ಮಾತ್ರವಲ್ಲ, ಆದಾಮನ ಪಾಪದಿಂದಾದ ಪರಿಣಾಮಗಳು ಅವರ ಮೇಲಿಲ್ಲ ಎಂದು ದೇವರು ಪರಿಗಣಿಸಿದ್ದಾನೆ. ಕ್ರಿ. ಶ. 33 ರಲ್ಲಿ ಯೇಸು ಕ್ರಿಸ್ತನ ಶಿಷ್ಯರನ್ನು ಅಭಿಷೇಕಿಸಿದಾಗ ಆರಂಭವಾದ ಜೂಬಿಲಿ ಅಥವಾ ಬಿಡುಗಡೆಯು, ಯೇಸುವಿನ ಸಾವಿರ ವರ್ಷದಾಳ್ವಿಕೆ ಮುಗಿಯುವಾಗ ಪೂರ್ಣವಾಗುತ್ತದೆ. ಆ ಸಾವಿರ ವರ್ಷದ ಆಳ್ವಿಕೆ ಮುಗಿಯುವಷ್ಟರಲ್ಲಿ, ಯಾವೆಲ್ಲ ಒಳ್ಳೇ ವಿಷ್ಯಗಳು ನಡೆದಿರುತ್ತವೆ?

ಬಿಡುಗಡೆ ಪಡೆಯಲಿರುವ ಲಕ್ಷಾಂತರ ಜನರು

13-14. ಯೇಸು ತಿಳಿಸಿದ ಬಿಡುಗಡೆಯಿಂದ ಅಭಿಷಿಕ್ತ ಕ್ರೈಸ್ತರಿಗಲ್ಲದೆ ಬೇರೆ ಯಾರಿಗೆ ಪ್ರಯೋಜನ ಸಿಗ್ತದೆ?

13 ಇಂದು ಲೋಕವ್ಯಾಪಕವಾಗಿರುವ ಲಕ್ಷಾಂತರ ಪ್ರಾಮಾಣಿಕ ಜನರು ಅಥವಾ ಸತ್ಯಾರಾಧಕರು ಬೇರೆ ಕುರಿಗಳಾಗಿದ್ದಾರೆ. (ಯೋಹಾ. 10:16) ಅವರು ಸ್ವರ್ಗದಲ್ಲಿ ಯೇಸುವಿನ ಜೊತೆ ಆಳಲ್ಲ. ಬದಲಿಗೆ, ಭೂಮಿಯಲ್ಲಿ ಶಾಶ್ವತವಾಗಿ ಬದುಕುವ ನಿರೀಕ್ಷೆ ಅವ್ರಿಗಿದೆ ಅಂತ ಬೈಬಲ್‌ ಹೇಳುತ್ತೆ. ನಿಮ್ಗೂ ಇದೇ ನಿರೀಕ್ಷೆ ಇದ್ಯಾ?

14 ಹಾಗಾದ್ರೆ, ನಿಮ್ಗೆ ಸಹ ಅಭಿಷಿಕ್ತರಿಗೆ ಸಿಗುವ ಕೆಲವು ಪ್ರಯೋಜನಗಳು ಸಿಗ್ತವೆ. ಯೇಸುವಿನ ಯಜ್ಞದಲ್ಲಿ ನಂಬಿಕೆ ಇಡೋದಾದ್ರೆ, ನಿಮ್ಮ ಪಾಪಗಳಿಗೆ ಕ್ಷಮಾಪಣೆ ಸಿಗ್ತದೆ. ಇದ್ರಿಂದ ನೀವು ದೇವರ ಮೆಚ್ಚಿಕೆಯನ್ನು ಪಡಿತೀರಿ ಮತ್ತು ನಿಮ್ಗೆ ಒಳ್ಳೇ ಮನಸ್ಸಾಕ್ಷಿ, ನೆಮ್ಮದಿ ಇರುತ್ತದೆ. (ಎಫೆ. 1:7; ಪ್ರಕ. 7:14, 15) ಅಷ್ಟೇ ಅಲ್ಲ, ನಿಮ್ಗೆ ಈಗಾಗ್ಲೇ ಸುಳ್ಳು ಬೋಧನೆಗಳಿಂದ ಬಿಡುಗಡೆ ಸಿಕ್ಕಿದೆ. ಇದ್ರ ಬಗ್ಗೆ ಯೇಸು ಹೀಗೆ ಹೇಳಿದ್ನು: “ಸತ್ಯವನ್ನು ತಿಳಿದುಕೊಳ್ಳುವಿರಿ ಮತ್ತು ಸತ್ಯವು ನಿಮ್ಮನ್ನು ಬಿಡುಗಡೆಮಾಡುವುದು.” (ಯೋಹಾ. 8:32) ಈ ಬಿಡುಗಡೆ ಸಿಕ್ಕಿರೋದಕ್ಕೆ ನಿಮ್ಗೆ ಸಂತೋಷ ಆಗಲ್ವಾ?

15. ಯಾವ ಸ್ವಾತಂತ್ರ್ಯ ಮತ್ತು ಆಶೀರ್ವಾದಗಳು ನಮ್ಗೆ ಮುಂದೆ ಸಿಗ್ಲಿಕ್ಕಿವೆ?

15 ಮುಂದೆ ನಿಮ್ಗೆ ಇನ್ನೂ ಹೆಚ್ಚಿನ ಸ್ವಾತಂತ್ರ್ಯ ಸಿಗ್ಲಿಕ್ಕಿದೆ. ಬಲು ಬೇಗನೆ ಯೇಸು ಸುಳ್ಳು ಧರ್ಮಗಳನ್ನ, ಈಗ ಇರುವ ಸರ್ಕಾರಗಳನ್ನ ನಾಶಮಾಡ್ಲಿಕ್ಕಿದ್ದಾನೆ. ಆಗ ದೇವ್ರು ತನ್ನನ್ನು ಆರಾಧನೆ ಮಾಡುವ ‘ಮಹಾ ಸಮೂಹವನ್ನು’ ಸಂರಕ್ಷಿಸುತ್ತಾನೆ. ಅವ್ರು ಭೂಮಿಯಲ್ಲಿ ಯೆಹೋವನ ಆಶೀರ್ವಾದಗಳನ್ನು ಅನುಭವಿಸುತ್ತಾ ಸಂತೋಷವಾಗಿರ್ತಾರೆ ಮತ್ತು ಆಗ ಭೂಮಿ ಸುಂದರ ತೋಟದಂತಾಗುತ್ತೆ. (ಪ್ರಕ. 7:9, 14) ತುಂಬ ಜನ್ರಿಗೆ ಪುನರುತ್ಥಾನ ಆಗುತ್ತೆ ಮತ್ತು ಅವ್ರಿಗೆ ಆದಾಮನಿಂದ ಬಂದ ಪಾಪದ ಪರಿಣಾಮಗಳಿಂದ ಬಿಡುಗಡೆ ಪಡೆಯುವ ಅವಕಾಶ ಸಿಗುತ್ತೆ.—ಅ. ಕಾ. 24:15.

16. ಮಾನವರಿಗೆ ಯಾವ ಅದ್ಭುತ ಸ್ವಾತಂತ್ರ್ಯ ಸಿಗಲಿದೆ?

16 ಸಾವಿರ ವರ್ಷದ ಆಳ್ವಿಕೆಯ ಸಮಯದಲ್ಲಿ ಯೇಸು ಮತ್ತು ಆತನ ಸಹರಾಜರು ಎಲ್ಲಾ ಮಾನವರಿಗೆ ಪರಿಪೂರ್ಣ ಆರೋಗ್ಯ ಮತ್ತು ಯೆಹೋವನೊಂದಿಗೆ ಒಂದು ಒಳ್ಳೇ ಸಂಬಂಧವನ್ನು ಪಡಕೊಳ್ಳಲು ಸಹಾಯ ಮಾಡ್ತಾರೆ. ಇದ್ರಿಂದಾಗಿ ಭೂಮಿಯಲ್ಲಿ ಯೆಹೋವನಿಗೆ ನಿಷ್ಠರಾಗಿ ಆರಾಧನೆ ಮಾಡುವವರೆಲ್ರೂ ಪಾಪದಿಂದ ಮುಕ್ತಿ ಪಡೆದು ಪರಿಪೂರ್ಣರಾಗ್ತಾರೆ. ಹೀಗೆ ಅವರಿಗೆ ಬಿಡುಗಡೆ ಸಿಗುತ್ತೆ ಮತ್ತು ತಾವು ಕಳಕೊಂಡಿದ್ದನ್ನು ಪುನಃ ಪಡೀತಾರೆ. ಆದ್ರಿಂದ ಇದು ಇಸ್ರಾಯೇಲ್ಯರು ಆಚರಿಸುತ್ತಿದ್ದ ಜೂಬಿಲಿ ವರ್ಷದ ತರನೇ ಇರುತ್ತೆ.

ಹೊಸ ಲೋಕದಲ್ಲಿ ನಾವು ಕೆಲಸ ಮಾಡುತ್ತಾ ವಿಶ್ರಾಂತಿ ಪಡೆಯುತ್ತಾ ಸಂತೋಷವಾಗಿ ಇರುತ್ತೇವೆ (ಪ್ಯಾರ 17 ನೋಡಿ)

17. ಯೆಶಾಯ 65:21-23 ರ ಪ್ರಕಾರ ಮುಂದೆ ದೇವ ಜನ್ರ ಜೀವ್ನ ಹೇಗಿರುತ್ತೆ? (ಮುಖಪುಟ ಚಿತ್ರ ನೋಡಿ.)

17 ಆಗ ಈ ಭೂಮಿ ಮೇಲೆ ಜೀವ್ನ ಹೇಗಿರುತ್ತೆ ಅಂತ ಯೆಶಾಯ 65:21-23 ರಲ್ಲಿರೋ ಪ್ರವಾದನೆ ತಿಳಿಸುತ್ತೆ. (ಓದಿ.) ಪರದೈಸಲ್ಲಿ ಕೆಲ್ಸಾನೇ ಇರಲ್ಲ, ಆರಾಮಾಗಿ ಇರಬಹುದು ಅಂತ ಕೆಲವು ಜನ್ರು ನೆನಸ್ತಾರೆ. ಆದ್ರೆ ಜನ್ರಿಗೆ ತೃಪ್ತಿ ಕೊಡುವಂಥ ಕೆಲ್ಸಗಳು ಇರುತ್ತೆ ಅಂತ ಬೈಬಲ್‌ ಹೇಳುತ್ತೆ. ಸಾವಿರ ವರ್ಷದ ಆಳ್ವಿಕೆ ಮುಗಿದಾಗ, ‘ಸೃಷ್ಟಿಯು ಸಹ ನಾಶದ ದಾಸತ್ವದಿಂದ ಬಿಡುಗಡೆಯಾಗಿ ದೇವರ ಮಕ್ಕಳ ಮಹಿಮಾಭರಿತ ಸ್ವಾತಂತ್ರ್ಯವನ್ನು ಹೊಂದಿರುತ್ತದೆ.’—ರೋಮ. 8:21.

18. ಹೊಸ ಲೋಕದಲ್ಲಿ ನಾವು ಸಂತೋಷವಾಗಿ ಇರ್ತೇವೆ ಅಂತ ಹೇಗೆ ಹೇಳಬಹುದು?

18 ಹಿಂದಿನ ಕಾಲದಲ್ಲಿ, ಇಸ್ರಾಯೇಲ್ಯರು ತನ್ನ ಸೇವೆಗೆ ಗಮನ ಕೊಡಬೇಕಂತ ಯೆಹೋವನು ಸಬ್ಬತ್‌ ಏರ್ಪಾಡನ್ನು ಮಾಡಿದ್ನು. ಅದೇ ರೀತಿ ಸಾವಿರ ವರ್ಷದ ಆಳ್ವಿಕೆಯ ಸಮಯದಲ್ಲೂ ನಮ್ಗೆ ದೇವರ ಸೇವೆ ಮಾಡ್ಲಿಕ್ಕಿರುತ್ತೆ. ಅದಕ್ಕೆ ಅಂತ ಒಂದು ಸಮಯಾನೂ ಇರುತ್ತೆ. ನಾವು ಸಂತೋಷವಾಗಿ ಇರಬೇಕಂದ್ರೆ ದೇವ್ರ ಆರಾಧನೆ ತುಂಬ ಮುಖ್ಯ. ಈಗ ಮಾತ್ರ ಅಲ್ಲ, ಹೊಸ ಲೋಕದಲ್ಲೂ ಅದು ಅಷ್ಟೇ ಮುಖ್ಯ. ಯೇಸುವಿನ ಸಾವಿರ ವರ್ಷದ ಆಳ್ವಿಕೆಯ ಸಮಯದಲ್ಲಿ ತೃಪ್ತಿ ಸಿಗೋ ಕೆಲ್ಸ ಇರೋದ್ರಿಂದ ಮತ್ತು ಯೆಹೋವನನ್ನು ಆರಾಧಿಸೋದ್ರಿಂದ ನಂಬಿಗಸ್ತರಾಗಿರುವ ಎಲ್ಲಾ ಮಾನವರು ಸಂತೋಷವಾಗಿರ್ತಾರೆ.

ಗೀತೆ 129 ನಮ್ಮ ನಿರೀಕ್ಷೆಯನ್ನು ದೃಢವಾಗಿ ಹಿಡಿದುಕೊಳ್ಳುವುದು

^ ಪ್ಯಾರ. 5 ಪ್ರಾಚೀನ ಇಸ್ರಾಯೇಲ್‌ನಲ್ಲಿ ಜನ್ರು ಸ್ವಾತಂತ್ರ್ಯ ಆನಂದಿಸಲು ಯೆಹೋವನು ಒಂದು ವಿಶೇಷ ಏರ್ಪಾಡನ್ನು ಮಾಡಿದ್ನು. ಅದೇ ಜೂಬಿಲಿ ಸಂವತ್ಸರ ಅಥವಾ ಜೂಬಿಲಿ ವರ್ಷ. ಕ್ರೈಸ್ತರಾದ ನಾವು ಈಗ ಧರ್ಮಶಾಸ್ತ್ರವನ್ನು ಪಾಲಿಸುತ್ತಿಲ್ಲ. ಆದ್ರೂ ಆಗ ಇದ್ದ ಜೂಬಿಲಿ ಏರ್ಪಾಡಿನ ಬಗ್ಗೆ ತಿಳ್ಕೊಳ್ಳೋದು ತುಂಬ ಪ್ರಾಮುಖ್ಯ. ಪ್ರಾಚೀನ ಕಾಲದ ಜೂಬಿಲಿ ವರ್ಷಕ್ಕೂ ಯೆಹೋವನು ನಮಗಾಗಿ ಮಾಡಿರುವಂಥ ಏರ್ಪಾಡಿಗೂ ಏನು ಸಂಬಂಧ? ಮತ್ತು ಈ ಏರ್ಪಾಡಿನಿಂದ ನಮಗೇನು ಪ್ರಯೋಜನ? ಅನ್ನೋದನ್ನ ಈ ಲೇಖನದಲ್ಲಿ ಕಲಿಯಲಿದ್ದೇವೆ.

^ ಪ್ಯಾರ. 61 ಚಿತ್ರ ವಿವರಣೆ: ದಾಸರಾಗಿದ್ದವರನ್ನ ಜೂಬಿಲಿ ವರ್ಷದಲ್ಲಿ ಬಿಡುಗಡೆ ಮಾಡಲಾಗ್ತಿತ್ತು. ಆಗ ಅವ್ರು ವಾಪಸ್‌ ಹೋಗಿ ಅವ್ರ ಕುಟುಂಬದ ಜೊತೆ ಇರಬಹುದಿತ್ತು ಮತ್ತು ಅವ್ರು ಮಾರಿದ್ದ ಜಮೀನು ಕೂಡ ವಾಪಸ್‌ ಸಿಗ್ತಿತ್ತು.