ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 51

ಯೆಹೋವನು ಕುಗ್ಗಿಹೋದವರ ಕೈಬಿಡಲ್ಲ

ಯೆಹೋವನು ಕುಗ್ಗಿಹೋದವರ ಕೈಬಿಡಲ್ಲ

“ಮುರಿದ ಮನಸ್ಸುಳ್ಳವರಿಗೆ ಯೆಹೋವನು ನೆರವಾಗುತ್ತಾನೆ; ಕುಗ್ಗಿಹೋದವರನ್ನು ಉದ್ಧಾರಮಾಡುತ್ತಾನೆ.”—ಕೀರ್ತ. 34:18.

ಗೀತೆ 91 ನನ್ನ ಪಿತ, ನನ್ನ ದೇವ ಮತ್ತು ಮಿತ್ರ

ಕಿರುನೋಟ *

1-2. ಈ ಲೇಖನದಲ್ಲಿ ನಾವೇನನ್ನ ಕಲೀತೇವೆ?

‘ನಾವು ಬದುಕೋದೇ ಸ್ವಲ್ಪ ದಿನ. ಅದ್ರಲ್ಲೂ ಕಷ್ಟಗಳು ತುಂಬಿದೆ’ ಅಂತ ಕೆಲವೊಮ್ಮೆ ನಮ್ಗೆ ಅನಿಸಬಹುದು. (ಯೋಬ 14:1) ಈ ತರ ಯೋಚಿಸಿ ನಮ್ಗೆ ನಿರುತ್ತೇಜನ ಆಗ್ಬಹುದು. ಪುರಾತನ ಕಾಲದಲ್ಲಿದ್ದ ಯೆಹೋವನ ಸೇವಕರಿಗೂ ನಿರುತ್ತೇಜನ ಕಾಡಿತು. ಅವ್ರಲ್ಲಿ ಕೆಲವರಿಗೆ ಸಾಯಬೇಕು ಅಂತನೂ ಅನಿಸಿತು. (1 ಅರ. 19:2-4; ಯೋಬ 3:1-3, 11; 7:15, 16) ಆದ್ರೆ ಅವ್ರು ನಂಬಿದಂಥ ಯೆಹೋವ ದೇವರು ಅವ್ರನ್ನ ಮತ್ತೆಮತ್ತೆ ಸಂತೈಸಿ ಬಲಪಡಿಸಿದನು. ನಾವು ಅದ್ರ ಬಗ್ಗೆ ತಿಳಿದು ಸಾಂತ್ವನ ಪಡಿಬೇಕು ಮತ್ತು ಪಾಠಗಳನ್ನ ಕಲೀಬೇಕು ಅನ್ನೋ ಉದ್ದೇಶದಿಂದ ಅವ್ರ ಅನುಭವಗಳನ್ನ ಬೈಬಲಿನಲ್ಲಿ ದಾಖಲಿಸಲಾಗಿದೆ.—ರೋಮ. 15:4.

2 ನಿರುತ್ತೇಜನದಿಂದ ಕುಗ್ಗಿಹೋಗುವಂಥ ಕಷ್ಟಗಳನ್ನ ಅನುಭವಿಸಿದ ಯೆಹೋವನ ಸೇವಕರಲ್ಲಿ ಕೆಲವರ ಬಗ್ಗೆ ನಾವೀ ಲೇಖನದಲ್ಲಿ ನೋಡ್ತೇವೆ. ಅವ್ರು ಯಾರಂದ್ರೆ ಯಾಕೋಬನ ಮಗ ಯೋಸೇಫ, ವಿಧವೆಯಾಗಿದ್ದ ನೊವೊಮಿ ಮತ್ತು ಅವಳ ಸೊಸೆ ರೂತ್‌, 73 ನೇ ಕೀರ್ತನೆ ಬರೆದ ಲೇವಿಯ ಹಾಗೂ ಪೇತ್ರ. ಇವ್ರನ್ನ ಯೆಹೋವ ದೇವ್ರು ಹೇಗೆ ಬಲಪಡಿಸಿದನು? ಇವ್ರ ಉದಾಹರಣೆಯಿಂದ ನಾವು ಯಾವ ಪಾಠ ಕಲಿಬಹುದು? ಈ ಪ್ರಶ್ನೆಗಳಿಗೆ ಉತ್ತರ ತಿಳ್ಕೊಳ್ಳೋದ್ರಿಂದ ‘ಮುರಿದ ಮನಸ್ಸುಳ್ಳವರಿಗೆ ಯೆಹೋವನು ನೆರವಾಗ್ತಾನೆ ಕುಗ್ಗಿಹೋದವರನ್ನು ಉದ್ಧಾರ ಮಾಡ್ತಾನೆ’ ಅನ್ನೋ ಆಶ್ವಾಸನೆ ಸಿಗುತ್ತೆ.—ಕೀರ್ತ. 34:18.

ಘೋರ ಅನ್ಯಾಯವನ್ನ ಸಹಿಸಿಕೊಂಡ ಯೋಸೇಫ

3-4. ಯೋಸೇಫ ಯುವಕನಾಗಿದ್ದಾಗ ಏನೆಲ್ಲಾ ಆಯ್ತು?

3 ಯೋಸೇಫನಿಗೆ 17 ವರ್ಷವಾದಾಗ ಎರಡು ಕನಸು ಬಿತ್ತು. ಅದು ದೇವರಿಂದನೇ ಬಂದಿತ್ತು. ಮುಂದೆ ಯೋಸೇಫನಿಗೆ ಕುಟುಂಬದಲ್ಲಿ ಗೌರವದ ಸ್ಥಾನ ಸಿಗುತ್ತೆ ಅನ್ನೋದು ಆ ಕನಸುಗಳ ಅರ್ಥವಾಗಿತ್ತು. (ಆದಿ. 37:5-10) ಆ ಕನಸುಗಳು ಬಿದ್ದ ಸ್ವಲ್ಪದರಲ್ಲೇ ಅವನ ಜೀವನನೇ ತಲೆಕೆಳಗಾಯ್ತು. ಅವನ ಅಣ್ಣಂದಿರು ಅವನಿಗೆ ಗೌರವ ಕೊಡೋದು ಬಿಡ್ಲಿ ಅವನನ್ನ ಮಾರೇಬಿಟ್ರು. ಹಾಗಾಗಿ ಅವನು ಈಜಿಪ್ಟ್‌ನ ಅಧಿಕಾರಿಯಾಗಿದ್ದ ಪೋಟೀಫರನ ಮನೆಯಲ್ಲಿ ಗುಲಾಮನಾಗಬೇಕಾಯ್ತು. (ಆದಿ. 37:21-28) ಸ್ವಲ್ಪ ಸಮಯದಲ್ಲೇ ಯೋಸೇಫನ ಜೀವನ ಸಂಪೂರ್ಣವಾಗಿ ಬದಲಾಯ್ತು. ತಂದೆಯ ಮುದ್ದಿನ ಮಗನಾಗಿದ್ದ ಯೋಸೇಫ ಈಗ ಸುಳ್ಳಾರಾಧನೆ ಮಾಡ್ತಿದ್ದ ವ್ಯಕ್ತಿಯ ಚಾಕರಿ ಮಾಡೋ ಗುಲಾಮನಾಗ್ಬಿಟ್ಟ.—ಆದಿ. 39:1.

4 ಆಮೇಲೆ ಯೋಸೇಫನಿಗೆ ‘ಬಾಣಲೆಯಿಂದ ಬೆಂಕಿಗೆ ಬೀಳೋ’ ಪರಿಸ್ಥಿತಿ ಬಂತು. ಪೋಟೀಫರನ ಹೆಂಡ್ತಿ, ಯೋಸೇಫ ತನ್ನನ್ನ ಬಲಾತ್ಕಾರ ಮಾಡೋಕೆ ಬಂದ ಅಂತ ಸುಳ್ಳಾರೋಪ ಹಾಕಿದಳು. ಆಗ ಪೋಟೀಫರ ಯಾವ ವಿಚಾರಣೆನೂ ಮಾಡದೆ ಯೋಸೇಫನನ್ನು ಜೈಲಿಗೆ ಹಾಕಿದನು. ಅಲ್ಲಿ ಅವನನ್ನು ಕಬ್ಬಿಣದ ಸರಪಳಿಯಲ್ಲಿ ಕಟ್ಟಿಹಾಕಿದರು. (ಆದಿ. 39:14-20; ಕೀರ್ತ. 105:17, 18) ಬಲಾತ್ಕಾರದ ಆರೋಪ ಹಾಕಿದಾಗ ಯೋಸೇಫನಿಗೆ ಹೇಗಾಗಿರಬಹುದು ಅಂತ ಸ್ವಲ್ಪ ಯೋಚಿಸಿ. ಇದರ ಬಗ್ಗೆ ಜನರಿಗೆ ಗೊತ್ತಾದಾಗ ಅವ್ರು ಯೋಸೇಫನ ದೇವರಾದ ಯೆಹೋವನ ಬಗ್ಗೆನೂ ಕೆಟ್ಟದಾಗಿ ಮಾತಾಡಿರಬಹುದು. ಇದನ್ನ ಕೇಳಿಸಿಕೊಂಡಾಗ ಯೋಸೇಫನಿಗೆ ಇನ್ನೂ ನೋವಾಗಿರುತ್ತೆ. ಇಂಥ ಪರಿಸ್ಥಿತಿಯಲ್ಲಿ ಯಾರೇ ಇರಲಿ ಅವ್ರಿಗೆ ಖಂಡಿತ ನಿರುತ್ತೇಜನ ಆಗುತ್ತೆ!

5. ಯೋಸೇಫ ಕುಗ್ಗಿ ಹೋಗೋ ಬದ್ಲು ಏನು ಮಾಡಿದ?

5 ಯೋಸೇಫ ಗುಲಾಮನಾಗಿದ್ದಾಗ ಮತ್ತು ನಂತ್ರ ಜೈಲಲ್ಲಿದ್ದಾಗ ಅವನ ಕೈಯಲ್ಲಿ ಏನೂ ಮಾಡಕ್ಕಾಗಲಿಲ್ಲ. ಅಸಹಾಯಕ ಪರಿಸ್ಥಿತಿಯಲ್ಲಿದ್ದ. ಆಗ ಅವನು ಕುಗ್ಗಿ ಹೋಗೋ ಬದ್ಲು ಏನು ಮಾಡಿದ? ತನ್ನ ಕೈಯಲ್ಲಿ ಏನು ಮಾಡೋಕಾಗಲ್ವೋ ಅದ್ರ ಬಗ್ಗೆ ಯೋಚಿಸದೆ ತನಗಿದ್ದ ಕೆಲ್ಸಾನ ಚೆನ್ನಾಗಿ ಮಾಡಿದನು. ಎಲ್ಲಕ್ಕಿಂತ ಮುಖ್ಯವಾಗಿ ಅವನು ಯಾವಾಗಲೂ ಯೆಹೋವನನ್ನು ಮೆಚ್ಚಿಸೋದ್ರ ಕಡೆಗೆ ಗಮನ ಕೊಟ್ನು. ಹಾಗಾಗಿ ಅವನು ಮಾಡಿದ್ದನ್ನೆಲ್ಲಾ ಯೆಹೋವನು ಆಶೀರ್ವದಿಸಿದನು.—ಆದಿ. 39:21-23.

6. ಯೋಸೇಫನಿಗೆ ತನ್ನ ಕನಸುಗಳಿಂದ ಹೇಗೆ ಸಾಂತ್ವನ ಸಿಕ್ಕಿರಬಹುದು?

6 ಈ ಹಿಂದೆ ತನಗೆ ಯೆಹೋವನಿಂದ ಬಂದ ಕನಸುಗಳ ಬಗ್ಗೆನೂ ಯೋಸೇಫ ನೆನಪು ಮಾಡಿಕೊಂಡಿರಬಹುದು. ಅದ್ರಿಂದಲೂ ಅವ್ನಿಗೆ ಉತ್ತೇಜನ ಸಿಕ್ಕಿರುತ್ತೆ. ಅವನು ತನ್ನ ಕುಟುಂಬವನ್ನ ಪುನಃ ನೋಡೋಕಾಗುತ್ತೆ, ಪರಿಸ್ಥಿತಿ ಸರಿಹೋಗುತ್ತೆ ಅಂತ ಆ ಕನಸುಗಳು ಸೂಚಿಸ್ತಿದ್ದವು. ಮುಂದೆ ಹಾಗೇ ಆಯ್ತು. ಯೋಸೇಫನಿಗೆ ಸುಮಾರು 37 ವರ್ಷ ಆದಾಗ ಆ ಪ್ರವಾದನೆಗಳು ಯಾರೂ ಊಹಿಸಿರದ ರೀತಿಯಲ್ಲಿ ನೆರವೇರೋಕೆ ಶುರುವಾದವು.—ಆದಿ. 37:7, 9, 10; 42:6, 9.

7. ಒಂದನೇ ಪೇತ್ರ 5:10 ರ ಪ್ರಕಾರ ಕಷ್ಟಗಳನ್ನು ತಾಳಿಕೊಳ್ಳೋಕೆ ಯಾವ್ದು ಸಹಾಯ ಮಾಡುತ್ತೆ?

7 ನಮಗಿರೋ ಪಾಠ. ಯೋಸೇಫನ ಕಥೆಯಿಂದ ನಾವು ದಯೆ ದಾಕ್ಷಿಣ್ಯ ಇಲ್ಲದ ಲೋಕದಲ್ಲಿ ಜೀವಿಸ್ತಿದ್ದೇವೆ ಮತ್ತು ಜನರು ನಮ್ಗೆ ಅನ್ಯಾಯ ಮಾಡ್ತಾರೆ ಅಂತ ಗೊತ್ತಾಗುತ್ತೆ. ನಮ್ಮ ಸಹೋದರ ಸಹೋದರಿಯರೇ ನಮ್ಗೆ ನೋವು ಮಾಡ್ಬಹುದು. ಆದ್ರೆ ಯೆಹೋವನ ಮೇಲೆ ಭರವಸೆ ಇಟ್ರೆ, ಆತನು ನಮ್ಮ ಆಶ್ರಯದುರ್ಗ ಅಂತ ನೆನಸಿದ್ರೆ ನಾವು ಕುಗ್ಗಿ ಹೋಗಲ್ಲ ಅಥ್ವಾ ಸೇವೆ ಮಾಡೋದನ್ನ ನಿಲ್ಲಿಸಲ್ಲ. (ಕೀರ್ತ. 62:6, 7; 1 ಪೇತ್ರ 5:10 ಓದಿ.) ಯೋಸೇಫನಿಗೆ ಯೆಹೋವನಿಂದ ಕನಸುಗಳು ಬಂದಾಗ ಅವನಿಗೆ ಸುಮಾರು 17 ವರ್ಷ ಆಗಿತ್ತಷ್ಟೇ ಅಂತ ನೆನಪು ಮಾಡ್ಕೊಳ್ಳಿ. ಇದ್ರಿಂದ ಯೆಹೋವನು ತನ್ನ ಯುವ ಸೇವಕರ ಮೇಲೆ ಭರವಸೆ ಇಡ್ತಾನೆ ಅಂತ ಗೊತ್ತಾಗುತ್ತೆ. ಇವತ್ತು ಕೂಡ ಅನೇಕ ಯುವ ಜನ್ರಿಗೆ ಯೋಸೇಫನ ತರನೇ ಯೆಹೋವನ ಮೇಲೆ ತುಂಬ ನಂಬಿಕೆ ಇದೆ. ಅವ್ರಲ್ಲಿ ಕೆಲವ್ರು ದೇವರ ನಿಯಮಗಳನ್ನ ಮುರಿಯೋಕೆ ಒಪ್ಪದಿದ್ದ ಕಾರಣ ಅನ್ಯಾಯವಾಗಿ ಜೈಲುಶಿಕ್ಷೆ ಅನುಭವಿಸ್ತಿದ್ದಾರೆ.—ಕೀರ್ತ. 110:3.

ದುಃಖದಲ್ಲಿ ಮುಳುಗಿಹೋಗಿದ್ದ ಇಬ್ಬರು ಸ್ತ್ರೀಯರು

8. ನೊವೊಮಿ ಮತ್ತು ರೂತ್‌ಗೆ ಏನಾಯ್ತು?

8 ಒಮ್ಮೆ ಇಸ್ರಾಯೇಲ್‌ನಲ್ಲಿ ಭೀಕರ ಬರಗಾಲ ಬಂತು. ಆಗ ನೊವೊಮಿ ಮತ್ತು ಅವಳ ಕುಟುಂಬ ಮೋವಾಬ್‌ ದೇಶಕ್ಕೆ ವಲಸೆ ಹೋಯ್ತು. ಅಲ್ಲಿ ಅವ್ರು ವಿದೇಶಿಯರ ತರ ಜೀವ್ನ ಮಾಡ್ಬೇಕಾಯ್ತು. ನೊವೊಮಿ ಗಂಡ ಎಲೀಮೆಲೆಕನು ತೀರಿಹೋದ್ನು. ಅವ್ಳಿಗೆ ಇಬ್ರು ಗಂಡುಮಕ್ಕಳಿದ್ರು. ಸ್ವಲ್ಪ ಸಮಯ ಆದ ಮೇಲೆ ಅವ್ರು ರೂತ್‌ ಮತ್ತು ಒರ್ಫಾ ಅನ್ನೋ ಮೋವಾಬ್‌ ಸ್ತ್ರೀಯರನ್ನು ಮದ್ವೆ ಆದ್ರು. ಸುಮಾರು ಹತ್ತು ವರ್ಷಗಳ ನಂತ್ರ ನೊವೊಮಿಯ ಗಂಡುಮಕ್ಕಳು ತೀರಿಹೋದ್ರು. ಅವ್ರಿಗೆ ಮಕ್ಕಳು ಕೂಡ ಇರಲಿಲ್ಲ. (ರೂತ 1:1-5) ಈ ಪರಿಸ್ಥಿತಿಲಿ ಆ ಮೂರು ಸ್ತ್ರೀಯರು ಎಷ್ಟು ನೊಂದಿರಬಹುದು! ರೂತ್‌ ಮತ್ತು ಒರ್ಫಾ ಮತ್ತೆ ಮದ್ವೆ ಏನೋ ಆಗ್ಬಹುದಿತ್ತು. ಆದ್ರೆ ವಯಸ್ಸಾಗಿದ್ದ ನೊವೊಮಿ ಗತಿ ಏನು? ಒಂದು ಸಂದರ್ಭದಲ್ಲಂತೂ ನೊವೊಮಿ ಎಷ್ಟು ಕುಗ್ಗಿಹೋದ್ಲು ಅಂದ್ರೆ, ಅವ್ಳು ಹೀಗೆ ಹೇಳಿದ್ಲು: “ನನ್ನನ್ನು ನೊವೊಮಿಯೆಂದು ಕರೆಯಬೇಡಿರಿ; ಸರ್ವಶಕ್ತನು ನನ್ನನ್ನು ಬಹಳವಾಗಿ ದುಃಖಪಡಿಸಿದ್ದಾನೆ. ಆದದರಿಂದ ಮಾರಾ ಎಂದು ಕರೆಯಿರಿ.” ಈ ದುರಂತಗಳೆಲ್ಲಾ ನಡೆದ ಮೇಲೆ ನೊವೊಮಿ ಕೊನೆಗೆ ಬೇತ್ಲೆಹೇಮಿಗೆ ವಾಪಸ್‌ ಹೋಗೋಕೆ ನಿರ್ಣಯಿಸಿದ್ಲು. ಅವ್ಳ ಜೊತೆ ರೂತಳು ಹೋದ್ಲು.—ರೂತ 1:7, 18-20.

ಯೆಹೋವ ತನ್ನ ಸೇವಕರಿಗೆ ನಿರುತ್ಸಾಹ, ದುಃಖ ಆದಾಗ ಸಹಾಯ ಮಾಡ್ತೀನಿ ಅಂತ ನೊವೊಮಿ ಮತ್ತು ರೂತಳ ಉದಾಹರಣೆಯಿಂದ ತೋರಿಸಿಕೊಟ್ಟ. ಆತ ನಿಮ್ಗೂ ಸಹಾಯ ಮಾಡ್ತಾನಲ್ವಾ? (ಪ್ಯಾರ 8-13 ನೋಡಿ) *

9. ರೂತ 1:16, 17, 22 ರ ಪ್ರಕಾರ ನೊವೊಮಿಗೆ ರೂತಳು ಹೇಗೆ ಉತ್ತೇಜನ ನೀಡಿದಳು?

9 ನೊವೊಮಿಗಿದ್ದ ದುಃಖ ಹೇಗೆ ಕಡಿಮೆ ಆಯ್ತು? ಯೆಹೋವ ಮತ್ತು ಬೇರೆಯವ್ರು ಅವಳ ಕೈಬಿಡ್ಲಿಲ್ಲ. ಉದಾಹರಣೆಗೆ, ರೂತಳು ಅವ್ಳನ್ನು ಬಿಟ್ಟುಹೋಗ್ಲಿಲ್ಲ, ಅವ್ಳ ಜೊತೆನೇ ಇದ್ದಳು. (ರೂತ 1:16, 17, 22 ಓದಿ.) ಬೇತ್ಲೆಹೇಮಿನಲ್ಲಿ ತನಗೋಸ್ಕರ ಮತ್ತು ನೊವೊಮಿಗೋಸ್ಕರ ಕಷ್ಟಪಟ್ಟು ದುಡಿದಳು. ಜವೆಗೋದಿಯ ಹೊಲದಲ್ಲಿ ತೆನೆಗಳನ್ನು ಸಂಗ್ರಹಿಸೋ ಕೆಲ್ಸ ಮಾಡಿದ್ಲು. ಇದ್ರಿಂದ ಕಷ್ಟಪಟ್ಟು ಕೆಲ್ಸ ಮಾಡೋ ಒಳ್ಳೇ ಸ್ತ್ರೀ ಅಂತ ಹೆಸ್ರು ಗಳಿಸಿದ್ಲು.—ರೂತ 3:11; 4:15.

10. ನೊವೊಮಿ ಮತ್ತು ರೂತಳಂಥ ಬಡವರಿಗೆ ಯೆಹೋವ ಹೇಗೆ ಪ್ರೀತಿ ತೋರಿಸಿದನು?

10 ನೊವೊಮಿ ಮತ್ತು ರೂತಳಂಥ ಬಡವರಿಗೆ ಅನುಕೂಲವಾಗ್ಲಿ ಅಂತ ಯೆಹೋವನು ಇಸ್ರಾಯೇಲ್ಯರಿಗೆ ಒಂದು ನಿಯಮವನ್ನು ಕೊಟ್ಟಿದ್ದನು. ಅವ್ರು ಪೈರುಗಳನ್ನು ಕೊಯ್ಯುವಾಗ ಹೊಲದ ಮೂಲೆಯಲ್ಲಿರೋ ಪೈರುಗಳನ್ನು ಕೊಯ್ಯಬಾರದಿತ್ತು. ಅದನ್ನು ಬಡವರಿಗೋಸ್ಕರ ಬಿಡಬೇಕು ಅಂತ ಯೆಹೋವ ದೇವ್ರು ಹೇಳಿದ್ದನು. (ಯಾಜ. 19:9, 10) ಯೆಹೋವ ದೇವ್ರು ಈ ಅನುಕೂಲ ಮಾಡಿಕೊಟ್ಟಿದ್ರಿಂದ ರೂತ ಮತ್ತು ನೊವೊಮಿಗೆ ಬೇರೆಯವ್ರ ಮುಂದೆ ಕೈಚಾಚೋ ಪರಿಸ್ಥಿತಿ ಬರ್ಲಿಲ್ಲ.

11-12. ನೊವೊಮಿ ಮತ್ತು ರೂತಳಿಗೋಸ್ಕರ ಬೋವಜ ಏನು ಮಾಡಿದ್ನು?

11 ರೂತಳು ಶ್ರೀಮಂತನಾಗಿದ್ದ ಬೋವಜನ ಹೊಲದಲ್ಲಿ ತೆನೆಗಳನ್ನು ಸಂಗ್ರಹಿಸ್ತಿದ್ದಳು. ಅವಳು ತನ್ನ ಅತ್ತೆ ನೊವೊಮಿಯನ್ನು ಎಷ್ಟು ಚೆನ್ನಾಗಿ ನೋಡ್ಕೊತಾಳೆ, ಎಷ್ಟು ಪ್ರೀತಿಸ್ತಾಳೆ ಅಂತ ಬೋವಜ ಗಮನಿಸಿದ. ರೂತ ತೋರಿಸಿದ ನಿಷ್ಠಾವಂತ ಪ್ರೀತಿ ಬೋವಜನಿಗೆ ತುಂಬ ಇಷ್ಟವಾಯ್ತು. ನೊವೊಮಿ ಕುಟುಂಬಕ್ಕೆ ಸೇರಿದ್ದ ಅಂದ್ರೆ ರೂತಳ ಮಕ್ಕಳಿಗೆ ವಂಶಪಾರಂಪರ್ಯವಾಗಿ ಸಿಗಲಿದ್ದ ಭೂಮಿಯನ್ನು ಬೋವಜ ಖರೀದಿಸಿದ ಮತ್ತು ರೂತಳನ್ನು ಮದ್ವೆ ಆದ. (ರೂತ 4:9-13) ನಂತ್ರ ಈ ದಂಪತಿಗೆ ಒಬ್ಬ ಮಗ ಹುಟ್ಟಿದ. ಅವನ ಹೆಸ್ರು ಓಬೇದ. ಇವ್ನೇ ಮುಂದೆ ರಾಜ ದಾವೀದನಿಗೆ ತಾತನಾದ.— ರೂತ 4:17.

12 ಪುಟ್ಟ ಕಂದ ಓಬೇದನನ್ನು ಎತ್ತಿಕೊಂಡಾಗ ನೊವೊಮಿಗೆ ಎಷ್ಟು ಖುಷಿಯಾಗಿರಬಹುದಲ್ವಾ? ಅವ್ಳು ಪ್ರಾರ್ಥನೆಯಲ್ಲಿ ಯೆಹೋವನಿಗೆ ಕೃತಜ್ಞತೆ ಹೇಳಿರ್ತಾಳೆ. ಆದ್ರೆ ಹೊಸಲೋಕದಲ್ಲಿ ನೊವೊಮಿ ಮತ್ತು ರೂತಳು ಪುನಃ ಜೀವಂತವಾಗಿ ಎದ್ದುಬಂದಾಗ, ಅವ್ರಿಗೆ ಇನ್ನೂ ಹೆಚ್ಚು ಖುಷಿಯಾಗುತ್ತೆ. ಯಾಕಂದ್ರೆ ಓಬೇದನ ವಂಶದಲ್ಲೇ ಮೆಸ್ಸೀಯ ಹುಟ್ಟಿದ್ನು ಅಂತ ಅವ್ರಿಗೆ ಗೊತ್ತಾಗುತ್ತೆ.

13. ನೊವೊಮಿ ಮತ್ತು ರೂತಳ ಅನುಭವದಿಂದ ನಾವ್ಯಾವ ಪ್ರಾಮುಖ್ಯ ಪಾಠ ಕಲಿಬಹುದು?

13 ನಮಗಿರೋ ಪಾಠ. ನಮ್ಗೆ ಕಷ್ಟಗಳು ಬಂದಾಗ ನಿರುತ್ಸಾಹ ಕಾಡ್ಬಹುದು ಮತ್ತು ಪೂರ್ತಿಯಾಗಿ ಕುಗ್ಗಿ ಹೋಗ್ಬಹುದು. ಈ ಸಮಸ್ಯೆಗಳಿಗೆ ಒಂದು ಕೊನೆಯಿಲ್ಲ ಅಂತ ನಮ್ಗೆ ಅನಿಸ್ಬಹುದು. ಇಂಥ ಸಮಯದಲ್ಲಿ ನಮ್ಮ ತಂದೆಯಾದ ಯೆಹೋವನ ಮೇಲೆ ಪೂರ್ತಿ ಭರವಸೆ ಇಡ್ಬೇಕು ಮತ್ತು ನಮ್ಮ ಸಹೋದರ ಸಹೋದರಿಯರಿಗೆ ಆಪ್ತರಾಗಿರ್ಬೇಕು. ಯೆಹೋವ ನಮ್ಮ ಕಷ್ಟ ತೆಗೆದುಹಾಕ್ದೇ ಇರ್ಬಹುದು. ಉದಾಹರಣೆಗೆ, ನೊವೊಮಿಯ ಗಂಡ ಮತ್ತು ಅವ್ಳ ಮಕ್ಕಳನ್ನು ಮತ್ತೆ ಜೀವಂತವಾಗಿ ಎಬ್ಬಿಸಲಿಲ್ಲ. ಆದ್ರೆ ನೊವೊಮಿಗೆ ಸಹಾಯಮಾಡಿದ ತರನೇ ನಮಗೂ ಯೆಹೋವ ಕಷ್ಟನ ತಾಳಿಕೊಳ್ಳೋಕೆ ಸಹಾಯಮಾಡ್ತಾನೆ. ಕಷ್ಟ ಬಂದಾಗ ಕೈಬಿಡ್ದಿರೋಕೆ ನಮ್ಮ ಸಹೋದರ ಸಹೋದರಿಯರನ್ನು ಆತ ಪ್ರಚೋದಿಸ್ತಾನೆ.—ಜ್ಞಾನೋ. 17:17.

ಮುಗ್ಗರಿಸಿದರೂ ಮುನ್ನಡೆದ ಲೇವಿಯ

ಯೆಹೋವನಿಗೆ ಪ್ರಾಮುಖ್ಯತೆ ಕೊಡದಿದ್ದ ಜನ್ರು ಚೆನ್ನಾಗಿರೋದನ್ನು 73 ನೇ ಕೀರ್ತನೆ ಬರೆದ ಲೇವಿಯ ನೋಡ್ದಾಗ ಯೆಹೋವನಿಂದಲೇ ದೂರ ಹೋಗೋ ಅಪಾಯದಲ್ಲಿದ್ದ. ಈ ಅಪಾಯ ನಮ್ಗೂ ಎದುರಾಗಬಹುದು (ಪ್ಯಾರ 14-16 ನೋಡಿ)

14. ಒಬ್ಬ ಲೇವಿಯನಿಗೆ ಯಾಕೆ ತುಂಬ ನಿರುತ್ಸಾಹ ಕಾಡ್ತು?

14 ಕೀರ್ತನೆ 73 ನ್ನು ಬರೆದಿದ್ದು ಒಬ್ಬ ಲೇವಿಯ. ಅವ್ನಿಗೆ ಯೆಹೋವನನ್ನು ಆರಾಧಿಸೋ ಸ್ಥಳದಲ್ಲಿ ಸೇವೆ ಮಾಡೋ ಸುಯೋಗ ಇತ್ತು. ಆದ್ರೂ ಒಂದು ಸಂದರ್ಭದಲ್ಲಿ ಅವ್ನಿಗೆ ನಿರುತ್ಸಾಹ ಕಾಡ್ತು. ಯಾಕೆ? ಅವ್ನಿಗೆ ದುಷ್ಟರನ್ನು ಮತ್ತು ಅಹಂಕಾರಿಗಳನ್ನು ನೋಡಿ ಹೊಟ್ಟೆಕಿಚ್ಚಾಯ್ತು. ಅದ್ರ ಅರ್ಥ ಅವ್ರ ತರ ತಾನೂ ಕೆಟ್ಟ ಕೆಲ್ಸ ಮಾಡೋಕೆ ಇಷ್ಟಪಟ್ಟ ಅಂತಲ್ಲ. ಬದ್ಲಿಗೆ ಅವ್ರೆಷ್ಟೇ ಕೆಟ್ಟ ಕೆಲ್ಸ ಮಾಡಿದ್ರೂ ತನಗಿಂತ ಚೆನ್ನಾಗಿದ್ದಾರಲ್ಲಾ ಅಂತ ಹೊಟ್ಟೆಕಿಚ್ಚಾಯ್ತು. (ಕೀರ್ತ. 73:2-9, 11-14) ಅವ್ರಿಗೆ ಜೀವ್ನದಲ್ಲಿ ಎಲ್ಲಾ ಸುಖಸೌಕರ್ಯ ಇದೆ, ಯಾವ್ದಕ್ಕೂ ಕೊರತೆಯಿಲ್ಲ, ಯಾವ ಚಿಂತೆನೂ ಇಲ್ಲ ಅಂತ ಈ ಕೀರ್ತನೆಗಾರನಿಗೆ ಅನಿಸ್ತು. ಇದನ್ನೆಲ್ಲಾ ನೋಡಿ ನಿರಾಶೆಯಾಗಿ ಹೀಗೆ ಹೇಳ್ದ: “ನನ್ನ ಮನಸ್ಸನ್ನು ನಿರ್ಮಲಮಾಡಿಕೊಂಡದ್ದೂ ಶುದ್ಧತ್ವದಲ್ಲಿ ಕೈತೊಳಕೊಂಡದ್ದೂ ವ್ಯರ್ಥವೇ ಸರಿ.” ಹೀಗೆ ಅವ್ನು ನಿರಾಶೆಯಲ್ಲಿ ಮುಳುಗಿ ಹೋಗಿದ್ದಿದ್ರೆ ಮುಂದೆ ಯೆಹೋವನ ಸೇವೆನಾ ನಿಲ್ಸಿಬಿಡ್ತಿದ್ದ ಅಂತ ಅನ್ಸುತ್ತೆ.

15. ಕೀರ್ತನೆ 73:16-19 ಮತ್ತು 22-25 ರ ಪ್ರಕಾರ ಈ ಕೀರ್ತನೆಯನ್ನು ಬರೆದ ಲೇವಿಯನಿಗೆ ನಿರುತ್ಸಾಹದಿಂದ ಹೊರಬರೋಕೆ ಯಾವ್ದು ಸಹಾಯಮಾಡ್ತು?

15 ಕೀರ್ತನೆ 73:16-19 ಮತ್ತು 22-25 ಓದಿ. ಲೇವಿಯ ‘ದೇವಾಲಯಕ್ಕೆ ಹೋದ್ನು.’ ಅಲ್ಲಿ ಅವ್ನು ಜೊತೆ ಆರಾಧಕರೊಂದಿಗೆ ಇದ್ದ ಕಾರಣ ಸಮಾಧಾನವಾಗಿರೋಕೆ, ಚೆನ್ನಾಗಿ ಯೋಚಿಸೋಕೆ, ಪ್ರಾರ್ಥಿಸೋಕೆ ಸಾಧ್ಯವಾಯ್ತು. ಆಗ ತಾನು ಎಷ್ಟು ಮೂರ್ಖನಾಗಿ ಯೋಚಿಸಿಬಿಟ್ಟೆ ಅಂತ ಅವ್ನಿಗೆ ಅರ್ಥ ಆಯ್ತು. ಇದೇ ತರ ಯೋಚಿಸ್ತಾ ಇದ್ರೆ ಯೆಹೋವನಿಂದ ದೂರ ಹೋಗ್ಬಿಡ್ತೀನಿ ಅಂತನೂ ಗೊತ್ತಾಯ್ತು. ಅಷ್ಟೇ ಅಲ್ಲ ದುಷ್ಟಜನ್ರು ಜಾರಿ ಬೀಳುವಂಥ ‘ಅಪಾಯಕರ ಸ್ಥಳದಲ್ಲಿ’ ನಿಂತಿದ್ದಾರೆ, ‘ಭಯಂಕರ ರೀತಿಯಲ್ಲಿ ಸಂಹಾರವಾಗ್ತಾರೆ’ ಅಂತನೂ ಅರ್ಥಮಾಡ್ಕೊಂಡ. ಅವನು ಯೆಹೋವನ ತರ ಯೋಚಿಸೋಕೆ ಶುರುಮಾಡಿದ. ಆಗ ದುಷ್ಟರನ್ನು ಕಂಡು ಹೊಟ್ಟೆಕಿಚ್ಚು ಪಡೋದನ್ನ ಬಿಟ್ಟುಬಿಟ್ಟ ಮತ್ತು ನಿರುತ್ಸಾಹದಿಂದ ಹೊರಗೆ ಬಂದ. ಅವ್ನ ಮನಸ್ಸಿಗೆ ನೆಮ್ಮದಿ, ಸಂತೋಷ ಸಿಗ್ತು. ಅವ್ನು ಹೀಗೆ ಹೇಳ್ದ: “ಇಹಲೋಕದಲ್ಲಿ [ಯೆಹೋವನನ್ನಲ್ಲದೆ] ಇನ್ನಾರನ್ನೂ ಬಯಸುವುದಿಲ್ಲ.”

16. ಲೇವಿಯನಿಂದ ಯಾವ ಪಾಠ ಕಲಿಬಹುದು?

16 ನಮಗಿರೋ ಪಾಠ. ದುಷ್ಟಜನ್ರು ಚೆನ್ನಾಗಿರೋದನ್ನು ನೋಡಿ ನಾವು ಹೊಟ್ಟೆಕಿಚ್ಚು ಪಡಬಾರ್ದು. ಅವ್ರ ಸಂತೋಷ ಏನಿದ್ರೂ ಮೇಲ್‌ಮೇಲಷ್ಟೇ ಮತ್ತು ಅವ್ರಿಗಿರೋ ಸುಖ ನೆಮ್ಮದಿ ನೀರಿನ ಮೇಲಿರೋ ಗುಳ್ಳೆ ತರ. ಅವ್ರು ಶಾಶ್ವತವಾಗಿ ಬದುಕೋದೂ ಇಲ್ಲ. (ಪ್ರಸಂ. 8:12, 13) ನಾವು ಅಂಥವ್ರ ಬಗ್ಗೆ ಹೊಟ್ಟೆಕಿಚ್ಚುಪಟ್ರೆ ನಮ್ಗೇ ನಿರುತ್ಸಾಹ ಆಗುತ್ತೆ. ಅಷ್ಟೇ ಅಲ್ಲ ಯೆಹೋವನೊಟ್ಟಿಗಿನ ಆಪ್ತಸಂಬಂಧನೂ ಕಳ್ಕೊಂಡು ಬಿಡಬಹುದು. ಹಾಗಾಗಿ ದುಷ್ಟರನ್ನು ನೋಡಿ ನಿಮ್ಗೆ ಹೊಟ್ಟೆಕಿಚ್ಚಾದ್ರೆ ಆ ಲೇವಿಯ ಮಾಡಿದ ಹಾಗೆ ನೀವೂ ಮಾಡಿ. ಯೆಹೋವ ಬೈಬಲಿನಲ್ಲಿ ಕೊಟ್ಟಿರೋ ಪ್ರೀತಿಯ ಸಲಹೆನ ಅನ್ವಯಿಸಿ ಮತ್ತು ಯೆಹೋವನ ಇಷ್ಟವನ್ನು ಮಾಡೋ ಜನ್ರ ಜೊತೆ ಸಹವಾಸ ಮಾಡಿ. ಬೇರೆಲ್ಲದಕ್ಕಿಂತ ಹೆಚ್ಚಾಗಿ ನೀವು ಯೆಹೋವನನ್ನು ಪ್ರೀತಿಸಿದಾಗ ನಿಜ ಸಂತೋಷ ಸಿಗುತ್ತೆ. ‘ವಾಸ್ತವವಾದ ಜೀವನಕ್ಕೆ’ ನಡೆಸೋ ದಾರಿಲಿ ನೀವು ಇರ್ತೀರ.—1 ತಿಮೊ. 6:19.

ಸ್ವಂತ ಬಲಹೀನತೆಯಿಂದ ಕುಗ್ಗಿಹೋದ ಪೇತ್ರ

ಪೇತ್ರ ನಿರುತ್ಸಾಹದಿಂದ ಕುಗ್ಗಿಹೋದ್ರೂ ಯೆಹೋವನ ಸೇವೆಯನ್ನ ಮುಂದುವರಿಸಿದ. ಅವ್ನ ಉದಾಹರಣೆ ಧ್ಯಾನಿಸಿದ್ರೆ ನಾವೂ ಕುಗ್ಗಿಹೋಗಲ್ಲ ಮತ್ತು ಕುಗ್ಗಿಹೋದವ್ರನ್ನೂ ಬಲಪಡಿಸ್ತೇವೆ (ಪ್ಯಾರ 17-19 ನೋಡಿ)

17. ಯಾವ ಕಾರಣದಿಂದ ಪೇತ್ರ ನಿರುತ್ಸಾಹದಿಂದ ಕುಗ್ಗಿಹೋದ?

17 ಅಪೊಸ್ತಲ ಪೇತ್ರ ತುಂಬ ಚುರುಕಿನ ವ್ಯಕ್ತಿ. ಆದ್ರೆ ಅವ್ನಿಗೆ ದುಡುಕಿನ ಸ್ವಭಾವವಿತ್ತು. ಕೆಲ್ವೊಮ್ಮೆ ಹಿಂದೆಮುಂದೆ ಯೋಚಿಸ್ದೆ ಮಾತಾಡಿಬಿಡ್ತಿದ್ದ. ಆಮೇಲೆ ‘ಅಯ್ಯೋ, ನಾನು ಆ ತರ ಮಾತಾಡ್ಬಾರದಿತ್ತು’ ಅಂತ ಪರಿತಪಿಸ್ತಿದ್ದ. ಉದಾಹರಣೆಗೆ, ಯೇಸು ತನಗೆ ತುಂಬ ಕಷ್ಟ ಬರುತ್ತೆ, ಜನ ತನ್ನನ್ನ ಕೊಲ್ತಾರೆ ಅಂತ ಹೇಳ್ದಾಗ ಪೇತ್ರ ಅವನನ್ನು ಗದರಿಸಿ ಹೀಗೆ ಹೇಳ್ದ: “ನಿನಗೆ ಈ ಗತಿ ಎಂದಿಗೂ ಆಗದು.” (ಮತ್ತಾ. 16:21-23) ಆಗ ಯೇಸು ಅವ್ನನ್ನು ತಿದ್ದಿದನು. ಜನ್ರು ಯೇಸುವನ್ನು ಬಂಧಿಸೋಕೆ ಬಂದಾಗ ಪೇತ್ರ ಹಿಂದೆಮುಂದೆ ಯೋಚಿಸ್ದೇ ಮಹಾಯಾಜಕನ ಆಳಿನ ಕಿವಿ ಕತ್ತರಿಸಿಬಿಟ್ಟ. (ಯೋಹಾ. 18:10, 11) ಆಗ್ಲೂ ಯೇಸು ಅವ್ನನ್ನು ತಿದ್ದಿದನು. ಒಂದು ಸಂದರ್ಭದಲ್ಲಿ, ಬೇರೆ ಯಾವ ಶಿಷ್ಯರು ಯೇಸುನ ಬಿಟ್ಟುಹೋದ್ರೂ ತಾನು ಮಾತ್ರ ಬಿಟ್ಟುಹೋಗಲ್ಲ ಅಂತ ಜಂಬ ಕೊಚ್ಚಿಕೊಂಡಿದ್ದ. (ಮತ್ತಾ. 26:33) ಆದ್ರೆ ಯೇಸುನ ಬಂಧಿಸಿದ ರಾತ್ರಿನೇ ಜನ್ರಿಗೆ ಭಯಪಟ್ಟು ಯೇಸು ಯಾರಂತನೇ ತನಗೆ ಗೊತ್ತಿಲ್ಲ ಅಂತ ಮೂರು ಸಲ ಹೇಳಿದ. ಆಗ ತಾನು ಅಂದ್ಕೊಂಡಷ್ಟು ಧೈರ್ಯವಂತನಲ್ಲ ಅಂತ ಪೇತ್ರನಿಗೆ ಗೊತ್ತಾಯ್ತು, ತುಂಬ ಕುಗ್ಗಿಹೋದ ಮತ್ತು “ಹೊರಗೆ ಹೋಗಿ ಬಹಳವಾಗಿ ಅತ್ತನು.” (ಮತ್ತಾ. 26:69-75) ಯೇಸು ತನ್ನನ್ನು ಯಾವತ್ತೂ ಕ್ಷಮಿಸಲ್ಲ ಅಂತ ಅಂದ್ಕೊಂಡ.

18. ಪೇತ್ರನಿಗಿದ್ದ ನಿರುತ್ಸಾಹದಿಂದ ಹೊರಬರೋಕೆ ಯೇಸು ಹೇಗೆ ಸಹಾಯ ಮಾಡಿದ?

18 ತಪ್ಪು ಮಾಡಿದ್ಮೇಲೆ ಪೇತ್ರನಿಗೆ ತುಂಬ ನಿರುತ್ಸಾಹ ಕಾಡ್ತು. ಹಾಗಂತ ಅವ್ನು ಅದ್ರಲ್ಲೇ ಮುಳುಗಿಹೋಗ್ಲಿಲ್ಲ, ಸುಧಾರಿಸಿಕೊಂಡ. ಬೇರೆ ಅಪೊಸ್ತಲರೊಂದಿಗೆ ದೇವ್ರ ಸೇವೆನ ಮುಂದುವರಿಸಿದ ಅಂತ ನಾವು ಬೈಬಲಲ್ಲಿ ಓದ್ತೀವಿ. (ಯೋಹಾ. 21:1-3; ಅ. ಕಾ. 1:15, 16) ಅವ್ನಿಗಿದ್ದ ನಿರುತ್ಸಾಹದಿಂದ ಹೊರಬರೋಕೆ ಯಾವ್ದು ಸಹಾಯಮಾಡ್ತು? ಪೇತ್ರ ನಂಬಿಕೆ ಕಳ್ಕೊಬಾರದು ಅಂತ ಅವನು ತಪ್ಪು ಮಾಡೋ ಮುಂಚೆನೇ ಯೇಸು ಪ್ರಾರ್ಥಿಸಿದ್ದ. ಮಾತ್ರವಲ್ಲ ಪೇತ್ರ ಪಶ್ಚಾತ್ತಾಪಪಟ್ಟು ವಾಪಸ್‌ ಬಂದಾಗ ಸಹೋದರರನ್ನು ಬಲಪಡಿಸುವಂತೆ ಯೇಸು ಹೇಳಿದ್ದ. ಯೇಸು ಪೇತ್ರನಿಗಾಗಿ ಮಾಡಿದ ಮನದಾಳದ ಪ್ರಾರ್ಥನೆಗೆ ಯೆಹೋವನು ಉತ್ತರ ಕೊಟ್ಟನು. ಯೇಸುವಿನ ಪುನರುತ್ಥಾನ ಆದ್ಮೇಲೆ ಒಮ್ಮೆ ಪೇತ್ರ ಒಬ್ಬನೇ ಇದ್ದಾಗ ಯೇಸು ಅವನಿಗೆ ಕಾಣಿಸಿಕೊಂಡ್ನು. ಆಗ ಪೇತ್ರನಿಗೆ ಖಂಡಿತ ಉತ್ತೇಜನ ಕೊಟ್ಟಿರ್ತಾನೆ. (ಲೂಕ 22:32; 24:33, 34; 1 ಕೊರಿಂ. 15:5) ಇನ್ನೊಂದು ಸಂದರ್ಭದಲ್ಲಿ ಎಲ್ಲಾ ಅಪೊಸ್ತಲರು ಮೀನು ಹಿಡಿಯೋಕೆ ಹೋದಾಗ ಒಂದು ಮೀನೂ ಸಿಗ್ಲಿಲ್ಲ. ಅದಕ್ಕೆ ಅವ್ರು ನಿರಾಶರಾಗಿದ್ರು. ಆಗ ಯೇಸು ಅವ್ರಿಗೆ ಕಾಣಿಸಿಕೊಂಡ್ನು. ಆ ಸಂದರ್ಭದಲ್ಲಿ ಪೇತ್ರ ತನ್ನನ್ನು ಎಷ್ಟು ಪ್ರೀತಿಸ್ತಾನೆ ಅಂತ ರುಜುಪಡಿಸೋ ಒಂದು ಅವಕಾಶ ಕೊಟ್ಟನು. ಯೇಸು ತನ್ನ ಪ್ರೀತಿಯ ಸ್ನೇಹಿತನಾಗಿದ್ದ ಪೇತ್ರನನ್ನು ಮನಸಾರೆ ಕ್ಷಮಿಸಿದ್ನು, ಅವ್ನಿಗೆ ಇನ್ನೂ ಹೆಚ್ಚು ಜವಾಬ್ದಾರಿಗಳನ್ನು ವಹಿಸಿದ್ನು.—ಯೋಹಾ. 21:15-17.

19. ನಾವು ತಪ್ಪು ಮಾಡ್ದಾಗ ಯೆಹೋವ ಏನು ಮಾಡ್ತಾನೆ ಅಂತ ಕೀರ್ತನೆ 103:13, 14 ರಿಂದ ಗೊತ್ತಾಗುತ್ತೆ?

19 ನಮಗಿರೋ ಪಾಠ. ಯೇಸು ಪೇತ್ರನ ಜೊತೆ ನಡ್ಕೊಂಡ ರೀತಿಯಿಂದ ಅವನಿಗೆ ಯೆಹೋವನ ತರನೇ ಕರುಣೆ ಇದೆ ಅನ್ನೋದು ಗೊತ್ತಾಗುತ್ತೆ. ಹಾಗಾಗಿ ನಾವು ತಪ್ಪು ಮಾಡ್ದಾಗ ಯೆಹೋವ ನಮ್ಮನ್ನ ಕ್ಷಮಿಸೋದೇ ಇಲ್ಲ ಅಂತ ಯೋಚಿಸಬಾರ್ದು. ಆ ತರ ನಾವು ಯೋಚಿಸ್ಬೇಕು ಅಂತ ಸೈತಾನ ಇಷ್ಟಪಡ್ತಾನೆ. ಅದ್ರ ಬದ್ಲಿಗೆ ಯೆಹೋವ ನಮ್ಮನ್ನು ತುಂಬ ಪ್ರೀತಿಸ್ತಾನೆ, ಆತನಿಗೆ ನಮ್ಮ ಇತಿಮಿತಿ ಚೆನ್ನಾಗಿ ಗೊತ್ತು, ನಾವು ತಪ್ಪು ಮಾಡ್ದಾಗ ಕ್ಷಮಿಸೋಕೆ ಬಯಸ್ತಾನೆ ಅಂತ ಯೋಚಿಸ್ಬೇಕು. ಅಷ್ಟೇ ಅಲ್ಲ, ಬೇರೆಯವ್ರು ನಮ್ಗೆ ನೋವು ಮಾಡಿದಾಗ್ಲೂ ನಾವು ಯೆಹೋವನ ತರ ಅವ್ರ ಜೊತೆ ನಡ್ಕೊಬೇಕು.—ಕೀರ್ತನೆ 103:13, 14 ಓದಿ.

20. ಮುಂದಿನ ಲೇಖನದಲ್ಲಿ ನಾವು ಏನನ್ನು ತಿಳ್ಕೊಳ್ತೀವಿ?

20 ಯೋಸೇಫ, ನೊವೊಮಿ, ರೂತ್‌, ಲೇವಿಯ ಮತ್ತು ಪೇತ್ರನ ಉದಾಹರಣೆಯಿಂದ “ಮುರಿದ ಮನಸ್ಸುಳ್ಳವರಿಗೆ ಯೆಹೋವನು ನೆರವಾಗುತ್ತಾನೆ” ಅನ್ನೋ ಆಶ್ವಾಸನೆ ಸಿಗುತ್ತೆ. (ಕೀರ್ತ. 34:18) ಕೆಲ್ವೊಮ್ಮೆ ನಮ್ಗೆ ಕಷ್ಟಗಳು ಬರುವಂತೆ ಆತನು ಬಿಡಬಹುದು. ಇದ್ರಿಂದ ನಮ್ಗೆ ನಿರುತ್ಸಾಹ ಆಗ್ಬಹುದು. ಆದ್ರೆ ಯೆಹೋವನ ಸಹಾಯದಿಂದ ನಾವು ಕಷ್ಟಗಳನ್ನ ತಾಳಿಕೊಂಡ್ರೆ ನಮ್ಮ ನಂಬಿಕೆ ಬಲವಾಗುತ್ತೆ. (1 ಪೇತ್ರ 1:6, 7) ಮುಂದಿನ ಲೇಖನದಲ್ಲಿ ತಮ್ಮ ಸ್ವಂತ ಬಲಹೀನತೆಯಿಂದಾಗಿ ಅಥ್ವಾ ಕಷ್ಟದ ಸನ್ನಿವೇಶಗಳಿಂದಾಗಿ ಕುಗ್ಗಿಹೋದ ನಿಷ್ಠಾವಂತ ಸೇವಕರಿಗೆ ಯೆಹೋವನು ಹೇಗೆ ಬಲ ಕೊಡ್ತಾನೆ ಅನ್ನೋದ್ರ ಬಗ್ಗೆ ಇನ್ನೂ ಹೆಚ್ಚು ತಿಳ್ಕೊಳ್ತೀವಿ.

ಗೀತೆ 23 ಯೆಹೋವನು ನಮ್ಮ ಬಲ

^ ಪ್ಯಾರ. 5 ಯೋಸೇಫನಿಗೆ, ನೊವೊಮಿ ಮತ್ತು ರೂತಳಿಗೆ, ಒಬ್ಬ ಲೇವಿಯನಿಗೆ ಮತ್ತು ಪೇತ್ರನಿಗೆ ನಿರುತ್ಸಾಹ ಆಗುವಂಥ ಸನ್ನಿವೇಶಗಳು ಬಂದ್ವು. ಈ ಲೇಖನದಲ್ಲಿ ಯೆಹೋವ ದೇವ್ರು ಹೇಗೆ ಈ ನಂಬಿಗಸ್ತ ಸೇವಕರಿಗೆ ಸಾಂತ್ವನ ಮತ್ತು ಬಲ ಕೊಟ್ಟನು ಅನ್ನೋದನ್ನ ಕಲಿಯಲಿದ್ದೇವೆ. ಅಷ್ಟೇ ಅಲ್ಲ, ಅವ್ರ ಉದಾಹರಣೆಯಿಂದ ಮತ್ತು ಯೆಹೋವನು ಅವ್ರ ಜೊತೆ ಪ್ರೀತಿಯಿಂದ ನಡ್ಕೊಂಡ ವಿಧದಿಂದ ನಾವೇನು ಕಲಿಬಹುದು ಅನ್ನೋದನ್ನೂ ನೋಡಲಿದ್ದೇವೆ.

^ ಪ್ಯಾರ. 56 ಚಿತ್ರ ವಿವರಣೆ: ನೊವೊಮಿ, ರೂತ್‌ ಮತ್ತು ಒರ್ಫಾ ತಮ್ಮ ಗಂಡಂದಿರು ತೀರಿಹೋಗಿರುವ ದುಃಖದಲ್ಲಿದ್ದಾರೆ. ಆದ್ರೆ ಮುಂದೆ ಓಬೇದ ಹುಟ್ಟಿದಾಗ ರೂತ್‌, ನೊವೊಮಿ ಮತ್ತು ಬೋವಜ ಖುಷಿಯಾಗಿದ್ದಾರೆ.