ವಾಚಕರಿಂದ ಪ್ರಶ್ನೆಗಳು
“ಶಿಷ್ಟನು ಏಳು ಸಾರಿ ಬಿದ್ದರೂ ಮತ್ತೆ ಏಳುವನು” ಅಂತ ಜ್ಞಾನೋಕ್ತಿ 24:16 ಹೇಳುತ್ತೆ. ಇದರರ್ಥ ಒಬ್ಬ ವ್ಯಕ್ತಿ ಪದೇಪದೇ ತಪ್ಪು ಮಾಡಿದ್ರೂ ದೇವ್ರು ಅವನನ್ನ ಕ್ಷಮಿಸ್ತಾನೆ ಅಂತನಾ?
ಆ ವಚನದ ಅರ್ಥ ಅದಲ್ಲ. ‘ಬೀಳೋದು’ ಅಂದ್ರೆ ಒಬ್ಬ ವ್ಯಕ್ತಿಗೆ ಒಂದರ ಹಿಂದೆ ಒಂದು ಸಮಸ್ಯೆ ಬರುವುದು ಮತ್ತು “ಮತ್ತೆ ಏಳುವನು” ಅಂದ್ರೆ ಆ ಕಷ್ಟಗಳನ್ನ ಸಹಿಸಿಕೊಳ್ಳೋದು ಅಂತ ಅರ್ಥ.
ಜ್ಞಾನೋಕ್ತಿ 24:16 ರ ಹಿಂದಿನ ಮತ್ತು ಮುಂದಿನ ವಚನಗಳನ್ನ ನೋಡಿದ್ರೆ ಈ ವಚನದ ಅರ್ಥ ಗೊತ್ತಾಗುತ್ತೆ: “ದುಷ್ಟನೇ ಶಿಷ್ಟನ ಮನೆಗೆ ಹೊಂಚುಹಾಕಬೇಡ; ಅವನ ನಿವಾಸವನ್ನು ಸೂರೆಮಾಡಬೇಡ. ಶಿಷ್ಟನು ಏಳು ಸಾರಿ ಬಿದ್ದರೂ ಮತ್ತೆ ಏಳುವನು. ದುಷ್ಟನು ಕೇಡಿನಿಂದ ಬಿದ್ದೇಹೋಗುವನು. ನಿನ್ನ ಶತ್ರು ಬಿದ್ದರೆ ಹಿಗ್ಗಬೇಡ, ಎಡವಿದರೆ ನಿನ್ನ ಹೃದಯವು ಹರ್ಷಿಸದಿರಲಿ!”—ಜ್ಞಾನೋ. 24:15-17.
ಪಾಪ ಮಾಡೋ ವ್ಯಕ್ತಿ ಪಶ್ಚಾತ್ತಾಪ ಪಡೋದಾದ್ರೆ ದೇವ್ರ ಜೊತೆ ಅವನು ಮತ್ತೆ ಒಳ್ಳೇ ಸಂಬಂಧ ಬೆಳೆಸ್ಕೊಬಹುದು ಅಂತ 16 ನೇ ವಚನ ಹೇಳುತ್ತೆ ಅಂತ ಕೆಲವ್ರು ನೆನಸ್ತಾರೆ. ಉದಾಹರಣೆಗೆ, ಇಂಗ್ಲೆಂಡಿನ ಇಬ್ಬರು ಪಾದ್ರಿಗಳು ಏನು ಹೇಳಿದ್ದಾರೆ ನೋಡಿ: “ಹಿಂದಿನ ಕಾಲದಿಂದ ಇವತ್ತಿನ ತನಕ ಸುವಾರ್ತೆ ಸಾರ್ತಾ ಬಂದಿರೋವ್ರು ಈ ಅರ್ಥದಲ್ಲೇ ಈ ವಚನವನ್ನ ವಿವರಿಸ್ತಾ ಬಂದಿದ್ದಾರೆ.” ಆ ಪಾದ್ರಿಗಳು ಹೀಗೂ ಬರೆದಿದ್ದಾರೆ: “ಒಂದ್ವೇಳೆ ಆ ವಚನದ ಅರ್ಥ ಅದೇ ಆಗಿರೋದಾದ್ರೆ ಒಬ್ಬ ಒಳ್ಳೇ ವ್ಯಕ್ತಿ ಬಿದ್ದರೂ ಅಂದ್ರೆ ದೊಡ್ಡದೊಡ್ಡ ತಪ್ಪು ಮಾಡಿದ್ರೂ ಅವ್ನು ದೇವ್ರನ್ನ ಪ್ರೀತಿಸ್ತಾ ಇರೋಕಾಗುತ್ತೆ. ಆ ವ್ಯಕ್ತಿ ಬಿದ್ದಾಗೆಲ್ಲಾ ಅಂದ್ರೆ ತಪ್ಪು ಮಾಡಿದ್ದಾಗೆಲ್ಲಾ ಪಶ್ಚಾತ್ತಾಪ ಪಟ್ರೆ ಮತ್ತೆ ಏಳ್ತಾನೆ, ದೇವ್ರು ಕೂಡ ಅವನನ್ನ ಮೆಚ್ಚಿಕೊಳ್ತಾನೆ ಅಂತಾಗುತ್ತೆ.” ಇದು ತಪ್ಪು ಮಾಡ್ತಾ ಇರೋ ವ್ಯಕ್ತಿಗೆ ತುಂಬ ಇಷ್ಟ ಆಗುತ್ತೆ. ತಾನೆಷ್ಟೇ ತಪ್ಪು ಮಾಡಿದ್ರೂ ದೇವ್ರು ತನ್ನನ್ನ ಕ್ಷಮಿಸ್ತಾನೆ ಅಂತ ಅವನು ಅಂದುಕೊಳ್ತಾನೆ.
ಆದರೆ ವಚನ 16 ರ ಅರ್ಥ ಇದಲ್ಲ.
16 ಮತ್ತು 17 ನೇ ವಚನದಲ್ಲಿ “ಬಿದ್ದರೂ,” “ಬಿದ್ದರೆ” ಅನ್ನೋದಕ್ಕೆ ಇರೋ ಹೀಬ್ರು ಪದವನ್ನ ಬೈಬಲಲ್ಲಿ ಬೇರೆಬೇರೆ ರೀತಿಯಲ್ಲಿ ಬಳಸಲಾಗಿದೆ. ಒಂದು ಎತ್ತು ದಾರಿಯಲ್ಲಿ ಬೀಳೋದಕ್ಕೆ, ಒಬ್ಬ ವ್ಯಕ್ತಿ ಮಾಳಿಗೆ ಮೇಲಿಂದ ಬೀಳೋದಕ್ಕೆ ಅಥ್ವಾ ಒಂದು ಕಾಳು ನೆಲದ ಮೇಲೆ ಬೀಳೋದಕ್ಕೆ ಅಂದ್ರೆ ನಿಜವಾಗ್ಲೂ ಬೀಳೋದಕ್ಕೆ ಈ ಪದವನ್ನು ಬೈಬಲಲ್ಲಿ ಬಳಸಲಾಗಿದೆ. (ಧರ್ಮೋ. 22:4, 8; ಆಮೋ. 9:9) ಬೇರೆ ಕೆಲವು ವಚನಗಳಲ್ಲಿ ಈ ಪದವನ್ನ ನಿಜವಾಗ್ಲೂ ಬೀಳೋದಕ್ಕಲ್ಲ ಬದ್ಲಿಗೆ ಜೀವನದಲ್ಲಿ ಎಡವಿ ಬೀಳೋದಕ್ಕೆ ಬಳಸಲಾಗಿದೆ. ಉದಾಹರಣೆಗೆ ಈ ವಚನ ನೋಡಿ: “ಸತ್ಪುರುಷನ ಗತಿಸ್ಥಾಪನೆಯು ಯೆಹೋವನಿಂದಲೇ ಆಗಿದೆ, ಆತನು ಅವನ ಪ್ರವರ್ತನೆಯನ್ನು ಮೆಚ್ಚುತ್ತಾನೆ. ಅವನು ಕೆಳಗೆ ಬಿದ್ದರೂ ಏಳದೆ ಹೋಗುವುದಿಲ್ಲ; ಯೆಹೋವನು ಅವನನ್ನು ಕೈಹಿಡಿದು ಉದ್ಧಾರ ಮಾಡುವನು.”—ಕೀರ್ತ. 37:23, 24; ಜ್ಞಾನೋ. 11:5; 13:17; 17:20.
ಪ್ರೊಫೆಸರ್ ಎಡ್ವರ್ಡ್ ಹೆಚ್. ಪ್ಲಂಪ್ಟ್ರ ಇದ್ರ ಬಗ್ಗೆ ಹೇಳೋದನ್ನ ಗಮನಿಸಿ: “[ಬೀಳು] ಅನ್ನೋದಕ್ಕಿರುವ ಹೀಬ್ರು ಪದವನ್ನ ಬೈಬಲಿನಲ್ಲಿ ಎಲ್ಲೂ ಪಾಪ ಮಾಡೋದು ಅನ್ನೋ ಅರ್ಥದಲ್ಲಿ ಬಳಸಲಾಗಿಲ್ಲ.” ಇನ್ನೊಬ್ಬ ಪಂಡಿತ 16 ನೇ ವಚನದ ಅರ್ಥವನ್ನ ಹೀಗೆ ಹೇಳ್ತಾರೆ: “ದೇವಜನರಿಗೆ ಕಿರುಕುಳ ಕೊಡೋದ್ರಿಂದ ಏನೂ ಪ್ರಯೋಜನ ಇಲ್ಲ. ಯಾಕಂದ್ರೆ ಅದನ್ನೆಲ್ಲಾ ಅವ್ರು ಸಹಿಸಿಕೊಳ್ತಾರೆ. ಆದ್ರೆ ಕೆಟ್ಟವರು ಹಾಗಿರಲ್ಲ.”
ಹಾಗಾದ್ರೆ ಜ್ಞಾನೋಕ್ತಿ 24:16 ರಲ್ಲಿ “ಬಿದ್ದರೂ” ಅನ್ನೋ ಪದ ಪಾಪ ಮಾಡುವುದಕ್ಕೆ ಸೂಚಿಸಲ್ಲ. ಪದೇಪದೇ ಕಷ್ಟ ಅನುಭವಿಸೋದನ್ನ ಸೂಚಿಸುತ್ತೆ. ಈ ಕೆಟ್ಟಲೋಕದಲ್ಲಿ ಒಬ್ಬ ಒಳ್ಳೆ ವ್ಯಕ್ತಿಗೆ ಆರೋಗ್ಯ ಸಮಸ್ಯೆಗಳು, ಬೇರೆ ಸಮಸ್ಯೆಗಳು ಬರಬಹುದು. ಸರ್ಕಾರದಿಂದ ತುಂಬ ಹಿಂಸೆನೂ ಬರಬಹುದು. ಆದ್ರೆ ಆ ವ್ಯಕ್ತಿಗೆ ದೇವ್ರು ತನ್ನ ಜೊತೆ ಇರ್ತಾನೆ, ಸಹಾಯ ಮಾಡ್ತಾನೆ, ಆ ಕಷ್ಟಗಳನ್ನೆಲ್ಲಾ ಸಹಿಸಿಕೊಳ್ಳೋಕೆ ತನಗಾಗುತ್ತೆ ಅನ್ನೋ ನಂಬಿಕೆ ಇರುತ್ತೆ. ನೀವೇ ಯೋಚಿಸಿ, ಕಷ್ಟ ಅಂತ ಅಂದುಕೊಂಡಿದ್ರಿಂದ ಕೂಡ ಎಷ್ಟೋ ಸಾರಿ ದೇವರ ಸೇವಕರಿಗೆ ಒಳ್ಳೇದಾಗಿದೆ ಅಲ್ವಾ? ನಾವ್ಯಾಕೆ ಅಷ್ಟು ಭರವಸೆ ಇಡಬಹುದು? ಯಾಕಂದ್ರೆ “ಯೆಹೋವನು ಬಿದ್ದವರನ್ನೆಲ್ಲಾ ಎತ್ತುವವನೂ ಕುಗ್ಗಿದವರನ್ನೆಲ್ಲಾ ಉದ್ಧರಿಸುವವನೂ ಆಗಿದ್ದಾನೆ.”—ಕೀರ್ತ. 41:1-3; 145:14-19.
‘ಭಯಭಕ್ತಿ ಇರುವವರು’ ತಮಗೆ ಮಾತ್ರ ಅಲ್ಲ ಬೇರೆಯವ್ರಿಗೂ ಕಷ್ಟ ಬರುತ್ತೆ ಅಂತ ಸಮಾಧಾನ ಪಡ್ಕೊಳ್ಳಲ್ಲ. ಬದಲಿಗೆ ‘ದೇವರಲ್ಲಿ ಭಯಭಕ್ತಿಯುಳ್ಳವರಿಗೆ ಮೇಲಾಗುತ್ತೆ ಅಂದ್ರೆ ಒಳ್ಳೇದೇ ಆಗುತ್ತೆ’ ಅನ್ನೋ ವಿಷ್ಯದಿಂದ ಅವ್ರು ಸಮಾಧಾನವಾಗಿರುತ್ತಾರೆ.—ಪ್ರಸಂ. 8:11-13; ಯೋಬ 31:3-6; ಕೀರ್ತ. 27:5, 6.