ವಾಚಕರಿಂದ ಪ್ರಶ್ನೆಗಳು
1 ಕೊರಿಂಥ 15:29 ರಲ್ಲಿ ಪೌಲ ಹೇಳಿದ ಮಾತಿನ ಅರ್ಥ ಆ ಕಾಲದಲ್ಲಿದ್ದ ಕ್ರೈಸ್ತರು ಸತ್ತವರಿಗೋಸ್ಕರ ದೀಕ್ಷಾಸ್ನಾನ ಪಡ್ಕೊಳ್ತಿದ್ರು ಅಂತನಾ?
ಇಲ್ಲ. ಬೈಬಲ್ ಆಗಲಿ ಬೇರೆ ಇತಿಹಾಸ ಪುಸ್ತಕಗಳಾಗಲಿ ಕ್ರೈಸ್ತರು ಸತ್ತವರಿಗೋಸ್ಕರ ದೀಕ್ಷಾಸ್ನಾನ ಪಡ್ಕೊಳ್ತಿದ್ರು ಅಂತ ಹೇಳಲ್ಲ.
ಈ ವಚನ ಕೆಲವು ಬೈಬಲ್ಗಳಲ್ಲಿ ಬೇರೆ ತರ ಭಾಷಾಂತರ ಆಗಿದೆ. ಅದನ್ನ ಓದುವಾಗ ಕೆಲವ್ರು ಒಂದನೇ ಶತಮಾನದಲ್ಲಿದ್ದ ಕ್ರೈಸ್ತರು ಸತ್ತವರಿಗೋಸ್ಕರ ದೀಕ್ಷಾಸ್ನಾನ ಪಡ್ಕೊಳ್ತಿದ್ರು ಅಂತ ಅಂದುಕೊಳ್ತಾರೆ. ಉದಾಹರಣೆಗೆ, ಸತ್ಯವೇದವು ಬೈಬಲ್ನಲ್ಲಿ ಹೀಗಿದೆ: “ಸತ್ತವರಿಗೆ ಪುನರುತ್ಥಾನವಿಲ್ಲವಾದರೆ ಸತ್ತವರಿಗೋಸ್ಕರ ದೀಕ್ಷಾಸ್ನಾನ ಮಾಡಿಸಿಕೊಳ್ಳುವವರು ಏನು ಮಾಡುವರು?”
ಬೈಬಲ್ ಪಂಡಿತರಾದ ಡಾ. ಗ್ರೆಗರಿ ಲಾಕ್ವುಡ್, ಕ್ರೈಸ್ತರು ಸತ್ತವರ ಪರವಾಗಿ ದೀಕ್ಷಾಸ್ನಾನ ಪಡ್ಕೊಳ್ತಿದ್ರು ಅಂತ ಬೈಬಲಿನಲ್ಲಾಗಲಿ ಇತಿಹಾಸದಲ್ಲಾಗಲಿ ಯಾವುದೇ ಆಧಾರ ಇಲ್ಲ ಅಂತ ಹೇಳ್ತಾರೆ. ಈ ಮಾತನ್ನ ಇನ್ನೊಬ್ಬ ಬೈಬಲ್ ಪಂಡಿತ ಪ್ರೊಫೆಸರ್ ಗೊರ್ಡನ್ ಡಿ. ಫೀ ಕೂಡ ಒಪ್ತಾ ಹೀಗೆ ಬರೆದಿದ್ದಾರೆ: ಈ ತರದ ದೀಕ್ಷಾಸ್ನಾನಕ್ಕೆ ಬೈಬಲಿನಲ್ಲಾಗಲಿ ಇತಿಹಾಸದಲ್ಲಾಗಲಿ ಉದಾಹರಣೆ ಇಲ್ಲ. ಹೊಸ ಒಡಂಬಡಿಕೆಯಲ್ಲೂ ಇದ್ರ ಬಗ್ಗೆ ಇಲ್ಲ. ಒಂದನೇ ಶತಮಾನದ ಕ್ರೈಸ್ತರಾಗಲಿ ಅಪೊಸ್ತಲರು ತೀರಿಹೋದ ಸ್ವಲ್ಪದ್ರಲ್ಲೇ ಹುಟ್ಟಿಕೊಂಡ ಚರ್ಚುಗಳಾಗಲಿ ಈ ತರ ಮಾಡ್ತಿದ್ರು ಅನ್ನೋದಕ್ಕೆ ಆಧಾರನೂ ಇಲ್ಲ.
ಶಿಷ್ಯರಿಗೆ ಯೇಸು “ಎಲ್ಲ ಜನಾಂಗಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; . . . ದೀಕ್ಷಾಸ್ನಾನ ಮಾಡಿಸಿ, . . . ಎಲ್ಲ ವಿಷಯಗಳನ್ನು ಪಾಲಿಸುವಂತೆ ಅವರಿಗೆ ಬೋಧಿಸಿರಿ” ಅಂತ ಆಜ್ಞೆ ಕೊಟ್ಟನು. ಅದನ್ನ ಅವ್ರು ಪಾಲಿಸಬೇಕಿತ್ತು ಅಂತ ಬೈಬಲ್ ಹೇಳುತ್ತೆ. (ಮತ್ತಾ. 28:19, 20) ಒಬ್ಬ ವ್ಯಕ್ತಿ ದೀಕ್ಷಾಸ್ನಾನ ಪಡ್ಕೊಂಡು ಶಿಷ್ಯನಾಗೋ ಮುಂಚೆ ಅವನು ಯೆಹೋವ ಮತ್ತು ಯೇಸು ಬಗ್ಗೆ ಕಲಿಬೇಕಿತ್ತು, ಕಲಿತದ್ದನ್ನ ನಂಬಬೇಕಿತ್ತು ಮತ್ತು ಅವ್ರಿಬ್ರು ಹೇಳೋದನ್ನ ಕೇಳಬೇಕಿತ್ತು. ಹೀಗಿರುವಾಗ, ಸತ್ತು ಮಣ್ಣಾಗಿ ಹೋಗಿರುವ ಒಬ್ಬ ವ್ಯಕ್ತಿ ಇದನ್ನ ಹೇಗೆ ಮಾಡಕ್ಕಾಗುತ್ತೆ? ಅಥ್ವಾ ಸತ್ತಿರೋ ಆ ವ್ಯಕ್ತಿಗೋಸ್ಕರ ಬದುಕಿರೋ ಒಬ್ಬ ಕ್ರೈಸ್ತ ಇದನ್ನ ಹೇಗೆ ಮಾಡಕ್ಕಾಗುತ್ತೆ? ನೀವೇ ಹೇಳಿ.—ಪ್ರಸಂ. 9:5, 10; ಯೋಹಾ. 4:1; 1 ಕೊರಿಂ. 1:14-16.
ಹಾಗಾದ್ರೆ ಪೌಲ ಹೇಳಿದ್ದರ ಅರ್ಥ ಏನು?
ಕೊರಿಂಥದಲ್ಲಿದ್ದ ಕೆಲವ್ರು ಸತ್ತವರಿಗೆ ಮರುಜೀವ ಸಿಗುತ್ತೆ ಅಂತ ನಂಬ್ತಿರಲಿಲ್ಲ. (1 ಕೊರಿಂ. 15:12) ಆದರೆ ಇದು ತಪ್ಪು ಅಂತ ಪೌಲ ಅವರಿಗೆ ತೋರಿಸಿಕೊಟ್ಟ. ಅವನು “ಪ್ರತಿದಿನವೂ ನಾನು ಮರಣವನ್ನು ಎದುರಿಸುತ್ತೇನೆ” ಅಂತ ಹೇಳಿದ. ಇದರರ್ಥ ಪೌಲ ಸತ್ತಿರಲಿಲ್ಲ, ಅವನಿಗೆ ಬರುತ್ತಿದ್ದ ತೊಂದರೆಗಳಿಂದಾಗಿ ಪ್ರತಿದಿನ ಸಾಯೋ ತರ ಪರಿಸ್ಥಿತಿ ಇರುತ್ತಿತ್ತು ಅನ್ನೋದು ಅವನ ಮಾತಿನ ಅರ್ಥ. ಆದ್ರೆ ಪೌಲನಿಗೆ ತಾನು ಸತ್ರೂ ಯೇಸು ಕ್ರಿಸ್ತನ ತರ ಶಕ್ತಿಶಾಲಿ ಆತ್ಮಜೀವಿಯಾಗಿ ಮತ್ತೆ ಪುನರುತ್ಥಾನ ಆಗ್ತೀನಿ ಅನ್ನೋ ಬಲವಾದ ನಂಬಿಕೆ ಇತ್ತು.—1 ಕೊರಿಂ. 15:30-32, 42-44.
ಅಭಿಷಿಕ್ತ ಕ್ರೈಸ್ತರು ಬೇರೆಯವ್ರ ತರ ಜೀವನದಲ್ಲಿ ಕಷ್ಟಪಡಬೇಕಾಗುತ್ತೆ, ಕೊನೆಗೆ ಸಾಯಬೇಕಾಗುತ್ತೆ, ಇದೆಲ್ಲಾ ಆದ ಮೇಲೆನೇ ಅವ್ರಿಗೆ ಪುನರುತ್ಥಾನ ಆಗೋದು ಅಂತ ಕೊರಿಂಥದವ್ರು ಅರ್ಥ ಮಾಡ್ಕೊಬೇಕಿತ್ತು. ಅಭಿಷಿಕ್ತ ಕ್ರೈಸ್ತರು ‘ಕ್ರಿಸ್ತ ಯೇಸುವಿನೊಂದಿಗೆ ಐಕ್ಯರಾಗಲಿಕ್ಕಾಗಿ ದೀಕ್ಷಾಸ್ನಾನ ಪಡೆಯೋ’ ತರನೇ ‘ಅವನ ಮರಣದೊಂದಿಗೆ ಐಕ್ಯರಾಗಿರಲಿಕ್ಕಾಗಿಯೂ ದೀಕ್ಷಾಸ್ನಾನ ಪಡಿಬೇಕಿತ್ತು.’ (ರೋಮ. 6:3) ಇದರರ್ಥ ಅವ್ರು ಯೇಸು ತರನೇ ಜೀವನದಲ್ಲಿ ಕಷ್ಟ ಅನುಭವಿಸಬೇಕಾಗಿತ್ತು, ಕೊನೆಗೆ ಸಾಯಬೇಕಾಗಿತ್ತು. ಇದಾದ ಮೇಲೆನೇ ಅವ್ರಿಗೆ ಪುನರುತ್ಥಾನ ಆಗಿ ಸ್ವರ್ಗಕ್ಕೆ ಹೋಗೋಕೆ ಆಗ್ತಿತ್ತು.
ಯೇಸು ನೀರಿನ ದೀಕ್ಷಾಸ್ನಾನ ಪಡಕೊಂಡು ಎರಡು ವರ್ಷ ಆದ ಮೇಲೆ ತನ್ನ ಇಬ್ಬರು ಶಿಷ್ಯರಿಗೆ “ನಾನು ದೀಕ್ಷಾಸ್ನಾತನಾಗುತ್ತಿರುವ ದೀಕ್ಷಾಸ್ನಾನದಲ್ಲಿ ನೀವು ಸಹ ದೀಕ್ಷಾಸ್ನಾತರಾಗುವಿರಿ” ಅಂತ ಹೇಳಿದನು. (ಮಾರ್ಕ 10:38, 39) ಇಲ್ಲಿ ಯೇಸು ನೀರಿನಲ್ಲಿ ತಗೊಳ್ಳೋ ದೀಕ್ಷಾಸ್ನಾನದ ಬಗ್ಗೆ ಮಾತಾಡ್ಲಿಲ್ಲ. ಬದ್ಲಿಗೆ ‘ಸತ್ತವರಾಗೋ ಉದ್ದೇಶದಿಂದ ತಗೊಳ್ಳೋ ದೀಕ್ಷಾಸ್ನಾನದ’ ಬಗ್ಗೆ ಮಾತಾಡಿದನು. ತಾನು ದೇವರಿಗೆ ನಿಷ್ಠಾವಂತನಾಗಿರೋ ಕಾರಣ ಸಾಯಬೇಕಾಗುತ್ತೆ ಅನ್ನೋದು ಅವನ ಮಾತಿನ ಅರ್ಥವಾಗಿತ್ತು. “ಕಷ್ಟಾನುಭವಿಸಿದರೆ [ಯೇಸುವಿನೊಂದಿಗೆ] ಮಹಿಮೆಯಲ್ಲಿಯೂ ಪಾಲುಗಾರರಾಗುವೆವು” ಅಂತ ಪೌಲನು ಅಭಿಷಿಕ್ತರಿಗೆ ಬರೆದನು. (ರೋಮ. 8:16, 17; 2 ಕೊರಿಂ. 4:17) ಹಾಗಾಗಿ ಅಭಿಷಿಕ್ತ ಕ್ರೈಸ್ತರು ಜೀವನದಲ್ಲಿ ಕಷ್ಟ ಅನುಭವಿಸಿ ಸತ್ತ ಮೇಲೆನೇ ಪುನರುತ್ಥಾನ ಆಗಿ ಸ್ವರ್ಗಕ್ಕೆ ಹೋಗಲಿದ್ದರು.
ಹಾಗಾಗಿ 1 ಕೊರಿಂಥ 15:29 ರಲ್ಲಿ ಪೌಲ ಹೇಳಿದ ಮಾತನ್ನ ಹೀಗೆ ಅರ್ಥಮಾಡ್ಕೊಬೇಕು: “ಇಲ್ಲವಾದರೆ, ಸತ್ತವರಾಗುವ ಉದ್ದೇಶದಿಂದ ದೀಕ್ಷಾಸ್ನಾನ ಪಡೆದುಕೊಳ್ಳುತ್ತಿರುವವರು ಏನು ಮಾಡುವರು? ಸತ್ತವರು ಎಂದಿಗೂ ಎಬ್ಬಿಸಲ್ಪಡುವುದಿಲ್ಲವಾದರೆ ಅವರು ಸತ್ತವರಾಗಬೇಕೆಂಬ ಉದ್ದೇಶಕ್ಕಾಗಿ ಏಕೆ ದೀಕ್ಷಾಸ್ನಾನ ಪಡೆದುಕೊಳ್ಳುತ್ತಿದ್ದಾರೆ?”