ವಾಚಕರಿಂದ ಪ್ರಶ್ನೆಗಳು
ಯಾಜಕಕಾಂಡ 19:16ರಲ್ಲಿ “ನಿಮ್ಮಿಂದ ಇನ್ನೊಬ್ಬನ ಜೀವ ಹೋಗಬಾರದು” ಅಂತ ಯೆಹೋವ ಕೊಟ್ಟ ಆಜ್ಞೆಯ ಅರ್ಥವೇನು? ಇದರಿಂದ ನಾವೇನು ಕಲಿಯಬಹುದು?
▪ ಯೆಹೋವ ದೇವರು ಇಸ್ರಾಯೇಲ್ಯರಿಗೆ ನೀವು ಪವಿತ್ರರಾಗಿರಬೇಕು ಅಂತ ಹೇಳಿದನು. ಅದಕ್ಕಾಗಿ ಒಂದು ಆಜ್ಞೆಯನ್ನೂ ಕೊಟ್ಟನು. ಅದೇನಂದರೆ: “ನೀವು ಬೇರೆಯವರ ಹೆಸ್ರು ಹಾಳು ಮಾಡೋಕೆ ಸುಳ್ಳುಗಳನ್ನ ಹಬ್ಬಿಸಬಾರದು. ನಿಮ್ಮಿಂದ ಇನ್ನೊಬ್ಬನ ಜೀವ ಹೋಗಬಾರದು. ನಾನು ಯೆಹೋವ.”—ಯಾಜ. 19:2, 16.
ನಿಮ್ಮಿಂದ ಇನ್ನೊಬ್ಬನ ಜೀವ ಹೋಗಬಾರದು ಅನ್ನೋ ಮಾತಿಗೆ ಹೀಬ್ರೂನಲ್ಲಿ ‘ನೀನು ಇನ್ನೊಬ್ಬನ ವಿರುದ್ಧ ನಿಲ್ಲಬಾರದು’ ಅಂತ ಇತ್ತು. ಹಾಗಾದರೆ ಈ ಮಾತಿನ ಅರ್ಥವೇನು? ಯಾಜಕಕಾಂಡ ಪುಸ್ತಕದ ಬಗ್ಗೆ ಒಂದು ಪುಸ್ತಕ ಹೀಗೆ ಹೇಳಿತು: “ಈ ವಚನದ ಅರ್ಥ ತಿಳಿದುಕೊಳ್ಳೋದು ಅಷ್ಟು ಸುಲಭ ಅಲ್ಲ. ಯಾಕಂದ್ರೆ ಇದು ಹೀಬ್ರು ಭಾಷೆಯ ಒಂದು ಗಾದೆ. ಇದರ ನಿಜವಾದ ಅರ್ಥ ನಮಗೆ ಗೊತ್ತಿಲ್ಲ.”
ಕೆಲವು ವಿದ್ವಾಂಸರು ಈ ವಾಕ್ಯವನ್ನ 15ನೇ ವಚನಕ್ಕೆ ಸೇರಿಸಿ ಹೇಳ್ತಾರೆ. 15ರಲ್ಲಿ ಹೀಗಿದೆ: “ನೀವು ಅನ್ಯಾಯವಾಗಿ ತೀರ್ಪು ಕೊಡಬಾರದು. ಒಬ್ಬ ವ್ಯಕ್ತಿ ಬಡವ ಅನ್ನೋ ಕಾರಣಕ್ಕೆ ಅವನಿಗೆ ದಯೆತೋರಿಸಿ ಅವನ ಪರವಾಗಿ ತೀರ್ಪು ಕೊಡಬಾರದು ಅಥವಾ ಶ್ರೀಮಂತ ಅನ್ನೋ ಕಾರಣಕ್ಕೆ ಅವನ ಪರವಹಿಸಿ ತೀರ್ಪು ಕೊಡಬಾರದು. ಎಲ್ರಿಗೂ ನ್ಯಾಯವಾಗಿ ತೀರ್ಪು ಕೊಡಬೇಕು.” (ಯಾಜ. 19:15) ಈ ವಚನವನ್ನ ಹೀಗೆ ಅರ್ಥಮಾಡಿಕೊಂಡ್ರೆ ವಚನ 16ರಲ್ಲಿ ‘ನೀವು ಇನ್ನೊಬ್ಬನ ವಿರುದ್ಧ ನಿಲ್ಲಬಾರದು’ ಅನ್ನೋ ಹೀಬ್ರು ಪದದ ಅರ್ಥ, ಒಬ್ಬ ಇಸ್ರಾಯೇಲ್ಯ ಇನ್ನೊಬ್ಬನ ವಿರುದ್ಧ ನ್ಯಾಯಾಲಯದಲ್ಲಿ, ವ್ಯಾಪಾರ ವ್ಯವಹಾರದಲ್ಲಿ, ಮತ್ತು ಕುಟುಂಬದ ವಿಷಯಗಳಲ್ಲಿ ತನ್ನ ಸ್ವಂತ ಲಾಭಕ್ಕೋಸ್ಕರ ಅವನ ವಿರುದ್ಧವಾಗಿ ನಿಲ್ಲಬಾರದು ಅನ್ನೋ ಅರ್ಥ ಕೊಡುತ್ತೆ. ನಾವು ಇದನ್ನೆಲ್ಲಾ ಮಾಡಬಾರದು ನಿಜ. ಆದ್ರೆ 16ನೇ ವಚನದಲ್ಲಿರೋ ಈ ಮಾತನ್ನ ಇನ್ನೂ ಚೆನ್ನಾಗಿ ಹೇಗೆ ಅರ್ಥಮಾಡಿಕೊಳ್ಳಬಹುದು ಅಂತ ಈಗ ನೋಡೋಣ.
ಆ ವಚನ ಹೇಗೆ ಶುರುವಾಗುತ್ತೆ ಅಂತ ನೋಡಿ. ಯೆಹೋವ ದೇವರು ತನ್ನ ಜನರಿಗೆ ನೀವು ಬೇರೆಯವರ ಹೆಸ್ರು ಹಾಳು ಮಾಡೋಕೆ ಸುಳ್ಳುಗಳನ್ನ ಹಬ್ಬಿಸಬಾರದು ಅಂತ ಹೇಳಿದನು. ಒಬ್ಬನ ಬಗ್ಗೆ ಹರಟೆ ಮಾತು ಆಡಿದ್ರೆನೇ ತುಂಬ ಸಮಸ್ಯೆಗಳಾಗುತ್ತೆ. ಅಂಥದ್ರಲ್ಲಿ ಅವರ ಬಗ್ಗೆ ಸುಳ್ಳುಸುದ್ದಿ ಹಬ್ಬಿಸಿದರೆ ಇನ್ನೂ ಜಾಸ್ತಿ ತೊಂದ್ರೆಗಳಾಗುತ್ತೆ. (ಜ್ಞಾನೋ. 10:19; ಪ್ರಸಂ. 10:12-14; 1 ತಿಮೊ. 5:11-15; ಯಾಕೋ. 3:6) ಒಬ್ಬ ವ್ಯಕ್ತಿ ಇನ್ನೊಬ್ಬರ ಹೆಸರು ಹಾಳುಮಾಡೋಕೆ ಸುಳ್ಳುಸುದ್ದಿ ಹಬ್ಬಿಸ್ತಾನೆ. ಹೀಗೆ ಸುಳ್ಳು ಹಬ್ಬಿಸಿದವನು ಆ ವ್ಯಕ್ತಿಯ ಬಗ್ಗೆ ಸುಳ್ಳು ಸಾಕ್ಷಿ ಹೇಳಿದ್ರೆ ನಿರಪರಾಧಿಯಾಗಿರೋ ಆ ವ್ಯಕ್ತಿಯ ಜೀವ ಕೂಡ ಹೋಗಬಹುದು. ನಾಬೋತನ ಉದಾಹರಣೆ ನೋಡಿ. ಅವನ ವಿರುದ್ಧ ಸುಳ್ಳುಗಾರರು ಸುಳ್ಳು ಸಾಕ್ಷಿ ಹೇಳಿದ್ರಿಂದ ಅವನನ್ನ ಅನ್ಯಾಯವಾಗಿ ಕಲ್ಲೆಸೆದು ಕೊಲ್ಲಲಾಯ್ತು. (1 ಅರ. 21:8-13) ಹೀಗೆ ಯಾಜಕಕಾಂಡ 19:16ರಲ್ಲಿ ಹೇಳಿದ ಹಾಗೆ ಸುಳ್ಳು ಹಬ್ಬಿಸೋ ವ್ಯಕ್ತಿಯಿಂದ ಇನ್ನೊಬ್ಬನ ಜೀವ ಹೋಗ್ತಿತ್ತು.
ಒಬ್ಬ ವ್ಯಕ್ತಿ ಇನ್ನೊಬ್ಬನನ್ನ ತುಂಬ ದ್ವೇಷಿಸೋದ್ರಿಂದ ಅವನ ಬಗ್ಗೆ ಸುಳ್ಳುಸುದ್ದಿ ಹಬ್ಬಿಸ್ತಾನೆ. ಅದಕ್ಕೇ 1 ಯೋಹಾನ 3:15 ಹೀಗೆ ಹೇಳುತ್ತೆ: “ತನ್ನ ಸಹೋದರನನ್ನ ದ್ವೇಷಿಸುವವನು ಕೊಲೆಗಾರ. ಕೊಲೆ ಮಾಡುವವ್ರಿಗೆ ಶಾಶ್ವತ ಜೀವ ಸಿಗಲ್ಲ ಅಂತ ನಿಮಗೆ ಗೊತ್ತು.” ಅಷ್ಟೇ ಅಲ್ಲ, ಯೆಹೋವ ದೇವರು ನಿಮ್ಮಿಂದ ಇನ್ನೊಬ್ಬನ ಜೀವ ಹೋಗಬಾರದು ಅಂತ ಹೇಳಿದ ಮೇಲೆ ಯಾಜಕಕಾಂಡ 19:17ರಲ್ಲಿ “ನಿಮ್ಮ ಸಹೋದರನನ್ನ ಮನಸ್ಸಲ್ಲೂ ದ್ವೇಷಿಸಬಾರದು” ಅಂತ ಹೇಳಿದನು.
ಯಾಜಕಕಾಂಡ 19:16ರಲ್ಲಿ ನಮಗೆಲ್ಲರಿಗೂ ಇರೋ ಬುದ್ಧಿವಾದ ಏನಂದ್ರೆ ನಾವು ನಮ್ಮ ಸಹೋದರ ಸಹೋದರಿಯರ ಬಗ್ಗೆ ತಪ್ಪಾಗಿ ಯೋಚನೆ ಮಾಡಬಾರದು, ಅವರ ಹೆಸರನ್ನ ಹಾಳುಮಾಡೋಕೆ ಸುಳ್ಳುಸುದ್ದಿ ಹಬ್ಬಿಸಬಾರದು. ಒಬ್ಬ ವ್ಯಕ್ತಿ ನಮಗೆ ಇಷ್ಟ ಇಲ್ಲ ಅನ್ನೋ ಕಾರಣಕ್ಕೋ ಅಥವಾ ಹೊಟ್ಟೆಕಿಚ್ಚಿಂದಾನೋ ಅವರ ಹೆಸರನ್ನ ಹಾಳುಮಾಡಿದ್ರೆ, ಅಂದ್ರೆ ‘ನಮ್ಮಿಂದ ಇನ್ನೊಬ್ಬನ ಜೀವ ಹೋದರೆ,’ ಅದರ ಅರ್ಥ ನಾವು ಅವರನ್ನ ದ್ವೇಷಿಸ್ತಿದ್ದೀವಿ ಅಂತ. ಆದ್ರೆ ಕ್ರೈಸ್ತರಾದ ನಾವು ಯಾವತ್ತೂ ಇನ್ನೊಬ್ಬರನ್ನ ದ್ವೇಷಿಸಬಾರದು.—ಮತ್ತಾ. 12:36, 37