ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 51

ಗೀತೆ 136 ಯೆಹೋವ ಕೊಡುವ ಪ್ರತಿಫಲ

ನಿಮ್ಮ ಕಣ್ಣೀರನ್ನ ಯೆಹೋವ ಕೈಯಾರೆ ಕೂಡಿಸಿಡ್ತಾನೆ

ನಿಮ್ಮ ಕಣ್ಣೀರನ್ನ ಯೆಹೋವ ಕೈಯಾರೆ ಕೂಡಿಸಿಡ್ತಾನೆ

“ನಿನ್ನ ಚರ್ಮದ ಚೀಲದಲ್ಲಿ ನನ್ನ ಕಣ್ಣೀರನ್ನ ಕೂಡಿಸು. ಅವೆಲ್ಲ ನಿನ್ನ ಪುಸ್ತಕದಲ್ಲಿ ಇಲ್ವಾ?”ಕೀರ್ತ. 56:8.

ಈ ಲೇಖನದಲ್ಲಿ ಏನಿದೆ?

ನಮಗಾಗೋ ಕಷ್ಟ, ನೋವು, ಕಣ್ಣೀರು ಎಲ್ಲನೂ ಯೆಹೋವ ನೋಡ್ತಿದ್ದಾನೆ. ಅಂಥ ಸಮಯದಲ್ಲಿ ಯೆಹೋವ ನಮಗೆ ಹೇಗೆ ಶಾಂತಿ ನೆಮ್ಮದಿ ಕೊಡ್ತಾನೆ ಅಂತ ನೋಡೋಣ.

1-2. ನಮಗೆ ಯಾವಾಗೆಲ್ಲ ಕಣ್ಣೀರು ಬರುತ್ತೆ?

 ಕಣ್ಣೀರು ಹಾಕದೆ ಇರೋ ಕಣ್ಗಳೇ ಇಲ್ಲ. ನಾವೆಲ್ರೂ ಒಂದಲ್ಲ ಒಂದ್ಸಲ ಕಣ್ಣೀರು ಹಾಕಿರ್ತಿವಿ. ಖುಷಿಯಾದಾಗ್ಲೂ ಕಣ್ಣೀರು ಬಂದುಬಿಡುತ್ತೆ. ಉದಾಹರಣೆಗೆ, ನಿಮಗೊಂದು ಮಗು ಹುಟ್ಟಿದಾಗ, ಹಿಂದೆ ನಡಿದಿದ್ದ ಯಾವುದೋ ಒಂದು ವಿಷ್ಯನ ನೆನಸ್ಕೊಂಡಾಗ ಅಥವಾ ಎಷ್ಟೋ ವರ್ಷಗಳಿಂದ ನಿಮಗೆ ಸಿಗದೆ ಇರೋ ಫ್ರೆಂಡ್‌ನ ನೀವು ನೋಡಿದಾಗ ನಿಮಗೇ ಗೊತ್ತಿಲ್ಲದೇ ನಿಮ್ಮ ಕಣ್ಣಲ್ಲಿ ನೀರು ಜಾರುತ್ತೆ.

2 ಖುಷಿಯಾದಾಗ ಬರೋ ಕಣ್ಣೀರಿಗಿಂತ ಕಷ್ಟ ಬಂದಾಗ ಕಣ್ಣೀರಲ್ಲಿ ಮುಳುಗಿ ಹೋಗೋದೇ ಜಾಸ್ತಿ. ಯಾರಾದ್ರೂ ನಮಗೆ ಮೋಸ ಮಾಡಿದಾಗ, ಮನಸ್ಸು ನೋವು ಮಾಡಿದಾಗ ಅಳ್ತೀವಿ, ಹುಷಾರು ಇಲ್ಲದೆ ಹಾಸಿಗೆ ಹಿಡಿದಾಗ ಕಣ್ಣೀರಲ್ಲೇ ಕೈ ತೊಳಿತೀವಿ. ನಾವು ತುಂಬ ಪ್ರೀತಿಸೋರನ್ನ ಕಳ್ಕೊಂಡಾಗ ದುಃಖದಲ್ಲೇ ಮುಳುಗಿ ಹೋಗ್ತೀವಿ. ಇದೇ ತರ ಯೆರೆಮೀಯನಿಗೂ ಆಯ್ತು. ಯೆರೂಸಲೇಮ್‌ ನಾಶ ಆದಾಗ ಅವನಿಗೆ ತಡ್ಕೊಳ್ಳೋಕಾಗದೆ ಇರೋಷ್ಟು ನೋವಾಯ್ತು. ಅದನ್ನ ಅವನ ಮಾತಲ್ಲೇ ಕೇಳಿ: “ನನ್ನ ಕಣ್ಣುಗಳಿಂದ ಕಣ್ಣೀರ ಧಾರೆ ಹರಿದು ಬರ್ತಿದೆ. ಸ್ವಲ್ಪನೂ ನಿಲ್ಲಿಸದೆ ಒಂದೇ ಸಮ ನಾನು ಅಳ್ತಿದ್ದೀನಿ” ಅಂತ ಹೇಳಿದ.—ಪ್ರಲಾ. 3:48, 49.

3. ನಾವು ಕಷ್ಟಪಡೋದನ್ನ ನೋಡುವಾಗ ಯೆಹೋವನಿಗೆ ಹೇಗೆ ಅನ್ಸುತ್ತೆ? (ಯೆಶಾಯ 63:9)

3 ನಮ್ಮಲ್ಲಿ ಒಬ್ಬೊಬ್ರೂ ಇಲ್ಲಿವರೆಗೂ ಜೀವನದಲ್ಲಿ ಎಷ್ಟು ಸಲ ಅತ್ತಿದ್ದೀವಿ, ಎಷ್ಟು ಅತ್ತಿದ್ದೀವಿ ಅನ್ನೋದೆಲ್ಲ ಯೆಹೋವನಿಗೆ ಗೊತ್ತು. ನಾವೆಲ್ಲ ಜೀವನದಲ್ಲಿ ಎದುರಿಸ್ತಿರೋ ಒಂದೊಂದು ಕಷ್ಟನೂ ಯೆಹೋವ ನೋಡ್ತಿದ್ದಾನೆ. ಸಹಾಯಕ್ಕಾಗಿ ನಾವು ಬೇಡೋ ಒಂದೊಂದು ಕೂಗನ್ನ ಆತನು ಕೇಳಿಸ್ಕೊಳ್ತಿದ್ದಾನೆ ಅಂತ ಬೈಬಲ್‌ ಹೇಳುತ್ತೆ. (ಕೀರ್ತ. 34:15) ಹಾಗಂತ ಯೆಹೋವ ನೋಡ್ಕೊಂಡು, ಕೇಳಿಸ್ಕೊಂಡು ಸುಮ್ಮನೆ ಇರ್ತಾನಾ? ಖಂಡಿತ ಇಲ್ಲ. ಯೆಹೋವ ನಮ್ಮ ಅಪ್ಪ! ನಾವು ಕಷ್ಟಪಡೋದನ್ನ ನೋಡಿ ಆತನಿಗೆ ಕರುಳು ಚುರ್‌ ಅನ್ನುತ್ತೆ. ನಮಗೆ ಸಹಾಯ ಮಾಡಬೇಕು ಅಂತ ಆತನ ಮನಸ್ಸು ತುಡಿಯುತ್ತೆ. ಅದಕ್ಕೆ ನಮಗೆ ಸಹಾಯ ಮಾಡೋಕೆ ಯಾವಾಗ್ಲೂ ಸಿದ್ಧನಿರ್ತಾನೆ.ಯೆಶಾಯ 63:9 ಓದಿ.

4. (ಎ) ಯಾರೆಲ್ಲಾ ಕಣ್ಣೀರು ಹಾಕಿದ್ದಾರೆ? (ಬಿ) ಈ ಲೇಖನದಲ್ಲಿ ಏನು ಕಲಿತೀವಿ?

4 ಹಿಂದಿನ ಕಾಲದ ಯೆಹೋವನ ಸೇವಕರೂ ತುಂಬ ಅತ್ತಿದ್ದಾರೆ, ಆಗೆಲ್ಲ ಯೆಹೋವ ಅವ್ರನ್ನ ಸಮಾಧಾನ ಮಾಡಿದ್ದಾನೆ. ನಿಮಗೆ ಗೊತ್ತಾ? ಹನ್ನ, ದಾವೀದ, ರಾಜ ಹಿಜ್ಕೀಯನೂ ಕಣ್ಣೀರು ಹಾಕಿದ್ರು. ಅವರು ಯಾಕೆ ಕಣ್ಣೀರು ಹಾಕಿದ್ರು? ಅವರು ಅತ್ತಾಗ ಯೆಹೋವ ಹೇಗೆ ಸಮಾಧಾನ ಮಾಡಿದ? ನಮಗೆ ನೋವಾದಾಗ, ಯಾರಾದ್ರೂ ಮೋಸ ಮಾಡಿದಾಗ ಅಥವಾ ನಾವು ಕಾಯಿಲೆಯಿಂದ ಕುಗ್ಗಿಹೋದಾಗ ಅತ್ತರೆ ಯೆಹೋವ ನಮಗೆ ಹೇಗೆ ಸಮಾಧಾನ ಮಾಡ್ತಾನೆ ಅಂತ ನೋಡೋಣ.

ನೋವಿನ ಕಣ್ಣೀರು

5. ಹನ್ನಳ ಜೀವನ ಹೇಗಿತ್ತು?

5 ಹನ್ನಳ ಜೀವನ ಕಣ್ಣೀರಲ್ಲಿ ಕೈತೊಳೆಯೋ ತರ ಇತ್ತು. ಹನ್ನಳ ಗಂಡ ಎರಡನೇ ಮದುವೆ ಆಗಿದ್ದ. ಆ ಎರಡನೇ ಹೆಂಡತಿ ಹೆಸ್ರು ಪೆನಿನ್ನ. ಅವಳು ಹನ್ನಳಿಗೆ ತುಂಬಾ ಚುಚ್ಚಿ-ಚುಚ್ಚಿ ಮಾತಾಡ್ತಿದ್ದಳು. ಗಾಯದ ಮೇಲೆ ಬರೆ ಎಳೆಯೋ ತರ ಹನ್ನಗೆ ಬಂಜೆತನ ಬೇರೆ ಇತ್ತು. ಆದ್ರೆ ಪೆನಿನ್ನಳಿಗೆ ಮಾತ್ರ ತುಂಬ ಮಕ್ಕಳಿದ್ರು. (1 ಸಮು. 1:1, 2) ಪೆನಿನ್ನ ಹನ್ನಳಿಗೆ ಬಂಜೆತನವನ್ನ ನೆನಪಿಸಿ-ನೆನಪಿಸಿ ತುಂಬ ಕಿರುಕುಳ ಕೊಡ್ತಿದ್ದಳು. ಒಂದುವೇಳೆ ನಿಮಗೆ ಈ ತರ ಆಗಿದಿದ್ರೆ ಹೇಗೆ ಅನಿಸ್ತಿತ್ತು? ಪೆನಿನ್ನಳಿಂದ ಹನ್ನಳ ಮನಸ್ಸು ಎಷ್ಟು ನೊಂದೋಗಿತ್ತು ಅಂದ್ರೆ ಹನ್ನ ಕೆಲವು ಸಲ “ಊಟ” ಬಿಟ್ಟುಬಿಡ್ತಿದ್ದಳು, “ಬಿಕ್ಕಿಬಿಕ್ಕಿ ಅಳ್ತಾ” ಇದ್ದಳು.—1 ಸಮು. 1:6, 7, 10.

6. ಹನ್ನ ಸಮಾಧಾನ ಪಡ್ಕೊಳ್ಳೋಕೆ ಏನು ಮಾಡಿದಳು?

6 ಹನ್ನಳಿಗೆ ಸಮಾಧಾನ ಸಿಕ್ತಾ? ಖಂಡಿತ ಸಿಕ್ತು. ಇಷ್ಟೆಲ್ಲ ನೋವಿದ್ರೂ ಯೆಹೋವನನ್ನ ಆರಾಧನೆ ಮಾಡ್ತಿದ್ದ ಡೇರೆಗೆ ಹನ್ನ ಹೋದಳು. ಬಹುಶಃ ಡೇರೆ ಅಂಗಳದ ಮುಂದೆ “ಹನ್ನ ಬಿಕ್ಕಿಬಿಕ್ಕಿ ಅಳ್ತಾ ದುಃಖದಿಂದ ಯೆಹೋವನಿಗೆ ಪ್ರಾರ್ಥಿಸೋಕೆ ಶುರು ಮಾಡಿದಳು.” ಅವಳು ಯೆಹೋವನ ಹತ್ರ “ನಿನ್ನ ಈ ದಾಸಿಯ ಪರಿಸ್ಥಿತಿಗೆ ಗಮನಕೊಡು. ನನ್ನನ್ನ ನೋಡಿ ನನ್ನ ಬಿನ್ನಹ ಕೇಳಿಸ್ಕೊ” ಅಂತ ತನ್ನ ದುಃಖವನ್ನೆಲ್ಲ ತೋಡ್ಕೊಂಡಳು. (1 ಸಮು. 1:10, 11) ಹನ್ನ ಈ ತರ ತನ್ನ ಮನಸ್ಸಲ್ಲಿ ಇರೋದನ್ನೆಲ್ಲ ಹೇಳ್ಕೊಳ್ಳುವಾಗ ಯೆಹೋವನಿಗೆ ಹೇಗೆ ಅನಿಸಿರುತ್ತೆ ಅಲ್ವಾ? ತನ್ನ ಮುದ್ದಿನ ಮಗಳು ಈ ತರ ಕಣ್ಣೀರು ಹಾಕೋದನ್ನ ನೋಡುವಾಗ ನಿಜವಾಗ್ಲೂ ಯೆಹೋವನ ಕರುಳು ಚುರ್‌ ಅಂದಿರುತ್ತೆ.

7. ತನ್ನ ದುಃಖನೆಲ್ಲ ಯೆಹೋವನ ಹತ್ರ ತೋಡ್ಕೊಂಡ ಮೇಲೆ ಹನ್ನಳಿಗೆ ಹೇಗನಿಸ್ತು?

7 ಹನ್ನ ಈ ತರ ದುಃಖ ತೋಡ್ಕೊಳ್ಳೋದನ್ನ ಏಲಿ ನೋಡಿ ಅವಳ ಹತ್ರ ಬಂದು ‘ಯೆಹೋವ ನಿನ್ನ ಪ್ರಾರ್ಥನೆಯನ್ನ ಕೇಳಿದ್ದಾನೆ, ಅದಕ್ಕೆ ಉತ್ರ ಕೊಡ್ತಾನೆ’ ಅಂತ ಹೇಳಿದ. ಇದನ್ನ ಕೇಳಿ ಹನ್ನಗೆ ಹೇಗನಿಸ್ತು? ಹನ್ನ “ಸಮಾಧಾನದಿಂದ ಹೋಗಿ ಊಟ ಮಾಡಿದಳು. ಆಮೇಲೆ ಅವಳ ಮುಖದಲ್ಲಿ ದುಃಖ ಕಾಣಿಸ್ಲೇ ಇಲ್ಲ” ಅಂತ ಬೈಬಲ್‌ ಹೇಳುತ್ತೆ. (1 ಸಮು 1:17, 18) ಆದ್ರೆ ಈ ತರ ದುಃಖ ತೋಡ್ಕೊಂಡ ತಕ್ಷಣ ಅವಳ ಪರಿಸ್ಥಿತಿ ಬದಲಾಗಿಲ್ಲ ನಿಜ. ಆದ್ರೆ ಅವಳ ಮನಸ್ಸು ನಿರಾಳ ಆಯ್ತು, ಅವಳಿಗೆ ನೆಮ್ಮದಿ ಸಿಕ್ತು. ಹೀಗೆ ಹನ್ನ ಅವಳಿಗಿದ್ದ ಭಾರನ್ನೆಲ್ಲ ಯೆಹೋವನ ಮೇಲೆ ಹಾಕಿದ್ದಳು. ಇಷ್ಟು ದಿನ ಸುರಿಸ್ತಿದ್ದ ಆಕೆಯ ಕಣ್ಣೀರನ್ನ ದೇವರು ನೋಡಿದ, ಕಷ್ಟನ ಅರ್ಥ ಮಾಡ್ಕೊಂಡ. ಅವಳ ಪ್ರಾರ್ಥನೆಯನ್ನ ಕೇಳಿ ಅವಳಿಗೆ ಒಂದು ಮಗು ಕೊಟ್ಟು ಆಶೀರ್ವದಿಸಿದನು.—1 ಸಮು. 1:19, 20; 2:21.

8-9. ಎಷ್ಟೇ ಕಷ್ಟ ಇದ್ರೂ ಮೀಟಿಂಗ್‌ ಹೋಗೋಕೆ ಯಾಕೆ ಪ್ರಯತ್ನ ಮಾಡಬೇಕು? (ಇಬ್ರಿಯ 10:24, 25) (ಚಿತ್ರ ನೋಡಿ.)

8 ನಮಗೇನು ಪಾಠ? ನಿಮಗೂ ಬೆಟ್ಟದಷ್ಟು ಕಷ್ಟ ಇರಬಹುದು. ತಡೆಯೋಕೆ ಆಗದಷ್ಟು ನೋವು ಇರಬಹುದು. ಉದಾಹರಣೆಗೆ, ನಮ್ಮ ಕುಟುಂಬದವ್ರೋ, ಸ್ನೇಹಿತ್ರೋ ತೀರಿಹೋಗಿರಬಹುದು. ಆಗ, ಮನೆಯಿಂದ ಆಚೆ ಬರೋಕೆ ಮನಸ್ಸು ಬರದೆ ‘ನಾಲ್ಕು ಗೋಡೆ ಮಧ್ಯೆ ಇದ್ರೆ ಸಾಕಪ್ಪಾ’ ಅಂತ ಅನಿಸಬಹುದು. (ಇಬ್ರಿಯ 10:24, 25 ಓದಿ.) ಆದ್ರೆ ಹನ್ನಳಿಗೆ ಸಮಾಧಾನ ಹೇಗೆ ಸಿಕ್ತು? ಅವಳು ಡೇರೆಗೆ ಹೋಗಿದ್ದಕ್ಕಲ್ವಾ? ಅದೇ ತರ ನೀವು ಮೀಟಿಂಗ್ಸ್‌ ಹೋಗೋದನ್ನ ಮರಿಬೇಡಿ. ದುಃಖ ಇದ್ದಾಗ್ಲೂ, ನೋವಿದ್ದಾಗ್ಲೂ ಮೀಟಿಂಗ್‌ ಹೋದ್ರೆ ಸಮಾಧಾನ ಸಿಗುತ್ತೆ. ಹನ್ನ ಡೇರೆಗೆ ಹೋದ ತಕ್ಷಣ ಕಷ್ಟ ತೀರಲಿಲ್ಲ. ಅದೇ ತರ ನಾವು ಮೀಟಿಂಗ್‌ ಹೋಗಿದ ತಕ್ಷಣ ನಮ್ಮ ಕಷ್ಟಗಳೆಲ್ಲ ಮಾಯ ಆಗದೇ ಇರಬಹುದು.

9 ಆದ್ರೆ ಅಲ್ಲಿ ಕೇಳಿಸ್ಕೊಳ್ಳೋ ಬೈಬಲ್‌ ವಿಷ್ಯಗಳಿಂದ ಯೆಹೋವ ನಮಗೆ ಬೇಕಾಗಿರೋ ಧೈರ್ಯ, ಬಲ ಮತ್ತು ಸಮಾಧಾನ ಕೊಡ್ತಾನೆ. (1 ಥೆಸ. 5:11, 14) ಅಲ್ಲಿ ನಮ್ಮ ಸಹೋದರ ಸಹೋದರಿಯರು ಪ್ರೀತಿಯಿಂದ ಬಾಯಿ ತುಂಬ ಮಾತಾಡಿಸ್ತಾರೆ. ನಮ್ಮ ಬೆನ್ನೆಲುಬಾಗಿ ನಿಲ್ತಾರೆ. ಕೂಟಗಳಿಂದ ಒಬ್ಬ ವಿಶೇಷ ಪಯನಿಯರ್‌ ಸಹೋದರನಿಗೂ ತುಂಬಾ ಸಹಾಯ ಸಿಕ್ತು. ಅವ್ರ ಹೆಂಡತಿ ತೀರಿಹೋಗಿದ್ರು. “ನನ್ನ ಹೆಂಡ್ತಿ ಆಗಾಗ ನೆನಪಾಗ್ತಾ ಇರ್ತಾಳೆ. ಮನೇಲಿ ಒಂದು ಮೂಲೆಯಲ್ಲಿ ಕೂತು ನಾನ್‌ ಅಳ್ತಾನೇ ಇರ್ತೀನಿ. ಮೀಟಿಂಗ್‌ ಹೋಗೋಕೂ ಮನಸಾಗಲ್ಲ. ಆದ್ರೆ ಹೆಂಗೋ ಧೈರ್ಯ ಮಾಡ್ಕೊಂಡು ಮೀಟಿಂಗ್‌ ಹೋಗ್ತೀನಿ. ಮೀಟಿಂಗಲ್ಲಿ ಎಲ್ರೂ ನನ್ನತ್ರ ಬಂದು ಮಾತಾಡಿದಾಗ ಅವರು ಹೇಳೋ ಉತ್ರ ಕೇಳಿಸ್ಕೊಂಡಾಗ ನನ್ನ ಮನಸ್ಸಿಗೆ ನೆಮ್ಮದಿ ಸಿಗುತ್ತೆ. ನನಗೆ ಎಷ್ಟೇ ಚಿಂತೆ ಇದ್ರೂ ಅಲ್ಲಿಗೆ ಹೋದ್ಮೇಲೆ ನನ್ನ ಚಿಂತೆನೆಲ್ಲ ಮರೆತು ಬಿಡ್ತೀನಿ” ಅಂತ ಆ ಸಹೋದರ ಹೇಳ್ತಾನೆ. ನೆನಪಿಡಿ, ನಾವು ಮೀಟಿಂಗ್‌ಗೆ ತಪ್ಪದೇ ಹೋದ್ರೆ ಯೆಹೋವ ಅಲ್ಲಿರೋ ಸಹೋದರ ಸಹೋದರಿಯರನ್ನ ಬಳಸಿ ನಮಗೆ ಬೇಕಾಗಿರೋ ಸಹಾಯ ಕೊಡ್ತಾನೆ.

ಸಹೋದರ ಸಹೋದರಿಯರಿಂದಾನೂ ಸಾಂತ್ವನ ಸಿಗುತ್ತೆ (ಪ್ಯಾರ 8-9 ನೋಡಿ)


10. ತಾಳ್ಕೊಳ್ಳೋಕೆ ಆಗದಿರೋಷ್ಟು ದುಃಖ ನಮಗಿದ್ರೆ ನಾವೇನು ಮಾಡ್ಬೇಕು?

10 ಹನ್ನ ಸಮಾಧಾನ ಪಡ್ಕೊಳ್ಳೋಕೆ ಪ್ರಾರ್ಥನೆ ಮಾಡಿದ್ಳು ನೆನಪಿದ್ಯಾ? ಅದೇ ತರ ನೀವು ಕೂಡ “ನಿಮಗಿರೋ ಚಿಂತೆಯನ್ನೆಲ್ಲಾ ದೇವರ ಮೇಲೆ ಹಾಕಿ.” (1 ಪೇತ್ರ 5:7) ಯಾಕಂದ್ರೆ ಆತನು ನಿಮ್ಮ ಪ್ರಾರ್ಥನೆಯನ್ನ ಕೇಳೇ ಕೇಳ್ತಾನೆ. ಒಬ್ಬ ಸಹೋದರಿಗೆ ಪ್ರಾರ್ಥನೆ ಹೇಗೆ ಸಹಾಯ ಮಾಡ್ತು ಅಂತ ನೋಡೋಣ ಬನ್ನಿ. ಈ ಸಹೋದರಿಯ ಗಂಡನನ್ನ ಕಳ್ಳರು ಕೊಂದುಬಿಟ್ರು. “ನನ್ನ ಹೃದಯ ಚೂರು ಚೂರಾಯ್ತು. ಏನು ಮಾಡಿದ್ರೂ ಸಮಾಧಾನ ಸಿಕ್ತಿರಲಿಲ್ಲ. ಆದ್ರೆ ಯೆಹೋವ ಅಪ್ಪಗೆ ನಾನು ಪ್ರಾರ್ಥನೆ ಮಾಡ್ತಿದ್ದೆ. ಒಂದೊಂದ್‌ ಸಲ ದುಃಖ ಹೇಳ್ಕೊಳ್ಳೋಕೆ ಮಾತೇ ಬರ್ತಿರಲಿಲ್ಲ. ಆದ್ರೂ ಯೆಹೋವ ನನ್ನನ್ನ ಅರ್ಥ ಮಾಡ್ಕೊಂಡ್ರು. ಚೂರು ಚೂರಾಗಿದ್ದ ನನ್ನ ಮನಸ್ಸಿಗೆ ಶಾಂತಿ, ನೆಮ್ಮದಿ ಕೊಟ್ರು” ಅಂತ ಆ ಸಹೋದರಿ ಹೇಳ್ತಾರೆ. ನಿಮ್ಮ ಮನಸ್ಸಿಗೆ ಎಷ್ಟೇ ನೋವಾಗಿರಲಿ ದಯವಿಟ್ಟು ನಿಮ್ಮ ನೋವನ್ನ ಯೆಹೋವನ ಹತ್ರ ಹೇಳ್ಕೊಳ್ಳಿ. ಯಾಕಂದ್ರೆ ಆತನು ನಿಮ್ಮ ನೋವನ್ನ ಅರ್ಥ ಮಾಡ್ಕೊಳ್ತಾನೆ. ನಿಮಗಿರೋ ಸಮಸ್ಯೆನ ಯೆಹೋವ ತಕ್ಷಣ ತೆಗೆದು ಹಾಕಿಲ್ಲ ಅಂದ್ರೂ ನಿಮಗೆ ಬೇಕಾಗಿರೋ ಶಾಂತಿ, ಸಮಾಧಾನನ ಖಂಡಿತ ಕೊಡ್ತಾನೆ. (ಕೀರ್ತ. 94:19; ಫಿಲಿ. 4:6, 7) ಕಷ್ಟಗಳ ಮಧ್ಯೆನೂ ನಿಯತ್ತಾಗಿರೋಕೆ ನೀವು ಹಾಕ್ತಿರೋ ಪ್ರಯತ್ನನ ದೇವರು ನೋಡ್ತಿದ್ದಾನೆ. ನಿಮ್ಮನ್ನ ಖಂಡಿತ ಆಶೀರ್ವದಿಸ್ತಾನೆ.—ಇಬ್ರಿ. 11:6.

ಮೋಸ ಹೋದಾಗ ಬರೋ ಕಣ್ಣೀರು

11. ನಂಬಿದವ್ರೇ ದಾವೀದನನ್ನ ದೂರ ಮಾಡಿದಾಗ, ಮೋಸ ಮಾಡಿದಾಗ ಅವನಿಗೆ ಹೇಗನಿಸ್ತು?

11 ದಾವೀದ ಜೀವನದುದ್ದಕ್ಕೂ ಸಮಸ್ಯೆಗಳ ಸರಮಾಲೆನೇ ಅನುಭವಿಸಿದ. ಅವನು ತುಂಬಾ ಕಣ್ಣೀರು ಸುರಿಸಿದ. ಸ್ವಂತದವ್ರೇ ಅವನನ್ನ ದೂರ ಮಾಡಿದ್ರು, ನಂಬಿದವ್ರೇ ಅವ್ನಿಗೆ ಮೋಸ ಮಾಡ್ಬಿಟ್ರು. (1 ಸಮು. 19:10, 11; 2 ಸಮು. 15:10-14, 30) ಅದಕ್ಕೆ ದಾವೀದ ಒಂದ್ಸಲ “ಗೋಳಾಡಿ ಗೋಳಾಡಿ ಸುಸ್ತಾಗಿ ಹೋಗಿದ್ದೀನಿ, ರಾತ್ರಿಯಿಡೀ ಅತ್ತುಅತ್ತು ಕಣ್ಣೀರಿಂದ ನನ್ನ ಹಾಸಿಗೆ ಒದ್ದೆ ಆಗಿದೆ, ಕಣ್ಣೀರಲ್ಲೇ ನನ್ನ ಮಂಚ ಮುಳುಗಿ ಹೋಗಿದೆ” ಅಂತ ಹೇಳಿದ. ದಾವೀದನಿಗೆ ಯಾಕೆ ಇಷ್ಟು ನೋವಾಯ್ತು? ಜನ “ಕಿರುಕುಳ” ಕೊಡ್ತಿದ್ರಿಂದ ಅವನಿಗೆ ಈ ತರ ಆಯ್ತು ಅಂತ ಅವನೇ ಹೇಳಿದ್ದಾನೆ. (ಕೀರ್ತ. 6:6, 7) ವೀರನಾಗಿರೋ ದಾವೀದನೇ ಅತ್ತು ಈ ಮಾತುಗಳನ್ನ ಹೇಳಿದ ಅಂದ್ರೆ ಜನ ಅವನಿಗೆ ಇನ್ನೆಷ್ಟು ನೋವು ಮಾಡಿರಬೇಕಲ್ವಾ?

12. ತನ್ನ ಕಷ್ಟದ ಕಣ್ಣೀರನ್ನ ಯೆಹೋವ ಹೇಗೆ ನೋಡ್ತಾನೆ ಅಂತ ದಾವೀದ ಹೇಳಿದ್ದಾನೆ? (ಕೀರ್ತನೆ 56:8)

12 ದಾವೀದನಿಗೆ ಅವನ ಕಣ್ಮುಂದೆ ಬರೀ ಕಷ್ಟಗಳೇ ಕಾಣಿಸ್ತಿದ್ರೂ ಯೆಹೋವ ಅವನನ್ನ ಪ್ರೀತಿಸ್ತಾನೆ ಅಂತ ಮರೆತಿರಲಿಲ್ಲ. ಅದಕ್ಕೆ ಅವನು “ಯೆಹೋವ ನನ್ನ ವೇದನೆಯನ್ನ ಕೇಳಿಸ್ಕೊಳ್ತಾನೆ” ಅಂತ ಬರೆದ. (ಕೀರ್ತ. 6:8) ಆದ್ರೆ ಅವನು ಕೀರ್ತನೆ 56:8ರಲ್ಲಿ (ಓದಿ) ಹೇಳಿರೋ ಮಾತನ್ನ ಯಾರು ಮರೆಯೋಕೆ ಆಗಲ್ಲ. ಈ ವಚನದಲ್ಲಿರೋ ಮಾತುಗಳನ್ನ ಓದಿದಾಗ ನಿಜವಾಗ್ಲೂ ನಮ್ಮ ಮನಸ್ಸು ಮುಟ್ಟುತ್ತೆ. ಅದ್ರಿಂದ ಯೆಹೋವ ನಮ್ಮನ್ನ ಎಷ್ಟು ಪ್ರೀತಿಸ್ತಾನೆ, ನಮ್ಮ ಬಗ್ಗೆ ಎಷ್ಟು ಯೋಚಿಸ್ತಾನೆ ಅಂತ ಗೊತ್ತಾಗುತ್ತೆ. ಪ್ರತಿ ಸಲ ಕಷ್ಟ ಬಂದಾಗ ದಾವೀದ ಸುರಿಸ್ತಿದ್ದ ಕಣ್ಣೀರನ್ನ ಯೆಹೋವ ಒಂದು ಬಾಟಲ್‌ನಲ್ಲಿ ಕೊಡಿಸಿಡೋ ತರ ಅಥವಾ ಒಂದು ಪುಸ್ತಕದಲ್ಲಿ ಬರೆದಿಡೋ ತರ ಇದೆ ಅಂತ ದಾವೀದ ಹೇಳ್ದ. ಈ ಮಾತಿನ ಅರ್ಥ ಏನಂದ್ರೆ ದಾವೀದನಿಗೆ ಬಂದಿರೋ ಪ್ರತಿಯೊಂದು ಕಷ್ಟನ ಯೆಹೋವ ನೋಡಿದ್ದಾನೆ, ಅವನಿಗೆ ಆಗ್ತಿರೋ ನೋವನ್ನ ನೆನಪಿಟ್ಕೊಂಡಿದ್ದಾನೆ ಅಂತ. ಜೊತೆಗೆ ಪ್ರತಿದಿನ ಕಷ್ಟ ಬಂದಾಗ್ಲೂ ದಾವೀದ ಎಷ್ಟು ನರಳಾಡಿದ್ದ ಅಂತ ಯೆಹೋವ ಅರ್ಥ ಮಾಡ್ಕೊಂಡಿದ್ದಾನೆ ಅಂತನೂ ಅವನಿಗೆ ಗೊತ್ತಿತ್ತು.

13. ಯಾರಾದ್ರೂ ನಮಗೆ ಮೋಸ, ಅನ್ಯಾಯ ಮಾಡಿದ್ರೆ ನಾವು ಏನನ್ನ ನೆನಪಲ್ಲಿಡಬೇಕು? (ಚಿತ್ರ ನೋಡಿ.)

13 ನಮಗೇನು ಪಾಠ? ಸ್ವಂತದವ್ರೇ ನಿಮ್ಮನ್ನ ದೂರ ಮಾಡಿದ್ದಾರಾ? ನಂಬಿದವ್ರೇ ನಿಮಗೆ ಮೋಸ ಮಾಡಿದ್ದಾರಾ? ಉದಾಹರಣೆಗೆ, ನಿಮ್ಮನ್ನ ಮದ್ವೆ ಆಗ್ತೀನಿ ಅಂತ ಹೇಳ್ದವ್ರು ಈಗ ‘ಆಗಲ್ಲ’ ಅಂದಿರಬಹುದು. ನಿಮ್ಮ ಮದ್ವೆ ಜೀವನ ಮುರಿದು ಬಿದ್ದಿರಬಹುದು ಅಥವಾ ನೀವು ತುಂಬಾ ಇಷ್ಟಪಡೋರು ಯೆಹೋವನನ್ನೇ ಬಿಟ್ಟು ಹೋಗಿರಬಹುದು. ಒಬ್ಬ ಸಹೋದರನಿಗೂ ಹೀಗೆ ಆಯ್ತು. ಅವ್ರ ಹೆಂಡತಿ ವ್ಯಭಿಚಾರ ಮಾಡಿ ಅವ್ರನ್ನ ಬಿಟ್ಟು ಹೋಗ್ಬಿಟ್ರು. ಆ ಸಹೋದರನಿಗೆ ಹೇಗನಿಸ್ತು? “ನನಗೆ ಆಕಾಶನೇ ತಲೆ ಮೇಲೆ ಬಿದ್ದಂಗಾಯ್ತು. ಒಂದು ಕ್ಷಣಕ್ಕೆ ಏನಾಗ್ತಿದೆ ಅಂತ ಅರ್ಥನೇ ಆಗ್ಲಿಲ್ಲ. ನನ್ನ ಬಗ್ಗೆ ನಂಗೆ ಒಂಥರಾ ಅನಿಸ್ತು. ಕೋಪ ಬಂತು, ದುಃಖ ಆಯ್ತು. ಆದ್ರೆ ನಾನು ನಿಧಾನವಾಗಿ ಅರ್ಥ ಮಾಡ್ಕೊಂಡೆ. ನಾವು ನಂಬಿದ ಮನುಷ್ಯರು ನಮಗೆ ಕೈ ಕೊಟ್ರೂ ಯೆಹೋವ ನಮ್ಮ ಕೈಹಿಡಿತಾನೆ. ಅದೇನೇ ಆದ್ರೂ ಯೆಹೋವ ನನ್ನ ಜೊತೆನೇ ಇರ್ತಾನೆ. ‘ನಿಷ್ಠಾವಂತ ಸೇವಕರ ಕೈಯನ್ನ ಯೆಹೋವ ಯಾವತ್ತೂ ಬಿಡಲ್ಲ’” ಅಂತ ಆ ಸಹೋದರ ಹೇಳ್ತಾನೆ. (ಕೀರ್ತ. 37:28) ನಿಮಗೂ ಯಾರಾದ್ರೂ ಈ ತರ ಮೋಸ ಮಾಡಿದ್ರೆ, ಅನ್ಯಾಯ ಮಾಡಿದ್ರೆ ನೆನಪಿಡಿ, ಯೆಹೋವ ಯಾವತ್ತೂ ನಿಮ್ಮ ಕೈಬಿಡಲ್ಲ. (ರೋಮ. 8:38, 39) ಜನ ನಿಮ್ಮ ಮೇಲಿಟ್ಟಿರೋ ಪ್ರೀತಿಯನ್ನ ಕಳ್ಕೊಬಹುದು, ಆದ್ರೆ ಯೆಹೋವ ನಿಮ್ಮ ಮೇಲೆ ಇಟ್ಟಿರೋ ಪ್ರೀತಿಯನ್ನ ಯಾವತ್ತೂ ಕಳ್ಕೊಳಲ್ಲ. ಆತನು ನಿಮ್ಮನ್ನ ತುಂಬಾ ಅಮೂಲ್ಯವಾಗಿ ನೋಡ್ತಾನೆ. ಹಾಗಾಗಿ ಮನುಷ್ಯರು ನಿಮ್ಮ ಜೊತೆ ಹೇಗೇ ನಡ್ಕೊಳ್ಳಿ ಯೆಹೋವ ಮಾತ್ರ ನಿಮ್ಮನ್ನ ಯಾವಾಗ್ಲೂ ಪ್ರೀತಿಸ್ತಾನೆ ಅನ್ನೋದನ್ನ ಮರೀಬೇಡಿ!

ಮನಸ್ಸು ಚೂರುಚೂರಾಗಿ ಹೋದವ್ರಿಗೆ ಯೆಹೋವ ಹತ್ರಾನೇ ಇರ್ತಾನೆ ಅಂತ ಕೀರ್ತನೆ ಪುಸ್ತಕ ಭರವಸೆ ಕೊಡುತ್ತೆ (ಪ್ಯಾರ 13 ನೋಡಿ)


14. ಕೀರ್ತನೆ 34:18ರಲ್ಲಿರೋ ಮಾತುಗಳಿಂದ ನಮಗೆ ಹೇಗೆ ನೆಮ್ಮದಿ ಸಿಗುತ್ತೆ?

14 ಕೀರ್ತನೆ 34:18ರಲ್ಲಿ (ಓದಿ.) ದಾವೀದ ಹೇಳಿರೋ ಇನ್ನೊಂದು ಮಾತಿಂದಾನೂ ನಮಗೆ ತುಂಬಾ ನೆಮ್ಮದಿ ಸಿಗುತ್ತೆ. ಅಲ್ಲಿ ಅವನು “ಮನಸ್ಸು ಚೂರುಚೂರಾಗಿ ಹೋಗಿರೋರ” ಬಗ್ಗೆ ಹೇಳಿದ್ದಾನೆ. “ಅಂಥವ್ರಿಗೆ ತಮ್ಮ ಬದುಕಲ್ಲಿ ಯಾವುದೇ ನಿರೀಕ್ಷೆ ಇಲ್ಲ ಅಂತ ಅನಿಸಬಹುದು” ಅಂತ ಒಂದು ರೆಫರೆನ್ಸ್‌ ಹೇಳುತ್ತೆ. ಇಂಥವ್ರ ಜೊತೆ ಯೆಹೋವ ಹೇಗೆ ನಡ್ಕೊಳ್ತಾನೆ? ಮಗು ಅಳ್ತಿರೋದನ್ನ ನೋಡಿ ಯಾವ ತಾಯಿನೂ ಸುಮ್ನಿರಲ್ಲ. ಅದ್ರ ಹತ್ರ ಹೋಗಿ ಅದನ್ನ ಹಿಡ್ಕೊಂಡು ಸಮಾಧಾನ ಮಾಡಿ ಧೈರ್ಯ ತುಂಬ್ತಾಳೆ. ಹೆತ್ತ ತಾಯಿಗಿಂತ ಯೆಹೋವ ನಮ್ಮನ್ನ ಜಾಸ್ತಿ ಪ್ರೀತಿಸ್ತಾನೆ. ಅದಕ್ಕೆ ಅನ್ಯಾಯದಿಂದ ಅಥವಾ ಮೋಸದಿಂದ ನಮ್ಮ ಮನಸ್ಸು ಚೂರುಚೂರಾಗಿ ಹೋದಾಗ ಯೆಹೋವನೂ ನಮ್ಮ ಹತ್ರಾನೇ ಇರ್ತಾನೆ. ಒಡೆದು ಹೋಗಿರೋ ನಮ್ಮ ಹೃದಯಕ್ಕೆ ಬೇಕಾದ ಸಾಂತ್ವನ ಕೊಡ್ತಾನೆ. ನಿರೀಕ್ಷೆನೇ ಇಲ್ದಿರೋ ಈ ಜೀವನದಲ್ಲಿ ಕಷ್ಟಗಳನ್ನ ತಾಳ್ಕೊಳ್ಳೋಕೆ ಬೇಕಾಗಿರೋ ನಿರೀಕ್ಷೆನೂ ಕೊಡ್ತಾನೆ. ಹೀಗೆ ನಮಗೆ ಸಹಾಯ ಮಾಡೋಕೆ ಯೆಹೋವ ಸಿದ್ಧನಾಗಿ ಇರ್ತಾನೆ.—ಯೆಶಾ. 65:17.

ಕಾಯಿಲೆಯಿಂದ ಕಣ್ಣೀರು

15. ಹಿಜ್ಕೀಯ ಅತ್ತು ಪ್ರಾರ್ಥನೆ ಮಾಡೋದಕ್ಕೆ ಕಾರಣ ಏನು?

15 ರಾಜ ಹಿಜ್ಕೀಯ ತನಗೆ 39 ವರ್ಷ ಆದಾಗ ಕಾಯಿಲೆ ಬಿದ್ದು ಹಾಸಿಗೆ ಹಿಡಿದು ಬಿಡ್ತಾನೆ. ಆಗ ಪ್ರವಾದಿ ಯೆಶಾಯ ಅವನ ಹತ್ರ ಬಂದು ನಿನ್ನ ಕಾಯಿಲೆ ವಾಸಿ ಆಗಲ್ಲ, ನೀನು ಸತ್ತು ಹೋಗ್ತೀಯ ಅಂತ ಯೆಹೋವ ಹೇಳಿದ್ದಾನೆ ಅಂತ ಹೇಳ್ತಾನೆ. (2 ಅರ. 20:1) ಇದನ್ನ ಕೇಳಿದಾಗ ಹಿಜ್ಕೀಯನಿಗೆ ದಿಕ್ಕೇ ತೋಚಲಿಲ್ಲ. ಅವನು ಯೆಹೋವನ ಹತ್ರ ಸಹಾಯ ಮಾಡು ಅಂತ ಬೇಡ್ಕೊಳ್ತಾನೆ. ಬಿಕ್ಕಿಬಿಕ್ಕಿ ಅತ್ತು ಪ್ರಾರ್ಥನೆ ಮಾಡ್ತಾನೆ.—2 ಅರ. 20:2, 3.

16. ಹಿಜ್ಕೀಯ ಕಣ್ಣೀರಿಟ್ಟು ಪ್ರಾರ್ಥನೆ ಮಾಡಿದಾಗ ಯೆಹೋವ ಏನು ಮಾಡಿದನು?

16 ಹಿಜ್ಕೀಯ ಕಣ್ಣೀರಿಟ್ಟು ಮಾಡಿದ ಪ್ರಾರ್ಥನೆಯನ್ನ ಕೇಳಿ ಯೆಹೋವನಿಗೆ ಅಯ್ಯೋ ಅನಿಸ್ತು. ಅದಕ್ಕೆ ಯೆಹೋವ “ನಿನ್ನ ಪ್ರಾರ್ಥನೆ ಕೇಳಿದ್ದೀನಿ. ನಿನ್ನ ಕಣ್ಣೀರನ್ನ ನೋಡಿದ್ದೀನಿ. ನಿನ್ನನ್ನ ವಾಸಿಮಾಡ್ತೀನಿ” ಅಂತ ಹಿಜ್ಕೀಯನಿಗೆ ಹೇಳ್ತಾನೆ. ಅಷ್ಟೇ ಅಲ್ಲ ಯೆಶಾಯನನ್ನ ವಾಪಸ್‌ ಕಳಿಸಿ ಹಿಜ್ಕೀಯನಿಗೆ ನಿನ್ನ ಆಯಸ್ಸನ್ನ ಹೆಚ್ಚು ಮಾಡ್ತೀನಿ, ಯೆರೂಸಲೇಮನ್ನ ಅಶ್ಶೂರ್ಯರ ಕೈಯಿಂದ ಬಿಡಿಸ್ತೀನಿ ಅಂತ ಮಾತು ಕೊಡ್ತಾನೆ.—2 ಅರ. 20:4-6.

17. ಕಾಯಿಲೆಯಿಂದ ನಾವು ನರಳ್ತಿದ್ರೆ ಯೆಹೋವ ನಮಗೆ ಹೇಗೆ ಸಹಾಯ ಮಾಡ್ತಾನೆ? (ಕೀರ್ತನೆ 41:3) (ಚಿತ್ರ ನೋಡಿ.)

17 ನಮಗೇನು ಪಾಠ? ನಿಮಗೂ ದಿನೇ ದಿನೇ ಹೆಚ್ಚಾಗ್ತಿರೋ ಕಾಯಿಲೆ ಇದ್ಯಾ? ಅದು ವಾಸಿನೇ ಆಗ್ತಿಲ್ಲ ಅಂತ ನಿಮಗೆ ಅನಿಸ್ತಿದ್ಯಾ? ಹಾಗಿದ್ರೆ ಯೆಹೋವನ ಹತ್ರ ದಯವಿಟ್ಟು ಪ್ರಾರ್ಥನೆ ಮಾಡಿ. ನಿಮಗೆ ಆಗ್ತಿರೋ ಎಲ್ಲ ನೋವನ್ನ ಆತನ ಹತ್ರ ಹೇಳ್ಕೊಳ್ಳಿ. ನೀವು ಪ್ರಾರ್ಥನೆ ಮಾಡುವಾಗ ಅತ್ತರೂ ಪರವಾಗಿಲ್ಲ ಯೆಹೋವ ಅದನ್ನ ಕೇಳಿಸ್ಕೊಳ್ತಾನೆ. ಯೆಹೋವ “ಕೋಮಲ ಕರುಣೆ ತೋರಿಸೋ ತಂದೆ, ಎಲ್ಲ ತರದ ಸಾಂತ್ವನ ಕೊಡೋ ದೇವರು” ಅಂತ ಬೈಬಲ್‌ ಹೇಳುತ್ತೆ. (2 ಕೊರಿಂ. 1:3, 4) ಹಾಗಾಗಿ ಏನೇ ಕಷ್ಟ ಬಂದ್ರೂ ಆತನು ನಮಗೆ ಸಾಂತ್ವನ ಕೊಡ್ತಾನೆ. ನಮಗಿರೋ ಎಲ್ಲಾ ಕಷ್ಟಗಳನ್ನ ಯೆಹೋವ ಅದ್ಭುತವಾಗಿ ತೆಗೆದುಹಾಕಲ್ಲ ನಿಜ. ಆದ್ರೆ ನಮಗೆ ಬೇಕಾಗಿರೋ ಸಹಾಯ, ಸಾಂತ್ವನವನ್ನ ಖಂಡಿತ ಕೊಡ್ತಾನೆ. (ಕೀರ್ತನೆ 41:3 ಓದಿ.) ಯೆಹೋವ ನಮಗೆ ಪವಿತ್ರ ಶಕ್ತಿಯನ್ನ ಕೊಟ್ಟು ಎಲ್ಲ ಕಷ್ಟ ಸಂಕಟಗಳನ್ನ ತಾಳ್ಕೊಳೋಕೆ ಬೇಕಾಗಿರೋ ಜ್ಞಾನ, ಬಲ ಮತ್ತು ಮನಶಾಂತಿ ಕೊಡ್ತಾನೆ. (ಜ್ಞಾನೋ. 18:14; ಫಿಲಿ. 4:13) ಮುಂದೊಂದು ದಿನ ‘ಎಲ್ಲಾ ಕಾಯಿಲೆಗಳನ್ನ ತೆಗೆದುಹಾಕ್ತೀನಿ’ ಅಂತ ಮಾತೂ ಕೊಟ್ಟಿದ್ದಾನೆ. ಈ ಮಾತು ನಮಗೆ ನಿರೀಕ್ಷೆ ಕೊಡುತ್ತೆ. ಈ ನಿರೀಕ್ಷೆ ಈಗಿರೋ ಕಷ್ಟಗಳನ್ನ ತಾಳ್ಕೊಳ್ಳೋಕೆ ಸಹಾಯ ಮಾಡುತ್ತೆ.—ಯೆಶಾ. 33:24.

ಯೆಹೋವ ನಮಗೆ ಬೇಕಾಗಿರೋ ಜ್ಞಾನ, ಬಲ ಮತ್ತು ಮನಶಾಂತಿಯನ್ನ ಕೊಟ್ಟು ನಮ್ಮ ಪ್ರಾರ್ಥನೆಗೆ ಉತ್ರ ಕೊಡ್ತಾನೆ (ಪ್ಯಾರ 17 ನೋಡಿ)


18. ಕಷ್ಟದಿಂದ ಹೊರಗೆ ಬರೋಕೆ ದಾರಿ ಕಾಣದಿದ್ದಾಗ ನಿಮಗೆ ಯಾವ ವಚನ ಸಹಾಯ ಮಾಡ್ತು? (“ ಕಣ್ಣೀರನ್ನ ಓರೆಸೋ ವಚನಗಳು” ಅನ್ನೋ ಚೌಕ ನೋಡಿ.)

18 ಹಿಜ್ಕೀಯ ದೇವರ ಮಾತು ಕೇಳಿದ್ರಿಂದ ಅವನಿಗೆ ಸಾಂತ್ವನ ಸಿಕ್ತು. ಹಾಗಾಗಿ ನಾವೂ ದೇವರ ಮಾತು ಕೇಳ್ಬೇಕು. ಬೈಬಲ್‌ನಲ್ಲಿ ನಮಗೆ ಸಾಂತ್ವನ ಕೊಡೋಕೆ ಅಂತ ಎಷ್ಟೋ ವಿಷ್ಯಗಳನ್ನ ಬರೆಸಿಟ್ಟಿದ್ದಾನೆ. ಅದನ್ನ ನಾವು ಓದಿ ತಿಳ್ಕೊಬೇಕು. (ರೋಮ. 15:4) ಆಫ್ರಿಕಾದಲ್ಲಿರೋ ಒಬ್ಬ ಸಹೋದರಿಗೆ ಕ್ಯಾನ್ಸರ್‌ ಇತ್ತು. ಅವರು ಆಗಾಗ ಅದನ್ನ ನೆನಸ್ಕೊಂಡು ಅಳ್ತಿದ್ರು. ಆದ್ರೆ ಅವ್ರಿಗೆ ಬೈಬಲ್‌ ಮೂಲಕ ಸಾಂತ್ವನ ಸಿಕ್ತು. ಅವರು ಹೇಳೋದು, “ನನಗೆ ತುಂಬಾ ಸಾಂತ್ವನ ಕೊಡ್ತಿದ್ದ ಒಂದು ವಚನ ಯೆಶಾಯ 26:3. ನಮಗಿರೋ ಕಷ್ಟಗಳನ್ನೆಲ್ಲ ತೆಗೆದು ಹಾಕೋ ಶಕ್ತಿ ನಮಗಿಲ್ಲ ಅಂದ್ರೂ ಆ ಕಷ್ಟಗಳನ್ನೆಲ್ಲ ತಾಳ್ಕೊಳ್ಳೋಕೆ ಬೇಕಾದ ಮನಶಾಂತಿನ ಯೆಹೋವ ಕೊಡ್ತಾನೆ ಅಂತ ಆ ವಚನ ನನಗೆ ನೆನಪು ಮಾಡ್ತಿತ್ತು.” ನಿಮಗೆ ತುಂಬಾ ದುಃಖ ಆದಾಗ, ಕಷ್ಟದಿಂದ ಹೊರಗೆ ಬರೋಕೆ ದಾರಿನೇ ಕಾಣಿಸದೆ ಇದ್ದಾಗ ಸಹಾಯ ಮಾಡಿದ ಯಾವುದಾದ್ರೂ ವಚನ ಇದ್ಯಾ?

19. ಮುಂದೆ ನಮ್ಮ ಜೀವನ ಹೇಗಿರುತ್ತೆ?

19 ನಾವು ಕೊನೇ ದಿನದಲ್ಲಿ ಜೀವಿಸ್ತಿರೋದ್ರಿಂದ ಈ ಲೋಕದಲ್ಲಂತೂ ನಮ್ಮ ಕಣ್ಣೀರಿಗೆ ಕೊನೆ ಇಲ್ಲ. ಆದ್ರೆ ಹನ್ನ, ದಾವೀದ ಮತ್ತು ರಾಜ ಹಿಜ್ಕೀಯನ ಕಣ್ಣೀರನ್ನ ನೋಡಿದ ತರನೇ ನಾವು ಸುರಿಸೋ ಕಣ್ಣೀರನ್ನೂ ಯೆಹೋವ ನೋಡ್ತಾನೆ. ನಮಗೆ ಸಹಾಯ ಮಾಡೋಕೆ ಮುಂದೆ ಬರ್ತಾನೆ ಅಂತ ಕಲಿತ್ವಿ. ಇಷ್ಟೆಲ್ಲ ಕಷ್ಟದ ಮಧ್ಯನೂ ನಾವು ನಿಯತ್ತಿಂದ ಸೇವೆ ಮಾಡ್ತಿರೋದನ್ನ ಯೆಹೋವ ಗಮನಿಸ್ತಾ ಇದ್ದಾನೆ. ಹಾಗಾಗಿ ನಮ್ಮ ಪರಿಸ್ಥಿತಿ ಏನೇ ಇರಲಿ ನಮ್ಮ ಮನಸ್ಸಲ್ಲಿರೋ ಎಲ್ಲ ನೋವನ್ನ ಯೆಹೋವನ ಹತ್ರ ಹೇಳ್ಕೊಳ್ಳೋಣ. ಅದೇನೇ ಆದ್ರೂ ಸಭೆಯಿಂದ, ಸಹೋದರ ಸಹೋದರಿಯರಿಂದ ದೂರ ಹೋಗದೇ ಇರೋಣ. ಅಷ್ಟೇ ಅಲ್ಲ ಬೈಬಲ್‌ನಲ್ಲಿ ನಮಗೆ ಸಾಂತ್ವನ ಕೊಡೋ ಎಷ್ಟೋ ವಿಷ್ಯಗಳಿವೆ. ಅದನ್ನೆಲ್ಲ ಹುಡುಕಿ ಓದೋಣ. ನಾವು ಹೀಗೆ ನಿಯತ್ತಾಗಿದ್ರೆ ಯೆಹೋವ ನಮಗೆ ಪ್ರತಿಫಲ ಕೊಡ್ತಾನೆ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಅಷ್ಟೇ ಅಲ್ಲ ಆತನು ಆದಷ್ಟು ಬೇಗ ದುಃಖದಿಂದ, ಬೇರೆಯವರು ಮಾಡಿದ ಮೋಸದಿಂದ ಅಥವಾ ಕಾಯಿಲೆಯಿಂದ ನಾವು ಸುರಿಸೋ ‘ಕಣ್ಣೀರನ್ನೆಲ್ಲಾ ಒರೆಸಿ ಬಿಡ್ತೀನಿ’ ಅಂತ ಮಾತು ಕೊಟ್ಟಿದ್ದಾನೆ. ಆಗ ನಮ್ಮ ಕಣ್ಣಲ್ಲಿ ಕಷ್ಟದ ಕಣ್ಣೀರು ಕಣ್ಮರೆ ಆಗುತ್ತೆ. (ಪ್ರಕ. 21:4) ಸಂತೋಷದ ಕಣ್ಣೀರು ಉಕ್ಕಿ ಹರಿಯುತ್ತೆ.

ಗೀತೆ 38 ಮಾಡುವನು ಸ್ಥಿರ, ನೀಡುವನು ಬಲ!