ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 49

ಗೀತೆ 147 ಶಾಶ್ವತ ಜೀವದ ವಾಗ್ದಾನ

ನೀವು ಸಾವಿಲ್ಲದೆ ಬದುಕಬೇಕಾ?

ನೀವು ಸಾವಿಲ್ಲದೆ ಬದುಕಬೇಕಾ?

“ಮಗನನ್ನ ಒಪ್ಕೊಂಡು ಆತನಲ್ಲಿ ನಂಬಿಕೆ ಇಡೋ ಪ್ರತಿಯೊಬ್ಬರೂ ಶಾಶ್ವತ ಜೀವ [ಪಡಿತಾರೆ].”ಯೋಹಾ. 6:40.

ಈ ಲೇಖನದಲ್ಲಿ ಏನಿದೆ?

ಯೇಸು ಕ್ರಿಸ್ತ ಕೊಟ್ಟ ಬಲಿಯಿಂದ ಅಭಿಷಿಕ್ತ ಕ್ರೈಸ್ತರು ಮತ್ತು ಬೇರೆ ಕುರಿಗಳು ಪ್ರಯೋಜನ ಪಡಿಬೇಕಂದ್ರೆ ಏನು ಮಾಡಬೇಕು ಅಂತ ನೋಡೋಣ.

1. ಸಾವಿಲ್ಲದೆ ಬದುಕೋದ್ರ ಬಗ್ಗೆ ಜನ್ರಿಗೆ ಹೇಗನಿಸುತ್ತೆ?

 ‘ಆರೋಗ್ಯವೇ ಭಾಗ್ಯ’ ಅಂತ ಇವತ್ತು ತುಂಬ ಜನ ನಂಬ್ತಾರೆ. ಅದಕ್ಕೇ ಒಳ್ಳೆ ಆಹಾರ ತಿಂತಾರೆ, ತಪ್ಪದೇ ವ್ಯಾಯಾಮ ಮಾಡ್ತಾರೆ. ಆದ್ರೆ ಎಷ್ಟೇ ಆರೋಗ್ಯ ಇದ್ರೂ ವಯಸ್ಸಾಗೋದನ್ನ ತಡಿಯೋಕಾಗಲ್ಲ, ಸಾವಿಂದ ತಪ್ಪಿಸ್ಕೊಳ್ಳೋಕಾಗಲ್ಲ ಅಂತ ಅವ್ರಿಗೆ ಗೊತ್ತು. ಜೊತೆಗೆ ವಯಸ್ಸಾದ ಮೇಲೆ ಬರೋ ಕಷ್ಟಗಳು ಒಂದಾ ಎರಡಾ? ಅದನ್ನೆಲ್ಲಾ ನೆನಸ್ಕೊಂಡಾಗ ಸಾವಿಲ್ಲದೆ ಬದುಕಬೇಕು ಅನ್ನೋ ಆಸೆನೇ ಜನರಲ್ಲಿ ಬತ್ತಿಹೋಗಿದೆ. ಆದ್ರೆ ಯೇಸು ಯೋಹಾನ 3:16 ಮತ್ತು 5:24ರಲ್ಲಿ “ಶಾಶ್ವತ ಜೀವ” ಇದೆ ಅಂತ ಹೇಳಿದ್ದಾನೆ.

2. ಶಾಶ್ವತ ಜೀವದ ಬಗ್ಗೆ ಯೋಹಾನ 6​ನೇ ಅಧ್ಯಾಯ ಏನು ಹೇಳುತ್ತೆ? (ಯೋಹಾನ 6:39, 40)

2 ಒಂದಿನ ಯೇಸು ಸಾವಿರಾರು ಜನ್ರಿಗೆ ರೊಟ್ಟಿ ಮತ್ತು ಮೀನನ್ನ ಅದ್ಭುತವಾಗಿ ಕೊಟ್ಟ. a ಮಾರನೇ ದಿನ ಆ ಜನ್ರೆಲ್ಲಾ ಯೇಸುನ ಹುಡ್ಕೊಂಡು ಗಲಿಲಾಯ ಸಮುದ್ರದ ಹತ್ತಿರ ಕಪೆರ್ನೌಮಿಗೆ ಹೋದ್ರು. ಅಲ್ಲಿ ಯೇಸು ಹೇಳಿದ ಮಾತನ್ನ ಕೇಳಿ ಅವ್ರಿಗೆ ತುಂಬ ಆಶ್ಚರ್ಯ ಆಯ್ತು. ಯೇಸು ಅವ್ರಿಗೆ ‘ಸತ್ತು ಹೋಗಿರೋರು ಮತ್ತೆ ಎದ್ದು ಬರ್ತಾರೆ, ನೀವೂ ಸಾವಿಲ್ಲದೆ ಶಾಶ್ವತವಾಗಿ ಜೀವಿಸಬಹುದು’ ಅಂತ ಹೇಳಿದ. (ಯೋಹಾನ 6:39, 40 ಓದಿ.) ಇದು ನಿಜ ಆದಾಗ ನೀವು ಕಳ್ಕೊಂಡಿರೋ ನಿಮ್ಮ ಸ್ನೇಹಿತರನ್ನ, ನಿಮ್ಮ ಕುಟುಂಬದವ್ರನ್ನ ಮತ್ತೆ ನೋಡಬಹುದು! ನೀವು ಅವ್ರನ್ನ ನೋಡೋದಷ್ಟೆ ಅಲ್ಲ ಅವ್ರ ಜೊತೆ ಸಾವಿಲ್ಲದೆ ಶಾಶ್ವತವಾಗಿ ಬದುಕಬಹುದು. ಆದ್ರೆ ಯೋಹಾನ 6​ನೇ ಅಧ್ಯಾಯದಲ್ಲಿ ಯೇಸು ಇನ್ನೂ ಕೆಲವು ವಿಷ್ಯ ಹೇಳ್ತಾನೆ. ಆ ಮಾತುಗಳನ್ನ ಅರ್ಥ ಮಾಡ್ಕೊಳ್ಳೋಕೆ ಕೆಲವ್ರಿಗೆ ಕಷ್ಟ ಆಯ್ತು. ಯೇಸು ಅಂತದ್ದೇನು ಹೇಳಿದ? ನೋಡೋಣ.

3. ಯೇಸು ತನ್ನ ಬಗ್ಗೆ ಯೋಹಾನ 6:51ರಲ್ಲಿ ಏನು ಹೇಳ್ತಾನೆ?

3 ಕಪೆರ್ನೌಮಿಗೆ ಬಂದ ಜನ ಯೇಸು ಕೊಟ್ಟ ರೊಟ್ಟಿನ ನೋಡಿದಾಗ ಅವ್ರಿಗೆ ಯೆಹೋವ ದೇವರು ಇಸ್ರಾಯೇಲ್ಯರಿಗೆ ಕೊಟ್ಟ ಮನ್ನ ನೆನಪಾಗುತ್ತೆ. ಬೈಬಲ್‌ ಮನ್ನಾನ ‘ಸ್ವರ್ಗದಿಂದ ಬಂದ ಆಹಾರ’ ಅಥವಾ “ರೊಟ್ಟಿ” ಅಂತ ಕರಿಯುತ್ತೆ. (ಕೀರ್ತ. 105:40; ಯೋಹಾ. 6:31) ಯೇಸು ಆ ಮನ್ನವನ್ನ ಬಳಸ್ಕೊಂಡು ಕೆಲವು ಮಾತುಗಳನ್ನ ಹೇಳ್ತಾನೆ. ಮನ್ನಾನ ಸ್ವರ್ಗದಿಂದ ಯೆಹೋವನೇ ಕೊಟ್ಟಿದ್ರೂ ಅದನ್ನ ತಿಂದವ್ರೂ ಒಂದಿನ ತೀರಿಹೋದ್ರು ಅಂತ ಹೇಳ್ತಾನೆ. (ಯೋಹಾ. 6:49) ಆಮೇಲೆ ಯೇಸು ತನ್ನ ಬಗ್ಗೆ, ‘ನಾನು ಸ್ವರ್ಗದಿಂದ ಬಂದ ರೊಟ್ಟಿ,’ ‘ನಾನು ದೇವರು ಕೊಡೋ ರೊಟ್ಟಿ,’ ನಾನು “ಶಾಶ್ವತ ಜೀವ ಕೊಡೋ ರೊಟ್ಟಿ” ಅಂತ ಹೇಳ್ತಾನೆ. (ಯೋಹಾ. 6:32, 33, 35) ಯೇಸು ಇಲ್ಲಿ ಮನ್ನಕ್ಕೂ ತನಗೂ ಇರೋ ದೊಡ್ಡ ವ್ಯತ್ಯಾಸ ಏನಂತ ಜನ್ರಿಗೆ ಅರ್ಥ ಮಾಡಿಸ್ತಿದ್ದಾನೆ. ಅದಕ್ಕೆ, “ಸ್ವರ್ಗದಿಂದ ಬಂದಿರೋ ಜೀವ ಕೊಡೋ ರೊಟ್ಟಿ ನಾನೇ. ಆ ರೊಟ್ಟಿ ತಿನ್ನುವವರು ಸದಾಕಾಲ ಬದುಕ್ತಾರೆ” ಅಂತ ಹೇಳ್ತಾನೆ. (ಯೋಹಾನ 6:51 ಓದಿ.) ಆದ್ರೆ ಯೇಸು ಹೇಳಿದನ್ನ ಅವರು ತಪ್ಪಾಗಿ ಅರ್ಥ ಮಾಡ್ಕೊಳ್ತಾರೆ. ‘ಅದೇಗೆ ಯೇಸು, ದೇವರು ಕೊಟ್ಟ ಮನ್ನಕ್ಕಿಂತ ತಾನೇ ಶ್ರೇಷ್ಠ ಅಂತ ಹೇಳ್ತಾನೆ? ಸ್ವರ್ಗದಿಂದ ಬಂದ ರೊಟ್ಟಿ ನಾನೇ ಅಂತ ಅದೇಗೆ ಹೇಳ್ತಾನೆ?’ ಅಂತ ಅಂದ್ಕೊಳ್ತಾರೆ. ಈ ವಿಷ್ಯನ ಚೆನ್ನಾಗಿ ಅರ್ಥಮಾಡ್ಸೋಕೆ ಅವರು ಯೋಚ್ನೆ ಮಾಡೋಕೆ ಸಹಾಯ ಮಾಡೋ ಒಂದು ಸುಳಿವನ್ನ ಯೇಸು ಕೊಡ್ತಾನೆ. ಅದೇನಂದ್ರೆ, “ನಾನು ಕೊಡೋ ರೊಟ್ಟಿ ನನ್ನ ದೇಹಾನೇ” ಅಂತ ಹೇಳ್ತಾನೆ. ಯೇಸು ಹೇಳಿದ ಮಾತಿನ ಅರ್ಥ ಏನು? ಇದನ್ನ ನಾವೆಲ್ರೂ ತಿಳ್ಕೊಳ್ಳೋದು ತುಂಬ ಮುಖ್ಯ. ಯಾಕಂದ್ರೆ ಇದನ್ನ ತಿಳ್ಕೊಂಡ್ರೆನೇ ನಮಗೆ ಮತ್ತು ನಮ್ಮ ಪ್ರಿಯರಿಗೆ ಯೆಹೋವ ಶಾಶ್ವತ ಜೀವ ಹೇಗೆ ಕೊಡ್ತಾನೆ ಅಂತ ಅರ್ಥ ಆಗುತ್ತೆ. ಬನ್ನಿ ಈಗ ಯೇಸು ಹೇಳಿದ್ರ ಅರ್ಥ ಏನಂತ ನೋಡೋಣ.

ಜೀವ ಕೊಡೋ ರೊಟ್ಟಿ ಮತ್ತು ದೇಹ

4. ಯೇಸು ಹೇಳಿದ ಮಾತಿಂದ ಕೆಲವ್ರಿಗೆ ಯಾಕೆ ಗಾಬರಿ ಆಯ್ತು?

4 “ನನ್ನ ದೇಹದಿಂದ ಜನ್ರಿಗೆ ಶಾಶ್ವತ ಜೀವ ಸಿಗುತ್ತೆ” ಅಂತ ಯೇಸು ಹೇಳಿದ ಮಾತನ್ನ ಕೇಳಿ ಅಲ್ಲಿದ್ದ ಜನ್ರಿಗೆ ಆಶ್ಚರ್ಯ ಆಯ್ತು. ‘ಏನು? ನಾವು ಯೇಸುವಿನ ಮಾಂಸ ತಿನ್ನಬೇಕಾ? ನಾವು ನರಭಕ್ಷಕರಾಗಬೇಕು ಅಂತ ಯೇಸು ಹೇಳ್ತಿದ್ದಾನಾ?’ ಅಂತ ಅಂದ್ಕೊಂಡಿರಬೇಕು. ಯೇಸು ಆಮೇಲೆ ಹೇಳಿದ್ದನ್ನ ಕೇಳಿಸ್ಕೊಂಡಾಗಂತೂ ಅವ್ರಿಗೆ ಗಾಬರಿನೇ ಆಗೋಯ್ತು. (ಯೋಹಾ. 6:52) “ನೀವು ಮನುಷ್ಯಕುಮಾರನ ಮಾಂಸ ತಿಂದು, ಆತನ ರಕ್ತ ಕುಡಿದ್ರೆ ಮಾತ್ರ ನಿಮ್ಮಲ್ಲಿ ಜೀವ ಇರುತ್ತೆ” ಅಂತ ಯೇಸು ಹೇಳಿದ. ಯೇಸುವಿನ ಮಾತಿನ ನಿಜ ಅರ್ಥ ಏನು?—ಯೋಹಾ. 6:53.

5. ಜನ ತನ್ನ ರಕ್ತನ ನಿಜವಾಗ್ಲೂ ಕುಡಿಬೇಕು ಅಂತ ಯೇಸು ಹೇಳಲಿಲ್ಲ ಅಂತ ನಮಗೆ ಹೇಗೆ ಗೊತ್ತು?

5 ಮನುಷ್ಯರು ರಕ್ತನ ತಿನ್ನಬಾರದು ಅನ್ನೋ ನಿಯಮನ ಯೆಹೋವ ನೋಹನ ಕಾಲದಲ್ಲೇ ಕೊಟ್ಟಿದ್ದನು. (ಆದಿ. 9:3, 4) ನಿಯಮ ಪುಸ್ತಕದಲ್ಲೂ ಇದೇ ಆಜ್ಞೆಯನ್ನ ಇಸ್ರಾಯೇಲ್ಯರಿಗೆ ಮತ್ತೆ ಕೊಟ್ಟನು. ಯಾರಾದ್ರೂ ರಕ್ತ ತಿಂದ್ರೆ ಅವ್ರನ್ನ “ಸಾಯಿಸಬೇಕು” ಅನ್ನೋ ನಿಯಮನೂ ಆ ಪುಸ್ತಕದಲ್ಲಿತ್ತು. (ಯಾಜ. 7:27) ಯೇಸು ಕೂಡ ನಿಯಮ ಪುಸ್ತಕದಲ್ಲಿ ಇರೋದನ್ನೇ ಪಾಲಿಸೋಕೆ ಜನ್ರನ್ನ ಪ್ರೋತ್ಸಾಹಿಸಿದನು. (ಮತ್ತಾ. 5:17-19) ಹೀಗಿರುವಾಗ ಜನ ತನ್ನ ಮಾಂಸನ ನಿಜವಾಗ್ಲೂ ತಿನ್ನಬೇಕು, ತನ್ನ ರಕ್ತನ ನಿಜವಾಗ್ಲೂ ಕುಡಿಬೇಕು ಅಂತ ಯೇಸು ಹೇಳಿರೋಕೆ ಸಾಧ್ಯನೇ ಇಲ್ಲ. ಹಾಗಾದ್ರೆ ಯೇಸು ಯಾಕೆ ಈ ತರ ಮಾತಾಡಿದ? ಜನ ‘ಶಾಶ್ವತ ಜೀವನ’ ಪಡ್ಕೊಳ್ಳೋಕೆ ಏನು ಮಾಡಬೇಕು ಅಂತ ಅರ್ಥಮಾಡಿಸೋಕೆ ಇದನ್ನ ಹೇಳಿದನು.—ಯೋಹಾ. 6:54.

6. ನನ್ನ ಮಾಂಸ ತಿಂದು ರಕ್ತ ಕುಡಿಬೇಕು ಅಂತ ಯೇಸು ಹೇಳಿದ್ದು, ಬರೀ ಉದಾಹರಣೆ ಅಷ್ಟೇ ಅಂತ ಹೇಗೆ ಹೇಳಬಹುದು?

6 ಹಾಗಾದ್ರೆ ಯೇಸು ಹೇಳಿದ ಮಾತಿನ ನಿಜ ಅರ್ಥ ಏನು? ಯೇಸು ಇಲ್ಲಿ ತನ್ನ ನಿಜವಾದ ದೇಹ ಮತ್ತು ರಕ್ತದ ಬಗ್ಗೆ ಮಾತಾಡ್ತಾ ಇರ್ಲಿಲ್ಲ. ಬದಲಿಗೆ ಬೇರೆ ವಿಷ್ಯನ ಮನಸ್ಸಲ್ಲಿಟ್ಟು ಮಾತಾಡ್ತಾ ಇದ್ದಾನೆ. ಯೇಸು ಸಮಾರ್ಯದ ಸ್ತ್ರೀ ಹತ್ರನೂ ಇದೇ ತರ ಮಾತಾಡಿದ್ದ, ನಿಮಗೆ ನೆನಪಿದ್ಯಾ? ಯೇಸು ಆ ಸ್ತ್ರೀಗೆ “ನಾನು ಕೊಡೋ ನೀರನ್ನ ಕುಡಿದ್ರೆ ಯಾವತ್ತೂ ಬಾಯಾರಿಕೆ ಆಗಲ್ಲ. ನಾನು ಕೊಡೋ ನೀರು ಅವನಲ್ಲಿ ನೀರಿನ ಬುಗ್ಗೆಯಾಗಿ ಅವನಿಗೆ ಶಾಶ್ವತ ಜೀವ ಕೊಡೋಕೆ ಉಕ್ಕಿ ಹರಿಯುತ್ತೆ” ಅಂತ ಹೇಳಿದ್ದ. (ಯೋಹಾ. 4:7, 14) b ಇಲ್ಲಿ ಯೇಸು ಆ ಸ್ತ್ರೀಗೆ, ‘ಯಾವುದೋ ಒಂದು ಬಾವಿ ಇದೆ. ಆ ಬಾವಿಯ ನೀರನ್ನ ಕುಡಿದ್ರೆ ಸಾವಿಲ್ಲದೇ ಶಾಶ್ವತವಾಗಿ ಬದುಕ್ತೀಯ’ ಅಂತ ಹೇಳಿಲ್ಲ. ದೇಹ ಮತ್ತು ರಕ್ತದ ಬಗ್ಗೆ ಯೇಸು ಹೇಳಿದ ಮಾತುನೂ ಇದೇ ತರನೇ. ಕಪೆರ್ನೌಮಿನಲ್ಲಿದ್ದ ಆ ಜನ ಯೇಸುವಿನ ಮಾಂಸನ ತಿಂದ್ರೆ, ರಕ್ತನ ಕುಡಿದ್ರೆ ಶಾಶ್ವತವಾಗಿ ಬದುಕ್ತಾರೆ ಅನ್ನೋದು ಅದರ ಅರ್ಥ ಅಲ್ಲ.

ಯೇಸು ಇದೇ ತರ ಮಾತಾಡಿದ ಇನ್ನೊಂದು ಸಂದರ್ಭ

7. ಯೋಹಾನ 6:53ರಲ್ಲಿ ಯೇಸು ಹೇಳಿರೋ ಮಾತಿನ ಬಗ್ಗೆ ಕೆಲವರು ಏನು ಹೇಳ್ತಾರೆ?

7 ಒಡೆಯನ ರಾತ್ರಿ ಊಟದಲ್ಲಿ ಏನು ಮಾಡಬೇಕು ಅಂತ ವಿವರಿಸೋಕೆ ಯೋಹಾನ 6:53ರಲ್ಲಿ ಯೇಸು ಮಾಂಸ ತಿನ್ನಿ, ರಕ್ತ ಕುಡೀರಿ ಅಂತ ಹೇಳಿದ ಅಂತ ಕೆಲವು ಧಾರ್ಮಿಕ ವ್ಯಕ್ತಿಗಳು ಹೇಳ್ತಾರೆ. ಯಾಕಂದ್ರೆ ಈ ಎರಡೂ ಸಂದರ್ಭಗಳಲ್ಲಿ ಯೇಸು ಒಂದೇ ರೀತಿಯ ಪದಗಳನ್ನ ಬಳಸಿದ್ದಾನೆ ಅವರ ಅಭಿಪ್ರಾಯ. (ಮತ್ತಾ. 26:26-28) ಅದಕ್ಕೆ ಅವ್ರು, ‘ಸ್ಮರಣೆಗೆ ಹಾಜರಾಗೋ ಎಲ್ರೂ ರೊಟ್ಟಿ ತಿನ್ನಲೇಬೇಕು, ದ್ರಾಕ್ಷಾಮದ್ಯ ಕುಡಿಲೇಬೇಕು’ ಅಂತ ಹೇಳ್ತಾರೆ. ಆದ್ರೆ ಇದು ಸರಿನಾ? ನಿಮಗೇ ಗೊತ್ತಿರೋ ಹಾಗೆ ಸ್ಮರಣೆಗೆ ಪ್ರತಿವರ್ಷ ಲಕ್ಷಾಂತರ ಜನ ಹಾಜರಾಗ್ತಾರೆ. ಹಾಗಾಗಿ ಅವ್ರು ಹೇಳೋ ಈ ಮಾತು ಸರಿನಾ ಇಲ್ವಾ ಅಂತ ಕಂಡುಹಿಡಿಬೇಕು. ಯೋಹಾನ 6:53ರಲ್ಲಿ ಯೇಸು ಹೇಳಿದ ಮಾತಿಗೂ ಒಡೆಯನ ರಾತ್ರಿ ಊಟದ ಸಮಯದಲ್ಲಿ ಯೇಸು ಹೇಳಿದ ಮಾತಿಗೂ ಎಷ್ಟೋ ವ್ಯತ್ಯಾಸಗಳಿವೆ. ಅದ್ರಲ್ಲಿರೋ ಕೆಲವು ವ್ಯತ್ಯಾಸಗಳನ್ನ ನೋಡೋಣ.

8. ಈ ಎರಡು ಸನ್ನಿವೇಶದ ಮಧ್ಯೆ ಇರೋ ವ್ಯತ್ಯಾಸ ಏನು? (ಚಿತ್ರಗಳನ್ನ ನೋಡಿ.)

8 ಈಗ ಎರಡು ವ್ಯತ್ಯಾಸಗಳ ಬಗ್ಗೆ ತಿಳ್ಕೊಳೋಣ. ಒಂದು, ಯೋಹಾನ 6:53-56ರಲ್ಲಿರೋ ಮಾತುಗಳನ್ನ ಯೇಸು ಯಾವಾಗ ಮತ್ತು ಎಲ್ಲಿ ಹೇಳಿದನು? ಯೇಸು ಇದನ್ನ ಕ್ರಿಸ್ತ ಶಕ 32ರಲ್ಲಿ ಗಲಿಲಾಯದಲ್ಲಿ ಹೇಳಿದನು. ಆತನು ಇದನ್ನ ಹೇಳಿದ್ದು ಒಡೆಯನ ರಾತ್ರಿ ಊಟ ನಡೆಯೋಕೂ ಒಂದು ವರ್ಷದ ಮುಂಚೆ. ಎರಡು, ಯೇಸು ಇದನ್ನ ಯಾರಿಗೆ ಹೇಳಿದ? ಗಲಿಲಾಯದಲ್ಲಿದ್ದ ಯೆಹೂದ್ಯರ ದೊಡ್ಡ ಗುಂಪಿಗೆ ಹೇಳಿದನು. ಆ ಗುಂಪಿನಲ್ಲಿದ್ದ ಹೆಚ್ಚಿನ ಜನ್ರು ಬರೀ ಅವರ ಹೊಟ್ಟೆ ತುಂಬಿಸಿಕೊಳ್ಳೋದರ ಬಗ್ಗೆನೇ ಯೋಚಿಸ್ತಿದ್ರು. ಅವ್ರಿಗೆ ದೇವರ ಆಳ್ವಿಕೆ ಬಗ್ಗೆ ಕೇಳಿಸ್ಕೊಳ್ಳೋಕೆ ಒಂಚೂರು ಆಸಕ್ತಿ ಇರಲಿಲ್ಲ. (ಯೋಹಾ. 6:26) ಅದಕ್ಕೆ ಯೇಸು ಹೇಳಿದ ಕೆಲವು ವಿಷ್ಯಗಳು ಅವ್ರಿಗೆ ಅರ್ಥ ಆಗದೇ ಇದ್ದಾಗ ಅವ್ರು ಯೇಸು ಮೇಲೆ ನಂಬಿಕೆ ಕಳ್ಕೊಂಡು ಆತನನ್ನ ಬಿಟ್ಟೋದ್ರು. ಆಗ ಶಿಷ್ಯರಲ್ಲೂ ಕೆಲವರು ಯೇಸುನ ಬಿಟ್ಟೋದ್ರು. (ಯೋಹಾ. 6:14, 36, 42, 60, 64, 66) ಆದ್ರೆ ಕ್ರಿಸ್ತ ಶಕ 33ರಲ್ಲಿ ಒಡೆಯನ ರಾತ್ರಿ ಊಟದ ಸಮಯದಲ್ಲಿದ್ದ 11 ಶಿಷ್ಯರು ಆ ರೀತಿ ಮಾಡಲಿಲ್ಲ. ಅವ್ರಿಗೂ ಯೇಸು ಹೇಳಿದ ಎಷ್ಟೋ ವಿಷ್ಯಗಳು ಪೂರ್ತಿಯಾಗಿ ಅರ್ಥ ಆಗ್ಲಿಲ್ಲ ಅಂದ್ರೂನೂ ಸ್ವರ್ಗದಿಂದ ಬಂದಿರೋ ದೇವರ ಮಗ ಯೇಸುನೇ ಅಂತ ಅವ್ರು ನಂಬಿದ್ರು. (ಮತ್ತಾ. 16:16) ಅದಕ್ಕೆ ಯೇಸು ಅವ್ರಿಗೆ “ನೀವು ನನ್ನ ಕಷ್ಟಗಳಲ್ಲಿ ನನ್ನ ಜೊತೆ ಯಾವಾಗ್ಲೂ ಇದ್ರಿ” ಅಂತ ಹೇಳಿದನು. (ಲೂಕ 22:28) ಈ ಎರಡು ವ್ಯತ್ಯಾಸಗಳಿಂದ ಏನು ಗೊತ್ತಾಗುತ್ತೆ? ಯೋಹಾನ 6:53ರಲ್ಲಿ ಯೇಸು ಹೇಳಿದ್ದು ಒಡೆಯನ ರಾತ್ರಿ ಊಟದಲ್ಲಿ ನಾವೇನು ಮಾಡಬೇಕು ಅನ್ನೋದ್ರ ಬಗ್ಗೆ ಅಲ್ಲ ಅಂತ ಗೊತ್ತಾಗುತ್ತೆ. ಈ ಎರಡು ಮಾತ್ರನೇ ಅಲ್ಲ ಇನ್ನೂ ಕೆಲವು ವ್ಯತ್ಯಾಸಗಳಿವೆ.

ಯೋಹಾನ 6ನೇ ಅಧ್ಯಾಯದಲ್ಲಿ ಯೇಸು ಗಲಿಲಾಯದಲ್ಲಿದ್ದ ಜನ್ರ ಒಂದು ದೊಡ್ಡ ಗುಂಪಿನ ಜೊತೆ ಮಾತಾಡಿದ (ಎಡಗಡೆ). ಒಂದು ವರ್ಷ ಆದಮೇಲೆ ಯೆರೂಸಲೇಮಿನಲ್ಲಿ ಒಂದು ಚಿಕ್ಕ ಗುಂಪಿನ ಜೊತೆ ಮಾತಾಡಿದನು (ಬಲಗಡೆ) (ಪ್ಯಾರ 8 ನೋಡಿ)


ನಿಮಗೂ ಪ್ರಯೋಜನ ಇದೆ

9. ಒಡೆಯನ ರಾತ್ರಿ ಊಟದ ಸಮಯದಲ್ಲಿ ಯೇಸು ಹೇಳಿದ ಮಾತುಗಳು ಯಾವ ಗುಂಪಿನ ಜನ್ರಿಗೆ ಅನ್ವಯಿಸುತ್ತೆ?

9 ಒಡೆಯನ ರಾತ್ರಿ ಊಟದ ಸಮಯದಲ್ಲಿ ಯೇಸು ಹುಳಿಯಿಲ್ಲದ ರೊಟ್ಟಿ ತಗೊಂಡು ತನ್ನ ಅಪೊಸ್ತಲರಿಗೆ ಕೊಟ್ಟು “ಇದು ನನ್ನ ದೇಹವನ್ನ ಸೂಚಿಸುತ್ತೆ” ಅಂತ ಹೇಳಿದನು. ಆಮೇಲೆ ಅವ್ರಿಗೆ ದ್ರಾಕ್ಷಾಮದ್ಯ ಕೊಟ್ಟು “ಇದು ನನ್ನ ರಕ್ತನ ಸೂಚಿಸುತ್ತೆ. ಈ ರಕ್ತ ದೇವರ ಒಪ್ಪಂದವನ್ನ ಶುರು ಮಾಡುತ್ತೆ” ಅಂದನು. (ಮಾರ್ಕ 14:22-25; ಲೂಕ 22:20; 1 ಕೊರಿಂ. 11:24) ಈ ಮಾತುಗಳಿಗೆ ನಾವು ಗಮನ ಕೊಡೋದು ತುಂಬ ಮುಖ್ಯ. ಯಾಕಂದ್ರೆ ಯೇಸು ಈ ಒಪ್ಪಂದನ ಎಲ್ಲ ಜನ್ರ ಜೊತೆ ಅಲ್ಲ, ಬದಲಿಗೆ ಸ್ವರ್ಗದಲ್ಲಿ ಆತನ ಜೊತೆ ಆಳ್ವಿಕೆ ಮಾಡೋ ‘[ಆಧ್ಯಾತ್ಮಿಕ] ಇಸ್ರಾಯೇಲ್ಯರ ಜೊತೆ’ ಮಾತ್ರ ಮಾಡ್ಕೊಂಡನು. (ಇಬ್ರಿ. 8:6, 10; 9:15) ಒಡೆಯನ ರಾತ್ರಿ ಊಟದ ಸಮಯದಲ್ಲಿ ಯೇಸು ಹೇಳಿದ ಮಾತು ಅಪೊಸ್ತಲರಿಗೆ ಪೂರ್ತಿಯಾಗಿ ಅರ್ಥ ಆಗಲಿಲ್ಲ. ಆದ್ರೂ ಅವ್ರು ನಿಯತ್ತಾಗಿ ಇದಿದ್ರಿಂದ ಮುಂದೆ ಪವಿತ್ರಶಕ್ತಿಯಿಂದ ಅಭಿಷಿಕ್ತರಾದ್ರು. ಆಮೇಲೆ ಯೇಸು ಜೊತೆ ಸ್ವರ್ಗದಲ್ಲಿ ಆಳೋ ಅವಕಾಶನೂ ಅವ್ರಿಗೆ ಸಿಕ್ತು.—ಯೋಹಾ. 14:2, 3.

10. ಒಡೆಯನ ರಾತ್ರಿ ಊಟದಲ್ಲಿ ಯೇಸು ಹೇಳಿದ ಮಾತಿಗೂ ಗಲಿಲಾಯದ ಜನ್ರಿಗೆ ಯೇಸು ಹೇಳಿದ ಮಾತಿಗೂ ಇರೋ ಇನ್ನೊಂದು ವ್ಯತ್ಯಾಸ ಯಾವುದು? (ಚಿತ್ರ ನೋಡಿ.)

10 ಒಡೆಯನ ರಾತ್ರಿ ಊಟದ ಸಮಯದಲ್ಲಿ ಯೇಸು ಹೇಳಿದ ಮಾತಿಗೂ ಗಲಿಲಾಯದ ಜನರಿಗೆ ಯೇಸು ಹೇಳಿದ ಮಾತಿಗೂ ಇನ್ನೊಂದು ವ್ಯತ್ಯಾಸ ಇದೆ. ಒಡೆಯನ ರಾತ್ರಿ ಊಟದ ಸಮಯದಲ್ಲಿ ಯೇಸು ಆ ರೂಮ್‌ನಲ್ಲಿದ್ದ ಚಿಕ್ಕ ಗುಂಪಿನ ಹತ್ರ ಅಂದ್ರೆ ‘ಚಿಕ್ಕ ಹಿಂಡಿನ’ ಹತ್ರ ಮಾತಾಡಿದನು. (ಲೂಕ 12:32) ಈ ಚಿಕ್ಕ ಗುಂಪಿನಲ್ಲಿ ಯೇಸುವಿಗೆ ನಿಯತ್ತಾಗಿದ್ದ 11 ಅಪೊಸ್ತಲರಿದ್ರು. ಈ ಚಿಕ್ಕ ಗುಂಪಿಗೆ ಮುಂದೆ ಯಾರೆಲ್ಲ ಸೇರಿಕೊಳ್ತಾರೋ ಅವ್ರೆಲ್ಲ ಯೇಸು ಹೇಳಿದ ರೊಟ್ಟಿ ತಿನ್ನಬಹುದು ಮತ್ತು ದ್ರಾಕ್ಷಾಮದ್ಯ ಕುಡಿಬಹುದು. ಇವ್ರಿಗೆ ಮಾತ್ರನೇ ಸ್ವರ್ಗದಲ್ಲಿ ಜಾಗ ಸಿಗುತ್ತೆ. ಹಾಗಾಗಿ ಒಡೆಯನ ರಾತ್ರಿ ಊಟದ ಸಮಯದಲ್ಲಿ ಯೇಸು ಹೇಳಿದ ಮಾತು ಚಿಕ್ಕ ಗುಂಪಿಗೆ ಅನ್ವಯಿಸುತ್ತೆ. ಗಲಿಲಾಯದಲ್ಲಿ ಹೇಳಿದ ಮಾತು ತುಂಬ ಜನ್ರಿಗೆ ಅನ್ವಯಿಸುತ್ತೆ.

ರೊಟ್ಟಿ ಮತ್ತು ದ್ರಾಕ್ಷಾಮದ್ಯನ ಕೆಲವರು ಮಾತ್ರ ತಗೊಳ್ತಾರೆ. ಆದ್ರೆ ಯೇಸುವಿನ ಮೇಲೆ ನಂಬಿಕೆ ಇಡೋ ‘ಪ್ರತಿಯೊಬ್ರು’ ಶಾಶ್ವತ ಜೀವ ಪಡ್ಕೊತಾರೆ (ಪ್ಯಾರ 10 ನೋಡಿ)


11. ಯೇಸು ಗಲಿಲಾಯದಲ್ಲಿ ಹೇಳಿದ ಮಾತು ಒಂದು ಚಿಕ್ಕ ಗುಂಪಿಗೆ ಮಾತ್ರ ಅನ್ವಯ ಆಗೋದಿಲ್ಲ ಅಂತ ಹೇಗೆ ಹೇಳಬಹುದು?

11 ಯೇಸು ಕ್ರಿಸ್ತ ಶಕ 32ರಲ್ಲಿ ಬರೀ ತಮ್ಮ ಹೊಟ್ಟೆ ತುಂಬಿಸ್ಕೊಳ್ಳೋದ್ರ ಬಗ್ಗೆ ಮಾತ್ರ ಯೋಚಿಸ್ತಿದ್ದ ಜನ್ರ ಹತ್ರ ಮಾತಾಡಿದ. ಅವ್ರಿಗೆ ರೊಟ್ಟಿಗಿಂತ ಶ್ರೇಷ್ಠವಾದ ಶಾಶ್ವತ ಜೀವ ಕೊಡೋ ಆಹಾರ ಇದೆ ಅಂತ ಹೇಳಿದ. ಈ ಆಹಾರ ತಿಂದ್ರೆ ಸತ್ತವರು ಮತ್ತೆ ಬದುಕಬಹುದು, ಶಾಶ್ವತವಾಗಿ ಜೀವಿಸಬಹುದು. ಹಾಗಾಗಿ ಗಲಿಲಾಯದಲ್ಲಿ ಯೇಸು ಹೇಳಿದ ಈ ಆಶೀರ್ವಾದ ಒಡೆಯನ ರಾತ್ರಿ ಊಟದ ಸಮಯದಲ್ಲಿ ಹೇಳಿದಂತೆ ಚಿಕ್ಕ ಗುಂಪಿಗೆ ಅಲ್ಲ, ಎಲ್ಲ ಜನ್ರಿಗೂ ಸಿಗುತ್ತೆ. ಅದಕ್ಕೆನೇ ಯೇಸು “ಆ ರೊಟ್ಟಿ ತಿನ್ನುವವರು ಸದಾಕಾಲ ಬದುಕ್ತಾರೆ. ನಾನು ಕೊಡೋ ರೊಟ್ಟಿ ನನ್ನ ದೇಹಾನೇ. ಅದ್ರಿಂದ ಜನ್ರಿಗೆ ಶಾಶ್ವತ ಜೀವ ಸಿಗುತ್ತೆ” ಅಂತ ಹೇಳಿದ.—ಯೋಹಾ. 6:51. c

12. ಶಾಶ್ವತ ಜೀವ ಪಡ್ಕೊಳ್ಳೋಕೆ ಏನು ಮಾಡಬೇಕು?

12 ಶಾಶ್ವತವಾಗಿ ಜೀವಿಸೋ ಅವಕಾಶ ಭೂಮಿಯಲ್ಲಿ ಹುಟ್ಟಿರೋ ಪ್ರತಿಯೊಬ್ಬರಿಗೂ ಸಿಕ್ಕೇ ಸಿಗುತ್ತೆ ಅಂತ ಯೇಸು ಹೇಳಿದನಾ? ಇಲ್ಲ. ‘ಯಾರು ರೊಟ್ಟಿಯನ್ನ ತಿಂತಾರೋ’ ಅಂದ್ರೆ ಯೇಸುವಲ್ಲಿ ನಂಬಿಕೆ ಇಡ್ತಾರೋ ಅವ್ರಿಗೆ ಮಾತ್ರ ಸಿಗುತ್ತೆ ಅಂತ ಯೇಸು ಹೇಳಿದ. ಇವತ್ತು ‘ಕ್ರೈಸ್ತರು’ ಅಂತ ಹೇಳ್ಕೊಳ್ಳೋ ಎಷ್ಟೋ ಜನ ‘ನಾವು ಯೇಸುನ ನಂಬ್ತೀವಿ,’ ‘ಯೇಸುನೇ ನಮ್ಮ ರಕ್ಷಕ’ ಅಂತ ಹೇಳ್ತಾರೆ. (ಯೋಹಾ. 6:29) ಆದ್ರೆ ನಿಮಗೇ ಗೊತ್ತು ಮೊದಲನೇ ಶತಮಾನದಲ್ಲಿ ಎಷ್ಟೋ ಜನ ಯೇಸು ಮೇಲೆ ಮೊದಲು ನಂಬಿಕೆ ಇಟ್ರು, ಆದ್ರೆ ಆಮೇಲೆ ಆತನನ್ನ ಬಿಟ್ಟು ಹೋಗಿಬಿಟ್ರು. ಮೊದಲು ನಂಬಿಕೆ ಇಟ್ಟವರು ಯೇಸುನ ಬಿಟ್ಟೋಗೋಕೆ ಕಾರಣ ಏನು?

13. ಯೇಸುವಿನ ನಿಜ ಶಿಷ್ಯರಾಗಬೇಕಂದ್ರೆ ಅವರು ಏನು ಮಾಡಬೇಕಿತ್ತು?

13 ಯೇಸು ನಮಗೆ ಬೇಕಾಗಿರೋದೆಲ್ಲ ಕೊಡ್ತಿದ್ದಾನೆ ಅನ್ನೋ ಕಾರಣಕ್ಕೆ ಗಲಿಲಾಯದ ಜನ್ರು ಅವನ ಜೊತೆ ಇದ್ರು. ಆ ಜನ್ರಿಗೆ ಏನು ಬೇಕಿತ್ತು? ಅವ್ರ ಕಾಯಿಲೆ ವಾಸಿ ಆಗಬೇಕಿತ್ತು, ಅವ್ರಿಗೆ ಊಟ ಕೊಡಬೇಕಿತ್ತು. ಅವ್ರಿಗೆ ಇಷ್ಟ ಆಗೋ ವಿಷ್ಯಗಳನ್ನ ಮಾತ್ರ ಯೇಸು ಹೇಳಬೇಕಿತ್ತು. ಆದ್ರೆ ಆತನು, ಅವ್ರ ಆಸೆಗಳನ್ನ ತೀರಿಸೋಕೆ ಭೂಮಿಗೆ ಬಂದಿಲ್ಲ ಅಂತ ಸ್ಪಷ್ಟವಾಗಿ ಹೇಳಿದ. ಅವರೆಲ್ರೂ ನಿಜವಾಗ್ಲೂ ಯೇಸುವಿನ ಶಿಷ್ಯರಾಗಬೇಕಂದ್ರೆ ಆತನ ‘ಹತ್ರ ಬರಬೇಕಿತ್ತು.’ ಅಂದ್ರೆ ಆತನು ಹೇಳಿದ್ದನ್ನೆಲ್ಲ ನಂಬಬೇಕಿತ್ತು, ಅದನ್ನ ಪಾಲಿಸಬೇಕಿತ್ತು.—ಯೋಹಾ. 5:40; 6:44.

14. ಯೇಸುವಿನ ದೇಹ ಮತ್ತು ರಕ್ತದಿಂದ ಪ್ರಯೋಜನ ಪಡೀಬೇಕಂದ್ರೆ ಏನು ಮಾಡಬೇಕು?

14 ‘ನನ್ನ ರಕ್ತ ಮತ್ತು ದೇಹದಿಂದ ಶಾಶ್ವತ ಜೀವ ಸಿಗುತ್ತೆ’ ಅಂತ ಯೇಸು ಜನ್ರಿಗೆ ಕಲಿಸಿದ. ಯೆಹೂದ್ಯರು ಈ ಸತ್ಯನ ನಂಬಬೇಕಿತ್ತು. ಅವ್ರಷ್ಟೇ ಅಲ್ಲ ಇವತ್ತು ನಾವೂ ಅದನ್ನ ನಂಬಬೇಕು. (ಯೋಹಾ. 6:40) ಯೋಹಾನ 6:53ರಲ್ಲಿ ಹೇಳೋ ತರ ಯಾರು ಬಿಡುಗಡೆ ಬೆಲೆ ಮೇಲೆ ನಂಬಿಕೆ ಇಡ್ತಾರೋ ಅವ್ರಿಗೆ ಮಾತ್ರ ಶಾಶ್ವತ ಜೀವ ಸಿಗುತ್ತೆ. ಈ ಆಶೀರ್ವಾದ ಕೇವಲ ಒಬ್ಬಿಬ್ಬರಿಗಲ್ಲ ಕೋಟ್ಯಂತರ ಜನ್ರಿಗೆ ಸಿಗುತ್ತೆ.—ಎಫೆ. 1:7.

15-16. ಯೋಹಾನ 6​ನೇ ಅಧ್ಯಾಯದಿಂದ ನಾವು ಯಾವ ವಿಷ್ಯಗಳನ್ನ ಕಲಿತ್ವಿ?

15 ಇಲ್ಲಿವರೆಗೂ ನಾವು ಯೋಹಾನ 6​ನೇ ಅಧ್ಯಾಯದಲ್ಲಿರೋ ಮುಖ್ಯವಾಗಿರೋ ವಿಷ್ಯನ ಕಲಿತ್ವಿ. ಅದು ನಮಗೆ ತುಂಬ ಪ್ರೋತ್ಸಾಹ ಕೊಡ್ತು. ಯೇಸುಗೆ ಜನ್ರ ಮೇಲೆ ಎಷ್ಟು ಪ್ರೀತಿ ಕಾಳಜಿ ಇದೆ ಅಂತ ಇದು ತೋರಿಸ್ತು. ಯೇಸು ಗಲಿಲಾಯದಲ್ಲಿ ಕಾಯಿಲೆಯಿಂದ ನರಳ್ತಿದ್ದವ್ರನ್ನ ವಾಸಿ ಮಾಡಿದ, ದೇವರ ಆಳ್ವಿಕೆ ಬಗ್ಗೆ ಕಲಿಸಿದ. ಅಷ್ಟೇ ಅಲ್ಲ ಜನ್ರಿಗೆ ಬೇಕಾದಾಗ ಊಟನೂ ಕೊಟ್ಟನು. (ಲೂಕ 9:11; ಯೋಹಾ. 6:2, 11, 12) ಅದೆಲ್ಲದಕ್ಕಿಂತ ಮುಖ್ಯವಾಗಿ “ಶಾಶ್ವತ ಜೀವ ಕೊಡೋ ರೊಟ್ಟಿ” ನಾನೇ ಅನ್ನೋ ಸತ್ಯನೂ ಕಲಿಸಿದನು.—ಯೋಹಾ. 6:35, 48.

16 ಯೇಸು ಯಾರನ್ನ ಬೇರೆ ಕುರಿಗಳು ಅಂತ ಕರೆದನೋ ಅವ್ರು ಒಡೆಯನ ರಾತ್ರಿ ಊಟದ ಸಮಯದಲ್ಲಿ ಕೊಡೋ ರೊಟ್ಟಿನ ಮತ್ತು ದ್ರಾಕ್ಷಾಮದ್ಯನ ತಿನ್ನಲ್ಲ ಕುಡಿಯಲ್ಲ. (ಯೋಹಾ. 10:16) ಅವ್ರು ತಿನ್ನಲೂ ಬಾರದು ಕುಡಿಯಲೂ ಬಾರದು. ಆದ್ರೆ ಯೇಸುವಿನ ಬಿಡುಗಡೆ ಬೆಲೆ ಮೇಲೆ ನಂಬಿಕೆ ಇಡೋ ಮೂಲಕ ಅವ್ರು ರೊಟ್ಟಿನ ತಿಂತಾರೆ, ದ್ರಾಕ್ಷಾಮದ್ಯನ ಕುಡಿತಾರೆ. (ಯೋಹಾ. 6:53) ಆದ್ರೆ ರೊಟ್ಟಿ ಮತ್ತು ದ್ರಾಕ್ಷಾಮದ್ಯನ ನಿಜವಾಗ್ಲೂ ತಗೊಳೋ ಅಭಿಷಿಕ್ತರು ನಾವು ಹೊಸ ಒಪ್ಪಂದದಲ್ಲಿ ಇದ್ದೀವಿ, ಮುಂದೆ ಸ್ವರ್ಗಕ್ಕೆ ಹೋಗಿ ಆಳ್ವಿಕೆ ಮಾಡ್ತೀವಿ ಅನ್ನೋದನ್ನ ತೋರಿಸಿಕೊಡ್ತಾರೆ. ಹಾಗಾಗಿ ನಾವು ಅಭಿಷಿಕ್ತರೇ ಆಗಿರಲಿ ಅಥವಾ ಬೇರೆ ಕುರಿಗಳೇ ಆಗಿರಲಿ, ಯೋಹಾನ 6​ನೇ ಅಧ್ಯಾಯದಲ್ಲಿ ಇರೋದನ್ನ ತಿಳ್ಕೊಳೋದು ತುಂಬ ಮುಖ್ಯ. ಯಾಕಂದ್ರೆ ಅಲ್ಲಿ ಹೇಳೋ ತರ ನಾವೆಲ್ರೂ ಬಿಡುಗಡೆ ಬೆಲೆ ಮೇಲೆ ನಂಬಿಕೆ ಇಟ್ರೆ ಮಾತ್ರ ನಮಗೆ ಶಾಶ್ವತ ಜೀವ ಸಿಗುತ್ತೆ.

ಗೀತೆ 24 ಬನ್ನಿ ಯೆಹೋವನ ಬೆಟ್ಟಕ್ಕೆ

a ನಾವು ಹಿಂದಿನ ಲೇಖನದಲ್ಲಿ ಯೋಹಾನ 6:5-35ರಲ್ಲಿರೋ ವಿಷ್ಯಗಳನ್ನ ಚರ್ಚೆ ಮಾಡಿದ್ವಿ.

b ಯೇಸು ಹೇಳಿದ ನೀರು ನಾವು ಶಾಶ್ವತ ಜೀವ ಪಡ್ಕೊಳೋಕೆ ದೇವರು ಏನೆಲ್ಲ ಕೊಡ್ತಿದ್ದಾರೋ ಅದನ್ನ ಸೂಚಿಸುತ್ತೆ.

c ಶಾಶ್ವತ ಜೀವ ಪಡ್ಕೊಳೋಕೆ ಅವಕಾಶ ಇರುವವರನ್ನ ಸೂಚಿಸೋಕೆ ‘ಪ್ರತಿಯೊಬ್ಬರು,’ ‘ನಂಬುವವರು,’ ‘ತಿನ್ನುವವರು’ ಮತ್ತು ‘ಬರುವವರು’ ಅನ್ನೋ ಬೇರೆ ಬೇರೆ ಪದಗಳನ್ನ ಯೋಹಾನ 6​ನೇ ಅಧ್ಯಾಯದಲ್ಲಿ ಬಳಸಲಾಗಿದೆ.—ಯೋಹಾ. 6:35, 40, 47, 54, 56-58.