ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜೀವನ ಕಥೆ

ನೂರು ವರ್ಷ ಆಗ್ತಿದ್ರೂ ಕಲೀತಾ ಇದ್ದೀನಿ!

ನೂರು ವರ್ಷ ಆಗ್ತಿದ್ರೂ ಕಲೀತಾ ಇದ್ದೀನಿ!

ಯೆಹೋವ ನನ್ನ “ಮಹಾ ಬೋಧಕ” ಆಗಿರೋದಕ್ಕೆ ನಾನು ತುಂಬ ಥ್ಯಾಂಕ್ಸ್‌ ಹೇಳ್ತೀನಿ. (ಯೆಶಾ. 30:20) ಯೆಹೋವ ತನ್ನ ಆರಾಧಕರಿಗೆ ಬೈಬಲಿನಿಂದ, ಅದ್ಭುತ ಸೃಷ್ಟಿಯಿಂದ, ತನ್ನ ಅಮೋಘ ಸಂಘಟನೆಯಿಂದ ಕಲಿಸ್ತಿದ್ದಾನೆ. ನಮ್ಮ ಸಹೋದರ ಸಹೋದರಿಯರಿಂದನೂ ಕಲಿಸ್ತಾನೆ. ನನಗೆ ಹತ್ತತ್ರ ನೂರು ವರ್ಷ ಆಗ್ತಿದೆ. ಆದ್ರೂ ನಾನಿನ್ನೂ ಯೆಹೋವನಿಂದ ಕಲಿತಾ ಇದ್ದೀನಿ. ಇದ್ರಿಂದ ನನಗೆ ಹೇಗೆಲ್ಲಾ ಸಹಾಯ ಆಗಿದೆ ಅಂತ ಬನ್ನಿ ಹೇಳ್ತೀನಿ.

1948ರಲ್ಲಿ ನನ್ನ ಕುಟುಂಬದ ಜೊತೆ

ನಾನು 1927ರಲ್ಲಿ ಅಮೆರಿಕಾದ ಚಿಕಾಗೋನಲ್ಲಿರೋ ಒಂದು ಚಿಕ್ಕ ಹಳ್ಳಿಯಲ್ಲಿ ಹುಟ್ಟಿದೆ. ನಮ್ಮ ಅಪ್ಪ ಅಮ್ಮನಿಗೆ ನಾವು ಐದು ಜನ ಮಕ್ಕಳು. ನನ್ನ ಅಕ್ಕ ಜೆತಾ, ಅಣ್ಣ ಡಾನ್‌, ನಾನು, ತಮ್ಮ ಕಾರ್ಲ್‌ ಮತ್ತು ತಂಗಿ ಜಾಯ್‌. ನಾವೆಲ್ರೂ ಯೆಹೋವನನ್ನ ಮನಸಾರೆ ಆರಾಧನೆ ಮಾಡಬೇಕು ಅಂತ ತೀರ್ಮಾನ ಮಾಡಿದ್ವಿ. ಅಕ್ಕ ಜೆತಾ 1943ರಲ್ಲಿ 2ನೇ ಗಿಲ್ಯಡ್‌ ಶಾಲೆಗೆ ಹೋದಳು. ಡಾನ್‌ 1944ರಲ್ಲಿ, ಕಾರ್ಲ್‌ 1947ರಲ್ಲಿ, ಜಾಯ್‌ 1951ರಲ್ಲಿ ನ್ಯೂಯಾರ್ಕ್‌ ಬೆತೆಲ್‌ಗೆ ಹೋದ್ರು. ಅವರು ಮತ್ತು ಅಪ್ಪ-ಅಮ್ಮ ನಂಗೆ ಒಳ್ಳೆ ಮಾದರಿ ಇಟ್ರು. ಇದ್ರಿಂದ ಯೆಹೋವನ ಸೇವೆ ಮಾಡೋಕೆ ನಂಗೆ ಪ್ರೋತ್ಸಾಹ ಸಿಕ್ತು.

ನಮ್ಮ ಕುಟುಂಬ ಸತ್ಯ ಕಲಿತು

ನಮ್ಮ ಅಪ್ಪ-ಅಮ್ಮ ಇಬ್ರಿಗೂ ದೇವ್ರಂದ್ರೆ, ಬೈಬಲ್‌ ಅಂದ್ರೆ ತುಂಬ ಪ್ರೀತಿ. ನಮ್ಮನ್ನೂ ಅದೇ ತರ ಬೆಳೆಸಿದ್ರು. ನಮ್ಮಪ್ಪ ಒಂದನೇ ಮಹಾಯುದ್ಧದಲ್ಲಿ ಯೂರೋಪ್‌ನಲ್ಲಿ ಸೈನಿಕನಾಗಿ ಕೆಲಸ ಮಾಡಿದ್ರು. ಅವರು ಅಲ್ಲಿಂದ ಜೀವಂತವಾಗಿ ಮನೆಗೆ ಬಂದಿದ್ದೇ ನಮಗೆಲ್ಲಾ ದೊಡ್ಡ ವಿಷ್ಯ. ಆದ್ರೆ ಯುದ್ಧದಿಂದ ಮನೆಗೆ ಬರೋಷ್ಟ್ರಲ್ಲಿ ಅಪ್ಪ ಚರ್ಚ್‌ ಮೇಲಿದ್ದ ಗೌರವ ಕಳ್ಕೊಂಡಿದ್ರು. ಅಮ್ಮ ನಮ್ಮಪ್ಪ ಹತ್ರ “ರೀ, ಇನ್ಮೇಲಾದ್ರೂ ಮುಂಚೆ ತರ ಚರ್ಚಿಗೆ ಹೋಗೋಣ್ವಾ?” ಅಂತ ಕೇಳಿದ್ರು. ಅದಕ್ಕೆ ಅಪ್ಪ, “ಬೇಕಿದ್ರೆ ನಿಮ್ಮನ್ನ ಕರ್ಕೊಂಡು ಹೋಗ್ತೀನಿ, ಆದ್ರೆ ನಾನು ಮಾತ್ರ ಒಳಗೆ ಕಾಲಿಡಲ್ಲ” ಅಂತ ಹೇಳಿದ್ರು. ಅದಕ್ಕೆ ಅಮ್ಮ “ಯಾಕ್‌ ಆ ತರ ಹೇಳ್ತೀರಾ?” ಅಂದ್ರು. “ನೀನೇ ಹೇಳು, ಯುದ್ಧದಲ್ಲಿ ನಮ್ಮ ದೇಶದವ್ರಿಗೂ, ಶತ್ರು ದೇಶದವ್ರಿಗೂ ನಮ್ಮ ಧರ್ಮದ ಪಾದ್ರಿಗಳೇ ಪ್ರಾರ್ಥನೆ ಮಾಡ್ತಾರೆ. ಅಂದ್ಮೇಲೆ ದೇವರು ಯಾವ ದೇಶಕ್ಕೆ ಸಹಾಯ ಮಾಡ್ತಾರೆ?” ಅಂತ ಕೇಳಿದ್ರು.

ಒಂದಿನ ಅಮ್ಮ ಚರ್ಚಿಗೆ ಹೋಗಿದ್ದಾಗ ನಮ್ಮ ಮನೆಗೆ ಇಬ್ರು ಯೆಹೋವನ ಸಾಕ್ಷಿಗಳು ಬಂದ್ರು. ಅವರು ನಮ್ಮಪ್ಪ ಹತ್ರ ಮಾತಾಡ್ತಾ ಬೈಬಲ್‌ ಕಲಿಯೋಕೆ ಸಹಾಯ ಮಾಡೋ ಲೈಟ್‌ ಅನ್ನೋ ಇಂಗ್ಲಿಷ್‌ ಪುಸ್ತಕದ ಎರಡು ಸಂಪುಟ ತೋರಿಸಿದ್ರು. ಅದ್ರಲ್ಲಿ ಪ್ರಕಟನೆ ಪುಸ್ತಕದ ಬಗ್ಗೆ ಇತ್ತು. ಅಪ್ಪಂಗೆ ಆ ಪುಸ್ತಕ ಇಷ್ಟ ಆಯ್ತು, ಅವ್ರದನ್ನ ತಗೊಂಡ್ರು. ಒಂದಿನ ಅಮ್ಮ ಮನೇಲಿ ಅದನ್ನ ನೋಡಿ ಓದೋಕೆ ಶುರು ಮಾಡಿದ್ರು. ಆಮೇಲೆ ಒಂದಿನ ನ್ಯೂಸ್‌ ಪೇಪರ್‌ನಲ್ಲಿ ಲೈಟ್‌ ಅನ್ನೋ ಪುಸ್ತಕದಿಂದ ಬೈಬಲ್‌ ಕಲಿಯೋಕೆ ಇಷ್ಟಪಡೋರು ಈ ವಿಳಾಸಕ್ಕೆ ಬನ್ನಿ ಅಂತ ಇತ್ತು. ಅಮ್ಮ ಅಲ್ಲಿಗೆ ಹೋದಾಗ ಒಂದು ಅಜ್ಜಿ ಬಾಗಿಲು ತೆಗೆದ್ರು. ಅಮ್ಮ ಲೈಟ್‌ ಪುಸ್ತಕ ತೋರಿಸ್ತಾ “ಈ ಪುಸ್ತಕದ ಬಗ್ಗೆ ಇಲ್ಲಿ ಕಲಿಸ್ತೀರಾ?” ಅಂದ್ರು. “ಹೌದು ಮಗಳೇ, ಬಾ ಒಳಗೆ” ಅಂತ ಅಜ್ಜಿ ಕರೆದ್ರು. ಮುಂದಿನ ವಾರದಿಂದ ಅಮ್ಮ ನಮ್ಮೆಲ್ರನ್ನ ಅಲ್ಲಿಗೆ ಕರ್ಕೊಂಡು ಹೋದ್ರು. ಅವತ್ತಿಂದ ಬಿಡದೇ ಬೈಬಲ್‌ ಕಲಿಯೋಕೆ ಶುರು ಮಾಡಿದ್ವಿ.

ಒಂದಿನ ಮೀಟಿಂಗ್‌ನಲ್ಲಿ ನಂಗೆ ಕೀರ್ತನೆ 144:15ನ್ನ ಓದೋ ಅವಕಾಶ ಸಿಕ್ತು. ಆ ವಚನದಲ್ಲಿ “ಯಾರಿಗೆ ಯೆಹೋವ ದೇವರಾಗಿ ಇರ್ತಾನೋ ಅಂಥವರು ಭಾಗ್ಯವಂತರು” ಅಂತ ಇತ್ತು. ಆ ಮಾತುಗಳು ನನ್ನ ಮನ ಮುಟ್ತು. ಅವತ್ತು ಓದಿದ ಬೇರೆ ಎರಡು ವಚನಗಳೂ ನಂಗೆ ತುಂಬ ಇಷ್ಟ ಆಯ್ತು. ಅದ್ರಲ್ಲೊಂದು 1 ತಿಮೊತಿ 1:11, ಅಲ್ಲಿ ಯೆಹೋವ ‘ಖುಷಿಯಾಗಿರೋ ದೇವರು’ ಅಂತಿತ್ತು. ಇನ್ನೊಂದು ಎಫೆಸ 5:1, ಅದ್ರಲ್ಲಿ ‘ದೇವರನ್ನ ಅನುಕರಿಸಿ’ ಅಂತಿತ್ತು. ಆಗ ನಾನು ನನ್ನನ್ನ ಸೃಷ್ಟಿ ಮಾಡಿರೋ ದೇವ್ರನ್ನ ಖುಷಿಯಾಗಿ ಆರಾಧನೆ ಮಾಡಬೇಕು, ಈ ಅವಕಾಶ ಕೊಟ್ಟಿರೋದಕ್ಕೆ ಯಾವಾಗ್ಲೂ ಋಣಿಯಾಗಿರಬೇಕು ಅಂತ ಅರ್ಥಮಾಡ್ಕೊಂಡೆ. ನನ್ನ ಜೀವನ ಪೂರ್ತಿ ನಾನ್‌ ಇದನ್ನೇ ಮಾಡ್ತಿದ್ದೀನಿ.

ಚಿಕಾಗೋದಲ್ಲಿ ನಮ್ಮ ಮನೆಯಿಂದ 32 ಕಿ.ಮೀ. ದೂರದಲ್ಲಿ ಮೀಟಿಂಗ್‌ ನಡೀತಿತ್ತು. ನಾವು ತಪ್ಪದೇ ಮೀಟಿಂಗ್‌ ಹೋಗ್ತಿದ್ವಿ, ಹೀಗೆ ದಿನೇ ದಿನೇ ನನ್ನ ಬೈಬಲ್‌ ಜ್ಞಾನ ಹೆಚ್ಚಾಗ್ತಿತ್ತು. ನಂಗಿನ್ನೂ ಚೆನ್ನಾಗಿ ನೆನಪಿದೆ, ಒಂದಿನ ಮೀಟಿಂಗ್‌ ನಡೆಸ್ತಿರೋ ಬ್ರದರ್‌ ಅಕ್ಕ ಜೀತಾಗೆ ಉತ್ರ ಹೇಳೋಕೆ ಹೇಳಿದ್ರು. ಅಕ್ಕ ಉತ್ರ ಹೇಳ್ತಿರೋವಾಗ “ಅರೇ, ನಂಗೂ ಇದು ಗೊತ್ತಲ್ವಾ, ನಾನೂ ಕೈ ಎತ್ತಬಹುದಿತ್ತು” ಅಂತ ನಂಗನಿಸ್ತು. ಅವತ್ತಿಂದ ಬಿಡದೇ ಮೀಟಿಂಗ್‌ಗೆ ತಯಾರಿ ಮಾಡ್ತಿದ್ದೆ, ಸ್ವಂತ ಮಾತಲ್ಲಿ ಉತ್ರ ಹೇಳೋಕೆ ಪ್ರಯತ್ನ ಮಾಡ್ತಿದ್ದೆ. ಹೀಗೆ ಅಣ್ಣ, ಅಕ್ಕ, ತಮ್ಮ, ತಂಗಿ ಜೊತೆ ನಾನೂ ಪ್ರಗತಿ ಮಾಡಿದೆ. ಆಮೇಲೆ 1941ರಲ್ಲಿ ದೀಕ್ಷಾಸ್ನಾನ ತಗೊಂಡೆ.

ಅಧಿವೇಶನಗಳಿಂದ ಕಲಿತೆ

1942ರಲ್ಲಿ ಒಹಾಯೋದ ಕ್ಲೀವ್‌ಲ್ಯಾಂಡ್‌ನಲ್ಲಿ ನಡೆದ ಅಧಿವೇಶನವನ್ನ ನಾನು ಯಾವತ್ತೂ ಮರಿಯಲ್ಲ. ಈ ಅಧಿವೇಶನವನ್ನ ಅಮೆರಿಕಾದ 50 ಬೇರೆಬೇರೆ ಕಡೆಯಿಂದ ಜನ್ರು ಟೆಲಿಪೋನ್‌ ಮೂಲಕ ಕೇಳಿಸ್ಕೊಳ್ತಿದ್ರು. ಅಲ್ಲಿ ನಾವೆಲ್ಲ ಟೆಂಟ್‌ಗಳಲ್ಲಿ ಇದ್ವಿ. ನಮ್ಮ ಸಹೋದರರ ಎಷ್ಟೋ ಕುಟುಂಬಗಳೂ ಇತ್ತು. ಆಗ ಇನ್ನೂ 2ನೇ ಮಹಾಯುದ್ಧ ನಡೀತಾ ಇತ್ತು. ಜನ್ರಿಗೂ ಯೆಹೋವನ ಸಾಕ್ಷಿಗಳ ಮೇಲೆ ಕೋಪ, ವಿರೋಧ ನೆತ್ತಿಗೇರಿತ್ತು. ಅದಕ್ಕೆ ನಮ್ಮ ಕೆಲವು ಸಹೋದರರು ಅಧಿವೇಶನದ ನಡೆದ ಸಂಜೆ ಅವರ ಕಾರುಗಳನ್ನೆಲ್ಲಾ ಆ ಕಡೆ ಮುಖ ಮಾಡಿ ನಿಲ್ಲಿಸ್ಕೊಂಡ್ರು. ‘ರಾತ್ರಿಯೆಲ್ಲಾ ನಾವು ಮಲಗದೆ, ಎಚ್ಚರವಾಗಿದ್ದು ಕಾಯೋಣ. ಯಾರಾದ್ರೂ ನಮಗೆ ತೊಂದ್ರೆ ಕೊಡೋಕೆ ಬಂದ್ರೆ ಎಲ್ರೂ ಒಟ್ಟಿಗೆ ಹೆಡ್‌ಲೈಟ್‌ಗಳನ್ನ ಆನ್‌ ಮಾಡೋಣ. ಆಗ ತೊಂದ್ರೆ ಕೊಡೋಕೆ ಬಂದವ್ರ ಕಣ್ಣು ಸರಿಯಾಗಿ ಕಾಣಿಸಲ್ಲ. ಆಮೇಲೆ ಜೋರಾಗಿ ಹಾರ್ನ್‌ ಮಾಡೋಣ ಆಗ ಬೇರೆ ಸಹೋದರರು ನಮಗೆ ಬಂದು ಸಹಾಯ ಮಾಡ್ತಾರೆ’ ಅಂತ ಮಾತಾಡ್ಕೊಂಡ್ರು. ಇದನ್ನೆಲ್ಲಾ ನೋಡಿ “ಪರಿಸ್ಥಿತಿ ಏನೇ ಆದ್ರೂ ಯೆಹೋವನ ಸಾಕ್ಷಿಗಳು ಎಲ್ಲಾದಕ್ಕೂ ರೆಡಿ ಇರ್ತಾರೆ” ಅಂತ ಮನಸಲ್ಲೇ ಅಂದ್ಕೊಂಡೆ. ಅವ್ರೆಲ್ಲಾ ಕಾಯ್ತಿದ್ದಾರೆ ಅನ್ನೋ ಧೈರ್ಯದಲ್ಲಿ ನಾನು ಆರಾಮಾಗಿ ಮಲಗಿದೆ. ಯಾವ ತೊಂದ್ರೆನೂ ಆಗಲಿಲ್ಲ.

ಅಧಿವೇಶನ ಆದ್ಮೇಲೆ ಅಮ್ಮನ ಮುಖದಲ್ಲಿ ಚಿಂತೆನ, ಭಯನ ನೋಡಿದ್ದೇ ಇಲ್ಲ. ಅಮ್ಮ ಯೆಹೋವನ ಮೇಲೆ ಮತ್ತು ಆತನ ಸಂಘಟನೆ ಮೇಲೆ ಪೂರ್ತಿ ಭರವಸೆ ಇಟ್ಟಿದ್ರು. ಅವ್ರ ಆ ಒಳ್ಳೆ ಮಾದರಿನ ನಾನು ಯಾವತ್ತೂ ಮರಿಯಲ್ಲ.

ಅಧಿವೇಶನ ನಡೆಯೋ ಸ್ವಲ್ಪ ಮುಂಚೆಯಷ್ಟೇ ಅಮ್ಮ ರೆಗ್ಯುಲರ್‌ ಪಯನೀಯರ್‌ ಸೇವೆ ಶುರು ಮಾಡಿದ್ರು. ಹಾಗಾಗಿ ಅಧಿವೇಶನದಲ್ಲಿ ಪೂರ್ಣ ಸಮಯದ ಸೇವೆ ಬಗ್ಗೆ ಇದ್ದ ಎಲ್ಲಾ ಭಾಷಣಗಳನ್ನ ಚೆನ್ನಾಗಿ ಕೇಳಿಸ್ಕೊಂಡು, ನೋಟ್ಸ್‌ ಬರ್ಕೊಂಡ್ರು. ಅಧಿವೇಶನ ಮುಗಿಸಿ ಮನೆಗೆ ಹೋಗುವಾಗ ಅಮ್ಮ ನಮ್ಮತ್ರ, “ನಂಗೆ ಪಯನೀಯರ್‌ ಸೇವೆ ಬಿಡೋಕೆ ಇಷ್ಟ ಇಲ್ಲ. ಆದ್ರೆ ಮನೆಲಿ ಎಲ್ಲ ಕೆಲ್ಸ ಮಾಡ್ಕೊಂಡು ಇದನ್ನ ಮಾಡೋದು ಕಷ್ಟ ಆಗುತ್ತೆ. ನೀವೆಲ್ಲಾ ಹೆಲ್ಪ್‌ ಮಾಡ್ತೀರಾ?” ಅಂದ್ರು. ನಾವೆಲ್ಲಾ “ಸರಿ ಮಾ, ಮಾಡ್ತೀವಿ” ಅಂದ್ವಿ. ಅದಕ್ಕೆ ಅಮ್ಮ ನಾವು ಬೆಳಿಗ್ಗೆ ತಿಂಡಿ ತಿನ್ನೋ ಮುಂಚೆ ಯಾವ್ಯಾವ ಕೆಲಸ ಮಾಡಬೇಕು ಅಂತ ಹೇಳ್ತಿದ್ರು. ದಿನಾ ನಾವದನ್ನ ಮಾಡ್ತಿದ್ವಿ. ನಾವು ಸ್ಕೂಲಿಗೆ ಹೋದ್ಮೇಲೆ ನಮಗೆ ಕೊಟ್ಟಿರೋ ಕೆಲಸನ ಮಾಡಿದ್ದೀವಾ, ಮನೇಲಿ ಎಲ್ಲಾ ಸರಿ ಇದ್ಯಾ ಅಂತ ನೋಡ್ಕೊಂಡು ಅಮ್ಮ ಸೇವೆಗೆ ಹೋಗ್ತಿದ್ರು. ಅಮ್ಮ ತುಂಬ ಬಿಜ಼ಿಯಾಗಿ ಇರ್ತಿದ್ರು, ಆದ್ರೂ ನಮಗೋಸ್ಕರ ಯಾವಾಗ್ಲೂ ಟೈಮ್‌ ಮಾಡ್ಕೊತ್ತಿದ್ರು. ನಾವು ಊಟಕ್ಕೆ ಬರೋಷ್ಟರಲ್ಲಿ ಮತ್ತು ಸ್ಕೂಲ್‌ ಮುಗಿಸಿ ಬರೋಷ್ಟರಲ್ಲಿ ಅಮ್ಮ ನಮಗೋಸ್ಕರ ಮನೇಲಿ ಕಾಯ್ತಿದ್ರು. ಕೆಲವು ಸಲ ಸ್ಕೂಲ್‌ ಮುಗಿದ ಮೇಲೆ ನಾವೂ ಅವ್ರ ಜೊತೆ ಸೇವೆಗೆ ಹೋಗ್ತಿದ್ವಿ. ಹೀಗೆ ಒಬ್ಬ ಪಯನೀಯರ್‌ ಎಷ್ಟೆಲ್ಲ ಕೆಲ್ಸ ಮಾಡ್ತಾರೆ ಅಂತ ಅರ್ಥಮಾಡ್ಕೊಂಡೆ.

ಪಯನೀಯರ್‌ ಸೇವೆಯಿಂದ ಕಲಿತೆ

ನಂಗೆ 16 ವರ್ಷ ಆದಾಗ ಪಯನೀಯರ್‌ ಸೇವೆ ಶುರುಮಾಡಿದೆ. ಆಗಿನ್ನೂ ಅಪ್ಪ ಯೆಹೋವನ ಸಾಕ್ಷಿಯಾಗಿರಲಿಲ್ಲ. ಆದ್ರೂ ನಾನು ಸೇವೆಗೆ ಹೋಗ್ತಿದ್ದೀನಾ, ಹೇಗೆ ಸೇವೆ ಮಾಡ್ತಿದ್ದೀನಿ ಅಂತೆಲ್ಲಾ ಕೇಳ್ತಿದ್ರು. ಹೀಗೆ ಒಂದಿನ ಅಪ್ಪನ ಹತ್ರ “ನಾನು ಎಷ್ಟೇ ಕಷ್ಟಪಟ್ಟು ಸೇವೆ ಮಾಡಿದ್ರೂ ಒಂದ್‌ ಬೈಬಲ್‌ ಸ್ಟಡಿನೂ ಸಿಗ್ತಿಲ್ಲ” ಅಂತ ಹೇಳಿದೆ. ಆಮೇಲೆ “ನಿಮಗಾದ್ರೂ ನಾನು ಬೈಬಲ್‌ ಕಲಿಸ್ಲಾ?” ಅಂತ ಕೇಳಿದೆ. ಆಗ ಅಪ್ಪ ಸ್ವಲ್ಪ ಯೋಚ್ನೆ ಮಾಡ್ಬಿಟ್ಟು “ಸರಿ. ನಾನು ನಿನ್ನ ಹತ್ರ ಬೈಬಲ್‌ ಕಲಿತೀನಿ” ಅಂದ್ರು. ಹೀಗೆ ನಮ್ಮ ಅಪ್ಪಾನೇ ನಂಗೆ ಮೊದಲ ಬೈಬಲ್‌ ಸ್ಟಡಿ ಆದ್ರು. ಆ ದಿನಗಳನ್ನ ಮರಿಯೋಕೇ ಆಗಲ್ಲ.

“ಸತ್ಯವು ನಿಮ್ಮನ್ನು ಬಿಡುಗಡೆ ಮಾಡುತ್ತದೆ” [ಇಂಗ್ಲಿಷ್‌] ಅನ್ನೋ ಪುಸ್ತಕದಲ್ಲಿ ನಾವು ಬೈಬಲ್‌ ಸ್ಟಡಿ ಶುರು ಮಾಡಿದ್ವಿ. ಆಗ ನಾನು ಇನ್ನೂ ಚೆನ್ನಾಗಿ ಬೈಬಲ್‌ ಕಲಿಯೋಕೆ, ಬೇರೆಯವ್ರಿಗೆ ಕಲಿಸೋಕೆ ಅಪ್ಪಾನೇ ನಂಗೆ ಸಹಾಯ ಮಾಡಿದ್ದು. ಉದಾಹರಣೆಗೆ, ಒಂದಿನ ಸ್ಟಡಿ ಮಾಡ್ವಾಗ ಒಂದು ಪ್ಯಾರ ಓದಿ ಆದ್ಮೇಲೆ ಅಪ್ಪ ನನ್ನ ಹತ್ರ, “ಈ ಬುಕ್‌ ಹೇಳ್ತಿರೋದೆಲ್ಲಾ ನಂಗೆ ಅರ್ಥ ಆಗ್ತಿದೆ. ಆದ್ರೆ ಈ ಬುಕಲ್ಲಿ ಇರೋದೆಲ್ಲಾ ಸತ್ಯ ಅಂತ ನಿಂಗೆ ಹೇಗೆ ಗೊತ್ತು?” ಅಂತ ಕೇಳಿದ್ರು. ಆಗ ಏನು ಹೇಳಬೇಕು ಅಂತ ನಂಗೆ ಸರಿಯಾಗಿ ಗೊತ್ತಾಗ್ಲಿಲ್ಲ. ಅದಕ್ಕೆ ನಾನು “ಇದೇ ಸತ್ಯ ಅಂತ ಹೇಗೆ ಅರ್ಥಮಾಡ್ಸೋದು ಅಂತ ನಂಗೆ ಈಗ ಗೊತ್ತಿಲ್ಲ. ಮುಂದಿನ ಸಲ ಸ್ಟಡಿ ಮಾಡೋವಾಗ ಉತ್ರ ಹುಡ್ಕೊಂಡು ಬರ್ತೀನಿ” ಅಂದೆ. ಹೇಳಿದಂಗೆ ಉತ್ರ ಹುಡ್ಕೊಂಡು ಹೋದೆ. ಅದ್ರ ಬಗ್ಗೆ ಇದ್ದ ಕೆಲವು ವಚನಗಳನ್ನ ತೋರಿಸಿ ಚರ್ಚೆ ಮಾಡಿದ್ವಿ. ಅವತ್ತಿಂದ ನಾನು ಇನ್ನೂ ಚೆನ್ನಾಗಿ ಬೈಬಲ್‌ ಸ್ಟಡಿ ಮಾಡೋಕೆ ಮತ್ತು ಸಂಶೋಧನೆ ಮಾಡೋಕೆ ಕಲಿತ್ಕೊಂಡೆ. ಈ ತರ ಮಾಡಿದ್ರಿಂದ ನಾನು ಯೆಹೋವನಿಗೆ ಇನ್ನೂ ಹತ್ರ ಆಗೋಕಾಯ್ತು. ನಮ್ಮ ಅಪ್ಪಾಗೂ ತುಂಬ ಪ್ರಯೋಜ್ನ ಆಯ್ತು. ಅವರು ಕಲ್ತಿದ್ದನ್ನೆಲ್ಲಾ ಪಾಲಿಸಿ 1952ರಲ್ಲಿ ದೀಕ್ಷಾಸ್ನಾನ ತಗೊಂಡ್ರು.

ಬೆತೆಲಿನಲ್ಲಿ ಕಲಿತೆ

ನಂಗೆ 17 ವರ್ಷ ಆದಾಗ ಮನೆಯಿಂದ ದೂರ ಇದ್ದು ಜೀವನ ಮಾಡಬೇಕಾಯ್ತು. ನಮ್ಮ ಅಕ್ಕ ಜೆತಾ a ಮಿಷನರಿಯಾಗಿ ಸೇವೆ ಮಾಡ್ತಿದ್ಳು, ಅಣ್ಣ ಡಾನ್‌ ಬೆತೆಲ್‌ನಲ್ಲಿ ಸೇವೆ ಮಾಡ್ತಿದ್ದ. ಇವ್ರಿಬ್ರೂ ಅವ್ರ ಸೇವೆಯನ್ನ ಖುಷಿಖುಷಿಯಾಗಿ ಮಾಡ್ತಿದ್ರು. ಇದನ್ನ ನೋಡಿ ನಂಗೆ ತುಂಬ ಪ್ರೋತ್ಸಾಹ ಸಿಕ್ತು. ಅದಕ್ಕೆ ನಾನು ಬೆತೆಲ್‌ಗೂ ಗಿಲ್ಯಡ್‌ ಶಾಲೆಗೂ ಅರ್ಜಿ ಹಾಕಿ ಯೆಹೋವ ಏನು ಕೊಡ್ತಾರೆ ಅಂತ ಕಾಯ್ತಿದ್ದೆ. ಕೊನೆಗೂ ಯೆಹೋವನಿಂದ ಉತ್ರ ಸಿಕ್ಕೇ ಬಿಡ್ತು. 1946ರಲ್ಲಿ ನನ್ನನ್ನ ಬೆತೆಲ್‌ನಲ್ಲಿ ಸೇವೆ ಮಾಡೋಕೆ ಕರೆದ್ರು.

ನಾನು ಬೆತೆಲ್‌ನಲ್ಲಿ ಸುಮಾರು 75 ವರ್ಷದಿಂದ ಸೇವೆ ಮಾಡ್ತಿದ್ದೀನಿ. ಇಲ್ಲಿವರೆಗೂ ಬೇರೆಬೇರೆ ನೇಮಕಗಳನ್ನ ಮಾಡಿದ್ದೀನಿ. ಪ್ರತಿ ನೇಮಕದಲ್ಲೂ ಎಷ್ಟೋ ಹೊಸ ವಿಷ್ಯಗಳನ್ನ ಕಲ್ತಿದ್ದೀನಿ. ಉದಾಹರಣೆಗೆ ಬುಕ್‌ಗಳನ್ನ ಪ್ರಿಂಟ್‌ ಮಾಡೋದು ಹೇಗೆ? ಅಕೌಂಟ್ಸ್‌ ಕೆಲಸನ ಹೇಗೆ ಮಾಡೋದು? ಬೆತೆಲ್‌ಗೆ ಬೇಕಾಗಿರೋ ವಸ್ತುಗಳನ್ನ ಹೇಗೆ ಕೊಂಡ್ಕೊಳ್ಳೋದು? ಬೆತೆಲ್‌ನಲ್ಲಿ ತಯಾರಿಸಿರೋ ವಸ್ತುಗಳನ್ನ ಬೇರೆ ಕಡೆಗೆ ಹೇಗೆ ಕಳಿಸೋದು? ಅಂತೆಲ್ಲಾ ಕಲ್ತಿದ್ದೀನಿ. ಇದಕ್ಕಿಂತ ಹೆಚ್ಚಾಗಿ ಬೆತೆಲ್‌ನಲ್ಲಿ ನಡೆಯೋ ಮಾರ್ನಿಂಗ್‌ ವರ್ಷಿಪ್‌ ಮತ್ತು ಅಲ್ಲಿ ಕೊಡೋ ಭಾಷಣಗಳನ್ನೆಲ್ಲಾ ಕೇಳಿಸ್ಕೊಂಡು ಯೆಹೋವನಿಗೆ ನಾನು ತುಂಬ ಹತ್ರ ಆಗಿದ್ದೀನಿ.

ಸಭಾ ಹಿರಿಯರಿಗಾಗಿ ನಡೆಯೋ ಶಾಲೆಯಲ್ಲಿ ನಾನು ಕಲಿಸ್ತಿರೋದು

1947ರಲ್ಲಿ ನನ್ನ ತಮ್ಮ ಕಾರ್ಲ್‌ ಬೆತೆಲ್‌ಗೆ ಬಂದ. ಅವನಿಂದಾನೂ ಎಷ್ಟೋ ವಿಷ್ಯನ ಕಲಿತೆ. ಅವನಿಗೆ ಬೈಬಲ್‌ ಬಗ್ಗೆ ತುಂಬ ಚೆನ್ನಾಗಿ ಗೊತ್ತಿತ್ತು, ಬೇರೆಯವ್ರಿಗೂ ಸಕ್ಕತ್ತಾಗಿ ಬೈಬಲ್‌ ಕಲಿಸ್ತಿದ್ದ. ಅದಕ್ಕೆ ನನ್ನ ಭಾಷಣಕ್ಕೆ ಅವನ ಸಹಾಯ ಕೇಳ್ದೆ. “ಹೇ, ನಾನು ತುಂಬ ವಿಷ್ಯಗಳನ್ನ ಹುಡುಕಿದ್ದೀನಿ ಕಣೋ. ಯಾವದನ್ನ ತಗೋಬೇಕು ಯಾವದನ್ನ ಬಿಡಬೇಕು ಅಂತಾನೇ ಗೊತ್ತಾಗ್ತಿಲ್ಲ” ಅಂದೆ. ಅದಕ್ಕೆ ಅವನು “ಅಣ್ಣಾ, ನಿನ್ನ ಭಾಷಣದ ವಿಷ್ಯ ಏನು?” ಅಂದ. ಅದನ್ನ ಕೇಳಿದ ತಕ್ಷಣ ಅವನು ಏನ್‌ ಹೇಳೋಕೆ ಬರ್ತಿದ್ದಾನೆ ಅಂತ ನಂಗರ್ಥ ಆಯ್ತು. ನನ್ನ ಭಾಷಣಕ್ಕೆ ಸಂಬಂಧ ಪಟ್ಟ ವಿಷ್ಯನ ಮಾತ್ರ ತಗೊಂಡು ಮಿಕ್ಕಿದ್ದನ್ನೆಲ್ಲಾ ಬಿಡಬೇಕು ಅಂತ ಕಲಿತೆ. ಅವನು ಕಲಿಸಿದ ಈ ಪಾಠನ ನಾನ್ಯಾವತ್ತೂ ಮರಿಯಲ್ಲ.

ಬೆತೆಲ್‌ನಲ್ಲಿ ಖುಷಿಖುಷಿಯಾಗಿ ಇರಬೇಕಂದ್ರೆ ನಮ್ಮ ಕೈಲಾದಷ್ಟು ಸಿಹಿಸುದ್ದಿನೂ ಸಾರಬೇಕು. ಆಗ ನಮಗೆ ಒಳ್ಳೊಳ್ಳೆ ಅನುಭವ ಸಿಗುತ್ತೆ. ಅಂಥ ಒಂದು ಅನುಭವನ ನಾನೀಗ ಹೇಳ್ತೀನಿ. ಒಂದಿನ ಸಂಜೆ ಒಂದು ಬ್ರದರ್‌ ಜೊತೆ ನ್ಯೂಯಾರ್ಕ್‌ನಲ್ಲಿ ಸೇವೆ ಮಾಡ್ತಿದ್ದೆ. ಹಿಂದೆ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಯನ್ನ ತಗೊಂಡಿದ್ದ ಒಂದು ಸ್ತ್ರೀ ಮನೆಗೆ ಹೋದ್ವಿ. ನಾವು ಅವ್ರಿಗೆ “ಜನ್ರ ಹತ್ರ ಹೋಗಿ ಬೈಬಲ್‌ ಬಗ್ಗೆ, ಅವ್ರಿಗೆ ಪ್ರಯೋಜನ ಆಗೋ ವಿಷ್ಯಗಳ ಬಗ್ಗೆ ಮಾತಾಡ್ತಾ ಇದ್ದೀವಿ. ನಿಮ್ಮತ್ರ ಮಾತಾಡಬಹುದಾ?” ಅಂತ ಕೇಳಿದ್ವಿ. ಆ ಸ್ತ್ರೀ “ಬೈಬಲ್‌ ಬಗ್ಗೆ ಅಂದ್ರೆ ಮಾತಾಡಿ, ಬನ್ನಿ ಒಳಗೆ” ಅಂದ್ರು. ಆಮೇಲೆ ನಾವು ಅವ್ರ ಹತ್ರ ಎಷ್ಟೋ ಬೈಬಲ್‌ ವಚನಗಳನ್ನ ಓದಿ ದೇವರ ಆಳ್ವಿಕೆ ಅಂದ್ರೇನು ಮತ್ತು ಹೊಸಲೋಕ ಅಂದ್ರೇನು ಅಂತೆಲ್ಲಾ ಚರ್ಚೆ ಮಾಡಿದ್ವಿ. ಅದೆಲ್ಲಾ ಅವ್ರಿಗೆ ತುಂಬ ಇಷ್ಟ ಆಯ್ತು. ಅದಕ್ಕೆ ಅವರು ಮುಂದಿನ ವಾರ ಅವ್ರ ಸಂಬಂಧಿಕರನ್ನ ಮನೆಗೆ ಕರೆದ್ರು, ಅವ್ರೆಲ್ಲರ ಹತ್ರ ನಾವು ಬೈಬಲ್‌ ಬಗ್ಗೆ ಮಾತಾಡಿದ್ವಿ. ಆಮೇಲೆ ಆ ಸ್ತ್ರೀ ಮತ್ತು ಅವ್ರ ಕುಟುಂಬದವರು ಸತ್ಯಕ್ಕೆ ಬಂದ್ರು.

ನನ್ನ ಹೆಂಡ್ತಿಯಿಂದಾನೂ ಕಲಿತೆ

ನಾನು ಮದುವೆ ಆಗಬೇಕು ಅಂತ ತೀರ್ಮಾನ ಮಾಡ್ದೆ. ಆದ್ರೆ ಎಂಥ ಹುಡುಗಿಯನ್ನ ಹುಡುಕಬೇಕು ಅಂತ ಗೊತ್ತಾಗ್ಲಿಲ್ಲ. ಅದಕ್ಕೆ ಪ್ರಾರ್ಥನೆ ಮಾಡಿ “ನಾನು ಮದುವೆ ಆದ್ಮೇಲೆ ಏನು ಮಾಡಬೇಕು ಅಂತ ಇದ್ದೀನಿ?” ಅಂತ ಯೋಚಿಸ್ದೆ. ಆಗ ಜಾಸ್ತಿ ಸೇವೆ ಮಾಡೋಕೆ ಸಹಾಯ ಮಾಡೋ ಹುಡುಗಿ ಸಿಕ್ಕಿದ್ರೆ ಚೆನ್ನಾಗಿರುತ್ತೆ ಅಂತ ಅನಿಸ್ತು. ಕೊನೆಗೂ 10 ವರ್ಷ ಆದಮೇಲೆ ಅಂಥ ಹುಡುಗಿ ಸಿಕ್ಕೇ ಬಿಟ್ಳು.

ಮೇರಿ ಜೊತೆ ಸರ್ಕಿಟ್‌ ಕೆಲಸ ಮಾಡುವಾಗ

1953ರಲ್ಲಿ ಯಾಂಕೀ ಸ್ಟೇಡಿಯಂನಲ್ಲಿ ಅಧಿವೇಶನ ಆದ್ಮೇಲೆ ಮೇರಿ ಆನಿಯೋಲ್‌ ಅನ್ನೋ ಒಬ್ಬ ಸಹೋದರಿನ ನೋಡ್ದೆ. ಇವರು ನಮ್ಮಕ್ಕ ಜೊತೆ ಗಿಲ್ಯಡ್‌ ಕ್ಲಾಸ್‌ನಲ್ಲಿದ್ರು. ಅಕ್ಕ ಜೊತೆನೇ ಮಿಷನರಿಯಾಗಿ ಸೇವೆನೂ ಮಾಡ್ತಿದ್ರು. ಇವರು ನನ್ನ ಹತ್ರ ಖುಷಿಖುಷಿಯಿಂದ ಮಾತಾಡ್ತಾ ಕೆರೀಬಿಯನ್‌ ಜಾಗದಲ್ಲಿ ಮಿಷನರಿ ಸೇವೆ ಹೇಗಿದೆ, ಬೈಬಲ್‌ ಸ್ಟಡಿ ಹೇಗೆ ನಡೀತಿದೆ ಅಂತೆಲ್ಲಾ ಹೇಳ್ತಿದ್ರು. ಹೀಗೇ ಮಾತಾಡ್ತಾ ಮಾತಾಡ್ತಾ ನಮ್ಮಿಬ್ರಿಗೂ ಒಂದೇ ರೀತಿಯ ಗುರಿ ಇದೆ ಅಂತ ಗೊತ್ತಾಯ್ತು. ಹೀಗೆ ನಮ್ಮಿಬ್ರಲ್ಲಿ ಪ್ರೀತಿ ಚಿಗುರಿತು. ಆಮೇಲೆ 1955ರ ಏಪ್ರಿಲ್‌ನಲ್ಲಿ ನಾವು ಮದುವೆಯಾದ್ವಿ. ನನ್ನ ಹೆಂಡ್ತಿ ಮೇರಿ ಯೆಹೋವನಿಂದ ನಂಗೆ ಸಿಕ್ಕಿರೋ ಬೆಸ್ಟ್‌ ಗಿಫ್ಟ್‌! ಅವಳು ನಂಗೆ ಒಳ್ಳೆ ಮಾದರಿ. ಅವ್ಳಿಗೆ ಯಾವುದೇ ನೇಮಕ ಸಿಕ್ಕಿದ್ರೂ ಖುಷಿ ಖುಷಿಯಿಂದ ಮಾಡ್ತಾಳೆ, ಕಷ್ಟಪಟ್ಟು ಕೆಲ್ಸ ಮಾಡ್ತಾಳೆ, ಬೇರೆಯವ್ರ ಬಗ್ಗೆ ಚೆನ್ನಾಗಿ ಯೋಚ್ನೆ ಮಾಡ್ತಾಳೆ ಮತ್ತು ಯಾವಾಗ್ಲೂ ದೇವರ ಆಳ್ವಿಕೆಗೆ ಮೊದಲನೇ ಸ್ಥಾನ ಕೊಡ್ತಾಳೆ. (ಮತ್ತಾ. 6:33) ನಾವಿಬ್ರೂ ಸೇರಿ ಮೂರು ವರ್ಷ ಸರ್ಕಿಟ್‌ ಸೇವೆ ಮಾಡಿದ್ವಿ. ಆಮೇಲೆ 1958ರಲ್ಲಿ ನಮ್ಮನ್ನ ಬೆತೆಲಿಗೆ ಕರೆದ್ರು.

ನನ್ನ ಹೆಂಡತಿ ಮೇರಿಯಿಂದಾನೂ ತುಂಬ ಕಲಿತೆ. ಉದಾಹರಣೆಗೆ ಮದುವೆ ಆಗಿ ಸ್ವಲ್ಪದ್ರಲ್ಲೇ ನಾವಿಬ್ರೂ ಜೊತೆಯಾಗಿ ಬೈಬಲನ್ನ ಓದೋಣ ಅಂತ ಗುರಿ ಇಟ್ವಿ. ಪ್ರತಿ ದಿನ 15 ವಚನವನ್ನ ಓದ್ತಿದ್ವಿ. ಓದಿದ್ಮೇಲೆ ಈ ವಚನಗಳಿಂದ ನಾವೇನು ಕಲಿತ್ವಿ, ಅದನ್ನ ನಾವು ಹೇಗೆ ಪಾಲಿಸಬಹುದು ಅಂತೆಲ್ಲಾ ಮಾತಾಡ್ತಾ ಇದ್ವಿ. ಆಗ ಮೇರಿ ಗಿಲ್ಯಡ್‌ನಲ್ಲಿ ಕಲ್ತಿದ್ದನ್ನ, ಮಿಷನರಿ ಸೇವೆಯಲ್ಲಿ ಕಲ್ತಿದ್ದನ್ನೆಲ್ಲಾ ನನ್ನ ಹತ್ರ ಹಂಚ್ಕೊತ್ತಿದ್ದಳು. ದಿನಾ ಈ ತರ ಮಾಡ್ತಿದ್ರಿಂದ ನಂಗೂ ಭಾಷಣಗಳನ್ನ ಚೆನ್ನಾಗಿ ಕೊಡೋಕಾಯ್ತು, ಸಹೋದರಿಯರನ್ನ ಅರ್ಥಮಾಡ್ಕೊಂಡು ಪ್ರೋತ್ಸಾಹ ಕೊಡ್ತಿದ್ದೆ.—ಜ್ಞಾನೋ. 25:11.

ನನ್ನ ಮುದ್ದಿನ ಮಡದಿ ಮೇರಿ 2013ರಲ್ಲಿ ತೀರಿಕೊಂಡಳು. ಅವಳನ್ನ ಹೊಸಲೋಕದಲ್ಲಿ ಮತ್ತೆ ನೋಡೋಕೆ, ಅಪ್ಕೊಳ್ಳೋಕೆ ಕಾಯ್ತಾ ಇದ್ದೀನಿ. ಅಲ್ಲಿವರೆಗೂ ಯೆಹೋವನ ಮೇಲಿರೋ ನನ್ನ ನಂಬಿಕೆನ ಜಾಸ್ತಿ ಮಾಡ್ಕೊಳ್ತಾ ಇರ್ತೀನಿ. (ಜ್ಞಾನೋ. 3:5, 6) ಹೊಸ ಲೋಕದಲ್ಲಿ ಯೆಹೋವನ ಜನರು ಏನ್ನೆಲ್ಲಾ ಮಾಡ್ತಾರೆ ಅಂತ ಯೋಚ್ನೆ ಮಾಡ್ದಾಗ ನಂಗೆ ತುಂಬ ಖುಷಿಯಾಗುತ್ತೆ, ಮನಸ್ಸಿಗೆ ಸಮಾಧಾನ ಆಗುತ್ತೆ. ಹೊಸ ಲೋಕದಲ್ಲೂ ಮಹಾ ಬೋಧಕನಾಗಿ ಯೆಹೋವ ನಮಗೆ ಕಲಿಸ್ತಾನೇ ಇರ್ತಾನೆ. ನಂಗೆ ನೂರು ವರ್ಷ ಆಗ್ತಿದ್ರೂ ಇನ್ನೂ ಕಲಿಸ್ತಿರೋ ವಿಷ್ಯಗಳಿಗೆ ನಾನೆಷ್ಟು ಥ್ಯಾಂಕ್ಸ್‌ ಹೇಳಿದ್ರೂ ಕಮ್ಮಿನೇ!

a ಜೆತಾ ಸುನಲ್‌ರವರ ಜೀವನ ಕಥೆಯನ್ನ ಓದೋಕೆ 2003, ಮಾರ್ಚ್‌ 1ರ ಕಾವಲಿನಬುರುಜುವಿನ ಪುಟ 23-29 ನೋಡಿ.