ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 50

ಗೀತೆ 135 ಯೆಹೋವನ ಸ್ನೇಹಪರ ಮನವಿ: “ನನ್ನ ಮಗನೇ, ವಿವೇಕಿಯಾಗಿರು”

ಬೆಳೆಯೋ ಮಕ್ಕಳ ನಂಬಿಕೆ ಬೆಳೆಸಿ

ಬೆಳೆಯೋ ಮಕ್ಕಳ ನಂಬಿಕೆ ಬೆಳೆಸಿ

“ದೇವರು ಇಷ್ಟಪಡೋ ವಿಷ್ಯಗಳು ಯಾವಾಗ್ಲೂ ಒಳ್ಳೇದಾಗಿ, ಪರಿಪೂರ್ಣವಾಗಿ, ಸರಿಯಾಗಿ ಇರುತ್ತೆ ಅಂತ ಪರೀಕ್ಷಿಸಿ ಅರ್ಥ” ಮಾಡ್ಕೊಳ್ಳಿ.ರೋಮ. 12:2.

ಈ ಲೇಖನದಲ್ಲಿ ಏನಿದೆ?

ಮಕ್ಕಳು ದೇವರ ಮೇಲೆ, ಬೈಬಲ್‌ ಮೇಲೆ ನಂಬಿಕೆ ಜಾಸ್ತಿ ಮಾಡ್ಕೊಳ್ಳೋಕೆ ಅಪ್ಪಅಮ್ಮ ಹೇಗೆ ಸಹಾಯ ಮಾಡಬಹುದು ಅಂತ ನೋಡೋಣ.

1-2. ಮಕ್ಕಳು ಪ್ರಶ್ನೆ ಕೇಳಿದಾಗ ಅಪ್ಪಅಮ್ಮ ಏನು ಮಾಡಬಾರದು?

 ಮಕ್ಕಳನ್ನ ಬೆಳೆಸೋದು ಹೇಳಿದಷ್ಟು ಸುಲಭ ಅಲ್ಲ. ನಿಮಗೆ ಬೆಳೀತಿರೋ ಮಕ್ಕಳು ಇದ್ರೆ ದೇವರ ಮೇಲೆ ನಂಬಿಕೆ ಜಾಸ್ತಿ ಮಾಡ್ಕೊಳ್ಳೋಕೆ ಅವ್ರಿಗೆ ನಿಮ್ಮ ಕೈಲಾಗಿದ್ದನ್ನೆಲ್ಲ ಮಾಡ್ತಿದ್ದೀರ ಅಂತ ನಮಗೆ ಗೊತ್ತು. (ಧರ್ಮೋ. 6:6, 7) ದೇವರು ನಿಮ್ಮನ್ನ ತುಂಬ ಮೆಚ್ಕೊಳ್ತಾನೆ. ಹೋಗ್ತಾ ಹೋಗ್ತಾ ನಿಮ್ಮ ಮಕ್ಕಳು ‘ಯೆಹೋವ ದೇವರು ಯಾಕೆ ಇದನ್ನ ಮಾಡು, ಇದನ್ನ ಮಾಡಬೇಡ ಅಂತ ಹೇಳ್ತಾರೆ? ಇದನ್ನ ಮಾಡೋದ್ರಲ್ಲಿ ತಪ್ಪೇನಿದೆ?’ ಅಂತ ಕೇಳಬಹುದು.

2 ಮೊದಮೊದ್ಲು ನಿಮ್ಮ ಮಕ್ಕಳ ಬಾಯಲ್ಲಿ ಇಂಥ ಪ್ರಶ್ನೆ ಕೇಳಿದಾಗ ನಿಮಗೆ ತಬ್ಬಿಬ್ಬಾಗಬಹುದು. ‘ಇವನೇನಾದ್ರೂ ಸತ್ಯ-ಗಿತ್ಯ ಬಿಟ್ಟು ಹೋಗಿಬಿಡ್ತಾನಾ’ ಅಂತ ತಲೆ ಕೆಟ್ಟೋಗಬಹುದು. ಆದ್ರೆ ಭಯ ಪಡಬೇಡಿ. ‘ಆಳ ನೋಡಿ ನೀರಿಗಿಳಿ’ ಅನ್ನೋ ತರ ಅವರು ನಂಬೋಕೆ ಮುಂಚೆ ನಿಜ ಏನಂತ ಅರ್ಥ ಮಾಡ್ಕೊಳ್ತಿದ್ದಾರೆ ಅಷ್ಟೆ. (1 ಕೊರಿಂ. 13:11) ಅದಕ್ಕೆ ನಿಮ್ಮ ಮಕ್ಕಳು ಪ್ರಶ್ನೆ ಕೇಳಿದಾಗೆಲ್ಲ ಚಿಂತೆ ಮಾಡದೆ, ಇದು ಅವ್ರ ನಂಬಿಕೆನ ಗಟ್ಟಿ ಮಾಡೋಕೆ ಸಿಗ್ತಿರೋ ಅವಕಾಶ ಅಂತ ನೆನಸಿ.

3. ಈ ಲೇಖನದಲ್ಲಿ ನಾವು ಏನೆಲ್ಲ ಕಲಿತೀವಿ?

3 ಅಪ್ಪಅಮ್ಮ ಮಕ್ಕಳಿಗೆ ಮೂರು ವಿಷ್ಯದಲ್ಲಿ ಸಹಾಯ ಮಾಡಬಹುದು. 1) ದೇವರ ಮೇಲೆ, ಬೈಬಲ್‌ ಮೇಲೆ ನಂಬಿಕೆ ಬೆಳೆಸಬಹುದು. 2) ಬೈಬಲಲ್ಲಿರೋ ನೀತಿನಿಯಮಗಳೆಲ್ಲ ಮಕ್ಕಳ ಒಳ್ಳೇದಕ್ಕೇ ಅಂತ ಅರ್ಥ ಮಾಡಿಸಬಹುದು. 3) ಮಕ್ಕಳು ನಂಬೋದನ್ನ ಬೇರೆಯವ್ರಿಗೆ ಧೈರ್ಯವಾಗಿ ಹೇಳೋಕೆ ಕಲಿಸಬಹುದು. ಇದ್ರ ಜೊತೆಗೆ ಈ ಲೇಖನದಲ್ಲಿ ಮಕ್ಕಳು ಪ್ರಶ್ನೆ ಕೇಳೋದು ಯಾಕೆ ಒಳ್ಳೇದು? ಮಕ್ಕಳಿಗೆ ಸಹಾಯ ಮಾಡೋಕೆ ಅಪ್ಪಅಮ್ಮ ಏನೆಲ್ಲ ಪ್ಲ್ಯಾನ್‌ ಮಾಡಬಹುದು ಅಂತ ನೋಡೋಣ.

ದೇವರ ಮೇಲೆ, ಬೈಬಲ್‌ ಮೇಲೆ ನಂಬಿಕೆ ಬೆಳೆಸಿ

4. ಮಕ್ಕಳು ಏನಂತ ಪ್ರಶ್ನೆ ಕೇಳ್ತಾರೆ? ಯಾಕೆ ಪ್ರಶ್ನೆ ಕೇಳ್ತಾರೆ?

4 ದೇವರ ಮೇಲೆ ನಂಬಿಕೆ ಯಾರಿಗೂ ಹುಟ್ತಾನೇ ಬರಲ್ಲ. ನಿಮಗೂ ಬಂದಿರಲಿಲ್ಲ ತಾನೇ? ಅದಕ್ಕೇ, ನಿಮಗೆ ನಂಬಿಕೆ ಇದೆ ಅಂತಕ್ಷಣ ಆಟೋಮೆಟಿಕಾಗಿ ನಿಮ್ಮ ಮಕ್ಕಳಿಗೂ ಬರಬೇಕು ಅಂದ್ಕೊಬೇಡಿ. ಅದನ್ನ ಅವರು ಬೆಳೆಸ್ಕೊಬೇಕಾಗುತ್ತೆ. ಅದಕ್ಕೆ ಕೆಲವೊಮ್ಮೆ ಮಕ್ಕಳು ‘ದೇವರು ಇದ್ದಾನೆ ಅಂತ ಹೇಗ್‌ ಗೊತ್ತಾಗುತ್ತೆ? ಬೈಬಲ್‌ ಹೇಳೋದೆಲ್ಲ ಸರಿ ಅಂತ ಹೇಗೆ ನಂಬ್ಲಿ?’ ಅಂತ ಪ್ರಶ್ನೆಗಳನ್ನ ಕೇಳ್ತಾರೆ. ಈ ತರ ಕೇಳೋದ್ರಲ್ಲಿ ಏನೂ ತಪ್ಪಿಲ್ಲ. ಯಾಕಂದ್ರೆ ಬೈಬಲ್‌ “ನಿಮ್ಮ ಯೋಚನಾ ಸಾಮರ್ಥ್ಯವನ್ನ ಬಳಸಿ,” “ಎಲ್ಲವನ್ನ ಪರೀಕ್ಷಿಸಿ ಯಾವುದು ಒಳ್ಳೇದು ಅಂತ ಚೆನ್ನಾಗಿ ತಿಳ್ಕೊಳ್ಳಿ” ಅನ್ನುತ್ತೆ. (ರೋಮ. 12:1; 1 ಥೆಸ. 5:21) ಹಾಗಾಗಿ ಮಕ್ಕಳು ಪ್ರಶ್ನೆ ಕೇಳಿದಾಗ ದೇವರ ಮೇಲೆ ನಂಬಿಕೆ ಬೆಳೆಸ್ಕೊಳ್ಳೋಕೆ ಅಪ್ಪಅಮ್ಮ ಹೇಗೆ ಸಹಾಯ ಮಾಡಬಹುದು ಅಂತ ನೋಡೋಣ.

5. ಮಕ್ಕಳು ಬೈಬಲ್‌ ಮೇಲೆ ನಂಬಿಕೆ ಬೆಳೆಸ್ಕೊಳ್ಳೋಕೆ ಅಪ್ಪ ಅಮ್ಮ ಹೇಗೆ ಸಹಾಯ ಮಾಡಬಹುದು? (ರೋಮನ್ನರಿಗೆ 12:2)

5 ಹೇಗೆ ಸಾಕ್ಷಿ ಹುಡುಕೋದು ಅಂತ ಕಲಿಸಿ. (ರೋಮನ್ನರಿಗೆ 12:2 ಓದಿ.) ಮಕ್ಕಳು ಪ್ರಶ್ನೆ ಕೇಳಿದಾಗ ಆ ಅವಕಾಶನ ಬಳಸ್ಕೊಳ್ಳಿ. ಆ ಪ್ರಶ್ನೆಗೆ ಅವ್ರೇ ಹೇಗೆ ಉತ್ರ ಹುಡುಕಬಹುದು ಅಂತ ಕಲಿಸಿ. ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನದಲ್ಲಿ ಅಥವಾ ಬೇರೆ ಪ್ರಕಾಶನಗಳಲ್ಲಿ ಹೇಗೆ ಸಂಶೋಧನೆ ಮಾಡೋದು ಅಂತ ಹೇಳ್ಕೊಡಿ. ನಿಮ್ಮ ಮಗ ಸಂಶೋಧನಾ ಸಾಧನದಲ್ಲಿ “ಬೈಬಲ್‌” ವಿಷ್ಯದ ಕೆಳಗಿರೋ “ದೈವಪ್ರೇರಿತ” ಅನ್ನೋ ಸಬ್‌ಹೆಡಿಂಗ್‌ ಕೆಳಗೆ ನೋಡಿದ್ರೆ, ಬೈಬಲ್‌ ಸಾಮಾನ್ಯ ಪುಸ್ತಕ ಅಲ್ಲ, ಅದು ದೇವರ ವಾಕ್ಯ! ಅದ್ರಲ್ಲಿರೋದು “ದೇವರ ಸಂದೇಶನೇ” ಅನ್ನೋದಕ್ಕೆ ಸಾಕ್ಷಿಗಳು ಸಿಗುತ್ತೆ. (1 ಥೆಸ. 2:13) ಉದಾಹರಣೆಗೆ ಬೈಬಲನ್ನ ಟೀಕಿಸ್ತಿದ್ದ ಸ್ವಲ್ಪ ಜನ ‘ನಿನವೆ ಅನ್ನೋ ಪಟ್ಟಣ ಈ ಭೂಮಿಲೇ ಇರಲಿಲ್ಲ. ಬೈಬಲ್‌ ಹೇಳೋದೆಲ್ಲ ಸುಳ್ಳು’ ಅಂತ ಹೇಳಿದ್ರು. ಇದು ನಿಜಾನಾ ಅಂತ ತಿಳ್ಕೊಳ್ಳೋಕೆ ನಮ್ಮ ಪ್ರಕಾಶನಗಳಲ್ಲಿ ‘ನಿನವೆ ಪಟ್ಟಣ’ ಅಂತ ಹುಡುಕಬಹುದು. ಆಗ ನಿಮ್ಮ ಮಗನಿಗೆ, ‘ಸುಮಾರು 1850ರಲ್ಲಿ ಭೂಅಗೆತಶಾಸ್ತ್ರಜ್ಞರಿಗೆ ಈ ಪಟ್ಟಣದ ಉಳಿದ ಭಾಗಗಳು ಸಿಕ್ತು. ಇದ್ರಿಂದ ಬೈಬಲಲ್ಲಿ ಹೇಳಿರೋ ನಿನವೆ ಪಟ್ಟಣ ನಿಜವಾಗ್ಲೂ ಇತ್ತು, ಬೈಬಲ್‌ ಹೇಳಿದ್ದು ನಿಜನೇ’ ಅಂತ ಅರ್ಥ ಆಗುತ್ತೆ. (ಚೆಫ. 2:13-15) ಅಷ್ಟೇ ಅಲ್ಲ, ನಿನವೆ ನಾಶ ಆಗುತ್ತೆ ಅಂತ ಬೈಬಲ್‌ ಹೇಳಿದ ಭವಿಷ್ಯವಾಣಿ ಹೇಗೆ ನೆರವೇರಿತು ಅಂತ ತಿಳ್ಕೊಳ್ಳೋಕೆ ಅವನು ನವೆಂಬರ್‌ 2021ರ ಕಾವಲಿನಬುರುಜುವಿನಲ್ಲಿರೋ “ನಿಮಗೆ ಗೊತ್ತಿತ್ತಾ?” ಲೇಖನ ಓದಬಹುದು. ಅವನು ನಮ್ಮ ಪ್ರಕಾಶನಗಳಲ್ಲಿ ಓದಿದ್ದನ್ನ ಎನ್‌ಸೈಕ್ಲೋಪಿಡಿಯ ತರದ ಪುಸ್ತಕಗಳಲ್ಲಿ ಓದಿದ್ದಕ್ಕೆ ಹೋಲಿಸಿ ನೋಡೋಕೆ ಹೇಳಿ. ಆಗ ಅವನಿಗೆ ಬೈಬಲ್‌ ಮೇಲಿರೋ ನಂಬಿಕೆ ಖಂಡಿತ ಜಾಸ್ತಿ ಆಗುತ್ತೆ.

6. ಮಕ್ಕಳು ಯೋಚ್ನೆ ಮಾಡೋ ತರ ಮಾಡೋಕೆ ಅಪ್ಪಅಮ್ಮ ಏನು ಮಾಡಬಹುದು? ಉದಾಹರಣೆ ಕೊಡಿ. (ಚಿತ್ರ ನೋಡಿ.)

6 ಯಾಕೆ? ಏನು? ಅಂತ ಯೋಚನೆ ಮಾಡೋ ತರ ಮಾಡಿ. ಮಕ್ಕಳ ಹತ್ರ ದೇವರ ಬಗ್ಗೆ, ಬೈಬಲ್‌ ಬಗ್ಗೆ ಮಾತಾಡೋಕೆ ಅಪ್ಪಅಮ್ಮ ಅವಕಾಶನ ಹುಡುಕ್ತಾ ಇರಬೇಕು. ನೀವು ತೋಟಕ್ಕೆ, ಪಾರ್ಕಿಗೆ, ಜ಼ೂಗೆ, ಮ್ಯೂಸಿಯಂಗೆ ಮತ್ತೆ ಬೆತೆಲ್‌ ನೋಡೋಕೆ ಹೋದಾಗೆಲ್ಲ ನಿಮ್ಗೆ ಈ ಅವಕಾಶಗಳು ಸಿಗುತ್ತೆ. ಉದಾಹರಣೆಗೆ, ಮಕ್ಕಳ ಜೊತೆ ನೀವು ಒಂದು ಮ್ಯೂಸಿಯಂಗೆ ಹೋದಾಗ ಅಲ್ಲಿರೋ ವಸ್ತುಗಳನ್ನ ತೋರ್ಸಿ ಬೈಬಲಲ್ಲಿ ಅದ್ರ ಬಗ್ಗೆ ಇರೋ ವಿಷ್ಯಗಳನ್ನ ನೆನಪಿಸಿ. ಆಗ ಅವ್ರಿಗೆ ಬೈಬಲ್‌ ಬಗ್ಗೆ, ಬೈಬಲಲ್ಲಿರೋ ವಿಷ್ಯಗಳ ಬಗ್ಗೆ ನಂಬಿಕೆ ಜಾಸ್ತಿ ಆಗುತ್ತೆ. ಮ್ಯೂಸಿಯಂಗೆ ನೀವು ನೇರವಾಗಿ ಹೋಗೋಕೆ ಆಗಿಲ್ಲಾಂದ್ರೂ ಇಂಟರ್ನೆಟಲ್ಲಿ ಅವುಗಳ ವಿಡಿಯೋ ಅಥವಾ ಫೋಟೋ ತೋರಿಸಬಹುದು. ಅಲ್ಲಿರೋ ವಸ್ತುಗಳನ್ನ ತೋರಿಸ್ತಾ ‘ಅದೇನು? ಅದಕ್ಕೂ ಬೈಬಲಿಗೂ ಏನು ಸಂಬಂಧ? ಅದ್ರಲ್ಲಿ ಏನು ವಿಶೇಷ?’ ಅಂತ ಮಕ್ಕಳ ಹತ್ರ ಕೇಳಿ ವಿವರಿಸಿ. ಪ್ಯಾರೀಸಲ್ಲಿ ಲೂವರ್‌ ಮ್ಯೂಸಿಯಂನಲ್ಲಿ ಮೋವಾಬ್ಯರ ಕಲ್ಲನ್ನ ಇಟ್ಟಿದ್ದಾರೆ. ನಿಮ್ಮ ಮಕ್ಕಳಿಗೆ ಅದನ್ನ ತೋರಿಸ್ತಾ ‘ಇದು ಎಷ್ಟು ವರ್ಷ ಹಳೆದು ಗೊತ್ತಾ? 3,000 ವರ್ಷ ಹಳೀದು. ಇದ್ರಲ್ಲಿ ಯೆಹೋವನ ಹೆಸ್ರನ್ನ ಬರೆದಿದ್ದಾರೆ ಗೊತ್ತಾ?’ ಅಂತ ಹೇಳಿ. ಈ ಕಲ್ಲಿನ ಒಂದು ಮಾದರಿಯನ್ನ ನ್ಯೂಯಾರ್ಕಿನ ಬೆತೆಲಿನಲ್ಲಿರೋ “ಬೈಬಲ್‌ ಮತ್ತು ದೇವರ ಹೆಸರು” ಅನ್ನೋ ಮ್ಯೂಸಿಯಂನಲ್ಲೂ ಇಟ್ಟಿದ್ದಾರೆ. ಈ ಕಲ್ಲಲ್ಲಿ ಮೋವಾಬ್ಯರ ರಾಜ ಮೇಷ ಇಸ್ರಾಯೇಲ್ಯರ ವಿರುದ್ಧ ತಿರುಗಿ ಬಿದ್ದ ಅಂತ ಕೆತ್ತಲಾಗಿದೆ. ನಿಮ್ಮ ಮಕ್ಕಳಿಗೆ ಇದನ್ನ ತೋರಿಸ್ತಾ ‘ಇದನ್ನೇ ಬೈಬಲೂ ಹೇಳುತ್ತೆ!’ ಅಂತ ಅನ್ನಬಹುದು. (2 ಅರ. 3:4, 5) ನಿಮ್ಮ ಮಕ್ಕಳು ಈ ತರ ಸಾಕ್ಷಿಗಳನ್ನೆಲ್ಲ ಕಣ್ಣಾರೆ ನೋಡಿದಾಗ ಬೈಬಲಲ್ಲಿರೋದೆಲ್ಲ ನಿಜ ಅಂತ ನಂಬ್ತಾರೆ.—2 ಪೂರ್ವಕಾಲವೃತ್ತಾಂತ 9:6 ಹೋಲಿಸಿ.

ಮ್ಯೂಸಿಯಂನಲ್ಲಿರೋ ವಿಷ್ಯಗಳನ್ನ ಬಳಸಿ ಮಕ್ಕಳು ದೇವರ ಬಗ್ಗೆ ಯೋಚಿಸೋ ತರ ಮಾಡಿ (ಪ್ಯಾರ 6 ನೋಡಿ)


7-8. (ಎ) ಪ್ರಕೃತಿಯಲ್ಲಿರೋ ಆಕಾರ ಮತ್ತು ಡಿಸೈನಿಂದ ನಾವೇನು ಕಲಿಬಹುದು? ಉದಾಹರಣೆ ಕೊಡಿ. (ಚಿತ್ರ ನೋಡಿ.) (ಬಿ) ಮಕ್ಕಳು ಸೃಷ್ಟಿಕರ್ತನ ಮೇಲೆ ನಂಬಿಕೆ ಬೆಳೆಸ್ಕೊಳ್ಳೋಕೆ ನೀವು ಯಾವ ಪ್ರಶ್ನೆಗಳನ್ನ ಕೇಳಬಹುದು?

7 ಅದ್ಭುತ ಸೃಷ್ಟಿಯ ಬಗ್ಗೆ ಯೋಚ್ನೆ ಮಾಡೋ ತರ ಮಾಡಿ. ನಿಮ್ಮ ಮಕ್ಕಳ ಜೊತೆಲಿ ಪಾರ್ಕಿಗೆ ಹೋದಾಗ, ಹಳ್ಳಿಲಿ ಸುತ್ತಾಡೋವಾಗ ಪ್ರಕೃತಿಯಲ್ಲಿ ಕಾಣಿಸೋ ಡಿಸೈನ್‌ನ, ಆಕಾರನ ತೋರಿಸಿ ಮಾತಾಡಿ. ಯಾಕೆ? ಆ ಡಿಸೈನ್‌ನ, ಆ ಆಕಾರನ ನೋಡಿದ್ರೆ ಇವುಗಳನ್ನೆಲ್ಲ ಯಾರೋ ಬುದ್ಧಿ ಇರೋರು ಮಾಡಿದ್ದಾರೆ ಅಂತ ಮಕ್ಕಳಿಗೆ ವಿವರಿಸಬಹುದು. ಉದಾಹರಣೆಗೆ, ಗ್ಯಾಲಕ್ಸಿಗಳು, ಸಮುದ್ರ ಜೀವಿಗಳ ಶಂಖ, ಗಿಡಗಳ ಎಲೆಗಳು ಅಥವಾ ಸೂರ್ಯಕಾಂತಿ ಹೂವನ್ನ ತಗೊಳಿ. ಇವುಗಳಲ್ಲಿ ಸೊಳ್ಳೆ ಬತ್ತಿ ತರ, ಸ್ಪ್ರಿಂಗ್‌ ತರ, ರೌಂಡ್‌ ರೌಂಡಾಗಿರೋ ಡಿಸೈನ್‌ ಕಾಣ್ಸುತ್ತೆ. ವಿಜ್ಞಾನಿಗಳು ಇಂತಹ ಡಿಸೈನ್‌ಗಳ ಬಗ್ಗೆ ಎಷ್ಟೋ ವರ್ಷಗಳಿಂದ ಅಧ್ಯಯನ ಮಾಡ್ತಿದ್ದಾರೆ. ನಿಕೋಲಾ ಫೆಮೇಲಿ ಅನ್ನೋ ವಿಜ್ಞಾನಿ, ‘ಇಂಥ ಡಿಸೈನ್‌ ಇರೋ ವಸ್ತುಗಳು ಅಥವಾ ಜೀವಿಗಳಲ್ಲಿ ಗುಂಡಾಗಿರೋ ಎಷ್ಟು ಆಕಾರ ಇದೆ ಅಂತ ಲೆಕ್ಕ ಮಾಡಿದ್ರೆ ಒಂದು ರೀತಿಯ ಸಂಖ್ಯೆಗಳು ಸಿಗುತ್ತೆ. ಈ ಸಂಖ್ಯೆಗಳನ್ನ ಫಿಬೋನಾಚಿ ಸೀಕ್ವೆನ್ಸ್‌ ಅಂತಾರೆ’ ಅಂತ ಹೇಳ್ತಾರೆ. ಇಂಥ ಡಿಸೈನ್‌ ಅಥವಾ ಆಕಾರನ ಪ್ರಕೃತಿಯ ಎಷ್ಟೋ ವಿಷ್ಯಗಳಲ್ಲಿ ನೋಡಬಹುದು. a

8 ನಿಮ್ಮ ಮಕ್ಕಳೂ ಸ್ಕೂಲಲ್ಲಿ ಪ್ರಕೃತಿಯಲ್ಲಿ ಸಾಮಾನ್ಯವಾಗಿ ಕಾಣೋ ಡಿಸೈನ್‌, ಆಕಾರಗಳ ಬಗ್ಗೆ ಕಲೀತಾರೆ. ಉದಾಹರಣೆಗೆ, ಮರಗಳು ಕಾಂಡದ ಹತ್ರ ಕವಲು ಒಡೆದು ಅಲ್ಲಿಂದ ರೆಂಬೆಗಳಾಗುತ್ತೆ. ಆ ರೆಂಬೆಗಳಲ್ಲಿ ಕೊಂಬೆಗಳು ಮೂಡುತ್ತೆ. ತುಂಬ ಮರಗಳು ಈ ತರನೇ ಇರುತ್ತೆ. ಈ ಆಕಾರನ ಫ್ರ್ಯಾಕ್ಟಲ್ಸ್‌ ಅಂತ ಕರಿತಾರೆ. ನೀವು ಮಕ್ಕಳ ಹತ್ರ ‘ಮರಗಳಲ್ಲಿ ಈ ತರ ಆಕಾರ ಇರಬೇಕು, ಡಿಸೈನ್‌ ಇರಬೇಕು ಅಂತ ಯಾರು ನಿರ್ಧಾರ ಮಾಡಿದ್ರು?’ ಅಂತ ಕೇಳಬಹುದು. ಆಗ ಅವರು ಯೋಚ್ನೆ ಮಾಡ್ತಾರೆ ‘ಇದಕ್ಕೆಲ್ಲ ದೇವರೇ ಕಾರಣ, ದೇವರೇ ಎಲ್ಲನೂ ಸೃಷ್ಟಿಸಿದ್ದು’ ಅಂತ ನಂಬ್ತಾರೆ. (ಇಬ್ರಿ. 3:4) ಈ ತರ ನೀವು ನಿಮ್ಮ ಮಕ್ಕಳಿಗೆ ಆಗಾಗ ಅರ್ಥ ಮಾಡಿಸ್ತಾ ಹೋಗ್ತಿದ್ರೆ ಒಂದಿನ ಅವ್ರನ್ನ ‘ದೇವರು ಇದನ್ನೆಲ್ಲ ಎಷ್ಟು ಚೆನ್ನಾಗಿ ಮಾಡಿದ್ದಾರೆ ಅಲ್ವಾ? ಇಷ್ಟೆಲ್ಲ ಮಾಡಿರೋ ದೇವರಿಗೆ ನಾನೂ ನೀನೂ ಏನು ಮಾಡಿದ್ರೆ ಚೆನ್ನಾಗಿರ್ತೀವಿ ಅಂತ ಗೊತ್ತಿರಲ್ವಾ? ಆತನಿಗೆ ಎಲ್ಲ ಗೊತ್ತಿದೆ, ಅದಕ್ಕೆ ಅದನ್ನೆಲ್ಲ ಬೈಬಲಿನಲ್ಲಿ ಬರೆಸಿದ್ದಾರೆ’ ಅಂತ ಹೇಳಬಹುದು.

NASA, ESA, and the Hubble Heritage (STScl/AURA)-ESA/Hubble Collaboration

ಇಷ್ಟು ಅಂದವಾಗಿರೋ ಪ್ರಕೃತಿಲಿರೋ ಡಿಸೈನ್‌ನ, ಆಕಾರನ ಯಾರು ಮಾಡಿದ್ದಾರೆ? (ಪ್ಯಾರ 7-8 ನೋಡಿ)


ಬೈಬಲಿನ ನೀತಿನಿಯಮದ ಮೇಲೆ ಗೌರವ ಬೆಳೆಸಿ

9. ಬೈಬಲ್‌ ಬಗ್ಗೆ ನಿಮ್ಮ ಮಕ್ಕಳು ಕೆಲವೊಮ್ಮೆ ಯಾಕೆ ಪ್ರಶ್ನೆ ಕೇಳಬಹುದು?

9 ಒಂದುವೇಳೆ ನಿಮ್ಮ ಮಕ್ಕಳು ‘ಬೈಬಲಲ್ಲಿ ಹೇಳಿರೋ ತರ ಯಾಕೆ ನಡ್ಕೊಬೇಕು? ಅದ್ರಲ್ಲಿ ಹೇಳಿರೋದೆಲ್ಲ ಸರಿನಾ?’ ಅಂತ ಪ್ರಶ್ನೆ ಕೇಳಬಹುದು. ಆಗ ಬೇಜಾರ್‌ ಮಾಡ್ಕೊಬೇಡಿ. ಅವ್ರ ಮನಸ್ಸಲ್ಲಿ ಏನಿದೆ ಅಂತ ಅರ್ಥ ಮಾಡ್ಕೊಳ್ಳಿ. ‘ನನ್ನ ಮಗ ನಿಜವಾಗ್ಲೂ ಬೈಬಲಲ್ಲಿ ಇರೋದನ್ನ ತಪ್ಪು ಅಂತ ಹೇಳ್ತಿದ್ದಾನಾ? ಅಥವಾ ಬೈಬಲ್‌ ಹೇಳೋ ತರ ನಡ್ಕೊಳ್ಳೋದು ಯಾಕೆ ಸರಿ ಅಂತ ಫ್ರೆಂಡ್ಸ್‌ಗೆ ವಿವರಿಸೋಕೆ ಕಷ್ಟ ಆಗ್ತಿರೋದ್ರಿಂದ ಹೀಗೆ ಕೇಳ್ತಿದ್ದಾನಾ?’ ಅಂತ ತಿಳ್ಕೊಳ್ಳಿ. ವಿಷ್ಯ ಏನೇ ಇರಲಿ ಬೈಬಲ್‌ ಹೇಳೋ ತರ ನಡ್ಕೊಳೋದ್ರಿಂದ ಪ್ರಯೋಜನ ಇದೆ ಅಂತ ನೀವು ಮಕ್ಕಳಿಗೆ ಕಲಿಸಬೇಕು. ಅದನ್ನ ಮಾಡೋಕೆ ಎಂದೆಂದೂ ಖುಷಿಯಾಗಿ ಬಾಳೋಣ! ಪುಸ್ತಕದಿಂದ ಅವ್ರ ಜೊತೆ ಅಧ್ಯಯನ ಮಾಡಿ. b

10. ನಿಮ್ಮ ಮಕ್ಕಳು ಯೆಹೋವನನ್ನ ಬೆಸ್ಟ್‌ ಫ್ರೆಂಡಾಗಿ ಮಾಡ್ಕೊಳ್ಳೋಕೆ ನೀವು ಹೇಗೆ ಸಹಾಯ ಮಾಡಬಹುದು?

10 ಯೆಹೋವನನ್ನ ಫ್ರೆಂಡ್‌ ಮಾಡ್ಕೊಳೋಕೆ ಸಹಾಯ ಮಾಡಿ. ಇದನ್ನ ಹೇಗೆ ಮಾಡಬಹುದು? ಎಂದೆಂದೂ ಖುಷಿಯಾಗಿ ಬಾಳೋಣ! ಪುಸ್ತಕನ ನಿಮ್ಮ ಮಕ್ಕಳ ಜೊತೆ ಅಧ್ಯಯನ ಮಾಡುವಾಗ ಅದ್ರಲ್ಲಿರೋ ಪ್ರಶ್ನೆಗಳನ್ನ, ಉದಾಹರಣೆಗಳನ್ನ ಚೆನ್ನಾಗಿ ಬಳಸಿ. (ಜ್ಞಾನೋ. 20:5) ಆಗ ಅವರು ಯೆಹೋವನಿಗೆ ಹತ್ರ ಆಗ್ತಾರೆ. ಒಬ್ಬ ಒಳ್ಳೆ ಫ್ರೆಂಡ್‌ ನಮ್ಮ ಒಳ್ಳೆದಕ್ಕಂತ “ಇದನ್ನ ಮಾಡು, ಅದನ್ನ ಮಾಡಬೇಡ” ಅನ್ನೋ ಬುದ್ಧಿಮಾತನ್ನ ಹೇಳ್ತಾನೆ. ಯೆಹೋವ ಅದೇ ತರ ನಮಗೆ ಫ್ರೆಂಡ್‌ ಆಗಿದ್ದಾನೆ ಅಂತ ಈ ಪುಸ್ತಕದ 8ನೇ ಪಾಠ ಹೇಳುತ್ತೆ. ಅಲ್ಲಿರೋ 1 ಯೋಹಾನ 5:3 ವಚನನ ನಿಮ್ಮ ಮಕ್ಕಳ ಜೊತೆ ಚರ್ಚೆ ಮಾಡಿದ ಮೇಲೆ, “ಯೆಹೋವ ದೇವರು ಒಳ್ಳೆ ಫ್ರೆಂಡ್‌ ಅಂತ ಅರ್ಥ ಮಾಡ್ಕೊಂಡಲ್ವಾ? ಹಾಗಾದ್ರೆ ಈ ನಿನ್‌ ಫ್ರೆಂಡ್‌ ಯಾಕೆ ನೀತಿನಿಯಮಗಳನ್ನ ಕೊಟ್ಟಿದ್ದಾನೆ?” ಅಂತ ಕೇಳಿ. ಇದು ಚಿಕ್ಕ ಪ್ರಶ್ನೆ ಅನಿಸಬಹುದು, ಆದ್ರೆ ನೀವಿದನ್ನ ಕೇಳಿದ ಮೇಲೆ “ಯೆಹೋವ ದೇವರು ನನ್ನ ಪ್ರೀತಿಸೋದ್ರಿಂದ, ನನಗೆ ಒಳ್ಳೆದಾಗಲಿ ಅಂತಾನೇ ಈ ನೀತಿನಿಯಮಗಳನ್ನ ಕೊಟ್ಟಿದ್ದಾನೆ” ಅಂತ ಅರ್ಥ ಮಾಡ್ಕೊಳ್ತಾರೆ.—ಯೆಶಾ. 48:17, 18.

11. ಬೈಬಲ್‌ ಹೇಳೋ ತರ ನಡ್ಕೊಂಡ್ರೆ ಪ್ರಯೋಜನ ಇದೆ ಅಂತ ನಿಮ್ಮ ಮಕ್ಕಳಿಗೆ ಹೇಗೆ ಅರ್ಥ ಮಾಡಿಸಬಹುದು? (ಜ್ಞಾನೋಕ್ತಿ 2:10, 11)

11 ಬೈಬಲ್‌ ಹೇಳೋ ತರ ನಡ್ಕೊಳ್ಳೋದ್ರಿಂದ ಪ್ರಯೋಜನ ಇದೆ ಅಂತ ಅರ್ಥ ಮಾಡಿಸಿ. ನಿಮ್ಮ ಮಕ್ಕಳ ಜೊತೆ ಬೈಬಲ್‌ ಓದುವಾಗ, ದಿನವಚನ ಚರ್ಚೆ ಮಾಡುವಾಗ ಇದನ್ನ ಮಾಡಬಹುದು. ಆಗೆಲ್ಲಾ ಬೈಬಲ್‌ ಹೇಳಿದ ತರ ನಡ್ಕೊಂಡಿದ್ರಿಂದ ಏನೆಲ್ಲ ಪ್ರಯೋಜನ ಆಯ್ತು ಅಂತ ನಿಮ್ಮ ಅನುಭವ ಹೇಳಿ. ಉದಾಹರಣೆಗೆ, ಕಷ್ಟಪಟ್ಟು ಕೆಲ್ಸ ಮಾಡಿದ್ರಿಂದ, ಯಾವಾಗ್ಲೂ ಸತ್ಯಾನೇ ಹೇಳಿದ್ರಿಂದ ಹೇಗೆ ಪ್ರಯೋಜನ ಆಯ್ತು ಅಂತ ಹೇಳಿ. (ಇಬ್ರಿ. 13:18) ಅಷ್ಟೇ ಅಲ್ಲ ನೀವು ಖುಷಿಖುಷಿಯಾಗಿ, ಆರೋಗ್ಯದಿಂದ ಇರೋಕೆ ಬೈಬಲ್‌ ಹೇಗೆ ಸಹಾಯ ಮಾಡ್ತು ಅಂತಾನೂ ಹೇಳಿ. (ಜ್ಞಾನೋ. 14:29, 30) ಇದನ್ನೆಲ್ಲ ಕೇಳಿಸ್ಕೊಂಡಾಗ ‘ಬೈಬಲಿಂದ ಪ್ರಯೋಜನ ಇದೆ, ನಾನೂ ಹಾಗೇ ನಡ್ಕೊತ್ತೀನಿ’ ಅಂತ ಮಕ್ಕಳು ನಿರ್ಧಾರ ಮಾಡ್ತಾರೆ.ಜ್ಞಾನೋಕ್ತಿ 2:10, 11 ಓದಿ.

12. ಬೈಬಲಲ್ಲಿರೋ ನೀತಿನಿಯಮನ ಪಾಲಿಸೋದ್ರಿಂದ ಪ್ರಯೋಜನ ಆಗುತ್ತೆ ಅಂತ ಈತನ್‌ಗೆ ಅವನ ಅಪ್ಪಅಮ್ಮ ಹೇಗೆ ಅರ್ಥ ಮಾಡಿಸ್ತಾರೆ?

12 ಸ್ಟೀವ್‌ ಅನ್ನೋ ಸಹೋದರನಿಗೆ ಈತನ್‌ ಅನ್ನೋ 16 ವರ್ಷದ ಮಗ ಇದ್ದಾನೆ. ಯೆಹೋವ ನಮ್ಮನ್ನ ಪ್ರೀತಿಸೋದ್ರಿಂದಾನೇ ನೀತಿನಿಯಮ ಕೊಟ್ಟಿದ್ದಾನೆ ಅಂತ ಅವರು ಅವನಿಗೆ ಅರ್ಥ ಮಾಡಿಸ್ತಾರೆ. “ಬೈಬಲಲ್ಲಿ ಇರೋದೇ ಶ್ರೇಷ್ಠವಾದ ವಿವೇಕ, ಅಂಥ ವಿವೇಕ ಈ ಪ್ರಪಂಚದಲ್ಲಿ ಎಲ್ಲಿ ಹುಡುಕಿದ್ರೂ ಸಿಗಲ್ಲ ಅಂತ ಈತನ್‌ ಅರ್ಥ ಮಾಡ್ಕೊಬೇಕು ಅನ್ನೋದೇ ನಮ್ಮಾಸೆ. ಅದಕ್ಕೆ ನಾವು ಅವನ ಹತ್ರ ಆಗಾಗ ‘ಈ ನಿಯಮನ ಯೆಹೋವ ಯಾಕೆ ಕೊಟ್ಟಿದ್ದಾನೆ? ಇದ್ರಿಂದ ಯೆಹೋವ ನಮ್ಮನ್ನ ಪ್ರೀತಿಸ್ತಾನೆ ಅಂತ ಹೇಗೆ ಗೊತ್ತಾಗುತ್ತೆ? ಈ ನಿಯಮನ ಪಾಲಿಸ್ಲಿಲ್ಲ ಅಂದ್ರೆ ಏನೆಲ್ಲ ಆಗಬಹುದು?’ ಅನ್ನೋ ಪ್ರಶ್ನೆ ಕೇಳ್ತೀವಿ” ಅಂತ ಸ್ಟೀವ್‌ ಹೇಳ್ತಾರೆ. ಅಪ್ಪಅಮ್ಮ ಯಾವಾಗ್ಲೂ ಈ ತರ ಮಾತಾಡೋದ್ರಿಂದ ಈತನ್‌ಗೆ ಯೆಹೋವ ಕೊಟ್ಟಿರೋ ಎಲ್ಲ ನೀತಿನಿಯಮಗಳು ಒಳ್ಳೆದಕ್ಕೆ, ಅದು ಸರಿಯಾಗಿದೆ ಅಂತ ಅರ್ಥ ಆಗಿದೆ.

13. ಬೈಬಲಲ್ಲಿರೋ ನೀತಿನಿಯಮನ ಪಾಲಿಸೋಕೆ ಅಪ್ಪಅಮ್ಮ ಹೇಗೆ ಸಹಾಯ ಮಾಡಬಹುದು? ಉದಾಹರಣೆ ಕೊಡಿ.

13 ಬೈಬಲಿನ ನೀತಿನಿಯಮಗಳನ್ನ ಪಾಲಿಸೋಕೆ ಸಹಾಯ ಮಾಡಿ. ಇದನ್ನ ಮಾಡೋಕೆ ನಿಮಗೆ ತುಂಬಾ ಅವಕಾಶಗಳು ಸಿಗುತ್ತೆ. ಉದಾಹರಣೆಗೆ, ನಿಮ್ಮ ಮಕ್ಕಳನ್ನ ಸ್ಕೂಲಲ್ಲಿ ಫ್ರೆಂಡ್ಸ್‌ ಫಿಲಂ ನೋಡೋಕೆ ಅಥವಾ ವಿಡಿಯೋ ಗೇಮ್‌ ಆಡೋಕೆ ಕರೀಬಹುದು. ಅದ್ರಲ್ಲಿ ಅನೈತಿಕತೆ, ಹಿಂಸೆ ತುಂಬಿರಬಹುದು. ಅಷ್ಟೇ ಅಲ್ಲ ‘ಅದ್ರಲ್ಲಿರೋ ಸೆಲೆಬ್ರೆಟಿಗಳನ್ನ ಫಾಲೋ ಮಾಡೋದ್ರಲ್ಲಿ ಏನೂ ತಪ್ಪಿಲ್ಲ’ ಅಂತ ಅವರು ಹೇಳಬಹುದು. ಆಗ ನಿಮ್ಮ ಮಕ್ಕಳು ‘ಈ ತರದ ಫಿಲಂಗಳ ಬಗ್ಗೆ ವಿಡಿಯೋ ಗೇಮ್‌ಗಳ ಬಗ್ಗೆ ಯೆಹೋವನಿಗೆ ಹೇಗನಿಸುತ್ತೆ?’ ಅಂತ ಯೋಚಿಸೋಕೆ ನೀವು ಸಹಾಯ ಮಾಡಿ. (ಜ್ಞಾನೋ. 22:24, 25; 1 ಕೊರಿಂ. 15:33; ಫಿಲಿ. 4:8) ಆಗ ಅವರು ಫ್ರೆಂಡ್ಸ್‌ಗೆ ಯಾಕೆ ಬರಲ್ಲ ಅಂತ ಧೈರ್ಯವಾಗಿ ಹೇಳೋಕಾಗುತ್ತೆ.

ನಂಬಿರೋದನ್ನ ಧೈರ್ಯವಾಗಿ ಹೇಳೋಕೆ ಕಲಿಸಿ

14. ಮಕ್ಕಳು ಯಾವಾಗ ಭಯಪಡಬಹುದು? ಉದಾಹರಣೆ ಕೊಡಿ.

14 ಮಕ್ಕಳು ಜಿಂಕೆ ಮರಿಗಳ ತರ ಕೆಲವೊಮ್ಮೆ ತುಂಬ ಭಯ ಪಡ್ತಾರೆ. ಅವರು ನಂಬಿರೋ ವಿಷ್ಯಗಳನ್ನ ಎಲ್ರ ಮುಂದೆ ಹೇಳಬೇಕು ಅಂದಾಗ ಬೆವತು ನೀರಾಗ್ತಾರೆ. ಉದಾಹರಣೆಗೆ, ಕ್ಲಾಸ್‌ ರೂಮಲ್ಲಿ ಟೀಚರ್‌ ವಿಕಾಸವಾದದ ಬಗ್ಗೆ ಪಾಠ ಮಾಡ್ತಿದ್ದಾರೆ ಅಂದ್ಕೊಳಿ. ಅವರು ‘ವಿಕಾಸವಾದನೇ ಸರಿ ಅದಕ್ಕೆ ಬೇಕಾದಷ್ಟು ಸಾಕ್ಷಿಗಳಿವೆ, ನೀವೇನು ಹೇಳ್ತೀರಾ?’ ಅಂತ ಕೇಳಬಹುದು. ಇಂಥ ಟೈಮಲ್ಲಿ ನಿಮ್ಮ ಮಕ್ಕಳು ಧೈರ್ಯವಾಗಿ ಮಾತಾಡೋಕೆ ಹೇಗೆ ಸಹಾಯ ಮಾಡಬಹುದು?

15. ಮಕ್ಕಳು ತಮ್ಮ ನಂಬಿಕೆನ ಹೇಗೆ ಗಟ್ಟಿ ಮಾಡ್ಕೊಳ್ಳಬಹುದು?

15 ನಂಬಿಕೆ ಗಟ್ಟಿ ಮಾಡ್ಕೊಳೋಕೆ ಸಹಾಯ ಮಾಡಿ. ಎಲ್ಲಾನೂ ದೇವರೇ ಸೃಷ್ಟಿಮಾಡಿದ್ದು ಅಂತ ಹೇಳೋಕೆ ನಿಮ್ಮ ಮಕ್ಕಳು ಒಂಚೂರೂ ನಾಚಿಕೆ ಪಡಬೇಕಾಗಿಲ್ಲ. (2 ತಿಮೊ. 1:8) ಯಾಕಂದ್ರೆ ಇವತ್ತು ಎಷ್ಟೋ ವಿಜ್ಞಾನಿಗಳು ದೇವರು ಇದ್ದಾನೆ ಅಂತ ನಂಬ್ತಾರೆ. ಜೀವಿಗಳ ಅದ್ಭುತ ರಚನೆ ನೋಡಿ ಇದನ್ನೆಲ್ಲಾ ಬುದ್ಧಿವಂತ ವ್ಯಕ್ತಿ ಮಾಡಿದ್ದಾನೆ ಅಂತ ಒಪ್ಕೊಳ್ತಾರೆ. ಅದಕ್ಕೆ ಸ್ಕೂಲ್‌ಗಳಲ್ಲಿ ವಿಕಾಸವಾದ ಎಷ್ಟೇ ಹೆಸರುವಾಸಿ ಆಗಿದ್ರೂ ಅದನ್ನ ವಿಜ್ಞಾನಿಗಳು ಒಪ್ಪಲ್ಲ. ಸೃಷ್ಟಿಕರ್ತ ಇದ್ದಾನೆ ಅಂತ ನಂಬೋಕೆ ಈ ತರ ಎಷ್ಟೋ ಕಾರಣಗಳಿವೆ. ಅದನ್ನ ತಿಳ್ಕೊಳ್ಳೋಕೆನಿಮ್ಮ ಮಕ್ಕಳು ಸಭೆಲಿರೋ ಸಹೋದರ ಸಹೋದರಿಯರ ಹತ್ರ ಹೋಗಿ ‘ದೇವರೇ ಎಲ್ಲನೂ ಸೃಷ್ಟಿಮಾಡಿದ್ದು ಅಂತ ನೀವ್ಯಾಕೆ ನಂಬ್ತೀರಾ?’ ಅಂತ ಕೇಳಬಹುದು. c

16. ದೇವರೇ ಎಲ್ಲಾನೂ ಸೃಷ್ಟಿ ಮಾಡಿದ್ದು ಅಂತ ನಿಮ್ಮ ಮಕ್ಕಳು ಬೇರೆಯವ್ರಿಗೆ ಅರ್ಥಮಾಡಿಸೋಕೆ ನೀವು ಹೇಗೆ ಸಹಾಯ ಮಾಡಬಹುದು? (1 ಪೇತ್ರ 3:15) (ಚಿತ್ರ ನೋಡಿ.)

16 ದೇವರೇ ಎಲ್ಲಾನೂ ಸೃಷ್ಟಿ ಮಾಡಿದ್ದು ಅಂತ ಬೇರೆಯವ್ರಿಗೆ ಹೇಳೋಕೆ ತರಬೇತಿ ಕೊಡಿ. (1 ಪೇತ್ರ 3:15 ಓದಿ.) ಇದನ್ನ ಮಾಡೋಕೆ ನಿಮಗೆ ಒಂದು ಸಹಾಯ ಇದೆ. jw.orgನಲ್ಲಿ “ಯುವಜನರ ಪ್ರಶ್ನೆಗಳು—ವಿಕಾಸವೇ? ವಿನ್ಯಾಸವೇ?” ಅನ್ನೋ ಎಷ್ಟೋ ಸರಣಿ ಲೇಖನಗಳಿವೆ. ಅದನ್ನ ಬಳಸಿ ನಿಮ್ಮ ಮಕ್ಕಳಿಗೆ ಕಲಿಸಬಹುದು. ಈ ಲೇಖನಗಳಲ್ಲಿರೋ ಯಾವ ತರ್ಕ ಅಥವಾ ಕಾರಣಗಳನ್ನ ಕೊಟ್ರೆ ಅವ್ರ ಕ್ಲಾಸ್‌ಮೇಟ್ಸ್‌ ಅರ್ಥ ಮಾಡ್ಕೊಳ್ತಾರೆ ಅಂತ ಅನ್ಸುತ್ತೋ ಅದನ್ನ ಅವ್ರಿಗೆ ಹೇಳ್ಕೊಡಿ. ಆದ್ರೆ ಯಾವ್‌ ಕಾರಣಕ್ಕೂ ವಾದ ಮಾಡದೆ, ಯಾರಿಗೆ ಕೇಳೋಕೆ ಇಷ್ಟ ಇದ್ಯೋ ಅವ್ರ ಹತ್ರ ಸರಳವಾದ ಕಾರಣಗಳನ್ನ ಕೊಟ್ಟು ಮಾತಾಡೋಕೆ ಹೇಳಿ. ಉದಾಹರಣೆಗೆ, ಸ್ಕೂಲಲ್ಲಿ ಯಾರಾದ್ರೂ ನಿಮ್ಮ ಮಕ್ಕಳ ಹತ್ರ “ನಾನೇನ್‌ ನೋಡ್ತೀನೋ ಅದನ್ನೇ ನಂಬ್ತೀನಿ, ನಾನ್‌ ಇವತ್ತಿನ ತನಕ ದೇವರನ್ನ ನೋಡಿಲ್ಲ, ಅದಕ್ಕೆ ನಂಬಲ್ಲ” ಅಂತ ಹೇಳ್ತಾರೆ ಅಂದ್ಕೊಳಿ. ಆಗ ನಿಮ್ಮ ಮಕ್ಕಳು ಅವ್ರಿಗೆ, “ನೀನೊಂದು ಕಾಡಲ್ಲಿ ಹೋಗುವಾಗ ಒಂದು ಮನೆ ಕಾಣಿಸುತ್ತೆ. ಆ ಮನೆ ತನ್ನಿಂದ ತಾನೇ ಬಂತಾ ಅಥವಾ ಯಾರಾದ್ರೂ ಅದನ್ನ ಕಟ್ಟಿದ್ರಾ?” ಅಂತ ಕೇಳಬಹುದು. ಆಮೇಲೆ “ಒಂದು ಮನೆನೇ ಯಾರಾದ್ರೂ ಕಟ್ಟಬೇಕು ಅಂದ್ಮೇಲೆ ಇಡೀ ಭೂಮಿನ, ಅದ್ರಲ್ಲಿರೋ ಜೀವಿಗಳನ್ನ ಖಂಡಿತ ಯಾರೋ ಸೃಷ್ಟಿ ಮಾಡಿರ್ತಾರೆ ಅಲ್ವಾ?” ಅಂತ ಅರ್ಥಮಾಡಿಸಬಹುದು.

ಕ್ಲಾಸ್‌ಮೇಟ್ಸ್‌ ಹತ್ರ ಚಿಕ್ಕಚಿಕ್ಕ ಕಾರಣಗಳನ್ನ ಕೊಟ್ಟು ಸಿಂಪಲಾಗಿ ಮಾತಾಡಿ (ಪ್ಯಾರ 16-17 ನೋಡಿ) d


17. ಮಕ್ಕಳು ಸ್ಕೂಲಲ್ಲಿ ಬೈಬಲ್‌ ಬಗ್ಗೆ ಮಾತಾಡೋಕೆ ಅಪ್ಪಅಮ್ಮ ಹೇಗೆ ತರಬೇತಿ ಕೊಡಬಹುದು? ಉದಾಹರಣೆ ಕೊಡಿ.

17 ಬೈಬಲ್‌ ಬಗ್ಗೆ ಬೇರೆಯವ್ರ ಹತ್ರ ಮಾತಾಡೋಕೆ ಪ್ರೋತ್ಸಾಹ ಕೊಡಿ. (ರೋಮ. 10:10) ಮೊದಮೊದಲು ಸಂಗೀತ ನುಡಿಸೋರು ಚಿಕ್ಕ ಹಾಡಿಂದ ಶುರು ಮಾಡ್ತಾರೆ. ಆದ್ರೆ ಹೋಗ್ತಾ ಹೋಗ್ತಾ ತುಂಬ ಚೆನ್ನಾಗಿ ನುಡಿಸೋದನ್ನ ಕಲಿತುಬಿಡ್ತಾರೆ. ಅದೇ ತರನೇ ಮೊದಮೊದಲು ನಿಮ್ಮ ಮಕ್ಕಳು ಬೇರೆಯವ್ರ ಹತ್ರ ಚಿಕ್ಕ ಚಿಕ್ಕ ಬೈಬಲ್‌ ವಿಷ್ಯಗಳನ್ನ ಹೇಳಿದ್ರೂ ಸಾಕು. ಉದಾಹರಣೆಗೆ, ಅವರು ಸ್ಕೂಲಲ್ಲಿ ಬೇರೆಯವ್ರ ಹತ್ರ “ನಿಂಗೊತ್ತಾ, ಇಂಜಿನೀಯರ್ಸ್‌ ಪ್ರಾಣಿ ಪಕ್ಷಿಗಳನ್ನ ನೋಡಿನೇ ಎಷ್ಟೊಂದು ಡಿಸೈನ್‌ನ ಕಾಪಿ ಮಾಡಿದ್ದಾರೆ?” ಅಂತ ಹೇಳಿ, ವಿಕಾಸವೇ? ವಿನ್ಯಾಸವೇ? ಅನ್ನೋ ಸರಣಿಯಿಂದ ಒಂದು ವಿಡಿಯೋ ತೋರಿಸಬಹುದು. ಆಮೇಲೆ “ಸೃಷ್ಟಿಯಲ್ಲಿರೋ ಡಿಸೈನ್‌ ನೋಡಿ ಕಾಪಿ ಮಾಡಿರೋ ಇಂಜಿನಿಯರ್‌ಗೇ ಇಷ್ಟು ಗೌರವ ಕೊಡಬೇಕಾದ್ರೆ ಒರಿಜಿನಲಾಗಿ ಇದನ್ನೆಲ್ಲ ಸೃಷ್ಟಿ ಮಾಡಿರೋ ದೇವ್ರಿಗೆ ಇನ್ನೆಷ್ಟು ಗೌರವ ಕೊಡಬೇಕಲ್ವಾ?” ಅಂತ ಸಿಂಪಲಾಗಿ ಒಂದು ಪ್ರಶ್ನೆ ಕೇಳಬಹುದು. ಆಗ ಅವ್ರ ಕ್ಲಾಸ್‌ಮೇಟ್ಸ್‌ ಇದ್ರ ಬಗ್ಗೆ ಚೆನ್ನಾಗಿ ಯೋಚನೆ ಮಾಡ್ತಾರೆ. ಇದ್ರ ಬಗ್ಗೆ ಇನ್ನೂ ಜಾಸ್ತಿ ಕಲಿಬೇಕು ಅನ್ನೋ ಆಸೆ ಮೂಡುತ್ತೆ.

ಸಹಾಯ ಮಾಡ್ತಾನೇ ಇರಿ

18. ದೇವರ ಮೇಲೆ ಮಕ್ಕಳಿಗಿರೋ ನಂಬಿಕೆನ ಜಾಸ್ತಿ ಮಾಡೋಕೆ ಅಪ್ಪಅಮ್ಮ ಏನು ಮಾಡ್ತಾ ಇರಬೇಕು?

18 ಯೆಹೋವನ ಮೇಲೆ ನಂಬಿಕೆನೇ ಇಲ್ಲದಿರೋ ಜನ್ರ ಮಧ್ಯೆ ನಿಮ್ಮ ಮಕ್ಕಳು ಬೆಳೀತಿದ್ದಾರೆ ಅಂತ ಮರೀಬೇಡಿ. (2 ಪೇತ್ರ 3:3) ಅದಕ್ಕೆ ನೀವು ನಿಮ್ಮ ಮಕ್ಕಳಿಗೆ ಯೆಹೋವನ ಮೇಲೆ, ಬೈಬಲ್‌ ಮೇಲೆ, ಅದ್ರಲ್ಲಿರೋ ನೀತಿನಿಯಮಗಳ ಮೇಲೆ ಗೌರವ ಹೆಚ್ಚಾಗೋ ತರ ಮಾತಾಡಬೇಕು. ಇದನ್ನ ಮಾಡೋಕೆ ನೀವು ಸೃಷ್ಟಿನ ತೋರ್ಸಿ, ಅದ್ರಲ್ಲಿರೋ ಅದ್ಭುತಗಳ ಬಗ್ಗೆ ಮಾತಾಡಿ. ಬೈಬಲ್‌ ಭವಿಷ್ಯವಾಣಿಗಳು ಹೇಗೆ ನಿಜ ಆಗ್ತಿದೆ ಅಂತ ವಿವರಿಸಿ. ಮುಖ್ಯವಾಗಿ ನಿಮ್ಮ ಮಕ್ಕಳ ಜೊತೆಲಿ, ಅವ್ರಿಗಾಗಿ ಪ್ರಾರ್ಥನೆ ಮಾಡಿ. ಮಕ್ಕಳಿಗೆ ಯೆಹೋವನ ಮೇಲೆ ನಂಬಿಕೆ ಬೆಳೆಸೋಕೆ ನೀವಿಷ್ಟು ಪ್ರಯತ್ನ ಮಾಡಿ, ಪ್ರತಿಫಲ ಯೆಹೋವ ಕೊಡ್ತಾನೆ ನೋಡಿ!—2 ಪೂರ್ವ. 15:7.

ಗೀತೆ 28 ಯೆಹೋವನ ಸ್ನೇಹವನ್ನು ಗಳಿಸೋಣ

a ಇದ್ರ ಬಗ್ಗೆ ಹೆಚ್ಚನ್ನ ತಿಳಿಯೋಕೆ jw.org ವೆಬ್‌ಸೈಟಲ್ಲಿರೋ ದಿ ವಂಡರ್ಸ್‌ ಆಫ್‌ ಕ್ರಿಯೇಷನ್‌ ರಿವೀಲ್ಸ್‌ ಗಾಡ್ಸ್‌ ಗ್ಲೋರಿ—ಪ್ಯಾಟರ್ನ್ಸ್‌ ಅನ್ನೋ ವಿಡಿಯೋ ನೋಡಿ.

b ಎಂದೆಂದೂ ಖುಷಿಯಾಗಿ ಬಾಳೋಣ! ಪುಸ್ತಕದಲ್ಲಿ ನಿಮ್ಮ ಮಕ್ಕಳಿಗೆ ಈಗಾಗ್ಲೇ ಬೈಬಲ್‌ ಅಧ್ಯಯನ ಮುಗಿದಿದ್ರೆ ಭಾಗ 3 ಮತ್ತು 4ರಲ್ಲಿರೋ ಕೆಲವು ಪಾಠಗಳನ್ನ ಮತ್ತೆ ಅವ್ರ ಜೊತೆ ಅಧ್ಯಯನ ಮಾಡಬಹುದು. ಇದ್ರಲ್ಲಿ ಬೈಬಲಿನ ನೀತಿನಿಯಮಗಳ ಬಗ್ಗೆ ಇದೆ.

c ಅಕ್ಟೋಬರ್‌–ಡಿಸೆಂಬರ್‌ 2006ರ ಎಚ್ಚರ! ಪತ್ರಿಕೆಯಲ್ಲಿರೋ “ಸೃಷ್ಟಿಕರ್ತನು ಇದ್ದಾನೆಂದು ನಂಬಲು ನಮಗಿರುವ ಕಾರಣಗಳು” ಅನ್ನೋ ಲೇಖನ ಮತ್ತು ಜೀವದ ಆರಂಭ—ಐದು ಪ್ರಾಮುಖ್ಯ ಪ್ರಶ್ನೆಗಳಿಗೆ ಉತ್ತರ ಅನ್ನೋ ಕಿರುಹೊತ್ತಗೆ ನೋಡಿ. ಹೆಚ್ಚಿನ ಉದಾಹರಣೆಗಳಿಗೋಸ್ಕರ jw.org ವೆಬ್‌ಸೈಟಲ್ಲಿರೋ ಜೀವದ ಉಗಮದ ಬಗ್ಗೆ ಅಭಿಪ್ರಾಯಗಳು ಅನ್ನೋ ವಿಡಿಯೋ ಸರಣಿ ನೋಡಿ.

d ಚಿತ್ರ ವಿವರಣೆ : ಡ್ರೋನ್‌ನ ಇಷ್ಟ ಪಡೋ ಕ್ಲಾಸ್‌ಮೇಟ್‌ಗೆ ಒಬ್ಬ ಯೆಹೋವನ ಸಾಕ್ಷಿ ಹುಡುಗ ವಿಕಾಸವೇ? ವಿನ್ಯಾಸವೇ? ಸರಣಿಯಿಂದ ಒಂದು ವಿಡಿಯೋ ತೋರಿಸ್ತಿದ್ದಾನೆ.