ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 52

ಕಷ್ಟ ಸಹಿಸಿಕೊಳ್ಳೋಕೆ ಬೇರೆಯವರಿಗೆ ಸಹಾಯ ಮಾಡಿ

ಕಷ್ಟ ಸಹಿಸಿಕೊಳ್ಳೋಕೆ ಬೇರೆಯವರಿಗೆ ಸಹಾಯ ಮಾಡಿ

“ನಿನ್ನ ಕೈಯಿಂದ ಒಳ್ಳೇದು ಮಾಡೋಕೆ ಆದ್ರೆ ಖಂಡಿತ ಮಾಡು, ಅಗತ್ಯ ಇರುವವ್ರಿಗೆ ಒಳ್ಳೇದು ಮಾಡದೇ ಇರಬೇಡ.”— ಜ್ಞಾನೋ. 3:27.

ಗೀತೆ 123 ಕುರಿಪಾಲರು—ಮನುಷ್ಯರಲ್ಲಿ ದಾನಗಳು

ಕಿರುನೋಟ a

1. ತನ್ನ ಸೇವಕರ ಪ್ರಾರ್ಥನೆಗೆ ಯೆಹೋವ ಕೆಲವೊಮ್ಮೆ ಹೇಗೆ ಉತ್ತರ ಕೊಡ್ತಾನೆ?

 “ಸಹಾಯ ಮಾಡಪ್ಪಾ” ಅಂತ ಯಾರಾದ್ರೂ ಯೆಹೋವನಿಗೆ ಬೇಡಿಕೊಳ್ತಿರುವಾಗ ಆತನು ನಿಮ್ಮನ್ನ ಅವರ ಹತ್ರ ಕಳಿಸಬಹುದು. ನೀವು ಒಬ್ಬ ಹಿರಿಯರಾಗಿರಲಿ, ಸಹಾಯಕ ಸೇವಕರಾಗಿರಲಿ, ಪಯನೀಯರಾಗಿರಲಿ ಅಥವಾ ಪ್ರಚಾರಕರಾಗಿರಲಿ, ಸಹೋದರ ಆಗಿರಲಿ ಅಥವಾ ಸಹೋದರಿ ಆಗಿರಲಿ, ವೃದ್ಧರಾಗಿರಲಿ ಅಥವಾ ಯುವಕರಾಗಿರಲಿ ಯೆಹೋವ ನಿಮ್ಮ ಮೂಲಕ ಅವರಿಗೆ ಸಹಾಯ ಮಾಡ್ತಾನೆ, ‘ಸಂತೈಸ್ತಾನೆ.’ (ಕೊಲೊ. 4:11, ಪಾದಟಿಪ್ಪಣಿ) ಈ ತರ ಯೆಹೋವನ ಜೊತೆಗೆ ಇದ್ದುಕೊಂಡು ಕಷ್ಟದಲ್ಲಿ ಇರೋರಿಗೆ ಸಹಾಯ ಮಾಡೋದು ಎಷ್ಟು ದೊಡ್ಡ ಸುಯೋಗ ಅಲ್ವಾ! ಅಂಟುರೋಗ ಹರಡ್ತಿರುವಾಗ, ನೈಸರ್ಗಿಕ ವಿಪತ್ತುಗಳಾದಾಗ ಅಥವಾ ಹಿಂಸೆ-ವಿರೋಧ ಬಂದಾಗಲೂ ನಾವು ಬೇರೆಯವರಿಗೆ ಸಹಾಯ ಮಾಡಬಹುದು.

ಅಂಟುರೋಗ ಹರಡ್ತಿರುವಾಗ ಬೇರೆಯವರಿಗೆ ಸಹಾಯ ಮಾಡಿ

2. ಅಂಟುರೋಗ ಹರಡ್ತಿರೋ ಸಮಯದಲ್ಲಿ ಬೇರೆಯವರಿಗೆ ಸಹಾಯ ಮಾಡೋಕೆ ನಮಗೆ ಯಾಕೆ ಕಷ್ಟ ಆಗಬಹುದು?

2 ಅಂಟುರೋಗ ಹರಡ್ತಿರೋ ಸಮಯದಲ್ಲಿ ಬೇರೆಯವರಿಗೆ ಸಹಾಯ ಮಾಡೋಕೆ ಕೆಲವೊಮ್ಮೆ ನಮಗೆ ಕಷ್ಟ ಆಗಬಹುದು. ಉದಾಹರಣೆಗೆ, ನಮ್ಮ ಸಹೋದರರಿಗೆ ಹುಷಾರಿಲ್ಲದೆ ಇದ್ದಾಗ ಅವರ ಹತ್ರ ಹೋಗಿ ಅವರಿಗೆ ಸಹಾಯ ಮಾಡೋಕೆ ಆಗದೆ ಇರಬಹುದು. ಹಣಕಾಸಿನ ತೊಂದ್ರೆ ಇರೋರನ್ನ ಅಥವಾ ಊಟಕ್ಕೆ ಕಷ್ಟಪಡ್ತಿರೋ ನಮ್ಮ ಸಹೋದರರನ್ನ ಮನೆಗೆ ಕರಿಬೇಕು ಅಂತ ಅನಿಸಿದ್ರೂ ಅವರನ್ನ ಕರಿಯೋಕೆ ಆಗದೇ ಇರಬಹುದು. ಇನ್ನೂ ಕೆಲವೊಮ್ಮೆ ನಮ್ಮ ಕುಟುಂಬದವರಿಗೇ ಕಾಯಿಲೆ ಬಂದುಬಿಟ್ರೆ, ಬೇರೆಯವರಿಗೆ ಸಹಾಯ ಮಾಡಬೇಕು ಅನ್ನೋ ಮನಸ್ಸಿದ್ರೂ ಮಾಡಕ್ಕಾಗಲ್ಲ. ಆದ್ರೂ ಇಂಥ ಸಂದರ್ಭಗಳಲ್ಲಿ ನಾವು ಬೇರೆಯವರಿಗೆ ಸಹಾಯ ಮಾಡೋಕೆ ಪ್ರಯತ್ನ ಮಾಡಿದ್ರೆ ಯೆಹೋವ ತುಂಬಾ ಖುಷಿಪಡ್ತಾನೆ. (ಜ್ಞಾನೋ. 3:27; 19:17) ಹಾಗಾದ್ರೆ ನಾವು ಬೇರೆಯವರಿಗೆ ಹೇಗೆಲ್ಲಾ ಸಹಾಯ ಮಾಡಬಹುದು?

3. ಡೈಸಿಯ ಸಭೆಯಲ್ಲಿದ್ದ ಹಿರಿಯರಿಂದ ನಾವೇನು ಕಲಿಬಹುದು? (ಯೆರೆಮೀಯ 23:4)

3 ಹಿರಿಯರು ಏನು ಮಾಡಬಹುದು? ನೀವು ನಿಮ್ಮ ಕುರಿಗಳ ಬಗ್ಗೆ ಚೆನ್ನಾಗಿ ತಿಳ್ಕೊಂಡಿರಿ. (ಯೆರೆಮೀಯ 23:4 ಓದಿ.) ಹಿಂದಿನ ಲೇಖನದಲ್ಲಿ ನಾವು ಡೈಸಿ ಅನ್ನೋ ಸಹೋದರಿಯ ಬಗ್ಗೆ ನೋಡಿದ್ವಿ. ಅವರು ಹೀಗೆ ಹೇಳ್ತಾರೆ: “ನಮ್ಮ ಕ್ಷೇತ್ರ ಸೇವಾ ಗುಂಪಿನಲ್ಲಿದ್ದ ಹಿರಿಯರು ನಮ್ಮೆಲ್ಲರ ಜೊತೆನೂ ಸೇವೆ ಮಾಡ್ತಿದ್ರು. ಸೇವೆ ಮತ್ತು ಕೂಟಗಳಲ್ಲಿ ಅಷ್ಟೇ ಅಲ್ಲ ಬೇರೆ ಟೈಮಲ್ಲೂ ಅವರು ನಮ್ಮ ಜೊತೆ ಮಾತಾಡ್ತಿದ್ರು, ಸಮಯ ಕಳಿತಾ ಇದ್ರು.” b ಹಿರಿಯರು ಈ ರೀತಿ ಮಾಡಿದ್ರಿಂದ ಅವರು ಸಹೋದರಿ ಡೈಸಿಗೆ ಕೊರೊನಾ ಸಮಯದಲ್ಲಿ ಸಹಾಯ ಮಾಡೋಕಾಯ್ತು. ಸಹೋದರಿಯ ಕುಟುಂಬದಲ್ಲಿ ಕೆಲವರು ಕೊರೊನಾದಿಂದ ತೀರಿಕೊಂಡಾಗ ಅವರಿಗೆ ಬೇಕಾದ ಸಮಾಧಾನ, ಸಾಂತ್ವನ ಕೊಡೋಕಾಯ್ತು.

4. (ಎ) ಡೈಸಿಗೆ ಸಹಾಯ ಮಾಡೋಕೆ ಹಿರಿಯರಿಗೆ ಯಾಕೆ ಸುಲಭ ಆಯ್ತು? (ಬಿ) ಇದ್ರಿಂದ ನಮಗೇನು ಪಾಠ?

4 “ಹಿರಿಯರು ಸ್ನೇಹಿತರ ತರ ಇದ್ದಿದ್ರಿಂದ ನನ್ನ ಮನಸ್ಸಲ್ಲಿ ಇದ್ದಿದ್ದನ್ನೆಲ್ಲ ಅವರ ಹತ್ರ ಹೇಳಿಕೊಳ್ತಿದ್ದೆ, ಸಂಕೋಚ ಪಟ್ಟುಕೊಳ್ತಿರಲಿಲ್ಲ” ಅಂತ ಡೈಸಿ ಹೇಳ್ತಾರೆ. ಈ ಹಿರಿಯರಿಂದ ನಾವೇನು ಕಲಿಬಹುದು? ಹಿರಿಯರೇ, ಕಷ್ಟದ ಸನ್ನಿವೇಶಗಳು ಬರೋ ಮುಂಚೆನೇ ನಿಮ್ಮ ಸಭೆಯಲ್ಲಿರೋ ಸಹೋದರ ಸಹೋದರಿಯರ ಬಗ್ಗೆ ಚೆನ್ನಾಗಿ ತಿಳ್ಕೊಂಡಿರಿ. ಅವರಿಗೆ ಒಳ್ಳೇ ಸ್ನೇಹಿತರಾಗಿರಿ. ಈ ತರ ಅಂಟುರೋಗ ಹರಡೋ ಸಮಯದಲ್ಲಿ ನೀವು ಹೋಗಿ ಅವರನ್ನ ನೋಡಕ್ಕಾಗದೆ ಇರಬಹುದು. ಆದ್ರೆ ಫೋನ್‌ ಮಾಡಿ ಅಥವಾ ವಿಡಿಯೋ ಕಾಲ್‌ ಮಾಡಿ ಅವರ ಹತ್ರ ಮಾತಾಡ್ತಾ ಇರಿ. “ಅವತ್ತು ನಮ್ಮ ಸಭೆಯ ಹಿರಿಯರೆಲ್ಲ ನನಗೆ ಫೋನ್‌ ಮಾಡಿದ್ರು, ಮೆಸೇಜ್‌ನಲ್ಲಿ ಕೆಲವು ವಚನಗಳನ್ನ ಕಳಿಸಿದ್ರು. ಆ ವಚನಗಳನ್ನ ನಾನು ಈ ಮುಂಚೆ ಓದಿದ್ರೂ ಆ ಸಮಯದಲ್ಲಿ ನನಗೆ ಧೈರ್ಯ ಕೊಡ್ತು” ಅಂತ ಡೈಸಿ ಹೇಳ್ತಾರೆ.

5. ಸಹೋದರ ಸಹೋದರಿಯರಿಗೆ ಏನು ಬೇಕು ಅಂತ ತಿಳುಕೊಳ್ಳೋಕೆ ಹಿರಿಯರು ಏನು ಮಾಡಬೇಕು ಮತ್ತು ಅವರು ಹೇಗೆ ಸಹಾಯ ಮಾಡಬಹುದು?

5 ನಿಮ್ಮ ಸಹೋದರ ಸಹೋದರಿಯರಿಗೆ ಏನು ಬೇಕು ಅಂತ ಅವರ ಹತ್ರ ಕೇಳಿ ತಿಳುಕೊಳ್ಳಿ. ಹಾಗಂತ ಅವರಿಗೆ ಮುಜುಗರ ಆಗೋ ತರ ಪ್ರಶ್ನೆಗಳನ್ನ ಕೇಳಬೇಡಿ. (ಜ್ಞಾನೋ. 20:5) ಅವರಿಗೆ ತಿನ್ನೋಕೆ ಊಟ ಇದ್ಯಾ, ಔಷಧಿ ಇದ್ಯಾ, ಇನ್ನೇನಾದ್ರೂ ತಂದು ಕೊಡಬೇಕಾ ಅಂತ ಯೋಚನೆ ಮಾಡಿ. ಅವರು ಕೆಲಸ ಕಳ್ಕೊಂಡಿದ್ದಾರಾ? ಮನೆ ಬಾಡಿಗೆ ಕಟ್ಟೋಕೆ ಅವರ ಹತ್ರ ಕಾಸಿದ್ಯಾ ಅಥವಾ ಸರ್ಕಾರದವರು ಕೊಡೋ ಸವಲತ್ತುಗಳನ್ನ ಪಡ್ಕೊಳ್ಳೋಕೆ ಅವರಿಗೆ ಏನಾದ್ರು ಸಹಾಯ ಬೇಕಾ ಅಂತ ನೋಡಿ. ಡೈಸಿಗೂ ಅವರ ಸಭೆಯವರಿಂದ ಸಹಾಯ ಸಿಕ್ತು. ಆದ್ರೆ ಅದೆಲ್ಲದಕ್ಕಿಂತ ಹಿರಿಯರು ಅವಳಿಗೆ ಕೊಟ್ಟ ಸಾಂತ್ವನ ಆ ಕಷ್ಟಗಳನ್ನ ಸಹಿಸಿಕೊಳ್ಳೋಕೆ ಸಹಾಯ ಮಾಡ್ತು. ಅವಳು ಹೇಳಿದ್ದು, “ಹಿರಿಯರು ನನ್ನ ಜೊತೆ ನನಗೋಸ್ಕರ ಪ್ರಾರ್ಥನೆ ಮಾಡಿದ್ರು. ಅವರು ಆಗ ಏನೆಲ್ಲ ಹೇಳಿದ್ರು ಅನ್ನೋದು ನನಗೆ ಸರಿಯಾಗಿ ನೆನಪಿಲ್ಲ. ಆದ್ರೆ ಅದರಿಂದ ನನಗೆ ತುಂಬಾ ಸಮಾಧಾನ ಸಿಕ್ತು. ಇದು ಒಂದರ್ಥದಲ್ಲಿ ಯೆಹೋವನೇ ನನ್ನ ಹತ್ರ ಬಂದು ‘ನೀನು ಒಂಟಿಯಲ್ಲ, ನಾನು ನಿನ್ನ ಜೊತೆ ಇದ್ದೀನಿ’ ಅಂತ ಹೇಳಿದ ಹಾಗಿತ್ತು.”—ಯೆಶಾ. 41:10, 13.

ಒಬ್ಬ ಸಹೋದರ ಕೂಟ ನಡೆಸ್ತಿದ್ದಾನೆ. ಉತ್ತರ ಹೇಳೋಕೆ ತುಂಬ ಜನ ಕೈ ಎತ್ತಿದ್ದಾರೆ, ಹುಷಾರಿಲ್ಲದಿರೋ ಒಬ್ಬ ಸಹೋದರ ಕೂಡ ವಿಡಿಯೋ ಕಾನ್ಫರೆನ್ಸಿಂಗ್‌ನಲ್ಲಿ ಉತ್ತರ ಹೇಳೋಕೆ ಕೈ ಎತ್ತಿದ್ದಾನೆ (ಪ್ಯಾರ 6 ನೋಡಿ)

6. ಸಭೆಯಲ್ಲಿ ಎಲ್ಲರೂ ಒಬ್ಬರಿಗೊಬ್ಬರು ಹೇಗೆ ಸಹಾಯ ಮಾಡಬಹುದು? (ಚಿತ್ರ ನೋಡಿ.)

6 ನಾವೇನು ಮಾಡಬಹುದು? ಹುಷಾರಿಲ್ಲದವರಿಗೆ ಹಿರಿಯರಷ್ಟೇ ಅಲ್ಲ ನಾವೂ ಸಹಾಯ ಮಾಡಬೇಕು ಅಂತ ಯೆಹೋವ ಬಯಸ್ತಾನೆ. (ಗಲಾ. 6:10) ಹಾಗಾಗಿ ಚಿಕ್ಕಚಿಕ್ಕ ವಿಷಯಗಳಲ್ಲೂ ನಾವು ಅವರಿಗೆ ಪ್ರೀತಿ ತೋರಿಸಬೇಕು. ಉದಾಹರಣೆಗೆ, ಚಿಕ್ಕ ಮಕ್ಕಳು ಅವರಿಗೆ ಕಾರ್ಡ್‌ ಬರಿಬಹುದು ಅಥವಾ ಚಿತ್ರ ಬಿಡಿಸಿ ಕಳಿಸಬಹುದು. ಇದರಿಂದ ಅವರಿಗೆ ಖುಷಿಯಾಗುತ್ತೆ. ಒಬ್ಬ ಸಹೋದರಿಗೆ ಹುಷಾರಿಲ್ಲ ಅಂದ್ರೆ ಅವರಿಗೋಸ್ಕರ ಯಾರಾದ್ರು ದಿನಸಿಯನ್ನ ಅಥವಾ ಬೇರೆ ವಸ್ತುಗಳನ್ನ ಅಂಗಡಿಯಿಂದ ತಂದುಕೊಡಬಹುದು. ಹುಷಾರಿಲ್ಲದವರಿಗೋಸ್ಕರ ನಾವು ಅಡುಗೆ ಮಾಡಿ ಅವರ ಮನೆ ಬಾಗಿಲ ಹತ್ರ ಇಟ್ಟು ಬರಬಹುದು. ಇವರಿಗಷ್ಟೇ ಅಲ್ಲ, ಅಂಟುರೋಗ ಹರಡ್ತಿರೋ ಸಮಯದಲ್ಲಿ ಸಭೆಯಲ್ಲಿರೋ ಎಲ್ಲರಿಗೂ ಉತ್ತೇಜನ ಬೇಕಾಗಿರುತ್ತೆ. ಹಾಗಾಗಿ ನಾವು ನೇರವಾಗಿ ಕೂಟಕ್ಕೆ ಹೋಗಲಿ ಅಥವಾ ವಿಡಿಯೋ ಕಾನ್ಫರೆನ್ಸಿಂಗ್‌ ಮೂಲಕ ಹಾಜರಾಗಿರಲಿ, ಕೂಟ ಮುಗಿದ ಮೇಲೆ ಎಲ್ಲರ ಜೊತೆ ಮಾತಾಡೋಕೆ ಸಮಯ ಮಾಡಿಕೊಳ್ಳಬೇಕು. ಇಂಥ ಸಮಯದಲ್ಲಿ ಎಲ್ಲರಿಗೂ ಸಹಾಯ ಮಾಡ್ತಿರೋ ಹಿರಿಯರಿಗೂ ಕೆಲವೊಮ್ಮೆ ಉತ್ತೇಜನ ಬೇಕಿರುತ್ತೆ. ಹಾಗಾಗಿ ಕೆಲವು ಸಹೋದರ ಸಹೋದರಿಯರು ಅವರಿಗೆ ಥ್ಯಾಂಕ್ಯೂ ಕಾರ್ಡ್‌ಗಳನ್ನ ಬರೆದಿದ್ದಾರೆ. ನಾವೂ ಹೀಗೆ ‘ಒಬ್ರನ್ನೊಬ್ರು ಪ್ರೋತ್ಸಾಹಿಸ್ತಾ, ಬಲಪಡಿಸ್ತಾ ಇರೋಣ.’—1 ಥೆಸ. 5:11.

ವಿಪತ್ತುಗಳಾದಾಗ ಬೇರೆಯವರಿಗೆ ಸಹಾಯ ಮಾಡಿ

7. ವಿಪತ್ತುಗಳಾದಾಗ ಜನ ಹೇಗೆಲ್ಲಾ ಕಷ್ಟಪಡ್ತಾರೆ?

7 ವಿಪತ್ತುಗಳಾದಾಗ ಕಣ್ಣುಮುಚ್ಚಿ ತೆಗೆಯೋ ಅಷ್ಟರಲ್ಲಿ ಎಲ್ಲ ತಲೆ ಕೆಳಗಾಗಿರುತ್ತೆ. ಇದರಿಂದಾಗಿ ಎಷ್ಟೋ ಜನ ಅವರ ಮನೆ, ಆಸ್ತಿ-ಪಾಸ್ತಿಯನ್ನ ಕಳ್ಕೊಂಡಿದ್ದಾರೆ. ಇನ್ನೂ ಕೆಲವರು ಕುಟುಂಬದವರನ್ನೂ ಕಳ್ಕೊಂಡಿದ್ದಾರೆ. ನಾವು ಯೆಹೋವನನ್ನು ಆರಾಧಿಸ್ತಾ ಇರೋದ್ರಿಂದ ಈ ರೀತಿ ವಿಪತ್ತುಗಳು ನಮಗೆ ಬರಲ್ಲ ಅಂತ ಹೇಳಕ್ಕಾಗಲ್ಲ. ಹೀಗಾದಾಗ ನಮ್ಮ ಸಹೋದರ ಸಹೋದರಿಯರಿಗೆ ನಾವು ಹೇಗೆ ಸಹಾಯ ಮಾಡಬಹುದು?

8. ವಿಪತ್ತುಗಳಾಗೋ ಮುಂಚೆನೇ ಹಿರಿಯರು ಮತ್ತು ಕುಟುಂಬದ ಯಜಮಾನ ಏನು ಮಾಡಬೇಕು?

8 ಹಿರಿಯರು ಏನು ಮಾಡಬಹುದು? ಸಹೋದರ ಸಹೋದರಿಯರಿಗೆ ಮುಂಚೆನೇ ತಯಾರಾಗಿರೋಕೆ ಹೇಳಿಕೊಡಬೇಕು. ಅಷ್ಟೇ ಅಲ್ಲ, ವಿಪತ್ತುಗಳಾದಾಗ ಸುರಕ್ಷಿತವಾಗಿರೋಕೆ ಮತ್ತು ಹಿರಿಯರನ್ನ ಸಂಪರ್ಕಿಸೋಕೆ ಏನು ಮಾಡಬೇಕು ಅಂತನೂ ಹೇಳಿಕೊಡಬೇಕು. ಹಿಂದಿನ ಲೇಖನದಲ್ಲಿ ನೋಡಿದ ಸಹೋದರಿ ಮಾರ್ಗರೇಟ್‌ ಹೇಳಿದ್ದು, “ಒಂದು ಸಲ ನಮ್ಮ ಹಿರಿಯರು ಸ್ಥಳೀಯ ಅಗತ್ಯಗಳು ಭಾಗದಲ್ಲಿ ‘ಈ ಕಾಡ್ಗಿಚ್ಚು ಇಲ್ಲಿಗೆ ನಿಲ್ಲಲ್ಲ, ಮತ್ತೆ ಹತ್ತಿಕೊಳ್ಳಬಹುದು. ಹಾಗಾಗಿ ಸರ್ಕಾರ ನಿಮಗೆ ಜಾಗ ಖಾಲಿ ಮಾಡೋಕೆ ಹೇಳಿದಾಗ ತಕ್ಷಣ ಅಲ್ಲಿಂದ ಹೊರಡಿ’ ಅಂತ ಹೇಳಿದ್ರು.” ಹಿರಿಯರು ಕೊಟ್ಟ ಸಲಹೆಯಿಂದ ಅಲ್ಲಿದ್ದವರಿಗೆ ತುಂಬ ಪ್ರಯೋಜನ ಆಯ್ತು. ಯಾಕಂದ್ರೆ ಅವರು ಹೇಳಿ 5 ವಾರಗಳಾದ ಮೇಲೆ ಮತ್ತೆ ಅಲ್ಲಿ ಕಾಡ್ಗಿಚ್ಚು ಹತ್ತಿಕೊಳ್ತು. ಆದ್ರೆ ಹಿರಿಯರು ಹೇಳಿದ ಹಾಗೆ ನಡಕೊಂಡಿದ್ರಿಂದ ಅಲ್ಲಿದ್ದವರು ತಮ್ಮ ಜೀವ ಕಾಪಾಡಿಕೊಂಡ್ರು. ವಿಪತ್ತುಗಳಾದಾಗ ಮನೆಯವರೆಲ್ಲ ಏನು ಮಾಡಬೇಕು ಅಂತ ಮನೆ ಯಜಮಾನ ಕುಟುಂಬ ಆರಾಧನೆಯಲ್ಲಿ ಮಾತಾಡಬೇಕು. ಹೀಗೆ ನೀವು ಮತ್ತು ನಿಮ್ಮ ಮಕ್ಕಳು ಮುಂಚೆನೇ ತಯಾರಾಗಿದ್ರೆ ಅಂಥ ಪರಿಸ್ಥಿತಿ ಬಂದಾಗ ಗಾಬರಿಯಾಗದೆ, ಧೈರ್ಯವಾಗಿ ಇರ್ತಿರ.

9. ವಿಪತ್ತು ಬರೋ ಮುಂಚೆ ಮತ್ತು ಆಮೇಲೆ ಹಿರಿಯರು ಸಭೆಯವರಿಗೋಸ್ಕರ ಏನೆಲ್ಲ ಕೆಲಸ ಮಾಡ್ತಾರೆ?

9 ನೀವು ಸೇವಾ ಗುಂಪಿನ ಮೇಲ್ವಿಚಾರಕರಾಗಿದ್ರೆ ನಿಮ್ಮ ಗುಂಪಿನಲ್ಲಿರೋ ಎಲ್ಲ ಸಹೋದರ ಸಹೋದರಿಯರ ಸಂಪರ್ಕ ಮಾಹಿತಿಯನ್ನ ಇಟ್ಟುಕೊಳ್ಳಿ. ಯಾರಾದ್ರು ಫೋನ್‌ ನಂಬರ್‌ ಅಥವಾ ವಿಳಾಸ ಬದಲಾಯಿಸಿದ್ರೆ ಅದನ್ನ ಅವರ ಹತ್ರ ಕೇಳಿ ಪಡ್ಕೊಳ್ಳಿ. ಹೀಗೆ ಮಾಡಿದ್ರೆ ವಿಪತ್ತುಗಳಾದಾಗ ತಕ್ಷಣ ಯಾರಿಗೆ ಏನು ಸಹಾಯ ಬೇಕು ಅಂತ ತಿಳುಕೊಳ್ಳೋಕೆ ಆಗುತ್ತೆ. ಆಮೇಲೆ ಸಹೋದರ ಸಹೋದರಿಯರ ಪರಿಸ್ಥಿತಿ ಬಗ್ಗೆ ಹಿರಿಯರ ಮಂಡಲಿಯ ಸಂಯೋಜಕನಿಗೆ ತಿಳಿಸಿ. ಆಗ ಅವರು ಸರ್ಕಿಟ್‌ ಮೇಲ್ವಿಚಾರಕರಿಗೆ ತಿಳಿಸ್ತಾರೆ. ಹೀಗೆ ಎಲ್ಲರೂ ಸೇರಿ ಕೆಲಸ ಮಾಡುವಾಗ ಸಹೋದರ ಸಹೋದರಿಯರಿಗೆ ಬೇಕಾದ ಸಹಾಯ ಮಾಡೋಕೆ ಆಗುತ್ತೆ. ಸಹೋದರಿ ಮಾರ್ಗರೇಟ್‌ ಇದ್ದ ಜಾಗದಲ್ಲಿ ಕಾಡ್ಗಿಚ್ಚು ಹತ್ತಿಕೊಂಡಾಗ ಅವರ ಸರ್ಕಿಟ್‌ ಮೇಲ್ವಿಚಾರಕರು 36 ಗಂಟೆಗಳ ತನಕ ನಿದ್ದೆನೇ ಮಾಡದೆ ಹಿರಿಯರ ಜೊತೆ ಸೇರಿ ಕೆಲಸ ಮಾಡ್ತಿದ್ರು. ಇದರಿಂದ ಅಲ್ಲಿದ್ದ ಸುಮಾರು 450 ಸಹೋದರ ಸಹೋದರಿಯರು ಸುರಕ್ಷಿತವಾದ ಜಾಗಕ್ಕೆ ಹೋಗೋಕೆ ಏರ್ಪಾಡುಗಳನ್ನ ಮಾಡಿದ್ರು.—2 ಕೊರಿಂ. 11:27.

10. ಹಿರಿಯರು ಬೈಬಲಿಂದ ಸಾಂತ್ವನದ ಮಾತುಗಳನ್ನ ಹೇಳೋದು ಮುಖ್ಯ ಅಂತ ಯಾಕೆ ನೆನಸ್ತಾರೆ? (ಯೋಹಾನ 21:15)

10 ವಿಪತ್ತುಗಳಾದಾಗ ನಮ್ಮ ಸಹೋದರ ಸಹೋದರಿಯರಿಗೆ ಊಟ, ಬಟ್ಟೆ ಮತ್ತು ಇರೋಕೆ ಮನೆ ಇದ್ಯಾ ಅನ್ನೋದನ್ನ ಹಿರಿಯರು ಮೊದಲು ನೋಡ್ತಾರೆ. (1 ಪೇತ್ರ 5:2) ಇದಷ್ಟೇ ಅಲ್ಲ, ಸಹೋದರ ಸಹೋದರಿಯರಿಗೆ ಧೈರ್ಯ ತುಂಬುತ್ತಾರೆ ಮತ್ತು ಬೈಬಲಿಂದ ಸಾಂತ್ವನದ ಮಾತುಗಳನ್ನ ಹೇಳ್ತಾರೆ. ಇದನ್ನ ವಿಪತ್ತುಗಳಾದಾಗ ಮಾತ್ರ ಅಲ್ಲ, ಅದು ಆಗಿ ತುಂಬ ದಿವಸಗಳ ತನಕ ಮಾಡಬೇಕಾಗುತ್ತೆ. (ಯೋಹಾನ 21:15 ಓದಿ.) “ಯಾಕಂದ್ರೆ ಇದ್ರಿಂದ ಚೇತರಿಸಿಕೊಳ್ಳೋಕೆ ತುಂಬಾ ಸಮಯ ಹಿಡಿಯುತ್ತೆ” ಅಂತ ಬ್ರಾಂಚ್‌ ಕಮಿಟಿಯಲ್ಲಿ ಸೇವೆ ಮಾಡ್ತಿರೋ ಸಹೋದರ ಹೆರಾಲ್ಡ್‌ ಹೇಳ್ತಾರೆ. ಅವರು ವಿಪತ್ತುಗಳಿಂದ ಕಷ್ಟ ಅನುಭವಿಸಿರೋ ಎಷ್ಟೋ ಸಹೋದರ ಸಹೋದರಿಯರಿಗೆ ಸಹಾಯ ಮಾಡಿದ್ದಾರೆ. “ಅಂಥ ಸಹೋದರ ಸಹೋದರಿಯರು ತಮ್ಮ ಜೀವನವನ್ನ ಮತ್ತೆ ಹೊಸದಾಗಿ ಕಟ್ಟಬೇಕಾಗುತ್ತೆ. ಅವರು ತಮ್ಮ ಸ್ವಂತದವರನ್ನ ಕಳ್ಕೊಂಡಿರೋ ನೆನಪು ಆಗಾಗ ಕಾಡ್ತಾ ಇರುತ್ತೆ. ತಮ್ಮ ಆಸ್ತಿ-ಪಾಸ್ತಿ, ಮನೆಯನ್ನೆಲ್ಲ ಕಳ್ಕೊಂಡಿರ್ತಾರೆ. ಆ ದುರ್ಘಟನೆ ಅವರ ಕಣ್ಣು ಮುಂದೆ ಆಗಾಗ ಬರ್ತಾ ಇರುತ್ತೆ. ಆದ್ರೆ ಇದರ ಅರ್ಥ ಅವರಿಗೆ ಯೆಹೋವನ ಮೇಲಿರೋ ನಂಬಿಕೆ ಕಮ್ಮಿಯಾಗಿದೆ ಅಂತ ಅಲ್ಲ, ಅವರ ಜಾಗದಲ್ಲಿ ನಾವು ಇದ್ದಿದ್ರೂ ಹಾಗೇ ಯೋಚನೆ ಮಾಡ್ತಿದ್ವಿ” ಅಂತ ಸಹೋದರ ಹೆರಾಲ್ಡ್‌ ಹೇಳ್ತಾರೆ.

11. ವಿಪತ್ತುಗಳಿಂದ ಕಷ್ಟ ಅನುಭವಿಸ್ತಾ ಇರೋ ಕುಟುಂಬಗಳಿಗೆ ಯಾವ ಸಹಾಯ ಬೇಕಾಗುತ್ತೆ?

11 “ಅಳುವವ್ರ ಜೊತೆ ಅಳಿ” ಅನ್ನೋ ಬೈಬಲ್‌ ಬುದ್ಧಿವಾದವನ್ನ ಹಿರಿಯರು ಯಾವಾಗಲೂ ಮನಸ್ಸಲ್ಲಿ ಇಟ್ಟಿರುತ್ತಾರೆ. (ರೋಮ. 12:15) ವಿಪತ್ತುಗಳಿಂದ ಕಷ್ಟ ಅನುಭವಿಸ್ತಾ ಇರೋರಿಗೆ ಯೆಹೋವ ಅವರ ಕೈ ಬಿಟ್ಟಿಲ್ಲ, ಆತನು ಅವರನ್ನ ಪ್ರೀತಿಸ್ತಾನೆ ಮತ್ತು ಸಹೋದರ ಸಹೋದರಿಯರೂ ಪ್ರೀತಿಸ್ತಾರೆ ಅಂತ ಭರವಸೆ ತುಂಬಬೇಕು. ಅಂಥ ಕುಟುಂಬಗಳಿಗೆ ಪ್ರಾರ್ಥನೆ ಮಾಡೋಕೆ, ಬೈಬಲ್‌ ಓದೋಕೆ, ಕೂಟಕ್ಕೆ ಹೋಗೋಕೆ ಮತ್ತು ಸಿಹಿಸುದ್ದಿ ಸಾರೋಕೆ ಹಿರಿಯರು ಸಹಾಯ ಮಾಡಬೇಕು. ಹೆತ್ತವರು ಏನು ಮಾಡಬೇಕು ಅಂತನೂ ಹಿರಿಯರು ಹೇಳಿಕೊಡಬೇಕು. ಅಪ್ಪಅಮ್ಮಂದಿರೇ, ನೀವು ಮಕ್ಕಳಿಗೆ ‘ನಾವೇನೇ ಕಳ್ಕೊಂಡ್ರೂ ಯೆಹೋವನ ಸ್ನೇಹನ ಕಳ್ಕೊಂಡಿಲ್ಲ, ಆತನು ನಮ್ಮ ಜೊತೆನೇ ಇದ್ದಾನೆ, ಸಹಾಯ ಮಾಡೋಕೆ ಆತನು ಯಾವಾಗಲೂ ರೆಡಿ ಇರ್ತಾನೆ’ ಅಂತ ಹೇಳಬೇಕು. ಅದರ ಜೊತೆಗೆ ‘ಸಹೋದರ ಸಹೋದರಿಯರ ದೊಡ್ಡ ಕುಟುಂಬನೇ ನಮ್ಮ ಜೊತೆ ಇದೆ. ಅವರು ನಮಗೆ ಸಹಾಯ ಮಾಡ್ತಾರೆ’ ಅಂತ ಧೈರ್ಯ ತುಂಬಬೇಕು.—1 ಪೇತ್ರ 2:17.

ವಿಪತ್ತು ಬಂದಾಗ ನೀವು ಬೇರೆಯವರಿಗೆ ಸಹಾಯ ಮಾಡ್ತೀರಾ? (ಪ್ಯಾರ 12 ನೋಡಿ) e

12. ನೈಸರ್ಗಿಕ ವಿಪತ್ತುಗಳಾದಾಗ ಬೇರೆಯವರಿಗೆ ಸಹಾಯ ಮಾಡೋಕೆ ನಾವೇನು ಮಾಡಬಹುದು? (ಚಿತ್ರ ನೋಡಿ.)

12 ನಾವೇನು ಮಾಡಬಹುದು? ವಿಪತ್ತುಗಳಾದಾಗ ಸಹೋದರ ಸಹೋದರಿಯರಿಗೆ ಸಹಾಯ ಮಾಡೋಕೆ ನೀವು ಬಯಸಿದ್ರೆ ಹಿರಿಯರ ಹತ್ರ ಮಾತಾಡಿ. ಮನೆ ಕಳ್ಕೊಂಡವರನ್ನ ಅಥವಾ ಪರಿಹಾರ ಕೆಲಸ ಮಾಡೋಕೆ ಬಂದಿರೋ ಸಹೋದರ ಸಹೋದರಿಯರನ್ನ ನಿಮ್ಮ ಮನೆಯಲ್ಲಿ ಉಳಿಸಿಕೊಳ್ಳೋಕೆ ಆಗುತ್ತಾ ಅಂತ ಯೋಚನೆ ಮಾಡಿ. ಅವರಿಗೆ ಊಟದ ವ್ಯವಸ್ಥೆನೂ ಮಾಡಬಹುದು. ಒಂದುವೇಳೆ ನಿಮ್ಮ ಮನೆಯಿಂದ ತುಂಬ ದೂರದಲ್ಲಿ ವಿಪತ್ತುಗಳಾದ್ರೂ ನೀವು ಸಹೋದರ ಸಹೋದರಿಯರಿಗೆ ಸಹಾಯ ಮಾಡಬಹುದು. ಹೇಗೆ? ಅವರಿಗೋಸ್ಕರ ನೀವು ಪ್ರಾರ್ಥನೆ ಮಾಡಬಹುದು. (2 ಕೊರಿಂ. 1:8-11) ಲೋಕವ್ಯಾಪಕ ಕೆಲಸಕ್ಕಾಗಿ ಕಾಣಿಕೆಗಳು ಅನ್ನೋ ಪೆಟ್ಟಿಗೆಯಲ್ಲಿ ಹಣ ಹಾಕಬಹುದು. (2 ಕೊರಿಂ. 8:2-5) ಆ ಹಣ ಇಂಥ ಪರಿಹಾರ ಕೆಲಸಗಳಿಗೆ ಉಪಯೋಗ ಆಗುತ್ತೆ. ಒಂದುವೇಳೆ ಸ್ವಯಂಸೇವಕರಾಗಿ ಸಹಾಯ ಮಾಡೋಕೆ ನಿಮಗೆ ಆಸೆ ಇದ್ರೆ, ಅದನ್ನ ಹಿರಿಯರ ಹತ್ರ ಹೇಳಿ. ಹಾಗೆ ಸೇವೆ ಮಾಡೋಕೆ ಅವಕಾಶ ಸಿಕ್ಕಿದ್ರೆ ನೀವು ಎಲ್ಲಿಗೆ ಹೋಗಬೇಕು ಅಂತ ಸಹೋದರರು ಹೇಳ್ತಾರೆ, ತರಬೇತಿನೂ ಕೊಡ್ತಾರೆ. ಆಗ ನೀವು ಸಹಾಯ ಮಾಡಬಹುದು.

ವಿರೋಧಗಳನ್ನ ಸಹಿಸಿಕೊಳ್ಳೋಕೆ ಸಹಾಯ ಮಾಡಿ

13. ನಿಷೇಧ ಇರೋ ಜಾಗಗಳಲ್ಲಿ ನಮ್ಮ ಸಹೋದರರಿಗೆ ಯಾವೆಲ್ಲ ಕಷ್ಟಗಳಿವೆ?

13 ನಮ್ಮ ಕೆಲಸಕ್ಕೆ ನಿಷೇಧ ಇರೋ ಜಾಗಗಳಲ್ಲಿ ನಮ್ಮ ಸಹೋದರರಿಗೆ ಜೀವನ ಮಾಡೋಕೆ ಇನ್ನೂ ಕಷ್ಟ ಆಗುತ್ತೆ. ಅವರಿಗೆ ಹಣದ ಸಮಸ್ಯೆ, ಆರೋಗ್ಯದ ಸಮಸ್ಯೆ ಇರುತ್ತೆ. ಅವರ ಕುಟುಂಬದಲ್ಲೂ ಯಾರಾದ್ರೂ ತೀರಿಹೋಗಿರಬಹುದು. ಆಗ ಅವರನ್ನ ಹೋಗಿ ನೋಡ್ಕೊಂಡು ಬರೋಕೆ ಅಲ್ಲಿರೋ ಹಿರಿಯರಿಗೆ ಕಷ್ಟ ಆಗುತ್ತೆ. ಹಿಂದಿನ ಲೇಖನದಲ್ಲಿ ನೋಡಿದ ಸಹೋದರ ಆ್ಯಂಡ್ರುಗೂ ಇದೇ ತರ ಕಷ್ಟ ಆಯ್ತು. ಅವರ ಕ್ಷೇತ್ರಸೇವಾ ಗುಂಪಿನಲ್ಲಿದ್ದ ಒಬ್ಬ ಸಹೋದರಿಗೆ ಹಣದ ಸಮಸ್ಯೆ ಇತ್ತು. ಅಷ್ಟೇ ಅಲ್ಲ ಅವರಿಗೆ ಕಾರ್‌ ಆಕ್ಸಿಡೆಂಟ್‌ ಆಯ್ತು. ಇದರಿಂದ ತುಂಬಾ ಆಪರೇಶನ್‌ಗಳನ್ನ ಮಾಡಬೇಕಾಯ್ತು ಮತ್ತು ಅವರು ಕೆಲಸನೂ ಕಳ್ಕೊಂಡ್ರು. ಅಲ್ಲಿ ನಿಷೇಧ ಇದ್ದಿದರಿಂದ, ಕೊರೊನಾ ಕಾಯಿಲೆ ಹರಡ್ತಾ ಇದ್ದಿದರಿಂದ ಅಲ್ಲಿದ್ದ ಸಹೋದರರಿಗೆ ಸಹಾಯ ಮಾಡೋಕೆ ಕಷ್ಟ ಆಯ್ತು. ಆದ್ರೂ ಅವರು ತಮ್ಮಿಂದಾದಷ್ಟು ಸಹಾಯ ಮಾಡಿದ್ರು. ಯೆಹೋವ ಖಂಡಿತ ಇದನ್ನೆಲ್ಲ ನೋಡಿರ್ತಾನೆ, ಅವರನ್ನ ಮೆಚ್ಚಿಕೊಂಡಿರ್ತಾನೆ.

14. ಯೆಹೋವನ ಮೇಲೆ ನಂಬಿಕೆ ಇಡೋ ವಿಷಯದಲ್ಲಿ ಹಿರಿಯರು ಹೇಗೆ ಮಾದರಿಯಾಗಿ ಇರಬಹುದು?

14 ಹಿರಿಯರು ಏನು ಮಾಡಬಹುದು? ಆ್ಯಂಡ್ರು ಆ ಸಹೋದರಿಗೆ ತನ್ನಿಂದಾದ ಸಹಾಯ ಮಾಡಿದ್ರು ಮತ್ತು ಯೆಹೋವನಿಗೆ ಪ್ರಾರ್ಥನೆನೂ ಮಾಡಿದ್ರು. ಯೆಹೋವ ಹೇಗೆ ಉತ್ತರ ಕೊಟ್ಟನು? ಆ ಸಹೋದರಿಗೆ ಸಹಾಯ ಮಾಡೋಕೆ ಬೇರೆ ಸಹೋದರ ಸಹೋದರಿಯರಿಗೆ ಮನಸ್ಸನ್ನ ಕೊಟ್ಟನು. ಅವರು ಆ ಸಹೋದರಿಯನ್ನ ಡಾಕ್ಟರ್‌ ಹತ್ರ ಆಗಾಗ ಕರ್ಕೊಂಡು ಹೋಗ್ತಿದ್ರು. ಇನ್ನೂ ಕೆಲವರು ಅವರಿಗೆ ದುಡ್ಡು ಕೊಟ್ಟು ಸಹಾಯ ಮಾಡಿದ್ರು. ಅವರು ಮಾಡಿದ ಈ ಪ್ರಯತ್ನಗಳನ್ನೆಲ್ಲ ಯೆಹೋವ ಆಶೀರ್ವದಿಸಿದನು. (ಇಬ್ರಿ. 13:16) ಹಾಗಾಗಿ ಹಿರಿಯರೇ, ಪರಿಸ್ಥಿತಿ ನಿಮ್ಮ ಕೈ ಕಟ್ಟಿ ಹಾಕಿರೋದ್ರಿಂದ ಸಹಾಯ ಮಾಡೋಕೆ ಆಗದೆ ಇದ್ರೆ, ಬೇರೆಯವರಿಗೆ ಆ ಅವಕಾಶ ಕೊಡಿ. (ಯೆರೆ. 36:5, 6) ಎಲ್ಲಕ್ಕಿಂತ ಮುಖ್ಯವಾಗಿ ಯೆಹೋವನ ಮೇಲೆ ನಂಬಿಕೆ ಇಡಿ. ತನ್ನ ಜನರಿಗೆ ಏನು ಬೇಕು ಅಂತ ಆತನಿಗೆ ಚೆನ್ನಾಗಿ ಗೊತ್ತಿರೋದ್ರಿಂದ ಅದನ್ನ ಅವರಿಗೆ ಕೊಟ್ಟೇ ಕೊಡ್ತಾನೆ.

15. ನಿಷೇಧ ಇರೋ ಜಾಗದಲ್ಲಿ ಇದ್ರೂ ಒಗ್ಗಟ್ಟಾಗಿ ಇರೋಕೆ ಏನು ಮಾಡಬೇಕು?

15 ನಾವೇನು ಮಾಡಬಹುದು? ನಿಷೇಧ ಇರೋ ಕಡೆ ಸಹೋದರ ಸಹೋದರಿಯರು ನಮ್ಮ ತರ ಕೂಟಕ್ಕೆ ಸೇರಿಬರಕ್ಕಾಗಲ್ಲ. ಚಿಕ್ಕ-ಚಿಕ್ಕ ಗುಂಪುಗಳಾಗಿ ಸೇರಿ ಬರ್ತಾರೆ. ಅವರೆಲ್ಲರೂ ಒಗ್ಗಟ್ಟಾಗಿ ಇರೋಕೆ, ಸ್ನೇಹ-ಸಂಬಂಧ ಚೆನ್ನಾಗಿ ಇಟ್ಟುಕೊಳ್ಳೋಕೆ ಪ್ರಯತ್ನ ಮಾಡಬೇಕು. ಮನಸ್ಸು ನೋಯಿಸೋ ತರ ಯಾರಾದ್ರೂ ಮಾತಾಡಿದ್ರೆ ಅದನ್ನ ಅಲ್ಲಿಗೇ ಬಿಟ್ಟುಬಿಡಬೇಕು ಅಥವಾ ಅವ್ರ ಹತ್ರ ಹೋಗಿ ಮಾತಾಡಿ ಸರಿ ಮಾಡಿಕೊಳ್ಳಬೇಕು. ನಮ್ಮ ವಿರೋಧಿ ಸೈತಾನ, ನಮ್ಮ ಸಹೋದರ-ಸಹೋದರಿಯರಲ್ಲ ಅನ್ನೋದನ್ನ ಮನಸ್ಸಲ್ಲಿಡಬೇಕು. (ಜ್ಞಾನೋ. 19:11; ಎಫೆ. 4:26) ಯಾರಿಗಾದ್ರೂ ಸಹಾಯ ಬೇಕಿದ್ದಾಗ ಮುಂದೆ ಹೋಗಿ ಅದನ್ನ ಮಾಡಬೇಕು. (ತೀತ 3:14) ಸಹೋದರ ಆ್ಯಂಡ್ರು ಅವರ ಸೇವಾ ಗುಂಪಿನಲ್ಲಿದ್ದ ಸಹೋದರ-ಸಹೋದರಿಯರೆಲ್ಲ ಸೇರಿ ಆ ಸಹೋದರಿಗೆ ಸಹಾಯ ಮಾಡಿದ್ರಿಂದ ಅವ್ರಲ್ಲಿ ಒಗ್ಗಟ್ಟು ಬೆಳಿತು, ಪ್ರೀತಿ ಬೆಳಿತು. ಅವರೆಲ್ಲ ಒಂದೇ ಕುಟುಂಬದ ತರ ಆದ್ರು. ನಾವೂ ಹಾಗೇ ಇರಬೇಕು.—ಕೀರ್ತ. 133:1

16. ಹಿಂಸೆ ಅನುಭವಿಸ್ತಿರೋ ಸಹೋದರ ಸಹೋದರಿಯರಿಗೆ ನಾವು ಹೇಗೆ ಸಹಾಯ ಮಾಡಬಹುದು? (ಕೊಲೊಸ್ಸೆ 4:3, 18)

16 ಸಾವಿರಾರು ಸಹೋದರ-ಸಹೋದರಿಯರು ನಿಷೇಧ ಅಥವಾ ನಿರ್ಬಂಧ ಇದ್ರೂ ಯೆಹೋವನನ್ನು ಆರಾಧಿಸ್ತಿದ್ದಾರೆ. ಕೆಲವು ಸಹೋದರ-ಸಹೋದರಿಯರನ್ನ ಜೈಲಿಗೆ ಹಾಕಿದ್ದಾರೆ. ಅಂಥವರಿಗೋಸ್ಕರ ಮತ್ತು ಅವರ ಮನೆಯವರಿಗೋಸ್ಕರ ನಾವು ಪ್ರಾರ್ಥನೆ ಮಾಡಬೇಕು. ಅಷ್ಟೇ ಅಲ್ಲ, ಅಪಾಯ ಆಗುತ್ತೆ ಅಂತ ಗೊತ್ತಿದ್ರೂ ಅವರಿಗೆ ಸಹಾಯ ಮಾಡ್ತಿರೋ ಮತ್ತು ಅವರ ಪರವಾಗಿ ಕೋರ್ಟಲ್ಲಿ ಹೋರಾಡ್ತಿರೋ ನಮ್ಮ ಸಹೋದರ-ಸಹೋದರಿಯರಿಗೋಸ್ಕರನೂ ಪ್ರಾರ್ಥನೆ ಮಾಡಬೇಕು. c (ಕೊಲೊಸ್ಸೆ 4:3, 18 ಓದಿ.) ಈ ತರ ಪ್ರಾರ್ಥನೆ ಮಾಡಿದಾಗ ಅವರಿಗೆ ಸಹಾಯ ಆಗುತ್ತೆ.—2 ಥೆಸ. 3:1, 2; 1 ತಿಮೊ. 2:1, 2.

ಹಿಂಸೆ ಬರೋ ಮುಂಚೆನೇ ನೀವು, ನಿಮ್ಮ ಕುಟುಂಬದವರು ಹೇಗೆ ತಯಾರಾಗಬಹುದು? (ಪ್ಯಾರ 17 ನೋಡಿ)

17. ವಿರೋಧ ಬರೋ ಮುಂಚೆನೇ ಹೇಗೆ ತಯಾರಾಗಬಹುದು?

17 ಹಿಂಸೆ ಬರೋ ಮುಂಚೆನೇ ನೀವು ಮತ್ತು ನಿಮ್ಮ ಕುಟುಂಬದವರು ತಯಾರಿ ಮಾಡಿಕೊಳ್ಳಿ. (ಅ. ಕಾ. 14:22) ಅಂದ್ರೆ ಇದರ ಅರ್ಥ ಏನೆಲ್ಲ ಕೆಟ್ಟದಾಗುತ್ತೆ ಅಂತ ಯೋಚನೆ ಮಾಡಬೇಕು ಅಂತಲ್ಲ. ಬದಲಿಗೆ, ಯೆಹೋವನ ಜೊತೆ ನಿಮ್ಮ ಸ್ನೇಹವನ್ನ ಇನ್ನೂ ಗಟ್ಟಿ ಮಾಡಿಕೊಳ್ಳಬೇಕು ಮತ್ತು ನಿಮ್ಮ ಮಕ್ಕಳಿಗೂ ಇದನ್ನ ಮಾಡೋಕೆ ಸಹಾಯ ಮಾಡಬೇಕು. ಮುಂದೆ ಏನಾಗುತ್ತೋ ಅನ್ನೋ ಚಿಂತೆ ಕಾಡಿದಾಗ ಯೆಹೋವನ ಹತ್ರ ಮನಸ್ಸು ಬಿಚ್ಚಿ ಮಾತಾಡಿ. (ಕೀರ್ತ. 62:7, 8) ಯೆಹೋವನನ್ನು ಪೂರ್ತಿಯಾಗಿ ನಂಬೋಕೆ ಏನೆಲ್ಲ ಕಾರಣಗಳಿವೆ ಅಂತ ಆಗಾಗ ಕುಟುಂಬದಲ್ಲಿ ಎಲ್ರೂ ಸೇರಿ ಮಾತಾಡಿ. d ಹೀಗೆ ನೀವು ಮುಂಚೆನೇ ತಯಾರಿ ಮಾಡಿದ್ರೆ ಮತ್ತು ಯೆಹೋವನ ಮೇಲೆ ಪೂರ್ತಿ ಭರವಸೆ ಇಟ್ರೆ, ವಿಪತ್ತುಗಳು ಬಂದ್ರೂ ನಿಮ್ಮ ಮಕ್ಕಳು ಶಾಂತಿಯಿಂದ ಮತ್ತು ಧೈರ್ಯದಿಂದ ಇರ್ತಾರೆ.

18. ಮುಂದೆ ನಮ್ಮ ಜೀವನ ಹೇಗಿರುತ್ತೆ?

18 ದೇವರು ಕೊಡೋ ಶಾಂತಿಯನ್ನ ಪಡ್ಕೊಂಡ್ರೆ ನಾವು ಯಾವುದಕ್ಕೂ ಭಯಪಡಲ್ಲ, ಸಮಾಧಾನವಾಗಿ ಇರ್ತೀವಿ. (ಫಿಲಿ. 4:6, 7) ಅಂಟುರೋಗ ಹರಡ್ತಿದ್ರೂ, ವಿಪತ್ತು ಬಂದ್ರೂ ಅಥವಾ ವಿರೋಧ ಎದುರಿಸ್ತಿದ್ರೂ ಯೆಹೋವ ನಮಗೆ ಶಾಂತಿ ಕೊಡ್ತಾನೆ. ಪ್ರೀತಿಯ ಕುರುಬರಾದ ಹಿರಿಯರ ಮೂಲಕ ನಮಗೆ ಧೈರ್ಯ ತುಂಬ್ತಾನೆ. ಬೇರೆಯವರಿಗೆ ಸಹಾಯ ಮಾಡೋ ಅವಕಾಶನೂ ನಮಗೆ ಕೊಟ್ಟಿದ್ದಾನೆ. ನಾವು ಶಾಂತಿ ಸಮಾಧಾನದಿಂದ ಇದ್ರೆ ಮತ್ತು ಬೇರೆಯವರಿಗೆ ಸಹಾಯ ಮಾಡಿದ್ರೆ ಮುಂದೆ ಮಹಾ ಸಂಕಟದ ಸಮಯದಲ್ಲಿ ಕಷ್ಟಗಳು ಬಂದ್ರೂ ನಾವು ಶಾಂತಿಯಿಂದ ಇರ್ತೀವಿ. (ಮತ್ತಾ. 24:21) ಆದ್ರೆ ಅದಾದ್ಮೇಲೆ ನಮಗೆ ಯಾವ ಕಷ್ಟನೂ ಇರಲ್ಲ, ಚಿಂತೆ ಮಾಡೋ ಸನ್ನಿವೇಶನೂ ಇರಲ್ಲ. ಯೆಹೋವ ಇಷ್ಟ ಪಟ್ಟ ಹಾಗೆ ನಾವೆಲ್ಲರೂ ಯಾವಾಗಲೂ ಶಾಂತಿ-ನೆಮ್ಮದಿಯಿಂದ ಇರ್ತೀವಿ.—ಯೆಶಾ. 26:3, 4.

ಗೀತೆ 73 ಹೃದಯದಾಳದಿಂದ ಪ್ರೀತಿಸಿರಿ

a ಕಷ್ಟದಲ್ಲಿ ಇರೋರಿಗೆ ಸಹಾಯ ಮಾಡೋಕೆ ಯೆಹೋವ ದೇವರು ತನ್ನ ನಂಬಿಗಸ್ತ ಸೇವಕರನ್ನ ಕಳಿಸ್ತಾನೆ. ನಮ್ಮನ್ನೂ ಕಳಿಸಬಹುದು. ಹಾಗಾಗಿ ಸಹೋದರ ಸಹೋದರಿಯರಿಗೆ ನಾವು ಹೇಗೆಲ್ಲ ಸಹಾಯ ಮಾಡಬಹುದು ಅಂತ ನೋಡೋಣ.

b ಕೆಲವರ ಹೆಸರು ಬದಲಾಗಿದೆ.

c ಜೈಲಲ್ಲಿರೋ ಸಹೋದರ ಸಹೋದರಿಯರಿಗೆ ನೀವು ಬರಿಯೋ ಪತ್ರಗಳು ಅವರಿಗೆ ತಲಪುವ ಹಾಗೆ ಬ್ರಾಂಚ್‌ ಆಫೀಸ್‌ ಅಥವಾ ಮುಖ್ಯ ಕಾರ್ಯಾಲಯ ಮಾಡಕ್ಕಾಗಲ್ಲ.

d ಜುಲೈ 2019ರ ಕಾವಲಿನಬುರುಜುವಿನಲ್ಲಿರೋ “ಹಿಂಸೆ ಎದುರಿಸಲು ಈಗಲೇ ತಯಾರಾಗಿ” ಅನ್ನೋ ಲೇಖನ ನೋಡಿ.

e ಚಿತ್ರ ವಿವರಣೆ: ವಿಪತ್ತಿನಿಂದ ಮನೆ ಕಳ್ಕೊಂಡ ಒಂದು ಕುಟುಂಬಕ್ಕೆ ಒಬ್ಬ ದಂಪತಿ ಊಟ ತಂದುಕೊಡ್ತಿದ್ದಾರೆ.