ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 50

“ನೀನು ನನ್ನ ಜೊತೆ ಪರದೈಸಲ್ಲಿ ಇರ್ತಿಯ”

“ನೀನು ನನ್ನ ಜೊತೆ ಪರದೈಸಲ್ಲಿ ಇರ್ತಿಯ”

“ಈ ದಿನ ನಿನಗೆ ಮಾತು ಕೊಡ್ತಾ ಇದ್ದೀನಿ, ನೀನು ನನ್ನ ಜೊತೆ ಪರದೈಸಲ್ಲಿ ಇರ್ತಿಯ.”—ಲೂಕ 23:43.

ಗೀತೆ 19 ಪರದೈಸಿನ ಕುರಿತಾದ ದೇವರ ವಾಗ್ದಾನ

ಕಿರುನೋಟ a

1. ಯೇಸು ಸಾಯೋ ಮುಂಚೆ ತನ್ನ ಪಕ್ಕದಲ್ಲಿದ್ದ ಅಪರಾಧಿಗೆ ಏನು ಹೇಳಿದನು? (ಲೂಕ 23:39-43)

 ಯೇಸು ಮತ್ತು ಆತನ ಪಕ್ಕದಲ್ಲಿದ್ದ ಇಬ್ಬರು ಅಪರಾಧಿಗಳು ಹಿಂಸಾ ಕಂಬದಲ್ಲಿ ಇನ್ನೇನು ಸಾಯೋ ಪರಿಸ್ಥಿತಿಯಲ್ಲಿದ್ರು. (ಲೂಕ 23:32, 33) ಆ ಅಪರಾಧಿಗಳು ಯೇಸುಗೆ ಅವಮಾನ ಮಾಡಿದ್ರು. ಹಾಗಾಗಿ ಅವರು ಯೇಸುವಿನ ಶಿಷ್ಯರಾಗಿರಲಿಲ್ಲ ಅಂತ ಇದ್ರಿಂದ ಗೊತ್ತಾಗುತ್ತೆ. (ಮತ್ತಾ. 27:44; ಮಾರ್ಕ 15:32) ಆದ್ರೆ ಆಮೇಲೆ ಅವರಲ್ಲಿ ಒಬ್ಬ ಅಪರಾಧಿ ಮನಸ್ಸು ಬದಲಾಯಿಸಿಕೊಂಡ. ಅವನು ಯೇಸುಗೆ “ನೀನು ರಾಜನಾದಾಗ ನನ್ನನ್ನ ನೆನಪು ಮಾಡ್ಕೊ” ಅಂದ. ಆಗ ಯೇಸು ಅವನಿಗೆ “ಈ ದಿನ ನಿನಗೆ ಮಾತು ಕೊಡ್ತಾ ಇದ್ದೀನಿ, ನೀನು ನನ್ನ ಜೊತೆ ಪರದೈಸಲ್ಲಿ ಇರ್ತಿಯ” ಅಂತ ಹೇಳಿದನು. (ಲೂಕ 23:39-43 ಓದಿ.) ಆ ಅಪರಾಧಿ ಸ್ವರ್ಗಕ್ಕೆ ಹೋಗ್ತಾನೆ ಅಂತ ಯೇಸು ಇಲ್ಲಿ ಹೇಳಲಿಲ್ಲ. ಅಷ್ಟೇ ಅಲ್ಲ, “ಸ್ವರ್ಗದ ಆಳ್ವಿಕೆ” ಬಗ್ಗೆ ಯೇಸು ಸಾರಿದ ಸಂದೇಶವನ್ನ ಅವನು ನಂಬಿದ ಅಂತನೂ ಬೈಬಲ್‌ನಲ್ಲಿ ಇಲ್ಲ. (ಮತ್ತಾ. 4:17) ಹಾಗಾಗಿ ಯೇಸು ಆ ಅಪರಾಧಿ ಹತ್ರ ಭೂಮಿ ಮೇಲೆ ಬರೋ ಪರದೈಸ್‌ ಬಗ್ಗೆ ಮಾತಾಡ್ತಿದ್ದ ಅಂತ ಗೊತ್ತಾಗುತ್ತೆ. ನಾವು ಆ ತರ ಹೇಳೋಕೆ ಬೇರೆ ಯಾವ ಆಧಾರಗಳಿವೆ?

ಯೇಸು ಜೊತೆ ಮಾತಾಡಿದ ಅಪರಾಧಿಗೆ ಏನೆಲ್ಲ ಗೊತ್ತಿತ್ತು? ಇದ್ರಿಂದ ಅವನ ಬಗ್ಗೆ ನಮಗೇನು ಗೊತ್ತಾಗುತ್ತೆ? (ಪ್ಯಾರ 2-3 ನೋಡಿ)

2. ಪಶ್ಚಾತ್ತಾಪಪಟ್ಟ ಅಪರಾಧಿ ಒಬ್ಬ ಯೆಹೂದಿ ಅಂತ ಹೇಳೋಕೆ ಯಾವ ಆಧಾರಗಳಿವೆ?

2 ಪಶ್ಚಾತ್ತಾಪಪಟ್ಟ ಆ ಅಪರಾಧಿ ಒಬ್ಬ ಯೆಹೂದಿ ಅಂತ ನಾವು ಹೇಳಬಹುದು. ಯಾಕಂದ್ರೆ ಅವನು ಇನ್ನೊಬ್ಬ ಅಪರಾಧಿಗೆ “ನಿನಗೆ ಸ್ವಲ್ಪನೂ ದೇವರ ಮೇಲೆ ಭಯ ಇಲ್ವಾ? ನಿನಗೆ ಸಿಕ್ಕಿರೋದೂ ಅದೇ ಶಿಕ್ಷೆ ತಾನೆ?” ಅಂತ ಕೇಳಿದ. (ಲೂಕ 23:40) ಆಗಿನ ಕಾಲದಲ್ಲಿ ಯೆಹೂದ್ಯರು ಒಂದೇ ದೇವರನ್ನ ಆರಾಧಿಸ್ತಿದ್ರು. ಆದ್ರೆ ಬೇರೆ ಜನ್ರು ತುಂಬ ದೇವರುಗಳನ್ನ ಆರಾಧಿಸ್ತಿದ್ರು. (ವಿಮೋ. 20:2, 3; 1 ಕೊರಿಂ. 8:5, 6) ಒಂದುವೇಳೆ ಆ ಅಪರಾಧಿ ಯೆಹೂದ್ಯನಲ್ಲದೆ ಇದ್ದಿದ್ರೆ “ನಿನಗೆ ಸ್ವಲ್ಪನೂ ದೇವರುಗಳ ಮೇಲೆ ಭಯ ಇಲ್ವಾ” ಅಂತ ಕೇಳಿರುತ್ತಿದ್ದ. ಅಷ್ಟೇ ಅಲ್ಲ, ಯೆಹೋವ ದೇವರು ಯೇಸುನ ಬೇರೆ ಜನರ ಹತ್ರ ಅಲ್ಲ, ‘ದಾರಿ ತಪ್ಪಿದ ಕುರಿಗಳ ಹಾಗೆ ಇರೋ ಇಸ್ರಾಯೇಲ್ಯರ ಹತ್ರ ಮಾತ್ರ’ ಕಳಿಸಿದ್ದನು. (ಮತ್ತಾ. 15:24) ಸತ್ತವರಿಗೆ ಮತ್ತೆ ಜೀವ ಕೊಡೋದ್ರ ಬಗ್ಗೆ ಯೆಹೋವ ಇಸ್ರಾಯೇಲ್ಯರಿಗೆ ಮುಂಚೆನೇ ಹೇಳಿದ್ದನು. ಈ ವಿಷಯ ಆ ಅಪರಾಧಿಗೂ ಗೊತ್ತಿರಬೇಕು. ಅದಕ್ಕೇ ಯೆಹೋವ ತನ್ನ ಸರ್ಕಾರನ ಆಳೋಕೆ ಯೇಸುವನ್ನ ಮತ್ತೆ ಬದುಕಿಸಬಹುದು ಅಂತ ಅವನು ಅಂದ್ಕೊಂಡ. ತನ್ನನ್ನೂ ಬದುಕಿಸ್ತಾನೆ ಅಂತ ನಂಬಿದ ಅನ್ನೋದು ಅವನ ಮಾತುಗಳಿಂದ ಗೊತ್ತಾಗುತ್ತೆ.

3. ಪರದೈಸ್‌ ಅಂತ ಯೇಸು ಹೇಳಿದ ತಕ್ಷಣ ಆ ಅಪರಾಧಿಯ ಮನಸ್ಸಿಗೆ ಏನು ಬಂದಿರುತ್ತೆ ಮತ್ತು ಯಾಕೆ? (ಆದಿಕಾಂಡ 2:15)

3 ಪಶ್ಚಾತ್ತಾಪಪಟ್ಟ ಆ ಅಪರಾಧಿ, ಒಬ್ಬ ಯೆಹೂದ್ಯನಾಗಿ ಇದ್ದಿದ್ರಿಂದ ಆದಾಮ ಹವ್ವಗೆ ಯೆಹೋವ ದೇವರು ಪರದೈಸನ್ನ ಒಂದು ಮನೆಯಾಗಿ ಕೊಟ್ಟಿದ್ದು ಅವನಿಗೆ ಗೊತ್ತಿರಬೇಕು. ಹಾಗಾಗಿ ಯೇಸು ಪರದೈಸ್‌ ಅಂದ ತಕ್ಷಣ ಅವನಿಗೆ ಭೂಮಿ ಮೇಲಿರೋ ಒಂದು ಸುಂದರವಾದ ತೋಟ ಮನಸ್ಸಿಗೆ ಬಂದಿರುತ್ತೆ.—ಆದಿಕಾಂಡ 2:15 ಓದಿ.

4. ಪರದೈಸ್‌ನಲ್ಲಿ ಜೀವನ ಹೇಗಿರುತ್ತೆ ಅಂತ ಅರ್ಥಮಾಡಿಕೊಳ್ಳೋಕೆ ಏನು ಮಾಡಬೇಕು?

4 ಪರದೈಸ್‌ನಲ್ಲಿ ಜೀವನ ಹೇಗಿರುತ್ತೆ? ಅದನ್ನ ತಿಳುಕೊಳ್ಳೋಕೆ ರಾಜ ಸೊಲೊಮೋನನ ಕಾಲಕ್ಕೆ ಹೋಗೋಣ. ಅವನು ಆಳ್ತಿದ್ದಾಗ ದೇಶದಲ್ಲಿ ಶಾಂತಿ-ಸಮಾಧಾನ ಇತ್ತು. ಅವನ ಕಾಲದ ಬಗ್ಗೆ ಯೋಚನೆ ಮಾಡುವಾಗ ನಿಜವಾಗ್ಲೂ ಪರದೈಸ್‌ ಹೇಗಿರುತ್ತೆ ಅಂತ ಅರ್ಥ ಮಾಡಿಕೊಳ್ಳೋಕೆ ನಮಗೆ ಸುಲಭ ಆಗುತ್ತೆ. ಅಷ್ಟೇ ಅಲ್ಲ, ಯೇಸು ಸೊಲೊಮೋನನಿಗಿಂತ ಚೆನ್ನಾಗಿ ಆಳ್ವಿಕೆ ಮಾಡ್ತಾನೆ. ಆತನು ಮತ್ತು ಆತನ ಜೊತೆ ಇರೋ ರಾಜರು ಈ ಭೂಮಿಯನ್ನ ಆಳುವಾಗ ಪರಿಸ್ಥಿತಿ ಇನ್ನೂ ಚೆನ್ನಾಗಿರುತ್ತೆ. (ಮತ್ತಾ. 12:42) ಹಾಗಾಗಿ ‘ಬೇರೆ ಕುರಿಗಳು’ ಪರದೈಸಲ್ಲಿ ಶಾಶ್ವತ ಜೀವ ಪಡಕೊಳ್ಳೋಕೆ ಏನು ಮಾಡಬೇಕು ಅಂತ ತಿಳುಕೊಳ್ಳಬೇಕು.—ಯೋಹಾ. 10:16.

ಪರದೈಸಲ್ಲಿ ಜೀವನ

5. ಪರದೈಸ್‌ ಹೇಗಿರುತ್ತೆ ಅಂತ ನೀವು ಅಂದ್ಕೊಂಡಿದ್ದೀರಾ?

5 ಪರದೈಸ್‌ ಅಂದ ತಕ್ಷಣ ನಿಮ್ಮ ಮನಸ್ಸಿಗೆ ಏನು ಬರುತ್ತೆ? ಏದೆನ್‌ ತೋಟದ ತರ ಇದ್ದ ಒಂದು ಸುಂದರವಾದ ಉದ್ಯಾನ ನೆನಪಿಗೆ ಬರಬಹುದು. (ಆದಿ. 2:7-9) ಅಥವಾ ಮೀಕ ಭವಿಷ್ಯವಾಣಿಯಲ್ಲಿ ಹೇಳಿದ ಹಾಗೆ ದೇವ ಜನ್ರು ತಮ್ಮ “ದ್ರಾಕ್ಷಿಬಳ್ಳಿ ಕೆಳಗೆ, ಅಂಜೂರದ ಮರದ ಕೆಳಗೆ” ಕೂತ್ಕೊಳ್ತಾರೆ ಅನ್ನೋ ಮಾತು ನೆನಪಿಗೆ ಬರಬಹುದು. (ಮೀಕ 4:3, 4) ಇಲ್ಲಾಂದ್ರೆ ಆಹಾರಕ್ಕೆ ಯಾವ ಕೊರತೆನೂ ಇರಲ್ಲ ಅಂತ ಬೈಬಲಲ್ಲಿ ಹೇಳಿರೋ ಮಾತುಗಳು ನಿಮ್ಮ ಮನಸ್ಸಿಗೆ ಬರಬಹುದು. (ಕೀರ್ತ. 72:16; ಯೆಶಾ. 65:21, 22) ಈಗ ನೀವು ಪರದೈಸಲ್ಲಿ ಇದ್ದೀರ ಅಂತ ಕಲ್ಪಿಸಿಕೊಳ್ಳಿ. ನೀವು ಒಂದು ತೋಟದ ಮಧ್ಯದಲ್ಲಿ ಕೂತ್ಕೊಂಡು ಊಟ ಮಾಡ್ತಾ ಇದ್ದೀರ. ಟೇಬಲ್‌ ಮೇಲೆ ರುಚಿ ರುಚಿಯಾದ ಹಣ್ಣು ಹಂಪಲುಗಳಿವೆ. ನಿಮಗಿಷ್ಟವಾದ ಊಟ ಕೂಡ ಇದೆ. ಎಲ್ಲ ಕಡೆ ಹಸಿರಿದೆ. ಹೂವಿನ ಸುವಾಸನೆ ಬೀರುತ್ತಾ ಇದೆ. ನಿಮ್ಮ ಜೊತೆ ಸ್ನೇಹಿತರು, ಸಂಬಂಧಿಕರು ಕೂಡ ಇದ್ದಾರೆ. ಎಲ್ಲರೂ ನಗುನಗ್ತಾ ಮಾತಾಡ್ತಾ ಇದ್ದೀರ. ಸತ್ತಿರೋರು ಕೂಡ ಬದುಕಿ ಬಂದಿದ್ದಾರೆ. ನೀವು ಅವರ ಅನುಭವಗಳನ್ನ ಕೇಳ್ತಿದ್ದೀರ. ಇದೆಲ್ಲ ನಿಜವಾಗಲೂ ನಡಿಯುತ್ತೆ, ಕನಸಲ್ಲ. ಖುಷಿ ಕೊಡೋ ಇನ್ನೊಂದು ವಿಷಯ ಏನಂದ್ರೆ ಅಲ್ಲಿ ನಮಗೆ ತೃಪ್ತಿ ಕೊಡೋ ಕೆಲಸಗಳೂ ಇರುತ್ತೆ.

ಜೀವಂತವಾಗಿ ಎದ್ದು ಬಂದವರಿಗೆ ಕಲಿಸೋ ಜವಾಬ್ದಾರಿ ನಮಗಿರುತ್ತೆ (ಪ್ಯಾರ 6 ನೋಡಿ)

6. ಪರದೈಸಲ್ಲಿ ನಾವು ಏನೆಲ್ಲಾ ಮಾಡ್ತೀವಿ? (ಚಿತ್ರ ನೋಡಿ.)

6 ಕೆಲಸ ಮಾಡ್ತಾ ಖುಷಿ ಪಡೋ ತರನೇ ಯೆಹೋವ ನಮ್ಮನ್ನ ಸೃಷ್ಟಿ ಮಾಡಿದ್ದಾನೆ. (ಪ್ರಸಂ. 2:24) ಯೇಸು ಕ್ರಿಸ್ತ ಸಾವಿರ ವರ್ಷ ಆಳುವಾಗ ನಮಗೆ ಮಾಡೋಕೆ ತುಂಬಾ ಕೆಲಸಗಳಿರುತ್ತೆ. ಅಲ್ಲಿ ಮಹಾಸಂಕಟ ಪಾರಾದವರು ಮತ್ತು ಪುನಃ ಜೀವ ಪಡಕೊಂಡ ಲಕ್ಷಾಂತರ ಜನರೂ ಇರ್ತಾರೆ. ನಮ್ಮೆಲ್ಲರಿಗೂ ಊಟ, ಬಟ್ಟೆ ಮತ್ತು ಮನೆ ಬೇಕು. ಇದನ್ನೆಲ್ಲ ರೆಡಿ ಮಾಡೋಕೆ ತುಂಬಾ ಕೆಲಸಗಳಿರುತ್ತೆ. ಆದ್ರೆ ಈ ಕೆಲಸಗಳನ್ನೆಲ್ಲ ಮಾಡೋಕೆ ನಮಗೆ ಬೋರ್‌ ಆಗಲ್ಲ. ಆದಾಮ ಹವ್ವಗೆ ಏದೆನ್‌ ತೋಟದಲ್ಲಿ ವ್ಯವಸಾಯ ಮಾಡೋ ಕೆಲಸ ಇತ್ತು. ಆದ್ರೆ ನಮಗೆ ಇಡೀ ಭೂಮಿಯನ್ನೇ ತೋಟವಾಗಿ ಮಾಡೋ ಕೆಲಸ ಇರುತ್ತೆ. ಜೀವಂತವಾಗಿ ಎದ್ದು ಬಂದ ಲಕ್ಷಾಂತರ ಜನರಿಗೆ ಯೆಹೋವನ ಬಗ್ಗೆ ಮತ್ತು ಆತನ ಉದ್ದೇಶದ ಬಗ್ಗೆ ಕಲಿಸಿಕೊಡೋ ಅವಕಾಶನೂ ನಮಗೆ ಇರುತ್ತೆ. ಯೇಸು ಹುಟ್ಟೋ ಮುಂಚೆ ಇದ್ದ ನಂಬಿಗಸ್ತರು ಜೀವಂತ ಎದ್ದು ಬಂದಮೇಲೆ ಅವರಿಗೂ ಕಲಿಸಬೇಕು. ಎಷ್ಟು ಕೆಲಸ ಇದೆ ಅಲ್ವಾ!

7. ಪರದೈಸಲ್ಲಿ ನಮ್ಮ ಜೀವನ ಹೇಗೆ ಇರುತ್ತೆ ಮತ್ತು ಯಾಕೆ ನಾವು ಹಾಗೆ ಹೇಳಬಹುದು?

7 ಮುಂದೆ ಪರದೈಸಲ್ಲಿ ನಮ್ಮ ಜೀವನ ತುಂಬಾ ಚೆನ್ನಾಗಿರುತ್ತೆ. ಯಾವುದಕ್ಕೂ ಕೊರತೆ ಇರಲ್ಲ. ಎಲ್ಲ ವ್ಯವಸ್ಥಿತವಾಗಿ ಇರುತ್ತೆ. ನಾವೆಲ್ಲರೂ ನೆಮ್ಮದಿಯಾಗಿ ಇರ್ತೀವಿ ಅನ್ನೋದರಲ್ಲಿ ಯಾವ ಸಂಶಯನೂ ಇಲ್ಲ. ಯಾಕಂದ್ರೆ ತನ್ನ ಆಳ್ವಿಕೆಯಲ್ಲಿ ಪರಿಸ್ಥಿತಿ ಹೇಗಿರುತ್ತೆ ಅಂತ ಸ್ವಲ್ಪಮಟ್ಟಿಗೆ ಸೊಲೊಮೋನನ ಆಳ್ವಿಕೆಯಲ್ಲೇ ಯೆಹೋವ ತೋರಿಸಿದನು. ಹಾಗಾಗಿ ರಾಜ ಸೊಲೊಮೋನನ ಕಾಲದಲ್ಲಿ ಪರಿಸ್ಥಿತಿ ಹೇಗಿತ್ತು ಅಂತ ಈಗ ನೋಡೋಣ.

ಸೊಲೊಮೋನನ ಆಳ್ವಿಕೆಯಲ್ಲಿ ಪರಿಸ್ಥಿತಿ ಪರದೈಸ್‌ ತರ ಇತ್ತು

8. ಕೀರ್ತನೆ 37:10, 11, 29ರಲ್ಲಿ ದಾವೀದ ಹೇಳಿದ ಮಾತುಗಳು ಹೇಗೆ ನಿಜ ಆಯ್ತು? (ಈ ಸಂಚಿಕೆಯಲ್ಲಿರೋ “ವಾಚಕರಿಂದ ಪ್ರಶ್ನೆಗಳು” ನೋಡಿ.)

8 ದೇವರಿಗೆ ನಂಬಿಗಸ್ತನಾಗಿರೋ ಮತ್ತು ವಿವೇಕಿಯಾಗಿರೋ ರಾಜ ಆಳ್ವಿಕೆ ಮಾಡುವಾಗ ಪರಿಸ್ಥಿತಿ ಹೇಗಿರುತ್ತೆ ಅನ್ನೋದನ್ನ ರಾಜ ದಾವೀದ ಬರೆದ. (ಕೀರ್ತನೆ 37:10, 11, 29 ಓದಿ.) ಅದು 37ನೇ ಕೀರ್ತನೆಯಲ್ಲಿದೆ. ಸಾಮಾನ್ಯವಾಗಿ ಜನರ ಹತ್ರ ನಾವು ಪರದೈಸಿನ ಬಗ್ಗೆ ಮಾತಾಡುವಾಗ ಕೀರ್ತನೆ 37:11ನ್ನ ತೋರಿಸ್ತೀವಿ. ಬೆಟ್ಟದ ಭಾಷಣ ಕೊಡುವಾಗ ಯೇಸು ಕೂಡ ಈ ವಚನಗಳಲ್ಲಿರೋ ಮಾತುಗಳನ್ನೇ ಹೇಳಿದನು. ಹಾಗಾಗಿ ಮುಂದೆ ಇದು ಖಂಡಿತ ನಿಜ ಆಗುತ್ತೆ ಅಂತ ನಾವು ನಂಬಬಹುದು. (ಮತ್ತಾ. 5:5) ಆದ್ರೆ ಈ ಮಾತುಗಳು ಸೊಲೊಮೋನ ಆಳ್ವಿಕೆ ಮಾಡಿದಾಗಲೂ ನಿಜ ಆಯ್ತು. ಅವನ ಕಾಲದಲ್ಲಿ ಜನ್ರು ನೆಮ್ಮದಿಯಿಂದ, ಯಾವುದಕ್ಕೂ ಕೊರತೆ ಇಲ್ಲದೆ ಸಂತೋಷವಾಗಿ ಜೀವನ ಮಾಡಿದ್ರು. ಒಂದರ್ಥದಲ್ಲಿ “ಹಾಲೂ ಜೇನೂ ಹರಿಯೋ ದೇಶದಲ್ಲಿ” ಅವರು ವಾಸ ಮಾಡಿದ್ರು. ಅಷ್ಟೇ ಅಲ್ಲ “ನೀವು ಯಾವಾಗಲೂ ನನ್ನ ನಿಯಮಗಳನ್ನ, ಆಜ್ಞೆಗಳನ್ನ ಕೇಳಿ ಅದ್ರ ಪ್ರಕಾರ ನಡಿದ್ರೆ . . . ನಿಮ್ಮ ದೇಶದಲ್ಲಿ ಶಾಂತಿ ಇರೋ ತರ ಮಾಡ್ತೀನಿ. ನಿಮಗೆ ಯಾರ ಭಯನೂ ಇಲ್ಲದೆ ಸುಖವಾಗಿ ನಿದ್ದೆ ಮಾಡ್ತೀರ” ಅಂತ ದೇವರು ಹೇಳಿದನು. (ಯಾಜ. 20:24; 26:3, 6) ಸೊಲೊಮೋನನ ಕಾಲದಲ್ಲಿ ದೇವರು ಹೇಳಿದ ಈ ಮಾತುಗಳು ನಿಜ ಆಯ್ತು. (1 ಪೂರ್ವ. 22:9; 29:26-28) ದೇವರು ಹೇಳಿದ ತರ ಜನ್ರು ನಡಕೊಳ್ತಾ ಇದ್ರೆ ಹೋಗ್ತಾ-ಹೋಗ್ತಾ ಕೆಟ್ಟ ಜನ್ರೆಲ್ಲ ಇಲ್ಲದೆ ಹೋಗ್ತಿದ್ರು. (ಕೀರ್ತ. 37:10) ಕೀರ್ತನೆ 37:10, 11, 29ರಲ್ಲಿರೋ ಮಾತುಗಳು ಹಿಂದಿನ ಕಾಲದಲ್ಲೂ ನಿಜ ಆಯ್ತು, ಮುಂದೆನೂ ನಿಜ ಆಗುತ್ತೆ.

9. ರಾಜ ಸೊಲೊಮೋನನ ಆಳ್ವಿಕೆ ಬಗ್ಗೆ ಶೆಬದ ರಾಣಿ ಏನಂತ ಹೇಳಿದಳು?

9 ಸೊಲೊಮೋನನ ಆಳ್ವಿಕೆಯಲ್ಲಿ ಜನ್ರು ಎಷ್ಟು ಖುಷಿಯಾಗಿ ನೆಮ್ಮದಿಯಾಗಿ ಇದ್ರು, ಅಲ್ಲಿ ಎಷ್ಟು ಸಮೃದ್ಧಿ ಇತ್ತು ಅನ್ನೋ ಸುದ್ದಿ ಶೆಬದ ರಾಣಿ ತನಕ ತಲುಪಿತು. ಅವಳು ಅದನ್ನೆಲ್ಲ ನೋಡೋಕೆ ಅಲ್ಲಿಂದ ಯೆರೂಸಲೇಮ್‌ ತನಕ ಬಂದಳು. (1ಅರ. 10:1) ಅವಳು ಸೊಲೊಮೋನನ ರಾಜ್ಯ ನೋಡಿ, “ನಾನು ನೋಡಿದ್ದಕ್ಕೆ ಹೋಲಿಸಿದ್ರೆ ಅವರು ಹೇಳಿದ್ದು ಏನೇನೂ ಅಲ್ಲ ಅಂತ ಈಗ ಗೊತ್ತಾಯ್ತು . . . ಯಾವಾಗ್ಲೂ ನಿನ್ನ ಮುಂದೆ ನಿಂತು ನಿನ್ನ ವಿವೇಕದ ಮಾತುಗಳನ್ನ ಕೇಳಿಸ್ಕೊಂಡು ನಿನ್ನ ಜನ್ರು, ನಿನ್ನ ಸೇವಕರು ಸಂತೋಷವಾಗಿ ಇದ್ದಾರೆ!” ಅಂತ ಹೇಳಿದಳು. (1ಅರ. 10:6-8) ಸೊಲೊಮೋನನ ಆಳ್ವಿಕೆಯಲ್ಲೇ ಪರಿಸ್ಥಿತಿ ಇಷ್ಟು ಚೆನ್ನಾಗಿತ್ತು ಅಂದ್ಮೇಲೆ ಯೇಸು ಈ ಭೂಮಿಯನ್ನ ಆಳುವಾಗ ಪರಿಸ್ಥಿತಿ ಇನ್ನೂ ಚೆನ್ನಾಗಿರುತ್ತೆ.

10. ಯೇಸು ಸೊಲೊಮೋನನಿಗಿಂತ ಒಳ್ಳೇ ರಾಜನಾಗಿ ಇರ್ತಾನೆ ಅಂತ ಯಾಕೆ ಹೇಳಬಹುದು?

10 ಯೇಸು ಸೊಲೊಮೋನನಿಗಿಂತ ಒಳ್ಳೇ ರಾಜನಾಗಿ ಇರ್ತಾನೆ ಅಂತ ನಾವು ಪೂರ್ತಿಯಾಗಿ ನಂಬಬಹುದು. ಯಾಕಂದ್ರೆ ಸೊಲೊಮೋನ ಒಬ್ಬ ಅಪರಿಪೂರ್ಣ ಮನುಷ್ಯನಾಗಿದ್ದ. ಕೆಲವು ಸಲ ಅವನು ಮಾಡಿದ ದೊಡ್ಡದೊಡ್ಡ ತಪ್ಪುಗಳಿಂದ ಅವನ ಪ್ರಜೆಗಳಿಗೆ ಕಷ್ಟ ಬಂತು. ಆದ್ರೆ ಯೇಸು ಪರಿಪೂರ್ಣ ವ್ಯಕ್ತಿ ಮತ್ತು ಯಾವತ್ತೂ ತಪ್ಪು ಮಾಡಿಲ್ಲ. (ಲೂಕ 1:32; ಇಬ್ರಿ. 4:14, 15) ಸೈತಾನ ಯೇಸುನ ಪರೀಕ್ಷಿಸಿದಾಗಲೂ ಆತನು ಪಾಪ ಮಾಡಲಿಲ್ಲ. ಇದ್ರಿಂದ ಆತನು ತನ್ನ ಪ್ರಜೆಗಳಿಗೆ ಕಷ್ಟ ಬರೋ ತರ ಯಾವತ್ತೂ ನಡಕೊಳ್ಳಲ್ಲ ಅಂತ ನಮಗೆ ಗೊತ್ತಾಗುತ್ತೆ. ಆತನು ಯಾವಾಗಲೂ ನಮಗೆ ಒಬ್ಬ ಒಳ್ಳೇ ರಾಜನಾಗಿ ಇರ್ತಾನೆ.

11. ಆಳ್ವಿಕೆ ಮಾಡೋಕೆ ಯೇಸುಗೆ ಯಾರು ಸಹಾಯ ಮಾಡ್ತಾರೆ?

11 ಯೇಸು ಜೊತೆ 1,44,000 ಅಭಿಷಿಕ್ತರು ಮನುಷ್ಯರನ್ನ ಚೆನ್ನಾಗಿ ನೋಡಿಕೊಳ್ತಾರೆ ಮತ್ತು ದೇವರ ಉದ್ದೇಶ ಈ ಭೂಮಿ ಮೇಲೆ ನೆರವೇರೋಕೆ ಸಹಾಯ ಮಾಡ್ತಾರೆ. (ಪ್ರಕ. 14:1-3) ಈ 1,44,000 ಜನ್ರಲ್ಲಿ ಗಂಡಸರೂ ಹೆಂಗಸರೂ ಇದ್ದಾರೆ. ಅವರು ಈ ಭೂಮಿ ಮೇಲಿದ್ದಾಗ ಎಲ್ಲ ರೀತಿಯ ಕಷ್ಟ-ನೋವುಗಳನ್ನ ಅನುಭವಿಸಿದ್ದಾರೆ. ಹಾಗಾಗಿ ಅವರು ನಮಗೆ ಅನುಕಂಪ ಮತ್ತು ಪ್ರೀತಿ ತೋರಿಸ್ತಾರೆ ಅಂತ ನಂಬಬಹುದು. ಮುಂದೆ ಅವರು ನಮಗೋಸ್ಕರ ಬೇರೆ ಏನೆಲ್ಲ ಮಾಡ್ತಾರೆ?

ಅಭಿಷಿಕ್ತರು ಏನೆಲ್ಲಾ ಮಾಡ್ತಾರೆ?

12. ಯೆಹೋವ 1,44,000 ಜನ್ರಿಗೆ ಯಾವ ಜವಾಬ್ದಾರಿ ಕೊಡ್ತಾನೆ?

12 ಯೇಸು ಮತ್ತು ಆತನ ಜೊತೆ ಆಳೋ ರಾಜರಿಗೆ ಯೆಹೋವ ಕೊಡೋ ಕೆಲಸ ಸೊಲೊಮೋನನಿಗಿದ್ದ ಜವಾಬ್ದಾರಿಗಿಂತ ದೊಡ್ಡದಾಗಿರುತ್ತೆ. ಸೊಲೊಮೋನನಿಗೆ ಅವನ ರಾಜ್ಯದಲ್ಲಿ ಇದ್ದ ಲಕ್ಷಾಂತರ ಜನ್ರನ್ನ ನೋಡಿಕೊಳ್ಳೋ ಜವಾಬ್ದಾರಿ ಇತ್ತು. ಆದ್ರೆ 1,44,000 ರಾಜರಿಗೆ ಭೂಮಿಯಲ್ಲಿರೋ ಕೋಟಿಗಟ್ಟಲೆ ಜನ್ರನ್ನ ನೋಡಿಕೊಳ್ಳೋ ಜವಾಬ್ದಾರಿ ಇರುತ್ತೆ. ಅವರ ಈ ಕೆಲಸದ ಬಗ್ಗೆ ಯೋಚನೆ ಮಾಡಿದ್ರೆ ನಮ್ಮ ಮೈ ಜುಮ್‌ ಅನ್ನುತ್ತೆ ಅಲ್ವಾ!

13. ಯೇಸುವಿನ ಜೊತೆ ಆಳುವವರು ಯಾವ ಮುಖ್ಯವಾದ ಕೆಲಸ ಮಾಡ್ತಾರೆ?

13 ಯೇಸು ತರನೇ ಈ 1,44,000 ಅಭಿಷಿಕ್ತರು ರಾಜರಾಗಿ ಮತ್ತು ಪುರೋಹಿತರಾಗಿ ಕೆಲಸ ಮಾಡ್ತಾರೆ. (ಪ್ರಕ. 5:10) ಹಿಂದಿನ ಕಾಲದಲ್ಲಿ ಜನ್ರು ಆರೋಗ್ಯವಾಗಿ ಇರೋಕೆ, ಮತ್ತು ಯೆಹೋವನ ಜೊತೆ ಒಳ್ಳೇ ಸಂಬಂಧ ಬೆಳೆಸಿಕೊಳ್ಳೋಕೆ ಪುರೋಹಿತರು ಸಹಾಯ ಮಾಡಬೇಕು ಅಂತ ನಿಯಮ ಇತ್ತು. ಆದ್ರೆ ಆ ನಿಯಮಗಳು ‘ಮುಂದೆ ಬರೋ ಒಳ್ಳೇ ವಿಷ್ಯಗಳ ನೆರಳಾಗಿತ್ತು ಅಷ್ಟೇ.’ ಹಾಗಾಗಿ ಯೇಸು ಜೊತೆ ಆಳೋ ಆ ರಾಜರು ನಮ್ಮನ್ನ ಇನ್ನೂ ಚೆನ್ನಾಗಿ ನೋಡಿಕೊಳ್ತಾರೆ. ನಾವು ಆರೋಗ್ಯವಾಗಿ ಇರೋಕೆ ಮತ್ತು ಯೆಹೋವನ ಜೊತೆ ಒಳ್ಳೇ ಸಂಬಂಧ ಬೆಳೆಸಿಕೊಳ್ಳೋಕೆ ಸಹಾಯ ಮಾಡ್ತಾರೆ. (ಇಬ್ರಿ. 10:1) ಆದ್ರೆ ಅದನ್ನ ಹೇಗೆ ಮಾಡ್ತಾರೆ, ನಮಗೆ ಹೇಗೆ ನಿರ್ದೇಶನ ಕೊಡ್ತಾರೆ ಅನ್ನೋದು ನಮಗೆ ಗೊತ್ತಿಲ್ಲ. ನಾವು ಕಾದು ನೋಡಬೇಕಿದೆ. ಆದ್ರೆ ಒಂದು ಮಾತಂತೂ ನಿಜ, ನಮಗೆ ನಿರ್ದೇಶನ ಕೊಡೋಕೆ ಮತ್ತು ಕಲಿಸೋಕೆ ಯೆಹೋವ ಏನೆಲ್ಲಾ ಏರ್ಪಾಡು ಮಾಡ್ತಾನೋ ಅದ್ರಿಂದ ನಮಗೆ ಪೂರ್ತಿ ಪ್ರಯೋಜನ ಸಿಗುತ್ತೆ ಅನ್ನೋದ್ರಲ್ಲಿ ಸಂಶಯ ಇಲ್ಲ.—ಪ್ರಕ. 21:3, 4.

‘ಬೇರೆ ಕುರಿಗಳು’ ಪರದೈಸ್‌ಗೆ ಹೋಗೋಕೆ ಏನು ಮಾಡಬೇಕು?

14. ಕ್ರಿಸ್ತನ ಸಹೋದರರ ಮತ್ತು ‘ಬೇರೆ ಕುರಿಗಳ’ ಬಗ್ಗೆ ಬೈಬಲ್‌ ಏನು ಹೇಳಿದೆ ಮತ್ತು ಈಗ ಅದು ಹೇಗೆ ನಿಜ ಆಗ್ತಿದೆ?

14 ಯೇಸು ತನ್ನ ಜೊತೆ ಆಳೋ ಸಹೋದರರನ್ನ ‘ಚಿಕ್ಕ ಹಿಂಡು’ ಅಂತ ಕರೆದನು. (ಲೂಕ 12:32) ಎರಡನೇ ಗುಂಪನ್ನ ‘ಬೇರೆ ಕುರಿಗಳು’ ಅಂತ ಹೇಳಿದನು. ಇವರಿಬ್ಬರೂ ಸೇರಿ ಒಂದೇ ಹಿಂಡಾಗಿ ಇರ್ತಾರೆ. (ಯೋಹಾ. 10:16) ಈಗಾಗಲೇ ಅವರಿಬ್ಬರೂ ಒಟ್ಟಿಗೆ ಸೇರಿ ಕೆಲಸ ಮಾಡ್ತಿದ್ದಾರೆ. ಪರದೈಸಲ್ಲೂ ಹಾಗೇ ಇರ್ತಾರೆ. ಆಗ ‘ಚಿಕ್ಕ ಹಿಂಡಿನವರು’ ಸ್ವರ್ಗದಲ್ಲಿ ಇರ್ತಾರೆ, ‘ಬೇರೆ ಕುರಿಗಳು’ ಇದೇ ಭೂಮಿ ಮೇಲೆ ಇರ್ತಾರೆ. ಆದ್ರೆ ‘ಬೇರೆ ಕುರಿಗಳು’ ಶಾಶ್ವತವಾಗಿ ಜೀವಿಸಬೇಕಂದ್ರೆ ಈಗ ಏನು ಮಾಡಬೇಕು?

ಪರದೈಸಲ್ಲಿ ಜೀವಿಸೋಕೆ ಈಗಿಂದನೇ ತಯಾರಾಗಿ (ಪ್ಯಾರ 15 ನೋಡಿ) b

15. (ಎ) ಕ್ರಿಸ್ತನ ಸಹೋದರರಿಗೆ ‘ಬೇರೆ ಕುರಿಗಳು’ ಹೇಗೆ ಸಹಕಾರ ಕೊಡ್ತಿದ್ದಾರೆ? (ಬಿ) ಅಂಗಡಿಗೆ ಹೋಗಿರೋ ಆ ಸಹೋದರನ ತರ ನೀವೇನು ಮಾಡಬಹುದು? (ಚಿತ್ರ ನೋಡಿ.)

15 ಪಶ್ಚಾತ್ತಾಪ ಪಟ್ಟ ಆ ಅಪರಾಧಿ ಯೇಸು ಕೊಟ್ಟ ಮಾತಿಗೆ ಋಣಿಯಾಗಿದ್ದೀನಿ ಅಂತ ತೋರಿಸೋ ಮುಂಚೆನೇ ತೀರಿಹೋದ. ಹಾಗಾಗಿ ಅವನಿಗೆ ಆ ಅವಕಾಶನೇ ಸಿಗಲಿಲ್ಲ. ಆದ್ರೆ ‘ಬೇರೆ ಕುರಿಗಳಾಗಿರೋ’ ನಮಗೆ ಕೃತಜ್ಞತೆ ತೋರಿಸೋಕೆ ತುಂಬಾ ಅವಕಾಶಗಳಿವೆ. ಅದರಲ್ಲಿ ಒಂದು, ಯೇಸುವಿನ ಅಭಿಷಿಕ್ತ ಸಹೋದರರಿಗೆ ಸಹಾಯ ಮಾಡೋದು. ಇದರ ಆಧಾರದ ಮೇಲೆನೇ ನಾವು ಕುರಿಗಳಾ ಅಥವಾ ಆಡುಗಳಾ ಅಂತ ಯೇಸು ನಮ್ಮನ್ನ ತೀರ್ಪು ಮಾಡ್ತಾನೆ. (ಮತ್ತಾ. 25:31-40) ಕ್ರಿಸ್ತನ ಸಹೋದರರು ಜನ್ರಿಗೆ ಸಿಹಿಸುದ್ದಿ ಸಾರ್ತಿದ್ದಾರೆ ಮತ್ತು ಅವರನ್ನ ಶಿಷ್ಯರಾಗಿ ಮಾಡ್ತಿದ್ದಾರೆ. ಹಾಗಾದ್ರೆ ನಾವು ಅಭಿಷಿಕ್ತರಿಗೆ ಹೇಗೆಲ್ಲಾ ಸಹಾಯ ಮಾಡಬಹುದು? ಸಾರೋ ಕೆಲಸದಲ್ಲಿ ನಾವು ಅವರ ಜೊತೆ ಕೈ ಜೋಡಿಸಿದ್ರೆ ಅವರಿಗೆ ಸಹಾಯ ಮಾಡಿದ ಹಾಗಿರುತ್ತೆ. (ಮತ್ತಾ. 28:18-20) ಅದಕ್ಕೆ ಬೋಧನಾ ಸಾಧನಗಳನ್ನ ಚೆನ್ನಾಗಿ ಬಳಸೋಕೆ ನಾವು ಕಲಿಬೇಕು. ಎಂದೆಂದೂ ಖುಷಿಯಾಗಿ ಬಾಳೋಣ! ಪುಸ್ತಕದಿಂದ ಜನ್ರಿಗೆ ಕಲಿಸೋಕೆ ನಾವು ಕಲಿತುಕೊಳ್ಳಬೇಕು. ಒಂದುವೇಳೆ ನೀವಿನ್ನೂ ಯಾರಿಗೂ ಬೈಬಲ್‌ ಕಲಿಸ್ತಾ ಇಲ್ಲ ಅಂದ್ರೆ ಅದನ್ನ ಮಾಡೋ ಗುರಿ ಇಡಿ.

16. ದೇವರ ಸರ್ಕಾರದ ಪ್ರಜೆಗಳಾಗೋಕೆ ನಾವು ಈಗಿಂದನೇ ಏನು ಮಾಡಬೇಕು?

16 ನಾವು ಯೆಹೋವ ದೇವರಿಗೆ ಇಷ್ಟ ಆಗೋ ತರ ನಡಕೊಳ್ಳೋಕೆ ಪರದೈಸ್‌ ಬರೋ ತನಕ ಕಾಯಬೇಕಾಗಿಲ್ಲ. ನಮ್ಮ ಮಾತು ಮತ್ತು ನಡತೆಯಲ್ಲಿ ಈಗಲೇ ಅದನ್ನ ತೋರಿಸಬಹುದು. ಪ್ರಾಮಾಣಿಕರಾಗಿದ್ರೆ, ಸರಳ ಜೀವನ ಮಾಡಿದ್ರೆ, ಯೆಹೋವನಿಗೆ ಮತ್ತು ನಮ್ಮ ಸಂಗಾತಿಗೆ, ಸಹೋದರ ಸಹೋದರಿಯರಿಗೆ ನಿಷ್ಠೆ ತೋರಿಸಿದ್ರೆ ನಾವು ಯೆಹೋವನಿಗೆ ಇಷ್ಟ ಆಗೋ ತರ ನಡಕೊಳ್ತೀವಿ. ಈ ದುಷ್ಟ ಲೋಕದಲ್ಲೇ ನಾವು ಯೆಹೋವನ ನೀತಿ-ನಿಯಮಗಳನ್ನ ಪಾಲಿಸ್ತಾ ಇದ್ರೆ, ಮುಂದೆ ಪರದೈಸಲ್ಲಿ ಅದನ್ನ ಪಾಲಿಸೋದು ತುಂಬಾ ಸುಲಭ ಆಗುತ್ತೆ. ನಾವು ಅಲ್ಲಿರೋಕೆ ಈಗಿಂದನೇ ತಯಾರಾಗೋಣ. ಅದಕ್ಕೆ ಬೇಕಾದ ಸಾಮರ್ಥ್ಯಗಳನ್ನ ಮತ್ತು ಒಳ್ಳೇ ಗುಣಗಳನ್ನ ಬೆಳೆಸಿಕೊಳ್ಳೋಣ. ಈ ಸಂಚಿಕೆಯಲ್ಲಿ “ಭೂಮಿಯನ್ನ ಆಸ್ತಿಯಾಗಿ ಪಡ್ಕೊಳ್ಳೋಕೆ ನೀವು ರೆಡಿನಾ?” ಅನ್ನೋ ಲೇಖನ ನೋಡಿ.

17. ನಾವು ಮಾಡಿದ ಪಾಪಗಳ ಬಗ್ಗೆ ಯೋಚನೆ ಮಾಡ್ತಾ ಕೊರಗ್ತಾ ಇರಬೇಕಾ? ವಿವರಿಸಿ.

17 ನಾವು ಸತ್ಯಕ್ಕೆ ಬರೋ ಮುಂಚೆ ದೊಡ್ಡದೊಡ್ಡ ತಪ್ಪುಗಳನ್ನ ಮಾಡಿರಬಹುದು. ಆದ್ರೆ ಅದರ ಬಗ್ಗೆನೇ ಯೋಚನೆ ಮಾಡ್ತಾ ಕೊರಗ್ತಾ ಇರಬಾರದು. ಯಾಕಂದ್ರೆ ಯೇಸು ಕ್ರಿಸ್ತನ ಬಿಡುಗಡೆ ಬೆಲೆಯಿಂದಾಗಿ ನಮ್ಮ ಪಾಪಗಳಿಗೆ ಕ್ಷಮೆ ಸಿಗುತ್ತೆ. ಹಾಗಂತ ಅದನ್ನೇ ಒಂದು ನೆಪವಾಗಿ ಇಟ್ಟುಕೊಂಡು ನಾವು ಬೇಕುಬೇಕು ಅಂತ ಪಾಪ ಮಾಡಲ್ಲ. (ಇಬ್ರಿ. 10:26-31) ನಾವು ಒಂದುವೇಳೆ ದೊಡ್ಡ ತಪ್ಪು ಮಾಡಿದ್ರೆ ಅದಕ್ಕೆ ಪಶ್ಚಾತ್ತಾಪಪಟ್ಟು ಯೆಹೋವ ಕೊಡೋ ಸಹಾಯ ಪಡ್ಕೊಂಡು ಆ ತಪ್ಪನ್ನ ತಿದ್ದಿಕೊಳ್ಳಬೇಕು. ಆಗ ಯೆಹೋವ ನಮ್ಮನ್ನ ಉದಾರವಾಗಿ ಕ್ಷಮಿಸ್ತಾನೆ. (ಯೆಶಾ. 55:7; ಅ. ಕಾ. 3:19) ಅದಕ್ಕೆ ಯೇಸು “ನಾನು ನೀತಿವಂತರನ್ನಲ್ಲ, ಪಾಪಿಗಳನ್ನ ಕರಿಯೋಕೆ ಬಂದಿದ್ದೀನಿ” ಅಂತ ಫರಿಸಾಯರಿಗೆ ಹೇಳಿದನು. (ಮತ್ತಾ. 9:13) ನಾವು ಎಷ್ಟೇ ತಪ್ಪು ಮಾಡಿದ್ರೂ ಅದನ್ನ ಕ್ಷಮಿಸೋ ಶಕ್ತಿ ಯೇಸು ಕೊಟ್ಟ ಆ ಬಿಡುಗಡೆ ಬೆಲೆಗೆ ಇದೆ.

ನೀವು ಪರದೈಸಲ್ಲಿ ಶಾಶ್ವತವಾಗಿ ಜೀವಿಸಬಹುದು

18. ಯೇಸು ಜೊತೆ ಮಾತಾಡಿದ ಅಪರಾಧಿ ಹತ್ರ ನೀವೇನು ಕೇಳೋಕೆ ಇಷ್ಟಪಡ್ತೀರ?

18 ನೀವೀಗ ಪರದೈಸಲ್ಲಿ ಇದ್ದೀರ, ಯೇಸು ಜೊತೆ ಮಾತಾಡಿದ ಆ ಅಪರಾಧಿ ಜೊತೆ ಮಾತಾಡ್ತಾ ಇದ್ದೀರ ಅಂತ ಅಂದುಕೊಳ್ಳಿ. ಆಗ ನಿಮಗೆ ಹೇಗನಿಸುತ್ತೆ? ನೀವಿಬ್ಬರೂ ಯೇಸು ಕೊಟ್ಟ ಆ ಬಿಡುಗಡೆ ಬೆಲೆಗೆ ಎಷ್ಟು ಋಣಿಗಳಾಗಿದ್ದೀರ ಅಂತ ಮಾತಾಡಿಕೊಳ್ತೀರ ಅಲ್ವಾ! “ಯೇಸುವಿನ ಜೊತೆ ಕಳೆದ ಆ ಕೊನೆ ಕ್ಷಣಗಳು ಹೇಗಿತ್ತು? ‘ನೀನು ನನ್ನ ಜೊತೆ ಪರದೈಸಲ್ಲಿ ಇರ್ತಿಯ’ ಅಂತ ಯೇಸು ಹೇಳಿದಾಗ ನಿನಗೆ ಹೇಗನಿಸ್ತು?” ಅಂತ ನೀವು ಅವನನ್ನ ಕೇಳಬಹುದು ಅಥವಾ ಅವನು ನಿಮ್ಮ ಹತ್ರ “ನೀವು ಕೊನೇ ದಿನಗಳಲ್ಲಿ ಸೈತಾನನ ಲೋಕದಲ್ಲಿದ್ದಾಗ ನಿಮಗೆ ಏನೆಲ್ಲಾ ಕಷ್ಟ ಬಂತು?” ಅಂತ ಕೇಳಬಹುದು. ಇಂಥ ಎಷ್ಟೋ ವ್ಯಕ್ತಿಗಳಿಗೆ ಯೆಹೋವನ ಬಗ್ಗೆ ನಾವು ಕಲಿಸ್ತೀವಿ. ಇದು ನಮಗೆ ಸಿಗೋ ದೊಡ್ಡ ಅವಕಾಶ ಅಲ್ವಾ!—ಎಫೆ. 4:22-24.

ಒಬ್ಬ ಸಹೋದರ ಯಾವ ಕಲೆಯನ್ನ ಬೆಳೆಸಿಕೊಳ್ಳಬೇಕು ಅಂತ ಇಷ್ಟಪಟ್ಟಿದ್ದನೋ ಅದನ್ನ ಸಾವಿರ ವರ್ಷದ ಆಳ್ವಿಕೆಯಲ್ಲಿ ಮಾಡ್ತಿದ್ದಾನೆ (ಪ್ಯಾರ 19 ನೋಡಿ)

19. ಪರದೈಸಲ್ಲಿ ನಮಗೆ ಯಾಕೆ ಬೋರ್‌ ಆಗಲ್ಲ? (ಮುಖಪುಟ ಚಿತ್ರ ನೋಡಿ.)

19 ಪರದೈಸಲ್ಲಿ ಜೀವಿಸುವಾಗ ನಮಗೆ ಯಾವತ್ತೂ ಬೋರ್‌ ಆಗಲ್ಲ. ಯಾಕಂದ್ರೆ ನಾವು ನೋಡಬೇಕು ಅಂತ ಕಾಯ್ತಾ ಇದ್ದ ಎಷ್ಟೋ ಜನರನ್ನ ಭೇಟಿ ಮಾಡ್ತೀವಿ ಮತ್ತು ಯೆಹೋವ ಕೊಡೋ ಕೆಲಸಗಳನ್ನ ಮಾಡ್ತಾ ಇರ್ತೀವಿ. ಪ್ರತಿದಿನ ಯೆಹೋವನ ಬಗ್ಗೆ ಹೊಸ ವಿಷಯಗಳನ್ನ ಕಲಿತೀವಿ, ಯಾವಾಗ್ಲೂ ನಗುನಗ್ತಾ ಖುಷಿಯಾಗಿ ಇರ್ತೀವಿ. ಯೆಹೋವನ ಬಗ್ಗೆ ಮತ್ತು ಆತನ ಸೃಷ್ಟಿ ಬಗ್ಗೆ ಕಲಿಯೋಕೆ ನಮಗೆ ಎಷ್ಟೋ ವಿಷಯಗಳಿರುತ್ತೆ. ವರ್ಷಗಳು ಹೋಗ್ತಾ ಹೋಗ್ತಾ ಯೆಹೋವನ ಮೇಲೆ ನಮಗಿರೋ ಪ್ರೀತಿನೂ ಜಾಸ್ತಿ ಆಗ್ತಾ ಹೋಗುತ್ತೆ. ಹಾಗಾಗಿ ಪರದೈಸಲ್ಲಿ ಶಾಶ್ವತವಾಗಿ ಜೀವಿಸೋ ಅವಕಾಶ ಮಾಡಿಕೊಟ್ಟಿರೋ ಯೆಹೋವ ಮತ್ತು ಯೇಸುಗೆ ನಾವು ಎಷ್ಟು ಋಣಿಗಳಾಗಿರಬೇಕಲ್ವಾ!

ಗೀತೆ 136 ನಿನ್ನ ರಾಜ್ಯ ಬರಲಿ!

a ಪರದೈಸಲ್ಲಿ ಜೀವನ ಹೇಗಿರುತ್ತೆ ಅಂತ ನೀವು ಆಗಾಗ ಯೋಚಿಸ್ತಾ ಇರ್ತಿರಾ? ಹಾಗೆ ಯೋಚಿಸೋದು ತುಂಬಾ ಒಳ್ಳೇದು. ಯಾಕಂದ್ರೆ ಮುಂದೆ ಯೆಹೋವ ಕೊಡೋ ಆಶೀರ್ವಾದದ ಬಗ್ಗೆ ನಾವು ಯೋಚನೆ ಮಾಡಿದಷ್ಟು ಜನ್ರಿಗೆ ಅದರ ಬಗ್ಗೆ ಖುಷಿ ಖುಷಿಯಿಂದ ಹೇಳ್ತೀವಿ. ಹಾಗಾಗಿ ಪರದೈಸ್‌ ಬರುತ್ತೆ ಅಂತ ಯೇಸು ಕೊಟ್ಟ ಮಾತಿನ ಮೇಲೆ ನಂಬಿಕೆ ಬೆಳಸಿಕೊಳ್ಳೋಕೆ ಈ ಲೇಖನ ಹೇಗೆ ಸಹಾಯ ಮಾಡುತ್ತೆ ಅಂತ ಈಗ ನೋಡೋಣ.

b ಚಿತ್ರ ವಿವರಣೆ: ಪರದೈಸಲ್ಲಿ ಜೀವಂತವಾಗಿ ಎದ್ದು ಬಂದವರಿಗೆ ದೇವರ ಬಗ್ಗೆ ಕಲಿಸಬೇಕು ಅಂತ ಆಸೆ ಇರೋ ಒಬ್ಬ ಸಹೋದರ ಈಗಿಂದನೇ ಅದಕ್ಕೆ ರೆಡಿ ಆಗ್ತಿದ್ದಾನೆ.