ವಾಚಕರಿಂದ ಪ್ರಶ್ನೆಗಳು
ದಾವೀದ ಕೀರ್ತನೆ 61:8ರಲ್ಲಿ ದೇವರನ್ನ “ನಿತ್ಯನಿರಂತರಕ್ಕೂ” ಹೊಗಳ್ತೀನಿ ಅಂತ ಹೇಳಿದ್ದು ಹುಚ್ಚು ಕಲ್ಪನೆಯಾಗಿತ್ತಾ?
ಇಲ್ಲ. ದಾವೀದ ತುಂಬಾ ಯೋಚನೆ ಮಾಡಿನೇ ಇದನ್ನ ಬರೆದ. ಅವನು ನಿಜನೇ ಹೇಳ್ತಿದ್ದಾನೆ.
ಅವನು ಈ ವಚನದಲ್ಲಿ ಮಾತ್ರ ಅಲ್ಲ ಇನ್ನೂ ಕೆಲವು ವಚನಗಳಲ್ಲಿ ಇದೇ ತರ ಬರೆದಿದ್ದಾನೆ. “ನಾನು ನಿನ್ನ ಹೆಸರನ್ನ ನಿತ್ಯನಿರಂತರಕ್ಕೂ ಹೊಗಳ್ತೀನಿ, ಪ್ರತಿದಿನ ನನ್ನ ಹರಕೆಯನ್ನ ತೀರಿಸ್ತೀನಿ.” “ನನ್ನ ದೇವರಾದ ಯೆಹೋವನೇ, ಪೂರ್ಣ ಹೃದಯದಿಂದ ನಾನು ನಿನ್ನನ್ನ ಹೊಗಳ್ತೀನಿ, ಶಾಶ್ವತವಾಗಿ ನಿನ್ನ ಹೆಸ್ರಿಗೆ ಗೌರವ ಕೊಡ್ತೀನಿ,” “ಯಾವಾಗ್ಲೂ ನಾನು ನಿನ್ನ ಹೆಸ್ರನ್ನ ಸ್ತುತಿಸ್ತೀನಿ.”—ಕೀರ್ತ. 61:8; 86:12; 145:1, 2.
ದಾವೀದ ನಿರಂತರಕ್ಕೂ ಯೆಹೋವನನ್ನು ಹೊಗಳ್ತೀನಿ ಅಂತ ಹೇಳಿದಾಗ ಏನೋ ಹುಚ್ಚು ಕಲ್ಪನೆ ಮಾಡ್ಕೊಂಡು ಹೇಳ್ತಾ ಇರಲಿಲ್ಲ. ಯಾಕಂದ್ರೆ ಮನುಷ್ಯರು ಪಾಪಿಗಳಾಗಿದ್ರಿಂದ ಸಾಯ್ತಾರೆ ಅಂತ ಯೆಹೋವ ಹೇಳಿದ್ದನು. ಹಾಗಾಗಿ ತಾನೂ ಒಂದಿನ ಸಾಯ್ತೀನಿ ಅಂತ ದಾವೀದನಿಗೆ ಗೊತ್ತಿತ್ತು. (ಆದಿ. 3:3, 17-19; ಕೀರ್ತ. 51:4, 5) ದೇವರ ನಂಬಿಗಸ್ತ ಸೇವಕರಾಗಿದ್ದ ಅಬ್ರಹಾಮ, ಇಸಾಕ ಮತ್ತು ಯಾಕೋಬ ಕೂಡ ತೀರಿಹೋಗಿದ್ರು ಅಂತ ಅವನಿಗೆ ಗೊತ್ತಿತ್ತು. ಹಾಗಾಗಿ ಅವನು ಸಾಯದೆ ಜೀವಂತವಾಗಿ ಇರ್ತಿನಿ ಅಂತ ಇಲ್ಲಿ ಹೇಳ್ತಿಲ್ಲ. (ಕೀರ್ತ. 37:25; 39:4) ಬದಲಿಗೆ ತನ್ನ ಜೀವ ಇರೋ ತನಕ ಯೆಹೋವನನ್ನು ಹೊಗಳಬೇಕು ಅನ್ನೋದು ಅವನ ಆಸೆಯಾಗಿತ್ತು ಅಂತ ಕೀರ್ತನೆ 61:8ರಲ್ಲಿ ಹೇಳ್ತಿದ್ದಾನೆ.—2 ಸಮು. 7:12.
ದಾವೀದ ಕೀರ್ತನೆ 18, 51 ಮತ್ತು 52ರ ಮೇಲ್ಬರಹಗಳನ್ನ ಬರೆದಾಗ ತನ್ನ ಜೀವನದಲ್ಲಿ ನಡೆದ ಘಟನೆಗಳ ಬಗ್ಗೆ ಹೇಳ್ತಿದ್ದ. 23ನೇ ಕೀರ್ತನೆಯಲ್ಲಿ ಯೆಹೋವನನ್ನು ಒಳ್ಳೇ ಕುರುಬ ಅಂತ ಕರೆದ. ಕುರುಬನಾಗಿದ್ದ ದಾವೀದನಿಗೆ ಯೆಹೋವ ದೇವರು ಅವನನ್ನ ಕಾಪಾಡಿದ್ದು, ಆರೈಕೆ ಮಾಡಿದ್ದು, ಕಷ್ಟದಲ್ಲಿ ಇದ್ದಾಗ ಸಹಾಯ ಮಾಡಿದ್ದು, ಇದೆಲ್ಲ ಯೆಹೋವ ಒಬ್ಬ ಒಳ್ಳೇ ಕುರುಬನಾಗಿದ್ದಾನೆ ಅಂತ ಅರ್ಥ ಮಾಡಿಕೊಳ್ಳೋಕೆ ಸಹಾಯ ಮಾಡ್ತು. ಹಾಗಾಗಿ ಜೀವನ ಪೂರ್ತಿ ಯೆಹೋವನನ್ನು ಆರಾಧಿಸಬೇಕು ಅಂತ ನಿರ್ಧಾರ ಮಾಡಿಕೊಂಡಿದ್ದ.—ಕೀರ್ತ. 23:6.
ದಾವೀದ ಪವಿತ್ರ ಶಕ್ತಿಯ ಸಹಾಯದಿಂದ ಕೀರ್ತನೆಗಳನ್ನ ಬರೆದ. ಅದರಲ್ಲಿ ಎಷ್ಟೋ ವಿಷಯಗಳು ಭವಿಷ್ಯವಾಣಿಗಳಾಗಿದ್ದವು. ಉದಾಹರಣೆಗೆ, ಕೀರ್ತನೆ 110ರಲ್ಲಿ ‘ನನ್ನ ಒಡೆಯ ದೇವರ ಬಲಗಡೆಯಲ್ಲಿ ಕೂತ್ಕೊಳ್ತಾನೆ’ ಮತ್ತು ಆತನಿಗೆ ಸ್ವರ್ಗದಲ್ಲಿ ಅಧಿಕಾರ ಸಿಗುತ್ತೆ ಅಂತ ಬರೆದ. ಆತನು ‘ದೇಶಗಳ ವಿರುದ್ಧ ನ್ಯಾಯ ತೀರಿಸ್ತಾನೆ’ ಮತ್ತು ತನ್ನ ವೈರಿಗಳಿಗೆ ಶಿಕ್ಷೆ ಕೊಡ್ತಾನೆ ಅಂತನೂ ಬರೆದ. ಆತನು ಸ್ವರ್ಗದಿಂದ ರಾಜನಾಗಿ ಆಳ್ತಾನೆ ಮತ್ತು ‘ಸದಾಕಾಲ ಪುರೋಹಿತನಾಗಿ ಇರ್ತಾನೆ’ ಅಂದ. (ಕೀರ್ತ. 110:1-6) ಇಲ್ಲಿ ದಾವೀದ ಮುಂದೆ ತನ್ನ ವಂಶದಲ್ಲಿ ಹುಟ್ಟೋ ಮೆಸ್ಸೀಯನ ಬಗ್ಗೆ ಬರೆದಿದ್ದ. ಕೀರ್ತನೆ 110ರಲ್ಲಿ ದಾವೀದ ಹೇಳಿರೋದು ತನ್ನ ಬಗ್ಗೆನೇ ಮತ್ತು ಆ ಭವಿಷ್ಯವಾಣಿ ಮುಂದೆ ನಿಜ ಆಗುತ್ತೆ ಅಂತ ಯೇಸು ಕೂಡ ಹೇಳಿದನು.—ಮತ್ತಾ. 22:41-45.
ಹಾಗಾಗಿ, ದಾವೀದ ತಾನು ಜೀವಿಸಿದ್ದಾಗ ಮಾತ್ರ ಅಲ್ಲ, ಮುಂದೆ ಹೊಸ ಲೋಕದಲ್ಲಿ ಮತ್ತೆ ಬದುಕಿ ಬಂದಾಗಲೂ ಯೆಹೋವನನ್ನು ನಿರಂತರಕ್ಕೂ ಹೊಗಳುವುದರ ಬಗ್ಗೆ ಪವಿತ್ರ ಶಕ್ತಿಯ ಸಹಾಯದಿಂದ ಬರೆದ ಅಂತ ಗೊತ್ತಾಗುತ್ತೆ. ಇದನ್ನ ಅರ್ಥ ಮಾಡ್ಕೊಂಡಾಗ ಕೀರ್ತನೆ 37:10, 11 ಮತ್ತು 29ರಲ್ಲಿ ಹೇಳಿರೋ ಮಾತುಗಳು ಇಸ್ರಾಯೇಲ್ಯರ ಕಾಲದಲ್ಲೂ ನೆರವೇರಿತು, ಮುಂದೆ ಇಡೀ ಭೂಮಿ ಪರದೈಸ್ ಆದಾಗಲೂ ನೆರವೇರುತ್ತೆ ಅಂತ ಗೊತ್ತಾಗುತ್ತೆ.—ಇದೇ ಸಂಚಿಕೆಯಲ್ಲಿ “ನೀನು ನನ್ನ ಜೊತೆ ಪರದೈಸಲ್ಲಿ ಇರ್ತಿಯ” ಅನ್ನೋ ಲೇಖನದಲ್ಲಿ 8ನೇ ಪ್ಯಾರ ನೋಡಿ.
ಸಾಯೋ ತನಕ ಯೆಹೋವನನ್ನೇ ಆರಾಧಿಸಬೇಕು, ಆತನನ್ನ ಹೊಗಳಬೇಕು ಅನ್ನೋದೆ ದಾವೀದನ ಆಸೆಯಾಗಿತ್ತು ಅಂತ ಕೀರ್ತನೆ 61:8 ಮತ್ತು ಅವನು ಬರೆದ ಬೇರೆ ವಚನಗಳಿಂದ ಗೊತ್ತಾಗುತ್ತೆ. ಹಾಗಾಗಿ ಅವನು ಹೇಳಿದ್ದು ಹುಚ್ಚು ಕಲ್ಪನೆ ಆಗಿರಲಿಲ್ಲ. ಬದಲಿಗೆ ಮುಂದೆ ಯೆಹೋವ ದಾವೀದನನ್ನ ಮತ್ತೆ ಜೀವಂತ ಎಬ್ಬಿಸಿದಾಗ ಅವನು ಏನೆಲ್ಲ ಮಾಡ್ತಾನೆ ಅನ್ನೋದನ್ನ ತೋರಿಸಿಕೊಡುತ್ತೆ.