ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 44

ಗೀತೆ 29 ಬಾಳುವೆವು ನಮ್ಮ ನಾಮದಂತೆ

ಅನ್ಯಾಯ ಆದಾಗ ನಾವೇನು ಮಾಡಬೇಕು?

ಅನ್ಯಾಯ ಆದಾಗ ನಾವೇನು ಮಾಡಬೇಕು?

“ಕೆಟ್ಟದು ನಿನ್ನನ್ನ ಗೆಲ್ಲೋಕೆ ಬಿಡಬೇಡ, ಒಳ್ಳೇದ್ರಿಂದ ಕೆಟ್ಟದನ್ನ ಜಯಿಸ್ತಾ ಇರು.”ರೋಮ. 12:21.

ಈ ಲೇಖನದಲ್ಲಿ ಏನಿದೆ?

ಯಾರಾದ್ರೂ ನಿಮಗೆ ಅನ್ಯಾಯ ಮಾಡಿದಾಗ ನೀವೇನು ಮಾಡಬೇಕು? ಏನು ಮಾಡಬಾರದು?

1-2. ಅನ್ಯಾಯ ಆದಾಗ ನಮಗೆ ಹೇಗನಿಸುತ್ತೆ?

 ಯೇಸು ತನ್ನ ಶಿಷ್ಯರಿಗೆ ಒಂದು ಕಥೆ ಹೇಳಿದನು. ಆ ಕಥೆಯಲ್ಲಿ ಒಬ್ಬ ವಿಧವೆ ನ್ಯಾಯಾಧೀಶನ ಹತ್ರ ನ್ಯಾಯಕ್ಕೋಸ್ಕರ ಪಟ್ಟುಹಿಡಿದು ಕೇಳ್ತಾ ಇದ್ದಳು. ಆ ವಿಧವೆಗೆ ಆಗ್ತಿದ್ದ ಅನ್ಯಾಯ ಶಿಷ್ಯರಿಗೆ ಚೆನ್ನಾಗಿ ಅರ್ಥ ಆಯ್ತು. ಯಾಕಂದ್ರೆ ಆಗಿನ ಕಾಲದಲ್ಲಿ ತುಂಬ ಜನ್ರಿಗೆ ಅನ್ಯಾಯ ಆಗ್ತಿತ್ತು. (ಲೂಕ 18:1-5) ನಾವೂ ಜೀವನದಲ್ಲಿ ಅನ್ಯಾಯ ಅನುಭವಿಸಿರೋದ್ರಿಂದ ಆ ವಿಧವೆ ನೋವು ನಮಗೂ ಅರ್ಥ ಆಗುತ್ತೆ.

2 ಇವತ್ತು ಲೋಕದಲ್ಲಿ ತುಂಬ ಜನ ಭೇದಭಾವ ಮಾಡ್ತಾರೆ, ಸ್ವಾರ್ಥಿಗಳಾಗಿದ್ದಾರೆ ಜನ್ರ ಮೇಲೆ ದಬ್ಬಾಳಿಕೆ ಮಾಡ್ತಿದ್ದಾರೆ. ಇದನ್ನೆಲ್ಲಾ ನೋಡಿದಾಗ ನಮಗೆ ಆಶ್ಚರ್ಯ ಆಗಲ್ಲ. (ಪ್ರಸಂ. 5:8) ಆದ್ರೆ ನಮ್ಮ ಸಹೋದರ ಸಹೋದರಿಯರೇ ನಮಗೇನಾದ್ರು ಅನ್ಯಾಯ ಮಾಡಿಬಿಟ್ರೆ, ನಮ್ಮ ಜೊತೆ ತಪ್ಪಾಗಿ ನಡ್ಕೊಂಡುಬಿಟ್ರೆ ಮನಸ್ಸಿಗೆ ತುಂಬಾ ನೋವಾಗುತ್ತೆ. ಯಾಕಂದ್ರೆ ಅವರು ಈ ತರ ಮಾಡೋಕೆ ಸಾಧ್ಯನೇ ಇಲ್ಲ ಅಂತ ನಾವು ಅಂದ್ಕೊಂಡಿರ್ತೀವಿ. ಆದ್ರೆ ಅವರು ಬೇಕುಬೇಕಂತ ನಮ್ಮ ಮನಸ್ಸನ್ನ ನೋಯಿಸಿರಲ್ಲ. ಅವರು ಅಪರಿಪೂರ್ಣರಾಗಿ ಇರೋದ್ರಿಂದ ಕೆಲವೊಮ್ಮೆ ಹಾಗೆ ಆಗಿಬಿಡುತ್ತೆ. ಹಾಗಾದ್ರೆ ನಮಗೆ ಅನ್ಯಾಯ ಆದಾಗ ನಾವು ಏನು ಮಾಡಬೇಕು? ಯೇಸು ಏನು ಮಾಡಿದನೋ ಅದನ್ನೇ ಮಾಡಬೇಕು. ವಿರೋಧಿಗಳು ಅನ್ಯಾಯ ಮಾಡಿದಾಗ ಆತನು ಅದನ್ನೆಲ್ಲಾ ಸಹಿಸ್ಕೊಂಡನು. ಅದೇ ತರ ನಾವೂ ಜನ ಎಷ್ಟೇ ಅನ್ಯಾಯ ಮಾಡಿದ್ರೂ ಅದನ್ನೆಲ್ಲಾ ಸಹಿಸ್ಕೊಬೇಕು. ಹೊರಗಿನವರು ಮಾಡೋ ಅನ್ಯಾಯನೇ ನಾವು ಸಹಿಸ್ಕೊಳ್ತೀವಿ ಅಂದ್ಮೇಲೆ ನಮ್ಮ ಸಹೋದರ ಸಹೋದರಿಯರಿಂದ ಆಗೋ ಅನ್ಯಾಯನ ಇನ್ನೂ ಜಾಸ್ತಿ ಸಹಿಸ್ಕೊಬೇಕಲ್ವಾ! ಆದ್ರೆ ಈಗ ನಮ್ಮ ಮನಸ್ಸಿಗೆ ಕೆಲವು ಪ್ರಶ್ನೆಗಳು ಬರಬಹುದು. ನಮಗೆ ಹೊರಗಡೆಯವ್ರಿಂದ ಅಥವಾ ಸಭೆಯವ್ರಿಂದ ಅನ್ಯಾಯ ಆದಾಗ ಯೆಹೋವನಿಗೆ ಹೇಗನಿಸುತ್ತೆ? ನಮಗಾಗೋ ನೋವು ಆತನಿಗೆ ಅರ್ಥ ಆಗುತ್ತಾ?

3. ನಮಗೆ ಅನ್ಯಾಯ ಆದಾಗ ದೇವ್ರಿಗೆ ಹೇಗನಿಸುತ್ತೆ? ಯಾಕೆ?

3 ನಮಗೆ ಅನ್ಯಾಯ ಆದಾಗ ಯೆಹೋವ ದೇವರಿಗೂ ತುಂಬಾ ಬೇಜಾರಾಗುತ್ತೆ. “ಯಾಕಂದ್ರೆ ಯೆಹೋವ ನ್ಯಾಯವನ್ನ ಪ್ರೀತಿಸ್ತಾನೆ.” (ಕೀರ್ತ. 37:28) ಅಷ್ಟೇ ಅಲ್ಲ, ಆತನು ಸರಿಯಾದ ಸಮಯಕ್ಕೆ ಆದಷ್ಟು “ಬೇಗನೆ ನ್ಯಾಯ ಕೊಡಿಸ್ತಾನೆ” ಅಂತ ಯೇಸುನೂ ಹೇಳಿದ್ದಾನೆ. (ಲೂಕ 18:7, 8) ಯೆಹೋವ ದೇವರು ಮುಂದೆ ನಮಗೆ ಆಗಿರೋ ನೋವನ್ನೆಲ್ಲಾ ತೆಗೆದುಹಾಕಿ ಇನ್ಯಾವತ್ತೂ ಅನ್ಯಾಯ ಆಗದೇ ಇರೋ ತರ ನೋಡ್ಕೊಳ್ತಾನೆ.—ಕೀರ್ತ. 72:1, 2.

4. ಅನ್ಯಾಯವನ್ನ ಸಹಿಸ್ಕೊಳ್ಳೋಕೆ ಯೆಹೋವ ನಮಗೆ ಈಗ ಹೇಗೆ ಸಹಾಯ ಮಾಡ್ತಿದ್ದಾನೆ?

4 ಮುಂದೆ ಯೆಹೋವ ಎಲ್ಲಾನೂ ಸರಿ ಮಾಡೋ ತನಕ ನಾವು ಕಾಯಬೇಕು. ಆದ್ರೆ ಅಲ್ಲಿವರೆಗೂ ನಮಗಾಗೋ ಅನ್ಯಾಯವನ್ನ ತಾಳ್ಕೊಳ್ಳೋಕೆ ಯೆಹೋವ ಸಹಾಯ ಮಾಡ್ತಾನೆ. (2 ಪೇತ್ರ 3:13) ನಮಗೆ ಅನ್ಯಾಯ ಆದಾಗ ಏನು ಮಾಡಬೇಕು ಏನು ಮಾಡಬಾರದು ಅಂತ ಹೇಳ್ಕೊಡ್ತಿದ್ದಾನೆ. ಅದು ಹೇಗೆ? ಒಂದು, ಯೇಸು ಅನ್ಯಾಯ ಆದಾಗ ಹೇಗೆ ನಡ್ಕೊಂಡನು ಅಂತ ಬೈಬಲ್‌ನಲ್ಲಿ ಬರೆಸಿಟ್ಟಿದ್ದಾನೆ. ಇನ್ನೊಂದು, ನಮಗೆ ಸಹಾಯ ಮಾಡೋ ಬುದ್ಧಿಮಾತುಗಳನ್ನೂ ಅದ್ರಲ್ಲಿ ಕೊಟ್ಟಿದ್ದಾನೆ.

ಅನ್ಯಾಯ ಆದಾಗ ಏನು ಮಾಡಬಾರದು?

5. ನಮಗೆ ಅನ್ಯಾಯ ಆದಾಗ ನಾವು ಯಾವ ವಿಷ್ಯದಲ್ಲಿ ಹುಷಾರಾಗಿರಬೇಕು?

5 ಯಾರಾದ್ರೂ ನಮಗೆ ಅನ್ಯಾಯ ಮಾಡಿದಾಗ ನಮಗೆ ಬೇಜಾರಾಗುತ್ತೆ, ದುಃಖ ಆಗುತ್ತೆ. (ಪ್ರಸಂ. 7:7) ಹಿಂದಿನ ಕಾಲದಲ್ಲಿ ಯೋಬ ಮತ್ತು ಹಬಕ್ಕೂಕನಿಗೂ ಇದೇ ತರ ಅನಿಸ್ತು. (ಯೋಬ 6:2, 3; ಹಬ. 1:1-3) ಅನ್ಯಾಯ ಆದಾಗ ನಮ್ಮ ಮನಸ್ಸಿಗೆ ನೋವಾಗೋದು ಸಹಜ. ಹಾಗಂತ ನಮ್ಮ ಬುದ್ಧಿನ ಕೋಪದ ಕೈಗೆ ಕೋಡೋಕೆ ಹೋಗಬಾರದು. ನಮ್ಮಿಂದ ಏನೂ ತಪ್ಪಾಗದೆ ಇರೋ ತರ ನೋಡ್ಕೊಬೇಕು.

6. ಅಬ್ಷಾಲೋಮನಿಂದ ನಮಗೇನು ಪಾಠ? (ಚಿತ್ರ ನೋಡಿ.)

6 ನಮಗೆ ಅಥವಾ ನಾವು ಇಷ್ಟಪಡೋ ವ್ಯಕ್ತಿಗಳಿಗೆ ಯಾರಾದ್ರೂ ಅನ್ಯಾಯ ಮಾಡಿದಾಗ ನಮಗೆ ಕೋಪ ಬರುತ್ತೆ, ಅವ್ರ ಮೇಲೆ ಸೇಡು ತೀರಿಸ್ಕೊಬೇಕು ಅಂತ ಅನಿಸುತ್ತೆ. ಆದ್ರೆ ಅದ್ರಿಂದ ಸಮಸ್ಯೆ ಬಗೆಹರಿಯಲ್ಲ ಇನ್ನೂ ದೊಡ್ಡದಾಗುತ್ತೆ. ರಾಜ ದಾವೀದನ ಮಗ ಅಬ್ಷಾಲೋಮ ಏನು ಮಾಡಿದ ಅಂತ ನೆನಪಿಸ್ಕೊಳ್ಳಿ. ಅವನ ತಂಗಿನ ಅಮ್ನೋನ ಬಲತ್ಕಾರ ಮಾಡಿದಾಗ ಅವನ ಕೋಪ ನೆತ್ತಿಗೇರಿತು. ಮೋಶೆ ನಿಯಮದ ಪ್ರಕಾರ ಅಮ್ನೋನನಿಗೆ ಮರಣ ಶಿಕ್ಷೆ ಆಗಬೇಕಿತ್ತು. (ಯಾಜ. 20:17) ಆದ್ರೆ ಆ ಶಿಕ್ಷೆ ಕೊಡೋ ಅಧಿಕಾರ ಅಬ್ಷಾಲೋಮನಿಗೆ ಇರಲಿಲ್ಲ. ಅವನು ಕೋಪ ಮಾಡ್ಕೊಂಡಿದ್ದು ನ್ಯಾಯನೇ. ಆದ್ರೆ ಅವನು ಅಮ್ನೋನನನ್ನ ಸಾಯಿಸಬಾರದಿತ್ತು.—2 ಸಮು. 13:20-23, 28, 29.

ತಾಮಾರಗೆ ಅನ್ಯಾಯ ಆದಾಗ ಅವಳ ಅಣ್ಣ ಅಬ್ಷಾಲೋಮ ತನ್ನ ಬುದ್ಧಿನ ಕೋಪದ ಕೈಗೆ ಕೊಟ್ಟ (ಪ್ಯಾರ 6 ನೋಡಿ)


7. ಕೀರ್ತನೆಗಾರನಿಗೆ ಅನ್ಯಾಯ ನೋಡಿ ಮೊದಮೊದ್ಲು ಹೇಗನಿಸ್ತು?

7 ಅನ್ಯಾಯ ಮಾಡೋರಿಗೆ ಶಿಕ್ಷೆ ಆಗದೆ ಇರೋದನ್ನ ನೋಡಿದಾಗ ನಾವು ಒಳ್ಳೆಯವರು ಆಗಿದ್ರೂ ಏನೂ ಪ್ರಯೋಜ್ನ ಇಲ್ಲ ಅಂತ ಅನಿಸಬಹುದು. ಕೀರ್ತನೆಗಾರನಿಗೂ ಇದೇ ತರ ಅನಿಸ್ತು. ಅವನ ಸುತ್ತಮುತ್ತ ಇದ್ದ ಕೆಟ್ಟ ಜನ್ರು ಬೇರೆಯವ್ರಿಗೆ ಅನ್ಯಾಯ ಮಾಡ್ಕೊಂಡು ಆರಾಮಾಗಿ ಇದ್ರು. ಇದನ್ನೆಲ್ಲಾ ನೋಡಿ ಅವನು, “ಈ ಕೆಟ್ಟವರಿಗೆ ಜೀವನ ಯಾವಾಗ್ಲೂ ಆರಾಮಾಗಿ ಇರುತ್ತೆ” ಅಂತ ಹೇಳಿದ. (ಕೀರ್ತ. 73:12) ಇದ್ರಿಂದ ಅವನಿಗೆ ಎಷ್ಟು ಬೇಜಾರಾಗಿತ್ತಂದ್ರೆ ಅವನಿಗೆ ಯೆಹೋವನ ಸೇವೆ ಮಾಡೋದೇ ವ್ಯರ್ಥ ಅಂತ ಅನಿಸಿಬಿಡ್ತು. ಯಾಕೆ ಹೀಗೆಲ್ಲ ಆಗ್ತಿದೆ ಅಂತ “ಅರ್ಥಮಾಡಿಕೊಳ್ಳೋಕೆ ಪ್ರಯತ್ನಿಸಿದಾಗ, ಅದ್ರಿಂದ ನನಗೆ ನೋವಾಗ್ತಿತ್ತು” ಅಂತ ಅವನು ಹೇಳಿದ. (ಕೀರ್ತ. 73:14, 16) ಅಷ್ಟೇ ಅಲ್ಲ, “ನನ್ನ ಕಾಲು ಇನ್ನೇನು ದಾರಿ ತಪ್ಪಿ ಹೋಗ್ತಿತ್ತು, ನನ್ನ ಪಾದ ಜಾರಿ ಇನ್ನೇನು ಬೀಳ್ತಿದ್ದೆ” ಅಂತಾನೂ ಹೇಳಿದ. (ಕೀರ್ತ. 73:2) ಕೀರ್ತನೆಗಾರನಿಗೆ ಅನಿಸಿದ ತರಾನೇ ಸಹೋದರ ಆಲ್ಬರ್ಟೋಗೂ a ಅನಿಸ್ತು.

8. ಅನ್ಯಾಯ ಆದಾಗ ಒಬ್ಬ ಸಹೋದರ ಏನು ಮಾಡಿದ್ರು?

8 ಸಭೆಗೆ ಬರ್ತಿದ್ದ ಕಾಣಿಕೆನ ಆಲ್ಬರ್ಟೋ ಕದ್ದಿದ್ದಾರೆ ಅಂತ ಕೆಲವರು ಅವ್ರ ಮೇಲೆ ಸುಳ್ಳಾರೋಪ ಹಾಕಿದ್ರು. ಇದ್ರಿಂದ ಬ್ರದರ್‌ ಆಲ್ಬರ್ಟೋ ಸುಯೋಗಗಳನ್ನ ಕಳ್ಕೊಂಡ್ರು. ಸಭೆಲಿದ್ದ ಎಷ್ಟೋ ಜನ್ರಿಗೆ ಅವ್ರ ಮೇಲಿದ್ದ ಗೌರವ ಕಮ್ಮಿ ಆಯ್ತು. ಆಗ ಅವ್ರಿಗೆ ಹೇಗನಿಸ್ತು? “ನಂಗೆ ತುಂಬಾ ಬೇಜಾರಾಯ್ತು, ಕೋಪ ಬಂತು” ಅಂತ ಅವರು ಹೇಳ್ತಾರೆ. ಈ ಬೇಜಾರಿಂದ ಯೆಹೋವನ ಜೊತೆ ಅವ್ರಿಗಿದ್ದ ಸಂಬಂಧನೂ ಬಿಟ್ಕೊಟ್ಟುಬಿಟ್ರು. ಕೂಟಗಳಿಗೆ ಬರೋದನ್ನ ನಿಲ್ಲಿಸಿದ್ರು, ಐದು ವರ್ಷದ ತನಕ ನಿಷ್ಕ್ರಿಯರಾಗಿಬಿಟ್ರು ಅಂದ್ರೆ ಸೇವೆಗೆ ಹೋಗೋದನ್ನೂ ಬಿಟ್ಟುಬಿಟ್ರು. ನಮಗೆ ಅನ್ಯಾಯ ಆದಾಗ ನಾವು ಕೋಪದಿಂದ ನಡ್ಕೊಂಡುಬಿಟ್ರೆ ಏನೆಲ್ಲಾ ಅನಾಹುತ ಆಗುತ್ತೆ ಅನ್ನೋದಕ್ಕೆ ಇದೊಂದು ಒಳ್ಳೇ ಉದಾಹರಣೆ.

ಅನ್ಯಾಯ ಆದಾಗ ಯೇಸು ಏನು ಮಾಡಿದನು?

9. ಯೇಸು ಯಾವೆಲ್ಲಾ ಅನ್ಯಾಯಗಳನ್ನ ಸಹಿಸ್ಕೊಂಡನು? (ಚಿತ್ರ ನೋಡಿ.)

9 ಅನ್ಯಾಯ ಆದಾಗ ಯೇಸು ಅದನ್ನೆಲ್ಲಾ ತಾಳ್ಕೊಂಡನು. ಯೇಸುಗೆ ಬೇರೆಯವ್ರಷ್ಟೇ ಅಲ್ಲ ತನ್ನ ಕುಟುಂಬದವ್ರೂ ಅನ್ಯಾಯ ಮಾಡಿದ್ರು. ಆತನ ಸಂಬಂಧಿಕರು ಆತನಿಗೆ ಹುಚ್ಚುಹಿಡಿದಿದೆ ಅಂತ ಹೇಳಿದ್ರು. ಧಾರ್ಮಿಕ ಗುರುಗಳು ಆತನು ದೆವ್ವಗಳ ಸಹಾಯದಿಂದ ಅದ್ಭುತಗಳನ್ನ ಮಾಡ್ತಿದ್ದಾನೆ ಅಂತ ಸುಳ್ಳಾರೋಪ ಹಾಕಿದ್ರು. ಅಷ್ಟೇ ಅಲ್ಲ, ರೋಮನ್‌ ಸೈನಿಕರು ಆತನನ್ನ ಗೇಲಿ ಮಾಡಿದ್ರು, ಹೊಡೆದ್ರು, ಹಿಂಸೆ ಕೊಟ್ಟು ಕೊನೆಗೆ ಸಾಯಿಸಿಬಿಟ್ರು. (ಮಾರ್ಕ 3:21, 22; 14:55; 15:16-20, 35-37) ಇಷ್ಟೆಲ್ಲ ಆದ್ರೂ ಯೇಸು ಅವ್ರ ಮೇಲೆ ಸೇಡು ತೀರಿಸ್ಕೊಳ್ಳದೆ, ಎಲ್ಲಾನೂ ಸಹಿಸ್ಕೊಂಡನು. ಇದ್ರಿಂದ ನಮಗೇನು ಪಾಠ?

ಅನ್ಯಾಯ ಆದಾಗ ಏನು ಮಾಡಬೇಕು ಅಂತ ಯೇಸು ತೋರಿಸ್ಕೊಟ್ಟಿದ್ದಾನೆ (ಪ್ಯಾರ 9-10 ನೋಡಿ)


10. ಅನ್ಯಾಯ ಆದಾಗ ಯೇಸು ಏನು ಮಾಡಿದನು? (1 ಪೇತ್ರ 2:21-23)

10 1 ಪೇತ್ರ 2:21-23 ಓದಿ. b ಅನ್ಯಾಯ ಆದಾಗ ನಾವು ಏನು ಮಾಡಿದ್ರೆ ಒಳ್ಳೇದು ಅಂತ ಯೇಸು ತೋರಿಸಿಕೊಟ್ಟಿದ್ದಾನೆ. ಯೇಸುಗೆ ಯಾವಾಗ ಮಾತಾಡಬೇಕು, ಯಾವಾಗ ಸುಮ್ಮನಿರಬೇಕು ಅನ್ನೋದು ಚೆನ್ನಾಗಿ ಗೊತ್ತಿತ್ತು. (ಮತ್ತಾ. 26:62-64) ಯೇಸು ತನ್ನ ಮೇಲೆ ಹಾಕಿದ್ದ ಪ್ರತಿಯೊಂದು ಸುಳ್ಳಾರೋಪನ ಸಮರ್ಥಿಸ್ಕೊಳ್ಳೋಕೆ ಹೋಗ್ಲಿಲ್ಲ. (ಮತ್ತಾ. 11:19) ಆದ್ರೆ ಆತನು ಉತ್ರ ಕೊಡಬೇಕಾಗಿ ಬಂದಾಗ ತನ್ನ ವಿರೋಧಿಗಳಿಗೆ ಅವಮಾನ ಆಗೋ ತರ ಮಾತಾಡ್ಲಿಲ್ಲ, ಬೆದರಿಕೆ ಹಾಕ್ಲಿಲ್ಲ, ದುಡುಕಿ ಮಾತಾಡ್ಲಿಲ್ಲ. “ಸರಿಯಾಗಿ ತೀರ್ಪು ಮಾಡೋ ತನ್ನ ದೇವ್ರಿಗೆ ಎಲ್ಲ ಬಿಟ್ಕೊಟ್ಟ.” ತನಗೆ ಆಗ್ತಿರೋ ಅನ್ಯಾಯನ ಯೆಹೋವ ನೋಡ್ತಿದ್ದಾನೆ ಅಂತ ಯೇಸುಗೆ ಗೊತ್ತಿತ್ತು. ಆತನು ಸರಿಯಾದ ಸಮಯಕ್ಕೆ ಎಲ್ಲಾನೂ ಸರಿಮಾಡ್ತಾನೆ ಅಂತ ನಂಬಿದ್ದನು.

11. (ಎ) ಅನ್ಯಾಯ ಆದಾಗ ನಾವು ಯೇಸು ತರ ಏನು ಮಾಡಬೇಕು? (ಚಿತ್ರಗಳನ್ನ ನೋಡಿ.)

11 ಅನ್ಯಾಯ ಆದಾಗ ನಾವೂ ಯೇಸು ತರ ಯೋಚ್ನೆ ಮಾಡಿ ಮಾತಾಡಬೇಕು. ಕೆಲವೊಂದು ಸಲ ನಮಗೆ ಅಂಥಾ ದೊಡ್ಡ ಅನ್ಯಾಯ ಏನ್‌ ಆಗಿರಲ್ಲ, ಅದನ್ನ ನಾವು ಅಲ್ಲಿಗೇ ಬಿಟ್ಟು ಬಿಡಬಹುದು. ಒಂದುವೇಳೆ ನಾವು ಆಗ ಮಾತಾಡಿದ್ರೆ ಸಮಸ್ಯೆ ಇನ್ನೂ ದೊಡ್ಡದಾಗಬಹುದು. ಅದಕ್ಕೇ ನಾವು ಸುಮ್ಮನೆ ಇರೋದೇ ಒಳ್ಳೇದು. (ಪ್ರಸಂ. 3:7; ಯಾಕೋ. 1:19, 20) ಆದ್ರೆ ಕೆಲವು ಸಲ ಹೀಗಿರಲ್ಲ. ಬೇರೆಯವ್ರಿಗೆ ಅನ್ಯಾಯ ಆದಾಗ ಮತ್ತು ನಮ್ಮ ನಂಬಿಕೆ ಬಗ್ಗೆ ಹೇಳಬೇಕಾಗಿ ಬಂದಾಗ ನಾವು ಧೈರ್ಯವಾಗಿ ಮಾತಾಡಬೇಕಾಗುತ್ತೆ. (ಅ. ಕಾ. 6:1, 2) ಆಗ್ಲೂ ನಾವು ಮೃದುವಾಗಿ, ಗೌರವ ಕೊಟ್ಟು ಮಾತಾಡಬೇಕು.—1 ಪೇತ್ರ 3:15. c

ಅನ್ಯಾಯ ಆದಾಗ ಯೇಸು ತರ ಯೋಚ್ನೆ ಮಾಡಿ ಮಾತಾಡಬೇಕು (ಪ್ಯಾರ 11-12 ನೋಡಿ)


12. ಅನ್ಯಾಯ ಆದಾಗ ನಾವು “ಸರಿಯಾಗಿ ತೀರ್ಪು ಮಾಡೋ” ದೇವರಿಗೆ ಎಲ್ಲಾನೂ ಬಿಟ್ಕೊಡೋದು ಹೇಗೆ?

12 ನಮಗೆ ಅನ್ಯಾಯ ಆದಾಗ ಯೇಸು ತರ ಎಲ್ಲಾನೂ “ಸರಿಯಾಗಿ ತೀರ್ಪು ಮಾಡೋ” ದೇವರಿಗೆ ಬಿಟ್ಕೊಡಬೇಕು. ಅದನ್ನ ಹೇಗೆ ಮಾಡೋದು? ನಮಗೆ ಯಾರಾದ್ರೂ ಅನ್ಯಾಯ ಮಾಡಿದ್ರೆ ನಿಜ ಏನು ಅಂತ ಯೆಹೋವನಿಗೆ ಗೊತ್ತು ಅನ್ನೋದನ್ನ ನೆನಪಲ್ಲಿ ಇಟ್ಕೊಬೇಕು. ಮುಂದೆ ದೇವರು ಎಲ್ಲಾನೂ ಸರಿಮಾಡ್ತಾನೆ ಅನ್ನೋದನ್ನ ನಂಬಬೇಕು. ಆಗ ನಮಗಾಗೋ ಅನ್ಯಾಯನ ಸಹಿಸ್ಕೊಳ್ಳೋಕಾಗುತ್ತೆ. ಈ ನಂಬಿಕೆ ನಮ್ಮಲ್ಲಿದ್ರೆ ನಮ್ಮ ಮನಸ್ಸಲ್ಲಿ ಕೋಪ ಇಟ್ಕೊಳಲ್ಲ, ದ್ವೇಷ ಬೆಳಿಯೋಕೆ ಬಿಡಲ್ಲ. ಒಂದುವೇಳೆ ನಾವು ಬೇರೆಯವರ ಮೇಲೆ ಕೋಪ ಇಟ್ಕೊಂಡ್ರೆ ಏನು ಮಾಡಬಾರದೋ ಅದನ್ನ ಮಾಡಿಬಿಡ್ತೀವಿ. ನಮ್ಮ ಸಂತೋಷನ ಕಳ್ಕೊತೀವಿ. ಅಷ್ಟೇ ಅಲ್ಲ, ಯೆಹೋವ ದೇವರ ಜೊತೆ ಇರೋ ಸಂಬಂಧನೂ ಹಾಳು ಮಾಡ್ಕೊತೀವಿ.—ಕೀರ್ತ. 37:8.

13. ಅನ್ಯಾಯನ ಸಹಿಸ್ಕೊಳ್ತಾ ಇರೋಕೆ ನಮಗೆ ಯಾವುದು ಸಹಾಯ ಮಾಡುತ್ತೆ?

13 ನಾವು ಯಾವಾಗ್ಲೂ ಯೇಸು ತರ ಇರೋಕೆ ಆಗಲ್ಲ. ಯಾಕಂದ್ರೆ ಕೆಲವೊಂದು ಸಲ ಅನ್ಯಾಯ ಆದಾಗ ದುಡುಕಿ ಮಾತಾಡಿಬಿಡ್ತೀವಿ, ಏನು ಮಾಡಬಾರದೋ ಅದನ್ನೇ ಮಾಡಿಬಿಡ್ತೀವಿ. ಆಮೇಲೆ ‘ಅಯ್ಯೋ ನಾನು ಈ ತರ ಮಾಡಿಬಿಟ್ನಲ್ಲಾ’ ಅಂತ ಬೇಜಾರ್‌ ಮಾಡ್ಕೊತೀವಿ. (ಯಾಕೋ. 3:2) ಇನ್ನೂ ಕೆಲವು ಸಲ ನಮಗೆ ಆಗಿರೋ ಅನ್ಯಾಯದಿಂದ ನಮ್ಮ ಮನಸ್ಸಿಗೆ, ದೇಹಕ್ಕೆ ತುಂಬಾ ನೋವಾಗಿರುತ್ತೆ. ಅದನ್ನ ಜೀವನ ಪೂರ್ತಿ ಮರೆಯೋಕೆ ಆಗಲ್ಲ. ಈ ತರ ನಿಮಗೂ ಆಗಿದ್ರೆ ನೀವು ಅನುಭವಿಸ್ತಿರೋ ನೋವು ಯೆಹೋವನಿಗೆ ಚೆನ್ನಾಗಿ ಅರ್ಥ ಆಗುತ್ತೆ ಅನ್ನೋದನ್ನ ನೆನಪಲ್ಲಿ ಇಟ್ಕೊಳ್ಳಿ. ಯೇಸು ಅನ್ಯಾಯ ಅನುಭವಿಸಿದ್ರಿಂದ ಆತನಿಗೂ ನಿಮ್ಮ ನೋವು ಅರ್ಥ ಆಗುತ್ತೆ. (ಇಬ್ರಿ. 4:15, 16) ನಮಗಾಗ್ತಿರೋ ಅನ್ಯಾಯವನ್ನ ಸಹಿಸ್ಕೊಳ್ಳೋಕೆ ಯೆಹೋವ ದೇವರು ಬೈಬಲಲ್ಲಿ ಯೇಸು ಬಗ್ಗೆ ಬರೆಸಿದ್ದಷ್ಟೇ ಅಲ್ಲ ಕೆಲವು ಬುದ್ಧಿಮಾತುಗಳನ್ನೂ ಕೊಟ್ಟಿದ್ದಾನೆ. ಅದ್ರಲ್ಲಿ ಎರಡು ಬುದ್ಧಿಮಾತುಗಳನ್ನ ರೋಮನ್ನರಿಗೆ ಪುಸ್ತಕದಲ್ಲಿ ಈಗ ನೋಡೋಣ.

“ದೇವರು ತನ್ನ ಕೋಪ ತೋರಿಸೋಕೆ ಬಿಟ್ಟುಬಿಡಿ”

14. ‘ದೇವರು ತನ್ನ ಕೋಪ ತೋರಿಸೋಕೆ ಬಿಟ್ಟುಬಿಡೋದು’ ಹೇಗೆ? (ರೋಮನ್ನರಿಗೆ 12:19)

14 ರೋಮನ್ನರಿಗೆ 12:19 ಓದಿ. “ದೇವರು ತನ್ನ ಕೋಪ ತೋರಿಸೋಕೆ ಬಿಟ್ಟುಬಿಡಿ” ಅಂತ ಅಪೊಸ್ತಲ ಪೌಲ ಕ್ರೈಸ್ತರಿಗೆ ಹೇಳಿದ. ಅದನ್ನ ಹೇಗೆ ಮಾಡೋದು? ನಮಗೆ ಅನ್ಯಾಯ ಆದಾಗ ಯಾವಾಗ ನ್ಯಾಯ ಕೊಡಿಸಬೇಕು, ಹೇಗೆ ಕೊಡಿಸಬೇಕು ಅಂತ ಯೆಹೋವ ದೇವರಿಗೆ ಚೆನ್ನಾಗಿ ಗೊತ್ತು. ಹಾಗಾಗಿ ಅಲ್ಲಿ ತನಕ ನಾವು ಕಾಯಬೇಕು. ಅನ್ಯಾಯ ಆದಾಗ ಸಹೋದರ ಜಾನ್‌ಗೆ ಹೇಗನಿಸ್ತು ನೋಡಿ. “ಕೋಪದಲ್ಲಿ ನಂಗೆ ತೋಚಿದನ್ನ ಮಾಡಿಬಿಡಬೇಕು ಅಂತ ಅನಿಸ್ತಿತ್ತು. ಆದ್ರೆ ಆ ತರ ಮಾಡದೆ ಇರೋಕೆ ತುಂಬಾ ಕಷ್ಟ ಆಗ್ತಿತ್ತು. ಆಗ ಯೆಹೋವನಿಗೋಸ್ಕರ ಕಾಯೋಕೆ ರೋಮನ್ನರಿಗೆ 12:19 ನಂಗೆ ಸಹಾಯ ಮಾಡ್ತು” ಅಂತ ಅವರು ಹೇಳ್ತಾರೆ.

15. ಯೆಹೋವ ಸಮಸ್ಯೆಗಳನ್ನ ಸರಿಪಡಿಸೋ ತನಕ ಕಾಯೋದು ಯಾಕೆ ಒಳ್ಳೇದು?

15 ನಮಗೆ ಅನ್ಯಾಯ ಆದಾಗ ಅದನ್ನ ಯೆಹೋವ ಸರಿಪಡಿಸೋವರೆಗೂ ಕಾಯೋದು ತುಂಬಾ ಒಳ್ಳೇದು. ಯಾಕಂದ್ರೆ ಆಗ ನಾವೇ ಅದನ್ನ ಸರಿ ಮಾಡೋಕೆ ಹೋಗಿ ಪಜೀತಿಯಲ್ಲಿ ಸಿಕ್ಕಿಹಾಕೊಳ್ಳಲ್ಲ ಮತ್ತು ಅದ್ರಿಂದ ಜಾಸ್ತಿ ಟೆನ್ಶನ್ನೂ ಆಗಲ್ಲ. ಯೆಹೋವ ನಮಗೆ ಸಹಾಯ ಮಾಡೋಕೆ ಯಾವಾಗ್ಲೂ ರೆಡಿ ಇರ್ತಾನೆ. ಆತನು ಒಂದರ್ಥದಲ್ಲಿ ‘ನೀನು ಇದ್ರ ಬಗ್ಗೆ ಜಾಸ್ತಿ ತಲೆಕೆಡಿಸ್ಕೊಬೇಡ, ಎಲ್ಲಾನೂ ನಾನು ನೋಡ್ಕೊತೀನಿ, ಎಲ್ಲಾದಕ್ಕೂ “ಸರಿಯಾದ ಪ್ರತಿಫಲ ಕೊಡ್ತೀನಿ”’ ಅಂತ ಮಾತು ಕೊಟ್ಟಿದ್ದಾನೆ. ಈ ಮಾತನ್ನ ನಾವು ಮನಸ್ಸಲ್ಲಿ ಇಟ್ಕೊಂಡ್ರೆ ನಮಗಾಗಿರೋ ಅನ್ಯಾಯನ ಯೆಹೋವ ಸರಿ ಮಾಡ್ತಾನೆ ಅಂತ ನಂಬಿ ಆತನಿಗೆ ಬಿಟ್ಟುಬಿಡ್ತೀವಿ. ಸಹೋದರ ಜಾನ್‌ಗೂ ಇದೇ ತರ ಅನಿಸ್ತು. “ನಾನು ಯೆಹೋವನಿಗೋಸ್ಕರ ಕಾದ್ರೆ ಯೆಹೋವ ನನಗಿಂತ ಚೆನ್ನಾಗಿ ಸಮಸ್ಯೆಗಳನ್ನ ಬಗೆಹರಿಸ್ತಾನೆ” ಅಂತ ಅವರು ಹೇಳ್ತಾರೆ.

“ಒಳ್ಳೇದ್ರಿಂದ ಕೆಟ್ಟದನ್ನ ಜಯಿಸ್ತಾ ಇರು”

16-17. “ಒಳ್ಳೇದ್ರಿಂದ ಕೆಟ್ಟದನ್ನ ಜಯಿಸ್ತಾ” ಇರೋಕೆ ಪ್ರಾರ್ಥನೆ ಹೇಗೆ ಸಹಾಯ ಮಾಡುತ್ತೆ? (ರೋಮನ್ನರಿಗೆ 12:21)

16 ರೋಮನ್ನರಿಗೆ 12:21 ಓದಿ. “ಒಳ್ಳೇದ್ರಿಂದ ಕೆಟ್ಟದನ್ನ ಜಯಿಸ್ತಾ ಇರು” ಅಂತ ಅಪೊಸ್ತಲ ಪೌಲ ಕ್ರೈಸ್ತರಿಗೆ ಬರೆದ. ಯೇಸು ಕೂಡ ಬೆಟ್ಟದ ಭಾಷಣದಲ್ಲಿ “ನಿಮ್ಮ ಶತ್ರುಗಳನ್ನ ಪ್ರೀತಿಸ್ತಾ ಇರಿ. ನಿಮಗೆ ಹಿಂಸೆ ಕೊಡುವವರಿಗಾಗಿ ಪ್ರಾರ್ಥಿಸ್ತಾ ಇರಿ” ಅಂತ ಹೇಳಿದನು. (ಮತ್ತಾ. 5:44) ಆತನು ಇದನ್ನ ಹೇಳಿದ್ದಷ್ಟೇ ಅಲ್ಲ, ಮಾಡಿ ತೋರಿಸಿದನು. ರೋಮನ್‌ ಸೈನಿಕರು ಆತನನ್ನ ತುಂಬಾ ಕ್ರೂರವಾಗಿ ಹಿಂಸೆ ಕೊಟ್ಟು ಕಂಬಕ್ಕೆ ಜಡಿದಿರೋದನ್ನ ನಾವು ಕೇಳಿರಬಹುದು, ಅದ್ರ ಬಗ್ಗೆ ಓದಿರಬಹುದು. ಆದ್ರೆ ಆತನಿಗೆ ಆದ ನೋವನ್ನ, ಅನ್ಯಾಯನ ಕಲ್ಪನೆ ಮಾಡ್ಕೊಳ್ಳೋಕೂ ಆಗಲ್ಲ.

17 ಇಷ್ಟೆಲ್ಲಾ ಅನ್ಯಾಯ ಆದ್ರೂ ಯೇಸು ಸೋತು ಹೋಗಲಿಲ್ಲ. ಅನ್ಯಾಯ ಮಾಡಿದ ಸೈನಿಕರಿಗೆ ಶಿಕ್ಷೆ ಆಗಲಿ ಅಂತ ಯೋಚಿಸೋ ಬದಲು ಯೆಹೋವ ದೇವರ ಹತ್ರ “ಅಪ್ಪಾ, ಇವ್ರನ್ನ ಕ್ಷಮಿಸು. ಇವ್ರೇನು ಮಾಡ್ತಿದ್ದಾರೆ ಅಂತ ಇವ್ರಿಗೆ ಗೊತ್ತಿಲ್ಲ” ಅಂತ ಬೇಡ್ಕೊಂಡನು. (ಲೂಕ 23:34) ನಾವೂ ನಮಗೆ ಅನ್ಯಾಯ ಮಾಡಿದವರಿಗೋಸ್ಕರ ಪ್ರಾರ್ಥನೆ ಮಾಡಿದಾಗ ಅವರ ಮೇಲಿರೋ ಕೋಪ ಕಮ್ಮಿಯಾಗುತ್ತೆ. ಅವ್ರ ಬಗ್ಗೆ ಒಳ್ಳೇದನ್ನೇ ಯೋಚ್ನೆ ಮಾಡೋಕೆ ಶುರುಮಾಡ್ತೀವಿ.

18. ಆಲ್ಬರ್ಟೋ ಮತ್ತು ಜಾನ್‌ಗೆ ಅನ್ಯಾಯ ಸಹಿಸ್ಕೊಳ್ಳೋಕೆ ಪ್ರಾರ್ಥನೆ ಹೇಗೆ ಸಹಾಯ ಮಾಡ್ತು?

18 ನಾವು ಈ ಲೇಖನದಲ್ಲಿ ನೋಡಿದ ಆ ಇಬ್ರು ಸಹೋದರರಿಗೆ ಅನ್ಯಾಯವನ್ನ ಸಹಿಸ್ಕೊಳ್ಳೋಕೆ ಸಹಾಯ ಮಾಡಿದ್ದು ಪ್ರಾರ್ಥನೆನೇ. “ನಂಗೆ ಅನ್ಯಾಯ ಮಾಡಿದ ಸಹೋದರರಿಗೋಸ್ಕರ ನಾನು ಪ್ರಾರ್ಥನೆ ಮಾಡ್ದೆ. ನನಗಾದ ಅನ್ಯಾಯನ ಪದೇಪದೇ ನೆನಪಿಸ್ಕೊಳ್ಳದೆ ಇರೋಕೆ, ಕೋಪ ಮಾಡ್ಕೊಳ್ಳದೆ ಇರೋಕೆ ಸಹಾಯ ಮಾಡಪ್ಪಾ ಅಂತ ಯೆಹೋವನತ್ರ ಕೇಳ್ಕೊಂಡೆ” ಅಂತ ಸಹೋದರ ಆಲ್ಬರ್ಟೋ ಹೇಳ್ತಾರೆ. ಇದ್ರಿಂದ ಅವರು ಈಗ ತುಂಬಾ ಖುಷಿಖುಷಿಯಾಗಿ ನಿಯತ್ತಿಂದ ಯೆಹೋವನ ಸೇವೆಯನ್ನ ಮುಂದುವರಿಸ್ತಿದ್ದಾರೆ. ಸಹೋದರ ಜಾನ್‌ ಏನು ಹೇಳ್ತಾರೆ ನೋಡಿ, “ನಂಗೆ ಅನ್ಯಾಯ ಮಾಡಿದ ಸಹೋದರರಿಗೋಸ್ಕರ ನಾನು ಪ್ರಾರ್ಥನೆ ಮಾಡ್ದೆ, ಅವ್ರನ್ನ ಕ್ಷಮಿಸೋಕೆ ಸಹಾಯ ಮಾಡಪ್ಪಾ ಅಂತ ಯೆಹೋವನತ್ರ ಕೇಳ್ಕೊಂಡೆ. ಆಗ ಅವ್ರ ಬಗ್ಗೆ ತಪ್ಪಾಗಿ ಯೋಚ್ನೆ ಮಾಡದೆ ಇರೋಕೆ, ಕೋಪ ಇಟ್ಕೊಳ್ಳದೆ ಇರೋಕೆ ಸಹಾಯ ಸಿಕ್ತು. ಜೊತೆಗೆ ಮನಶ್ಶಾಂತಿನೂ ಕೊಡ್ತು” ಅಂದ್ರು.

19. ಈ ಕೆಟ್ಟ ಲೋಕದಲ್ಲಿ ಅನ್ಯಾಯ ಆದಾಗ ಏನು ಮಾಡಬೇಕು? (1 ಪೇತ್ರ 3:8, 9)

19 ಈ ಕೆಟ್ಟ ಲೋಕದಲ್ಲಿ ನಾವು ಇನ್ನೂ ಎಷ್ಟು ಅನ್ಯಾಯ ಅನುಭವಿಸಬೇಕೋ ನಮಗೆ ಗೊತ್ತಿಲ್ಲ. ಅದೇನೇ ಆದ್ರೂ ಸಹಿಸ್ಕೊಳ್ಳೋಕೆ ಯೆಹೋವನ ಹತ್ರ ಸಹಾಯ ಕೇಳ್ತಾ ಇರೋಣ, ಯೇಸು ತರ ನಡ್ಕೊಳ್ಳೋಣ. ಬೈಬಲಲ್ಲಿರೋ ಬುದ್ಧಿ ಮಾತುಗಳನ್ನ ಪಾಲಿಸ್ತಾ ಇರೋಣ. ಆಗ ನಮಗೆ ಯೆಹೋವನ ಆಶೀರ್ವಾದ ಖಂಡಿತ ಸಿಗುತ್ತೆ.—1 ಪೇತ್ರ 3:8, 9 ಓದಿ.

ಗೀತೆ 38 ಮಾಡುವನು ಸ್ಥಿರ, ನೀಡುವನು ಬಲ!

a ಕೆಲವ್ರ ಹೆಸ್ರು ಬದಲಾಗಿದೆ.

b ಅಪೊಸ್ತಲ ಪೇತ್ರ ತಾನು ಬರೆದ ಮೊದಲನೇ ಪತ್ರದ 2 ಮತ್ತು 3ನೇ ಅಧ್ಯಾಯದಲ್ಲಿ ಆಗಿನ ಕಾಲದ ಕ್ರೈಸ್ತರು ಕ್ರೂರವಾಗಿ ನಡ್ಕೊಳ್ತಿದ್ದ ಯಜಮಾನರಿಂದ, ಸತ್ಯದಲ್ಲಿಲ್ಲದ ಗಂಡಂದಿರಿಂದ ಅನ್ಯಾಯವನ್ನ ಅನುಭವಿಸ್ತಾ ಇದ್ದಿದ್ರ ಬಗ್ಗೆ ಬರೆದಿದ್ದಾನೆ.—1 ಪೇತ್ರ 2:18-20; 3:1-6, 8, 9.

c jw.orgನಲ್ಲಿ ಪ್ರೀತಿ ಹೇಗೆ ನಿಜ ಶಾಂತಿ ಕಡೆಗೆ ನಡೆಸುತ್ತೆ? ಅನ್ನೋ ವಿಡಿಯೋ ನೋಡಿ.