ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜೀವನ ಕಥೆ

ಆಪತ್ತಲ್ಲೂ ಆರಾಮಲ್ಲೂ ಆಸರೆಯಾದ ಯೆಹೋವ

ಆಪತ್ತಲ್ಲೂ ಆರಾಮಲ್ಲೂ ಆಸರೆಯಾದ ಯೆಹೋವ

ಪೌಲ್‌: ಪಶ್ಚಿಮ ಆಫ್ರಿಕಾದ ಲೈಬೀರಿಯಾದಲ್ಲಿ ನಮ್ಮಿಬ್ರಿಗೂ ಮಿಷನರಿಯಾಗಿ ಸೇವೆ ಮಾಡೋ ನೇಮಕ ಸಿಕ್ತು. ಅದಕ್ಕೇ 1985ರ ನವೆಂಬರ್‌ ತಿಂಗಳಲ್ಲಿ ವಿಮಾನದಲ್ಲಿ ನಾವಲ್ಲಿಗೆ ಖುಷಿಖುಷಿಯಾಗಿ ಹೋಗ್ತಿದ್ವಿ. ನಾವು ಹೋಗ್ತಿದ್ದ ವಿಮಾನ ಸೆನೆಗಲ್‌ಗೆ ಬಂತು. ಆಗ ಆ್ಯನ್‌ “ನಾವಿನ್ನು ಒಂದೇ ಗಂಟೆಯಲ್ಲಿ ಲೈಬೀರಿಯಾದಲ್ಲಿ ಇರ್ತೀವಿ” ಅಂತ ಹೇಳಿ ಕುಣಿದಾಡಿದಳು. ಅಷ್ಟರಲ್ಲಿ ಒಂದು ಪ್ರಕಟಣೆ ಆಯ್ತು: “ಲೈಬೀರಿಯಾಗೆ ಹೋಗೋರೆಲ್ಲಾ ಇಲ್ಲೇ ಇಳ್ಕೊಳ್ಳಿ. ಅಲ್ಲಿ ಸರ್ಕಾರದ ವಿರುದ್ಧ ದೊಡ್ಡ ಗಲಾಟೆ ನಡಿತಿದೆ ಅಲ್ಲಿ ವಿಮಾನ ಇಳಿಸೋಕೆ ಆಗಲ್ಲ” ಅಂತ ಹೇಳಿದ್ರು. ಅದಕ್ಕೇ ನಾವು ಸೆನೆಗಲ್‌ನಲ್ಲೇ ಇಳ್ಕೊಂಡ್ವಿ. ಅಲ್ಲಿದ್ದ ಮಿಷನರಿಗಳ ಜೊತೆ ನಾವು 10 ದಿನ ಇದ್ವಿ. ಆಗ ಲೈಬೀರಿಯಾದಲ್ಲಿ ಏನು ನಡಿತಿದೆ ಅಂತ ನ್ಯೂಸ್‌ ಕೇಳಿಸ್ಕೊಳ್ತಿದ್ವಿ. ಅಲ್ಲಿ ಗುಂಡಿನ ಚಕಮಕಿ ನಡಿತಿತ್ತು, ಹೆಣಗಳು ರಾಶಿರಾಶಿಯಾಗಿ ಬೀಳ್ತಿತ್ತು. ಸರ್ಕಾರ ಕರ್ಫ್ಯೂ ಹೇರಿತ್ತು. ಯಾರೂ ಮನೆ ಬಿಟ್ಟು ಹೊರಗೆ ಬರೋ ಹಾಗಿರಲಿಲ್ಲ.

ಆ್ಯನ್‌: ಗಲಾಟೆ, ಹೊಡೆದಾಟ, ಬಡಿದಾಟ ಅಂದ್ರೆ ನಮಗೆ ತುಂಬಾನೇ ಭಯ. ಚಿಕ್ಕ ವಯಸ್ಸಿಂದ ನನ್ನನ್ನ ‘ಅಂಜುಬುರುಕಿ ಆ್ಯನ್‌’ ಅಂತನೇ ಕರೀತಿದ್ರು. ರಸ್ತೆ ದಾಟೋಕೂ ನಾನು ಹೆದ್ರುತಿದ್ದೆ, ಆದ್ರೆ ಯೆಹೋವನ ಸೇವೆಗೋಸ್ಕರ ನಾನು ದೇಶ ದಾಟೋಕೂ ರೆಡಿಯಾದೆ!

ಪೌಲ್‌: ನಾನು ಮತ್ತು ಆ್ಯನ್‌ ಪಶ್ಚಿಮ ಇಂಗ್ಲೆಂಡಿನಲ್ಲಿ ಹುಟ್ಟಿದ್ವಿ. ನನ್ನ ಮನೆಯಿಂದ ಆ್ಯನ್‌ ಮನೆಗೆ ಬರೀ 8 ಕಿಲೋ ಮೀಟರ್‌ ದೂರ ಇತ್ತು. ನನ್ನ ಅಪ್ಪಅಮ್ಮ ಮತ್ತು ಆ್ಯನ್‌ನ ಅಮ್ಮ ನಮ್ಮನ್ನ ಪ್ರೋತ್ಸಾಹಿಸಿದ್ರಿಂದ ಹೈಸ್ಕೂಲ್‌ ಆದ ತಕ್ಷಣ ನಾವು ಪಯನೀಯರಿಂಗ್‌ ಶುರು ಮಾಡಿದ್ವಿ. ಜೀವನ ಪೂರ್ತಿ ಪೂರ್ಣ ಸಮಯದ ಸೇವೆ ಮಾಡಬೇಕು ಅನ್ನೋದೇ ನಮ್ಮಿಬ್ರ ಆಸೆ ಆಗಿತ್ತು. ಅದಕ್ಕೆ ಅವ್ರೆಲ್ರೂ ನಮಗೆ ತುಂಬ ಬೆಂಬಲ ಕೊಟ್ರು. ನನಗೆ 19 ವರ್ಷ ಆದಾಗ ನನಗೆ ಬೆತೆಲಲ್ಲಿ ಸೇವೆ ಮಾಡೋ ಅವಕಾಶ ಸಿಕ್ತು. 1982ರಲ್ಲಿ ನಮ್ಮಿಬ್ರಿಗೆ ಮದುವೆ ಆಯ್ತು. ಆಗ ಆ್ಯನ್‌ ಕೂಡ ಬೆತೆಲ್‌ಗೆ ಬಂದಳು.

ಗಿಲ್ಯಡ್‌ ಪದವಿಪ್ರದಾನ, ಸೆಪ್ಟೆಂಬರ್‌ 8, 1985

ಆ್ಯನ್‌: ನಮ್ಮಿಬ್ರಿಗೂ ಬೆತೆಲ್‌ ತುಂಬ ಇಷ್ಟ ಆಯ್ತು. ಆದ್ರೆ ಅಗತ್ಯ ಇರೋ ಕಡೆ ಹೋಗಿ ಸೇವೆ ಮಾಡಬೇಕು ಅನ್ನೋ ಆಸೆ ಇತ್ತು. ಬೆತೆಲಲ್ಲಿದ್ದ ಕೆಲವರು ಮುಂಚೆ ಮಿಷನರಿಗಳಾಗಿ ಸೇವೆ ಮಾಡ್ತಿದ್ರು. ಅವ್ರ ಜೊತೆ ಕೆಲಸ ಮಾಡಿದಾಗ ಅಗತ್ಯ ಇರೋ ಕಡೆ ಹೋಗಬೇಕು ಅನ್ನೋ ಆಸೆ ಇನ್ನೂ ಜಾಸ್ತಿ ಆಯ್ತು. ಅದಕ್ಕೆ ದಿನಾ ರಾತ್ರಿ ಮೂರು ವರ್ಷದ ತನಕ ಅದ್ರ ಬಗ್ಗೆ ಪ್ರಾರ್ಥನೆ ಮಾಡ್ತಿದ್ವಿ. ಕೊನೆಗೂ 1985ರಲ್ಲಿ 79ನೇ ಗಿಲ್ಯಡ್‌ ಶಾಲೆಗೆ ಹೋಗೋಕೆ ಇಬ್ರಿಗೂ ಆಮಂತ್ರಣ ಸಿಕ್ತು. ಆಮೇಲೆ ಪಶ್ಚಿಮ ಆಫ್ರಿಕಾದಲ್ಲಿರೋ ಲೈಬೀರಿಯಾಗೆ ಮಿಷನರಿ ನೇಮಕ ಸಿಕ್ತು.

ಸಹೋದರರ ಪ್ರೀತಿ

ಪೌಲ್‌: ಸೆನೆಗಲ್‌ನಿಂದ ಬಿಟ್ಟ ಮೊದಲನೇ ವಿಮಾನದಲ್ಲೇ ನಾವು ಲೈಬೀರಿಯಾಗೆ ಬಂದ್ವಿ. ಆದ್ರೆ ಅಲ್ಲಿನ ಪರಿಸ್ಥಿತಿ ಏನೂ ಬದಲಾಗಿರಲಿಲ್ಲ, ಇನ್ನೂ ಕರ್ಫ್ಯೂ ಇತ್ತು. ಒಂದಿನ ಮಾರ್ಕೆಟ್‌ನಲ್ಲಿ ಒಂದು ಕಾರಿಂದ ತುಂಬ ಜೋರಾಗಿ ಸೌಂಡ್‌ ಬಂತು. ಆಗ ಜನ ದಿಕ್ಕಾಪಾಲಾಗಿ ಓಡಿಹೋದ್ರು. ನಾವೂ ನಡುಗಿಹೋದ್ವಿ. ಆ ಭಯದಿಂದ ಹೊರಗೆ ಬರೋಕೆ ನಾವಿಬ್ರೂ ಕೀರ್ತನೆ ಪುಸ್ತಕನ ಪ್ರತಿ ರಾತ್ರಿ ಓದ್ತಾ ಇದ್ವಿ. ಮದುವೆಗೆ ಮುಂಚೆ ಆ್ಯನ್‌ ಮಿಷನರಿ ಆಗಿದ್ಳು, ನಾನ್‌ ಬೆತೆಲಲ್ಲಿ ಸೇವೆ ಮಾಡ್ತಿದ್ದೆ. ಆಗ ನಾನು ಜಾನ್‌ ಚೆರೂಕ್‌ a ಅನ್ನೋ ಸಹೋದರನ ಜೊತೆ ಕೆಲಸ ಮಾಡಿದ್ದೆ. ಅವರು ತುಂಬ ವರ್ಷ ಲೈಬೀರಿಯಾದಲ್ಲಿ ಇದ್ದಿದ್ರಿಂದ ಅಲ್ಲಿನ ಸಹೋದರ ಸಹೋದರಿಯರ ಕಷ್ಟ ಏನು ಅಂತ ಅವ್ರಿಗೆ ಚೆನ್ನಾಗಿ ಗೊತ್ತಿತ್ತು. ಹಾಗಾಗಿ ಲೈಬೀರಿಯಾಗೆ ಬರೋ ಮುಂಚೆ ನಾನು ಅವ್ರಿಂದ ತುಂಬ ವಿಷ್ಯ ತಿಳ್ಕೊಂಡಿದ್ದೆ.

ಆ್ಯನ್‌: ಲೈಬೀರಿಯಾ ನಮಗೆ ಬೇಗ ಇಷ್ಟ ಆಗೋಯ್ತು. ಯಾಕಂದ್ರೆ ಅಲ್ಲಿನ ಸಹೋದರ ಸಹೋದರಿಯರು ನಮ್ಮನ್ನ ತುಂಬ ಪ್ರೀತಿಸ್ತಿದ್ರು. ಅವ್ರಿಗೆ ಯೆಹೋವನ ಮೇಲೆನೂ ತುಂಬ ನಂಬಿಕೆ ಇತ್ತು. ನಾವು ಅವ್ರಿಗೆ ಮನೆಯವ್ರ ತರಾನೇ ಆಗಿಬಿಟ್ವಿ. ಅವ್ರನ್ನ ತುಂಬ ಹಚ್ಕೊಂಡುಬಿಟ್ವಿ. ಅವರು ಕೊಟ್ಟ ಸಲಹೆ, ಪ್ರೋತ್ಸಾಹ ನಮಗೆ ಸೇವೆ ಮಾಡೋಕೆ ಶಕ್ತಿ ತುಂಬ್ತು. ಸೇವೆಗೆ ಯಾರ ಮನೆಗಾದ್ರೂ ಹೋದ್ರೆ ಬೇಗ ಅಲ್ಲಿಂದ ಬರೋಕೆ ಆಗ್ತಿರಲಿಲ್ಲ. ಹಾಗೇನಾದ್ರೂ ಬಂದ್ರೆ ಅವರು ಮುನಿಸ್ಕೊಂಡುಬಿಡ್ತಿದ್ರು. ಜನ್ರು ರಸ್ತೆಯಲ್ಲೇ ನಿಂತ್ಕೊಂಡು ಬೈಬಲ್‌ ಬಗ್ಗೆ ಮಾತಾಡೋದು ಸಾಮಾನ್ಯವಾಗಿತ್ತು. ಹಾಗಾಗಿ ನಾವು ರಸ್ತೆಯಲ್ಲಿ ಅವ್ರ ಜೊತೆ ನಿಂತ್ರೆ ಸಾಕಿತ್ತು! ಆ ಊರಲ್ಲಿ ಸಿಕ್ಕಾಪಟ್ಟೆ ಸ್ಟಡಿಗಳೂ ಸಿಕ್ತಿತ್ತು. ಅದನ್ನ ಮಾಡೋಕೆ 24 ಗಂಟೆ ಸಾಕಾಗ್ತಿರಲಿಲ್ಲ.

ಭಯದಲ್ಲೂ ಸಿಕ್ಕ ಬಲ

ಲೈಬೀರಿಯಾ ಬೆತೆಲಿಗೆ ಬಂದ ನಿರಾಶ್ರಿತರನ್ನ ನೋಡ್ಕೊಳ್ತಿರೋದು, 1990

ಪೌಲ್‌: ಲೈಬೀರಿಯಾದಲ್ಲಿ 4 ವರ್ಷ ಏನೂ ತೊಂದ್ರೆ ಇಲ್ಲದೆ ಎಲ್ಲಾ ಚೆನ್ನಾಗಿತ್ತು. ಆದ್ರೆ 1989ರಲ್ಲಿ ಆಂತರಿಕ ಯುದ್ಧ ಶುರು ಆಯ್ತು. ಸರ್ಕಾರದ ವಿರುದ್ಧ ದಂಗೆ ಎದ್ದ ಜನ್ರು 1990ರ ಜುಲೈ 2ರಲ್ಲಿ ಬೆತೆಲ್‌ ಸುತ್ತಮುತ್ತ ಇದ್ದ ಜಾಗನೆಲ್ಲ ತಮ್ಮ ಹತೋಟಿಗೆ ತಗೊಂಡ್ರು. ಇದ್ರಿಂದ 3 ತಿಂಗಳು ನಮಗೆ ಹೊರಗಿನ ಜಗತ್ತಲ್ಲಿ ಏನಾಗ್ತಿದೆ ಅಂತನೇ ಗೊತ್ತಾಗ್ಲಿಲ್ಲ. ಕುಟುಂಬದವ್ರ ಜೊತೆ, ಮುಖ್ಯ ಕಾರ್ಯಾಲಯದಲ್ಲಿದ್ದ ಸಹೋದರರ ಜೊತೆನೂ ಮಾತಾಡೋಕೆ ಆಗ್ಲಿಲ್ಲ. ಎಲ್ಲಿ ನೋಡಿದ್ರೂ ಹಿಂಸೆ, ಹೆಂಗಸ್ರ ಮೇಲೆ ಅತ್ಯಾಚಾರ ನಡೀತಾ ಇತ್ತು. ತಿನ್ನೋಕೂ ಸರಿಯಾಗಿ ಏನೂ ಇರಲಿಲ್ಲ. 14 ವರ್ಷದ ತನಕ ಇಡೀ ದೇಶದ ಪರಿಸ್ಥಿತಿ ಹೀಗೇ ಇತ್ತು.

ಆ್ಯನ್‌: ಅಲ್ಲಿ ಕೆಲವು ಆದಿವಾಸಿ ಗುಂಪಿನ ಜನ್ರು ಬೇರೆ ಆದಿವಾಸಿ ಗುಂಪಿನ ಜನ್ರ ಜೊತೆ ಹೊಡೆದಾಡ್ಕೊಳ್ತಿದ್ರು, ಒಬ್ರನ್ನೊಬ್ರು ಕೊಲ್ತಿದ್ರು. ಇವರು ಸೈನಿಕರ ತರ ಆಯುಧಗಳನ್ನ ಹಿಡ್ಕೊಂಡು, ವಿಚಿತ್ರವಾದ ಬಟ್ಟೆಗಳನ್ನ ಹಾಕೊಂಡು ಬೀದಿಬೀದಿಲಿ ತಿರುಗಾಡ್ತಿದ್ರು. ಒಂದೊಂದು ಮನೆಗೂ ನುಗ್ಗಿ ಕೈಗೆ ಸಿಕ್ಕಿದ್ದನ್ನ ದೋಚ್ಕೊಂಡು ಹೋಗ್ತಿದ್ರು. ಕೋಳಿ ಕೊಯ್ಯೋ ತರ ಜನ್ರನ್ನ ಕೊಲ್ತಿದ್ರು. ರಸ್ತೆಗಳನ್ನೆಲ್ಲ ಬಂದ್‌ ಮಾಡಿ ಇಡ್ತಿದ್ರು. ಯಾರಾದ್ರೂ ತಪ್ಪಿಸ್ಕೊಂಡು ಹೋಗೋಕೆ ನೋಡಿದ್ರೆ ಅವ್ರನ್ನ ಕೊಂದು ಗುಡ್ಡೆ ಹಾಕ್ತಿದ್ರು. ಇದೆಲ್ಲ ಬೆತೆಲ್‌ ಹತ್ರಾನೇ ನಡಿತಿತ್ತು. ದುಃಖದ ವಿಷ್ಯ ಏನಂದ್ರೆ ಅವರು ನಮ್ಮ ಸಹೋದರರನ್ನೂ ಕೊಂದ್ರು. ಅವ್ರಲ್ಲಿ ನಮ್ಮ ಇಬ್ರು ಮಿಷನರಿಗಳೂ ಸತ್ತುಹೋದ್ರು.

ಯಾವ ಆದಿವಾಸಿಗಳನ್ನ ಕೊಲ್ತಿದ್ರೋ ಆ ಜನಾಂಗಕ್ಕೆ ಸೇರಿದ ಸಹೋದರ ಸಹೋದರಿಯರನ್ನ ಬೇರೆ ಸಹೋದರ ಸಹೋದರಿಯರು ತಮ್ಮ ಮನೇಲಿ ಬಚ್ಚಿಟ್ಟು ಅವ್ರ ಪ್ರಾಣ ಕಾಪಾಡಿದ್ರು. ಇದನ್ನ ಅಲ್ಲಿದ್ದ ಮಿಷನರಿಗಳೂ ಬೆತೆಲಲ್ಲಿ ಇದ್ದವರೂ ಮಾಡಿದ್ರು. ಬೆತೆಲಲ್ಲೂ ಕೆಳಗಿನ ಮಹಡಿಯಲ್ಲಿ ಸ್ವಲ್ಪ ಜನ್ರು ಬಚ್ಚಿಟ್ಕೊಂಡ್ರು. ಇನ್ನು ಕೆಲವ್ರನ್ನ ಮೇಲ್ಗಡೆ ಇದ್ದ ರೂಮ್‌ಗಳಲ್ಲಿ ನಾವು ಬಚ್ಚಿಟ್ವಿ. ನಮ್ಮ ರೂಮಲ್ಲಿ 7 ಜನ್ರಿದ್ದ ಒಂದು ಕುಟುಂಬ ಇತ್ತು.

ಪೌಲ್‌: ವಿಚಿತ್ರವಾದ ಬಟ್ಟೆ ಹಾಕೊಂಡಿದ್ದ ಆ ಗಂಡಸ್ರು ಬೆತೆಲಲ್ಲಿ ನಾವು ಯಾರನ್ನಾದ್ರೂ ಬಚ್ಚಿಟ್ಟಿದ್ದೀವಾ ಅಂತ ನೋಡೋಕೆ ದಿನಾ ಬರ್ತಿದ್ರು. ಅದಕ್ಕೆ ನಾವು 4 ಜನ್ರನ್ನ ಸೆಕ್ಯೂರಿಟಿಯಾಗಿ ಇಟ್ವಿ. ಇಬ್ರು ಕಿಟಕಿ ಹತ್ರ ನಿಲ್ತಿದ್ರು, ಇನ್ನಿಬ್ರು ಗೇಟ್‌ ಹತ್ರ ನಿಲ್ತಿದ್ರು. ಗೇಟ್‌ ಹತ್ರ ಇದ್ದವರು ಏನೂ ತೊಂದ್ರೆ ಇಲ್ಲಾಂದ್ರೆ ತಮ್ಮ ಕೈಗಳನ್ನ ಮುಂದೆ ಇಟ್ಕೊಳ್ತಿದ್ರು. ಏನಾದ್ರೂ ತೊಂದ್ರೆ ಇದ್ರೆ ತಮ್ಮ ಕೈಗಳನ್ನ ಹಿಂದೆ ಇಟ್ಕೊಳ್ತಿದ್ರು. ಆಗ ಕಿಟಕಿ ಹತ್ರ ಇದ್ದ ಇಬ್ರು ಓಡಿ ಬಂದು ಸಹೋದರರಿಗೆ ಬಚ್ಚಿಟ್ಕೊಳ್ಳೋಕೆ ಸಹಾಯ ಮಾಡ್ತಿದ್ರು.

ಆ್ಯನ್‌: ಕೆಲವು ವಾರ ಆದ್ಮೇಲೆ ಆ ಗಂಡಸ್ರ ಗುಂಪು ಬೆತೆಲಿಗೆ ನುಗ್ಗೇ ಬಿಡ್ತು. ಆಗ ನಾನು ಮತ್ತೆ ಒಬ್ಬ ಸಹೋದರಿ ಬಾತ್‌ರೂಮಿಗೆ ಓಡಿ ಬಂದು ಬಾಗಿಲು ಹಾಕೊಂಡ್ವಿ. ಆ ಬಾತ್‌ರೂಮಲ್ಲಿ ಶೆಲ್ಫ್‌ ಇರೋ ಒಂದು ಕಬೋರ್ಡ್‌ ಇತ್ತು. ಆ ಶೆಲ್ಫ್‌ ಹಿಂದೆ ಬಚ್ಚಿಟ್ಕೊಳ್ಳೋಕೆ ಸ್ವಲ್ಪ ಜಾಗ ಇತ್ತು. ಅದ್ರಲ್ಲಿ ಬಚ್ಚಿಟ್ಕೊಳ್ಳೋಕೆ ಆ ಸಹೋದರಿ ಅದ್ರ ಒಳಗೆ ತೂರ್ಕೊಂಡು ಹೋಗ್ತಿದ್ರು. ಅಷ್ಟ್ರಲ್ಲಿ ಮಶಿನ್‌ ಗನ್‌ಗಳನ್ನ ಹಿಡ್ಕೊಂಡಿದ್ದ ಆ ಗಂಡಸ್ರು ನನ್ನನ್ನ ಅಟ್ಟಿಸ್ಕೊಂಡು ನಮ್ಮ ರೂಮ್‌ ತನಕ ಬಂದುಬಿಟ್ಟಿದ್ರು. ಅವರು ಬಾತ್‌ರೂಮ್‌ ಬಾಗಿಲನ್ನ ಕೋಪದಿಂದ ಬಡೀತಾ ಇದ್ರು. ಆಗ ಪೌಲ್‌, “ನನ್ನ ಹೆಂಡ್ತಿ ಒಳಗಿದ್ದಾಳೆ, ಸ್ವಲ್ಪ ಇರಿ, ಬರ್ತಾಳೆ” ಅಂತ ಬೇಡ್ಕೊಂಡ್ರು. ನಾನು ಆ ಶೆಲ್ಫನ್ನ ಮತ್ತೆ ಅದೇ ಜಾಗದಲ್ಲಿ ಗಡಿಬಿಡಿಯಲ್ಲಿ ಇಡ್ತಾ ಇದ್ದೆ. ಆಗ ಸೌಂಡ್‌ ಬಂದುಬಿಡ್ತು. ಶೆಲ್ಫಲ್ಲಿ ವಸ್ತುಗಳನ್ನೆಲ್ಲ ಮತ್ತೆ ಜೋಡಿಸಿಡೋಕೆ ಸ್ವಲ್ಪ ಟೈಮೂ ಹಿಡೀತು. ಹಾಗಾಗಿ ಆ ಗಂಡಸ್ರಿಗೆ ನನ್ನ ಮೇಲೆ ಡೌಟ್‌ ಬಂದಿರುತ್ತೆ ಅಂತ ಹೆದರಿ ನಾನು ತಲೆಯಿಂದ ಕಾಲು ತನಕ ನಡುಗ್ತಾ ಇದ್ದೆ. ಬಾಗಿಲು ತೆರಿಯೋಕೆ ಕೈ ಮುಂದೆನೇ ಬರ್ತಿರಲಿಲ್ಲ. ಆಗ ಯೆಹೋವನಿಗೆ ಒಂದು ಚಿಕ್ಕ ಪ್ರಾರ್ಥನೆ ಮಾಡಿ ಹೇಗೋ ಧೈರ್ಯದಿಂದ ಬಾಗಿಲು ತೆರೆದೆ. ಸಮಾಧಾನವಾಗಿ ಅವ್ರಿಗೆ ‘ಹಲೋ’ ಅಂತ ಹೇಳಿದೆ. ಆದ್ರೆ ಅವ್ರಲ್ಲಿ ಒಬ್ಬ ನನ್ನ ತಳ್ಳಿ ಒಳಗೆ ಹೋಗಿ ಕಬೋರ್ಡ್‌ ತೆರೆದು ಶೆಲ್ಫ್‌ನಲ್ಲಿದ್ದ ವಸ್ತುಗಳನ್ನೆಲ್ಲ ಚೆಲ್ಲಾಪಿಲ್ಲಿ ಮಾಡಿ ಹುಡುಕಿದ. ಆದ್ರೆ ಅವನಿಗೇನೂ ಸಿಗ್ಲಿಲ್ಲ! ಆ ಗಂಡಸ್ರು ಬೇರೆ ರೂಮ್‌ಗಳಿಗೂ ಹೋಗಿ ಹುಡುಕಿದ್ರು, ಅಟ್ಟದ ಮೇಲೂ ಹುಡುಕಿದ್ರು. ಆದ್ರೆ ಅವ್ರಿಗೆ ಯಾರೂ ಸಿಗ್ಲಿಲ್ಲ, ಏನೂ ಸಿಗ್ಲಿಲ್ಲ!

ಕಗ್ಗತ್ತಲಲ್ಲೂ ಬೆಳಗಿದ ಸತ್ಯದ ಬೆಳಕು

ಪೌಲ್‌: ಎಷ್ಟೋ ತಿಂಗಳು ನಮಗೆ ಸರಿಯಾಗಿ ಊಟ ಇರ್ಲಿಲ್ಲ. ತಿನ್ನೋಕೆ ಚೂರು-ಪಾರು ಇತ್ತಷ್ಟೆ. ಆಗ ನಮ್ಮ ಜೀವ ಕಾಪಾಡಿದ್ದು ದೇವರ ವಾಕ್ಯನೇ. ಎಷ್ಟೋ ದಿನದ ತನಕ ನಮಗೆ ಮಾರ್ನಿಂಗ್‌ ವರ್ಶಿಪ್ಪೇ ಬೆಳಗ್ಗಿನ ತಿಂಡಿ ಆಗಿತ್ತು. ದಿನಾ ಬೈಬಲ್‌ ಓದಿ ಅಧ್ಯಯನ ಮಾಡಿದ್ರಿಂದ ಕಷ್ಟ-ನೋವನ್ನ ಸಹಿಸ್ಕೊಳ್ಳೋಕೆ ಆಯ್ತು.

ಊಟ-ನೀರು ಖಾಲಿ ಆದ್ರೂ ಅದನ್ನ ತರೋಕೆ ನಾವು ಹೊರಗೆ ಹೋಗ್ತಿರಲಿಲ್ಲ. ಯಾಕಂದ್ರೆ ನಾವು ಇಲ್ಲದೇ ಇದ್ದಾಗ ನಾವು ಬಚ್ಚಿಟ್ಟಿರೋ ಸಹೋದರ ಸಹೋದರಿಯರನ್ನ ಆ ಗಂಡಸ್ರು ಕೊಂದುಬಿಡ್ತಾರೆ ಅನ್ನೋ ಭಯದಲ್ಲೇ ನಾವೆಲ್ಲೂ ಹೋಗ್ತಿರಲಿಲ್ಲ. ಅಂಥ ಸಮಯದಲ್ಲೂ ಯೆಹೋವ ನಮಗೆ ಅದ್ಭುತವಾಗಿ ಊಟ ಸಿಗೋ ತರ ಮಾಡಿದ್ದಾನೆ. ನಮ್ಮನ್ನ ಚೆನ್ನಾಗಿ ನೋಡ್ಕೊಂಡಿದ್ದಾನೆ. ಅಷ್ಟೇ ಅಲ್ಲ ನಾವು ಧೈರ್ಯವಾಗಿ ಇರೋಕೆ ಸಹಾಯ ಮಾಡಿದ್ದಾನೆ.

ಸುತ್ತಮುತ್ತ ಇದ್ದ ಜನ್ರ ಬಾಳಲ್ಲಿ ಕತ್ತಲು ತುಂಬ್ತಾ ಇತ್ತು. ಆದ್ರೆ ಯೆಹೋವನ ಜನ್ರ ಬಾಳಲ್ಲಿ ಬೆಳಕು ಜಾಸ್ತಿ ಆಗ್ತಾನೇ ಹೋಯ್ತು. ಎಷ್ಟೋ ಸಹೋದರ ಸಹೋದರಿಯರು ಒಂದು ಕಡೆಯಿಂದ ಇನ್ನೊಂದು ಕಡೆಗೆ ಓಡಿಹೋಗ್ತಾ ಇದ್ರೂ ಅವ್ರ ಮನಸ್ಸಲ್ಲಿ ಸತ್ಯ, ನಂಬಿಕೆ ಗಟ್ಟಿ ಆಗ್ತಾ ಹೋಯ್ತು. ಅವ್ರಲ್ಲಿ ಕೆಲವರು ಈ ಕಷ್ಟಗಳು “ನಮ್ಮನ್ನ ಮಹಾಸಂಕಟಕ್ಕೆ ರೆಡಿ ಮಾಡ್ತಿದೆ” ಅಂತ ಹೇಳ್ತಿದ್ರು. ಹಿರಿಯರು ಮತ್ತು ಯುವ ಸಹೋದರರು ಕಷ್ಟ ಆದ್ರೂ ಧೈರ್ಯದಿಂದ ಸಹೋದರ ಸಹೋದರಿಯರನ್ನ ಮುನ್ನಡೆಸ್ತಾ ಇದ್ರು. ಬೇರೆ ಕಡೆ ಓಡೋಗಿರೋ ಸಹೋದರ ಸಹೋದರಿಯರು ಒಬ್ರಿಗೊಬ್ರು ಸಹಾಯ ಮಾಡ್ತಿದ್ರು. ಅಲ್ಲೆಲ್ಲಾ ಜನ್ರಿಗೆ ಅವರು ಸಿಹಿಸುದ್ದಿ ಸಾರ್ತಿದ್ರು. ಅವ್ರಿಗೆ ಕಾಡು-ಪೊದೆಗಳೇ ರಾಜ್ಯ ಸಭಾಗೃಹ ಆಗಿತ್ತು. ಅಲ್ಲೇ ಕೂಟಗಳನ್ನ ನಡೆಸ್ತಿದ್ರು. ಆ ಕೂಟಗಳು ಅವ್ರಲ್ಲಿ ಪ್ರೋತ್ಸಾಹ ತುಂಬಿದ್ರೆ, ಸೇವೆ ಅವ್ರಲ್ಲಿ ಧೈರ್ಯ ತುಂಬ್ತು. ಅವ್ರಿಗೆ ಊಟ, ಬಟ್ಟೆ, ಇನ್ನೂ ಬೇರೆ ವಸ್ತುಗಳನ್ನ ಕೊಡೋಕೆ ನಾವು ಹೋಗ್ತಿದ್ವಿ. ಆಗ ಅವರು ಬಟ್ಟೆಗಳ ಬದ್ಲು ಸೇವೆಗೆ ಬ್ಯಾಗ್‌ಗಳನ್ನ ತಂದ್ಕೊಡಿ ಅಂತ ನಮಗೆ ಕೇಳಿದಾಗ ನಮ್ಮ ಕಣ್ಣುತುಂಬಿ ಬಂತು. ಯಾಕಂದ್ರೆ ಅಲ್ಲಿನ ಜನ್ರು ಸಾವು-ನೋವು ನೋಡಿ ಬೇಸತ್ತು ಹೋಗಿದ್ರು. ಹಾಗಾಗಿ ಸಹೋದರ ಸಹೋದರಿಯರು ಸಿಹಿಸುದ್ದಿ ಸಾರಿದಾಗ ಜನ ಚೆನ್ನಾಗಿ ಕೇಳಿಸ್ಕೊಳ್ತಿದ್ರು. ಎಷ್ಟೇ ಕಷ್ಟ ಇದ್ರೂ ಯೆಹೋವನ ಜನ್ರ ಮಧ್ಯ ಇದ್ದ ಪ್ರೀತಿ ಒಗ್ಗಟ್ಟನ್ನ ನೋಡಿ ಅವ್ರಿಗೆ ಆಶ್ಚರ್ಯ ಆಗ್ತಿತ್ತು. ಕತ್ತಲೆ ತುಂಬಿದ ಆ ಜನ್ರ ಬಾಳಿಗೆ ಯೆಹೋವನ ಜನ್ರು ಬೆಳಕಾಗಿದ್ರು. (ಮತ್ತಾ. 5:14-16) ಇವ್ರಲ್ಲಿದ್ದ ಹುರುಪನ್ನ ನೋಡಿನೇ ವಿಚಿತ್ರವಾದ ಬಟ್ಟೆ ಹಾಕೊಂಡಿದ್ದ ಗಂಡಸ್ರಲ್ಲಿ ಕೆಲವರು ಸತ್ಯ ಕಲಿತ್ರು.

ಸಹೋದರರನ್ನ ಬಿಟ್ಟುಹೋದಾಗ

ಪೌಲ್‌: ನಾವು ಆಗಾಗ ಲೈಬೀರಿಯಾ ದೇಶ ಬಿಟ್ಟು ಹೋಗಬೇಕಾಗ್ತಿತ್ತು. ಮೂರು ಸಲ ಸ್ವಲ್ಪ ಸಮಯದ ವರೆಗೆ ಹೋಗಬೇಕಾಯ್ತು. ಇನ್ನೆರಡು ಸಲ ಒಂದೊಂದು ವರ್ಷ ಹೊರಗಡೆ ಇರಬೇಕಾಯ್ತು. ನಾವು ಈ ತರ ಬಿಟ್ಟುಹೋಗುವಾಗ ನಮಗೆ ಹೇಗನಿಸ್ತಿತ್ತೋ ಒಬ್ಬ ಮಿಷನರಿ ಸಹೋದರಿಗೂ ಹಾಗೇ ಅನಿಸ್ತಿತ್ತು. ಅವರು ಹೀಗೆ ಹೇಳಿದ್ರು: “ನಮ್ಮ ನೇಮಕನ ಮನಸ್ಸು ಪೂರ್ತಿಯಾಗಿ ಮಾಡಬೇಕು ಅಂತ ಗಿಲ್ಯಡ್‌ನಲ್ಲಿ ಕಲಿಸಿದ್ರು. ನಾವು ಅದನ್ನೇ ಮಾಡಿದ್ವಿ. ಆದ್ರೆ ಇಂಥ ಕಷ್ಟದ ಪರಿಸ್ಥಿತಿಯಲ್ಲಿ ಸಹೋದರ ಸಹೋದರಿಯರನ್ನ ಬಿಟ್ಟು ಹೋಗುವಾಗ ನಮ್ಮ ಹೃದಯ ಹಿಂಡಿದಂಗೆ ಆಗ್ತಿತ್ತು!” ಆದ್ರೂ ದೇವರ ದಯೆಯಿಂದ ನಾವು ಹತ್ರದ ದೇಶದಲ್ಲೇ ಇದ್ದು ಲೈಬೀರಿಯಾ ಟೆರಿಟೊರಿಗೆ ಸಹಾಯ ಮಾಡೋಕಾಯ್ತು.

ಖುಷಿಖುಷಿಯಾಗಿ ಲೈಬೀರಿಯಾಗೆ ವಾಪಸ್‌ ಹೋಗ್ತಿರೋದು, 1997

ಆ್ಯನ್‌: ಮೇ 1996ರಲ್ಲಿ ಒಂದು ಘಟನೆ ನಡೀತು. ನಾವು 4 ಜನ ಮುಖ್ಯವಾದ ಡಾಕ್ಯುಮೆಂಟ್ಸ್‌ ತಗೊಂಡು ಬೆತೆಲ್‌ ಗಾಡೀಲಿ 16 ಕಿಲೋಮೀಟರ್‌ ದೂರದಲ್ಲಿದ್ದ ಸೇಫಾದ ಒಂದು ಜಾಗಕ್ಕೆ ಹೋಗೋಕೆ ರೆಡಿಯಾದ್ವಿ. ಅದು ನಾವಿದ್ದ ಪಟ್ಟಣದ ಇನ್ನೊಂದು ಭಾಗದಲ್ಲಿತ್ತು. ನಾವು ಗಾಡಿ ಹತ್ತಿ ಇನ್ನೇನು ಹೊರಡಬೇಕು ಅಂತಿದ್ದಾಗ ಆ ಗಂಡಸ್ರು ಬಂದು ದಾಳಿಮಾಡಿದ್ರು. ಅವರು ಮೇಲಕ್ಕೆ ಗುಂಡು ಹಾರಿಸಿ ನಮ್ಮನ್ನ ತಡೆದ್ರು. ಆಮೇಲೆ ನಮ್ಮಲ್ಲಿ ಮೂರು ಜನ್ರನ್ನ ಗಾಡಿಯಿಂದ ಇಳಿಸಿ, ಪೌಲ್‌ನ ಕರ್ಕೊಂಡು ಅವರು ಆ ಗಾಡಿ ಹತ್ಕೊಂಡು ಹೋಗಿಬಿಟ್ರು. ಆಗ ನಾವು ತುಂಬ ಗಾಬರಿಯಿಂದ ಮರಗಟ್ಟಿದ ಹಾಗೆ ಅಲ್ಲೇ ನಿಂತುಬಿಟ್ವಿ. ಆಗ ದಿಡೀರ್‌ ಅಂತ ಜನ್ರ ಗುಂಪಲ್ಲಿ ಪೌಲ್‌ ನಡ್ಕೊಂಡು ಬರೋದು ಕಾಣಿಸ್ತು, ಅವ್ರ ಹಣೆಯಿಂದ ರಕ್ತ ಸುರಿತಿತ್ತು. ಅವ್ರೇನಾದ್ರೂ ಪೌಲ್‌ಗೆ ಗುಂಡು ಹೊಡೆದ್ರಾ ಅಂತ ಕಂಗಾಲಾಗಿ ಹೋದ್ವಿ. ಆದ್ರೆ ಗುಂಡು ಹೊಡೆದಿದ್ರೆ ಪೌಲ್‌ಗೆ ನಡಿಯೋಕೆ ಹೇಗೆ ಆಗ್ತಿತ್ತು? ಅಂತ ಆಮೇಲೆ ಅನಿಸ್ತು. ಆದ್ರೆ ಆಗಿದ್ದೇ ಬೇರೆ. ಒಬ್ಬ ವ್ಯಕ್ತಿ ಪೌಲ್‌ಗೆ ಹೊಡೆದು ಅವ್ರನ್ನ ಗಾಡಿಯಿಂದ ದೊಬ್ಬಿದ್ದ, ಅದಕ್ಕೆ ಅವ್ರಿಗೆ ಗಾಯ ಆಗಿ ರಕ್ತ ಸುರಿತಿತ್ತು. ಯೆಹೋವ ನಮ್ಮನ್ನ ಕಾದು ಕಾಪಾಡಿದ್ರಿಂದಾನೇ ದೊಡ್ಡ ಅನಾಹುತ ಆಗ್ಲಿಲ್ಲ.

ಅಲ್ಲಿ ಒಂದು ಮಿಲಿಟರಿ ಗಾಡಿ ರೆಡಿಯಾಗಿ ನಿಂತಿತ್ತು. ಭಯಬಿದ್ದ ಜನ್ರೆಲ್ಲ ಅದ್ರಲ್ಲಿ ಈಗಾಗ್ಲೇ ತುಂಬಿ ತುಳುಕ್ತಿದ್ರು. ಅದ್ರಲ್ಲಿ ಕಾಲಿಡೋಕೂ ಜಾಗ ಇರ್ಲಿಲ್ಲ. ಹಾಗಾಗಿ ಬೇರೆ ದಾರಿ ಇಲ್ಲದೇ ಒಂದೇ ಕೈಯಲ್ಲಿ ಬಸ್‌ ಕಂಬಿ ಹಿಡ್ಕೊಂಡು ಹೊರಗಡೆ ನೇತಾಡ್ತಿದ್ವಿ. ಅದ್ರಲ್ಲೂ ಆ ಡ್ರೈವರ್‌ ಹೋಗ್ತಿದ್ದ ಸ್ಪೀಡಿಗೆ ನಾವು ಇನ್ನೇನು ಬಿದ್ದುಬಿಡ್ತಿದ್ವಿ. ಅದಕ್ಕೇ ಅವನ ಹತ್ರ ಗಾಡಿ ನಿಲ್ಸಿ ಅಂತ ಕಿರುಚಿದ್ರೂ ಅವನ ಕಿವಿಗೆ ಅದು ಬೀಳಲೇ ಇಲ್ಲ. ಯಾಕಂದ್ರೆ ಅವನೇ ಹೆದ್ರಿ ಕಂಗಾಲಾಗಿ ಹೋಗಿದ್ದ. ಅಂತೂ ಇಂತೂ ಜೀವ ಕೈಯಲ್ಲಿ ಹಿಡ್ಕೊಂಡು ಯಾವುದೋ ಒಂದು ಜಾಗಕ್ಕೆ ತಲುಪಿದ್ವಿ. ಆಗ ಕೈಕಾಲೆಲ್ಲ ನಡುಗ್ತಿತ್ತು, ನಿಂತ್ಕೊಳ್ಳೋಕೇ ಆಗ್ತಿರಲಿಲ್ಲ.

ಪೌಲ್‌: ನಮ್ಮ ಬಟ್ಟೆ ಎಲ್ಲಾ ಹರಿದೋಗಿತ್ತು, ಮೈಯೆಲ್ಲಾ ಮಣ್ಣು-ಧೂಳು ಮೆತ್ಕೊಂಡಿತ್ತು. ನಾವಿನ್ನೂ ಬದುಕಿದ್ದೀವಾ ಅಂತ ನಮಗೇ ಆಶ್ಚರ್ಯ ಆಯ್ತು. ಆಮೇಲೆ ಅಲ್ಲೇ ಇದ್ದ ಬಯಲಲ್ಲಿ ರಾತ್ರಿ ಮಲ್ಕೊಂಡ್ವಿ. ಪಕ್ಕದಲ್ಲಿ ಒಂದು ಹೆಲಿಕಾಪ್ಟರ್‌ ಇತ್ತು. ಆ ಹೆಲಿಕಾಪ್ಟರ್‌ಗೆ ತುಂಬಾನೇ ಬುಲೆಟ್‌ಗಳನ್ನ ಹೊಡೆದಿದ್ರು. ಅದು ಇವತ್ತೋ ನಾಳೆನೋ ಮುರಿದು ಬೀಳೋ ತರ ಇತ್ತು. ಆದ್ರೆ ನಾವು ಅದ್ರಲ್ಲೇ ಮಾರನೇ ದಿನ ಸಿಯೆರಾ ಲಿಯೋನ್‌ಗೆ ಹೋದ್ವಿ. ನಾವೇನೋ ಪ್ರಾಣ ಕಾಪಾಡ್ಕೊಂಡ್ವಿ, ಆದ್ರೆ ಲೈಬೀರಿಯಾದ ಸಹೋದರ ಸಹೋದರಿಯರು ಹೇಗಿರ್ತಾರೋ ಏನೋ ಅಂತ ಸಿಕ್ಕಾಪಟ್ಟೆ ಚಿಂತೆ ಆಯ್ತು.

ಮನಸ್ಸಿನ ತಾಳ ತಪ್ಪಿದಾಗ

ಆ್ಯನ್‌: ಆಮೇಲೆ ನಾವು ಸಿಯೆರಾ ಲಿಯೋನ್‌ನ ಫ್ರೀಟೌನ್‌ ಅನ್ನೋ ಜಾಗದಲ್ಲಿರೋ ಬೆತೆಲ್‌ಗೆ ಬಂದು ತಲುಪಿದ್ವಿ. ಅಲ್ಲಿ ಸುರಕ್ಷಿತವಾಗಿದ್ವಿ, ಅಲ್ಲಿದ್ದವರು ನಮ್ಮನ್ನ ಚೆನ್ನಾಗಿ ನೋಡ್ಕೊಂಡ್ರು. ಆದ್ರೆ ಲೈಬೀರಿಯದಲ್ಲಾದ ಕೆಟ್ಟ ಘಟನೆಗಳೆಲ್ಲ ನನ್ನ ಕಣ್ಮುಂದೆ ಬರ್ತಿತ್ತು. ಹಗಲಲ್ಲಿ ನಾನು ಗಾಬರಿ-ಗಾಬರಿಯಾಗಿ ಇರ್ತಿದ್ದೆ. ನನಗೆ ಏನೋ ಕೆಟ್ಟದಾಗುತ್ತೆ ಅಂತ ಅನಿಸ್ತಿತ್ತು. ಯಾವುದು ನಿಜ, ಯಾವುದು ಭ್ರಮೆ ಅಂತ ಕಂಡು ಹಿಡಿಯೋಕೆ ಕಷ್ಟ ಆಗ್ತಿತ್ತು. ರಾತ್ರಿ ಬೆಚ್ಚಿಬೀಳ್ತಿದ್ದೆ, ಭಯದಲ್ಲಿ ಮೈಯೆಲ್ಲಾ ಬೆವರುತಿತ್ತು, ಉಸಿರಾಡೋಕೆ ಆಗ್ತಿರಲಿಲ್ಲ, ನಿದ್ದೆ ಬರ್ತಿರಲಿಲ್ಲ, ನಡುಗ್ತಾ ಇದ್ದೆ. ಆಗೆಲ್ಲ ನನ್ನ ಗಂಡ ನನ್ನ ಕೈ ಹಿಡ್ಕೊಂಡು ಪ್ರಾರ್ಥನೆ ಮಾಡ್ತಿದ್ರು. ನಡುಕ ನಿಲ್ಲೋ ತನಕ ನಾವಿಬ್ರೂ ರಾಜ್ಯಗೀತೆಗಳನ್ನ ಹಾಡ್ತಿದ್ವಿ. ನಂಗೆ ಹುಚ್ಚು ಹಿಡಿಯುತ್ತೇನೋ, ಇನ್ಮುಂದೆ ಮಿಷನರಿ ಸೇವೆ ಮಾಡೋಕೆ ಆಗಲ್ವೆನೋ ಅಂತ ಭಯ ಆಗ್ತಿತ್ತು.

ಇಂಥ ಪರಿಸ್ಥಿತಿಲಿ ಯೆಹೋವ ನಂಗೆ ಹೇಗೆ ಸಹಾಯ ಮಾಡಿದ ಗೊತ್ತಾ? ಅದೇ ವಾರ ನಮಗೆ ಎರಡು ಪತ್ರಿಕೆಗಳು ಸಿಕ್ತು. ಒಂದು, 1996, ಜೂನ್‌ 8ರ ಎಚ್ಚರ! ಪತ್ರಿಕೆ. ಅದ್ರಲ್ಲಿ “ನೀವು ಬೆಚ್ಚಿ ಬೀಳ್ತಿದ್ದೀರಾ? ಇದನ್ನ ಹೇಗೆ ಜಯಿಸೋದು?” ಅನ್ನೋ ಲೇಖನ ಇತ್ತು. ಇದನ್ನ ಓದಿದಾಗ ನಂಗ್ಯಾಕೆ ಈ ತರ ಆಗ್ತಿದೆ ಅಂತ ಅರ್ಥ ಆಯ್ತು. ಎರಡನೇದು, 1996, ಮೇ 15ರ ಕಾವಲಿನಬುರುಜು. ಅದ್ರಲ್ಲಿ “ಅವರು ತಮ್ಮ ಬಲವನ್ನು ಎಲ್ಲಿಂದ ಪಡೆದುಕೊಳ್ಳುತ್ತಾರೆ?” ಅನ್ನೋ ಲೇಖನ ಇತ್ತು. ಅದ್ರಲ್ಲಿ, ರೆಕ್ಕೆ ಮುರಿದಿರೋ ಒಂದು ಚಿಟ್ಟೆಯ ಚಿತ್ರ ಇತ್ತು. ಚಿಟ್ಟೆಗಳ ರೆಕ್ಕೆ ಮುರಿದ್ರೂ ಗಾಯ ಆದ್ರೂ ಅವು ತಿನ್ನೋದನ್ನ, ಹಾರೋದನ್ನ ನಿಲ್ಲಿಸಲ್ಲ. ಅದೇ ತರ ನಮಗೆಷ್ಟೇ ನೋವಾದ್ರೂ ಯೆಹೋವನ ಸಹಾಯ ಇದ್ರೆ ನಾವು ಬೇರೆಯವ್ರಿಗೆ ಸಹಾಯ ಮಾಡೋಕಾಗುತ್ತೆ ಅನ್ನೋ ಪ್ರೋತ್ಸಾಹ ಸಿಕ್ತು. ಯೆಹೋವನ ಸಹಾಯದಿಂದ ನನಗೆ ಸಮಯಕ್ಕೆ ಸರಿಯಾದ ಬಲ ಸಿಕ್ತು. (ಮತ್ತಾ. 24:45) ಇಂಥ ವಿಷ್ಯಗಳಿದ್ದ ಬೇರೆಬೇರೆ ಲೇಖನಗಳನ್ನ ಹುಡುಕಿ ಅದನ್ನೆಲ್ಲ ಸೇರಿಸಿ ಒಂದು ಬುಕ್‌ ಮಾಡ್ಕೊಂಡೆ. ಅದನ್ನ ಓದ್ತಾ-ಓದ್ತಾ ನನ್ನಲ್ಲಿದ್ದ ಭಯ, ಆತಂಕ ನಿಧಾನವಾಗಿ ಕಮ್ಮಿ ಆಯ್ತು.

ಎಲ್ಲಾ ಹೊಸದು ಅಂತ ಅನಿಸಿದಾಗ

ಪೌಲ್‌: ನಾವು ವಾಪಸ್‌ ಲೈಬೀರಿಯಾಗೆ ಹೋದಾಗೆಲ್ಲಾ ನಮಗೆ ತುಂಬ ಖುಷಿ ಆಗ್ತಿತ್ತು. ನಾವು ಅಲ್ಲಿ 20 ವರ್ಷ ಸೇವೆ ಮಾಡಿದ್ವಿ. 2004ರ ಕೊನೆಯಷ್ಟಕ್ಕೆ ಆಂತರಿಕ ಯುದ್ಧ, ಗಲಾಟೆ ಎಲ್ಲಾ ನಿಂತಿತ್ತು. ಬ್ರಾಂಚ್‌ ಆಫೀಸಲ್ಲಿ ಹೊಸ ಬಿಲ್ಡಿಂಗ್‌ಗಳನ್ನ ಕಟ್ಟೋಕೆ ಪ್ಲ್ಯಾನ್‌ ಆಗ್ತಿತ್ತು. ಎಲ್ಲಾನೂ ಚೆನ್ನಾಗಿ ನಡೀತಿದ್ದಾಗ್ಲೇ ನಮ್ಮ ನೇಮಕನೂ ಬದಲಾಯ್ತು.

ಅಲ್ಲಿನ ಸಹೋದರ ಸಹೋದರಿಯರನ್ನೆಲ್ಲ ಬಿಟ್ಟು ಬರೋಕೆ ತುಂಬ ಕಷ್ಟ ಆಗ್ತಿತ್ತು. ಯಾಕಂದ್ರೆ ಅವರು ನಮಗೆ ಸ್ವಂತ ಕುಟುಂಬದವ್ರ ತರ ಆಗಿದ್ರು. ಗಿಲ್ಯಡ್‌ಗೆ ಹೋಗುವಾಗ್ಲೂ ನಮ್ಮ ಕುಟುಂಬದವ್ರನ್ನ ಬಿಟ್ಟು ಹೋಗೋಕೆ ನಮಗೆ ಇದೇ ತರ ಕಷ್ಟ ಆಗಿತ್ತು. ಆಗ ಯೆಹೋವ ನಮ್ಮನ್ನ ಹೇಗೆಲ್ಲ ಆಶೀರ್ವಾದ ಮಾಡಿದ್ದಾನೆ ಅಂತ ನಾವು ನೋಡಿದ್ವಿ. ಹಾಗಾಗಿ ಘಾನದಲ್ಲಿ ಸೇವೆ ಮಾಡೋ ನೇಮಕನ ಒಪ್ಕೊಂಡ್ವಿ.

ಆ್ಯನ್‌: ನಾವು ಲೈಬೀರಿಯಾ ಬಿಟ್ಟು ಬರುವಾಗ ಅತ್ತಿದ್ದು ಅಷ್ಟಿಷ್ಟಲ್ಲ. ಆಗ ಒಬ್ಬ ವಯಸ್ಸಾದ ಸಹೋದರ “ನೀವು ನಮ್ಮ ಬಗ್ಗೆ ಯೋಚ್ನೆ ಮಾಡ್ತಾ ಕೂರಬೇಡಿ. ನಿಮಗೆ ನಮ್ಮನ್ನ ಮರಿಯೋಕೆ ಆಗಲ್ಲ, ನಿಜಾನೇ. ಆದ್ರೆ ನೀವೀಗ ಅಲ್ಲಿರೋ ಸಹೋದರ ಸಹೋದರಿಯರಿಗೆ ಗಮನಕೊಡಬೇಕು ಅನ್ನೋದು ಯೆಹೋವನ ಇಷ್ಟ. ಅದಕ್ಕೆ ಹೊಸ ನೇಮಕನ ಚೆನ್ನಾಗಿ ಮಾಡಿ” ಅಂತ ಹೇಳಿದ್ರು. ಆ ಸಹೋದರನ ಮಾತುಗಳು ನಮಗೆ ಬಲ ತುಂಬ್ತು. ಆ ಜಾಗ ಹೊಸದಾಗಿದ್ರೂ ಅಲ್ಲಿರೋ ಸಹೋದರ ಸಹೋದರಿಯರು ಹೊಸಬರಾಗಿದ್ರೂ ಆ ನೇಮಕನ ಶುರು ಮಾಡೋಕಾಯ್ತು.

ಪೌಲ್‌: ಘಾನದಲ್ಲಿರೋ ಸಹೋದರ ಸಹೋದರಿಯರು ತುಂಬ ಬೇಗ ನಮಗೆ ಸ್ವಂತ ಕುಟುಂಬದವ್ರ ತರ ಆದ್ರು. ಇಲ್ಲಿ ತುಂಬ ಯೆಹೋವನ ಸಾಕ್ಷಿಗಳಿದ್ದಾರೆ. ಅವ್ರ ನಂಬಿಕೆ, ನಿಯತ್ತನ್ನ ನೋಡಿ ನಾವು ತುಂಬ ಪಾಠಗಳನ್ನ ಕಲಿತ್ವಿ. ಇಲ್ಲಿ 13 ವರ್ಷ ಸೇವೆ ಮಾಡಿದ್ವಿ. ಆಮೇಲೆ ನಮ್ಮನ್ನ ಪೂರ್ವ ಆಫ್ರಿಕಾದಲ್ಲಿರೋ ಕೀನ್ಯಾ ಬ್ರಾಂಚ್‌ಗೆ ಕರೆದ್ರು. ಅಲ್ಲಿಗೆ ಹೋದಾಗ ಲೈಬೀರಿಯಾ ಮತ್ತು ಘಾನದಲ್ಲಿರೋ ಸಹೋದರ ಸಹೋದರಿಯರು ತುಂಬ ನೆನಪಾಗ್ತಿದ್ರು. ಆದ್ರೆ ಕೀನ್ಯಾದಲ್ಲೂ ನಮಗೆ ತುಂಬ ಸ್ನೇಹಿತರು ಸಿಕ್ಕಿದ್ರು. ಅಲ್ಲಿರೋ ಟೆರಿಟೊರಿ ತುಂಬ ದೊಡ್ಡದು. ನಾವಿಗ್ಲೂ ಅಲ್ಲೇ ಸೇವೆ ಮಾಡ್ತಾ ಇದ್ದೀವಿ.

ಪೂರ್ವ ಆಫ್ರಿಕಾದ ಬೆತೆಲಲ್ಲಿ ನಮಗೆ ಸಿಕ್ಕಿದ ಹೊಸ ಫ್ರೆಂಡ್ಸ್‌, 2023

ಜೀವನ ಪಾಠ

ಆ್ಯನ್‌: ತುಂಬ ವರ್ಷಗಳ ಹಿಂದೆ ನನ್ನ ಜೀವನದಲ್ಲಿ ನಡೆದ ಘಟನೆಗಳು ನನ್ನನ್ನ ಬೆಚ್ಚಿಬೀಳಿಸ್ತು, ನನ್ನನ್ನ ನಡುಗಿಸ್ತು. ಇದ್ರಿಂದ ನನ್ನ ಆರೋಗ್ಯ, ಮನಸ್ಸು ಎರಡೂ ಹಾಳಾಯ್ತು. ಈಗ್ಲೂ ನಂಗೆ ಗುಂಡಿನ ಸದ್ದು, ಯುದ್ಧ ವಾಹನಗಳ ಸದ್ದು ಕೇಳಿಸ್ಕೊಂಡಾಗ ಹೊಟ್ಟೇಲಿ ಏನೇನೋ ಆಗುತ್ತೆ. ಕೈಗಳು ಮರಗಟ್ಟುತ್ತೆ. ಈ ತರದ ಘಟನೆಗಳು ನಡೆದಾಗ ಯೆಹೋವ ನಮ್ಮನ್ನ ಅದ್ಭುತವಾಗಿ ಕಾಪಾಡ್ತಾನೆ ಅಂತ ನಾವು ಅಂದ್ಕೊಬಾರದು. ಆದ್ರೆ ಯೆಹೋವ ನಮ್ಮನ್ನ ಬಲಪಡಿಸೋಕೆ ತುಂಬ ಸಹಾಯ ಮಾಡ್ತಾನೆ. ಸಹೋದರ ಸಹೋದರಿಯರಿಂದಾನೂ ನಮಗೆ ಸಹಾಯ ಮಾಡ್ತಾನೆ. ಈ ಎಲ್ಲಾ ಸಹಾಯನೂ ನಾವು ಪಡ್ಕೊಬೇಕು. ಅಷ್ಟೇ ಅಲ್ಲ ಬೈಬಲ್‌ ಓದೋದನ್ನ, ಪ್ರಾರ್ಥನೆ ಮಾಡೋದನ್ನ, ಕೂಟಗಳಿಗೆ ಮತ್ತು ಸೇವೆಗೆ ಹೋಗೋದನ್ನ ಬಿಡಬಾರದು. ಆಗ ಏನೇ ಕಷ್ಟ ಬಂದ್ರೂ ನಮ್ಮ ನೇಮಕನ ಮಾಡ್ತಾ ಇರೋಕೆ ಶಕ್ತಿ ಸಿಗುತ್ತೆ.

ಪೌಲ್‌: ಕೆಲವರು ನಮ್ಮ ಹತ್ರ ‘ನಿಮಗೆ ಮಿಷನರಿ ನೇಮಕ ಇಷ್ಟಾನಾ?’ ಅಂತ ಕೇಳ್ತಾರೆ. ಆಗ ನಾನು ಅವ್ರ ಹತ್ರ ನಮಗೆ ಇಷ್ಟ ಆಗಿರೋ ದೇಶ ಯಾವಾಗ ಬೇಕಾದ್ರೂ ಬದಲಾಗಬಹುದು, ಅಲ್ಲಿ ಸಮಸ್ಯೆಗಳೂ ಬರಬಹುದು. ಅದಕ್ಕೆ ನಾವು ಊರು, ದೇಶಕ್ಕಿಂತ ಅಲ್ಲಿರೋ ಸಹೋದರ ಸಹೋದರಿಯರನ್ನ ಪ್ರೀತಿಸಬೇಕು, ಅವ್ರನ್ನ ಸ್ವಂತ ಕುಟುಂಬದ ತರ ನೋಡಬೇಕು. ಅವ್ರ ಭಾಷೆ, ಊರು ಬೇರೆಬೇರೆ ಆಗಿದ್ರೂ ನಮ್ಮ ಯೋಚ್ನೆ ಒಂದೇ. ನಾವೆಲ್ಲ ಯೆಹೋವನನ್ನೇ ಆರಾಧಿಸ್ತಿದ್ದೀವಿ. ಪ್ರತಿಸಲ ಅವ್ರನ್ನ ಪ್ರೋತ್ಸಾಹಿಸೋಕೆ ಅಂತ ಸಂಘಟನೆ ನಮ್ಮನ್ನ ಕಳಿಸುತ್ತೆ, ಆದ್ರೆ ನಾವೇ ಅವ್ರಿಂದ ಪ್ರೋತ್ಸಾಹ ಪಡ್ಕೊಂಡು ಬರ್ತೀವಿ.

ನಾವು ಒಂದು ಊರಿಂದ ಇನ್ನೊಂದು ಊರಿಗೆ ಹೋದಾಗೆಲ್ಲ “ಅದ್ಭುತ” ನೋಡ್ತಿದ್ವಿ. ಅದು ನಮ್ಮ ಸಹೋದರರೇ! ಯಾಕಂದ್ರೆ ನಾವು ಯಾವುದೇ ಸಭೆಗೆ ಹೋದ್ರೂ ಅಲ್ಲಿನ ಸಹೋದರರು ನಮ್ಮನ್ನ ಸ್ವಂತ ಮನೆಯವ್ರ ತರ ಚೆನ್ನಾಗಿ ನೋಡ್ಕೊಂಡ್ರು. ನಮ್ಮ ಇಷ್ಟು ವರ್ಷದ ಸೇವೆಲಿ ಒಂದು ಮುಖ್ಯವಾದ ಪಾಠ ಕಲಿತ್ವಿ. ಅದೇನಂದ್ರೆ ಏನೇ ಕಷ್ಟ ಬಂದ್ರೂ ನಾವು ಯೆಹೋವನ ಮೇಲೆ ಭಾರ ಹಾಕಿದ್ರೆ ಆ ಕಷ್ಟನ ಸಹಿಸ್ಕೊಳ್ಳೋಕೆ ಆತನು ನಮಗೆ ಶಕ್ತಿ ಕೊಟ್ಟೇ ಕೊಡ್ತಾನೆ. ಯಾವಾಗ್ಲೂ ನಮಗೆ ಆಸರೆಯಾಗಿರ್ತಾನೆ.—ಫಿಲಿ. 4:13.

a ಜಾನ್‌ ಚೆರೂಕ್‌ ಅವ್ರ ಜೀವನ ಕಥೆನ ಮಾರ್ಚ್‌ 15, 1973ರ ಇಂಗ್ಲಿಷ್‌ ಕಾವಲಿನಬುರುಜುವಿನಲ್ಲಿರೋ “ಐ ಆ್ಯಮ್‌ ಗ್ರೇಟ್‌ಫುಲ್‌ ಟು ಗಾಡ್‌ ಆ್ಯಂಡ್‌ ಕ್ರೈಸ್ಟ್‌” ಅನ್ನೋ ಲೇಖನದಲ್ಲಿ ನೋಡಿ.