ತಪ್ಪದೇ ಬೈಬಲ್ ಅಧ್ಯಯನ ಮಾಡೋದು ಹೇಗೆ?
ದಿನಾ ಬೈಬಲ್ ಓದೋಕೆ ನಿಮಗೆ ಕಷ್ಟ ಆಗ್ತಿದ್ಯಾ? ಬೋರಿಂಗ್ ಅನಿಸ್ತಿದ್ಯಾ? ಕೆಲವೊಮ್ಮೆ ನಮ್ಮೆಲ್ರಿಗೂ ಈ ತರ ಅನಿಸೋದು ಸಹಜನೇ. ಆದ್ರೆ ನಾವು ಪ್ರತಿದಿನ ಮಾಡೋ ಕೆಲವೊಂದು ವಿಷ್ಯಗಳನ್ನ ನೆನಪಿಸ್ಕೊಳ್ಳಿ. ಉದಾಹರಣೆಗೆ, ನಾವು ದಿನಾ ಸ್ನಾನ ಮಾಡೋಕೆ ಟೈಮ್ ಹಿಡಿಯುತ್ತೆ. ಆದ್ರೆ ಟೈಮ್ ತಗೊಂಡು ಸ್ನಾನ ಮಾಡಿದ ಮೇಲೆ ಆ ಇಡೀ ದಿನ ಫ್ರೆಶ್ಶಾಗಿ ಇರ್ತೀವಿ. ಅದೇ ತರ ಬೈಬಲ್ ಅಧ್ಯಯನ ಮಾಡೋದು “ದೇವರ ಸಂದೇಶ ಅನ್ನೋ ನೀರಿಂದ” ಶುದ್ಧಮಾಡ್ಕೊಳ್ಳೋ ಹಾಗಿರುತ್ತೆ. ಆಗ ನಮ್ಮ ಮನಸ್ಸು ಇಡೀ ದಿನ ಫ್ರೆಶ್ಶಾಗಿ ಇರುತ್ತೆ. (ಎಫೆ. 5:26) ದಿನಾ ಬೈಬಲ್ ಅಧ್ಯಯನ ಮಾಡೋಕೆ ಸಹಾಯ ಮಾಡೋ ಕೆಲವು ಟಿಪ್ಸ್‌ನ ಈಗ ನೋಡೋಣ ಬನ್ನಿ.
ಶೆಡ್ಯೂಲ್ ಮಾಡ್ಕೊಳಿ. ‘ತುಂಬ ಮುಖ್ಯವಾದ ವಿಷ್ಯಗಳಲ್ಲಿ’ ಬೈಬಲ್ ಅಧ್ಯಯನನೂ ಒಂದು. (ಫಿಲಿ. 1:10) ಅದನ್ನ ನಾವು ಯಾವತ್ತೂ ತಪ್ಪಿಸಬಾರದು. ಅದಕ್ಕೇ ನಾವು ಒಂದು ಶೆಡ್ಯೂಲ್ ಮಾಡ್ಕೊಬೇಕು. ಆ ಶೆಡ್ಯೂಲ್‌ನ ನಮ್ಮ ಕಣ್ಣಿಗೆ ಕಾಣೋ ಜಾಗದಲ್ಲಿ ಅಂಟಿಸಿದ್ರೆ ನಾವು ಅದನ್ನ ಮರೆತುಹೋಗಲ್ಲ. ಉದಾಹರಣೆಗೆ, ಫ್ರಿಡ್ಜ್ ಡೋರ್ ಮೇಲೆ ಅಥವಾ ನೋಟಿಸ್ ಬೋರ್ಡಲ್ಲಿ ಅದನ್ನ ಅಂಟಿಸಬಹುದು. ಇಲ್ಲಾಂದ್ರೆ ನಿಮ್ ಫೋನಲ್ಲಿ ಅಲಾರ್ಮ್ ಇಡಬಹುದು.
ಗಮನ ಕೊಡೋಕೆ ನಿಮಗೆ ಯಾವಾಗ ಸುಲಭ ಆಗುತ್ತೆ ಅಂತ ಅರ್ಥ ಮಾಡ್ಕೊಳ್ಳಿ. ಕೆಲವ್ರಿಗೆ ಒಂದೇ ಸಲ ತುಂಬ ಹೊತ್ತು ಕೂತು ಅಧ್ಯಯನ ಮಾಡೋಕೆ ಇಷ್ಟ ಆಗುತ್ತೆ. ಇನ್ನು ಕೆಲವ್ರಿಗೆ ಬೇರೆಬೇರೆ ಸಮಯದಲ್ಲಿ ಸ್ವಲ್ಪ ಸ್ವಲ್ಪ ಹೊತ್ತು ಕೂತು ಅಧ್ಯಯನ ಮಾಡೋಕೆ ಇಷ್ಟ ಆಗುತ್ತೆ. ನಿಮಗೆ ಯಾವುದು ಇಷ್ಟ ಅಂತ ನಿಮಗೇ ಚೆನ್ನಾಗಿ ಗೊತ್ತಿರುತ್ತೆ. ಹಾಗಾಗಿ ಅದಕ್ಕ ತಕ್ಕ ಹಾಗೆ ಒಂದು ಶೆಡ್ಯೂಲ್ ಮಾಡ್ಕೊಳ್ಳಿ. ಒಂದುವೇಳೆ ನಿಮಗೆ ಅಧ್ಯಯನ ಮಾಡೋಕೆ ಮನಸ್ಸೇ ಬರ್ತಿಲ್ಲಾಂದ್ರೂ ಕಡಿಮೆಪಕ್ಷ 10 ನಿಮಿಷ ಆದ್ರೂ ಅಧ್ಯಯನ ಮಾಡೋಕೆ ಪ್ರಯತ್ನ ಮಾಡಿ. ಆಗ ಅದ್ರಿಂದ ತುಂಬ ಪ್ರಯೋಜನ ಇದೆ, ಏನೂ ಮಾಡದೇ ಇರೋಕಿಂತ ಇದು ಎಷ್ಟೋ ಒಳ್ಳೇದು ಅಂತ ನಿಮಗೆ ಅರ್ಥ ಆಗುತ್ತೆ. ಆಮೇಲೆ ಇನ್ನೂ ಸ್ವಲ್ಪ ಅಧ್ಯಯನ ಮಾಡೋಕೆ ನಿಮಗೆ ಮನಸ್ಸು ಬರುತ್ತೆ.—ಫಿಲಿ. 2:13.
ಯಾವ ವಿಷ್ಯದ ಬಗ್ಗೆ ಅಧ್ಯಯನ ಮಾಡಬೇಕು ಅಂತ ಮುಂಚೆನೇ ಬರೆದಿಡಿ. ಯಾವ ವಿಷ್ಯದ ಬಗ್ಗೆ ಅಧ್ಯಯನ ಮಾಡೋದು ಅಂತ ಯೋಚ್ನೆ ಮಾಡ್ತಾ ಕೂತ್ರೆ “ಮುಖ್ಯವಾದ ವಿಷ್ಯಕ್ಕೆ ಸಮಯ” ಕೊಡೋಕೆ ಆಗಲ್ಲ. (ಎಫೆ. 5:16) ಅದಕ್ಕೇ ಕೆಲವು ವಿಷ್ಯಗಳನ್ನ ಮುಂಚೆನೇ ಪಟ್ಟಿಮಾಡ್ಕೊಳ್ಳಿ. ನಿಮಗೆ ಬರೋ ಪ್ರಶ್ನೆಗಳನ್ನ ಬರೆದಿಟ್ಕೊಳ್ಳಿ. ಅಧ್ಯಯನ ಮಾಡುವಾಗ ಯಾವುದಾದ್ರು ವಿಷ್ಯ ಅರ್ಥ ಆಗಿಲ್ಲಾಂದ್ರೆ ಅಥವಾ ಅದ್ರ ಬಗ್ಗೆ ಇನ್ನೂ ಜಾಸ್ತಿ ವಿಷ್ಯ ತಿಳ್ಕೊಬೇಕು ಅಂತ ಅನಿಸಿದ್ರೆ ಅದನ್ನೂ ಬರೆದಿಡಿ.
ಅವಶ್ಯಕತೆಗೆ ತಕ್ಕ ಹಾಗೆ ಬದಲಾವಣೆಗಳನ್ನ ಮಾಡ್ಕೊಳಿ. ನಿಮ್ ಶೆಡ್ಯೂಲಲ್ಲಿ ಕೆಲವೊಂದು ಬದಲಾವಣೆಗಳನ್ನ ಮಾಡ್ಕೊಳ್ಳೋಕೆ ಯಾವಾಗ್ಲೂ ರೆಡಿ ಇರಿ. ಉದಾಹರಣೆಗೆ, ಎಷ್ಟು ಹೊತ್ತು ಅಧ್ಯಯನ ಮಾಡ್ತೀರ, ಯಾವ ವಿಷ್ಯದ ಬಗ್ಗೆ ಅಧ್ಯಯನ ಮಾಡ್ತೀರ ಅನ್ನೋದನ್ನ ನಿಮ್ಮ ಪರಿಸ್ಥಿತಿಗೆ ತಕ್ಕ ಹಾಗೆ ಬದಲಾಯಿಸ್ಕೊಳ್ಳಿ. ಯಾಕಂದ್ರೆ ನೀವು ಯಾವಾಗ, ಎಷ್ಟು ಹೊತ್ತು ಮತ್ತು ಯಾವ ವಿಷ್ಯದ ಬಗ್ಗೆ ಅಧ್ಯಯನ ಮಾಡ್ತೀರ ಅನ್ನೋದಕ್ಕಿಂತ ಎಷ್ಟರ ಮಟ್ಟಿಗೆ ತಪ್ಪದೆ ಮಾಡ್ತೀರ ಅನ್ನೋದೇ ಮುಖ್ಯ.
ನಾವು ತಪ್ಪದೇ ಬೈಬಲ್ ಅಧ್ಯಯನ ಮಾಡೋದ್ರಿಂದ ತುಂಬ ಪ್ರಯೋಜನ ಇದೆ. ಯೆಹೋವನಿಗೆ ಹತ್ರ ಆಗ್ತೀವಿ, ಜೀವನದಲ್ಲಿ ಸರಿಯಾಗಿರೋ ನಿರ್ಧಾರಗಳನ್ನ ಮಾಡ್ತೀವಿ, ನಮಗೆ ಹೊಸಬಲನೂ ಸಿಗುತ್ತೆ.—ಯೆಹೋ. 1:8.