ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 45

ಗೀತೆ 138 ಸುಂದರ ಕಿರೀಟ–ಬೆಳ್ಳಿ ಕೂದಲು

ದೇವರ ಸೇವಕರ ಮಾತುಗಳು ಕಲಿಸೋ ಮುತ್ತಿನಂಥ ಪಾಠಗಳು

ದೇವರ ಸೇವಕರ ಮಾತುಗಳು ಕಲಿಸೋ ಮುತ್ತಿನಂಥ ಪಾಠಗಳು

“ವಯಸ್ಸಾದವರಲ್ಲಿ ವಿವೇಕ ಇರುತ್ತೆ, ತುಂಬ ಕಾಲ ಬದುಕಿದವರಲ್ಲಿ ತಿಳುವಳಿಕೆ ಇರುತ್ತೆ.”ಯೋಬ 12:12.

ಈ ಲೇಖನದಲ್ಲಿ ಏನಿದೆ?

ಯೆಹೋವ ದೇವರ ಮಾತನ್ನ ಕೇಳಿದ್ರೆ ಈಗ ಆಶೀರ್ವಾದಗಳು ಸಿಗುತ್ತೆ, ಮುಂದೆ ಶಾಶ್ವತ ಜೀವ ಸಿಗುತ್ತೆ.

1. ನಾವ್ಯಾಕೆ ವಯಸ್ಸಾಗಿರೋರ ಮಾತನ್ನ ಕೇಳಬೇಕು?

 ಜೀವನದಲ್ಲಿ ಸರಿಯಾದ ತೀರ್ಮಾನಗಳನ್ನ ಮಾಡೋಕೆ ನಮಗೆ ಬೇರೆಯವ್ರ ಸಹಾಯ ಬೇಕು. ಅದನ್ನ ನಾವು ನಮ್ಮ ಸಭೆಲಿರೋ ಹಿರಿಯರಿಂದ ಅಥವಾ ಅನುಭವ ಇರೋ ಸಹೋದರ-ಸಹೋದರಿಯರಿಂದ ಪಡ್ಕೊಬಹುದು. ಕೆಲವು ಸಲ ವಯಸ್ಸಾಗಿರೋರು ಕೊಡೋ ಸಲಹೆ ಹಳೇ ಕಾಲದ್ದು, ನಮಗೆ ಅದ್ರಿಂದ ಪ್ರಯೋಜ್ನ ಇಲ್ಲ ಅಂತ ಅನಿಸಬಹುದು. ಆದ್ರೆ ನಾವು ವಯಸ್ಸಾಗಿರೋರ ಮಾತನ್ನ ಕೇಳಬೇಕಂತ ಯೆಹೋವ ಇಷ್ಟಪಡ್ತಾನೆ. ಅದೂ ಅಲ್ದೆ ಅವ್ರಿಗೆ ನಮಗಿಂತ ಜಾಸ್ತಿ ಅನುಭವ, ಬುದ್ಧಿ, ತಿಳುವಳಿಕೆ ಇರುತ್ತೆ.—ಯೋಬ 12:12.

2. ಈ ಲೇಖನದಲ್ಲಿ ನಾವು ಏನು ಕಲಿತೀವಿ?

2 ಬೈಬಲ್‌ ಕಾಲದಲ್ಲಿ ಯೆಹೋವ ದೇವರು ತನ್ನ ಜನ್ರನ್ನ ಹುರಿದುಂಬಿಸೋಕೆ, ಅವ್ರಿಗೆ ಮಾರ್ಗದರ್ಶನ ಕೊಡೋಕೆ ವಯಸ್ಸಾದವ್ರನ್ನ ಉಪಯೋಗಿಸಿದ್ದಾನೆ. ಅದ್ರಲ್ಲಿ ಕೆಲವರು ಮೋಶೆ, ದಾವೀದ ಮತ್ತು ಅಪೊಸ್ತಲ ಯೋಹಾನ. ಇವರು ಬೇರೆಬೇರೆ ಕಾಲದಲ್ಲಿ, ಬೇರೆಬೇರೆ ಸನ್ನಿವೇಶದಲ್ಲಿ ಬದುಕಿದ್ರು. ಅವ್ರ ಜೀವನದ ಕೊನೆ ಕ್ಷಣಗಳಲ್ಲಿ ಅವರು ಯುವಜನ್ರಿಗೆ ಒಳ್ಳೇ ಬುದ್ಧಿಮಾತುಗಳನ್ನ ಹೇಳಿ ಹೋಗಿದ್ದಾರೆ. ಅದ್ರಲ್ಲೂ ದೇವರ ಮಾತನ್ನ ಕೇಳೋದು ಯಾಕೆ ಒಳ್ಳೇದು ಅಂತ ಅರ್ಥಮಾಡಿಸಿದ್ದಾರೆ. ಈ ಬುದ್ಧಿಮಾತುಗಳನ್ನ ಯೆಹೋವ ದೇವರು ನಮಗೋಸ್ಕರ ಬೈಬಲಲ್ಲಿ ಬರಿಸಿಟ್ಟಿದ್ದಾನೆ. ಇವುಗಳಿಗೆ ಗಮನ ಕೊಡೋದ್ರಿಂದ ಚಿಕ್ಕವರಿಂದ ಹಿಡಿದು ದೊಡ್ಡವರ ತನಕ ಎಲ್ರಿಗೂ ಪ್ರಯೋಜ್ನ ಆಗುತ್ತೆ. (ರೋಮ. 15:4; 2 ತಿಮೊ. 3:16) ಈ ಮೂರು ದೇವಸೇವಕರು ಯಾವ ಬುದ್ಧಿಮಾತನ್ನ ಹೇಳಿದ್ರು ಮತ್ತು ಅದ್ರಿಂದ ನಮಗೇನು ಪಾಠ ಅನ್ನೋದನ್ನ ಈ ಲೇಖನದಲ್ಲಿ ನೋಡೋಣ.

‘ನೀವು ತುಂಬ ವರ್ಷ ಬದುಕ್ತೀರ’

3. ಮೋಶೆ ಯೆಹೋವನ ಸೇವೆಲಿ ಏನೆಲ್ಲ ಮಾಡಿದ?

3 ಮೋಶೆ ತನ್ನ ಇಡೀ ಜೀವನನೇ ಯೆಹೋವನಿಗೆ ಕೊಟ್ಟಿದ್ದ. ಅವನು ಒಬ್ಬ ಪ್ರವಾದಿಯಾಗಿದ್ದ, ನ್ಯಾಯಾಧೀಶನಾಗಿದ್ದ, ಸೇನಾಧಿಪತಿಯಾಗಿದ್ದ ಮತ್ತು ಬೈಬಲ್‌ ಬರಹಗಾರನೂ ಆಗಿದ್ದ. ಮೋಶೆಗೆ ಜೀವನದಲ್ಲಿ ತುಂಬ ಅನುಭವ ಇತ್ತು! ಅವನು ಇಸ್ರಾಯೇಲ್ಯರನ್ನ ಈಜಿಪ್ಟಿಂದ ಬಿಡಿಸ್ಕೊಂಡು ಬಂದಿದ್ದ. ಜೊತೆಗೆ ಯೆಹೋವ ಮಾಡಿರೋ ಎಷ್ಟೋ ಅದ್ಭುತಗಳನ್ನ ಕಣ್ಣಾರೆ ನೋಡಿದ್ದ. ಅವನು ಬೈಬಲಿನ ಮೊದಲ 5 ಪುಸ್ತಕಗಳನ್ನ ಮತ್ತು 90ನೇ ಕೀರ್ತನೆನ ಬರೆದ. ಅದ್ರ ಜೊತೆಗೆ 91ನೇ ಕೀರ್ತನೆ ಮತ್ತು ಯೋಬ ಪುಸ್ತಕನೂ ಬರೆದಿರಬಹುದು.

4. ಮೋಶೆ ಸಾಯೋ ಮುಂಚೆ ಯಾರಿಗೆ ಪ್ರೋತ್ಸಾಹ ಕೊಟ್ಟ? ಯಾಕೆ?

4 ಮೋಶೆಗೆ 120 ವರ್ಷ ಆಗಿದ್ದಾಗ ಅಂದ್ರೆ ಅವನು ಸಾಯೋಕ್ಕಿಂತ ಮುಂಚೆ ಎಲ್ಲ ಇಸ್ರಾಯೇಲ್ಯರನ್ನ ಕರೆದು ಯೆಹೋವ ಇಲ್ಲಿವರೆಗೂ ಅವ್ರಿಗೆ ಏನೆಲ್ಲ ಮಾಡಿದ್ದಾನೆ ಅನ್ನೋದನ್ನ ನೆನಪಿಸಿದ. ಅವ್ರಲ್ಲಿ ಕೆಲವರು ಸ್ವಲ್ಪ ವರ್ಷಗಳ ಹಿಂದೆ ಯೆಹೋವ ಮಾಡಿದ ಅದ್ಭುತಗಳನ್ನ, ಈಜಿಪ್ಟಿನವ್ರಿಗೆ ಶಿಕ್ಷೆ ಕೊಟ್ಟಿದ್ದನ್ನ ಕಣ್ಣಾರೆ ನೋಡಿದ್ರು. (ವಿಮೋ. 7:3, 4) ಅಷ್ಟೇ ಅಲ್ಲ, ಯೆಹೋವ ಕೆಂಪು ಸಮುದ್ರನ ಭಾಗ ಮಾಡಿದ ಮೇಲೆ ಅವರು ಅದನ್ನ ದಾಟ್ಕೊಂಡು ಹೋದ್ರು. ಆಮೇಲೆ ಆತನು ಫರೋಹ ಮತ್ತು ಅವನ ಸೈನ್ಯನ ನಾಶಮಾಡಿದ್ದನ್ನ ನೋಡಿದ್ರು. (ವಿಮೋ. 14:29-31) ಅವರು ಕಾಡಲ್ಲಿದ್ದಾಗ ಯೆಹೋವ ದೇವರು ಅವ್ರಿಗೆ ಯಾವ ಕೊರತೆನೂ ಆಗದೆ ಇರೋ ತರ ನೋಡ್ಕೊಂಡಿದ್ದನ್ನ ಮತ್ತು ಅವ್ರನ್ನ ಕಾದು ಕಾಪಾಡಿದ್ದನ್ನ ನೋಡಿದ್ರು. (ಧರ್ಮೋ. 8:3, 4) ಇಸ್ರಾಯೇಲ್ಯರು ಇನ್ನೇನು ಮಾತುಕೊಟ್ಟಿದ್ದ ದೇಶಕ್ಕೆ ಹೋಗೋಕಿದ್ರು, ಅದಕ್ಕೇ ಮೋಶೆ ತಾನು ಸಾಯೋ ಮುಂಚೆ ಅವ್ರಿಗೆ ಪ್ರೋತ್ಸಾಹ ಕೊಡೋಕೆ ಇದನ್ನೆಲ್ಲ ಹೇಳಿದ. a

5. ಮೋಶೆ ಇಸ್ರಾಯೇಲ್ಯರಿಗೆ ಏನು ನೆನಪಿಸಿದ? (ಧರ್ಮೋಪದೇಶಕಾಂಡ 30:19, 20)

5 ಮೋಶೆ ಏನು ಹೇಳಿದ? (ಧರ್ಮೋಪದೇಶಕಾಂಡ 30:19, 20 ಓದಿ.) ಮುಂದೆ ಇಸ್ರಾಯೇಲ್ಯರ ಜೀವನ ತುಂಬ ಚೆನ್ನಾಗಿರುತ್ತೆ ಅನ್ನೋದನ್ನ ನೆನಪು ಹುಟ್ಟಿಸಿದ. ಯೆಹೋವನ ಆಶೀರ್ವಾದದಿಂದ ಮಾತು ಕೊಟ್ಟ ದೇಶದಲ್ಲಿ ಅವರು ತುಂಬ ದಿನ ಬದುಕಿ ಬಾಳಬಹುದಿತ್ತು. ಆ ದೇಶ ಎಷ್ಟು ಸುಂದರವಾಗಿತ್ತಂದ್ರೆ, ಅದ್ರ ಬಗ್ಗೆ ಮೋಶೆ, “ನೀವು ಕಟ್ಟದಿದ್ದ ಅತ್ಯುತ್ತಮವಾದ ದೊಡ್ಡದೊಡ್ಡ ಪಟ್ಟಣಗಳನ್ನ ನಿಮಗೆ ಕೊಡ್ತಾನೆ. ನೀವು ದುಡಿದು ಸಂಪಾದಿಸದೆ ಇದ್ದ ಎಲ್ಲ ತರದ ಒಳ್ಳೇ ವಸ್ತುಗಳು ತುಂಬಿರೋ ಮನೆ, ನೀವು ಅಗೆಯದಿದ್ದ ನೀರು ಗುಂಡಿ, ನೆಟ್ಟು ಬೆಳೆಸದಿದ್ದ ದ್ರಾಕ್ಷಿತೋಟ ಆಲಿವ್‌ ಮರಗಳನ್ನ ಕೊಡ್ತಾನೆ” ಅಂತ ಹೇಳಿದ.—ಧರ್ಮೋ. 6:10, 11.

6. ಬೇರೆ ದೇಶದವರು ಇಸ್ರಾಯೇಲ್ಯರನ್ನ ವಶಮಾಡ್ಕೊಳ್ಳೋಕೆ ಯೆಹೋವ ಯಾಕೆ ಬಿಟ್ಟುಬಿಟ್ಟನು?

6 ಮೋಶೆ ಇಸ್ರಾಯೇಲ್ಯರಿಗೆ ಒಂದು ಎಚ್ಚರಿಕೆ ಕೊಟ್ಟ. ಅವರು ಮಾತು ಕೊಟ್ಟ ದೇಶದಲ್ಲಿ ಇರಬೇಕಂದ್ರೆ ಯೆಹೋವನ ಮಾತನ್ನ ಕೇಳಬೇಕು ಅಂತ ಅವ್ರಿಗೆ ಹೇಳಿದ. ಜೊತೆಗೆ ಯೆಹೋವನ ಮಾತನ್ನ ಕೇಳ್ತಾ, ಆತನಿಗೆ ‘ನಿಷ್ಠೆಯಿಂದ ಇದ್ದು’ ‘ಜೀವವನ್ನ ಆರಿಸ್ಕೊಳ್ಳೋಕೆ’ ಹೇಳಿದ. ಆದ್ರೂ ಇಸ್ರಾಯೇಲ್ಯರು ಯೆಹೋವನ ಮಾತು ಕೇಳೋದನ್ನ ಬಿಟ್ಟುಬಿಟ್ರು. ಅದಕ್ಕೇ ಯೆಹೋವ ಅವ್ರನ್ನ ಅಶ್ಶೂರದವರು, ಆಮೇಲೆ ಬಾಬೆಲ್‌ನವರು ವಶಮಾಡ್ಕೊಂಡು ಕೈದಿಗಳಾಗಿ ಕರ್ಕೊಂಡು ಹೋಗೋಕೆ ಬಿಟ್ಟುಬಿಟ್ಟನು.—2 ಅರ. 17:6-8, 13, 14; 2 ಪೂರ್ವ. 36:15-17, 20.

7. ಮೋಶೆ ಹೇಳಿದ ಮಾತಿಂದ ನಮಗೇನು ಪಾಠ? (ಚಿತ್ರ ನೋಡಿ.)

7 ನಮಗೇನು ಪಾಠ? ಮಾತು ಕೇಳೋದು ನಮ್ಮ ಜೀವ ಉಳಿಸುತ್ತೆ. ಇಸ್ರಾಯೇಲ್ಯರು ಮಾತು ಕೊಟ್ಟ ದೇಶಕ್ಕೆ ಇನ್ನೇನು ಕಾಲು ಇಡೋಕಿದ್ರು. ನಾವೂ ಅವ್ರ ತರಾನೇ ಹೊಸ ಲೋಕಕ್ಕೆ ಹೋಗಕ್ಕೆ ಕಾಯ್ತಾ ಇದ್ದೀವಿ. ಆಗ ಇಡೀ ಭೂಮಿ ಮತ್ತೆ ಸುಂದರ ತೋಟ ಆಗುತ್ತೆ. (ಯೆಶಾ. 35:1; ಲೂಕ 23:43) ಅಲ್ಲಿ ಸೈತಾನ ಆಗ್ಲಿ ಅವನ ಜೊತೆ ಇರೋ ಕೆಟ್ಟ ದೇವದೂತರಾಗ್ಲಿ ಇರಲ್ಲ. (ಪ್ರಕ. 20:2, 3) ಯೆಹೋವ ದೇವರಿಂದ ಜನ್ರನ್ನ ತುಂಬ ದೂರ ಕರ್ಕೊಂಡು ಹೋಗ್ತಿರೋ ಸುಳ್ಳು ಧರ್ಮಗಳೂ ಇರಲ್ಲ. (ಪ್ರಕ. 17:16) ಆಮೇಲೆ ದಬ್ಬಾಳಿಕೆ ನಡಿಸ್ತಿರೋ ಮನುಷ್ಯರ ಸರ್ಕಾರನೂ ಇಲ್ಲದೆ ಹೋಗುತ್ತೆ. (ಪ್ರಕ. 19:19, 20) ಹೊಸ ಲೋಕದಲ್ಲಿ ತೊಂದ್ರೆ ಕೊಡೋರು ಯಾರೂ ಇರಲ್ಲ. (ಕೀರ್ತ. 37:10, 11) ಅಲ್ಲಿರೋ ಪ್ರತಿಯೊಬ್ರು ಯೆಹೋವನ ನೀತಿ-ನಿಯಮನಾ ಪಾಲಿಸ್ತಾ ಇರ್ತಾರೆ. ಇದ್ರಿಂದ ಅವ್ರ ಮಧ್ಯ ಒಗ್ಗಟ್ಟು, ಶಾಂತಿ ಇರುತ್ತೆ. ಆಗ ಒಬ್ರ ಮೇಲೆ ಒಬ್ರಿಗೆ ಪ್ರೀತಿ, ನಂಬಿಕೆ ಇರುತ್ತೆ. (ಯೆಶಾ. 11:9) ನಾವು ಆ ದಿನಕ್ಕೋಸ್ಕರ ಕಾಯ್ತಾ ಇದ್ದೀವಿ ಅಲ್ವಾ? ನಾವು ಯೆಹೋವ ದೇವರ ಮಾತನ್ನ ಕೇಳಿದ್ರೆ ಹೊಸ ಲೋಕದಲ್ಲಿ ಬರೀ ನೂರಾರು ವರ್ಷ ಅಷ್ಟೇ ಅಲ್ಲ ಶಾಶ್ವತವಾಗಿ ಬದುಕೋ ಅವಕಾಶ ನಮಗೆ ಸಿಗುತ್ತೆ.—ಕೀರ್ತ. 37:29; ಯೋಹಾ. 3:16.

ಯೆಹೋವ ದೇವರ ಮಾತನ್ನ ಕೇಳಿದ್ರೆ ಹೊಸ ಲೋಕದಲ್ಲಿ ಬರೀ ನೂರಾರು ವರ್ಷ ಅಷ್ಟೇ ಅಲ್ಲ ಶಾಶ್ವತವಾಗಿ ಬದುಕೋ ಅವಕಾಶ ನಮಗೆ ಸಿಗುತ್ತೆ (ಪ್ಯಾರ 7 ನೋಡಿ)


8. ಯೆಹೋವ ದೇವರು ಕೊಟ್ಟಿರೋ ಮಾತು ಒಬ್ಬ ಸಹೋದರನಿಗೆ ಹೇಗೆ ಸಹಾಯ ಮಾಡ್ತು? (ಯೂದ 20, 21)

8 ಶಾಶ್ವತ ಜೀವ ಕೊಡ್ತೀನಿ ಅಂತ ದೇವರು ಕೊಟ್ಟಿರೋ ಮಾತನ್ನ ನಾವು ಯಾವಾಗ್ಲೂ ಮನಸ್ಸಲ್ಲಿ ಇಟ್ಕೊಬೇಕು. ಆಗ ಎಷ್ಟೇ ಕಷ್ಟ ಬಂದ್ರೂ ಯೆಹೋವ ದೇವರ ಮಾತು ಕೇಳೋದನ್ನ ನಾವು ಬಿಟ್ಟುಬಿಡಲ್ಲ. (ಯೂದ 20, 21 ಓದಿ.) ಅಷ್ಟೇ ಅಲ್ಲ, ಇದು ನಮಗಿರೋ ಬಲಹೀನತೆಗಳ ಜೊತೆ ಹೋರಾಡೋಕೆ ಶಕ್ತಿ ಕೊಡುತ್ತೆ. ಆಫ್ರಿಕಾದಲ್ಲಿ ತುಂಬ ವರ್ಷಗಳಿಂದ ಮಿಷನರಿಯಾಗಿ ಸೇವೆ ಮಾಡ್ತಿದ್ದ ಒಬ್ಬ ಸಹೋದರನ ಉದಾಹರಣೆ ನೋಡಿ. ಯೆಹೋವನಿಗೆ ಇಷ್ಟ ಆಗದೆ ಇರೋ ವಿಷ್ಯನ ಮಾಡೋಕೆ ಅವ್ರ ಮನಸ್ಸು ಎಳಿತಾ ಇತ್ತು. ಅದ್ರ ಬಗ್ಗೆ ಅವರು, “ಯೆಹೋವ ದೇವರ ಮಾತು ಕೇಳಿದ್ರೆ ಮಾತ್ರ ಶಾಶ್ವತವಾಗಿ ಇರೋಕೆ ಆಗೋದು ಅಂತ ಅರ್ಥ ಮಾಡ್ಕೊಂಡಿದ್ರಿಂದ ನಂಗಿರೋ ಬಲಹೀನತೆ ವಿರುದ್ಧ ಹೋರಾಡೋಕೆ ಶಕ್ತಿ ಸಿಕ್ತು. ಅಷ್ಟೇ ಅಲ್ಲ ‘ಇದ್ರಿಂದ ಹೊರಗೆ ಬರೋಕೆ ಸಹಾಯ ಮಾಡಪ್ಪಾ’ ಅಂತ ಯೆಹೋವ ದೇವರ ಹತ್ರ ಪದೇಪದೇ ಕೇಳ್ಕೊಳ್ತಾ ಇದ್ದೆ. ಹೀಗೆ ಕೊನೆಗೂ ಆ ಬಲಹೀನತೆಯನ್ನ ಜಯಿಸಿದೆ” ಅಂತ ಹೇಳ್ತಾರೆ.

‘ನೀವು ಯಶಸ್ಸು ಪಡಿತೀರ’

9. ದಾವೀದ ತನ್ನ ಜೀವನದಲ್ಲಿ ಯಾವೆಲ್ಲ ಕಷ್ಟಗಳನ್ನ ಅನುಭವಿಸಿದ?

9 ದಾವೀದ ಒಬ್ಬ ಒಳ್ಳೇ ರಾಜ ಆಗಿದ್ದ. ಜೊತೆಗೆ ಅವನೊಬ್ಬ ಸಂಗೀತಗಾರ, ಕವಿ, ಯುದ್ಧವೀರ ಮತ್ತು ಪ್ರವಾದಿಯಾಗಿದ್ದ. ಅವನು ಜೀವನದಲ್ಲಿ ತುಂಬ ಕಷ್ಟಗಳನ್ನ ಅನುಭವಿಸಿದ. ಕೆಲವು ವರ್ಷಗಳು ಅವನು ಅಲೆಮಾರಿ ತರ ಅಲೀಬೇಕಾಯ್ತು. ಯಾಕಂದ್ರೆ ರಾಜ ಸೌಲ ಅವನನ್ನ ಸಾಯಿಸಬೇಕಂತ ಹುಡುಕಾಡ್ತಾ ಇದ್ದ. ಅವನು ರಾಜ ಆದ್ಮೇಲೂ ಅವನ ಜೀವ ಉಳಿಸ್ಕೊಳ್ಳೋಕೆ ಓಡಿಹೋಗಬೇಕಾಯ್ತು. ಯಾಕಂದ್ರೆ ಅವನ ಮಗ ಅಬ್ಷಾಲೋಮ ಅವನನ್ನ ಕೊಂದು ಅವನ ಪಟ್ಟ ಕಿತ್ಕೊಬೇಕು ಅಂತ ಕಾಯ್ತಿದ್ದ. ಇಷ್ಟೆಲ್ಲಾ ಕಷ್ಟ ಬಂದ್ರೂ, ತಾನೇ ತಪ್ಪು ಮಾಡಿದ್ರೂ ದಾವೀದ ಯಾವತ್ತೂ ಯೆಹೋವನಿಂದ ದೂರ ಹೋಗಲಿಲ್ಲ, ಆತನಿಗೆ ಯಾವಾಗ್ಲೂ ನಿಯತ್ತಾಗಿದ್ದ. ಅದಕ್ಕೇ ಯೆಹೋವ “ದಾವೀದ ಅಂದ್ರೆ ನನ್ನ ಮನಸ್ಸಿಗೆ ತುಂಬ ಇಷ್ಟ” ಅಂತ ಹೇಳಿದನು. ಇಂಥ ಒಬ್ಬ ದೇವಸೇವಕ ಹೇಳಿರೋ ಬುದ್ಧಿಮಾತನ್ನ ಕೇಳಿದ್ರೆ ನಮಗೇ ಒಳ್ಳೇದಲ್ವಾ?—ಅ. ಕಾ. 13:22; 1 ಅರ. 15:5.

10. ದಾವೀದ ಸೊಲೊಮೋನನಿಗೆ ಯಾಕೆ ಬುದ್ಧಿಮಾತುಗಳನ್ನ ಹೇಳಿದ?

10 ದಾವೀದ ತನ್ನ ಮಗ ಸೊಲೊಮೋನನಿಗೆ ಕೆಲವೊಂದು ಬುದ್ಧಿಮಾತುಗಳನ್ನ ಹೇಳಿದ. ಯಾಕಂದ್ರೆ ಸೊಲೊಮೋನ ಮುಂದೆ ಇಸ್ರಾಯೇಲ್ಯರ ರಾಜ ಆಗೋಕಿದ್ದ. ಅದೂ ಅಲ್ಲದೆ, ಯೆಹೋವ ದೇವರು ಅವನಿಗೆ ತನ್ನ ಆರಾಧನೆಗೋಸ್ಕರ ಒಂದು ಆಲಯ ಕಟ್ಟೋಕೆ ಹೇಳಿದ. (1 ಪೂರ್ವ. 22:5) ಇದನ್ನೆಲ್ಲ ಮಾಡೋದು ಅಷ್ಟು ಸುಲಭ ಆಗಿರಲಿಲ್ಲ. ಇದನ್ನ ಮಾಡೋಕೆ ಅವನಿಗೆ ಯೆಹೋವನ ಸಹಾಯ ಬೇಕಿತ್ತು. ಹಾಗಾದ್ರೆ ದಾವೀದ ಸೊಲೊಮೋನನಿಗೆ ಯಾವ ಬುದ್ಧಿಮಾತುಗಳನ್ನ ಹೇಳಿದ? ಬನ್ನಿ ಅದನ್ನ ನೋಡೋಣ.

11. ದಾವೀದ ಸೊಲೊಮೋನನಿಗೆ ಯಾವ ಬುದ್ಧಿಮಾತು ಕೊಟ್ಟ? ಅದು ಹೇಗೆ ನಿಜ ಆಯ್ತು? (1 ಅರಸು 2:2, 3; ಚಿತ್ರ ನೋಡಿ.)

11 ದಾವೀದ ಏನು ಹೇಳಿದ? (1 ಅರಸು 2:2, 3 ಓದಿ.) ದಾವೀದ ಸೊಲೊಮೋನನಿಗೆ ಯೆಹೋವ ದೇವರ ಮಾತನ್ನ ಕೇಳಿದ್ರೆ ಜೀವನದಲ್ಲಿ ಯಶಸ್ಸು ಪಡಿತೀಯ ಅಂತ ಹೇಳಿದ. ಈ ಮಾತು ಸೊಲೊಮೋನನ ಜೀವನದಲ್ಲಿ ನಿಜ ಆಯ್ತು. ಅವನು ತುಂಬ ವರ್ಷಗಳವರೆಗೆ ಯೆಹೋವನ ಮಾತನ್ನ ಕೇಳಿದ ಮತ್ತು ಅವನ ಜೀವನದಲ್ಲಿ ತುಂಬ ಯಶಸ್ಸು ಕಂಡ. (1 ಪೂರ್ವ. 29:23-25) ಅವನು ಯೆಹೋವನಿಗೋಸ್ಕರ ಒಂದು ದೊಡ್ಡ ಆಲಯ ಕಟ್ಟಿಸಿದ. ಬೈಬಲಿನ ಕೆಲವು ಪುಸ್ತಕಗಳನ್ನ ಬರೆದ. ಅವನು ಹೇಳಿರೋ ಕೆಲವು ಮಾತುಗಳನ್ನ ನಾವು ಬೈಬಲಿನ ಬೇರೆ ಪುಸ್ತಕಗಳಲ್ಲೂ ನೋಡಬಹುದು. ಅವನು ದೊಡ್ಡ ಶ್ರೀಮಂತ ಆಗಿದ್ದ. ಜೊತೆಗೆ ಅವನಿಗಿರೋ ವಿವೇಕನ ಜನ್ರು ಹಾಡಿಹೊಗಳ್ತಿದ್ರು. (1 ಅರ. 4:34) ಆದ್ರೆ ದಾವೀದ ಹೇಳಿದ ತರ ಸೊಲೊಮೋನ ಎಲ್ಲಿವರೆಗೂ ಯೆಹೋವನ ಮಾತನ್ನ ಕೇಳ್ತಾನೋ ಅಲ್ಲಿವರೆಗೂ ಮಾತ್ರ ಅವನ ಜೀವನದಲ್ಲಿ ಯಶಸ್ಸು ಇರ್ತಿತ್ತು. ದುಃಖದ ವಿಷ್ಯ ಏನಂದ್ರೆ ಸೊಲೊಮೋನ ಬೇರೆ ದೇವರುಗಳನ್ನ ಆರಾಧನೆ ಮಾಡೋಕೆ ಶುರುಮಾಡ್ದ. ಇದು ಯೆಹೋವ ದೇವರಿಗೆ ಇಷ್ಟ ಆಗಲಿಲ್ಲ. ಇದ್ರಿಂದ ಸೊಲೊಮೋನ ಮುಂದೆ ಯೆಹೋವನ ಮೆಚ್ಚಿಗೆನೂ ಕಳ್ಕೊಂಡ, ಜನ್ರನ್ನ ಚೆನ್ನಾಗಿ ಆಳೋಕೆ ಬೇಕಾಗಿದ್ದ ವಿವೇಕನೂ ಕಳ್ಕೊಂಡ.—1 ಅರ. 11:9, 10; 12:4.

ನಾವು ಯೆಹೋವನ ಮಾತು ಕೇಳಿದ್ರೆ ಒಳ್ಳೇ ತೀರ್ಮಾನಗಳನ್ನ ಮಾಡೋಕೆ ಆತನು ಬುದ್ಧಿ ಕೊಡ್ತಾನೆ ಅಂತ ದಾವೀದ ಸೊಲೊಮೋನನಿಗೆ ಹೇಳಿದ ಕೊನೇ ಮಾತುಗಳಿಂದ ಗೊತ್ತಾಗುತ್ತೆ (ಪ್ಯಾರ 11-12 ನೋಡಿ) b


12. ದಾವೀದ ಹೇಳಿದ ಮಾತಿಂದ ನಮಗೇನು ಪಾಠ?

12 ನಮಗೇನು ಪಾಠ? ಮಾತು ಕೇಳಿದ್ರೆ ಯಶಸ್ಸು ಸಿಗುತ್ತೆ. (ಕೀರ್ತ. 1:1-3) ಇದರರ್ಥ ನಾವೂ ಸೊಲೊಮೋನನ ತರ ಶ್ರೀಮಂತರಾಗಿ ಹೆಸ್ರು ಪಡ್ಕೊತೀವಿ ಅಂತ ಅಲ್ಲ. ಯೆಹೋವನ ಮಾತು ಕೇಳೋದ್ರಿಂದ ನಾವು ಜೀವನದಲ್ಲಿ ಸರಿಯಾದ ತೀರ್ಮಾನಗಳನ್ನ ಮಾಡ್ತೀವಿ. (ಜ್ಞಾನೋ. 2:6, 7; ಯಾಕೋ. 1:5) ಈ ತರ ಮಾಡೋಕೆ ಬೈಬಲ್‌ನಲ್ಲಿರೋ ತತ್ವಗಳು ನಮಗೆ ಸಹಾಯ ಮಾಡುತ್ತೆ. ಉದಾಹರಣೆಗೆ, ಯಾವ ಕೆಲಸ ಮಾಡಬೇಕು? ಎಷ್ಟು ಓದಬೇಕು? ಎಂಥ ಮನರಂಜನೆ ಆರಿಸ್ಕೊಬೇಕು? ದುಡ್ಡು ನಮ್ಮ ಜೀವನದಲ್ಲಿ ಎಷ್ಟು ಮುಖ್ಯ ಆಗಿರಬೇಕು? ಅನ್ನೋ ವಿಷ್ಯಗಳಲ್ಲಿ ಬೈಬಲ್‌ ತತ್ವಗಳು ನಮಗೆ ಸಹಾಯ ಮಾಡುತ್ತೆ. ನಾವು ಯೆಹೋವನ ಮಾತನ್ನ ಕೇಳ್ತಾ ಇದ್ರೆ ಆತನ ಜೊತೆ ಇರೋ ಸಂಬಂಧ ಹಾಳಾಗಲ್ಲ ಮತ್ತು ಶಾಶ್ವತ ಜೀವನೂ ಪಡ್ಕೊಳ್ತೀವಿ. (ಜ್ಞಾನೋ. 2:10, 11) ಅಷ್ಟೇ ಅಲ್ಲ, ನಮಗೆ ಒಳ್ಳೇ ಸ್ನೇಹಿತರೂ ಸಿಕ್ತಾರೆ, ಕುಟುಂಬದಲ್ಲಿ ಸಂತೋಷವಾಗಿ ಇರ್ತೀವಿ.

13. ಜೀವನದಲ್ಲಿ ಯಶಸ್ಸು ಪಡ್ಕೊಳ್ಳೋಕೆ ಕಾರ್ಮನ್‌ ಏನು ಮಾಡಿದಳು?

13 ಮೊಜಾಂಬಿಕ್‌ನಲ್ಲಿರೋ ಕಾರ್ಮನ್‌ ಅನ್ನೋ ಸಹೋದರಿ ಚೆನ್ನಾಗಿ ಓದೋದೇ ಯಶಸ್ಸಿನ ಗುಟ್ಟು ಅಂತ ಅಂದ್ಕೊಂಡಿದ್ದಳು. ಅದಕ್ಕೇ ಅವಳು ಬಿಲ್ಡಿಂಗ್‌ ಡಿಸೈನ್‌ ಬಗ್ಗೆ ಓದೋಕೆ ಒಂದು ಯೂನಿವರ್ಸಿಟಿಗೆ ಸೇರ್ಕೊಂಡಳು. “ನಾನು ಏನು ಕಲೀತಿದ್ನೋ ಅದು ನಂಗೆ ತುಂಬ ಇಷ್ಟ ಆಗ್ತಿತ್ತು. ಆದ್ರೆ ನನ್ನ ಸಮಯ, ಶಕ್ತಿಯೆಲ್ಲ ಇದ್ರಲ್ಲೇ ಕಳೆದುಹೋಗ್ತಿತ್ತು. ಬೆಳಿಗ್ಗೆ 7:30ರಿಂದ ಸಾಯಂಕಾಲ 6 ಗಂಟೆವರೆಗೂ ಕಾಲೇಜಲ್ಲೇ ಇರಬೇಕಾಗ್ತಿತ್ತು. ಇದ್ರಿಂದ ಮೀಟಿಂಗ್‌ ಮಿಸ್‌ ಆಗ್ತಿತ್ತು, ಯೆಹೋವನಿಂದ ದೂರ ಹೋಗ್ತಾ ಇದ್ದೀನಿ ಅಂತ ಅನಿಸ್ತಿತ್ತು. ಅಷ್ಟೇ ಅಲ್ಲ, ಇಬ್ರು ಯಜಮಾನ್ರ ಸೇವೆ ಮಾಡ್ತಿದ್ದೀನಿ ಅಂತ ಗೊತ್ತಾಯ್ತು” ಅಂತ ಅವಳು ಹೇಳ್ತಾಳೆ. (ಮತ್ತಾ. 6:24) ಅವಳು ಇದ್ರ ಬಗ್ಗೆ ಪ್ರಾರ್ಥನೆ ಮಾಡಿ ಸಂಶೋಧನೆ ಮಾಡಿದಳು. “ಸಭೆಲಿರೋ ಹಿರಿಯರು ಮತ್ತು ನಮ್ಮಮ್ಮ ಕೊಟ್ಟ ಸಲಹೆಯಿಂದ ನಾನು ಆ ಯೂನಿವರ್ಸಿಟಿ ಬಿಟ್ಟುಬಿಟ್ಟೆ ಮತ್ತು ಪೂರ್ಣ ಸಮಯದ ಸೇವೆ ಶುರುಮಾಡ್ದೆ. ಈಗ ಜೀವನದಲ್ಲಿ ಸರಿಯಾದ ತೀರ್ಮಾನನೇ ತಗೊಂಡಿದ್ದೀನಿ ಅನ್ನೋ ತೃಪ್ತಿ ನನಗಿದೆ. ಅದ್ರ ಜೊತೆಗೆ ನಾನೀಗ ತುಂಬ ಖುಷಿಯಾಗಿದ್ದೀನಿ” ಅಂತ ಕಾರ್ಮನ್‌ ಹೇಳ್ತಾಳೆ.

14. ಮೋಶೆ ಮತ್ತು ದಾವೀದ ಏನು ಹೇಳಿದ್ರು?

14 ಮೋಶೆ ಮತ್ತು ದಾವೀದ ಯೆಹೋವನನ್ನ ತುಂಬ ಪ್ರೀತಿಸ್ತಿದ್ರು ಮತ್ತು ಆತನ ಮಾತು ಕೇಳೋದು ಜೀವನದಲ್ಲಿ ಎಷ್ಟು ಮುಖ್ಯ ಅಂತ ತೋರಿಸ್ಕೊಟ್ರು. ಅವ್ರ ಜೀವನದ ಕೊನೇ ಕ್ಷಣಗಳಲ್ಲಿ ಬೇರೆಯವ್ರಿಗೆ ಅವ್ರ ತರಾನೇ ಯೆಹೋವನಿಗೆ ನಿಯತ್ತಾಗಿ ಇರೋಕೆ ಪ್ರೋತ್ಸಾಹ ಕೊಟ್ರು. ಜೊತೆಗೆ ಆತನ ಮಾತು ಕೇಳದೆ ಹೋದ್ರೆ ನಮಗೆ ಆತನ ಮೆಚ್ಚಿಗೆ ಮತ್ತು ಆಶೀರ್ವಾದ ಸಿಗಲ್ಲ ಅಂತ ಎಚ್ಚರಿಕೆನೂ ಕೊಟ್ರು. ಈ ಬುದ್ಧಿಮಾತುಗಳಿಂದ ನಮಗೂ ತುಂಬ ಪ್ರಯೋಜನ ಇದೆ. ಇದಾಗಿ ನೂರಾರು ವರ್ಷ ಕಳೆದ ಮೇಲೂ ಇನ್ನೊಬ್ಬ ದೇವರ ಸೇವಕ ಯೆಹೋವನ ಮಾತು ಕೇಳೋದು, ಆತನಿಗೆ ನಿಯತ್ತಾಗಿ ಇರೋದು ಯಾಕೆ ಮುಖ್ಯ ಅಂತ ತೋರಿಸ್ಕೊಟ್ಟಿದ್ದಾನೆ. ಅವನ ಬಗ್ಗೆ ಈಗ ನೋಡೋಣ ಬನ್ನಿ.

“ಸಂತೋಷದ ವಿಷ್ಯ . . . ಬೇರೆ ಯಾವುದೂ ಇಲ್ಲ”

15. ಅಪೊಸ್ತಲ ಯೋಹಾನ ತನ್ನ ಜೀವನದಲ್ಲಿ ಏನೆಲ್ಲ ನೋಡ್ದ?

15 ಅಪೊಸ್ತಲ ಯೋಹಾನ ಯೇಸುಗೆ ಒಳ್ಳೇ ಸ್ನೇಹಿತನಾಗಿದ್ದ. (ಮತ್ತಾ. 10:2; ಯೋಹಾ. 19:26) ಅವನು ಯೇಸು ಜೊತೆ ತುಂಬ ಸಮಯ ಕಳೆದ. ಆತನ ಜೊತೆ ಸಿಹಿಸುದ್ದಿ ಸಾರಿದ, ಆತನ ಮಾಡಿದ ಅದ್ಭುತಗಳನ್ನ ಕಣ್ಣಾರೆ ನೋಡ್ದ. ಕಷ್ಟದ ಸಮಯದಲ್ಲೂ ಯೇಸು ಜೊತೆನೇ ಇದ್ದ. ಯೇಸುನ ಕಂಬಕ್ಕೆ ಏರಿಸಿದ್ದನ್ನ, ಆತನು ಮತ್ತೆ ಜೀವಂತವಾಗಿ ಎದ್ದು ಬಂದಿದ್ದನ್ನ ಅವನು ನೋಡ್ದ. ಅಷ್ಟೇ ಅಲ್ಲ, ಕ್ರೈಸ್ತ ಸಭೆ ಬೆಳೀತಾ ಇರೋದನ್ನ, ಸಿಹಿಸುದ್ದಿ ‘ಭೂಮಿಯಲ್ಲೆಲ್ಲ ಮುಟ್ತಾ’ ಇರೋದನ್ನೂ ನೋಡ್ದ.—ಕೊಲೊ. 1:23.

16. ಯೋಹಾನ ಬರೆದ ಪತ್ರಗಳಿಂದ ಯಾರಿಗೆಲ್ಲ ಪ್ರಯೋಜನ ಆಯ್ತು?

16 ಯೋಹಾನನಿಗೆ ತುಂಬ ವಯಸ್ಸಾಗಿತ್ತು. ತುಂಬ ಆಸಕ್ತಿ ಹುಟ್ಟಿಸೋ ಪ್ರಕಟನೆ ಪುಸ್ತಕನ ಅವನ ಜೀವನದ ಕೊನೇ ವರ್ಷಗಳಲ್ಲಿ ಬರೆಯೋ ಅವಕಾಶ ಅವನಿಗೆ ಸಿಕ್ತು. (ಪ್ರಕ. 1:1) ಅಷ್ಟೇ ಅಲ್ಲ, ಅವನು ಒಂದು ಸುವಾರ್ತಾ ಪುಸ್ತಕನೂ ಬರೆದ. ಆಮೇಲೆ ಮೂರು ಪತ್ರಗಳನ್ನ ಬರೆದ. ನಾವದನ್ನ 1ನೇ, 2ನೇ ಮತ್ತು 3ನೇ ಯೋಹಾನ ಅಂತ ಕರಿತೀವಿ. ಅವನು ಮೂರನೇ ಪತ್ರನ ನಿಯತ್ತಾಗಿ ದೇವರ ಸೇವೆ ಮಾಡ್ತಿದ್ದ ಗಾಯನಿಗೆ ಬರೆದ. ಯೋಹಾನ ಗಾಯನನ್ನ ತನ್ನ ಮಗನ ತರ ನೋಡ್ತಿದ್ದ. (3 ಯೋಹಾ. 1) ಅಷ್ಟೊತ್ತಿಗಾಗಲೇ ಯೋಹಾನ ಎಷ್ಟೋ ಜನ್ರನ್ನ ತನ್ನ ಮಕ್ಕಳ ತರ ಪ್ರೀತಿಸ್ತಿದ್ದ. ವಯಸ್ಸಾಗಿದ್ದ ಕಾಲದಲ್ಲಿ ಅವನು ಬರೆದ ಮಾತುಗಳಿಂದ ಆಗಷ್ಟೇ ಅಲ್ಲ, ಈಗ್ಲೂ ಪ್ರಯೋಜನ ಇದೆ.

17. 3 ಯೋಹಾನ 4ರ ಪ್ರಕಾರ ಯಾವುದ್ರಲ್ಲಿ ತುಂಬ ಖುಷಿ ಸಿಗುತ್ತೆ?

17 ಯೋಹಾನ ಏನು ಬರೆದ? (3 ಯೋಹಾನ 4 ಓದಿ.) ದೇವರ ಮಾತು ಕೇಳೋದ್ರಿಂದ ಖುಷಿ ಸಿಗುತ್ತೆ ಅಂತ ಯೋಹಾನ ಬರೆದ. ಯೋಹಾನ ಮೂರನೇ ಪತ್ರ ಬರೆಯೋಷ್ಟರಲ್ಲಿ ಸಭೆಲಿ ಕೆಲವರು ಸುಳ್ಳು ಬೋಧನೆಗಳನ್ನ ಹಬ್ಬಿಸ್ತಾ ಇದ್ರು. ಸಭೆಲಿರೋ ಒಗ್ಗಟ್ಟನ್ನ ಹಾಳು ಮಾಡ್ತಿದ್ರು. ಆದ್ರೆ ಉಳಿದವರು “ಸತ್ಯದಲ್ಲಿ ನಡಿತಾ” ಇದ್ರು, ದೇವರ ಮಾತನ್ನ ಕೇಳ್ತಾ ಆತನ “ಆಜ್ಞೆಗಳನ್ನ ಪಾಲಿಸ್ತಾ” ಇದ್ರು. (2 ಯೋಹಾ. 4, 6) ನಿಯತ್ತಿಂದ ನಡೀತಿದ್ದ ಈ ಜನ್ರನ್ನ ನೋಡಿ ಯೋಹಾನನಿಗೆ ಅಷ್ಟೇ ಅಲ್ಲ, ಯೆಹೋವ ದೇವ್ರಿಗೂ ತುಂಬ ಖುಷಿಯಾಗಿರುತ್ತೆ.—ಜ್ಞಾನೋ. 27:11.

18. ಯೋಹಾನನ ಮಾತಿಂದ ನಮಗೇನು ಪಾಠ?

18 ನಮಗೇನು ಪಾಠ? ಯೆಹೋವ ದೇವರಿಗೆ ನಿಯತ್ತಾಗಿದ್ರೆ ನಾವೂ ಖುಷಿಯಾಗಿ ಇರ್ತೀವಿ, ಬೇರೆಯವ್ರನ್ನ ಖುಷಿಪಡಿಸ್ತೀವಿ. (1 ಯೋಹಾ. 5:3) ಯೆಹೋವ ದೇವರನ್ನ ಖುಷಿಪಡಿಸ್ತಾ ಇರೋದ್ರಿಂದಾನೇ ನಾವು ಖುಷಿಯಾಗಿ ಇದ್ದೀವಿ. ನಾವು ಯಾವಾಗ ಕೆಟ್ಟದನ್ನ ಬಿಟ್ಟು ದೇವರು ಹೇಳಿದ್ದನ್ನ ಕೇಳ್ತಿವೋ ಆಗ ಯೆಹೋವ ದೇವ್ರಿಗೆ ತುಂಬ ಖುಷಿಯಾಗುತ್ತೆ. (ಜ್ಞಾನೋ. 23:15) ಸ್ವರ್ಗದಲ್ಲಿರೋ ದೇವದೂತರಿಗೂ ಸಂತೋಷ ಆಗುತ್ತೆ. (ಲೂಕ 15:10) ನಮ್ಮ ಸಹೋದರ-ಸಹೋದರಿಯರು ಕಷ್ಟ ವಿರೋಧ ಹಿಂಸೆ ಮಧ್ಯದಲ್ಲೂ ನಿಯತ್ತಾಗಿ ಇರೋದನ್ನ ನೋಡುವಾಗ ನಮಗೂ ಖುಷಿಯಾಗುತ್ತೆ. (2 ಥೆಸ. 1:4) ಸೈತಾನನ ಲೋಕ ನಾಶ ಆದಮೇಲೆ ನಾವು ಯೆಹೋವನಿಗೆ ನಿಯತ್ತಾಗಿ ಇದ್ದಿದ್ದನ್ನ ನೆನಪಿಸ್ಕೊಂಡಾಗ ನಮಗೇ ಖುಷಿಯಾಗುತ್ತೆ.

19. ರೇಚಲ್‌ ಅನ್ನೋ ಸಹೋದರಿ ಬೇರೆಯವ್ರಿಗೆ ಕಲಿಸೋದ್ರ ಬಗ್ಗೆ ಏನು ಹೇಳಿದ್ರು? (ಚಿತ್ರ ನೋಡಿ.)

19 ಯೆಹೋವ ದೇವರ ಬಗ್ಗೆ ಬೇರೆಯವ್ರಿಗೆ ಹೇಳಿದಾಗಂತೂ ಇನ್ನೂ ಖುಷಿ ಸಿಗುತ್ತೆ. ಡೊಮಿನಿಕನ್‌ ಗಣರಾಜ್ಯದಲ್ಲಿರೋ ರೇಚಲ್‌ ಅನ್ನೋ ಸಹೋದರಿಗೆ ಯೆಹೋವನ ಬಗ್ಗೆ ಬೇರೆಯವ್ರಿಗೆ ಕಲಿಸೋದು ಒಂದು ಅದ್ಭುತ ಅವಕಾಶ ಅಂತ ಅನಿಸುತ್ತಂತೆ. ಇದ್ರ ಬಗ್ಗೆ ಅವರು, “ನಾವು ಯಾರಿಗೆ ಕಲಿಸ್ತಿದ್ದೀವೋ ಅವರು ಯೆಹೋವನನ್ನ ಪ್ರೀತಿಸೋಕೆ ಶುರುಮಾಡಿದಾಗ ನಮಗಾಗೋ ಖುಷಿನ ಮಾತಲ್ಲಿ ಹೇಳಕ್ಕಾಗಲ್ಲ. ಅವರು ಯೆಹೋವನ ಮೇಲೆ ನಂಬಿಕೆ ಇಟ್ಟು ಆತನನ್ನ ಖುಷಿಪಡಿಸೋಕೆ ಜೀವನದಲ್ಲಿ ಬದಲಾವಣೆಗಳನ್ನ ಮಾಡಿದಾಗ ಅವ್ರಿಗೆ ಕಲಿಸೋಕೆ ನಾವು ಹಾಕಿದ ಪ್ರಯತ್ನ, ಮಾಡಿದ ತ್ಯಾಗ ಎಲ್ಲ ಸಾರ್ಥಕ ಅಂತ ಅನಿಸುತ್ತೆ” ಅಂತ ಹೇಳ್ತಾರೆ.

ಯೆಹೋವನನ್ನ ಪ್ರೀತಿಸೋಕೆ ಮತ್ತು ಆತನ ಮಾತು ಕೇಳೋಕೆ ಬೇರೆಯವ್ರಿಗೆ ಕಲಿಸೋದ್ರಿಂದನೂ ನಮಗೆ ಖುಷಿ ಸಿಗುತ್ತೆ (ಪ್ಯಾರ 19 ನೋಡಿ)


ದೇವರ ಸೇವಕರ ಮಾತು ಕೇಳಿ ಆಶೀರ್ವಾದ ಪಡ್ಕೊಳ್ಳಿ

20. ನಾವು ಯಾವ ವಿಷ್ಯಗಳಲ್ಲಿ ಮೋಶೆ, ದಾವೀದ, ಯೋಹಾನನ ತರ ಇದ್ದೀವಿ?

20 ಮೋಶೆ, ದಾವೀದ ಮತ್ತು ಯೋಹಾನ ತುಂಬ ವರ್ಷಗಳ ಹಿಂದೆ ಬದುಕಿದ್ರು. ಅವರಿದ್ದ ಪರಿಸ್ಥಿತಿಗೂ ನಮ್ಮ ಪರಿಸ್ಥಿತಿಗೂ ತುಂಬ ವ್ಯತ್ಯಾಸ ಇದೆ. ಆದ್ರೆ ಕೆಲವೊಂದು ವಿಷ್ಯಗಳಲ್ಲಿ ನಾವು ಅವರ ತರಾನೇ ಇದ್ದೀವಿ. ಉದಾಹರಣೆಗೆ, ಅವರು ಆರಾಧಿಸ್ತಾ ಇದ್ದಿದ್ದು ನಾವು ಆರಾಧಿಸ್ತಾ ಇರೋದು ಯೆಹೋವ ದೇವರನ್ನೇ. ಅವ್ರ ತರಾನೇ ನಾವೂ ಯೆಹೋವನಿಗೆ ಪ್ರಾರ್ಥನೆ ಮಾಡ್ತೀವಿ. ತೀರ್ಮಾನಗಳನ್ನ ಮಾಡುವಾಗ ಆತನ ಸಹಾಯ ಕೇಳ್ತೀವಿ. ಅವ್ರ ತರಾನೇ ನಾವೂ ಯೆಹೋವನ ಮಾತು ಕೇಳಿದ್ರೆ ಆತನು ಗ್ಯಾರಂಟಿ ನಮ್ಮನ್ನ ಆಶೀರ್ವದಿಸ್ತಾನೆ ಅಂತಾನೂ ನಂಬ್ತೀವಿ.

21. ದೇವಸೇವಕರು ಕೊಟ್ಟಿರೋ ಬುದ್ಧಿಮಾತನ್ನ ಕೇಳೋದ್ರಿಂದ ಯಾವ ಆಶೀರ್ವಾದ ಸಿಗುತ್ತೆ?

21 ನಾವೆಲ್ರೂ ಈ ದೇವಸೇವಕರು ಕೊಟ್ಟಿರೋ ಬುದ್ಧಿಮಾತನ್ನ ಕೇಳೋಣ ಮತ್ತು ಯೆಹೋವ ದೇವರು ಕೊಟ್ಟಿರೋ ಆಜ್ಞೆನ ಪಾಲಿಸೋಣ. ಈ ತರ ಮಾಡಿದ್ರೆ ನಾವು ನಮ್ಮ ಜೀವನದಲ್ಲಿ ಯಶಸ್ಸು ಪಡ್ಕೊಳ್ತೀವಿ ಮತ್ತು “ತುಂಬ ವರ್ಷ” ಅಂದ್ರೆ ಶಾಶ್ವತವಾಗಿ ಬದುಕ್ತೀವಿ! (ಧರ್ಮೋ. 30:20) ಅಷ್ಟೇ ಅಲ್ಲ, ನಾವು ಅಂದ್ಕೊಂಡಿದ್ದಕ್ಕಿಂತ ಜಾಸ್ತಿ ನಮ್ಮನ್ನ ಆಶೀರ್ವದಿಸೋ ನಮ್ಮಪ್ಪ ಯೆಹೋವನನ್ನ ಮೆಚ್ಚಿಸ್ತಿದ್ದೀವಿ ಅನ್ನೋ ಖುಷಿ ನಮಗಿರುತ್ತೆ.—ಎಫೆ. 3:20.

ಗೀತೆ 143 ನಿರೀಕ್ಷಿಸುತ್ತಾ, ಸಹಿಸುತ್ತಾ ಕಾಯೋಣ

a ಕೆಂಪು ಸಮುದ್ರದಲ್ಲಿ ಯೆಹೋವ ಮಾಡಿದ ಅದ್ಭುತವನ್ನ ನೋಡಿದ ಇಸ್ರಾಯೇಲ್ಯರಲ್ಲಿ ತುಂಬ ಜನ ಮಾತು ಕೊಟ್ಟ ದೇಶಕ್ಕೆ ಹೋಗೋ ತನಕ ಬದುಕಿರಲಿಲ್ಲ. (ಅರ. 14:22, 23) ಅವ್ರಲ್ಲಿ 20 ವರ್ಷ ಮತ್ತು ಅದಕ್ಕಿಂತ ಜಾಸ್ತಿ ವಯಸ್ಸಿನವರು ಕಾಡಲ್ಲೇ ಸಾಯ್ತಾರೆ ಅಂತ ಯೆಹೋವ ಹೇಳಿದ್ದನು. (ಅರ. 14:29) ಆದ್ರೆ 20 ವರ್ಷಕ್ಕಿಂತ ಚಿಕ್ಕವರಿಗೆ, ಯೆಹೋಶುವ, ಕಾಲೇಬ ಮತ್ತು ಲೇವಿ ಕುಲಕ್ಕೆ ಸೇರಿದ ಎಷ್ಟೋ ಜನ್ರ ಜೊತೆ ಯೋರ್ದನ್‌ ನದಿ ದಾಟಿ ಕಾನಾನ್‌ ದೇಶಕ್ಕೆ ಹೋಗೋ ಅವಕಾಶ ಸಿಕ್ತು. ಅವ್ರಿಗೆ ಯೆಹೋವನ ಮಾತು ನಿಜ ಆಗೋದನ್ನ ನೋಡೋಕಾಯ್ತು.—ಧರ್ಮೋ. 1:24-40.

b ಚಿತ್ರ ವಿವರಣೆ: ಎಡಗಡೆ: ದಾವೀದ ತನ್ನ ಮಗನಿಗೆ ಕೊನೆ ಕ್ಷಣದಲ್ಲಿ ಬುದ್ಧಿಮಾತುಗಳನ್ನ ಹೇಳ್ತಿದ್ದಾನೆ. ಬಲಗಡೆ: ಸಹೋದರ ಸಹೋದರಿಯರು ಪಯನೀಯರ್‌ ಸೇವಾ ಶಾಲೆಯಲ್ಲಿ ದೇವರು ಕೊಡೋ ಬುದ್ಧಿಮಾತುಗಳನ್ನ ಕೇಳಿಸ್ಕೊಳ್ತಿದ್ದಾರೆ.