ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 46

ಗೀತೆ 49 ಯೆಹೋವನ ಮನಸ್ಸನ್ನ ಖುಷಿಪಡಿಸುವುದು

ಸಹೋದರರೇ, ಸಹಾಯಕ ಸೇವಕರಾಗೋಕೆ ನೀವು ಪ್ರಯತ್ನ ಹಾಕ್ತಿದ್ದೀರಾ?

ಸಹೋದರರೇ, ಸಹಾಯಕ ಸೇವಕರಾಗೋಕೆ ನೀವು ಪ್ರಯತ್ನ ಹಾಕ್ತಿದ್ದೀರಾ?

“ತಗೊಳ್ಳೋದಕ್ಕಿಂತ ಕೊಡೋದ್ರಲ್ಲಿ ಜಾಸ್ತಿ ಖುಷಿ ಸಿಗುತ್ತೆ.”ಅ. ಕಾ. 20:35.

ಈ ಲೇಖನದಲ್ಲಿ ಏನಿದೆ?

ಈ ಲೇಖನ ದೀಕ್ಷಾಸ್ನಾನ ಆಗಿರೋ ಸಹೋದರರಿಗೆ ಸಹಾಯಕ ಸೇವಕರಾಗೋ ಆಸೆನ ಮತ್ತು ಅರ್ಹತೆನ ಬೆಳೆಸ್ಕೊಳ್ಳೋಕೆ ಸಹಾಯ ಮಾಡುತ್ತೆ.

1. ಸಹಾಯಕ ಸೇವಕರ ಬಗ್ಗೆ ಅಪೊಸ್ತಲ ಪೌಲನಿಗೆ ಹೇಗನಿಸ್ತು?

 ಸಹಾಯಕ ಸೇವಕರು ಸಭೆಲಿ ತುಂಬ ಮುಖ್ಯವಾದ ಕೆಲ್ಸಗಳನ್ನ ಮಾಡ್ತಾರೆ. ಈ ತರ ನಿಯತ್ತಾಗಿ ಸೇವೆ ಮಾಡ್ತಿರೋ ಸಹೋದರರನ್ನ ಪೌಲ ತುಂಬ ಮೆಚ್ಕೊಂಡ. ಫಿಲಿಪ್ಪಿಯಲ್ಲಿದ್ದ ಕ್ರೈಸ್ತರಿಗೆ ಪತ್ರ ಬರೀವಾಗ ಅಲ್ಲಿದ್ದ ಹಿರಿಯರನ್ನಷ್ಟೇ ಅಲ್ಲ, ಸಹಾಯಕ ಸೇವಕರಿಗೂ ತನ್ನ ವಂದನೆಯನ್ನ ಕಳಿಸಿದ.—ಫಿಲಿ. 1:1.

2. ಸಹಾಯಕ ಸೇವಕರಾದಾಗ ಸಹೋದರ ಲೂಯಿಸ್‌ಗೆ ಹೇಗನಿಸ್ತು?

2 ಯುವಕರಾಗಿರಲಿ, ವಯಸ್ಸಾದವರಾಗಿರಲಿ ದೀಕ್ಷಾಸ್ನಾನ ಆಗಿರೋ ಸಹೋದರರು ಸಹಾಯಕ ಸೇವಕರಾಗಿ ಸಭೆಲಿ ಇರೋರಿಗೆ ಸಹಾಯ ಮಾಡುವಾಗ ತುಂಬ ಖುಷಿ ಆಗುತ್ತೆ. ಉದಾಹರಣೆಗೆ ಸಹೋದರ ಡೆವನ್‌ ಸಹಾಯಕ ಸೇವಕರಾದಾಗ ಅವ್ರಿಗೆ 18 ವರ್ಷ ಆಗಿತ್ತು. ಆದ್ರೆ ಸಹೋದರ ಲೂಯಿಸ್‌ ಅವರು ಸಹಾಯಕ ಸೇವಕರಾದಾಗ ಅವ್ರಿಗೆ 50 ವರ್ಷ ದಾಟಿತ್ತು. ಆಗ ಸಹೋದರ ಲೂಯಿಸ್‌ಗೆ ಹೇಗನಿಸ್ತು? “ನನ್ನ ಸಭೆಲಿರೋ ಸಹೋದರ ಸಹೋದರಿಯರಿಗೆ ಈ ತರ ಸೇವೆ ಮಾಡೋಕೆ ನಂಗೆ ತುಂಬ ಖುಷಿ ಆಗುತ್ತೆ. ಅವರು ನನ್ನನ್ನ ತುಂಬ ಪ್ರೀತಿಸ್ತಾರೆ. ಈಗ ನಂಗೆ ಅವ್ರ ಮೇಲೆ ಎಷ್ಟು ಪ್ರೀತಿ ಇದೆ ಅಂತ ತೋರಿಸೋಕೆ ಅವಕಾಶ ಸಿಕ್ಕಿದೆ!” ಅಂತ ಅವರು ಹೇಳ್ತಾರೆ. ಎಷ್ಟೋ ಸಹಾಯಕ ಸೇವಕರಿಗೆ ಇದೇ ತರ ಅನಿಸುತ್ತೆ.

3. ನಾವು ಈ ಲೇಖನದಲ್ಲಿ ಏನು ಕಲೀತೀವಿ?

3 ನಿಮಗೆ ದೀಕ್ಷಾಸ್ನಾನ ಆಗಿ, ನೀವು ಸಹಾಯಕ ಸೇವಕರಾಗಿಲ್ಲಾಂದ್ರೆ ನೀವು ಆ ಗುರಿ ಇಡೋಕೆ ಇಷ್ಟಪಡ್ತೀರಾ? ಆ ಗುರಿ ಮುಟ್ಟೋಕೆ ನಿಮಗೆ ಯಾವುದು ಸಹಾಯ ಮಾಡುತ್ತೆ? ಸಹಾಯಕ ಸೇವಕರಾಗೋಕೆ ಯಾವೆಲ್ಲಾ ಅರ್ಹತೆಗಳಿರಬೇಕು ಅಂತ ಬೈಬಲ್‌ ಹೇಳುತ್ತೆ? ಇದನ್ನೆಲ್ಲ ನಾವು ಈ ಲೇಖನದಲ್ಲಿ ನೋಡೋಣ. ಆದ್ರೆ ಅದಕ್ಕಿಂತ ಮೊದಲು ಸಹಾಯಕ ಸೇವಕರು ಯಾವೆಲ್ಲ ಕೆಲಸಗಳನ್ನ ಮಾಡ್ತಾರೆ ಅಂತ ತಿಳ್ಕೊಳ್ಳೋಣ ಬನ್ನಿ.

ಸಭೆಲಿ ಸಹಾಯಕ ಸೇವಕರ ಕೆಲಸ ಏನು?

4. ಸಭೆಲಿ ಸಹಾಯಕ ಸೇವಕರ ಕೆಲಸ ಏನು? (ಚಿತ್ರ ನೋಡಿ.)

4 ಸಹಾಯಕ ಸೇವಕರಾಗಿರೋ ಸಹೋದರರು ದೀಕ್ಷಾಸ್ನಾನ ಪಡ್ಕೊಂಡಿರ್ತಾರೆ. ಅವ್ರನ್ನ ಪವಿತ್ರ ಶಕ್ತಿಯಿಂದ ನೇಮಿಸಲಾಗಿರುತ್ತೆ. ಅವರು ಸಭೆಲಿರೋ ಹಿರಿಯರಿಗೆ ಸಹಾಯ ಮಾಡ್ತಾರೆ. ಕೆಲವು ಸಹಾಯಕ ಸೇವಕರು ಪ್ರಚಾರಕರಿಗೆ ಸಾಕಷ್ಟು ಟೆರಿಟರಿಗಳಿದ್ಯಾ, ಅವ್ರಿಗೆ ಬೇಕಾಗಿರೋ ಪ್ರಕಾಶನಗಳಿದ್ಯಾ ಅಂತ ನೋಡ್ಕೊತಾರೆ. ಇನ್ನು ಕೆಲವರು ಸಭೆನ ಸ್ವಚ್ಛವಾಗಿ ನೀಟಾಗಿ ಇಡೋಕೆ ಸಹಾಯ ಮಾಡ್ತಾರೆ. ಕೂಟಗಳು ನಡಿಯುವಾಗ ಅಟೆಂಡೆಂಟ್‌ ಆಗಿ ಇರ್ತಾರೆ, ಆಡಿಯೋ ವಿಡಿಯೋ ನೋಡ್ಕೊತಾರೆ. ಆದ್ರೆ ಎಲ್ಲಕ್ಕಿಂತ ಮುಖ್ಯವಾಗಿ ಅವ್ರಿಗೆ ಯೆಹೋವನ ಜೊತೆ ಒಳ್ಳೇ ಸ್ನೇಹ-ಸಂಬಂಧ ಇರುತ್ತೆ. ಅವರು ಯೆಹೋವನನ್ನ ತುಂಬ ಪ್ರೀತಿಸ್ತಾರೆ. ಆತನ ನೀತಿ-ನಿಯಮಗಳನ್ನ ಪಾಲಿಸ್ತಾರೆ. ಸಭೆಲಿರೋ ಸಹೋದರ ಸಹೋದರಿಯರ ಮೇಲೂ ಅವ್ರಿಗೆ ತುಂಬ ಪ್ರೀತಿ ಇರುತ್ತೆ. (ಮತ್ತಾ. 22:37-39) ಹಾಗಾದ್ರೆ ದೀಕ್ಷಾಸ್ನಾನ ಪಡ್ಕೊಂಡಿರೋ ಒಬ್ಬ ಸಹೋದರ ಸಹಾಯಕ ಸೇವಕ ಆಗಬೇಕಂದ್ರೆ ಏನು ಮಾಡಬೇಕು?

ಬೇರೆಯವ್ರಿಗೆ ಸಹಾಯ ಮಾಡೋಕೆ ಇವತ್ತು ಸಹಾಯಕ ಸೇವಕರು ಯೇಸು ತರ ತಮ್ಮನ್ನ ತಾವೇ ಬಿಟ್ಕೊಡ್ತಿದ್ದಾರೆ (ಪ್ಯಾರ 4 ನೋಡಿ)


5. ನೀವು ಸಹಾಯಕ ಸೇವಕರಾಗೋಕೆ ಏನು ಮಾಡಬೇಕು?

5 ಸಹಾಯಕ ಸೇವಕರಾಗಿ ಕೆಲಸ ಮಾಡೋರಿಗೆ ಬೇಕಾದ ಅರ್ಹತೆಗಳ ಬಗ್ಗೆ ಬೈಬಲಲ್ಲಿದೆ. (1 ತಿಮೊ. 3:8-10, 12, 13) ನೀವೂ ಸಹಾಯಕ ಸೇವಕರಾಗಿ ಸಹೋದರ ಸಹೋದರಿಯರಿಗೆ ಸಹಾಯ ಮಾಡಬೇಕು ಅಂತ ಇಷ್ಟ ಪಡ್ತಿದ್ರೆ ಆ ಅರ್ಹತೆಗಳ ಬಗ್ಗೆ ಚೆನ್ನಾಗಿ ಯೋಚ್ನೆ ಮಾಡಿ. ಅವನ್ನ ಬೆಳೆಸ್ಕೊಳ್ಳೋಕೆ ನಿಮ್ಮಿಂದಾದ ಎಲ್ಲ ಪ್ರಯತ್ನ ಮಾಡಿ. ಆದ್ರೆ ಮೊದ್ಲು ನೀವ್ಯಾಕೆ ಸಹಾಯಕ ಸೇವಕರಾಗಬೇಕು ಅಂದ್ಕೊಂಡಿದ್ದೀರಾ, ಅದ್ರ ಹಿಂದಿರೋ ಉದ್ದೇಶ ಏನು ಅನ್ನೋದನ್ನ ತಿಳ್ಕೊಳ್ಳಿ.

ನೀವು ಯಾಕೆ ಸಹಾಯಕ ಸೇವಕರಾಗಬೇಕು ಅಂತಿದ್ದೀರಾ?

6. ಯಾವ ಉದ್ದೇಶದಿಂದ ನೀವು ಸಹೋದರ ಸಹೋದರಿಯರಿಗೆ ಸಹಾಯ ಮಾಡಬೇಕು? (ಮತ್ತಾಯ 20:28; ಚಿತ್ರ ನೋಡಿ.)

6 ನಮ್ಮೆಲ್ರಿಗೂ ಒಳ್ಳೇ ಮಾದರಿ ಆಗಿರೋ ಯೇಸು ಕ್ರಿಸ್ತನ ಬಗ್ಗೆ ಯೋಚ್ನೆ ಮಾಡಿ. ಆತನಿಗೆ ದೇವರ ಮೇಲೆ ಮತ್ತು ಜನ್ರ ಮೇಲೆ ತುಂಬ ಪ್ರೀತಿ ಇತ್ತು. ಅದಕ್ಕೇ ಆತನು ತುಂಬ ಕಷ್ಟಪಟ್ಟು ಸೇವೆ ಮಾಡಿದನು. ಜನ್ರು ಕೀಳಾಗಿ ನೋಡೋ ಕೆಲಸಗಳನ್ನೂ ಮಾಡಿದನು. (ಮತ್ತಾಯ 20:28 ಓದಿ; ಯೋಹಾ. 13:5, 14, 15) ನಿಮ್ಮಲ್ಲೂ ಅಂಥ ಪ್ರೀತಿ ಇದ್ರೆ ಯೆಹೋವ ನಿಮ್ಮನ್ನ ತುಂಬ ಆಶೀರ್ವದಿಸ್ತಾನೆ. ಸಹಾಯಕ ಸೇವಕರಾಗೋಕೆ ನೀವಿಟ್ಟಿರೋ ಗುರಿನ ಮುಟ್ಟೋಕೆ ಸಹಾಯ ಮಾಡ್ತಾನೆ.—1 ಕೊರಿಂ. 16:14; 1 ಪೇತ್ರ 5:5.

ಯೇಸು ತನ್ನ ಅಪೊಸ್ತಲರಿಗೆ ಸ್ಥಾನಮಾನಕ್ಕೆ ಆಸೆ ಪಡದೆ ಬೇರೆಯವ್ರ ಸೇವೆ ಮಾಡಬೇಕು ಅಂತ ಹೇಳಿದ್ದಷ್ಟೇ ಅಲ್ಲ, ಅದನ್ನ ಮಾಡಿ ತೋರಿಸಿದನು (ಪ್ಯಾರ 6 ನೋಡಿ)


7. ಸಹಾಯಕ ಸೇವಕರಾಗೋದ್ರ ಹಿಂದೆ ಯಾವ ಉದ್ದೇಶ ಇರಬಾರದು? ಯಾಕೆ?

7 ಇವತ್ತು ಈ ಲೋಕದಲ್ಲಿ ಕೆಲವರು ‘ನಾನೇ ಶ್ರೇಷ್ಠ’ ಅಂತ ತೋರಿಸ್ಕೊಳ್ತಾರೆ. ಅಂಥವ್ರನ್ನ ಜನ್ರೂ ಮೆಚ್ಕೊಳ್ತಾರೆ. ಆದ್ರೆ ಯೆಹೋವನ ಜನ್ರು ಅವ್ರ ತರ ಅಲ್ಲ. ಒಬ್ಬ ಸಹೋದರನಿಗೆ ಯೇಸು ತರ ಬೇರೆಯವ್ರ ಮೇಲೆ ಪ್ರೀತಿ ಇದ್ರೆ ಅವನು ಅಧಿಕಾರ, ಸ್ಥಾನಮಾನ ಅಥವಾ ಹೆಸ್ರಿಗೋಸ್ಕರ ಆಸೆಪಡಲ್ಲ. ಒಂದುವೇಳೆ ಇಂಥ ವಿಷ್ಯಗಳಿಗೆ ಆಸೆಪಡೋ ಒಬ್ಬ ಸಹೋದರನನ್ನ ಸಹಾಯಕ ಸೇವಕನಾಗಿ ನೇಮಿಸಿದ್ರೆ, ಅವನು ಕೆಲವು ಕೆಲಸಗಳನ್ನ ತುಂಬ ಕೀಳಾಗಿ ನೋಡ್ತಾನೆ. ಸಭೆಯವ್ರಿಗೆ ಸಹಾಯ ಆಗೋ ಚಿಕ್ಕಪುಟ್ಟ ಕೆಲಸಗಳನ್ನ ಮಾಡೋಕೆ ಹಿಂದೆಮುಂದೆ ನೋಡ್ತಾನೆ. (ಯೋಹಾ. 10:12) ಈ ತರ ತಾನೇ ಶ್ರೇಷ್ಠ ಅಂತ ಹೆಮ್ಮೆಪಡೋ ವ್ಯಕ್ತಿನ ಯೆಹೋವ ಯಾವತ್ತೂ ಆಶೀರ್ವದಿಸಲ್ಲ.—1 ಕೊರಿಂ. 10:24, 33; 13:4, 5.

8. ಯೇಸು ತನ್ನ ಅಪೊಸ್ತಲರಿಗೆ ಯಾವ ಸಲಹೆ ಕೊಟ್ಟನು?

8 ಯೇಸುವಿನ ಸ್ನೇಹಿತರೂ ಕೆಲವು ಸಲ ವಿಶೇಷ ಸುಯೋಗಕ್ಕೋಸ್ಕರ ಆಸೆಪಟ್ರು. ಅದ್ರ ಹಿಂದೆ ಅವ್ರಿಗೆ ತಪ್ಪಾದ ಉದ್ದೇಶ ಇತ್ತು. ಅಪೊಸ್ತಲ ಯಾಕೋಬ ಮತ್ತು ಯೋಹಾನ ಏನು ಮಾಡಿದ್ರು ಅಂತ ನಿಮಗೆ ನೆನಪಿರಬಹುದು. ಅವರು ಯೇಸು ಹತ್ರ ದೇವರ ಆಳ್ವಿಕೆಯಲ್ಲಿ ವಿಶೇಷ ಸ್ಥಾನ ಕೇಳ್ಕೊಂಡ್ರು. ಅವರು ಈ ತರ ನಡ್ಕೊಂಡಿದ್ದು ಯೇಸುಗೆ ಸ್ವಲ್ಪನೂ ಇಷ್ಟ ಆಗ್ಲಿಲ್ಲ. ಆತನು ತನ್ನ 12 ಅಪೊಸ್ತಲರ ಹತ್ರ “ನಿಮ್ಮಲ್ಲಿ ದೊಡ್ಡವನು ಆಗಬೇಕು ಅಂತ ಇರುವವನು ಬೇರೆಯವ್ರ ಸೇವೆ ಮಾಡಬೇಕು. ಎಲ್ರಿಗಿಂತ ಮುಖ್ಯ ಸ್ಥಾನದಲ್ಲಿ ಇರೋಕೆ ಆಸೆಪಡುವವನು ಎಲ್ರ ಸೇವಕನಾಗಿರಬೇಕು” ಅಂತ ಹೇಳಿದನು. (ಮಾರ್ಕ 10:35-37, 43, 44) ಬೇರೆಯವ್ರಿಗೆ ಸಹಾಯ ಮಾಡಬೇಕು ಅನ್ನೋ ಉದ್ದೇಶದಿಂದ ಯಾವ ಸಹೋದರರು ಸೇವೆ ಮಾಡೋಕೆ ಮುಂದೆ ಬರ್ತಾರೋ ಅಂಥವರು ಸಭೆಗೆ ಒಂದು ದೊಡ್ಡ ಆಶೀರ್ವಾದ ಆಗಿರ್ತಾರೆ.—1 ಥೆಸ. 2:8.

ಗುರಿ ಮುಟ್ಟೋಕೆ ನಿಮಗೆ ಯಾವುದು ಸಹಾಯ ಮಾಡುತ್ತೆ?

9. ನಾವು ಯಾವುದ್ರ ಬಗ್ಗೆ ಯೋಚ್ನೆ ಮಾಡಿದಾಗ ಸಹೋದರ ಸಹೋದರಿಯರ ಸೇವೆ ಮಾಡೋ ಆಸೆ ಜಾಸ್ತಿ ಆಗುತ್ತೆ?

9 ನಿಮಗೆ ಯೆಹೋವ ದೇವರ ಮೇಲೆ ತುಂಬ ಪ್ರೀತಿ ಇರಬಹುದು, ಬೇರೆಯವ್ರ ಸೇವೆ ಮಾಡೋ ಮನಸ್ಸೂ ಇರಬಹುದು. ಆದ್ರೆ ಸಹಾಯಕ ಸೇವಕರು ಮಾಡೋ ಕೆಲಸಗಳನ್ನ ಮಾಡೋಕೆ ನಿಮಗೆ ಆಸೆ ಇಲ್ದೆ ಇದ್ರೆ ಏನು ಮಾಡೋದು? ಅದಕ್ಕೆ ನೀವು ಸಹೋದರ ಸಹೋದರಿಯರಿಗೆ ಸಹಾಯ ಮಾಡೋದ್ರಿಂದ ಸಿಗೋ ಖುಷಿ ಬಗ್ಗೆ ಯೋಚ್ನೆ ಮಾಡಬೇಕು. ಯೇಸು “ತಗೊಳ್ಳೋದಕ್ಕಿಂತ ಕೊಡೋದ್ರಲ್ಲಿ ಜಾಸ್ತಿ ಖುಷಿ ಸಿಗುತ್ತೆ” ಅಂತ ಹೇಳಿದನು. (ಅ. ಕಾ. 20:35) ಯೇಸು ಹಾಗೆ ಹೇಳಿದ್ದಷ್ಟೇ ಅಲ್ಲ, ಅದನ್ನ ಮಾಡಿ ತೋರಿಸಿದನು. ಅದಕ್ಕೇ ಆತನು ತುಂಬ ಖುಷಿಯಾಗಿದ್ದನು. ನೀವೂ ಯೇಸು ತರ ಬೇರೆಯವ್ರ ಸೇವೆ ಮಾಡಿದ್ರೆ ಖುಷಿಖುಷಿಯಾಗಿ ಇರ್ತೀರ.

10. ಬೇರೆಯವ್ರಿಗೆ ಸಹಾಯ ಮಾಡೋದ್ರಿಂದ ಖುಷಿ ಸಿಗುತ್ತೆ ಅಂತ ಯೇಸು ಹೇಗೆ ತೋರಿಸಿದನು? (ಮಾರ್ಕ 6:31-34)

10 ಬೇರೆಯವ್ರಿಗೆ ಸಹಾಯ ಮಾಡೋದ್ರಿಂದ ಯೇಸುಗೆ ತುಂಬ ಖುಷಿ ಆಗ್ತಿತ್ತು ಅನ್ನೋದಕ್ಕೆ ಒಂದು ಉದಾಹರಣೆ ನೋಡಿ. (ಮಾರ್ಕ 6:31-34 ಓದಿ.) ಒಂದುಸಲ ಯೇಸುಗೆ ಮತ್ತು ಆತನ ಅಪೊಸ್ತಲರಿಗೆ ತುಂಬ ಸುಸ್ತಾಗಿತ್ತು. ಅದಕ್ಕೇ ಅವರು ಯಾರೂ ಇಲ್ದೆ ಇರೋ ಜಾಗಕ್ಕೆ ಹೋಗಿ ವಿಶ್ರಾಂತಿ ಪಡ್ಕೊಬೇಕು ಅಂದ್ಕೊಂಡ್ರು. ಅವರು ಹೋಗೋಕಿಂತ ಮುಂಚೆನೇ ಜನ್ರ ಒಂದು ದೊಡ್ಡ ಗುಂಪು ಅಲ್ಲಿಗೆ ಬಂದಿತ್ತು. ಯೇಸು ಹತ್ರ ಕಲಿಯೋಕೆ ಅವ್ರಿಗೆ ತುಂಬ ಆಸೆಯಿತ್ತು. ಆದ್ರೆ ಯೇಸು ಮತ್ತು ಆತನ ಅಪೊಸ್ತಲರಿಗೆ “ಊಟ ಮಾಡೋಕೂ ಸಮಯ ಸಿಕ್ಕಿರ್ಲಿಲ್ಲ.” ಹಾಗಾಗಿ ಆತನು ಜನ್ರನ್ನ ಅಲ್ಲಿಂದ ಕಳಿಸಿಬಿಡಬಹುದಿತ್ತು ಅಥವಾ ಒಂದೆರಡು ವಿಷ್ಯ ಹೇಳಿದ್ರೆ ಸಾಕಾಗ್ತಿತ್ತು. ಆದ್ರೆ ಯೇಸುಗೆ ಅವ್ರ ಮೇಲೆ ಎಷ್ಟು ಪ್ರೀತಿ ಇತ್ತಂದ್ರೆ “ಅವ್ರಿಗೆ ತುಂಬ ವಿಷ್ಯ ಕಲಿಸೋಕೆ ಶುರುಮಾಡಿದನು.” ಎಷ್ಟರ ಮಟ್ಟಿಗಂದ್ರೆ ‘ಸಂಜೆ ತುಂಬ ಹೊತ್ತಿನ ತನಕ’ ಕಲಿಸ್ತಾನೇ ಇದ್ದನು. (ಮಾರ್ಕ 6:35) ಇದೆಲ್ಲ ಯೇಸು ಯಾಕೆ ಮಾಡಿದನು? ಯೇಸು ಇದನ್ನ ಏನೋ ಮಾಡಬೇಕಲ್ಲಾ ಅಂತ ಮಾಡ್ಲಿಲ್ಲ. ಬದಲಿಗೆ ಜನ್ರ ಮೇಲೆ ಅವನಿಗೆ “ತುಂಬ ಕನಿಕರ ಹುಟ್ಟಿತು.” ಯೇಸು ಅವ್ರನ್ನ ಅಷ್ಟು ಪ್ರೀತಿಸ್ತಿದ್ದನು. ಅವ್ರಿಗೆ ಸಹಾಯ ಮಾಡಿದ್ರಿಂದ ಯೇಸುಗೆ ತುಂಬ ಖುಷಿ ಸಿಕ್ತು.

11. ಯೇಸು ಜನ್ರಿಗೆ ಇನ್ನೂ ಹೇಗೆಲ್ಲಾ ಸಹಾಯ ಮಾಡಿದನು? (ಚಿತ್ರ ನೋಡಿ.)

11 ಯೇಸು ಜನ್ರಿಗೆ ದೇವರ ಬಗ್ಗೆ ಕಲಿಸಿದ್ದಷ್ಟೇ ಅಲ್ಲ, ಅವ್ರಿಗೆ ಬೇಕಾದ ಸಹಾಯನೂ ಮಾಡಿದನು. ಅದ್ಭುತ ಮಾಡಿ ಅವ್ರಿಗೆ ಊಟ ಕೊಟ್ಟನು. ಅದನ್ನ ಹಂಚೋಕೆ ತನ್ನ ಶಿಷ್ಯರಿಗೆ ಹೇಳಿದನು. (ಮಾರ್ಕ 6:41) ಹೀಗೆ ಬೇರೆಯವ್ರಿಗೆ ಸಹಾಯ ಮಾಡೋದು ಅದ್ರಲ್ಲೂ ಈ ತರ ಚಿಕ್ಕಪುಟ್ಟ ಕೆಲಸಗಳನ್ನೂ ಮಾಡೋದು ಎಷ್ಟು ಮುಖ್ಯ ಅನ್ನೋದನ್ನ ಯೇಸು ಕಲಿಸಿದನು. ಅದೇ ತರ ಇವತ್ತು ಸಹಾಯಕ ಸೇವಕರು ಮಾಡ್ತಿರೋದು ಚಿಕ್ಕಪುಟ್ಟ ಕೆಲಸಗಳೇ ಆಗಿದ್ರೂ ಅವು ತುಂಬ ಮುಖ್ಯನೇ. ಯೇಸುವಿನ ಶಿಷ್ಯರು ಊಟ ಹಂಚಿದಾಗ ಅಲ್ಲಿದ್ದ ಜನ್ರು “ಹೊಟ್ಟೆ ತುಂಬ” ತಿಂದು ತೃಪ್ತಿಪಟ್ಟಿದ್ದನ್ನ ನೋಡಿ ಅವ್ರಿಗೆಷ್ಟು ಖುಷಿ ಆಗಿರಬೇಕಲ್ವಾ? (ಮಾರ್ಕ 6:42) ಯೇಸು ತನ್ನ ಜೀವನದಲ್ಲಿ ತನಗೇನು ಇಷ್ಟ ಅನ್ನೋದಕ್ಕಿಂತ ಬೇರೆಯವ್ರ ಇಷ್ಟದ ಬಗ್ಗೆ ಯಾವಾಗ್ಲೂ ಯೋಚ್ನೆ ಮಾಡ್ತಿದ್ದನು. ತನ್ನ ಇಡೀ ಜೀವನನೇ ಬೇರೆಯವ್ರಿಗೆ ಸಹಾಯ ಮಾಡೋಕೆ ಮುಡಿಪಾಗಿಟ್ಟನು. (ಮತ್ತಾ. 4:23; 8:16) ಈ ತರ ಯೇಸು ಜನ್ರಿಗೆ ಯೆಹೋವ ದೇವರ ಬಗ್ಗೆ ಕಲಿಸ್ತಾ, ಸಹಾಯ ಮಾಡ್ತಾ ಜೀವನದಲ್ಲಿ ಸಂತೋಷ, ತೃಪ್ತಿ ಪಡ್ಕೊಂಡನು. ನೀವು ಕೂಡ ನಿಮ್ಮ ಬಗ್ಗೆ ಯೋಚ್ನೆ ಮಾಡದೇ ಬೇರೆಯವ್ರಿಗೆ ಸಹಾಯ ಮಾಡಬೇಕು ಅನ್ನೋ ಉದ್ದೇಶದಿಂದ ಸಹಾಯಕ ಸೇವಕರಾಗೋಕೆ ಮುಂದೆ ಬಂದ್ರೆ ಖುಷಿಯಾಗಿ ಇರ್ತೀರ.

ನಮಗೆ ಯೆಹೋವ ದೇವರ ಮೇಲೆ ಪ್ರೀತಿ ಇದ್ರೆ, ಬೇರೆಯವ್ರಿಗೆ ಸಹಾಯ ಮಾಡಬೇಕು ಅನ್ನೋ ಮನಸ್ಸಿದ್ರೆ ಸಭೆಲಿ ಯಾವ ಕೆಲ್ಸ ಕೊಟ್ರೂ ಮಾಡ್ತೀವಿ (ಪ್ಯಾರ 11 ನೋಡಿ) a


12. ಸಭೆಗೆ ನನ್ನಿಂದ ಅಷ್ಟೇನು ಉಪಯೋಗ ಇಲ್ಲ ಅಂತ ನಾವ್ಯಾಕೆ ಯೋಚ್ನೆ ಮಾಡಬಾರದು?

12 ಒಂದುವೇಳೆ ನಿಮಗೆ ‘ನನ್ನಲ್ಲಿ ಅಂಥ ದೊಡ್ಡ ಸಾಮರ್ಥ್ಯಗಳೇನೂ ಇಲ್ಲ’ ಅಂತ ಅನಿಸ್ತಿದ್ರೆ ಬೇಜಾರ್‌ ಮಾಡ್ಕೊಬೇಡಿ. ಸಭೆಲಿರೋ ಸಹೋದರ ಸಹೋದರಿಯರಿಗೆ ಸಹಾಯ ಮಾಡೋಕೆ ಖಂಡಿತ ನಿಮ್ಮಲ್ಲಿ ಒಳ್ಳೇ ಗುಣಗಳು ಇದ್ದೇ ಇರುತ್ತೆ. 1 ಕೊರಿಂಥ 12:12-30ರಲ್ಲಿರೋ ಪೌಲನ ಮಾತುಗಳನ್ನ ಅರ್ಥ ಮಾಡ್ಕೊಳ್ಳೋಕೆ ಯೆಹೋವ ದೇವರ ಹತ್ರ ಸಹಾಯ ಕೇಳಿ. ಸಭೆಲಿರೋ ಪ್ರತಿಯೊಬ್ರೂ ಯೆಹೋವನಿಗೆ ತುಂಬ ಅಮೂಲ್ಯ, ನಿಮ್ಮಿಂದ ಒಂದಲ್ಲಾ ಒಂದು ರೀತಿಲಿ ಸಭೆಗೆ ಸಹಾಯ ಮಾಡೋಕಾಗುತ್ತೆ ಅಂತ ಪೌಲ ಅಲ್ಲಿ ಹೇಳ್ತಿದ್ದಾನೆ. ಆದ್ರೆ ಸದ್ಯಕ್ಕೆ ನಿಮಗೆ ಒಬ್ಬ ಸಹಾಯಕ ಸೇವಕನಾಗಿ ಸೇವೆ ಮಾಡೋಕೆ ಬೇಕಾಗಿರೋ ಗುಣಗಳು ನಿಮ್ಮಲ್ಲಿಲ್ಲ ಅಂತ ಅನಿಸ್ತಿದ್ರೆ ಪ್ರಯತ್ನ ಬಿಡಬೇಡಿ. ಯೆಹೋವ ದೇವರ ಸೇವೆನ ಇನ್ನೂ ಹೇಗೆಲ್ಲಾ ಮಾಡಬಹುದು, ಸಹೋದರ ಸಹೋದರಿಯರಿಗೆ ಹೇಗೆ ಸಹಾಯ ಮಾಡಬಹುದು ಅಂತ ಯೋಚ್ನೆ ಮಾಡಿ. ಒಂದು ವಿಷ್ಯ ನೆನಪಿಡಿ, ನಿಮ್ಮಿಂದ ಯಾವ ನೇಮಕಗಳನ್ನ ಮಾಡಕ್ಕಾಗುತ್ತೆ ಅಂತ ಹಿರಿಯರಿಗೆ ಚೆನ್ನಾಗಿ ಗೊತ್ತು. ಅಂಥ ನೇಮಕಗಳನ್ನೇ ಅವರು ನಿಮಗೆ ಕೊಡ್ತಾರೆ.—ರೋಮ. 12:4-8.

13. ಸಹಾಯಕ ಸೇವಕರಲ್ಲಿ ಇರಬೇಕಾದ ಅರ್ಹತೆಗಳ ಬಗ್ಗೆ ಏನು ಹೇಳಬಹುದು?

13 ಇನ್ನೊಂದು ವಿಷ್ಯ ಏನು ಗೊತ್ತಾ? ಸಹಾಯಕ ಸೇವಕರಾಗೋಕೆ ಯಾವೆಲ್ಲ ಗುಣಗಳನ್ನ ಬೆಳೆಸ್ಕೊಬೇಕು ಅಂತ ಬೈಬಲ್‌ ಹೇಳುತ್ತೋ ಆ ಗುಣಗಳನ್ನ ನೀವಷ್ಟೇ ಅಲ್ಲ, ಕ್ರೈಸ್ತರಾದವ್ರೆಲ್ಲ ಬೆಳೆಸ್ಕೊಬೇಕು. ನಾವೆಲ್ರೂ ಯೆಹೋವ ದೇವ್ರಿಗೆ ಹತ್ರ ಆಗಬೇಕು, ಬೇರೆಯವ್ರಿಗೆ ಕೊಡೋದ್ರಿಂದ ಸಿಗೋ ಖುಷಿ ಪಡ್ಕೊಬೇಕು, ಯೆಹೋವನಿಗೆ ಇಷ್ಟ ಆಗೋ ತರ ಜೀವನ ಮಾಡಬೇಕು. ಸಹೋದರರೇ ನೀವು ಈಗಾಗ್ಲೇ ಈ ಎಲ್ಲಾ ಗುಣಗಳನ್ನ ತೋರಿಸ್ತಾ ಇದ್ದೀರ. ಆದ್ರೆ ಸಹಾಯಕ ಸೇವಕರಾಗೋಕೆ ನೀವು ಇನ್ನೂ ಏನು ಮಾಡಬೇಕು?

ಸಹಾಯಕ ಸೇವಕರಾಗೋಕೆ ಏನು ಮಾಡಬೇಕು?

14. ಸಹಾಯಕ ಸೇವಕ “ಜವಾಬ್ದಾರಿ ಇರೋ ವ್ಯಕ್ತಿ” ಆಗಿರಬೇಕು ಅನ್ನೋದ್ರ ಅರ್ಥ ಏನು? (1 ತಿಮೊತಿ 3:8-10, 12)

14 ಈಗ ಸಹಾಯಕ ಸೇವಕರಲ್ಲಿ ಇರಬೇಕಾದ ಕೆಲವು ಅರ್ಹತೆಗಳನ್ನ 1 ತಿಮೊತಿ 3:8-10, 12ರಲ್ಲಿ ಗಮನಿಸೋಣ. (ಓದಿ.) ಒಬ್ಬ ಸಹಾಯಕ ಸೇವಕ “ಜವಾಬ್ದಾರಿ ಇರೋ ವ್ಯಕ್ತಿ” ಆಗಿರಬೇಕು. ಇದನ್ನ ನಾವು ಅವನು “ಗಂಭೀರ ವ್ಯಕ್ತಿ” ಆಗಿರಬೇಕು ಅಥವಾ ಸಭೆಲಿರೋರು ಅವನನ್ನ “ಗೌರವಿಸೋ” ತರ ನಡ್ಕೊಬೇಕು ಅಂತನೂ ಭಾಷಾಂತರಿಸಬಹುದು. ಇದ್ರ ಅರ್ಥ ಅವನು ತಮಾಷೆ ಮಾಡಬಾರದು, ನಗಬಾರದು ಅಂತಲ್ಲ. (ಪ್ರಸಂ. 3:1, 4) ಅವನಿಗೆ ಸಿಗೋ ಎಲ್ಲಾ ಜವಾಬ್ದಾರಿಗಳನ್ನ ಮಾಡೋಕೆ ತನ್ನಿಂದಾದ ಎಲ್ಲ ಪ್ರಯತ್ನ ಹಾಕಬೇಕು. ಹೀಗೆ ಮಾಡಿದ್ರೆ ಅವನು ಸಭೆಲಿ ಇರೋರ ನಂಬಿಕೆ ಗಳಿಸ್ತಾನೆ ಮತ್ತು ಸಭೆಯವರು ಅವನನ್ನ ಗೌರವಿಸ್ತಾರೆ.

15. (ಎ) ‘ಎರಡು ನಾಲಿಗೆಯವನು’ ಆಗಿರಬಾರದು ಅನ್ನೋದ್ರ ಅರ್ಥ ಏನು? (ಬಿ) “ಹಣದಾಸೆ ಇರುವವರು, ಸ್ವಂತ ಲಾಭ ಮಾತ್ರ ನೋಡ್ಕೊಳ್ಳೋರು ಆಗಿರಬಾರದು” ಅನ್ನೋದ್ರ ಅರ್ಥ ಏನು?

15 ಒಬ್ಬ ಸಹಾಯಕ ಸೇವಕ ‘ಎರಡು ನಾಲಿಗೆಯವನು’ ಆಗಿರಬಾರದು. ಅಂದ್ರೆ ಅದ್ರ ಅರ್ಥ ನೀವು ಯಾವಾಗ್ಲೂ ನಿಜಾನೇ ಹೇಳಬೇಕು, ಪ್ರಾಮಾಣಿಕವಾಗಿ ಇರ್ಬೇಕು. ಬೇರೆಯವ್ರ ನಂಬಿಕೆ ಗಳಿಸಬೇಕು. ಕೊಟ್ಟ ಮಾತನ್ನ ಉಳಿಸ್ಕೊಬೇಕು, ಬೇರೆಯವ್ರಿಗೆ ಮೋಸ ಮಾಡಬಾರದು. (ಜ್ಞಾನೋ. 3:32) ನೀವು “ಹಣದಾಸೆ ಇರುವವರು, ಸ್ವಂತ ಲಾಭ ಮಾತ್ರ ನೋಡ್ಕೊಳ್ಳೋರು ಆಗಿರಬಾರದು” ಅಂದ್ರೆ ನೀವು ದುಡ್ಡಿನ ವಿಷ್ಯಕ್ಕೆ, ವ್ಯವಹಾರದ ವಿಷ್ಯಕ್ಕೆ ಬಂದಾಗ ಪ್ರಾಮಾಣಿಕವಾಗಿ ಇರ್ಬೇಕು. ನಮ್ಮ ಸಹೋದರ ಸಹೋದರಿಯರ ಪ್ರೀತಿನ ದುರುಪಯೋಗಿಸ್ಕೊಂಡು ದುಡ್ಡು ಮಾಡೋಕೆ ನೋಡಬಾರದು.

16. (ಎ) ‘ಮಿತಿಮೀರಿ ದ್ರಾಕ್ಷಾಮದ್ಯ ಕುಡಿಯುವವರು ಆಗಿರಬಾರದು’ ಅಂದ್ರೆ ಏನು? (ಬಿ)“ಶುದ್ಧ ಮನಸಾಕ್ಷಿಯಿಂದ” ಇರೋದು ಹೇಗೆ?

16 ಸಹಾಯಕ ಸೇವಕರು ‘ಮಿತಿಮೀರಿ ದ್ರಾಕ್ಷಾಮದ್ಯ ಕುಡಿಯುವವರು ಆಗಿರಬಾರದು.’ ಅದ್ರ ಅರ್ಥ ನೀವು ತುಂಬ ಮದ್ಯ ಕುಡಿಯೋರು ಆಗಿರಬಾರದು. ನಿಮಗೆ “ಇವನು ತುಂಬ ಕುಡಿತಾನೆ” ಅನ್ನೋ ಹೆಸ್ರು ಇರಬಾರದು. “ಶುದ್ಧ ಮನಸಾಕ್ಷಿ” ಇರ್ಬೇಕು. ಅದ್ರ ಅರ್ಥ ನೀವು ಯೆಹೋವನ ನೀತಿ-ನಿಯಮಗಳನ್ನ ಪಾಲಿಸಬೇಕು. ಆದ್ರೆ ನಿಮ್ಮಿಂದ ಕೆಲವೊಮ್ಮೆ ತಪ್ಪುಗಳಾಗುತ್ತೆ ನಿಜ, ಆದ್ರೂ ಯೆಹೋವನಿಗೆ ಇಷ್ಟ ಆಗೋ ತರ ನಡ್ಕೊಳ್ತಾ ಆತನ ಜೊತೆ ಒಳ್ಳೇ ಫ್ರೆಂಡ್‌ಶಿಪ್‌ ಬೆಳೆಸ್ಕೊಂಡ್ರೆ ನಿಮ್ಮ ಜೀವನದಲ್ಲಿ ನೆಮ್ಮದಿ ಇರುತ್ತೆ.

17. ಒಬ್ಬ ಸಹೋದರ ತಾನು ಸಹಾಯಕ ಸೇವಕನಾಗೋ ಸುಯೋಗಕ್ಕೆ ‘ಯೋಗ್ಯನಾಗಿದ್ದೀನಿ’ ಅಂತ ಹೇಗೆ ತೋರಿಸಬಹುದು? (1 ತಿಮೊತಿ 3:10; ಚಿತ್ರ ನೋಡಿ.)

17 ಹಿರಿಯರು ನೀವು “ಈ ಸುಯೋಗಕ್ಕೆ ಯೋಗ್ಯರಾ ಅಂತ ಮೊದ್ಲೇ ಪರೀಕ್ಷಿಸಿ” ನೋಡ್ತಾರೆ ಅಂದ್ರೆ ಏನರ್ಥ? ನೀವು ಸಹಾಯಕ ಸೇವಕರಾಗೋ ಮುಂಚೆನೇ ಹಿರಿಯರು ನಿಮಗೆ ಕೆಲವು ನೇಮಕಗಳನ್ನ ಕೊಟ್ಟು ಅದನ್ನ ನೀವು ಹೇಗೆ ಮಾಡ್ತೀರಾ ಅಂತ ನೋಡ್ತಾರೆ. ಹಾಗಾಗಿ ನಿಮಗೆ ಯಾವುದಾದ್ರೂ ನೇಮಕ ಸಿಕ್ಕಾಗ ಹಿರಿಯರು ಮತ್ತು ಸಂಘಟನೆ ಕೊಡೋ ನಿರ್ದೇಶನಗಳನ್ನ ಚೆನ್ನಾಗಿ ಪಾಲಿಸಿ. ಆ ನೇಮಕನ ಹೇಗೆ ಮಾಡಬೇಕು, ಯಾವಾಗ ಮಾಡಿ ಮುಗಿಸಬೇಕು ಅಂತ ಚೆನ್ನಾಗಿ ತಿಳ್ಕೊಳ್ಳಿ. ಈ ತರ ಕೊಟ್ಟ ಕೆಲಸನ ನೀವು ನಿಯತ್ತಾಗಿ ಮಾಡಿ ಮುಗಿಸಿದ್ರೆ ಸಭೆಲಿರೋ ಎಲ್ರೂ ನಿಮ್ಮನ್ನ ಜವಾಬ್ದಾರಿ ಇರೋ ವ್ಯಕ್ತಿ ತರ ನೋಡೋಕೆ ಶುರುಮಾಡ್ತಾರೆ. ಹಿರಿಯರೇ, ನೀವೂ ದೀಕ್ಷಾಸ್ನಾನ ಆಗಿರೋ ಸಹೋದರರಿಗೆ ಚೆನ್ನಾಗಿ ತರಬೇತಿ ಕೊಡಿ. (1 ತಿಮೊತಿ 3:10 ಓದಿ.) ನಿಮ್ಮ ಸಭೆಲಿ 10-14 ವರ್ಷದ ಸಹೋದರರು ಅಥವಾ ಅದಕ್ಕಿಂತ ಕಮ್ಮಿ ವಯಸ್ಸಿನ ಸಹೋದರರು ಯಾರಾದ್ರೂ ದೀಕ್ಷಾಸ್ನಾನ ಪಡ್ಕೊಂಡಿದ್ದಾರಾ? ಅವ್ರಿಗೆ ಬೈಬಲ್‌ ಅಧ್ಯಯನ ಮಾಡೋ ರೂಢಿ ಇದ್ಯಾ? ಕೂಟಗಳಿಗೆ ಯಾವಾಗ್ಲೂ ತಯಾರಿ ಮಾಡ್ತಾರಾ? ಉತ್ರ ಹೇಳೋಕೆ ಮತ್ತು ಸಿಹಿಸುದ್ದಿ ಸಾರೋಕೆ ಯಾವಾಗ್ಲೂ ಮುಂದೆ ಬರ್ತಾರಾ? ಅಂತ ಯೋಚ್ನೆ ಮಾಡಿ. ಒಂದುವೇಳೆ ಇದ್ರೆ ಅವ್ರ ವಯಸ್ಸಿಗೆ ಮತ್ತು ಅವ್ರ ಪರಿಸ್ಥಿತಿಗೆ ತಕ್ಕ ಹಾಗಿರೋ ನೇಮಕಗಳನ್ನ ಕೊಡಿ. ನೀವು ನೇಮಕಗಳನ್ನ ಕೊಟ್ಟಾಗ್ಲೇ ಅವರು ಆ “ಸುಯೋಗಕ್ಕೆ ಯೋಗ್ಯರಾ ಅಂತ ಮೊದ್ಲೇ ಪರೀಕ್ಷಿಸಿ” ನೋಡೋಕಾಗುತ್ತೆ. ಆಗ ಅವರು 17ನೇ ವಯಸ್ಸಲ್ಲೇ ಸಹಾಯಕ ಸೇವಕರಾಗೋಕೆ ರೆಡಿ ಇರ್ತಾರೆ.

ಹಿರಿಯರು ದೀಕ್ಷಾಸ್ನಾನ ಆಗಿರೋರಿಗೆ ನೇಮಕಗಳನ್ನ ಕೊಟ್ಟು ಅವರು ಸಹಾಯಕ ಸೇವಕರಾಗೋಕೆ ‘ಯೋಗ್ಯರಾ’ ಅಂತ ಪರೀಕ್ಷಿಸಿ ನೋಡ್ತಾರೆ (ಪ್ಯಾರ 17 ನೋಡಿ)


18. ‘ನಿಮ್ಮ ಮೇಲೆ ಯಾವ ದೂರು ಇರಬಾರದು’ ಅನ್ನೋದ್ರ ಅರ್ಥ ಏನು?

18 ಸಹಾಯಕ ಸೇವಕನ ‘ಮೇಲೆ ಯಾವ ದೂರು ಇರಬಾರದು’ ಅದ್ರ ಅರ್ಥ ಬೇರೆಯವರು ಅವನ ಮೇಲೆ ತಪ್ಪುಹೊರಿಸೋ ಕೆಟ್ಟ ನಡತೆ ಅವನಲ್ಲಿ ಇರಬಾರದು. ಆದ್ರೆ ಯೇಸುವಿನ ಶಿಷ್ಯರಾಗಿ ಇರೋದ್ರಿಂದ ನಮ್ಮ ಮೇಲೆ ಜನ ಕೆಲವೊಮ್ಮೆ ಸುಳ್ಳು ಅಪವಾದಗಳನ್ನ ಹಾಕಬಹುದು. ಯಾಕಂದ್ರೆ ಹೀಗಾಗುತ್ತೆ ಅಂತ ಯೇಸು ಮುಂಚೆನೇ ಹೇಳಿದ್ದನು. ಯೇಸು ಮೇಲೂ ಸುಳ್ಳು ಅಪವಾದಗಳಿತ್ತು. (ಯೋಹಾ. 15:20) ಆದ್ರೆ ಯೇಸು ತರ ನೀವೂ ಯೆಹೋವನಿಗೆ ಇಷ್ಟ ಆಗೋ ಹಾಗೆ ನಡ್ಕೊಂಡ್ರೆ ಸಭೆಲಿ ನಿಮಗೆ ಒಳ್ಳೇ ಹೆಸ್ರು ಇರುತ್ತೆ.—ಮತ್ತಾ. 11:19.

19. “ಸಹಾಯಕ ಸೇವಕನಿಗೆ ಒಬ್ಬಳೇ ಹೆಂಡತಿ ಇರಬೇಕು” ಅನ್ನೋದ್ರ ಅರ್ಥ ಏನು?

19 “ಸಹಾಯಕ ಸೇವಕನಿಗೆ ಒಬ್ಬಳೇ ಹೆಂಡತಿ ಇರಬೇಕು.” ಇದ್ರ ಅರ್ಥ ಒಬ್ಬ ಸಹೋದರ ಮದುವೆ ಬಗ್ಗೆ ಯೆಹೋವ ದೇವರು ಇಟ್ಟಿರೋ ನಿಯಮನ ಪಾಲಿಸಬೇಕು. ಯೆಹೋವ ದೇವರು ಮದುವೆ ಬಂಧವನ್ನ ಶುರುಮಾಡಿದಾಗ ಒಬ್ಬ ಪುರುಷನಿಗೆ ಒಬ್ಬಳೇ ಸ್ತ್ರೀಯನ್ನ ಕೊಟ್ಟನು. (ಮತ್ತಾ. 19:3-9) ಹಾಗಾಗಿ ಒಬ್ಬ ಕ್ರೈಸ್ತ ಸಹೋದರ ಯೆಹೋವ ಕೊಟ್ಟಿರೋ ಈ ನಿಯಮನ ಪಾಲಿಸಬೇಕು, ಲೈಂಗಿಕ ಅನೈತಿಕತೆ ಮಾಡಬಾರದು. (ಇಬ್ರಿ. 13:4) ಅವನು ತನ್ನ ಹೆಂಡ್ತಿಗೆ ಯಾವತ್ತೂ ದ್ರೋಹ ಮಾಡಬಾರದು. ಅವಳನ್ನ ಬಿಟ್ಟು ಬೇರೆ ಯಾವ ಸ್ತ್ರೀ ಮೇಲೂ ಆಸೆ ಬೆಳೆಸ್ಕೊಬಾರದು.—ಯೋಬ 31:1.

20. ಒಬ್ಬ ಸಹೋದರ ಕುಟುಂಬನ “ಚೆನ್ನಾಗಿ” ನೋಡ್ಕೊಳ್ಳೋಕೆ ಏನು ಮಾಡಬೇಕು?

20 ನೀವು “ಕುಟುಂಬನ ಅದ್ರಲ್ಲೂ ಮಕ್ಕಳನ್ನ ಚೆನ್ನಾಗಿ ನೋಡ್ಕೊಬೇಕು.” ನೀವು ಕುಟುಂಬದ ಯಜಮಾನ ಆಗಿದ್ರೆ ಕುಟುಂಬದ ಜವಾಬ್ದಾರಿಗಳನ್ನ ಅಚ್ಚುಕಟ್ಟಾಗಿ ಮಾಡಬೇಕು. ಕುಟುಂಬ ಆರಾಧನೆನ ತಪ್ಪದೇ ಮಾಡಬೇಕು. ಆಗಾಗ ನಿಮ್ಮ ಹೆಂಡ್ತಿ-ಮಕ್ಕಳ ಜೊತೆ ಸೇವೆಗೆ ಹೋಗಬೇಕು. ನಿಮ್ಮ ಮಕ್ಕಳಿಗೆ ಯೆಹೋವ ದೇವರ ಫ್ರೆಂಡ್ಸ್‌ ಆಗೋಕೆ ಸಹಾಯ ಮಾಡಬೇಕು. (ಎಫೆ. 6:4) ಯಾರು ತಮ್ಮ ಕುಟುಂಬನ ಚೆನ್ನಾಗಿ ನೋಡ್ಕೊತಾರೋ ಅವರಿಗೆ ಸಭೆನೂ ಚೆನ್ನಾಗಿ ನೋಡ್ಕೊಳ್ಳೋಕೆ ಆಗುತ್ತೆ.—1 ತಿಮೊತಿ 3:5 ಹೋಲಿಸಿ.

21. ನೀವಿನ್ನೂ ಸಹಾಯಕ ಸೇವಕರಾಗಿಲ್ಲಾಂದ್ರೆ ಏನು ಮಾಡಬಹುದು?

21 ಸಹೋದರರೇ, ನೀವಿನ್ನೂ ಸಹಾಯಕ ಸೇವಕರಾಗಿಲ್ಲಾಂದ್ರೆ ಈ ಲೇಖನದಲ್ಲಿ ಕಲಿತ ವಿಷ್ಯಗಳ ಬಗ್ಗೆ ಚೆನ್ನಾಗಿ ಯೋಚ್ನೆ ಮಾಡಿ. ಅದ್ರ ಬಗ್ಗೆ ಯೆಹೋವ ದೇವರ ಹತ್ರ ಪ್ರಾರ್ಥಿಸಿ. ಸಹಾಯಕ ಸೇವಕರಾಗೋಕೆ ಯಾವೆಲ್ಲಾ ಅರ್ಹತೆಗಳು ಬೇಕು ಅಂತ ತಿಳ್ಕೊಳ್ಳಿ. ಅದನ್ನ ಮುಟ್ಟೋಕೆ ನಿಮ್ಮಿಂದಾದ ಪ್ರಯತ್ನ ಮಾಡಿ. ನೀವು ಯೆಹೋವನನ್ನ, ಸಹೋದರ ಸಹೋದರಿಯರನ್ನ ಎಷ್ಟು ಪ್ರೀತಿಸ್ತೀರ ಅಂತ ಯೋಚ್ನೆ ಮಾಡಿ. ನಿಮ್ಮ ಸಹೋದರ ಸಹೋದರಿಯರಿಗೆ ಸಹಾಯ ಮಾಡೋಕೆ, ಯೆಹೋವನ ಸೇವೆ ಮಾಡೋಕೆ ನಿಮಗಿರೋ ಆಸೆನ ಜಾಸ್ತಿ ಮಾಡ್ಕೊಳ್ಳಿ. (1 ಪೇತ್ರ 4:8, 10) ನೀವು ಹೀಗೆ ಮಾಡಿದ್ರೆ ಖುಷಿಯಾಗಿ ಇರ್ತೀರ. ಸಹಾಯಕ ಸೇವಕರಾಗೋಕೆ ನೀವು ಮಾಡ್ತಿರೋ ಪ್ರಯತ್ನನ ಯೆಹೋವ ಆಶೀರ್ವದಿಸಲಿ!—ಫಿಲಿ. 2:13.

ಗೀತೆ 17 “ನನಗೆ ಮನಸ್ಸಿದೆ”

a ಚಿತ್ರ ವಿವರಣೆ: ಎಡಗಡೆ ಚಿತ್ರದಲ್ಲಿ ಯೇಸು ಬೇರೆಯವ್ರಿಗೆ ಸಹಾಯ ಮಾಡ್ತಿದ್ದಾನೆ. ಬಲಗಡೆ ಚಿತ್ರದಲ್ಲಿ ಒಬ್ಬ ಸಹಾಯಕ ಸೇವಕ ವಯಸ್ಸಾಗಿರೋ ಸಹೋದರನಿಗೆ ಸಹಾಯ ಮಾಡ್ತಿದ್ದಾನೆ.