ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 47

ಗೀತೆ 103 ಮಂದೆಯನ್ನು ಕಾಯುವ ಪಾಲಕರು

ಸಹೋದರರೇ, ಹಿರಿಯರಾಗೋಕೆ ನೀವು ಪ್ರಯತ್ನ ಹಾಕ್ತಿದ್ದೀರಾ?

ಸಹೋದರರೇ, ಹಿರಿಯರಾಗೋಕೆ ನೀವು ಪ್ರಯತ್ನ ಹಾಕ್ತಿದ್ದೀರಾ?

“ಒಬ್ಬನು ಮೇಲ್ವಿಚಾರಕನಾಗೋಕೆ ಪ್ರಯತ್ನಿಸಿದ್ರೆ ಅವನು ಒಳ್ಳೇದು ಮಾಡೋಕೆ ಇಷ್ಟಪಡ್ತಿದ್ದಾನೆ.”1 ತಿಮೊ. 3:1.

ಈ ಲೇಖನದಲ್ಲಿ ಏನಿದೆ?

ಒಬ್ಬ ಸಹೋದರ ಹಿರಿಯನಾಗಬೇಕಂದ್ರೆ ಅವನಿಗೆ ಯಾವೆಲ್ಲ ಅರ್ಹತೆಗಳು ಇರಬೇಕು ಅಂತ ಬೈಬಲಲ್ಲಿದೆ. ಅದನ್ನ ನಾವು ಈ ಲೇಖನದಲ್ಲಿ ನೋಡೋಣ.

1-2. ಹಿರಿಯರು ಏನೆಲ್ಲ ಮಾಡ್ತಾರೆ?

 ನೀವು ಸಹಾಯಕ ಸೇವಕರಾಗಿ ಸೇವೆ ಮಾಡ್ತಿರೋದಾದ್ರೆ ಒಬ್ಬ ಹಿರಿಯನಲ್ಲಿ ಇರಬೇಕಾದ ಹೆಚ್ಚಿನ ಗುಣಗಳನ್ನ ಈಗಾಗಲೇ ಬೆಳೆಸ್ಕೊಳ್ಳೋಕೆ ಸಾಕಷ್ಟು ಪ್ರಯತ್ನ ಹಾಕಿರ್ತೀರ. ಈಗ ನೀವು ಒಬ್ಬ ಹಿರಿಯನಾಗಿ ‘ಒಳ್ಳೇದು ಮಾಡೋಕೆ ಇಷ್ಟಪಡ್ತೀರಾ?’ ಸಭೆಲಿರೋ ಸಹೋದರ-ಸಹೋದರಿಯರಿಗೆ ಇನ್ನೂ ಜಾಸ್ತಿ ಸಹಾಯ ಮಾಡೋಕೆ ಇಷ್ಟಪಡ್ತೀರಾ?—1 ತಿಮೊ. 3:1.

2 ಹಿರಿಯರು ಏನೆಲ್ಲ ಮಾಡ್ತಾರೆ? ಅವರು ಸಭೆ ಜೊತೆ ಸೇರಿ ಉತ್ಸಾಹದಿಂದ ಸಿಹಿಸುದ್ದಿ ಸಾರ್ತಾರೆ. ಸಭೆಯಲ್ಲಿ ಇರೋರಿಗೆ ಚೆನ್ನಾಗಿ ಕಲಿಸ್ತಾರೆ, ಅವ್ರನ್ನ ಪರಿಪಾಲಿಸ್ತಾರೆ. ಸಭೆ ಒಗ್ಗಟ್ಟಾಗಿ ಇರೋಕೆ ಸಹಾಯ ಮಾಡ್ತಾರೆ. ಅವ್ರ ಮಾತಿಂದ, ನಡತೆಯಿಂದ ಇಡೀ ಸಭೆಗೆ ಪ್ರೋತ್ಸಾಹ ಕೊಡ್ತಾರೆ. ಅದಕ್ಕೇ ಇಷ್ಟು ಕಷ್ಟಪಟ್ಟು ಕೆಲಸಮಾಡ್ತಿರೋ ನಮ್ಮ ಹಿರಿಯರನ್ನ ದೇವರು ಕೊಟ್ಟ “ಉಡುಗೊರೆ” ಅಂತ ಬೈಬಲ್‌ ಕರಿಯುತ್ತೆ.—ಎಫೆ. 4:8.

3. ಒಬ್ಬ ಸಹೋದರ ಹಿರಿಯನಾಗಿ ಸೇವೆ ಮಾಡೋಕೆ ಏನು ಮಾಡಬೇಕು? (1 ತಿಮೊತಿ 3:1-7; ತೀತ 1:5-9)

3 ಹಿರಿಯರಾಗಿ ಸೇವೆ ಮಾಡೋಕೆ ಏನು ಮಾಡಬೇಕು? ಹಿರಿಯರಾಗಿ ಸೇವೆಮಾಡೋದು ಒಂದು ಕೆಲಸಕ್ಕೆ ಸೇರಿಕೊಂಡ ಹಾಗಲ್ಲ. ನೀವು ಒಂದು ಕಂಪನಿಯಲ್ಲಿ ಕೆಲಸಕ್ಕೆ ಸೇರ್ಕೊಬೇಕಂದ್ರೆ ಅವರು ಯಾವ ತರದ ಕೆಲಸ ಮಾಡೋರನ್ನ ಹುಡುಕ್ತಾ ಇದ್ದಾರೋ ಆ ಕೆಲಸ ನಿಮಗೆ ಬರ್ತಿದ್ರೆ ಸಾಕು ಅವರು ನಿಮ್ಮನ್ನ ಕರ್ಕೊಳ್ತಾರೆ. ಆದ್ರೆ ಹಿರಿಯರಾಗಬೇಕಂದ್ರೆ ನಿಮಗೆ ಸಿಹಿಸುದ್ದಿ ಸಾರೋಕೆ ಮತ್ತು ಸಭೆಯಲ್ಲಿ ಬೋಧಿಸೋಕೆ ಬಂದ್ರೆ ಸಾಕಾಗಲ್ಲ, 1 ತಿಮೊತಿ 3:1-7 ಮತ್ತು ತೀತ 1:5-9ರಲ್ಲಿ ಇರೋ ಅರ್ಹತೆಗಳೂ ಇರ್ಬೇಕು. (ಓದಿ.) ಈ ವಚನಗಳಲ್ಲಿರೋ ಅರ್ಹತೆಗಳನ್ನ ಈ ಲೇಖನದಲ್ಲಿ ನೋಡೋಣ. ಅಷ್ಟೇ ಅಲ್ಲ, ಹಿರಿಯನಾಗೋಕೆ ಒಬ್ಬ ಸಹೋದರ (1) ಸಭೆಯಲ್ಲಷ್ಟೇ ಅಲ್ಲ, ಹೊರಗಡೆ ಕೂಡ ಒಳ್ಳೇ ಹೆಸ್ರು ಪಡ್ಕೊಳ್ಳೋಕೆ ಏನು ಮಾಡಬೇಕು? (2) ಕುಟುಂಬದಲ್ಲಿ ಒಳ್ಳೇ ಯಜಮಾನನಾಗಿ ಇರೋಕೆ ಏನು ಮಾಡಬೇಕು? (3) ಸಭೆಯಲ್ಲಿ ಇರೋರಿಗೆ ಸಹಾಯ ಮಾಡೋ ಒಳ್ಳೇ ಮನಸ್ಸನ್ನ ಬೆಳೆಸ್ಕೊಳ್ಳೋಕೆ ಯಾವುದು ಸಹಾಯ ಮಾಡುತ್ತೆ ಅಂತ ನೋಡೋಣ.

ಒಳ್ಳೇ ಹೆಸ್ರು ಸಂಪಾದಿಸಿ

4. “ಯಾವ ಆರೋಪನೂ ಇರಬಾರ್ದು” ಅಂದ್ರೆ ಏನರ್ಥ?

4 ಒಬ್ಬ ಸಹೋದರ ಹಿರಿಯನಾಗಬೇಕಂದ್ರೆ, ಅವನ ಮೇಲೆ “ಯಾವ ಆರೋಪನೂ ಇರಬಾರ್ದು” ಅಂದ್ರೆ ಸಭೆಲಿ ಅವನು ಒಳ್ಳೇ ಹೆಸ್ರು ಪಡ್ಕೊಂಡಿರಬೇಕು. ಬೇರೆಯವರು ತಪ್ಪು ಹೊರಿಸೋ ತರ ಅವನಲ್ಲಿ ಯಾವ ಕೆಟ್ಟ ನಡತೆನೂ ಇರಬಾರ್ದು. ಸಭೆಯಲ್ಲಷ್ಟೇ ಅಲ್ಲ, “ಹೊರಗಿನವ್ರ ಹತ್ರನೂ ಅವನಿಗೆ ಒಳ್ಳೇ ಹೆಸ್ರಿರಬೇಕು.” ನಿಜ, ಯೆಹೋವನನ್ನ ಆರಾಧಿಸದೇ ಇರೋ ಜನ ನಿಮ್ಮ ನಂಬಿಕೆ ಬಗ್ಗೆ ಕೆಟ್ಟದಾಗಿ ಮಾತಾಡಬಹುದು. ಆದ್ರೆ ಅವರು ನಿಮ್ಮ ಬಗ್ಗೆ, ನಿಮ್ಮ ಪ್ರಾಮಾಣಿಕತೆ ಬಗ್ಗೆ, ನಿಮ್ಮ ನಡತೆ ಬಗ್ಗೆ ಕೆಟ್ಟದಾಗಿ ಮಾತಾಡೋಕೆ ಅವಕಾಶ ಕೊಡಬಾರದು. (ದಾನಿ. 6:4, 5) ಹಾಗಾಗಿ ನೀವು ನಿಮ್ಮನ್ನೇ, ‘ನಂಗೆ ಸಭೆಲಿ ಮತ್ತು ಹೊರಗಿನವ್ರ ಹತ್ರ ಒಳ್ಳೇ ಹೆಸ್ರು ಇದ್ಯಾ?’ ಅಂತ ಕೇಳ್ಕೊಳ್ಳಿ.

5. ನೀವು “ಒಳ್ಳೇದು ಮಾಡೋಕೆ ಇಷ್ಟಪಡೋ” ವ್ಯಕ್ತಿ ಆಗಿದ್ರೆ ಏನು ಮಾಡ್ತೀರಾ?

5 ನೀವು “ಒಳ್ಳೇದು ಮಾಡೋಕೆ ಇಷ್ಟಪಡೋ” ವ್ಯಕ್ತಿ ಆಗಿದ್ರೆ ಬೇರೆಯವ್ರಲ್ಲಿ ಯಾವಾಗ್ಲೂ ಒಳ್ಳೇದನ್ನೇ ನೋಡ್ತೀರ. ಅವ್ರನ್ನ ಹೊಗಳ್ತೀರ. ಅಷ್ಟೇ ಅಲ್ಲ, ಬೇರೆಯವ್ರಿಗೆ ಒಳ್ಳೇದಾಗೋಕೆ ನೀವು ಏನು ಬೇಕಾದ್ರೂ ಮಾಡೋಕೆ ರೆಡಿ ಇರ್ತೀರ. (1 ಥೆಸ. 2:8; ತೀತ 1:8) ಹಿರಿಯರು ಯಾಕೆ ಒಳ್ಳೇದನ್ನ ಮಾಡೋಕೆ ಇಷ್ಟಪಡೋ ವ್ಯಕ್ತಿಗಳಾಗಿರಬೇಕು? ಆ ಗುಣ ಇದ್ರೆ ಮಾತ್ರನೇ ಹಿರಿಯರು ಸಭೆಲಿರೋ ಸಹೋದರ-ಸಹೋದರಿಯರನ್ನ ಪರಿಪಾಲಿಸೋಕೆ, ನೇಮಕಗಳನ್ನ ಚೆನ್ನಾಗಿ ಮಾಡೋಕೆ ತುಂಬ ಸಮಯ ಕೊಡೋಕಾಗುತ್ತೆ. (1 ಪೇತ್ರ 5:1-3) ಅದಕ್ಕೋಸ್ಕರ ನೀವು ಎಷ್ಟೇ ತ್ಯಾಗ ಮಾಡಿದ್ರೂ ಅದ್ರಿಂದ ಸಿಗೋ ಖುಷಿನ ಯಾವುದಕ್ಕೂ ಹೋಲಿಸಕ್ಕಾಗಲ್ಲ.—ಅ. ಕಾ. 20:35.

6. ಅತಿಥಿಗಳನ್ನ ಸತ್ಕರಿಸೋ ಗುಣ ಇರೋ ವ್ಯಕ್ತಿ ಏನು ಮಾಡ್ತಾನೆ? (ಇಬ್ರಿಯ 13:2, 16; ಚಿತ್ರ ನೋಡಿ)

6 ನಮಗೆ ತುಂಬ ಹತ್ರ ಆಗಿರೋರು ಮತ್ತು ನಮ್ಮ ಸ್ನೇಹಿತರಿಗಷ್ಟೇ ಅಲ್ಲ ಬೇರೆಯವ್ರಿಗೂ ಒಳ್ಳೇದನ್ನ ಮಾಡೋಕೆ ಪ್ರಯತ್ನಿಸಿದಾಗ ನಮ್ಮಲ್ಲಿ ‘ಅತಿಥಿಗಳನ್ನ ಸತ್ಕರಿಸೋ’ ಗುಣ ಇದೆ ಅಂತ ತೋರಿಸ್ಕೊಡ್ತೀವಿ. (1 ಪೇತ್ರ 4:9) ಇದ್ರ ಬಗ್ಗೆ ಒಂದು ಬೈಬಲ್‌ ಡಿಕ್ಷನರಿ ಏನು ಹೇಳುತ್ತೆ ಅಂದ್ರೆ: “ಅತಿಥಿಗಳನ್ನ ಸತ್ಕರಿಸೋ ವ್ಯಕ್ತಿಯ ಮನೆ ಬಾಗಿಲು ಮನಸ್ಸಿನ ಬಾಗಿಲು ಯಾವಾಗ್ಲೂ ತೆರಿದಿರುತ್ತೆ. ತನಗೆ ಪರಿಚಯ ಇಲ್ಲದಿರೋ ಜನ್ರಿಗೂ ಅವನು ಪ್ರೀತಿ ತೋರಿಸ್ತಾನೆ.” ಹಾಗಾಗಿ ‘ಸಭೆಗೆ ಬರೋ ಎಲ್ರಿಗೂ ನಾನು ಪ್ರೀತಿ ತೋರಿಸ್ತೀನಾ?’ ಅಂತ ನಿಮ್ಮನ್ನೇ ಕೇಳ್ಕೊಳ್ಳಿ. (ಇಬ್ರಿಯ 13:2, 16 ಓದಿ.) ಅತಿಥಿಗಳನ್ನ ಸತ್ಕರಿಸೋ ಗುಣ ಇರೋ ವ್ಯಕ್ತಿ ಎಲ್ಲ ತರದ ಜನ್ರನ್ನೂ ಪ್ರೀತಿಸ್ತಾನೆ. ಅವನು ಬಡವರಿಗೆ, ತುಂಬ ಕಷ್ಟಪಟ್ಟು ಕೆಲಸ ಮಾಡ್ತಿರೋ ಸಹೋದರ ಸಹೋದರಿಯರಿಗೆ, ಸಂಚರಣಾ ಮೇಲ್ವಿಚಾರಕರಿಗೆ ಮತ್ತು ಬೇರೆ ಕಡೆಯಿಂದ ಭಾಷಣ ಕೊಡೋಕೆ ಬಂದ ಸಹೋದರರಿಗೆ ಅತಿಥಿಸತ್ಕಾರ ಮಾಡ್ತಾನೆ.—ಆದಿ. 18:2-8; ಜ್ಞಾನೋ. 3:27; ಲೂಕ 14:13, 14; ಅ. ಕಾ. 16:15; ರೋಮ. 12:13.

ಅತಿಥಿಗಳನ್ನ ಸತ್ಕರಿಸೋ ಗುಣ ಇರೋ ಒಬ್ಬ ದಂಪತಿ ಸಂಚರಣ ಮೇಲ್ವಿಚಾರಕನನ್ನ ಮತ್ತು ಅವನ ಹೆಂಡ್ತಿನ ತಮ್ಮ ಮನೆಗೆ ಸ್ವಾಗತಿಸ್ತಿದ್ದಾರೆ. (ಪ್ಯಾರ 6 ನೋಡಿ)


7. “ಹಣದಾಸೆ ಇರಬಾರದು” ಅನ್ನೋದ್ರ ಅರ್ಥ ಏನು?

7 “ಹಣದಾಸೆ ಇರಬಾರದು” ಅಂದ್ರೆ ನಿಮ್ಮ ಜೀವನದಲ್ಲಿ ದುಡ್ಡು ಮಾಡೋದು, ಆಸ್ತಿ-ಅಂತಸ್ತನ್ನ ಕೂಡಿಸೋದೇ ಮುಖ್ಯ ಆಗಿರಬಾರದು. ನೀವು ಶ್ರೀಮಂತರಾಗಿರಲಿ, ಬಡವರಾಗಿರಲಿ ದೇವರ ಆಳ್ವಿಕೆಗೆ ಮೊದಲನೇ ಸ್ಥಾನ ಕೊಡಬೇಕು. (ಮತ್ತಾ. 6:33) ನಿಮ್ಮ ಸಮಯ, ಶಕ್ತಿ ಮತ್ತು ನಿಮ್ಮ ಹತ್ರ ಇರೋ ವಸ್ತುಗಳನ್ನ ಯೆಹೋವನನ್ನ ಆರಾಧಿಸೋಕೆ, ನಿಮ್ಮ ಕುಟುಂಬನ ನೋಡ್ಕೊಳ್ಳೋಕೆ, ಸಭೆಯಲ್ಲಿರೋ ಸಹೋದರ ಸಹೋದರಿಯರಿಗೆ ಸಹಾಯ ಮಾಡೋಕೆ ಉಪಯೋಗಿಸಬೇಕು. (ಮತ್ತಾ. 6:24; 1 ಯೋಹಾ. 2:15-17) ಹಾಗಾಗಿ ನೀವು ನಿಮ್ಮನ್ನೇ, ‘ನನ್ನ ಜೀವನದಲ್ಲಿ ದುಡ್ಡಿಗೆ ಯಾವ ಸ್ಥಾನ ಕೊಟ್ಟಿದ್ದೀನಿ? ನನ್ನ ಹತ್ರ ಇರೋದ್ರಲ್ಲಿ ನಾನು ತೃಪ್ತಿಯಾಗಿದ್ದೀನಾ? ಅಥವಾ ದುಡ್ಡು ಮಾಡಬೇಕು, ಹಣ-ಆಸ್ತಿ ಕೂಡಿಸಬೇಕು ಅಂತ ಯಾವಾಗ್ಲೂ ಯೋಚಿಸ್ತಾ ಇರ್ತಿನಾ?’ ಅಂತ ಕೇಳ್ಕೊಳ್ಳಿ.—1 ತಿಮೊ. 6:6, 17-19.

8. ಎಲ್ಲ ವಿಷ್ಯದಲ್ಲೂ “ಇತಿಮಿತಿ ಇರಬೇಕು” ಮತ್ತು ನಿಮ್ಮನ್ನ ನೀವು ‘ನಿಯಂತ್ರಣದಲ್ಲಿ ಇಟ್ಕೊಬೇಕು’ ಅನ್ನೋದ್ರ ಅರ್ಥ ಏನು?

8 ಎಲ್ಲ ವಿಷ್ಯದಲ್ಲೂ “ಇತಿಮಿತಿ ಇರಬೇಕು” ಮತ್ತು “ನಿಮ್ಮನ್ನ ನೀವು ನಿಯಂತ್ರಿಸ್ಕೊಳ್ಳಬೇಕು.” ಉದಾಹರಣೆಗೆ ತಿನ್ನೋದ್ರಲ್ಲಿ, ಕುಡಿಯೋದ್ರಲ್ಲಿ, ಬಟ್ಟೆ ಮತ್ತು ತಲೆ ಬಾಚ್ಕೊಳ್ಳೋ ವಿಷ್ಯದಲ್ಲಿ ಮತ್ತು ಮನರಂಜನೆ ವಿಷ್ಯದಲ್ಲಿ ಅತಿರೇಕಕ್ಕೆ ಹೋಗಬಾರದು. ಲೋಕದ ಜನ್ರು ಟ್ರೆಂಡ್‌ ಅಂದ್ಕೊಂಡು ಯಾವುದ್ರ ಹಿಂದೆ ಹೋಗ್ತಿದ್ದಾರೋ ನೀವು ಅದ್ರ ಹಿಂದೆ ಹೋಗಬಾರದು. (ಲೂಕ 21:34; ಯಾಕೋ. 4:4) ಬೇರೆಯವರು ಎಷ್ಟೇ ಕೋಪ ಬರಿಸೋ ತರ ನಡ್ಕೊಂಡ್ರೂ ನೀವು ಯಾವಾಗ್ಲೂ ಶಾಂತಿ ಸಮಾಧಾನದಿಂದ ಇರಬೇಕು. ನೀವು “ಕುಡುಕರಾಗಿರಬಾರದು” ಅಥವಾ ‘ಇವನು ತುಂಬ ಕುಡಿತಾನೆ’ ಅನ್ನೋ ಹೆಸ್ರು ನಿಮಗೆ ಇರಬಾರ್ದು. ಹಾಗಾಗಿ ನೀವು, ‘ನಾನು ಎಲ್ಲ ವಿಷ್ಯಗಳಲ್ಲಿ ಇತಿಮಿತಿ ಇರೋ ತರ, ಸ್ವನಿಯಂತ್ರಣ ಇರೋ ತರ ನಡ್ಕೊಳ್ತೀನಾ?’ ಅಂತ ಕೇಳ್ಕೊಳ್ಳಿ.

9. “ತಿಳುವಳಿಕೆಯಿಂದ ನಡ್ಕೊಳ್ಳೋ” ಮತ್ತು “ಶಿಸ್ತಿಂದ” ಇರೋ ವ್ಯಕ್ತಿ ಹೇಗಿರ್ತಾನೆ?

9 ನೀವು“ತಿಳುವಳಿಕೆಯಿಂದ ನಡ್ಕೊಳ್ಳೋ” ವ್ಯಕ್ತಿ ತರ ಇದ್ರೆ ಎಲ್ಲ ವಿಷ್ಯದಲ್ಲೂ ಬೈಬಲ್‌ ಏನು ಹೇಳುತ್ತೆ ಅಂತ ಯೋಚ್ನೆ ಮಾಡ್ತೀರ. ನಿಮಗೆ ಸರಿ ಅನಿಸಿದ್ದನ್ನ ಮಾಡೋಕೆ ಹೋಗಲ್ಲ. ಒಂದು ವಿಷ್ಯದ ಬಗ್ಗೆ ನಿರ್ಧಾರ ಮಾಡೋ ಮುಂಚೆ ಬೈಬಲ್‌ ತತ್ವವನ್ನ ಆಳವಾಗಿ ಹುಡುಕ್ತೀರ. ಆಗ ನಿಮಗೆ ಆ ವಿಷ್ಯ ಚೆನ್ನಾಗಿ ಅರ್ಥ ಆಗುತ್ತೆ, ಅದ್ರ ಬಗ್ಗೆ ಸರಿಯಾದ ತಿಳುವಳಿಕೆ ಸಿಗುತ್ತೆ. ಹೀಗೆ ಎಲ್ಲಾ ವಿಷ್ಯಗಳನ್ನ ಪೂರ್ತಿಯಾಗಿ ತಿಳ್ಕೊಳ್ತೀರ. (ಜ್ಞಾನೋ. 18:13) ಹೀಗೆ ಮಾಡಿದ್ರೆ ನೀವು ಸರಿಯಾದ ನಿರ್ಧಾರಗಳನ್ನ ಮಾಡೋಕೆ ಆಗುತ್ತೆ ಮತ್ತು ಯೆಹೋವನ ತರ ಯೋಚ್ನೆ ಮಾಡೋಕೆ ಆಗುತ್ತೆ. ನೀವು “ಶಿಸ್ತಿಂದ ಇದ್ರೆ” ಎಲ್ಲ ಕೆಲಸಗಳನ್ನ ಅಚ್ಚುಕಟ್ಟಾಗಿ ಮಾಡ್ತೀರ. ಸಮಯಕ್ಕೆ ಬೆಲೆ ಕೊಡ್ತೀರ. ಕೊಟ್ಟ ಕೆಲಸನ ಸರಿಯಾದ ಸಮಯಕ್ಕೆ ಮಾಡಿ ಮುಗಿಸ್ತೀರ. ಆಗ ಸಭೆಯಲ್ಲಿ ಇರೋರಿಗೆ ನೀವು ಕೊಟ್ಟ ಮಾತನ್ನ ಉಳಿಸ್ಕೊಳ್ತೀರ ಅನ್ನೋ ನಂಬಿಕೆ ಬರುತ್ತೆ. ಅಷ್ಟೇ ಅಲ್ಲ, ನೀವು ಯಾವಾಗ್ಲೂ ನಿರ್ದೇಶನಗಳನ್ನ ಪಾಲಿಸ್ತೀರ ಅಂತ ಅವ್ರಿಗೆ ಗೊತ್ತಾಗುತ್ತೆ. ನೀವು ಈ ಎಲ್ಲ ಗುಣಗಳನ್ನ ಬೆಳೆಸ್ಕೊಂಡ್ರೆ ಸಭೆಯಲ್ಲಿ ಮತ್ತು ಹೊರಗಿನ ಜನ್ರ ಹತ್ರನೂ ಒಳ್ಳೇ ಹೆಸ್ರು ಸಂಪಾದಿಸ್ತೀರ. ಹಾಗಾದ್ರೆ ನಾವೀಗ ಒಬ್ಬ ಸಹೋದರ ಕುಟುಂಬಕ್ಕೆ ಒಳ್ಳೇ ಯಜಮಾನ ಆಗಬೇಕಂದ್ರೆ ಏನೆಲ್ಲಾ ಮಾಡ್ಬೇಕು ಅಂತ ನೋಡೋಣ.

ಕುಟುಂಬಕ್ಕೆ ಒಳ್ಳೇ ಯಜಮಾನ ಆಗಿರಿ

10. ‘ಕುಟುಂಬನ ಚೆನ್ನಾಗಿ ನೋಡ್ಕೊಳ್ಳೋ’ ವ್ಯಕ್ತಿ ಏನೆಲ್ಲ ಮಾಡ್ತಾನೆ?

10 ನಿಮಗೆ ಮದುವೆಯಾಗಿದ್ದು ನೀವು ಹಿರಿಯನಾಗೋಕೆ ಇಷ್ಟಪಡ್ತಿದ್ರೆ ನಿಮಗಷ್ಟೇ ಅಲ್ಲ ನಿಮ್ಮ ಕುಟುಂಬದವ್ರಿಗೂ ಒಳ್ಳೇ ಹೆಸ್ರಿರಬೇಕು. ನೀವು “ನಿಮ್ಮ ಕುಟುಂಬನ ಚೆನ್ನಾಗಿ ನೋಡ್ಕೊಬೇಕು.” ಅಂದ್ರೆ ನಿಮ್ಮ ಕುಟುಂಬದಲ್ಲಿ ಇರೋರಿಗೆ ಪ್ರೀತಿ ತೋರಿಸಿಬೇಕು, ಅವ್ರ ಕಾಳಜಿ ವಹಿಸಬೇಕು, ಕುಟುಂಬದಲ್ಲಿ ಒಳ್ಳೇ ತೀರ್ಮಾನಗಳನ್ನ ಮಾಡಬೇಕು. ಅಷ್ಟೇ ಅಲ್ಲ ನೀವು ಕುಟುಂಬ ಆರಾಧನೆ ಮಾಡಬೇಕು. ನಿಮ್ಮ ಮನೆಯವರೆಲ್ಲ ಕೂಟಗಳಿಗೆ ಬರೋಕೆ ಮತ್ತು ಸೇವೆಗೆ ಹೋಗೋಕೆ ನೀವು ಪ್ರೋತ್ಸಾಹಿಸಬೇಕು. ಇದನ್ನೆಲ್ಲ ಮಾಡೋದು ಯಾಕಷ್ಟು ಮುಖ್ಯ? ಯಾಕಂದ್ರೆ ಅಪೊಸ್ತಲ ಪೌಲ, “ಒಬ್ಬನಿಗೆ ತನ್ನ ಕುಟುಂಬವನ್ನೇ ನೋಡ್ಕೊಳ್ಳೋಕೆ ಗೊತ್ತಿಲ್ಲಾಂದ್ರೆ ದೇವರ ಸಭೆಯನ್ನ ಹೇಗೆ ನೋಡ್ಕೊಳ್ತಾನೆ?” ಅಂತ ಹೇಳಿದ.—1 ತಿಮೊ. 3:5.

11-12. ಕುಟುಂಬದಲ್ಲಿ ಇರೋರು ಸರಿಯಾಗಿ ನಡ್ಕೊಳ್ಳದೆ ಹೋದ್ರೆ ಕುಟುಂಬದ ಯಜಮಾನನಿಗೆ ಏನಾಗುತ್ತೆ? (ಚಿತ್ರ ನೋಡಿ.)

11 ನಿಮಗೆ 18 ವರ್ಷಕ್ಕಿಂತ ಚಿಕ್ಕ ಮಕ್ಕಳು ಇರೋದ್ರಾದ್ರೆ ನಿಮ್ಮ ಮಕ್ಕಳು ನಿಮ್ಮ “ಮಾತನ್ನ ಕೇಳ್ಬೇಕು, ಅವ್ರ ನಡತೆ ಒಳ್ಳೇದಾಗಿರಬೇಕು.” ಬೇರೆ ಮಕ್ಕಳ ತರಾನೇ ನಿಮ್ಮ ಮಕ್ಕಳೂ ನಗನಗ್ತಾ ಖುಷಿಯಾಗಿ ಆಟ ಆಡ್ತಾ ಇರಬೇಕು ಅಂತ ಇಷ್ಟಪಡ್ತೀರ ನಿಜ. ಆದ್ರೆ ನೀವು ನಿಮ್ಮ ಮಕ್ಕಳಿಗೆ ನಿಮ್ಮ ಮಾತು ಕೇಳೋಕೆ, ಬೇರೆಯವರನ್ನ ಗೌರವಿಸೋಕೆ ಮತ್ತು ಒಳ್ಳೇ ರೀತಿ ನಡ್ಕೊಳ್ಳೋಕೆ ಪ್ರೀತಿಯಿಂದ ಕಲಿಸಬೇಕು. ಅವ್ರಿಗೆ ಬೇಕಾಗಿರೋ ತರಬೇತಿ ಕೊಡಬೇಕು. ನಿಮ್ಮ ಮಕ್ಕಳು ಯೆಹೋವನ ಜೊತೆ ಒಳ್ಳೇ ಫ್ರೇಂಡ್‌ಶಿಪ್‌ ಬೆಳೆಸ್ಕೊಳ್ಳೋಕೆ ಆದಷ್ಟು ಸಹಾಯ ಮಾಡಬೇಕು. ಬೈಬಲಲ್ಲಿರೋ ನೀತಿ-ನಿಯಮಗಳನ್ನ ಪಾಲಿಸೋಕೆ ಮತ್ತು ದೀಕ್ಷಾಸ್ನಾನ ತಗೊಳ್ಳೋಕೆ ನೀವು ಅವ್ರಿಗೆ ಪ್ರೋತ್ಸಾಹಿಸಬೇಕು.

12 ನಿಮ್ಮ ಮಕ್ಕಳಿಗೆ “ಕೆಟ್ಟ ಚಟ ಇರುವವರು, ದಂಗೆಕೋರರು ಅನ್ನೋ ಹೆಸ್ರು ಇರಬಾರದು.” ನಿಮ್ಮ ಮಗ ಅಥವಾ ಮಗಳು ದೊಡ್ಡ ತಪ್ಪು ಮಾಡಿದ್ರೆ ಏನಾಗುತ್ತೆ? ನೀವು ಒಬ್ಬ ತಂದೆಯಾಗಿ ಆ ಮಗುಗೆ ಬೇಕಾಗಿರೋ ತರಬೇತಿ ಅಥವಾ ಶಿಸ್ತನ್ನ ಕೊಡದೆ ಹೋಗಿದ್ರೆ ನೀವು ಹಿರಿಯನಾಗಿ ಸೇವೆ ಮಾಡೋಕೆ ಆಗದೆ ಹೋಗಬಹುದು.—ಅಕ್ಟೋಬರ್‌ 15, 1996ರ ಕಾವಲಿನಬುರುಜುವಿನ, ಪುಟ 21ರ ಪ್ಯಾರ 6-7ನ್ನ ನೋಡಿ.

ಕುಟುಂಬದ ಯಜಮಾನರು ತಮ್ಮ ಮಕ್ಕಳಿಗೆ ಬೇರೆಬೇರೆ ತರದ ದೇವರ ಸೇವೆ ಮಾಡೋಕೆ ತರಬೇತಿ ಕೊಡ್ತಿದ್ದಾರೆ (ಪ್ಯಾರ 11 ನೋಡಿ)


ಸಭೆಯನ್ನ ಚೆನ್ನಾಗಿ ನೋಡ್ಕೊಳ್ಳಿ

13. “ನಾನು ಹೇಳಿದ್ದೇ ಆಗಬೇಕು” ಅನ್ನೋ ಗುಣ ನಿಮ್ಮಲ್ಲಿಲ್ಲ, ನೀವು “ಹಠಮಾರಿ” ಅಲ್ಲ ಅಂತ ಹೇಗೆ ತೋರಿಸಬಹುದು?

13 ಕ್ರೈಸ್ತ ಗುಣಗಳಿರೋ ಸಹೋದರರು ಸಭೆಗೆ ಒಂದು ದೊಡ್ಡ ಆಸ್ತಿನೇ ಅಂತ ಹೇಳಬಹುದು. ಅಂಥವರು “ನಾನು ಹೇಳಿದ್ದೇ ಆಗಬೇಕು” ಅಂತ ವಾದ ಮಾಡದೆ ಎಲ್ರ ಜೊತೆ ಶಾಂತಿಯಿಂದ ಇರ್ತಾರೆ, ಬೇರೆಯವರು ಶಾಂತಿಯಿಂದ ಇರೋಕೆ ಸಹಾಯ ಮಾಡ್ತಾರೆ. ನೀವೂ ಹಾಗೆ ಇರಬೇಕಂದ್ರೆ ಬೇರೆಯವರು ಏನಾದ್ರೂ ಹೇಳುವಾಗ ಅದನ್ನ ಕೇಳಿಸ್ಕೊಳ್ಳಿ, ಅವ್ರಿಗೆ ಹೇಗೆ ಅನಿಸ್ತಿದೆ ಅನ್ನೋದನ್ನ ಅರ್ಥಮಾಡ್ಕೊಳ್ಳಿ. ಉದಾಹರಣೆಗೆ, ಹಿರಿಯರ ಕೂಟದಲ್ಲಿ ಹೆಚ್ಚಿನ ಹಿರಿಯರು ಒಂದು ತೀರ್ಮಾನ ಮಾಡಿದಾಗ ಅದು ನಿಮಗೆ ಇಷ್ಟ ಇಲ್ಲದೆ ಇದ್ರೂ ಅದು ಬೈಬಲ್‌ ನಿಯಮನಾ ಮೀರುತ್ತಾ ಇಲ್ಲ ಅಂದ್ರೆ ನೀವು ಅದನ್ನ ಒಪ್ಕೊಳ್ತೀರಾ? ಎಲ್ರೂ ನೀವು ಹೇಳಿದ್ದನ್ನೇ ಕೇಳಬೇಕು, ನೀವು ಹೇಳಿದ್ದ ತರಾನೇ ಮಾಡಬೇಕು ಅಂತ ಹೇಳೋ “ಹಠಮಾರಿ” ಗುಣ ನಿಮ್ಮಲ್ಲಿ ಇರಬಾರದು. ಬೇರೆಯವರು ಹೇಳೋದನ್ನ ಕೇಳಬೇಕು. (ಆದಿ. 13:8, 9; ಜ್ಞಾನೋ. 15:22) ನೀವು “ಜಗಳಗಂಟ ಆಗಿರಬಾರದು,” “ಮುಂಗೋಪಿ ಆಗಿರಬಾರದು.” ಅಂದ್ರೆ ನೀವು ಬೇರೆಯವ್ರ ಜೊತೆ ವಾದಕ್ಕೆ ಇಳಿಬಾರದು. ಗೌರವ ಕೊಡದೆ ಇರೋ ತರ ನಡ್ಕೊಬಾರದು. ಬದ್ಲಿಗೆ ಬುದ್ಧಿ ಉಪಯೋಗಿಸಿ ಪ್ರೀತಿಯಿಂದ ದಯೆಯಿಂದ ನಡ್ಕೊಬೇಕು. ಅಷ್ಟೇ ಅಲ್ಲ, ನಿಮಗೆ ಎಷ್ಟೇ ಕಷ್ಟ ಆದ್ರೂ ಎಲ್ರ ಜೊತೆ “ಶಾಂತಿಯಿಂದ” ಇರೋಕೆ ಪ್ರಯತ್ನ ಮಾಡಬೇಕು. (ಯಾಕೋ. 3:17, 18) ನೀವು ಈ ತರ ದಯೆಯಿಂದ, ಪ್ರೀತಿಯಿಂದ ಮಾತಾಡಿದ್ರೆ ಬೇರೆಯವ್ರ ಕೋಪ ತಣ್ಣಗಾಗುತ್ತೆ, ನಿಮ್ಮನ್ನ ವಿರೋಧಿಸುವವರ ಮನಸ್ಸು ಕೂಡ ಕರಗುತ್ತೆ.—ನ್ಯಾಯ. 8:1-3; ಜ್ಞಾನೋ. 20:3; 25:15; ಮತ್ತಾ. 5:23, 24.

14. ಅವನು “ಇತ್ತೀಚೆಗೆ ಕ್ರೈಸ್ತನಾಗಿರಬಾರದು” ಮತ್ತು “ನಿಷ್ಠಾವಂತ” ವ್ಯಕ್ತಿ ಆಗಿರಬೇಕು ಅಂದ್ರೆ ಏನರ್ಥ?

14 ಹಿರಿಯನಾಗೋಕೆ ಗುರಿ ಇಟ್ಟಿರೋ ಸಹೋದರ “ಇತ್ತೀಚೆಗೆ ಕ್ರೈಸ್ತನಾಗಿರಬಾರದು” ಅಂದ್ರೆ ನೀವು ಹಿರಿಯನಾಗಬೇಕಂದ್ರೆ ದೀಕ್ಷಾಸ್ನಾನ ಆಗಿ ತುಂಬ ವರ್ಷ ಆಗಿರಬೇಕು ಅಂತೆನಿಲ್ಲ. ಆದ್ರೆ ಯೆಹೋವನ ಜೊತೆ ನಿಮ್ಮ ಸಂಬಂಧನ ಗಟ್ಟಿ ಮಾಡ್ಕೊಳ್ಳೋಕೆ ಮತ್ತು ಬೈಬಲ್‌ ತತ್ವಗಳನ್ನ ಬಳಸಿ ತೀರ್ಮಾನಗಳನ್ನ ಮಾಡೋದು ಹೇಗೆ ಅಂತ ಕಲಿಯೋಕೆ ಸ್ವಲ್ಪ ಸಮಯ ಹಿಡಿಯುತ್ತೆ. ಹಾಗಾಗಿ ನೀವು ಅಲ್ಲಿ ತನಕ ಯೇಸು ತರ ದೀನತೆಯಿಂದ ಯೆಹೋವನ ಸೇವೆ ಮಾಡ್ತಾ ಇರಿ. ಯೆಹೋವ ನಿಮಗೆ ನೇಮಕಗಳನ್ನ ಕೊಡೋ ವರೆಗೂ ಕಾಯಿರಿ. (ಮತ್ತಾ. 20:23; ಫಿಲಿ. 2:5-8) ಅಷ್ಟೇ ಅಲ್ಲ, ಯೆಹೋವನಿಗೆ ಇಷ್ಟ ಆಗೋ ತರ ಜೀವನ ಮಾಡ್ತಾ ನಮ್ಮ ಸಂಘಟನೆ ಕೊಡೋ ನಿರ್ದೇಶನಗಳನ್ನ ಪಾಲಿಸ್ತಾ ನೀವು “ನಿಷ್ಠಾವಂತ” ವ್ಯಕ್ತಿ ಅಂತ ತೋರಿಸ್ಕೊಡಿ.—1 ತಿಮೊ. 4:15.

15. ಒಬ್ಬ ಹಿರಿಯನಿಗೆ ಚೆನ್ನಾಗಿ ಭಾಷಣ ಕೊಡೋಕೆ ಬರಲೇಬೇಕಾ? ವಿವರಿಸಿ.

15 ಮೇಲ್ವಿಚಾರಕರಿಗೆ “ಕಲಿಸೋ ಸಾಮರ್ಥ್ಯ ಇರಬೇಕು” ಅಂತ ಬೈಬಲ್‌ ಸ್ಪಷ್ಟವಾಗಿ ಹೇಳುತ್ತೆ. ಅಂದ್ರೆ ಇದರರ್ಥ ನೀವು ಸಕ್ಕತ್ತಾಗಿ ಭಾಷಣ ಕೊಡಬೇಕು ಅಂತಾನಾ? ಇಲ್ಲ. ಎಷ್ಟೋ ಒಳ್ಳೇ ಹಿರಿಯರಿಗೆ ಚೆನ್ನಾಗಿ ಭಾಷಣ ಕೊಡೋಕೆ ಬರದೆ ಇದ್ರೂ ಸಿಹಿಸುದ್ದಿನ ತುಂಬ ಚೆನ್ನಾಗಿ ಸಾರ್ತಾರೆ, ಪರಿಪಾಲನೆ ಭೇಟಿಯಲ್ಲಿ ಸಹೋದರ-ಸಹೋದರಿಯನ್ನ ಅವರ ಮಾತುಗಳಿಂದ ತುಂಬ ಚೆನ್ನಾಗಿ ಪ್ರೋತ್ಸಾಹಿಸ್ತಾರೆ. (1 ತಿಮೊ. 3:2; 1 ಕೊರಿಂ. 12:28, 29 ಮತ್ತು ಎಫೆ. 4:11 ಹೋಲಿಸಿ) ಹಾಗಾಗಿ ನಿಮಗೆ ಚೆನ್ನಾಗಿ ಭಾಷಣ ಕೊಡೋಕೆ ಬರಲಿಲ್ಲ ಅಂದ್ರೂ ಆ ಕಲೆನ ಬೆಳೆಸ್ಕೊಳ್ಳೋಕೆ ನಿಮ್ಮ ಕೈಲಾದಷ್ಟು ಪ್ರಯತ್ನ ಮಾಡಿ. ಅದಕ್ಕೆ ನಿಮಗೆ ಯಾವುದು ಸಹಾಯ ಮಾಡುತ್ತೆ?

16. ನೀವು ಕಲಿಸೋ ಸಾಮರ್ಥ್ಯನ ಹೇಗೆ ಬೆಳೆಸ್ಕೊಬಹುದು? (ಚಿತ್ರ ನೋಡಿ)

16 “ಭರವಸೆಗೆ ಯೋಗ್ಯವಾದ ದೇವರ ಮಾತನ್ನ ಚಾಚೂತಪ್ಪದೆ ಪಾಲಿಸಬೇಕು.” ನೀವು ಬೇರೆಯವರಿಗೆ ಕಲಿಸುವಾಗ ಅಥವಾ ಅವ್ರಿಗೆ ಸಲಹೆ ಕೊಡುವಾಗ ಅದನ್ನ ಬೈಬಲಿಂದಾನೇ ಕೊಡಿ. ಆಗ ನೀವು ಚೆನ್ನಾಗಿ ಕಲಿಸೋ ಸಾಮರ್ಥ್ಯನ ಬೆಳಿಸ್ಕೊಳ್ತೀರ. ಬೈಬಲನ್ನ ಮತ್ತು ನಮ್ಮ ಪ್ರಕಾಶನಗಳನ್ನ ಅಧ್ಯಯನ ಮಾಡಿ. (ಜ್ಞಾನೋ. 15:28; 16:23; ತೀತ 1:9) ಅಧ್ಯಯನ ಮಾಡುವಾಗ ನಮ್ಮ ಪ್ರಕಾಶನಗಳಲ್ಲಿ ಬೈಬಲ್‌ ವಚನಗಳನ್ನ ಹೇಗೆ ವಿವರಿಸಿದ್ದಾರೆ ಅನ್ನೋದಕ್ಕೆ ಗಮನಕೊಡಿ. ಆಗ ನೀವು ಅದನ್ನ ಸರಿಯಾಗಿ ಪಾಲಿಸೋಕೆ ಆಗುತ್ತೆ. ನೀವು ಕಲಿಸುವಾಗ ಜನ್ರ ಮನಸ್ಸು ಮುಟ್ಟೋಕೆ ಪ್ರಯತ್ನ ಮಾಡಿ. ಅಷ್ಟೇ ಅಲ್ಲ ಅನುಭವ ಇರೋ ಹಿರಿಯರಿಂದ ಸಲಹೆಗಳನ್ನ ಕೇಳಿ ಪಡ್ಕೊಳ್ಳಿ. ಅವರು ಹೇಳೋ ತರ ಮಾಡಿ. (1 ತಿಮೊ. 5:17) ಹಿರಿಯರು ಸಹೋದರ-ಸಹೋದರಿಯನ್ನ “ಪ್ರೋತ್ಸಾಹಿಸಬೇಕು,” ಆದ್ರೆ ಅದಷ್ಟೇ ಅಲ್ಲ ಕೆಲವೊಮ್ಮೆ ಅವ್ರಿಗೆ ಸಲಹೆನೂ ಕೊಡಬೇಕಾಗುತ್ತೆ, “ತಿದ್ದಬೇಕಾಗುತ್ತೆ.” ಆದ್ರೆ ನೀವು ಇದನ್ನೆಲ್ಲ ದಯೆಯಿಂದ ಮಾಡಬೇಕು. ನೀವು ಸಹೋದರ-ಸಹೋದರಿಯರಿಗೆ ಕಲಿಸೋವಾಗ ಪ್ರೀತಿಯಿಂದ, ದೇವರ ವಾಕ್ಯದಿಂದ ಕಲಿಸಿದ್ರೆ ನೀವೂ ನಮ್ಮ ಗುರು ಆಗಿರೋ ಯೇಸು ತರ ಒಳ್ಳೇ ಬೋಧಕರಾಗ್ತೀರ.—ಮತ್ತಾ. 11:28-30; 2 ತಿಮೊ. 2:24.

ಬೈಬಲಿಂದ ಹೇಗೆ ಕಲಿಸೋದು ಅಂತ ಒಬ್ಬ ಅನುಭವ ಇರೋ ಹಿರಿಯನಿಂದ ಕಲಿಯೋಕೆ ಒಬ್ಬ ಸಹಾಯಕ ಸೇವಕನಿಗೆ ಅವಕಾಶ ಸಿಕ್ಕಿದೆ. ಅದನ್ನ ಅವನು ಚೆನ್ನಾಗಿ ನೋಡ್ಕೊಳ್ತಿದ್ದಾನೆ. ಒಬ್ಬ ಸಹಾಯಕ ಸೇವಕ ಸಭೆಲಿ ಕೊಡಬೇಕಾದ ಭಾಷಣನ ಕನ್ನಡಿ ಮುಂದೆ ಪ್ರ್ಯಾಕ್ಟೀಸ್‌ ಮಾಡ್ತಿದ್ದಾನೆ. (ಪ್ಯಾರ 16 ನೋಡಿ)


ಪ್ರಯತ್ನ ಬಿಡಬೇಡಿ

17. (ಎ) ಪ್ರಯತ್ನ ಮಾಡ್ತಾ ಇರೋಕೆ ಸಹಾಯಕ ಸೇವಕರಿಗೆ ಯಾವುದು ಸಹಾಯ ಮಾಡುತ್ತೆ? (ಬಿ) ಒಬ್ಬ ಸಹೋದರ ಹಿರಿಯನಾಗಬೇಕಾ ಬೇಡ್ವಾ ಅಂತ ಚರ್ಚೆ ಮಾಡುವಾಗ ಹಿರಿಯರು ಏನೆಲ್ಲ ಮನಸ್ಸಲ್ಲಿಡಬೇಕು? (“ ಇತಿಮಿತಿಗಳ ಬಗ್ಗೆ ಯೋಚ್ನೆ ಮಾಡಿ” ಚೌಕ ನೋಡಿ.)

17 ಹಿರಿಯನಾಗೋಕೆ ಬೇಕಾಗಿರೋ ಇಷ್ಟೆಲ್ಲ ಗುಣಗಳನ್ನ ಬೆಳೆಸ್ಕೊಳ್ಳೋಕೆ ಒಬ್ಬ ಸಹಾಯಕ ಸೇವಕನಿಗೆ ಕಷ್ಟ ಆಗಬಹುದು. ಆಗ ಅವನಿಗೆ ಹಿರಿಯನಾಗೋಕೆ ಆಗೋದೇ ಇಲ್ಲ ಅಂತ ಅನಿಸಬಹುದು. ಆದ್ರೆ ಒಂದು ವಿಷ್ಯ ನೆನಪಿಡಿ, ನಿಮ್ಮಿಂದ ಈ ಗುಣಗಳನ್ನ ಕೆಲವೊಮ್ಮೆ ತೋರಿಸೋಕೆ ಕಷ್ಟ ಆಗುತ್ತೆ ಅಂತ ಯೆಹೋವ ದೇವರಿಗೆ ಮತ್ತು ಆತನ ಸಂಘಟನೆಗೆ ಗೊತ್ತು. (1 ಪೇತ್ರ 2:21) ಅದೂ ಅಲ್ಲದೆ ಯೆಹೋವ ದೇವರು ತನ್ನ ಪವಿತ್ರಶಕ್ತಿ ಕೊಟ್ಟು ನಿಮಗೆ ಈ ಗುಣಗಳನ್ನ ಬೆಳೆಸ್ಕೊಳ್ಳೋಕೆ ಸಹಾಯ ಮಾಡ್ತಾನೆ. (ಫಿಲಿ. 2:13) ನೀವು ಯಾವುದಾದ್ರೂ ಗುಣನ ಇನ್ನೂ ಜಾಸ್ತಿ ಬೆಳೆಸ್ಕೊಬೇಕು ಅಂತಿದ್ದೀರಾ? ಹಾಗಿದ್ರೆ ಯೆಹೋವನ ಹತ್ರ ಮನಸ್ಸು ಬಿಚ್ಚಿ ಪ್ರಾರ್ಥನೆ ಮಾಡಿ. ಆ ಗುಣನ ಹೇಗೆ ತೋರಿಸಬೇಕು ಅಂತ ಸಂಶೋಧನೆ ಮಾಡಿ. ಅಷ್ಟೇ ಅಲ್ಲ, ಬೇರೆ ಹಿರಿಯರ ಹತ್ರ ಸಹಾಯ ಪಡ್ಕೊಳ್ಳಿ.

18. ಎಲ್ಲ ಸಹಾಯಕ ಸೇವಕರಿಗೆ ಏನು ಮಾಡೋಕೆ ಈ ಲೇಖನ ಪ್ರೋತ್ಸಾಹಿಸ್ತು?

18 ನಾವೆಲ್ರೂ ಈಗಾಗಲೇ ಹಿರಿಯರಾಗಿ ಸೇವೆ ಮಾಡ್ತಿರೋ ಸಹೋದರರ ಕೂಡ ಈ ಲೇಖನದಲ್ಲಿ ಕಲ್ತಿರೋ ಗುಣಗಳನ್ನ ಬೆಳೆಸ್ಕೊಳ್ಳೋಕೆ ಪ್ರಯತ್ನ ಮಾಡ್ತಾ ಇರೋಣ. (ಫಿಲಿ. 3:16) ನೀವು ಸಹಾಯಕ ಸೇವಕರಾಗಿದ್ದೀರಾ? ಹಾಗಿದ್ರೆ ಹಿರಿಯರಾಗೋಕೆ ಪ್ರಯತ್ನ ಮಾಡ್ತಾ ಇರಿ. ‘ನಂಗೆ ತರಬೇತಿ ಕೊಡಪ್ಪಾ’ ಅಂತ ಯೆಹೋವನ ಹತ್ರ ಸಹಾಯ ಕೇಳಿ. ನಿಮ್ಮನ್ನ ರೂಪಿಸೋಕೆ ಆತನಿಗೆ ಬಿಟ್ಕೊಡಿ. ಆಗ ಯೆಹೋವ ನಿಮ್ಮನ್ನ ತನ್ನ ಸೇವೆ ಮಾಡೋಕೆ, ಸಭೆಗೆ ಸಹಾಯ ಮಾಡೋಕೆ ಉಪಯೋಗಿಸ್ತಾನೆ. (ಯೆಶಾ. 64:8) ಹಿರಿಯನಾಗೋಕೆ ನೀವು ಮಾಡ್ತೀರೋ ಎಲ್ಲ ಪ್ರಯತ್ನನ ಯೆಹೋವ ಆಶೀರ್ವದಿಸಲಿ.

ಗೀತೆ 101 ಬಾಳೋಣ ಐಕ್ಯದಿ