ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ನ್ಯಾಯ ಮತ್ತು ಕರುಣೆಯನ್ನು ಅನುಕರಿಸಿ

ಯೆಹೋವನ ನ್ಯಾಯ ಮತ್ತು ಕರುಣೆಯನ್ನು ಅನುಕರಿಸಿ

“ಸರಿಯಾಗಿ ನ್ಯಾಯತೀರಿಸಿರಿ, ಒಬ್ಬರಿಗೊಬ್ಬರು ಪ್ರೀತಿಕರುಣೆಗಳನ್ನು ತೋರಿಸಿರಿ.”—ಜೆಕ. 7:9.

ಗೀತೆಗಳು: 21, 69

1, 2. (ಎ) ಯೇಸುವಿಗೆ ದೇವರ ಧರ್ಮಶಾಸ್ತ್ರದ ಬಗ್ಗೆ ಯಾವ ಭಾವನೆಯಿತ್ತು? (ಬಿ) ಶಾಸ್ತ್ರಿಗಳೂ ಫರಿಸಾಯರೂ ಧರ್ಮಶಾಸ್ತ್ರವನ್ನು ಹೇಗೆ ತಪ್ಪಾಗಿ ಅನ್ವಯಿಸುತ್ತಿದ್ದರು?

ಯೇಸುವಿಗೆ ಮೋಶೆಯ ಧರ್ಮಶಾಸ್ತ್ರವೆಂದರೆ ತುಂಬ ಇಷ್ಟವಿತ್ತು. ಏಕೆಂದರೆ ಅದನ್ನು ಕೊಟ್ಟವನು ಅವನ ತಂದೆಯಾದ ಯೆಹೋವನು. ಆತನಿಗೆ ಯೇಸು ತನ್ನ ಜೀವನದಲ್ಲಿ ಎಲ್ಲಕ್ಕಿಂತಲೂ ಪ್ರಾಮುಖ್ಯ ಸ್ಥಾನ ಕೊಟ್ಟಿದ್ದನು. ಧರ್ಮಶಾಸ್ತ್ರ ಯೇಸುವಿಗೆ ಎಷ್ಟು ಇಷ್ಟವಾಗುತ್ತದೆ ಎಂದು ಕೀರ್ತನೆ 40:8 ಹೀಗೆ ಮುಂತಿಳಿಸಿತು: “ನನ್ನ ದೇವರೇ, ನಿನ್ನ ಚಿತ್ತವನ್ನು ಅನುಸರಿಸುವದೇ ನನ್ನ ಸಂತೋಷವು; ನಿನ್ನ ಧರ್ಮೋಪದೇಶವು ನನ್ನ ಅಂತರಂಗದಲ್ಲಿದೆ.” ದೇವರ ಧರ್ಮೋಪದೇಶ ಅಂದರೆ ಧರ್ಮಶಾಸ್ತ್ರ ಪರಿಪೂರ್ಣವಾಗಿದೆ, ಅದನ್ನು ಪಾಲಿಸುವುದರಿಂದ ಪ್ರಯೋಜನವಿದೆ, ಅದರಲ್ಲಿ ಬರೆದಿರುವುದೆಲ್ಲ ಖಂಡಿತ ನೆರವೇರಲಿದೆ ಎಂದು ಯೇಸು ತನ್ನ ನಡೆನುಡಿಯಿಂದ ತೋರಿಸಿಕೊಟ್ಟನು.—ಮತ್ತಾ. 5:17-19.

2 ಶಾಸ್ತ್ರಿಗಳೂ ಫರಿಸಾಯರೂ ತನ್ನ ತಂದೆಯ ಧರ್ಮಶಾಸ್ತ್ರವನ್ನು ತಪ್ಪಾಗಿ ಅನ್ವಯಿಸುತ್ತಾ ಅದನ್ನು ಪಾಲಿಸುವುದು ಕಷ್ಟ ಎಂದು ತೋರುವಂತೆ ಮಾಡಿದಾಗ ಯೇಸುವಿಗೆ ದುಃಖ ಆಗಿರಬೇಕು. “ನೀವು ಪುದೀನ, ಸಬ್ಬಸ್ಸಿಗೆ, ಜೀರಿಗೆಗಳಲ್ಲಿ ಹತ್ತರಲ್ಲೊಂದು ಭಾಗವನ್ನು ಕೊಡುತ್ತೀರಿ” ಎಂದು ಅವರಿಗೆ ಹೇಳಿದನು. ಅಂದರೆ ಅವರು ಧರ್ಮಶಾಸ್ತ್ರದ ಸಣ್ಣಪುಟ್ಟ ಅಂಶಗಳನ್ನು ಪಾಲಿಸುವುದಕ್ಕೆ ತುಂಬ ಗಮನಕೊಡುತ್ತಿದ್ದರು. ಹಾಗಿದ್ದರೆ ಸಮಸ್ಯೆ ಏನು? “ಧರ್ಮಶಾಸ್ತ್ರಕ್ಕೆ ಸಂಬಂಧಿಸಿದ ನ್ಯಾಯ, ಕರುಣೆ ಮತ್ತು ನಂಬಿಗಸ್ತಿಕೆಯಂಥ ಪ್ರಾಮುಖ್ಯ ವಿಷಯಗಳನ್ನು ನೀವು ಕಡೆಗಣಿಸಿದ್ದೀರಿ” ಎಂದು ಯೇಸು ಹೇಳಿದನು. (ಮತ್ತಾ. 23:23) ಧರ್ಮಶಾಸ್ತ್ರವನ್ನು ಯಾಕೆ ಕೊಡಲಾಗಿತ್ತೆಂದು ಫರಿಸಾಯರು ಅರ್ಥಮಾಡಿಕೊಳ್ಳಲಿಲ್ಲ. ತಾವೇ ಎಲ್ಲರಿಗಿಂತ ಶ್ರೇಷ್ಠರು ಎಂದು ಸಹ ನೆನಸುತ್ತಿದ್ದರು. ಆದರೆ ಧರ್ಮಶಾಸ್ತ್ರವನ್ನು ಯಾಕೆ ಕೊಡಲಾಗಿತ್ತು ಮತ್ತು ಪ್ರತಿಯೊಂದು ಆಜ್ಞೆ ಯೆಹೋವನ ಬಗ್ಗೆ ಏನು ತಿಳಿಸುತ್ತದೆ ಎಂದು ಯೇಸುವಿಗೆ ತಿಳಿದಿತ್ತು.

3. ನಾವು ಈ ಲೇಖನದಲ್ಲಿ ಏನು ಚರ್ಚಿಸಲಿದ್ದೇವೆ?

3 ಕ್ರೈಸ್ತರಾದ ನಾವು ಮೋಶೆಯ ಧರ್ಮಶಾಸ್ತ್ರವನ್ನು ಪಾಲಿಸುವ ಅಗತ್ಯವಿಲ್ಲ. (ರೋಮ. 7:6) ಹಾಗಾದರೆ ಯೆಹೋವನು ಅದನ್ನು ಯಾಕೆ ತನ್ನ ವಾಕ್ಯವಾದ ಬೈಬಲಿನಲ್ಲಿ ಸೇರಿಸಿದ್ದಾನೆ? ಧರ್ಮಶಾಸ್ತ್ರದಲ್ಲಿರುವ “ಪ್ರಾಮುಖ್ಯ ವಿಷಯಗಳನ್ನು” ಅಂದರೆ ಆತನ ನಿಯಮಗಳ ಹಿಂದಿರುವ ತತ್ವಗಳನ್ನು ನಾವು ಅರ್ಥಮಾಡಿಕೊಂಡು ಅನ್ವಯಿಸಿಕೊಳ್ಳಬೇಕೆಂದು ಬಯಸುತ್ತಾನೆ. ಉದಾಹರಣೆಗೆ, ಆಶ್ರಯನಗರಗಳ ಏರ್ಪಾಡಿನಿಂದ ನಾವು ಯಾವ ತತ್ವಗಳನ್ನು ಕಲಿಯಬಹುದು? ಹಿಂದಿನ ಲೇಖನದಲ್ಲಿ, ಆಕಸ್ಮಿಕವಾಗಿ ಯಾರನ್ನಾದರೂ ಕೊಂದವನು ಮಾಡಬೇಕಾಗಿದ್ದ ವಿಷಯಗಳಿಂದ ನಮಗೇನು ಪಾಠಗಳಿವೆ ಎಂದು ಕಲಿತೆವು. ಈ ಲೇಖನದಲ್ಲಿ, ಆಶ್ರಯನಗರಗಳು ಯೆಹೋವನ ಬಗ್ಗೆ ಏನು ಕಲಿಸುತ್ತವೆ ಮತ್ತು ಆತನ ಗುಣಗಳನ್ನು ನಾವು ಹೇಗೆ ಅನುಕರಿಸಬಹುದು ಎಂದು ಕಲಿಯಲಿದ್ದೇವೆ. ಮೂರು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲಿದ್ದೇವೆ: ಆಶ್ರಯನಗರಗಳು ಯೆಹೋವನು ಕರುಣಾಮಯಿ ಎಂದು ಹೇಗೆ ತೋರಿಸಿಕೊಡುತ್ತವೆ? ಜೀವದ ಬಗ್ಗೆ ದೇವರಿಗಿರುವ ದೃಷ್ಟಿಕೋನದ ಬಗ್ಗೆ ಅವು ಏನು ಕಲಿಸುತ್ತವೆ? ಅವು ಆತನ ಪರಿಪೂರ್ಣ ನ್ಯಾಯಕ್ಕೆ ಹಿಡಿದ ಕನ್ನಡಿಯಂತಿವೆ ಹೇಗೆ? ಈ ಪ್ರತಿಯೊಂದು ಅಂಶವನ್ನು ಪರಿಗಣಿಸುವಾಗ, ನಿಮ್ಮ ಸ್ವರ್ಗೀಯ ತಂದೆಯನ್ನು ಹೇಗೆ ಅನುಕರಿಸಬಹುದು ಎಂದು ಯೋಚಿಸಿ.—ಎಫೆಸ 5:1 ಓದಿ.

ಆಶ್ರಯನಗರಗಳು ಅನುಕೂಲ ಸ್ಥಳದಲ್ಲಿದ್ದದ್ದು ದೇವರ ಕರುಣೆಯನ್ನು ತೋರಿಸುತ್ತದೆ

4, 5. (ಎ) ಕೈತಪ್ಪಿ ಕೊಂದವನು ಆಶ್ರಯನಗರಕ್ಕೆ ಸುಲಭವಾಗಿ ಹೋಗಿ ಮುಟ್ಟಲು ಯಾವ ಏರ್ಪಾಡುಗಳನ್ನು ಮಾಡಲಾಗಿತ್ತು? ಯಾಕೆ? (ಬಿ) ಇದು ಯೆಹೋವನ ಬಗ್ಗೆ ನಮಗೆ ಏನು ಕಲಿಸುತ್ತದೆ?

4 ಇಸ್ರಾಯೇಲಿನಲ್ಲಿದ್ದ ಆರು ಆಶ್ರಯನಗರಗಳಿಗೆ ಸುಲಭವಾಗಿ ತಲುಪಲು ಏರ್ಪಾಡುಗಳನ್ನು ಮಾಡಲಾಗಿತ್ತು. ಇಸ್ರಾಯೇಲ್ಯರು ಯೊರ್ದನ್‌ ಹೊಳೆಯ ಒಂದು ಕಡೆ ಮೂರು ಮತ್ತು ಇನ್ನೊಂದು ಕಡೆ ಮೂರು ಪಟ್ಟಣಗಳನ್ನು ಆರಿಸುವಂತೆ ಯೆಹೋವನು ಹೇಳಿದನು. ಯಾಕೆ? ಕೈತಪ್ಪಿ ಕೊಂದವನು ಇವುಗಳಲ್ಲಿ ಒಂದು ನಗರಕ್ಕೆ ಸುಲಭವಾಗಿ ಮತ್ತು ಬೇಗನೆ ಹೋಗಿ ಮುಟ್ಟಲು ಸಾಧ್ಯವಾಗುತ್ತಿತ್ತು. (ಅರ. 35:11-14) ಈ ನಗರಗಳಿಗೆ ಹೋಗುವ ದಾರಿಯನ್ನು ಸಹ ಒಳ್ಳೇ ಸ್ಥಿತಿಯಲ್ಲಿ ಇಡುತ್ತಿದ್ದರು. (ಧರ್ಮೋ. 19:3) ಯೆಹೂದ್ಯರ ಪುಸ್ತಕಗಳಿಗನುಸಾರ, ಕೈತಪ್ಪಿ ಕೊಂದವನಿಗೆ ಈ ನಗರಗಳನ್ನು ಕಂಡುಕೊಳ್ಳಲು ಸಹಾಯವಾಗುವ ಸೂಚನಾ ಫಲಕಗಳು ದಾರಿಬದಿಗಳಲ್ಲಿ ಇದ್ದವು. ಇಸ್ರಾಯೇಲಿನಲ್ಲಿ ಈ ಆಶ್ರಯನಗರಗಳು ಇದ್ದದರಿಂದ, ಕೈತಪ್ಪಿ ಕೊಂದವನು ಅನ್ಯದೇಶಕ್ಕೆ ಹೋಗಿ ಸಂರಕ್ಷಣೆ ಪಡೆಯುವ ಆವಶ್ಯಕತೆ ಇರಲಿಲ್ಲ. ಅನ್ಯದೇಶಕ್ಕೆ ಹೋದರೆ ಅವನು ಸುಳ್ಳು ದೇವರುಗಳನ್ನು ಆರಾಧಿಸುವ ಪ್ರಲೋಭನೆಗೆ ಒಳಗಾಗುವ ಸಾಧ್ಯತೆಯಿತ್ತು.

5 ಇದರ ಬಗ್ಗೆ ಯೋಚಿಸಿ ನೋಡಿ: ಕೊಲೆಗಾರರಿಗೆ ಮರಣ ಶಿಕ್ಷೆಯಾಗಬೇಕೆಂದು ಆಜ್ಞೆಕೊಟ್ಟವನು ಯೆಹೋವನು. ಆದರೆ ಒಬ್ಬ ವ್ಯಕ್ತಿಯನ್ನು ಕೈತಪ್ಪಿ ಕೊಂದವನಿಗೆ ಕರುಣೆ, ಅನುಕಂಪ, ಸಂರಕ್ಷಣೆ ದೊರೆಯಲು ಬೇಕಾದ ಏರ್ಪಾಡುಗಳನ್ನೂ ಆತನೇ ಮಾಡಿದನು. ಒಬ್ಬ ಬೈಬಲ್‌ ವ್ಯಾಖ್ಯಾನಗಾರನು ಹೇಳಿದ್ದು: “ಎಲ್ಲವನ್ನೂ ಸಾಧ್ಯವಾದಷ್ಟು ಸ್ಪಷ್ಟವಾಗಿ, ಸರಳವಾಗಿ, ಸುಲಭವಾಗಿ ಮಾಡಲಾಗಿತ್ತು.” ಯೆಹೋವನು ತನ್ನ ಸೇವಕರನ್ನು ದಂಡಿಸಲು ಕಾರಣಗಳಿಗಾಗಿ ಹುಡುಕುವ ಕ್ರೂರ ನ್ಯಾಯಾಧೀಶನಲ್ಲ, ಆತನು ‘ಕರುಣಾಭರಿತನು.’—ಎಫೆ. 2:4.

6. ಫರಿಸಾಯರು ಯೆಹೋವನ ಕರುಣೆಯನ್ನು ಅನುಕರಿಸುತ್ತಿದ್ದರಾ? ವಿವರಿಸಿ.

6 ಫರಿಸಾಯರಾದರೋ ಬೇರೆಯವರಿಗೆ ಕರುಣೆ ತೋರಿಸುತ್ತಿರಲಿಲ್ಲ. ಉದಾಹರಣೆಗೆ, ಒಬ್ಬ ವ್ಯಕ್ತಿ ಒಂದೇ ತಪ್ಪನ್ನು ಮೂರಕ್ಕಿಂತ ಹೆಚ್ಚು ಸಾರಿ ಮಾಡಿದರೆ ಫರಿಸಾಯರು ಕ್ಷಮಿಸುತ್ತಿರಲಿಲ್ಲ ಎಂಬ ಮಾತು ಯೆಹೂದ್ಯರಲ್ಲಿದೆ. ಅವರ ಈ ಮನೋಭಾವ ಎಷ್ಟು ತಪ್ಪೆಂದು ಅರ್ಥಮಾಡಿಸಲು ಯೇಸು ಒಂದು ದೃಷ್ಟಾಂತ ಕೊಟ್ಟನು. ಅದರಲ್ಲಿ ಒಬ್ಬ ತೆರಿಗೆ ವಸೂಲಿಗಾರನ ಪಕ್ಕದಲ್ಲಿ ನಿಂತು ಪ್ರಾರ್ಥನೆ ಮಾಡುತ್ತಿದ್ದ ಒಬ್ಬ ಫರಿಸಾಯನ ಬಗ್ಗೆ ಹೇಳಿದನು. ಈ ಫರಿಸಾಯನು, “ದೇವರೇ, ಸುಲುಕೊಳ್ಳುವವರೂ ಅನೀತಿವಂತರೂ ವ್ಯಭಿಚಾರಿಗಳೂ ಆಗಿರುವ ಉಳಿದ ಜನರಂತೆ ನಾನಲ್ಲ ಅಥವಾ ಈ ತೆರಿಗೆ ವಸೂಲಿಗಾರನಂತೆಯೂ ಅಲ್ಲದಿರುವುದರಿಂದ ನಿನಗೆ ಕೃತಜ್ಞತೆ ಸಲ್ಲಿಸುತ್ತೇನೆ” ಎಂದು ಪ್ರಾರ್ಥಿಸುತ್ತಾನೆ. ಈ ಫರಿಸಾಯರು ಯಾಕೆ ಹೀಗೆ? ಅವರು ಬೇರೆಯವರನ್ನು ‘ಕಡೆಗಣಿಸುತ್ತಿದ್ದರು.’ ಬೇರೆಯವರಿಗೆ ಕರುಣೆ ತೋರಿಸಬೇಕೆಂದು ಅವರಿಗೆ ಅನಿಸುತ್ತಿರಲಿಲ್ಲ.—ಲೂಕ 18:9-14.

ಬೇರೆಯವರು ಕ್ಷಮೆ ಕೇಳಲು ಸುಲಭ ಮಾಡಿಕೊಡುತ್ತೀರಾ? ದೀನರಾಗಿರಿ, ಮಾತಾಡಲು ಸುಲಭ ಮಾಡಿಕೊಡಿ (ಪ್ಯಾರ 4-8 ನೋಡಿ)

7, 8. (ಎ) ನೀವು ಯೆಹೋವನ ಕರುಣೆಯನ್ನು ಹೇಗೆ ಅನುಕರಿಸಬಹುದು? (ಬಿ) ಬೇರೆಯವರನ್ನು ಕ್ಷಮಿಸಲು ನಾವು ಯಾಕೆ ದೀನರಾಗಿರಬೇಕು?

7 ಫರಿಸಾಯರನ್ನಲ್ಲ ಯೆಹೋವನನ್ನು ಅನುಕರಿಸಿ. ಕರುಣೆ, ಅನುಕಂಪ ತೋರಿಸಿ. (ಕೊಲೊಸ್ಸೆ 3:13 ಓದಿ.) ಬೇರೆಯವರು ನಿಮ್ಮ ಹತ್ತಿರ ಬಂದು ಕ್ಷಮೆ ಕೇಳಲು ಸುಲಭ ಮಾಡಿಕೊಡಿ. (ಲೂಕ 17:3, 4) ಹೀಗೆ ಕೇಳಿಕೊಳ್ಳಿ: ‘ಬೇರೆಯವರು ನನಗೆ ನೋವು ಮಾಡಿದಾಗ, ಪದೇಪದೇ ನೋವು ಮಾಡಿದರೂ ಕೂಡಲೇ ಕ್ಷಮಿಸುತ್ತೇನಾ? ನನ್ನ ಮನಸ್ಸನ್ನು ನೋಯಿಸಿದ ವ್ಯಕ್ತಿಯ ಜೊತೆ ಸಮಾಧಾನ ಮಾಡಿಕೊಳ್ಳಲು ಹಾತೊರೆಯುತ್ತೇನಾ?’

8 ಬೇರೆಯವರನ್ನು ಕ್ಷಮಿಸಲು ನಾವು ದೀನರಾಗಿರಬೇಕು. ಫರಿಸಾಯರು ತಾವೇ ಎಲ್ಲರಿಗಿಂತ ಶ್ರೇಷ್ಠರು ಎಂದು ನೆನಸುತ್ತಿದ್ದರು. ಆದ್ದರಿಂದ ಕ್ಷಮಿಸಲು ಸಿದ್ಧರಿರಲಿಲ್ಲ. ಆದರೆ ಕ್ರೈಸ್ತರಾದ ನಾವು ‘ಇತರರನ್ನು ನಮಗಿಂತಲೂ ಶ್ರೇಷ್ಠರೆಂದು ಎಣಿಸುತ್ತೇವೆ’ ಮತ್ತು ಧಾರಾಳವಾಗಿ ಕ್ಷಮಿಸುತ್ತೇವೆ. (ಫಿಲಿ. 2:3) ನಮ್ಮನ್ನೇ ಹೀಗೆ ಕೇಳಿಕೊಳ್ಳೋಣ: ‘ನಾನು ಯೆಹೋವನನ್ನು ಅನುಕರಿಸುತ್ತಾ ದೀನತೆ ತೋರಿಸುತ್ತೇನಾ?’ ನಾವು ದೀನರಾಗಿದ್ದರೆ ಬೇರೆಯವರಿಗೆ ನಮ್ಮ ಹತ್ತಿರ ಬಂದು ಕ್ಷಮೆ ಕೇಳಲು ಸುಲಭ. ನಮಗೂ ಬೇರೆಯವರನ್ನು ಕ್ಷಮಿಸಲು ಸುಲಭ. ಕೋಪಕ್ಕೆ ಆತುರಪಡದೆ ಕರುಣೆ ತೋರಿಸಲು ಆತುರಪಡೋಣ.—ಪ್ರಸಂ. 7:8, 9.

ಜೀವವನ್ನು ಗೌರವಿಸಿ ರಕ್ತಾಪರಾಧ ಬರದಂತೆ ನೋಡಿಕೊಳ್ಳಿ

9. ಜೀವ ಪವಿತ್ರ ಎಂದು ಅರ್ಥಮಾಡಿಕೊಳ್ಳಲು ಯೆಹೋವನು ಇಸ್ರಾಯೇಲ್ಯರಿಗೆ ಹೇಗೆ ಸಹಾಯ ಮಾಡಿದನು?

9 ಇಸ್ರಾಯೇಲ್ಯರು ನಿರಪರಾಧಿಯ ರಕ್ತವನ್ನು ಸುರಿಸಿ ರಕ್ತಾಪರಾಧ ತಂದುಕೊಳ್ಳಬಾರದು ಎಂಬ ಮುಖ್ಯ ಕಾರಣಕ್ಕೆ ಆಶ್ರಯನಗರಗಳ ಏರ್ಪಾಡನ್ನು ಮಾಡಲಾಯಿತು. (ಧರ್ಮೋ. 19:10) ಯೆಹೋವನ ದೃಷ್ಟಿಯಲ್ಲಿ ಜೀವ ತುಂಬ ಅಮೂಲ್ಯ ಆಗಿರುವುದರಿಂದ “ನಿರ್ದೋಷರಕ್ತವನ್ನು ಸುರಿಸುವ” ವ್ಯಕ್ತಿಯನ್ನು ದ್ವೇಷಿಸುತ್ತಾನೆ. (ಜ್ಞಾನೋ. 6:16, 17) ದೇವರು ನ್ಯಾಯವಂತನೂ ಪವಿತ್ರನೂ ಆಗಿರುವುದರಿಂದ, ಅಪ್ಪಿತಪ್ಪಿ ಒಬ್ಬರ ಕೊಲೆಯಾದರೂ ಅದನ್ನು ಅಲಕ್ಷಿಸುತ್ತಿರಲಿಲ್ಲ. ಕೈತಪ್ಪಿ ಒಬ್ಬನ ಕೊಲೆ ಮಾಡಿದ ವ್ಯಕ್ತಿಗೆ ಕರುಣೆ ದೊರೆಯುತ್ತಿತ್ತು ನಿಜ. ಆದರೆ ಮೊದಲು ಅವನು ನಡೆದ ಸಂಗತಿಯನ್ನು ಹಿರಿಯರ ಮುಂದೆ ಹೇಳಿಕೊಳ್ಳಬೇಕಿತ್ತು. ಈ ಕೊಲೆ ಆಕಸ್ಮಿಕವಾಗಿ ಆಯಿತೆಂದು ಹಿರಿಯರು ತೀರ್ಮಾನಿಸಿದರೆ, ಅವನು ಮಹಾಯಾಜಕ ತೀರಿಹೋಗುವ ತನಕ ಆಶ್ರಯನಗರದಲ್ಲೇ ಇರಬೇಕಾಗಿತ್ತು. ಅವನು ಜೀವನಪೂರ್ತಿ ಆಶ್ರಯನಗರದಲ್ಲೇ ಇರಬೇಕಾದ ಪರಿಸ್ಥಿತಿಯೂ ಬರಬಹುದಿತ್ತು. ಜೀವ ಪವಿತ್ರ ಎಂದು ಅರ್ಥಮಾಡಿಕೊಳ್ಳಲು ಈ ಏರ್ಪಾಡು ಇಸ್ರಾಯೇಲ್ಯರಿಗೆ ಸಹಾಯ ಮಾಡಿತು. ಜೀವದಾತನನ್ನು ಗೌರವಿಸಲಿಕ್ಕಾಗಿ ಇಸ್ರಾಯೇಲ್ಯರು ಬೇರೆಯವರ ಜೀವಕ್ಕೆ ಯಾವುದೇ ವಿಧದಲ್ಲಿ ಅಪಾಯ ತರದಿರಲು ತುಂಬ ಪ್ರಯತ್ನ ಮಾಡಬೇಕಿತ್ತು.

10. ಶಾಸ್ತ್ರಿಗಳು ಮತ್ತು ಫರಿಸಾಯರು ಬೇರೆಯವರ ಜೀವಕ್ಕೆ ಬೆಲೆ ಕೊಡುತ್ತಿರಲಿಲ್ಲ ಎಂದು ಯೇಸುವಿನ ಮಾತಿನಿಂದ ಹೇಗೆ ಗೊತ್ತಾಗುತ್ತದೆ?

10 ಶಾಸ್ತ್ರಿಗಳೂ ಫರಿಸಾಯರೂ ಯೆಹೋವನಂತಿರಲಿಲ್ಲ, ಬೇರೆಯವರ ಜೀವಕ್ಕೆ ಬೆಲೆ ಕೊಡುತ್ತಿರಲಿಲ್ಲ. ಆದ್ದರಿಂದ ಯೇಸು ಅವರಿಗೆ, “ನೀವು ಜ್ಞಾನದ ಕೀಲಿ ಕೈಯನ್ನು ತೆಗೆದುಕೊಂಡು ಹೋದಿರಿ; ನೀವು ಹೇಗೂ ಒಳಗೆ ಹೋಗಲಿಲ್ಲ, ಒಳಗೆ ಹೋಗುವವರನ್ನೂ ತಡೆದಿರಿ” ಎಂದನು. (ಲೂಕ 11:52) ಯೇಸುವಿನ ಮಾತಿನ ಅರ್ಥವೇನಾಗಿತ್ತು? ಶಾಸ್ತ್ರಿಗಳೂ ಫರಿಸಾಯರೂ ದೇವರ ವಾಕ್ಯವನ್ನು ಜನರಿಗೆ ವಿವರಿಸಿ ನಿತ್ಯಜೀವ ಪಡೆಯಲು ಸಹಾಯ ಮಾಡಬೇಕಿತ್ತು. ಆದರೆ ಹಾಗೆ ಮಾಡುತ್ತಿರಲಿಲ್ಲ. ಅಲ್ಲದೆ, ಜನರು “ಜೀವದ ಮುಖ್ಯ ನಿಯೋಗಿ” ಆದ ಯೇಸುವನ್ನು ಹಿಂಬಾಲಿಸುವುದನ್ನು ತಡೆಯಲು ಪ್ರಯತ್ನಿಸಿದರು. (ಅ. ಕಾ. 3:15) ಹೀಗೆ ಅವರು ಜನರನ್ನು ನಾಶನಕ್ಕೆ ನಡೆಸುತ್ತಿದ್ದರು. ಶಾಸ್ತ್ರಿಗಳೂ ಫರಿಸಾಯರೂ ಅಹಂಕಾರಿಗಳಾಗಿದ್ದರು, ಸ್ವಾರ್ಥಿಗಳಾಗಿದ್ದರು. ಅವರಿಗೆ ಜನರ ಜೀವದ ಬಗ್ಗೆ ಸ್ವಲ್ಪವೂ ಚಿಂತೆ ಇರಲಿಲ್ಲ. ಕ್ರೂರಿಗಳಾಗಿದ್ದರು, ಕರುಣೆಯಿಲ್ಲದವರು ಆಗಿದ್ದರು.

11. (ಎ) ಜೀವದ ಬಗ್ಗೆ ಯೆಹೋವನಿಗಿರುವ ದೃಷ್ಟಿಕೋನವೇ ತನಗೂ ಇದೆಯೆಂದು ಪೌಲನು ಹೇಗೆ ತೋರಿಸಿದನು? (ಬಿ) ಸಾರುವ ಕೆಲಸದಲ್ಲಿ ಪೌಲನಂತೆ ನಾವೂ ಹುರುಪು ತೋರಿಸಲು ಯಾವುದು ಸಹಾಯ ಮಾಡುತ್ತದೆ?

11 ನಾವು ಆ ಶಾಸ್ತ್ರಿಗಳು ಮತ್ತು ಫರಿಸಾಯರಂತಿರದೆ ಯೆಹೋವನನ್ನು ಅನುಕರಿಸಬೇಕು. ಹೇಗೆ? ಜೀವಕ್ಕೆ ಗೌರವ ಕೊಟ್ಟು ಅದನ್ನು ಅಮೂಲ್ಯವಾಗಿ ಕಾಣುವ ಮೂಲಕ ಇದನ್ನು ಮಾಡಬಹುದು. ಅಪೊಸ್ತಲ ಪೌಲನು ತನ್ನಿಂದಾದಷ್ಟು ಹೆಚ್ಚು ಜನರಿಗೆ ಸುವಾರ್ತೆ ಸಾರುವ ಮೂಲಕ ಇದನ್ನು ಮಾಡಿದನು. ಆದ್ದರಿಂದಲೇ “ನಾನು ಎಲ್ಲ ಮನುಷ್ಯರ ರಕ್ತದ ಹೊಣೆಯಿಂದ ಶುದ್ಧನಾಗಿದ್ದೇನೆ” ಎಂದು ಅವನು ಹೇಳಲು ಸಾಧ್ಯವಾಯಿತು. (ಅ. ಕಾರ್ಯಗಳು 20:26, 27 ಓದಿ.) ಹಾಗಾದರೆ ಪೌಲನು ರಕ್ತಾಪರಾಧದಿಂದ ತಪ್ಪಿಸಿಕೊಳ್ಳಲಿಕ್ಕೆ ಅಥವಾ ಯೆಹೋವನು ಹೇಳಿದ್ದಾನೆ ಎಂಬ ಒಂದೇ ಕಾರಣಕ್ಕೆ ಸಾರುವ ಕೆಲಸ ಮಾಡಿದನಾ? ಇಲ್ಲ. ಪೌಲನಿಗೆ ಜನರ ಮೇಲೆ ಪ್ರೀತಿ ಇತ್ತು. ಅವರ ಜೀವ ಅವನಿಗೆ ಅಮೂಲ್ಯವಾಗಿತ್ತು. ಅವರು ನಿತ್ಯಜೀವ ಪಡೆಯಬೇಕೆಂಬ ಆಸೆ ಅವನಿಗಿತ್ತು. (1 ಕೊರಿಂ. 9:19-23) ಜೀವದ ಬಗ್ಗೆ ಯೆಹೋವನಿಗಿರುವ ದೃಷ್ಟಿಕೋನ ನಮಗೂ ಇರಬೇಕು. ಎಲ್ಲರೂ ಪಶ್ಚಾತ್ತಾಪಪಟ್ಟು ಜೀವವನ್ನು ಪಡೆಯಬೇಕೆಂದು ಯೆಹೋವನು ಬಯಸುತ್ತಾನೆ. (2 ಪೇತ್ರ 3:9) ನೀವೂ ಇದನ್ನೇ ಬಯಸುತ್ತೀರಾ? ನಮ್ಮಲ್ಲಿ ಕರುಣೆ ಇದ್ದರೆ ಸುವಾರ್ತೆಯನ್ನು ಹುರುಪಿನಿಂದ ಸಾರುತ್ತೇವೆ ಮತ್ತು ಇದರಿಂದ ನಮಗೆ ಸಂತೋಷ ಸಿಗುತ್ತದೆ.

12. ಯೆಹೋವನ ಜನರು ಯಾಕೆ ಸುರಕ್ಷತೆಗೆ ಪ್ರಾಮುಖ್ಯತೆ ಕೊಡುತ್ತಾರೆ?

12 ಜೀವದ ಬಗ್ಗೆ ಯೆಹೋವನಿಗಿರುವ ದೃಷ್ಟಿಕೋನವೇ ನಮಗೂ ಇದೆಯಾದರೆ ಸುರಕ್ಷತೆಯ ಬಗ್ಗೆ ನಮಗೆ ಸರಿಯಾದ ಮನೋಭಾವ ಇರುತ್ತದೆ. ಗಾಡಿ ಓಡಿಸುವಾಗ ಮತ್ತು ಕೆಲಸ ಮಾಡುವಾಗ ಸುರಕ್ಷತೆಗೆ ಗಮನ ಕೊಡುತ್ತೇವೆ. ಆರಾಧನಾ ಸ್ಥಳದ ನಿರ್ಮಾಣ, ದುರಸ್ತಿ ಕೆಲಸದಲ್ಲಿ ತೊಡಗಿರುವಾಗ ಮತ್ತು ಅಲ್ಲಿಗೆ ಹೋಗಿ ಬರುವಾಗಲೂ ಸುರಕ್ಷತೆ ಪಾಲಿಸುತ್ತೇವೆ. ಸಮಯ ಅಥವಾ ಹಣ ಉಳಿಸುವುದಕ್ಕಿಂತ ಜನ, ಸುರಕ್ಷೆ, ಆರೋಗ್ಯ ತುಂಬ ಮುಖ್ಯ. ನಮ್ಮ ದೇವರು ಯಾವಾಗಲೂ ಸರಿಯಾದದ್ದನ್ನೇ ಮಾಡುತ್ತಾನೆ, ನಾವೂ ಆತನಂತೆ ಇರಲು ಬಯಸುತ್ತೇವೆ. ಮುಖ್ಯವಾಗಿ ಹಿರಿಯರು ತಮ್ಮ ಮತ್ತು ಬೇರೆಯವರ ಸುರಕ್ಷತೆಯ ಬಗ್ಗೆ ಯೋಚಿಸಬೇಕು. (ಜ್ಞಾನೋ. 22:3) ಒಬ್ಬ ಹಿರಿಯ ನಿಮಗೆ ಸುರಕ್ಷೆಯ ನಿಯಮಗಳು ಅಥವಾ ಮಟ್ಟಗಳ ಬಗ್ಗೆ ಜ್ಞಾಪಿಸುವುದಾದರೆ ಅವರಿಗೆ ಕಿವಿಗೊಡಿ. (ಗಲಾ. 6:1) ಜೀವದ ಬಗ್ಗೆ ಯೆಹೋವನಿಗಿರುವ ದೃಷ್ಟಿಕೋನ ನಿಮಗೂ ಇರಲಿ. ಆಗ ರಕ್ತಾಪರಾಧ ನಿಮ್ಮ ಮೇಲೆ ಬರುವುದಿಲ್ಲ.

“ಈ ಸಂಗತಿಗಳಿಗೆ ಅನುಸಾರವಾಗಿ ನ್ಯಾಯತೀರಿಸಿ”

13, 14. ಇಸ್ರಾಯೇಲಿನಲ್ಲಿದ್ದ ಹಿರಿಯರು ಯೆಹೋವನ ನ್ಯಾಯವನ್ನು ಹೇಗೆ ಅನುಕರಿಸಬೇಕಿತ್ತು?

13 ತನ್ನ ನ್ಯಾಯವನ್ನು ಇಸ್ರಾಯೇಲಿನಲ್ಲಿದ್ದ ಹಿರಿಯರು ಅನುಕರಿಸಬೇಕೆಂದು ಯೆಹೋವನು ಆಜ್ಞಾಪಿಸಿದನು. ಮೊದಲಾಗಿ ಈ ಹಿರಿಯರು ನಿಜವಾಗಿಯೂ ಏನು ನಡೆಯಿತೆಂದು ದೃಢೀಕರಿಸಬೇಕಿತ್ತು. ಆಮೇಲೆ, ಕೊಂದವನ ಉದ್ದೇಶ, ಮನೋಭಾವ, ನಡತೆ ಹೇಗಿತ್ತು ಎಂಬುದನ್ನೆಲ್ಲಾ ಜಾಗರೂಕತೆಯಿಂದ ಪರಿಗಣಿಸಿ ಇವನಿಗೆ ಕರುಣೆ ತೋರಿಸಬೇಕಾ ಬಾರದಾ ಎಂದು ತೀರ್ಮಾನಿಸುತ್ತಿದ್ದರು. ಕೊಲೆಯಾದವನನ್ನು ಅವನು ಮೊದಲೇ ದ್ವೇಷಿಸುತ್ತಿದ್ದನಾ, ಕೊಲೆ ಮಾಡಲು ಬಯಸಿದ್ದನಾ ಎಂದು ಹಿರಿಯರು ಕಂಡುಹಿಡಿಯಬೇಕಿತ್ತು. (ಅರಣ್ಯಕಾಂಡ 35:20-24 ಓದಿ.) ಕೊಂದವನಿಗೆ ಶಿಕ್ಷೆ ವಿಧಿಸಲಿಕ್ಕಾಗಿ ಸಾಕ್ಷಿಗಳ ಮಾತನ್ನು ಲೆಕ್ಕಕ್ಕೆ ತೆಗೆದುಕೊಳ್ಳುವಲ್ಲಿ ಕಡಿಮೆಪಕ್ಷ ಇಬ್ಬರು ಸಾಕ್ಷಿಗಳು ಇರಬೇಕಿತ್ತು.—ಅರ. 35:30.

14 ನಿಜವಾಗಿಯೂ ಏನು ನಡೆಯಿತೆಂದು ಹಿರಿಯರು ಕಂಡುಹಿಡಿದ ಮೇಲೆ ತಪ್ಪುಮಾಡಿದ ವ್ಯಕ್ತಿಯ ಬಗ್ಗೆ ಯೋಚಿಸಬೇಕಿತ್ತು. ವಿಷಯವನ್ನು ಬರೀ ಮೇಲಿಂದ ಮೇಲೆ ನೋಡುವುದಕ್ಕಿಂತ ಇದು ಯಾಕೆ ಆಯಿತು ಎಂಬ ಕಾರಣಗಳ ಕಡೆಗೆ ಗಮನ ಕೊಡುವ ಮೂಲಕ ಒಳನೋಟ ತೋರಿಸಬೇಕಿತ್ತು. ಯೆಹೋವನಲ್ಲಿರುವ ಒಳನೋಟ, ಕರುಣೆ, ನ್ಯಾಯವನ್ನು ಅನುಕರಿಸಲು ಎಲ್ಲಕ್ಕಿಂತ ಮುಖ್ಯವಾಗಿ ಅವರಿಗೆ ಯೆಹೋವನ ಪವಿತ್ರಾತ್ಮದ ಸಹಾಯ ಬೇಕಿತ್ತು.—ವಿಮೋ. 34:6, 7.

15. ಯೇಸು ಮತ್ತು ಫರಿಸಾಯರು ಜನರನ್ನು ನೋಡಿದ ವಿಧದಲ್ಲಿ ಯಾವ ವ್ಯತ್ಯಾಸವಿತ್ತು?

15 ಫರಿಸಾಯರ ಪೂರ್ತಿ ಗಮನ ಒಬ್ಬ ವ್ಯಕ್ತಿ ಮಾಡಿದ ತಪ್ಪಿನ ಮೇಲಿರುತ್ತಿತ್ತು, ಅವನು ಎಂಥ ವ್ಯಕ್ತಿ ಎನ್ನುವುದರ ಮೇಲೆ ಅಲ್ಲ. ಯೇಸು ಮತ್ತಾಯನ ಮನೆಯಲ್ಲಿ ಊಟ ಮಾಡುತ್ತಿರುವುದನ್ನು ಕೆಲವು ಫರಿಸಾಯರು ನೋಡಿದಾಗ ಅವರು ಶಿಷ್ಯರಿಗೆ, “ನಿಮ್ಮ ಬೋಧಕನು ತೆರಿಗೆ ವಸೂಲಿಮಾಡುವವರ ಮತ್ತು ಪಾಪಿಗಳ ಸಂಗಡ ಏಕೆ ಊಟಮಾಡುತ್ತಾನೆ?” ಎಂದು ಕೇಳಿದರು. ಅದಕ್ಕೆ ಯೇಸು ಉತ್ತರ ಕೊಡುತ್ತಾ “ಆರೋಗ್ಯವಂತರಿಗೆ ವೈದ್ಯನ ಆವಶ್ಯಕತೆ ಇಲ್ಲ, ಆದರೆ ರೋಗಿಗಳಿಗೆ ಇದೆ. ಆದುದರಿಂದ ನೀವು ಹೋಗಿ, ‘ನನಗೆ ಯಜ್ಞವಲ್ಲ ಕರುಣೆಯೇ ಬೇಕು’ ಎಂಬುದರ ಅರ್ಥವನ್ನು ಕಲಿಯಿರಿ. ಏಕೆಂದರೆ ನಾನು ನೀತಿವಂತರನ್ನಲ್ಲ, ಪಾಪಿಗಳನ್ನು ಕರೆಯಲಿಕ್ಕಾಗಿ ಬಂದಿದ್ದೇನೆ” ಅಂದನು. (ಮತ್ತಾ. 9:9-13) ಯೇಸು ಇಲ್ಲಿ ಪಾಪಿಗಳ ಪರವಹಿಸಿ ಮಾತಾಡುತ್ತಿದ್ದನಾ? ಖಂಡಿತ ಇಲ್ಲ. ನಿಜವೇನೆಂದರೆ, ಪಾಪಿಗಳು ಪಶ್ಚಾತ್ತಾಪಪಡಬೇಕು ಎನ್ನುವುದು ಆತನು ಸಾರಿದ ಸಂದೇಶದ ಮುಖ್ಯ ಭಾಗವಾಗಿತ್ತು. (ಮತ್ತಾ. 4:17) ‘ತೆರಿಗೆ ವಸೂಲಿಮಾಡುವವರು ಮತ್ತು ಪಾಪಿಗಳಲ್ಲಿ’ ಕೆಲವರು ಬದಲಾಗಲು ಬಯಸಿದರು ಎಂಬುದನ್ನು ಯೇಸು ಅರ್ಥಮಾಡಿಕೊಂಡನು. ಇವರು ಬರೀ ಊಟ ಮಾಡಲಿಕ್ಕಾಗಿ ಮತ್ತಾಯನ ಮನೆಗೆ ಬಂದಿರಲಿಲ್ಲ. ಯೇಸುವಿನ ಹಿಂಬಾಲಕರಾಗಲು ಬಯಸಿದ್ದರಿಂದ ಅಲ್ಲಿಗೆ ಬಂದಿದ್ದರು. (ಮಾರ್ಕ 2:15) ದುಃಖಕರವಾಗಿ ಫರಿಸಾಯರಲ್ಲಿ ಹೆಚ್ಚಿನವರು ಜನರನ್ನು ಯೇಸು ನೋಡಿದಂತೆ ನೋಡಲಿಲ್ಲ. ಜನರು ಬದಲಾಗುತ್ತಾರೆ ಎಂಬ ನಂಬಿಕೆ ಅವರಿಗಿರಲಿಲ್ಲ. ಈ ಜನರು ಯಾವತ್ತೂ ಉದ್ಧಾರ ಆಗಲ್ಲ ಎಂದು ನೆನಸುತ್ತಿದ್ದರು. ಈ ಫರಿಸಾಯರು ನ್ಯಾಯವಂತನೂ ಕರುಣಾಭರಿತನೂ ಆದ ಯೆಹೋವನಿಗಿಂತ ತುಂಬ ಭಿನ್ನರಾಗಿದ್ದರು!

16. ನ್ಯಾಯನಿರ್ಣಾಯಕ ಸಮಿತಿ ಏನನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸಬೇಕು?

16 ಇಂದು ಹಿರಿಯರು ‘ನ್ಯಾಯವನ್ನು ಮೆಚ್ಚುವವನಾದ’ ಯೆಹೋವನನ್ನು ಅನುಕರಿಸಬೇಕು. (ಕೀರ್ತ. 37:28) ಮೊದಲಾಗಿ ನಿಜವಾಗಲೂ ತಪ್ಪು ನಡೆದಿದೆಯಾ ಎಂದು ಅವರು “ಚೆನ್ನಾಗಿ ವಿಚಾರಿಸಿ ತಿಳಿದುಕೊಳ್ಳಬೇಕು.” ತಪ್ಪು ನಡೆದಿರುವಲ್ಲಿ, ಮುಂದೆ ಏನು ಮಾಡಬೇಕೆಂದು ತೀರ್ಮಾನಿಸಲು ಬೈಬಲಿನ ಮಾರ್ಗದರ್ಶನವನ್ನು ಪಾಲಿಸಬೇಕು. (ಧರ್ಮೋ. 13:12-14) ಒಂದು ನ್ಯಾಯನಿರ್ಣಾಯಕ ಸಮಿತಿಯನ್ನು ನಡೆಸುವಾಗ, ಗಂಭೀರ ಪಾಪ ಮಾಡಿದ ವ್ಯಕ್ತಿಯಲ್ಲಿ ನಿಜವಾದ ಪಶ್ಚಾತ್ತಾಪ ಇದೆಯಾ ಇಲ್ಲವಾ ಎಂದು ಹಿರಿಯರು ತುಂಬ ಜಾಗ್ರತೆ ವಹಿಸಿ ಖಚಿತಪಡಿಸಿಕೊಳ್ಳಬೇಕು. ಇದು ಮೇಲಿಂದ ಮೇಲೆ ನೋಡುವಾಗ ಗೊತ್ತಾಗಲಿಕ್ಕಿಲ್ಲ. ಏಕೆಂದರೆ ಆ ವ್ಯಕ್ತಿಗೆ ತನ್ನ ತಪ್ಪಿನ ಬಗ್ಗೆ ಏನು ಅನಿಸುತ್ತದೆ, ಅವನ ಹೃದಯದಲ್ಲಿ ಏನಿದೆ ಎನ್ನುವುದು ಪಶ್ಚಾತ್ತಾಪದಲ್ಲಿ ಸೇರಿರುತ್ತದೆ. (ಪ್ರಕ. 3:3) ಪಾಪಿಗೆ ಕರುಣೆ ಸಿಗಬೇಕಾದರೆ ಅವನು ಪಶ್ಚಾತ್ತಾಪಪಡಲೇಬೇಕು. *

17, 18. ತಪ್ಪು ಮಾಡಿದ ವ್ಯಕ್ತಿಯಲ್ಲಿ ನಿಜವಾದ ಪಶ್ಚಾತ್ತಾಪ ಇದೆಯಾ ಎಂದು ಹಿರಿಯರು ಹೇಗೆ ತಿಳಿದುಕೊಳ್ಳಬಹುದು? (ಲೇಖನದ ಆರಂಭದ ಚಿತ್ರ ನೋಡಿ.)

17 ಒಬ್ಬ ವ್ಯಕ್ತಿಯ ಹೃದಯವನ್ನು, ಮನಸ್ಸನ್ನು ಓದುವ ಸಾಮರ್ಥ್ಯ ಯೆಹೋವ ಮತ್ತು ಯೇಸುವಿಗೆ ಮಾತ್ರ ಇದೆ. ಹಿರಿಯರಿಗೆ ಈ ಸಾಮರ್ಥ್ಯ ಇಲ್ಲ. ನೀವು ಒಬ್ಬ ಹಿರಿಯರಾಗಿರುವಲ್ಲಿ, ಪಾಪ ಮಾಡಿದ ವ್ಯಕ್ತಿಯಲ್ಲಿ ನಿಜವಾದ ಪಶ್ಚಾತ್ತಾಪ ಇದೆಯಾ ಎಂದು ಹೇಗೆ ತಿಳಿದುಕೊಳ್ಳಬಹುದು? ಮೊದಲನೇದಾಗಿ, ವಿವೇಕ ಮತ್ತು ವಿವೇಚನೆಗಾಗಿ ಪ್ರಾರ್ಥಿಸಿ. (1 ಅರ. 3:9) ಎರಡನೇದಾಗಿ, ದೇವರ ವಾಕ್ಯ ಮತ್ತು ನಂಬಿಗಸ್ತ ಆಳು ಕೊಡುವ ಪ್ರಕಾಶನಗಳನ್ನು ಉಪಯೋಗಿಸುತ್ತಾ “ಲೋಕದ ದುಃಖ” ಮತ್ತು “ದೈವಿಕ ರೀತಿಯ ದುಃಖ”ದ ಮಧ್ಯೆ ಇರುವ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ದೈವಿಕ ರೀತಿಯ ದುಃಖ ನಿಜ ಪಶ್ಚಾತ್ತಾಪವನ್ನು ತೋರಿಸುತ್ತದೆ. (2 ಕೊರಿಂ. 7:10, 11) ಪಶ್ಚಾತ್ತಾಪಪಟ್ಟ ವ್ಯಕ್ತಿಗಳ ಬಗ್ಗೆ ಮತ್ತು ಪಶ್ಚಾತ್ತಾಪಪಡದಿದ್ದ ವ್ಯಕ್ತಿಗಳ ಬಗ್ಗೆ ಬೈಬಲ್‌ ಏನು ಹೇಳುತ್ತದೆಂದು ನೋಡಿ. ಅವರ ಯೋಚನೆ, ಅನಿಸಿಕೆ, ನಡತೆ ಹೇಗಿತ್ತೆಂದು ಪರಿಶೀಲಿಸಿ.

18 ಮೂರನೇದಾಗಿ, ನಡೆದ ತಪ್ಪಿನ ಬಗ್ಗೆ ಮಾತ್ರವಲ್ಲ ತಪ್ಪು ಮಾಡಿದ ವ್ಯಕ್ತಿಯ ಬಗ್ಗೆ ಯೋಚಿಸಿ. ಅವನು ಯಾಕೆ ಹೀಗಿದ್ದಾನೆ? ಅವನು ತೆಗೆದುಕೊಂಡಿರುವ ಕೆಲವು ನಿರ್ಧಾರಗಳ ಹಿಂದಿರುವ ಕಾರಣವೇನು? ಅವನಿಗಿರುವ ಕೆಲವು ಸವಾಲುಗಳು, ಸನ್ನಿವೇಶಗಳು ಏನು? ಎಂದು ಯೋಚಿಸಿ. ಕ್ರೈಸ್ತ ಸಭೆಯ ಶಿರಸ್ಸಾದ ಯೇಸು “ಕಣ್ಣಿಗೆ ಕಂಡಂತೆ ತೀರ್ಪುಮಾಡುವದಿಲ್ಲ, ಕಿವಿಗೆ ಬಿದ್ದಂತೆ ನಿರ್ಣಯಿಸುವದಿಲ್ಲ; ಬಡವರಿಗೋಸ್ಕರ ನ್ಯಾಯವಾಗಿ ತೀರ್ಪುಮಾಡುವನು, ಲೋಕದ ದೀನರಿಗೋಸ್ಕರ ಧರ್ಮವಾಗಿ ನಿರ್ಣಯಿಸುವನು” ಎಂದು ಬೈಬಲ್‌ ಮುಂತಿಳಿಸಿತ್ತು. (ಯೆಶಾ. 11:3, 4) ಹಿರಿಯರೇ, ಯೇಸು ತನ್ನ ಸಭೆಯನ್ನು ಪರಾಮರಿಸಲು ನಿಮ್ಮನ್ನು ನೇಮಿಸಿದ್ದಾನೆ. ನ್ಯಾಯ ಮತ್ತು ಕರುಣೆಯಿಂದ ತೀರ್ಪುಮಾಡಲು ಆತನು ನಿಮಗೆ ಸಹಾಯ ಮಾಡುವನು. (ಮತ್ತಾ. 18:18-20) ನಮ್ಮ ಬಗ್ಗೆ ಚಿಂತೆಮಾಡುವ ಹಿರಿಯರು ಇದ್ದಾರೆ ಎಂದು ತಿಳಿದು ನಮಗೆ ಸಂತೋಷವಾಗುತ್ತದೆ. ನಾವು ಸಹ ಒಬ್ಬರಿಗೊಬ್ಬರು ನ್ಯಾಯ ಮತ್ತು ಕರುಣೆ ತೋರಿಸಲು ಅವರು ಸಹಾಯ ಮಾಡುತ್ತಾರೆ.

19. ಆಶ್ರಯನಗರಗಳ ಏರ್ಪಾಡಿನಿಂದ ಕಲಿತಿರುವ ಯಾವ ಪಾಠವನ್ನು ನೀವು ಅನ್ವಯಿಸಬೇಕೆಂದಿದ್ದೀರಿ?

19 ಮೋಶೆಯ ಧರ್ಮಶಾಸ್ತ್ರದಲ್ಲಿ ‘ಜ್ಞಾನಸತ್ಯತೆಗಳು’ ಇವೆ. ಅದು ಯೆಹೋವನ ಬಗ್ಗೆ ಮತ್ತು ಆತನ ತತ್ವಗಳ ಬಗ್ಗೆ ಕಲಿಸುತ್ತದೆ. (ರೋಮ. 2:20) ಧರ್ಮಶಾಸ್ತ್ರದಲ್ಲಿ ಕೊಡಲಾಗಿರುವ ಆಶ್ರಯನಗರಗಳ ಏರ್ಪಾಡು ‘ಸರಿಯಾಗಿ ನ್ಯಾಯತೀರಿಸುವುದು’ ಹೇಗೆಂದು ಹಿರಿಯರಿಗೆ ಕಲಿಸುತ್ತದೆ ಮತ್ತು ನಾವೆಲ್ಲರೂ ‘ಒಬ್ಬರಿಗೊಬ್ಬರು ಪ್ರೀತಿಕರುಣೆಗಳನ್ನು ತೋರಿಸಬೇಕೆಂದು’ ಕಲಿಸುತ್ತದೆ. (ಜೆಕ. 7:9) ಧರ್ಮಶಾಸ್ತ್ರವನ್ನು ನಾವೀಗ ಅನುಸರಿಸಬೇಕಾಗಿಲ್ಲ ನಿಜ. ಆದರೆ ನಾವು ಮನಸ್ಸಿನಲ್ಲಿಡಬೇಕಾದ ಒಂದು ವಿಷಯವೇನೆಂದರೆ ಯೆಹೋವನು ಬದಲಾಗಿಲ್ಲ. ಆತನು ನ್ಯಾಯ ಮತ್ತು ಕರುಣೆಗೆ ಈಗಲೂ ತುಂಬ ಪ್ರಾಮುಖ್ಯತೆ ಕೊಡುತ್ತಾನೆ. ಇಂಥ ದೇವರನ್ನು ಆರಾಧಿಸುವುದು ದೊಡ್ಡ ಸುಯೋಗ! ಆದ್ದರಿಂದ ಆತನಲ್ಲಿರುವ ಸೊಗಸಾದ ಗುಣಗಳನ್ನು ಅನುಕರಿಸೋಣ ಮತ್ತು ಆತನಲ್ಲಿ ಆಶ್ರಯ ಪಡೆದುಕೊಳ್ಳೋಣ!

^ ಪ್ಯಾರ. 16 ಸೆಪ್ಟೆಂಬರ್‌ 15, 2006​ರ ಕಾವಲಿನಬುರುಜುವಿನ (ಇಂಗ್ಲಿಷ್‌) ಪುಟ 30​ರಲ್ಲಿರುವ “ವಾಚಕರಿಂದ ಪ್ರಶ್ನೆಗಳು” ನೋಡಿ.