ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಲೋಕದ ಯೋಚನಾ ರೀತಿಯನ್ನು ತಿರಸ್ಕರಿಸಿರಿ

ಲೋಕದ ಯೋಚನಾ ರೀತಿಯನ್ನು ತಿರಸ್ಕರಿಸಿರಿ

“ಎಚ್ಚರವಾಗಿರಿ! . . . ಈ ಲೋಕಕ್ಕೆ ಸೇರಿದ . . . ತತ್ತ್ವಜ್ಞಾನ ಮತ್ತು ನಿರರ್ಥಕವಾದ ಮೋಸಕರ ಮಾತುಗಳ ಮೂಲಕ ಯಾವನಾದರೂ ನಿಮ್ಮನ್ನು ತನ್ನ ಬೇಟೆಯೋಪಾದಿ ಹಿಡಿದುಕೊಂಡು ಹೋಗಬಹುದು.”—ಕೊಲೊ. 2:8.

ಗೀತೆಗಳು: 60, 26

1. ಕೊಲೊಸ್ಸೆಯಲ್ಲಿದ್ದ ಕ್ರೈಸ್ತರಿಗೆ ಬರೆದ ಪತ್ರದಲ್ಲಿ ಅಪೊಸ್ತಲ ಪೌಲನು ಯಾವ ಬುದ್ಧಿವಾದ ಕೊಟ್ಟನು? (ಲೇಖನದ ಆರಂಭದ ಚಿತ್ರ ನೋಡಿ.)

ಅಪೊಸ್ತಲ ಪೌಲನು ರೋಮ್‌ನಲ್ಲಿ ಕೈದಿಯಾಗಿದ್ದಾಗ ಕೊಲೊಸ್ಸೆಯಲ್ಲಿದ್ದ ಕ್ರೈಸ್ತರಿಗೆ ಕ್ರಿ.ಶ. 60-61​ರಷ್ಟಕ್ಕೆ ಒಂದು ಪತ್ರ ಬರೆದನು. ಅದರಲ್ಲಿ, ಅವರಿಗೆ “ಆಧ್ಯಾತ್ಮಿಕ ಗ್ರಹಿಕೆ” ಅಂದರೆ ಯೆಹೋವನ ದೃಷ್ಟಿಕೋನದಿಂದ ವಿಷಯಗಳನ್ನು ನೋಡುವ ಸಾಮರ್ಥ್ಯ ಯಾಕೆ ಇರಬೇಕೆಂದು ವಿವರಿಸಿದನು. (ಕೊಲೊ. 1:9) ಪೌಲನು ಹೇಳಿದ್ದು: “ಯಾವನಾದರೂ ತನ್ನ ಒಡಂಬಡಿಸುವಂಥ ವಾಗ್ವಾದಗಳಿಂದ ನಿಮ್ಮನ್ನು ಮರುಳುಮಾಡಬಾರದೆಂಬ ಕಾರಣಕ್ಕಾಗಿ ನಾನು ಇದನ್ನು ಹೇಳುತ್ತಿದ್ದೇನೆ. ಎಚ್ಚರವಾಗಿರಿ! ಕ್ರಿಸ್ತನಿಗೆ ಅನುಸಾರವಾಗಿರದೆ ಮನುಷ್ಯರ ಸಂಪ್ರದಾಯಕ್ಕೆ ಅನುಸಾರವಾಗಿಯೂ ಈ ಲೋಕಕ್ಕೆ ಸೇರಿದ ಪ್ರಾಥಮಿಕ ವಿಷಯಗಳಿಗೆ ಅನುಸಾರವಾಗಿಯೂ ಇರುವ ತತ್ತ್ವಜ್ಞಾನ ಮತ್ತು ನಿರರ್ಥಕವಾದ ಮೋಸಕರ ಮಾತುಗಳ ಮೂಲಕ ಯಾವನಾದರೂ ನಿಮ್ಮನ್ನು ತನ್ನ ಬೇಟೆಯೋಪಾದಿ ಹಿಡಿದುಕೊಂಡು ಹೋಗಬಹುದು.” (ಕೊಲೊ. 2:4, 8) ಅವನು ಮುಂದುವರಿಸುತ್ತಾ ಕೆಲವೊಂದು ಜನಪ್ರಿಯ ವಿಚಾರಗಳು ಯಾಕೆ ತಪ್ಪಾಗಿವೆ ಮತ್ತು ಈ ತಪ್ಪಾದ ವಿಚಾರಗಳನ್ನು ಅನೇಕ ಜನರು ಯಾಕೆ ಇಷ್ಟಪಡುತ್ತಾರೆಂದು ವಿವರಿಸಿದನು. ಉದಾಹರಣೆಗೆ ಕೆಲವೊಂದು ವಿಚಾರಗಳು ಜನರಲ್ಲಿ, ತಾವು ತುಂಬ ಬುದ್ಧಿವಂತರು ಇಲ್ಲವೇ ಬೇರೆಯವರಿಗಿಂತ ಶ್ರೇಷ್ಠರು ಎಂಬ ಭಾವನೆಯನ್ನು ಮೂಡಿಸುತ್ತಿದ್ದವು. ಆದ್ದರಿಂದಲೇ ಪೌಲನು ಈ ಪತ್ರದ ಮೂಲಕ ತನ್ನ ಸಹೋದರರಿಗೆ ಲೋಕದ ಯೋಚನಾ ರೀತಿಯಿಂದ ದೂರವಿದ್ದು, ತಪ್ಪಾದ ಆಚಾರವಿಚಾರಗಳನ್ನು ತಿರಸ್ಕರಿಸುವಂತೆ ಸಹಾಯಮಾಡಿದನು.—ಕೊಲೊ. 2:16, 17, 23.

2. ಲೋಕದ ಯೋಚನಾ ರೀತಿಯ ಕೆಲವೊಂದು ಉದಾಹರಣೆಗಳನ್ನು ಯಾಕೆ ಚರ್ಚಿಸಲಿದ್ದೇವೆ?

2 ಲೋಕದ ಯೋಚನಾ ರೀತಿ ಯೆಹೋವನ ತತ್ವಗಳನ್ನು ಅಲಕ್ಷಿಸುತ್ತದೆ. ನಾವು ಜಾಗ್ರತೆವಹಿಸದಿದ್ದರೆ ಅದು ಮೆಲ್ಲಮೆಲ್ಲನೆ ದೇವರ ಮೇಲಿನ ನಮ್ಮ ನಂಬಿಕೆಯನ್ನು ದುರ್ಬಲಗೊಳಿಸುತ್ತದೆ. ಲೋಕದ ಯೋಚನಾ ರೀತಿ ನಮ್ಮೆಲ್ಲರಿಗೂ ಟಿವಿಯಲ್ಲಿ, ಇಂಟರ್‌ನೆಟ್‌ನಲ್ಲಿ, ಕೆಲಸದ ಸ್ಥಳದಲ್ಲಿ, ಶಾಲೆಯಲ್ಲಿ ಹೀಗೆ ಒಂದಲ್ಲ ಒಂದು ವಿಧದಲ್ಲಿ ಎದುರಾಗುತ್ತದೆ. ಆದರೆ ಅದರ ಕೆಟ್ಟ ಪ್ರಭಾವ ನಮ್ಮನ್ನು ತಟ್ಟದಿರಲು ನಾವೇನು ಮಾಡಬಹುದು? ಇದನ್ನೇ ಈ ಲೇಖನದಲ್ಲಿ ಚರ್ಚಿಸಲಿದ್ದೇವೆ. ಲೋಕದ ಯೋಚನಾ ರೀತಿಯ 5 ಉದಾಹರಣೆಗಳನ್ನು ನೋಡಲಿದ್ದೇವೆ. ಜೊತೆಗೆ, ಈ ವಿಚಾರಗಳನ್ನು ನಾವು ಹೇಗೆ ತಿರಸ್ಕರಿಸಬಹುದೆಂದು ಚರ್ಚಿಸಲಿದ್ದೇವೆ.

ದೇವರಲ್ಲಿ ನಂಬಿಕೆ ಇಡುವ ಅಗತ್ಯವಿದೆಯಾ?

3. ಅನೇಕ ಜನರು ಯಾವ ವಿಚಾರವನ್ನು ಇಷ್ಟಪಡುತ್ತಾರೆ? ಯಾಕೆ?

3 “ಒಳ್ಳೇ ವ್ಯಕ್ತಿಯಾಗಿರಲು ನಾನು ದೇವರಲ್ಲಿ ನಂಬಿಕೆ ಇಡಬೇಕಾಗಿಲ್ಲ.” ಇಂದು ಅನೇಕ ದೇಶಗಳಲ್ಲಿ ಈ ವಿಚಾರ ಸರ್ವಸಾಮಾನ್ಯ. ಈ ರೀತಿ ಹೇಳುವವರು ದೇವರು ನಿಜವಾಗಲೂ ಇದ್ದಾನಾ ಇಲ್ಲವಾ ಎನ್ನುವ ವಿಷಯದ ಬಗ್ಗೆ ಗಾಢವಾಗಿ ಯೋಚಿಸಿರಲಿಕ್ಕಿಲ್ಲ. ತಮಗೆ ಹೇಗೆ ಬೇಕೊ ಹಾಗೆ ಜೀವಿಸುವ ಸ್ವಾತಂತ್ರ್ಯ ಅವರಿಗೆ ಬೇಕು ಅಷ್ಟೇ, ಹಾಗಾಗಿ ಈ ರೀತಿ ಹೇಳುತ್ತಾರೆ. (ಕೀರ್ತನೆ 10:4 ಓದಿ.) ಇನ್ನೂ ಕೆಲವರು, “ನಾನು ದೇವರನ್ನು ನಂಬದಿದ್ದರೂ ನನ್ನ ಬದುಕಲ್ಲಿ ಒಳ್ಳೇ ತತ್ವಗಳನ್ನು ಪಾಲಿಸುತ್ತೇನೆ” ಎಂದು ಹೇಳುತ್ತಾರೆ. ಹೀಗೆ ಹೇಳಿದರೆ ಜನ ತಮ್ಮನ್ನು ತುಂಬ ಬುದ್ಧಿವಂತರು ಅಂದುಕೊಳ್ಳುತ್ತಾರೆ ಎನ್ನುವುದು ಅವರ ಅಭಿಪ್ರಾಯ.

4. ಸೃಷ್ಟಿಕರ್ತನು ಇಲ್ಲ ಎಂದು ಹೇಳುವ ವ್ಯಕ್ತಿಯ ಜೊತೆ ನಾವು ಯಾವ ತರ್ಕ ಬಳಸಬಹುದು?

4 ಸೃಷ್ಟಿಕರ್ತನು ಇಲ್ಲ ಎಂದು ನಂಬುವುದು ತರ್ಕಬದ್ಧ ಆಗಿದೆಯಾ? ಇದಕ್ಕೆ ವಿಜ್ಞಾನ ಕೊಡುವ ಉತ್ತರದಿಂದ ಕೆಲವರಿಗಂತೂ ಗಲಿಬಿಲಿಯಾಗಿದೆ. ಆದರೆ ನಿಜವಾಗಲೂ ಇದರ ಉತ್ತರ ಸರಳ. ಒಂದು ಮನೆ ತನ್ನಿಂದ ತಾನೇ ಬರಲು ಸಾಧ್ಯನಾ? ಇಲ್ಲ ತಾನೇ? ಯಾರಾದರೂ ಅದನ್ನು ಕಟ್ಟಲೇಬೇಕು. ಪ್ರತಿಯೊಂದು ಜೀವಿ ಯಾವುದೇ ಮನೆಗಿಂತ ಎಷ್ಟೋ ಹೆಚ್ಚು ಜಟಿಲವಾಗಿದೆ. ತುಂಬ ಸರಳವಾದ ಸೂಕ್ಷ್ಮಾಣುಜೀವಿಯ ಜೀವಕೋಶ ಸಹ ತನ್ನನ್ನು ತಾನೇ ನಕಲುಮಾಡಿಕೊಳ್ಳಬಹುದು. ಆದರೆ ಒಂದು ಮನೆ ಆ ತರ ಮಾಡಲು ಸಾಧ್ಯವೇ ಇಲ್ಲ. ಜೀವಕೋಶಗಳಿಗಿರುವ ಈ ಸಾಮರ್ಥ್ಯದಿಂದಾಗಿ ತಿಳಿದುಬರುವ ವಿಷಯವೇನೆಂದರೆ ಅದರಲ್ಲಿ ಮಾಹಿತಿ ಶೇಖರಣೆಯಾಗಿರುತ್ತದೆ ಮತ್ತು ಈ ಮಾಹಿತಿ ಹೊಸ ಜೀವಕೋಶಗಳಿಗೆ ದಾಟಿಸಲ್ಪಡುತ್ತದೆ. ಆಗ ಆ ಹೊಸ ಜೀವಕೋಶಗಳು ಸಹ ತಮ್ಮನ್ನು ತಾವೇ ನಕಲುಮಾಡಿಕೊಳ್ಳುತ್ತವೆ. ಇಂಥ ಸಾಮರ್ಥ್ಯವುಳ್ಳ ಜೀವಕೋಶಗಳನ್ನು ಸೃಷ್ಟಿಸಿದವನು ಯಾರು? ಬೈಬಲ್‌ ಇದಕ್ಕೆ ಕೊಡುವ ಉತ್ತರ: “ವಾಸ್ತವದಲ್ಲಿ ಪ್ರತಿಯೊಂದು ಮನೆಯು ಯಾರೋ ಒಬ್ಬನಿಂದ ಕಟ್ಟಲ್ಪಟ್ಟಿದೆ, ಆದರೆ ಎಲ್ಲವನ್ನೂ ಕಟ್ಟಿದಾತನು ದೇವರೇ.”—ಇಬ್ರಿ. 3:4.

5. ಯಾವುದು ಸರಿಯೆಂದು ತಿಳಿದುಕೊಳ್ಳಲು ದೇವರಲ್ಲಿ ನಂಬಿಕೆ ಇಡುವ ಅಗತ್ಯವಿಲ್ಲವೆಂಬ ವಿಚಾರದ ಬಗ್ಗೆ ಏನು ಹೇಳಬಹುದು?

5 ಸರಿ ಯಾವುದು ತಪ್ಪು ಯಾವುದೆಂದು ತಿಳಿದುಕೊಳ್ಳಲು ದೇವರಲ್ಲಿ ನಂಬಿಕೆ ಇಡುವ ಅಗತ್ಯವಿಲ್ಲವೆಂಬ ವಿಚಾರದ ಬಗ್ಗೆ ಏನು ಹೇಳಬಹುದು? ದೇವರನ್ನು ನಂಬದ ಜನರಿಗೂ ಜೀವನದಲ್ಲಿ ಒಳ್ಳೇ ತತ್ವಗಳಿರಬಹುದೆಂದು ಬೈಬಲೇ ಹೇಳುತ್ತದೆ. (ರೋಮ. 2:14, 15) ಉದಾಹರಣೆಗೆ, ಅಂಥವರಿಗೆ ತಮ್ಮ ಹೆತ್ತವರ ಮೇಲೆ ಪ್ರೀತಿ, ಗೌರವ ಇರಬಹುದು. ಆದರೆ ಅವರು ಯೆಹೋವನ ಮಟ್ಟಗಳನ್ನು ಪಾಲಿಸದೇ ಇರುವುದರಿಂದ ಅವರ ನೈತಿಕ ಮಟ್ಟಗಳು ಕೆಟ್ಟದಾಗಿರುವ ಸಾಧ್ಯತೆ ಇದೆ. (ಯೆಶಾ. 33:22) ಲೋಕದಲ್ಲಿನ ಕಷ್ಟಕರವಾದ ಸಮಸ್ಯೆಗಳನ್ನು ಬಗೆಹರಿಸಲು ದೇವರ ಸಹಾಯ ಬೇಕೇ ಬೇಕೆಂದು ಲೋಕದ ಕೆಲವು ಬುದ್ಧಿವಂತ ಜನರಿಗೂ ಇಂದು ಮನವರಿಕೆ ಆಗಿದೆ. (ಯೆರೆಮೀಯ 10:23 ಓದಿ.) ಆದ್ದರಿಂದ ಯಾವುದು ಸರಿಯೆಂದು ನಿರ್ಧರಿಸಲು ದೇವರಲ್ಲಿ ನಂಬಿಕೆಯಿಡುವ, ಆತನ ಮಟ್ಟಗಳನ್ನು ಪಾಲಿಸುವ ಅಗತ್ಯವಿಲ್ಲವೆಂದು ನಾವು ನೆನಸಬಾರದು.—ಕೀರ್ತ. 146:3.

ಧರ್ಮದ ಅಗತ್ಯವಿದೆಯಾ?

6. ಧರ್ಮದ ಬಗ್ಗೆ ಅನೇಕರು ಏನು ನೆನಸುತ್ತಾರೆ?

6 “ಸಂತೋಷವಾಗಿರಲು ಧರ್ಮ ಬೇಕಾಗಿಲ್ಲ.” ಧರ್ಮ ಬೇಜಾರು ಹುಟ್ಟಿಸುತ್ತದೆ, ಅದರಿಂದ ಯಾವ ಪ್ರಯೋಜನವಿಲ್ಲ ಎಂದು ಅನೇಕರು ನೆನಸುತ್ತಾರೆ. ಅಷ್ಟೇ ಅಲ್ಲ, ಅನೇಕ ಧರ್ಮಗಳು ನರಕಾಗ್ನಿಯ ಬಗ್ಗೆ ಕಲಿಸುತ್ತವೆ, ಜನರಿಂದ ಹಣ ಕೀಳುತ್ತವೆ, ರಾಜಕಾರಣಿಗಳನ್ನು ಬೆಂಬಲಿಸುತ್ತವೆ. ಹಾಗಾಗಿ ಯಾವ ಧರ್ಮವನ್ನೂ ಪಾಲಿಸದೇ ಸಂತೋಷದಿಂದಿದ್ದೇವೆ ಎಂದು ಹೇಳುವ ಜನರ ಸಂಖ್ಯೆ ಹೆಚ್ಚಾಗುತ್ತಿರುವುದು ಆಶ್ಚರ್ಯದ ಸಂಗತಿಯಲ್ಲ. ಅವರು ಹೀಗೂ ಹೇಳಬಹುದು: “ನನಗೆ ದೇವರಲ್ಲಿ ನಂಬಿಕೆಯಿದೆ, ಆದರೆ ಯಾವುದೇ ಧರ್ಮದ ಭಾಗವಾಗಿರಲು ಇಷ್ಟವಿಲ್ಲ.”

7. ಸತ್ಯ ಧರ್ಮ ಹೇಗೆ ಸಂತೋಷ ತರಬಲ್ಲದು?

7 ಧರ್ಮ ಇಲ್ಲದೆ ನಾವು ನಿಜವಾಗಿಯೂ ಸಂತೋಷವಾಗಿರಲು ಸಾಧ್ಯನಾ? ಸುಳ್ಳು ಧರ್ಮ ಇಲ್ಲದೆ ಸಂತೋಷವಾಗಿರಬಲ್ಲೆವು ನಿಜ. ಆದರೆ ‘ಸಂತೋಷದ ದೇವರಾದ’ ಯೆಹೋವನ ಸ್ನೇಹಿತರಾಗದಿದ್ದರೆ ಯಾವ ವ್ಯಕ್ತಿಯೂ ನಿಜವಾದ ಸಂತೋಷ ಪಡೆಯಲಾರ. (1 ತಿಮೊ. 1:11) ಯೆಹೋವನು ಮಾಡುವ ಪ್ರತಿಯೊಂದು ವಿಷಯದಿಂದಲೂ ಇತರರಿಗೆ ಸಹಾಯವಾಗುತ್ತದೆ. ಆತನ ಸೇವಕರಾಗಿರುವ ನಾವು ಆತನಂತೆಯೇ ಬೇರೆಯವರಿಗೆ ಸಹಾಯ ಮಾಡುವುದರಿಂದ ನಮಗೆ ಸಂತೋಷ ಸಿಗುತ್ತದೆ. (ಅ. ಕಾ. 20:35) ಉದಾಹರಣೆಗೆ, ಸತ್ಯಾರಾಧನೆಯು ಇಡೀ ಕುಟುಂಬಕ್ಕೆ ಸಂತೋಷ ತರುತ್ತದೆ. ಹೇಗೆ? ವಿವಾಹ ಸಂಗಾತಿಗೆ ಗೌರವ ಮತ್ತು ನಿಷ್ಠೆ ತೋರಿಸಬೇಕು, ಬೇರೆಯವರಿಗೆ ಗೌರವ ತೋರಿಸಬೇಕೆಂದು ಮಕ್ಕಳಿಗೆ ಕಲಿಸಬೇಕು, ಕುಟುಂಬದ ಸದಸ್ಯರಿಗೆ ನಿಜ ಪ್ರೀತಿ ತೋರಿಸಬೇಕೆಂದು ಅದು ಕಲಿಸುತ್ತದೆ. ಸತ್ಯ ಧರ್ಮವು ಯೆಹೋವನ ಜನರಿಗೆ ಸಭೆಗಳಲ್ಲಿ ಶಾಂತಿಯಿಂದ ಕೆಲಸಮಾಡಲು ಮತ್ತು ತಮ್ಮ ಸಹೋದರರಿಗೆ ಪ್ರೀತಿ ತೋರಿಸಲು ಸಹಾಯಮಾಡುತ್ತದೆ.—ಯೆಶಾಯ 65:13, 14 ಓದಿ.

8. ಮತ್ತಾಯ 5:3​ಕ್ಕನುಸಾರ ಜನರಿಗೆ ನಿಜವಾದ ಸಂತೋಷ ತರುವ ವಿಷಯ ಯಾವುದು?

8 ಒಬ್ಬ ವ್ಯಕ್ತಿ ದೇವರ ಸೇವೆ ಮಾಡದೇ ನಿಜವಾಗಲೂ ಸಂತೋಷವಾಗಿರಬಲ್ಲನಾ? ಜನರಿಗೆ ಯಾವುದರಿಂದ ಸಂತೋಷ ಸಿಗುತ್ತದೆ? ಕೆಲವರಿಗೆ ಉದ್ಯೋಗ, ಕ್ರೀಡೆ, ಹವ್ಯಾಸಗಳು ತೃಪ್ತಿ ಕೊಡುತ್ತವೆ. ಇನ್ನೂ ಕೆಲವರಿಗೆ ಕುಟುಂಬ ಇಲ್ಲವೆ ಸ್ನೇಹಿತರನ್ನು ಚೆನ್ನಾಗಿ ನೋಡಿಕೊಳ್ಳುವಾಗ ಸಂತೃಪ್ತಿ ಸಿಗುತ್ತದೆ. ಇದೆಲ್ಲ ಸ್ವಲ್ಪ ಖುಷಿ ಕೊಡುತ್ತದೆ ನಿಜ. ಆದರೆ ಶಾಶ್ವತವಾದ ಸಂತೋಷ ತರುವಂಥ ವಿಷಯವೊಂದಿದೆ. ಪ್ರಾಣಿಗಳಿಗೆ ಇಲ್ಲದಿರುವ ಒಂದು ಸಾಮರ್ಥ್ಯ ನಮಗಿದೆ. ಅದೇನೆಂದರೆ ಸೃಷ್ಟಿಕರ್ತನ ಬಗ್ಗೆ ತಿಳಿದುಕೊಳ್ಳಬಹುದು, ಆತನನ್ನು ಆರಾಧಿಸಬಹುದು. ಇದರಿಂದ ನಮಗೆ ಸಂತೋಷ ಸಿಗುವ ಹಾಗೆ ಯೆಹೋವನು ನಮ್ಮನ್ನು ಸೃಷ್ಟಿಸಿದ್ದಾನೆ. (ಮತ್ತಾಯ 5:3 ಓದಿ.) ಹೀಗಿರುವುದರಿಂದಲೇ, ಯೆಹೋವನನ್ನು ಆರಾಧಿಸಲಿಕ್ಕೆಂದು ನಮ್ಮ ಸಹೋದರ ಸಹೋದರಿಯರ ಜೊತೆ ಸೇರಿದಾಗ ನಮಗೆ ಸಂತೋಷ ಆಗುತ್ತದೆ, ಪ್ರೋತ್ಸಾಹ ಸಿಗುತ್ತದೆ. (ಕೀರ್ತ. 133:1) ಅಷ್ಟೇ ಅಲ್ಲ, ಲೋಕವ್ಯಾಪಕ ಸಹೋದರತ್ವದ ಭಾಗವಾಗಿದ್ದೇವೆ, ಶುದ್ಧವಾದ ಜೀವನ ನಡೆಸುತ್ತೇವೆ, ಭವಿಷ್ಯದ ಅದ್ಭುತ ನಿರೀಕ್ಷೆ ನಮಗಿದೆ ಎನ್ನುವುದು ಸಹ ತುಂಬ ಆನಂದ ತರುತ್ತದೆ.

ನೈತಿಕ ಮಟ್ಟಗಳ ಅಗತ್ಯವಿದೆಯಾ?

9. (ಎ) ಲೈಂಗಿಕತೆಯ ಬಗ್ಗೆ ಜನಪ್ರಿಯವಾಗಿರುವ ಒಂದು ಅಭಿಪ್ರಾಯವೇನು? (ಬಿ) ದೇವರ ವಾಕ್ಯಕ್ಕನುಸಾರ ವಿವಾಹದ ಚೌಕಟ್ಟಿನ ಹೊರಗಿನ ಲೈಂಗಿಕತೆ ತಪ್ಪಾಗಿದೆ ಯಾಕೆ?

9 “ವಿವಾಹದ ಚೌಕಟ್ಟಿನ ಹೊರಗಿನ ಲೈಂಗಿಕತೆಯಲ್ಲಿ ತಪ್ಪೇನಿದೆ?” ಜನರು ನಿಮಗೆ, “ಜೀವನದಲ್ಲಿ ಮಜಾ ಮಾಡಬೇಕು. ನೀವ್ಯಾಕೆ ಇಷ್ಟೊಂದು ಕಟ್ಟುನಿಟ್ಟಾಗಿದ್ದೀರಾ?” ಎಂದು ಕೇಳಬಹುದು. ಆದರೆ ದೇವರ ವಾಕ್ಯ ಲೈಂಗಿಕ ಅನೈತಿಕತೆಯನ್ನು ನಿಷೇಧಿಸುತ್ತದೆ. * (1 ಥೆಸಲೊನೀಕ 4:3-8 ಓದಿ.) ಯೆಹೋವನು ನಮ್ಮನ್ನು ಸೃಷ್ಟಿಸಿರುವುದರಿಂದ ನಮಗಾಗಿ ನಿಯಮಗಳನ್ನು ಮಾಡುವ ಹಕ್ಕು ಆತನಿಗಿದೆ. ವಿವಾಹವಾಗಿರುವ ಗಂಡುಹೆಣ್ಣಿನ ಮಧ್ಯೆ ಮಾತ್ರ ಲೈಂಗಿಕ ಸಂಬಂಧ ಇರಬೇಕೆಂದು ಆತನು ಹೇಳುತ್ತಾನೆ. ನಮ್ಮ ಮೇಲೆ ಪ್ರೀತಿ ಇರುವುದರಿಂದಲೇ ಈ ನಿಯಮಗಳನ್ನು ಇಟ್ಟಿದ್ದಾನೆ. ಅವುಗಳನ್ನು ಪಾಲಿಸುವಾಗ ನಮ್ಮ ಜೀವನ ಚೆನ್ನಾಗಿರುತ್ತದೆ ಎಂದು ಆತನಿಗೆ ಗೊತ್ತು. ದೇವರ ನಿಯಮಗಳನ್ನು ಪಾಲಿಸುವ ಕುಟುಂಬದಲ್ಲಿ ಹೆಚ್ಚು ಪ್ರೀತಿ, ಗೌರವ, ಸುರಕ್ಷಿತ ಭಾವನೆ ಇರುತ್ತದೆ. ಆದರೆ ದೇವರ ನಿಯಮಗಳನ್ನು ತಿಳಿದೂ ತಿಳಿದು ಮುರಿಯುವವರನ್ನು ಆತನು ಶಿಕ್ಷಿಸುತ್ತಾನೆ.—ಇಬ್ರಿ. 13:4.

10. ಕ್ರೈಸ್ತನೊಬ್ಬನು ಲೈಂಗಿಕ ಅನೈತಿಕತೆಯಿಂದ ದೂರವಿರಲು ಏನು ಮಾಡಬೇಕು?

10 ಲೈಂಗಿಕ ಅನೈತಿಕತೆಯಿಂದ ದೂರವಿರಲು ಏನು ಮಾಡಬೇಕೆಂದು ಬೈಬಲ್‌ ಕಲಿಸುತ್ತದೆ. ನಮಗೆ ನಮ್ಮ ಕಣ್ಣಿನ ಮೇಲೆ ನಿಯಂತ್ರಣ ಇರಬೇಕು. ಯೇಸು ಹೀಗಂದನು: “ಒಬ್ಬ ಸ್ತ್ರೀಯನ್ನು ಕಾಮೋದ್ರೇಕಭಾವದಿಂದ ನೋಡುತ್ತಾ ಇರುವ ಪ್ರತಿಯೊಬ್ಬನು ಈಗಾಗಲೇ ತನ್ನ ಹೃದಯದಲ್ಲಿ ಅವಳೊಂದಿಗೆ ವ್ಯಭಿಚಾರ ಮಾಡಿದವನಾಗಿದ್ದಾನೆ. ಆದುದರಿಂದ ನಿನ್ನ ಬಲಗಣ್ಣು ನಿನ್ನನ್ನು ಎಡವಿಸುತ್ತಿರುವುದಾದರೆ ಅದನ್ನು ಕಿತ್ತು ಬಿಸಾಡು.” (ಮತ್ತಾ. 5:28, 29) ನಾವು ಅಶ್ಲೀಲ ಚಿತ್ರಗಳನ್ನು ನೋಡಬಾರದು, ಅನೈತಿಕತೆ ತುಂಬಿದ ಹಾಡುಗಳನ್ನು ಕೇಳಿಸಿಕೊಳ್ಳಬಾರದು. ಪೌಲನು ಬರೆದದ್ದು: “ಜಾರತ್ವ” ಅಂದರೆ ಲೈಂಗಿಕ ಅನೈತಿಕತೆಗೆ “ಸಂಬಂಧಿಸಿದ ಭೂಸಂಬಂಧವಾದ ನಿಮ್ಮ ದೈಹಿಕ ಅಂಗಗಳನ್ನು ಸಾಯಿಸಿರಿ.” (ಕೊಲೊ. 3:5) ನಾವು ಏನು ಯೋಚಿಸುತ್ತೇವೊ, ಏನು ಮಾತಾಡುತ್ತೇವೊ ಅದರ ಮೇಲೆಯೂ ನಿಯಂತ್ರಣ ಇಡಬೇಕು.—ಎಫೆ. 5:3-5.

ಒಳ್ಳೇ ವೃತ್ತಿಜೀವನ ಅಗತ್ಯವಿದೆಯಾ?

11. ಒಳ್ಳೇ ವೃತ್ತಿಜೀವನಕ್ಕಾಗಿ ನಮ್ಮಲ್ಲಿ ಯಾಕೆ ಆಸೆಪಡಬಹುದು?

11 “ಒಳ್ಳೇ ವೃತ್ತಿಜೀವನದಿಂದ ಸಂತೋಷ ಸಿಗುತ್ತದೆ.” ಉದ್ಯೋಗ ಜಗತ್ತಿನ ಒಂದು ನಿರ್ದಿಷ್ಟ ಕ್ಷೇತ್ರದಲ್ಲಿ ಜೀವನಪೂರ್ತಿ ಕೆಲಸಮಾಡಿ ಹೆಸರು, ಐಶ್ವರ್ಯ, ಅಧಿಕಾರ ಗಳಿಸಲು ನಮ್ಮ ಸಮಯ, ಶಕ್ತಿಯನ್ನೆಲ್ಲ ಕೊಡಬೇಕೆಂದು ಜನರು ಹೇಳಬಹುದು. ಇಂಥ ರೀತಿಯ ವೃತ್ತಿಜೀವನವೇ ಸಂತೋಷದ ಗುಟ್ಟು ಎಂದು ಅನೇಕರು ನೆನಸುತ್ತಾರೆ. ಹಾಗಾಗಿ ನಾವು ಸಹ ಅವರಂತೆ ಯೋಚಿಸಲು ಆರಂಭಿಸಬಹುದು.

12. ಒಳ್ಳೇ ವೃತ್ತಿಜೀವನ ಸಂತೋಷ ಕೊಡಬಲ್ಲದಾ?

12 ತುಂಬ ಅಧಿಕಾರ ಅಥವಾ ದೊಡ್ಡ ಹೆಸರನ್ನು ತಂದುಕೊಡುವಂಥ ವೃತ್ತಿ ನಿಜವಾಗಲೂ ಸಂತೋಷ ತರುತ್ತದಾ? ಇಲ್ಲ. ಸ್ವಲ್ಪ ಯೋಚಿಸಿ: ಸೈತಾನನೂ ತುಂಬ ಅಧಿಕಾರ, ದೊಡ್ಡ ಹೆಸರಿಗಾಗಿ ಆಸೆಪಟ್ಟನು. ಅವನು ಆಸೆಪಟ್ಟದ್ದು ಒಂದರ್ಥದಲ್ಲಿ ಅವನಿಗೆ ಸಿಕ್ಕಿತು. ಆದರೆ ಅವನು ಸಂತೋಷವಾಗಿದ್ದಾನಾ? ಇಲ್ಲ! ಅವನಲ್ಲಿ ಕೋಪ, ರೋಷ ತುಂಬಿಕೊಂಡಿದೆ. (ಮತ್ತಾ. 4:8, 9; ಪ್ರಕ. 12:12) ನಮ್ಮ ಬಗ್ಗೆ ಸ್ವಲ್ಪ ಯೋಚಿಸೋಣ. ನಾವು ಬೇರೆಯವರಿಗೆ ದೇವರ ಬಗ್ಗೆ, ಆತನು ವಾಗ್ದಾನಿಸಿರುವ ಅದ್ಭುತವಾದ ಭವಿಷ್ಯದ ಬಗ್ಗೆ ಕಲಿಸುತ್ತಿರುವುದರಿಂದ ತುಂಬ ಸಂತೋಷವಾಗಿದ್ದೇವೆ! ಇಂಥ ಸಂತೋಷ ನಮಗೆ ಈ ಲೋಕದಲ್ಲಿ ಬೇರಾವುದೇ ವೃತ್ತಿಜೀವನದಿಂದ ಸಿಗಲು ಸಾಧ್ಯವಿಲ್ಲ. ಇನ್ನೊಂದು ವಿಷಯವೇನೆಂದರೆ, ಈ ಲೋಕದಲ್ಲಿ ಒಳ್ಳೇ ವೃತ್ತಿಜೀವನದ ಬೆನ್ನುಹತ್ತಿರುವವರಲ್ಲಿ ಸ್ಪರ್ಧಾತ್ಮಕ ಮನೋಭಾವ, ಹಠಸಾಧನೆ, ಹೊಟ್ಟೆಕಿಚ್ಚು ಹುಟ್ಟಿಕೊಳ್ಳುತ್ತದೆ. ಒಳ್ಳೇ ಜೀವನವೃತ್ತಿ ಕೈಗೆಟುಕಿದರೂ ಅವರಲ್ಲಿ ಶೂನ್ಯಭಾವನೆ ಇರುತ್ತದೆ. ಇದು ಅವರು “ಗಾಳಿಯನ್ನು ಹಿಂದಟ್ಟಿದ ಹಾಗೆ” ಇದೆ ಎನ್ನುತ್ತದೆ ಬೈಬಲ್‌.—ಪ್ರಸಂ. 4:4.

13. (ಎ) ನಮ್ಮ ಉದ್ಯೋಗದ ಬಗ್ಗೆ ನಮಗೆ ಯಾವ ನೋಟ ಇರಬೇಕು? (ಬಿ) ಪೌಲನಿಗೆ ನಿಜವಾದ ಸಂತೋಷ ಹೇಗೆ ಸಿಕ್ಕಿತು?

13 ಹೊಟ್ಟೆಪಾಡಿಗಾಗಿ ನಾವು ದುಡಿಯಬೇಕು ನಿಜ. ನಮಗೆ ಇಷ್ಟವಾಗುವ ಒಂದು ಉದ್ಯೋಗ ಆರಿಸಿಕೊಳ್ಳುವುದರಲ್ಲೂ ತಪ್ಪೇನಿಲ್ಲ. ಆದರೆ ನಮ್ಮ ಉದ್ಯೋಗವೇ ನಮ್ಮ ಜೀವನದಲ್ಲಿ ಅತಿ ಮುಖ್ಯ ವಿಷಯ ಆಗಬಾರದು. ಯೇಸು ಹೇಳಿದ್ದು: “ಯಾವನೂ ಇಬ್ಬರು ಯಜಮಾನರಿಗೆ ಸೇವೆಮಾಡಲಾರನು; ಅವನು ಒಬ್ಬನನ್ನು ದ್ವೇಷಿಸಿ ಇನ್ನೊಬ್ಬನನ್ನು ಪ್ರೀತಿಸುವನು; ಅಥವಾ ಒಬ್ಬನಿಗೆ ಅಂಟಿಕೊಂಡು ಇನ್ನೊಬ್ಬನನ್ನು ಕಡೆಗಣಿಸುವನು. ನೀವು ದೇವರನ್ನೂ ಐಶ್ವರ್ಯವನ್ನೂ ಸೇವಿಸಲಾರಿರಿ.” (ಮತ್ತಾ. 6:24) ಯೆಹೋವನ ಸೇವೆಮಾಡುವುದು ಮತ್ತು ಇತರರಿಗೆ ಬೈಬಲಿನ ಬಗ್ಗೆ ಕಲಿಸುವುದು ನಮಗೆ ಎಲ್ಲಕ್ಕಿಂತ ಹೆಚ್ಚಿನ ಆನಂದ ತರುತ್ತದೆ. ಇದು ಅಪೊಸ್ತಲ ಪೌಲನ ಅನುಭವವೂ ಆಗಿತ್ತು. ಅವನು ಯುವಕನಾಗಿದ್ದಾಗ ತನ್ನ ವೃತ್ತಿಜೀವನದಲ್ಲಿ ಯಶಸ್ಸು ಗಳಿಸುವುದರ ಮೇಲೆಯೇ ಗಮನವಿಟ್ಟನು. ಆದರೆ ಅವನಿಗೆ ನಿಜವಾಗಲೂ ಸಂತೋಷ ಸಿಕ್ಕಿದ್ದು ಮುಂದೆ ಅಂದರೆ ಅವನು ಯಾರಿಗೆ ಸಾರಿದನೊ ಅವರೆಲ್ಲರ ಜೀವನವನ್ನು ದೇವರ ಮಾತು ಬದಲಾಯಿಸಿದ್ದನ್ನು ನೋಡಿದಾಗಲೇ. (1 ಥೆಸಲೊನೀಕ 2:13, 19, 20 ಓದಿ.) ಯೆಹೋವನ ಸೇವೆಮಾಡುವಾಗ ಮತ್ತು ಆತನ ಬಗ್ಗೆ ಬೇರೆಯವರಿಗೆ ಕಲಿಸುವಾಗ ಸಿಗುವಷ್ಟು ಸಂತೋಷ ಲೋಕದ ಬೇರಾವುದೇ ವೃತ್ತಿಯಿಂದ ಖಂಡಿತ ಸಿಗಲಾರದು!

ದೇವರ ಬಗ್ಗೆ ಕಲಿಯಲು ಜನರಿಗೆ ಸಹಾಯಮಾಡುವಾಗ ನಮಗೆ ಸಂತೋಷ ಸಿಗುತ್ತದೆ (ಪ್ಯಾರ 12, 13 ನೋಡಿ)

ಲೋಕದ ಸಮಸ್ಯೆಗಳನ್ನು ನಾವು ಬಗೆಹರಿಸಲಿಕ್ಕಾಗುತ್ತದಾ?

14. ಮಾನವರು ತಮ್ಮ ಸಮಸ್ಯೆಗಳನ್ನು ಬಗೆಹರಿಸಬಲ್ಲರೆಂಬ ವಿಚಾರ ಯಾಕೆ ಜನರಿಗೆ ಇಷ್ಟವಾಗುತ್ತದೆ?

14 “ಮಾನವರು ತಮ್ಮ ಸಮಸ್ಯೆಗಳನ್ನು ತಾವೇ ಬಗೆಹರಿಸಬಲ್ಲರು.” ತುಂಬ ಜನರಿಗೆ ಈ ವಿಚಾರ ಇಷ್ಟವಾಗುತ್ತದೆ. ಯಾಕೆ? ಯಾಕೆಂದರೆ ಇದು ನಿಜವಾಗಿದ್ದರೆ, ಮನುಷ್ಯರಿಗೆ ದೇವರ ಮಾರ್ಗದರ್ಶನ ಬೇಕಾಗಿಲ್ಲ, ಅವರು ತಮಗೆ ಇಷ್ಟಬಂದ ಹಾಗೆ ನಡೆದುಕೊಳ್ಳಬಹುದು ಎಂದರ್ಥ. ಯುದ್ಧ, ಅಪರಾಧ, ರೋಗ, ಬಡತನ ಇದೆಲ್ಲ ಕಡಿಮೆಯಾಗುತ್ತಾ ಇದೆಯೆಂದು ಜನರು ಹೇಳುವುದನ್ನು ನೀವು ಕೇಳಿಸಿಕೊಂಡಿರಬಹುದು. ಉದಾಹರಣೆಗೆ, ಒಂದು ವರದಿ ಹೀಗಂದಿತು: “ಮಾನವರು ಈ ಲೋಕವನ್ನು ಉತ್ತಮಗೊಳಿಸಲು ನಿರ್ಧಾರ ಮಾಡಿರುವುದರಿಂದ ಇಂದು ಎಲ್ಲ ಮಾನವರಿಗೆ ಒಳಿತಾಗುತ್ತಾ ಇದೆ.” ಇದು ನಿಜನಾ? ಲೋಕದ ಸಮಸ್ಯೆಗಳನ್ನು ಬಗೆಹರಿಸುವುದು ಹೇಗೆಂದು ಮಾನವರು ಕೊನೆಗೂ ಕಂಡುಹಿಡಿದಿದ್ದಾರಾ? ನಿಜಾಂಶಗಳೇನೆಂದು ನೋಡೋಣ.

15. ಲೋಕದಲ್ಲಿ ಸಮಸ್ಯೆಗಳು ಹೆಚ್ಚಾಗಿವೆಯೆಂದು ಯಾಕೆ ಹೇಳಬಹುದು?

15 ಯುದ್ಧದ ಸಮಸ್ಯೆಯನ್ನು ಮಾನವರು ತೆಗೆದುಹಾಕಿದ್ದಾರಾ? ಒಂದನೇ ಮತ್ತು ಎರಡನೇ ವಿಶ್ವ ಯುದ್ಧಗಳಲ್ಲಿ 6 ಕೋಟಿಗಿಂತಲೂ ಹೆಚ್ಚು ಜನರು ಸತ್ತುಹೋದರು. 2015​ರಲ್ಲಿ ಮಾತ್ರ, 1 ಕೋಟಿ 24 ಲಕ್ಷ ಜನರು ಯುದ್ಧ ಇಲ್ಲವೆ ಹಿಂಸೆಯ ಕಾರಣ ತಮ್ಮ ಮನೆಗಳನ್ನು ಬಿಟ್ಟು ಓಡಿಹೋಗಬೇಕಾಯಿತು. ಇದರಿಂದಾಗಿ ಈಗ ನಿರಾಶ್ರಿತ ಜನರ ಒಟ್ಟು ಸಂಖ್ಯೆ 6.5 ಕೋಟಿ ಮುಟ್ಟಿದೆ. ಅಪರಾಧದ ಬಗ್ಗೆ ಏನು ಹೇಳಬಹುದು? ಕೆಲವೊಂದು ಸ್ಥಳಗಳಲ್ಲಿ ಕೆಲವು ವಿಧದ ಅಪರಾಧಗಳು ಕಡಿಮೆಯಾಗಿವೆ. ಆದರೆ ಅದೇ ಸಮಯದಲ್ಲಿ ಬೇರೆ ವಿಧಗಳ ಅಪರಾಧಗಳು, ಉದಾಹರಣೆಗೆ ಸೈಬರ್‌ ಅಪರಾಧ, ಗೃಹ ಹಿಂಸೆ, ಭಯೋತ್ಪಾದನೆ, ಭ್ರಷ್ಟಾಚಾರ ಇವೆಲ್ಲ ಹೆಚ್ಚುತ್ತಲೇ ಇವೆ. ರೋಗಗಳು ಕಡಿಮೆಯಾಗಿವೆಯಾ? ಕೆಲವೊಂದು ರೋಗಗಳಿಗೆ ಪರಿಹಾರ ಕಂಡುಹಿಡಿದಿದ್ದಾರೆ ನಿಜ. ಆದರೆ 2013​ರಲ್ಲಿನ ಒಂದು ವರದಿ ಪ್ರಕಾರ, ಪ್ರತಿ ವರ್ಷ 60ಕ್ಕಿಂತ ಕಡಿಮೆ ವಯಸ್ಸಿನ 90 ಲಕ್ಷ ಮಂದಿ ಹೃದಯದ ಕಾಯಿಲೆ, ಲಕ್ವ, ಕ್ಯಾನ್ಸರ್‌, ಉಸಿರಾಟಕ್ಕೆ ಸಂಬಂಧಿಸಿದ ಕಾಯಿಲೆಗಳು, ಮಧುಮೇಹದಿಂದ ಸಾಯುತ್ತಾರೆ. ಬಡತನದ ವಿಷಯದಲ್ಲೇನು? ಆಫ್ರಿಕ ಒಂದರಲ್ಲೇ 1990​ರಲ್ಲಿ 28 ಕೋಟಿ ಜನರು ಕಡು ಬಡತನದಿಂದ ಬಳಲುತ್ತಿದ್ದರು. ಇವರ ಸಂಖ್ಯೆ 2012​ರಲ್ಲಿ 33 ಕೋಟಿಗೆ ಏರಿತು ಎಂದು ವಿಶ್ವ ಬ್ಯಾಂಕ್‌ ವರದಿಸುತ್ತದೆ.

16. (ಎ) ದೇವರ ರಾಜ್ಯ ಮಾತ್ರ ಲೋಕದ ಸಮಸ್ಯೆಗಳನ್ನು ಬಗೆಹರಿಸಬಲ್ಲದೆಂದು ಯಾಕೆ ಹೇಳಬಹುದು? (ಬಿ) ಯೆಶಾಯ ಮತ್ತು ಕೀರ್ತನೆಗಾರನು ದೇವರ ರಾಜ್ಯ ಏನು ಮಾಡಲಿದೆಯೆಂದು ತಿಳಿಸಿದರು?

16 ಈ ನಿಜಾಂಶಗಳಿಂದ ನಮಗೆ ಆಶ್ಚರ್ಯವಾಗುವುದಿಲ್ಲ. ಇಂದು, ಆರ್ಥಿಕ ಹಾಗೂ ರಾಜಕೀಯ ಸಂಘಟನೆಗಳನ್ನು ಸ್ವಾರ್ಥ ಜನರು ನಿಯಂತ್ರಿಸುತ್ತಿದ್ದಾರೆ. ಇವರು ಯುದ್ಧ, ಅಪರಾಧ, ರೋಗ, ಬಡತನಕ್ಕೆ ಅಂತ್ಯ ತರಲು ಸಾಧ್ಯವಿಲ್ಲ. ದೇವರ ರಾಜ್ಯ ಮಾತ್ರ ಅದನ್ನು ಮಾಡಬಲ್ಲದು. ಯೆಹೋವನು ಮಾನವಕುಲಕ್ಕಾಗಿ ಏನೆಲ್ಲ ಮಾಡಲಿದ್ದಾನೆಂದು ಯೋಚಿಸಿ. ಆತನ ರಾಜ್ಯವು ಯುದ್ಧದ ಕಾರಣಗಳನ್ನು ತೆಗೆದುಹಾಕಲಿದೆ. ಅಂದರೆ ಸ್ವಾರ್ಥ, ಭ್ರಷ್ಟಾಚಾರ, ದೇಶಭಕ್ತಿ, ಸುಳ್ಳು ಧರ್ಮ ಮತ್ತು ಸೈತಾನನನ್ನೇ ತೆಗೆದುಹಾಕಲಿದೆ. (ಕೀರ್ತ. 46:8, 9) ದೇವರ ರಾಜ್ಯ ಅಪರಾಧವನ್ನು ಕೊನೆಗಾಣಿಸಲಿದೆ. ಈಗಾಗಲೇ ಈ ರಾಜ್ಯವು ಲಕ್ಷಾಂತರ ಜನರಿಗೆ ಒಬ್ಬರನ್ನೊಬ್ಬರು ಪ್ರೀತಿಸಲು, ನಂಬಲು ಕಲಿಸುತ್ತಿದೆ. ಬೇರಾವುದೇ ಸರ್ಕಾರ ಇದನ್ನು ಮಾಡಲಾರದು. (ಯೆಶಾ. 11:9) ಯೆಹೋವನು ರೋಗಗಳನ್ನು ಅಂತ್ಯಗೊಳಿಸುವನು ಮತ್ತು ಎಲ್ಲರೂ ಪರಿಪೂರ್ಣ ಆರೋಗ್ಯ ಪಡೆಯುವಂತೆ ಮಾಡುವನು. (ಯೆಶಾ. 35:5, 6) ಆತನು ಬಡತನವನ್ನು ನಿರ್ಮೂಲಮಾಡುವನು. ಎಲ್ಲರಿಗೂ ಸಂತೋಷದ ಬದುಕು ಸಿಗಲು ಮತ್ತು ಆತನ ಜೊತೆ ಆಪ್ತ ಸಂಬಂಧ ಇಡಲು ಸಹಾಯಮಾಡುವನು. ದೊಡ್ಡ ಮೊತ್ತದ ಹಣಕ್ಕಿಂತ ಇದಕ್ಕಿರುವ ಮೌಲ್ಯ ಹೆಚ್ಚು.—ಕೀರ್ತ. 72:12, 13.

‘ಹೇಗೆ ಉತ್ತರಕೊಡಬೇಕೆಂದು ತಿಳಿದುಕೊಳ್ಳಿರಿ’

17. ನೀವು ಲೋಕದ ಯೋಚನಾ ರೀತಿಯನ್ನು ಹೇಗೆ ತಿರಸ್ಕರಿಸಬಹುದು?

17 ನಿಮ್ಮ ನಂಬಿಕೆಗೆ ವಿರುದ್ಧವಾಗಿರುವಂಥ ಆದರೆ ಲೋಕದಲ್ಲಿ ತುಂಬ ಜನಪ್ರಿಯವಾಗಿರುವ ಒಂದು ವಿಚಾರ ನಿಮ್ಮ ಕಿವಿಗೆ ಬಿದ್ದರೆ, ಬೈಬಲ್‌ ಆ ವಿಷಯದ ಬಗ್ಗೆ ಏನು ಹೇಳುತ್ತದೆಂದು ಮೊದಲು ತಿಳಿದುಕೊಳ್ಳಿ. ಅದರ ಬಗ್ಗೆ ಒಬ್ಬ ಪ್ರೌಢ ಸಹೋದರ ಅಥವಾ ಸಹೋದರಿ ಜೊತೆ ಚರ್ಚಿಸಿ. ಜನರಿಗೆ ಆ ವಿಚಾರ ಯಾಕೆ ಇಷ್ಟವಾಗುತ್ತದೆ, ಅದು ಯಾಕೆ ತಪ್ಪಾಗಿದೆ, ನೀವು ಅದನ್ನು ಹೇಗೆ ತಿರಸ್ಕರಿಸಬಹುದೆಂದು ಯೋಚಿಸಿ. ಲೋಕದ ಯೋಚನಾ ರೀತಿಯಿಂದ ನಮ್ಮನ್ನೇ ರಕ್ಷಿಸಿಕೊಳ್ಳಲಿಕ್ಕಾಗಿ ನಾವು ಪೌಲನು ಹೇಳಿದ ಈ ಮಾತನ್ನು ಪಾಲಿಸಬೇಕು: ‘ಹೊರಗಿನವರೊಂದಿಗೆ ವಿವೇಕದಿಂದ ನಡೆದುಕೊಳ್ಳುತ್ತಾ ಇರಿ. ಪ್ರತಿಯೊಬ್ಬರಿಗೆ ನೀವು ಹೇಗೆ ಉತ್ತರಕೊಡಬೇಕು ಎಂದು ತಿಳಿದುಕೊಳ್ಳಿರಿ.’—ಕೊಲೊ. 4:5, 6.

^ ಪ್ಯಾರ. 9 ಯೋಹಾನ 7:52–8:11​ರ ವರೆಗಿನ ವಚನಗಳು ಮೂಲತಃ ಬೈಬಲಿನ ಭಾಗವಾಗಿರಲಿಲ್ಲ. ಆದ್ದರಿಂದಲೇ ಇದನ್ನು ನೂತನ ಲೋಕ ಭಾಷಾಂತರದ ಪರಿಷ್ಕೃತ ಆವೃತ್ತಿಯಲ್ಲಿ ಸೇರಿಸಲಾಗಿಲ್ಲ. ಆದರೆ ಬೇರೆ ಕೆಲವೊಂದು ಬೈಬಲ್‌ ಭಾಷಾಂತರಗಳು ಈ ವಚನಗಳನ್ನು ಸೇರಿಸಿವೆ. ಇವುಗಳನ್ನು ಓದಿ ಕೆಲವರು ಒಂದು ತಪ್ಪು ತೀರ್ಮಾನಕ್ಕೆ ಬಂದಿದ್ದಾರೆ. ಅದೇನೆಂದರೆ, ವ್ಯಭಿಚಾರ ಮಾಡಿರುವ ವ್ಯಕ್ತಿ ಅಪರಾಧಿಯೆಂದು ಪಾಪವಿಲ್ಲದ ವ್ಯಕ್ತಿ ಮಾತ್ರ ತೀರ್ಪುಕೊಡಬಹುದು. ಆದರೆ ದೇವರು ಇಸ್ರಾಯೇಲ್ಯರಿಗೆ ಈ ನಿಯಮವನ್ನು ಕೊಟ್ಟಿದ್ದನು: “ಯಾವನಾದರೂ ಪರನ ಹೆಂಡತಿಯೊಡನೆ ವ್ಯಭಿಚಾರಮಾಡಿದ್ದು ಹೊರಬಿದ್ದರೆ ಆ ಸ್ತ್ರೀಪುರುಷರಿಬ್ಬರಿಗೂ ಮರಣಶಿಕ್ಷೆಯಾಗಬೇಕು.”—ಧರ್ಮೋ. 22:22.