ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸ್ವರವೆತ್ತಿ ಸಂತೋಷದಿಂದ ಹಾಡಿರಿ!

ಸ್ವರವೆತ್ತಿ ಸಂತೋಷದಿಂದ ಹಾಡಿರಿ!

‘ನಮ್ಮ ದೇವರನ್ನು ಸ್ತುತಿಸುವುದು ಒಳ್ಳೇದು.’—ಕೀರ್ತ. 147:1.

ಗೀತೆಗಳು: 9, 138

1. ಗೀತೆಗಳನ್ನು ಹಾಡುವುದರಿಂದ ನಮಗೇನು ಮಾಡಲು ಸಾಧ್ಯವಾಗುತ್ತದೆ?

ಒಬ್ಬ ಪ್ರಸಿದ್ಧ ಗೀತೆರಚಕನು ಒಮ್ಮೆ ಹೀಗಂದನು: “ಪದಗಳು ನಮ್ಮನ್ನು ಯೋಚಿಸುವಂತೆ ಮಾಡುತ್ತವೆ. ಸಂಗೀತ ನಮ್ಮಲ್ಲಿ ಭಾವನೆಗಳನ್ನು ಮೂಡಿಸುತ್ತದೆ. ಆದರೆ ಗೀತೆಯನ್ನು ಹಾಡುವಾಗ ಯೋಚನೆಗಳ ಜೊತೆಗೆ ಭಾವನೆಗಳೂ ಸೇರಿ ಹೃದಯ ಸ್ಪರ್ಶಿಸುತ್ತದೆ.” ನಮ್ಮ ಗೀತೆಗಳ ಮೂಲಕ ಸ್ವರ್ಗದಲ್ಲಿರುವ ನಮ್ಮ ತಂದೆಯಾದ ಯೆಹೋವನನ್ನು ಸ್ತುತಿಸಲು ಹಾಗೂ ಆತನ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಲು ಸಾಧ್ಯವಾಗುತ್ತದೆ. ಈ ಗೀತೆಗಳನ್ನು ಹಾಡುವಾಗ ನಾವಾತನಿಗೆ ತುಂಬ ಆಪ್ತರಾಗಿದ್ದೇವೆ ಎಂದನಿಸುತ್ತದೆ. ಈ ಕಾರಣಕ್ಕೇ ಇವನ್ನು ಹಾಡುವುದಕ್ಕೆ ಸತ್ಯಾರಾಧನೆಯಲ್ಲಿ ತುಂಬ ಮುಖ್ಯವಾದ ಪಾತ್ರವಿದೆ. ನಾವು ಒಬ್ಬರೇ ಹಾಡಲಿ ಅಥವಾ ನಮ್ಮ ಸಹೋದರ ಸಹೋದರಿಯರ ಜೊತೆ ಹಾಡಲಿ ಈ ಮಾತು ನಿಜ.

2, 3. (ಎ) ಸಭೆಯಲ್ಲಿ ಗಟ್ಟಿಯಾಗಿ ಹಾಡುವುದರ ಬಗ್ಗೆ ಕೆಲವರಿಗೆ ಹೇಗನಿಸುತ್ತದೆ? (ಬಿ) ಈ ಲೇಖನದಲ್ಲಿ ಯಾವ ಪ್ರಶ್ನೆಗಳನ್ನು ಚರ್ಚಿಸಲಿದ್ದೇವೆ?

2 ಆದರೆ ಸಭೆಯಲ್ಲಿ ಗಟ್ಟಿಯಾಗಿ ಹಾಡುವುದರ ಬಗ್ಗೆ ನಿಮಗೆ ಹೇಗನಿಸುತ್ತದೆ? ಮುಜುಗರ ಆಗುತ್ತದಾ? ಕೆಲವೊಂದು ಸಂಸ್ಕೃತಿಗಳಲ್ಲಿ ಗಂಡಸರಿಗೆ ಬೇರೆಯವರ ಮುಂದೆ ಹಾಡಲು ತುಂಬ ಕಸಿವಿಸಿ ಆಗುತ್ತದೆ. ಈ ಮನೋಭಾವ ಸಭೆಯ ಮೇಲೂ ಕೆಟ್ಟ ಪರಿಣಾಮ ಬೀರಬಹುದು. ಮುಖ್ಯವಾಗಿ ಹಿರಿಯರು ಹಾಡಲು ಹಿಂಜರಿದರೆ ಅಥವಾ ಗೀತೆ ಹಾಡುವ ಸಮಯದಲ್ಲಿ ಬೇರೆ ಕೆಲಸದಲ್ಲಿ ಮಗ್ನರಾದರೆ ಹೀಗಾಗಬಹುದು.—ಕೀರ್ತ. 30:12.

3 ಗೀತೆಗಳನ್ನು ಹಾಡುವುದು ನಾವು ಯೆಹೋವನಿಗೆ ಸಲ್ಲಿಸುವ ಆರಾಧನೆಯ ಭಾಗವಾಗಿದೆ. ಹಾಗಾಗಿ ಕೂಟದ ಭಾಗವಾಗಿರುವ ಗೀತೆಯ ಸಮಯದಲ್ಲಿ ನಾವು ಹೊರಗೆ ಹೋಗಬಾರದು ಅಥವಾ ಈ ಭಾಗವನ್ನು ತಪ್ಪಿಸಬಾರದು. ನಾವೆಲ್ಲರೂ ನಮ್ಮನ್ನೇ ಹೀಗೆ ಕೇಳಿಕೊಳ್ಳಬೇಕು: ‘ಕೂಟಗಳಲ್ಲಿ ಗೀತೆ ಹಾಡುವುದರ ಬಗ್ಗೆ ನನಗೆ ಹೇಗನಿಸುತ್ತದೆ? ಬೇರೆಯವರ ಮುಂದೆ ಹಾಡಲು ನನಗೆ ಹಿಂಜರಿಕೆ ಇದ್ದರೆ ಏನು ಮಾಡಬೇಕು? ಗೀತೆಗಳನ್ನು ನಾನು ಹೇಗೆ ಭಾವಪೂರ್ಣವಾಗಿ ಹಾಡಬಲ್ಲೆ?’

ಗೀತೆ ಹಾಡುವುದು ಸತ್ಯಾರಾಧನೆಯ ಮುಖ್ಯ ಭಾಗ

4, 5. ಪುರಾತನ ಇಸ್ರಾಯೇಲಿನ ಆಲಯದಲ್ಲಿ ಗೀತೆಗಳನ್ನು ಹಾಡುವುದಕ್ಕೆ ಯಾವ ಏರ್ಪಾಡುಗಳನ್ನು ಮಾಡಲಾಗಿತ್ತು?

4 ಇತಿಹಾಸದಾದ್ಯಂತ ಯೆಹೋವನ ಆರಾಧಕರು ಸಂಗೀತವನ್ನು ಬಳಸಿ ಆತನನ್ನು ಸ್ತುತಿಸಿದ್ದಾರೆ. ಆಸಕ್ತಿಕರ ವಿಷಯವೇನೆಂದರೆ ಇಸ್ರಾಯೇಲ್ಯರು ಯೆಹೋವನಿಗೆ ನಂಬಿಗಸ್ತರಾಗಿದ್ದ ಸಮಯದಲ್ಲಿ ಗೀತೆ ಹಾಡುವುದು ಆರಾಧನೆಯ ಮುಖ್ಯ ಭಾಗವಾಗಿತ್ತು. ಉದಾಹರಣೆಗೆ, ದಾವೀದನು ಆಲಯಕ್ಕಾಗಿ ಮಾಡಿದ ಸಿದ್ಧತೆಯಲ್ಲಿ, ವಾದ್ಯಗಳಿಂದ ಯೆಹೋವನನ್ನು ಸ್ತುತಿಸುವುದಕ್ಕಾಗಿ 4,000 ಲೇವಿಯರನ್ನು ಏರ್ಪಾಡು ಮಾಡಿದನು. ಆ ಲೇವಿಯರಲ್ಲಿ 288 ಮಂದಿ ‘ಯೆಹೋವನ ಕೀರ್ತನೆಗಳನ್ನು ಕಲಿತವರು, ಗಾಯನಪ್ರವೀಣರು’ ಆಗಿದ್ದರು.—1 ಪೂರ್ವ. 23:5; 25:7.

5 ಸಂಗೀತ ಮತ್ತು ಗಾಯನಕ್ಕೆ ದೇವಾಲಯದ ಸಮರ್ಪಣೆಯ ಸಮಯದಲ್ಲೂ ಮುಖ್ಯ ಪಾತ್ರವಿತ್ತು. ಬೈಬಲ್‌ ಹೀಗನ್ನುತ್ತದೆ: ‘ಒಬ್ಬನೋ ಎಂಬಂತೆ ಸ್ವರವೆತ್ತಿ ಯೆಹೋವನನ್ನು ಕೀರ್ತಿಸುವದಕ್ಕಾಗಿ ತುತೂರಿ ಊದುವವರೂ ಗಾಯನಮಾಡುವವರೂ ಅಲ್ಲಿ ನಿಂತಿದ್ದರು. ತುತೂರಿ ತಾಳ ಮೊದಲಾದ ವಾದ್ಯಗಳ ಧ್ವನಿಯೂ ಕೃತಜ್ಞತಾಸ್ತುತಿಮಾಡುವವರ ಸ್ವರವೂ ಕೇಳಿಸಿದೊಡನೆ ಯೆಹೋವನ ತೇಜಸ್ಸು ದೇವಾಲಯದಲ್ಲಿ ತುಂಬಿಕೊಂಡಿತು.’ ಈ ಸಂದರ್ಭವು ಇಸ್ರಾಯೇಲ್ಯರ ನಂಬಿಕೆಯನ್ನು ಎಷ್ಟು ಬಲಪಡಿಸಿರಬೇಕೆಂದು ಸ್ವಲ್ಪ ಊಹಿಸಿ!—2 ಪೂರ್ವ. 5:13, 14; 7:6.

6. ನೆಹೆಮೀಯನು ಯೆರೂಸಲೇಮಿನ ದೇಶಾಧಿಪತಿಯಾಗಿದ್ದಾಗ ಸಂಗೀತ ಮತ್ತು ಹಾಡುವಿಕೆಗೆ ಯಾವ ಏರ್ಪಾಡುಗಳನ್ನು ಮಾಡಿದನು?

6 ಯೆರೂಸಲೇಮಿನ ಗೋಡೆಗಳನ್ನು ಪುನಃ ಕಟ್ಟಲು ಇಸ್ರಾಯೇಲ್ಯರನ್ನು ಸಂಘಟಿಸಿದ ನೆಹೆಮೀಯನು ಆ ಗೋಡೆಗಳ ಪ್ರತಿಷ್ಠೆಯ ಸಮಯದಲ್ಲಿ ಸಂಗೀತ ಹಾಗೂ ಗಾಯನಕ್ಕೆ ಏರ್ಪಾಡುಗಳನ್ನು ಮಾಡಿದನು. ಈ ಸಂದರ್ಭದಲ್ಲಿ ಲೇವಿಯರು ಗೀತೆಗಳನ್ನು ಹಾಡಿ ವಾದ್ಯಗಳನ್ನು ನುಡಿಸಿದ್ದು ಎಲ್ಲರ ಸಂತೋಷವನ್ನು ಹೆಚ್ಚಿಸಿತು. ನೆಹೆಮೀಯನು ಸ್ತುತಿ ಹಾಡುವ “ಎರಡು ದೊಡ್ಡ ಗುಂಪು”ಗಳನ್ನು ಏರ್ಪಡಿಸಿದ್ದನು. ಈ ಎರಡು ಗುಂಪುಗಳು ನಗರದ ಗೋಡೆಗಳ ಮೇಲೆ ವಿರುದ್ಧ ದಿಕ್ಕುಗಳಲ್ಲಿ ನಡೆಯುತ್ತಾ ಆಲಯಕ್ಕೆ ತುಂಬ ಹತ್ತಿರವಿದ್ದ ಗೋಡೆಯ ಭಾಗದಲ್ಲಿ ಬಂದು ಸೇರಿದವು. ಅವರ ಧ್ವನಿ ಎಷ್ಟು ಗಟ್ಟಿಯಾಗಿತ್ತೆಂದರೆ ದೂರದೂರದಲ್ಲಿದ್ದ ಜನರು ಸಹ ಅದನ್ನು ಕೇಳಿಸಿಕೊಂಡರು. (ನೆಹೆ. 12:27, 28, 31, 38, 40, 43) ತನ್ನ ಆರಾಧಕರು ತನಗೆ ಸ್ತುತಿಗೀತೆಗಳನ್ನು ಉತ್ಸಾಹದಿಂದ ಹಾಡುವುದನ್ನು ಕೇಳಿ ಯೆಹೋವನಿಗೆ ಸಂತೋಷ ಆಗಿರಬೇಕೆಂದು ನಮಗೆ ನಿಶ್ಚಯವಿದೆ.

7. ಗೀತೆಗಳನ್ನು ಹಾಡುವುದು ಕ್ರೈಸ್ತರಿಗೆ ಆರಾಧನೆಯ ಮುಖ್ಯ ಭಾಗವಾಗಿರಬೇಕೆಂದು ಯೇಸು ಹೇಗೆ ತೋರಿಸಿದನು?

7 ಕ್ರೈಸ್ತ ಸಭೆ ಸ್ಥಾಪನೆಯಾದ ಮೇಲೂ ಸಂಗೀತ ಸತ್ಯಾರಾಧನೆಯ ಮುಖ್ಯ ಭಾಗವಾಗಿ ಮುಂದುವರಿಯಿತು. ಮಾನವ ಇತಿಹಾಸದಲ್ಲೇ ಅತಿ ಮುಖ್ಯವಾದ ತಾರೀಕಿನಂದು ಏನಾಯಿತೆಂದು ಯೋಚಿಸಿ. ಯೇಸು ತನ್ನ ಶಿಷ್ಯರೊಟ್ಟಿಗೆ ಕರ್ತನ ಸಂಧ್ಯಾ ಭೋಜನ ನಡೆಸಿದ ನಂತರ ಅವರೆಲ್ಲರೂ ಯೆಹೋವನಿಗೆ ಸ್ತುತಿಗೀತೆಗಳನ್ನು ಹಾಡಿದರು.ಮತ್ತಾಯ 26:30 ಓದಿ.

8. ಗೀತೆಗಳ ಮೂಲಕ ದೇವರನ್ನು ಸ್ತುತಿಸುವ ವಿಷಯದಲ್ಲಿ ಆರಂಭದ ಕ್ರೈಸ್ತರು ಯಾವ ಮಾದರಿ ಇಟ್ಟರು?

8 ಗೀತೆಗಳ ಮೂಲಕ ದೇವರನ್ನು ಸ್ತುತಿಸುವ ವಿಷಯದಲ್ಲಿ ಒಂದನೇ ಶತಮಾನದ ಕ್ರೈಸ್ತರು ಒಳ್ಳೇ ಮಾದರಿ ಆಗಿದ್ದಾರೆ. ಇಸ್ರಾಯೇಲ್ಯರು ದೇವಾಲಯಕ್ಕೆ ಹೋಗಿ ಆರಾಧಿಸುತ್ತಿದ್ದರು, ಆದರೆ ಕ್ರೈಸ್ತರು ಖಾಸಗಿ ಮನೆಗಳಲ್ಲಿ ಸೇರಿಬರುತ್ತಿದ್ದರು. ಈ ಮನೆಗಳು ಆಲಯದಷ್ಟು ಸೊಗಸಾಗಿರಲಿಲ್ಲ, ದೊಡ್ಡದಾಗಿರಲಿಲ್ಲ. ಹಾಗಿದ್ದರೂ ಆ ಕ್ರೈಸ್ತರು ಗೀತೆಗಳನ್ನು ತುಂಬ ಉತ್ಸಾಹದಿಂದ ಹಾಡಿದರು. ಅಪೊಸ್ತಲ ಪೌಲನು ತನ್ನ ಕ್ರೈಸ್ತ ಸಹೋದರರಿಗೆ ಹೀಗಂದನು: “ಕೀರ್ತನೆಗಳಿಂದಲೂ ದೇವರ ಸ್ತುತಿಗೀತೆಗಳಿಂದಲೂ” ಕೃತಜ್ಞತಾಭಾವದಿಂದ ಹಾಡಿದ “ಆಧ್ಯಾತ್ಮಿಕ ಹಾಡುಗಳಿಂದಲೂ ಒಬ್ಬರಿಗೊಬ್ಬರು ಬೋಧಿಸುತ್ತಾ ಬುದ್ಧಿಹೇಳುತ್ತಾ ನಿಮ್ಮ ಹೃದಯಗಳಲ್ಲಿ ಯೆಹೋವನಿಗೆ ಗಾನಮಾಡಿರಿ.” (ಕೊಲೊ. 3:16) ನಮ್ಮ ಗೀತೆ ಪುಸ್ತಕದಲ್ಲಿರುವ ಗೀತೆಗಳನ್ನು ಖಂಡಿತವಾಗಿಯೂ ಕೃತಜ್ಞತಾಭಾವದಿಂದ ಹಾಡಬೇಕು. ಅವು ‘ನಂಬಿಗಸ್ತ, ವಿವೇಚನೆಯುಳ್ಳ ಆಳು ತಕ್ಕ ಸಮಯಕ್ಕೆ ಕೊಡುವ ಆಹಾರದ’ ಭಾಗವಾಗಿವೆ.—ಮತ್ತಾ. 24:45.

ಹಿಂಜರಿಕೆಯಿಲ್ಲದೆ ಆತ್ಮವಿಶ್ವಾಸದಿಂದ ಹಾಡುವುದು ಹೇಗೆ?

9. (ಎ) ಕೆಲವರು ಕೂಟಗಳಲ್ಲಿ, ಸಮ್ಮೇಳನಗಳಲ್ಲಿ ಸಂತೋಷದಿಂದ ಗಟ್ಟಿಯಾಗಿ ಹಾಡಲು ಯಾಕೆ ಹಿಂಜರಿಯುತ್ತಿರಬಹುದು? (ಬಿ) ನಾವು ಯೆಹೋವನಿಗೆ ಸ್ತುತಿಗೀತೆಗಳನ್ನು ಹೇಗೆ ಹಾಡಬೇಕು? (ಸಿ) ಗೀತೆಗಳನ್ನು ಹಾಡುವುದರಲ್ಲಿ ಯಾರು ಮುಂದಾಳತ್ವ ವಹಿಸಬೇಕು? (ಲೇಖನದ ಆರಂಭದ ಚಿತ್ರ ನೋಡಿ.)

9 ನೀವು ಹಾಡಲು ಹಿಂಜರಿಯುವುದಕ್ಕೆ ಕೆಲವು ಕಾರಣಗಳು ಏನಿರಬಹುದು? ಬಹುಶಃ ನಿಮ್ಮ ಕುಟುಂಬದಲ್ಲಿ ಅಥವಾ ಸಂಸ್ಕೃತಿಯಲ್ಲಿ ಹಾಡುವ ರೂಢಿಯೇ ಇರಲಿಕ್ಕಿಲ್ಲ. ಅಥವಾ ರೇಡಿಯೊ, ಟಿವಿಯಲ್ಲಿ ಮಧುರವಾಗಿ ಹಾಡುವ ವೃತ್ತಿಪರ ಗಾಯಕರಿಗೆ ಹೋಲಿಸಿಕೊಂಡು ನಿಮ್ಮ ಸ್ವರದ ಬಗ್ಗೆ ನಿಮಗೇ ಮುಜುಗರ, ಬೇಜಾರು ಆಗುತ್ತಿರಬಹುದು. ಆದರೆ ನಮಗೆಲ್ಲರಿಗೂ ಯೆಹೋವನ ಸ್ತುತಿಗೀತೆಗಳನ್ನು ಹಾಡುವ ಜವಾಬ್ದಾರಿ ಇದೆಯಲ್ಲವಾ? ಹಾಗಾಗಿ ನಿಮ್ಮ ಗೀತೆ ಪುಸ್ತಕವನ್ನು ಮೇಲಕ್ಕೆತ್ತಿ ಹಿಡಿಯಿರಿ, ನಿಮ್ಮ ತಲೆ ಎತ್ತಿ ಉತ್ಸಾಹದಿಂದ ಹಾಡಿರಿ! (ಎಜ್ರ 3:11; ಕೀರ್ತನೆ 147:1 ಓದಿ.) ಈಗೀಗ ಅನೇಕ ರಾಜ್ಯ ಸಭಾಗೃಹಗಳಲ್ಲಿ ಪರದೆ ಮೇಲೆ ನಮ್ಮ ಗೀತೆಗಳ ಪದಗಳನ್ನು ತೋರಿಸಲಾಗುತ್ತದೆ. ಇದು ನಮಗೆ ಸ್ವರವೆತ್ತಿ ಹಾಡಲು ಸಹಾಯಮಾಡುತ್ತದೆ. ಸ್ವಾರಸ್ಯಕರ ಸಂಗತಿಯೇನಂದರೆ, ಹಿರಿಯರಿಗಾಗಿ ನಡೆಯುವ ರಾಜ್ಯ ಶುಶ್ರೂಷಾ ಶಾಲೆಯಲ್ಲಿ ಈಗ ರಾಜ್ಯ ಗೀತೆ ಹಾಡುವುದನ್ನೂ ಸೇರಿಸಲಾಗಿದೆ. ಇದು ಹಿರಿಯರು ಸಭಾ ಕೂಟಗಳಲ್ಲಿ ಹಾಡುವುದರಲ್ಲಿ ಮುಂದಾಳತ್ವ ವಹಿಸುವುದು ಎಷ್ಟು ಮುಖ್ಯವೆಂದು ತೋರಿಸಿಕೊಡುತ್ತದೆ.

10. ಗಟ್ಟಿಯಾದ ಸ್ವರದಲ್ಲಿ ಹಾಡಲು ನಾವು ಹೆದರುತ್ತಿರುವಲ್ಲಿ ಏನನ್ನು ಮನಸ್ಸಿನಲ್ಲಿಡಬೇಕು?

10 ಅನೇಕರಿಗೆ ಗಟ್ಟಿಯಾಗಿ ಹಾಡಲು ಹೆದರಿಕೆ ಆಗುತ್ತದೆ. ಯಾಕೆಂದರೆ ತಮ್ಮ ಸ್ವರ ಮಾತ್ರ ಬೇರೆಲ್ಲರಿಗಿಂತ ಗಟ್ಟಿಯಾಗಿ ಕೇಳಿಸುತ್ತದೆ ಅಥವಾ ತಮ್ಮ ಸ್ವರ ಅಷ್ಟು ಚೆನ್ನಾಗಿಲ್ಲ ಅಂತ ಅವರು ನೆನಸುತ್ತಾರೆ. ಆದರೆ ಇದರ ಬಗ್ಗೆ ಸ್ವಲ್ಪ ಯೋಚಿಸಿ. ನಾವು ಮಾತಾಡುವಾಗ “ಅನೇಕ ಬಾರಿ ಎಡವುತ್ತೇವೆ.” (ಯಾಕೋ. 3:2) ಆದರೂ ಮಾತಾಡುವುದನ್ನು ನಿಲ್ಲಿಸುವುದಿಲ್ಲ ಅಲ್ಲವಾ? ಹೀಗಿರುವಾಗ, ಪರಿಪೂರ್ಣವಾಗಿಲ್ಲದ ನಮ್ಮ ಸ್ವರಗಳು ಯೆಹೋವನಿಗೆ ಸ್ತುತಿಗೀತೆಗಳನ್ನು ಹಾಡುವುದರಿಂದ ಯಾಕೆ ನಮ್ಮನ್ನು ತಡೆಯಬೇಕು?

11, 12. ಇನ್ನೂ ಚೆನ್ನಾಗಿ ಹಾಡಲು ಏನು ಮಾಡಬಹುದು?

11 ಹಾಡುವುದು ಹೇಗೆ ಅಂತ ಗೊತ್ತಿಲ್ಲದೆ ಇರುವುದರಿಂದಲೂ ನಾವು ಹಾಡಲು ಹೆದರುತ್ತಿರಬಹುದು. ಹೀಗಿದ್ದರೂ ಚೆನ್ನಾಗಿ ಹಾಡಲು ನೀವು ಮಾಡಬಹುದಾದ ಕೆಲವು ಸರಳವಾದ ವಿಷಯಗಳನ್ನು ಮುಂದೆ ತಿಳಿಸಲಾಗಿದೆ. *

12 ಗಟ್ಟಿಯಾದ, ಬಲವಾದ ಸ್ವರದಿಂದ ಹಾಡಬೇಕಾದರೆ ಸರಿಯಾಗಿ ಉಸಿರಾಡಲು ಕಲಿಯಬೇಕು. ಒಂದು ಬಲ್ಬ್‌ ಉರಿಯಲು ವಿದ್ಯುತ್ತಿನಿಂದ ಶಕ್ತಿ ಸಿಗುವಂತೆಯೇ ನೀವು ಮಾತಾಡಲು ಅಥವಾ ಹಾಡಲು ನಿಮ್ಮ ಸ್ವರಕ್ಕೆ ಉಸಿರಿನಿಂದ ಬಲ ಸಿಗುತ್ತದೆ. ನೀವು ಎಷ್ಟು ಗಟ್ಟಿಯಾದ ಸ್ವರದಲ್ಲಿ ಮಾತಾಡುತ್ತೀರೊ ಅಷ್ಟೇ ಗಟ್ಟಿಯಾಗಿ ಅಥವಾ ಅದಕ್ಕಿಂತಲೂ ಗಟ್ಟಿಯಾಗಿ ಹಾಡಬೇಕು. * ಯೆಹೋವನ ಆರಾಧಕರು ಸ್ತುತಿಗೀತೆಗಳನ್ನು ಹಾಡುವಾಗ “ಉಲ್ಲಾಸ ಧ್ವನಿ” ಮಾಡಬೇಕು ಅಥವಾ ಸಂತೋಷದಿಂದ ಸ್ವರವೆತ್ತಿ ಹಾಡಬೇಕೆಂದು ಬೈಬಲ್‌ ಹೇಳುತ್ತದೆ.—ಕೀರ್ತ. 33:1-3.

13. ನಾವು ಹಿಂಜರಿಯದೇ ಆತ್ಮವಿಶ್ವಾಸದಿಂದ ಹೇಗೆ ಹಾಡಬಹುದೆಂದು ವಿವರಿಸಿ.

13 ಕುಟುಂಬ ಆರಾಧನೆಯ ಸಮಯದಲ್ಲಿ ಇಲ್ಲವೇ ನೀವು ಒಬ್ಬರೇ ಇರುವಾಗ ಈ ಮುಂದೆ ಹೇಳಿರುವಂತೆ ಮಾಡಲು ಪ್ರಯತ್ನಿಸಿ: ಗೀತೆ ಪುಸ್ತಕದಲ್ಲಿ ನಿಮ್ಮ ಅಚ್ಚುಮೆಚ್ಚಿನ ಒಂದು ಗೀತೆಯನ್ನು ಆರಿಸಿಕೊಳ್ಳಿ. ಗೀತೆಯ ಪದಗಳನ್ನು ಆತ್ಮವಿಶ್ವಾಸದಿಂದ ಕೂಡಿದ ಬಲವಾದ ಸ್ವರದಲ್ಲಿ ಜೋರಾಗಿ ಓದಿ. ನಂತರ ಅಷ್ಟೇ ಜೋರಾದ ಸ್ವರದಲ್ಲಿ ಗೀತೆಯ ಒಂದು ಸಾಲಿನ ಎಲ್ಲ ಪದಗಳನ್ನು ಒಂದೇ ಉಸಿರಿನಲ್ಲಿ ಹೇಳಿರಿ. ಆಮೇಲೆ, ಅದೇ ಬಲವಾದ ಸ್ವರದಲ್ಲಿ ಆ ಪದಗಳನ್ನು ಹಾಡಿರಿ. (ಯೆಶಾ. 24:14) ನೀವು ಹೀಗೆ ಹಾಡುವಾಗ ನಿಮ್ಮ ಸ್ವರ ಹೆಚ್ಚು ಬಲಗೊಳ್ಳುವುದು. ಇದು ಒಳ್ಳೇದೇ! ನಿಮ್ಮ ಸ್ವರದ ಬಗ್ಗೆ ಹೆದರಬೇಡಿ, ಮುಜುಗರಪಡಬೇಡಿ!

14. (ಎ) ಬಲವಾದ ಸ್ವರದಲ್ಲಿ ಹಾಡಬೇಕಾದರೆ ಏನು ಮಾಡಬೇಕು? (“ಇನ್ನೂ ಚೆನ್ನಾಗಿ ಹಾಡಲು ಹೀಗೆ ಮಾಡಿ” ಚೌಕ ನೋಡಿ.) (ಬಿ) ಸ್ವರದ ಸಮಸ್ಯೆಗಳನ್ನು ಜಯಿಸಲು ಯಾವ ಸಲಹೆಗಳು ನಿಮಗೆ ಸಹಾಯಮಾಡಿವೆ?

14 ನೀವು ಬಲವಾದ ಸ್ವರದಲ್ಲಿ ಹಾಡಬೇಕಾದರೆ, ನಿಮ್ಮ ಬಾಯನ್ನು ಸಾಕಷ್ಟು ದೊಡ್ಡದಾಗಿ ತೆರೆಯಬೇಕು. ಅದಕ್ಕಾಗಿ ನೀವು ಮಾತಾಡುವಾಗ ಬಾಯಿಯನ್ನು ಎಷ್ಟು ತೆರೆಯುತ್ತೀರೊ ಅದಕ್ಕಿಂತ ಹಾಡುವಾಗ ಹೆಚ್ಚು ದೊಡ್ಡದಾಗಿ ತೆರೆಯಬೇಕು. ಆದರೆ ನಿಮ್ಮ ಸ್ವರ ತುಂಬ ಕ್ಷೀಣವಾಗಿದ್ದರೆ ಅಥವಾ ನಿಮಗೆ ಕೀರಲು ಧ್ವನಿ ಇದ್ದರೆ ಏನು ಮಾಡಬಹುದು? ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ ಪುಸ್ತಕದ 184​ನೇ ಪುಟದಲ್ಲಿ “ನಿರ್ದಿಷ್ಟ ಸಮಸ್ಯೆಗಳನ್ನು ಹೋಗಲಾಡಿಸುವುದು” ಎಂಬ ಚೌಕದಲ್ಲಿ ಸಹಾಯಕಾರಿ ಸಲಹೆಗಳು ಇವೆ.

ಹೃದಯಾಳದಿಂದ ಹಾಡಿರಿ

15. (ಎ) 2016​ರ ವಾರ್ಷಿಕ ಕೂಟದಲ್ಲಿ ಯಾವ ಪ್ರಕಟಣೆಯನ್ನು ಮಾಡಲಾಯಿತು? (ಬಿ) ಗೀತೆ ಪುಸ್ತಕವನ್ನು ಪರಿಷ್ಕರಿಸಲಾದ ಕೆಲವು ಕಾರಣಗಳೇನು?

15 ಆಡಳಿತ ಮಂಡಲಿಯ ಸದಸ್ಯರಾದ ಸ್ಟೀಫನ್‌ ಲೆಟ್‌ 2016​ರ ವಾರ್ಷಿಕ ಕೂಟದಲ್ಲಿ ಮಾಡಿದ ಒಂದು ಪ್ರಕಟಣೆಯಿಂದ ಹಾಜರಾದವರೆಲ್ಲರಿಗೂ ತುಂಬ ಸಂತೋಷವಾಯಿತು. “ಸಿಂಗ್‌ ಔಟ್‌ ಜಾಯ್‌ಫುಲಿ” ಟು ಜೆಹೋವಾ (ಕನ್ನಡದಲ್ಲಿ ಈಗ ಲಭ್ಯವಿಲ್ಲ) ಎಂಬ ಶೀರ್ಷಿಕೆಯಿರುವ ಹೊಸ ಗೀತೆ ಪುಸ್ತಕವನ್ನು ಅವರು ಬಿಡುಗಡೆ ಮಾಡಿದರು. ಈ ಹೊಸ ಗೀತೆ ಪುಸ್ತಕವನ್ನು ಹೊರತರುವ ಕಾರಣಗಳನ್ನು ಸಹೋದರ ಲೆಟ್‌ ವಿವರಿಸಿದರು. ಒಂದು ಕಾರಣವೇನೆಂದರೆ, ಪವಿತ್ರ ಶಾಸ್ತ್ರಗಳ ನೂತನ ಲೋಕ ಭಾಷಾಂತರವನ್ನು 2013​ರಲ್ಲಿ ಇಂಗ್ಲಿಷ್‌ನಲ್ಲಿ ಪರಿಷ್ಕರಿಸಲಾಗಿತ್ತು. ಈ ಹೊಸ ಭಾಷಾಂತರದಲ್ಲಿ ಬದಲಾಗಿರುವ ಪದಗಳಿಗೆ ತಕ್ಕಂತೆ ಈ ಗೀತೆ ಪುಸ್ತಕದಲ್ಲಿನ ಗೀತೆಗಳ ಪದಗಳನ್ನು ಬದಲಾಯಿಸಲಾಗಿದೆ. ಸಾರುವ ಕೆಲಸ ಮತ್ತು ವಿಮೋಚನಾ ಮೌಲ್ಯದ ಕುರಿತ ಹೊಸ ಹಾಡುಗಳನ್ನೂ ಸೇರಿಸಲಾಗಿದೆ. ಅಷ್ಟುಮಾತ್ರವಲ್ಲ, ಗೀತೆ ಹಾಡುವುದು ನಮ್ಮ ಆರಾಧನೆಯ ಮುಖ್ಯ ಭಾಗ ಆಗಿರುವುದರಿಂದ ಗೀತೆ ಪುಸ್ತಕದ ಗುಣಮಟ್ಟವೂ ಉನ್ನತವಾಗಿರಬೇಕೆಂಬ ಉದ್ದೇಶ ಆಡಳಿತ ಮಂಡಲಿಗಿತ್ತು. ಈ ಕಾರಣಕ್ಕಾಗಿ ಹೊಸ ಗೀತೆ ಪುಸ್ತಕದ ಆವರಣ ಪುಟಗಳು ಪರಿಷ್ಕೃತ ನೂತನ ಲೋಕ ಭಾಷಾಂತರ ಬೈಬಲಿನಂತೆಯೇ ಇವೆ.

16, 17. ಗೀತೆ ಪುಸ್ತಕದಲ್ಲಿ ಬೇರೆ ಯಾವ ಬದಲಾವಣೆಗಳನ್ನು ಮಾಡಲಾಗಿದೆ?

16 ಗೀತೆ ಪುಸ್ತಕವನ್ನು ಬಳಸಲು ಹೆಚ್ಚು ಸುಲಭವಾಗುವಂತೆ ಗೀತೆಗಳನ್ನು ವಿಷಯಕ್ಕನುಸಾರ ವಿಭಾಗಿಸಲಾಗಿದೆ. ಉದಾಹರಣೆಗೆ, ಮೊದಲ 12 ಗೀತೆಗಳು ಯೆಹೋವನ ಬಗ್ಗೆ ಇವೆ. ಮುಂದಿನ 8 ಗೀತೆಗಳು ಯೇಸು ಮತ್ತು ವಿಮೋಚನಾ ಮೌಲ್ಯದ ಬಗ್ಗೆ ಇವೆ. ಇಂಥ ವಿಷಯಗಳ ಇಡೀ ಪಟ್ಟಿಯನ್ನು ಗೀತೆ ಪುಸ್ತಕದ ಆರಂಭದಲ್ಲಿ ಕೊಡಲಾಗಿದೆ. ಇದು ತುಂಬ ಸಹಾಯಕರ. ಉದಾಹರಣೆಗೆ, ಒಬ್ಬ ಸಹೋದರನು ಸಾರ್ವಜನಿಕ ಭಾಷಣಕ್ಕಾಗಿ ಒಂದು ಗೀತೆಯನ್ನು ಆಯ್ಕೆಮಾಡಬೇಕಾದಾಗ ಇದು ಉಪಯೋಗಕ್ಕೆ ಬರುತ್ತದೆ.

17 ಹೃದಯಾಳದಿಂದ ಹಾಡಬೇಕಾದರೆ ಸಂದೇಶ ಸ್ಪಷ್ಟವಾಗಿರಬೇಕು. ಇದಕ್ಕಾಗಿ ಕೆಲವು ಪದಗಳನ್ನು ಬದಲಾಯಿಸಲಾಯಿತು. ಈಗ ಹೆಚ್ಚು ಬಳಕೆಯಲ್ಲಿ ಇಲ್ಲದ ಪದಗಳನ್ನು ತೆಗೆದು, ಬೇರೆ ಪದಗಳನ್ನು ಸೇರಿಸಲಾಯಿತು. “ದೀರ್ಘ ಸಹನೆ” ಎಂಬ ಗೀತೆಯ ಶೀರ್ಷಿಕೆಯನ್ನು “ತಾಳ್ಮೆ ತೋರಿಸಿ” ಎಂದು ಬದಲಾಯಿಸಲಾಯಿತು ಮತ್ತು ಈ ಗೀತೆಯಲ್ಲಿರುವ ಪದಗಳನ್ನೂ ಬದಲಾಯಿಸಲಾಯಿತು. ‘ನಿನ್ನ ಹೃದಯವನ್ನು ಕಾಪಾಡಿಕೊ’ ಎಂಬ ಶೀರ್ಷಿಕೆ ಒಂದು ಅಪ್ಪಣೆಯಂತಿತ್ತು. ಅದನ್ನು ಒಂದು ಸರಳ ವಾಕ್ಯವಾಗಿ ಮಾಡಿ, ‘ನಮ್ಮ ಹೃದಯವನ್ನು ಕಾಪಾಡಿಕೊಳ್ಳುತ್ತೇವೆ’ ಎಂದು ಬದಲಾಯಿಸಲಾಯಿತು. ಯಾಕೆ? ಮುಂಚೆ ಈ ಹಾಡನ್ನು ಹಾಡುವಾಗೆಲ್ಲ ಬೇರೆಯವರು ಏನು ಮಾಡಬೇಕೆಂದು ಹೇಳುವಂತಿತ್ತು. ಇದರಿಂದಾಗಿ ನಮ್ಮ ಕೂಟಗಳು, ಸಮ್ಮೇಳನಗಳು, ಅಧಿವೇಶನಗಳಿಗೆ ಹಾಜರಾಗುವ ಹೊಸ ಪ್ರಚಾರಕರಿಗೆ, ಆಸಕ್ತ ಜನರಿಗೆ, ಎಳೆಯರಿಗೆ ಮತ್ತು ಸಹೋದರಿಯರಿಗೆ ಮುಜುಗರ ಆಗುವಂತಿತ್ತು. ಹಾಗಾಗಿ ಆ ಶೀರ್ಷಿಕೆ ಮತ್ತು ಪದಗಳನ್ನೂ ಬದಲಾಯಿಸಲಾಯಿತು.

ಕುಟುಂಬ ಆರಾಧನೆಯಲ್ಲಿ ಗೀತೆಗಳನ್ನು ಅಭ್ಯಾಸಮಾಡಿರಿ (ಪ್ಯಾರ 18 ನೋಡಿ)

18. ಹೊಸ ಗೀತೆ ಪುಸ್ತಕದಲ್ಲಿರುವ ಗೀತೆಗಳನ್ನು ಯಾಕೆ ಕಲಿಯಬೇಕು? (ಪಾದಟಿಪ್ಪಣಿ ಸಹ ನೋಡಿ.)

18 ಈ ಗೀತೆ ಪುಸ್ತಕದಲ್ಲಿರುವ ಹೆಚ್ಚಿನ ಹಾಡುಗಳು ಪ್ರಾರ್ಥನೆಗಳಂತಿವೆ. ಇವು ನಮ್ಮ ಭಾವನೆಗಳನ್ನು ಯೆಹೋವನಿಗೆ ಹೇಳಿಕೊಳ್ಳಲು ಸಹಾಯಮಾಡುತ್ತವೆ. ಇನ್ನಿತರ ಹಾಡುಗಳು ‘ಪ್ರೀತಿಸಲು ಮತ್ತು ಸತ್ಕಾರ್ಯ ಮಾಡಲು’ ನಮ್ಮನ್ನು ಪ್ರೇರೇಪಿಸುತ್ತವೆ. (ಇಬ್ರಿ. 10:24) ಆದ್ದರಿಂದ ನಮ್ಮ ಗೀತೆಗಳ ರಾಗ, ತಾಳ, ಪದಗಳನ್ನು ಚೆನ್ನಾಗಿ ಕಲಿಯಬೇಕು. ಇದನ್ನು ಮಾಡುವ ಒಂದು ವಿಧಾನ, ಸಹೋದರ ಸಹೋದರಿಯರು ಈ ಗೀತೆಗಳನ್ನು ಹಾಡಿರುವ ರೆಕಾರ್ಡಿಂಗ್‌ಗಳನ್ನು ಕೇಳಿಸಿಕೊಳ್ಳುವುದು. ಇವು jw.orgಯಲ್ಲಿ ಲಭ್ಯ ಇವೆ. ಈ ಗೀತೆಗಳನ್ನು ಮನೆಯಲ್ಲಿ ಅಭ್ಯಾಸಮಾಡಿದರೆ, ಹೆಚ್ಚು ಆತ್ಮವಿಶ್ವಾಸದಿಂದ ಮತ್ತು ಭಾವಪೂರ್ಣವಾಗಿ ಹಾಡಲು ಸಾಧ್ಯವಾಗುತ್ತದೆ. *

19. ಸಭೆಯಲ್ಲಿರುವವರೆಲ್ಲರೂ ಹೇಗೆ ಯೆಹೋವನ ಆರಾಧನೆ ಮಾಡಬಹುದು?

19 ಗೀತೆಗಳನ್ನು ಹಾಡುವುದು ನಮ್ಮ ಆರಾಧನೆಯ ಮುಖ್ಯ ಭಾಗವೆಂದು ನೆನಪಿಡಿ. ಇದು ನಾವು ಯೆಹೋವನನ್ನು ಪ್ರೀತಿಸುತ್ತೇವೆ ಮತ್ತು ಆತನು ನಮಗಾಗಿ ಮಾಡಿರುವ ಎಲ್ಲದಕ್ಕಾಗಿಯೂ ಕೃತಜ್ಞರಾಗಿದ್ದೇವೆಂದು ತೋರಿಸುವ ಒಂದು ಅದ್ಭುತ ವಿಧ. (ಯೆಶಾಯ 12:5 ಓದಿ.) ನೀವು ಉತ್ಸಾಹದಿಂದ ಹಾಡುವಾಗ ಬೇರೆಯವರಿಗೂ ಉತ್ಸಾಹದಿಂದ ಹಾಡಲು ಪ್ರೋತ್ಸಾಹಿಸುತ್ತೀರಿ. ಸಭೆಯಲ್ಲಿರುವವರೆಲ್ಲರೂ ಅಂದರೆ ಚಿಕ್ಕವರು, ದೊಡ್ಡವರು, ಸತ್ಯದಲ್ಲಿ ಹೊಸಬರು ಈ ವಿಧದಲ್ಲಿ ಯೆಹೋವನ ಆರಾಧನೆ ಮಾಡಬಹುದು. ಆದ್ದರಿಂದ ಹೃದಯಾಳದಿಂದ ಹಾಡಲು ಯಾವತ್ತೂ ಹಿಂಜರಿಯಬೇಡಿ. “ಯೆಹೋವನಿಗೆ ಹಾಡಿರಿ” ಎಂದು ಹೇಳಿದ ಕೀರ್ತನೆಗಾರನ ಮಾತನ್ನು ಪಾಲಿಸಿ. ಹೌದು, ಸಂತೋಷದಿಂದ ಸ್ವರವೆತ್ತಿ ಹಾಡಿರಿ!—ಕೀರ್ತ. 96:1.

^ ಪ್ಯಾರ. 11 ಹಾಡುವಾಗ ನಿಮ್ಮ ಸ್ವರ ಚೆನ್ನಾಗಿ ಬರಲು ಏನು ಮಾಡಬೇಕೆಂಬ ಹೆಚ್ಚಿನ ಸಲಹೆಗಳಿಗಾಗಿ, JW ಪ್ರಸಾರ (ಇಂಗ್ಲಿಷ್‌) (FROM OUR STUDIO ವಿಡಿಯೊ ವಿಭಾಗದಲ್ಲಿ) ಡಿಸೆಂಬರ್‌ 2014​ರ ಮಾಸಿಕ ಕಾರ್ಯಕ್ರಮ ನೋಡಿ.

^ ಪ್ಯಾರ. 12 ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ ಪುಸ್ತಕದ ಪುಟ 181-184​ರಲ್ಲಿ, “ನಿಮ್ಮ ಉಸಿರಾಟವನ್ನು ಸರಿಯಾಗಿ ನಿಯಂತ್ರಿಸಿರಿ” ಎಂಬ ಉಪಶೀರ್ಷಿಕೆಯ ಕೆಳಗಿರುವ ಸಲಹೆಗಳನ್ನು ನೋಡಿರಿ.

^ ಪ್ಯಾರ. 18 ನಮ್ಮ ಅಧಿವೇಶನ ಮತ್ತು ಸಮ್ಮೇಳನಗಳಲ್ಲಿ ಪ್ರತಿದಿನ ಬೆಳಗ್ಗಿನ ಹಾಗೂ ಮಧ್ಯಾಹ್ನದ ಕಾರ್ಯಕ್ರಮ 10 ನಿಮಿಷಗಳ ಸಂಗೀತದೊಂದಿಗೆ ಆರಂಭವಾಗುತ್ತದೆ. ಇದು ನಮ್ಮಲ್ಲಿ ಗೀತೆಗಳನ್ನು ಹಾಡಲು ಉತ್ಸಾಹ ತುಂಬಿಸುತ್ತದೆ ಮತ್ತು ಮುಂದಿನ ಕಾರ್ಯಕ್ರಮಕ್ಕೆ ಕಿವಿಗೊಡಲು ಹೃದಮನವನ್ನು ಸಿದ್ಧಪಡಿಸುತ್ತದೆ. ಆದ್ದರಿಂದ ಈ ಸಂಗೀತ ಶುರು ಆಗುವ ಸ್ವಲ್ಪ ಮುಂಚೆಯೇ ನಾವೆಲ್ಲರೂ ನಮ್ಮ ಕುರ್ಚಿಗಳಲ್ಲಿ ಕುಳಿತಿರಬೇಕು ಮತ್ತು ಕಿವಿಗೊಡಲು ಸಿದ್ಧರಾಗಿರಬೇಕು.