ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಹೊಸ ಸಭೆಗೆ ನೀವು ಹೇಗೆ ಹೊಂದಿಕೊಳ್ಳಬಲ್ಲಿರಿ?

ಹೊಸ ಸಭೆಗೆ ನೀವು ಹೇಗೆ ಹೊಂದಿಕೊಳ್ಳಬಲ್ಲಿರಿ?

ಆ್ಯಲೆನ್‌ * ಒಂದು ಹೊಸ ಸಭೆಗೆ ಹೋಗುತ್ತಿದ್ದಾರೆ. ಇದು ಅವರಿದ್ದ ಊರಿನಿಂದ ಸುಮಾರು 1,400 ಕಿ.ಮೀ. ದೂರದಲ್ಲಿದೆ. ಅವರು ಹೇಳುವುದು: “ಈ ಸಭೆಯಲ್ಲಿ ನನಗೆ ಸ್ನೇಹಿತರು ಸಿಗುತ್ತಾರಾ, ನನ್ನನ್ನು ಸ್ವೀಕರಿಸುತ್ತಾರಾ ಎಂಬ ಭಯ ನಾನಿಲ್ಲಿಗೆ ಬರುವ ಮುಂಚೆ ಇತ್ತು.” ಆದರೆ ಅವರೀಗ ಈ ಹೊಸ ಸಭೆಗೆ ಹೊಂದಿಕೊಳ್ಳುತ್ತಿದ್ದಾರೆ.

ನೀವು ಒಂದು ಹೊಸ ಸಭೆಗೆ ಹೋಗುತ್ತಿರುವಲ್ಲಿ ನಿಮಗೂ ಸ್ವಲ್ಪ ಹೆದರಿಕೆ, ಅಂಜಿಕೆ ಇರಬಹುದು. ಹೊಂದಿಕೊಳ್ಳಲು ನಿಮಗೆ ಯಾವುದು ಸಹಾಯಮಾಡುವುದು? ಹೊಂದಿಕೊಳ್ಳಲು ನೀವೆಣಿಸಿದ್ದಕ್ಕಿಂತ ಹೆಚ್ಚು ಕಷ್ಟ ಆಗುತ್ತಿರುವಲ್ಲಿ ಏನು ಮಾಡಬಹುದು? ಅಥವಾ ನೀವಿರುವ ಸಭೆಗೆ ಬೇರೆ ಕಡೆಯಿಂದ ಸಹೋದರರು ಹೊಸದಾಗಿ ಬಂದಿರುವಲ್ಲಿ ನೀವು ಹೇಗೆ ಸಹಾಯಮಾಡಬಹುದು?

ನೀವು ಹೇಗೆ ಹೊಂದಿಕೊಂಡು, ಸಫಲರಾಗಬಹುದು?

ಈ ಉದಾಹರಣೆಯ ಬಗ್ಗೆ ಯೋಚಿಸಿ: ಒಂದು ಮರವನ್ನು ಬೇರುಸಮೇತ ತೆಗೆದು ಇನ್ನೊಂದು ಕಡೆ ನೆಟ್ಟಾಗ ಅದಕ್ಕೆ ಕಷ್ಟ ಆಗುತ್ತದೆ. ಏಕೆಂದರೆ ಅದನ್ನು ಬೇರೆ ಕಡೆ ಸಾಗಿಸಲು ಸುಲಭವಾಗಲಿಕ್ಕೆ ಕೆಲವೊಂದು ಬೇರುಗಳನ್ನು ಕತ್ತರಿಸಲಾಗುತ್ತದೆ. ಆದರೆ ಈ ಮರವನ್ನು ಬೇರೆ ಕಡೆ ನೆಟ್ಟ ಕೂಡಲೇ ಅದು ಹೊಸ ಬೇರುಗಳನ್ನು ಬೆಳೆಸಿಕೊಳ್ಳಬೇಕು. ಅದೇ ರೀತಿ, ನಿಮಗೂ ಬೇರೊಂದು ಸಭೆಗೆ ಹೋಗುವಾಗ ಕಷ್ಟ ಆಗಬಹುದು. ಏಕೆಂದರೆ ನಿಮ್ಮ ಹಳೇ ಸಭೆಯಲ್ಲಿ ನೀವು ಒಂದರ್ಥದಲ್ಲಿ ಬೇರುಬಿಟ್ಟಿದ್ದಿರಿ ಅಂದರೆ ನಿಮಗಲ್ಲಿ ಆಪ್ತ ಸ್ನೇಹಿತರಿದ್ದರು ಮತ್ತು ಆಧ್ಯಾತ್ಮಿಕ ಚಟುವಟಿಕೆಗಳನ್ನು ಒಂದು ನಿಯತಕ್ರಮದಲ್ಲಿ ಮಾಡುತ್ತಾ ಇದ್ದಿರಿ. ಈಗ ನೀವು ಹೊಸ ವಾತಾವರಣದಲ್ಲಿ ಚೆನ್ನಾಗಿ ಬೆಳೆಯಲು ಹೊಸ ಬೇರುಗಳನ್ನು ಬೆಳೆಸಿಕೊಳ್ಳಬೇಕು. ಇದನ್ನು ಮಾಡಲು ನಿಮಗೆ ಯಾವುದು ಸಹಾಯ ಮಾಡುತ್ತದೆ? ಬೈಬಲ್‌ ತತ್ವಗಳು. ಇಂಥ ಕೆಲವು ತತ್ವಗಳನ್ನು ಈಗ ಚರ್ಚಿಸೋಣ.

ದೇವರ ವಾಕ್ಯವನ್ನು ಪ್ರತಿ ದಿನ ಓದುವವನು “ನೀರಿನ ಕಾಲಿವೆಗಳ ಬಳಿಯಲ್ಲಿ ಬೆಳೆದಿರುವ ಮರದ ಹಾಗಿರುವನು. ಅಂಥ ಮರವು ತಕ್ಕ ಕಾಲದಲ್ಲಿ ಫಲಕೊಡುತ್ತದಲ್ಲಾ; ಅದರ ಎಲೆ ಬಾಡುವದೇ ಇಲ್ಲ, ಅದರಂತೆ ಅವನ ಕಾರ್ಯವೆಲ್ಲವೂ ಸಫಲವಾಗುವದು.”ಕೀರ್ತ. 1:1-3.

ಒಂದು ಮರ ಆರೋಗ್ಯವಾಗಿರಲಿಕ್ಕೆ ಪ್ರತಿ ದಿನ ಒಂದು ಜಲಮೂಲದಿಂದ ನೀರನ್ನು ಹೀರಿಕೊಳ್ಳಲೇಬೇಕು. ಹಾಗೆಯೇ ಒಬ್ಬ ಕ್ರೈಸ್ತನು ಆಧ್ಯಾತ್ಮಿಕವಾಗಿ ಬಲವಾಗಿರಬೇಕಾದರೆ ದೇವರ ವಾಕ್ಯದಿಂದ ಪೋಷಣೆ ಪಡೆಯಬೇಕು. ಅದಕ್ಕಾಗಿ ನೀವು ಪ್ರತಿ ದಿನ ಬೈಬಲನ್ನು ಓದಬೇಕು, ತಪ್ಪದೆ ಎಲ್ಲ ಸಭಾ ಕೂಟಗಳಿಗೆ ಹಾಜರಾಗಬೇಕು. ವೈಯಕ್ತಿಕ ಅಧ್ಯಯನ ಮತ್ತು ಕುಟುಂಬ ಆರಾಧನೆಯ ಒಳ್ಳೇ ರೂಢಿಯನ್ನು ಮುಂಚಿನಂತೆಯೇ ಮುಂದುವರಿಸಬೇಕು. ಏಕೆಂದರೆ ಹಳೇ ಸಭೆಯಲ್ಲಿ ನಿಮ್ಮ ಆಧ್ಯಾತ್ಮಿಕತೆಗೆ ಏನೆಲ್ಲ ಅಗತ್ಯವಿತ್ತೊ ಅದೆಲ್ಲ ಈಗಲೂ ಅಗತ್ಯವಿದೆ.

“ನೀರು ಹಾಯಿಸುವವನಿಗೆ ನೀರು ಸಿಕ್ಕುವದು.” ಜ್ಞಾನೋ. 11:25.

ನೀವು ಸೇವೆಯಲ್ಲಿ ಪೂರ್ಣವಾಗಿ ಭಾಗವಹಿಸಿದರೆ ನಿಮ್ಮಲ್ಲಿ ಚೈತನ್ಯ ತುಂಬಿಕೊಂಡು ಹೊಸ ಸಭೆಗೆ ಬೇಗನೆ ಹೊಂದಿಕೊಳ್ಳಲು ಸಾಧ್ಯವಾಗುತ್ತದೆ. ಒಬ್ಬ ಹಿರಿಯನಾಗಿರುವ ಕೆವಿನ್‌ ಹೇಳುವುದು: “ಹೊಸ ಸಭೆಗೆ ಬಂದ ಕೂಡಲೆ ನಾನು, ನನ್ನ ಹೆಂಡತಿ ಸಹಾಯಕ ಪಯನೀಯರ್‌ ಸೇವೆ ಮಾಡಿದೆವು. ಇದರಿಂದ ನಮಗೆ ತುಂಬ ಪ್ರಯೋಜನವಾಯಿತು. ನಮಗೆ ಸಹೋದರರ, ಪಯನೀಯರರ ಮತ್ತು ಸೇವಾ ಕ್ಷೇತ್ರದ ಪರಿಚಯ ಬೇಗನೆ ಆಯಿತು.” ರೊಜರ್‌ ಎಂಬ ಸಹೋದರರು ಮುಂಚೆ ಇದ್ದ ಊರಿನಿಂದ 1,600 ಕಿ.ಮೀ. ದೂರದಲ್ಲಿರುವ ಕ್ಷೇತ್ರಕ್ಕೆ ಸ್ಥಳಾಂತರಿಸಿದ್ದಾರೆ. ಇವರು ಹೇಳುವುದು: “ಹೊಸ ಸಭೆಗೆ ಹೊಂದಿಕೊಳ್ಳಲು ಉತ್ತಮ ವಿಧ ಯಾವುದೆಂದರೆ, ಸಾಧ್ಯವಾದಷ್ಟು ಹೆಚ್ಚಾಗಿ ಸೇವೆಗೆ ಹೋಗುವುದೇ. ಅಲ್ಲದೆ, ನೀವು ರಾಜ್ಯ ಸಭಾಗೃಹ ಶುಚಿಮಾಡಲು, ಕೂಟದಲ್ಲಿ ನೇಮಕ ಪಡೆದವರು ಬರದಿದ್ದಾಗ ಅದನ್ನು ನಿರ್ವಹಿಸಲು, ಕೂಟಗಳಿಗೆ ಯಾರನ್ನಾದರೂ ಕರಕೊಂಡು ಹೋಗಲು, ಹೀಗೆ ಯಾವುದೇ ಸಹಾಯಮಾಡಲು ಸಿದ್ಧರಿದ್ದೀರೆಂದು ಹಿರಿಯರಿಗೆ ತಿಳಿಸಿ. ತಮ್ಮ ಸಭೆಗೆ ಹೊಸದಾಗಿ ಬಂದಿರುವ ವ್ಯಕ್ತಿಯಲ್ಲಿ ಇಂಥ ಸ್ವತ್ಯಾಗದ ಮನೋಭಾವವನ್ನು ನೋಡುವಾಗ ಆ ಸಭೆಯ ಸಹೋದರ ಸಹೋದರಿಯರು ಬೇಗ ಸ್ನೇಹಿತರಾಗುತ್ತಾರೆ.”

‘ನಿಮ್ಮ ಹೃದಯ ವಿಶಾಲವಾಗಿರಲಿ.’2 ಕೊರಿಂ. 6:13.

ನಿಮ್ಮ ಸಹೋದರ ಮಮತೆಯನ್ನು ಹೆಚ್ಚಿಸಿರಿ. ಮೆಲಿಸ್ಸಾ ಎಂಬ ಸಹೋದರಿ ಮತ್ತು ಅವರ ಕುಟುಂಬ ಹೊಸ ಸಭೆಗೆ ಹೋದಾಗ ಹೊಸ ಸ್ನೇಹಿತರನ್ನು ಮಾಡಿಕೊಳ್ಳಲು ತುಂಬ ಗಮನ ಕೊಟ್ಟರು. ಮೆಲಿಸ್ಸಾ ಹೇಳುವುದು: “ಕೂಟಕ್ಕೆ ಮುಂಚೆ ಮತ್ತು ನಂತರ ರಾಜ್ಯ ಸಭಾಗೃಹದಲ್ಲಿ ಎಲ್ಲರೊಂದಿಗೆ ಬೆರೆತೆವು. ಇದು ನಾವು ಬರೀ ವಂದಿಸಿ ಸುಮ್ಮನಿರದೆ ಎಲ್ಲರ ಜೊತೆ ಮಾತಾಡಲು ಸಾಕಷ್ಟು ಸಮಯ ಕೊಟ್ಟಿತು.” ಇದು ಅವರಿಗೆ ಅಲ್ಲಿರುವವರ ಹೆಸರನ್ನು ಬೇಗನೆ ತಿಳಿದುಕೊಳ್ಳಲು ಸಹಾಯಮಾಡಿತು. ಅಷ್ಟುಮಾತ್ರವಲ್ಲ ಅತಿಥಿಸತ್ಕಾರ ಮಾಡುವ ಮೂಲಕ ಹೃದಯವನ್ನು ವಿಶಾಲಗೊಳಿಸಿದರು. ಇದು ಅವರು ಮಾಡಿಕೊಂಡಿದ್ದ ಹೊಸ ಸ್ನೇಹಿತರೊಂದಿಗಿನ ಬಂಧಗಳನ್ನು ಬಲಪಡಿಸಿತು. “ಅವರ ಫೋನ್‌ ನಂಬರ್‌ ತಕ್ಕೊಂಡು ನಮ್ಮ ನಂಬರನ್ನು ಕೊಟ್ಟೆವು. ಇದರಿಂದ ಅವರು ನಮ್ಮನ್ನು ಸುಲಭವಾಗಿ ಸಂಪರ್ಕಿಸಿ ಆಧ್ಯಾತ್ಮಿಕ ಹಾಗೂ ಬೇರೆ ಚಟುವಟಿಕೆಗಳಲ್ಲಿ ಸೇರಿಸಿಕೊಳ್ಳಲು ಸಾಧ್ಯವಾಯಿತು” ಎನ್ನುತ್ತಾರೆ ಮೆಲಿಸ್ಸಾ.

ನಿಮಗೆ ಹೊಸಬರ ಜೊತೆ ಮಾತಾಡಲು ಮುಜುಗರವಾಗುತ್ತಿದ್ದರೆ, ಮೊದಲು ಒಂದು ಚಿಕ್ಕ ವಿಷಯ ಮಾಡಿ. ಅಂದರೆ ಒಂದು ಮುಗುಳ್ನಗೆ ಬೀರಿ. ಮೊದಮೊದಲು ನಿಮಗೆ ಇದನ್ನು ಮಾಡಲು ಕಷ್ಟವಾದರೂ ಮಾಡಿ. ಏಕೆಂದರೆ ಮುಗುಳ್ನಗೆಯಿಂದ ಜನರು ನಿಮ್ಮ ಕಡೆ ಆಕರ್ಷಿಸಲ್ಪಡುತ್ತಾರೆ. “ನಗುಮುಖವು ಜನರನ್ನು ಸಂತೋಷಗೊಳಿಸುವುದು.” (ಜ್ಞಾನೋ. 15:30, ಪರಿಶುದ್ಧ ಬೈಬಲ್‌ *) ರೇಚಲ್‌ ಎಂಬ ಸಹೋದರಿ ಹೇಳುವುದು: “ನನಗೆ ಮೊದಲಿನಿಂದಲೂ ತುಂಬ ನಾಚಿಕೆ ಸ್ವಭಾವ.” ಇವರು ಬೆಳೆದುಬಂದ ಊರಿಂದ ತುಂಬ ದೂರದ ಸ್ಥಳಕ್ಕೆ ಸ್ಥಳಾಂತರಿಸಿದರು. “ಕೆಲವೊಂದು ಸಾರಿ ನನ್ನ ಹೊಸ ಸಭೆಯಲ್ಲಿರುವ ಸಹೋದರ ಸಹೋದರಿಯರ ಹತ್ತಿರ ಹೋಗಿ ಮಾತಾಡಲು ನನ್ನನ್ನೇ ದೂಡಬೇಕಾಗುತ್ತದೆ. ನನ್ನ ಹಾಗೆಯೇ ನಾಚಿಕೆ ಸ್ವಭಾವ ಇರುವ ಯಾರಾದರೂ ರಾಜ್ಯ ಸಭಾಗೃಹದಲ್ಲಿ ಒಬ್ಬರೇ ಸುಮ್ಮನೆ ಕೂತಿರುವುದನ್ನು ನೋಡಿದರೆ ಅವರ ಹತ್ತಿರ ಹೋಗಿ ಮಾತಾಡುತ್ತೇನೆ.” ನಿಮ್ಮ ಹೊಸ ಸಭೆಯಲ್ಲಿ ಪ್ರತಿ ಕೂಟಕ್ಕೆ ಮುಂಚೆ ಅಥವಾ ಕೂಟದ ನಂತರ ಬೇರೆಬೇರೆಯವರ ಜೊತೆ ಮಾತಾಡುವ ಗುರಿಯಿಡಿ.

ಇನ್ನೊಂದು ಕಡೆ, ಹೊಸ ಸಭೆಗೆ ಹೋದ ಆರಂಭದ ಕೆಲವು ವಾರಗಳಲ್ಲಿ ಅಲ್ಲಿನ ಸಹೋದರ ಸಹೋದರಿಯರ ಜೊತೆ ಮಾತಾಡಲು ನೀವು ಉತ್ಸುಕರಾಗಿರಬಹುದು. ಆ ಹೊಸತನ ಸಮಯ ಕಳೆದಂತೆ ಹೋಗಿಬಿಡಬಹುದು. ಆದರೂ ಹೊಸ ಸ್ನೇಹಿತರನ್ನು ಮಾಡಿಕೊಳ್ಳುವ ಪ್ರಯತ್ನವನ್ನು ಬಿಡಬೇಡಿ.

ಸ್ಥಳಾಂತರಿಸಲಾಗುವ ಮರಗಳಿಗೆ ಕಷ್ಟವಾಗುತ್ತದೆ, ಆದರೆ ಹೊಸ ಜಾಗದಲ್ಲಿ ನೆಟ್ಟಾಗ ಅವು ಹೊಸ ಬೇರುಗಳನ್ನು ಬೆಳೆಸಿಕೊಳ್ಳುತ್ತವೆ

ಹೊಂದಿಕೊಳ್ಳಲು ಸಮಯ ತೆಗೆದುಕೊಳ್ಳಿ

ಹೊಸ ಜಾಗದಲ್ಲಿ ಬೇರೂರಲು ಕೆಲವು ಮರಗಳಿಗೆ ಹೆಚ್ಚು ಸಮಯ ಹಿಡಿಯುತ್ತದೆ. ಅದೇ ರೀತಿ ಹೊಸ ಸಭೆಗೆ ಹೊಂದಿಕೊಳ್ಳಲು ಕೆಲವರಿಗೆ ಹೆಚ್ಚು ಸಮಯ ಹಿಡಿಯುತ್ತದೆ. ನೀವು ಹೊಸ ಸಭೆಗೆ ಹೋಗಿ ಈಗಾಗಲೇ ತುಂಬ ಸಮಯ ಆಗಿದ್ದರೂ ಹೊಂದಿಕೊಳ್ಳಲು ಇನ್ನೂ ಕಷ್ಟಪಡುತ್ತಿರುವಲ್ಲಿ ಮುಂದೆ ಕೊಡಲಾಗಿರುವ ತತ್ವಗಳು ನಿಮಗೆ ಸಹಾಯ ಮಾಡುತ್ತವೆ:

“ಒಳ್ಳೇದನ್ನು ಮಾಡುವುದನ್ನು ನಿಲ್ಲಿಸದಿರೋಣ; ನಾವು ದಣಿಯದಿದ್ದರೆ ತಕ್ಕ ಸಮಯದಲ್ಲಿ ಫಲವನ್ನು ಕೊಯ್ಯುವೆವು.”ಗಲಾ. 6:9.

ಹೊಂದಿಕೊಳ್ಳಲು ನೀವು ನೆನಸಿದ್ದಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳಿ. ಇದನ್ನೇ ಗಿಲ್ಯಡ್‌ ತರಬೇತಿ ಪಡೆದ ಅನೇಕ ಮಿಷನರಿಗಳು ಮಾಡುತ್ತಾರೆ. ಅವರು ನೇಮಕ ಪಡೆದು ಬೇರೆ ದೇಶಕ್ಕೆ ಹೋದಾಗ ಹಲವಾರು ವರ್ಷ ಕಳೆದ ನಂತರವೇ ಸ್ವದೇಶಕ್ಕೆ ರಜೆಯಲ್ಲಿ ಹೋಗುತ್ತಾರೆ. ಹೀಗೆ ಮಾಡುವುದರಿಂದ ತಮಗೆ ನೇಮಕವಾದ ದೇಶದಲ್ಲಿನ ಸಹೋದರರ ಜೊತೆ ಅವರಿಗೆ ಒಳ್ಳೇ ಸಂಬಂಧ ಬೆಳೆಯುತ್ತದೆ, ಅಲ್ಲಿನ ಸಂಸ್ಕೃತಿಗೆ ಹೊಂದಿಕೊಳ್ಳಲು ಸಾಧ್ಯವಾಗುತ್ತದೆ.

ಒಂದು ಹೊಸ ಕಡೆ ಹೋದಾಗ ಬೇಗಬೇಗ ಹೊಂದಿಕೊಳ್ಳಲು ಆಗುವುದಿಲ್ಲ ಎಂದು ಬೇರೆಬೇರೆ ಸಭೆಗಳಲ್ಲಿದ್ದ ಆಲೆಹ್ಯಾಂಡ್ರೊ ಒಪ್ಪಿಕೊಳ್ಳುತ್ತಾರೆ. ಅವರು ಹೇಳುವುದು: “ನಾವು ಒಂದು ಹೊಸ ಸಭೆಗೆ ಬಂದಾಗ ನನ್ನ ಪತ್ನಿ, ‘ನನ್ನ ಎಲ್ಲ ಸ್ನೇಹಿತರು ನಾವು ಬಿಟ್ಟುಬಂದ ಸಭೆಯಲ್ಲಿದ್ದಾರೆ’ ಎಂದಳು.” ಎರಡು ವರ್ಷಗಳ ಹಿಂದೆ ಅವರು ಬೇರೊಂದು ಸಭೆಗೆ ಸ್ಥಳಾಂತರಿಸಿದ್ದಾಗಲೂ ಇದೇ ಮಾತುಗಳನ್ನು ಹೇಳಿದ್ದಳು ಎಂದು ಆಲೆಹ್ಯಾಂಡ್ರೊ ಅವಳಿಗೆ ಜ್ಞಾಪಿಸಿದರು. ಆ ಸಭೆಯಲ್ಲಿ ಎರಡು ವರ್ಷ ಇದ್ದಾಗ ಅವಳು ಹೊಸಹೊಸ ವ್ಯಕ್ತಿಗಳ ಪರಿಚಯ ಮಾಡಿಕೊಂಡಳು. ಹೀಗೆ ಮುಂಚೆ ಪರಿಚಯವೇ ಇಲ್ಲದವರು ಅವಳ ಆಪ್ತ ಸ್ನೇಹಿತರಾಗಿದ್ದರು.

“ಹಿಂದಿನ ಕಾಲವು ಈ ಕಾಲಕ್ಕಿಂತ ಮೇಲಾದದ್ದಕ್ಕೆ ಕಾರಣವೇನು ಅನ್ನಬೇಡ; ನೀನು ಈ ವಿಷಯದಲ್ಲಿ ವಿಚಾರಿಸುವದು ಜ್ಞಾನಕಾರ್ಯವಲ್ಲ.”ಪ್ರಸಂ. 7:10.

ನಿಮ್ಮ ಈಗಿನ ಸಭೆಯನ್ನು ಹಿಂದಿನ ಸಭೆಯೊಂದಿಗೆ ಹೋಲಿಸಬೇಡಿ. ಉದಾಹರಣೆಗೆ, ನಿಮ್ಮ ಹಳೇ ಸಭೆಯವರು ತುಂಬ ಮಾತಾಡುವವರು ಆಗಿದ್ದಿರಬಹುದು. ಹೊಸ ಸಭೆಯವರು ಕಡಿಮೆ ಮಾತಾಡುವ ಸ್ವಭಾವದವರು ಆಗಿರಬಹುದು. ಹೊಸ ಸಭೆಯಲ್ಲಿರುವವರ ಒಳ್ಳೇ ವಿಷಯಗಳಿಗೆ ಗಮನ ಕೊಡಿ. ಅವರೂ ನಿಮ್ಮ ಬಗ್ಗೆ ಅದನ್ನೇ ಮಾಡುವಂತೆ ಬಯಸುತ್ತೀರಿ ತಾನೇ? ಕೆಲವೊಮ್ಮೆ ಹೊಸ ಸಭೆಗೆ ಬಂದ ಕೆಲವರು ‘ನಾನು ನಿಜವಾಗಲೂ “ಸಹೋದರರ ಇಡೀ ಬಳಗವನ್ನು ಪ್ರೀತಿಸುತ್ತೇನಾ?”’ ಎಂದು ತಮ್ಮನ್ನೇ ಕೇಳಿಕೊಳ್ಳಬೇಕಾಗಿ ಬಂದಿದೆ.—1 ಪೇತ್ರ 2:17.

“ಕೇಳುತ್ತಾ ಇರಿ, ಅದು ನಿಮಗೆ ಕೊಡಲ್ಪಡುವುದು.” ಲೂಕ 11:9.

ಸಹಾಯಕ್ಕಾಗಿ ಪ್ರಾರ್ಥಿಸುತ್ತಾ ಇರಿ. ಡೇವಿಡ್‌ ಎಂಬ ಹಿರಿಯ ಹೇಳುವುದು: “ಸಮಸ್ಯೆಯನ್ನು ನೀವೊಬ್ಬರೇ ನಿಭಾಯಿಸಬೇಕು ಎಂದೇನಿಲ್ಲ. ಎಷ್ಟೋ ವಿಷಯಗಳನ್ನು ಮಾಡಲು ನಮಗೆ ಯೆಹೋವನ ಸಹಾಯ ಬೇಕೇ ಬೇಕು. ಆದ್ದರಿಂದ ಅದರ ಬಗ್ಗೆ ಪ್ರಾರ್ಥಿಸಿ.” ಇದನ್ನು ಒಪ್ಪಿಕೊಳ್ಳುತ್ತಾ ಈ ಮುಂಚೆ ತಿಳಿಸಿದ ರೇಚಲ್‌ ಹೀಗನ್ನುತ್ತಾರೆ: “ನನಗೆ, ನನ್ನ ಗಂಡನಿಗೆ ‘ನಾವು ಈ ಸಭೆಯ ಭಾಗವಾಗಿಲ್ಲ’ ಎಂಬ ಅನಿಸಿಕೆ ಬಂದರೆ, ಅದರ ಬಗ್ಗೆ ನಿರ್ದಿಷ್ಟವಾಗಿ ಯೆಹೋವನ ಹತ್ತಿರ ಪ್ರಾರ್ಥಿಸುತ್ತೇವೆ. ಬೇರೆಯವರು ನಮಗೆ ಹತ್ತಿರವಾಗುವುದನ್ನು ತಡೆಯುತ್ತಿರುವ ಯಾವುದೇ ವಿಷಯವನ್ನು ನಾವು ಮಾಡುತ್ತಿದ್ದೇವಾದರೆ ಅದನ್ನು ನಮ್ಮ ಗಮನಕ್ಕೆ ತರುವಂತೆ ಕೇಳಿಕೊಳ್ಳುತ್ತೇವೆ. ಹೀಗೆ ಪ್ರಾರ್ಥಿಸಿದ ಮೇಲೆ ಸಹೋದರ ಸಹೋದರಿಯರೊಟ್ಟಿಗೆ ಹೆಚ್ಚು ಸಮಯ ಕಳೆಯಲು ಪ್ರಯತ್ನಿಸುತ್ತೇವೆ.”

ಹೆತ್ತವರೇ, ಹೊಸ ಸಭೆಯಲ್ಲಿ ಹೊಂದಿಕೊಳ್ಳಲು ನಿಮ್ಮ ಮಕ್ಕಳಿಗೆ ಕಷ್ಟವಾಗುತ್ತಿರುವಲ್ಲಿ ಇದೇ ವಿಷಯದ ಬಗ್ಗೆ ಅವರೊಂದಿಗೆ ಸೇರಿ ಪ್ರಾರ್ಥಿಸಿ. ಭಕ್ತಿವೃದ್ಧಿಮಾಡುವ ಸಹವಾಸಕ್ಕಾಗಿ ಏರ್ಪಾಡು ಮಾಡುವ ಮೂಲಕ ನಿಮ್ಮ ಮಕ್ಕಳು ಹೊಸ ಸ್ನೇಹಿತರನ್ನು ಕಂಡುಕೊಳ್ಳಲು ಸಹಾಯಮಾಡಿ.

ಹೊಸದಾಗಿ ಬಂದವರನ್ನು ನಿಮ್ಮ ಸಭೆಯ ಭಾಗವಾಗಿ ಸ್ವೀಕರಿಸಿ

ನಿಮ್ಮ ಸಭೆಗೆ ಹೊಸದಾಗಿ ಬಂದಿರುವ ವ್ಯಕ್ತಿಗಳಿಗೆ ನೀವು ಹೇಗೆ ಸಹಾಯ ಮಾಡಬಹುದು? ಆರಂಭದಿಂದಲೇ ಒಳ್ಳೇ ಸ್ನೇಹಿತರಾಗಿರಲು ಪ್ರಯತ್ನಿಸಿ. ಈ ರೀತಿಯಲ್ಲಿ ಸಹಾಯಮಾಡಬೇಕಾದರೆ, ಒಂದುವೇಳೆ ನೀವು ಒಂದು ಹೊಸ ಸಭೆಗೆ ಹೋಗಿರುತ್ತಿದ್ದರೆ ಅಲ್ಲಿನ ಸಹೋದರರು ನಿಮಗೆ ಏನು ಮಾಡಬೇಕೆಂದು ಬಯಸುತ್ತಿದ್ದಿರಿ ಎಂದು ಸ್ವಲ್ಪ ಯೋಚಿಸಿ ನೋಡಿ. ನಂತರ ಅದನ್ನೇ ಹೊಸದಾಗಿ ಬಂದಿರುವವರಿಗೆ ಮಾಡಿ. (ಮತ್ತಾ. 7:12) ಇವರನ್ನು ಬಹುಶಃ ನಿಮ್ಮ ಕುಟುಂಬ ಆರಾಧನೆಗೆ ಅಥವಾ JW ಪ್ರಸಾರದ ಮಾಸಿಕ ಕಾರ್ಯಕ್ರಮ ನೋಡಲು ಮನೆಗೆ ಕರೆಯಬಹುದು. ನಿಮ್ಮೊಂದಿಗೆ ಸೇವೆಗೆ ಬರಲು ಅವರನ್ನು ಆಮಂತ್ರಿಸಬಹುದು. ನೀವು ಅವರಿಗೆ ಸಾದಾ ಊಟ ಕೊಟ್ಟರೂ ನಿಮ್ಮ ಈ ಅತಿಥಿಸತ್ಕಾರವನ್ನು ಅವರು ಮರೆಯಲ್ಲ. ಹೊಸದಾಗಿ ಬಂದವರಿಗೆ ನೀವು ಬೇರೆ ಯಾವ ಪ್ರಾಯೋಗಿಕ ವಿಧಗಳಲ್ಲಿ ಸಹಾಯ ಮಾಡಬಹುದು?

ಕಾರ್ಲೊಸ್‌ ಎಂಬ ಸಹೋದರ ಹೇಳುವುದು: “ನಾವು ಹೊಸ ಸಭೆಗೆ ಬಂದಾಗ, ಯಾವ್ಯಾವ ಅಂಗಡಿಗಳಲ್ಲಿ ಕಡಿಮೆ ಬೆಲೆಗೆ ವಸ್ತುಗಳು ಸಿಗುತ್ತವೆಂದು ಒಬ್ಬ ಸಹೋದರಿ ನಮಗೆ ಹೇಳಿದರು. ಇದರಿಂದ ತುಂಬ ಸಹಾಯ ಆಯಿತು.” ಬೇರೆ ರೀತಿಯ ಹವಾಮಾನ ಇದ್ದ ಸ್ಥಳದಿಂದ ಬರುವವರಿಗೆ ನಿಮ್ಮ ಸ್ಥಳದಲ್ಲಿರುವ ಸೆಕೆ, ಚಳಿ, ಮಳೆಗೆ ತಕ್ಕ ಹಾಗೆ ಯಾವ ರೀತಿಯ ಬಟ್ಟೆ ಹಾಕಬೇಕೆಂದು ಗೊತ್ತಿರಲಿಕ್ಕಿಲ್ಲ. ನೀವು ಈ ವಿಷಯದಲ್ಲಿ ಅವರಿಗೆ ಕೊಡುವ ಸಹಾಯವನ್ನು ಅವರು ಮೆಚ್ಚುತ್ತಾರೆ. ನೀವಿರುವಂಥ ಸ್ಥಳದ ಇತಿಹಾಸದ ಬಗ್ಗೆ ಅಥವಾ ಸ್ಥಳೀಯರ ಧಾರ್ಮಿಕ ನಂಬಿಕೆಗಳ ಬಗ್ಗೆ ವಿವರಿಸಿ. ಹೀಗೆ ಅವರು ಸೇವೆಯನ್ನು ಪರಿಣಾಮಕಾರಿಯಾಗಿ ಮಾಡಲು ನೀವು ಸಹಾಯ ಮಾಡುತ್ತೀರಿ.

ಹೊಂದಿಕೊಳ್ಳಲು ಹಾಕುವ ಪ್ರಯತ್ನ ಸಾರ್ಥಕ

ಆರಂಭದಲ್ಲಿ ಹೇಳಿದ ಆ್ಯಲೆನ್‌ ಹೊಸ ಸಭೆಗೆ ಬಂದು ಒಂದು ವರ್ಷ ದಾಟಿದೆ. ಅವರು ಹೇಳುವುದು: “ಇಲ್ಲಿನ ಸಹೋದರ ಸಹೋದರಿಯರ ಪರಿಚಯ ಮಾಡಿಕೊಳ್ಳಲು ನಾನು ಆರಂಭದಲ್ಲಿ ಹೆಚ್ಚು ಪ್ರಯತ್ನ ಹಾಕಬೇಕಿತ್ತು. ಆದರೆ ಈಗ ಅವರು ನನ್ನ ಸ್ವಂತ ಕುಟುಂಬದಂತೆ ಇದ್ದಾರೆ. ನಾನು ಸಂತೋಷವಾಗಿದ್ದೇನೆ.” ಹೊಸ ಸಭೆಗೆ ಹೋದದರಿಂದ ಯಾವ ಸ್ನೇಹಿತರನ್ನೂ ಕಳಕೊಂಡಿಲ್ಲ ಎಂದು ಆ್ಯಲೆನ್‌ಗೆ ಅನಿಸುತ್ತದೆ. ಏಕೆಂದರೆ ಅವರಿಗೆ ಹೊಸ ಸ್ನೇಹಿತರು ಸಿಕ್ಕಿದ್ದಾರೆ. ಇವರು ಬಹುಶಃ ಜೀವನಪೂರ್ತಿ ಅವರ ಸ್ನೇಹಿತರಾಗಿರುವರು.

^ ಪ್ಯಾರ. 2 ಕೆಲವು ಹೆಸರುಗಳನ್ನು ಬದಲಾಯಿಸಲಾಗಿದೆ.

^ ಪ್ಯಾರ. 12 Taken from the HOLY BIBLE: Kannada EASY-TO-READ VERSION © 1997 by World Bible Translation Center, Inc. and used by permission.