ವಾಚಕರಿಂದ ಪ್ರಶ್ನೆಗಳು
ಯೇಸು ತಾನು ಸಾಯುವ ಹಿಂದಿನ ರಾತ್ರಿ ತಿಳಿಸಿದ ಉಪಕಾರಿಗಳು ಯಾರು ಮತ್ತು ಅವರಿಗೆ ಯಾಕೆ ಆ ಬಿರುದನ್ನು ಕೊಡಲಾಗಿತ್ತು?
ಯೇಸು ತಾನು ಸಾಯುವ ಹಿಂದಿನ ರಾತ್ರಿ ತನ್ನ ಅಪೊಸ್ತಲರೊಟ್ಟಿಗೆ ಮಾತಾಡಿದನು.ಅಪೊಸ್ತಲರು ತಮ್ಮಲ್ಲಿ ಯಾರು ದೊಡ್ಡವರು ಎಂದು ಯೋಚಿಸಬಾರದು ಎಂದು ಯೇಸು ಹೇಳಿದನು. ಆತನು ಅವರಿಗೆ, “ಅನ್ಯಜನಾಂಗಗಳ ಅರಸರು ಅವರ ಮೇಲೆ ದಬ್ಬಾಳಿಕೆ ನಡೆಸುತ್ತಾರೆ ಮತ್ತು ಅವರ ಮೇಲೆ ಅಧಿಕಾರಹೊಂದಿರುವವರು ‘ಉಪಕಾರಿಗಳು’ ಎಂದು ಕರೆಯಲ್ಪಡುತ್ತಾರೆ. ಆದರೆ ನೀವು ಹಾಗಿರಬಾರದು” ಎಂದನು.—ಲೂಕ 22:25, 26.
ಯೇಸು ತಿಳಿಸಿದ ಆ ಉಪಕಾರಿಗಳು ಯಾರು? ಗ್ರೀಕ್ ಮತ್ತು ರೋಮನ್ ಸಾಮ್ರಾಜ್ಯದಲ್ಲಿ ಗಣ್ಯ ವ್ಯಕ್ತಿಗಳಿಗೆ ಮತ್ತು ಅಧಿಕಾರಿಗಳಿಗೆ ಎವರೆಟಿಸ್ ಅಂದರೆ ಉಪಕಾರಿಗಳು ಎಂಬ ಬಿರುದನ್ನು ಕೊಟ್ಟು ಗೌರವಿಸುವ ರೂಢಿ ಇತ್ತೆಂದು ಕೆತ್ತನೆಗಳು, ನಾಣ್ಯಗಳು ಮತ್ತು ಬರಹಗಳಿಂದ ಗೊತ್ತಾಗುತ್ತದೆ. ಆ ವ್ಯಕ್ತಿಗಳು ಜನರಿಗೆ ಪ್ರಯೋಜನ ತರುವ ಕೆಲಸಗಳನ್ನು ಮಾಡುತ್ತಿದ್ದುದರಿಂದ ಅವರಿಗೆ ಅಂಥ ಗೌರವ ಸಿಗುತ್ತಿತ್ತು.
ಅನೇಕ ರಾಜರು ‘ಉಪಕಾರಿಗಳು’ ಎಂಬ ಬಿರುದನ್ನು ಪಡೆದಿದ್ದರು. ಅವರಲ್ಲಿ ಈಜಿಪ್ಟಿನ ರಾಜರ ಹೆಸರು ಹೀಗಿದ್ದವು: ಮೂರನೇ ಟಾಲೆಮಿ ಮತ್ತು ಎಂಟನೇ ಟಾಲೆಮಿ. ರೋಮನ್ ರಾಜರಾದ ಜೂಲಿಯಸ್ ಸೀಸರ್ ಮತ್ತು ಅಗಸ್ಟಸ್ ಕೂಡ ಆ ಬಿರುದನ್ನು ಪಡೆದಿದ್ದರು. ಯೂದಾಯದ ರಾಜನಾಗಿದ್ದ ಮಹಾ ಹೆರೋದನೂ ಆ ಬಿರುದನ್ನು ಪಡೆದಿದ್ದನು. ಹೆರೋದನು ಒಂದು ಬರಗಾಲದ ಸಮಯದಲ್ಲಿ ತನ್ನ ಜನರಿಗಾಗಿ ಗೋದಿಯನ್ನು ತರಿಸಿಕೊಡುವ ಮೂಲಕ ಮತ್ತು ಅಗತ್ಯವಿದ್ದವರಿಗೆ ಬಟ್ಟೆಬರೆ ಕೊಡುವ ಮೂಲಕ ಆ ಬಿರುದನ್ನು ದಕ್ಕಿಸಿಕೊಂಡಿರಬಹುದು.
ಜರ್ಮನಿಯ ಬೈಬಲ್ ವಿದ್ವಾಂಸರಾದ ಅಡಾಲ್ಫ್ ಡೈಸ್‌ಮಾನ್‌ರ ಪ್ರಕಾರ ಉಪಕಾರಿ ಎಂಬ ಬಿರುದು ಎಲ್ಲ ಕಡೆ ಸಾಮಾನ್ಯವಾಗಿತ್ತು. ಅವರು ಹೇಳಿದ್ದು: “[ಈ ಬಿರುದನ್ನು ಉಪಯೋಗಿಸುತ್ತಿದ್ದರು] ಎಂದು ಆರಾಮವಾಗಿ ಕಂಡುಹಿಡಿಯಬಹುದಿತ್ತು. ಯಾಕೆಂದರೆ ಆ ಬಿರುದು ಇರುವ ನೂರಾರು ಕೆತ್ತನೆಗಳು ತುಂಬ ಸುಲಭವಾಗಿ ಸಿಗುತ್ತಿದ್ದವು.”
ಹಾಗಾದರೆ ಯೇಸು ತನ್ನ ಶಿಷ್ಯರಿಗೆ “ನೀವು ಹಾಗಿರಬಾರದು” ಎಂದು ಯಾಕೆ ಹೇಳಿದನು? ತನ್ನ ಶಿಷ್ಯರು ಸಮಾಜ ಸೇವೆ ಮಾಡಬಾರದು ಅಂತ ಹೇಳಿದನಾ? ಅಂದರೆ ತಮ್ಮ ಸುತ್ತಮುತ್ತ ಇದ್ದ ಜನರಿಗೆ ಒಳ್ಳೇದು ಮಾಡುವುದು ಬೇಡ ಅಂತ ಹೇಳಿದನಾ? ಖಂಡಿತ ಇಲ್ಲ. ಆ ಗಣ್ಯ ವ್ಯಕ್ತಿಗಳು ಯಾವ ಉದ್ದೇಶದಿಂದ ಆ ಬಿರುದನ್ನು ಪಡೆಯಲು ಉದಾರತೆ ತೋರಿಸುತ್ತಿದ್ದರೋ ಅದು ಯೇಸುವಿಗೆ ಇಷ್ಟವಾಗಲಿಲ್ಲ.
ಯೇಸುವಿನ ಕಾಲದಲ್ಲಿ, ಶ್ರೀಮಂತ ವ್ಯಕ್ತಿಗಳು ತಮಗೆ ಒಳ್ಳೇ ಹೆಸರು ಬರಬೇಕೆಂದು ಅದ್ಧೂರಿ ಪ್ರದರ್ಶನಗಳು ಮತ್ತು ಕ್ರೀಡೆಗಳಿಗೆ ಕೈತುಂಬ ಹಣ ಕೊಡುತ್ತಿದ್ದರು, ಉದ್ಯಾನವನಗಳು ಮತ್ತು ದೇವಸ್ಥಾನಗಳನ್ನು ಕಟ್ಟಿಸುತ್ತಿದ್ದರು ಮತ್ತು ಇಂಥ ಅನೇಕ ಚಟುವಟಿಕೆಗಳನ್ನು ಬೆಂಬಲಿಸುತ್ತಿದ್ದರು. ಆದರೆ ಇದನ್ನೆಲ್ಲ ಜನರಿಂದ ಹೊಗಳಿಕೆ ಸಿಗಲಿಕ್ಕಾಗಿ, ಪ್ರಸಿದ್ಧರಾಗಲಿಕ್ಕಾಗಿ ಅಥವಾ ತಮಗೆ ಜನರು ಮತ ನೀಡಬೇಕೆನ್ನುವ ಉದ್ದೇಶದಿಂದ ಮಾಡುತ್ತಿದ್ದರು. ಒಂದು ಪುಸ್ತಕ ಏನು ಹೇಳುತ್ತದೆಂದರೆ, “ಅಂಥವರಲ್ಲಿ ಕೆಲವರು ನಿಜವಾಗಲೂ ಉದಾರಿಗಳಾಗಿದ್ದರೂ ಹೆಚ್ಚಿನವರು ರಾಜಕೀಯ ಲಾಭಕ್ಕಾಗಿ ಹೀಗೆ ಮಾಡುತ್ತಿದ್ದರು.” ತನ್ನ ಶಿಷ್ಯರು ಅಂಥ ಸ್ವಾರ್ಥ ಮನೋಭಾವವನ್ನು ಬೆಳೆಸಿಕೊಳ್ಳುವುದು ಯೇಸುವಿಗೆ ಇಷ್ಟವಿರಲಿಲ್ಲ.
ಸ್ವಲ್ಪ ವರ್ಷಗಳ ನಂತರ ಅಪೊಸ್ತಲ ಪೌಲನು ಇದೇ ಪ್ರಾಮುಖ್ಯ ಸತ್ಯವನ್ನು ಒತ್ತಿಹೇಳಿದನು. ಬೇರೆಯವರಿಗೆ ಉದಾರವಾಗಿ ಕೊಡುವುದರಲ್ಲಿ ಸರಿಯಾದ ಉದ್ದೇಶ ಇರಬೇಕೆಂದು ಹೇಳಿದನು. ಆತನು ಕೊರಿಂಥದಲ್ಲಿದ್ದ ತನ್ನ ಜೊತೆ ವಿಶ್ವಾಸಿಗಳಿಗೆ ಹೀಗೆ ಬರೆದನು: “ಪ್ರತಿಯೊಬ್ಬನು ಒಲ್ಲದ ಮನಸ್ಸಿನಿಂದಾಗಲಿ ಒತ್ತಾಯದಿಂದಾಗಲಿ ಮಾಡದೆ ತನ್ನ ಹೃದಯದಲ್ಲಿ ನಿರ್ಣಯಿಸಿಕೊಂಡಿರುವ ಪ್ರಕಾರವೇ ಮಾಡಲಿ; ಏಕೆಂದರೆ ಸಂತೋಷದಿಂದ ಕೊಡುವವನನ್ನು ದೇವರು ಪ್ರೀತಿಸುತ್ತಾನೆ.”—2 ಕೊರಿಂ. 9:7.