ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ನಿನ್ನ ಸತ್ಯದಲ್ಲಿ ನಡೆಯುವೆನು’

‘ನಿನ್ನ ಸತ್ಯದಲ್ಲಿ ನಡೆಯುವೆನು’

“ಯೆಹೋವನೇ, ನಿನ್ನ ಮಾರ್ಗವನ್ನು ನನಗೆ ಬೋಧಿಸು; ನಿನ್ನ ಸತ್ಯತೆಯನ್ನು ನನ್ನ ದೃಷ್ಟಿಯಲ್ಲೇ ಇಟ್ಟುಕೊಂಡು ನಡೆಯುವೆನು.”—ಕೀರ್ತ. 86:11.

ಗೀತೆಗಳು: 26, 101

1-3. (ಎ) ಬೈಬಲ್‌ ಸತ್ಯದ ಬಗ್ಗೆ ನಮಗೆ ಹೇಗನಿಸಬೇಕು? ಉದಾಹರಣೆ ಕೊಡಿ. (ಲೇಖನದ ಆರಂಭದ ಚಿತ್ರಗಳನ್ನು ನೋಡಿ.) (ಬಿ) ಈ ಲೇಖನದಲ್ಲಿ ಏನು ಚರ್ಚಿಸಲಿದ್ದೇವೆ?

ಈಗ ಜನರಿಗೆ ಅಂಗಡಿಯಿಂದ ವಸ್ತುಗಳನ್ನು ಖರೀದಿ ಮಾಡಿ ಆಮೇಲೆ ವಾಪಸ್ಸು ಕೊಡುವುದೇ ಒಂದು ಕೆಲಸವಾಗಿ ಬಿಟ್ಟಿದೆ. ಆನ್‌ಲೈನ್‌ನಲ್ಲಿ ಖರೀದಿ ಮಾಡುವ ಜನರಿಗಂತೂ ಇದೊಂದು ಚಟವಾಗಿ ಬಿಟ್ಟಿದೆ. ವಸ್ತುವನ್ನು ಕೊಂಡುಕೊಂಡ ಮೇಲೆ ಅದು ಅವರು ನೆನಸಿದಷ್ಟು ಚೆನ್ನಾಗಿಲ್ಲ ಅಂತನೋ ಅಥವಾ ಅದರಲ್ಲಿ ಏನೋ ಸರಿಯಿಲ್ಲ ಅಂತನೋ ಜನರು ಹೀಗೆ ಮಾಡುತ್ತಾರೆ. ಅವರು ‘ಇದನ್ನು ಬದಲಾಯಿಸಿಕೊಡಿ ಅಥವಾ ಹಣ ವಾಪಸ್‌ ಕೊಡಿ’ ಎಂದು ಕೇಳುತ್ತಾರೆ.

2 ಆದರೆ ಬೈಬಲ್‌ ಸತ್ಯವನ್ನು ಈ ರೀತಿ ಮಾಡಬಾರದು. ಅದನ್ನು ‘ಕೊಂಡುಕೊಂಡ’ ಮೇಲೆ ಅಂದರೆ ಸತ್ಯ ಕಲಿತ ಮೇಲೆ ಅದನ್ನು ‘ಮಾರಿಬಿಡಬಾರದು’ ಅಂದರೆ ಸತ್ಯದಿಂದ ದೂರಹೋಗಬಾರದು. (ಜ್ಞಾನೋಕ್ತಿ 23:23 ಓದಿ; 1 ತಿಮೊ. 2:4) ಹಿಂದಿನ ಲೇಖನದಲ್ಲಿ ನಾವು ಚರ್ಚಿಸಿದಂತೆ, ಸತ್ಯ ಕಲಿಯಕ್ಕೋಸ್ಕರ ನಾವು ತುಂಬ ಸಮಯ ಕೊಟ್ವಿ. ನಮ್ಮಲ್ಲಿ ಕೆಲವರು ಕೈತುಂಬ ಸಂಬಳ ಬರುತ್ತಿದ್ದ ಕೆಲಸವನ್ನು ತ್ಯಾಗಮಾಡಿದ್ದೇವೆ ಮತ್ತು ಬೇರೆಯವರ ಜೊತೆ ಇದ್ದ ಸಂಬಂಧವನ್ನು ಕಳಕೊಂಡಿದ್ದೇವೆ. ನಾವು ನಮ್ಮ ಯೋಚನೆ ಮತ್ತು ನಡತೆಯನ್ನು ಬದಲಾಯಿಸಿಕೊಂಡೆವು. ಯೆಹೋವನಿಗೆ ಇಷ್ಟವಾಗದ ಸಂಪ್ರದಾಯ ಮತ್ತು ಪದ್ಧತಿಗಳನ್ನು ಬಿಟ್ಟುಬಿಟ್ಟೆವು. ಆದರೆ ಸತ್ಯ ಕಲಿತಿದ್ದರಿಂದ ಪಡಕೊಂಡ ಆಶೀರ್ವಾದಗಳ ಮುಂದೆ ನಾವು ತ್ಯಾಗಮಾಡಿದ ವಿಷಯಗಳು ಏನೇನೂ ಅಲ್ಲ ಎಂದು ನಮಗೆ ಗೊತ್ತು.

3 ಯೇಸು ಒಂದು ದೃಷ್ಟಾಂತದಲ್ಲಿ ಒಳ್ಳೇ ಮುತ್ತುಗಳನ್ನು ಹುಡುಕಿಕೊಂಡು ಹೋಗುವ ಒಬ್ಬ ವ್ಯಾಪಾರಿಯ ಬಗ್ಗೆ ಹೇಳುತ್ತಾನೆ. ಅಂಥ ಒಂದು ಮುತ್ತನ್ನು ನೋಡಿದಾಗ ಕೂಡಲೇ ತನ್ನ ಹತ್ತಿರ ಇರುವುದನ್ನೆಲ್ಲ ಮಾರಿ ಆ ಮುತ್ತನ್ನು ಕೊಂಡುಕೊಳ್ಳುತ್ತಾನೆ. ಆ ಮುತ್ತು ದೇವರ ರಾಜ್ಯದ ಸತ್ಯವನ್ನು ಸೂಚಿಸುತ್ತದೆ. ಸತ್ಯವನ್ನು ಹುಡುಕಿ ಕಂಡುಕೊಳ್ಳುವವರು ಸತ್ಯಕ್ಕೆ ಎಷ್ಟು ಬೆಲೆ ಕೊಡುತ್ತಾರೆ ಎಂದು ಯೇಸು ಈ ದೃಷ್ಟಾಂತದ ಮೂಲಕ ತೋರಿಸಿದನು. (ಮತ್ತಾ. 13:45, 46) ನಾವು ಸತ್ಯ ಕಲಿತಾಗ ಅಂದರೆ ದೇವರ ರಾಜ್ಯದ ಸತ್ಯ ಮತ್ತು ಇನ್ನೂ ಹಲವಾರು ಬೈಬಲ್‌ ಸತ್ಯಗಳನ್ನು ಕಲಿತಾಗ ಅದಕ್ಕಾಗಿ ಏನು ಬೇಕಾದರೂ ತ್ಯಾಗಮಾಡಲು ಸಿದ್ಧರಿದ್ದೆವು. ನಮ್ಮ ದೃಷ್ಟಿಯಲ್ಲಿ ಸತ್ಯಕ್ಕೆ ಇನ್ನೂ ಬೆಲೆ ಇರುವುದಾದರೆ ಅದನ್ನು ಯಾವತ್ತೂ ಬಿಟ್ಟುಹೋಗಲ್ಲ. ಆದರೆ ದುಃಖದ ವಿಷಯ ಏನೆಂದರೆ, ಕೆಲವರ ದೃಷ್ಟಿಯಲ್ಲಿ ಸತ್ಯಕ್ಕಿರುವ ಮೌಲ್ಯ ಕಡಿಮೆಯಾಗಿದೆ ಮತ್ತು ಅವರು ಸತ್ಯವನ್ನು ಬಿಟ್ಟು ದೂರಹೋಗಿದ್ದಾರೆ. ನಾವು ಯಾವತ್ತೂ ಹಾಗೆ ಮಾಡಬಾರದು. ‘ಸತ್ಯದಲ್ಲಿ ನಡೆಯುತ್ತಾ ಇರಿ’ ಎಂದು ಬೈಬಲ್‌ ಹೇಳುವ ಬುದ್ಧಿವಾದವನ್ನು ಪಾಲಿಸಬೇಕು. (3 ಯೋಹಾನ 2-4 ಓದಿ.) ಸತ್ಯದಲ್ಲಿ ನಡೆಯುವುದು ಅಂದರೆ ಸತ್ಯಕ್ಕೆ ನಮ್ಮ ಮನಸ್ಸಲ್ಲಿ ಮೊದಲ ಸ್ಥಾನ ಕೊಡಬೇಕು ಮತ್ತು ಅದಕ್ಕೆ ತಕ್ಕಂತೆ ಜೀವಿಸಬೇಕು. ಆದರೆ ಒಬ್ಬ ವ್ಯಕ್ತಿ ಯಾಕೆ ಮತ್ತು ಹೇಗೆ ಸತ್ಯವನ್ನು ‘ಮಾರಿಬಿಡಬಹುದು’ ಅಥವಾ ಸತ್ಯವನ್ನು ಬಿಟ್ಟುಹೋಗಬಹುದು? ಈ ತಪ್ಪನ್ನು ಮಾಡದಿರಲು ನಾವೇನು ಮಾಡಬೇಕು? ‘ಸತ್ಯದಲ್ಲಿ ನಡೆಯುತ್ತಾ ಇರಲು’ ನಾವೇನು ಮಾಡಬೇಕು?

ಕೆಲವರು ಯಾಕೆ ಮತ್ತು ಹೇಗೆ ಸತ್ಯವನ್ನು ‘ಮಾರುತ್ತಾರೆ’?

4. ಯೇಸುವಿನ ಕಾಲದಲ್ಲಿ ಕೆಲವರು ಸತ್ಯದಲ್ಲಿ ನಡೆಯುವುದನ್ನು ಯಾಕೆ ನಿಲ್ಲಿಸಿಬಿಟ್ಟರು?

4 ಯೇಸುವಿನ ಕಾಲದಲ್ಲಿ ಸತ್ಯವನ್ನು ಸ್ವೀಕರಿಸಿದ್ದ ಕೆಲವರು ಅದರಲ್ಲಿ ನಡೆಯುವುದನ್ನು ನಿಲ್ಲಿಸಿಬಿಟ್ಟರು. ಉದಾಹರಣೆಗೆ ಯೇಸು ತುಂಬ ಜನರಿಗೆ ಅದ್ಭುತವಾಗಿ ಊಟ ಕೊಟ್ಟ ಮೇಲೆ ಆ ಜನರು ಆತನನ್ನು ಗಲಿಲಾಯ ಸಮುದ್ರದ ಇನ್ನೊಂದು ತೀರದ ವರೆಗೂ ಹಿಂಬಾಲಿಸುತ್ತಾ ಬಂದರು. ಆಗ ಆತನು ಅವರಿಗೆ “ನೀವು ಮನುಷ್ಯಕುಮಾರನ ಮಾಂಸವನ್ನು ತಿಂದು ಅವನ ರಕ್ತವನ್ನು ಕುಡಿದ ಹೊರತು ನಿಮ್ಮಲ್ಲಿ ಜೀವವಿರುವುದಿಲ್ಲ” ಎಂದು ಹೇಳಿದನು. ಈ ಮಾತು ಅವರಿಗೆ ಹಿಡಿಸಲಿಲ್ಲ. ಆತನ ಮಾತಿನ ಅರ್ಥವೇನು ಎಂದು ಕೇಳಿ ತಿಳುಕೊಳ್ಳುವ ಬದಲು “ಇದು ಅಸಹನೀಯವಾದ ಮಾತು; ಇದನ್ನು ಯಾರು ತಾನೇ ಕೇಳಿಸಿಕೊಳ್ಳುವರು?” ಎಂದು ಹೇಳಿ “ಅವನ ಶಿಷ್ಯರಲ್ಲಿ ಅನೇಕರು ತಾವು ಬಿಟ್ಟುಬಂದಿದ್ದ ಕಾರ್ಯಗಳಿಗೆ ಹಿಂದಿರುಗಿ ಅವನೊಂದಿಗೆ ಸಂಚಾರಮಾಡುವುದನ್ನು ನಿಲ್ಲಿಸಿದರು.”—ಯೋಹಾ. 6:53-66.

5, 6. (ಎ) ಇಂದು ಕೆಲವರು ಬೇಕುಬೇಕೆಂದು ಸತ್ಯವನ್ನು ಬಿಟ್ಟುಹೋಗಲು ಕಾರಣವೇನು? (ಬಿ) ಇನ್ನು ಕೆಲವರು ಹೇಗೆ ಸತ್ಯದಿಂದ ದೂರಹೋಗಬಹುದು?

5 ಅದೇ ರೀತಿ ಇಂದು ಕೂಡ ಕೆಲವರು ಸತ್ಯವನ್ನು ಬಿಟ್ಟುಹೋಗಿದ್ದಾರೆ. ಯಾಕೆ? ಅವರಿಗೆ ಬೈಬಲ್‌ ವಚನವೊಂದರ ತಿಳುವಳಿಕೆಯಲ್ಲಿ ಆದ ಹೊಂದಾಣಿಕೆ ಇಷ್ಟವಾಗಿರಲಿಕ್ಕಿಲ್ಲ ಅಥವಾ ಜವಾಬ್ದಾರಿಯುತ ಸ್ಥಾನದಲ್ಲಿರುವ ಒಬ್ಬ ಸಹೋದರ ಹೇಳಿದ್ದು ಅಥವಾ ಮಾಡಿದ್ದು ಇಷ್ಟವಾಗಿರಲಿಕ್ಕಿಲ್ಲ. ಯಾರಾದರೂ ಅವರಿಗೆ ಬೈಬಲಿಂದ ಬುದ್ಧಿವಾದ ಹೇಳಿದ್ದರಿಂದ ಮನಸ್ಸಿಗೆ ನೋವಾಗಿರಬಹುದು. ಸಭೆಯಲ್ಲಿ ಸಹೋದರ ಸಹೋದರಿಯರ ಜೊತೆ ದೊಡ್ಡ ಮನಸ್ತಾಪ ಆಗಿರಬಹುದು. ಧರ್ಮಭ್ರಷ್ಟರ ಅಥವಾ ಸತ್ಯವನ್ನು ವಿರೋಧಿಸುವ ಬೇರೆ ಜನರ ಸುಳ್ಳು ಬೋಧನೆಗಳನ್ನು ಕೇಳಿಸಿಕೊಂಡಿರಬಹುದು. ಈ ಕೆಲವು ಕಾರಣಗಳಿಂದಾಗಿ ಕೆಲವರು ಬೇಕುಬೇಕೆಂದು ಯೆಹೋವನಿಂದ ಮತ್ತು ಸಭೆಯಿಂದ ದೂರಹೋಗಿದ್ದಾರೆ. (ಇಬ್ರಿ. 3:12-14) ಹೀಗೆ ಮಾಡುವ ಬದಲು ಅವರು ಅಪೊಸ್ತಲ ಪೇತ್ರನನ್ನು ಅನುಕರಿಸಬೇಕಿತ್ತು. ಯೇಸುವಿನ ಮಾತನ್ನು ಕೇಳಿ ಕೆಲವರು ಬಿಟ್ಟುಹೋದಾಗ ಆತನು ತನ್ನ ಅಪೊಸ್ತಲರಿಗೆ ‘ನೀವು ಸಹ ಹೋಗಲು ಬಯಸುತ್ತೀರಾ?’ ಎಂದು ಕೇಳಿದನು. ಆಗ ಪೇತ್ರನು “ಕರ್ತನೇ, ನಾವು ಯಾರ ಬಳಿಗೆ ಹೋಗುವುದು? ನಿತ್ಯಜೀವದ ಮಾತುಗಳು ನಿನ್ನಲ್ಲಿವೆ” ಎಂದನು.—ಯೋಹಾ. 6:67-69.

6 ಇನ್ನು ಕೆಲವರು ನಿಧಾನವಾಗಿ ಸತ್ಯವನ್ನು ಬಿಟ್ಟುಹೋಗಿದ್ದಾರೆ. ಅವರು ದೂರಹೋಗುತ್ತಿರುವುದು ಬಹುಶಃ ಅವರಿಗೇ ಗೊತ್ತಾಗಿರಲ್ಲ. ಇಂಥವರು ದಡದಿಂದ ನಿಧಾನವಾಗಿ ತೇಲಿಹೋಗುವ ದೋಣಿಯಂತೆ ಇದ್ದಾರೆ. ನಾವು “ದೂರ ತೇಲಿಹೋಗದಂತೆ” ಎಚ್ಚರವಹಿಸಬೇಕು ಎಂದು ಬೈಬಲ್‌ ಹೇಳುತ್ತದೆ. (ಇಬ್ರಿ. 2:1) ನಿಧಾನವಾಗಿ ಸತ್ಯದಿಂದ ದೂರಹೋಗುವ ವ್ಯಕ್ತಿ ಸತ್ಯವನ್ನು ಬಿಟ್ಟುಹೋಗಬೇಕು ಎಂದು ತೀರ್ಮಾನ ಮಾಡಿರಲ್ಲ. ಆದರೆ ಯೆಹೋವನ ಜೊತೆ ಅವನಿಗಿರುವ ಸಂಬಂಧ ಬಲಹೀನವಾಗುವಂತೆ ಬಿಡುತ್ತಾನೆ. ಆಮೇಲೆ ಆ ಸಂಬಂಧ ಪೂರ್ತಿಯಾಗಿ ಕಡಿದುಹೋಗಬಹುದು. ಈ ತಪ್ಪನ್ನು ನಾವು ಮಾಡದಿರಲು ಏನು ಮಾಡಬೇಕು?

ನಾವು ಸತ್ಯವನ್ನು ಮಾರದಿರಲು ಏನು ಮಾಡಬೇಕು?

7. ಸತ್ಯವನ್ನು ಮಾರದಿರಲು ನಾವು ಏನು ಮಾಡಬೇಕು?

7 ಸತ್ಯದಲ್ಲಿ ನಡೆಯುತ್ತಾ ಇರಬೇಕೆಂದರೆ ಯೆಹೋವ ದೇವರು ಹೇಳುವ ಎಲ್ಲಾ ವಿಷಯಗಳನ್ನು ಕೇಳಿ ಅದಕ್ಕೆ ತಕ್ಕಂತೆ ನಡೆಯಬೇಕು. ನಮ್ಮ ಜೀವನದಲ್ಲಿ ಸತ್ಯಕ್ಕೆ ಪ್ರಮುಖ ಸ್ಥಾನ ಕೊಡಬೇಕು ಮತ್ತು ಬೈಬಲ್‌ ತತ್ವಗಳನ್ನು ಪ್ರತಿಯೊಂದು ವಿಷಯದಲ್ಲಿ ಪಾಲಿಸಬೇಕು. ರಾಜ ದಾವೀದ ಪ್ರಾರ್ಥನೆಯಲ್ಲಿ “ನಿನ್ನ ಸತ್ಯತೆಯನ್ನು ನನ್ನ ದೃಷ್ಟಿಯಲ್ಲೇ ಇಟ್ಟುಕೊಂಡು ನಡೆಯುವೆನು” ಎಂದು ಯೆಹೋವನಿಗೆ ಮಾತು ಕೊಟ್ಟನು. (ಕೀರ್ತ. 86:11) ದಾವೀದನು ಸತ್ಯದಲ್ಲಿ ನಡೆಯುತ್ತಾ ಇರುವ ತೀರ್ಮಾನ ಮಾಡಿದ್ದನು. ನಾವೂ ಆ ತೀರ್ಮಾನವನ್ನು ಮಾಡಬೇಕು. ನಾವು ಸತ್ಯದಲ್ಲಿ ನಡೆಯದಿದ್ದರೆ ಸತ್ಯ ಕಲಿಯಲು ನಾವು ಏನನ್ನು ಬಿಟ್ಟುಬಂದೆವೋ ಅದರ ಕಡೆ ಮನಸ್ಸು ಹೋಗಬಹುದು, ಅದನ್ನು ಪುನಃ ಪಡೆಯಲು ಪ್ರಯತ್ನಿಸಬಹುದು. ಬೈಬಲ್‌ ಕಲಿಸುವ ಯಾವ ವಿಷಯಗಳನ್ನು ಪಾಲಿಸಬೇಕು, ಯಾವುದನ್ನು ಪಾಲಿಸುವುದು ಬೇಡ ಎಂದು ನಾವು ಆಯ್ಕೆಮಾಡುವಂತಿಲ್ಲ. “ಸತ್ಯವನ್ನು ಪೂರ್ಣವಾಗಿ” ಸ್ವೀಕರಿಸಬೇಕು. (ಯೋಹಾ. 16:13) ಸತ್ಯ ಕಲಿತು ಅದನ್ನು ಅನ್ವಯಿಸಿಕೊಳ್ಳಲು ನಾವು ಐದು ವಿಷಯಗಳನ್ನು ಬಿಟ್ಟುಕೊಟ್ಟಿರಬಹುದು ಎಂದು ಹಿಂದಿನ ಲೇಖನದಲ್ಲಿ ಕಲಿತೆವು. ಆ ವಿಷಯಗಳ ಹಿಂದೆ ಪುನಃ ಹೋಗದಿರಲು ಏನು ಮಾಡಬೇಕೆಂದು ಈಗ ಕಲಿಯೋಣ.—ಮತ್ತಾ. 6:19.

8. ಒಬ್ಬ ಕ್ರೈಸ್ತನು ಸಮಯವನ್ನು ಬಳಸುವ ರೀತಿಯಿಂದಾಗಿ ತನಗೇ ಗೊತ್ತಿಲ್ಲದೆ ಹೇಗೆ ಸತ್ಯದಿಂದ ದೂರಹೋಗಬಹುದು? ಉದಾಹರಣೆ ಕೊಡಿ.

8 ಸಮಯ. ನಮಗೇ ಗೊತ್ತಿಲ್ಲದೆ ನಾವು ಸತ್ಯದಿಂದ ದೂರಹೋಗಬಾರದೆಂದರೆ ನಮ್ಮ ಸಮಯವನ್ನು ಪ್ರಾಮುಖ್ಯವಾದ ವಿಷಯಗಳಿಗೆ ಉಪಯೋಗಿಸುತ್ತಾ ಇರಬೇಕು. ನಾವು ಎಚ್ಚರವಹಿಸದಿದ್ದರೆ ಮನರಂಜನೆಯಲ್ಲಿ, ಹವ್ಯಾಸಗಳಲ್ಲಿ, ಇಂಟರ್‌ನೆಟ್‌ ಅಥವಾ ಟಿವಿ ನೋಡುವುದರಲ್ಲಿ ತುಂಬ ಸಮಯ ಹೋಗಿಬಿಡುತ್ತದೆ. ಇವುಗಳಿಗೆ ಸಮಯ ಕೊಡುವುದು ತಪ್ಪಲ್ಲ. ಆದರೆ ವೈಯಕ್ತಿಕ ಅಧ್ಯಯನ ಮಾಡಲು ಮತ್ತು ಸಾರಲು ಉಪಯೋಗಿಸುತ್ತಿದ್ದ ಸಮಯವನ್ನೂ ಆ ವಿಷಯಗಳು ತಿಂದುಹಾಕಬಹುದು. ಎಮಾ ಎಂಬ ಸಹೋದರಿಗೆ ಹೀಗೇ ಆಯಿತು. * ಚಿಕ್ಕವಯಸ್ಸಿಂದಲೇ ಅವಳಿಗೆ ಕುದುರೆ ಅಂದರೆ ಪಂಚಪ್ರಾಣ. ಅವಕಾಶ ಸಿಕ್ಕಿದಾಗೆಲ್ಲ ಕುದುರೆ ಸವಾರಿ ಮಾಡುತ್ತಿದ್ದಳು. ಆದರೆ ಇದರಲ್ಲಿ ತಾನು ತುಂಬ ಸಮಯ ಹಾಳುಮಾಡುತ್ತಾ ಇದ್ದೇನೆ ಎಂದು ಅವಳ ಮನಸ್ಸು ಚುಚ್ಚಿತು. ತನ್ನನ್ನು ಬದಲಾಯಿಸಿಕೊಳ್ಳಬೇಕು ಎಂದು ಅವಳು ತೀರ್ಮಾನ ಮಾಡಿದಳು. ಸಾಹಸ ಪ್ರದರ್ಶನಗಳಲ್ಲಿ ಕುದುರೆ ಸವಾರಿ ಮಾಡುತ್ತಿದ್ದ ಕೋರೀ ವೆಲ್ಸ್‌ ಎಂಬ ಸಹೋದರಿ ತಮ್ಮನ್ನು ಹೇಗೆ ಬದಲಾಯಿಸಿಕೊಂಡರು ಎಂದು ನೋಡಿ ಪ್ರೋತ್ಸಾಹ ಪಡೆದಳು. * ಈಗ ಎಮಾ ಯೆಹೋವನ ಸೇವೆಯಲ್ಲಿ ಹೆಚ್ಚು ಸಮಯ ಕಳೆಯುತ್ತಾಳೆ. ಯೆಹೋವನ ಸೇವಕರಾಗಿರುವ ತನ್ನ ಕುಟುಂಬದ ಸದಸ್ಯರು ಮತ್ತು ಸ್ನೇಹಿತರ ಜೊತೆ ಸಮಯ ಕಳೆಯುತ್ತಾಳೆ. ಇದರಿಂದ ಯೆಹೋವ ದೇವರಿಗೆ ತುಂಬ ಹತ್ತಿರವಾಗಿದ್ದಾಳೆ. ತನ್ನ ಸಮಯವನ್ನು ಒಳ್ಳೇ ವಿಷಯಗಳಿಗಾಗಿ ಬಳಸುತ್ತಾ ಇದ್ದೇನೆ ಎಂಬ ನೆಮ್ಮದಿ ಅವಳಿಗಿದೆ.

9. ಲೌಕಿಕ ವಿಷಯಗಳು ಹೇಗೆ ನಮಗೆ ಮುಖ್ಯ ಆಗಿಬಿಡುವ ಸಾಧ್ಯತೆ ಇದೆ?

9 ಲೌಕಿಕ ಆಸೆಗಳು. ನಾವು ಸತ್ಯದಲ್ಲಿ ನಡೆಯುತ್ತಾ ಇರಬೇಕೆಂದರೆ ಲೌಕಿಕ ವಿಷಯಗಳಿಗೆ ಅಗತ್ಯಕ್ಕಿಂತ ಹೆಚ್ಚಿನ ಗಮನ ಕೊಡಬಾರದು. ಸತ್ಯ ಕಲಿತಾಗ ನಮಗೆ ಲೌಕಿಕ ಆಸೆಗಳಿಗಿಂತ ಯೆಹೋವನ ಸೇವೆ ತುಂಬ ಮುಖ್ಯ ಎಂದು ಮನವರಿಕೆ ಆಯಿತು ಮತ್ತು ಸತ್ಯಕ್ಕೋಸ್ಕರ ಲೋಕದ ಆಸೆಗಳನ್ನು ಸಂತೋಷದಿಂದ ಬಿಟ್ಟುಕೊಟ್ಟೆವು. ಆದರೆ ಸಮಯ ಹೋದ ಹಾಗೆ ಬೇರೆಯವರು ಹೊಸಹೊಸ ಎಲೆಕ್ಟ್ರಾನಿಕ್‌ ಸಾಧನಗಳನ್ನು ಅಥವಾ ಬೇರೆ ವಸ್ತುಗಳನ್ನು ಖರೀದಿ ಮಾಡಿ ಆನಂದಿಸುತ್ತಿರುವುದನ್ನು ನೋಡುವಾಗ ನಮಗೂ ಆಸೆ ಆಗಬಹುದು. ನಮ್ಮ ಹತ್ತಿರ ಇರುವುದರಲ್ಲಿ ತೃಪ್ತಿ ಪಡದೆ ಇನ್ನೂ ಬೇಕು ಎಂಬ ಭಾವನೆ ಬರಬಹುದು. ಯೆಹೋವನ ಸೇವೆಯ ಮೇಲೆ ಇದ್ದ ನಮ್ಮ ಗಮನ ವಸ್ತುಗಳನ್ನು ಖರೀದಿಸುವುದರ ಮೇಲೆ ಹೋಗಬಹುದು. ಮೊದಲನೇ ಶತಮಾನದ ದೇಮ ಏನು ಮಾಡಿದನು ನೋಡಿ. ಅವನು “ಸದ್ಯದ ವಿಷಯಗಳ ವ್ಯವಸ್ಥೆಯನ್ನು” ಎಷ್ಟು ಪ್ರೀತಿಸಿದನೆಂದರೆ ಅಪೊಸ್ತಲ ಪೌಲನ ಜೊತೆ ಸೇವೆ ಮಾಡುವ ನೇಮಕವನ್ನೇ ಬಿಟ್ಟುಹೋದನು. (2 ತಿಮೊ. 4:10) ಅವನು ದೇವರ ಸೇವೆಗಿಂತ ಲೌಕಿಕ ವಿಷಯಗಳನ್ನು ಹೆಚ್ಚು ಪ್ರೀತಿಸಿರಬೇಕು. ಅಥವಾ ಪೌಲನ ಜೊತೆ ಸೇವೆ ಮಾಡಲಿಕ್ಕಾಗಿ ಹೆಚ್ಚಿನ ತ್ಯಾಗಗಳನ್ನು ಮಾಡಲು ಮನಸ್ಸಿಲ್ಲದೆ ಹೋಗಿರಬೇಕು. ಇದರಿಂದ ನಾವು ಏನು ಕಲಿಯಬಹುದು? ಸತ್ಯ ಕಲಿಯುವ ಮುಂಚೆ ನಾವು ಲೌಕಿಕ ವಿಷಯಗಳನ್ನು ತುಂಬ ಪ್ರೀತಿಸಿರಬಹುದು. ಈಗ ನಾವು ಎಚ್ಚರವಹಿಸದಿದ್ದರೆ ಆ ಪ್ರೀತಿ ಪುನಃ ಬೆಳೆದು ಸತ್ಯದ ಮೇಲೆ ನಮಗಿರುವ ಪ್ರೀತಿಯನ್ನು ಹೊಸಕಿ ಹಾಕಿಬಿಡುತ್ತದೆ.

10. ನಾವು ಯಾವ ವಿಷಯದಲ್ಲಿ ಎಚ್ಚರ ವಹಿಸಬೇಕು?

10 ಸಂಬಂಧಗಳು. ನಾವು ಸತ್ಯದಲ್ಲಿ ನಡೆಯುತ್ತಾ ಇರಬೇಕೆಂದರೆ ಯೆಹೋವನನ್ನು ಆರಾಧಿಸದೆ ಇರುವವರು ನಮ್ಮ ಮೇಲೆ ಪ್ರಭಾವ ಬೀರಲು ಬಿಡಬಾರದು. ನಾವು ಸತ್ಯ ಕಲಿತಾಗ ಯೆಹೋವನ ಆರಾಧಕರಲ್ಲದ ನಮ್ಮ ಬಂಧು-ಮಿತ್ರರ ಜೊತೆ ಇದ್ದ ಸಂಬಂಧ ಹಾಳಾಗಿರಬಹುದು. ನಾವು ಹೊಸದಾಗಿ ಕಲಿತ ವಿಷಯಗಳನ್ನು ಅವರಲ್ಲಿ ಕೆಲವರು ಗೌರವಿಸಿದರೂ ಇನ್ನು ಕೆಲವರು ವಿರೋಧ ಮಾಡಿರಬಹುದು. (1 ಪೇತ್ರ 4:4) ಆದರೂ ನಾವು ಅವರ ಜೊತೆ ಚೆನ್ನಾಗಿರಲು, ದಯೆಯಿಂದ ನಡಕೊಳ್ಳಲು ನಮ್ಮ ಕೈಲಾದ ಪ್ರಯತ್ನ ಮಾಡುತ್ತೇವೆ. ಆದರೆ ಅವರನ್ನು ಮೆಚ್ಚಿಸಬೇಕೆಂದು ನಾವು ಯೆಹೋವನ ಮಟ್ಟಗಳನ್ನು ಬಿಟ್ಟುಕೊಡಬಾರದು. 1 ಕೊರಿಂಥ 15:33 ಕೊಡುವ ಎಚ್ಚರಿಕೆಯನ್ನೂ ನಾವು ಮನಸ್ಸಲ್ಲಿಟ್ಟು ಯೆಹೋವನನ್ನು ಪ್ರೀತಿಸುವವರನ್ನು ಮಾತ್ರ ಆಪ್ತ ಸ್ನೇಹಿತರಾಗಿ ಮಾಡಿಕೊಳ್ಳಬೇಕು.

11. ಕೆಟ್ಟ ಯೋಚನೆ ಮತ್ತು ನಡತೆಯಿಂದ ದೂರವಿರಲು ನಾವೇನು ಮಾಡಬೇಕು?

11 ಕೆಟ್ಟ ಯೋಚನೆ ಮತ್ತು ನಡತೆ. ನಾವು ಸತ್ಯದಲ್ಲಿ ನಡೆಯುತ್ತಾ ಇರಬೇಕೆಂದರೆ ಯೆಹೋವನ ದೃಷ್ಟಿಯಲ್ಲಿ ಪವಿತ್ರರಾಗಿರಬೇಕು ಅಥವಾ ಶುದ್ಧರಾಗಿರಬೇಕು. (ಯೆಶಾ. 35:8; 1 ಪೇತ್ರ 1:14-16 ಓದಿ.) ನಾವು ಸತ್ಯ ಕಲಿತಾಗ ಬೈಬಲ್‌ ಮಟ್ಟಗಳನ್ನು ಪಾಲಿಸಲಿಕ್ಕಾಗಿ ಜೀವನದಲ್ಲಿ ಬದಲಾವಣೆಗಳನ್ನು ಮಾಡಿಕೊಂಡೆವು. ಕೆಲವರಂತೂ ದೊಡ್ಡ ಬದಲಾವಣೆಗಳನ್ನು ಮಾಡಿದರು. ಆದರೆ ನಾವು ಬಿಟ್ಟುಬಂದ ಅದೇ ಕೊಚ್ಚೆಗೆ ಪುನಃ ಕಾಲಿಡದಂತೆ ನಾವು ಎಚ್ಚರವಹಿಸಬೇಕು. ಅನೈತಿಕತೆಯಲ್ಲಿ ಒಳಗೂಡುವ ಪ್ರಲೋಭನೆ ಬಂದಾಗ ನಾವೇನು ಮಾಡಬೇಕು? ನಾವು ಪರಿಶುದ್ಧರಾಗಿರಲು ಯೆಹೋವನು ಏನು ಕೊಟ್ಟನೆಂದು ಯೋಚಿಸಬೇಕು. ಆತನು ತನ್ನ ಪ್ರಿಯ ಮಗನಾದ ಯೇಸು ಕ್ರಿಸ್ತನ ಜೀವವನ್ನೇ ಕೊಟ್ಟಿದ್ದಾನೆ. (1 ಪೇತ್ರ 1:18, 19) ನಾವು ಯೆಹೋವನ ದೃಷ್ಟಿಯಲ್ಲಿ ಶುದ್ಧರಾಗಿ ಇರಬೇಕೆಂದರೆ ಯೇಸುವಿನ ವಿಮೋಚನಾ ಮೌಲ್ಯ ಎಷ್ಟು ಅಮೂಲ್ಯವಾಗಿದೆ ಎನ್ನುವುದನ್ನು ಯಾವತ್ತೂ ಮರೆಯಬಾರದು.

12, 13. (ಎ) ಹಬ್ಬ-ಆಚರಣೆಗಳ ವಿಷಯದಲ್ಲಿ ನಾವು ಯಾಕೆ ಯೆಹೋವನ ದೃಷ್ಟಿಕೋನವನ್ನು ಇಟ್ಟುಕೊಳ್ಳಬೇಕು? (ಬಿ) ಮುಂದೆ ನಾವು ಏನು ಚರ್ಚಿಸಲಿದ್ದೇವೆ?

12 ದೇವರಿಗೆ ಇಷ್ಟವಾಗದ ಸಂಪ್ರದಾಯಗಳು ಮತ್ತು ಪದ್ಧತಿಗಳು. ನಮ್ಮ ಕುಟುಂಬದವರು, ಜೊತೆಗೆ ಕೆಲಸಮಾಡುವವರು, ಶಾಲೆಯಲ್ಲಿ ನಮ್ಮ ಜೊತೆ ಓದುವವರು ಅವರ ಹಬ್ಬ-ಆಚರಣೆಗಳಿಗೆ ನಮ್ಮನ್ನು ಕರೆಯುತ್ತಾರೆ. ಯೆಹೋವನಿಗೆ ಇಷ್ಟವಾಗದ ಸಂಪ್ರದಾಯಗಳಲ್ಲಿ ಮತ್ತು ಹಬ್ಬಗಳಲ್ಲಿ ನಾವು ಭಾಗವಹಿಸುವಂತೆ ಒತ್ತಾಯ ಮಾಡುತ್ತಾರೆ. ಆಗ ಅದನ್ನು ಎದುರಿಸಲು ನಮಗೆ ಯಾವುದು ಸಹಾಯ ಮಾಡುತ್ತದೆ? ಆ ಹಬ್ಬಗಳನ್ನು ಯೆಹೋವನು ಯಾಕೆ ಇಷ್ಟಪಡಲ್ಲ ಎನ್ನುವುದಕ್ಕಿರುವ ಕಾರಣಗಳು ನಮಗೆ ಸ್ಪಷ್ಟವಾಗಿ ಅರ್ಥವಾಗಿರಬೇಕು. ನಮ್ಮ ಪ್ರಕಾಶನಗಳಲ್ಲಿ ಸಂಶೋಧನೆ ಮಾಡಿ ಆ ಕೆಲವು ಹಬ್ಬಗಳು ಹೇಗೆ ಆರಂಭವಾದವು ಎಂದು ಪುನಃ ಮನಸ್ಸಿಗೆ ತಂದುಕೊಳ್ಳಬೇಕು. ಇದು ನಮಗೆ ಸ್ಪಷ್ಟವಾದರೆ ‘ಕರ್ತನಿಗೆ ಅಂಗೀಕಾರವಾದ’ ದಾರಿಯಲ್ಲೇ ನಾವು ನಡೆಯುತ್ತಿದ್ದೇವೆ ಎಂಬ ಭರವಸೆ ಇರುತ್ತದೆ. (ಎಫೆ. 5:10) ಯೆಹೋವನ ಮೇಲೆ ಮತ್ತು ಆತನ ವಾಕ್ಯದ ಮೇಲೆ ನಮಗೆ ನಂಬಿಕೆ ಇರುವುದಾದರೆ ಜನರು ಏನು ನೆನಸುತ್ತಾರೆ ಎನ್ನುವ ಭಯ ಇರುವುದಿಲ್ಲ.—ಜ್ಞಾನೋ. 29:25.

13 ಸತ್ಯದಲ್ಲಿ ಸದಾಕಾಲ ನಡೆಯಬೇಕು ಎಂಬ ಆಸೆ ನಮ್ಮೆಲ್ಲರಿಗೂ ಇದೆ. ಸತ್ಯದಲ್ಲಿ ನಡೆಯುತ್ತಾ ಇರಲು ನಾವು ಏನು ಮಾಡಬೇಕು? ನಾವು ಮಾಡಬೇಕಾದ ಮೂರು ವಿಷಯಗಳು ಇಲ್ಲಿವೆ.

ಸತ್ಯದಲ್ಲಿ ನಡೆಯುತ್ತಾ ಇರಲು ದೃಢತೀರ್ಮಾನ ಮಾಡಿ

14. (ಎ) ನಾವು ಯಾವತ್ತೂ ಸತ್ಯವನ್ನು ಬಿಟ್ಟುಹೋಗದಿರಲು ಏನು ಮಾಡಬೇಕು? (ಬಿ) ನಮಗೆ ತಿಳುವಳಿಕೆ, ವಿವೇಕ ಮತ್ತು ಶಿಸ್ತು ಯಾಕೆ ಬೇಕು?

14 ಮೊದಲನೇದಾಗಿ, ಬೈಬಲನ್ನು ಅಧ್ಯಯನ ಮಾಡುವುದನ್ನು ಮುಂದುವರಿಸಿ ಮತ್ತು ಅಧ್ಯಯನ ಮಾಡಿದ ವಿಷಯದ ಬಗ್ಗೆ ಚೆನ್ನಾಗಿ ಧ್ಯಾನಿಸಿ. ಇದನ್ನು ತಪ್ಪದೆ ಮಾಡಲು ಸಮಯ ಮಾಡಿಕೊಳ್ಳಿ. ನೀವು ಹೆಚ್ಚೆಚ್ಚು ಅಧ್ಯಯನ ಮಾಡಿದ ಹಾಗೆ ಸತ್ಯದ ಮೇಲೆ ನಿಮಗಿರುವ ಪ್ರೀತಿ ಹೆಚ್ಚಾಗುತ್ತದೆ ಮತ್ತು ಅದನ್ನು ಯಾವತ್ತೂ ಬಿಟ್ಟುಹೋಗಬಾರದು ಎಂಬ ದೃಢಸಂಕಲ್ಪ ಹೆಚ್ಚಾಗುತ್ತದೆ. ‘ಸತ್ಯವನ್ನು ಕೊಂಡುಕೋ’ ಎಂದು ಜ್ಞಾನೋಕ್ತಿ 23:23 ಹೇಳುತ್ತದೆ. ಆ ವಚನ “[ತಿಳುವಳಿಕೆ] ಸುಶಿಕ್ಷೆ ವಿವೇಕಗಳನ್ನು ಕೊಂಡುಕೋ” ಎಂದೂ ಹೇಳುತ್ತದೆ. ಬೈಬಲ್‌ ಸತ್ಯದ ಬಗ್ಗೆ ತಿಳುಕೊಂಡರೆ ಸಾಕಾಗುವುದಿಲ್ಲ, ಅದನ್ನು ಜೀವನದಲ್ಲಿ ಅನ್ವಯಿಸಿಕೊಳ್ಳಬೇಕು ಎನ್ನುವುದು ಇದರರ್ಥ. ತಿಳುವಳಿಕೆ ಇದ್ದರೆ, ಹಿಂದೆ ಕಲಿತ ವಿಷಯಕ್ಕೂ ಈಗ ಕಲಿಯುತ್ತಿರುವ ವಿಷಯಕ್ಕೂ ಸಂಬಂಧ ಏನು ಎಂದು ಅರ್ಥಮಾಡಿಕೊಳ್ಳುತ್ತೇವೆ. ವಿವೇಕ ಇದ್ದರೆ ತಿಳುಕೊಂಡ ವಿಷಯಗಳನ್ನು ಅನ್ವಯಿಸಿಕೊಳ್ಳುತ್ತೇವೆ. ಕೆಲವೊಮ್ಮೆ ಸತ್ಯ ನಮಗೆ ಸುಶಿಕ್ಷೆ ಅಥವಾ ಶಿಸ್ತನ್ನೂ ಕೊಡುತ್ತದೆ. ಅಂದರೆ ನಾವು ಯಾವ ವಿಷಯದಲ್ಲಿ ಬದಲಾವಣೆ ಮಾಡಿಕೊಳ್ಳಬೇಕು ಎಂದು ತೋರಿಸಿಕೊಡುತ್ತದೆ. ಆ ಬದಲಾವಣೆಯನ್ನು ಕೂಡಲೇ ಮಾಡಿಕೊಳ್ಳಬೇಕು. ಅದು ಬೆಳ್ಳಿಗಿಂತಲೂ ಬೆಲೆಬಾಳುವಂಥದ್ದು ಎಂದು ಬೈಬಲ್‌ ಹೇಳುತ್ತದೆ.—ಜ್ಞಾನೋ. 8:10.

15. ಬೈಬಲ್‌ ಸತ್ಯ ನಮ್ಮನ್ನು ಸೊಂಟಪಟ್ಟಿಯಂತೆ ಹೇಗೆ ಸಂರಕ್ಷಿಸುತ್ತದೆ?

15 ಎರಡನೇದಾಗಿ, ಪ್ರತಿ ದಿನ ಸತ್ಯವನ್ನು ಅನ್ವಯಿಸಿಕೊಳ್ಳುವ ದೃಢತೀರ್ಮಾನ ಮಾಡಿ. ಸತ್ಯವನ್ನು ಬೈಬಲು ಸೈನಿಕರ ಸೊಂಟಪಟ್ಟಿಗೆ ಹೋಲಿಸುತ್ತದೆ. (ಎಫೆ. 6:14) ಬೈಬಲ್‌ ಕಾಲದಲ್ಲಿ, ಯುದ್ಧದಲ್ಲಿ ಹೋರಾಡುತ್ತಿದ್ದ ಸೈನಿಕನಿಗೆ ಸೊಂಟಪಟ್ಟಿ ಬಲವನ್ನು ಮತ್ತು ಸಂರಕ್ಷಣೆಯನ್ನು ಕೊಡುತ್ತಿತ್ತು. ಆದರೆ ಅದನ್ನು ಅವನು ಬಿಗಿಯಾಗಿ ಕಟ್ಟಿಕೊಂಡಿರಬೇಕಿತ್ತು. ಅದು ಸಡಿಲವಾಗಿದ್ದರೆ ಅವನಿಗೆ ಬಲನೂ ಸಿಗುತ್ತಿರಲಿಲ್ಲ, ಸಂರಕ್ಷಣೆನೂ ಸಿಗುತ್ತಿರಲಿಲ್ಲ. ಸತ್ಯ ನಮ್ಮನ್ನು ಹೇಗೆ ಸೊಂಟಪಟ್ಟಿಯಂತೆ ಸಂರಕ್ಷಿಸುತ್ತದೆ? ನಾವು ಬೈಬಲ್‌ ಸತ್ಯವನ್ನು ಸಡಿಲವಾಗಿ ತೆಗೆದುಕೊಳ್ಳದೆ ಬಿಗಿಯಾಗಿ ಹಿಡುಕೊಂಡಿದ್ದರೆ ನಮಗೆ ತಪ್ಪಾದ ಯೋಚನೆಗಳು ಬರಲ್ಲ ಮತ್ತು ನಾವು ಜೀವನದಲ್ಲಿ ಒಳ್ಳೇ ತೀರ್ಮಾನಗಳನ್ನು ಮಾಡುತ್ತೇವೆ. ಯಾವುದಾದರೂ ದೊಡ್ಡ ಸಮಸ್ಯೆ ಬಂದರೆ ಅಥವಾ ತಪ್ಪು ಮಾಡುವ ಯೋಚನೆ ಬಂದರೆ ಸರಿಯಾದ ವಿಷಯವನ್ನೇ ಮಾಡಲು ಬೈಬಲ್‌ ಸತ್ಯ ಸಹಾಯ ಮಾಡುತ್ತದೆ. ಒಬ್ಬ ಸೈನಿಕ ಸೊಂಟಪಟ್ಟಿ ಕಟ್ಟಿಕೊಳ್ಳದೆ ಯುದ್ಧಕ್ಕೆ ಹೋಗುತ್ತಿರಲಿಲ್ಲ. ಅದೇ ರೀತಿ ನಾವು ಸಹ ಎಂದೂ ಸತ್ಯವನ್ನು ಬಿಟ್ಟುಹೋಗುವುದಿಲ್ಲ. ನಾವು ಜೀವನದ ಪ್ರತಿಯೊಂದು ವಿಷಯದಲ್ಲೂ ಬೈಬಲ್‌ ಸತ್ಯವನ್ನು ಅನ್ವಯಿಸಿಕೊಳ್ಳುತ್ತಿದ್ದೇವಾ ಇಲ್ಲವಾ ಎಂದು ಖಚಿತಪಡಿಸಿಕೊಳ್ಳುತ್ತೇವೆ. ಸೈನಿಕ ತನ್ನ ಕತ್ತಿಯನ್ನು ಸೊಂಟಪಟ್ಟಿಯಲ್ಲೇ ಇಟ್ಟುಕೊಳ್ಳುತ್ತಿದ್ದನು. ಇದನ್ನು ಹೋಲುವಂಥ ಯಾವುದನ್ನು ನಾವು ಮಾಡಬೇಕು ಎಂದು ಮುಂದೆ ನೋಡೋಣ.

16. ಬೇರೆಯವರಿಗೆ ಸತ್ಯ ಕಲಿಸುವುದರಿಂದ ನಮಗೆ ಸತ್ಯದಲ್ಲಿ ನಡೆಯುತ್ತಾ ಇರಲು ಹೇಗೆ ಸಹಾಯವಾಗುತ್ತದೆ?

16 ಮೂರನೇದಾಗಿ, ಬೇರೆಯವರಿಗೆ ಸತ್ಯ ಕಲಿಸುವುದರಲ್ಲಿ ಸಂಪೂರ್ಣವಾಗಿ ಭಾಗವಹಿಸಿ. ಬೈಬಲನ್ನು ಕತ್ತಿಗೆ ಹೋಲಿಸಲಾಗಿದೆ. ಒಬ್ಬ ಸೈನಿಕ ತನ್ನ ಕತ್ತಿಯನ್ನು ಬಿಗಿಯಾಗಿ ಹಿಡಿದುಕೊಂಡಿರುತ್ತಾನೆ. ಅದೇ ರೀತಿ ನಾವು ದೇವರ ವಾಕ್ಯವನ್ನು ಬಿಗಿಯಾಗಿ ಹಿಡಿದುಕೊಂಡಿರಬೇಕು. (ಎಫೆ. 6:17) “ಸತ್ಯವಾಕ್ಯವನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸುವ” ಮೂಲಕ ನಾವೆಲ್ಲರೂ ಒಳ್ಳೇ ಬೋಧಕರಾಗಲು ಕಲಿಯಬೇಕು. (2 ತಿಮೊ. 2:15) ಬೇರೆಯವರಿಗೆ ಕಲಿಸಲು ನಾವು ಬೈಬಲನ್ನು ಉಪಯೋಗಿಸುವಾಗ ನಾವು ಸತ್ಯವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತೇವೆ ಮತ್ತು ಅದು ನಮಗೆ ತುಂಬ ಇಷ್ಟವಾಗುತ್ತದೆ. ಅಷ್ಟೇ ಅಲ್ಲ, ಸತ್ಯದಲ್ಲಿ ನಡೆಯುತ್ತಾ ಇರುವ ನಮ್ಮ ದೃಢಸಂಕಲ್ಪ ಬಲವಾಗುತ್ತದೆ.

17. ಸತ್ಯ ನಿಮಗೆ ಯಾಕೆ ಅಮೂಲ್ಯವಾಗಿದೆ?

17 ಸತ್ಯ ನಮಗೆ ಯೆಹೋವನು ಕೊಟ್ಟಿರುವ ಅತ್ಯಮೂಲ್ಯ ಉಡುಗೊರೆ. ಇದರಿಂದಾಗಿ ನಮ್ಮ ಸ್ವರ್ಗೀಯ ತಂದೆಯ ಜೊತೆ ಆಪ್ತ ಸಂಬಂಧ ಬೆಳೆಸಿಕೊಳ್ಳಲು ಸಾಧ್ಯವಾಗಿದೆ. ಈ ಸಂಬಂಧ ನಮಗೆ ಸರ್ವಸ್ವ! ಯೆಹೋವನು ನಮಗೆ ಈಗಾಗಲೇ ತುಂಬ ವಿಷಯಗಳನ್ನು ಕಲಿಸಿದ್ದಾನೆ. ಆದರೆ ಇದು ಬರೀ ಆರಂಭ ಅಷ್ಟೆ! ಯಾಕೆಂದರೆ ಸದಾಕಾಲ ನಮಗೆ ಕಲಿಸುತ್ತೇನೆ ಎಂದು ಆತನು ಮಾತು ಕೊಟ್ಟಿದ್ದಾನೆ. ಆದ್ದರಿಂದ ಬೈಬಲ್‌ ಸತ್ಯವನ್ನು ಅಮೂಲ್ಯವಾದ ಒಂದು ಮುತ್ತಿನಂತೆ ನೋಡಿ. ‘ಸತ್ಯವನ್ನು ಕೊಂಡುಕೊಳ್ಳುತ್ತಾ ಇರಿ.’ ಅದನ್ನು ಯಾವತ್ತೂ ‘ಮಾರಿಬಿಡಬೇಡಿ.’ ಆಗ ದಾವೀದನಂತೆ ನೀವು ಕೂಡ “ನಿನ್ನ ಸತ್ಯತೆಯನ್ನು ನನ್ನ ದೃಷ್ಟಿಯಲ್ಲೇ ಇಟ್ಟುಕೊಂಡು ನಡೆಯುವೆನು” ಎಂದು ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತೀರಿ.—ಕೀರ್ತ. 86:11.

^ ಪ್ಯಾರ. 8 ಹೆಸರನ್ನು ಬದಲಾಯಿಸಲಾಗಿದೆ.

^ ಪ್ಯಾರ. 8 JW ಪ್ರಸಾರಕ್ಕೆ ಹೋಗಿ ಸಂದರ್ಶನಗಳು ಮತ್ತು ಅನುಭವಗಳು > ಸತ್ಯ ಜೀವನವನ್ನು ಬದಲಾಯಿಸಿತು ನೋಡಿ.