ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನೀವು ಯೆಹೋವನ ತರ ಯೋಚನೆ ಮಾಡುತ್ತೀರಾ?

ನೀವು ಯೆಹೋವನ ತರ ಯೋಚನೆ ಮಾಡುತ್ತೀರಾ?

“ನಿಮ್ಮ ಮನಸ್ಸನ್ನು ಮಾರ್ಪಡಿಸಿ ನವೀಕರಿಸಿಕೊಳ್ಳಿರಿ.”—ರೋಮ. 12:2.

ಗೀತೆಗಳು: 64, 125

1, 2. ನಾವು ಪ್ರಗತಿ ಮಾಡುತ್ತಾ ಹೋದಾಗ ಏನು ಕಲಿಯುತ್ತೇವೆ? ಒಂದು ಉದಾಹರಣೆ ಕೊಡಿ.

ಒಬ್ಬ ಚಿಕ್ಕ ಹುಡುಗನಿಗೆ ಯಾರೋ ಒಬ್ಬರು ಒಂದು ಉಡುಗೊರೆ ಕೊಡುತ್ತಾರೆ ಎಂದು ನೆನಸಿ. ಆಗ ಅವನ ಹೆತ್ತವರು ಅವನಿಗೆ, “ಥ್ಯಾಂಕ್ಸ್‌ ಹೇಳು” ಅನ್ನುತ್ತಾರೆ. ಅಪ್ಪ-ಅಮ್ಮ ಹೇಳಿದರು ಅಂತ ಅವನು ಥ್ಯಾಂಕ್ಸ್‌ ಹೇಳುತ್ತಾನೆ. ಆದರೆ ಅವನು ದೊಡ್ಡವನಾದಾಗ ಅಪ್ಪ-ಅಮ್ಮ ಯಾಕೆ ಹಾಗೆ ಹೇಳುತ್ತಿದ್ದರೆಂದು ಅರ್ಥಮಾಡಿಕೊಳ್ಳುತ್ತಾನೆ. ಹೀಗೆ ಅವನಲ್ಲಿ ಕೃತಜ್ಞತಾಭಾವ ಬೆಳೆಯುತ್ತದೆ. ಮುಂದೆ ಯಾರೂ ಹೇಳಿಕೊಡದೇ ಇದ್ದರೂ ಥ್ಯಾಂಕ್ಸ್‌ ಹೇಳುತ್ತಾನೆ.

2 ಅದೇ ರೀತಿ ನಾವು ಸತ್ಯ ಕಲಿಯಲು ಆರಂಭಿಸಿದಾಗ ದೇವರ ಮೂಲಭೂತ ನಿಯಮಗಳಿಗೆ ವಿಧೇಯತೆ ತೋರಿಸುವುದು ಎಷ್ಟು ಮುಖ್ಯ ಎಂದು ಕಲಿತ್ವಿ. ಆದರೆ ನಾವು ಪ್ರಗತಿ ಮಾಡುತ್ತಾ ಹೋದಾಗ ಆತನ ಯೋಚನಾ ರೀತಿ ಬಗ್ಗೆ ಹೆಚ್ಚು ಕಲಿಯುತ್ತೇವೆ. ಅಂದರೆ ಆತನಿಗೆ ಏನು ಇಷ್ಟ ಆಗುತ್ತೆ, ಏನು ಇಷ್ಟ ಆಗಲ್ಲ, ಆತನು ಯಾವ ದೃಷ್ಟಿಕೋನದಿಂದ ವಿಷಯಗಳನ್ನು ನೋಡುತ್ತಾನೆ ಎಂದು ಕಲಿಯುತ್ತೇವೆ. ಯೆಹೋವನ ತರನೇ ನಾವೂ ಯೋಚಿಸಲು ಕಲಿತಾಗ ಆತನಿಗೆ ಸಂತೋಷ ತರುವಂಥ ತೀರ್ಮಾನಗಳನ್ನು ಮಾಡುತ್ತೇವೆ ಮತ್ತು ಆತನು ಮೆಚ್ಚುವ ರೀತಿಯಲ್ಲಿ ನಡಕೊಳ್ಳುತ್ತೇವೆ.

3. ಯೆಹೋವನ ತರ ಯೋಚನೆ ಮಾಡಲು ಯಾಕೆ ಕಷ್ಟವಾಗಬಹುದು?

3 ನಾವು ಯೆಹೋವನ ತರ ಯೋಚನೆ ಮಾಡಲು ಕಲಿಯುವಾಗ ಸಂತೋಷವಾದರೂ ಅಪರಿಪೂರ್ಣರಾದ ಕಾರಣ ಆತನ ದೃಷ್ಟಿಕೋನದಿಂದ ವಿಷಯಗಳನ್ನು ನೋಡಲು ಕೆಲವೊಮ್ಮೆ ಕಷ್ಟವಾಗುತ್ತದೆ. ಉದಾಹರಣೆಗೆ, ನೈತಿಕತೆ, ಪ್ರಾಪಂಚಿಕತೆ, ಸಾರುವ ಕೆಲಸ, ರಕ್ತದ ದುರುಪಯೋಗ ಮತ್ತು ಬೇರೆ ವಿಷಯಗಳ ಬಗ್ಗೆ ಯೆಹೋವನಿಗಿರುವ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳಲು ನಮಗೆ ಕಷ್ಟವಾಗಬಹುದು. ಹಾಗಾದರೆ ನಾವು ಹೆಚ್ಚು ಯೆಹೋವನ ತರ ಯೋಚನೆ ಮಾಡಲು ಹೇಗೆ ಕಲಿಯಬಹುದು? ಇದರಿಂದ ಈಗ ಮತ್ತು ಮುಂದಕ್ಕೆ ನಾವು ಸರಿಯಾದದ್ದನ್ನು ಮಾಡಲು ಹೇಗೆ ಸಹಾಯವಾಗುತ್ತದೆ?

ಯೆಹೋವನ ಯೋಚನೆ ನಮ್ಮ ಯೋಚನೆ ಆಗಲಿ

4. ನಾವು ‘ನಮ್ಮ ಮನಸ್ಸನ್ನು ಮಾರ್ಪಡಿಸುವುದು’ ಅಂದರೆ ಏನು?

4 ರೋಮನ್ನರಿಗೆ 12:2 ಓದಿ. ನಾವು ಯೆಹೋವನ ತರ ಯೋಚನೆ ಮಾಡಲು ಏನು ಮಾಡಬೇಕೆಂದು ಅಪೊಸ್ತಲ ಪೌಲನು ಈ ವಚನದಲ್ಲಿ ವಿವರಿಸಿದ್ದಾನೆ. ‘ಈ ವಿಷಯಗಳ ವ್ಯವಸ್ಥೆಯ ಪ್ರಕಾರ ರೂಪಿಸಿಕೊಳ್ಳಲ್ಪಡುವುದನ್ನು ಬಿಟ್ಟುಬಿಡಬೇಕೆಂದು’ ಆತನು ಹೇಳಿದನು. ಇದರರ್ಥ ಏನೆಂದರೆ, ನಾವು ಲೋಕದ ತರ ಯೋಚನೆ ಮಾಡುವುದನ್ನು ಬಿಟ್ಟುಬಿಡಬೇಕು. ಇದರ ಬಗ್ಗೆ ನಾವು ಹಿಂದಿನ ಲೇಖನದಲ್ಲಿ ಚರ್ಚೆ ಮಾಡಿದ್ವಿ. ಆದರೆ ಪೌಲನು “ನಿಮ್ಮ ಮನಸ್ಸನ್ನು ಮಾರ್ಪಡಿಸಿ” ಎಂದು ಸಹ ಹೇಳಿದ್ದಾನೆ. ಇದರರ್ಥ ನಾವು ದೇವರ ವಾಕ್ಯವಾದ ಬೈಬಲನ್ನು ಅಧ್ಯಯನ ಮಾಡಿ ಆತನ ಯೋಚನೆಗಳನ್ನು ಅರ್ಥಮಾಡಿಕೊಂಡು ಅದರ ಬಗ್ಗೆ ಧ್ಯಾನಿಸುತ್ತಾ ಆತನ ತರ ಯೋಚನೆ ಮಾಡಲು ಪ್ರಯತ್ನಿಸಬೇಕು.

5. ಓದುವುದು ಮತ್ತು ಅಧ್ಯಯನ ಮಾಡುವುದರ ಮಧ್ಯೆ ಇರುವ ವ್ಯತ್ಯಾಸ ಏನು?

5 ಅಧ್ಯಯನ ಅಂದರೆ ಬರೀ ಮಾಹಿತಿಯನ್ನು ಓದುವುದು ಅಥವಾ ಪ್ರಶ್ನೆಗಳಿಗೆ ಉತ್ತರ ಹುಡುಕುವುದು ಅಲ್ಲ. ನಾವು ಅಧ್ಯಯನ ಮಾಡುವಾಗ, ಓದಿದ ಮಾಹಿತಿ ಯೆಹೋವನ ಬಗ್ಗೆ ಏನು ತಿಳಿಸುತ್ತದೆ ಎಂದು ಯೋಚಿಸಬೇಕು. ಆತನು ಏನು ಮಾಡುತ್ತಾನೆ ಮತ್ತು ಹೇಗೆ ಯೋಚಿಸುತ್ತಾನೆ ಎಂದು ಯೋಚಿಸಬೇಕು. ಒಂದು ವಿಷಯವನ್ನು ಮಾಡಬಹುದು ಅಥವಾ ಮಾಡಬಾರದು ಎಂದು ಆತನು ಯಾಕೆ ಹೇಳುತ್ತಾನೆಂದು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು. ಅಷ್ಟೇ ಅಲ್ಲ, ನಾವು ನಮ್ಮ ಜೀವನದಲ್ಲಿ ಮತ್ತು ಯೋಚನೆ ಮಾಡುವ ರೀತಿಯಲ್ಲಿ ಯಾವುದನ್ನು ಬದಲಾಯಿಸಬೇಕೆಂದು ಯೋಚಿಸಬೇಕು. ಇದನ್ನೆಲ್ಲಾ ನಾವು ಅಧ್ಯಯನ ಮಾಡಲು ಕುಳಿತುಕೊಂಡ ಪ್ರತಿಯೊಂದು ಸಂದರ್ಭದಲ್ಲಿ ಮಾಡಲು ಆಗಲಿಕ್ಕಿಲ್ಲ. ಆದರೆ ನಾವು ಓದುವ ಮಾಹಿತಿಯ ಬಗ್ಗೆ ಧ್ಯಾನಿಸಲು ಸಮಯ ತೆಗೆದುಕೊಳ್ಳುವುದು ಒಳ್ಳೇದು. ಬಹುಶಃ ನೀವು ಅಧ್ಯಯನ ಮಾಡಲು 30 ನಿಮಿಷ ಕೂತುಕೊಳ್ಳುತ್ತೀರಿ ಅಂತಿದ್ದರೆ ಅದರಲ್ಲಿ 15 ನಿಮಿಷ ಧ್ಯಾನಿಸಲು ಉಪಯೋಗಿಸಬೇಕು.—ಕೀರ್ತ. 119:97; 1 ತಿಮೊ. 4:15.

6. ದೇವರ ವಾಕ್ಯದಲ್ಲಿ ಓದುವ ವಿಷಯಗಳ ಬಗ್ಗೆ ಧ್ಯಾನಿಸುವಾಗ ಏನಾಗುತ್ತದೆ?

6 ನಾವು ದೇವರ ವಾಕ್ಯದಲ್ಲಿ ಓದುವ ವಿಷಯಗಳ ಬಗ್ಗೆ ಕ್ರಮವಾಗಿ ಧ್ಯಾನಿಸುವಾಗ ಅಸಾಧಾರಣವಾದ ಒಂದು ವಿಷಯ ನಡೆಯುತ್ತದೆ. ಯೆಹೋವನ ಯೋಚನೆಯೇ ಅತ್ಯುತ್ತಮವಾದದ್ದು ಎಂದು ನಾವು ‘ಪರಿಶೋಧಿಸಿ ತಿಳಿದುಕೊಳ್ಳುತ್ತೇವೆ’ ಅಥವಾ ಮನವರಿಕೆ ಮಾಡಿಕೊಳ್ಳುತ್ತೇವೆ. ಯೆಹೋವನು ಯೋಚನೆ ಮಾಡುವ ವಿಧವನ್ನು ಅರ್ಥಮಾಡಿಕೊಳ್ಳುತ್ತೇವೆ ಮತ್ತು ಆತನ ದೃಷ್ಟಿಕೋನವನ್ನು ಒಪ್ಪಿಕೊಳ್ಳುತ್ತೇವೆ. ಆಗ ನಮ್ಮ ಮನಸ್ಸು ಹೊಸ ರೀತಿ ಯೋಚನೆ ಮಾಡಲು ಆರಂಭಿಸುತ್ತದೆ. ಹೀಗೆ ಮೆಲ್ಲಮೆಲ್ಲನೆ ಯೆಹೋವನ ಯೋಚನೆ ನಮ್ಮ ಯೋಚನೆ ಆಗಿಬಿಡುತ್ತದೆ.

ಯೋಚನೆಗೂ ನಡತೆಗೂ ಇರುವ ನಂಟು

7, 8. (ಎ) ಸಿರಿಸಂಪತ್ತಿನ ಬಗ್ಗೆ ಯೆಹೋವನಿಗೆ ಯಾವ ದೃಷ್ಟಿಕೋನ ಇದೆ? (ಲೇಖನದ ಆರಂಭದ ಚಿತ್ರಗಳನ್ನು ನೋಡಿ.) (ಬಿ) ನಾವು ಸಿರಿಸಂಪತ್ತನ್ನು ಯೆಹೋವನು ನೋಡುವ ತರ ನೋಡಿದರೆ ಯಾವಾಗಲೂ ಯಾವುದಕ್ಕೆ ತುಂಬ ಪ್ರಾಮುಖ್ಯತೆ ಕೊಡುತ್ತೇವೆ?

7 ನಮ್ಮ ಯೋಚನೆಗಳು ನಮ್ಮ ನಡತೆಯ ಮೇಲೂ ಪ್ರಭಾವ ಬೀರುತ್ತವೆ. (ಮಾರ್ಕ 7:21-23; ಯಾಕೋ. 2:17) ಇದನ್ನು ಅರ್ಥಮಾಡಿಕೊಳ್ಳಲು ಕೆಲವು ಉದಾಹರಣೆಗಳನ್ನು ನೋಡೋಣ. ಒಂದು ಉದಾಹರಣೆ ಯೇಸುವಿನ ಜನನಕ್ಕೆ ಸಂಬಂಧಪಟ್ಟದ್ದು. ಇದರಿಂದ ಯೆಹೋವನು ಸಿರಿಸಂಪತ್ತನ್ನು ಹೇಗೆ ನೋಡುತ್ತಾನೆ ಎಂದು ಗೊತ್ತಾಗುತ್ತದೆ. ತನ್ನ ಮಗನನ್ನು ಬೆಳೆಸುವ ಜವಾಬ್ದಾರಿಯನ್ನು ದೇವರು ಯೋಸೇಫ ಮತ್ತು ಮರಿಯಳಿಗೆ ಕೊಟ್ಟನು. ಅವರ ಹತ್ತಿರ ಹೆಚ್ಚು ದುಡ್ಡು ಇರಲಿಲ್ಲ. (ಯಾಜ. 12:8; ಲೂಕ 2:24) ಯೇಸು ಹುಟ್ಟಿದಾಗ “ವಸತಿಗೃಹದಲ್ಲಿ ಅವರಿಗೆ ಸ್ಥಳವು ಸಿಗದಿದ್ದ ಕಾರಣ ಅವನನ್ನು ಒಂದು ಗೋದಲಿಯಲ್ಲಿ” ಮಲಗಿಸಬೇಕಾಯಿತು. (ಲೂಕ 2:7) ಯೆಹೋವ ಬಯಸಿದ್ದರೆ ತನ್ನ ಮಗ ಚೆನ್ನಾಗಿರುವ ಜಾಗದಲ್ಲಿ ಹುಟ್ಟುವಂತೆ ಮಾಡಬಹುದಿತ್ತು. ಆದರೆ ಆರಾಧನೆಗೆ ಮೊದಲ ಸ್ಥಾನ ಕೊಡುವ ಕುಟುಂಬದಲ್ಲಿ ತನ್ನ ಮಗ ಬೆಳೆಯಬೇಕೆಂದು ಆತನು ಆಸೆಪಟ್ಟನು. ಇದೇ ಯೆಹೋವನಿಗೆ ಅತಿ ಪ್ರಾಮುಖ್ಯ ವಿಷಯವಾಗಿತ್ತು.

8 ಯೆಹೋವ ದೇವರು ಸಿರಿಸಂಪತ್ತನ್ನು ಹೇಗೆ ನೋಡುತ್ತಾನೆ ಎಂದು ಈ ವೃತ್ತಾಂತದಿಂದ ಗೊತ್ತಾಗುತ್ತದೆ. ಕೆಲವು ಹೆತ್ತವರು ತಮ್ಮ ಮಕ್ಕಳಿಗೆ ಐಷಾರಾಮದ ಬದುಕನ್ನು ಕೊಡಬೇಕೆಂದು ತುಂಬ ಆಸೆಪಡುತ್ತಾರೆ. ಇದರಿಂದ ಮಕ್ಕಳಿಗೆ ಯೆಹೋವನ ಜೊತೆ ಇರುವ ಸಂಬಂಧ ಹಾಳಾದರೂ ಅವರಿಗೆ ಚಿಂತೆ ಇಲ್ಲ. ಆದರೆ ಯೆಹೋವನು ಹಾಗಲ್ಲ. ಆತನ ಜೊತೆ ನಮಗಿರುವ ಸಂಬಂಧವನ್ನೇ ಆತನು ತುಂಬ ಪ್ರಾಮುಖ್ಯವಾದ ವಿಷಯವಾಗಿ ನೋಡುತ್ತಾನೆ. ಈ ವಿಷಯದ ಬಗ್ಗೆ ಯೆಹೋವನಿಗಿರುವ ದೃಷ್ಟಿಕೋನವನ್ನು ನೀವು ಒಪ್ಪಿಕೊಂಡಿದ್ದೀರಾ? ನಿಮ್ಮ ಜೀವನ ರೀತಿಯಿಂದ ಇದು ಗೊತ್ತಾಗುತ್ತದಾ?—ಇಬ್ರಿಯ 13:5 ಓದಿ.

9, 10. ಬೇರೆಯವರನ್ನು ಎಡವಿಸುವ ವಿಷಯದಲ್ಲಿ ಯೆಹೋವನಿಗೆ ಇರುವ ದೃಷ್ಟಿಕೋನವೇ ನಮಗೂ ಇದೆ ಎಂದು ಹೇಗೆ ತೋರಿಸಬಹುದು?

9 ಇನ್ನೊಂದು ಉದಾಹರಣೆ, ಬೇರೆಯವರನ್ನು ಎಡವಿಸುವವರನ್ನು ಯೆಹೋವನು ಹೇಗೆ ವೀಕ್ಷಿಸುತ್ತಾನೆ ಅನ್ನುವ ವಿಷಯ ನೋಡೋಣ. “ನಂಬುವ ಈ ಚಿಕ್ಕವರಲ್ಲಿ ಒಬ್ಬನನ್ನು ಯಾವನಾದರೂ ಎಡವಿಸುವುದಾದರೆ, ಅಂಥವನ ಕೊರಳಿಗೆ ಕತ್ತೆಯಿಂದ ಎಳೆಯಲ್ಪಡುವಂಥ ಬೀಸುವ ಕಲ್ಲನ್ನು ಕಟ್ಟಿ ಸಮುದ್ರದಲ್ಲಿ ಎಸೆಯುವುದೇ ಲೇಸು” ಎಂದು ಯೇಸು ಹೇಳಿದನು. (ಮಾರ್ಕ 9:42) ಹಾಗಾದರೆ ಎಡವಿಸುವುದು ದೊಡ್ಡ ತಪ್ಪು ಎಂದು ಇದರಿಂದ ಗೊತ್ತಾಗುತ್ತದೆ. ಯೇಸು ತಂದೆಗೆ ತಕ್ಕ ಮಗ ಅನ್ನುವುದು ನಮಗೆ ಗೊತ್ತು. ಆದ್ದರಿಂದ ಯಾರಾದರೂ ಯೇಸುವಿನ ಒಬ್ಬ ಹಿಂಬಾಲಕನನ್ನು ಎಡವಿಸಿದರೆ ಆತನ ತಂದೆಯಾದ ಯೆಹೋವನಿಗೂ ಖಂಡಿತ ಇಷ್ಟವಾಗಲ್ಲ ಎಂದು ಗೊತ್ತಾಗುತ್ತದೆ.—ಯೋಹಾ. 14:9.

10 ಈ ವಿಷಯದಲ್ಲಿ ಯೆಹೋವನಿಗೆ ಮತ್ತು ಯೇಸುವಿಗೆ ಇರುವ ದೃಷ್ಟಿಕೋನವೇ ನಮಗೂ ಇದೆಯಾ? ನಾವು ನಡಕೊಳ್ಳುವ ವಿಧದಿಂದ ಏನು ಗೊತ್ತಾಗುತ್ತದೆ? ಉದಾಹರಣೆಗೆ, ನಮಗೆ ಒಂದು ವಿಧದ ಬಟ್ಟೆ ಅಥವಾ ಸ್ಟೈಲು ಇಷ್ಟ ಇರಬಹುದು. ಆದರೆ ಇದರಿಂದ ಸಭೆಯಲ್ಲಿರುವ ಕೆಲವರಿಗೆ ಬೇಜಾರು ಆಗಬಹುದು ಅಥವಾ ಅನೈತಿಕ ಯೋಚನೆಗಳು ಬರಬಹುದು ಎಂದು ಗೊತ್ತಾದರೆ ನಾವೇನು ಮಾಡುತ್ತೇವೆ? ಸಹೋದರರ ಮೇಲಿರುವ ಪ್ರೀತಿಯಿಂದಾಗಿ ನಮಗೆ ಏನಿಷ್ಟಾನೋ ಅದನ್ನು ಬಿಟ್ಟುಕೊಡಲು ಸಿದ್ಧರಿದ್ದೇವಾ?—1 ತಿಮೊ. 2:9, 10.

11, 12. ನಾವು ಯೆಹೋವನು ದ್ವೇಷಿಸುವುದನ್ನು ದ್ವೇಷಿಸಲು ಕಲಿತರೆ ಮತ್ತು ಸ್ವನಿಯಂತ್ರಣ ಬೆಳೆಸಿಕೊಂಡರೆ ಹೇಗೆ ನಮ್ಮನ್ನೇ ಸಂರಕ್ಷಿಸಿಕೊಳ್ಳುತ್ತೇವೆ?

11 ಮೂರನೇ ಉದಾಹರಣೆ ನೋಡಿ. ಯೆಹೋವನು ಕೆಟ್ಟ ನಡತೆಯನ್ನು ದ್ವೇಷಿಸುತ್ತಾನೆ. (ಯೆಶಾ. 61:8) ನಾವು ಅಪರಿಪೂರ್ಣರಾಗಿರುವ ಕಾರಣ ಕೆಲವೊಮ್ಮೆ ಸರಿಯಾದದ್ದನ್ನು ಮಾಡಲು ನಮಗೆ ಕಷ್ಟವಾಗುತ್ತದೆ ಎಂದು ಆತನಿಗೆ ಗೊತ್ತು. ಆದರೂ ನಾವು ಆತನ ತರ ಯೋಚನೆ ಮಾಡುತ್ತಾ ಕೆಟ್ಟದ್ದನ್ನು ದ್ವೇಷಿಸಬೇಕೆಂದು ಬಯಸುತ್ತಾನೆ. (ಕೀರ್ತನೆ 97:10 ಓದಿ.) ಯೆಹೋವನು ಕೆಟ್ಟ ವಿಷಯಗಳನ್ನು ಯಾಕೆ ದ್ವೇಷಿಸುತ್ತಾನೆ ಎಂದು ಧ್ಯಾನಿಸಿದರೆ ಆತನ ಯೋಚನೆ ನಮ್ಮ ಯೋಚನೆ ಆಗುತ್ತದೆ. ಅಷ್ಟೇ ಅಲ್ಲ ಕೆಟ್ಟ ವಿಷಯಗಳನ್ನು ಮಾಡದಿರಲು ಬೇಕಾದ ಬಲ ಸಿಗುತ್ತದೆ.

12 ನಾವು ಕೆಟ್ಟದ್ದನ್ನು ದ್ವೇಷಿಸಲು ಕಲಿತರೆ, ಬೈಬಲಲ್ಲಿ ನೇರವಾಗಿ ಹೇಳಿಲ್ಲದ ಕೆಲವು ವಿಷಯಗಳು ಸಹ ತಪ್ಪಾಗಿವೆ ಎಂದು ಅರ್ಥಮಾಡಿಕೊಳ್ಳುತ್ತೇವೆ. ಉದಾಹರಣೆಗೆ, ಲ್ಯಾಪ್‌ ಡ್ಯಾನ್ಸ್‌ ಈಗ ಲೋಕದಲ್ಲಿ ಪ್ರಸಿದ್ಧವಾಗುತ್ತಿದೆ. ಇದು ಒಂದು ರೀತಿಯ ಅನೈತಿಕ ದುರ್ನಡತೆ ಆಗಿದೆ. ಇದು ಒಬ್ಬರ ಜೊತೆ ಲೈಂಗಿಕತೆಯಲ್ಲಿ ತೊಡಗುವ ತರ ಇಲ್ಲ ಎಂದು ಕೆಲವರು ನೆನಸುತ್ತಾರೆ. ಆದ್ದರಿಂದ ಇದರಲ್ಲಿ ಭಾಗವಹಿಸುವುದು ತಪ್ಪಲ್ಲ ಅಂದುಕೊಳ್ಳುತ್ತಾರೆ. * ಆದರೆ ಯೆಹೋವನಿಗೆ ಇದರ ಬಗ್ಗೆ ಹೇಗನಿಸುತ್ತದೆ? ಯೆಹೋವನು ಎಲ್ಲಾ ರೀತಿಯ ಕೆಟ್ಟತನವನ್ನು ದ್ವೇಷಿಸುತ್ತಾನೆ ಅನ್ನುವುದನ್ನು ಮನಸ್ಸಲ್ಲಿಡಿ. ಆದ್ದರಿಂದ ಕೆಟ್ಟ ವಿಷಯ ಯಾವುದೇ ಇದ್ದರೂ ಅದರಿಂದ ಸಾಧ್ಯವಾದಷ್ಟು ದೂರವಾಗಿ ಇರೋಣ. ಸ್ವನಿಯಂತ್ರಣ ಬೆಳೆಸಿಕೊಂಡರೆ ಮತ್ತು ಯೆಹೋವನು ದ್ವೇಷಿಸುವುದನ್ನು ನಾವೂ ದ್ವೇಷಿಸಲು ಕಲಿತರೆ ಇದನ್ನು ಮಾಡಲು ಸಾಧ್ಯವಾಗುತ್ತದೆ.—ರೋಮ 12:9.

ಮುಂದೆ ಏನು ಎಂದು ಈಗಲೇ ಯೋಚಿಸಿ

13. ಯೆಹೋವನು ವಿಷಯಗಳನ್ನು ಹೇಗೆ ನೋಡುತ್ತಾನೆ ಎಂದು ಯಾಕೆ ಯೋಚಿಸಬೇಕು?

13 ಅಧ್ಯಯನ ಮಾಡುವಾಗ ಯೆಹೋವನು ವಿಷಯಗಳನ್ನು ಹೇಗೆ ನೋಡುತ್ತಾನೆ ಎಂದು ಯೋಚಿಸಬೇಕು. ಇದು ಒಳ್ಳೇ ತೀರ್ಮಾನಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ. ನಾವು ತಕ್ಷಣ ತೀರ್ಮಾನ ತೆಗೆದುಕೊಳ್ಳಬೇಕಾದ ಸನ್ನಿವೇಶ ಎದುರಾದರೆ ನಮಗೆ ಏನು ಮಾಡಬೇಕೆಂದು ಗೊತ್ತಿರುತ್ತದೆ. (ಜ್ಞಾನೋ. 22:3) ಇದಕ್ಕೆ ಸಂಬಂಧಿಸಿದ ಕೆಲವು ಉದಾಹರಣೆಗಳನ್ನು ಬೈಬಲಿಂದ ನೋಡೋಣ.

14. ಪೋಟೀಫರನ ಹೆಂಡತಿಗೆ ಯೋಸೇಫ ಕೊಟ್ಟ ಉತ್ತರದಿಂದ ನಾವೇನು ಕಲಿಯಬಹುದು?

14 ಪೋಟೀಫರನ ಹೆಂಡತಿ ಯೋಸೇಫನನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳಲು ಪ್ರಯತ್ನಿಸಿದಾಗ ಅವನು ಮರುಳಾಗಲಿಲ್ಲ. ವಿವಾಹ ಬಂಧವನ್ನು ಯೆಹೋವನು ಹೇಗೆ ನೋಡುತ್ತಾನೆ ಎಂದು ಯೋಸೇಫ ಯೋಚಿಸಿರಬೇಕು. (ಆದಿಕಾಂಡ 39:8, 9 ಓದಿ.) ಆದ್ದರಿಂದ ಅವನು ಪೋಟೀಫರನ ಹೆಂಡತಿಗೆ “ನಾನು ಇಂಥಾ ಮಹಾ ದುಷ್ಕೃತ್ಯವನ್ನು ನಡಿಸಿ ದೇವರಿಗೆ ವಿರುದ್ಧವಾಗಿ ಹೇಗೆ ಪಾಪಮಾಡಲಿ” ಎಂದು ಹೇಳಿದನು. ಅವನು ದೇವರ ಯೋಚನೆಯನ್ನು ತನ್ನ ಯೋಚನೆ ಮಾಡಿಕೊಂಡಿದ್ದನು ಎಂದು ಇದರಿಂದ ಗೊತ್ತಾಗುತ್ತದೆ. ನಮ್ಮ ಬಗ್ಗೆ ಏನು? ನಿಮ್ಮೊಟ್ಟಿಗೆ ಕೆಲಸ ಮಾಡುವ ಒಬ್ಬ ವ್ಯಕ್ತಿ ನಿಮ್ಮ ಜೊತೆ ಚೆಲ್ಲಾಟ ಆಡಿದರೆ ಏನು ಮಾಡುತ್ತೀರಿ? ಅಥವಾ ಯಾರಾದರೂ ನಿಮ್ಮ ಮೊಬೈಲ್‌ ಫೋನಿಗೆ ಲೈಂಗಿಕವಾಗಿ ಉದ್ರೇಕಗೊಳ್ಳುವ ಒಂದು ಸಂದೇಶವನ್ನು ಅಥವಾ ಚಿತ್ರವನ್ನು ಕಳುಹಿಸಿದರೆ ಏನು ಮಾಡುತ್ತೀರಿ? * ನಾವು ಈ ವಿಷಯಗಳ ಬಗ್ಗೆ ಯೆಹೋವನ ದೃಷ್ಟಿಕೋನ ಏನೆಂದು ಕಲಿತು ಸರಿ ಎಂದು ಒಪ್ಪಿಕೊಂಡಿದ್ದರೆ ಮತ್ತು ಇಂಥ ಸಮಯದಲ್ಲಿ ಏನು ಮಾಡಬೇಕೆಂದು ಮೊದಲೇ ತೀರ್ಮಾನ ಮಾಡಿಕೊಂಡಿದ್ದರೆ ನಿಷ್ಠಾವಂತರಾಗಿ ಉಳಿಯುವುದು ಸುಲಭ.

15. ಮೂವರು ಇಬ್ರಿಯರಂತೆ ನಾವು ಯೆಹೋವನಿಗೆ ನಂಬಿಗಸ್ತರಾಗಿರಲು ಏನು ಮಾಡಬೇಕು?

15 ಶದ್ರಕ್‌, ಮೇಶಕ್‌, ಅಬೇದ್‌ನೆಗೋ ಎಂಬ ಮೂವರು ಇಬ್ರಿಯರ ಉದಾಹರಣೆ ಸಹ ನೋಡಿ. ರಾಜ ನೆಬೂಕದ್ನೆಚ್ಚರನು ಮಾಡಿದ್ದ ಬಂಗಾರದ ಪ್ರತಿಮೆಯನ್ನು ಆರಾಧಿಸಬೇಕೆಂಬ ಆಜ್ಞೆ ಕೊಡಲ್ಪಟ್ಟಾಗ ಅವರು ಖಡಾಖಂಡಿತವಾಗಿ ನಿರಾಕರಿಸಿದರು. ಯೆಹೋವನಿಗೆ ನಂಬಿಗಸ್ತರಾಗಿದ್ದರೆ ಏನು ಆಗಬಹುದೆಂದು ಅವರು ಮೊದಲೇ ಯೋಚನೆ ಮಾಡಿದ್ದರು ಎಂದು ಅವರ ಸ್ಪಷ್ಟವಾದ ಉತ್ತರದಿಂದ ಗೊತ್ತಾಗುತ್ತದೆ. (ವಿಮೋ. 20:4, 5; ದಾನಿ. 3:4-6, 12, 16-18) ಇಂದು ನಮ್ಮ ಬಗ್ಗೆ ಏನು? ಸುಳ್ಳು ಧರ್ಮಕ್ಕೆ ಸಂಬಂಧಿಸಿದ ಒಂದು ಸಮಾರಂಭಕ್ಕೆ ದುಡ್ಡು ಕೊಡುವಂತೆ ನಿಮ್ಮ ಬಾಸ್‌ ಕೇಳಿದರೆ ಏನು ಮಾಡುತ್ತೀರಿ? ಅಂಥ ಸನ್ನಿವೇಶ ಬಂದರೆ ನೋಡಿಕೊಳ್ಳೋಣ ಅಂತಿರುವ ಬದಲು, ಏನು ಮಾಡಬೇಕೆಂದು ಈಗಲೇ ತೀರ್ಮಾನಿಸಬೇಕು. ಆಗ ಇಂಥ ಸನ್ನಿವೇಶ ಬಂದಾಗ ಆ ಮೂವರು ಇಬ್ರಿಯರಂತೆ ಏನು ಮಾಡಬೇಕು, ಏನು ಹೇಳಬೇಕೆಂದು ಸುಲಭವಾಗಿ ಗೊತ್ತಾಗುತ್ತದೆ.

ನೀವು ಸಂಶೋಧನೆ ಮಾಡಿ ಕಾನೂನುಬದ್ಧವಾದ ವೈದ್ಯಕೀಯ ಡಾಕ್ಯುಮೆಂಟನ್ನು ತುಂಬಿಸಿ ನಿಮ್ಮ ವೈದ್ಯರ ಜೊತೆ ಮಾತಾಡಿದ್ದೀರಾ? (ಪ್ಯಾರ 16 ನೋಡಿ)

16. ಯೆಹೋವನ ಯೋಚನೆಯನ್ನು ಸ್ಪಷ್ಟವಾಗಿ ಅರ್ಥಮಾಡಿಕೊಂಡರೆ ವೈದ್ಯಕೀಯ ತುರ್ತು ಪರಿಸ್ಥಿತಿಗೆ ನಾವು ಹೇಗೆ ತಯಾರಾಗುತ್ತೇವೆ?

16 ಯೆಹೋವನ ಯೋಚನೆಯ ಬಗ್ಗೆ ಧ್ಯಾನಿಸುವುದರಿಂದ ವೈದ್ಯಕೀಯ ತುರ್ತು ಪರಿಸ್ಥಿತಿ ಎದುರಾದಾಗಲೂ ನಂಬಿಗಸ್ತರಾಗಿರಲು ಸಹಾಯವಾಗುತ್ತದೆ. ನಾವು ಪೂರ್ಣ ರಕ್ತವನ್ನಾಗಲಿ, ಅದರ ನಾಲ್ಕು ಮುಖ್ಯ ಘಟಕಗಳನ್ನಾಗಲಿ ಖಂಡಿತ ತೆಗೆದುಕೊಳ್ಳುವುದಿಲ್ಲ. (ಅ. ಕಾ. 15:28, 29) ಆದರೆ ರಕ್ತವನ್ನು ಒಳಗೊಂಡ ಕೆಲವು ಚಿಕಿತ್ಸಾ ವಿಧಾನಗಳ ಬಗ್ಗೆ ಪ್ರತಿಯೊಬ್ಬ ಕ್ರೈಸ್ತನೂ ಬೈಬಲ್‌ ತತ್ವಗಳ ಮೇಲೆ ಆಧರಿಸಿ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ. ಈ ತೀರ್ಮಾನ ಯಾವಾಗ ತೆಗೆದುಕೊಂಡರೆ ಒಳ್ಳೇದು? ಆಸ್ಪತ್ರೆಗೆ ಸೇರಿ ನೋವಿನಲ್ಲಿ ಒದ್ದಾಡುತ್ತಿರುವಾಗ, ತಕ್ಷಣ ತೀರ್ಮಾನ ತೆಗೆದುಕೊಳ್ಳಬೇಕಾದ ಒತ್ತಡ ಇರುವಾಗ ಇದನ್ನು ಮಾಡೋಣವಾ? ಖಂಡಿತ ಇಲ್ಲ. ಈಗಲೇ ಸಂಶೋಧನೆ ಮಾಡಿ ಒಂದು ಕಾನೂನುಬದ್ಧವಾದ ವೈದ್ಯಕೀಯ ಡಾಕ್ಯುಮೆಂಟನ್ನು ತುಂಬಿಸಿ ನಿಮ್ಮ ವೈದ್ಯರ ಜೊತೆ ಮಾತಾಡಿ. *

17-19. ಯೆಹೋವನು ವಿಷಯಗಳನ್ನು ಹೇಗೆ ನೋಡುತ್ತಾನೆ ಎಂದು ನಾವು ತಿಳಿದುಕೊಳ್ಳುವುದು ಯಾಕೆ ಪ್ರಾಮುಖ್ಯ? ಒಂದು ಉದಾಹರಣೆ ಕೊಡಿ.

17 ಕೊನೆಯದಾಗಿ ಯೇಸುವಿನ ಉದಾಹರಣೆ ನೋಡೋಣ. ಪೇತ್ರ ಯೇಸುವಿಗೆ, “ನಿನಗೆ ದಯೆತೋರಿಸಿಕೋ” ಎಂದು ಬುದ್ಧಿ ಇಲ್ಲದೆ ಮಾತಾಡಿದಾಗ ಯೇಸು ತಕ್ಷಣ ಉತ್ತರ ಕೊಟ್ಟನು. ತಾನು ಏನು ಮಾಡಬೇಕೆಂದು ದೇವರು ಬಯಸುತ್ತಾನೆ ಮತ್ತು ಭೂಮಿಯ ಮೇಲೆ ತನ್ನ ಜೀವನ-ಮರಣದ ಬಗ್ಗೆ ಯಾವೆಲ್ಲಾ ಪ್ರವಾದನೆಗಳಿವೆ ಎಂದು ಯೇಸು ಖಂಡಿತ ಮೊದಲೇ ಯೋಚಿಸಿರಬೇಕು. ಇದರಿಂದ ಯೆಹೋವನಿಗೆ ನಂಬಿಗಸ್ತನಾಗಿ ಉಳಿಯಲು ಮತ್ತು ನಮ್ಮೆಲ್ಲರಿಗೋಸ್ಕರ ತನ್ನ ಜೀವವನ್ನು ತ್ಯಾಗಮಾಡಲು ಬೇಕಾದ ಶಕ್ತಿ ಆತನಿಗೆ ಸಿಕ್ಕಿತು.—ಮತ್ತಾಯ 16:21-23 ಓದಿ.

18 ಯೆಹೋವನು ನಾವೆಲ್ಲರೂ ಆತನ ಸ್ನೇಹಿತರಾಗಿರಬೇಕೆಂದು ಮತ್ತು ಸುವಾರ್ತೆ ಸಾರಲು ನಮ್ಮಿಂದಾದ ಎಲ್ಲ ಪ್ರಯತ್ನ ಮಾಡಬೇಕೆಂದು ಬಯಸುತ್ತಾನೆ. (ಮತ್ತಾ. 6:33; 28:19, 20; ಯಾಕೋ. 4:8) ಆದರೆ ಪೇತ್ರನು ಯೇಸುವಿಗೆ ಮಾಡಿದಂತೆ ಒಳ್ಳೇ ಉದ್ದೇಶದಿಂದನೇ ಕೆಲವರು ಹೇಳುವ ವಿಷಯ ನಮ್ಮನ್ನು ನಿರುತ್ತೇಜಿಸಬಹುದು. ಉದಾಹರಣೆಗೆ, ನಿಮ್ಮ ಬಾಸ್‌ ನಿಮಗೆ ಹೆಚ್ಚು ಸಂಬಳ ಸಿಗುವ ಕೆಲಸ ಕೊಡುತ್ತೇನೆ ಎಂದು ಹೇಳುತ್ತಾರೆ ಎಂದಿಟ್ಟುಕೊಳ್ಳಿ. ಆದರೆ ನೀವು ಈ ಕೆಲಸಕ್ಕೆ ಒಪ್ಪಿದರೆ ಹೆಚ್ಚು ತಾಸು ಕೆಲಸ ಮಾಡಬೇಕಾಗುತ್ತದೆ, ಇದರಿಂದ ಕೂಟಗಳಿಗೆ ಹೋಗಲು ಕಷ್ಟವಾಗುತ್ತದೆ, ಸಭೆಯವರ ಜೊತೆ ಸೇರಿ ಸೇವೆ ಮಾಡಲು ಹೆಚ್ಚು ಸಮಯ ಸಿಗಲ್ಲ ಎಂದು ನಿಮಗೆ ಗೊತ್ತು. ನೀವೇನು ಮಾಡುತ್ತೀರಾ? ಇನ್ನೊಂದು ಸನ್ನಿವೇಶ ನೋಡಿ. ಹೆಚ್ಚಿನ ವಿದ್ಯಾಭ್ಯಾಸ ಮಾಡಲು ಮನೆ ಬಿಟ್ಟು ಬೇರೆ ಕಡೆ ಹೋಗುವ ಅವಕಾಶ ನಿಮಗೆ ಸಿಗುತ್ತದೆ ಎಂದಿಟ್ಟುಕೊಳ್ಳಿ. ಏನು ಮಾಡುತ್ತೀರಾ? ಒಂದು ತೀರ್ಮಾನ ತೆಗೆದುಕೊಳ್ಳುವ ಮುಂಚೆ ಪ್ರಾರ್ಥಿಸಿ, ಸಂಶೋಧನೆ ಮಾಡಿ, ಕುಟುಂಬ ಸದಸ್ಯರ ಜೊತೆ ಅಥವಾ ಹಿರಿಯರ ಜೊತೆ ಮಾತಾಡುವಿರಾ? ಈ ವಿಷಯಗಳ ಬಗ್ಗೆ ಯೆಹೋವನ ಯೋಚನೆ ಏನೆಂದು ಈಗ ತಿಳಿದುಕೊಂಡು ಆತನ ಯೋಚನೆನಾ ನಮ್ಮ ಯೋಚನೆ ಮಾಡಿಕೊಳ್ಳುವುದು ಒಳ್ಳೇದು. ಆಗ ಮೇಲೆ ತಿಳಿಸಿದ ಅವಕಾಶಗಳು ಸಿಕ್ಕಿದರೆ ನಾವು ಮರುಳಾಗಿ ಅದರ ಹಿಂದೆ ಬೀಳುವುದಿಲ್ಲ. ಯಾಕೆಂದರೆ ಯೆಹೋವನ ಸೇವೆಗೆ ಗಮನ ಕೊಡಬೇಕೆಂದು ನಾವು ಈಗಾಗಲೇ ತೀರ್ಮಾನಿಸಿರುತ್ತೇವೆ.

19 ನಿಮ್ಮ ನಂಬಿಕೆಯನ್ನು ಪರೀಕ್ಷಿಸುವಂಥ ಬೇರೆ ಸನ್ನಿವೇಶಗಳೂ ನಿಮ್ಮ ಮನಸ್ಸಿಗೆ ಬರಬಹುದು. ಅವು ನೀವು ಎದುರುನೋಡದ ಸಮಯದಲ್ಲಿ ನಿಮ್ಮ ಮುಂದೆ ಬಂದು ನಿಲ್ಲಬಹುದು. ನಮಗೆ ಎದುರಾಗಬಹುದಾದ ಪ್ರತಿಯೊಂದು ಸನ್ನಿವೇಶಕ್ಕೆ ನಾವು ಮುಂಚಿತವಾಗಿಯೇ ಸಿದ್ಧರಾಗಿರಲು ಸಾಧ್ಯವಿಲ್ಲ ನಿಜ. ಆದರೆ ನಾವು ವೈಯಕ್ತಿಕ ಅಧ್ಯಯನ ಮಾಡುವಾಗ ಯೆಹೋವನ ಯೋಚನೆಯ ಬಗ್ಗೆ ಧ್ಯಾನಿಸಿದರೆ ಒಂದು ಸನ್ನಿವೇಶ ಎದುರಾದಾಗ ಓದಿದ್ದು ನೆನಪಾಗುತ್ತದೆ ಮತ್ತು ಅದನ್ನು ಅನ್ವಯಿಸಿಕೊಳ್ಳುವುದು ಹೇಗೆ ಎಂದು ಗೊತ್ತಾಗುತ್ತದೆ. ಆದ್ದರಿಂದ ನಾವು ಅಧ್ಯಯನ ಮಾಡುವಾಗ ಯೆಹೋವನು ವಿಷಯಗಳನ್ನು ಹೇಗೆ ನೋಡುತ್ತಾನೆ ಎಂದು ಕಂಡುಹಿಡಿಯೋಣ, ಆತನ ಯೋಚನೆಯನ್ನು ನಮ್ಮ ಯೋಚನೆ ಮಾಡಿಕೊಳ್ಳೋಣ ಮತ್ತು ಇದು ಈಗಲೂ ಮುಂದಕ್ಕೂ ಒಳ್ಳೇ ತೀರ್ಮಾನಗಳನ್ನು ತೆಗೆದುಕೊಳ್ಳಲು ಹೇಗೆ ಸಹಾಯ ಮಾಡುತ್ತದೆ ಎಂದು ಯೋಚಿಸೋಣ.

ಯೆಹೋವನ ಯೋಚನೆ ಮತ್ತು ನಿಮ್ಮ ಭವಿಷ್ಯ

20, 21. (ಎ) ಹೊಸ ಲೋಕದಲ್ಲಿ ನಮಗೆ ಯಾವ ಸ್ವಾತಂತ್ರ್ಯ ಸಿಗುತ್ತದೆ? (ಬಿ) ನಾವು ಈಗಲೇ ಜೀವನವನ್ನು ಆನಂದಿಸುವುದು ಹೇಗೆ?

20 ನಾವೆಲ್ಲರೂ ಹೊಸ ಲೋಕಕ್ಕಾಗಿ ತುಂಬ ಆಸೆಯಿಂದ ಕಾಯುತ್ತಾ ಇದ್ದೇವೆ. ನಮ್ಮಲ್ಲಿ ಹೆಚ್ಚಿನವರು ಪರದೈಸ್‌ ಭೂಮಿಯಲ್ಲಿ ಸದಾಕಾಲ ಜೀವಿಸುವ ನಿರೀಕ್ಷೆ ಇಟ್ಟುಕೊಂಡಿದ್ದೇವೆ. ನಾವು ಈಗ ಅನುಭವಿಸುತ್ತಿರುವ ಯಾವ ಕಷ್ಟ, ತೊಂದರೆ, ನೋವು ದೇವರ ರಾಜ್ಯದಲ್ಲಿ ಇರುವುದಿಲ್ಲ. ನಮಗೆ ಇಷ್ಟವಾದ ತೀರ್ಮಾನಗಳನ್ನು ಮಾಡುವ ಸ್ವಾತಂತ್ರ್ಯ ಆಗಲೂ ಇರುತ್ತದೆ.

21 ಆದರೆ ನಮಗೆ ಸಿಗುವ ಸ್ವಾತಂತ್ರ್ಯಕ್ಕೆ ಮಿತಿ ಇರುತ್ತದೆ. ದೀನರು ಯೆಹೋವನ ಆಜ್ಞೆಗಳು ಮತ್ತು ಆಲೋಚನೆಗಳ ಮೇಲಾಧರಿಸಿದ ತೀರ್ಮಾನಗಳನ್ನು ಮಾಡುತ್ತಾರೆ. ಇದು ತುಂಬ ಸಂತೋಷ ಮತ್ತು ಅಪಾರ ಶಾಂತಿಯನ್ನು ಕೊಡಲಿದೆ. (ಕೀರ್ತ. 37:11) ಆ ಸಮಯ ಬರುವ ವರೆಗೆ ಯೆಹೋವನ ಯೋಚನೆಯನ್ನು ನಮ್ಮ ಯೋಚನೆ ಮಾಡಿಕೊಳ್ಳುವ ಮೂಲಕ ನಾವು ಸಂತೋಷವಾಗಿ ಇರೋಣ.

^ ಪ್ಯಾರ. 12 ಅರೆಬೆತ್ತಲೆಯಾಗಿ ಇರಬಹುದಾದ ಒಬ್ಬ ಡ್ಯಾನ್ಸರ್‌ ಕಸ್ಟಮರ್‌ ಮಡಿಲಲ್ಲಿ ಕೂತು ಲೈಂಗಿಕವಾಗಿ ಉದ್ರೇಕಗೊಳ್ಳುವಂತೆ ಮಾಡುವುದನ್ನು ಲ್ಯಾಪ್‌ ಡ್ಯಾನ್ಸ್‌ ಎಂದು ಕರೆಯುತ್ತಾರೆ. ವಾಸ್ತವಾಂಶಗಳ ಮೇಲೆ ಹೊಂದಿಕೊಂಡು ಇದನ್ನು ಲೈಂಗಿಕ ಅನೈತಿಕತೆ ಎಂದು ತೀರ್ಮಾನಿಸಿ ಹಿರಿಯರು ನ್ಯಾಯನಿರ್ಣಾಯಕ ಸಮಿತಿಯನ್ನು ರಚಿಸಬಹುದು. ಈ ತಪ್ಪಿನಲ್ಲಿ ಒಳಗೂಡಿದ ವ್ಯಕ್ತಿ ಹಿರಿಯರ ಸಹಾಯ ಪಡೆಯಬೇಕು.—ಯಾಕೋ. 5:14, 15.

^ ಪ್ಯಾರ. 14 ಲೈಂಗಿಕವಾಗಿ ಉದ್ರೇಕಗೊಳ್ಳುವಂತೆ ಮಾಡುವ ಸಂದೇಶ, ಫೋಟೋ ಅಥವಾ ವಿಡಿಯೋವನ್ನು ಮೊಬೈಲ್‌ ಫೋನ್‌ಗೆ ಕಳುಹಿಸುವುದು ‘ಸೆಕ್ಸ್‌ಟಿಂಗ್‌’ ಆಗಿದೆ. ವಾಸ್ತವಾಂಶಗಳ ಮೇಲೆ ಹೊಂದಿಕೊಂಡು ಹಿರಿಯರು ನ್ಯಾಯನಿರ್ಣಾಯಕ ಸಮಿತಿಯನ್ನು ರಚಿಸಬಹುದು. ಈ ‘ಸೆಕ್ಸ್‌ಟಿಂಗ್‌’ನಲ್ಲಿ ಒಳಗೂಡಿದ ಕೆಲವು ಯೌವನಸ್ಥರನ್ನು ಸರ್ಕಾರೀ ಅಧಿಕಾರಿಗಳು ಲೈಂಗಿಕ ಅಪರಾಧಿಗಳೆಂದು ಕ್ರಮ ತೆಗೆದುಕೊಂಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ jw.org ವೆಬ್‌ಸೈಟಲ್ಲಿ “ಯುವಜನರು ಕೇಳುವ ಹೆಚ್ಚಿನ ಪ್ರಶ್ನೆಗಳು—ಸೆಕ್ಸ್‌ಟಿಂಗ್‌ ಬಗ್ಗೆ ನಾನೇನು ತಿಳುಕೋಬೇಕು?” ಎಂಬ ಆನ್‌ಲೈನ್‌ ಲೇಖನ ಓದಿ. (ಬೈಬಲ್‌ ಬೋಧನೆಗಳು > ಹದಿವಯಸ್ಕರು ನೋಡಿ.) ಅಥವಾ 2014​ರ ಜನವರಿ ತಿಂಗಳ ಎಚ್ಚರ! ಪತ್ರಿಕೆಯ ಪುಟ 4-5​ರಲ್ಲಿರುವ “ನಿಮ್ಮ ಹದಿಪ್ರಾಯದ ಮಕ್ಕಳಿಗೆ ಸೆಕ್ಸ್‌ಟಿಂಗ್‌ ಬಗ್ಗೆ ಹೇಗೆ ಎಚ್ಚರಿಸುವಿರಿ?” ಎಂಬ ಲೇಖನ ನೋಡಿ.

^ ಪ್ಯಾರ. 16 ಈ ವಿಷಯದಲ್ಲಿ ನಿಮಗೆ ಸಹಾಯ ಮಾಡಬಹುದಾದ ಬೈಬಲ್‌ ತತ್ವಗಳು ನಮ್ಮ ಪ್ರಕಾಶನಗಳಲ್ಲಿ ಸಿಗುತ್ತವೆ. ಉದಾಹರಣೆಗೆ, “ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ” ಪುಸ್ತಕದ ಪುಟ 246-249 ನೋಡಿ.