ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸತ್ಯವನ್ನು ಕೊಂಡುಕೊಳ್ಳಿ, ಮಾರಿಬಿಡಬೇಡಿ

ಸತ್ಯವನ್ನು ಕೊಂಡುಕೊಳ್ಳಿ, ಮಾರಿಬಿಡಬೇಡಿ

“ಸತ್ಯವನ್ನು ಎಂದರೆ ಜ್ಞಾನ ಸುಶಿಕ್ಷೆ ವಿವೇಕಗಳನ್ನು ಕೊಂಡುಕೋ; ಮಾರಿ ಬಿಡಬೇಡ.”—ಜ್ಞಾನೋ. 23:23.

ಗೀತೆಗಳು: 113, 114

1, 2.(ಎ) ನಿಮ್ಮ ಜೀವನದಲ್ಲಿ ನಿಮಗೆ ತುಂಬ ಅಮೂಲ್ಯವಾದ ವಿಷಯ ಯಾವುದು? (ಬಿ) ನಾವು ಯಾವ ಸತ್ಯಗಳಿಗೆ ತುಂಬ ಬೆಲೆ ಕೊಡುತ್ತೇವೆ? ಯಾಕೆ? (ಲೇಖನದ ಆರಂಭದ ಚಿತ್ರಗಳನ್ನು ನೋಡಿ.)

ನಿಮ್ಮ ಜೀವನದಲ್ಲಿ ನಿಮಗೆ ತುಂಬ ಅಮೂಲ್ಯವಾದ ವಿಷಯ ಯಾವುದು? ಯೆಹೋವನ ಜನರಾಗಿರುವ ನಮಗೆ ದೇವರೊಂದಿಗಿರುವ ಸಂಬಂಧವೇ ತುಂಬ ಅಮೂಲ್ಯ. ಈ ಲೋಕವನ್ನೇ ಬರೆದುಕೊಡುತ್ತೇನೆ ಅಂದರೂ ನಾವು ಅದನ್ನು ಬಿಟ್ಟುಕೊಡುವುದಿಲ್ಲ. ಬೈಬಲಲ್ಲಿರುವ ಸತ್ಯಕ್ಕೆ ಸಹ ನಾವು ತುಂಬ ಬೆಲೆ ಕೊಡುತ್ತೇವೆ. ಯಾಕೆಂದರೆ ಯೆಹೋವನ ಸ್ನೇಹಿತರಾಗಲು ಇದು ಸಹಾಯ ಮಾಡುತ್ತದೆ.—ಕೊಲೊ. 1:9, 10.

2 ಯೆಹೋವನು ನಮ್ಮ ಮಹೋನ್ನತ ಬೋಧಕ. ಆತನು ತನ್ನ ವಾಕ್ಯವಾದ ಬೈಬಲಿನ ಮೂಲಕ ನಮಗೆ ಅನೇಕ ಅಮೂಲ್ಯ ಸತ್ಯಗಳನ್ನು ಕಲಿಸುತ್ತಾನೆ. ತನ್ನ ನಾಮದ ಮಹತ್ವದ ಬಗ್ಗೆ ನಮಗೆ ಕಲಿಸುತ್ತಾನೆ ಮತ್ತು ತನ್ನಲ್ಲಿರುವ ಅದ್ಭುತ ಗುಣಗಳ ಬಗ್ಗೆ ಹೇಳುತ್ತಾನೆ. ನಮ್ಮ ಮೇಲೆ ಅಪಾರ ಪ್ರೀತಿ ಇಟ್ಟದ್ದರಿಂದ ತನ್ನ ಮುದ್ದು ಮಗನನ್ನು ನಮಗಾಗಿ ಕೊಟ್ಟನೆಂದು ಹೇಳುತ್ತಾನೆ. ಮೆಸ್ಸೀಯ ರಾಜ್ಯದ ಬಗ್ಗೆ ಕಲಿಸುತ್ತಾನೆ. ಭವಿಷ್ಯಕ್ಕಾಗಿ ನಮಗೆ ಒಂದು ನಿರೀಕ್ಷೆ ಕೊಟ್ಟಿದ್ದಾನೆ. ಅಂದರೆ ಅಭಿಷಿಕ್ತರು ಸ್ವರ್ಗೀಯ ಜೀವನ ಪಡೆಯುತ್ತಾರೆ, ‘ಬೇರೆ ಕುರಿಗಳು’ ಇದೇ ಭೂಮಿಯ ಮೇಲೆ ಪರದೈಸಿನಲ್ಲಿ ಜೀವಿಸುತ್ತಾರೆ. (ಯೋಹಾ. 10:16) ನಾವು ಹೇಗೆ ಜೀವಿಸಬೇಕೆಂದು ಯೆಹೋವನು ಕಲಿಸಿದ್ದಾನೆ. ಈ ಎಲ್ಲಾ ಸತ್ಯಗಳು ನಮಗೆ ಸ್ವತ್ತುಗಳು ಇದ್ದಂತೆ. ಯಾಕೆಂದರೆ ಇವುಗಳ ಮೂಲಕ ನಾವು ನಮ್ಮ ಸೃಷ್ಟಿಕರ್ತನಿಗೆ ಹತ್ತಿರವಾಗುತ್ತೇವೆ. ಇವುಗಳ ಮೂಲಕ ನಮಗೆ ಜೀವನದಲ್ಲಿ ಒಂದು ಉದ್ದೇಶ ಅಂತ ಇದೆ.

3. ನಾವು ಸತ್ಯ ಕಲಿಯಲು ಯೆಹೋವನು ನಮ್ಮಿಂದ ದುಡ್ಡು ಕೇಳುತ್ತಾನಾ?

3 ಯೆಹೋವ ದೇವರು ತುಂಬ ಉದಾರಿ. ಎಷ್ಟು ಉದಾರಿ ಎಂದರೆ ನಮಗೋಸ್ಕರ ಆತನು ತನ್ನ ಮಗನನ್ನೇ ಕೊಟ್ಟನು. ಯಾರಾದರೂ ಸತ್ಯಕ್ಕಾಗಿ ಹುಡುಕುತ್ತಿದ್ದಾರೆ ಎಂದು ಗೊತ್ತಾದಾಗ ಅವರಿಗೆ ಸತ್ಯ ಸಿಗಲು ಏರ್ಪಾಡು ಮಾಡುತ್ತಾನೆ. ಸತ್ಯ ಕಲಿಯಲು ದುಡ್ಡು ಕೊಡಬೇಕೆಂದು ಆತನೆಂದೂ ಹೇಳಲ್ಲ. ಒಮ್ಮೆ ಸೀಮೋನ ಎಂಬ ವ್ಯಕ್ತಿ ಪೇತ್ರನಿಗೆ ದುಡ್ಡು ಕೊಟ್ಟು, ಪವಿತ್ರಾತ್ಮವನ್ನು ಬೇರೆಯವರಿಗೆ ಕೊಡುವ ಅಧಿಕಾರವನ್ನು ಕೊಂಡುಕೊಳ್ಳಲು ಪ್ರಯತ್ನಿಸಿದನು. ಇದರಿಂದ ಪೇತ್ರನಿಗೆ ಸಿಟ್ಟು ಬಂದು, “ನಿನ್ನ ಬೆಳ್ಳಿಯು ನಿನ್ನೊಂದಿಗೆ ಹಾಳಾಗಿಹೋಗಲಿ. ಏಕೆಂದರೆ ದೇವರ ಉಚಿತ ವರವನ್ನು ಹಣದಿಂದ ಕೊಂಡುಕೊಳ್ಳಬಹುದೆಂದು ನೀನು ಭಾವಿಸಿದ್ದೀ” ಎಂದನು. (ಅ. ಕಾ. 8:18-20) ಹಾಗಾದರೆ, ‘ಸತ್ಯವನ್ನು ಕೊಂಡುಕೊಳ್ಳುವುದು’ ಅಂದರೇನು?

‘ಸತ್ಯವನ್ನು ಕೊಂಡುಕೊಳ್ಳುವುದು’ ಅಂದರೆ ಏನು?

4. ಈ ಲೇಖನದಲ್ಲಿ ನಾವು ಸತ್ಯದ ಬಗ್ಗೆ ಏನು ಕಲಿಯುತ್ತೇವೆ?

4 ಜ್ಞಾನೋಕ್ತಿ 23:23 ಓದಿ. ಬೈಬಲಿಂದ ಸತ್ಯ ಕಲಿಯಲು ಪ್ರಯತ್ನ ಹಾಕಬೇಕಾಗುತ್ತದೆ. ಇದಕ್ಕಾಗಿ ಕೆಲವು ವಿಷಯಗಳನ್ನು ಬಿಟ್ಟುಬಿಡಬೇಕಾಗುತ್ತದೆ. ನಾವು ‘ಸತ್ಯವನ್ನು ಕೊಂಡುಕೊಂಡ’ ಮೇಲೆ ಅಂದರೆ ಕಲಿತ ಮೇಲೆ ಅದನ್ನು ‘ಮಾರಿಬಿಡಬಾರದು’ ಅಥವಾ ಸತ್ಯ ಬಿಟ್ಟು ಹೋಗಬಾರದು. ಸತ್ಯವನ್ನು ‘ಕೊಂಡುಕೊಳ್ಳುವುದರಲ್ಲಿ’ ಏನೆಲ್ಲಾ ಒಳಗೂಡಿದೆ? ಇದಕ್ಕಾಗಿ ನಾವು ಏನು ಮಾಡಬೇಕು? ಈ ಪ್ರಶ್ನೆಗಳಿಗೆ ಉತ್ತರ ತಿಳುಕೊಳ್ಳುವಾಗ ನಾವು ಸತ್ಯವನ್ನು ಹೆಚ್ಚು ಮಾನ್ಯಮಾಡುತ್ತೇವೆ. ಏನೇ ಆದರೂ ಸತ್ಯವನ್ನು ಬಿಟ್ಟುಹೋಗಬಾರದೆಂಬ ದೃಢಸಂಕಲ್ಪ ಮೂಡುತ್ತದೆ. ಯೆಹೋವನಿಂದ ಸಿಗುವ ಸತ್ಯಕ್ಕಿಂತ ಬೇರೆ ಯಾವುದೂ ಮುಖ್ಯ ಅಲ್ಲ ಎಂದು ಕಲಿಯುತ್ತೇವೆ.

5, 6. (ಎ) ದುಡ್ಡು ಕೊಡದೆ ಸತ್ಯವನ್ನು ಹೇಗೆ ಕೊಂಡುಕೊಳ್ಳಬಹುದು? ಉದಾಹರಣೆ ಕೊಡಿ. (ಬಿ) ಸತ್ಯ ಕಲಿಯುವುದರಿಂದ ನಮಗೆ ಯಾವೆಲ್ಲಾ ಪ್ರಯೋಜನ ಸಿಗುತ್ತದೆ?

5 ಏನಾದರೂ ಉಚಿತವಾಗಿ ಸಿಗುತ್ತದೆ ಅಂದರೆ ಅದಕ್ಕಾಗಿ ನಾವು ಏನೂ ಮಾಡಬೇಕಾಗಿಲ್ಲ ಅಂತ ಅರ್ಥವಲ್ಲ. ಜ್ಞಾನೋಕ್ತಿ 23:23​ರಲ್ಲಿ “ಕೊಂಡುಕೋ” ಎಂದು ಭಾಷಾಂತರಿಸಲಾಗಿರುವ ಹೀಬ್ರು ಪದಕ್ಕೆ “ಪಡೆದುಕೋ” ಎಂಬ ಅರ್ಥವೂ ಇದೆ. ಒಬ್ಬ ವ್ಯಕ್ತಿ ಅಮೂಲ್ಯವಾದ ಒಂದು ವಿಷಯವನ್ನು ಪಡೆಯಲು ಇನ್ನೊಂದು ವಿಷಯವನ್ನು ಬಿಟ್ಟುಕೊಡಬೇಕಾಗುತ್ತದೆ ಅಥವಾ ಪ್ರಯತ್ನ ಮಾಡಬೇಕಾಗುತ್ತದೆ ಎಂಬ ಅರ್ಥ ಆ ಎರಡೂ ಪದಗಳಲ್ಲಿ ಇದೆ. ಇದನ್ನು ಅರ್ಥಮಾಡಿಕೊಳ್ಳಲು ಒಂದು ಉದಾಹರಣೆ ನೋಡಿ. ಒಂದು ಅಂಗಡಿಯಲ್ಲಿ ಉಚಿತವಾಗಿ ಬಾಳೆಹಣ್ಣು ಕೊಡುತ್ತಾರೆ ಎಂದು ನೆನಸಿ. ನಾವು ಏನೂ ಮಾಡದೆ ಬಾಳೆಹಣ್ಣು ನಮ್ಮ ಮನೆಗೆ ಬಂದುಬಿಡುತ್ತಾ? ಇಲ್ಲ. ನಾವು ಆ ಅಂಗಡಿಗೆ ಹೋಗಿ ಅದನ್ನು ತರಬೇಕು. ನಾವು ಬಾಳೆಹಣ್ಣನ್ನು ಪಡೆಯಲು ದುಡ್ಡು ಕೊಟ್ಟಿಲ್ಲವಾದರೂ ಪ್ರಯತ್ನ ಹಾಕಿದ್ದೇವೆ. ಅದೇ ರೀತಿ ಸತ್ಯ ಕಲಿಯಲು ನಾವು ದುಡ್ಡು ಕೊಡಬೇಕಾಗಿಲ್ಲ, ಆದರೆ ಪ್ರಯತ್ನ ಹಾಕಬೇಕು ಮತ್ತು ಕೆಲವು ತ್ಯಾಗಗಳನ್ನು ಮಾಡಲು ಸಿದ್ಧರಿರಬೇಕು.

6 ಯೆಶಾಯ 55:1-3 ಓದಿ. ಸತ್ಯವನ್ನು ಕೊಂಡುಕೊಳ್ಳುವುದು ಅಂದರೇನು ಎಂದು ಅರ್ಥಮಾಡಿಕೊಳ್ಳಲು ಈ ವಚನಗಳಲ್ಲಿ ಯೆಹೋವ ದೇವರು ಹೇಳಿರುವ ಮಾತುಗಳು ಸಹಾಯ ಮಾಡುತ್ತವೆ. ಯೆಹೋವ ದೇವರು ಈ ವಚನಗಳಲ್ಲಿ ತನ್ನ ವಾಕ್ಯವನ್ನು ನೀರು, ಹಾಲು ಮತ್ತು ದ್ರಾಕ್ಷಾಮದ್ಯಕ್ಕೆ ಹೋಲಿಸುತ್ತಾನೆ. ಬಾಯಾರಿರುವ ಒಬ್ಬ ವ್ಯಕ್ತಿಗೆ ತಂಪಾದ ನೀರು ಚೈತನ್ಯ ನೀಡುವಂತೆ ನಮಗೆ ಸತ್ಯ ಚೈತನ್ಯ ನೀಡುತ್ತದೆ. ಹಾಲು ಕುಡಿದರೆ ಮಗು ದಷ್ಟಪುಷ್ಟವಾಗಿ ಬೆಳೆಯುವಂತೆ ಬೈಬಲ್‌ ಸತ್ಯ ಯೆಹೋವ ದೇವೆರೊಂದಿಗೆ ನಮಗಿರುವ ಸಂಬಂಧವನ್ನು ಬಲಪಡಿಸುತ್ತದೆ. ಯೆಹೋವ ದೇವರು ತನ್ನ ವಾಕ್ಯವನ್ನು ದ್ರಾಕ್ಷಾಮದ್ಯಕ್ಕೂ ಹೋಲಿಸುತ್ತಾನೆ. ಯಾಕೆ? ದ್ರಾಕ್ಷಾಮದ್ಯದಿಂದ ಸಂತೋಷ ಸಿಗುತ್ತದೆ ಎಂದು ದೇವರ ವಾಕ್ಯವಾದ ಬೈಬಲ್‌ ಹೇಳುತ್ತದೆ. (ಕೀರ್ತ. 104:15) ಆದ್ದರಿಂದ ಯೆಹೋವನು ದ್ರಾಕ್ಷಾಮದ್ಯವನ್ನು ಕೊಂಡುಕೊಳ್ಳಿರಿ ಎಂದು ಹೇಳುವಾಗ ನಾವು ಜೀವನದಲ್ಲಿ ಆತನ ಮಾರ್ಗದರ್ಶನವನ್ನು ಪಾಲಿಸಿದರೆ ಸಂತೋಷವಾಗಿರುತ್ತೇವೆ ಎಂದು ಹೇಳುತ್ತಿದ್ದಾನೆ. (ಕೀರ್ತ. 19:8) ನಾವು ಸತ್ಯ ಕಲಿತು ಅನ್ವಯಿಸಿಕೊಳ್ಳುವಾಗ ಯಾವೆಲ್ಲಾ ಪ್ರಯೋಜನ ಸಿಗುತ್ತದೆ ಎಂದು ಯೆಹೋವನು ಈ ಹೋಲಿಕೆಗಳ ಮೂಲಕ ನಮಗೆ ಕಲಿಸುತ್ತಿದ್ದಾನೆ. ಈಗ ನಾವು ಸತ್ಯವನ್ನು ಕೊಂಡುಕೊಳ್ಳಲು ಸಾಧ್ಯವಾಗುವ ಐದು ವಿಷಯಗಳ ಬಗ್ಗೆ ಮಾತಾಡೋಣ.

ಸತ್ಯವನ್ನು ಕೊಂಡುಕೊಳ್ಳಲು ನೀವು ಏನನ್ನು ಕೊಟ್ಟಿದ್ದೀರಿ?

7, 8. (ಎ) ಸತ್ಯ ಕಲಿಯಲು ಯಾಕೆ ಸಮಯ ಹಿಡಿಯುತ್ತದೆ? (ಬಿ) ಒಬ್ಬ ವಿದ್ಯಾರ್ಥಿ ಯಾವ ತ್ಯಾಗ ಮಾಡಿದಳು ಮತ್ತು ಇದರಿಂದ ಮುಂದೆ ಏನಾಯಿತು?

7 ಸಮಯ. ರಾಜ್ಯ ಸಂದೇಶವನ್ನು ಕೇಳಿಸಿಕೊಳ್ಳಲು, ಬೈಬಲ್‌ ಮತ್ತು ಬೈಬಲ್‌ ಸಾಹಿತ್ಯವನ್ನು ಓದಲು, ಯೆಹೋವನ ಸಾಕ್ಷಿಗಳ ಜೊತೆ ಬೈಬಲ್‌ ಅಧ್ಯಯನ ತೆಗೆದುಕೊಳ್ಳಲು, ಕೂಟಗಳಿಗೆ ತಯಾರಿ ಮಾಡಿ ಹಾಜರಾಗಲು ಸಮಯ ಹಿಡಿಯುತ್ತದೆ. ಈ ಎಲ್ಲ ವಿಷಯಗಳನ್ನು ಮಾಡಲು ನೀವು ಸಮಯ ಕೊಡಬೇಕಾಗುತ್ತದೆ. ಈ ಸಮಯವನ್ನು ನೀವು ಹೆಚ್ಚು ಪ್ರಾಮುಖ್ಯವಲ್ಲದ ವಿಷಯಗಳಿಗೆ ಕೊಡಬಹುದಿತ್ತು. (ಎಫೆಸ 5:15, 16 ಓದಿ.) ಮೂಲಭೂತ ಬೈಬಲ್‌ ಸತ್ಯಗಳನ್ನು ಕಲಿಯಲು ಎಷ್ಟು ಸಮಯ ಹಿಡಿಯುತ್ತದೆ? ಒಬ್ಬೊಬ್ಬರೂ ಒಂದೊಂದು ವೇಗದಲ್ಲಿ ಇದನ್ನು ಕಲಿಯುತ್ತಾರೆ. ಯೆಹೋವನ ಜ್ಞಾನ, ಆತನ ರೀತಿನೀತಿಗಳು ಮತ್ತು ಆತನು ಮಾಡಿರುವ ವಿಷಯಗಳ ಬಗ್ಗೆ ಕಲಿಯಲು ಕೊನೆಯೇ ಇಲ್ಲ. (ರೋಮ. 11:33) ಕಾವಲಿನ ಬುರುಜು ಪತ್ರಿಕೆಯ ಮೊದಲ ಸಂಚಿಕೆ ಸತ್ಯವನ್ನು “ಒಂದು ಚಿಕ್ಕ ಹೂವಿಗೆ” ಹೋಲಿಸುತ್ತಾ “ಸತ್ಯದ ಒಂದು ಹೂವು ಸಿಕ್ಕಿತು ಎಂದು ಸುಮ್ಮನಾಗಬೇಡಿ. ಒಂದು ಸಿಕ್ಕಿತು ಎಂದು ಸುಮ್ಮನಾದರೆ ಹೆಚ್ಚು ಸಿಗುವುದಿಲ್ಲ. ಹೆಚ್ಚನ್ನು ಸೇರಿಸಿ, ಹೆಚ್ಚು ಹುಡುಕಿ” ಎಂದು ಹೇಳಿತ್ತು. ಆದ್ದರಿಂದ ‘ನಾನು ಯೆಹೋವನ ಬಗ್ಗೆ ಎಷ್ಟು ಕಲಿತಿದ್ದೇನೆ?’ ಎಂದು ನಮ್ಮನ್ನೇ ಕೇಳಿಕೊಳ್ಳಬೇಕು. ನಾವು ಅನಂತಕಾಲ ಜೀವಿಸಿದರೂ ಯೆಹೋವನ ಬಗ್ಗೆ ಕಲಿಯಲು ಏನಾದರೂ ಇದ್ದೇ ಇರುತ್ತದೆ. ನಮಗಿರುವ ಸಮಯವನ್ನು ಸತ್ಯದ ಬಗ್ಗೆ ಹೆಚ್ಚನ್ನು ಕಲಿಯಲು ಬಳಸುವುದು ಪ್ರಾಮುಖ್ಯ. ಇದನ್ನು ಮಾಡಿದ ಒಬ್ಬರ ಉದಾಹರಣೆ ನೋಡೋಣ.

8 ಮಾರೀಕೊ * ಎಂಬ ಯುವತಿ ಒಂದು ಕೋರ್ಸ್‌ ಮಾಡಲು ಜಪಾನ್‌ನಿಂದ ಅಮೆರಿಕಗೆ ಹೋದಳು. ಒಂದು ದಿನ ಒಬ್ಬ ಪಯನೀಯರ್‌ ಸಹೋದರಿ ಮಾರೀಕೊ ಇದ್ದ ಮನೆಗೆ ಭೇಟಿ ನೀಡಿ ಸುವಾರ್ತೆ ಸಾರಿದರು. ಮಾರೀಕೊ ಈಗಾಗಲೇ ಒಂದು ಧರ್ಮದ ಸದಸ್ಯೆ ಆಗಿದ್ದರೂ ನಮ್ಮ ಸಹೋದರಿಯ ಜೊತೆ ಬೈಬಲ್‌ ಅಧ್ಯಯನ ಮಾಡಲು ಆರಂಭಿಸಿದಳು. ಅವಳು ಕಲಿಯುತ್ತಾ ಇರುವ ವಿಷಯ ಅವಳಿಗೆ ಎಷ್ಟು ಇಷ್ಟವಾಯಿತೆಂದರೆ ವಾರದಲ್ಲಿ ಎರಡು ಸಲ ಅಧ್ಯಯನ ಮಾಡಬಹುದಾ ಎಂದು ಕೇಳಿದಳು. ಮಾರೀಕೊ ತನ್ನ ಕೋರ್ಸ್‌ ಕಡೆ ಗಮನ ಕೊಡಬೇಕಿತ್ತು, ಪಾರ್ಟ್‌ ಟೈಮ್‌ ಕೆಲಸಾನೂ ಮಾಡುತ್ತಿದ್ದಳು. ಆದರೂ ಅವಳು ಕೂಟಗಳಿಗೆ ಹಾಜರಾಗಲು ಆರಂಭಿಸಿದಳು. ಮನರಂಜನೆಗೆ ಕೊಡುವ ಸಮಯವನ್ನು ಕಮ್ಮಿ ಮಾಡಿ ಸತ್ಯ ಕಲಿಯಲು ಹೆಚ್ಚು ಸಮಯ ಕೊಟ್ಟಳು. ಈ ತ್ಯಾಗಗಳನ್ನು ಮಾಡುವ ಮೂಲಕ ಅವಳು ಯೆಹೋವನಿಗೆ ಹತ್ತಿರವಾಗುತ್ತಾ ಬಂದಳು. ಒಂದು ವರ್ಷದೊಳಗೆ ಅವಳು ದೀಕ್ಷಾಸ್ನಾನ ಪಡಕೊಂಡಳು. ಆರು ತಿಂಗಳಾದ ಮೇಲೆ 2006​ರಲ್ಲಿ ಪಯನೀಯರ್‌ ಆದಳು. ಇವತ್ತಿಗೂ ಪಯನೀಯರ್‌ ಸೇವೆ ಮಾಡುತ್ತಿದ್ದಾಳೆ.

9, 10. (ಎ) ಸತ್ಯ ಕಲಿತಾಗ ನಾವು ಲೌಕಿಕ ವಿಷಯಗಳನ್ನು ನೋಡುವ ರೀತಿ ಹೇಗೆ ಬದಲಾಗುತ್ತದೆ? (ಬಿ) ಒಬ್ಬ ಯುವತಿ ಏನನ್ನು ಕೈಬಿಟ್ಟಳು ಮತ್ತು ಇದರ ಬಗ್ಗೆ ಅವಳಿಗೆ ಹೇಗನಿಸುತ್ತದೆ?

9 ಲೌಕಿಕ ಆಸೆಗಳು. ಸತ್ಯ ಕಲಿಯಲು ನಾವು ಒಂದು ಒಳ್ಳೇ ಸಂಬಳ ಸಿಗುವ ಕೆಲಸವನ್ನು ಬಿಟ್ಟುಬಿಡಬೇಕಾಗಬಹುದು. ಪೇತ್ರ ಮತ್ತು ಅಂದ್ರೆಯ ಮೀನು ಹಿಡಿಯುವವರಾಗಿದ್ದರು. ಆದರೆ ಯೇಸು ಅವರನ್ನು ತನ್ನ ಶಿಷ್ಯರಾಗಲು ಕರೆದಾಗ ಅವರು ತಮ್ಮ ವ್ಯಾಪಾರವನ್ನು ಬಿಟ್ಟು ಅವನ ಹಿಂದೆ ಹೋದರು. (ಮತ್ತಾ. 4:18-20) ಇದರ ಅರ್ಥ ಸತ್ಯ ಕಲಿಯಲು ನೀವು ಮಾಡುತ್ತಿರುವ ಕೆಲಸವನ್ನು ಬಿಡಲೇಬೇಕು ಅಂತಲ್ಲ. ಯಾಕೆಂದರೆ ಒಬ್ಬ ವ್ಯಕ್ತಿ ದುಡಿದು ತನ್ನ ಕುಟುಂಬವನ್ನು ಸಾಕಬೇಕೆಂದು ಬೈಬಲ್‌ ಹೇಳುತ್ತದೆ. (1 ತಿಮೊ. 5:8) ಆದರೆ ಸತ್ಯ ಕಲಿತಾಗ ನೀವು ಲೌಕಿಕ ವಿಷಯಗಳನ್ನು ನೋಡುವ ವಿಧ ಬದಲಾಗುತ್ತದೆ. ಜೀವನದಲ್ಲಿ ಯಾವುದು ತುಂಬ ಮುಖ್ಯ ಎಂದು ಅರ್ಥವಾಗುತ್ತದೆ. ಯೇಸು ಇದರ ಬಗ್ಗೆ ಮಾತಾಡುತ್ತಾ, “ಭೂಮಿಯಲ್ಲಿ ನಿಮಗಾಗಿ ಸಂಪತ್ತನ್ನು ಕೂಡಿಸಿಟ್ಟುಕೊಳ್ಳುವುದನ್ನು ನಿಲ್ಲಿಸಿರಿ; . . . ಆದರೆ ಸ್ವರ್ಗದಲ್ಲಿ ನಿಮಗಾಗಿ ಸಂಪತ್ತನ್ನು ಕೂಡಿಸಿಟ್ಟುಕೊಳ್ಳಿರಿ” ಎಂದು ಹೇಳಿದ್ದಾನೆ. (ಮತ್ತಾ. 6:19, 20) ಮರೀಯ ಎಂಬ ಯುವತಿ ಇದನ್ನೇ ಮಾಡಿದಳು.

10 ಚಿಕ್ಕ ವಯಸ್ಸಿಂದ ಮರೀಯಗೆ ಗಾಲ್ಫ್‌ ಆಡುವುದೆಂದರೆ ತುಂಬ ಇಷ್ಟ. ಪ್ರೌಢ ಶಾಲೆಗೆ ಹೋದ ಮೇಲೆ ಆ ಆಟವನ್ನು ತುಂಬ ಚೆನ್ನಾಗಿ ಆಡಲು ಆರಂಭಿಸಿದಳು. ಇದರಿಂದ ಅವಳಿಗೆ ವಿಶ್ವವಿದ್ಯಾಲಯಕ್ಕೆ ಹೋಗಿ ಓದಲು ಸ್ಕಾಲರ್‌ಷಿಪ್‌ ಸಿಕ್ಕಿತು. ಗಾಲ್ಫ್‌ ಆಟವನ್ನೇ ಜೀವನವೃತ್ತಿ ಮಾಡಿಕೊಂಡು ತುಂಬ ದುಡ್ಡು ಸಂಪಾದಿಸಬೇಕು ಅಂದುಕೊಂಡಿದ್ದಳು. ನಂತರ ಅವಳು ಬೈಬಲ್‌ ಅಧ್ಯಯನ ಮಾಡಲು ಆರಂಭಿಸಿದಳು. ತಾನು ಕಲಿಯುತ್ತಿದ್ದ ವಿಷಯಗಳು ಮರೀಯಗೆ ತುಂಬ ಇಷ್ಟವಾಯಿತು, ಕಲಿತದ್ದನ್ನು ಜೀವನದಲ್ಲಿ ಅನ್ವಯಿಸಿಕೊಳ್ಳಲು ಆರಂಭಿಸಿದಳು. “ನಾನು ನನ್ನ ಮನೋಭಾವ ಮತ್ತು ಜೀವನ ರೀತಿಯನ್ನು ಬೈಬಲಿಗೆ ಅನುಸಾರ ಎಷ್ಟು ಬದಲಾಯಿಸಿಕೊಂಡೆನೋ ಅಷ್ಟು ಹೆಚ್ಚು ಸಂತೋಷವಾಗಿರುವುದನ್ನು ನೋಡಿದೆ” ಎಂದು ಮರೀಯ ಹೇಳುತ್ತಾಳೆ. ಯೆಹೋವನ ಜೊತೆ ಇರುವ ಸಂಬಂಧ ಮತ್ತು ತನ್ನ ಜೀವನವೃತ್ತಿ ಎರಡಕ್ಕೂ ಗಮನ ಕೊಡಲು ಆಗಲ್ಲ ಎಂದು ಅವಳು ಅರ್ಥಮಾಡಿಕೊಂಡಳು. (ಮತ್ತಾ. 6:24) ಆದ್ದರಿಂದ ಗಾಲ್ಫ್‌ ಅನ್ನು ಜೀವನವೃತ್ತಿಯಾಗಿ ಮಾಡಿಕೊಳ್ಳುವ ಗುರಿಯನ್ನು ಕೈಬಿಟ್ಟಳು. ಈಗ ಮರೀಯ ಪಯನೀಯರ್‌ ಆಗಿ ಸೇವೆ ಮಾಡುತ್ತಿದ್ದಾಳೆ. “ಜೀವನಕ್ಕೆ ಒಂದು ಅರ್ಥ ಇದೆ, ನಾನು ತುಂಬ ಸಂತೋಷವಾಗಿದ್ದೇನೆ” ಎಂದು ಮರೀಯ ಹೇಳುತ್ತಾಳೆ.

11. ಸತ್ಯ ಕಲಿಯುವಾಗ ನಮ್ಮ ಕೆಲವು ಸಂಬಂಧಗಳು ಏನಾಗಬಹುದು?

11 ಸಂಬಂಧಗಳು. ನಾವು ಬೈಬಲಿಂದ ಕಲಿಯುವ ವಿಷಯಗಳನ್ನು ಅನ್ವಯಿಸಿಕೊಳ್ಳುವಾಗ ನಮ್ಮ ಸ್ನೇಹಿತರು ಮತ್ತು ಸಂಬಂಧಿಕರ ಜೊತೆ ಇರುವ ಸಂಬಂಧ ಮೊದಲಿನ ತರ ಇರಲಿಕ್ಕಿಲ್ಲ. ಯಾಕೆ? ಯೇಸು ತನ್ನ ಶಿಷ್ಯರ ಬಗ್ಗೆ ಮಾಡಿದ ಪ್ರಾರ್ಥನೆಯಲ್ಲಿ ಇದಕ್ಕೆ ಉತ್ತರವಿದೆ: “ಇವರನ್ನು ಸತ್ಯದ ಮೂಲಕ ಪವಿತ್ರೀಕರಿಸು; ನಿನ್ನ ವಾಕ್ಯವೇ ಸತ್ಯವು.” (ಯೋಹಾ. 17:17) ಇಲ್ಲಿರುವ “ಪವಿತ್ರೀಕರಿಸು” ಎಂಬ ಪದಕ್ಕೆ “ಪ್ರತ್ಯೇಕಿಸು” ಎಂಬ ಅರ್ಥ ಕೂಡ ಇದೆ. ನಾವು ಸತ್ಯವನ್ನು ನಮ್ಮ ಜೀವನದಲ್ಲಿ ಅನ್ವಯಿಸಿಕೊಳ್ಳಲು ಆರಂಭಿಸುವಾಗ ಲೋಕದಿಂದ ಪ್ರತ್ಯೇಕವಾಗುತ್ತೇವೆ. ಯಾಕೆಂದರೆ ನಾವು ಪಾಲಿಸುವ ಮಟ್ಟಗಳು ಬೈಬಲಿಗೆ ತಕ್ಕ ಹಾಗೆ ಇರುತ್ತವೆ. ನಾವು ನಮ್ಮ ಸ್ನೇಹಿತರು ಮತ್ತು ಸಂಬಂಧಿಕರ ಜೊತೆ ಒಳ್ಳೇ ಸಂಬಂಧ ಇಟ್ಟುಕೊಳ್ಳಲು ಬಯಸುವುದಾದರೂ ಕೆಲವರಿಗೆ ನಮ್ಮನ್ನು ನೋಡಿದರೆ ಮೊದಲು ತರ ಇಷ್ಟ ಆಗಲಿಕ್ಕಿಲ್ಲ ಮತ್ತು ಅವರು ನಮ್ಮ ಹೊಸ ನಂಬಿಕೆಗಳನ್ನು ವಿರೋಧಿಸಲೂಬಹುದು. ಇದನ್ನು ನೋಡಿ ನಾವು ಆಶ್ಚರ್ಯಪಡುವುದಿಲ್ಲ. ಯಾಕೆಂದರೆ “ಒಬ್ಬ ಮನುಷ್ಯನಿಗೆ ಅವನ ಮನೆಯವರೇ ವೈರಿಗಳಾಗುವುದು ನಿಶ್ಚಯ” ಎಂದು ಯೇಸು ಹೇಳಿದ್ದಾನೆ. (ಮತ್ತಾ. 10:36) ಆದರೆ ನಾವು ಸತ್ಯಕ್ಕಾಗಿ ಏನನ್ನೇ ಕಳಕೊಂಡರೂ ಅದನ್ನು ನೂರುಪಟ್ಟು ಪಡಕೊಳ್ಳುತ್ತೇವೆ ಎಂದು ಯೇಸು ಮಾತು ಕೊಟ್ಟಿದ್ದಾನೆ.—ಮಾರ್ಕ 10:28-30 ಓದಿ.

12. ಸತ್ಯಕ್ಕಾಗಿ ಒಬ್ಬ ಯೆಹೂದಿ ಏನು ಮಾಡಿದರು?

12 ಏರನ್‌ ಎಂಬ ಯೆಹೂದಿಯ ಉದಾಹರಣೆ ನೋಡಿ. ದೇವರ ಹೆಸರನ್ನು ಉಚ್ಚರಿಸುವುದು ತಪ್ಪು ಎಂದು ಅವರಿಗೆ ಚಿಕ್ಕ ವಯಸ್ಸಿಂದ ಕಲಿಸಲಾಗಿತ್ತು. ಆದರೆ ಅವರಿಗೆ ದೇವರ ಬಗ್ಗೆ ಸತ್ಯ ಏನೆಂದು ತಿಳುಕೊಳ್ಳುವ ಆಸೆ ತುಂಬ ಇತ್ತು. ಒಂದು ದಿನ ಅವರಿಗೆ ಒಬ್ಬ ಸಾಕ್ಷಿ ಸಿಕ್ಕಿದರು. ಹೀಬ್ರು ಭಾಷೆಯಲ್ಲಿ ದೇವರ ಹೆಸರಲ್ಲಿರುವ ನಾಲ್ಕು ವ್ಯಂಜನಾಕ್ಷರಗಳಿಗೆ ಸ್ವರಾಕ್ಷಗಳನ್ನು ಸೇರಿಸಿದರೆ ಅದನ್ನು “ಯೆಹೋವ” ಎಂದು ಉಚ್ಚರಿಸಬಹುದು ಎಂದು ಆ ಸಾಕ್ಷಿ ತೋರಿಸಿಕೊಟ್ಟರು. ಏರನ್‌ಗೆ ಇದನ್ನು ತಿಳಿದು ತುಂಬ ಸಂತೋಷವಾಯಿತು. ಇದನ್ನು ಸಭಾಮಂದಿರದಲ್ಲಿರುವ ರಬ್ಬಿಗಳಿಗೆ ತಿಳಿಸಲು ಖುಷಿಯಿಂದ ಹೋದರು. ದೇವರ ಹೆಸರಿನ ಬಗ್ಗೆ ಇರುವ ಸತ್ಯವನ್ನು ತಿಳುಕೊಂಡು ರಬ್ಬಿಗಳು ಸಂತೋಷಪಡುತ್ತಾರೆ ಎಂದು ಅವರು ನೆನಸಿದರು. ಆದರೆ ಆ ರಬ್ಬಿಗಳಿಗೆ ಸಂತೋಷವಾಗಲಿಲ್ಲ. ಅವರು ಏರನ್‌ ಮೇಲೆ ಉಗುಳಿ ಸಭಾಮಂದಿರದಿಂದ ಓಡಿಸಿಬಿಟ್ಟರು. ಕುಟುಂಬದವರೂ ಅವರನ್ನು ವಿರೋಧಿಸಿದರು. ಆದರೆ ಇದನ್ನೆಲ್ಲಾ ನೋಡಿ ಏರನ್‌ ಯೆಹೋವನ ಬಗ್ಗೆ ಕಲಿಯುವುದನ್ನು ನಿಲ್ಲಿಸಲಿಲ್ಲ. ಅವರು ಯೆಹೋವನ ಸಾಕ್ಷಿಯಾದರು ಮತ್ತು ಜೀವನ ಪೂರ್ತಿ ನಂಬಿಗಸ್ತರಾಗಿ ಯೆಹೋವನ ಸೇವೆ ಮಾಡಿದರು. ನಾವು ಸಹ ಸತ್ಯ ಕಲಿಯುವಾಗ ಬೇರೆಯವರ ಜೊತೆ ಇರುವ ನಮ್ಮ ಸಂಬಂಧ ಹಾಳಾಗುವ ಸಾಧ್ಯತೆ ಇದೆ ಅನ್ನುವುದನ್ನು ಮನಸ್ಸಲ್ಲಿಡಬೇಕು.

13, 14. ಸತ್ಯ ಕಲಿತಾಗ ನಾವು ಯೋಚಿಸುವ ಮತ್ತು ನಡಕೊಳ್ಳುವ ವಿಧದಲ್ಲಿ ಯಾವ ಬದಲಾವಣೆಗಳನ್ನು ಮಾಡಿಕೊಳ್ಳಬೇಕು? ಉದಾಹರಣೆ ಕೊಡಿ.

13 ಕೆಟ್ಟ ಯೋಚನೆ ಮತ್ತು ನಡತೆ. ನಾವು ಸತ್ಯ ಕಲಿತು ಬೈಬಲ್‌ ಮಟ್ಟಗಳಿಗನುಸಾರ ಜೀವಿಸಲು ಆರಂಭಿಸುವಾಗ ನಮ್ಮ ಯೋಚನೆ ಮತ್ತು ನಡತೆಯನ್ನು ಬದಲಾಯಿಸಲು ಸಿದ್ಧವಾಗಿರಬೇಕು. ಅಪೊಸ್ತಲ ಪೇತ್ರನು ಬರೆದದ್ದು: “ನೀವು ಮುಂಚೆ ಅಜ್ಞಾನಿಗಳಾಗಿದ್ದಾಗ ನಿಮಗಿದ್ದ ಇಚ್ಛೆಗಳಿಗನುಸಾರ ನಡೆಯುತ್ತಿದ್ದಂತೆ ಈಗ ನಡೆಯುವುದನ್ನು ಬಿಟ್ಟುಬಿಡಿರಿ. . . . ವಿಧೇಯ ಮಕ್ಕಳಂತೆ ನಿಮ್ಮ ಎಲ್ಲ ನಡವಳಿಕೆಯಲ್ಲಿ ನೀವು ಸಹ ಪವಿತ್ರರಾಗಿರಿ.” (1 ಪೇತ್ರ 1:14, 15) ಪುರಾತನ ಕೊರಿಂಥ ಪಟ್ಟಣದಲ್ಲಿ ಅನೇಕರು ಅನೈತಿಕ ಜೀವನ ನಡೆಸುತ್ತಿದ್ದರು. ಯೆಹೋವನ ದೃಷ್ಟಿಯಲ್ಲಿ ಶುದ್ಧರಾಗಲು ಅವರು ದೊಡ್ಡ ಬದಲಾವಣೆಗಳನ್ನು ಮಾಡಬೇಕಿತ್ತು. (1 ಕೊರಿಂ. 6:9-11) ಇಂದು ಸಹ ಅನೇಕರು ಇಂಥ ದೊಡ್ಡ ಬದಲಾವಣೆಗಳನ್ನು ಮಾಡಿದ್ದಾರೆ. ಪೇತ್ರನು ಈ ವಿಷಯದ ಬಗ್ಗೆ ಹೇಳುತ್ತಾ, “ನೀವು ಸಡಿಲು ನಡತೆ, ಕಾಮಾತುರತೆ, ಮಿತಿಮೀರಿದ ದ್ರಾಕ್ಷಾಮದ್ಯ ಸೇವನೆ, ಭಾರೀ ಮೋಜು, ಮದ್ಯಪಾನ ಸ್ಪರ್ಧೆ, ನಿಷಿದ್ಧ ವಿಗ್ರಹಾರಾಧನೆ ಈ ಮುಂತಾದ ಕಾರ್ಯಗಳನ್ನು ಮಾಡುತ್ತಾ ಅನ್ಯಜನಾಂಗಗಳ ಇಚ್ಛೆಗಳನ್ನು ಮಾಡುವುದರಲ್ಲಿ ಕಳೆದುಹೋದ ಕಾಲವೇ ಸಾಕು” ಎಂದು ಬರೆದಿದ್ದಾನೆ.—1 ಪೇತ್ರ 4:3.

14 ಡೆವಿನ್‌ ಮತ್ತು ಜ್ಯಾಸ್ಮಿನ್‌ ದಂಪತಿ ಬಗ್ಗೆ ನೋಡಿ. ಅವರು ತುಂಬ ವರ್ಷಗಳಿಂದ ಕುಡುಕರಾಗಿದ್ದರು. ಡೆವಿನ್‌ ಒಳ್ಳೇ ಅಕೌಂಟೆಂಟ್‌ ಆಗಿದ್ದರೂ ಕುಡುಕನಾಗಿದ್ದರಿಂದ ಅವನಿಗೆ ಖಾಯಂ ಆಗಿ ಒಂದು ಕೆಲಸ ಅಂತ ಇರುತ್ತಿರಲಿಲ್ಲ. ಜ್ಯಾಸ್ಮಿನ್‌ ಜಗಳಗಂಟಿ ಎಂದು ಎಲ್ಲರಿಗೂ ಗೊತ್ತಿತ್ತು. ಒಂದಿನ ಅವಳು ಕುಡಿದು ರಸ್ತೆಯಲ್ಲಿ ಓಲಾಡುತ್ತಾ ಬರುತ್ತಿದ್ದಾಗ ಮಿಷನರಿ ದಂಪತಿ ಅವಳಿಗೆ ಸಿಕ್ಕಿದರು. ಬೈಬಲ್‌ ಅಧ್ಯಯನದ ಏರ್ಪಾಡಿನ ಬಗ್ಗೆ ಅವಳ ಜೊತೆ ಮಾತಾಡಿದರು. ಮುಂದಿನ ವಾರ ಅವರು ಅವಳ ಮನೆಗೆ ಹೋದಾಗ ಗಂಡ-ಹೆಂಡತಿ ಇಬ್ಬರೂ ಕಂಠಪೂರ್ತಿ ಕುಡಿದಿರುವುದನ್ನು ನೋಡಿದರು. ಮಿಷನರಿಗಳು ತಮ್ಮ ಮನೆಗೆ ಬರುತ್ತಾರೆ ಅಂತ ಅವರು ಅಂದುಕೊಂಡೇ ಇರಲಿಲ್ಲ. ಮುಂದಿನ ಸಾರಿ ಮಿಷನರಿಗಳು ಬಂದಾಗ ಸನ್ನಿವೇಶ ಬೇರೆ ಆಗಿತ್ತು. ಡೆವಿನ್‌ ಮತ್ತು ಜ್ಯಾಸ್ಮಿನ್‌ ಬೈಬಲ್‌ ಸತ್ಯ ಕಲಿಯಲು ಆಸೆಯಿಂದ ಕಾಯುತ್ತಾ ಇದ್ದರು. ಕಲಿತ ವಿಷಯಗಳನ್ನು ಕೂಡಲೆ ಅನ್ವಯಿಸಲು ಆರಂಭಿಸಿದರು. ಮೂರೇ ತಿಂಗಳಲ್ಲಿ ಕುಡಿಯುವುದನ್ನು ಬಿಟ್ಟುಬಿಟ್ಟರು. ಕಾನೂನುಬದ್ಧವಾಗಿ ಮದುವೆಯಾದರು. ಡೆವಿನ್‌ ಮತ್ತು ಜ್ಯಾಸ್ಮಿನ್‌ ಬದಲಾಗಿರುವುದನ್ನು ಅವರ ಊರಲ್ಲಿದ್ದ ಅನೇಕರು ಗಮನಿಸಿದರು. ಅವರೂ ಬೈಬಲ್‌ ಅಧ್ಯಯನ ಮಾಡಲು ಆರಂಭಿಸಿದರು.

15. ಸತ್ಯಕ್ಕಾಗಿ ನಾವು ಯಾವುದನ್ನು ಬಿಟ್ಟುಬಿಡುವುದು ತುಂಬ ಕಷ್ಟ ಆಗಬಹುದು? ಯಾಕೆ?

15 ದೇವರಿಗೆ ಇಷ್ಟವಾಗದ ಸಂಪ್ರದಾಯ ಮತ್ತು ಪದ್ಧತಿಗಳು. ಯೆಹೋವನಿಗೆ ಇಷ್ಟವಾಗದ ಸಂಪ್ರದಾಯ ಮತ್ತು ಪದ್ಧತಿಗಳನ್ನು ಬಿಟ್ಟುಬಿಡಲು ನಮಗೆ ತುಂಬ ಕಷ್ಟ ಆಗಬಹುದು. ಈ ವಿಷಯಗಳ ಬಗ್ಗೆ ಯೆಹೋವನಿಗೆ ಹೇಗನಿಸುತ್ತದೆ ಎಂದು ತಿಳುಕೊಂಡ ಮೇಲೂ ಕೆಲವರಿಗೆ ಅವನ್ನು ಬಿಟ್ಟುಬಿಡಲು ಕಷ್ಟವಾಗುತ್ತದೆ. ಯಾಕೆಂದರೆ ಕುಟುಂಬದವರು, ಜೊತೆ ಕೆಲಸ ಮಾಡುವವರು ಅಥವಾ ಸ್ನೇಹಿತರು ಹೇಗೆ ಪ್ರತಿಕ್ರಿಯಿಸಬಹುದು ಎಂದು ಅವರು ಯೋಚಿಸುತ್ತಾರೆ. ಕೆಲವು ಸಂಪ್ರದಾಯಗಳಿಗೆ ಜನರು ತುಂಬ ಅಂಟಿಕೊಂಡಿರುತ್ತಾರೆ ಅನ್ನುವುದು ಅವರಿಗೆ ಗೊತ್ತು. ಉದಾಹರಣೆಗೆ, ತೀರಿಹೋದ ಸಂಬಂಧಿಕರಿಗೆ ಗೌರವ ಕೊಡಬೇಕು ಅನ್ನುವಂಥ ಕೆಲವು ಸಂಪ್ರದಾಯಗಳಿಗೆ ಜನ ತುಂಬ ಪ್ರಾಮುಖ್ಯತೆ ಕೊಡುತ್ತಾರೆ. (ಧರ್ಮೋ. 14:1) ಹಾಗಾದರೆ ಬೇಕಾದ ಬದಲಾವಣೆಗಳನ್ನು ಮಾಡಲು ಯಾವುದು ಸಹಾಯ ಮಾಡುತ್ತದೆ? ಹಿಂದೆ ಕೆಲವರು ಸತ್ಯ ಕಲಿತಾಗ ಏನು ಮಾಡಿದರೆಂದು ನೋಡುವಾಗ ಬದಲಾವಣೆ ಮಾಡಿಕೊಳ್ಳಲು ಬೇಕಾದ ಪ್ರೇರಣೆ ಸಿಗುತ್ತದೆ. ಮೊದಲನೇ ಶತಮಾನದಲ್ಲಿ ಎಫೆಸದವರು ಏನು ಮಾಡಿದರು ಎಂದು ನೋಡೋಣ.

16. ಸತ್ಯಕ್ಕೋಸ್ಕರ ಎಫೆಸದಲ್ಲಿದ್ದ ಕೆಲವರು ಏನು ಮಾಡಿದರು?

16 ಎಫೆಸ ಪಟ್ಟಣದಲ್ಲಿ ಮಾಟಮಂತ್ರ ಮಾಡುವುದು ಸರ್ವಸಾಮಾನ್ಯವಾಗಿತ್ತು. ಇಂಥ ಜನರು ಕ್ರೈಸ್ತರಾದಾಗ ಏನು ಮಾಡಿದರು? “ಮಾಟಮಂತ್ರಗಳನ್ನು ಮಾಡುತ್ತಿದ್ದವರಲ್ಲಿ ಅನೇಕರು ತಮ್ಮ ಪುಸ್ತಕಗಳನ್ನು ತಂದು ಒಟ್ಟುಗೂಡಿಸಿ ಎಲ್ಲರ ಮುಂದೆ ಅವುಗಳನ್ನು ಸುಟ್ಟುಬಿಟ್ಟರು. ಅವರು ಅವುಗಳ ಒಟ್ಟು ಬೆಲೆಯನ್ನು ಲೆಕ್ಕಮಾಡಿದಾಗ ಅದು ಐವತ್ತು ಸಾವಿರ ಬೆಳ್ಳಿ ನಾಣ್ಯ ಆಗಿತ್ತೆಂದು ತಿಳಿದುಕೊಂಡರು. ಈ ರೀತಿಯಲ್ಲಿ ಯೆಹೋವನ ವಾಕ್ಯವು ಪ್ರಬಲವಾಗಿ ಬೆಳೆಯುತ್ತಾ ಅಭಿವೃದ್ಧಿಹೊಂದಿತು” ಎಂದು ಬೈಬಲ್‌ ಹೇಳುತ್ತದೆ. (ಅ. ಕಾ. 19:19, 20) ಆ ನಂಬಿಗಸ್ತ ಕ್ರೈಸ್ತರು ದುಬಾರಿಯಾದ ಪುಸ್ತಕಗಳನ್ನು ಸುಟ್ಟುಹಾಕುವುದಕ್ಕೆ ಹಿಂದೆ ಮುಂದೆ ನೋಡಲಿಲ್ಲ. ಇದನ್ನು ನೋಡಿ ಯೆಹೋವನು ಅವರನ್ನು ಆಶೀರ್ವದಿಸಿದನು.

17. (ಎ) ಸತ್ಯಕ್ಕೋಸ್ಕರ ನಾವು ಯಾವ ಕೆಲವು ವಿಷಯಗಳನ್ನು ಬಿಟ್ಟುಕೊಡಬೇಕಾಗಿರಬಹುದು? (ಬಿ) ಮುಂದಿನ ಲೇಖನದಲ್ಲಿ ನಾವು ಯಾವ ಪ್ರಶ್ನೆಗಳನ್ನು ಚರ್ಚಿಸಲಿದ್ದೇವೆ?

17 ಸತ್ಯ ಕಲಿಯಕ್ಕೋಸ್ಕರ ನೀವು ಯಾವ ತ್ಯಾಗ ಮಾಡಿದ್ದೀರಾ? ನಾವೆಲ್ಲರೂ ನಮ್ಮ ಸಮಯ ಕೊಟ್ಟಿದ್ದೀವಿ. ಶ್ರೀಮಂತರಾಗುವ ಅವಕಾಶಗಳನ್ನು ನಮ್ಮಲ್ಲಿ ಕೆಲವರು ಕೈಬಿಟ್ಟಿದ್ದೀವಿ. ಕೆಲವರ ಜೊತೆ ನಮ್ಮ ಸಂಬಂಧ ಹಾಳಾಗಿರಬಹುದು. ನಮ್ಮಲ್ಲಿ ಅನೇಕರು ನಮ್ಮ ಯೋಚನೆ ಮತ್ತು ನಡತೆಯನ್ನು ಬದಲಾಯಿಸಿಕೊಂಡಿದ್ದೀವಿ. ಯೆಹೋವನಿಗೆ ಇಷ್ಟವಾಗದ ಸಂಪ್ರದಾಯ-ಪದ್ಧತಿಗಳನ್ನು ನಾವು ಬಿಟ್ಟುಬಿಟ್ಟಿದ್ದೀವಿ. ಹೀಗೆ ನಾವು ಅದೇನೇ ಬಿಟ್ಟುಕೊಟ್ಟಿರುವುದಾದರೂ ಅದು ನಾವು ಕಲಿತ ಬೈಬಲ್‌ ಸತ್ಯಕ್ಕೆ ಸರಿಸಾಟಿಯಲ್ಲ ಎಂದು ಅರ್ಥಮಾಡಿಕೊಂಡಿದ್ದೇವೆ. ಈ ಸತ್ಯ ಯೆಹೋವನ ಜೊತೆ ಆಪ್ತ ಸಂಬಂಧ ಬೆಳೆಸಿಕೊಳ್ಳಲು ಸಹಾಯ ಮಾಡಿದೆ. ಇದಕ್ಕಿಂತ ದೊಡ್ಡ ವಿಷಯ ಬೇರೊಂದಿಲ್ಲ. ಸತ್ಯದಿಂದಾಗಿ ನಮಗೆ ಸಿಕ್ಕಿರುವ ಎಲ್ಲಾ ಆಶೀರ್ವಾದಗಳ ಬಗ್ಗೆ ಯೋಚಿಸುವಾಗ ಒಬ್ಬರು ಯಾಕಾದರೂ ‘ಸತ್ಯವನ್ನು ಮಾರುತ್ತಾರೋ’ ಅಥವಾ ಸತ್ಯ ಬಿಟ್ಟುಹೋಗುತ್ತಾರೋ ಎಂಬ ಯೋಚನೆ ಬರುತ್ತದೆ. ಇದು ಹೇಗಾಗುತ್ತದೆ? ಇಂಥ ಗಂಭೀರ ತಪ್ಪನ್ನು ಮಾಡದಿರಲು ನಾವೇನು ಮಾಡಬೇಕು? ಈ ಪ್ರಶ್ನೆಗಳಿಗೆ ಮುಂದಿನ ಲೇಖನದಲ್ಲಿ ಉತ್ತರ ಇದೆ.

^ ಪ್ಯಾರ. 8 ಈ ಲೇಖನದಲ್ಲಿ ಕೆಲವು ಹೆಸರುಗಳನ್ನು ಬದಲಾಯಿಸಲಾಗಿದೆ.