ಅಧ್ಯಯನ ಲೇಖನ 44
ಅಂತ್ಯ ಬರುವುದಕ್ಕೂ ಮುಂಚೆ ಆಪ್ತ ಸ್ನೇಹ ಬೆಳೆಸಿಕೊಳ್ಳಿ
“ಮಿತ್ರನ ಪ್ರೀತಿಯು ನಿರಂತರ.”—ಜ್ಞಾನೋ. 17:17.
ಗೀತೆ 53 ಐಕ್ಯದಿಂದ ಕೆಲಸ ಮಾಡುವುದು
ಕಿರುನೋಟ *
1-2. ಒಂದನೇ ಪೇತ್ರ 4:7, 8 ರ ಪ್ರಕಾರ ಕಷ್ಟ-ಪರೀಕ್ಷೆಗಳನ್ನು ಎದುರಿಸಲು ಯಾವುದು ಸಹಾಯ ಮಾಡುತ್ತದೆ?
ನಾವು ‘ಕಡೇ ದಿವಸಗಳ’ ಕೊನೆಯನ್ನು ತಲುಪುತ್ತಿದ್ದೇವೆ. ಹಾಗಾಗಿ ಅನೇಕ ಕಷ್ಟ-ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. (2 ತಿಮೊ. 3:1) ಉದಾಹರಣೆಗೆ, ಪಶ್ಚಿಮ ಆಫ್ರಿಕಾದ ಒಂದು ದೇಶದಲ್ಲಿ ಚುನಾವಣೆಯ ನಂತರ ತುಂಬ ದೊಂಬಿ-ಗಲಭೆ ನಡೆಯಿತು. ಎಲ್ಲಿ ನೋಡಿದರೂ ಗಲಾಟೆ, ಹೊಡೆದಾಟ ಇದ್ದದರಿಂದ ಆರು ತಿಂಗಳ ವರೆಗೆ ನಮ್ಮ ಸಹೋದರ ಸಹೋದರಿಯರಿಗೆ ಮನೆಯಿಂದ ಹೊರಗೆ ಕಾಲಿಡುವುದೇ ಕಷ್ಟವಾಗಿತ್ತು. ಈ ಕಷ್ಟದ ಪರಿಸ್ಥಿತಿಯನ್ನು ಎದುರಿಸಲು ಅವರಿಗೆ ಯಾವುದು ಸಹಾಯಮಾಡಿತು? ಕೆಲವರಿಗೆ ಅಷ್ಟೊಂದು ಅಪಾಯ ಇಲ್ಲದಿರುವ ಸ್ಥಳಗಳಲ್ಲಿದ್ದ ಸಹೋದರರ ಮನೆಗಳಿಗೆ ಹೋಗಿ ಉಳುಕೊಳ್ಳಲು ಸಾಧ್ಯವಾಯಿತು. ಒಬ್ಬ ಸಹೋದರ ಹೀಗೆ ಹೇಳುತ್ತಾರೆ: “ಆಗ, ನನ್ನ ಜೊತೆ ನನ್ನ ಸ್ನೇಹಿತರಿದ್ದದರಿಂದ ನಾನು ಸಂತೋಷವಾಗಿದ್ದೆ. ಒಬ್ಬರನ್ನೊಬ್ಬರು ಬಲಪಡಿಸಲು ಸಾಧ್ಯವಾಯಿತು.”
2 “ಮಹಾ ಸಂಕಟ” ಬಂದಾಗ ನಮ್ಮನ್ನು ಪ್ರೀತಿಸುವ ಒಳ್ಳೇ ಸ್ನೇಹಿತರಿದ್ದರೆ ಸಂತೋಷವಾಗಿರುತ್ತೇವೆ. (ಪ್ರಕ. 7:14) ಸಮಯ ತುಂಬ ಕಡಿಮೆ ಇರುವುದರಿಂದ ನಾವು ಈಗಲೇ ಸಭೆಯವರೊಂದಿಗೆ ಆಪ್ತ ಸ್ನೇಹ ಬೆಳೆಸಿಕೊಳ್ಳುವುದು ತುಂಬ ಮುಖ್ಯ. (1 ಪೇತ್ರ 4:7, 8 ಓದಿ.) ನಾವು ಯೆರೆಮೀಯನ ಉದಾಹರಣೆಯಿಂದ ಅನೇಕ ವಿಷಯಗಳನ್ನು ಕಲಿಯಬಹುದು. ಯೆರೂಸಲೇಮಿನ ನಾಶನಕ್ಕೂ ಸ್ವಲ್ಪ ಮುಂಚಿನ ಸಮಯದಲ್ಲಿ ಯೆರೆಮೀಯನಿಗೆ ಕಷ್ಟ-ಪರೀಕ್ಷೆಗಳು ಬಂದಾಗ ತಾಳಿಕೊಳ್ಳಲು ಅವನ ಆಪ್ತ ಸ್ನೇಹಿತರು ಸಹಾಯ ಮಾಡಿದರು. * ಸ್ನೇಹವನ್ನು ಬಲಪಡಿಸಿಕೊಳ್ಳುವ ವಿಷಯದಲ್ಲಿ ಯೆರೆಮೀಯನನ್ನು ನಾವು ಹೇಗೆ ಅನುಕರಿಸಬಹುದು?
ಯೆರೆಮೀಯನಿಂದ ಕಲಿಯಿರಿ
3. (ಎ) ಎಲ್ಲರಿಂದ ದೂರ ಉಳಿಯುವಂತೆ ಮಾಡುವ ಯಾವ ಪರಿಸ್ಥಿತಿ ಯೆರೆಮೀಯನಿಗೆ ಎದುರಾಗಿತ್ತು? (ಬಿ) ಯೆರೆಮೀಯನು ತನ್ನ ಕಾರ್ಯದರ್ಶಿಯಾಗಿದ್ದ ಬಾರೂಕನ ಹತ್ತಿರ ಏನನ್ನು ಹೇಳಿಕೊಂಡನು? (ಸಿ) ಇದರಿಂದ ಏನಾಯಿತು?
3 ಕಡಿಮೆ ಅಂದರೂ 40 ವರ್ಷಗಳ ವರೆಗೆ, ಯೆರೆಮೀಯನು ದೇವರಿಗೆ ನಿಷ್ಠೆ ಇಲ್ಲದ ಜನರ ಮಧ್ಯೆ ಜೀವಿಸಿದನು. ಅವನ ಊರಾಗಿದ್ದ ಅನಾತೋತಿನಲ್ಲಿದ್ದ ನೆರೆಹೊರೆಯವರು ಮತ್ತು ಕೆಲವು ಸಂಬಂಧಿಕರೂ ಸರೀಕರೂ ಅಂಥವರೇ ಆಗಿದ್ದರು. (ಯೆರೆ. 11:21; 12:6) ಆದರೆ ಅವನು ‘ಯಾರ ಸಹವಾಸನೂ ಬೇಡಪ್ಪಾ’ ಅಂತ ಎಲ್ಲರಿಂದ ದೂರ ಉಳಿಯಲಿಲ್ಲ. ಬದಲಿಗೆ ಅವನು ತನ್ನ ಕಾರ್ಯದರ್ಶಿಯಾದ ಬಾರೂಕನ ಹತ್ತಿರ ತನ್ನ ಭಾವನೆಗಳನ್ನೆಲ್ಲಾ ಹೇಳಿಕೊಂಡನು. ಅವನ ಭಾವನೆಗಳ ಬಗ್ಗೆ ಬೈಬಲಿನಲ್ಲಿ ಇರುವುದರಿಂದ ಅವನಿಗೆ ಹೇಗನಿಸುತ್ತಿತ್ತು ಎಂದು ನಮಗೂ ಗೊತ್ತಿದೆ. (ಯೆರೆ. 8:21; 9:1; 20:14-18; 45:1) ಯೆರೆಮೀಯನ ಜೀವನದಲ್ಲಾದ ಘಟನೆಗಳನ್ನು ಬಾರೂಕನು ಬರೆಯುತ್ತಾ ಹೋದಂತೆ ಅವರಿಬ್ಬರಿಗೂ ಒಬ್ಬರಿಗೊಬ್ಬರ ಮೇಲೆ ಎಷ್ಟೊಂದು ಪ್ರೀತಿ-ಗೌರವ ಬೆಳೆದಿರಬಹುದಲ್ವಾ?—ಯೆರೆ. 20:1, 2; 26:7-11.
4. (ಎ) ಯೆಹೋವನು ಯೆರೆಮೀಯನಿಗೆ ಏನು ಮಾಡಲು ಹೇಳಿದನು? (ಬಿ) ಈ ನೇಮಕದಿಂದ ಯೆರೆಮೀಯ ಮತ್ತು ಬಾರೂಕ ಹೇಗೆ ಇನ್ನೂ ಆಪ್ತರಾದರು?
4 ಅನೇಕ ವರ್ಷಗಳವರೆಗೆ ಯೆರೆಮೀಯನು ಇಸ್ರಾಯೇಲ್ಯರಿಗೆ, ಮುಂದೆ ಯೆರೂಸಲೇಮಿಗೆ ಏನಾಗಲಿದೆ ಎಂದು ಧೈರ್ಯದಿಂದ ಎಚ್ಚರಿಸಿದನು. (ಯೆರೆ. 25:3) ತಮ್ಮ ತಪ್ಪುಗಳಿಗಾಗಿ ಪಶ್ಚಾತ್ತಾಪಪಡುವಂತೆ ಜನರನ್ನು ಪ್ರೇರೇಪಿಸಲಿಕ್ಕಾಗಿ ಇನ್ನೊಂದು ಪ್ರಯತ್ನ ಮಾಡುವಂತೆ ಯೆಹೋವನು ಯೆರೆಮೀಯನಿಗೆ ತಿಳಿಸಿದನು. ಎಚ್ಚರಿಕೆಯ ಸಂದೇಶವನ್ನು ಸುರುಳಿಯಲ್ಲಿ ಬರೆಯುವಂತೆ ಹೇಳಿದನು. (ಯೆರೆ. 36:1-4) ಯೆರೆಮೀಯ ಮತ್ತು ಬಾರೂಕ ಇಬ್ಬರೂ ಒಟ್ಟಾಗಿ ದೇವರು ಕೊಟ್ಟ ಈ ಕೆಲಸವನ್ನು ಮಾಡಿದರು. ಇದನ್ನು ಮಾಡಿಮುಗಿಸಲು ಅನೇಕ ತಿಂಗಳುಗಳೇ ಹಿಡಿದಿರಬೇಕು. ಆ ಸಮಯದಲ್ಲಿ ಅವರಿಬ್ಬರೂ ನಂಬಿಕೆ ಬಲಪಡಿಸುವಂಥ ಅನೇಕ ವಿಷಯಗಳ ಬಗ್ಗೆ ಮಾತಾಡಿರುತ್ತಾರೆ.
5. ಬಾರೂಕನು ಯೆರೆಮೀಯನ ಒಳ್ಳೇ ಸ್ನೇಹಿತನಾಗಿದ್ದನು ಎಂದು ನಾವು ಹೇಗೆ ಹೇಳಬಹುದು?
5 ಎಚ್ಚರಿಕೆಯ ಸಂದೇಶವನ್ನು ಸುರುಳಿಯಲ್ಲಿ ಬರೆದು ಮುಗಿಸಿದ ಮೇಲೆ ಅದನ್ನು ಜನರಿಗೆ ಮುಟ್ಟಿಸಲು ಯೆರೆಮೀಯನು ತನ್ನ ಸ್ನೇಹಿತನಾದ ಬಾರೂಕನ ಸಹಾಯ ಪಡೆಯಬೇಕಾಯಿತು. (ಯೆರೆ. 36:5, 6) ಅಪಾಯ ಇದ್ದರೂ ಬಾರೂಕನು ಧೈರ್ಯದಿಂದ ಈ ಕೆಲಸ ಮಾಡಿದನು. ಬಾರೂಕನು ದೇವಾಲಯದ ಪ್ರಾಕಾರಕ್ಕೆ ಹೋಗಿ ಸುರುಳಿಯಲ್ಲಿದ್ದದ್ದನ್ನು ಜನರೆದುರು ಓದಿದಾಗ ಯೆರೆಮೀಯನಿಗೆ ತನ್ನ ಸ್ನೇಹಿತನ ಬಗ್ಗೆ ಎಷ್ಟು ಹೆಮ್ಮೆ ಆಗಿರಬಹುದಲ್ವಾ? (ಯೆರೆ. 36:8-10) ಯೆಹೂದದ ಪ್ರಧಾನರು ಬಾರೂಕನು ಮಾಡಿದ್ದರ ಬಗ್ಗೆ ಕೇಳಿಸಿಕೊಂಡಾಗ ಅವರು ತಮ್ಮೆದುರಿಗೆ ಇನ್ನೊಮ್ಮೆ ಜೋರಾಗಿ ಓದುವಂತೆ ಅವನಿಗೆ ಹೇಳಿದರು. (ಯೆರೆ. 36:14, 15) ಯೆರೆಮೀಯನಿಂದ ಬಂದ ಆ ಸಂದೇಶವನ್ನು ರಾಜ ಯೆಹೋಯಾಕೀಮನಿಗೆ ಹೇಳಬೇಕೆಂದು ಪ್ರಧಾನರು ನಿರ್ಧರಿಸಿದರು. ಆದರೆ ಬಾರೂಕನಿಗೆ ಅಪಾಯ ಇದೆ ಎಂದು ತಿಳಿದು ಅವರು ಅವನಿಗೆ, “ಹೊರಡು, ನೀನೂ ಯೆರೆಮೀಯನೂ ಅಡಗಿಕೊಳ್ಳಿರಿ, ನೀವೆಲ್ಲಿದ್ದೀರೆಂಬದು ಯಾರಿಗೂ ಗೊತ್ತಾಗಬಾರದು” ಎಂದು ಹೇಳಿದರು. (ಯೆರೆ. 36:16-19) ಅವರ ಸಲಹೆ ಪಾಲಿಸಿದ್ದರಿಂದ ಒಳ್ಳೇದೇ ಆಯಿತು.
6. ವಿರೋಧ ಬಂದಾಗ ಯೆರೆಮೀಯ ಮತ್ತು ಬಾರೂಕ ಏನು ಮಾಡಿದರು?
6 ಯೆರೆಮೀಯನು ಬರೆಸಿದ್ದ ಮಾತುಗಳನ್ನು ಕೇಳಿ ರಾಜ ಯೆಹೋಯಾಕೀಮನ ಕೋಪ ನೆತ್ತಿಗೇರಿತು. ಅವನು ಆ ಸುರುಳಿಯನ್ನು ಸುಟ್ಟುಬಿಟ್ಟನು ಮತ್ತು ಯೆರೆಮೀಯ ಹಾಗೂ ಬಾರೂಕನನ್ನು ಬಂಧಿಸುವಂತೆ ಆಜ್ಞಾಪಿಸಿದನು. ಇದಕ್ಕೆ ಯೆರೆಮೀಯನು ಹೆದರಲಿಲ್ಲ. ಅವನು ಇನ್ನೊಂದು ಸುರುಳಿಯನ್ನು ತೆಗೆದುಕೊಂಡು ಅದನ್ನು ಬಾರೂಕನಿಗೆ ಕೊಟ್ಟನು. ಯೆಹೋವನ ಸಂದೇಶವನ್ನು ಯೆರೆಮೀಯನು ಹೇಳುತ್ತಾ ಹೋದನು ಮತ್ತು ಬಾರೂಕನು ಅದನ್ನು ಬರೆದನು. ಹೀಗೆ “ಯೆಹೂದದ ಅರಸನಾದ ಯೆಹೋಯಾಕೀಮನು ಸುಟ್ಟ ಮೊದಲನೆಯ ಸುರಳಿಯಲ್ಲಿದ್ದ ಪೂರ್ವದ ಆ ಮಾತುಗಳನ್ನೆಲ್ಲಾ” ಪುನಃ ಬರೆಯಲಾಯಿತು.—ಯೆರೆ. 36:26-28, 32.
7. ಯೆರೆಮೀಯ ಮತ್ತು ಬಾರೂಕ ಇಬ್ಬರೂ ಸೇರಿ ಕೆಲಸ ಮಾಡುವಾಗ ಏನಾಗಿರುವ ಸಾಧ್ಯತೆ ಇದೆ?
7 ಕಷ್ಟದಲ್ಲಿ ಒಟ್ಟಿಗಿದ್ದವರು ಹೆಚ್ಚಾಗಿ ಆಪ್ತ ಸ್ನೇಹಿತರಾಗುತ್ತಾರೆ. ದುಷ್ಟ ರಾಜ ಯೆಹೋಯಾಕೀಮನು ಸುರುಳಿಯನ್ನು ಸುಟ್ಟ ನಂತರ ಯೆರೆಮೀಯ ಮತ್ತು ಬಾರೂಕ ಇಬ್ಬರೂ ಸೇರಿ ಇನ್ನೊಂದು ಸುರುಳಿಯನ್ನು ಸಿದ್ಧ ಮಾಡಿದರಲ್ವಾ? ಆಗ ಅವರು ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥಮಾಡಿಕೊಂಡು ಇನ್ನೂ ಹೆಚ್ಚು ಆಪ್ತರಾಗಿರುತ್ತಾರೆ. ದೇವರಿಗೆ ನಂಬಿಗಸ್ತರಾಗಿದ್ದ ಈ ಇಬ್ಬರು ವ್ಯಕ್ತಿಗಳಿಂದ ನಾವೇನು ಕಲಿಯಬಹುದು?
ಭಾವನೆ ಮತ್ತು ಅನಿಸಿಕೆಗಳನ್ನು ಹೇಳಿಕೊಳ್ಳಿ
8. (ಎ) ನಾವು ಒಬ್ಬರ ಜೊತೆ ಆಪ್ತ ಸ್ನೇಹ ಬೆಳೆಸಿಕೊಳ್ಳಲು ಯಾಕೆ ಹಿಂಜರಿಯಬಹುದು? (ಬಿ) ನಾವು ಯಾಕೆ ಸ್ನೇಹಿತರನ್ನು ಮಾಡಿಕೊಳ್ಳುವ ಪ್ರಯತ್ನ ಬಿಡಬಾರದು?
8 ನಮಗೆ ಹಿಂದೆ ಯಾರಾದರೊಬ್ಬರು ನೋವು ಮಾಡಿರಬಹುದು. ಇದರಿಂದಾಗಿ ಬೇರೆಯವರನ್ನು ನಂಬಿ ನಮ್ಮ ಭಾವನೆಗಳನ್ನು ಹೇಳಿಕೊಳ್ಳಲು ಕಷ್ಟವಾಗುತ್ತಿರಬಹುದು. (ಜ್ಞಾನೋ. 18:19, 24) ಅಥವಾ ‘ನನಗೆ ಬೇರೆಯವರ ಜೊತೆ ಆಪ್ತ ಸ್ನೇಹ ಬೆಳೆಸಿಕೊಳ್ಳುವಷ್ಟು ಸಮಯನೂ ಇಲ್ಲ, ತಾಳ್ಮೆನೂ ಇಲ್ಲ’ ಅಂತನೂ ನಮಗನಿಸುತ್ತಿರಬಹುದು. ಹಾಗಂತ ನಾವು ಪ್ರಯತ್ನ ಬಿಡಬಾರದು. ಮುಂದೆ ಕಷ್ಟಗಳು ಬರುವಾಗ ನಮಗೆ ಸಹೋದರ ಸಹೋದರಿಯರ ಸಹಾಯ ಬೇಕಂದರೆ ಈಗಲೇ ನಾವು ಅವರಿಗೆ ಆಪ್ತರಾಗಬೇಕು. ಇದನ್ನು ಮಾಡುವ ಪ್ರಾಮುಖ್ಯ ವಿಧ ನಮ್ಮ ಭಾವನೆ-ಅನಿಸಿಕೆಗಳನ್ನು ಅವರ ಹತ್ತಿರ ಹೇಳಿಕೊಳ್ಳುವುದೇ ಆಗಿದೆ.—1 ಪೇತ್ರ 1:22.
9. (ಎ) ಯೇಸು ತನ್ನ ಸ್ನೇಹಿತರ ಮೇಲೆ ನಂಬಿಕೆ ಇಟ್ಟಿದ್ದನು ಅಂತ ಹೇಗೆ ಗೊತ್ತಾಗುತ್ತದೆ? (ಬಿ) ಮನಸ್ಸುಬಿಚ್ಚಿ ಮಾತಾಡಿದರೆ ಇತರರ ಜೊತೆಗಿನ ಸ್ನೇಹ ಹೇಗೆ ಬಲವಾಗುತ್ತೆ? ಉದಾಹರಣೆ ಕೊಡಿ.
9 ಯೇಸು ಸಹ ತನ್ನ ಸ್ನೇಹಿತರ ಜೊತೆ ಮುಚ್ಚುಮರೆ ಇಲ್ಲದೆ ಮಾತಾಡುತ್ತಿದ್ದನು. ಅವರ ಮೇಲೆ ಆತ ಅಷ್ಟು ನಂಬಿಕೆ ಇಟ್ಟಿದ್ದನು. (ಯೋಹಾ. 15:15) ಯೇಸುವಿನಂತೆ ನಾವು ಸಹ ನಮ್ಮ ಸಂತೋಷ, ಚಿಂತೆ ಮತ್ತು ನೋವುಗಳನ್ನು ಬೇರೆಯವರ ಹತ್ತಿರ ಹೇಳಿಕೊಳ್ಳಬೇಕು. ಹಾಗೆಯೇ, ನಿಮ್ಮ ಹತ್ತಿರ ಬೇರೆಯವರು ಮಾತಾಡುವಾಗ ನೀವು ಸಹ ಗಮನಕೊಟ್ಟು ಕೇಳಿಸಿಕೊಳ್ಳಬೇಕು. ಆಗ ನಿಮಗಿರುವ ಕೆಲವು ಅನಿಸಿಕೆ, ಭಾವನೆ ಮತ್ತು ಗುರಿಗಳೇ ಅವರಿಗೂ ಇವೆ ಎಂದು ನಿಮಗೆ ಗೊತ್ತಾಗಬಹುದು. 29 ವರ್ಷದ ಸಿನ್ಡೀ ಎಂಬ ಸಹೋದರಿಯ ಉದಾಹರಣೆ ನೋಡಿ. ಅವಳು 67 ವರ್ಷದ ಮೇರಿ ಲೂಯೀಸ್ ಎಂಬ ಪಯನೀಯರ್ ಸಹೋದರಿಯ ಸ್ನೇಹ ಮಾಡಿದಳು. ಪ್ರತಿ ಗುರುವಾರ ಬೆಳಿಗ್ಗೆ ಅವರಿಬ್ಬರೂ ಒಟ್ಟಿಗೆ ಸೇವೆ ಮಾಡುತ್ತಾರೆ. ಅವರು ಅನೇಕ ವಿಷಯಗಳ ಬಗ್ಗೆ ಮುಚ್ಚುಮರೆ ಇಲ್ಲದೆ ಮಾತಾಡಿಕೊಳ್ಳುತ್ತಾರೆ. ಸಿನ್ಡೀ ಹೀಗೆ ಹೇಳುತ್ತಾಳೆ: “ನಾನು ಸ್ನೇಹಿತರ ಜೊತೆ ಮನಸ್ಸು ಬಿಚ್ಚಿ ಮಾತಾಡುತ್ತೇನೆ. ಆಗ ಅವರೂ ನನ್ನ ಜೊತೆ ಹಾಗೇ ಮಾತಾಡುತ್ತಾರೆ. ಇದರಿಂದ ನನಗೆ ಅವರ ಬಗ್ಗೆ ಚೆನ್ನಾಗಿ ತಿಳುಕೊಳ್ಳಲು ಮತ್ತು ಅವರನ್ನು ಅರ್ಥಮಾಡಿಕೊಳ್ಳಲು ಸಹಾಯ ಆಗುತ್ತದೆ.” ನಾವು ನಮ್ಮ ಸ್ನೇಹಿತರ ಹತ್ತಿರ ಮನಸ್ಸುಬಿಚ್ಚಿ, ಮುಚ್ಚುಮರೆ ಇಲ್ಲದೆ ಮಾತಾಡಿದರೆ ಮತ್ತು ಅವರು ಮಾತಾಡುವಾಗ ಗಮನಕೊಟ್ಟು ಕೇಳಿಸಿಕೊಂಡರೆ ನಮ್ಮ ಸ್ನೇಹ ಬಲವಾಗುತ್ತದೆ. ಸಿನ್ಡೀ ತರ ನಾವೇ ಮೊದಲ ಹೆಜ್ಜೆ ತಗೊಂಡು ಮನಸ್ಸಿನಲ್ಲಿರುವ ವಿಷಯಗಳ ಬಗ್ಗೆ ಮಾತಾಡಿದರೆ ಅವರ ಜೊತೆಗಿನ ನಮ್ಮ ಸ್ನೇಹ ಬಲವಾಗುತ್ತದೆ.—ಜ್ಞಾನೋ. 27:9.
ಒಟ್ಟಿಗೆ ಸೇವೆ ಮಾಡಿ
10. ಜ್ಞಾನೋಕ್ತಿ 27:17 ರ ಪ್ರಕಾರ ನಾವು ಸಹೋದರ ಸಹೋದರಿಯರ ಜೊತೆ ಸೇವೆ ಮಾಡುವಾಗ ಯಾವ ಪ್ರತಿಫಲ ಸಿಗುತ್ತದೆ?
10 ಯೆರೆಮೀಯ ಮತ್ತು ಬಾರೂಕರಂತೆ ನಾವು ನಮ್ಮ ಸಹೋದರ ಸಹೋದರಿಯರ ಜೊತೆ ಸೇವೆ ಮಾಡುವಾಗ ಅವರ ಒಳ್ಳೇ ಗುಣಗಳ ಬಗ್ಗೆ ತಿಳಿದುಕೊಳ್ಳುತ್ತೇವೆ. ಹೀಗೆ ಅವರಿಂದ ಕಲಿಯೋದು ಮಾತ್ರವಲ್ಲ ಅವರೊಂದಿಗೆ ಆಪ್ತತೆ ಬೆಳೆಯುತ್ತದೆ. (ಜ್ಞಾನೋಕ್ತಿ 27:17 ಓದಿ.) ಉದಾಹರಣೆಗೆ, ನೀವು ನಿಮ್ಮ ಸ್ನೇಹಿತರೊಬ್ಬರ ಜೊತೆಗೆ ಸೇವೆಗೆ ಹೋಗಿದ್ದೀರಿ ಎಂದಿಟ್ಟುಕೊಳ್ಳಿ. ಅವರು ತಮ್ಮ ನಂಬಿಕೆಯ ಬಗ್ಗೆ, ಯೆಹೋವನ ಮತ್ತು ಆತನ ಉದ್ದೇಶಗಳ ಬಗ್ಗೆ ಧೈರ್ಯವಾಗಿ ದೃಢ ಭರವಸೆಯಿಂದ ಮಾತಾಡುವುದನ್ನು ಕೇಳಿಸಿಕೊಳ್ಳುವಾಗ ನಿಮಗೆ ಹೇಗನಿಸುತ್ತದೆ? ಅವರ ಮೇಲೆ ನಿಮಗೆ ಪ್ರೀತಿ ಇನ್ನೂ ಹೆಚ್ಚಾಗುತ್ತಲ್ವಾ?
11-12. ಒಟ್ಟಾಗಿ ಸೇವೆ ಮಾಡುವುದರಿಂದ ಸ್ನೇಹ ಹೇಗೆ ಬಲವಾಗುತ್ತದೆ ಎಂದು ತಿಳಿಸುವ ಉದಾಹರಣೆ ಕೊಡಿ.
11 ಒಟ್ಟಿಗೆ ಸೇವೆ ಮಾಡೋದರಿಂದ ಹೇಗೆ ಆಪ್ತರಾಗಬಹುದು ಎಂದು ತಿಳಿಯಲು ಎರಡು ಅನುಭವ ನೋಡಿ. 23 ವರ್ಷದ ಆ್ಯಡಲಿನ್ ಹೆಚ್ಚು ಸೇವೆ ಆಗಿರದ ಟೆರಿಟೊರಿಯಲ್ಲಿ ಸಾರಲಿಕ್ಕಾಗಿ ತನ್ನ ಸ್ನೇಹಿತೆ ಕ್ಯಾಂಡೀಸ್ ಜೊತೆ ಹೋದಳು. ಆ್ಯಡಲಿನ್ ಹೇಳಿದ್ದು: “ನಾವು ತುಂಬ ಹುರುಪಿಂದ ಸೇವೆ ಮಾಡಬೇಕು, ಸೇವೆಯಲ್ಲಿ ತುಂಬ ಖುಷಿಪಡಬೇಕು ಅಂತ ಬಯಸಿದ್ವಿ. ಯೆಹೋವನ ಸೇವೆ ಚೆನ್ನಾಗಿ ಮಾಡುತ್ತಾ ಮುಂದುವರಿಯಲು ನಮಗೆ ಉತ್ತೇಜನನೂ ಬೇಕಿತ್ತು.” ಅವರು ಒಟ್ಟಿಗೆ ಸೇವೆ ಮಾಡಿದ್ದರಿಂದ ಪ್ರಯೋಜನ ಆಯಿತಾ? ಆ್ಯಡಲಿನ್ ಹೇಳುವುದನ್ನು ಕೇಳಿ: “ಪ್ರತಿ ದಿನ ಸಂಜೆ ನಾವು, ‘ಸೇವೆ ಹೇಗಿತ್ತು, ಇವತ್ತು ಮಾತಾಡಿದ್ರಲ್ಲಿ ಏನಿಷ್ಟ ಆಯ್ತು ಮತ್ತು ಯೆಹೋವನು ಮಾರ್ಗದರ್ಶಿಸುತ್ತಿದ್ದಾನೆ ಅಂತ ಹೇಗೆ ಗೊತ್ತಾಯಿತು’ ಅಂತೆಲ್ಲಾ ಮಾತಾಡುತ್ತಿದ್ವಿ. ಈ ರೀತಿ ಮಾತಾಡುವುದರಿಂದ ನಮ್ಮಿಬ್ರಿಗೂ ತುಂಬ ಖುಷಿ ಆಗ್ತಿತ್ತು ಮತ್ತು ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥಮಾಡಿಕೊಳ್ಳೋಕೆ ಸಾಧ್ಯವಾಯಿತು.”
12 ಫ್ರಾನ್ಸ್ ದೇಶದ ಲೈಲಾ ಮತ್ತು ಮ್ಯಾರಿಯಾನ್ ಎಂಬ
ಅವಿವಾಹಿತ ಸಹೋದರಿಯರು ಮಧ್ಯ ಆಫ್ರಿಕ ಗಣರಾಜ್ಯದ ರಾಜಧಾನಿಯಾದ ಬಾಂಗೀ ಎಂಬಲ್ಲಿಗೆ 5 ವಾರ ಸೇವೆ ಮಾಡಲು ಹೋದರು. ಅದು ಜನಜಂಗುಳಿ ಇರುವ ಸ್ಥಳವಾಗಿತ್ತು. ಅಲ್ಲಿ ಸೇವೆ ಹೇಗಿತ್ತೆಂದು ಲೈಲಾ ಹೇಳುತ್ತಾಳೆ: “ನಾವು ಒಬ್ಬರಿಗೊಬ್ಬರು ಹೊಂದಿಕೊಳ್ಳೋಕೆ ಸ್ವಲ್ಪ ಕಷ್ಟ ಆಯಿತು. ಆದರೆ ಮುಚ್ಚುಮರೆ ಇಲ್ಲದೆ ಚೆನ್ನಾಗಿ ಮಾತಾಡುತ್ತಿದ್ದದರಿಂದ, ನಿಜ ಪ್ರೀತಿ ಇದ್ದದರಿಂದ ನಮ್ಮ ಸ್ನೇಹ ಬಲವಾಯಿತು. ಹೊಸ ಪರಿಸ್ಥಿತಿಗೆ ಮ್ಯಾರಿಯಾನ್ ಬೇಗ ಹೊಂದಿಕೊಳ್ಳುವುದನ್ನು, ಅಲ್ಲಿನ ಜನರ ಮೇಲೆ ಅವಳಿಗಿರುವ ಪ್ರೀತಿಯನ್ನು ಮತ್ತು ಸೇವೆ ಮಾಡುವ ಹುರುಪನ್ನು ನೋಡುವಾಗ ನಾನು ಅವಳನ್ನು ಇನ್ನೂ ಹೆಚ್ಚು ಗೌರವಿಸಲು ಆರಂಭಿಸಿದೆ.” ಈ ರೀತಿ ಅನುಭವ ಆಗಬೇಕೆಂದರೆ ನೀವೇನು ಬೇರೆ ದೇಶಕ್ಕೆ ಹೋಗಬೇಕಂತೇನಿಲ್ಲ. ನೀವಿರುವ ಸಭೆಯ ಟೆರಿಟೊರಿಯಲ್ಲೇ ಸಹೋದರ ಸಹೋದರಿಯರ ಜೊತೆ ಸೇವೆ ಮಾಡುವಾಗೆಲ್ಲಾ ಅವರ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳುವ ಮತ್ತು ಸ್ನೇಹವನ್ನು ಬಲಪಡಿಸಿಕೊಳ್ಳುವ ಅವಕಾಶ ನಿಮಗೆ ಸಿಗುತ್ತದೆ.ಒಳ್ಳೇ ಗುಣಗಳನ್ನು ನೋಡಿ ಮತ್ತು ಕ್ಷಮಿಸಿ
13. ನಾವು ನಮ್ಮ ಸ್ನೇಹಿತರ ಜೊತೆಯಲ್ಲಿ ಸೇವೆ ಮಾಡುವಾಗ ಯಾವ ಸಮಸ್ಯೆ ಎದುರಾಗಬಹುದು?
13 ನಾವು ನಮ್ಮ ಸ್ನೇಹಿತರ ಜೊತೆ ಸೇವೆ ಮಾಡುವಾಗ ಅವರ ಒಳ್ಳೇ ವಿಷಯಗಳು ಮಾತ್ರ ಅಲ್ಲ, ಕೆಲವೊಮ್ಮೆ ಅವರ ಬಲಹೀನತೆಗಳೂ ಕಾಣಿಸುತ್ತವೆ. ಆದರೂ ಅವರಿಗೆ ಆಪ್ತರಾಗಿರಲು ನಾವೇನು ಮಾಡಬಹುದು? ಇದಕ್ಕೆ ಉತ್ತರ ತಿಳಿಯಲು ಯೆರೆಮೀಯನ ಉದಾಹರಣೆ ನೋಡಿ. ಬೇರೆಯವರ ಒಳ್ಳೇ ಗುಣಗಳನ್ನು ನೋಡಲು ಮತ್ತು ಅವರ ಸಣ್ಣ-ಪುಟ್ಟ ತಪ್ಪುಗಳನ್ನು ಕ್ಷಮಿಸಿ ಮರೆತುಬಿಡಲು ಅವನಿಗೆ ಯಾವುದು ಸಹಾಯ ಮಾಡಿತು?
14. (ಎ) ಯೆರೆಮೀಯನಿಗೆ ಯೆಹೋವನ ಬಗ್ಗೆ ಏನು ಗೊತ್ತಿತ್ತು? (ಬಿ) ಇದರಿಂದ ಯೆರೆಮೀಯನಿಗೆ ಹೇಗೆ ಸಹಾಯವಾಯಿತು?
14 ಬೈಬಲಿನ ಯೆರೆಮೀಯ ಪುಸ್ತಕವನ್ನು ಸ್ವತಃ ಯೆರೆಮೀಯನೇ ಬರೆದನು. ಬಹುಶಃ 1 ನೇ ಮತ್ತು 2 ನೇ ಅರಸು ಪುಸ್ತಕಗಳನ್ನು ಸಹ ಅವನೇ ಬರೆದಿರಬೇಕು. ಅಪರಿಪೂರ್ಣ ಮನುಷ್ಯರಿಗೆ ಯೆಹೋವನೆಷ್ಟು ಕರುಣೆ ತೋರಿಸುತ್ತಾನೆ ಎಂದು ಆ ನೇಮಕದಿಂದ ಯೆರೆಮೀಯನಿಗೆ ಗೊತ್ತಾಗಿರುತ್ತದೆ. ಉದಾಹರಣೆಗೆ, ರಾಜ ಅಹಾಬನು ತನ್ನ ತಪ್ಪುಗಳ ಬಗ್ಗೆ ಪಶ್ಚಾತ್ತಾಪಪಟ್ಟಾಗ ಅವನು ಬದುಕಿರುವವರೆಗೆ ಅವನ ವಂಶ ನಿರ್ವಂಶ ಆಗುವುದಿಲ್ಲ ಎಂದು ಯೆಹೋವನು ಹೇಳಿದ್ದರ ಬಗ್ಗೆ ಯೆರೆಮೀಯನಿಗೆ ಗೊತ್ತಿತ್ತು. (1 ಅರ. 21:27-29) ಮನಸ್ಸೆಯು ಅಹಾಬನಿಗಿಂತ ಎಷ್ಟೋ ಹೆಚ್ಚು ತಪ್ಪುಗಳನ್ನು ಮಾಡಿದ್ದನು. ಆದರೆ ಅವನು ಪಶ್ಚಾತ್ತಾಪಪಟ್ಟಾಗ ಯೆಹೋವನು ಅವನನ್ನೂ ಕ್ಷಮಿಸಿದ್ದರ ಬಗ್ಗೆ ಯೆರೆಮೀಯನಿಗೆ ಗೊತ್ತಿತ್ತು. (2 ಅರ. 21:16, 17; 2 ಪೂರ್ವ. 33:10-13) ಈ ಎಲ್ಲಾ ಘಟನೆಗಳ ಬಗ್ಗೆ ತಿಳುಕೊಂಡಾಗ ಯೆಹೋವನಂತೆ ತಾನು ಸಹ ತನ್ನ ಸ್ನೇಹಿತರ ಜೊತೆ ತಾಳ್ಮೆ ಮತ್ತು ಕರುಣೆಯಿಂದ ನಡಕೊಳ್ಳಲು ಯೆರೆಮೀಯನಿಗೆ ಸಹಾಯ ಆಗಿರುತ್ತದೆ.—ಕೀರ್ತ. 103:8, 9.
15. ಯೆಹೋವನಂತೆ ಯೆರೆಮೀಯನು ಬಾರೂಕನಿಗೆ ಹೇಗೆ ತಾಳ್ಮೆ ತೋರಿಸಿದನು?
15 ಬಾರೂಕನ ಮನಸ್ಸು ಅವನ ನೇಮಕದಿಂದ ಬೇರೆ ಕಡೆಗೆ ತೇಲಿ ಹೋದಾಗ ಯೆರೆಮೀಯನು ಅವನ ಜೊತೆ ಹೇಗೆ ನಡಕೊಂಡನೆಂದು ಗಮನಿಸಿ. ಬಾರೂಕ ಇನ್ನು ಬದಲಾಗಲ್ಲ ಎಂದು ಯೆರೆಮೀಯನು ನಿರ್ಧರಿಸಲಿಲ್ಲ. ಬದಲಿಗೆ ಯೆಹೋವನು ದಯೆಯಿಂದ ನೀಡಿದ ನೇರ ಸಂದೇಶವನ್ನು ಅವನಿಗೆ ತಿಳಿಸಿದನು. (ಯೆರೆ. 45:1-5) ಇದರಿಂದ ನಾವೇನು ಕಲಿಯಬಹುದು?
16. ಜ್ಞಾನೋಕ್ತಿ 17:9 ರಲ್ಲಿ ತಿಳಿಸಿದಂತೆ ನಮ್ಮ ಸ್ನೇಹವನ್ನು ಹಾಗೇ ಮುಂದುವರಿಸಲು ನಾವೇನು ಮಾಡಬೇಕು?
16 ನಮ್ಮ ಸಹೋದರ ಸಹೋದರಿಯರಿಂದ ತಪ್ಪೇ ಆಗಬಾರದು ಅಂತ ನಿರೀಕ್ಷಿಸಕ್ಕಾಗಲ್ಲ. ಆದ್ದರಿಂದ ಒಮ್ಮೆ ಒಬ್ಬರಿಗೆ ಆಪ್ತರಾದ ಮೇಲೆ ಅವರ ಜೊತೆಗಿನ ಸ್ನೇಹವನ್ನು ಹಾಗೇ ಮುಂದುವರಿಸಲು ಪ್ರಯತ್ನ ಹಾಕಬೇಕು. ನಮ್ಮ ಸ್ನೇಹಿತರು ತಪ್ಪು ಮಾಡುವುದಾದರೆ ದೇವರ ವಾಕ್ಯ ಉಪಯೋಗಿಸಿ ದಯೆಯಿಂದ, ಮುಚ್ಚುಮರೆಯಿಲ್ಲದೆ ಸಲಹೆ ಕೊಡಬೇಕು. (ಕೀರ್ತ. 141:5) ಅವರು ನಮ್ಮನ್ನು ನೋಯಿಸುವುದಾದರೆ ನಾವು ಅವರನ್ನು ಕ್ಷಮಿಸಬೇಕು. ನಂತರ ಯಾವತ್ತೂ ಅದರ ಬಗ್ಗೆ ಮಾತೆತ್ತಬಾರದು. (ಜ್ಞಾನೋಕ್ತಿ 17:9 ಓದಿ.) ನಾವು ಜೀವಿಸುತ್ತಿರುವ ಈ ಕಷ್ಟಕರ ಸಮಯದಲ್ಲಂತೂ ನಮ್ಮ ಸಹೋದರರ ಬಲಹೀನತೆಗಳನ್ನು ಬಿಟ್ಟುಬಿಟ್ಟು ಅವರ ಒಳ್ಳೇ ಗುಣಗಳ ಮೇಲೆ ಗಮನವಿಡುವುದು ತುಂಬ ಮುಖ್ಯ. ಹೀಗೆ ಮಾಡಿದರೆ ಅವರ ಜೊತೆಗಿನ ನಮ್ಮ ಸ್ನೇಹ ಬಲವಾಗುತ್ತದೆ. ಇದನ್ನು ನಾವೀಗಲೇ ಮಾಡುವುದು ತುಂಬ ಮುಖ್ಯ. ಯಾಕೆಂದರೆ ಮಹಾ ಸಂಕಟದಲ್ಲಿ ನಮಗೆ ಆಪ್ತ ಸ್ನೇಹಿತರ ಅಗತ್ಯ ತುಂಬ ಇರುತ್ತದೆ.
ಕಷ್ಟದಲ್ಲೂ ಜೊತೆಗಿದ್ದು ಪ್ರೀತಿ ತೋರಿಸಿ
17. ಯೆರೆಮೀಯನು ಆಪತ್ತಿಗಾಗುವ ನಿಜ ಸ್ನೇಹಿತನೆಂದು ಹೇಗೆ ತೋರಿಸಿಕೊಟ್ಟನು?
17 ಪ್ರವಾದಿ ಯೆರೆಮೀಯನು ಆಪತ್ತಿಗಾಗುವ ನಿಜ ಸ್ನೇಹಿತನಾಗಿದ್ದನು. ಯೆರೆ. 38:7-13; 39:15-18.
ಇದಕ್ಕೊಂದು ಉದಾಹರಣೆ ನೋಡಿ. ಅರಮನೆಯ ಕಂಚುಕಿಯಾದ ಎಬೆದ್ಮೆಲೆಕನು ಯೆರೆಮೀಯನನ್ನು ಬಾವಿಯಿಂದ ಮೇಲಕ್ಕೆತ್ತಿ ರಕ್ಷಿಸಿದ್ದನು. ಇದರಿಂದಾಗಿ ಪ್ರಧಾನರು ತನ್ನನ್ನು ಏನಾದರೂ ಮಾಡುತ್ತಾರೆ ಎಂಬ ಭಯ ಎಬೆದ್ಮೆಲಕನಿಗಿತ್ತು. ಯೆರೆಮೀಯನಿಗೆ ಇದು ಗೊತ್ತಾದಾಗ ಎಬೆದ್ಮೆಲೆಕ ಈ ಭಯವನ್ನು ಹೇಗಾದರೂ ಮೆಟ್ಟಿನಿಲ್ಲುತ್ತಾನೆ ಎಂದು ಎಣಿಸಿ ಸುಮ್ಮನೆ ಕೈಕಟ್ಟಿ ಕೂರಲಿಲ್ಲ. ಯೆರೆಮೀಯನು ಜೈಲಿನಲ್ಲಿದ್ದರೂ ತನ್ನಿಂದಾದ ಸಹಾಯ ನೀಡಿದನು. ಹೇಗೆಂದರೆ, ಎಬೆದ್ಮೆಲೆಕನಿಗೆ ಅವನು ಯೆಹೋವನಿಂದ ಬಂದ ಸಾಂತ್ವನದ ಮಾತನ್ನು ತಿಳಿಸಿದನು.—18. ಜ್ಞಾನೋಕ್ತಿ 17:17 ರ ಪ್ರಕಾರ ಸ್ನೇಹಿತರಿಗೆ ಕಷ್ಟ ಬಂದಾಗ ನಾವೇನು ಮಾಡಬೇಕು?
18 ಇಂದು ಸಹ ನಮ್ಮ ಸಹೋದರ ಸಹೋದರಿಯರು ಅನೇಕ ಕಷ್ಟಗಳನ್ನು ಎದುರಿಸುತ್ತಿದ್ದಾರೆ. ಉದಾಹರಣೆಗೆ, ಅನೇಕರು ನೈಸರ್ಗಿಕ ವಿಪತ್ತುಗಳಿಂದ ಮತ್ತು ಮನುಷ್ಯರಿಂದಾಗಿರುವ ಹಾನಿಗಳಿಂದ ಬಳಲಿ ಬೆಂಡಾಗಿದ್ದಾರೆ. ಆ ರೀತಿ ಸಂಭವಿಸಿದಾಗ ನಮ್ಮಲ್ಲಿ ಕೆಲವರು ಅಂಥ ಸಹೋದರ-ಸಹೋದರಿಯರನ್ನು ತಮ್ಮ ಮನೆಯಲ್ಲಿ ಇರಿಸಿಕೊಂಡಿದ್ದಾರೆ. ಇನ್ನು ಕೆಲವರು ಹಣ ಸಹಾಯ ಮಾಡಿದ್ದಾರೆ. ನಮ್ಮಿಂದ ಇಂಥ ಸಹಾಯ ಮಾಡಲಿಕ್ಕಾಗದಿದ್ದರೂ ನಾವೆಲ್ಲರೂ ಆ ನಮ್ಮ ಸಹೋದರ ಸಹೋದರಿಯರಿಗೋಸ್ಕರ ಯೆಹೋವನಲ್ಲಿ ಪ್ರಾರ್ಥಿಸಬಹುದು. ನಮ್ಮ ಒಬ್ಬ ಸಹೋದರ ಅಥವಾ ಸಹೋದರಿ ಬೇಜಾರಲ್ಲಿದ್ದಾರೆ ಎಂದು ಗೊತ್ತಾದಾಗ ನಾವೇನು ಮಾಡಬೇಕು ಅಥವಾ ಹೇಳಬೇಕು ಎಂದು ಗೊತ್ತಾಗದೇ ಇರಬಹುದು. ಆದರೆ ನಾವೆಲ್ಲರೂ ಸಹಾಯ ಮಾಡಕ್ಕಾಗುತ್ತೆ. ಉದಾಹರಣೆಗೆ, ನಾವು ಅವರ ಜೊತೆ ಸಮಯ ಕಳೆಯಬಹುದು. ಅವರು ಮಾತಾಡುವಾಗ ದಯೆಯಿಂದ ಕೇಳಿಸಿಕೊಳ್ಳಬಹುದು. ನಮಗೆ ತುಂಬ ಇಷ್ಟವಾದ ಸಾಂತ್ವನ ನೀಡುವಂಥ ವಚನಗಳನ್ನು ಅವರಿಗೆ ತೋರಿಸಬಹುದು. (ಯೆಶಾ. 50:4) ನಿಮ್ಮ ಸ್ನೇಹಿತರಿಗೆ ಸಹಾಯ ಬೇಕಿದ್ದಾಗ ನೀವು ಅವರ ಜೊತೆ ಇರುವುದೇ ತುಂಬ ಮುಖ್ಯ.—ಜ್ಞಾನೋಕ್ತಿ 17:17 ಓದಿ.
19. ಈಗ ಬಲವಾದ ಸ್ನೇಹ ಬೆಳೆಸಿಕೊಂಡರೆ ಮುಂದೆ ಹೇಗೆ ಸಹಾಯವಾಗುತ್ತದೆ?
19 ನಾವು ಈಗಲೇ ನಮ್ಮ ಸಹೋದರ ಸಹೋದರಿಯರ ಜೊತೆ ಬಲವಾದ ಸ್ನೇಹ ಬೆಳೆಸಿ ಮುಂದುವರಿಸುವ ದೃಢ ತೀರ್ಮಾನ ಮಾಡಬೇಕು. ಯಾಕೆಂದರೆ, ನಮ್ಮ ವೈರಿಗಳು ಸುಳ್ಳುಗಳನ್ನು ಉಪಯೋಗಿಸಿ ನಾವು ಒಬ್ಬರಿಂದೊಬ್ಬರು ದೂರವಾಗುವಂತೆ ಮಾಡಲು ಪ್ರಯತ್ನಿಸುತ್ತಾರೆ. ನಾವು ಒಬ್ಬರನ್ನೊಬ್ಬರು ನಂಬದಿರುವಂತೆ ಮತ್ತು ಬೆಂಬಲಕೊಡದಂತೆ ಮಾಡಲು ಪ್ರಯತ್ನಿಸುತ್ತಾರೆ. ಆದರೆ ಅವರ ಆ ಪ್ರಯತ್ನ ಮಣ್ಣು ಮುಕ್ಕುತ್ತದೆ. ನಮ್ಮ ಮಧ್ಯೆ ಇರುವ ಪ್ರೀತಿಯನ್ನು ಮುರಿಯಲು ಅವರಿಂದಾಗುವುದಿಲ್ಲ. ಅವರೇನೇ ಮಾಡಿದರೂ ನಮ್ಮ ಸ್ನೇಹ ಬಲವಾಗಿರುತ್ತದೆ. ಆ ಸ್ನೇಹ ಈ ಲೋಕದ ಅಂತ್ಯದವರೆಗೆ ಮಾತ್ರವಲ್ಲ, ನಿತ್ಯ ನಿರಂತರಕ್ಕೂ ಮುಂದುವರಿಯುತ್ತದೆ.
ಗೀತೆ 107 ಬನ್ನಿ ಯೆಹೋವನ ಪರ್ವತಕ್ಕೆ
^ ಪ್ಯಾರ. 5 ಅಂತ್ಯ ತುಂಬ ಹತ್ತಿರವಾಗುತ್ತಿರುವುದರಿಂದ ನಮ್ಮ ಜೊತೆ ವಿಶ್ವಾಸಿಗಳೊಂದಿಗಿನ ಗೆಳೆತನ ಇನ್ನಷ್ಟು ಗಟ್ಟಿಯಾಗಬೇಕು. ಈ ಲೇಖನದಲ್ಲಿ ನಾವು ಯೆರೆಮೀಯನ ಉದಾಹರಣೆಯಿಂದ ಏನು ಕಲಿಯಬಹುದು ಎಂದು ನೋಡಲಿದ್ದೇವೆ. ಈಗ ಆಪ್ತ ಸ್ನೇಹ ಬೆಳೆಸಿಕೊಂಡರೆ ಮುಂದೆ ಕಷ್ಟ-ಸಂಕಟ ಬರುವಾಗ ಹೇಗೆ ಸಹಾಯವಾಗುತ್ತದೆ ಎಂದೂ ನೋಡಲಿದ್ದೇವೆ.
^ ಪ್ಯಾರ. 2 ಬೈಬಲಿನಲ್ಲಿರುವ ಯೆರೆಮೀಯ ಪುಸ್ತಕದಲ್ಲಿ ದಾಖಲಾಗಿರುವ ಘಟನೆಗಳು ಕಾಲಾನುಕ್ರಮವಾಗಿಲ್ಲ.
^ ಪ್ಯಾರ. 57 ಚಿತ್ರ ವಿವರಣೆ: ಮುಂದೆ “ಮಹಾ ಸಂಕಟ” ಬಂದಾಗ ಏನು ಆಗಬಹುದು ಎಂದು ಈ ಚಿತ್ರದಲ್ಲಿ ತೋರಿಸಲಾಗಿದೆ. ಕೆಲವು ಸಹೋದರ ಸಹೋದರಿಯರು ಒಬ್ಬ ಸಹೋದರನ ಮನೆಯ ಅಟ್ಟದಲ್ಲಿ ಒಟ್ಟು ಸೇರಿದ್ದಾರೆ. ಆ ಸಮಯದಲ್ಲಿ ಅವರು ಪರಸ್ಪರ ಸಹವಾಸ ಮಾಡುತ್ತಾ ಸಾಂತ್ವನ ಪಡಕೊಳ್ಳುತ್ತಿದ್ದಾರೆ. ಮುಂದಿನ ಮೂರು ಚಿತ್ರಗಳಲ್ಲಿ ತೋರಿಸಲಾದಂತೆ ಅದೇ ಸಹೋದರ ಸಹೋದರಿಯರು ಮಹಾ ಸಂಕಟ ಬರುವುದಕ್ಕೂ ಮುಂಚೆಯೇ ಪರಸ್ಪರ ಆಪ್ತ ಸ್ನೇಹ ಬೆಳೆಸಿಕೊಂಡಿದ್ದರು.