ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 46

ನಿಮ್ಮ ‘ನಂಬಿಕೆಯೆಂಬ ಗುರಾಣಿ’ ಗಟ್ಟಿಯಾಗಿದೆಯಾ?

ನಿಮ್ಮ ‘ನಂಬಿಕೆಯೆಂಬ ಗುರಾಣಿ’ ಗಟ್ಟಿಯಾಗಿದೆಯಾ?

“ನಂಬಿಕೆಯೆಂಬ ದೊಡ್ಡ ಗುರಾಣಿಯನ್ನು ಹಿಡಿದುಕೊಳ್ಳಿರಿ.”—ಎಫೆ. 6:16.

ಗೀತೆ 54 ನಮಗೆ ನಂಬಿಕೆ ಇರತಕ್ಕದ್ದು

ಕಿರುನೋಟ *

1-2. (ಎ) ಎಫೆಸ 6:16 ರ ಪ್ರಕಾರ ನಮಗೇಕೆ “ನಂಬಿಕೆಯೆಂಬ ದೊಡ್ಡ ಗುರಾಣಿ” ಬೇಕು? (ಬಿ) ನಾವೀಗ ಯಾವ ಪ್ರಶ್ನೆಗಳಿಗೆ ಉತ್ತರ ತಿಳಿಯಲಿದ್ದೇವೆ?

ನಿಮ್ಮ ಹತ್ತಿರ “ನಂಬಿಕೆಯೆಂಬ ದೊಡ್ಡ ಗುರಾಣಿ” ಇದೆಯಾ? (ಎಫೆಸ 6:16 ಓದಿ.) ಇದೆ ಅನ್ನುವುದರಲ್ಲಿ ಯಾವುದೇ ಸಂಶಯ ಇಲ್ಲ. ದೊಡ್ಡ ಗುರಾಣಿಯು ಇಡೀ ದೇಹವನ್ನು ಸಂರಕ್ಷಿಸುವಂತೆ ನಂಬಿಕೆಯು ನಮ್ಮನ್ನು ಈ ಲೋಕದ ಅನೈತಿಕತೆ, ಹಿಂಸೆ ಮತ್ತು ದೇವರಿಗೆ ಇಷ್ಟವಿಲ್ಲದ ಎಲ್ಲಾ ವಿಷಯಗಳಿಂದ ಸಂರಕ್ಷಿಸುತ್ತದೆ.

2 ಆದರೆ, ನಾವೀಗ “ಕಡೇ ದಿವಸಗಳಲ್ಲಿ” ಜೀವಿಸುತ್ತಿರುವುದರಿಂದ ನಮ್ಮ ನಂಬಿಕೆಯ ಮೇಲೆ ದಾಳಿ ಆಗುತ್ತಲೇ ಇರುತ್ತದೆ. (2 ತಿಮೊ. 3:1) ನಂಬಿಕೆ ಎಂಬ ನಮ್ಮ ಗುರಾಣಿ ಗಟ್ಟಿಯಾಗಿದೆಯಾ ಇಲ್ವಾ ಎಂದು ಪರೀಕ್ಷಿಸುವುದು ಹೇಗೆ? ಆ ಗುರಾಣಿಯನ್ನು ಗಟ್ಟಿಯಾಗಿ ಹಿಡಿದುಕೊಳ್ಳುವುದು ಹೇಗೆ ಅಂದರೆ ಯಾವಾಗಲೂ ನಂಬಿಕೆ ಬಲವಾಗಿರಲು ಏನು ಮಾಡಬೇಕು? ಈ ಪ್ರಶ್ನೆಗಳಿಗೆ ಈಗ ಉತ್ತರ ತಿಳಿಯೋಣ.

ಗುರಾಣಿಯನ್ನು ಚೆನ್ನಾಗಿ ಪರೀಕ್ಷಿಸಿ

ಯುದ್ಧದ ನಂತರ ಸೈನಿಕರು ತಮ್ಮ ಗುರಾಣಿಯನ್ನು ಸರಿಮಾಡಲು ಬೇಕಾದ ಹೆಜ್ಜೆ ತಗೊಳ್ಳುತ್ತಿದ್ದರು (ಪ್ಯಾರ 3 ನೋಡಿ)

3. ಸೈನಿಕರು ತಮ್ಮ ಗುರಾಣಿಯನ್ನು ಹೇಗೆ ಸುಸ್ಥಿತಿಯಲ್ಲಿಡುತ್ತಿದ್ದರು? ಯಾಕೆ?

3 ಬೈಬಲ್‌ ಕಾಲದಲ್ಲಿ ಸೈನಿಕರು ಉಪಯೋಗಿಸುತ್ತಿದ್ದ ಗುರಾಣಿಗಳಿಗೆ ಚರ್ಮದ ಹೊದಿಕೆ ಇರುತ್ತಿತ್ತು. ಆ ಚರ್ಮದ ಹೊದಿಕೆ ಹಾಳಾಗದಿರಲು ಮತ್ತು ಲೋಹದ ಭಾಗವು ತುಕ್ಕು ಹಿಡಿಯದಿರಲು ಸೈನಿಕರು ಅದಕ್ಕೆ ಎಣ್ಣೆ ಹಾಕುತ್ತಿದ್ದರು. ತಮ್ಮ ಗುರಾಣಿ ಸ್ವಲ್ಪ ಹಾಳಾದರೂ ತಕ್ಷಣ ಅದನ್ನು ಸರಿಮಾಡಲು ಬೇಕಾದ ಹೆಜ್ಜೆ ತಗೊಳ್ಳುತ್ತಿದ್ದರು. ಇದರಿಂದಾಗಿ ಅವರು ಯಾವುದೇ ಕ್ಷಣದಲ್ಲೂ ಯುದ್ಧ ಮಾಡಲು ಸಾಧ್ಯವಾಗುತ್ತಿತ್ತು. ಇದನ್ನು ನಮ್ಮ ನಂಬಿಕೆಯ ವಿಷಯದಲ್ಲಿ ಹೇಗೆ ಅನ್ವಯಿಸಬಹುದು?

4. (ಎ) ನಮ್ಮ ನಂಬಿಕೆ ಎಂಬ ಗುರಾಣಿಯನ್ನು ಯಾಕೆ ಪರೀಕ್ಷಿಸುತ್ತಿರಬೇಕು? (ಬಿ) ನಾವದನ್ನು ಹೇಗೆ ಮಾಡಬಹುದು?

4 ಆಗಿನ ಸೈನಿಕರಂತೆ ನಾವು ಸಹ ನಂಬಿಕೆ ಎಂಬ ಗುರಾಣಿಯನ್ನು ಆಗಾಗ ಪರೀಕ್ಷಿಸುತ್ತಾ ಹಾಳಾಗದಂತೆ ನೋಡಿಕೊಳ್ಳಬೇಕು. ಆಗ ಮಾತ್ರ ನಾವು ಯಾವುದೇ ಕ್ಷಣದಲ್ಲೂ ಯುದ್ಧ ಮಾಡಲು ಸಿದ್ಧರಾಗಿರುತ್ತೇವೆ. ಕ್ರೈಸ್ತರಾದ ನಾವು ಆಧ್ಯಾತ್ಮಿಕ ಯುದ್ಧ ಮಾಡುತ್ತಿದ್ದೇವೆ. ಈ ಯುದ್ಧದಲ್ಲಿ ನಾವು ದುಷ್ಟಾತ್ಮ ಜೀವಿಗಳ ವಿರುದ್ಧ ಸಹ ಹೋರಾಡಬೇಕಿದೆ. (ಎಫೆ. 6:10-12) ನಮ್ಮ ನಂಬಿಕೆಯೆಂಬ ಗುರಾಣಿ ಹಾಳಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮದೇ. ಬೇರೆಯವರು ಅದನ್ನು ಮಾಡಲು ಸಾಧ್ಯವಿಲ್ಲ. ನಮ್ಮ ನಂಬಿಕೆಯು ನಮ್ಮ ಮೇಲೆ ಆಗುವ ದಾಳಿಯನ್ನು ಎದುರಿಸುವಷ್ಟು ಬಲವಾಗಿದೆಯಾ ಅಂತ ಹೇಗೆ ತಿಳಿದುಕೊಳ್ಳಬಹುದು? ಮೊದಲು, ಸಹಾಯಕ್ಕಾಗಿ ಯೆಹೋವನಿಗೆ ಪ್ರಾರ್ಥಿಸಬೇಕು. ನಂತರ ದೇವರ ವಾಕ್ಯವನ್ನು ಉಪಯೋಗಿಸುತ್ತಾ ನಮ್ಮ ನಂಬಿಕೆ ಯೆಹೋವನ ಚಿತ್ತಕ್ಕೆ ಅನುಸಾರವಾಗಿ ಇದೆಯಾ ಎಂದು ಪರೀಕ್ಷಿಸಬೇಕು. (ಇಬ್ರಿ. 4:12) “ಸ್ವಬುದ್ಧಿಯನ್ನೇ ಆಧಾರಮಾಡಿಕೊಳ್ಳದೆ ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಸವಿಡು” ಅಂತ ಬೈಬಲ್‌ ಹೇಳುತ್ತದೆ. (ಜ್ಞಾನೋ. 3:5, 6) ಹಾಗಾಗಿ, ಇತ್ತೀಚಿಗೆ ಎದುರಾದ ಒಂದು ಸನ್ನಿವೇಶವನ್ನು ನೆನಪಿಸಿಕೊಳ್ಳಿ, ಆಗ ನೀವೇನು ಮಾಡಿದಿರೆಂದು ಯೋಚಿಸಿ. ಉದಾಹರಣೆಗೆ, ಇತ್ತೀಚೆಗೆ ನಿಮಗೆ ಹಣದ ಸಮಸ್ಯೆ ಬಂದಿತ್ತಾ? ಆಗ “ನಾನು ಎಂದಿಗೂ ನಿನ್ನ ಕೈಬಿಡುವುದಿಲ್ಲ, ಎಂದಿಗೂ ತೊರೆಯುವುದಿಲ್ಲ” ಅಂತ ಇಬ್ರಿಯ 13:5 ರಲ್ಲಿ ಯೆಹೋವನು ಹೇಳಿದ ಮಾತು ನೆನಪಾಯ್ತಾ? ಈ ವಚನದಿಂದ ನಿಮಗೆ ಯೆಹೋವನು ಖಂಡಿತ ಸಹಾಯ ಮಾಡುತ್ತಾನೆ ಅಂತ ಭರವಸೆ ಇಡಲು ಸಾಧ್ಯ ಆಯ್ತಾ? ಹಾಗೆ ಆಗಿದ್ದರೆ, ನಿಮ್ಮ ನಂಬಿಕೆ ಎಂಬ ಗುರಾಣಿ ಗಟ್ಟಿಯಾಗಿದೆ ಎಂದರ್ಥ.

5. ನಿಮ್ಮ ನಂಬಿಕೆಯನ್ನು ಸ್ವಲ್ಪ ಪರೀಕ್ಷಿಸಿ ನೋಡಿದಾಗ ನೀವೇನು ಗಮನಿಸಬಹುದು?

5 ಆದರೆ ನಿಮ್ಮ ನಂಬಿಕೆಯನ್ನು ಸ್ವಲ್ಪ ಸೂಕ್ಷ್ಮವಾಗಿ ಪರೀಕ್ಷಿಸಿ ನೋಡಿದಾಗ ಹಿಂದೆ ನಿಮಗೆ ಗಮನಕ್ಕೆ ಬಂದಿರದ ಕುಂದು-ಕೊರತೆಗಳು ಕಾಣಿಸಬಹುದು. ಆಗ ನಿಮಗೆ ಆಶ್ಚರ್ಯ ಆಗಬಹುದು. ಉದಾಹರಣೆಗೆ ಅತಿಯಾದ ಚಿಂತೆ, ಸುಳ್ಳು ಸುದ್ದಿಗಳು ಮತ್ತು ನಿರುತ್ತೇಜನ ನಿಮ್ಮ ನಂಬಿಕೆಯನ್ನು ಹಾಳು ಮಾಡುತ್ತಿದೆ ಎಂದು ಗೊತ್ತಾಗಬಹುದು. ಈ ರೀತಿ ಆಗಿದ್ದರೆ ನಿಮ್ಮ ನಂಬಿಕೆ ಪೂರ್ತಿ ಹಾಳಾಗದಂತೆ ತಡೆಯಲು ನೀವೇನು ಮಾಡಬಹುದು?

ಅತಿಯಾದ ಚಿಂತೆ, ಸುಳ್ಳು ಸುದ್ದಿಗಳು ಮತ್ತು ನಿರುತ್ತೇಜನಕ್ಕೆ ಬಲಿಯಾಗಬೇಡಿ

6. ಒಳ್ಳೇ ಚಿಂತೆಯ ಕೆಲವು ಉದಾಹರಣೆಗಳು ಯಾವುವು?

6 ಕೆಲವೊಂದು ಚಿಂತೆಗಳು ಒಳ್ಳೆಯದೇ. ಉದಾಹರಣೆಗೆ ಯೆಹೋವನನ್ನು ಮತ್ತು ಯೇಸುವನ್ನು ಮೆಚ್ಚಿಸುವುದರ ಬಗ್ಗೆ ಚಿಂತಿಸುವುದು ಒಳ್ಳೇದೇ. (1 ಕೊರಿಂ. 7:32) ಒಂದುವೇಳೆ ನೀವು ಗಂಭೀರ ತಪ್ಪು ಮಾಡಿದರೆ ಪುನಃ ಯೆಹೋವನ ಸ್ನೇಹ ಬೆಳೆಸೋದರ ಬಗ್ಗೆ ಚಿಂತಿಸಬಹುದು. (ಕೀರ್ತ. 38:18) ಮಾತ್ರವಲ್ಲ ಸಂಗಾತಿಯನ್ನು ಮೆಚ್ಚಿಸುವುದರ ಬಗ್ಗೆ, ಕುಟುಂಬದವರ ಅಗತ್ಯಗಳನ್ನು ಪೂರೈಸುವುದರ ಬಗ್ಗೆ ಮತ್ತು ಜೊತೆ ವಿಶ್ವಾಸಿಗಳನ್ನು ನೋಡಿಕೊಳ್ಳುವುದರ ಬಗ್ಗೆನೂ ಚಿಂತಿಸುವುದೂ ಒಳ್ಳೇದೇ.—1 ಕೊರಿಂ. 7:33; 2 ಕೊರಿಂ. 11:28.

7. (ಎ) ಅತಿಯಾದ ಚಿಂತೆಯಿಂದ ನಮ್ಮ ನಂಬಿಕೆ ಹೇಗೆ ಹಾಳಾಗುತ್ತದೆ? (ಬಿ) ಜ್ಞಾನೋಕ್ತಿ 29:25 ರ ಪ್ರಕಾರ ನಾವು ಮನುಷ್ಯರಿಗೆ ಯಾಕೆ ಭಯಪಡಬಾರದು?

7 ಆದರೆ ಅತಿಯಾದ ಚಿಂತೆಯು ನಮ್ಮ ನಂಬಿಕೆಯನ್ನು ಹಾಳುಮಾಡುತ್ತದೆ. ಉದಾಹರಣೆಗೆ, ನಾವು ಯಾವಾಗಲೂ ಊಟ, ಬಟ್ಟೆಯ ಬಗ್ಗೆ ಚಿಂತೆ ಮಾಡುತ್ತಾ ಇದ್ದರೆ ಏನಾಗುತ್ತದೆ ಅಂತ ನೋಡಿ. (ಮತ್ತಾ. 6:31, 32) ಆ ಚಿಂತೆ ಕಡಿಮೆ ಮಾಡಲಿಕ್ಕಾಗಿ ನಾವು ಹಣ-ಆಸ್ತಿ ಮಾಡುವುದರ ಕಡೆಗೆ ಹೆಚ್ಚು ಗಮನ ಕೊಡುತ್ತೇವೆ. ಹೀಗೆ ನಮಗೆ ಹಣದಾಸೆನೂ ಬಂದುಬಿಡುತ್ತದೆ. ಆಗ ಯೆಹೋವನ ಮೇಲೆ ನಮಗಿರುವ ನಂಬಿಕೆ ಕಡಿಮೆಯಾಗುತ್ತದೆ ಮತ್ತು ಆತನ ಜೊತೆಗಿನ ಸ್ನೇಹ ಹಾಳಾಗುತ್ತದೆ. (ಮಾರ್ಕ 4:19; 1 ತಿಮೊ. 6:10) ಕೆಲವೊಮ್ಮೆ ನಾವು ಇನ್ನೊಂದು ವಿಷಯದಲ್ಲೂ ಅತಿಯಾಗಿ ಚಿಂತಿಸಬಹುದು. ನಮ್ಮ ಬಗ್ಗೆ ಬೇರೆಯವರು ಏನು ಯೋಚಿಸುತ್ತಾರೆ ಅಂತ ಚಿಂತಿಸಬಹುದು. ಆಗ ನಾವು ಯೆಹೋವನಿಗೆಲ್ಲಿ ನೋವು ಮಾಡುತ್ತೇವೋ ಅನ್ನುವುದಕ್ಕಿಂತ ಜನ ನಮ್ಮನ್ನೆಲ್ಲಿ ಅಪಹಾಸ್ಯ ಮಾಡುತ್ತಾರೋ, ಹಿಂಸಿಸುತ್ತಾರೋ ಅನ್ನುವುದರ ಬಗ್ಗೆನೇ ಹೆಚ್ಚು ಚಿಂತೆ ಮಾಡಬಹುದು. ಈ ಅಪಾಯದಲ್ಲಿ ನಾವು ಬೀಳಬಾರದಂದರೆ ನಮಗೆ ನಂಬಿಕೆ ಕೊಡುವಂತೆ ಮತ್ತು ಜನರ ಭಯವನ್ನು ಎದುರಿಸಲಿಕ್ಕೆ ಬೇಕಾದ ಧೈರ್ಯ ಕೊಡುವಂತೆ ಯೆಹೋವನಿಗೆ ಅಂಗಲಾಚಿ ಬೇಡಬೇಕು.—ಜ್ಞಾನೋಕ್ತಿ 29:25 ಓದಿ; ಲೂಕ 17:5.

(ಪ್ಯಾರ 8 ನೋಡಿ) *

8. ಸುಳ್ಳು ಸುದ್ದಿಗಳ ವಿಷಯದಲ್ಲಿ ನಾವೇನು ಮಾಡಬೇಕು?

8 “ಸುಳ್ಳಿಗೆ ತಂದೆ” ಆಗಿರುವ ಸೈತಾನ ತನ್ನ ಜನರನ್ನು ಉಪಯೋಗಿಸಿ ಯೆಹೋವನ ಬಗ್ಗೆ ಮತ್ತು ನಮ್ಮ ಸಹೋದರರ ಬಗ್ಗೆ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಾನೆ. (ಯೋಹಾ. 8:44) ಉದಾಹರಣೆಗೆ, ಇಂಟರ್‌ನೆಟ್‌, ಟಿ.ವಿ. ಹಾಗೂ ಮತ್ತಿತರ ಮಾಧ್ಯಮಗಳ ಮೂಲಕ ಧರ್ಮಭ್ರಷ್ಟರು ಯೆಹೋವನ ಸಂಘಟನೆಯ ಬಗ್ಗೆ ಸುಳ್ಳನ್ನು ತಿಳಿಸುತ್ತಾರೆ ಅಥವಾ ಸತ್ಯವನ್ನು ತಿರುಚಿ ಹೇಳುತ್ತಾರೆ. ಸೈತಾನನ ‘ಅಗ್ನಿಬಾಣಗಳಲ್ಲಿ’ ಈ ಸುಳ್ಳುಗಳೂ ಸೇರಿವೆ. (ಎಫೆ. 6:16) ಯಾರಾದರೂ ಇಂಥ ಸುಳ್ಳುಗಳನ್ನು ಹೇಳಲು ಬಂದರೆ ನಾವೇನು ಮಾಡಬೇಕು? ಅದಕ್ಕೆ ಸ್ವಲ್ಪನೂ ಕಿವಿಗೊಡಬಾರದು. ಯಾಕೆಂದರೆ, ನಮಗೆ ಯೆಹೋವನ ಮೇಲೆ ಮತ್ತು ನಮ್ಮ ಸಹೋದರ ಸಹೋದರಿಯರ ಮೇಲೆ ನಂಬಿಕೆ ಇದೆ. ಹಾಗಾಗಿ, ನಾವು ಧರ್ಮಭ್ರಷ್ಟರೊಂದಿಗೆ ಸ್ವಲ್ಪನೂ ಸಹವಾಸ ಮಾಡುವುದಿಲ್ಲ. ಅವರೇನು ಹೇಳುತ್ತಾರೆ ಎಂಬ ಕುತೂಹಲದಿಂದಲೋ ಅಥವಾ ಬೇರೆ ಯಾವುದೇ ಕಾರಣದಿಂದಲೋ ನಾವು ಅವರೊಂದಿಗೆ ಯಾವುದೇ ವಿಷಯದ ಬಗ್ಗೆ ವಾದ ಮಾಡಲು ಹೋಗುವುದಿಲ್ಲ.

9. ನಿರುತ್ತೇಜನದಿಂದ ನಮ್ಮ ಮೇಲೆ ಯಾವ ಪರಿಣಾಮವಾಗಬಹುದು?

9 ಜೀವನದ ಜಂಜಾಟದಿಂದ ಮನಸ್ಸು ಬಳಲಿ ನಿರುತ್ತೇಜನವಾದರೆ ನಮ್ಮ ನಂಬಿಕೆ ಹಾಳಾಗಸಾಧ್ಯವಿದೆ. ಹಾಗಂತ ಸಮಸ್ಯೆಗಳನ್ನು ಕಂಡೂ ಕಾಣದಂತೆ ಇರಲು ಸಾಧ್ಯವಿಲ್ಲ. ಹಾಗೆ ಮಾಡುವುದು ಸರಿನೂ ಅಲ್ಲ. ಆದರೆ ನಾವು ಯಾವಾಗಲೂ ಆ ಸಮಸ್ಯೆಗಳ ಬಗ್ಗೆನೇ ಯೋಚಿಸುತ್ತಾ ಇರಬಾರದು. ಹಾಗೆ ಮಾಡಿದರೆ, ನಾವು ನಿರುತ್ತೇಜನದಲ್ಲಿ ಮುಳುಗಿಹೋಗಿ ಯೆಹೋವನು ನಮಗೆ ಮುಂದೆ ಕೊಡಲಿರುವ ಆಶೀರ್ವಾದಗಳನ್ನು ಮರೆತುಬಿಡಬಹುದು. (ಪ್ರಕ. 21:3, 4) ಹೀಗೆ ತುಂಬ ನಿರುತ್ತೇಜನವಾದರೆ ನಮಗೆ ಏನು ಮಾಡೋಕೂ ಶಕ್ತಿ ಇಲ್ಲ ಅಂತ ಅನಿಸಬಹುದು. ಕೊನೆಗೆ ಯೆಹೋವನ ಆರಾಧನೆಯನ್ನೇ ನಿಲ್ಲಿಸಿಬಿಡಬಹುದು. (ಜ್ಞಾನೋ. 24:10) ನಮಗೆ ಈ ರೀತಿ ಆಗಬಾರದೆಂದರೆ ನಾವೇನು ಮಾಡಬಹುದು?

10. ಒಬ್ಬ ಸಹೋದರಿ ಬರೆದ ಪತ್ರದಿಂದ ನೀವೇನು ಕಲಿತಿರಿ?

10 ಅಮೆರಿಕದ ಒಬ್ಬ ಸಹೋದರಿಯ ಅನುಭವ ನೋಡಿ. ಆಕೆಯ ಗಂಡ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇಂಥ ಕಷ್ಟ ಇದ್ದರೂ ಆಕೆ ತನ್ನ ನಂಬಿಕೆಯನ್ನು ಬಲವಾಗಿಟ್ಟುಕೊಂಡಿದ್ದಾಳೆ. ಆಕೆ ನಮ್ಮ ಮುಖ್ಯ ಕಾರ್ಯಾಲಯಕ್ಕೆ ಪತ್ರ ಬರೆದು ಹೀಗೆ ತಿಳಿಸಿದಳು: “ನಾವು ತುಂಬ ಒತ್ತಡದಲ್ಲಿದ್ದರೂ, ನಿರುತ್ತೇಜನದ ಪರಿಸ್ಥಿತಿಯಲ್ಲಿದ್ದರೂ ನಮ್ಮ ನಿರೀಕ್ಷೆ ಬಲವಾಗಿದೆ. ಯಾಕೆಂದರೆ ನಂಬಿಕೆಯನ್ನು ಬಲಪಡಿಸುವ, ಉತ್ತೇಜಿಸುವ ಮಾಹಿತಿ ನಮಗೆ ಸಿಗುತ್ತಿದೆ. ಅದಕ್ಕಾಗಿ ತುಂಬ ತುಂಬ ಥ್ಯಾಂಕ್ಸ್‌. ನಮಗೆ ಇಂಥ ಸಲಹೆ ಮತ್ತು ಉತ್ತೇಜನ ನಿಜವಾಗಲೂ ಬೇಕು. ಇದು ನಮಗೆ ಯೆಹೋವನ ಸೇವೆ ಮಾಡುತ್ತಾ ಮುಂದುವರಿಯಲು ಮತ್ತು ಸೈತಾನನು ನಮ್ಮ ಮೇಲೆ ತರುವ ಪರೀಕ್ಷೆಗಳನ್ನು ಎದುರಿಸಿ ನಿಲ್ಲಲು ಸಹಾಯ ಮಾಡುತ್ತೆ.” ಈ ಸಹೋದರಿ ಹೇಳಿದ ವಿಷಯದಿಂದ ನಾವು ನಿರುತ್ತೇಜನವನ್ನು ಜಯಿಸುವುದು ಹೇಗೆ ಅಂತ ಕಲಿಯಬಹುದು. ನಮಗೆ ಬರುವ ಸಮಸ್ಯೆಗಳು ಸೈತಾನನನ್ನು ವಿರೋಧಿಸಲಿಕ್ಕಿರುವ ಅವಕಾಶಗಳು ಎಂದು ನೆನಸಬೇಕು. ಯೆಹೋವನು ನಮ್ಮನ್ನು ಸಂತೈಸುತ್ತಾನೆ ಎಂದು ಭರವಸೆಯಿಂದ ಇರಬೇಕು. ನಮಗೆ ಸಿಗುವ ಆಧ್ಯಾತ್ಮಿಕ ಆಹಾರದಿಂದ ಪೂರ್ತಿ ಪ್ರಯೋಜನ ಪಡೆಯಬೇಕು.

ನೀವು ನಿಮ್ಮ ನಂಬಿಕೆ ಎಂಬ ದೊಡ್ಡ ಗುರಾಣಿ ಹಾಳಾಗದಂತೆ ನೋಡಿಕೊಳ್ಳುತ್ತಿದ್ದೀರಾ? (ಪ್ಯಾರ 11 ನೋಡಿ) *

11. ನಮ್ಮ ನಂಬಿಕೆ ಹೇಗಿದೆ ಅಂತ ಪರೀಕ್ಷಿಸೋಕೆ ನಾವು ಯಾವ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು?

11 ನಿಮ್ಮ ನಂಬಿಕೆ ಎಂಬ ಗುರಾಣಿ ಎಲ್ಲಾದರೂ ಸ್ವಲ್ಪ ಹಾಳಾಗಿದೆಯಾ? ಸರಿ ಮಾಡುವ ಅಗತ್ಯ ಇದೆಯಾ? ಇತ್ತೀಚೆಗೆ ನಿಮಗೆ ಅತಿಯಾಗಿ ಚಿಂತೆ ಮಾಡದೆ ಇರಲು ಸಾಧ್ಯ ಆಗಿದೆಯಾ? ಧರ್ಮಭ್ರಷ್ಟರು ಹಬ್ಬಿಸುತ್ತಿರುವ ಸುಳ್ಳು ಸುದ್ದಿಯನ್ನು ಕೇಳುವ ಮತ್ತು ಅದರ ಬಗ್ಗೆ ಅವರ ಜೊತೆ ವಾದ ಮಾಡುವ ಸನ್ನಿವೇಶ ಬಂದಾಗ ಅವರಿಂದ ದೂರ ಉಳಿದಿದ್ದೀರಾ? ನಿರುತ್ತೇಜನ ಆಗುವಂಥ ವಿಷಯಗಳು ನಡೆದಾಗಲೂ ಅದನ್ನು ಸಹಿಸಿಕೊಂಡು ಹೋಗುವುದಕ್ಕೆ ನಿಮ್ಮಿಂದ ಆಗಿದೆಯಾ? ಇದೆಲ್ಲಾ ನಿಮ್ಮಿಂದ ಆಗಿದ್ದರೆ ಅದರರ್ಥ ನಿಮ್ಮ ನಂಬಿಕೆ ಎಂಬ ಗುರಾಣಿ ಗಟ್ಟಿಯಾಗಿದೆ ಅಂತ. ಆದರೂ ನಾವು ಹುಷಾರಾಗಿರಬೇಕು. ಯಾಕೆಂದರೆ ಸೈತಾನ ನಮ್ಮ ಮೇಲೆ ಬೇರೆ ರೀತಿಯ ಆಯುಧಗಳನ್ನು ಎಸೆಯಬಹುದು. ಅವುಗಳಲ್ಲಿ ಒಂದು ಆಯುಧದ ಬಗ್ಗೆ ಈಗ ನೋಡೋಣ.

ಹಣ ಮತ್ತು ವಸ್ತುಗಳ ಆಸೆ ಬರದಂತೆ ಜಾಗ್ರತೆವಹಿಸಿ

12. ಹಣ, ವಸ್ತುಗಳ ಆಸೆಯಿಂದ ಏನಾಗುತ್ತದೆ?

12 ಹಣ, ವಸ್ತುಗಳ ಆಸೆಯು ನಮ್ಮ ನಂಬಿಕೆಯನ್ನು ಕಡಿಮೆ ಮಾಡುತ್ತದೆ. ಇದರಿಂದಾಗಿ ನಾವು ದೇವರ ಸೇವೆಯನ್ನು ಕಡಿಮೆ ಮಾಡುತ್ತೇವೆ. “ಸೈನಿಕನಾಗಿ ಸೇವೆಸಲ್ಲಿಸುತ್ತಿರುವ ಯಾವನೂ ತನ್ನನ್ನು ಸೈನಿಕನಾಗಿ ನೇಮಿಸಿಕೊಂಡವನ ಮೆಚ್ಚಿಗೆಯನ್ನು ಪಡೆಯಲಿಕ್ಕಾಗಿ ಜೀವನದ ವಾಣಿಜ್ಯ ವ್ಯವಹಾರಗಳಲ್ಲಿ ತನ್ನನ್ನು ಒಳಗೂಡಿಸಿಕೊಳ್ಳುವುದಿಲ್ಲ” ಎಂದು ಅಪೊಸ್ತಲ ಪೌಲ ಹೇಳಿದ್ದಾನೆ. (2 ತಿಮೊ. 2:4) ರೋಮನ್‌ ಸೈನಿಕರು ಬೇರೆ ಯಾವುದೇ ಉದ್ಯೋಗ ಅಥವಾ ವ್ಯಾಪಾರವನ್ನು ಮಾಡಬಾರದಾಗಿತ್ತು. ಒಬ್ಬ ಸೈನಿಕನು ಇದನ್ನು ಮೀರಿ ನಡೆದರೆ ಏನಾಗುವ ಸಾಧ್ಯತೆ ಇತ್ತು?

13. ಸೈನಿಕನು ಯಾಕೆ ವ್ಯಾಪಾರ ಮಾಡಬಾರದಾಗಿತ್ತು?

13 ಈ ಉದಾಹರಣೆ ನೋಡಿ. ಬೆಳಗ್ಗಿನ ಸಮಯದಲ್ಲಿ ಸೈನಿಕರೆಲ್ಲರಿಗೆ ಕತ್ತಿ ಯುದ್ಧದ ತರಬೇತಿ ನಡೆಯುತ್ತಿದೆ. ಆಗ ಸೈನಿಕ ದಳದ ಎಲ್ಲರೂ ಬಂದಿದ್ದರೂ ಒಬ್ಬ ಸೈನಿಕ ಮಾತ್ರ ಬಂದಿಲ್ಲ. ಕಾರಣ ಆ ಸಮಯದಲ್ಲಿ ಅವನು ಪೇಟೆಯಲ್ಲಿ ಆಹಾರ ಮಾರುತ್ತಿದ್ದಾನೆ. ಸಂಜೆ ಸೈನಿಕರೆಲ್ಲರೂ ತಮ್ಮ ಯುದ್ಧ ಕವಚ ಮತ್ತು ಸಾಮಗ್ರಿಗಳನ್ನು ಪರೀಕ್ಷಿಸಿ ಕತ್ತಿಯನ್ನು ಹರಿತ ಮಾಡುತ್ತಾರೆ. ಆದರೆ ಆಹಾರ ವ್ಯಾಪಾರ ಮಾಡುವ ಸೈನಿಕನು ಮರುದಿನದ ವ್ಯಾಪಾರಕ್ಕಾಗಿ ಸಿದ್ಧಪಡಿಸುವುದರಲ್ಲಿ ಮುಳುಗಿಹೋಗುತ್ತಾನೆ. ಮಾರನೇ ದಿನ, ಇದ್ದಕ್ಕಿದ್ದಂತೆ ಶತ್ರು ಸೈನಿಕರು ಆಕ್ರಮಣ ಮಾಡುತ್ತಾರೆ. ಆಗ ಯಾವ ಸೈನಿಕನು ತಕ್ಷಣ ಯುದ್ಧಕ್ಕೆ ಸಿದ್ಧನಾಗುತ್ತಾನೆ ಮತ್ತು ತನ್ನ ಸೈನ್ಯಾಧಿಕಾರಿಯ ಮೆಚ್ಚಿಗೆ ಪಡೆಯುತ್ತಾನೆ? ಆ ಯುದ್ಧದಲ್ಲಿ ನೀವಿರುವುದಾದರೆ ನಿಮ್ಮ ಪಕ್ಕದಲ್ಲಿ ಯಾವ ಸೈನಿಕನಿರಬೇಕು ಎಂದು ನೀವು ಬಯಸುತ್ತೀರಿ? ಯುದ್ಧಕ್ಕೆ ಸಿದ್ಧನಾಗಿರುವ ಸೈನಿಕನಾ ಅಥವಾ ವ್ಯಾಪಾರದಲ್ಲಿ ಮುಳುಗಿದ್ದವನಾ?

14. ಕ್ರಿಸ್ತನ ಸೈನಿಕರಾಗಿ ನಾವು ಯಾವುದಕ್ಕೆ ಪ್ರಾಮುಖ್ಯತೆ ಕೊಡಬೇಕು?

14 ಯುದ್ಧಕ್ಕೆ ಸಿದ್ಧರಾಗಿದ್ದ ಸೈನಿಕರಂತೆ ನಾವೂ ಇರಬೇಕು. ನಮ್ಮ ಗಮನವೆಲ್ಲಾ ಮುಖ್ಯ ಗುರಿ ಮೇಲೇ ಇರಬೇಕು, ಅದು ಬೇರೆ ಕಡೆಗೆ ಹೋಗಲು ನಾವು ಬಿಡಬಾರದು. ಆ ಗುರಿ ನಮ್ಮ ಸೈನ್ಯಾಧಿಕಾರಿಗಳಾಗಿರುವ ಯೆಹೋವ ಮತ್ತು ಯೇಸುವನ್ನು ಮೆಚ್ಚಿಸುವುದೇ ಆಗಿದೆ. ಸೈತಾನನ ಈ ಲೋಕದಲ್ಲಿ ಸಿಗುವ ಯಾವುದೇ ವಿಷಯಕ್ಕಿಂತಲೂ ನಾವು ಆ ಗುರಿಯನ್ನು ಸಾಧಿಸುವುದಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡಬೇಕು. ಯೆಹೋವನ ಆರಾಧನೆ ಮಾಡಲು ಮತ್ತು ನಂಬಿಕೆ ಎಂಬ ಗುರಾಣಿ ಹಾಗೂದೇವರು ಕೊಟ್ಟಿರುವ ರಕ್ಷಾಕವಚದ ಉಳಿದ ಭಾಗಗಳು ಹಾಳಾಗದಂತೆ ನೋಡಿಕೊಳ್ಳಲು ಸಾಕಷ್ಟು ಸಮಯ, ಶಕ್ತಿ ಕೊಡಬೇಕು.

15. ಪೌಲನು ನಮಗೆ ಯಾವ ಎಚ್ಚರಿಕೆಯನ್ನು ನೀಡಿದ್ದಾನೆ? ಮತ್ತು ಯಾಕೆ?

15 ನಾವು ಯಾವಾಗಲೂ ಎಚ್ಚರವಾಗಿರಬೇಕು. ಯಾಕೆಂದರೆ ಅಪೊಸ್ತಲ ಪೌಲನು ಹೇಳಿದಂತೆ, “ಐಶ್ವರ್ಯವಂತರಾಗಬೇಕೆಂದು ದೃಢನಿರ್ಧಾರಮಾಡಿಕೊಂಡಿರುವವರು” ‘ನಂಬಿಕೆಯಿಂದ ದಾರಿತಪ್ಪಿ ಹೋಗುತ್ತಾರೆ.’ (1 ತಿಮೊ. 6:9, 10) ‘ದಾರಿ ತಪ್ಪು’ ಎಂಬ ಮಾತು ಅಗತ್ಯವಿಲ್ಲದ ವಸ್ತುಗಳನ್ನು ತಗೊಳ್ಳಲು ಹೆಚ್ಚೆಚ್ಚು ಗಮನಕೊಡುವುದನ್ನು ಸೂಚಿಸುತ್ತದೆ. ನಾವು ಆ ರೀತಿ ಮಾಡಿದರೆ ‘ಬುದ್ಧಿಹೀನವಾದ ಮತ್ತು ಹಾನಿಕರವಾದ ಆಶೆಗಳು’ ನಮ್ಮಲ್ಲಿ ಬೆಳೆಯುತ್ತವೆ. ನಮ್ಮಲ್ಲಿ ಅಂಥ ಆಸೆಗಳು ಬರುವಂತೆ ಬಿಟ್ಟುಕೊಡಬಾರದು. ಬದಲಿಗೆ ಅವು ನಮ್ಮ ನಂಬಿಕೆಯನ್ನು ಕಡಿಮೆ ಮಾಡಲು ಸೈತಾನ ಬಳಸುತ್ತಿರುವ ಆಯುಧಗಳಾಗಿವೆ ಅನ್ನುವುದನ್ನು ನೆನಪಿನಲ್ಲಿಡಬೇಕು.

16. ಮಾರ್ಕ 10:17-22 ರಲ್ಲಿರುವ ಘಟನೆಯು ನಾವು ಯಾವ ಪ್ರಶ್ನೆಗಳನ್ನು ಕೇಳಿಕೊಳ್ಳುವಂತೆ ಮಾಡುತ್ತದೆ?

16 ನಮಗೆ ಬೇಕನಿಸಿದ್ದನ್ನೆಲ್ಲಾ ಖರೀದಿಸುವಷ್ಟು ಹಣ ನಮ್ಮ ಹತ್ತಿರ ಇದೆ ಎಂದು ನೆನಸಿ. ಹಾಗಿದ್ದಲ್ಲಿ, ನಮಗೆ ಅಗತ್ಯವಿಲ್ಲದ ಆದರೆ ನಾವಿಷ್ಟಪಡುವ ವಸ್ತುಗಳನ್ನು ಖರೀದಿಸೋದು ತಪ್ಪಾ? ತಪ್ಪು ಅಂತ ಹೇಳಕ್ಕಾಗಲ್ಲ. ಆದರೆ ನಾವು ಕೆಲವು ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು: ಒಂದು ವಸ್ತುವನ್ನು ಖರೀದಿಸುವಷ್ಟು ಹಣ ನಮ್ಮ ಹತ್ತಿರ ಇದ್ದರೂ ಅದನ್ನು ಸುಸ್ಥಿತಿಯಲ್ಲಿಡುವಷ್ಟು ಸಮಯ, ಶಕ್ತಿ ನಮಗಿದೆಯಾ? ಅದರ ಮೇಲೆ ಅತಿಯಾದ ವ್ಯಾಮೋಹ ಬೆಳೆಸಿಕೊಳ್ಳುವ ಸಾಧ್ಯತೆ ಇದೆಯಾ? ಆ ವಸ್ತುಗಳ ಮೇಲಿರುವ ವ್ಯಾಮೋಹದಿಂದಾಗಿ ನಾವು ಸಹ ಯೇಸುವಿನ ಆಮಂತ್ರಣ ತಿರಸ್ಕರಿಸಿದ ಯುವಕನಂತೆ ನಡಕೊಳ್ಳಬಹುದಾ? ಅಂದರೆ ದೇವರ ಸೇವೆಯನ್ನು ಹೆಚ್ಚು ಮಾಡುವ ಅವಕಾಶ ಸಿಗುವಾಗಲೂ ಹಿಂದೇಟು ಹಾಕಬಹುದಾ? (ಮಾರ್ಕ 10:17-22 ಓದಿ.) ಹೀಗಾಗುವ ಬದಲು, ನಾವು ಸರಳ ಜೀವನ ಮಾಡುತ್ತಾ ನಮ್ಮ ಸಮಯ ಮತ್ತು ಶಕ್ತಿಯನ್ನು ದೇವರ ಚಿತ್ತ ಮಾಡಲಿಕ್ಕಾಗಿ ಉಪಯೋಗಿಸುವುದು ಎಷ್ಟು ಒಳ್ಳೇದಲ್ವಾ?

ನಿಮ್ಮ ಗುರಾಣಿಯನ್ನು ಗಟ್ಟಿಯಾಗಿ ಹಿಡಿದುಕೊಳ್ಳಿ

17. ನಾವೇನನ್ನು ಯಾವತ್ತೂ ಮರೆಯಬಾರದು?

17 ನಾವು ಈಗಾಗಲೇ ಯುದ್ಧದಲ್ಲಿ ಇದ್ದೇವೆ, ಪ್ರತಿ ದಿನ ನಾವು ಯುದ್ಧ ಮಾಡಲು ಸಿದ್ಧರಾಗಿರಬೇಕು ಎನ್ನುವುದನ್ನು ಯಾವತ್ತೂ ಮರೆಯಬಾರದು. (ಪ್ರಕ. 12:17) ನಮ್ಮ ನಂಬಿಕೆ ಎಂಬ ಗುರಾಣಿಯನ್ನು ನಮಗೋಸ್ಕರ ಬೇರೆ ಸಹೋದರ ಸಹೋದರಿಯರು ಹೊರಲು ಸಾಧ್ಯವಿಲ್ಲ. ನಾವೇ ಸ್ವತಃ ಅದನ್ನು ಗಟ್ಟಿಯಾಗಿ ಎತ್ತಿ ಹಿಡಿದುಕೊಳ್ಳಬೇಕು.

18. ಹಿಂದಿನ ಕಾಲದ ಸೈನಿಕರು ತಮ್ಮ ಗುರಾಣಿಯನ್ನು ಯಾಕೆ ಗಟ್ಟಿಯಾಗಿ ಹಿಡಿದುಕೊಳ್ಳುತ್ತಿದ್ದರು?

18 ಹಿಂದಿನ ಕಾಲದಲ್ಲಿ ಒಬ್ಬ ಸೈನಿಕ ಯುದ್ಧದಲ್ಲಿ ಶೂರನಾಗಿ ಹೋರಾಡಿದರೆ ಅವನನ್ನು ಗೌರವಿಸಲಾಗುತ್ತಿತ್ತು. ಆದರೆ ಒಬ್ಬನು ಯುದ್ಧಭೂಮಿಯಲ್ಲೇ ತನ್ನ ಗುರಾಣಿಯನ್ನು ಕಳೆದುಕೊಂಡು ಬಂದರೆ ಅದನ್ನು ಅವಮಾನವೆಂದು ಎಣಿಸಲಾಗುತ್ತಿತ್ತು. ಇದರ ಬಗ್ಗೆ ರೋಮನ್‌ ಇತಿಹಾಸಕಾರನಾದ ಟ್ಯಾಸಿಟಸ್‌ ಹೀಗೆ ಹೇಳಿದ್ದಾನೆ: “ಸೈನಿಕನು ಗುರಾಣಿಯನ್ನು ಕಳೆದುಕೊಂಡು ಬಂದರೆ ಅದು ತುಂಬ ಅವಮಾನದ ವಿಷಯವಾಗಿತ್ತು.” ಆದ್ದರಿಂದಲೇ ಸೈನಿಕರು ತಮ್ಮ ಗುರಾಣಿಯನ್ನು ಗಟ್ಟಿಯಾಗಿ ಹಿಡಿದುಕೊಳ್ಳುತ್ತಿದ್ದರು.

ಒಬ್ಬ ಕ್ರೈಸ್ತ ಸಹೋದರಿ ಪ್ರಾರ್ಥನೆ ಮಾಡಿ ಬೈಬಲ್‌ ಓದುತ್ತಿದ್ದಾಳೆ, ತಪ್ಪದೇ ಕೂಟಗಳಿಗೆ ಹೋಗುತ್ತಾಳೆ ಮತ್ತು ಸೇವೆಯಲ್ಲಿ ಪೂರ್ಣವಾಗಿ ಭಾಗವಹಿಸುತ್ತಿದ್ದಾಳೆ. ಹೀಗೆ ತನ್ನ ನಂಬಿಕೆ ಎಂಬ ಗುರಾಣಿಯನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾಳೆ (ಪ್ಯಾರ 19 ನೋಡಿ)

19. ನಮ್ಮ ನಂಬಿಕೆ ಎಂಬ ಗುರಾಣಿಯನ್ನು ನಾವು ಹೇಗೆ ಗಟ್ಟಿಯಾಗಿ ಹಿಡಿದುಕೊಳ್ಳಬಹುದು?

19 ನಾವು ತಪ್ಪದೇ ಎಲ್ಲಾ ಕೂಟಗಳಿಗೆ ಹಾಜರಾಗಬೇಕು, ಯೆಹೋವ ಮತ್ತವನ ರಾಜ್ಯದ ಬಗ್ಗೆ ಇತರರಿಗೆ ಹೇಳಬೇಕು. ಹೀಗೆ ನಾವು ನಮ್ಮ ನಂಬಿಕೆ ಎಂಬ ಗುರಾಣಿಯನ್ನು ಗಟ್ಟಿಯಾಗಿ ಹಿಡಿದುಕೊಳ್ಳಬಹುದು. (ಇಬ್ರಿ. 10:23-25) ಜೊತೆಗೆ, ಪ್ರಾರ್ಥನೆ ಮಾಡಿ ದೇವರ ವಾಕ್ಯವನ್ನು ಪ್ರತಿದಿನ ಓದಿ ಅದರಲ್ಲಿರುವ ಸಲಹೆ, ಮಾರ್ಗದರ್ಶನಗಳನ್ನು ನಮ್ಮ ಜೀವನದಲ್ಲಿ ಯಾವಾಗಲೂ ಪಾಲಿಸಬೇಕು. (2 ತಿಮೊ. 3:16, 17) ಹೀಗೆ ಮಾಡಿದರೆ, ಸೈತಾನನು ನಮ್ಮ ಮೇಲೆ ಉಪಯೋಗಿಸುವ ಯಾವುದೇ ಆಯುಧದಿಂದಲೂ ನಮಗೆ ಶಾಶ್ವತ ಹಾನಿಯಾಗುವುದಿಲ್ಲ. (ಯೆಶಾ. 54:17) “ನಂಬಿಕೆಯೆಂಬ ದೊಡ್ಡ ಗುರಾಣಿ” ನಮ್ಮನ್ನು ಸಂರಕ್ಷಿಸುತ್ತದೆ. ನಾವು ಸಹೋದರ-ಸಹೋದರಿಯರಿಗೆ ಬೆಂಬಲ ನೀಡುತ್ತಾ ಸ್ಥಿರವಾಗಿ ನಿಲ್ಲುತ್ತೇವೆ. ಪ್ರತಿ ದಿನದ ಹೋರಾಟದಲ್ಲಿ ಜಯಿಸುತ್ತೇವೆ. ಮಾತ್ರವಲ್ಲ, ಸೈತಾನ ಮತ್ತು ಅವನ ಬೆಂಬಲಿಗರ ವಿರುದ್ಧ ಯೇಸು ಯುದ್ಧ ಮಾಡಿ ಜಯ ಗಳಿಸುವಾಗ ಆತನ ಪರವಾಗಿ ನಿಲ್ಲುವ ಗೌರವದ ಸುಯೋಗ ನಮಗೆ ಸಿಗುತ್ತದೆ.—ಪ್ರಕ. 17:14; 20:10.

ಗೀತೆ 81 “ನಮಗೆ ಇನ್ನೂ ಹೆಚ್ಚು ನಂಬಿಕೆಯನ್ನು ದಯಪಾಲಿಸು”

^ ಪ್ಯಾರ. 5 ಸೈನಿಕರಿಗೆ ಗುರಾಣಿಯು ಸಂರಕ್ಷಣೆ ನೀಡುತ್ತಿತ್ತು. ಅವರಿಗೇನೂ ಹಾನಿಯಾಗದಂತೆ ಕಾಪಾಡುತ್ತಿತ್ತು. ನಮ್ಮ ನಂಬಿಕೆ ಸಹ ಗುರಾಣಿಯಂತೆ ಇದೆ. ಗುರಾಣಿಯಂತೆ ನಂಬಿಕೆ ಗಟ್ಟಿಯಾಗಿ ಇರಬೇಕೆಂದರೆ ಅದು ಹಾಳಾಗದಂತೆ ನೋಡಿಕೊಳ್ಳಬೇಕು. “ನಂಬಿಕೆಯೆಂಬ ದೊಡ್ಡ ಗುರಾಣಿ” ಸುಸ್ಥಿತಿಯಲ್ಲಿ ಇರಬೇಕೆಂದರೆ ನಾವೇನು ಮಾಡಬೇಕೆಂದು ಈ ಲೇಖನದಲ್ಲಿ ಕಲಿಯಲಿದ್ದೇವೆ.

^ ಪ್ಯಾರ. 59 ಚಿತ್ರ ವಿವರಣೆ: ಯೆಹೋವನ ಸಾಕ್ಷಿಗಳ ಕುರಿತು ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿರುವ ಧರ್ಮಭ್ರಷ್ಟರ ಬಗ್ಗೆ ಟಿವಿಯಲ್ಲಿ ನ್ಯೂಸ್‌ ಬರುವಾಗ ಒಂದು ಸಾಕ್ಷಿ ಕುಟುಂಬವು ತಕ್ಷಣ ಟಿವಿಯನ್ನು ಆಫ್‌ ಮಾಡಿತು.

^ ಪ್ಯಾರ. 61 ಚಿತ್ರ ವಿವರಣೆ: ನಂತರ, ಕುಟುಂಬ ಆರಾಧನೆಯಲ್ಲಿ ತಂದೆ ಒಂದು ಬೈಬಲ್‌ ಭಾಗವನ್ನು ಉಪಯೋಗಿಸಿ ಕುಟುಂಬದ ನಂಬಿಕೆಯನ್ನು ಬಲಪಡಿಸುತ್ತಿದ್ದಾನೆ.