ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಒನೇಸಿಮ್‌ ಮತ್ತು ಜೆರಾಲ್ಡೀನ್‌

ತಮ್ಮ ದೇಶಕ್ಕೆ ವಾಪಸ್‌ ಹೋದವ್ರಿಗೆ ಸಿಕ್ಕಿದ ಆಶೀರ್ವಾದಗಳು

ತಮ್ಮ ದೇಶಕ್ಕೆ ವಾಪಸ್‌ ಹೋದವ್ರಿಗೆ ಸಿಕ್ಕಿದ ಆಶೀರ್ವಾದಗಳು

ಹೆಚ್ಚು ಹಣ ಸಂಪಾದಿಸಬೇಕಂತ ಬೇರೆ ದೇಶಕ್ಕೆ ಹೋಗಿದ್ದ ಅನೇಕ ಸಹೋದರ ಸಹೋದರಿಯರು ವಾಪಸ್‌ ತಮ್ಮ ದೇಶಕ್ಕೆ ಹಿಂದಿರುಗಿದ್ದಾರೆ. ಯೆಹೋವನ ಮೇಲೆ ಮತ್ತು ಜನರ ಮೇಲೆ ಇರೋ ಪ್ರೀತಿಯಿಂದಾಗಿ ಅವರು ತಮ್ಮ ದೇಶದಲ್ಲಿ ರಾಜ್ಯ ಪ್ರಚಾರಕರ ಅಗತ್ಯ ಹೆಚ್ಚಿರುವ ಸ್ಥಳಗಳಿಗೆ ಹೋಗಿದ್ದಾರೆ. (ಮತ್ತಾ. 22:37-39) ಇದಕ್ಕೋಸ್ಕರ ಅವರು ಯಾವೆಲ್ಲಾ ತ್ಯಾಗಗಳನ್ನ ಮಾಡಿದ್ದಾರೆ? ಅವರಿಗೆ ಯಾವೆಲ್ಲಾ ಆಶೀರ್ವಾದಗಳು ಸಿಕ್ಕಿವೆ? ಇದನ್ನ ತಿಳುಕೊಳ್ಳೋಕೆ ಪಶ್ಚಿಮ ಆಫ್ರಿಕಾದ ಕ್ಯಾಮರೂನ್‌ ದೇಶಕ್ಕೆ ಹಿಂದಿರುಗಿದ ಸಹೋದರ ಸಹೋದರಿಯರ ಬಗ್ಗೆ ನೋಡೋಣ.

“ಸರಿಯಾದ ಸ್ಥಳದಲ್ಲೇ ‘ಮೀನು ಹಿಡಿಯುತ್ತಾ’ ಇದ್ದೀನಿ”

ಒನೇಸಿಮ್‌ ಅನ್ನೋ ಸಹೋದರ 1998 ರಲ್ಲಿ ತನ್ನ ದೇಶವಾದ ಕ್ಯಾಮರೂನ್‌ ಬಿಟ್ಟು ಬೇರೆ ದೇಶಕ್ಕೆ ಹೋದ್ರು. ಅಲ್ಲಿ ಅವ್ರು 14 ವರ್ಷ ಇದ್ರು. ಒಂದಿನ ಕೂಟದಲ್ಲಿ, ಸಾರೋ ಕೆಲಸದ ಬಗ್ಗೆ ಒಂದು ಉದಾಹರಣೆ ಕೇಳಿಸಿಕೊಂಡ್ರು. ಭಾಷಣಕಾರರು ಹೀಗೆ ಹೇಳಿದ್ರು: “ಇಬ್ಬರು ಸ್ನೇಹಿತರು ಬೇರೆಬೇರೆ ಸ್ಥಳದಲ್ಲಿ ಕೂತುಕೊಂಡು ಮೀನು ಹಿಡಿಯುತ್ತಿದ್ದಾರೆ. ಒಬ್ಬನಿಗೆ ಇನ್ನೊಬ್ಬನಿಗಿಂತ ಹೆಚ್ಚು ಮೀನು ಸಿಗುತ್ತೆ. ಆಗ ಇನ್ನೊಬ್ಬನು ಎಲ್ಲಿ ಜಾಸ್ತಿ ಮೀನು ಸಿಗ್ತಾ ಇದೆಯೋ ಅಲ್ಲಿ ಹೋಗಿ ಮೀನು ಹಿಡಿಯುತ್ತಾನಲ್ವಾ?”

ಈ ಉದಾಹರಣೆಯನ್ನ ಕೇಳಿಸಿಕೊಂಡ ನಂತ್ರ ಸಹೋದರ ಒನೇಸಿಮ್‌ರು ಕ್ಯಾಮರೂನ್‌ಗೆ ವಾಪಸ್‌ ಹೋಗೋದ್ರ ಬಗ್ಗೆ ಯೋಚಿಸೋಕೆ ಶುರುಮಾಡಿದ್ರು. ಯಾಕಂದ್ರೆ ಅಲ್ಲಿ ತುಂಬ ಜನ ಬೈಬಲ್‌ ಕಲಿಯೋಕೆ ಆಸಕ್ತಿ ತೋರಿಸ್ತಿದ್ರು. ಆದ್ರೆ ಸಹೋದರನಿಗೆ ಒಂದು ಚಿಂತೆ ಇತ್ತು. ಇಷ್ಟೊಂದು ವರ್ಷ ವಿದೇಶದಲ್ಲಿದ್ದು ಕ್ಯಾಮರೂನ್‌ಗೆ ಹೋಗಿ ಅಲ್ಲಿನ ಜೀವನಕ್ಕೆ ಹೊಂದಿಕೊಳ್ಳೋಕೆ ಆಗುತ್ತಾ ಅನ್ನೋ ಯೋಚನೆ ಇತ್ತು. ಅದನ್ನ ತಿಳುಕೊಳ್ಳೋದಕ್ಕಾಗಿ ಅವ್ರು ಆರು ತಿಂಗಳ ಮಟ್ಟಿಗೆ ಕ್ಯಾಮರೂನ್‌ಗೆ ಹೋದ್ರು. ನಂತ್ರ 2012 ರಲ್ಲಿ, ಖಾಯಂ ಆಗಿ ಕ್ಯಾಮರೂನ್‌ಗೆ ಸ್ಥಳಾಂತರಿಸಿದ್ರು.

ಒನೇಸಿಮ್‌ ಹೀಗೆ ಹೇಳ್ತಾರೆ: “ಶುರುವಲ್ಲಿ ಸ್ವಲ್ಪ ಕಷ್ಟ ಆಯ್ತು. ಇಲ್ಲಿ ತುಂಬ ಬಿಸಿಲಿದೆ ಮತ್ತು ಹೆಚ್ಚು ಸೌಲಭ್ಯಗಳಿಲ್ಲ. ಇಲ್ಲಿನ ರಾಜ್ಯ ಸಭಾಗೃಹಗಳಲ್ಲಿ ಬೆಂಚ್‌ ಮೇಲೆ ಕೂತ್ಕೊಬೇಕು. ಆಗ ನಂಗೆ ವಿದೇಶದಲ್ಲಿದ್ದ ಮೆತ್ತಗಿನ ಕುರ್ಚಿಗಳು ನೆನಪಾಗುತ್ತಿದ್ವು.” ನಂತ್ರ ಅವ್ರು ನಗ್ತಾ ಹೀಗೆ ಹೇಳ್ತಾರೆ: “ನಾನು ಕಾರ್ಯಕ್ರಮಕ್ಕೆ ಹೆಚ್ಚು ಗಮನ ಕೊಟ್ಟ ಹಾಗೆ ಆ ಮೆತ್ತಗಿನ ಕುರ್ಚಿಗಳು ಮರೆತುಹೋಗ್ತಿದ್ದವು.”

ಸಹೋದರ ಒನೇಸಿಮ್‌ 2013 ರಲ್ಲಿ ಜೆರಾಲ್ಡೀನ್‌ ಅನ್ನೋ ಸಹೋದರಿಯನ್ನ ಮದುವೆ ಆದ್ರು. ಈ ಸಹೋದರಿ 9 ವರ್ಷ ಫ್ರಾನ್ಸ್‌ನಲ್ಲಿದ್ದು ನಂತ್ರ ಕ್ಯಾಮರೂನ್‌ಗೆ ವಾಪಸ್‌ ಬಂದಿದ್ರು. ಇವ್ರಿಬ್ಬರೂ ತಮ್ಮ ಜೀವನದಲ್ಲಿ ಯೆಹೋವನ ಸೇವೆಗೆ ಮೊದಲನೇ ಸ್ಥಾನ ಕೊಟ್ರು. ಇದ್ರಿಂದ ಯೆಹೋವ ಅವ್ರನ್ನ ಹೇಗೆಲ್ಲಾ ಆಶೀರ್ವದಿಸಿದ್ದಾನೆ? ಒನೇಸಿಮ್‌ ಹೀಗೆ ಹೇಳ್ತಾರೆ: “ನಾವಿಬ್ರೂ ರಾಜ್ಯ ಪ್ರಚಾರಕರ ಶಾಲೆಗೆ ಹಾಜರಾದ್ವಿ. ನಂತ್ರ ಬೆತೆಲ್‌ ಸೇವೆ ಶುರು ಮಾಡಿದ್ವಿ. ಇತ್ತೀಚೆಗೆ ಒಂದು ವರ್ಷದಲ್ಲಿ ನಮ್ಮ ಸಭೆಯ 20 ಬೈಬಲ್‌ ವಿದ್ಯಾರ್ಥಿಗಳು ದೀಕ್ಷಾಸ್ನಾನ ತಗೊಂಡ್ರು. ನಾನೀಗ ಸರಿಯಾದ ಸ್ಥಳದಲ್ಲೇ ‘ಮೀನು ಹಿಡಿಯುತ್ತಾ’ ಇದ್ದೀನಿ ಅಂತ ನನಗನಿಸುತ್ತೆ.” (ಮಾರ್ಕ 1:17, 18) ಜೆರಾಲ್ಡೀನ್‌ ಹೀಗೆ ಹೇಳ್ತಾರೆ: “ನನಗೆ ಇಷ್ಟೊಂದು ಆಶೀರ್ವಾದಗಳು ಸಿಗುತ್ತೆ ಅಂತ ಕನಸುಮನಸ್ಸಲ್ಲೂ ಯೋಚಿಸಿರಲಿಲ್ಲ.”

ಶಿಷ್ಯರನ್ನಾಗಿ ಮಾಡೋ ಕೆಲಸದಲ್ಲಿ ಸಿಗೋ ಸಂತೋಷ

ಜೂಡಿತ್‌ ಮತ್ತು ಸ್ಯಾಮ್‌-ಕ್ಯಾಸ್ಟಲ್‌

ಜೂಡಿತ್‌ ಅನ್ನೋ ಸಹೋದರಿ ಅಮೆರಿಕಕ್ಕೆ ಹೋಗಿ ನೆಲೆಸಿದ್ರು. ಆದ್ರೆ ಅವ್ರಿಗೆ ಯೆಹೋವನ ಸೇವೆಯನ್ನ ಹೆಚ್ಚು ಮಾಡ್ಬೇಕು ಅನ್ನೋ ಆಸೆ ಇತ್ತು. ಆಕೆ ಹೀಗೆ ಹೇಳ್ತಾರೆ: “ಕುಟುಂಬದವ್ರನ್ನ ನೋಡೋಕೆ ನಾನು ಕ್ಯಾಮರೂನ್‌ಗೆ ಬಂದಾಗೆಲ್ಲ ಅನೇಕ ಜನ್ರಿಗೆ ಬೈಬಲ್‌ ಸ್ಟಡಿ ಕೊಡೋಕೆ ಶುರುಮಾಡ್ತಿದ್ದೆ. ಆದ್ರೆ ಅವ್ರನ್ನೆಲ್ಲಾ ಬಿಟ್ಟು ವಾಪಸ್‌ ಹೋಗುವಾಗ ತುಂಬ ಅಳ್ತಿದ್ದೆ.” ಅಮೆರಿಕದಿಂದ ಕ್ಯಾಮರೂನ್‌ಗೆ ಖಾಯಂ ಆಗಿ ವಾಪಸ್‌ ಹೋಗೋಕೆ ಜೂಡಿತ್‌ಗೆ ಇಷ್ಟ ಇದ್ರೂ ಒಂದು ಕಾರಣದಿಂದ ಅವ್ರು ಹಿಂಜರಿಯುತ್ತಿದ್ರು. ಅಮೆರಿಕದಲ್ಲಿ ಅವ್ರಿಗೆ ಒಂದು ಒಳ್ಳೇ ಕೆಲಸ ಇತ್ತು ಮತ್ತು ಇದ್ರಿಂದ ಅವರ ತಂದೆಯ ಚಿಕಿತ್ಸೆ ಖರ್ಚನ್ನು ನೋಡಿಕೊಳ್ಳೋಕೆ ಆಗ್ತಿತ್ತು. ಆದ್ರೂ ಅವರು ಯೆಹೋವನ ಮೇಲೆ ಭರವಸೆ ಇಟ್ಟು ಕ್ಯಾಮರೂನ್‌ಗೆ ಬಂದುಬಿಟ್ರು. ‘ವಿದೇಶದಲ್ಲಿದ್ದ ಸೌಕರ್ಯಗಳು ಇಲ್ಲಿ ಇಲ್ವಲ್ಲಾ?’ ಅಂತ ಅವರಿಗೆ ಶುರುವಲ್ಲಿ ಅನಿಸ್ತು. ‘ಇಲ್ಲಿಗೆ ಹೊಂದಿಕೊಳ್ಳೋಕೆ ಸಹಾಯ ಮಾಡಪ್ಪಾ’ ಅಂತ ಯೆಹೋವನ ಹತ್ರ ಪ್ರಾರ್ಥಿಸ್ತಿದ್ದರು. ಒಬ್ಬ ಸಂಚರಣ ಮೇಲ್ವಿಚಾರಕರು ಮತ್ತು ಅವರ ಪತ್ನಿ, ಜೂಡಿತ್‌ಗೆ ಉತ್ತೇಜನ ಕೊಟ್ರು. ಇದ್ರಿಂದ ಜೂಡಿತ್‌ಗೆ ಸಹಾಯ ಆಯ್ತು.

ಜೂಡಿತ್‌ ಹೀಗೆ ಹೇಳ್ತಾರೆ: “ಮೂರು ವರ್ಷಗಳಲ್ಲೇ ನಾನು ಬೈಬಲ್‌ ಸ್ಟಡಿ ಮಾಡ್ತಿದ್ದ ನಾಲ್ಕು ಜನ ದೀಕ್ಷಾಸ್ನಾನ ತಗೊಂಡ್ರು. ಇದ್ರಿಂದ ನನಗೆ ತುಂಬ ಖುಷಿ ಆಯ್ತು.” ಆಮೇಲೆ ಜೂಡಿತ್‌ ಮದುವೆಯಾಗಿ ವಿಶೇಷ ಪಯನೀಯರ್‌ ಸೇವೆ ಮಾಡೋಕೆ ಆರಂಭಿಸಿದ್ರು. ಈಗ ಅವರು ತನ್ನ ಗಂಡ ಸ್ಯಾಮ್‌-ಕ್ಯಾಸ್ಟಲ್‌ ಜೊತೆ ಸಂಚರಣ ಕೆಲಸದಲ್ಲಿ ಆನಂದಿಸ್ತಿದ್ದಾರೆ. ಆದ್ರೆ ಜೂಡಿತ್‌ ತಂದೆಯ ಚಿಕಿತ್ಸೆ ಖರ್ಚನ್ನು ಹೇಗೆ ನೋಡಿಕೊಳ್ಳಲಾಯ್ತು? ಅವ್ರಿಗೆ ಆಪರೇಷನ್‌ ಮಾಡೋ ಅಗತ್ಯ ಬಂದಾಗ ಉಚಿತವಾಗಿ ಆಪರೇಷನ್‌ ಮಾಡೋಕೆ ತಯಾರಾಗಿದ್ದ ಒಂದು ವಿದೇಶಿ ಆಸ್ಪತ್ರೆಯನ್ನು ಜೂಡಿತ್‌ ಮತ್ತು ಅವ್ರ ಕುಟುಂಬದವ್ರು ಕಂಡುಹಿಡಿದ್ರು. ಆಪರೇಷನ್‌ ಸಹ ಯಶಸ್ವಿ ಆಯ್ತು.

ಯೆಹೋವ ನಮ್ಮನ್ನ ಚೆನ್ನಾಗಿ ನೋಡಿಕೊಂಡನು

ಕ್ಯಾರಲಿನ್‌ ಮತ್ತು ವಿಕ್ಟರ್‌

ವಿಕ್ಟರ್‌ ಅನ್ನೋ ಸಹೋದರ ಕ್ಯಾಮರೂನ್‌ನಿಂದ ಕೆನಡಕ್ಕೆ ಹೋದ್ರು. ಅಲ್ಲಿ ಅವ್ರು ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣ ಮಾಡ್ತಿದ್ರು. ಆದ್ರೆ ಉನ್ನತ ಶಿಕ್ಷಣದ ಬಗ್ಗೆ ಕಾವಲಿನಬುರುಜು ಪತ್ರಿಕೆಯಲ್ಲಿ ಬಂದ ಲೇಖನವನ್ನ ಓದಿದಾಗ ಅವ್ರು ಅದ್ರ ಬಗ್ಗೆ ಯೋಚಿಸೋಕೆ ಶುರುಮಾಡಿದ್ರು. ನಂತ್ರ ವಿಶ್ವವಿದ್ಯಾಲಯದ ಶಿಕ್ಷಣ ನಿಲ್ಲಿಸಿ ಒಂದು ಟೆಕ್ನಿಕಲ್‌ ಕೋರ್ಸ್‌ ತಗೊಂಡ್ರು. ಅದು ಸ್ವಲ್ಪ ಸಮಯದಲ್ಲೇ ಮುಗಿಯುವಂಥ ಕೋರ್ಸ್‌ ಆಗಿತ್ತು. ಅವರು ಹೀಗೆ ಹೇಳ್ತಾರೆ: “ಈ ಕೋರ್ಸ್‌ನಿಂದಾಗಿ ನಂಗೆ ಬೇಗ ಒಂದು ಕೆಲಸ ಸಿಕ್ತು ಮತ್ತು ಎಷ್ಟೋ ಸಮಯದಿಂದ ನಾನು ಬಯಸ್ತಿದ್ದ ಪಯನೀಯರ್‌ ಸೇವೆ ಶುರುಮಾಡೋಕೂ ಸಾಧ್ಯವಾಯ್ತು.” ವರ್ಷಗಳ ನಂತ್ರ ವಿಕ್ಟರ್‌ ಸಹೋದರಿ ಕ್ಯಾರಲಿನ್‌ ಅನ್ನು ಮದ್ವೆಯಾದ್ರು ಮತ್ತು ಅವ್ರಿಬ್ಬರೂ ಒಮ್ಮೆ ಕ್ಯಾಮರೂನ್‌ಗೆ ಹೋದ್ರು. ಅಲ್ಲಿ ಅವರು ಬ್ರಾಂಚ್‌ ಆಫೀಸ್‌ಗೆ ಭೇಟಿ ನೀಡಿದ್ರು. ಅಲ್ಲಿನ ಸಹೋದರರು, ಇವ್ರಿಗೆ ಕ್ಯಾಮರೂನ್‌ಗೆ ಬಂದು ಯಾಕೆ ಸೇವೆ ಮಾಡಬಾರ್ದು ಅಂತ ಕೇಳಿದ್ರು. ವಿಕ್ಟರ್‌ ಹೀಗೆ ಹೇಳ್ತಾರೆ: “ನಮಗೆ ಯಾವ ಅಡ್ಡಿನೂ ಇಲ್ಲ, ಹಾಗಿರುವಾಗ ಯಾಕೆ ಅಲ್ಲಿಗೆ ಹೋಗಬಾರದು ಅಂತ ಯೋಚಿಸಿದ್ವಿ. ನಮ್ಮ ಜೀವನವನ್ನ ಸರಳವಾಗಿ ಇಟ್ಟಿದ್ರಿಂದ ಕ್ಯಾಮರೂನ್‌ಗೆ ಹೋಗೋಕೆ ಸಾಧ್ಯವಾಯ್ತು.” ಸಹೋದರಿ ಕ್ಯಾರಲಿನ್‌ಗೆ ಕೆಲವು ಆರೋಗ್ಯ ಸಮಸ್ಯೆಗಳಿದ್ರೂ ಅವರು ಕ್ಯಾಮರೂನ್‌ಗೆ ಹೋಗಿ ಸೇವೆ ಮಾಡೋಕೆ ನಿರ್ಧರಿಸಿದ್ರು.

ವಿಕ್ಟರ್‌ ಮತ್ತು ಕ್ಯಾರಲಿನ್‌ ಕ್ಯಾಮರೂನ್‌ನಲ್ಲಿ ಪಯನೀಯರ್‌ ಸೇವೆಯನ್ನ ಆರಂಭಿಸಿದ್ರು. ಅಲ್ಲಿ ಅನೇಕ ಜನ ಬೈಬಲ್‌ ಕಲಿಯೋಕೆ ತುಂಬ ಆಸಕ್ತಿ ತೋರಿಸ್ತಿದ್ರು. ಆರಂಭದಲ್ಲಿ ಅವರು ಕೆಲಸ ಮಾಡೋ ಅಗತ್ಯ ಇರಲಿಲ್ಲ. ಯಾಕಂದ್ರೆ ಅವರು ಸ್ವಲ್ಪ ಹಣ ಕೂಡಿಟ್ಟಿದ್ರು. ಆದ್ರೆ ಅದು ಖರ್ಚಾದ ಮೇಲೆ ಕೆಲವು ತಿಂಗಳು ಕೆನಡಕ್ಕೆ ಹೋಗಿ ಕೆಲಸ ಮಾಡಿದ್ರು. ಅಲ್ಲಿ ಸ್ವಲ್ಪ ಹಣ ಸಂಪಾದನೆ ಮಾಡಿದ ಮೇಲೆ ಮತ್ತೆ ಕ್ಯಾಮರೂನ್‌ಗೆ ವಾಪಸ್‌ ಬಂದು ಪಯನೀಯರ್‌ ಸೇವೆ ಮುಂದುವರಿಸಿದ್ರು. ಇದ್ರಿಂದ ಅವ್ರಿಗೆ ಯಾವ ಆಶೀರ್ವಾದ ಸಿಕ್ತು? ರಾಜ್ಯ ಪ್ರಚಾರಕರ ಶಾಲೆಗೆ ಹೋಗೋ ಅವಕಾಶ ಸಿಗ್ತು, ಅದ್ರ ನಂತ್ರ ವಿಶೇಷ ಪಯನೀಯರ್‌ ಆದ್ರು. ಈಗ ಅವರು ನಿರ್ಮಾಣ ಕೆಲಸ ಮಾಡ್ತಿದ್ದಾರೆ. ವಿಕ್ಟರ್‌ ಹೀಗೆ ಹೇಳ್ತಾರೆ: “ಎಲ್ಲಾ ಅನುಕೂಲ ಇದ್ದ ಜೀವನ ಬಿಟ್ಟು ಯೆಹೋವನನ್ನು ಆಶ್ರಯಿಸಿದ್ದರಿಂದ ಯೆಹೋವ ನಮ್ಮನ್ನ ಚೆನ್ನಾಗಿ ನೋಡಿಕೊಂಡನು.”

ತಮ್ಮನ್ನೇ ಯೆಹೋವನಿಗೆ ಸಮರ್ಪಿಸಿಕೊಳ್ಳೋಕೆ ಜನ್ರಿಗೆ ನಾವು ಸಹಾಯ ಮಾಡಿದಾಗ ಸಿಗೋ ಸಂತೋಷ

ಸ್ಟೆಫನೀ ಮತ್ತು ಅಲೈನ್‌

ಅಲೈನ್‌ ಅನ್ನೋ ಸಹೋದರ ಜರ್ಮನಿಯ ವಿಶ್ವವಿದ್ಯಾಲಯದಲ್ಲಿ ಓದುತ್ತಾ ಇದ್ರು. ಅವ್ರು 2002 ರಲ್ಲಿ ಯುವ ಜನರೇ—ನಿಮ್ಮ ಜೀವಿತವನ್ನು ಹೇಗೆ ಉಪಯೋಗಿಸುವಿರಿ? ಅನ್ನೋ ಕರಪತ್ರವನ್ನ ಓದಿದ್ರು. ಆ ಕರಪತ್ರದಲ್ಲಿರೋ ವಿಷಯ ಅವ್ರಿಗೆ ಹೊಸ ಗುರಿಗಳನ್ನ ಇಡೋಕೆ ಸಹಾಯ ಮಾಡ್ತು. 2006 ರಲ್ಲಿ ಅವ್ರು ಶುಶ್ರೂಷಾ ತರಬೇತಿ ಶಾಲೆಗೆ ಹಾಜರಾದ್ರು ಮತ್ತು ಅವ್ರನ್ನ ಅವರ ದೇಶವಾದ ಕ್ಯಾಮರೂನ್‌ನಲ್ಲಿ ಸೇವೆ ಮಾಡೋಕೆ ನೇಮಿಸಲಾಯ್ತು.

ಅಲೈನ್‌ಗೆ ಕ್ಯಾಮರೂನ್‌ನಲ್ಲಿ ಪಾರ್ಟ್‌ ಟೈಮ್‌ ಕೆಲಸ ಸಿಕ್ತು. ನಂತ್ರ ಅವ್ರಿಗೆ ಸ್ವಲ್ಪ ಹೆಚ್ಚು ಸಂಬಳ ಬರೋ ಕೆಲಸನೂ ಸಿಕ್ತು. ಆದ್ರೆ ಈ ಕೆಲಸದಲ್ಲೇ ಮುಂದುವರಿದ್ರೆ ಮುಂಚಿನ ತರ ಸೇವೆ ಮಾಡೋಕೆ, ಬೈಬಲ್‌ ಕಲಿಸೋಕೆ ಟೈಮ್‌ ಸಿಗಲ್ವೇನೋ ಅಂತ ಅವ್ರಿಗೆ ಚಿಂತೆ ಆಗ್ತಿತ್ತು. ಹಾಗಾಗಿ ವಿಶೇಷ ಪಯನೀಯರ್‌ ಆಗುವ ಅವಕಾಶ ಸಿಕ್ಕಿದಾಗ ಅವ್ರು ಅದಕ್ಕೆ ತಕ್ಷಣ ಒಪ್ಪಿಕೊಂಡ್ರು. ಆಗ ಅವ್ರ ಬಾಸ್‌ ಇನ್ನೂ ಹೆಚ್ಚು ಸಂಬಳ ಕೊಡ್ತೀನಿ ಅಂತ ಹೇಳಿದ್ರು. ಆದ್ರೆ ಅಲೈನ್‌ ತನ್ನ ನಿರ್ಣಯವನ್ನ ಬದಲಾಯಿಸಲಿಲ್ಲ. ಆಮೇಲೆ ಅಲೈನ್‌, ಸ್ಟೆಫನೀ ಅನ್ನೋ ಸಹೋದರಿಯನ್ನ ಮದುವೆಯಾದ್ರು. ತುಂಬ ವರ್ಷಗಳಿಂದ ಫ್ರಾನ್ಸ್‌ನಲ್ಲಿದ್ದ ಈ ಸಹೋದರಿಗೆ ಕ್ಯಾಮರೂನ್‌ಗೆ ಹೋದ ನಂತ್ರ ಯಾವೆಲ್ಲಾ ಸಮಸ್ಯೆಗಳು ಬಂದ್ವು?

ಸ್ಟೆಫನೀ ಹೀಗೆ ಹೇಳ್ತಾರೆ: “ನಂಗೆ ಚಿಕ್ಕಪುಟ್ಟ ಕಾಯಿಲೆಗಳು ಬಂದ್ವು ಮತ್ತು ಅಲರ್ಜಿಗಳು ಆಗ್ತಿತ್ತು. ಆದ್ರೆ ನಾನು ತಪ್ಪದೆ ಚಿಕಿತ್ಸೆ ತಗೊಂಡೆ. ಇದ್ರಿಂದ ಸ್ವಲ್ಪ ಮೇಲಾಯ್ತು.” ಆ ದಂಪತಿ ತೋರಿಸಿದ ತಾಳ್ಮೆಗೆ ತಕ್ಕ ಪ್ರತಿಫಲ ಸಿಕ್ತು. ಅಲೈನ್‌ ಹೀಗೆ ಹೇಳ್ತಾರೆ: “ನಾವು ಕಾಟೆ ಅನ್ನೋ ದೂರದ ಹಳ್ಳಿಗೆ ಹೋಗಿ ಸುವಾರ್ತೆ ಸಾರಿದಾಗ, ಅಲ್ಲಿ ತುಂಬ ಜನ ಬೈಬಲ್‌ ಕಲಿಯೋಕೆ ಆಸಕ್ತಿ ತೋರಿಸಿದ್ರು. ನಂತ್ರ ನಾವು ಅವ್ರಿಗೆ ಫೋನ್‌ನಲ್ಲಿ ಬೈಬಲ್‌ ಸ್ಟಡಿ ಮಾಡಿದ್ವಿ. ನಮ್ಮ ಬೈಬಲ್‌ ವಿದ್ಯಾರ್ಥಿಗಳಲ್ಲಿ ಇಬ್ರು ದೀಕ್ಷಾಸ್ನಾನ ತಗೊಂಡ್ರು ಮತ್ತು ಪ್ರಚಾರಕರ ಒಂದು ಗುಂಪು ಸ್ಥಾಪನೆಯಾಯ್ತು.” ಸ್ಟೆಫನೀ ಹೀಗೆ ಹೇಳ್ತಾರೆ: “ತಮ್ಮನ್ನೇ ಯೆಹೋವನಿಗೆ ಸಮರ್ಪಿಸಿಕೊಳ್ಳೋಕೆ ಜನರಿಗೆ ನಾವು ಸಹಾಯ ಮಾಡುವಾಗ ಸಿಗೋ ಸಂತೋಷ ಬೇರೆ ಯಾವುದ್ರಲ್ಲೂ ಸಿಗಲ್ಲ. ಇಲ್ಲಿ ಸೇವೆ ಮಾಡ್ತಿರೋದ್ರಿಂದ ನಮಗೆ ಆ ಸಂತೋಷ ತುಂಬ ಸಲ ಸಿಕ್ಕಿದೆ.” ಈಗ ಅಲೈನ್‌ ಮತ್ತು ಸ್ಟೆಫನೀ ಸಂಚರಣ ಕೆಲಸ ಮಾಡ್ತಿದ್ದಾರೆ.

“ನಾವಿಲ್ಲಿ ಬರೋಕೆ ಮಾಡಿದ ನಿರ್ಣಯ ಸರಿಯಾಗಿಯೇ ಇತ್ತು”

ಲಿಯಾನ್ಸ್‌ ಮತ್ತು ಗಿಜೆ಼ಲ್‌

ಗಿಜೆ಼ಲ್‌ ಅನ್ನೋ ಸಹೋದರಿ ಇಟಲಿಯಲ್ಲಿ ಮೆಡಿಕಲ್‌ ಕಾಲೇಜಿನಲ್ಲಿ ಓದುತ್ತಿದ್ದಾಗ ದೀಕ್ಷಾಸ್ನಾನ ತಗೊಂಡ್ರು. ತನಗೆ ಬೈಬಲನ್ನು ಕಲಿಸಿದ ಪಯನೀಯರ್‌ ದಂಪತಿಯ ಸರಳ ಜೀವನ ನೋಡಿ ಅವ್ರಿಗೆ ತುಂಬ ಇಷ್ಟ ಆಯ್ತು ಮತ್ತು ತಾನು ಸಹ ಹೆಚ್ಚು ಸೇವೆ ಮಾಡ್ಬೇಕಂತ ಬಯಸ್ತಿದ್ರು. ಅದಕ್ಕೇ ಅವ್ರು ವಿದ್ಯಾಭ್ಯಾಸವನ್ನ ಮಾಡ್ತಾ ಇರುವಾಗಲೇ ಪಯನೀಯರ್‌ ಸೇವೆ ಶುರುಮಾಡಿದ್ರು.

ಗಿಜೆ಼ಲ್‌ ಕ್ಯಾಮರೂನ್‌ಗೆ ವಾಪಸ್‌ ಹೋಗಿ ಅಲ್ಲಿ ಯೆಹೋವನ ಸೇವೆಯನ್ನ ಹೆಚ್ಚು ಮಾಡ್ಬೇಕಂತ ಇಷ್ಟಪಟ್ರು. ಆದ್ರೆ ಅವ್ರಿಗೆ ಕೆಲವು ಚಿಂತೆಗಳಿದ್ದವು. ಅವ್ರು ಹೀಗೆ ಹೇಳ್ತಾರೆ: “ನಾನು ಇಟಲಿಯ ಪೌರತ್ವದ ಹಕ್ಕನ್ನ ಬಿಟ್ಟುಕೊಡಬೇಕಾಗಿತ್ತು ಮತ್ತು ಇಟಲಿಯಲ್ಲಿರೋ ನನ್ನ ಕುಟುಂಬ ಮತ್ತು ಸ್ನೇಹಿತರಿಂದ ದೂರ ಇರಬೇಕಿತ್ತು.” ಹಾಗಿದ್ರೂ 2016 ರ ಮೇ ತಿಂಗಳಲ್ಲಿ, ಗಿಜೆ಼ಲ್‌ ಕ್ಯಾಮರೂನ್‌ಗೆ ಹೋದ್ರು. ಸ್ವಲ್ಪ ಸಮಯದ ನಂತ್ರ ಅವ್ರು ಲಿಯಾನ್ಸ್‌ ಅನ್ನೋ ಸಹೋದರನನ್ನ ಮದುವೆಯಾದ್ರು. ನಂತ್ರ ರಾಜ್ಯ ಪ್ರಚಾರಕರ ತುಂಬ ಅಗತ್ಯವಿದ್ದ ಅಯೋಸ್‌ ಅನ್ನೋ ಪಟ್ಟಣಕ್ಕೆ ಹೋಗುವಂತೆ ಕ್ಯಾಮರೂನ್‌ನ ಬ್ರಾಂಚ್‌ ಆಫೀಸ್‌ ಅವ್ರಿಗೆ ತಿಳಿಸ್ತು.

ಅಯೋಸ್‌ನಲ್ಲಿ ಜೀವನ ಹೇಗಿತ್ತು? ಗಿಜೆ಼ಲ್‌ ಹೀಗೆ ಹೇಳ್ತಾರೆ: “ಹೆಚ್ಚಾಗಿ ವಾರಗಳವರೆಗೆ ಕರೆಂಟ್‌ ಇರ್ತಿರಲಿಲ್ಲ. ಮೊಬೈಲನ್ನು ಚಾರ್ಜ್‌ ಮಾಡೋಕೂ ಆಗ್ತಿರಲಿಲ್ಲ. ಹೆಚ್ಚಿನ ಸಮ್ಯ ಮೊಬೈಲ್‌ ಕೆಲ್ಸನೇ ಮಾಡ್ತಿರಲಿಲ್ಲ. ನಾನು ಸೌದೆ ಒಲೇಲಿ ಅಡಿಗೆ ಮಾಡೋದನ್ನು ಕಲಿತೆ. ರಾತ್ರಿ ಸಮಯದಲ್ಲಿ ತಳ್ಳೋಬಂಡಿ ತಗೊಂಡು ಟಾರ್ಚ್‌ ಹಿಡುಕೊಂಡು ನೀರು ತರುತ್ತಾ ಇದ್ವಿ. ಯಾಕಂದ್ರೆ ಆ ಸಮಯದಲ್ಲಿ ಅಲ್ಲಿ ಕಮ್ಮಿ ಜನ ಇರ್ತಾ ಇದ್ರು.” ಈ ಎಲ್ಲಾ ಸಮಸ್ಯೆಗಳನ್ನ ಅವ್ರು ಹೇಗೆ ತಾಳಿಕೊಂಡ್ರು? ಗಿಜೆ಼ಲ್‌ ಹೀಗೆ ಹೇಳ್ತಾರೆ: “ಯೆಹೋವನ ಪವಿತ್ರಾತ್ಮ ನಮಗೆ ತಾಳಿಕೊಳ್ಳೋಕೆ ಸಹಾಯ ಮಾಡ್ತು. ನಾವು ಗಂಡಹೆಂಡತಿ ಒಬ್ಬರಿಗೊಬ್ರು ಬೆಂಬಲ ಕೊಡ್ತಿದ್ವಿ. ಕುಟುಂಬದವ್ರು, ಸ್ನೇಹಿತರು ನಮಗೆ ಉತ್ತೇಜನ ಕೊಟ್ರು ಮತ್ತು ಕೆಲವೊಮ್ಮೆ ಹಣದ ಸಹಾಯನೂ ಮಾಡಿದ್ರು.”

ಗಿಜೆ಼ಲ್‌ಗೆ ತನ್ನ ದೇಶಕ್ಕೆ ವಾಪಸ್‌ ಹೋಗಿದ್ರಿಂದ ಖುಷಿ ಆಯ್ತಾ? “ಖಂಡಿತ ಆಯ್ತು. ಶುರುವಲ್ಲಿ ಸ್ವಲ್ಪ ಕಷ್ಟ ಆಯ್ತು. ಕೆಲವೊಮ್ಮೆ ನಿರಾಶೆನೂ ಆಗ್ತಿತ್ತು. ಆದ್ರೆ ಅದನ್ನೆಲ್ಲಾ ನಾವು ಜಯಿಸಿದ ನಂತ್ರ ನಾವಿಲ್ಲಿ ಬರೋಕೆ ಮಾಡಿದ ನಿರ್ಣಯ ಸರಿಯಾಗೇ ಇತ್ತು ಅಂತ ನಮ್ಮಿಬ್ರಿಗೂ ಅನಿಸ್ತು. ನಮಗೆ ಯೆಹೋವನ ಮೇಲೆ ಭರವಸೆ ಇದೆ ಮತ್ತು ಆತನಿಗೆ ಇನ್ನೂ ಆಪ್ತರಾಗಿದ್ದೇವೆ” ಅಂತ ಗಿಜೆ಼ಲ್‌ ಹೇಳ್ತಾರೆ. ಲಿಯಾನ್ಸ್‌ ಮತ್ತು ಗಿಜೆ಼ಲ್‌ ರಾಜ್ಯ ಪ್ರಚಾರಕರ ಶಾಲೆಗೆ ಹಾಜರಾದ್ರು ಮತ್ತು ಈಗ ಅವರು ತಾತ್ಕಾಲಿಕ ವಿಶೇಷ ಪಯನೀಯರ್‌ ಆಗಿ ಸೇವೆ ಮಾಡ್ತಿದ್ದಾರೆ.

ತಮ್ಮ ದೇಶಕ್ಕೆ ವಾಪಸ್‌ ಹೋಗುವವ್ರು ಸಹ ಮೀನು ಹಿಡಿಯುವವ್ರ ತರ ತುಂಬ ಧೈರ್ಯ ತೋರಿಸ್ತಾರೆ. ಮೀನು ಹಿಡಿಯುವವ್ರು ಬೇರೆಬೇರೆ ಕಷ್ಟಗಳನ್ನ ಎದುರಿಸಿ ತುಂಬ ಮೀನು ಇರೋ ಜಾಗಕ್ಕೆ ಹೇಗೆ ಹೋಗ್ತಾರೋ ಅದೇ ತರ ಇವ್ರು ತ್ಯಾಗಗಳನ್ನ ಮಾಡಿ ಸುವಾರ್ತೆಯನ್ನ ಕೇಳಿಸಿಕೊಳ್ಳೋಕೆ ಆಸಕ್ತಿ ತೋರಿಸೋ ಜನ ಇರುವ ಸ್ಥಳಗಳಿಗೆ ಹೋಗ್ತಾರೆ. ಇವ್ರು ಯೆಹೋವನ ಹೆಸ್ರಿಗಾಗಿ ಪ್ರೀತಿ ತೋರಿಸಿದ್ದಾರೆ. ಇದಕ್ಕಾಗಿ ಅವ್ರು ಹಾಕೋ ಶ್ರಮವನ್ನ ಯೆಹೋವನು ಯಾವತ್ತೂ ಮರೆಯಲ್ಲ. (ನೆಹೆ. 5:19; ಇಬ್ರಿ. 6:10) ನೀವು ವಿದೇಶದಲ್ಲಿ ವಾಸವಾಗಿದ್ದೀರಾ? ನಿಮ್ಮ ಸ್ವಂತ ದೇಶದಲ್ಲಿ ಪ್ರಚಾರಕರ ಅಗತ್ಯ ಇದ್ಯಾ? ಹಾಗಿದ್ರೆ ನಿಮಗೆ ಅಲ್ಲಿಗೆ ವಾಪಸ್‌ ಹೋಗೋಕೆ ಆಗುತ್ತಾ? ನೀವು ಹೋಗೋದಾದ್ರೆ ಯೆಹೋವನು ಕೈದೆರೆದು ನಿಮ್ಮನ್ನು ಆಶೀರ್ವದಿಸ್ತಾನೆ.—ಜ್ಞಾನೋ. 10:22.