ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜೀವನ ಕಥೆ

“ಯೆಹೋವ ನನ್ನನ್ನ ಮರೆಯಲಿಲ್ಲ”

“ಯೆಹೋವ ನನ್ನನ್ನ ಮರೆಯಲಿಲ್ಲ”

ನಾನಿರೋದು ದಕ್ಷಿಣ ಅಮೆರಿಕಾದ ಗಯಾನದಲ್ಲಿರೋ ಆರೀಯೆಲ್ಲ ಅನ್ನೋ ಹಳ್ಳಿಯಲ್ಲಿ. ಇಲ್ಲಿ ಸುಮಾರು ಎರಡು ಸಾವಿರ ಜನ ಇದ್ದೇವೆ. ನಮ್ಮ ಹಳ್ಳಿಗೆ ಬರೋಕೆ ಯಾವುದೇ ರಸ್ತೆ ಇಲ್ಲ. ಬರಬೇಕಂದ್ರೆ ದೋಣಿಯಲ್ಲಿ ಅಥವಾ ಚಿಕ್ಕ ವಿಮಾನದಲ್ಲಿ ಬರಬೇಕು.

ನಾನು ಹುಟ್ಟಿದ್ದು 1983 ರಲ್ಲಿ. ಚಿಕ್ಕವನಿದ್ದಾಗ ನಾನು ಆರೋಗ್ಯವಾಗೇ ಇದ್ದೆ. ಆದ್ರೆ ನನಗೆ ಹತ್ತು ವರ್ಷ ಆದಾಗ ಇಡೀ ಮೈಯಲ್ಲಿ ನೋವು ಕಾಣಿಸಿಕೊಳ್ಳೋಕೆ ಶುರುವಾಯ್ತು. ಇದಾಗಿ ಎರಡು ವರ್ಷಗಳಾದ ಮೇಲೆ ಒಂದು ದಿನ ಬೆಳಿಗ್ಗೆ ಎದ್ದಾಗ ನಂಗೆ ನಡಿಯೋಕೇ ಆಗ್ಲಿಲ್ಲ. ಎಷ್ಟೇ ಪ್ರಯತ್ನಿಸಿದ್ರೂ ನನ್ನ ಕಾಲನ್ನ ಅಲುಗಾಡಿಸಲು ಆಗ್ಲೇ ಇಲ್ಲ. ಆ ದಿನದಿಂದ ನಾನು ನಡಿಲೇ ಇಲ್ಲ. ನನಗೆ ಈ ಕಾಯಿಲೆ ಇದ್ದಿದ್ರಿಂದ ನನ್ನ ಬೆಳವಣಿಗೆನೂ ನಿಂತು ಹೋಯ್ತು. ಇವತ್ತಿಗೂ ನನ್ನ ಎತ್ರ ಚಿಕ್ಕ ಮಕ್ಕಳಷ್ಟೇ ಇದೆ.

ನಂಗೆ ಈ ಕಾಯಿಲೆ ಬಂದ ಮೇಲೆ ನಾನು ಮನೆಯಿಂದ ಹೊರಗೆ ಹೋಗಲೇ ಇಲ್ಲ. ಇದಾಗಿ ಕೆಲವು ತಿಂಗಳು ಆದ ಮೇಲೆ ಇಬ್ರು ಯೆಹೋವನ ಸಾಕ್ಷಿಗಳು ನಮ್ಮ ಮನೆಗೆ ಬಂದ್ರು. ಸಾಮಾನ್ಯವಾಗಿ ಯಾರಾದ್ರೂ ಮನೆಗೆ ಬಂದಾಗ ನಾನು ಬಚ್ಚಿಟ್ಟುಕೊಳ್ತಿದ್ದೆ. ಆದ್ರೆ ಆ ದಿನ ಆ ಸ್ತ್ರೀಯರನ್ನ ನಾನು ಮಾತಾಡಿಸಿದೆ. ಅವ್ರು ದೇವರ ರಾಜ್ಯದ ಬಗ್ಗೆ ಮಾತಾಡಿದ್ರು. ಆಗ ನಂಗೆ, ನಾನು ಐದು ವರ್ಷದವನಿದ್ದಾಗ ಕೇಳಿಸಿಕೊಂಡ ಕೆಲವು ವಿಷ್ಯಗಳು ನೆನಪಾದವು. ಆ ಸಮ್ಯದಲ್ಲಿ ಸುರಿನಾಮ್‌ನಲ್ಲಿ ವಾಸಿಸ್ತಿದ್ದ ಜೆತ್ರೋ ಅನ್ನೋ ಸಹೋದರ ನಮ್ಮ ಹಳ್ಳಿಗೆ ತಿಂಗಳಿಗೊಂದು ಸಲ ಬರ್ತಿದ್ರು. ಅವ್ರು ನಮ್ಮ ಅಪ್ಪಗೆ ಬೈಬಲ್‌ ಸ್ಟಡಿ ಮಾಡ್ತಿದ್ರು. ನನ್ನನ್ನ ತುಂಬ ಪ್ರೀತಿಯಿಂದ ಮಾತಾಡಿಸ್ತಿದ್ರು. ನಂಗೂ ಅವ್ರಂದ್ರೆ ತುಂಬ ಇಷ್ಟ ಆಗ್ತಿತ್ತು. ನಮ್ಮ ಹಳ್ಳಿಯಲ್ಲಿ ನಡಿತಿದ್ದ ಯೆಹೋವನ ಸಾಕ್ಷಿಗಳ ಕೂಟಗಳಿಗೆ ನನ್ನ ಅಜ್ಜಿ-ತಾತ ನನ್ನನ್ನ ಕೆಲವು ಸಹ ಕರ್ಕೊಂಡು ಹೋಗಿದ್ರು. ಹಾಗಾಗಿ ಈ ಸ್ತ್ರೀಯರಲ್ಲಿ ಒಬ್ಬರಾದ ಫ್ಲಾರೆನ್ಸ್‌ ಅನ್ನೋ ಸಹೋದರಿ ‘ನಿಮಗೆ ಈ ವಿಷ್ಯದ ಬಗ್ಗೆ ಹೆಚ್ಚನ್ನ ತಿಳುಕೊಳ್ಳೋಕೆ ಇಷ್ಟ ಇದ್ಯಾ?’ ಅಂತ ನನ್ನನ್ನ ಕೇಳಿದಾಗ ‘ಹೌದು ನಂಗೆ ಇಷ್ಟ ಇದೆ’ ಅಂತ ಹೇಳಿದೆ.

ಮುಂದಿನ ಭೇಟಿಯಲ್ಲಿ ಸಹೋದರಿ ಫ್ಲಾರೆನ್ಸ್‌ ತಮ್ಮ ಗಂಡ ಜಸ್ಟಸ್‌ ಜೊತೆ ಬಂದ್ರು. ಅವ್ರಿಬ್ರೂ ನಂಗೆ ಬೈಬಲ್‌ ಸ್ಟಡಿ ಮಾಡೋಕೆ ಶುರು ಮಾಡಿದ್ರು. ನಂಗೆ ಓದೋಕೆ ಬರ್ತಿರಲಿಲ್ಲ. ಅವ್ರು ನಂಗೆ ಓದೋಕೆ ಕಲಿಸಿದ್ರು. ಸ್ವಲ್ಪ ಸಮ್ಯ ಆದ ಮೇಲೆ, ನಾನು ಓದೋಕೆ ಕಲಿತೆ. ಒಂದು ದಿನ ಅವ್ರು, “ನಾವು ಸುರಿನಾಮ್‌ಗೆ ಹೋಗ್ತಿದ್ದೇವೆ, ಅಲ್ಲಿ ನಮಗೆ ಸೇವೆ ಮಾಡೋ ನೇಮಕ ಸಿಕ್ಕಿದೆ” ಅಂತ ಹೇಳಿದ್ರು. ನಂಗೆ ಬೈಬಲ್‌ ಸ್ಟಡಿ ಮಾಡೋಕೆ ನಮ್ಮ ಹಳ್ಳಿಯಲ್ಲಿ ಬೇರೆ ಯಾರೂ ಇರಲಿಲ್ಲ. ಹಾಗಿದ್ರೂ ಯೆಹೋವ ನನ್ನನ್ನ ಮರೆಯಲಿಲ್ಲ.

ಸ್ವಲ್ಪದ್ರಲ್ಲೇ ನಮ್ಮ ಹಳ್ಳಿಗೆ ಫ್ಲಾಯ್ಡ್‌ ಅನ್ನೋ ಪಯನೀಯರ್‌ ಸಹೋದರ ಬಂದ್ರು. ಅವ್ರು ಒಂದು ದಿನ ಎಲ್ಲಾ ಗುಡಿಸಲುಗಳಿಗೆ ಹೋಗಿ ಸುವಾರ್ತೆ ಸಾರ್ತಾ ಇದ್ದಾಗ ನನ್ನನ್ನ ಭೇಟಿಯಾದ್ರು. ಅವ್ರು ನಂಗೆ ಬೈಬಲ್‌ ಸ್ಟಡಿ ಬಗ್ಗೆ ಹೇಳಿದ್ರು. ಆಗ ನಾನು ನಗಾಡಿದೆ. ‘ಯಾಕೆ ನಗ್ತಿದ್ದೀರಾ?’ ಅಂತ ಅವ್ರು ನಂಗೆ ಕೇಳಿದ್ರು. ಆಗ ನಾನು, “ಈಗಾಗ್ಲೇ ನಂಗೆ, ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? ಬ್ರೋಷರ್‌ನಲ್ಲಿ ಬೈಬಲ್‌ ಸ್ಟಡಿ ಆಗಿದೆ ಮತ್ತು ನಿತ್ಯಜೀವಕ್ಕೆ ನಡೆಸುವ ಜ್ಞಾನ * ಪುಸ್ತಕದಿಂದ ಸ್ಟಡಿ ಆರಂಭ ಆಗಿತ್ತು” ಅಂತ ಹೇಳಿದೆ. ಯಾಕೆ ಸ್ಟಡಿ ನಿಂತುಹೋಯ್ತು ಅಂತಾನೂ ಹೇಳಿದೆ. ನಂತ್ರ ಫ್ಲಾಯ್ಡ್‌ ಜ್ಞಾನ ಪುಸ್ತಕದಿಂದ ಸ್ಟಡಿ ಮಾಡೋದನ್ನ ಮುಂದುವರಿಸಿದ್ರು. ಆದ್ರೆ ಅವ್ರಿಗೂ ಬೇರೆ ಕಡೆ ಸೇವೆ ಮಾಡೋ ನೇಮಕ ಸಿಕ್ತು. ಪುನಃ ನಂಗೆ ಬೈಬಲ್‌ ಸ್ಟಡಿ ಮಾಡೋಕೆ ಯಾರೂ ಇಲ್ಲದ ಹಾಗಾಯ್ತು.

2004 ರಲ್ಲಿ ಗ್ರ್ಯಾನ್‌ವಿಲ್‌ ಮತ್ತು ಜೋಶುವ ಅನ್ನೋ ಇಬ್ರು ವಿಶೇಷ ಪಯನೀಯರರಿಗೆ ನಮ್ಮ ಹಳ್ಳಿಯಲ್ಲಿ ಸೇವೆ ಮಾಡೋ ನೇಮಕ ಸಿಕ್ತು. ಅವ್ರು ಎಲ್ಲಾ ಗುಡಿಸಲುಗಳಿಗೆ ಹೋಗಿ ಸೇವೆ ಮಾಡ್ತಿದ್ದಾಗ ನನ್ನನ್ನ ಭೇಟಿ ಆದ್ರು. ಅವ್ರು ನಂಗೆ ಬೈಬಲ್‌ ಸ್ಟಡಿ ಬಗ್ಗೆ ಹೇಳಿದಾಗ ನಾನು ಜ್ಞಾನ ಪುಸ್ತಕದ ಸ್ಟಡಿಯನ್ನ ಮತ್ತೆ ಶುರುವಿನಿಂದ ಮಾಡೋಕೆ ಕೇಳ್ಕೊಂಡೆ. ಯಾಕಂದ್ರೆ ಹಿಂದೆ ನಂಗೆ ಬೈಬಲ್‌ ಕಲಿಸ್ತಿದ್ದವ್ರ ತರಾನೇ ಇವ್ರೂ ಕಲಿಸ್ತಾರಾ ಅಂತ ನೋಡ್ಬೇಕಿತ್ತು. ನಮ್ಮ ಹಳ್ಳಿಯಲ್ಲಿ ಕೂಟಗಳು ನಡಿಯುತ್ತೆ ಅಂತ ಗ್ರ್ಯಾನ್‌ವಿಲ್‌ ತಿಳಿಸಿದ್ರು. ನಾನು ಮನೆಯಿಂದ ಆಚೆ ಹೋಗಿ ಹತ್ತು ವರ್ಷ ಆಗಿತ್ತು. ಆದ್ರೆ ಈ ಕೂಟಕ್ಕೆ ಹೋಗಬೇಕು ಅಂತ ನಂಗೆ ಮನಸ್ಸಾಯ್ತು. ಹಾಗಾಗಿ, ಗ್ರ್ಯಾನ್‌ವಿಲ್‌ ನಮ್ಮ ಮನೆಗೆ ಬಂದು ನನ್ನನ್ನ ವೀಲ್‌ಚೇರ್‌ನಲ್ಲಿ ಕೂರಿಸಿ ರಾಜ್ಯ ಸಭಾಗೃಹಕ್ಕೆ ಕರ್ಕೊಂಡು ಹೋದ್ರು.

ನಂತ್ರ ಗ್ರ್ಯಾನ್‌ವಿಲ್‌ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಗೆ ನನ್ನ ಹೆಸ್ರು ಕೊಡೋಕೆ ಪ್ರೋತ್ಸಾಹಿಸಿದ್ರು. “ನಿಂಗೆ ನಡಿಯೋಕೆ ಆಗದೇ ಇರಬಹುದು, ಆದ್ರೆ ಮಾತಾಡೋಕಾಗುತ್ತೆ. ಒಂದಲ್ಲ ಒಂದು ದಿನ ನೀನು ಸಾರ್ವಜನಿಕ ಭಾಷಣ ಕೊಡ್ತೀಯ, ನೋಡು. ಇದು ಖಂಡಿತ ನಡಿಯುತ್ತೆ” ಅಂತ ಹೇಳಿದ್ರು. ಅವ್ರ ಈ ಮಾತುಗಳು ನಂಗೆ ಧೈರ್ಯ ಕೊಡ್ತು.

ನಾನು ಗ್ರ್ಯಾನ್‌ವಿಲ್‌ ಜೊತೆ ಸುವಾರ್ತೆ ಸಾರೋಕೆ ಆರಂಭಿಸಿದೆ. ಆದ್ರೆ ನಮ್ಮ ಹಳ್ಳಿಯ ರಸ್ತೆಗಳು ಒಂದೇ ಸಮ ಇರ್ಲಿಲ್ಲ. ತುಂಬಾ ಎತ್ತರ ತಗ್ಗುಗಳು ಇದ್ವು. ವೀಲ್‌ಚೇರ್‌ನಲ್ಲಿ ಕರ್ಕೊಂಡು ಹೋಗೋಕೆ ತುಂಬ ಕಷ್ಟ ಆಗ್ತಿತ್ತು. ಹಾಗಾಗಿ, ನಾನು ಗ್ರ್ಯಾನ್‌ವಿಲ್‌ ಹತ್ರ, “ನನ್ನನ್ನ ತಳ್ಳುಬಂಡಿಯಲ್ಲಿ (ಕೈ ಬಂಡಿಯಲ್ಲಿ) ಕರ್ಕೊಂಡು ಹೋಗ್ತೀರಾ?” ಅಂತ ಕೇಳಿದೆ. ಇದ್ರ ಸಹಾಯದಿಂದ ಎಲ್ಲಾ ಕಡೆ ಹೋಗಿ ಸುವಾರ್ತೆ ಸಾರೋಕೆ ಸುಲಭ ಆಯ್ತು. 2005 ರ ಏಪ್ರಿಲ್‌ನಲ್ಲಿ ನಾನು ದೀಕ್ಷಾಸ್ನಾನ ತಗೊಂಡೆ. ಸ್ವಲ್ಪ ಸಮ್ಯದ ನಂತ್ರ ಸಭೆಯಲ್ಲಿ ಸಾಹಿತ್ಯ ಇಲಾಖೆಯಲ್ಲಿ ಕೆಲಸ ಮಾಡೋದು ಹೇಗೆ ಮತ್ತು ಸೌಂಡ್‌ ಸಿಸ್ಟಮ್‌ನ ಉಪಯೋಗಿಸೋದು ಹೇಗೆ ಅಂತ ಸಹೋದರರು ನಂಗೆ ಕಲಿಸಿದ್ರು.

ದುಃಖಕರವಾಗಿ 2007 ರಲ್ಲಿ ಒಂದು ದೋಣಿ ದುರಂತದಲ್ಲಿ ನನ್ನ ತಂದೆ ತೀರಿಹೋದ್ರು. ನಮಗೆಲ್ಲಾ ನಿಂತ ನೆಲ ಕುಸಿದಂಗೆ ಆಯ್ತು. ಗ್ರ್ಯಾನ್‌ವಿಲ್‌ ನಮ್ಮ ಮನೆಗೆ ಬಂದು ನಮಗೋಸ್ಕರ ಪ್ರಾರ್ಥನೆ ಮಾಡಿದ್ರು ಮತ್ತು ಬೈಬಲ್‌ನಿಂದ ಸಮಾಧಾನ ಕೊಡೋ ವಚನಗಳನ್ನ ಓದಿದ್ರು. ಎರಡು ವರ್ಷದ ನಂತ್ರ ಇನ್ನೊಂದು ದುರಂತ ನಡಿತು. ಸಹೋದರ ಗ್ರ್ಯಾನ್‌ವಿಲ್‌ ದೋಣಿ ದುರಂತದಲ್ಲಿ ತೀರಿಹೋದ್ರು.

ಸಹೋದರ ಗ್ರ್ಯಾನ್‌ವಿಲ್‌ ತೀರಿಹೋದಾಗ ಸಭೆಯಲ್ಲಿರೋ ಎಲ್ರಿಗೂ ತುಂಬ ದುಃಖ ಆಯ್ತು. ನಮ್ಮ ಸಭೆಯಲ್ಲಿ ಹಿರಿಯರೇ ಇಲ್ಲದ ಹಾಗಾಯ್ತು. ಬರೀ ಒಬ್ರು ಸಹಾಯಕ ಸೇವಕರಿದ್ರು. ನಂಗಂತೂ ಸಹೋದರ ಗ್ರ್ಯಾನ್‌ವಿಲ್‌ ತೀರಿಹೋದಾಗ ತುಂಬ ಕಷ್ಟ ಆಯ್ತು. ಅವ್ರು ನನ್ನ ಪ್ರೀತಿಯ ಸ್ನೇಹಿತ ಆಗಿದ್ರು. ನಾನು ಯೆಹೋವನಿಗೆ ಹತ್ರ ಆಗೋಕೆ ಅವ್ರು ನಂಗೆ ಸಹಾಯ ಮಾಡಿದ್ರು. ನಂಗೆ ಬೇಕಿರೋ ವಸ್ತುಗಳನ್ನ ತಂದು ಕೊಡ್ತಿದ್ರು. ಅವ್ರು ತೀರಿ ಹೋದ ನಂತ್ರ ನಡೆದ ಕೂಟದಲ್ಲಿ ನಂಗೆ ಕಾವಲಿನಬುರುಜುವಿನ ಲೇಖನ ಓದೋ ನೇಮಕ ಇತ್ತು. ಮೊದಲ ಎರಡು ಪ್ಯಾರನ ಹೇಗೋ ಕಷ್ಟಪಟ್ಟು ಓದಿದೆ. ಆದ್ರೆ ನಂತ್ರ ನಂಗೆ ದುಃಖನ ತಡಿಯೋಕೇ ಆಗ್ಲಿಲ್ಲ. ಅತ್ತು ಬಿಟ್ಟೆ. ಓದೋದನ್ನ ಅಲ್ಲಿಗೇ ನಿಲ್ಲಿಸಿ ವೇದಿಕೆಯಿಂದ ಕೆಳಗೆ ಇಳಿಬೇಕಾಯ್ತು.

ನಮ್ಮ ಸಭೆಗೆ ಬೇರೆ ಸಭೆಯಿಂದ ಸಹೋದರರು ಬಂದು ಸಹಾಯ ಮಾಡಿದಾಗ ನಂಗೆ ಸ್ವಲ್ಪ ಸಮಾಧಾನ ಆಯ್ತು. ಅಷ್ಟೇ ಅಲ್ಲ, ಬ್ರಾಂಚ್‌ ಆಫೀಸ್‌ ಕೊಜೋ ಅನ್ನೋ ಸಹೋದರನನ್ನ ನಮ್ಮ ಸಭೆಗೆ ಕಳಿಸಿತು. ಇನ್ನೊಂದು ಸಂತೋಷದ ವಿಷ್ಯ ಏನಂದ್ರೆ ನನ್ನ ತಾಯಿ ಮತ್ತು ತಮ್ಮ ಇಬ್ರೂ ಬೈಬಲ್‌ ಸ್ಟಡಿ ತಗೊಂಡು ದೀಕ್ಷಾಸ್ನಾನ ಪಡ್ಕೊಂಡ್ರು. 2015 ರ ಮಾರ್ಚ್‌ನಲ್ಲಿ ನಾನು ಸಹಾಯಕ ಸೇವಕನಾದೆ. ಸ್ವಲ್ಪ ಸಮ್ಯದ ನಂತ್ರ ನಾನು ಮೊದಲ ಸಾರ್ವಜನಿಕ ಭಾಷಣ ಕೊಟ್ಟೆ. ತುಂಬ ವರ್ಷಗಳ ಹಿಂದೆ ಸಹೋದರ ಗ್ರ್ಯಾನ್‌ವಿಲ್‌ ನಂಗೆ, “ಒಂದಲ್ಲ ಒಂದು ದಿನ ನೀನು ಸಾರ್ವಜನಿಕ ಭಾಷಣ ಕೊಡ್ತೀಯ, ನೋಡು. ಇದು ಖಂಡಿತ ನಡಿಯುತ್ತೆ” ಅಂತ ಹೇಳಿದ ಮಾತು ಆ ದಿನ ನಂಗೆ ನೆನಪಾಗಿ ದುಃಖನೂ ಆಯ್ತು, ಸಂತೋಷನೂ ಆಯ್ತು.

ನನ್ನಂಥದ್ದೇ ಪರಿಸ್ಥಿತಿಯಲ್ಲಿರೋ ಅನೇಕ ಸಹೋದರ ಸಹೋದರಿಯರ ಅನುಭವಗಳನ್ನ ನಾನು jw ಪ್ರಸಾರದಲ್ಲಿ ನೋಡಿದೆ. ಆರೋಗ್ಯ ಸಮಸ್ಯೆಗಳಿದ್ರೂ ಅವ್ರು ತುಂಬ ವಿಷ್ಯಗಳನ್ನ ಸಾಧಿಸಿದ್ದಾರೆ, ಸಂತೋಷವಾಗಿದ್ದಾರೆ. ನಂಗೂ ಕೆಲವು ಕೆಲ್ಸಗಳನ್ನ ಮಾಡೋಕಾಗುತ್ತೆ. ಯೆಹೋವನ ಸೇವೆಯಲ್ಲಿ ನನ್ನಿಂದಾದಷ್ಟು ಮಾಡಬೇಕು ಅನ್ನೋ ಆಸೆ ಇದ್ದಿದ್ರಿಂದ ನಾನು ಪಯನೀಯರ್‌ ಸೇವೆಯನ್ನ ಶುರು ಮಾಡಿದೆ. 2019 ರ ಸೆಪ್ಟೆಂಬರ್‌ನಲ್ಲಿ ನಾನು ನೆನಸದ ಒಂದು ವಿಷ್ಯ ನಡಿತು. 40 ಪ್ರಚಾರಕರು ಇರೋ ನಮ್ಮ ಸಭೆಗೆ ಹಿರಿಯನಾಗಿ ಸೇವೆ ಮಾಡೋ ನೇಮಕ ನಂಗೆ ಸಿಗ್ತು.

ನಂಗೆ ಬೈಬಲ್‌ ಕಲಿಸಿದ ಸೇವೆ ಮಾಡೋಕೆ ಸಹಾಯ ಮಾಡಿದ ಎಲ್ಲಾ ಸಹೋದರ ಸಹೋದರಿಯರಿಗೂ ನಾನು ಥ್ಯಾಂಕ್ಸ್‌ ಹೇಳ್ತೇನೆ. ಎಲ್ಲಕ್ಕಿಂತ ಹೆಚ್ಚಾಗಿ ನಾನು ಯೆಹೋವನಿಗೆ ಆಭಾರಿಯಾಗಿದ್ದೇನೆ. ಯಾಕಂದ್ರೆ ಯೆಹೋವ ನನ್ನನ್ನ ಯಾವತ್ತೂ ಮರೆಯಲಿಲ್ಲ.

^ ಪ್ಯಾರ. 8 ಈ ಪುಸ್ತಕ ಯೆಹೋವನ ಸಾಕ್ಷಿಗಳ ಪ್ರಕಾಶನ. ಆದ್ರೆ ಈಗ ಇದನ್ನ ಮುದ್ರಿಸಲಾಗುತ್ತಿಲ್ಲ.