ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 45

ಒಬ್ಬರಿಗೊಬ್ಬರು ಶಾಶ್ವತ ಪ್ರೀತಿ ತೋರಿಸ್ತಾ ಇರಿ

ಒಬ್ಬರಿಗೊಬ್ಬರು ಶಾಶ್ವತ ಪ್ರೀತಿ ತೋರಿಸ್ತಾ ಇರಿ

“ಒಬ್ರಿಗೊಬ್ರು ಶಾಶ್ವತ ಪ್ರೀತಿ, ಕರುಣೆ ತೋರಿಸಿ.”—ಜೆಕ. 7:9.

ಗೀತೆ 50 ಪ್ರೀತಿಯ ದೈವಿಕ ಆದರ್ಶ

ಕಿರುನೋಟ *

1-2. ನಾವ್ಯಾಕೆ ಒಬ್ಬರಿಗೊಬ್ಬರು ಶಾಶ್ವತ ಪ್ರೀತಿ ತೋರಿಸಬೇಕು?

ನಾವು ಒಬ್ಬರಿಗೊಬ್ಬರು ಶಾಶ್ವತ ಪ್ರೀತಿ ತೋರಿಸೋಕೆ ತುಂಬ ಕಾರಣಗಳಿವೆ. ಅದ್ರಲ್ಲಿ ಕೆಲವು ಕಾರಣಗಳು ಏನು ಅಂತ ಜ್ಞಾನೋಕ್ತಿ ಪುಸ್ತಕದಲ್ಲಿದೆ. ಅಲ್ಲಿ ಹೇಳುತ್ತೆ: “ಶಾಶ್ವತ ಪ್ರೀತಿ, ಸತ್ಯವನ್ನ ಬಿಟ್ಟುಬಿಡಬೇಡ. . . . ಆಗ ದೇವರಿಗೆ, ಮನುಷ್ಯರಿಗೆ ಖುಷಿ ಆಗುತ್ತೆ, ನಿನಗೆ ನಿಜವಾಗ್ಲೂ ತುಂಬ ತಿಳುವಳಿಕೆ ಇದೆ ಅಂತ ಅವರು ಒಪ್ಕೊಳ್ತಾರೆ.” “ಶಾಶ್ವತ ಪ್ರೀತಿ ತೋರಿಸುವವನು ತನಗೇ ಒಳ್ಳೇದು ಮಾಡ್ಕೊಳ್ತಾನೆ.” “ನೀತಿ, ಶಾಶ್ವತ ಪ್ರೀತಿ ತೋರಿಸುವವರು ನೀತಿವಂತರಾಗ್ತಾರೆ. ಅವ್ರಿಗೆ ಜೀವ . . . ಸಿಗುತ್ತೆ.”—ಜ್ಞಾನೋ. 3:3, 4; 11:17, ಪಾದಟಿಪ್ಪಣಿ; 21:21.

2 ನಾವು ಶಾಶ್ವತ ಪ್ರೀತಿ ತೋರಿಸೋಕೆ ಮೂರು ಕಾರಣಗಳನ್ನ ಈ ವಚನಗಳು ಕೊಡುತ್ತಿವೆ. (1) ನಾವು ಶಾಶ್ವತ ಪ್ರೀತಿ ತೋರಿಸಿದ್ರೆ ಯೆಹೋವ ದೇವರಿಗೆ ಇಷ್ಟ ಆಗುತ್ತೆ. (2) ಇದ್ರಿಂದ ನಮಗೇ ಒಳ್ಳೇದಾಗುತ್ತೆ. ಉದಾಹರಣೆಗೆ, ಬೇರೆಯವರ ಜೊತೆ ನಮ್ಮ ಸ್ನೇಹ, ಬಾಂಧವ್ಯ ಗಟ್ಟಿಯಾಗುತ್ತೆ. (3) ಈ ಗುಣ ನಮಗೆ ಭವಿಷ್ಯದಲ್ಲೂ ತುಂಬ ಆಶೀರ್ವಾದಗಳನ್ನ ತರುತ್ತೆ, ಶಾಶ್ವತ ಜೀವನೂ ಸಿಗುತ್ತೆ. ಅಷ್ಟೇ ಅಲ್ಲ, “ಒಬ್ರಿಗೊಬ್ರು ಶಾಶ್ವತ ಪ್ರೀತಿ, ಕರುಣೆ ತೋರಿಸಿ” ಅಂತ ಯೆಹೋವ ದೇವರು ಹೇಳಿರೋ ಮಾತನ್ನೂ ಪಾಲಿಸಿದ ಹಾಗಾಗುತ್ತೆ.—ಜೆಕ. 7:9.

3. ಈ ಲೇಖನದಲ್ಲಿ ಯಾವ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ತೀವಿ?

3 ನಾವು ಯಾರಿಗೆ ಶಾಶ್ವತ ಪ್ರೀತಿ ತೋರಿಸಬೇಕು? ಶಾಶ್ವತ ಪ್ರೀತಿ ಬಗ್ಗೆ ರೂತ್‌ ಪುಸ್ತಕದಿಂದ ನಾವೇನು ಕಲಿಬಹುದು? ನಾವು ಹೇಗೆ ಶಾಶ್ವತ ಪ್ರೀತಿಯನ್ನು ತೋರಿಸಬಹುದು? ಶಾಶ್ವತ ಪ್ರೀತಿ ತೋರಿಸೋದ್ರಿಂದ ನಮಗೆ ಹೇಗೆ ಒಳ್ಳೇದಾಗುತ್ತೆ? ಈ ನಾಲ್ಕು ಪ್ರಶ್ನೆಗಳಿಗೆ ನಾವು ಈ ಲೇಖನದಲ್ಲಿ ಉತ್ತರ ತಿಳಿದುಕೊಳ್ತೀವಿ.

ನಾವು ಯಾರಿಗೆ ಶಾಶ್ವತ ಪ್ರೀತಿ ತೋರಿಸಬೇಕು?

4. ನಾವು ಹೇಗೆ ಯೆಹೋವ ದೇವರನ್ನ ಅನುಕರಿಸಬಹುದು? (ಮಾರ್ಕ 10:29, 30)

4 ನಾವು ಹಿಂದಿನ ಲೇಖನದಲ್ಲಿ ಕಲಿತ ಹಾಗೆ ಯಾರು ಯೆಹೋವ ದೇವರನ್ನ ಪ್ರೀತಿಸ್ತಾರೋ, ಆತನ ಸೇವೆ ಮಾಡ್ತಾರೋ ಅಂಥವರಿಗೆ ಆತನು ಶಾಶ್ವತ ಪ್ರೀತಿ ತೋರಿಸ್ತಾನೆ. (ದಾನಿ. 9:4) ನಾವು ‘ದೇವರ ಪ್ರೀತಿಯ ಮಕ್ಕಳಾಗಿರೋದ್ರಿಂದ ಆತನನ್ನು ಅನುಕರಿಸುತ್ತಾ’ ನಮ್ಮ ಸಹೋದರ ಸಹೋದರಿಯರಿಗೆ ಶಾಶ್ವತ ಪ್ರೀತಿ ತೋರಿಸ್ತೀವಿ.—ಎಫೆ. 5:1; ಮಾರ್ಕ 10:29, 30 ಓದಿ.

5-6. ಜನರ ಪ್ರಕಾರ ನಿಯತ್ತು ಅಂದ್ರೆ ಏನು?

5 ಶಾಶ್ವತ ಪ್ರೀತಿ ಬಗ್ಗೆ ಚೆನ್ನಾಗಿ ತಿಳುಕೊಂಡ್ರೆ ನಾವು ಆ ಪ್ರೀತಿನ ಸಹೋದರ ಸಹೋದರಿಯರಿಗೆ ತೋರಿಸೋಕೆ ತುಂಬ ಸುಲಭ ಆಗುತ್ತೆ. ತುಂಬ ಜನ ಈ ಶಾಶ್ವತ ಪ್ರೀತಿಯನ್ನ ನಿಷ್ಠೆ ಅಥವಾ ನಿಯತ್ತು ಅಂದುಕೊಂಡಿದ್ದಾರೆ. ಆದ್ರೆ ಅದಕ್ಕೂ ಶಾಶ್ವತ ಪ್ರೀತಿಗೂ ತುಂಬ ವ್ಯತ್ಯಾಸ ಇದೆ. ಅದೇನು ಅಂತ ಒಂದು ಉದಾಹರಣೆಯಿಂದ ಅರ್ಥಮಾಡಿಕೊಳ್ಳೋಣ.

6 ಒಬ್ಬ ವ್ಯಕ್ತಿ ಒಂದೇ ಕಂಪನಿಯಲ್ಲಿ ತುಂಬ ವರ್ಷಗಳಿಂದ ಕೆಲಸ ಮಾಡ್ತಾ ಇದ್ರೆ ಜನ ಅವನನ್ನ ನಿಯತ್ತಿನ ಮನುಷ್ಯ ಅಂತ ಕರೀತಾರೆ. ಅವನಿಗೆ ಆ ಕಂಪನಿಯ ಬಾಸ್‌ನ ಪರಿಚಯನೇ ಇಲ್ಲದಿದ್ರೂ, ಕಂಪನಿಯ ಕೆಲವು ನಿಯಮಗಳು ಇಷ್ಟ ಇಲ್ಲದೇ ಇದ್ರೂ ಅವನು ಅಲ್ಲಿ ಕೆಲಸ ಮಾಡುತ್ತಿರುತ್ತಾನೆ. ಇದರರ್ಥ ಅವನಿಗೆ ಕಂಪನಿ ಅಂದ್ರೆ ತುಂಬ ಇಷ್ಟ ಅಂತಾನಾ? ಇಲ್ಲ. ಪ್ರತಿ ತಿಂಗಳು ಅವನಿಗೆ ಸಂಬಳ ಬರುತ್ತೆ ಅಂತ ಅವನು ಅಲ್ಲಿ ದುಡಿತಾನೆ. ಒಂದುವೇಳೆ ಬೇರೆ ಕಡೆ ಒಳ್ಳೆ ಸಂಬಳ ಸಿಗೋ ಕೆಲಸ ಸಿಕ್ಕಿಬಿಟ್ರೆ ಈ ಕಂಪನಿನ ಬಿಟ್ಟುಬಿಡುತ್ತಾನೆ.

7-8. (ಎ) ದೇವಜನರು ಯಾಕೆ ಒಬ್ಬರಿಗೊಬ್ಬರು ಶಾಶ್ವತ ಪ್ರೀತಿ ತೋರಿಸ್ತಾರೆ? (ಬಿ) ರೂತ್‌ ಪುಸ್ತಕದಿಂದ ನಾವೇನು ಕಲಿತೀವಿ?

7 ಈ ಉದಾಹರಣೆಯಲ್ಲಿ ನೋಡಿದ ಹಾಗೆ ಜನರು ಬೇರೆ ದಾರಿ ಇಲ್ಲವಲ್ಲಾ ಅಂತ ನಿಯತ್ತು ತೋರಿಸ್ತಾರೆ. ಆದ್ರೆ ದೇವಜನರು ಮನಸಾರೆ ಒಬ್ಬರಿಗೊಬ್ಬರು ಶಾಶ್ವತ ಪ್ರೀತಿ ತೋರಿಸ್ತಾರೆ. ದಾವೀದನ ಉದಾಹರಣೆ ನೋಡಿ. ಅವನು ಯೋನಾತಾನನಿಗೆ ಮನಸಾರೆ ಶಾಶ್ವತ ಪ್ರೀತಿ ತೋರಿಸಿದ. ಯೋನಾತಾನನ ಅಪ್ಪ ದಾವೀದನನ್ನ ಕೊಲ್ಲೋಕೆ ಪ್ರಯತ್ನ ಮಾಡಿದಾಗಲೂ ದಾವೀದ ಶಾಶ್ವತ ಪ್ರೀತಿ ತೋರಿಸೋದನ್ನ ನಿಲ್ಲಿಸಲಿಲ್ಲ. ಅಷ್ಟೇ ಅಲ್ಲ, ಯೋನಾತಾನ ಸತ್ತು ಎಷ್ಟೋ ವರ್ಷಗಳು ಆದಮೇಲೂ ಅವನ ಮಗ ಮೆಫೀಬೋಶೆತನಿಗೆ ದಾವೀದ ಶಾಶ್ವತ ಪ್ರೀತಿ ತೋರಿಸಿದ.—1 ಸಮು. 20:9, 14, 15; 2 ಸಮು. 4:4; 8:15; 9:1, 6, 7.

8 ನಾವೀಗ ರೂತ್‌ ಪುಸ್ತಕದಲ್ಲಿರೋ ಕೆಲವು ವಿಷ್ಯಗಳನ್ನ ಚರ್ಚೆ ಮಾಡೋಣ. ಅದರಲ್ಲಿರೋ ಕೆಲವರು ಹೇಗೆ ಶಾಶ್ವತ ಪ್ರೀತಿ ತೋರಿಸಿದ್ರು ಮತ್ತು ನಾವು ಹೇಗೆ ಸಹೋದರ ಸಹೋದರಿಯರಿಗೆ ಶಾಶ್ವತ ಪ್ರೀತಿ ತೋರಿಸಬಹುದು ಅಂತ ಕಲಿಯೋಣ. *

ಶಾಶ್ವತ ಪ್ರೀತಿಯ ಬಗ್ಗೆ ರೂತ್‌ ಪುಸ್ತಕದಿಂದ ನಾವೇನು ಕಲಿಬಹುದು?

9. ಯೆಹೋವ ದೇವರು ತನಗೆ ವಿರುದ್ಧ ಆಗಿದ್ದಾನೆ ಅಂತ ನೊವೊಮಿ ಯಾಕೆ ಅಂದುಕೊಂಡಳು?

9 ರೂತ್‌ ಪುಸ್ತಕದಲ್ಲಿ ನೊವೊಮಿ, ಅವಳ ಸೊಸೆ ರೂತ್‌ ಮತ್ತು ಬೋವಜನ ಬಗ್ಗೆ ನಾವು ಕಲಿತೀವಿ. ಬೋವಜ ನೊವೊಮಿಯ ಗಂಡನ ಸಂಬಂಧಿಕನಾಗಿದ್ದ ಮತ್ತು ಅವನಿಗೆ ದೇವರ ಮೇಲೆ ಭಯಭಕ್ತಿ ಇತ್ತು. ಒಂದು ಕಾಲದಲ್ಲಿ ಇಸ್ರಾಯೇಲ್‌ ದೇಶದಲ್ಲಿ ಬರಗಾಲ ಬಂದಾಗ ನೊವೊಮಿ, ಅವಳ ಗಂಡ ಮತ್ತು ಇಬ್ಬರು ಗಂಡುಮಕ್ಕಳು ಮೋವಾಬ್‌ ದೇಶಕ್ಕೆ ಹೋದ್ರು. ಅಲ್ಲಿ ನೊವೊಮಿಯ ಗಂಡ ಸತ್ತುಹೋದ. ಅಷ್ಟೇ ಅಲ್ಲ, ಮದುವೆ ಆಗಿದ್ದ ಅವಳ ಇಬ್ಬರು ಗಂಡುಮಕ್ಕಳೂ ತೀರಿಕೊಂಡ್ರು. (ರೂತ್‌ 1:3-5; 2:1) ಹೀಗೆ ಒಂದರ ಮೇಲೊಂದು ಕಷ್ಟಗಳು ಬಂದಾಗ ನೊವೊಮಿಗೆ ಆಕಾಶನೇ ತಲೆಮೇಲೆ ಬಿದ್ದ ಹಾಗಾಯ್ತು. ಅವಳು ತುಂಬ ದುಃಖದಿಂದ ಯೆಹೋವ ದೇವರು ತನ್ನ ಕೈ ಬಿಟ್ಟುಬಿಟ್ಟಿದ್ದಾನೆ, ತನ್ನ ಜೊತೆ ಇಲ್ಲ ಅಂದುಕೊಂಡಳು. ಅವಳು, ‘ಯೆಹೋವ ದೇವ್ರ ಕೈ ನನ್ನ ವಿರುದ್ಧ ಇದೆ.’ “ಸರ್ವಶಕ್ತ ದೇವರು ನನ್ನ ಜೀವನವನ್ನ ದುಃಖದಲ್ಲಿ ಮುಳುಗಿಸಿದ್ದಾನೆ” ಅಂದಳು. ಅಷ್ಟೇ ಅಲ್ಲ, ‘ಯೆಹೋವ ನನಗೆ ವಿರುದ್ಧ ಆಗಿಬಿಟ್ಟಿದ್ದಾನೆ. ಸರ್ವಶಕ್ತ ದೇವ್ರೇ ನಾನು ಕಷ್ಟಪಡೋಕೆ ಬಿಟ್ಟುಬಿಟ್ಟಿದ್ದಾನೆ’ ಅಂತ ಹೇಳಿದಳು.—ರೂತ್‌ 1:13, 20, 21.

10. ನೊವೊಮಿಯ ಮಾತು ಕೇಳಿ ಯೆಹೋವ ದೇವರು ಏನು ಮಾಡಿದ್ರು?

10 ನೊವೊಮಿ ಹೇಳಿದ ಮಾತು ಕೇಳಿ ಯೆಹೋವ ದೇವರಿಗೆ ಕೋಪ ಬಂತಾ? ಇಲ್ಲ. ಅವಳ ನೋವನ್ನ, ಪರಿಸ್ಥಿತಿನ ಅರ್ಥಮಾಡಿಕೊಂಡನು. “ದಬ್ಬಾಳಿಕೆಗೆ ತುತ್ತಾದಾಗ ವಿವೇಕಿನೂ ಹುಚ್ಚನ ತರ ನಡ್ಕೊಳ್ತಾನೆ” ಅಂತ ಯೆಹೋವ ದೇವರಿಗೆ ಚೆನ್ನಾಗಿ ಗೊತ್ತು. (ಪ್ರಸಂ. 7:7) ತಾನು ನೊವೊಮಿಯ ಕೈ ಬಿಟ್ಟಿಲ್ಲ ಅಂತ ಯೆಹೋವ ಅವಳಿಗೆ ಹೇಗೆ ಅರ್ಥಮಾಡಿಸಿದನು? (1 ಸಮು. 2:8) ನೊವೊಮಿಗೆ ಶಾಶ್ವತ ಪ್ರೀತಿ ತೋರಿಸೋ ಮನಸ್ಸನ್ನ ಯೆಹೋವ ದೇವರು ರೂತ್‌ಗೆ ಕೊಟ್ಟನು. ಅವಳು ಮನಸಾರೆ ನೊವೊಮಿಗೆ ಸಹಾಯ ಮಾಡಿದಳು. ದುಃಖದಲ್ಲಿ ಮುಳುಗಿ ಹೋಗೋಕೆ ಬಿಟ್ಟುಬಿಡಲಿಲ್ಲ. ಯೆಹೋವ ದೇವರು ಕೈ ಬಿಟ್ಟಿಲ್ಲ ಅಂತ ನೊವೊಮಿಗೆ ಅರ್ಥಮಾಡಿಸಿದಳು. ರೂತಳಿಂದ ನಾವೇನು ಕಲಿಬಹುದು?

11. ಸಹೋದರ ಸಹೋದರಿಯರು ಕಷ್ಟದಲ್ಲಿ ಇರುವವರಿಗೆ ಯಾಕೆ ಸಹಾಯ ಮಾಡ್ತಾರೆ?

11 ಶಾಶ್ವತ ಪ್ರೀತಿ ಇರೋದ್ರಿಂದ ನಾವು ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡ್ತೀವಿ. ರೂತ್‌ ಹೇಗೆ ನೊವೊಮಿನ ಬಿಟ್ಟುಹೋಗಲಿಲ್ಲವೋ ಹಾಗೇ ಸಭೆಲಿರೋ ಸಹೋದರ ಸಹೋದರಿಯರು ಕಷ್ಟದಲ್ಲಿ ಅಥವಾ ದುಃಖದಲ್ಲಿ ಕುಗ್ಗಿಹೋಗಿರುವವರನ್ನ ಯಾವತ್ತೂ ಬಿಟ್ಟುಬಿಡಲ್ಲ. ಅವರಿಗೆ ಸಹಾಯ ಮಾಡ್ತಾರೆ. ಅವರಿಗೋಸ್ಕರ ಏನು ಮಾಡಕ್ಕೂ ತಯಾರಿರುತ್ತಾರೆ. (ಜ್ಞಾನೋ. 12:25; 24:10) ಹೀಗೆ ಅವರು “ಮನನೊಂದವ್ರಿಗೆ ಸಂತೈಸೋ ತರ ಮಾತಾಡಿ, ಬಲ ಇಲ್ಲದವ್ರಿಗೆ ಆಧಾರವಾಗಿರಿ, ಎಲ್ರ ಜೊತೆನೂ ತಾಳ್ಮೆಯಿಂದ ಇರಿ” ಅಂತ ಪೌಲ ಹೇಳಿದ ಮಾತನ್ನ ಪಾಲಿಸ್ತಾರೆ.—1 ಥೆಸ. 5:14.

ಸಹೋದರ ಸಹೋದರಿಯರು ದುಃಖದಲ್ಲಿ ಏನಾದ್ರು ಹೇಳುವಾಗ ಗಮನಕೊಟ್ಟು ಕೇಳಿ (ಪ್ಯಾರ 12 ನೋಡಿ)

12. ಕುಗ್ಗಿಹೋಗಿರೋ ನಮ್ಮ ಸಹೋದರ ಸಹೋದರಿಯರಿಗೆ ನಾವು ಹೇಗೆ ಸಹಾಯ ಮಾಡಬಹುದು?

12 ನಮ್ಮ ಸಹೋದರ ಸಹೋದರಿಯರಿಗೆ ಸಹಾಯಮಾಡುವ ಒಳ್ಳೇ ವಿಧ ಯಾವುದಂದ್ರೆ ಅವರು ಹೇಳೋದನ್ನ ಚೆನ್ನಾಗಿ ಕೇಳಿಸಿಕೊಳ್ಳೋದು ಮತ್ತು ಅವರನ್ನ ಎಷ್ಟು ಪ್ರೀತಿಸ್ತೀವಿ ಅಂತ ಹೇಳೋದು. ಸಹೋದರ ಸಹೋದರಿಯರು ಯೆಹೋವ ದೇವರಿಗೆ ಅಮೂಲ್ಯವಾದ ಕುರಿಗಳ ತರ ಇದ್ದಾರೆ. ಹಾಗಾಗಿ ನಾವು ಅವರಿಗೆ ಪ್ರೀತಿ ತೋರಿಸುವಾಗ ಯೆಹೋವ ಖಂಡಿತ ನಮ್ಮನ್ನ ಮೆಚ್ಚಿಕೊಳ್ತಾನೆ. (ಕೀರ್ತ. 41:1) ಜ್ಞಾನೋಕ್ತಿ 19:17 ಹೇಳುತ್ತೆ: “ಬಡವರಿಗೆ ದಯೆ ತೋರಿಸುವವನು ಯೆಹೋವನಿಗೆ ಸಾಲ ಕೊಡ್ತಾನೆ, ದೇವರೇ ಅವನಿಗೆ ಪ್ರತಿಫಲ ಕೊಡ್ತಾನೆ.”

ಒರ್ಫಾ ಮೋವಾಬಿಗೆ ವಾಪಸ್‌ ಹೋದಳು, ಆದ್ರೆ ರೂತ್‌ ನೊವೊಮಿಯನ್ನ ಬಿಟ್ಟು ಹೋಗಲಿಲ್ಲ. ರೂತ್‌ ನೊವೊಮಿಗೆ “ನೀನು ಹೋಗೋ ಕಡೆ ನಾನೂ ಬರ್ತಿನಿ” ಅಂದಳು (ಪ್ಯಾರ 13 ನೋಡಿ)

13. (ಎ) ರೂತ್‌ ಮತ್ತು ಒರ್ಫಾ ಯಾವ ತೀರ್ಮಾನ ಮಾಡಿದ್ರು? (ಬಿ) ರೂತ್‌ ಹೇಗೆ ಶಾಶ್ವತ ಪ್ರೀತಿ ತೋರಿಸಿದಳು? (ಮುಖಪುಟ ಚಿತ್ರ ನೋಡಿ.)

13 ನಾವೀಗ ನೊವೊಮಿಯ ಗಂಡ ಮತ್ತು ಮಕ್ಕಳು ಸತ್ತಮೇಲೆ ಏನಾಯ್ತು ಅಂತ ನೋಡೋಣ. ಆಗ ಶಾಶ್ವತ ಪ್ರೀತಿಯ ಬಗ್ಗೆ ಇನ್ನೂ ಚೆನ್ನಾಗಿ ತಿಳಿದುಕೊಳ್ಳೋಕೆ ಆಗುತ್ತೆ. “ಯೆಹೋವ ತಮ್ಮ ಜನ್ರನ್ನ ಮತ್ತೆ ಆಶೀರ್ವದಿಸಿ ಆಹಾರ ಕೊಡ್ತಿದ್ದಾನೆ ಅಂತ ನೊವೊಮಿಗೆ ಸುದ್ದಿ” ಸಿಕ್ಕಿದಾಗ ಅವಳು ತನ್ನ ಊರಿಗೆ ವಾಪಸ್‌ ಹೋಗೋಕೆ ನಿರ್ಧಾರ ಮಾಡಿದಳು. (ರೂತ್‌ 1:6) ಅವಳ ಜೊತೆ ಇಬ್ಬರು ಸೊಸೆಯರೂ ಹೊರಟ್ರು. ಆದ್ರೆ ದಾರಿಯಲ್ಲಿ ನೊವೊಮಿ ಅವರಿಬ್ಬರಿಗೂ ಅವರವರ ತವರಿಗೆ ಹೋಗೋಕೆ ಮೂರು ಸಲ ಒತ್ತಾಯ ಮಾಡಿದಳು. ಆಗ ಏನಾಯ್ತು? “ಒರ್ಫಾ ಅತ್ತೆಗೆ ಮುದ್ದಿಟ್ಟು ವಾಪಸ್‌ ಹೋದಳು. ಆದ್ರೆ ರೂತ್‌ ಅತ್ತೆನ ಬಿಟ್ಟು ಹೋಗಲಿಲ್ಲ.” (ರೂತ್‌ 1:7-14) ಒರ್ಫಾ ಅವಳಾಗಿ ಅವಳೇ ಹೋಗಲಿಲ್ಲ, ನೊವೊಮಿಯ ಮಾತಿಗೆ ಬೆಲೆ ಕೊಟ್ಟು ಹೋದಳು. ಆದ್ರೆ ರೂತ್‌ ಒಂದು ಹೆಜ್ಜೆ ಮುಂದೆ ಹೋಗಿ ನೊವೊಮಿಗೆ ಶಾಶ್ವತ ಪ್ರೀತಿ ತೋರಿಸಿದಳು. ಒರ್ಫಾ ತರ ರೂತ್‌ ಕೂಡ ಹೋಗಬಹುದಾಗಿತ್ತು, ಆದ್ರೂ ಹೋಗಲಿಲ್ಲ. (ರೂತ್‌ 1:16, 17) ಬೇರೆ ದಾರಿ ಇಲ್ಲವಲ್ಲಾ ಅಂತ ರೂತ್‌ ನೊವೊಮಿ ಜೊತೆ ಉಳುಕೊಳ್ಳಲಿಲ್ಲ, ಬದಲಿಗೆ ಮನಸಾರೆ ಇಷ್ಟಪಟ್ಟು ಉಳುಕೊಂಡಳು. ರೂತಳಿಂದ ನಾವೇನು ಕಲಿಯಬಹುದು?

14. (ಎ) ಇವತ್ತು ಸಹೋದರ ಸಹೋದರಿಯರು ಏನು ಮಾಡ್ತಾರೆ? (ಬಿ) ಯೆಹೋವ ದೇವರನ್ನ ಹೇಗೆ ಖುಷಿಪಡಿಸಬಹುದು ಅಂತ ಇಬ್ರಿಯ 13:16 ಹೇಳುತ್ತೆ?

14 ಶಾಶ್ವತ ಪ್ರೀತಿ ಇರೋದ್ರಿಂದ ನಮ್ಮ ಕೈಯಲ್ಲಿ ಆಗೋ ಸಹಾಯಕ್ಕಿಂತ ಇನ್ನೂ ಜಾಸ್ತಿ ಸಹಾಯ ಮಾಡೋಕೆ ತಯಾರಾಗಿರುತ್ತೀವಿ. ಹಿಂದಿನ ಕಾಲದ ದೇವಜನರ ತರ ಈಗಲೂ ಸಹೋದರ ಸಹೋದರಿಯರು ಶಾಶ್ವತ ಪ್ರೀತಿ ತೋರಿಸ್ತಾ ಇದ್ದಾರೆ. ಪರಿಚಯನೇ ಇಲ್ಲದಿದ್ರೂ ಅವರಿಗೆ ಸಹಾಯ ಮಾಡೋಕೆ ಮುಂದೆ ಬರುತ್ತಿದ್ದಾರೆ. ಉದಾಹರಣೆಗೆ ಎಲ್ಲಾದ್ರೂ ನೈಸರ್ಗಿಕ ವಿಪತ್ತು ಆಯ್ತು ಅಂತ ಕೇಳಿದ ತಕ್ಷಣ ಅವರಿಗೆ ಹೇಗೆಲ್ಲಾ ಸಹಾಯ ಮಾಡಬಹುದು ಅಂತ ಯೋಚಿಸ್ತಾರೆ. ಸಭೆಯಲ್ಲಿ ಯಾರಿಗಾದ್ರೂ ಕಷ್ಟ ಬಂದಾಗ ಅವರಿಗೆ ಏನು ಬೇಕು ಅಂತ ತಿಳಿದುಕೊಂಡು ಸಹಾಯ ಮಾಡ್ತಾರೆ. ಒಂದನೇ ಶತಮಾನದಲ್ಲಿದ್ದ ಮಕೆದೋನ್ಯರ ತರ ಸಹಾಯ ಮಾಡೋಕೆ ತಮ್ಮಿಂದ ಆಗೋದನ್ನೆಲ್ಲಾ ಮಾಡ್ತಾರೆ, ತ್ಯಾಗಗಳನ್ನೂ ಮಾಡ್ತಾರೆ. ತಮ್ಮಿಂದ ‘ಎಷ್ಟು ಕೊಡೋಕೆ ಆಗುತ್ತೋ ಅದಕ್ಕಿಂತ ಜಾಸ್ತಿನೇ’ ಕೊಡ್ತಾರೆ. (2 ಕೊರಿಂ. 8:3) ಇದನ್ನೆಲ್ಲಾ ನೋಡಿದಾಗ ಯೆಹೋವ ದೇವರಿಗೆ ಎಷ್ಟು ಖುಷಿ ಆಗುತ್ತೆ ಅಲ್ವಾ!ಇಬ್ರಿಯ 13:16 ಓದಿ.

ನಾವು ಹೇಗೆ ಶಾಶ್ವತ ಪ್ರೀತಿ ತೋರಿಸಬಹುದು?

15-16. ರೂತ್‌ ಪ್ರಯತ್ನ ಬಿಡಲಿಲ್ಲ ಅಂತ ಹೇಗೆ ಹೇಳಬಹುದು?

15 ರೂತ್‌ ಮತ್ತು ನೊವೊಮಿಯ ಕಥೆಯಿಂದ ನಾವು ತುಂಬ ಒಳ್ಳೇ ಪಾಠಗಳನ್ನ ಕಲಿಬಹುದು. ಅದರಲ್ಲಿ ಕೆಲವನ್ನ ಈಗ ನೋಡೋಣ.

16 ಪ್ರಯತ್ನ ಮಾಡ್ತಾ ಇರಿ. ನೊವೊಮಿ ಜೊತೆ ರೂತ್‌ ಬೆತ್ಲೆಹೇಮಿಗೆ ಬರ್ತೀನಿ ಅಂತ ಹೇಳಿದಾಗ ನೊವೊಮಿ ಮೊದಮೊದಲು ಬೇಡ ಅಂತ ಹೇಳಿದಳು. ಆದ್ರೆ ರೂತ್‌ ಪ್ರಯತ್ನ ಬಿಟ್ಟುಬಿಡಲಿಲ್ಲ. ಆಗ ನೊವೊಮಿ ಏನು ಮಾಡಿದಳು? “ಏನು ಮಾಡಿದ್ರೂ ರೂತ್‌ ಹೋಗಲ್ಲ ಅಂತ ಗೊತ್ತಾದಾಗ ನೊವೊಮಿ ಒತ್ತಾಯ ಮಾಡಲಿಲ್ಲ.”—ರೂತ್‌ 1:15-18.

17. ನಾವ್ಯಾಕೆ ಸಹಾಯ ಮಾಡೋದನ್ನ ಬಿಟ್ಟುಬಿಡಲ್ಲ?

17 ನಾವೇನು ಮಾಡಬೇಕು? ದುಃಖದಲ್ಲಿ ಮುಳುಗಿರುವವರಿಗೆ ಅದ್ರಿಂದ ಹೊರಗೆ ಬರೋಕೆ ಸ್ವಲ್ಪ ಸಮಯ ಹಿಡಿಯುತ್ತೆ. ಅವರಿಗೆ ಸಹಾಯ ಮಾಡೋ ಅವಕಾಶಕ್ಕಾಗಿ ನಾವು ತಾಳ್ಮೆಯಿಂದ ಕಾಯ್ತಾ ಇರಬೇಕು. ಒಬ್ಬ ಸಹೋದರಿಗೆ ನಾವು ಸಹಾಯ ಮಾಡೋಕೆ ಹೋದಾಗ ಮೊದಮೊದಲು ಅವರು ‘ಪರವಾಗಿಲ್ಲ, ನಂಗೇನು ತೊಂದರೆ ಇಲ್ಲ’ ಅಂತ ಹೇಳಿ ಸಹಾಯ ಪಡಕೊಳ್ಳದೇ ಇರಬಹುದು. * ಆದ್ರೂ ನಮ್ಮಲ್ಲಿ ಶಾಶ್ವತ ಪ್ರೀತಿ ಇರೋದ್ರಿಂದ ನಾವು ಅವರನ್ನ ಬಿಟ್ಟುಬಿಡಲ್ಲ. ಸಹಾಯ ಮಾಡೋ ಅವಕಾಶಕ್ಕಾಗಿ ಕಾಯ್ತಾ ಇರುತ್ತೀವಿ. (ಗಲಾ. 6:2) ಇವತ್ತಲ್ಲ ನಾಳೆ ಆ ಸಹೋದರಿ ನಮ್ಮ ಸಹಾಯನ ಸ್ವೀಕರಿಸುತ್ತಾರೆ.

18. ರೂತ್‌ಗೆ ಯಾಕೆ ಬೇಜಾರು ಆಗಿರಬಹುದು?

18 ತಪ್ಪು ತಿಳಿದುಕೊಳ್ಳಬೇಡಿ. ನೊವೊಮಿ ಮತ್ತು ರೂತ್‌ ಬೆತ್ಲೆಹೇಮಿಗೆ ಬಂದು ಮುಟ್ಟಿದಾಗ ನೊವೊಮಿ ತನ್ನ ಪಕ್ಕದ ಮನೆಯವರಿಗೆ, “ಇಲ್ಲಿಂದ ಹೋಗುವಾಗ ನನ್ನ ಹತ್ರ ಎಲ್ಲಾ ಇತ್ತು, ಆದ್ರೆ ಈಗ ಬರಿಗೈಯಲ್ಲಿ ಬರೋ ಹಾಗೆ ಯೆಹೋವ ಮಾಡಿದ್ದಾನೆ” ಅಂತ ಹೇಳಿದಳು. (ರೂತ್‌ 1:21) ಇದನ್ನ ಕೇಳಿಸಿಕೊಂಡಾಗ ರೂತ್‌ಗೆ ಹೇಗೆ ಅನಿಸಿರಬೇಕು ಅಂತ ಸ್ವಲ್ಪ ಯೋಚನೆ ಮಾಡಿ. ಅವಳು ನೊವೊಮಿಗೆ ತುಂಬ ಸಹಾಯ ಮಾಡಿದ್ದಳು. ಅವಳ ಜೊತೆ ಅತ್ತಳು, ಅವಳಿಗೆ ಸಮಾಧಾನ ಮಾಡಿದ್ದಳು. ಇಲ್ಲಿ ತನಕ ಅವಳ ಜೊತೆನೇ ಬಂದಳು. ಇಷ್ಟೆಲ್ಲಾ ಸಹಾಯ ಸಿಕ್ಕಿದ್ರೂ ನನ್ನನ್ನ “ಬರಿಗೈಯಲ್ಲಿ ಬರೋ ಹಾಗೆ ಯೆಹೋವ ಮಾಡಿದ್ದಾನೆ” ಅಂತ ನೊವೊಮಿ ಹೇಳಿದಳು. ಅವಳಿಗೆ ಸಹಾಯ ಮಾಡಿದ ರೂತ್‌ ಪಕ್ಕದಲ್ಲೇ ಇದ್ರೂ ನೊವೊಮಿ ಅದನ್ನ ಗಮನಿಸಲೇ ಇಲ್ಲ. ಅವಳು ಮಾಡಿದ ಸಹಾಯದ ಬಗ್ಗೆ ಏನೂ ಹೇಳಲಿಲ್ಲ. ಆಗ ರೂತ್‌ಗೆ ಬೇಜಾರಾಗಿರಬಹುದು! ಆದ್ರೂ ಅವಳು ನೊವೊಮಿನ ತಪ್ಪು ತಿಳಿದುಕೊಳ್ಳಲಿಲ್ಲ.

19. ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುವಾಗ ನಾವು ಏನನ್ನ ಮನಸ್ಸಲ್ಲಿಡಬೇಕು?

19 ನಾವೇನು ಮಾಡಬೇಕು? ಒಬ್ಬ ಸಹೋದರಿ ತುಂಬ ಕಷ್ಟದ ಪರಿಸ್ಥಿತಿಯಲ್ಲಿ ಇರುವಾಗ ನಾವು ಎಷ್ಟೇ ಸಹಾಯ ಮಾಡಿದರೂ ಕೆಲವೊಮ್ಮೆ ಅವರು ನಮಗೆ ಬೇಜಾರಾಗೋ ತರ ನಡೆದುಕೊಳ್ಳಬಹುದು. ಹಾಗಂತ ನಾವು ಅವರ ಬಗ್ಗೆ ತಪ್ಪು ತಿಳಿದುಕೊಳ್ಳಬಾರದು. ಅವರಿಗೆ ಸಹಾಯ ಮಾಡೋದನ್ನ ನಿಲ್ಲಿಸಬಾರದು. ಅವರ ಜೊತೆನೇ ಇರಬೇಕು. ‘ಅವರಿಗೆ ಸಹಾಯ ಮಾಡೋಕೆ ಇನ್ನೂ ಬೇರೆ ದಾರಿ ತೋರಿಸಪ್ಪಾ’ ಅಂತ ಯೆಹೋವ ದೇವರ ಹತ್ರ ಬೇಡಿಕೊಳ್ಳಬೇಕು.—ಜ್ಞಾನೋ. 17:17.

ಬೋವಜನ ತರ ಹಿರಿಯರು ಏನು ಮಾಡಬೇಕು? (ಪ್ಯಾರ 20-21 ನೋಡಿ)

20. ರೂತ್‌ಗೆ ಯಾವುದು ಪ್ರೋತ್ಸಾಹ ಕೊಟ್ಟಿತು?

20 ಅವರಿಗೆ ಬೇಕಾದ ಪ್ರೋತ್ಸಾಹ ಕೊಡಿ. ರೂತ್‌ ನೊವೊಮಿಗೆ ಶಾಶ್ವತ ಪ್ರೀತಿ ತೋರಿಸಿದಳು, ತುಂಬ ಸಹಾಯ ಮಾಡಿದಳು. ಆದ್ರೆ ಈಗ ರೂತ್‌ಗೇ ಸಹಾಯ ಬೇಕಾಗಿದೆ. ಆಗ ಯೆಹೋವ ಬೋವಜನಿಗೆ ಸಹಾಯ ಮಾಡೋ ಮನಸ್ಸನ್ನ ಕೊಟ್ಟನು. ಬೋವಜ ರೂತ್‌ಗೆ, “ಯೆಹೋವ ನಿನ್ನನ್ನ ಆಶೀರ್ವದಿಸ್ತಾನೆ. ಇಸ್ರಾಯೇಲಿನ ದೇವರಾದ ಯೆಹೋವನ ರೆಕ್ಕೆ ಕೆಳಗೆ ಆಶ್ರಯ ಪಡಿಯೋಕೆ ಬಂದಿರೋದ್ರಿಂದ ಆತನು ನಿನಗೆ ದೊಡ್ಡ ಬಹುಮಾನ ಕೊಡ್ತಾನೆ” ಅಂದ. ಇದನ್ನ ಕೇಳಿ ರೂತ್‌ಗೆ ತುಂಬ ಖುಷಿ ಆಯ್ತು. ಅವಳು “ನನ್ನ ಮನಸ್ಸಿಗೆ ನೆಮ್ಮದಿ, ಭರವಸೆ ಕೊಡೋ ಮಾತುಗಳನ್ನ ಹೇಳ್ದೆ” ಅಂದಳು. (ರೂತ್‌ 2:12, 13) ಬೋವಜ ಹೇಳಿದ ಮಾತುಗಳು ರೂತ್‌ಗೆ ತುಂಬ ಪ್ರೋತ್ಸಾಹ ಕೊಟ್ಟಿತು. ಇದ್ರಿಂದ ಅವಳು ತನ್ನ ಅತ್ತೆಗೆ ಸಹಾಯ ಮಾಡೋದನ್ನ ಮುಂದುವರಿಸೋಕೆ ಆಯ್ತು.

21. ಯೆಶಾಯ 32:1, 2ರಲ್ಲಿ ಹೇಳಿರೋ ಹಾಗೆ ಹಿರಿಯರು ಏನು ಮಾಡ್ತಾರೆ?

21 ನಾವೇನು ಮಾಡಬೇಕು? ಬೇರೆಯವರಿಗೆ ಶಾಶ್ವತ ಪ್ರೀತಿ ತೋರಿಸೋ ಸಹೋದರ ಸಹೋದರಿಯರಿಗೂ ಕೆಲವೊಮ್ಮೆ ಪ್ರೋತ್ಸಾಹ ಬೇಕಾಗುತ್ತೆ. ರೂತ್‌ ತನ್ನ ಅತ್ತೆಗೆ ಸಹಾಯ ಮಾಡುತ್ತಿರೋದನ್ನ ಗಮನಿಸಿ ಬೋವಜ ರೂತ್‌ನ ಹೊಗಳಿದ. ಅದೇ ತರ ಇವತ್ತು ಸಹೋದರ ಸಹೋದರಿಯರಿಗೆ ಸಹಾಯ ಮಾಡ್ತಾ ಇರುವವರನ್ನ ಹಿರಿಯರು ಗಮನಿಸಿ ಅವರನ್ನ ಹೊಗಳಬೇಕು. ಅವರಿಗೆ ಆಗಾಗ ಪ್ರೋತ್ಸಾಹ ಕೊಡ್ತಾ ಇರಬೇಕು. ಆಗ ಇನ್ನೂ ಜಾಸ್ತಿ ಸಹಾಯ ಮಾಡೋಕೆ ಅವರಿಂದ ಆಗುತ್ತೆ.ಯೆಶಾಯ 32:1, 2 ಓದಿ.

ಶಾಶ್ವತ ಪ್ರೀತಿ ತೋರಿಸುವವರಿಗೆ ಹೇಗೆಲ್ಲಾ ಒಳ್ಳೇದಾಗುತ್ತೆ?

22-23. ನೊವೊಮಿ ಹೇಗೆ ತನ್ನ ಯೋಚನೆಯನ್ನ ಸರಿಮಾಡಿಕೊಂಡಳು ಮತ್ತು ಯಾಕೆ? (ಕೀರ್ತನೆ 136:23, 26)

22 ಬೋವಜ ಸ್ವಲ್ಪ ಸಮಯ ಆದಮೇಲೆ ರೂತ್‌ ಮತ್ತು ನೊವೊಮಿಗೆ ಬೇಕಾದಷ್ಟು ಆಹಾರವನ್ನ ಕೊಟ್ಟ. (ರೂತ್‌ 2:14-18) ಆಗ ನೊವೊಮಿಗೆ ಹೇಗನಿಸಿತು? ಅವಳು “ಯೆಹೋವ ಅವನನ್ನ ಆಶೀರ್ವದಿಸ್ತಾನೆ. ಬದುಕಿರೋ ಸತ್ತಿರೋ ಎಲ್ರಿಗೂ ದೇವರು ಶಾಶ್ವತ ಪ್ರೀತಿ ತೋರಿಸಿದ್ದಾನೆ” ಅಂದಳು. (ರೂತ್‌ 2:20ಎ) ಮೊದಮೊದಲು ನೊವೊಮಿ, ‘ಯೆಹೋವ ನನಗೆ ವಿರುದ್ಧವಾಗಿದ್ದಾನೆ’ ಅಂತ ಹೇಳಿದ್ದಳು. ಆದ್ರೆ ಈಗ “ಯೆಹೋವ . . . ಶಾಶ್ವತ ಪ್ರೀತಿ ತೋರಿಸಿದ್ದಾನೆ” ಅಂತ ಹೇಳುತ್ತಿದ್ದಾಳೆ. ಅವಳು ಬದಲಾಗೋಕೆ ಕಾರಣ ಏನು?

23 ಯೆಹೋವ ತನಗೆ ಹೇಗೆಲ್ಲಾ ಸಹಾಯ ಮಾಡ್ತಿದ್ದಾನೆ ಅನ್ನೋದರ ಬಗ್ಗೆ ನೊವೊಮಿ ಯೋಚನೆ ಮಾಡೋಕೆ ಶುರುಮಾಡಿದಳು. ಅವಳು ಬೆತ್ಲೆಹೇಮಿಗೆ ವಾಪಸ್‌ ಬರುತ್ತಿದ್ದಾಗ ಯೆಹೋವ ರೂತಳ ಮೂಲಕ ಸಹಾಯ ಕೊಟ್ಟಿದ್ದನು. (ರೂತ್‌ 1:16) ಈಗ ಅವಳನ್ನ “ಬಿಡಿಸೋಕೆ ಹಕ್ಕು” ಇರುವವರಲ್ಲಿ ಒಬ್ಬನಾದ ಬೋವಜನಿಂದ ಆಹಾರ ಸಿಗೋ ತರ ಮಾಡ್ತಿದ್ದಾನೆ. * (ರೂತ್‌ 2:19, 20ಬಿ) ಹೀಗೆ ತಾನು ಅವಳ ಕೈಬಿಟ್ಟಿಲ್ಲ, ಅವಳ ಜೊತೆನೇ ಇದ್ದೀನಿ ಅನ್ನೋದನ್ನ ಅರ್ಥಮಾಡಿಸಿದನು. (ಕೀರ್ತನೆ 136:23, 26 ಓದಿ.) ರೂತ್‌ ಮತ್ತು ಬೋವಜ ಸಹಾಯ ಮಾಡಿದ್ದಕ್ಕೆ, ಶಾಶ್ವತ ಪ್ರೀತಿ ತೋರಿಸಿದ್ದಕ್ಕೆ ನೊವೊಮಿ ಧನ್ಯವಾದ ಹೇಳಿರಬೇಕು. ನೊವೊಮಿ ಮತ್ತೆ ಖುಷಿಖುಷಿಯಿಂದ ಯೆಹೋವ ದೇವರ ಸೇವೆ ಮಾಡೋದನ್ನ ನೋಡಿದಾಗ ರೂತ್‌ ಮತ್ತು ಬೋವಜನಿಗೂ ತುಂಬ ಖುಷಿಯಾಗಿರಬೇಕು.

24. ನಾವು ಯಾಕೆ ನಮ್ಮ ಸಹೋದರ ಸಹೋದರಿಯರಿಗೆ ಶಾಶ್ವತ ಪ್ರೀತಿ ತೋರಿಸ್ತಾ ಇರಬೇಕು?

24 ರೂತ್‌ ಪುಸ್ತಕದಿಂದ ಶಾಶ್ವತ ಪ್ರೀತಿ ಬಗ್ಗೆ ನಾವೇನು ಕಲಿತ್ವಿ? ಶಾಶ್ವತ ಪ್ರೀತಿ ಇರೋದ್ರಿಂದ ನಾವು ದುಃಖದಲ್ಲಿರೋ ಸಹೋದರ ಸಹೋದರಿಯರಿಗೆ ಸಹಾಯ ಮಾಡ್ತೀವಿ. ಅವರಿಗೋಸ್ಕರ ತ್ಯಾಗಗಳನ್ನೂ ಮಾಡ್ತೀವಿ. ಶಾಶ್ವತ ಪ್ರೀತಿ ತೋರಿಸುವವರಿಗೆ ಹಿರಿಯರು ಪ್ರೋತ್ಸಾಹ ಕೊಡಬೇಕು. ನಾವು ಯಾಕೆ ನಮ್ಮ ಸಹೋದರ ಸಹೋದರಿಯರಿಗೆ ಶಾಶ್ವತ ಪ್ರೀತಿ ತೋರಿಸ್ತೀವಿ? ಕುಗ್ಗಿಹೋದ ಸಹೋದರ ಸಹೋದರಿಯರು ಮತ್ತೆ ಖುಷಿಖುಷಿಯಿಂದ ಯೆಹೋವ ದೇವರ ಸೇವೆ ಮಾಡೋದನ್ನ ನೋಡುವಾಗ ನಮಗೆ ತುಂಬ ಖುಷಿಯಾಗುತ್ತೆ. (ಅ. ಕಾ. 20:35) ಎಲ್ಲಕ್ಕಿಂತ ಹೆಚ್ಚಾಗಿ “ಧಾರಾಳವಾಗಿ ಶಾಶ್ವತ ಪ್ರೀತಿ” ತೋರಿಸ್ತಾ ಇರುವ ಯೆಹೋವ ದೇವರನ್ನ ಅನುಕರಿಸೋಕೆ ಮತ್ತು ಸಂತೋಷಪಡಿಸೋಕೆ ನಾವು ಶಾಶ್ವತ ಪ್ರೀತಿ ತೋರಿಸ್ತೀವಿ.—ವಿಮೋ. 34:6; ಕೀರ್ತ. 33:22.

ಗೀತೆ 77 ಕ್ಷಮಿಸುವವರಾಗಿರಿ

^ ಪ್ಯಾರ. 5 ಸಭೆಲಿರೋ ನಾವೆಲ್ಲರೂ ಒಬ್ಬರಿಗೊಬ್ಬರು ಶಾಶ್ವತ ಪ್ರೀತಿ ತೋರಿಸಬೇಕು ಅಂತ ಯೆಹೋವ ಬಯಸ್ತಾನೆ. ಹಿಂದಿನ ಕಾಲದಲ್ಲೂ ದೇವಜನರು ಈ ಶಾಶ್ವತ ಪ್ರೀತಿ ತೋರಿಸಿದ್ರು. ಶಾಶ್ವತ ಪ್ರೀತಿ ಅಂದ್ರೆ ಏನು ಅಂತ ನಾವು ಅವರಿಂದ ಕಲಿಯೋಣ. ಈ ಲೇಖನದಲ್ಲಿ ರೂತ್‌, ನೊವೊಮಿ ಮತ್ತು ಬೋವಜ ಹೇಗೆ ಶಾಶ್ವತ ಪ್ರೀತಿ ತೋರಿಸಿದ್ರು ಅಂತ ನೋಡೋಣ.

^ ಪ್ಯಾರ. 8 ಈ ಲೇಖನನ ಚೆನ್ನಾಗಿ ಅರ್ಥಮಾಡಿಕೊಳ್ಳೋಕೆ ರೂತ್‌ ಪುಸ್ತಕದ 1 ಮತ್ತು 2ನೇ ಅಧ್ಯಾಯ ಓದಿ.

^ ಪ್ಯಾರ. 17 ನಾವಿಲ್ಲಿ ನೊವೊಮಿ ಬಗ್ಗೆ ಕಲಿತಾ ಇರೋದ್ರಿಂದ ಸಹೋದರಿ ಅಂತ ಹೇಳಿದ್ದೀವಿ. ಆದ್ರೆ ಇದು ಸಹೋದರರಿಗೂ ಅನ್ವಯ ಆಗುತ್ತೆ.

^ ಪ್ಯಾರ. 23 ಬೋವಜನನ್ನ ಯಾಕೆ ‘ಬಿಡಿಸೋ ಹಕ್ಕಿರುವವನು’ ಅಂತ ಹೇಳಲಾಗಿದೆ ಅಂತ ತಿಳಿದುಕೊಳ್ಳೋಕೆ ಅವರ ನಂಬಿಕೆಯನ್ನು ಅನುಕರಿಸಿ ಅನ್ನೋ ಪುಸ್ತಕದ “ಗುಣವಂತೆ” ಅನ್ನೋ 5ನೇ ಪಾಠ ನೋಡಿ.