ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 46

ನವದಂಪತಿಗಳೇ, ನಿಮ್ಮ ಗುರಿ ಏನು?

ನವದಂಪತಿಗಳೇ, ನಿಮ್ಮ ಗುರಿ ಏನು?

“ಯೆಹೋವನೇ ನನ್ನ ಬಲ, . . . ನನ್ನ ಹೃದಯ ಆತನಲ್ಲೇ ಭರವಸೆ ಇಡುತ್ತೆ.”—ಕೀರ್ತ. 28:7.

ಗೀತೆ 36 “ದೇವರು ಒಟ್ಟುಗೂಡಿಸಿದ್ದನ್ನು”

ಕಿರುನೋಟ *

1-2. (ಎ) ನವದಂಪತಿಗಳು ಯೆಹೋವನ ಮೇಲೆ ಯಾಕೆ ಭರವಸೆ ಇಡಬೇಕು? (ಕೀರ್ತನೆ 37:3, 4) (ಬಿ) ಈ ಲೇಖನದಲ್ಲಿ ನಾವೇನು ಕಲಿತೀವಿ?

ನಿಮಗೆ ಈಗಷ್ಟೇ ಮದುವೆ ಆಗಿದ್ಯಾ? ಅಥವಾ ಮದುವೆಯಾಗೋಕೆ ಯೋಚನೆ ಮಾಡ್ತಿದ್ದೀರಾ? ನೀವು ಇಷ್ಟಪಡೋ ವ್ಯಕ್ತಿ ಜೊತೆ ಪ್ರಣಯ ಪಕ್ಷಿಗಳ ತರ ಹಾಯಾಗಿರೋಕೆ ಕನಸು ಕಾಣ್ತಾ ಇರಬಹುದು. ನೀವು ಜೀವನ ಪೂರ್ತಿ ಖುಷಿಖುಷಿಯಾಗಿ ಇರೋಕೆ ಒಳ್ಳೆ ನಿರ್ಧಾರಗಳನ್ನ ಮಾಡಬೇಕು. ಮದುವೆ ಆದಮೇಲೆ ಕೆಲವು ಸಮಸ್ಯೆಗಳು ಬರಬಹುದು, ಆಗ ಜೀವನದಲ್ಲಿ ಕೆಲವು ಪ್ರಾಮುಖ್ಯ ನಿರ್ಧಾರಗಳನ್ನ ಮಾಡಬೇಕಾಗುತ್ತೆ. ಆ ನಿರ್ಧಾರಗಳನ್ನ ಮಾಡುವಾಗ ಯೆಹೋವ ದೇವರ ಸಹಾಯ ಪಡ್ಕೊಂಡ್ರೆ ನಿಮ್ಮ ಮದುವೆ ಜೀವನ ನಂದನ ಆಗಿರುತ್ತೆ ಇಲ್ಲಾಂದ್ರೆ ನಿಮ್ಮ ಮದುವೆ ಜೀವನ ಬಂಧನ ಅನಿಸಿಬಿಡುತ್ತೆ.ಕೀರ್ತನೆ 37:3, 4 ಓದಿ.

2 ಹೊಸದಾಗಿ ಮದುವೆ ಆಗಿರುವವರಿಗೆ ಈ ಲೇಖನದಲ್ಲಿ ಸಲಹೆಗಳು ಇವೆ. ಮದುವೆಯಾಗಿ ತುಂಬಾ ವರ್ಷ ಆಗಿರುವವರಿಗೂ ಈ ಸಲಹೆಗಳಿಂದ ಸಹಾಯ ಆಗುತ್ತೆ. ಹಿಂದಿನ ಕಾಲದಲ್ಲಿ ಇದ್ದ ದೇವಜನರಿಂದ ಮತ್ತು ಈಗ ಇರುವ ಆದರ್ಶ ದಂಪತಿಗಳಿಂದ ಹೊಸದಾಗಿ ಮದುವೆ ಆದವರು ಏನು ಕಲಿಬಹುದು ಅಂತ ಈ ಲೇಖನದಲ್ಲಿ ನೋಡೋಣ.

ನವದಂಪತಿಗಳ ಜೀವನದ ಹಾದಿಯಲ್ಲಿ ಮುಳ್ಳುಗಳು

ಯಾವ ನಿರ್ಧಾರಗಳು ನವದಂಪತಿಗಳನ್ನ ಜಾಸ್ತಿ ಸೇವೆ ಮಾಡದ ಹಾಗೆ ತಡೆಯುತ್ತೆ? (ಪ್ಯಾರ 3-4 ನೋಡಿ)

3-4. ಮುಳ್ಳುಗಳಂತೆ ಇರೋ ಯಾವ ಸಮಸ್ಯೆಗಳನ್ನ ನವದಂಪತಿಗಳು ಎದುರಿಸಬೇಕಾಗುತ್ತೆ?

3 ಹೊಸದಾಗಿ ಮದುವೆ ಆಗಿರುವವರಿಗೆ ‘ಬೇರೆಯವರ ತರ ಹಾಯಾಗಿರಿ, ಬೇಗ ಮಕ್ಕಳು ಮಾಡ್ಕೊಳ್ಳಿ, ದೊಡ್ಡ ಮನೆ ಕಟ್ಟಿಕೊಳ್ಳಿ, ಅದು ಇದು ತಗೊಳ್ಳಿ’ ಅಂತ ಹೆತ್ತವರು, ಸಂಬಂಧಿಕರು, ನೆಂಟರು, ಫ್ರೆಂಡ್ಸು ಒತ್ತಾಯ ಮಾಡಬಹುದು.

4 ಕೆಲವು ತೀರ್ಮಾನಗಳನ್ನ ತಗೊಳ್ಳುವಾಗ ಎಚ್ಚರ ವಹಿಸಿಲ್ಲಾಂದ್ರೆ ಜನ ಹೇಳೋದನ್ನ ಕೇಳಿ ನೀವು ಮೈತುಂಬ ಸಾಲ ಮಾಡ್ಕೋಬೇಕಾಗುತ್ತೆ. ಆಮೇಲೆ ಆ ಸಾಲ ತೀರಿಸೋಕೆ ಗಂಡ-ಹೆಂಡತಿ ಇಬ್ಬರೂ ಓವರ್‌ ಟೈಮ್‌ ಕೆಲಸ ಮಾಡಬೇಕಾಗುತ್ತೆ. ಆಗ ಬೈಬಲ್‌ ಅಧ್ಯಯನ ಮಾಡೋಕೆ, ಕುಟುಂಬ ಆರಾಧನೆ ಮಾಡೋಕೆ, ಸಿಹಿಸುದ್ದಿ ಸಾರೋಕೆ ನಿಮಗೆ ಸಮಯ ಇಲ್ಲದೆ ಹೋಗಿಬಿಡುತ್ತೆ. ಹೆಚ್ಚು ಹಣ ಸಂಪಾದನೆ ಮಾಡೋಕೆ ಅಥವಾ ಕೆಲಸ ಕಳಕೊಳ್ಳದೆ ಇರೋಕೆ ನೀವು ಕೆಲಸದ ಹಿಂದೆನೇ ಹೋಗಬೇಕಾಗುತ್ತೆ. ಹೀಗಾದಾಗ ನೀವು ಕೂಟಗಳನ್ನ ತಪ್ಪಿಸಬೇಕಾಗುತ್ತೆ. ಇದರಿಂದ ಯೆಹೋವನ ಸೇವೆನ ಜಾಸ್ತಿ ಮಾಡೋ ಅವಕಾಶ ಕಳೆದುಕೊಳ್ಳುತ್ತೀರಿ.

5. ಚಾರ್ಲ್ಸ್‌ ಮತ್ತು ಮರಿಯ ಅವರ ಅನುಭವದಿಂದ ನೀವು ಏನು ಕಲಿತ್ರಿ?

5 ಹಣ-ಆಸ್ತಿಯಿಂದ ಯಾವಾಗಲೂ ಖುಷಿ ಸಿಗಲ್ಲ ಅನ್ನೋಕೆ ನಮ್ಮ ಕಣ್ಮುಂದೆ ತುಂಬಾ ಸಾಕ್ಷಿಗಳಿವೆ. ಸಹೋದರ ಚಾರ್ಲ್ಸ್‌ ಮತ್ತು ಮರಿಯ ಅವರ ಉದಾಹರಣೆ ನೋಡೋಣ. * ಅವರ ಜೀವನ ಚೆನ್ನಾಗಿರಬೇಕು ಅಂತ ಮದುವೆಯಾದ ಹೊಸದ್ರಲ್ಲಿ ಅವರು ಚೆನ್ನಾಗಿ ದುಡಿದು ಹಣ ಸಂಪಾದನೆ ಮಾಡಿದ್ರು. ಆದ್ರೆ ಅವರ ಜೀವನದಲ್ಲಿ ಖುಷಿನೇ ಇರಲಿಲ್ಲ. ಚಾರ್ಲ್ಸ್‌ ಹೀಗೆ ಹೇಳ್ತಾರೆ: “ನನಗೆ ಜೀವನ ಮಾಡೋಕೆ ಬೇಕಾಗಿದ್ದ ಎಲ್ಲಾ ವಸ್ತುಗಳು ಇತ್ತು, ಆದ್ರೆ ಯೆಹೋವ ದೇವರ ಸೇವೆಯಲ್ಲಿ ಯಾವ ಗುರಿನೂ ಇರಲಿಲ್ಲ. ಇದರಿಂದ ನಮ್ಮ ಜೀವನದಲ್ಲಿ ಬರೀ ಚಿಂತೆ, ಒತ್ತಡನೇ ತುಂಬಿತ್ತು.” ಹಣ-ಆಸ್ತಿ ಹಿಂದೆ ಹೋಗಿ ಸಂತೋಷ ಕಳಕೊಂಡಿರೋ ಎಷ್ಟೋ ಜನರನ್ನ ನೀವು ನೋಡಿರಬಹುದು. ಆದರೆ ದೇವರ ಸೇವೆಗೆ ಮೊದಲ ಸ್ಥಾನ ಕೊಟ್ಟು ಖುಷಿಖುಷಿಯಾಗಿ ಇರುವವರೂ ಇದ್ದಾರೆ. ಇಂಥವರನ್ನ ನೋಡಿ ನೀವು ಕಲಿಯಬಹುದು. ನಾವೀಗ ಮೊದಲು ರಾಜ ಯೆಹೋಷಾಫಾಟನ ಉದಾಹರಣೆಯಿಂದ ಕುಟುಂಬದ ಯಜಮಾನ್ರು ಏನು ಕಲಿಯಬಹುದು ಅಂತ ನೋಡೋಣ.

ರಾಜ ಯೆಹೋಷಾಫಾಟನ ತರ ಯೆಹೋವನ ಮೇಲೆ ಭರವಸೆ ಇಡಿ

6. ಯೆಹೋಷಾಫಾಟನಿಗೆ ಒಂದು ದೊಡ್ಡ ಸಮಸ್ಯೆ ಬಂದಾಗ ಏನು ಮಾಡಿದ? (ಜ್ಞಾನೋಕ್ತಿ 3:5, 6)

6 ಕುಟುಂಬದ ಯಜಮಾನರೇ, ತುಂಬ ಜವಾಬ್ದಾರಿಗಳು ನಿಮ್ಮ ಹೆಗಲೇರಿ ಕೂತಿದ್ಯಾ? ಹಾಗಿದ್ರೆ ಯೆಹೋಷಾಫಾಟನಿಂದ ಏನು ಕಲಿಬಹುದು ಅಂತ ನೋಡೋಣ. ರಾಜ ಯೆಹೋಷಾಫಾಟನ ಹೆಗಲ ಮೇಲೆ ಇಡೀ ರಾಜ್ಯದ ಜವಾಬ್ದಾರಿ ಇತ್ತು. ಅವನು ತನ್ನ ರಾಜ್ಯದ ಪ್ರಜೆಗಳನ್ನ ಚೆನ್ನಾಗಿ ನೋಡ್ಕೊಳ್ಳೋಕೆ ಏನು ಮಾಡಿದ? ಯೆಹೂದದ ಪಟ್ಟಣಗಳ ಸುತ್ತ ಭದ್ರವಾದ ಕೋಟೆ ಕಟ್ಟಿದ. ಅಷ್ಟೇ ಅಲ್ಲ 11,60,000ಕ್ಕೂ ಜಾಸ್ತಿ ಸೈನಿಕರಿರೋ ಒಂದು ದೊಡ್ಡ ಸೈನ್ಯ ಕಟ್ಟಿದ. (2 ಪೂರ್ವ. 17:12-19) ಆಮೇಲೆ ಯೆಹೋಷಾಫಾಟನಿಗೆ ಒಂದು ದೊಡ್ಡ ಸಮಸ್ಯೆ ಬಂತು. ಅವನ ವಿರುದ್ಧ ಅಮ್ಮೋನಿಯರು, ಮೋವಾಬ್ಯರು ಮತ್ತು ಸೇಯೀರ್‌ ಬೆಟ್ಟ ಪ್ರದೇಶದಿಂದ ತುಂಬ ಜನ ಯುದ್ಧಕ್ಕೆ ಬಂದ್ರು. ಆಗ ರಾಜನಿಗೂ, ಅವನ ಕುಟುಂಬಕ್ಕೂ, ಅವನ ಪ್ರಜೆಗಳಿಗೂ ತುಂಬ ಭಯ ಆಯ್ತು. (2 ಪೂರ್ವ. 20:1, 2) ಆಗ ಯೆಹೋಷಾಫಾಟ ಏನು ಮಾಡಿದ? ಜ್ಞಾನೋಕ್ತಿ 3:5, 6ರಲ್ಲಿ ಹೇಳೋ ತರ ಯೆಹೋವನ ಮೇಲೆ ಭರವಸೆ ಇಟ್ಟ. (ಓದಿ.) ಆತನ ಹತ್ರ ಸಹಾಯಕ್ಕಾಗಿ, ಬಲಕ್ಕಾಗಿ ದೀನತೆಯಿಂದ ಬೇಡಿಕೊಂಡ. ಅವನು ಮಾಡಿದ ಪ್ರಾರ್ಥನೆ 2 ಪೂರ್ವಕಾಲವೃತ್ತಾಂತ 20:5-12ರಲ್ಲಿ ಇದೆ. ಅವನು ತನ್ನ ಸ್ವಂತ ಬುದ್ಧಿ ಮೇಲಲ್ಲ ದೇವರ ಮೇಲೆ ಆತುಕೊಂಡ ಅಂತ ಈ ಪ್ರಾರ್ಥನೆಯಿಂದ ಗೊತ್ತಾಗುತ್ತೆ. ಯೆಹೋಷಾಫಾಟನ ಪ್ರಾರ್ಥನೆಗೆ ಯೆಹೋವ ದೇವರು ಉತ್ತರ ಕೊಟ್ಟನಾ?

7. ಯೆಹೋಷಾಫಾಟನ ಪ್ರಾರ್ಥನೆಗೆ ಯೆಹೋವ ಹೇಗೆ ಉತ್ತರ ಕೊಟ್ಟನು?

7 ಪ್ರವಾದಿ ಯಹಜೀಯೇಲನ ಮೂಲಕ ಯೆಹೋಷಾಫಾಟನಿಗೆ ಯೆಹೋವ ಹೇಳಿದ್ದು: “ನೀವು ನಿಮ್ಮ ಜಾಗದಲ್ಲಿ ಸ್ಥಿರವಾಗಿ ನಿಂತು ಯೆಹೋವ ನಿಮ್ಮನ್ನ ಹೇಗೆ ಕಾಪಾಡ್ತಾನೆ ಅನ್ನೋದನ್ನ ನೋಡಿ.” (2 ಪೂರ್ವ. 20:13-17) ಈ ತರ ಯಾರೂ ಯುದ್ಧ ಮಾಡಲ್ಲ, ಆದ್ರೆ ಈ ತರಾನೇ ಯುದ್ಧ ಮಾಡಿ ಅಂತ ಯೆಹೋವ ಹೇಳಿದನು. ಆಗ ಯೆಹೋಷಾಫಾಟ ಯೆಹೋವನ ಮೇಲೆ ಪೂರ್ತಿ ಭರವಸೆ ಇಟ್ಟು ಅದೇ ತರ ಮಾಡಿದ. ಯುದ್ಧಕ್ಕೆ ಹೋಗುವಾಗ ಸೈನ್ಯದ ಮುಂದಿನ ಸಾಲಲ್ಲಿ ಯುದ್ಧವೀರರನ್ನ ನಿಲ್ಲಿಸಲಿಲ್ಲ, ಬದಲಿಗೆ ಗಾಯಕರನ್ನ ನಿಲ್ಲಿಸಿದ. ಅವರ ಹತ್ರ ಯಾವ ಆಯುಧನೂ ಇರಲಿಲ್ಲ. ಯೆಹೋಷಾಫಾಟ ಯುದ್ಧದಲ್ಲಿ ಗೆದ್ದನಾ? ಹೌದು, ಶತ್ರು ಸೈನ್ಯವನ್ನ ಯೆಹೋವ ಸೋಲಿಸಿಬಿಟ್ಟನು, ಕೊಟ್ಟ ಮಾತನ್ನ ಉಳಿಸಿಕೊಂಡನು.—2 ಪೂರ್ವ. 20:18-23.

ಪ್ರಾರ್ಥನೆ ಮತ್ತು ಬೈಬಲ್‌ ಅಧ್ಯಯನ ದೇವರ ಸೇವೆನ ಜಾಸ್ತಿ ಮಾಡೋಕೆ ಸಹಾಯ ಮಾಡುತ್ತೆ (ಪ್ಯಾರ 8, 10 ನೋಡಿ)

8. ಕುಟುಂಬದ ಯಜಮಾನರು ಯೆಹೋಷಾಫಾಟನ ಉದಾಹರಣೆಯಿಂದ ಏನು ಕಲಿಯಬಹುದು?

8 ಕುಟುಂಬದ ಯಜಮಾನರೇ, ಯೆಹೋಷಾಫಾಟನಿಂದ ನೀವೇನು ಕಲಿಬಹುದು? ಕುಟುಂಬ ನೋಡ್ಕೊಳ್ಳೋ ಜವಾಬ್ದಾರಿ ನಿಮ್ದು. ಅದಕ್ಕಾಗಿ ನೀವು ತುಂಬ ಕಷ್ಟಪಟ್ಟು ಕೆಲಸ ಮಾಡ್ತಿದ್ದೀರ. ಇಂಥ ಸಮಯದಲ್ಲಿ ಸಮಸ್ಯೆಗಳು ಬಂದಾಗ ‘ಅದನ್ನ ನಾನೇ ಸರಿ ಮಾಡ್ತೀನಿ’ ಅಂತ ಮುಂದೆ ಹೋದ್ರೆ ಅದು ಮೂರ್ಖತನ. ಹಾಗಾಗಿ ಮನಸ್ಸಿಗೆ ತೋಚಿದ ಹಾಗೆ ಸಮಸ್ಯೆಯನ್ನ ಬಗೆಹರಿಸೋಕೆ ಹೋಗಬೇಡಿ. ಬದಲಿಗೆ ಯೆಹೋವನಿಗೆ ಪ್ರಾರ್ಥನೆ ಮಾಡಿ. ಅಷ್ಟೇ ಅಲ್ಲ, ನಿಮ್ಮ ಹೆಂಡತಿ ಜೊತೆ ಕೂತು ಮನಬಿಚ್ಚಿ ಪ್ರಾರ್ಥನೆ ಮಾಡಿ. ಬೈಬಲನ್ನ ಮತ್ತು ನಮ್ಮ ಸಂಘಟನೆ ಕೊಡೋ ಪ್ರಕಾಶನಗಳನ್ನ ಅಧ್ಯಯನ ಮಾಡಿ. ಅದರಲ್ಲಿರೋ ಸಲಹೆಗಳ ಪ್ರಕಾರ ತೀರ್ಮಾನಗಳನ್ನ ತಗೊಳ್ಳಿ. ಈ ರೀತಿ ತೀರ್ಮಾನ ತಗೊಂಡಾಗ ನಿಮ್ಮ ಕುಟುಂಬದವರು, ನಿಮ್ಮ ಸ್ನೇಹಿತರು ಅದನ್ನ ಕೆಲವೊಮ್ಮೆ ಇಷ್ಟಪಡಲ್ಲ. ನಿಮ್ಮನ್ನ ‘ದಡ್ಡ, ಬುದ್ಧಿ ಇಲ್ಲದವನು’ ಅಂತ ಅವಮಾನ ಮಾಡಬಹುದು. ‘ಹೆಂಡತಿ ಮಕ್ಕಳು ಚೆನ್ನಾಗಿರಬೇಕಂದ್ರೆ ನಿಮ್ಮ ಜೇಬು ತುಂಬ ದುಡ್ಡು ಇರಬೇಕು’ ಅಂತ ಹೇಳಬಹುದು. ಆಗ ಯೆಹೋಷಾಫಾಟನನ್ನ ನೆನಪಿಸಿಕೊಳ್ಳಿ. ಅವನು ಯೆಹೋವನ ಮೇಲೆ ಪೂರ್ತಿ ಭರವಸೆ ಇಟ್ಟು ಆತನು ಹೇಳಿದ ಹಾಗೇ ಮಾಡಿದ. ತನಗೆ ನಿಯತ್ತಾಗಿದ್ದ ಯೆಹೋಷಾಫಾಟನನ್ನ ದೇವರು ಕೈ ಬಿಡಲಿಲ್ಲ. ಅದೇ ತರ ದೇವರು ನಿಮ್ಮ ಕೈಯನ್ನೂ ಬಿಡಲ್ಲ. (ಕೀರ್ತ. 37:28; ಇಬ್ರಿ. 13:5) ಜೀವನದಲ್ಲಿ ಖುಷಿಖುಷಿಯಾಗಿ ಇರೋಕೆ ಗಂಡ ಹೆಂಡತಿ ಜೊತೆಯಾಗಿ ಏನು ಮಾಡಬಹುದು?

ಯೆಶಾಯ ಮತ್ತು ಅವನ ಹೆಂಡತಿ ತರ ಯೆಹೋವನ ಸೇವೆಗೆ ಮೊದಲ ಸ್ಥಾನ ಕೊಡಿ

9. ಪ್ರವಾದಿ ಯೆಶಾಯ ಮತ್ತು ಅವನ ಹೆಂಡತಿ ಜೀವನ ಹೇಗಿತ್ತು?

9 ಪ್ರವಾದಿ ಯೆಶಾಯ ಮತ್ತು ಅವನ ಹೆಂಡತಿಗೆ ಜೀವನದಲ್ಲಿ ಯೆಹೋವನ ಸೇವೆನೇ ಮುಖ್ಯವಾಗಿತ್ತು. ಯೆಶಾಯ ಪ್ರವಾದಿಯಾಗಿದ್ದ, ಅವನ ಹೆಂಡತಿಯನ್ನ ಬೈಬಲ್‌ “ಪ್ರವಾದಿನಿ” ಅಂತ ಹೇಳುತ್ತೆ. ಹಾಗಾಗಿ ಅವಳಿಗೂ ಭವಿಷ್ಯವಾಣಿ ಹೇಳೋ ನೇಮಕ ಇದ್ದಿರಬೇಕು. (ಯೆಶಾ. 8:1-4) ಯೆಶಾಯ ಮತ್ತು ಅವನ ಹೆಂಡತಿ ಯೆಹೋವನ ಸೇವೆಗೆ ಮೊದಲ ಸ್ಥಾನ ಕೊಟ್ರು ಅಂತ ಇದರಿಂದ ಗೊತ್ತಾಗುತ್ತೆ. ಅವರು ಇವತ್ತಿರೋ ದಂಪತಿಗಳಿಗೆ ಒಳ್ಳೆ ಮಾದರಿ ಆಗಿದ್ದಾರೆ.

10. ಯೆಹೋವನ ಸೇವೆನ ಇನ್ನೂ ಜಾಸ್ತಿ ಮಾಡೋಕೆ ದಂಪತಿಗಳಿಗೆ ಬೈಬಲ್‌ ಭವಿಷ್ಯವಾಣಿಗಳು ಹೇಗೆ ಸಹಾಯ ಮಾಡುತ್ತೆ?

10 ಯೆಶಾಯ ಮತ್ತು ಅವನ ಹೆಂಡತಿ ತರ ಇವತ್ತು ದಂಪತಿಗಳು ತಮ್ಮ ಜೀವನದಲ್ಲಿ ಯೆಹೋವನ ಸೇವೆಗೆ ಮೊದಲ ಸ್ಥಾನ ಕೊಡೋಕೆ ತಮ್ಮಿಂದ ಆಗೋದೆಲ್ಲ ಮಾಡಬೇಕು. ಅದಕ್ಕಾಗಿ ಅವರು ಯೆಹೋವನ ಮೇಲೆ ಭರವಸೆ ಬೆಳೆಸಿಕೊಳ್ಳೋಕೆ ಬೈಬಲ್‌ ಭವಿಷ್ಯವಾಣಿಗಳ ಬಗ್ಗೆ ಅಧ್ಯಯನ ಮಾಡಬೇಕು. * (ತೀತ 1:2) ಒಂದೊಂದು ಭವಿಷ್ಯವಾಣಿ ಬಗ್ಗೆ ಅಧ್ಯಯನ ಮಾಡುವಾಗಲೂ ಅದರಲ್ಲಿ ತಮ್ಮ ಪಾಲು ಎಷ್ಟಿದೆ ಅಂತನೂ ಯೋಚನೆ ಮಾಡಬೇಕು. ಉದಾಹರಣೆಗೆ ಅಂತ್ಯ ಬರೋ ಮುಂಚೆ ಇಡೀ ಲೋಕದಲ್ಲಿ ಸಿಹಿಸುದ್ದಿ ಸಾರಲಾಗುತ್ತೆ ಅಂತ ಯೇಸು ಹೇಳಿದ ಭವಿಷ್ಯವಾಣಿಯ ನೆರವೇರಿಕೆಯಲ್ಲಿ ಅವರಿಗೂ ಪಾಲಿದೆ. (ಮತ್ತಾ. 24:14) ಈ ಭವಿಷ್ಯವಾಣಿ ಹೇಗೆಲ್ಲ ನೆರವೇರುತ್ತಿದೆ ಅಂತ ಅವರು ಅರ್ಥ ಮಾಡ್ಕೊಂಡಾಗ ಇನ್ನೂ ಜಾಸ್ತಿ ಸೇವೆ ಮಾಡಬೇಕು ಅಂತ ಅವರಿಗೆ ಪ್ರೋತ್ಸಾಹ ಸಿಗುತ್ತೆ.

ಅಕ್ವಿಲ-ಪ್ರಿಸ್ಕಿಲ್ಲ ತರ ದೇವರ ಸೇವೆ ಮಾಡೋ ಗುರಿ ಇಡಿ

11. ಅಕ್ವಿಲ-ಪ್ರಿಸ್ಕಿಲ್ಲ ಏನು ಮಾಡಿದ್ರು ಮತ್ತು ಯಾಕೆ?

11 ಇವತ್ತು ಇರೋ ನವದಂಪತಿಗಳಿಗೆ ಅಕ್ವಿಲ-ಪ್ರಿಸ್ಕಿಲ್ಲ ಒಳ್ಳೆ ಮಾದರಿ ಆಗಿದ್ದಾರೆ. ಅವರು ಯೆಹೂದ್ಯರಾಗಿದ್ರು, ರೋಮ್‌ ಪಟ್ಟಣದಲ್ಲಿ ವಾಸವಾಗಿದ್ರು. ಯೇಸು ಬಗ್ಗೆ ಸಿಹಿಸುದ್ದಿ ಕೇಳಿಸಿಕೊಂಡ ಮೇಲೆ ಕ್ರೈಸ್ತರಾದ್ರು. ರೋಮ್‌ನಲ್ಲಿ ಅವರ ಜೀವನ ಚೆನ್ನಾಗಿತ್ತು, ಆರಾಮಾಗಿದ್ರು. ಆದ್ರೆ ರೋಮಿನ ರಾಜ ಕ್ಲೌದಿಯ ಯೆಹೂದ್ಯರೆಲ್ಲ ರೋಮ್‌ನ ಬಿಟ್ಟುಹೋಗಬೇಕು ಅಂತ ನಿಯಮ ಜಾರಿಗೆ ತಂದಾಗ ಅವರ ಜೀವನ ತಲೆಕೆಳಗಾಯಿತು. ಆಗ ಅಕ್ವಿಲ-ಪ್ರಿಸ್ಕಿಲ್ಲಗೆ ತುಂಬ ಕಷ್ಟ ಆಯ್ತು. ಯಾಕಂದ್ರೆ ಅವರು ಇಷ್ಟು ದಿನ ಇದ್ದ ಊರನ್ನ, ಮನೆಯನ್ನ ಬಿಟ್ಟು ಬೇರೆ ಕಡೆ ಹೋಗಬೇಕಾಗಿತ್ತು. ಒಂದು ಹೊಸ ಜಾಗದಲ್ಲಿ ಹೊಸ ಮನೆ ಹುಡುಕಬೇಕಾಗಿತ್ತು. ಅಲ್ಲಿ ಡೇರೆ ಹೊಲಿಯುವ ಕೆಲಸನ ಮತ್ತೆ ಶುರು ಮಾಡಬೇಕಾಗಿತ್ತು. ಇಷ್ಟೆಲ್ಲಾ ಕಷ್ಟ ಬಂದಾಗ ಅವರು ಯೆಹೋವನ ಸೇವೆನ ಕಮ್ಮಿ ಮಾಡಿಬಿಟ್ರಾ? ಇಲ್ಲ! ಅವರು ಕೊರಿಂಥದಲ್ಲಿ ಮನೆ ಮಾಡ್ಕೊಂಡ ಮೇಲೂ ಅಲ್ಲಿರೋ ಸಭೆಯವರ ಜೊತೆ ಸೇರಿ ಚೆನ್ನಾಗಿ ಸೇವೆ ಮಾಡಿದ್ರು. ಅಪೊಸ್ತಲ ಪೌಲನ ಜೊತೆ ಸೇರಿ ಸಹೋದರರನ್ನ ಬಲಪಡಿಸಿದ್ರು. ಆಮೇಲೆ ಹೆಚ್ಚು ಅಗತ್ಯ ಇದ್ದ ಬೇರೆ ಬೇರೆ ಪಟ್ಟಣಗಳಿಗೂ ಹೋಗಿ ಸಿಹಿಸುದ್ದಿ ಸಾರಿದ್ರು. (ಅ. ಕಾ. 18:18-21; ರೋಮ. 16:3-5) ಈ ರೀತಿ ಯೆಹೋವನ ಸೇವೆಗೆ ತಮ್ಮ ಜೀವನವನ್ನ ಮುಡಿಪಾಗಿಟ್ಟಾಗ ಅವರು ಎಷ್ಟು ಸಂತೋಷವಾಗಿ ಇದ್ದಿರಬೇಕಲ್ವಾ?

12. ನವದಂಪತಿಗಳು ಯಾಕೆ ಯೆಹೋವನ ಸೇವೆಯನ್ನ ಜಾಸ್ತಿ ಮಾಡೋ ಗುರಿ ಇಡಬೇಕು?

12 ದೇವರ ಸೇವೆಗೆ ಮೊದಲ ಸ್ಥಾನ ಕೊಡೋ ವಿಷಯದಲ್ಲಿ ಅಕ್ವಿಲ-ಪ್ರಿಸ್ಕಿಲ್ಲ ನವದಂಪತಿಗಳಿಗೆ ಒಳ್ಳೆ ಮಾದರಿ. ಮದುವೆ ಆಗೋ ಗಂಡು-ಹೆಣ್ಣು ಮುಂಚೆನೇ ತಮ್ಮ ಗುರಿಗಳ ಬಗ್ಗೆ ಮಾತಾಡೋದು ಒಳ್ಳೇದು. ಅವರಿಬ್ಬರೂ ಸೇರಿ ದೇವರ ಸೇವೆಯಲ್ಲಿ ಗುರಿ ಇಟ್ಟು, ಅದನ್ನ ಮುಟ್ಟೋಕೆ ತಮ್ಮಿಂದ ಆಗೋದೆಲ್ಲ ಮಾಡಿದಾಗ ಯೆಹೋವ ದೇವರು ಅವರನ್ನ ಆಶೀರ್ವದಿಸ್ತಾನೆ. (ಪ್ರಸಂ. 4:9, 12) ನಾವೀಗ ರಸೆಲ್‌ ಮತ್ತು ಎಲಿಸಬೆತ್‌ ಅವರ ಅನುಭವ ನೋಡೋಣ. ರಸೆಲ್‌ ಹೇಳೋದು, “ಯೆಹೋವನ ಸೇವೆಯಲ್ಲಿ ಯಾವ್ಯಾವ ಗುರಿ ಇಡಬೇಕು ಅಂತ ಮದುವೆಗೆ ಮುಂಚೆನೇ ಮಾತಾಡಿಕೊಂಡ್ವಿ.” ಎಲಿಸಬೆತ್‌ ಹೀಗೆ ಹೇಳ್ತಾರೆ, “ಈ ರೀತಿ ಮುಂಚೆನೇ ಮಾತಾಡಿಕೊಂಡಿದ್ರಿಂದ ಮದುವೆ ಆದಮೇಲೆ ಆ ಗುರಿ ಮುಟ್ಟೋಕೆ ಏನೇ ಅಡೆತಡೆ ಬಂದ್ರೂ ನಾವು ಬಿಟ್ಟುಕೊಡ್ಲಿಲ್ಲ.” ಹೀಗೆ ಅವರು ಮೊದಲೇ ನಿರ್ಧಾರ ತಗೊಂಡಿದ್ರಿಂದ ಮೈಕ್ರೋನೇಷಿಯಾ ದೇಶಕ್ಕೆ ಹೋಗಿ ಸೇವೆ ಮಾಡ್ತಿದ್ದಾರೆ. ಯಾಕಂದ್ರೆ ಅಲ್ಲಿ ಪ್ರಚಾರಕರು ಕಮ್ಮಿ ಇದ್ದಾರೆ.

ಗುರಿಗಳನ್ನ ಇಡೋದು ದೇವರ ಸೇವೆನ ಜಾಸ್ತಿ ಮಾಡೋಕೆ ಸಹಾಯ ಮಾಡುತ್ತೆ (ಪ್ಯಾರ 13 ನೋಡಿ)

13. ಕೀರ್ತನೆ 28:7ರ ಪ್ರಕಾರ ಯೆಹೋವನ ಮೇಲೆ ಭರವಸೆ ಇಟ್ರೆ ಯಾವ ಆಶೀರ್ವಾದಗಳು ಸಿಗುತ್ತೆ?

13 ರಸೆಲ್‌ ಮತ್ತು ಎಲಿಸಬೆತ್‌ ತರ ಇವತ್ತು ಅನೇಕ ದಂಪತಿಗಳು ಯೆಹೋವನ ಸೇವೆಗೆ ಮೊದಲ ಸ್ಥಾನ ಕೊಟ್ಟಿದ್ದಾರೆ. ಅದಕ್ಕೋಸ್ಕರ ತಮ್ಮ ಜೀವನವನ್ನ ಸರಳವಾಗಿ ಇಟ್ಕೊಂಡಿದ್ದಾರೆ. ಸಾರೋಕೆ, ಕಲಿಸೋಕೆ ತಮ್ಮ ಸಮಯನೆಲ್ಲಾ ಧಾರೆಯೆರೆದಿದ್ದಾರೆ. ಹೀಗೆ ಯೆಹೋವ ಸೇವೆನ ಜಾಸ್ತಿ ಮಾಡೋ ಗುರಿ ಇಟ್ಟಿರೋದರಿಂದ ಜೀವನದಲ್ಲಿ ತುಂಬ ಆಶೀರ್ವಾದ ಪಡಕೊಂಡಿದ್ದಾರೆ. ಅದೇನಂದರೆ, ಯೆಹೋವ ದೇವರು ಅವರನ್ನ ಎಷ್ಟು ಚೆನ್ನಾಗಿ ನೋಡಿಕೊಳ್ತಿದ್ದಾರೆ ಅಂತ ಸವಿದು ನೋಡಿದ್ದಾರೆ. ಅವರು ಯೆಹೋವನ ಮೇಲೆ ಇನ್ನೂ ಜಾಸ್ತಿ ನಂಬಿಕೆ ಬೆಳೆಸಿಕೊಂಡಿದ್ದಾರೆ, ಖುಷಿಖುಷಿಯಾಗಿ ಸೇವೆ ಮಾಡ್ತಿದ್ದಾರೆ.ಕೀರ್ತನೆ 28:7 ಓದಿ.

ಪೇತ್ರ ಮತ್ತು ಅವನ ಹೆಂಡತಿ ತರ ಯೆಹೋವನ ಮಾತಿನ ಮೇಲೆ ಭರವಸೆ ಇಡಿ

14. ಮತ್ತಾಯ 6:25, 31-34ರಲ್ಲಿರೋ ಮಾತನ್ನ ಪೂರ್ತಿ ನಂಬಿದ್ದರು ಅಂತ ಪೇತ್ರ ಮತ್ತು ಅವನ ಹೆಂಡತಿ ಹೇಗೆ ತೋರಿಸಿಕೊಟ್ರು?

14 ಹೊಸದಾಗಿ ಮದುವೆ ಆದವರು ಪೇತ್ರ ಮತ್ತು ಅವನ ಹೆಂಡತಿಯಿಂದ ಕೆಲವು ಪಾಠಗಳನ್ನ ಕಲಿಯಬಹುದು. ಯೇಸು ಪೇತ್ರನನ್ನ ಭೇಟಿಯಾಗಿ ಸುಮಾರು ಆರು ತಿಂಗಳಾದ ಮೇಲೆ ಪುನಃ ಭೇಟಿ ಆದನು. ಆಗ ‘ನೀನು ಇವತ್ತಿಂದ ನನ್ನ ಜೊತೆ ಸಿಹಿಸುದ್ದಿ ಸಾರೋಕೆ ಬಾ’ ಅಂತ ಯೇಸು ಕರೆದನು. ಪೇತ್ರನಿಗೆ ಕುಟುಂಬ ಇತ್ತು, ಅದನ್ನ ನೋಡ್ಕೊಳ್ಳೋಕೆ ಮೀನುಗಾರನಾಗಿ ಕೆಲಸ ಮಾಡ್ತಿದ್ದ. (ಲೂಕ 5:1-11) ಆದ್ರೂ ಅವನು ಯೇಸು ಜೊತೆ ಸಿಹಿಸುದ್ದಿ ಸಾರೋಕೆ ಹೋದ. ಅವನು ಸರಿಯಾದ ತೀರ್ಮಾನನೇ ಮಾಡಿದ. ಅವನ ಹೆಂಡತಿ ಕೂಡ ಅವನಿಗೆ ಸಾಥ್‌ ಕೊಟ್ಟಳು. ಅಷ್ಟೇ ಅಲ್ಲ ಯೇಸುವಿನ ಪುನರುತ್ಥಾನ ಆದಮೇಲೂ ಪೇತ್ರ ಬೇರೆಬೇರೆ ಊರಿಗೆ ಹೋಗಿ ಸಿಹಿಸುದ್ದಿ ಸಾರುತ್ತಿದ್ದಾಗ ಅವನ ಹೆಂಡತಿನೂ ಜೊತೆಗಿದ್ದಳು. (1 ಕೊರಿಂ. 9:5) ಪೇತ್ರನ ಹೆಂಡತಿ ಒಳ್ಳೆ ಮಾದರಿ ಇಟ್ಟಿದ್ರಿಂದ ಗಂಡ-ಹೆಂಡತಿ ಹೇಗಿರಬೇಕು ಅಂತ ಸಭೆಗಳಿಗೆ ಸಲಹೆ ಕೊಡೋಕೆ ಪೇತ್ರನಿಗೆ ಆಯ್ತು. (1 ಪೇತ್ರ 3:1-7) ತಮ್ಮ ಜೀವನದಲ್ಲಿ ಯೆಹೋವನಿಗೆ ಮೊದಲ ಸ್ಥಾನ ಕೊಟ್ರೆ ಯೆಹೋವ ತಮಗೆ ಬೇಕಾಗಿರೋದನ್ನೆಲ್ಲಾ ಖಂಡಿತ ಕೊಡ್ತಾನೆ ಅಂತ ಪೇತ್ರ ಮತ್ತು ಅವನ ಹೆಂಡತಿ ಪೂರ್ತಿ ನಂಬಿಕೆ ಇಟ್ಟಿದ್ದರು.ಮತ್ತಾಯ 6:25, 31-34 ಓದಿ.

15. ಟಿಯಾಗೋ ಮತ್ತು ಎಸ್ತೆರ್‌ ಅವರ ಅನುಭವದಿಂದ ನೀವೇನು ಕಲಿತ್ರಿ?

15 ನಿಮಗೆ ಮದುವೆಯಾಗಿ ಸ್ವಲ್ಪ ವರ್ಷಗಳು ಆಗಿದ್ಯಾ? ಮದುವೆಯಾದ ಹೊಸದ್ರಲ್ಲಿ ನಿಮಗೆ ಜಾಸ್ತಿ ದೇವರ ಸೇವೆ ಮಾಡಬೇಕು ಅನ್ನೋ ಆಸೆ ಇದ್ದಿರಬಹುದು. ಆ ಆಸೆಯನ್ನ ಈಗ ಪುನಃ ಬೆಳೆಸಿಕೊಳ್ಳೋಕೆ ನೀವು ಏನು ಮಾಡಬಹುದು? ಬೇರೆ ದಂಪತಿಗಳ ಅನುಭವದಿಂದ ಕಲಿಯಿರಿ. ಉದಾಹರಣೆಗೆ, “ತಮ್ಮನ್ನು ಮನಃಪೂರ್ವಕವಾಗಿ ನೀಡಿಕೊಂಡರು” ಅನ್ನೋ ಸರಣಿ ಲೇಖನಗಳನ್ನ ಓದಿ. ಬ್ರೆಜಿಲ್‌ನಲ್ಲಿದ್ದ ಟಿಯಾಗೋ ಮತ್ತು ಎಸ್ತೆರ್‌ ದಂಪತಿಗೆ ಈ ಲೇಖನಗಳು ಸಹಾಯ ಮಾಡ್ತು. ಅಗತ್ಯ ಇರೋ ಕಡೆ ಹೋಗಿ ಸೇವೆ ಮಾಡೋ ಅವರ ಆಸೆಯನ್ನ ಜಾಸ್ತಿ ಮಾಡ್ತು. ಟಿಯಾಗೋ ಹೇಳ್ತಾರೆ, “ಯೆಹೋವ ದೇವರ ಸೇವೆನ ಜಾಸ್ತಿ ಮಾಡಬೇಕು ಅಂತ ಆಸೆ ಇರುವವರಿಗೆ ದೇವರು ಹೇಗೆಲ್ಲಾ ಸಹಾಯ ಮಾಡಿದ್ದಾರೆ ಅಂತ ನಾವು ಆ ಲೇಖನಗಳನ್ನ ಓದಿ ತಿಳ್ಕೊಂಡ್ವಿ. ಆಗ ನಮಗೂ ದೇವರ ಪ್ರೀತಿ, ಕಾಳಜಿಯನ್ನ ಅನುಭವಿಸಿ ನೋಡಬೇಕಂತ ಆಸೆ ಆಯ್ತು.” ಟಿಯಾಗೋ ಮತ್ತು ಎಸ್ತೆರ್‌ ಪರಾಗ್ವೆ ದೇಶಕ್ಕೆ ಹೋದ್ರು. 2014ರಿಂದ ಅಲ್ಲಿನ ಪೋರ್ಚುಗೀಸ್‌ ಭಾಷೆಯ ಸಭೆಯಲ್ಲಿ ಸೇವೆ ಮಾಡ್ತಿದ್ದಾರೆ. ಎಸ್ತೆರ್‌ ಹೇಳೋದು, “ನಮ್ಮಿಬ್ಬರಿಗೂ ಎಫೆಸ 3:20ನೇ ವಚನ ತುಂಬ ಇಷ್ಟ. ಅಲ್ಲಿರೋ ಮಾತು ನಮ್ಮ ಜೀವನದಲ್ಲಿ ಎಷ್ಟೋ ಸಲ ನಿಜ ಆಗಿದೆ.” ಆ ವಚನ ಹೇಳೋ ಹಾಗೆ ಯೆಹೋವ ನಮಗೆ ಕೇಳೋದಕ್ಕಿಂತ ಜಾಸ್ತಿನೇ ಕೊಡ್ತಾನೆ. ಇದು ನೂರಕ್ಕೆ ನೂರು ಸತ್ಯ!

ಅನುಭವಸ್ಥರ ಸಲಹೆ ದೇವರ ಸೇವೆನ ಜಾಸ್ತಿ ಮಾಡೋಕೆ ಸಹಾಯ ಮಾಡುತ್ತೆ (ಪ್ಯಾರ 16 ನೋಡಿ)

16. ಹೊಸದಾಗಿ ಮದುವೆ ಆಗಿರುವವರಿಗೆ ತಮ್ಮ ಗುರಿಗಳನ್ನ ಮುಟ್ಟೋಕೆ ಯಾರಿಂದ ಸಲಹೆ ಸಿಗುತ್ತೆ?

16 ಯೆಹೋವ ದೇವರ ಮೇಲೆ ಭರವಸೆ ಇಟ್ಟು ಆತನ ಸೇವೆಯನ್ನ ಜಾಸ್ತಿ ಮಾಡಿದವರ ಅನುಭವಗಳು ನಮ್ಮ ಕಣ್ಮುಂದೆನೇ ಇದೆ. ಅವರಲ್ಲಿ ಎಷ್ಟೋ ದಂಪತಿಗಳು ಹತ್ತಾರು ವರ್ಷಗಳಿಂದ ಪೂರ್ಣ ಸಮಯದ ಸೇವೆ ಮಾಡ್ತಿದ್ದಾರೆ. ಹೊಸದಾಗಿ ಮದುವೆ ಆಗಿರುವವರು ಅವರನ್ನ ನೋಡಿ ಕಲಿಬಹುದು. ಅವರ ಹತ್ರ ತಮ್ಮ ಗುರಿಗಳ ಬಗ್ಗೆ ಮಾತಾಡಿ ಅವರ ಸಲಹೆ ಪಡ್ಕೊಬಹುದು. ಹೀಗೆ ಮಾಡಿದ್ರೆ ಯೆಹೋವ ದೇವರ ಮೇಲೆ ಅವರಿಗೆ ಭರವಸೆ ಇದೆ ಅಂತ ತೋರಿಸಿಕೊಟ್ಟ ಹಾಗೆ ಇರುತ್ತೆ. (ಜ್ಞಾನೋ. 22:17, 19) ಅಷ್ಟೇ ಅಲ್ಲ ಅವರ ಗುರಿ ಮುಟ್ಟೋಕೆ ಹಿರಿಯರು ಕೂಡ ಸಹಾಯ ಮಾಡ್ತಾರೆ.

17. (ಎ) ಚಾರ್ಲ್ಸ್‌ ಮತ್ತು ಮರಿಯಗೆ ಏನಾಯ್ತು? (ಬಿ) ಅವರ ಅನುಭವದಿಂದ ನಾವೇನು ಕಲಿತೀವಿ?

17 ಕೆಲವೊಂದು ಸಲ ನಾವು ಅಂದುಕೊಂಡ ಸೇವೆಯನ್ನ ಮಾಡಕ್ಕಾಗಲ್ಲ. ಚಾರ್ಲ್ಸ್‌ ಮತ್ತು ಮರಿಯ ಅವರ ಉದಾಹರಣೆಯನ್ನ ಮತ್ತೆ ನೋಡಿ. ಅವರು ಮದುವೆಯಾಗಿ ಮೂರು ವರ್ಷ ಆಗಿತ್ತು. ಆಗ ಅವರು ಕಟ್ಟಡ ನಿರ್ಮಾಣ ಕೆಲಸಕ್ಕೆ ಸ್ವಯಂ ಸೇವೆ ಮಾಡಬೇಕು ಅಂತೇಳಿ ಫಿನ್‌ಲೆಂಡ್‌ ಬ್ರಾಂಚಿಗೆ ಹೋದ್ರು. ಅಲ್ಲಿ ಅವರಿಗೆ ಆರು ತಿಂಗಳು ಮಾತ್ರ ಸೇವೆ ಮಾಡೋಕೆ ಅವಕಾಶ ಸಿಕ್ತು. ಆಗ ಸ್ವಲ್ಪ ಬೇಜಾರಾಯ್ತು. ಆದ್ರೆ ಸ್ವಲ್ಪ ಸಮಯ ಆದಮೇಲೆ ಅವರಿಗೆ ಅರೇಬಿಕ್‌ ಭಾಷೆ ಕಲಿಯೋ ಕ್ಲಾಸ್‌ಗೆ ಆಮಂತ್ರಣ ಸಿಕ್ತು. ಈಗ ಅವರು ಅರೇಬಿಕ್‌ ಭಾಷೆ ಮಾತಾಡೋ ದೇಶದಲ್ಲಿ ತುಂಬಾ ಖುಷಿಖುಷಿಯಾಗಿ ಸೇವೆ ಮಾಡ್ತಿದ್ದಾರೆ. ಮರಿಯ ಹೇಳೋದು, “ಹೊಸ ಹೊಸ ವಿಧದಲ್ಲಿ ಸೇವೆ ಮಾಡುವಾಗ ಮೊದಮೊದಲು ಭಯ ಆಗುತ್ತೆ. ಆದ್ರೆ ನಾವು ಯೆಹೋವ ದೇವರ ಮೇಲೆ ಪೂರ್ತಿ ನಂಬಿಕೆ ಇಡಬೇಕು. ಆಗ ಆತನು ನಮಗೆ ಸಹಾಯ ಮಾಡೇ ಮಾಡ್ತಾನೆ. ಆ ಸಹಾಯನ ನಾವು ಕನಸು-ಮನಸ್ಸಲ್ಲೂ ನೆನಸಿರಲ್ಲ. ಆಗ ದೇವರ ಮೇಲಿರೋ ನಂಬಿಕೆ ಇನ್ನೂ ಜಾಸ್ತಿ ಆಗುತ್ತೆ.” ಈ ಉದಾಹರಣೆಯಲ್ಲಿ ನೋಡಿದ ಹಾಗೆ ನಾವು ಯೆಹೋವನ ಮೇಲೆ ಪೂರ್ತಿ ಭರವಸೆ ಇಟ್ರೆ ಆತನು ನಮ್ಮನ್ನ ಖಂಡಿತ ಆಶೀರ್ವಾದ ಮಾಡ್ತಾನೆ.

18. ಗಂಡ-ಹೆಂಡತಿ ಯೆಹೋವನ ಮೇಲೆ ಇನ್ನೂ ಜಾಸ್ತಿ ನಂಬಿಕೆ ಬೆಳೆಸಿಕೊಳ್ಳೋಕೆ ಏನು ಮಾಡಬೇಕು?

18 ಮದುವೆ ಯೆಹೋವ ದೇವರು ಮಾಡಿದ ಏರ್ಪಾಡು. (ಮತ್ತಾ. 19:5, 6) ಗಂಡ-ಹೆಂಡತಿ ಜೀವನದಲ್ಲಿ ಖುಷಿಯಾಗಿರಬೇಕು ಅನ್ನೋದೇ ದೇವರ ಆಸೆ. (ಜ್ಞಾನೋ. 5:18) ನವದಂಪತಿಗಳೇ, ಯೆಹೋವನ ಮೇಲೆ ಇನ್ನೂ ಜಾಸ್ತಿ ನಂಬಿಕೆ ಬೆಳೆಸಿಕೊಳ್ಳೋಕೆ ಏನು ಮಾಡಬೇಕು? ನಿಮ್ಮ ಜೀವನ ಹೇಗಿದೆ ಅಂತ ಯೋಚನೆ ಮಾಡಿ ನೋಡಿ. ಯೆಹೋವ ದೇವರ ಸೇವೆಯನ್ನ ಇನ್ನೂ ಜಾಸ್ತಿ ಮಾಡೋಕೆ ಆಗುತ್ತಾ ಅಂತ ನೋಡಿ. ಅದ್ರ ಬಗ್ಗೆ ದೇವರ ಹತ್ರ ಮಾತಾಡಿ. ಬೈಬಲಲ್ಲಿ ಯೆಹೋವ ಏನು ಹೇಳಿದ್ದಾನೆ ಅಂತ ನೋಡಿ. ಅದನ್ನ ಜೀವನದಲ್ಲಿ ಪಾಲಿಸಿ. ಹೀಗೆ ಮಾಡಿದ್ರೆ ನೀವು ಖುಷಿಯಾಗಿ ಇರ್ತೀರ ಮತ್ತು ಯೆಹೋವ ನಿಮ್ಮನ್ನ ಆಶೀರ್ವದಿಸ್ತಾನೆ.

ಗೀತೆ 87 ನಾವೀಗ ಒಂದು

^ ಪ್ಯಾರ. 5 ನಾವು ಜೀವನದಲ್ಲಿ ಮಾಡೋ ಕೆಲವು ನಿರ್ಧಾರಗಳು ಯೆಹೋವನ ಸೇವೆಯನ್ನ ಜಾಸ್ತಿ ಮಾಡದ ಹಾಗೆ ತಡೆದುಬಿಡುತ್ತೆ. ಅದ್ರಲ್ಲೂ ಹೊಸದಾಗಿ ಮದುವೆಯಾದ ದಂಪತಿಗಳು ತಗೊಳ್ಳೋ ನಿರ್ಧಾರಗಳು ಅವರನ್ನ ಹೂವಿನ ಹಾದಿಯಲ್ಲೂ ನಡೆಸಬಹುದು ಅಥವಾ ಮುಳ್ಳಿನ ಹಾದಿಯಲ್ಲೂ ನಡೆಸಬಹುದು. ಹಾಗಾಗಿ ಈ ಲೇಖನ ನವದಂಪತಿಗಳಿಗೆ ಒಳ್ಳೆ ತೀರ್ಮಾನಗಳನ್ನ ತಗೊಳ್ಳೋಕೆ ಸಹಾಯ ಮಾಡುತ್ತೆ.

^ ಪ್ಯಾರ. 5 ಕೆಲವು ಹೆಸರುಗಳು ಬದಲಾಗಿವೆ.

^ ಪ್ಯಾರ. 10 ಉದಾಹರಣೆಗೆ, ಇಡೀ ಭೂಮಿಯಲ್ಲಿ ಶುದ್ಧ ಆರಾಧನೆ! ಅನ್ನೋ ಪುಸ್ತಕದ 6, 7 ಮತ್ತು 19ನೇ ಅಧ್ಯಾಯ ಓದಿ ಭವಿಷ್ಯವಾಣಿಗಳ ಬಗ್ಗೆ ಇನ್ನೂ ಹೆಚ್ಚು ಪಾಠಗಳನ್ನ ಕಲಿಯಿರಿ.